०४४ मारीचवधः

वाचनम्
ಭಾಗಸೂಚನಾ

ಶ್ರೀರಾಮನಿಂದ ಮಾರೀಚನ ಸಂಹಾರ, ಸಾಯುವಾಗ ಮಾರೀಚನು ಹಾ! ಸೀತೇ! ಹಾ ಲಕ್ಷ್ಮಣಾ! ಎಂದು ಕೂಗಿಕೊಂಡಿದ್ದನ್ನು ಕೇಳಿ ರಾಮನ ಚಿಂತೆ

ಮೂಲಮ್ - 1

ತಥಾ ತು ತಂ ಸಮಾದಿಶ್ಯ ಭ್ರಾತರಂ ರಘುನಂದನಃ ।
ಬಬಂಧಾಸಿಂ ಮಹಾತೇಜಾ ಜಾಂಬೂನದಮಯತ್ಸರುಮ್ ॥

ಅನುವಾದ

ಮಹಾತೇಜಸ್ವಿಯಾದ ರಘುನಂದನನು ತಮ್ಮನಿಗೆ ಹೀಗೆ ಆಜ್ಞಾಪಿಸಿ ಸುವರ್ಣಮಯ ಹಿಡಿಯುಳ್ಳ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡನು.॥1॥

ಮೂಲಮ್ - 2

ತತಸ್ತ್ರವಿನತಂ ಚಾಪಮಾದಾಯಾತ್ಮವಿಭೂಷಣಮ್ ।
ಆಬಧ್ಯ ಚ ಕಲಾಪೌ ದ್ವೌಜಗಾಮೋದಗ್ರವಿಕ್ರಮಃ ॥

ಅನುವಾದ

ಅನಂತರ ಮಹಾಪರಾಕ್ರಮಿ ರಘುನಾಥನು ಮೂರು ಕಡೆ ಬಾಗಿದ ಆಭೂಷಣ ರೂಪ ತನ್ನ ಧನುಸ್ಸನ್ನು ಕೈಲ್ಲೆತ್ತಿಕೊಂಡು, ಬೆನ್ನಿಗೆ ಎರಡು ಬತ್ತಳಿಕೆಗಳನ್ನು ಬಿಗಿದುಕೊಂಡು ಅಲ್ಲಿಂದ ಹೊರಟನು.॥2॥

ಮೂಲಮ್ - 3

ತಂ ವನ್ಯರಾಜೋ ರಾಜೇಂದ್ರಮಾಪತಂತಂ ನಿರೀಕ್ಷ್ಯ ವೈ।
ಬಭೂವಾಂತರ್ಹಿತಸ್ತ್ರಾಸಾತ್ ಪುನಃ ಸಂದರ್ಶನೇಽಭವತ್ ॥

ಅನುವಾದ

ರಾಜಾಧಿರಾಜ ಶ್ರೀರಾಮನು ಬಂದಿರುವುದನ್ನು ನೋಡಿ ಆ ಕಾಡಿನ ಮೃಗಗಳ ರಾಜ ಆ ಕಾಂಚನ ಮೃಗವು ಅಡಗಿಕೊಂಡಿತು; ಆದರೆ ಮತ್ತೆ ಕೂಡಲೇ ಅವನ ಕಣ್ಣಿಗೆ ಕಾಣಿಸಿತು.॥3॥

ಮೂಲಮ್ - 4

ಬದ್ಧಾಸಿರ್ಧನುರಾದಾಯ ಪ್ರದುದ್ರಾವ ಯತೋ ಮೃಗಃ ।
ತಂ ಸ್ಮ ಪಶ್ಯತಿ ರೂಪೇಣ ದ್ಯೋತಯಂತಮಿವಾಗ್ರತಃ ॥

ಮೂಲಮ್ - 5

ಅವೇಕ್ಷ್ಯಾವೇಕ್ಷ್ಯ ಧಾವಂತಂ ಧನುಷ್ಪಾಣಿರ್ಮಹಾವನೇ ।
ಅತಿವೃತ್ತಮಿವೋತ್ ಪಾತಾಲ್ಲೋಭಯಾನಂಕದಾಚನ॥

ಮೂಲಮ್ - 6

ಶಂಕಿತಂ ತು ಸಮುದ್ ಭ್ರಾಂತಮುತ್ಪತಂತಮಿವಾಂಬರಮ್ ।
ದೃಶ್ಯಮಾನಮದೃಶ್ಯಂ ಚ ವನೋದ್ದೇಶೇಷು ಕೇಷುಚಿತ್ ॥

ಮೂಲಮ್ - 7

ಛಿನ್ನಾಭ್ರೈರಿವ ಸಂವೀತಂ ಶಾರದಂ ಚಂದ್ರಮಂಡಲಮ್ ।
ಮುಹೂರ್ತಾದೇವ ದದೃಶೇ ಮುಹುರ್ದೂರಾತ್ ಪ್ರಕಾಶತೇ ॥

ಅನುವಾದ

ಖಡ್ಗವನ್ನು, ಧನುಸ್ಸನ್ನೂ, ಧರಿಸಿದ ಶ್ರೀರಾಮನು ಆ ಮೃಗ ಇರುವ ಕಡೆಗೆ ಓಡಿದನು. ಧನುರ್ಧರ ಶ್ರೀರಾಮನು ನೋಡಿದ ಅದು ತನ್ನ ರೂಪದಿಂದ ದಿಕ್ಕುಗಳನ್ನು ಪ್ರಕಾಶಿಸುತ್ತಿತ್ತು. ಆ ಮಹಾವನದಲ್ಲಿ ಅದು ಹಿಂದಿರುಗಿ ನೋಡುತ್ತಾ ಮುಂದೆ ಓಡುತ್ತಿತ್ತು. ಕೆಲವೊಮ್ಮೆ ನೆಗೆದು ಬಹಳ ದೂರ ಹೋದರೆ, ಕೆಲವೊಮ್ಮೆ ಕೈಗೆಟುಕುವಷ್ಟು ಹತ್ತಿರ ಕಂಡು ಬಂದು ಹಿಡಿಯುವ ಲೋಭವನ್ನು ಉಂಟುಮಾಡುತ್ತಿತ್ತು. ಕೆಲವೊಮ್ಮೆ ಹೆದರಿ, ಗಾಬರಿಗೊಂಡರೆ, ಕೆಲವೊಮ್ಮೆ ಆಕಾಶದಲ್ಲಿ ಹಾರುವಂತೆ ಕಂಡು ಬರುತ್ತಿತ್ತು. ಕೆಲವೊಮ್ಮೆ ಕಾಡಿನಲ್ಲಿ ಅಡಗಿಕೊಂಡು ಶರದ್ ಋತುವಿನ ಚಂದ್ರನು ಮೋಡಗಳಲ್ಲಿ ಅಡಗಿಕೊಳ್ಳುವಂತೆ ಅದೃಶ್ಯವಾಗುತ್ತಿತ್ತು. ಒಂದೇ ಮೂಹೂರ್ತದಲ್ಲಿ ಅದು ಹತ್ತಿರ ಕಾಣಿಸಿಕೊಂಡರೆ, ಮರುಕ್ಷಣ ಬಹಳ ದೂರ ಹೋಗಿರುತ್ತಿತ್ತು.॥4-7॥

ಮೂಲಮ್ - 8

ದರ್ಶನಾದರ್ಶನೇನೈವ ಸೋಽಪಾಕರ್ಷತ ರಾಘವಮ್ ।
ಸ ದೂರಮಾಶ್ರಮಸ್ಯಾಸ್ಯ ಮಾರೀಚೋ ಮೃಗತಾಂ ಗತಃ ॥

ಅನುವಾದ

ಹೀಗೆ ತೋರುತ್ತಾ, ಮರೆಯಾಗುತ್ತಾ ಆ ಮೃಗರೂಪಧಾರೀ ಮಾರೀಚನು ಶ್ರೀರಘುನಾಥನನ್ನು ಆಶ್ರಮದಿಂದ ಬಹಳ ದೂರ ಸೆಳೆದುಕೊಂಡು ಹೋದನು.॥8॥

ಮೂಲಮ್ - 9

ಆಸೀತ್ಕ್ರುದ್ಧಸ್ತು ಕಾಕುತ್ಸ್ಥೋ ವಿವಶಸ್ತೇನ ಮೋಹಿತಃ ।
ಅಥಾವತಸ್ಥೇ ಸುಶ್ರಾಂತಯಾಮಾಶ್ರಿತ್ಯ ಶಾದ್ವಲೇ ॥

ಅನುವಾದ

ಆಗ ಅದರಿಂದ ಮೋಹಿತ ಮತ್ತು ವಿವಶನಾದ ಶ್ರೀರಾಮನು ಸ್ವಲ್ಪ ಕುಪಿತನಾದನು. ಒಂದೆಡೆ ನೆರಳಿನಲ್ಲಿ ಆಶ್ರಯ ಪಡೆದು ಹಸಿರಾದ ಹುಲ್ಲಿನ ಜಾಗದಲ್ಲಿ ದಣಿದು ನಿಂತುಕೊಂಡನು.॥9॥

ಮೂಲಮ್ - 10

ಸ ತಮುನ್ಮಾದಯಾಮಾಸ ಮೃಗರೂಪೋ ನಿಶಾಚರಃ ।
ಮೃಗೈಃ ಪರಿವೃತೋಽಥಾನ್ಯೈರದೂರಾತ್ ಪ್ರತ್ಯದೃಶ್ಯತ ॥

ಅನುವಾದ

ಈ ಮೃಗರೂಪೀ ನಿಶಾಚರನು ಅವನನ್ನು ಉನ್ಮತ್ತನಂತೆ ಮಾಡಿ ಬಿಟ್ಟಿದ್ದನು. ಸ್ವಲ್ಪ ಹೊತ್ತಿನಲ್ಲೇ ಅವನು ಇತರ ಮೃಗಗಳಿಂದ ಸುತ್ತುವರಿದು ಬಳಿಯಲ್ಲೇ ಕಂಡುಬಂದನು.॥10॥

ಮೂಲಮ್ - 11

ಗ್ರಹೀತುಕಾಮಂ ದೃಷ್ಟ್ವಾತಂ ಪುನರೇವಾಭ್ಯಧಾವತ ।
ತತ್ಕ್ಷಣಾದೇವ ಸಂತ್ರಾಸಾತ್ ಪುನರಂತರ್ಹಿತೋಽಭವತ್ ॥

ಅನುವಾದ

ಶ್ರೀರಾಮನು ನನ್ನನ್ನು ಹಿಡಿಯಲು ಬಯಸುತ್ತಿರುವನೆಂದು ನೋಡಿ ಅವನು ತತ್ಕಾಲ ಓಡಿ ಭಯದಿಂದಾಗಿ ಪುನಃ ಅದೃಶ್ಯನಾದನು.॥11॥

ಮೂಲಮ್ - 12

ಪುನರೇವ ತತೋ ದೂರಾದ್ ವೃಕ್ಷಷಂಡಾದ್ ವಿನಿಃಸೃತಃ ।
ದೃಷ್ಟ್ವಾ ರಾಮೋ ಮಹಾತೇಜಾಸ್ತಂ ಹಂತುಂ ಕೃತನಿಶ್ಚಯಃ ॥

ಅನುವಾದ

ಅನಂತರ ಅವನು ದೂರದಲ್ಲಿದ್ದ ವೃಕ್ಷ ಸಮೂಹದಲ್ಲಿ ಕಾಣಿಸಿಕೊಂಡನು. ಅವನನ್ನು ನೋಡಿ ಮಹಾ ತೇಜಸ್ವೀ ಶ್ರೀರಾಮನು ಕೊಂದು ಹಾಕಲು ನಿಶ್ಚಯಿಸಿದನು.॥12॥

ಮೂಲಮ್ - 13

ಭೂಯಸ್ತು ಶರಮುದ್ಧೃತ್ಯ ಕುಪಿತಸ್ತತ್ರ ರಾಘವಃ ।
ಸೂರ್ಯರಶ್ಮಿಪ್ರತೀಕಾಶಂ ಜ್ವಲಂತಮರಿಮರ್ದಮ್ ॥

ಮೂಲಮ್ - 14½

ಸಂಧಾಯ ಸುದೃಢೇ ಚಾಪೇ ವಿಕೃಷ್ಯ ಬಲವದ್ಭಲೀ ।
ತಮೇವ ಮೃಗಮುದ್ದಿಶ್ಯ ಶ್ವಸಂತಮಿವ ಪನ್ನಗಮ್ ॥
ಮುಮೋಚ ಜ್ವಲಿತಂ ದೀಪ್ತಮಸ್ತ್ರಂ ಬ್ರಹ್ಮವಿನಿರ್ಮಿತಮ್ ।

ಅನುವಾದ

ಕ್ರೋಧಗೊಂಡ ಬಲವಂತನಾದ ರಾಘವೇಂದ್ರ ಶ್ರೀರಾಮನು ಬತ್ತಳಿಕೆಯಿಂದ ಸೂರ್ಯಕಿರಣಗಳಂತೆ ತೇಜಸ್ವೀ ಒಂದು ಪ್ರಜ್ವಲಿತ ಹಾಗೂ ಶತ್ರು ಸಂಹಾರಕ ಬಾಣವನ್ನು ತೆಗೆದು ಅದನ್ನು ಧನುಸ್ಸಿಗೆ ಹೂಡಿ ಧನುಸ್ಸನ್ನು ಜೋರಾಗಿ ಸೆಳೆದು ಆ ಮೃಗಕ್ಕೆ ಗುರಿಯಿಟ್ಟು, ಬ್ರಹ್ಮನಿಂದ ನಿರ್ಮಿತವಾದ, ಹಾವಿನಂತೆ ಬುಸುಗುಟ್ಟುತ್ತಿರುವ ಆ ಬಾಣವನ್ನು ಪ್ರಯೋಗಿಸಿದನು.॥13-14½॥

ಮೂಲಮ್ - 15½

ಶರೀರಂ ಮೃಗರೂಪಸ್ಯ ವಿನಿರ್ಭಿದ್ಯ ಶರೋತ್ತಮಃ ॥
ಮಾರೀಚಸ್ಯೈವ ಹೃದಯಂ ಬಿಭೇದಾಶನಿಸಂನಿಭಃ ।

ಅನುವಾದ

ವಜ್ರದಂತಹ ತೇಜಸ್ವೀ ಆ ಉತ್ತಮ ಬಾಣವು ಮೃಗರೂಪಧಾರೀ ಮಾರೀಚನ ಶರೀರವನ್ನು ಸೀಳಿ, ಅವನ ಹೃದಯವನ್ನು ವಿದಿರ್ಣಗೊಳಿಸಿತು.॥15½॥

ಮೂಲಮ್ - 16½

ತಾಲಮಾತ್ರಮಥೋತ್ ಪ್ಲುತ್ಯ ನ್ಯಪತತ್ ಭೃಶಾತುರಃ ॥
ವಿನದದ್ಭೈರವಂ ನಾದಂ ಧರಣ್ಯಾಮಲ್ಪಜೀವತಃ ।

ಅನುವಾದ

ಆ ಏಟಿನಿಂದ ಪೀಡಿತನಾದ ಆ ರಾಕ್ಷಸನು ತಾಳೆ ಮರದಷ್ಟು ಎತ್ತರಕ್ಕೆ ಹಾರಿ ನೆಲಕ್ಕೆ ಬಿದ್ದನು. ಅವನು ಸಾಯುತ್ತಿರುವಾಗ ಭೂಮಿಗೆ ಬಿದ್ದುಕೊಂಡೇ ಭಯಂಕರವಾಗಿ ಗರ್ಜಿಸತೊಡಗಿದನು.॥16½॥

ಮೂಲಮ್ - 17

ಮ್ರಿಯಮಾಣಸ್ತು ಮಾರೀಚೋ ಜಹೌ ತಾಂ ಕೃತ್ರಿಮಾಂ ತನುಮ್ ॥

(ಶ್ಲೋಕ 18)

ಮೂಲಮ್

ಸ್ಮೃತ್ವಾ ತದ್ವಚನಂ ರಕ್ಷೋ ದಧ್ಯೌ ಕೇನ ತು ಲಕ್ಷ್ಮಣಮ್ ।
ಇಹ ಪ್ರಸ್ಥಾಪಯೇತ್ಸೀತಾ ತಾಂ ಶೂನ್ಯೇ ರಾವಣೋ ಹರೇಶ್ ॥

ಅನುವಾದ

ಸಾಯುತ್ತಿರುವ ಸಮಯ ತನ್ನ ಕೃತ್ರಿಮ ದೇಹವನ್ನು ತ್ಯಜಿಸಿದನು ಮತ್ತು ರಾವಣನು ಹೇಳಿದುದನ್ನು ನೆನೆದು ಆ ರಾಕ್ಷಸನು ಯಾವ ಉಪಾದಿಂದ ಸೀತೆಯು ಲಕ್ಷ್ಮಣನನ್ನು ಇಲ್ಲಿಗೆ ಕಳಿಸುವಳು? ಮತ್ತು ಬರಿದಾದ ಆಶ್ರಮದಿಂದ ಸೀತೆಯನ್ನು ರಾವಣನು ಹೇಗೆ ಅಪಹರಿಸುವನು? ಎಂದು ಯೋಚಿಸಿದನು.॥17-18॥

ಮೂಲಮ್ - 19

ಸ ಪ್ರಾಪ್ತಕಾಲಮಾಜ್ಞಾಯ ಚಕಾರ ಚ ತತಃ ಸ್ವನಮ್ ।
ಸದೃಶಂ ರಾಘವಸ್ಯೈವ ಹಾ ಸೀತೇ ಲಕ್ಷ್ಮಣೇತಿ ಚ ॥

ಅನುವಾದ

ರಾವಣನು ತಿಳಿಸಿದ ಉಪಾಯವನ್ನು ಉಪಯೋಗಿಸುವ ಸಂದರ್ಭ ಬಂದಿದೆ ಎಂದು ತಿಳಿದು ಅವನು ಶ್ರೀರಾಮನ ಸ್ವರದಂತೆ ‘ಹಾ ಸೀತೇ! ಹಾ ಲಕ್ಷ್ಮಣ!’ ಎಂದು ಜೋರಾಗಿ ಕೂಗಿದನು.॥19॥

ಮೂಲಮ್ - 20

ತೇನ ಮರ್ಮಣಿ ನಿರ್ವಿದ್ಧಂ ಶರೇಣಾನುಪಮೇನ ಹಿ ।
ಮೃಗರೂಪಂ ತು ತತ್ತ್ತ್ಯಕ್ತ್ವಾ ರಾಕ್ಷಸಂ ರೂಪಮಾಸ್ಥಿತಃ ॥

ಅನುವಾದ

ಶ್ರೀರಾಮನ ಅನುಪಮ ಬಾಣದಿಂದ ಅವನ ಮರ್ಮವಿದೀರ್ಣವಾಗಿ, ಆ ಮೃಗರೂಪವನ್ನು ತ್ಯಜಿಸಿ ಅವನು ರಾಕ್ಷಸ ರೂಪ ಧರಿಸಿದ್ದನು.॥20॥

ಮೂಲಮ್ - 21

ಚಕ್ರೇ ಸ ಸುಮಹಾಕಾಯಂ ಮಾರೀಚೋ ಜೀವಿತಂ ತ್ಯಜನ್ ।
ತಂ ದೃಷ್ಟ್ವಾ ಪತಿತಂ ಭೂಮೌ ರಾಕ್ಷಸಂ ಭೀಮದರ್ಶನಮ್ ॥

ಮೂಲಮ್ - 22

ರಾಮೋ ರುಧಿರಸಿಕ್ತಾಂಗಂ ವೇಷ್ಟಮಾನಂ ಮಹೀತಲೇ ।
ಜಗಾಮ ಮನಸಾ ಸೀತಾಂ ಲಕ್ಷ್ಮಣಸ್ಯ ವಚಃ ಸ್ಮರನ್ ॥

ಅನುವಾದ

ಪ್ರಾಣತ್ಯಾಗ ಮಾಡುವಾಗ ಮಾರೀಚನು ತನ್ನ ಶರೀರವನ್ನು ಬಹಳ ದೊಡ್ಡದಾಗಿಸಿಕೊಂಡಿದ್ದನು. ಭಯಂಕರವಾಗಿ ಕಾಣುವ ಆ ರಾಕ್ಷಸನು ನೆಲಕ್ಕೆ ಬಿದ್ದು ರಕ್ತಸಿಕ್ತನಾಗಿ ಹೊರಳಾಡುತ್ತಿರುವುದನ್ನು ನೋಡಿ ಶ್ರೀರಾಮನಿಗೆ ಲಕ್ಷ್ಮಣನು ಹೇಳಿದ ಮಾತು ನೆನಪಾಯಿತು ಮತ್ತು ಮನಸ್ಸಿನಲ್ಲೇ ಸೀತೆಯ ಕುರಿತು ಚಿಂತಿಸತೊಡಗಿದನು.॥21-22॥

ಮೂಲಮ್ - 23

ಮಾರೀಚಸ್ಯ ತು ಮಾಯೈಷಾ ಪೂರ್ವೋಕ್ತಂ ಲಕ್ಷ್ಮಣೇನ ತು ।
ತತ್ತಥಾ ಹ್ಯಭವಚ್ಚಾದ್ಯ ಮಾರೀಚೋಽಯಂ ಮಯಾ ಹತಃ ॥

ಅನುವಾದ

ಅಯ್ಯೋ! ಲಕ್ಷ್ಮಣ ಮೊದಲು ಹೇಳಿದಂತೆಯೇ ಇದು ನಿಜವಾಗಿ ಮಾರೀಚನ ಮಾಯೆಯೇ ಆಗಿತ್ತು. ಲಕ್ಷ್ಮಣನ ಮಾತು ನಿಜವಾಯಿತು. ಇಂದು ನನ್ನಿಂದ ಈ ಮಾರೀಚನೇ ಹತನಾದನು.॥23॥

ಮೂಲಮ್ - 24½

ಹಾ ಸೀತೇ ಲಕ್ಷ್ಮಣೇತ್ಯೇವಮಾಕ್ರುಶ್ಯ ತು ಮಹಾಸ್ವನಮ್ ।
ಮಮಾರ ರಾಕ್ಷಸಃ ಸೋಽಯಂ ಶ್ರುತ್ವಾ ಸೀತಾ ಕಥಂ ಭವೇತ್ ॥
ಲಕ್ಷ್ಮಣಶ್ಚ ಮಹಾಬಾಹುಃ ಕಾಮವಸ್ಥಾಂ ಗಮಿಷ್ಯತಿ ।

ಅನುವಾದ

ಆದರೆ ಈ ರಾಕ್ಷಸನು ಗಟ್ಟಿಯಾಗಿ ಹಾ ಸೀತೇ! ಹಾ ಲಕ್ಷ್ಮಣ! ಎಂದು ಕೂಗಿ ಸತ್ತುಹೋದನಲ್ಲ. ಅವನ ಆ ಶಬ್ದವನ್ನು ಕೇಳಿ ಸೀತೆಯ ಅವಸ್ಥೆ ಏನಾಗಿರಬಹುದು? ಮಹಾಬಾಹು ಲಕ್ಷ್ಮಣ ಸ್ಥಿತಿ ಏನಾದೀತು.॥24॥

ಮೂಲಮ್ - 25

ಇತಿ ಸಂಚಿಂತ್ಯ ಧರ್ಮಾತ್ಮಾ ರಾಮೋಹೃಷ್ಟತನೂರುಹಃ ॥

ಮೂಲಮ್ - 26

ತತ್ರ ರಾಮಂ ಭಯಂ ತೀವ್ರಮಾವಿವೇಶವಿಷಾದಜಮ್ ।
ರಾಕ್ಷಸಂ ಮೃಗರೂಪಂ ತಂ ಹತ್ವಾ ಶ್ರುತ್ವಾ ಚ ತತ್ಸ್ವನಮ್ ॥

ಅನುವಾದ

ಹೀಗೆ ಯೋಚಿಸಿ ಧರ್ಮಾತ್ಮಾ ಶ್ರೀರಾಮನ ರೋಮಗಳು ನಿಮಿರಿ ನಿಂತವು. ಆಗ ಅಲ್ಲಿ ಮೃಗರೂಪೀ ಆ ರಾಕ್ಷಸನನ್ನು ಕೊಂದು, ಅವನ ಶಬ್ದವನ್ನು ಕೇಳಿ ಶ್ರೀರಾಮನ ಮನಸ್ಸಿನಲ್ಲಿ ವಿಷಾದ ತುಂಬಿದ ತೀವ್ರ ಭಯ ಆವರಿಸಿತು.॥25-26॥

ಮೂಲಮ್ - 27

ನಿಹತ್ಯ ಪೃಷತಂ ಚಾನ್ಯಂ ಮಾಂಸಮಾದಾಯ ರಾಘವಃ ।
ತ್ವರಮಾಣೋ ಜನಸ್ಥಾನಂ ಸಸಾರಾಭಿಮುಖಂ ತದಾ ॥

ಅನುವಾದ

ಆ ಲೋಕವಿಲಕ್ಷಣ ಮೃಗವನ್ನು ವಧಿಸಿ, ತಪಸ್ವಿಗಳಿಗೆ ಉಪಯುಕ್ತ ಫಲ-ಮೂಲಗಳನ್ನು ಎತ್ತಿಕೊಂಡು ಶ್ರೀರಾಮನು ತತ್ಕ್ಷಣ ಜನಸ್ಥಾನದ ಪಂಚವಟಿಯಲ್ಲಿದ್ದ ತನ್ನ ಆಶ್ರಮದ ಕಡೆಗೆ ಲಗುಬಗೆಯಿಂದ ಹೊರಟನು.॥27॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥44॥