वाचनम्
ಭಾಗಸೂಚನಾ
ಸೀತೆಯ ಮಾರ್ಮಿಕ ಮಾತುಗಳಿಂದ ಪ್ರೇರಿತನಾಗಿ ಲಕ್ಷ್ಮಣನು ಶ್ರೀರಾಮನ ಬಳಿಗೆ ಹೋದುದು
ಮೂಲಮ್ - 1
ಆರ್ತಸ್ವರಂ ತು ತಂ ಭರ್ತುರ್ವಿಜ್ಞಾಯ ಸದೃಶಂ ವನೇ ।
ಉವಾಚ ಲಕ್ಷ್ಮಣಂ ಸೀತಾ ಗಚ್ಛ ಜಾನೀಹಿ ರಾಘವಮ್ ॥
ಅನುವಾದ
ಆಗ ವನದಲ್ಲಿ ಕೇಳಿದ ಆರ್ತನಾದವು ತನ್ನ ಪತಿಯದೇ ಎಂದು ತಿಳಿದ ಸೀತೆಯು ಲಕ್ಷ್ಮಣನಲ್ಲಿ ಹೇಳಿದಳು - ತಮ್ಮ! ಹೋಗು ಶ್ರೀರಘುನಾಥನ ಸಮಾಚಾರವನ್ನು ತಿಳ.॥1॥
ಮೂಲಮ್ - 2
ನ ಹಿ ಮೇ ಜೀವಿತಂ ಸ್ಥಾನೇ ಹೃದಯಂ ವಾವತಿಷ್ಠತೇ ।
ಕ್ರೋಶತಃ ಪರಮಾರ್ತಸ್ಯ ಶ್ರುತಃ ಶಬ್ದೋ ಮಯಾ ಭೃಶಮ್ ॥
ಅನುವಾದ
ಅವರು ನಮ್ಮನ್ನು ಆರ್ತಸ್ವರದಿಂದ ಕರೆದಿರುವರು, ನಾನು ಅವರ ಶಬ್ದ ಕೇಳಿರುವೆನು. ಅದು ಬಹಳ ಗಟ್ಟಿಯಾಗಿ ಕೂಗಿದ್ದರು. ಅದನ್ನು ಕೇಳಿ ನನ್ನ ಮನಸ್ಸು ಚಂಚಲವಾಗಿದೆ, ನಾನು ಗಾಬರಿಗೊಂಡಿರುವೆನು.॥2॥
ಮೂಲಮ್ - 3
ಆಕ್ರಂದಮಾನಂ ತು ವನೇ ಭ್ರಾತರಂತ್ರಾತುಮರ್ಹಸಿ ।
ತಂ ಕ್ಷಿಪ್ರಮಭಿಧಾವ ತ್ವಂ ಭ್ರಾತರಂ ಶರಣೈಷಿಣಮ್ ॥
ಮೂಲಮ್ - 4
ರಕ್ಷಸಾಂ ವಶಮಾಪನ್ನಂ ಸಿಂಹಾನಾಮಿವ ಗೋವೃಷಮ್ ।
ನ ಜಗಾಮ ತಥೋಕ್ತಸ್ತು ಭ್ರಾತುರಾಜ್ಞಾಯ ಶಾಸನಮ್ ॥
ಅನುವಾದ
ನಿನ್ನ ಅಣ್ಣನವರು ಅರಣ್ಯದಲ್ಲಿ ಆರ್ತನಾದ ಮಾಡುತ್ತಿರುವರು. ಅವರು ಯಾರದಾದರೂ ರಕ್ಷಣೆಯ ಆಸರೆ ಬಯಸುತ್ತಿದ್ದಾರೆ. ನೀನು ಅವರನ್ನು ಕಾಪಾಡು. ಬೇಗನೇ ನಿನ್ನ ಅಣ್ಣನ ಬಳಿಗೆ ಓಡಿ ಹೋಗು. ಯಾವುದೇ ಗೂಳಿಯು ಸಿಂಹದ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಂತೆ ಅವರು ರಾಕ್ಷಸರ ವಶವಾಗಿರುವರು, ಆದ್ದರಿಂದ ಹೋಗು, ಸೀತೆಯು ಹೀಗೆ ಹೇಳಿದಾಗಲೂ ಅಣ್ಣನ ಅದೇಶವನ್ನು ನೆನೆದು ಲಕ್ಷ್ಮಣನು ಹೋಗಲಿಲ್ಲ.॥3-4॥
ಮೂಲಮ್ - 5
ತಮುವಾಚ ತತಸ್ತತ್ರ ಕ್ಷುಭಿತಾ ಜನಕಾತ್ಮಜಾ ।
ಸೌಮಿತ್ರೇ ಮಿತ್ರರೂಪೇಣ ಭ್ರಾತುಸ್ತ್ವಮಸಿ ಶತ್ರುವತ್ ॥
ಮೂಲಮ್ - 6
ಯಸ್ತ್ವಮಸ್ಯಾಮವಸ್ಥಾಯಾಂ ಭ್ರಾತರಂ ನಾಭಿಪದ್ಯಸೇ ।
ಇಚ್ಛಸಿ ತ್ವಂ ವಿನಶ್ಯಂತಂ ರಾಮಂ ಲಕ್ಷ್ಮಣ ಮತ್ಕೃತೇ ॥
ಅನುವಾದ
ಅವನ ಈ ವ್ಯವಹಾರದಿಂದ ಜನಕ ಕಿಶೋರಿ ಸೀತೆಯು ಕ್ಷುಬ್ಧಳಾಗಿ, ಅವನಲ್ಲಿ ಹೀಗೆ ಹೇಳಿದಳು-ಸುಮಿತ್ರಾಕುಮಾರ! ನೀನು ಮಿತ್ರರೂಪದಿಂದ ನಿನ್ನ ಅಣ್ಣನ ಶತ್ರುವೇ ಆಗಿರುವೆ, ಅದಕ್ಕಾಗಿ ಸಂಕಟದ ಸ್ಥಿತಿಯಲ್ಲಿಯೂ ಅಣ್ಣನ ಬಳಿಗೆ ಹೋಗುತ್ತಿಲ್ಲ. ಲಕ್ಷ್ಮಣ ನೀನು ನನ್ನ ಮೇಲೆ ಅಧಿಕಾರ ಮಾಡಲೆಂದೇ ಈಗ ಶ್ರೀರಾಮನ ವಿನಾಶವನ್ನು ಬಯಸುತ್ತಿರುವುದು; ನಾನು ಬಲ್ಲೆನು.॥5-6॥
ಮೂಲಮ್ - 7
ಲೋಭಾತ್ತುಮತ್ ಕೃತೇ ನೂನಂ ನಾನುಗಚ್ಛಸಿ ರಾಘವಮ್ ।
ವ್ಯಸನಂ ತೇ ಪ್ರಿಯಂ ಮನ್ಯೇ ಸ್ನೇಹೋ ಭ್ರಾತರಿ ನಾಸ್ತಿ ತೇ ॥
ಅನುವಾದ
ನನ್ನ ಕುರಿತು ನಿನ್ನ ಮನಸ್ಸಿನಲ್ಲಿ ಲೋಭ ಉಂಟಾಗಿದೆ, ಖಂಡಿತವಾಗಿಯೂ ಅದಕ್ಕಾಗಿಯೇ ನೀನು ರಘುನಾಥನ ಬಳಿಗೆ ಹೋಗುತ್ತಿಲ್ಲ. ಶ್ರೀರಾಮನು ಸಂಕಟದಲ್ಲಿ ಬೀಳುವುದೇ ನಿನಗೆ ಪ್ರಿಯವಾಗಿದೆ ಎಂದು ನಾನು ತಿಳಿಯುತ್ತೇನೆ. ನಿನ್ನ ಮನಸ್ಸಿನಲ್ಲಿ ನಿನ್ನಣ್ಣನ ಕುರಿತು ಸ್ನೇಹವೇ ಇಲ್ಲ.॥7॥
ಮೂಲಮ್ - 8½
ತೇನ ತಿಷ್ಠಸಿ ವಿಸ್ರಬ್ಧಂ ತಮಪಶ್ಯನ್ಮಹಾದ್ಯುತಿಮ್ ।
ಕಿಂ ಹಿ ಸಂಶಯಮಾಪನ್ನೇ ತಸ್ಮಿನ್ನಿಹ ಮಯಾ ಭವೇತ್ ॥
ಕರ್ತವ್ಯಮಿಹ ತಿಷ್ಠಂತ್ಯಾ ಯತ್ಪ್ರಧಾನಸ್ತ್ವಮಾಗತಃ ।
ಅನುವಾದ
ನೀನು ಆ ಮಹಾ ತೇಜಸ್ವೀ ಶ್ರೀರಾಮನನ್ನು ನೋಡಲು ಹೋಗದೆ ಇಲ್ಲೇ ನಿಶ್ಚಿಂತನಾಗಿ ನಿಂತಿರಲು ಇದೇ ಕಾರಣವಾಗಿದೆ. ಅವರು ಮುಖ್ಯವಾಗಿ ನನ್ನ ಸೇವ್ಯರಾಗಿದ್ದಾರೆ, ಅವರ ರಕ್ಷಣೆ ಮತ್ತು ಸೇವೆಗಾಗಿಯೇ ನೀನು ಇಲ್ಲಿಗೆ ಬಂದಿರುವೆ. ಅವರು ಪ್ರಾಣಸಂಕಟದಲ್ಲಿ ಬಿದ್ದರೆ ಇಲ್ಲಿ ನನ್ನ ರಕ್ಷಣೆಯಿಂದ ಏನಾದೀತು.॥8½॥
ಮೂಲಮ್ - 9½
ಏವಂ ಬ್ರುವಾಣಾಂ ವೈದೇಹೀಂ ಬಾಷ್ಪಶೋಕಸಮನ್ವಿತಾಮ್ ॥
ಅಬ್ರವೀಲ್ಲಕ್ಷ್ಮಣಸ್ತ್ರಸ್ತಾಂ ಸೀತಾಂ ಮೃಗವಧೂಮಿವ ।
ಅನುವಾದ
ವಿದೇಹಕುಮಾರಿ ಸೀತೆಯ ಸ್ಥಿತಿ ಭಯಭೀತವಾದ ಹೆಣ್ಣು ಜಿಂಕೆಯಂತೆ ಆಗಿತ್ತು. ಅವಳು ಶೋಕಮಗ್ನಳಾಗಿ ಕಣ್ಣೀರು ಸುರಿಸುತ್ತಾ ಮೇಲಿನ ಮಾತುಗಳನ್ನು ಹೇಳಿದಾಗ ಲಕ್ಷ್ಮಣನು ಆಕೆಯಲ್ಲಿ ಈ ಪ್ರಕಾರ ಹೇಳಿದನು.॥9½॥
ಮೂಲಮ್ - 10½
ಪನ್ನಗಾಸುರಗಂಗರ್ವದೇವದಾನವರಾಕ್ಷಸೈಃ ॥
ಅಶಕ್ಯಸ್ತವ ವೈದೇಹಿ ಭರ್ತಾ ಜೇತುಂ ನ ಸಂಶಯಃ ।
ಅನುವಾದ
ವಿದೇಹನಂದಿನಿ! ನೀನು ವಿಶ್ವಾಸವಿಡು, ನಾಗ, ಅಸುರ, ಗಂಧರ್ವ, ದೇವತೆ, ದಾನವ ಹಾಗೂ ರಾಕ್ಷಸ ಇವರೆಲ್ಲರೂ ಸೇರಿಯೂ ನಿಮ್ಮ ಪತಿಯನ್ನು ಸೋಲಿಸಲಾರರು, ನನ್ನ ಈ ಮಾತಿನಲ್ಲಿ ಸಂಶಯವೇ ಇಲ್ಲ.॥10½॥
ಮೂಲಮ್ - 11
ದೇವಿ ದೇವಮನುಷ್ಯೇಷು ಗಂಧರ್ವೇಷು ಪತತ್ರಿಷು ॥
ಮೂಲಮ್ - 12
ರಾಕ್ಷಸೇಷು ಪಿಶಾಚೇಷು ಕಿನ್ನರೇಷು ಮೃಗೇಷು ಚ ।
ದಾನವೇಷು ಚ ಘೋರೇಷು ನ ಸ ವಿದ್ಯೇತ ಶೋಭನೇ ॥
ಮೂಲಮ್ - 13
ಯೋ ರಾಮಂ ಪ್ರತಿ ಯುಧ್ಯೇತ ಸಮರೇ ವಾಸವೋಪಮಮ್ ।
ಅವಧ್ಯಃ ಸಮರೇ ರಾಮೋ ನೈವಂ ತ್ವಂ ವಕ್ತುಮರ್ಹಸಿ ॥
ಅನುವಾದ
ದೇವಿ! ಶೋಭನೇ! ದೇವತೆಗಳಲ್ಲಿ, ಮನುಷ್ಯರಲ್ಲಿ, ಗಂಧರ್ವರಲ್ಲಿ, ಪಕ್ಷಿಗಳಲ್ಲಿ, ರಾಕ್ಷಸರಲ್ಲಿ, ಪಿಶಾಚರಲ್ಲಿ, ಕಿನ್ನರರಲ್ಲಿ, ಮೃಗಗಳಲ್ಲಿ ಹಾಗೂ ಘೋರ ದಾನವರೊಳಗೆ ಸಮರಾಂಗಣದಲ್ಲಿ ಇಂದ್ರನಂತೆ ಪರಾಕ್ರಮಿ ಶ್ರೀರಾಮನನ್ನು ಎದುರಿಸಬಲ್ಲ ಯಾವ ವೀರನೂ ಇಲ್ಲ. ಭಗವಾನ್ ಶ್ರೀರಾಮನು ಯುದ್ಧದಲ್ಲಿ ಅವಧ್ಯನಾಗಿದ್ದಾನೆ, ಆದ್ದರಿಂದ ಇಂತಹ ಮಾತನ್ನು ಹೇಳಬಾರದು.॥11-13॥
ಮೂಲಮ್ - 14
ನ ತ್ವಾಮಸ್ಮಿನ್ ವನೇ ಹಾತುಮುತ್ಸಹೇರಾಘವಂ ವಿನಾ ।
ಅನಿವಾರ್ಯಂ ಬಲಂ ತಸ್ಯ ಬಲೈರ್ಬಲವತಾಮಪಿ ॥
ಮೂಲಮ್ - 15
ತ್ರಿಭಿರ್ಲೋಕೈಃ ಸಮುದಿತೈಃ ಸೇಶ್ವರೈಃ ಸಾಮರೈರಪಿ ।
ಹೃದಯಂ ನಿರ್ವೃತಂ ತೇಽಸ್ತು ಸಂತಾಪಸ್ತ್ಯಜ್ಯತಾಂ ತವ ॥
ಅನುವಾದ
ಶ್ರೀರಾಮಚಂದ್ರನ ಅನುಪಸ್ಥಿತಿಯಲ್ಲಿ ಈ ವನದಲ್ಲಿ ನಾನು ನಿನ್ನನ್ನು ಒಬ್ಬಂಟಿಗಳಾಗಿ ಬಿಡಲಾರೆನು. ಸೈನಿಕ ಬಲದಿಂದ ಸಂಪನ್ನರಾದ ದೊಡ್ಡ ದೊಡ್ಡ ರಾಜರು ತಮ್ಮ ಎಲ್ಲ ಸೈನಿಕರ ಮೂಲಕವೂ ಶ್ರೀರಾಮನ ಬಲವನ್ನು ಕುಂಠಿತವಾಗಿಸಲಾರರು. ದೇವತೆಗಳು ಇಂದ್ರಾದಿಗಳೊಂದಿಗೆ ಮೂರು ಲೋಕಗಳೂ ಆಕ್ರಮಣ ಮಾಡಿದರೂ ಶ್ರೀರಾಮನ ಬಲದ ವೇಗವನ್ನು ತಡೆಯಲಾರರು. ಆದ್ದರಿಂದ ನಿನ್ನ ಹೃದಯವನ್ನು ಶಾಂತವಾಗಿಡು. ನೀನು ಸಂತಾಪವನ್ನು ಬಿಡು.॥14-15॥
ಮೂಲಮ್ - 16½
ಆಗಮಿಷ್ಯತಿ ತೇ ಭರ್ತಾ ಶೀಘ್ರಂಹತ್ವಾ ಮೃಗೋತ್ತಮಮ್ ।
ನ ಸ ತಸ್ಯ ಸ್ವರೋ ವ್ಯಕ್ತಂ ನ ಕಶ್ಚಿದಪಿ ದೈವತಃ ॥
ಗಂಧರ್ವನಗರಪ್ರಖ್ಯಾ ಮಾಯಾ ತಸ್ಯ ಚ ರಕ್ಷಸಃ ।
ಅನುವಾದ
ನಿನ್ನ ಪತಿಯು ಆ ಸುಂದರ ಮೃಗವನ್ನು ಕೊಂದು ಬೇಗನೇ ಮರಳಿ ಬರುವನು. ನೀನು ಕೇಳಿದ ಶಬ್ದವು ಖಂಡಿತವಾಗಿ ಅಣ್ಣನದ್ದಲ್ಲ. ಅದು ಯಾವುದೋ ದೇವತೆ ಪ್ರಕಟಿಸಿದ ಶಬ್ದವೂ ಅಲ್ಲ. ಅದಾದರೋ ಆ ರಾಕ್ಷಸನ ಗಂಧರ್ವನಗರದಂತೆ ಮಿಥ್ಯಾ ಮಾಯೆಯಾಗಿದೆ.॥16½॥
ಮೂಲಮ್ - 17½
ನ್ಯಾಸಭೂತಾಸಿ ವೈದೇಹಿ ನ್ಯಸ್ತಾಮಯಿ ಮಹಾತ್ಮನಾ ॥
ರಾಮೇಣ ತ್ವಂ ವರಾರೋಹೇ ನ ತ್ವಾಂ ತ್ಯಕ್ತುಮಿಹೋತ್ಸಹೇ ।
ಅನುವಾದ
ಸುಂದರೀ! ವಿದೇಹ ನಂದಿನೀ! ಮಹಾತ್ಮಾ ಶ್ರೀರಾಮಚಂದ್ರನು ನಿನ್ನ ರಕ್ಷಣೆಯ ಭಾರ ನನಗೆ ಒಪ್ಪಿಸಿರುವನು. ಈಗ ನೀನು ನನ್ನ ಬಳೀ ನ್ಯಾಸರೂಪದಲ್ಲಿ ಇರುವೆ; ಆದ್ದರಿಂದ ನಿನ್ನನ್ನು ಇಲ್ಲಿ ಒಬ್ಬಂಟಿಗಳಾಗಿ ಬಿಡಲಾರೆನು.॥17½॥
ಮೂಲಮ್ - 18½
ಕೃತವೈರಾಶ್ಚ ಕಲ್ಯಾಣಿ ವಯಮೇತೈರ್ನಿಶಾಚರೈಃ ॥
ಖರಸ್ಯ ನಿಧನೇದೇವಿ ಜನಸ್ಥಾನವಧಂ ಪ್ರತಿ ।
ಅನುವಾದ
ಕಲ್ಯಾಣಮಯಿ ದೇವಿ! ಖರನ ವಧೆ ಮಾಡಿದಾಗ ಜನಸ್ಥಾನವಾಸೀ ಬೇರೆ ಅನೇಕ ರಾಕ್ಷಸರೂ ಸತ್ತುಹೋಗಿದ್ದರು. ಇದರಿಂದ ಈ ನಿಶಾಚರರು ನಮ್ಮೊಂದಿಗೆ ವೈರವನ್ನು ಕಟ್ಟಿಕೊಂಡಿರುವರು.॥18½॥
ಮೂಲಮ್ - 19½
ರಾಕ್ಷಸಾ ವಿವಿಧಾ ವಾಚೋ ವ್ಯಾಹರಂತಿ ಮಹಾವನೇ ॥
ಹಿಂಸಾವಿಹಾರಾ ವೈದೇಹಿ ನ ಚಿಂತಯಿತುಮರ್ಹಸಿ ।
ಅನುವಾದ
ವಿದೇಹನಂದಿನೀ! ಪ್ರಾಣಿಗಳ ಹಿಂಸೆಯೇ ಕ್ರಿಡಾ ವಿಹಾರ, ಮನೋರಂಜನೆಯಾದ ರಾಕ್ಷಸರೂ ಈ ವಿಶಾಲ ವನದಲ್ಲಿ ನಾನಾ ಪ್ರಕಾರದ ಮಾತುಗಳನ್ನು ಆಡುತ್ತಾ ಇರುತ್ತಾರೆ. ಆದ್ದರಿಂದ ನೀನು ಚಿಂತಿಸಬಾರದು.॥19½॥
ಮೂಲಮ್ - 20½
ಲಕ್ಷ್ಮಣೇನೈವಮುಕ್ತಾ ತು ಕ್ರುದ್ಧಾ ಸಂರಕ್ತಲೋಚನಾ ॥
ಅಬ್ರವೀತ್ಪುರುಷಂ ವಾಕ್ಯಂ ಲಕ್ಷ್ಮಣಂ ಸತ್ಯವಾದಿನಮ್ ।
ಅನುವಾದ
ಲಕ್ಷ್ಮಣನು ಹೀಗೆ ಹೇಳಿದಾಗ ಸೀತೆಗೆ ಭಾರೀ ಸಿಟ್ಟು ಬಂತು, ಆಕೆಯ ಕಣ್ಣು ಕೆಂಪಾದವು ಮತ್ತು ಸತ್ಯವಾದೀ ಲಕ್ಷ್ಮಣನಲ್ಲಿ ಕಠೋರವಾದ ಮಾತುಗಳನ್ನು ಹೇಳತೊಡಗಿದಳು.॥20½॥
ಮೂಲಮ್ - 21
ಅನಾರ್ಯಾಕರುಣಾರಂಭ ನೃಶಂಸ ಕುಲಪಾಂಸನ ॥
ಮೂಲಮ್ - 22
ಅಹಂ ತವ ಪ್ರಿಯಂ ಮನ್ಯೇ ರಾಮಸ್ಯ ವ್ಯಸನಂ ಮಹತ್ ।
ರಾಮಸ್ಯ ವ್ಯಸನಂ ದೃಷ್ಟ್ವಾ ತೇನೈತಾನಿ ಪ್ರಭಾಷಸೇ ॥
ಅನುವಾದ
ಅನಾರ್ಯನೇ! ನೀನು ನಿರ್ದಯಿ! ಕ್ರೂರಕರ್ಮಿ! ಕುಲಾಂಗಾರನೇ! ನಾನು ನಿನ್ನನ್ನು ತುಂಬಾ ಬಲ್ಲೆನು. ಶ್ರೀರಾಮನು ಯಾವುದಾದರೂ ವಿಪತ್ತಿನಲ್ಲಿ ಬಿಳುವುದೇ ನಿನಗೆ ಇಷ್ಟವಾಗಿದೆ. ಅದಕ್ಕಾಗಿ ನೀನು ರಾಮನ ಮೇಲೆ ಸಂಕಟ ಬಂದಿರುವುದನ್ನು ನೋಡಿಯೂ ಇಂತಹ ಮಾತನ್ನು ಆಡುತ್ತಿರುವೆ.॥21-22॥
ಮೂಲಮ್ - 23
ನೈವಚಿತ್ರಂ ಸಪತ್ನೇಷು ಪಾಪಂ ಲಕ್ಷ್ಮಣ ಯದ್ಭವೇತ್ ।
ತ್ವದ್ವಿಧೇಷು ನೃಶಂಸೇಷು ನಿತ್ಯಂ ಪ್ರಚ್ಛನ್ನಚಾರಿಷು ॥
ಅನುವಾದ
ಲಕ್ಷ್ಮಣ ನಿನ್ನಂತಹ ಕ್ರೂರ ಹಾಗೂ ಸದಾ ಅಡಗಿಕೊಂಡ ಶತ್ರುಗಳ ಮನಸ್ಸಿನಲ್ಲಿ ಇಂತಹ ಪಾಪಪೂರ್ಣ ವಿಚಾರ ಉಂಟಾಗುವುದು ಆಶ್ಚರ್ಯದ ಮಾತಲ್ಲ.॥23॥
ಮೂಲಮ್ - 24
ಸುದುಷ್ಯಸ್ತ್ವಂ ವನೇ ರಾಮಮೇಕಮೇಕೋಽನುಗಚ್ಛಸಿ ।
ಮಮ ಹೇತೋಃ ಪ್ರತಿಚ್ಛನ್ನಃ ಪ್ರಯುಕ್ತೋ ಭರತೇನ ವಾ ॥
ಅನುವಾದ
ನೀನು ಬಹಳ ದುಷ್ಟನಾಗಿರುವೆ, ಶ್ರೀರಾಮನು ಒಬ್ಬನೇ ಕಾಡಿಗೆ ಬರುವುದನ್ನು ನೋಡಿ ನನ್ನನ್ನು ಪಡೆಯಲಿಕ್ಕಾಗಿಯೇ ತನ್ನ ಭಾವವನ್ನು ಮರೆಮಾಡಿ ನೀನೊಬ್ಬನೇ ಅವನ ಹಿಂದೆ ಹಿಂದೆ ಬಂದಿರುವೆ, ಅಥವಾ ಭರತನೇ ನಿನ್ನನ್ನು ಕಳಿಸಿರುವ ಸಂಭವೂ ಇರಬಲ್ಲದು.॥24॥
ಮೂಲಮ್ - 25½
ತನ್ನ ಸಿಧ್ಯತಿ ಸೌಮಿತ್ರೇ ತವಾಪಿ ಭರತಸ್ಯ ವಾ ।
ಕಥಮಿಂದೀವರಶ್ಯಾಮಂ ರಾಮಂ ಪದ್ಮನಿಭೇಕ್ಷಣಮ್ ॥
ಉಪಸಂಶ್ರಿತ್ಯ ಭರ್ತಾರಂ ಕಾಮಯೇಯಂ ಪೃಥಗ್ಜನಮ್ ।
ಅನುವಾದ
ಆದರೆ ಸುಮಿತ್ರಾಕುಮಾರ! ನಿನ್ನ ಅಥವಾ ಭರತನ ಆ ಮನೋರಥ ಸಿದ್ಧವಾಗಲಾರದು. ನೀಲಕಮಲದಂತೆ ಶ್ಯಾಮಸುಂದರ, ಕಮಲನಯನ ಶ್ರೀರಾಮನನ್ನು ಪತಿಯಾಗಿ ಪಡೆದ ನಾನು ಬೇರೆ ಯಾವುದೇ ಕ್ಷುದ್ರ ಪುರುಷನ ಕಾಮನೆ ಹೇಗೆ ಮಾಡಬಲ್ಲೆನು.॥25½॥
ಮೂಲಮ್ - 26½
ಸಮಕ್ಷಂ ತವ ಸೌಮಿತ್ರೇ ಪ್ರಾಣಾಂಸ್ತಕ್ಷ್ಮ್ಯಾಮ್ಯಸಂಶಯಮ್ ॥
ರಾಮಂ ವಿನಾ ಕ್ಷಣಮಪಿ ನೈವಜೀವಾಮಿ ಭೂತಲೇ ।
ಅನುವಾದ
ಸುಮಿತ್ರಾಕುಮಾರ! ನಾನು ನಿನ್ನ ಮುಂದೆಯೇ ಖಂಡಿತವಾಗಿ ಪ್ರಾಣ ತ್ಯಾಗಮಾಡುವೆನು, ಆದರೆ ಶ್ರೀರಾಮನಿಲ್ಲದೆ ಒಂದು ಕ್ಷಣವೂ ಈ ಭೂಮಂಡಲದಲ್ಲಿ ಜೀವಿಸಿ ಇರಲಾರೆನು.॥26½॥
ಮೂಲಮ್ - 27
ಇತ್ಯುಕ್ತಃ ಪರುಷಂ ವಾಕ್ಯಂ ಸೀತಯಾ ರೋಮಹರ್ಷಣಮ್ ॥
ಮೂಲಮ್ - 28
ಅಬ್ರವೀಲ್ಲಕ್ಷ್ಮಣಃ ಸೀತಾಂ ಪ್ರಾಂಜಲಿಃ ಸ ಜಿತೇಂದ್ರಿಯಃ ।
ಉತ್ತರಂ ನೋತ್ಸಹೇ ವಕ್ತುಂ ದೈವತಂ ಭವತೀಮಮ ॥
ಅನುವಾದ
ಸೀತೆಯು ಇಂತಹ ಕಠೋರ ಮತ್ತು ರೋಮಾಂಚಕರವಾದ ಮಾತನ್ನು ಹೇಳಿದಾಗ ಜಿತೇಂದ್ರಿಯ ಲಕ್ಷ್ಮಣನು ಕೈ ಮುಗಿದು ಆಕೆಯಲ್ಲಿ ಹೇಳೀದನು - ದೇವಿ! ನಿಮ್ಮ ಮಾತಿಗೆ ನಾನು ಉತ್ತರಿಸಲಾರೆನು. ಏಕೆಂದರೆ ನೀವು ನನಗೆ ಆರಾಧ್ಯ ದೇವಿಯಂತೆ ಇರುವಿರ.॥27-28॥
ಮೂಲಮ್ - 29
ವಾಕ್ಯಮಪ್ರತಿರೂಪಂ ತು ನಚಿತ್ರಂ ಸ್ತ್ರೀಷು ಮೈಥಿಲಿ ।
ಸ್ವಭಾವಸ್ತ್ವೇಷ ನಾರೀಣಾಮೇಷು ಲೋಕೇಷು ದೃಶ್ಯತೇ ॥
ಅನುವಾದ
ಮಿಥಿಲೇಶಕುಮಾರೀ! ಇಂತಹ ಅನುಚಿತ, ಪ್ರತಿಕೂಲವಾದ ಮಾತನ್ನು ಆಡುವುದು ಸ್ತ್ರೀಯರಿಗಾಗಿ ಆಶ್ಚರ್ಯದ ಮಾತಲ್ಲ. ಏಕೆಂದರೆ ಈ ಜಗತ್ತಿನಲ್ಲಿ ನಾರಿಯರ ಇಂತಹ ಸ್ವಭಾವವೇ ಕಂಡು ಬರುತ್ತದೆ.॥29॥
ಮೂಲಮ್ - 30½
ವಿಮುಕ್ತಧರ್ಮಾಶ್ಚಪಲಾಸ್ತೀಕ್ಷ್ಣಾ ಭೇದಕರಾಃ ಸ್ತ್ರಿಯಃ ।
ನ ಸಹೇ ಹ್ರೀದೃಶಂ ವಾಕ್ಯಂ ವೈದೇಹಿ ಜನಕಾತ್ಮಜೇ ॥
ಶ್ರೋತ್ರಯೋರುಭಯೋರ್ಮಧ್ಯೇ ತಪ್ತನಾರಾಚಸಂನಿಭಮ್ ।
ಅನುವಾದ
ಸಾಮಾನ್ಯವಾಗಿ ಸ್ತ್ರೀಯರು ವಿನಯಾದಿ ಧರ್ಮಗಳಿಂದ ರಹಿತ, ಚಂಚಲರು, ಕಠೋರ ಹಾಗೂ ಮನೆಯಲ್ಲಿ ಒಡಕನ್ನುಂಟು ಮಾಡುವಂತಹವರಾಗಿರುತ್ತಾರೆ. ವಿದೇಹಕುಮಾರೀ ಜಾನಕಿ! ನಿಮ್ಮ ಮಾತು ನನ್ನ ಕಿವಿಗಳಲ್ಲಿ ಕಾದ ಕಬ್ಬಿಣದ ರಸ ಸುರಿದಂತಾಯಿತು. ನಾನು ಇಂತಹ ಮಾತನ್ನು ಸಹಿಸಲಾರೆನು.॥30½॥
ಮೂಲಮ್ - 31
ಉಪಶೃಣ್ವಂತು ಮೇ ಸರ್ವೇ ಸಾಕ್ಷಿಣೋ ಹಿ ವನೇಚರಾಃ ॥
ಮೂಲಮ್ - 32
ನ್ಯಾಯವಾದೀ ಯಥಾವಾಕ್ಯಮುಕ್ತೋಽಹಂ ಪರುಷಂ ತ್ವಯಾ ।
ಧಿಕ್ತ್ವಾಮದ್ಯ ವಿನಶ್ಯಂತೀಂ ಯನ್ಮಾಮೇವಂ ವಿಶಂಕಸೇ ॥
ಮೂಲಮ್ - 33
ಸ್ತ್ರೀತ್ವಾದ್ ದುಷ್ಟಂ ಸ್ವಭಾವೇನ ಗುರವಾಕ್ಯೇ ವ್ಯವಸ್ಥಿತಮ್ ।
ಗಮಿಚ್ಛಾಮಿ ಯತ್ರ ಕಾಕುತ್ಸ್ಥಃ ಸ್ವಸ್ತಿ ತೇಽಸ್ತು ವರಾನನೇ ॥
ಅನುವಾದ
ಈ ಅರಣ್ಯದಲ್ಲಿ ಸಂಚರಿಸುವ ಎಲ್ಲ ಪ್ರಾಣಿಗಳು ಸಾಕ್ಷಿಯಾಗಿ ನನ್ನ ಮಾತು ಕೇಳಲಿ. ನಾನು ನ್ಯಾಯಯುಕ್ತ ಮಾತನ್ನು ಹೇಳಿದ್ದರೂ ನೀವು ನನ್ನ ಕುರಿತು ಇಂತಹ ಕಠೋರ ಮಾತನ್ನು ಆಡಿದಿರಿ, ಖಂಡಿತವಾಗಿ ಇಂದು ನಿಮ್ಮ ಬುದ್ಧಿ ಕೆಟ್ಟುಹೋಗಿದೆ. ನೀವು ನಾಶವಾಗಲು ಬಯಸುತ್ತಿರುವಿರಿ. ನನ್ನ ಮೇಲೆ ಇಂತಹ ಸಂದೇಹಪಡುತ್ತಿರುವ ನಿಮಗೆ ಧಿಕ್ಕಾರವಿರಲಿ. ನಾನು ಅಣ್ಣನ ಆಜ್ಞೆಯನ್ನು ಪಾಲಿಸಲು ದೃಢತೆಯಿಂದ ತತ್ಪರನಾಗಿ ಇರುವೆನು. ನೀವು ಸಾಮಾನ್ಯ ನಾರಿಯಾದ್ದರಿಂದ ಸ್ತ್ರೀಯರ ದುಷ್ಟ ಸ್ವಭಾವವನ್ನು ತನ್ನದಾಗಿಸಿಕೊಂಡು ನನ್ನ ಕುರಿತು ಸಂಶಯಪಡುತ್ತಿರುವಿರಿ. ಸರಿ, ಈಗ ನಾನು ಅಣ್ಣ ಶ್ರೀರಾಮನು ಹೋದಲ್ಲಿಗೆ ಹೋಗುವೆನು. ಸುಮುಖಿ! ನಿಮಗೆ ಮಂಗಳವಾಗಲಿ.॥31-33॥
ಮೂಲಮ್ - 34
ರಕ್ಷಂತು ತ್ವಾಂ ವಿಶಾಲಾಕ್ಷಿ ಸಮಗ್ರಾ ವನದೇವತಾಃ ।
ನಿಮಿತ್ತಾನಿ ಹಿ ಘೋರಾಣಿ ಯಾನಿ ಪ್ರಾದುರ್ಭವಂತಿ ಮೇ ॥
ಅಪಿ ತ್ವಾಂ ಸಹ ರಾಮೇಣ ಪಶ್ಯೇಯಂ ಪುನರಾಗತಃ ।
ಅನುವಾದ
ವಿಶಾಲಲೋಚನೆ! ವನದ ಸಮಸ್ತ ದೇವತೆಗಳು ನಿಮ್ಮನ್ನು ರಕ್ಷಿಸಲಿ, ಏಕೆಂದರೆ ಈಗ ನನ್ನ ಎದುರಿಗೆ ಪ್ರಕಟವಾದ ಭಯಂಕರ ಅಪಶಕುನದಿಂದ ನಾನು ಶ್ರೀರಾಮಚಂದ್ರನೊಡನೆ ಮರಳಿ ಬಂದು ಪುನಃ ನಿಮ್ಮನ್ನು ನೋಡುವೆನೋ ಇಲ್ಲವೋ? ಎಂಬ ಸಂಶಯವುಂಟಾಗಿದೆ.॥34॥
ಮೂಲಮ್ - 35
ಲಕ್ಷ್ಮಣೇನೈವಮುಕ್ತಾ ಸಾ ರುದತೀ ಜನಕಾತ್ಮಜಾ ।
ಪ್ರತ್ಯುವಾಚ ತತೋ ವಾಕ್ಯಂ ತೀವ್ರಬಾಷ್ಪಪರಿಪ್ಲುತಾ ॥
ಅನುವಾದ
ಲಕ್ಷ್ಮಣನು ಹೀಗೆ ಹೇಳಿದಾಗ ಜನಕಕಿಶೋರಿ ಸೀತೆಯು ಅಳತೊಡಗಿದಳು. ಆಕೆಯ ಕಣ್ಣುಗಳಿಂದ ಕಂಬನಿ ಹರಿಯಿತು. ಅವಳು ಈ ಪ್ರಕಾರ ಉತ್ತರಿಸಿದಳು.॥35॥
ಮೂಲಮ್ - 36
ಗೋದಾವರೀಂ ಪ್ರವೇಕ್ಷ್ಯಾಮಿ ವಿನಾ ರಾಮೇಣ ಲಕ್ಷ್ಮಣ ।
ಆಬಂಧಿಷ್ಯೇಽಥವಾ ತ್ಯಕ್ಷ್ಯೇ ವಿಷಮೇ ದೇಹಮಾತ್ಮನಃ ॥
ಮೂಲಮ್ - 37
ಪಿಬಾಮಿವಾ ವಿಷಂ ತೀಕ್ಷ್ಣಂ ಪ್ರವೇಕ್ಷ್ಯಾಮಿಹುತಾಶನಮ್ ।
ನ ತ್ವಹಂ ರಾಘವಾದನ್ಯಂ ಪದಾಪಿ ಪುರುಷಂ ಸ್ಪೃಶೇ ॥
ಅನುವಾದ
ಲಕ್ಷ್ಮಣನೇ! ನಾನು ಶ್ರೀರಾಮನಿಂದ ಅಗಲಿ ಹೋದರೆ ಗೋದಾವರಿಯಲ್ಲಿ ಸೇರಿಹೋಗುವೆ ಅಥವಾ ನೇಣುಹಾಕಿಕೊಳ್ಳುವೆನು, ಇಲ್ಲವೇ ಪರ್ವತದ ದುರ್ಗಮ ಶಿಖರದಿಂದ ಹಾರಿಬಿಡುವೆನು ಅಥವಾ ತೀಕ್ಷ್ಣವಾದ ವಿಷವನ್ನು ಕುಡಿಯುವೆನು. ಇಲ್ಲವೆ ಉರಿಯುವ ಬೆಂಕಿಗೆ ಬೀಳುವೆನು. ಅದರೂ ಶ್ರೀರಘುನಾಥನ ಹೊರತು ಇತರ ಯಾವುದೇ ಪುರುಷನನ್ನು ಸ್ಪರ್ಷಿಸಲಾರೆನು.॥36-37॥
ಮೂಲಮ್ - 38
ಇತಿ ಲಕ್ಷ್ಮಣಮಾಶ್ರುತ್ಯ ಸೀತಾ ಶೋಕಸಮನ್ವಿತಾ ।
ಪಾಣಿಭ್ಯಾಂ ರುದತೀ ದುಃಖಾದುದರಂ ಪ್ರಜಘಾನ ಹ ॥
ಅನುವಾದ
ಲಕ್ಷ್ಮಣನ ಮುಂದೆ ಹೀಗೆ ಪ್ರತಿಜ್ಞೆಮಾಡಿ, ಶೋಕಮಗ್ನಳಾಗಿ ಅಳುತ್ತಿರುವ ಸೀತೆಯು ಅತಿ ದುಃಖದಿಂದಾಗಿ ಎರಡೂ ಕೈಗಳಿಂದ ಎದೆ ಬಡಿದುಕೊಳ್ಳತೊಡಗಿದಳು.॥38॥
ಮೂಲಮ್ - 39
ತಾಮಾರ್ತರೂಪಾಂ ವಿಮನಾ ರುದಂತೀಂ
ಸೌಮಿತ್ರಿರಾಲೋಕ್ಯ ವಿಶಾಲನೇತ್ರಾಮ್ ।
ಆಶ್ವಾಸಯಾಮಾಸ ನ ಚೈವ ಭರ್ತು-
ಸ್ತಂ ಭ್ರಾತರಂ ಕಿಂಚಿದುವಾಚ ಸೀತಾ ॥
ಅನುವಾದ
ವಿಶಾಲಲೋಚನೆ ಸೀತೆಯು ಹೀಗೆ ಆರ್ತಳಾಗಿ ಅಳುತ್ತಿರುವುದನ್ನು ನೋಡಿ ಸುಮಿತ್ರಾಕುಮಾರ ಲಕ್ಷ್ಮಣನು ಆಕೆಗೆ ಮನಃಪೂರ್ವಕ ಸಾಂತ್ವನ ನೀಡಿದನು. ಆದರೆ ಸೀತೆಯು ಆಗ ಮೈದುನನಲ್ಲಿ ಏನನ್ನೂ ಹೇಳಲಿಲ್ಲ.॥39॥
ಮೂಲಮ್ - 40
ತತಸ್ತು ಸೀತಾಮಭಿವಾದ್ಯ ಲಕ್ಷ್ಮಣಃ
ಕೃತಾಂಜಲಿಃ ಕಿಂಚಿದಭಿಪ್ರಣಮ್ಯ ।
ಅವೇಕ್ಷಮಾಣೋ ಬಹುಶಃ ಸ ಮೈಥಿಲೀಂ
ಜಗಾಮ ರಾಮಸ್ಯ ಸಮೀಪಮಾತ್ಮವಾನ್ ॥
ಅನುವಾದ
ಆಗ ಮನಸ್ಸನ್ನು ವಶವಿರಿಸಿಕೊಂಡ ಲಕ್ಷ್ಮಣನು ಎರಡೂ ಕೈಮುಗಿದು, ಬಾಗಿ ಸೀತೆಗೆ ನಮಸ್ಕರಿಸಿದನು ಮತ್ತು ಪದೇ ಪದೇ ಆಕೆಯ ಕಡೆಗೆ ನೋಡುತ್ತಾ ಅವನು ಶ್ರೀರಾಮಚಂದ್ರನ ಬಳಿಗೆ ಹೊರಟುಹೋದನು.॥40॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತೈದನೆಯ ಸರ್ಗ ಸಂಪೂರ್ಣವಾಯಿತು.॥45॥