वाचनम्
ಭಾಗಸೂಚನಾ
ರಾವಣನು ಸಂನ್ಯಾಸಿಯ ವೇಷದಿಂದ ಸೀತೆಯ ಬಳಿಗೆ ಹೋಗಿ ಪ್ರಶ್ನಿಸಿದುದು, ಸೀತೆಯಿಂದ ಅತಿಥಿ ಸತ್ಕಾರ
ಮೂಲಮ್ - 1
ತಥಾ ಪರುಷಮುಕ್ತಸ್ತು ಕುಪಿತೋ ರಾಘವಾನುಜಃ ।
ಸ ವಿಕಾಂಕ್ಷನ್ ಭೃಶಂ ರಾಮಂ ಪ್ರತಸ್ಥೇ ನಚಿರಾದಿವ ॥
ಅನುವಾದ
ಸೀತೆಯು ಕಠೋರ ವಚನವನ್ನು ಹೇಳಿದಾಗ ಕುಪಿತನಾಗಿ ಲಕ್ಷ್ಮಣನು ಶ್ರೀರಾಮನನ್ನು ಸೇರುವ ವಿಶೇಷ ಇಚ್ಛೆಯಿಂದ ಶೀಘ್ರವಾಗಿ ಅಲ್ಲಿಂದ ಹೊರಟನು.॥1॥
ಮೂಲಮ್ - 2
ತದಾಸಾದ್ಯ ದಶಗ್ರೀವಃ ಕ್ಷಿಪ್ರಮಂತರಮಾಸ್ಥಿತಃ ।
ಅಭಿಚಕ್ರಾಮ ವೈದೇಹೀಂ ಪರಿವ್ರಾಜಕರೂಪಧೃಕ್ ॥
ಅನುವಾದ
ಲಕ್ಷ್ಮಣನು ಹೊರಟುಹೋದಾಗ ರಾವಣನಿಗೆ ಅವಕಾಶ ಸಿಕ್ಕಿ, ಅವನು ಸಂನ್ಯಾಸಿಯ ವೇಷವನ್ನು ಧರಿಸಿ ಬೇಗನೇ ವಿದೇಹಕುಮಾರಿ ಸೀತೆಯ ಬಳಿಗೆ ಬಂದನು.॥2॥
ಮೂಲಮ್ - 3
ಶ್ಲಕ್ಷ್ಣಕಾಷಾಯಸಂವೀತಃ ಶಿಖೀ ಛತ್ರೀ ಉಪಾನಹೀ ।
ವಾಮೇ ಚಾಂಸೇಽವಸಜ್ಯಾಥ ಶುಭೇ ಯಷ್ಟಿಕಮಂಡಲೂ ॥
ಅನುವಾದ
ಆಗ ರಾವಣನು ನವುರಾದ ಕಾಷಾಯ ವಸ್ತ್ರವನ್ನುಟ್ಟಿದ್ದನು. ಮಸ್ತಕದಲ್ಲಿ ಶೀಖೆ, ಕೈಯಲ್ಲಿ ಛತ್ರ, ಕಾಲುಗಳಲ್ಲಿ ಪಾದರಕ್ಷೆಗಳನ್ನು ಧರಿಸಿದ್ದನು. ಅವನ ಎಡ ಭುಜದ ಮೇಲೆ ದಂಡವಿದ್ದು, ಕಮಂಡಲು ತೂಗುಹಾಕಿದ್ದನು.॥3॥
ಮೂಲಮ್ - 4
ಪರಿವ್ರಾಜಕರೂಪೇಣ ವೈದೇಹೀವನ್ವವರ್ತತ ।
ತಾಮಾಸಸಾದಾತಿಬಲೋ ಭ್ರಾತೃಭ್ಯಾಂ ರಹಿತಾಂ ವನೇ ॥
ಅನುವಾದ
ಅತ್ಯಂತ ಬಲಿಷ್ಠನಾದ ರಾವಣನು ಆ ವನದಲ್ಲಿ ಪರಿವ್ರಾಜಕನ ರೂಪವನ್ನು ಧರಿಸಿ ಶ್ರೀರಾಮ-ಲಕ್ಷ್ಮಣರಿಲ್ಲದೆ ಒಂಬ್ಬೊಂಟಿಗಳಾದ ವೈದೇಹಿಯ ಬಳಿಗೆ ಬಂದನು.॥4॥
ಮೂಲಮ್ - 5½
ರಹಿತಾಂ ಸೂರ್ಯಚಂದ್ರಾಭ್ಯಾಂ ಸಂಧ್ಯಾಮಿವ ಮಹತ್ತಮಃ ।
ತಾಮಪಶ್ಯತ್ತತೋ ಬಾಲಾಂ ರಾಜಪುತ್ರೀಂ ಯಶಸ್ವಿನೀಮ್ ॥
ರೋಹಿಣೀಂ ಶಶಿನಾ ಹೀನಾಂ ಗ್ರಹವದ್ ಭೃಶದಾರುಣಃ ।
ಅನುವಾದ
ಸೂರ್ಯಚಂದ್ರರಿಲ್ಲದ ಸಂಧ್ಯೆಯಲ್ಲಿ ಮಹಾನ್ ಅಂಧಕಾರ ಕವಿಯುವಂತೆ ಅವನು ಸೀತೆಯ ಬಳಿಗೆ ಹೋದನು. ಚಂದ್ರನಿಂದ ರಹಿತವಾದ ರೋಹಿಣಿಯ ಮೇಲೆ ದಾರುಣ ಮಂಗಳ ಅಥವಾ ಶನೈಶ್ಚರನ ದೃಷ್ಟಿ ಬೀಳುವಂತೆ ಅತಿಶಯ ಕ್ರೂರಿ ರಾವಣನು ಆ ಮುಗ್ಧಯಶಸ್ವಿನೀ ರಾಜಕುಮಾರಿಯನ್ನು ನೋಡಿದನು.॥5½॥
ಮೂಲಮ್ - 6
ತಮುಗ್ರಂ ಪಾಪಕರ್ಮಾಣಂ ಜನಸ್ಥಾನಗತಾ ದ್ರುಮಾಃ ॥
ಮೂಲಮ್ - 7½
ಸಂದೃಶ್ಯ ನ ಪ್ರಕಂಪಂತೇನ ಪ್ರವಾತಿ ಚ ಮಾರುತಃ ।
ಶೀಘ್ರಸ್ರೋತಾಶ್ಚ ತಂ ದೃಷ್ಟ್ವಾ ವೀಕ್ಷಂತಂ ರಕ್ತಲೋಚನಮ್ ॥
ಸ್ತಿಮಿತಂ ಗಂತುಮಾರೇಭೇ ಭಯಾದ್ ಗೋದಾವರೀ ನದೀ ।
ಅನುವಾದ
ಆ ಭಯಂಕರ ಪಾಪಾಚಾರಿಯನ್ನು ಕಂಡು ಜನಸ್ಥಾನದ ವೃಕ್ಷಗಳು ಅಲುಗಾಡುವುದನ್ನು ನಿಲ್ಲಿಸಿ, ಗಾಳಿಯ ವೇಗ ನಿಂತುಬಿಟ್ಟಿತು. ಕೆಂಗಣ್ಣಿನ ರಾವಣನು ತನ್ನತ್ತ ನೋಡುವುದನ್ನು ಗಮನಿಸಿ ತೀವ್ರಗತಿಯಿಂದ ಹರಿಯುವ ಗೋದಾವರಿಯು ಭಯದಿಂದ ನಿಧಾನವಾಗಿ ಹರಿಯ ತೊಡಗಿದಳು.॥6-7½॥
ಮೂಲಮ್ - 8½
ರಾಮಸ್ಯ ತ್ವಂತರಂ ಪ್ರೇಪ್ಸುರ್ದಶಗ್ರೀವಸ್ತದಂತರೇ ॥
ಉಪತಸ್ಥೇ ಚ ವೈದೇಹೀಂ ಭಿಕ್ಷುರೂಪೇಣ ರಾವಣಃ ।
ಅನುವಾದ
ರಾಮನಿಗೆ ಪ್ರತಿಕಾರ ಮಾಡುವ ಸಂದರ್ಭವನ್ನು ಹುಡುಕುತ್ತಿದ್ದ ರಾವಣನು ಆಗ ಭಿಕ್ಷುರೂಪದಿಂದ ವೈದೇಹಿಯ ಬಳಿಗೆ ಸಾರಿದನು.॥8½॥
ಮೂಲಮ್ - 9½
ಅಭವ್ಯೋ ಭವ್ಯರೂಪೇಣ ಭರ್ತಾರಮನುಶೋಚತೀಮ್ ॥
ಅಭ್ಯವರ್ತತ ವೈದೇಹೀಂ ಚಿತ್ರಾಮಿವ ಶನೈಶ್ಚರಃ ।
ಅನುವಾದ
ಆಗ ವಿದೇಹಕುಮಾರಿ ಸೀತೆಯು ತನ್ನ ಪತಿಯ ಕುರಿತು ಶೋಕಿಸುತ್ತಾ ಚಿಂತೆಯಲ್ಲಿ ಮುಳುಗಿದ್ದಳು. ಅದೇ ಅವಸ್ಥೆಯಲ್ಲಿ ಅಭವ್ಯರಾವಣನು ಭವ್ಯರೂಪವನ್ನು ಧರಿಸಿ ಶನೈಶ್ಚರನು ಚಿತ್ರಾ ನಕ್ಷತ್ರದ ಬಳಿಗೆ ತಲುಪುವಂತೆಯೇ ಸೀತೆಯ ಎದುರಿಗೆ ಉಪಸ್ಥಿತನಾದನು.॥9॥
ಮೂಲಮ್ - 10½
ಸಹಸಾ ಭವ್ಯರೂಪೇಣ ತೃಣೈಃ ಕೂಪ ಇವಾವೃತಃ ॥
ಅತಿಷ್ಠತ್ಪ್ರೇಕ್ಷ್ಯ ವೈದೇಹೀಂ ರಾಮಪತ್ನೀಂ ಯಶಸ್ವಿನೀಮ್ ।
ಅನುವಾದ
ಹುಲ್ಲಿನಿಂದ ಮುಚ್ಚಿರುವ ಬಾವಿಯಂತೆ ಭವ್ಯರೂಪದಿಂದ ತನ್ನ ಅಭವ್ಯತೆಯನ್ನು ಅಡಗಿಸಿಕೊಂಡ ರಾವಣನು ಒಮ್ಮೆಲೆ ಅಲ್ಲಿಗೆ ಹೋಗಿ ಯಶಸ್ವಿನೀ ರಾಮಪತ್ನೀ ಸೀತೆಯನ್ನು ನೋಡಿ ನಿಂತುಕೊಂಡನು.॥10½॥
ಮೂಲಮ್ - 11
ತಿಷ್ಠನ್ ಸಂಪ್ರೇಕ್ಷ್ಯ ಚ ತದಾ ಪತ್ನೀಂ ರಾಮಸ್ಯರಾವಣಃ ॥
ಮೂಲಮ್ - 12
ಶುಭಾಂ ರುಚಿರದಂತೋಷ್ಠಿಂ ಪೂರ್ಣಚಂದ್ರನಿಭಾನನಾಮ್ ।
ಆಸೀನಾಂ ಪರ್ಣಶಾಲಾಯಾಂ ಬಾಷ್ಪಶೋಕಾಭಿಪೀಡಿತಾಮ್ ॥
ಅನುವಾದ
ಆಗ ರಾವಣನು ಅಲ್ಲಿ ನಿಂತುಕೊಂಡೇ ಸೀತೆಯನ್ನು ನೋಡತೊಡಗಿದನು. ಅವಳು ಬಹಳ ಸುಂದರಿಯಾಗಿದ್ದಳು. ಆಕೆಯ ಹಲ್ಲು, ತುಟಿಗಳು ಅಂದವಾಗಿದ್ದವು. ಮುಖವು ಪೂರ್ಣಚಂದ್ರನಂತಿತ್ತು. ಆಕೆ ಪರ್ಣಶಾಲೆಯಲ್ಲಿ ಕುಳಿತು ಶೋಕದಿಂದ ಕಣ್ಣೀರನ್ನು ಸುರಿಸುತ್ತಿದ್ದಳು.॥11-12॥
ಮೂಲಮ್ - 13
ಸ ತಾಂ ಪದ್ಮಪಲಾಶಾಕ್ಷೀಂ ಪೀತಕೌ ಶೇಯವಾಸಿನೀಮ್ ।
ಅಭ್ಯಗಚ್ಛತ ವೈದೇಹೀಂ ಹೃಷ್ಟಚೇತಾ ನಿಶಾಚರಃ ॥
ಅನುವಾದ
ಆ ನಿಶಾಚರನು ಪ್ರಸನ್ನಚಿತ್ತನಾಗಿ ರೇಶ್ಮೆ ಪೀತಾಂಬರದಿಂದ ಸುಶೋಭಿತ ಕಮಲನಯನಿ ವೈದೇಹಿಯ ಎದುರಿಗೆ ಹೋದನು.॥13॥
ಮೂಲಮ್ - 14
ದೃಷ್ಟ್ವಾ ಕಾಮಶರಾವಿದ್ಧೋ ಬ್ರಹ್ಮಘೋಷಮುದೀರಯನ್ ।
ಅಬ್ರವೀತ್ ಪ್ರಶ್ರಿತಂ ವಾಕ್ಯಂ ರಹಿತೇ ರಾಕ್ಷಸಾಧಿಪಃ ॥
ಅನುವಾದ
ಆಕೆಯನ್ನು ನೋಡುತ್ತಲೇ ಮನ್ಮಥನ ಬಾಣಗಳಿಂದ ಘಾಸಿಗೊಂಡು ರಾಕ್ಷಸರಾಜ ರಾವಣನು ವೇದ ಮಂತ್ರಗಳನ್ನು ಉಚ್ಚರಿಸತೊಡಗಿದನು. ಆ ಏಕಾಂತ ಸ್ಥಾನದಲ್ಲಿ ವಿನೀತ ಭಾವದಿಂದ ಆಕೆಯಲ್ಲಿ ಏನೋ ಹೇಳಲು ಪಕ್ರಮಿಸಿದನು.॥14॥
ಮೂಲಮ್ - 15
ತಾಮುತ್ತಮಾಂ ತ್ರಿಲೋಕಾನಾಂ ಪದ್ಮಹೀನಾಮಿವ ಶ್ರಿಯಮ್ ।
ವಿಭ್ರಾಜಮಾನಾಂ ವಪುಷಾ ರಾವಣಃ ಪ್ರಶಶಂಸ ಹ ॥
ಅನುವಾದ
ತ್ರಿಲೋಕಸುಂದರೀ ಸೀತೆಯು ತನ್ನ ಶರೀರದಿಂದ ಕಮಲರಹಿತ ಕಮಲಾಲಯಾ ಲಕ್ಷ್ಮೀಯಂತೆ ಶೋಭಿಸುತ್ತಿದ್ದಳು. ರಾವಣನು ಆಕೆಯನ್ನು ಪ್ರಶಂಸಿಸುತ್ತಾ ನುಡಿದನು.॥15॥
ಮೂಲಮ್ - 16
ರೌಪ್ಯಕಾಂಚನವರ್ಣಾಭೇ ಪೀತಕೌಶೇಯವಾಸಿನಿ ।
ಕಮಲಾನಾಂ ಶುಭಾಂ ಮಾಲಾಂಪದ್ಮಿನೀವ ಚ ಬಿಭ್ರತೀ ॥
ಅನುವಾದ
ಉತ್ತಮ ಸುವರ್ಣದಂತೆ ಕಾಂತಿಯುಳ್ಳ, ರೇಶ್ಮೆ ಪೀತಾಂಬರ ಧರಿಸಿದ ಸುಂದರೀ! ನೀನು ಯಾರು? ನಿನ್ನ ಮುಖ, ನೇತ್ರ, ಕೈ, ಕಾಲುಗಳು ಕಮಲದಂತೆ ಇವೆ. ಆದ್ದರಿಂದ ನೀನು ಪದ್ಮಿನೀ (ಪುಷ್ಕರಣಿ)ಯಂತೆ ಕಮಲಗಳ ಸುಂದರ ಮಾಲೆಯನ್ನು ಧರಿಸಿರುವೆ.॥16॥
ಮೂಲಮ್ - 17
ಹ್ರೀಃ ಶ್ರೀಃ ಕೀರ್ತಿಃ ಶುಭಾ ಲಕ್ಷ್ಮೀರಪ್ಸರಾ ವಾ ಶುಭಾನನೇ ।
ಭೂತಿರ್ವಾ ತ್ವಂ ವರಾರೋಹೇ ರತಿರ್ವಾ ಸ್ವೈರಚಾರಿಣೀ ॥
ಅನುವಾದ
ಶುಭಾವನೇ! ನೀನು ಶ್ರೀ, ಹ್ರೀ, ಕೀರ್ತಿ, ಶುಭಸ್ವರೂಪ ಲಕ್ಷ್ಮೀ ಅಥವಾ ಅಪ್ಸರೆಯಲ್ಲವಲ್ಲ? ಅಥವಾ ಸುಂದರೀ! ನೀನು ಭೂತಿ ಇಲ್ಲವೇ ಸ್ವೇಚ್ಛೆಯಿಂದ ವಿಹರಿಸುವ ಕಾಮಪತ್ನೀ ರತಿಯಲ್ಲ ತಾನೇ.॥17॥
ಮೂಲಮ್ - 18½
ಸಮಾಃ ಶಿಖರಿಣಃ ಸ್ನಿಗ್ಧಾಃ ಪಾಂಡುರಾ ದಶನಾಸ್ತವ ।
ವಿಶಾಲೇ ವಿಮಲೇ ನೇತ್ರೇ ರಕ್ತಾಂತೇ ಕೃಷ್ಣತಾರಕೇ ॥
ವಿಶಾಲಂ ಜಘನಂ ಪೀನಮೂರೂ ಕರಿಕರೋಪಮೌ ।
ಅನುವಾದ
ನಿನ್ನ ಹಲ್ಲುಗಳು ಸಮಾನವಾಗಿದ್ದು, ಕುಂದಪುಷ್ಪದ ಮೊಗ್ಗಿನಂತೆ ಶೋಭಿಸುತ್ತಿವೆ. ಅವು ಸ್ನಿಗ್ಧವಾಗಿದ್ದು, ಬೆಳ್ಳಗಿವೆ. ನಿನ್ನ ಕಣ್ಣುಗಳು ವಿಶಾಲ ಮತ್ತು ನಿರ್ಮಲವಾಗಿವೆ. ಅವುಗಳ ತುದಿ ಕೆಂಪಾಗಿದ್ದು, ಗುಡ್ಡೆಗಳು ಕಪ್ಪಾಗಿವೆ, ನಿನ್ನ ಸೊಂಟದ ಮುಂಭಾಗವು ವಿಶಾಲವಾಗಿದ್ದು, ಎರಡೂ ತೊಡೆಗಳು ಆನೆಯ ಸೊಂಡಲಿನಂತಿವೆ.॥18॥
ಮೂಲಮ್ - 19
ಏತಾವುಪಚಿತೌ ವೃತ್ತೌ ಸಂಹತೌ ಸಂಪ್ರಗಲ್ಭಿತೌ ॥
ಮೂಲಮ್ - 20
ಪೀನೋನ್ನತಮುಖೌ ಕಾಂತೌ ಸ್ನಿಗ್ಧೌ ತಾಲಲೋಪಮೌ ।
ಮಣಿಪ್ರವೇಕಾಭರಣೌ ರುಚಿರೌತೇ ಪಯೋಧರೌ ॥
ಅನುವಾದ
ನಿನ್ನ ಎರಡೂ ಸ್ತನಗಳು ಪುಷ್ಟವಾಗಿ ದುಂಡಾಗಿದ್ದು, ಒಂದಕ್ಕೊಂದು ಅಂಟಿಕೊಂಡಿವೆ, ಭಾರದಿಂದ ಬಳುಕುತ್ತಿವೆ. ಉಬ್ಬಿಕೊಂಡಿರುವ ನುಣುಪಾಗಿ ತಾಳೆ ಹಣ್ಣಿನಂತಿವೆ. ಒಂದೇ ಆಕಾರದಿಂದ ಇರುವ ಕಮನೀಯ ಶ್ರೇಷ್ಠವಾದ ಅವು ಮಣಿಮಯ ಆಭೂಷಣಗಳಿಂದ ವಿಭೂಷಿತವಾಗಿವೆ.॥19-20॥
ಮೂಲಮ್ - 21
ಚಾರುಸ್ಮಿತೇ ಚಾರುದತಿ ಚಾರುನೇತ್ರೇ ವಿಲಾಸಿನಿ ।
ಮನೋ ಹರಸಿ ಮೇ ರಾಮೇ ನದೀಕೂಲಮಿವಾಂಭಸಾ ॥
ಅನುವಾದ
ಸುಂದರ ಮಂದಹಾಸ, ಸುಂದರ ದಂತಪಂಕ್ತಿಗಳಿದ್ದು, ಮನೋಹರ ನೇತ್ರವುಳ್ಳ ವಿಲಾಸಿನೀ ರಮಣಿಯೇ! ನೀನು ತನ್ನ ರೂಪ ಸೌಂದರ್ಯದಿಂದ ನದಿಯು ನೀರಿನಿಂದ ತನ್ನ ದಡಗಳನ್ನು ಕೊಚ್ಚಿಕೊಂಡು ಹೋಗುವಂತೆಯೇ ನನ್ನ ಮನಸ್ಸನ್ನು ಸೂರೆಗೊಂಡುಬಿಟ್ಟಿರುವೆ.॥21॥
ಮೂಲಮ್ - 22
ಕರಾಂತಮಿತಮಧ್ಯಾಸಿ ಸುಕೇಶೇ ಸಂಹತಸ್ತನೀ ।
ನೈವ ದೇವೀ ನ ಗಂಧರ್ವೀ ನಯಕ್ಷೀ ನ ಚ ಕಿನ್ನರೀ ॥
ಅನುವಾದ
ಹಿಡಿಯಷ್ಟು ನಿನ್ನ ಸೊಂಟವು ಕೃಶವಾಗಿದೆ, ಕೂದಲು ನುಣುಪಾಗಿ ಮನೋಹರವಾಗಿದೆ. ಎರಡು ಸ್ತನಗಳು ಸೇರಿಕೊಂಡಿವೆ. ಸುಂದರೀ! ದೇವತೆಗಳಲ್ಲಿ ಗಂಧರ್ವರಲ್ಲಿ, ಯಕ್ಷರಲ್ಲಿ ಕಿನ್ನರರಲ್ಲಿ ಯಾವ ಸ್ತ್ರೀಯೂ ನಿನಗೆ ಸರಿಗಟ್ಟಲಾರರು.॥22॥
ಮೂಲಮ್ - 23
ನೈವರೂಪಾ ಮಯಾ ನಾರೀ ದೃಷ್ಟಪೂರ್ವಾ ಮಹೀತಲೇ ।
ರೂಪಮಗ್ರ್ಯಂ ಚ ಲೋಕೇಷು ಸೌಕುಮಾರ್ಯಂ ವಯಶ್ಚ ತೇ ॥
ಮೂಲಮ್ - 24
ಇಹ ವಾಸಶ್ಚ ಕಾನ್ತಾರೇ ಚಿತ್ತಮುನ್ಮಾಥಯಂತಿ ಮೇ ।
ಸಾ ಪ್ರತಿಕ್ರಾಮ ಭದ್ರಂ ತೇ ನ ತ್ವಂ ವಸ್ತುಮಿಹಾರ್ಹಸಿ ॥
ಅನುವಾದ
ಪೃಥಿವಿಯಲ್ಲಿ ನಿನ್ನಂತಹ ರೂಪವತಿ ನಾರಿಯನ್ನು ನಾನು ಇಂದಿನ ತನಕ ಎಂದೂ ನೋಡಿಲ್ಲ. ನಿನ್ನ ಈ ಮೂರು ಲೋಕಗಳಲ್ಲಿ ಎಲ್ಲರಿಗಿಂತ ಸುಂದರ ರೂಪ, ತಾರುಣ್ಯ, ಸೌಕುಮಾರ್ಯ ಎಲ್ಲಿ? ಈ ದುರ್ಗಮ ವನವಾಸವೆಲ್ಲಿ? ಇದೆಲ್ಲ ಗಮನಿಸಿದರೆ ನನ್ನ ಮನಸ್ಸಿಗೆ ಬಹಳ ಕಳವಳ ಉಂಟಾಗುತ್ತದೆ. ನಿನಗೆ ಮಂಗಳವಾಗಲಿ; ಇಲ್ಲಿಂದ ಹೊರಟು ಹೋಗು. ನೀನು ಇಲ್ಲಿ ಇರಲು ಯೋಗ್ಯಳಲ್ಲ.॥23-24॥
ಮೂಲಮ್ - 25½
ರಾಕ್ಷಸಾನಾಮಯಂ ವಾಸೋ ಘೋರಾಣಾಂ ಕಾಮರೂಪಿಣಾಮ್ ।
ಪ್ರಾಸಾದಾಗ್ರಾಣಿ ರಮ್ಯಾಣಿ ನಗರೋಪವನಾನಿ ಚ ॥
ಸಂಪನ್ನಾನಿಸುಗಂಧೀನಿ ಯುಕ್ತಾನ್ಯಾಚರಿತುಂ ತ್ವಯಾ ।
ಅನುವಾದ
ಇದಾದರೋ ಕಾಮರೂಪಿಗಳಾದ ಭಯಂಕರ ರಾಕ್ಷಸರು ಇರುವ ಜಾಗವಾಗಿದೆ. ನೀನಾದರೋ ರಮಣೀಯ ಅರಮನೆಯಲ್ಲಿ, ಸಮೃದ್ಧಶಾಲಿ ನಗರದಲ್ಲಿ, ಸುಗಂಧಯುಕ್ತ ಉಪವನಗಳಲ್ಲಿ ವಾಸಿಸುತ್ತಾ ಸಂಚರಿಸಬೇಕು.॥25½॥
ಮೂಲಮ್ - 26½
ವರಂ ಮಾಲ್ಯಂ ವರಂ ಗಂಧಂ ವರಂ ವಸ್ತ್ರಂ ಚ ಶೋಭನೇ ॥
ಭರ್ತಾರಂ ಚ ವರಂ ಮನ್ಯೇ ತ್ವದ್ಯುಕ್ತಮಸಿತೇಕ್ಷಣೇ ।
ಅನುವಾದ
ಸುಂದರೀ! ನೀನ್ನ ಉಪಯೋಗದಲ್ಲಿ ಇರುವ ಪುರುಷನೇ ಶ್ರೇಷ್ಠನಾಗಿದ್ದಾನೆ, ಅದೇ ಗಂಧ, ಅದೇ ಸುಂದರ ವಸ್ತ್ರವಾಗಿದೆ. ಕಾಡಿಗೆ ಹಚ್ಚಿದ ಕಣ್ಣುಗಳುಳ್ಳ ಸುಂದರೀ! ನಿನ್ನ ಸುಖಮಯ ಸಂಯೋಗ ಪ್ರಾಪ್ತವಾದ ಪತಿಯನ್ನೇ ಶ್ರೇಷ್ಠನೆಂದು ನಾನು ತಿಳಿಯುತ್ತೇನೆ.॥26½॥
ಮೂಲಮ್ - 27½
ಕಾ ತ್ವಂ ಭವಸಿ ರುದ್ರಾಣಾಂ ಮರುತಾಂ ವಾ ಶುಚಿಸ್ಮಿತೇ ॥
ವಸೂನಾಂ ವಾ ವರಾರೋಹೇ ದೇವತಾ ಪ್ರತಿಭಾಸಿ ಮೇ ।
ಅನುವಾದ
ಪವಿತ್ರ ಮಂದಹಾಸ ಮತ್ತು ಸುಂದರ ಅಂಗಗಳುಳ್ಳ ದೇವಿ! ನೀನು ಯಾರಾಗಿರುವೆ? ನನಗಾದರೋ ನೀನು ರುದ್ರರ ವರುದ್ಗಣರ, ವಸುಗಳ ಸಂಬಂಧವಿರುವ ದೇವಿಯಂತೆ ಅನಿಸುತ್ತದೆ.॥27॥
ಮೂಲಮ್ - 28½
ನೇಹ ಗಚ್ಛಂತಿ ಗಂಧರ್ವಾ ನ ದೇವಾ ನ ಚ ಕಿನ್ನರಾಃ ॥
ರಾಕ್ಷಸಾನಾಮಯಂ ವಾಸಃ ಕಥಂ ತು ತ್ವಮಿಹಾಗತಾ ।
ಅನುವಾದ
ಇಲ್ಲಿ ಗಂಧರ್ವರು, ದೇವತೆಗಳು, ಕಿನ್ನರರು ಬಂದು ಹೋಗುವುದಿಲ್ಲ. ಇದು ರಾಕ್ಷಸರ ನಿವಾಸ ಸ್ಥಾನವಾಗಿದೆ. ಹಾಗಿರುವಾಗ ನೀನು ಇಲ್ಲಿಗೆ ಹೇಗೆ ಬಂದೆ.॥28½॥
ಮೂಲಮ್ - 29½
ಇಹ ಶಾಖಾಮೃಗಾಃ ಸಿಂಹಾ ದ್ವೀಪಿವ್ಯಾಘ್ರಮೃಗಾ ವೃಕಾಃ ॥
ಋಕ್ಷಾಸ್ತರಕ್ಷವಃ ಕಂಕಾಃ ಕಥಂ ತೇಭ್ಯೋ ನ ಬಿಭ್ಯಸೇ ।
ಅನುವಾದ
ಇಲ್ಲಿ ವಾನರ, ಸಿಂಹ, ಚಿರತೆ, ಹುಲಿ, ಜಿಂಕೆ, ತೋಳ, ಕರಡಿ, ಹದ್ದು ಮೊದಲಾದ ಪಕ್ಷಿಗಳು ಪ್ರಾಣಿಗಳು ಇರುತ್ತವೆ. ನಿನಗೆ ಇವುಗಳಿಂದ ಭಯವಾಗುವುದಿಲ್ಲವೇ.॥29½॥
ಮೂಲಮ್ - 30½
ಮದಾನ್ವಿತಾನಾಂ ಘೋರಾಣಾಂ ಕುಂಜರಾಣಾಂ ತರಸ್ವಿನಾಮ್ ॥
ಕಥಮೇಕಾ ಮಹಾರಣ್ಯೇ ನ ಬಿಭೇಷಿ ವರಾನನೇ ।
ಅನುವಾದ
ವಾನರನೇ! ಈ ವಿಶಾಲ ಅರಣ್ಯದೊಳಗೆ ಅತ್ಯಂತ ವೇಗಶಾಲಿ ಮತ್ತು ಭಯಂಕರ ಮದಮತ್ತ ಆನೆಗಳ ನಡುವೆ ಒಬ್ಬಳೇ ಇರಲು ನಿನಗೆ ಭಯವೇಕೆ ಆಗುವುದಿಲ್ಲ.॥30½॥
ಮೂಲಮ್ - 31½
ಕಾಸಿ ಕಸ್ಯ ಕುತಶ್ಚ ತ್ವಂ ಕಿಂ ನಿಮಿತ್ತಂ ಚ ದಂಡಕಾನ್ ॥
ಏಕಾ ಚರಸಿ ಕಲ್ಯಾಣಿ ಘೋರಾನ್ ರಾಕ್ಷಸಸೇವಿತಾನ್ ।
ಅನುವಾದ
ಕಲ್ಯಾಣಿಯೇ! ನೀನು ಯಾರೆಂದು ಹೇಳು. ನೀನು ಯಾರವಳು? ಎಲ್ಲಿಂದ ಯಾವ ಕಾರಣಕ್ಕಾಗಿ ಬಂದು ಈ ರಾಕ್ಷಸರು ತುಂಬಿದ ಘೋರ ದಂಡಕಾರಣ್ಯದಲ್ಲಿ ಒಬ್ಬಂಟಿಗಳಾಗಿ ವಿಚರಿಸುತ್ತಿರುವೆಯಲ್ಲ.॥31½॥
ಮೂಲಮ್ - 32
ಇತಿ ಪ್ರಶಸ್ತಾ ವೈದೇಹೀ ರಾವಣೇನ ದುರಾತ್ಮನಾ ॥
ಮೂಲಮ್ - 33
ದ್ವಿಜಾತಿವೇಷೇಣ ಹಿ ತಂ ದೃಷ್ಟ್ವಾರಾವಣಮಾಗತಮ್ ।
ಸರ್ವೈರತಿಥಿಸತ್ಕಾರೈಃ ಪೂಜಯಾಮಾಸ ಮೈಥಿಲೀ ॥
ಅನುವಾದ
ವೇಷಭೂಷಣಗಳಿಂದ ಮಹಾತ್ಮನಾಗಿ ಬಂದಿರುವ ರಾವಣನು ವಿದೇಹಕುಮಾರಿ ಸೀತೆಯನ್ನು ಹೀಗೆ ಪ್ರಶಂಸಿಸಿದಾಗ ಬ್ರಾಹ್ಮಣವೇಷದಲ್ಲಿ ಅಲ್ಲಿಗೆ ಆಗಮಿಸಿದ ರಾವಣನನ್ನು ನೋಡಿ ಮೈಥಿಲಿಯು ಅತಿಥಿ-ಸತ್ಕಾರಕ್ಕಾಗಿ ಬೇಕಾದ ಸಾಮಗ್ರಿಗಳ ಮೂಲಕ ಅವನನ್ನು ಪೂಜಿಸಿದಳು.॥32-33॥
ಮೂಲಮ್ - 34
ಉಪಾನೀಯಾಸನಂ ಪೂರ್ವಂ ಪಾದ್ಯೇನಾಭಿನಿಮಂತ್ರ್ಯ ಸಚ ।
ಅಬ್ರವೀತ್ಸಿದ್ಧಮಿತ್ಯೇವ ತದಾ ತಂ ಸೌಮ್ಯದರ್ಶನಮ್ ॥
ಅನುವಾದ
ಅನಂತರ ಹೊರಗಿನಿಂದ ಸೌಮ್ಯವಾಗಿ ಕಾಣುವ ಆ ಅತಿಥಿಗೆ ಭೋಜನಕ್ಕಾಗಿ ಆಮಂತ್ರಣ ಕೊಡುತ್ತಾ ಬ್ರಹ್ಮನ್! ಭೋಜನ ಸಿದ್ಧವಾಗಿದೆ, ಸ್ವೀಕರಿಸಿರಿ ಎಂದು ಹೇಳಿದಳು.॥34॥
ಮೂಲಮ್ - 35
ದ್ವಿಜಾತಿವೇಷೇಣ ಸಮೀಕ್ಷ್ಯ ಮೈಥಿಲೀ
ಸಮಾಗತಂ ಪಾತ್ರಕುಸುಂಭಧಾರಿಣಮ್ ।
ಅಶಕ್ಯಮುದ್ ದ್ವೇಷ್ಟುಮುಪಾಯದರ್ಶನಾ-
ನ್ಯಮಂತ್ರಯದ್ ಬ್ರಾಹ್ಮಣವತ್ ತಥಾಗತಮ್ ॥
ಅನುವಾದ
ಅವನು ಬ್ರಾಹ್ಮಣ ವೇಷದಿಂದ ಬಂದಿದ್ದನು, ಕಮಂಡಲು ಮತ್ತು ಕಾಷಾಯ ವಸ್ತ್ರ ಧರಿಸಿದ್ದನು. ಬ್ರಾಹ್ಮಣವೇಷದಲ್ಲಿ ಬಂದಿರುವ ಅತಿಥಿಯ ಉಪೇಕ್ಷೆ ಅಸಂಭವವಾಗಿತ್ತು, ಆದ್ದರಿಂದ ಆ ರೂಪದಿಂದ ಬಂದಿರುವ ಆ ರಾವಣನನ್ನು ನೋಡಿ ಮೈಥಿಲಿಯು ಬ್ರಾಹ್ಮಣರಿಗೆ ಯೋಗ್ಯವಾದ ರೀತಿಯಲ್ಲಿ ಸತ್ಕರಿಸಲು ಅವನನ್ನು ಆಮಂತ್ರಿಸಿದ್ದಳು.॥35॥
ಮೂಲಮ್ - 36
ಇಯಂ ಬೃಸೀ ಬ್ರಾಹ್ಮಣ ಕಾಮಮಾಸ್ಯತಾ-
ಮಿದಂ ಚ ಪಾದ್ಯಂ ಪ್ರತಿಗೃಹ್ಯತಾಮಿತಿ ।
ಇದಂ ಚ ಸಿದ್ಧಂ ವನಜಾತಮುತ್ತಮಂ
ತ್ವದರ್ಥಮವ್ಯಗ್ರಮಿಹೋಪಭುಜ್ಯತಾಮ್ ॥
ಅನುವಾದ
ಸೀತೆಯು ಹೇಳಿದಳು-ಬ್ರಾಹ್ಮಣರೇ! ಇದೋ ಚಾಪೆ, ಇದರಲ್ಲಿ ಸ್ವಸ್ಥರಾಗಿ ಕುಳಿತುಕೊಳ್ಳಿರಿ.ಕಾಲು ತೊಳೆಯಲು ನೀರನ್ನು ಸ್ವೀಕರಿಸಿರಿ. ಇವು ಕಾಡಿನ ಉತ್ತಮ ಫಲ-ಮೂಲಗಳು ನಿಮಗಾಗಿ ಸಿದ್ಧವಾಗಿದೆ. ಇಲ್ಲಿ ಶಾಂತ ಭಾವದಿಂದ ಕುಳಿತು ಸೇವಿಸಿರಿ.॥36॥
ಮೂಲಮ್ - 37
ನಿಮಂತ್ರ್ಯಮಾಣಃ ಪ್ರತಿಪೂರ್ಣಭಾಷಿಣೀಂ
ನರೇಂದ್ರಪತೀಂ ಪ್ರಸಮೀಕ್ಷ್ಯ ಮೈಥಿಲೀಮ್ ।
ಪ್ರಸಹ್ಯ ತಸ್ಯಾ ಹರಣೇ ದೃಢಂ ಮನಃ
ಸಮರ್ಪಯಾಮಾಸ ವಧಾಯ ರಾವಣಃ ॥
ಅನುವಾದ
‘ಅತಿಥಿಗಾಗಿ ಎಲ್ಲವೂ ಸಿದ್ಧವಾಗಿದೆ’ ಹೀಗೆ ಹೇಳಿ ಸೀತೆಯು ಅವನನ್ನು ಭೋಜನಕ್ಕಾಗಿ ಆಮಂತ್ರಿಸಿದಾಗ ರಾವಣನು ‘ಸರ್ವಂ ಸಂಪನ್ನಮ್’ ಎಂದು ಹೇಳುವ ರಾಜಪತ್ನೀ ಮೈಥಿಲಿಯ ಕಡೆಗೆ ನೋಡಿ, ತನ್ನ ವಧೆಗಾಗಿಯೇ ಅವನು ಹಟಪೂರ್ವಕ ಸೀತೆಯನ್ನು ಅಪಹರಣ ಮಾಡಲು ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿದನು.॥37॥
ಮೂಲಮ್ - 38
ತತಃ ಸುವೇಷಂ ಮೃಗಯಾಗತಂ ಪತಿಂ
ಪ್ರತೀಕ್ಷಮಾಣಾ ಸಹಲಕ್ಷ್ಮಣಂ ತದಾ ।
ವಿವಿಕ್ಷಮಾಣಾ ಹರಿತಂ ದದರ್ಶ ತ-
ನ್ಮಹದ್ವನಂ ನೈವ ತು ರಾಮಲಕ್ಷ್ಮಣೌ ॥
ಅನುವಾದ
ಅನಂತರ ಸೀತೆಯು ಬೇಟೆಗಾಗಿ ಲಕ್ಷ್ಮಣನೊಂದಿಗೆ ಹೋಗಿರುವ ಸುಂದರ ವೇಷಧಾರಿ ತನ್ನ ಪತಿ ಶ್ರೀರಾಮಚಂದ್ರನನ್ನು ಪ್ರತೀಕ್ಷಿಸತೊಡಗಿದಳು. ಅವಳು ಸುತ್ತಲೂ ಕಣ್ಣಾಡಿಸಿದಳು, ಆದರೆ ಅವಳಿಗೆ ಎಲ್ಲೆಡೆ ಹಸುರಾದ ವಿಶಾಲವನವೇ ಕಂಡುಬಂತು. ಶ್ರೀರಾಮ-ಲಕ್ಷ್ಮಣರು ಕಣ್ಣಿಗೆ ಬೀಳಲಿಲ್ಲ.॥38॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತಾರನೆಯ ಸರ್ಗ ಸಂಪೂರ್ಣವಾಯಿತು. ॥46॥