वाचनम्
ಭಾಗಸೂಚನಾ
ಮಾಯಾ ಜಿಂಕೆಯ ವಿಷಯದಲ್ಲಿ ಲಕ್ಷ್ಮಣನ ಸಂದೇಹ, ಜಿಂಕೆಯನ್ನು ಜೀವಂತವಾಗಿ ಅಥವಾ ಕೊಂದಾದರೂ ತರಲು ಶ್ರೀರಾಮನಿಗೆ ಸೀತೆಯ ಒತ್ತಾಯ, ಶ್ರೀರಾಮನು ಸೀತೆಯ ರಕ್ಷಣಾಭಾರವನ್ನು ಲಕ್ಷ್ಮಣನಿಗೆ ಒಪ್ಪಿಸಿ ಮಾಯಾಮೃಗವನ್ನು ಹಿಂಬಾಲಿಸಿದುದು
ಮೂಲಮ್ - 1
ಸಾ ತಂ ಸಂಪ್ರೇಕ್ಷ್ಯ ಸುಶ್ರೋಣೀ ಕುಸುಮಾನಿವಿಚಿನ್ವತೀ ।
ಹೇಮರಾಜತವರ್ಣಾಭ್ಯಾಂ ಪಾರ್ಶ್ವಾಭ್ಯಾಮುಪಶೋಭಿತಮ್ ॥
ಮೂಲಮ್ - 2
ಪ್ರಹೃಷ್ಟಾ ಚಾನವದ್ಯಾಂಗೀ ಮೃಷ್ಟಹಾಟಕವರ್ಣಿನೀ ।
ಭರ್ತಾರಮಪಿ ಚಕ್ರಂದ ಲಕ್ಷ್ಮಣಂ ಚೈವ ಸಾಯುಧಮ್ ॥
ಅನುವಾದ
ಆ ಮೃಗದ ಪಾರ್ಶ್ವಭಾಗವು ಚಿನ್ನ-ಬೆಳ್ಳಿಯಂತೆ ಕಾಂತಿಯಿಂದ ಸುಶೋಭಿತವಾಗಿತ್ತು. ಶುದ್ಧ ಸುವರ್ಣ ವರ್ಣದಂತಹ ಕಾಂತಿಯಿಂದ ಹಾಗೂ ನಿರ್ದೋಷ ಸುಂದರೀ ಸೀತೆಯು ಹೂವುಗಳನ್ನು ಬಿಡಿಸುತ್ತಾ ಆ ಮೃಗವನ್ನು ನೋಡಿ ಮನಸ್ಸಿನಲ್ಲೇ ಬಹಳ ಪ್ರಸನ್ನಳಾಗಿ, ತನ್ನ ಪತಿ ಶ್ರೀರಾಮ ಹಾಗೂ ಮೈದುನ ಲಕ್ಷ್ಮಣರಿಗೆ ಆಯುಧಗಳನ್ನು ಹಿಡಿದುಕೊಂಡು ಬನ್ನಿ ಎಂದು ಕೂಗಿದಳು.॥1-2॥
ಮೂಲಮ್ - 3
ಆಹೂಯಾಹೂಯ ಚ ಪುನಸ್ತಂ ಮೃಗಂ ಸಾಧು ವೀಕ್ಷತೇ ।
ಆಗಚ್ಛಾಗಚ್ಛ ಶೀಘ್ರಂ ವೈ ಆರ್ಯಪುತ್ರ ಸಹಾನುಜ ॥
ಅನುವಾದ
ಅವಳು ಪದೇಪದೇ ಅವರನ್ನು ಕರೆಯುತ್ತಾ, ಮತ್ತೆ ಆ ಮೃಗವನ್ನು ಚೆನ್ನಾಗಿ ನೋಡತೊಡಗಿದಳು. ಅವಳು ಹೇಳಿದಳು ಆರ್ಯಪುತ್ರನೇ! ಸಹೋದರನೊಡನೆ ಬೇಗನೇ ಬನ್ನಿ-ಬೇಗ ಬನ್ನಿರಿ.॥3॥
ಮೂಲಮ್ - 4
ತಾವಾಹೂತೌ ನರವ್ಯಾಘ್ರೌ ವೈದೇಹ್ಯಾರಾಮಲಕ್ಷ್ಮಣೌ ।
ವೀಕ್ಷಮಾಣೌ ತು ತಂ ದೇಶಂ ತದಾ ದದೃಶತುರ್ಮೃಗಮ್ ॥
ಅನುವಾದ
ವಿದೇಹ ಕುಮಾರಿಯು ಕರೆಯುತ್ತಿರುವಾಗ ನರಶ್ರೇಷ್ಠ ಶ್ರೀರಾಮ ಮತ್ತು ಲಕ್ಷ್ಮಣರು ಅಲ್ಲಿಗೆ ಬಂದು, ಎಲ್ಲೆಡೆ ಕಣ್ಣು ಹಾಯಿಸಿದಾಗ ಅವರು ಆ ಮೃಗವನ್ನು ನೋಡಿದರು.॥4॥
ಮೂಲಮ್ - 5
ಶಂಕಮಾನಸ್ತು ತಂ ದೃಷ್ಟ್ವಾ ಲಕ್ಷ್ಮಣೋ ವಾಕ್ಯಮಬ್ರವೀತ್ ।
ತಮೇವೈನಮಹಂ ಮನ್ಯೇ ಮಾರೀಚಂ ರಾಕ್ಷಸಂ ಮೃಗಮ್ ॥
ಅನುವಾದ
ಅದನ್ನು ನೋಡಿ ಲಕ್ಷ್ಮಣನ ಮನಸ್ಸಿನಲ್ಲಿ ಸಂದೇಹ ಉಂಟಾಯಿತು. ಹಾಗೂ ಹೇಳಿದನು- ಅಣ್ಣಾ! ಈ ಮೃಗದ ರೂಪದಲ್ಲಿ ಆ ಮಾರೀಚನೆಂಬ ರಾಕ್ಷಸನೇ ಬಂದಿರುವಂತೆ ನಾನು ತಿಳಿಯುತ್ತೇನೆ.॥5॥
ಮೂಲಮ್ - 6
ಚರಂತೋ ಮೃಗಯಾಂ ಹೃಷ್ಟಾಃ ಪಾಪೇನೋಪಾಧಿನಾ ವನೇ ।
ಅನೇನ ನಿಹತಾ ರಾಮ ರಾಜಾನಃ ಕಾಮರೂಪಿಣಾ ॥
ಅನುವಾದ
ಶ್ರೀರಾಮಾ! ಸ್ವೇಚ್ಛಾನುಸಾರ ರೂಪ ಧರಿಸುವ ಈ ಪಾಪಿಯು ಕಪಟ ವೇಷಧರಿಸಿ ಕಾಡಿಗೆ ಬೇಟೆಗಾಗಿ ಬಂದಿರುವ ಎಷ್ಟೋ ಹರ್ಷೋತ್ಪುಲ್ಲ ನರೇಶರನ್ನು ವಧಿಸಿಬಿಟ್ಟಿರುವನು.॥6॥
ಮೂಲಮ್ - 7
ಅಸ್ಯ ಮಾಯಾವಿದೋ ಮಾಯಾಮೃಗರೂಪಮಿದಂ ಕೃತಮ್ ।
ಭಾನುಮತ್ಪುರುಷವ್ಯಾಘ್ರ ಗಂಧರ್ವಪುರಸಂನಿಭಮ್ ॥
ಅನುವಾದ
ಪುರುಷಸಿಂಹನೇ! ಇವನು ಅನೇಕ ಪ್ರಕಾರದ ಮಾಯೆಯನ್ನು ತಿಳಿದಿರುವನು. ಇವನ ಮಾಯೆಯೇ ಈ ಮೃಗರೂಪದಿಂದ ಪರಿಣತವಾಗಿದೆ. ಇದು ಗಂಧರ್ವ ನಗರದಂತೆ ನೋಡಲು ಮಾತ್ರ ಇದೆ. ಇದರಲ್ಲಿ ವಾಸ್ತವಿಕತೆ ಇಲ್ಲ.॥7॥
ಮೂಲಮ್ - 8
ಮೃಗೋ ಹ್ಯೇವಂವಿಧೋ ರತ್ನವಿಚಿತ್ರೋ ನಾಸ್ತಿ ರಾಘವ ।
ಜಗತ್ಯಾಂ ಜಗತೀನಾಥ ಮಾಯೈಷಾ ಹಿ ನ ಸಂಶಯಃ ॥
ಅನುವಾದ
ರಘುನಂದನ! ಪೃಥ್ವಿನಾಥನೆ! ಈ ಭೂತಳದಲ್ಲಿ ಎಲ್ಲಿಯೂ ಇಂತಹ ವಿಚಿತ್ರ ರತ್ನಮಯ ಮೃಗವಿಲ್ಲ. ಆದ್ದರಿಂದ ಖಂಡಿತವಾಗಿಯೂ ಇದು ಮಾಯೆಯೇ ಆಗಿದೆ.॥8॥
ಮೂಲಮ್ - 9
ಏವಂ ಬ್ರುವಾಣಂ ಕಾಕುತ್ಸ್ಥಂ ಪ್ರತಿವಾರ್ಯ ಶುಚಿಸ್ಮಿತಾ ।
ಉವಾಚ ಸೀತಾ ಸಂಹೃಷ್ಟಾ ಛದ್ಮನಾ ಹೃತಚೇತನಾ ॥
ಅನುವಾದ
ಮಾರೀಚನ ಕಪಟದಿಂದ ವಿಚಾರಶಕ್ತಿ ಕಳೆದುಕೊಂಡಿದ್ದ ಪವಿತ್ರ ನಗುವುಳ್ಳ ಸೀತೆಯು ಮೇಲಿನಂತೆ ನುಡಿಯುತ್ತಿರುವ ಲಕ್ಷ್ಮಣನನ್ನು ತಡೆದು ಬಹಳ ಹರ್ಷದಿಂದ ಹೇಳಿದಳು.॥9॥
ಮೂಲಮ್ - 10
ಆರ್ಯಪುತ್ರಾಪಾಭಿರಾಮೋಽಸೌ ಮೃಗೋ ಹರತಿ ಮೇ ಮನಃ ।
ಆನಯೈನಂ ಮಹಾಬಾಹೋ ಕ್ರೀಡಾರ್ಥಂ ನೋ ಭವಿಷ್ಯತಿ ॥
ಅನುವಾದ
ಆರ್ಯಪುತ್ರ! ಈ ಮೃಗವು ಬಹಳ ಸುಂದರವಾಗಿದೆ. ಇದು ನನ್ನ ಮನಸ್ಸನ್ನು ಆವರಿಸಿಬಿಟ್ಟಿದೆ. ಮಹಾಬಾಹೋ! ಇದನ್ನು ತಂದುಕೊಡಿರಿ. ಇದು ನನಗೆ ಆಟವಾಡಿಕೊಂಡಿರಲು ಸಹಾಯವಾಗಬಹುದ.॥10॥
ಮೂಲಮ್ - 11
ಇಹಾಶ್ರಮಪದೇಽಸ್ಮಾಕಂ ಬಹವಃ ಪುಣ್ಯದರ್ಶನಾಃ ।
ಮೃಗಾಶ್ಚರಂತಿ ಸಹಿತಾಶ್ಚಮರಾಃ ಸೃಮರಾಸ್ತಥಾ ॥
ಮೂಲಮ್ - 12
ಋಕ್ಷಾಃ ಪೃಷತಸಂಘಾಶ್ಚ ವಾನರಾಃ ಕಿನ್ನರಾಸ್ತಥಾ ।
ವಿಚರಂತಿ ಮಹಾಬಾಹೋ ರೂಪಶ್ರೇಷ್ಠಾ ಮಹಾಬಲಾಃ ॥
ಮೂಲಮ್ - 13
ನ ಚಾನ್ಯಃ ಸದೃಶೋ ರಾಜನ್ ದೃಷ್ಟಃ ಪೂರ್ವಂ ಮೃಗೋಮಯಾ ।
ತೇಜಸಾ ಕ್ಷಮಯಾ ದೀಪ್ತ್ಯಾ ಯಥಾಯಂ ಮೃಗಸತ್ತಮಃ ॥
ಅನುವಾದ
ಮಹಾಬಾಹು! ರಾಜಾ! ನಮ್ಮ ಈ ಆಶ್ರಯದಲ್ಲಿ ಅನೇಕ ಪವಿತ್ರ ಹಾಗೂ ಸುಂದರ ಮೃಗಗಳು ಒಟ್ಟಿಗೆ ಬಂದು ಮೇಯುತ್ತಿವೆ ಮತ್ತು ಸಮರ (ಕಪ್ಪು ಬಾಲವುಳ್ಳ ಚಮರೀ ಹಸು) ಚಮರ (ಬಿಳಿಯ ಬಾಲವುಳ್ಳ ಚಮರೀ ಹಸು) ಕರಡಿಗಳು, ಚುಕ್ಕೆಗಳುಳ್ಳ ಜಿಂಕೆಗಳ ಗುಂಪು, ವಾನರರು, ಸುಂದರ ರೂಪವುಳ್ಳ ಕಿನ್ನರರೂ ಸಂಚರಿಸುತ್ತಿವೆ. ಹೀಗಿದ್ದರೂ ಇಂದಿನಿಂದ ಮೊದಲು ನಾನು ಬೇರೆ ಯಾವುದೇ ಈ ಶ್ರೇಷ್ಠಮೃಗವು ಕಾಣುವಂತೆ ತೇಜಸ್ವೀ, ಸೌಮ್ಯ, ಪ್ರಕಾಶಮಾನ ಮೃಗವನ್ನು ನೋಡಿರಲಿಲ್ಲ.॥11-13॥
ಮೂಲಮ್ - 14
ನಾನಾವರ್ಣವಿಚಿತ್ರಾಂಗೋ ರತ್ನಭೂತೋ ಮಮಾಗ್ರತಃ ।
ದ್ಯೋತಯನ್ ವನಮವ್ಯಗ್ರಂಶೋಭತೇ ಶಶಿಸಂನಿಭಃ ॥
ಅನುವಾದ
ನಾನಾ ಪ್ರಕಾರದ ಬಣ್ಣಗಳಿಂದ ಕೂಡಿದ್ದರಿಂದ ಇದರ ಮೈ ವಿಚಿತ್ರವಾಗಿ ಕಾಣುತ್ತದೆ ನನ್ನ ಮುಂದೆ ನಿರ್ಭಯವಾಗಿ, ಶಾಂತಭಾವದಿಂದ ನಿಂತುಕೊಂಡು ಈ ವನವನ್ನು ಪ್ರಕಾಶಿಸುತ್ತಾ ಇದು ಚಂದ್ರನಂತೆ ಶೋಭಿಸುತ್ತಿದೆ.॥14॥
ಮೂಲಮ್ - 15
ಅಹೋ ರೂಪಮಹೋ ಲಕ್ಷ್ಮೀಃ ಸ್ವರಸಂಪಚ್ಚ ಶೋಭನಾ ।
ಮೃಗೋಽದ್ಭುತೋ ವಿಚಿತ್ರಾಂಗೋ ಹೃದಯಂ ಹರತೀವ ಮೇ ॥
ಅನುವಾದ
ಇದರ ರೂಪ ಅದ್ಭುತವಾಗಿದೆ. ಇದರ ಶೋಭೆ ಅವರ್ಣನೀಯವಾಗಿದೆ. ಇದರ ಸ್ವರವೂ ಸುಂದರವಾಗಿದೆ. ಚಿತ್ರಿತ ಅಂಗಗಳಿಂದ ಸುಶೋಭಿತ ಈ ಅದ್ಭುತ ಮೃಗವು ನನ್ನ ಮನಸ್ಸನ್ನು ಮೋಹಿಸಿಬಿಟ್ಟಿದೆ.॥15॥
ಮೂಲಮ್ - 16
ಯದಿ ಗ್ರಹಣಮಭ್ಯೇತಿ ಜೀವನ್ನೇವ ಮೃಗಸ್ತವ ।
ಆಶ್ಚರ್ಯಭೂತಂ ಭವತಿ ವಿಸ್ಮಯಂ ಜನಯಿಷ್ಯತಿ ॥
ಅನುವಾದ
ಈ ಮೃಗವು ಜೀವಂತವಾಗಿ ನಿಮ್ಮ ಹಿಡಿತದಲ್ಲಿ ಬಂದರೆ ಒಂದು ಆಶ್ಚರ್ಯದ ವಸ್ತು ಆಗುವುದು ಮತ್ತು ಎಲ್ಲರ ಮನಸ್ಸಿನಲ್ಲಿ ವಿಸ್ಮಯ ಉಂಟು ಮಾಡಬಹುದು.॥16॥
ಮೂಲಮ್ - 17
ಸಮಾಪ್ತವನವಾಸಾನಾಂ ರಾಜ್ಯಸ್ಥಾನಾಂ ಚ ನಃ ಪುನಃ ।
ಅಂಃಪುರೆವಿಭೂಷಾರ್ಥೋ ಮೃಗ ಏಷ ಭವಿಷ್ಯತಿ ॥
ಅನುವಾದ
ನಮ್ಮ ವನವಾಸದ ಅವಧಿ ಪೂರ್ಣವಾಗಿ ಮುಗಿಸಿ ನಾವು ಪುನಃ ನಮ್ಮ ರಾಜ್ಯವನ್ನು ಪಡೆದಾಗ, ಈ ಮೃಗವು ನಮ್ಮ ಅಂತಃಪುರದ ಶೋಭೆ ಹೆಚ್ಚಿಸುವುದು.॥17॥
ಮೂಲಮ್ - 18
ಭರತಸ್ಯಾರ್ಯಪುತ್ರಸ್ಯ ಶ್ವಶ್ರೂಣಾಂ ಮಮ ಚ ಪ್ರಭೋ ।
ಮೃಗರೂಪಮಿದಂ ದಿವ್ಯಂ ವಿಸ್ಮಯಂ ಜನಯಿಷ್ಯತಿ ॥
ಅನುವಾದ
ಪ್ರಭುವೇ! ಮೃಗದ ಈ ದಿವ್ಯರೂಪವು ಭರತನಿಗೆ, ನಿಮಗೆ, ನನ್ನ ಅತ್ತೆಯರಿಗೆ ಮತ್ತು ನನಗೂ ವಿಸ್ಮಯಜನಕವಾಗಬಹುದು.॥18॥
ಮೂಲಮ್ - 19
ಜಿವನ್ನ ಯದಿ ತೇಽಭ್ಯೇತಿ ಗ್ರಹಣಂ ಮೃಗಸತ್ತಮಃ ।
ಅಜಿನಂ ನರಶಾರ್ದೂಲ ರುಚಿರಂ ತು ಭವಿಷ್ಯತಿ ॥
ಅನುವಾದ
ಪುರುಷಸಿಂಹ! ಒಂದೊಮ್ಮೆ ಈ ಶ್ರೇಷ್ಠಮೃಗವು ಜೀವಂತವಾಗಿ ಹಿಡಿಯಲಾಗದಿದ್ದರೂ, ಇದರ ಚರ್ಮವೂ ಬಹಳ ಸುಂದರವಾಗಿದೆ.॥19॥
ಮೂಲಮ್ - 20
ನಿಹತಸ್ಯಾಸ್ಯ ಸತ್ತ್ವಸ್ಯ ಜಾಂಬೂನದಮಯತ್ವಚಿ ।
ಶಷ್ಪಬೃಸ್ಯಾಂ ವಿನೀತಾಯಾಮಿಚ್ಛಾಮ್ಯಹಮುಪಾಸಿತುಮ್ ॥
ಅನುವಾದ
ಹುಲ್ಲಿನ ಚಾಪೆಯ ಮೇಲೆ ಈ ಸತ್ತಿರುವ ಮೃಗದ ಸುವರ್ಣಮಯ ಚರ್ಮವನ್ನು ಹಾಸಿ ನಾನು ನಿಮ್ಮೊಂದಿಗೆ ಕುಳಿತುಕೊಳ್ಳಲು ಬಯಸುತ್ತಿರುವೆನು.॥20॥
ಮೂಲಮ್ - 21
ಕಾಮವೃತ್ತಮಿದಂ ರೌದ್ರಂ ಸ್ತ್ರೀಣಾಮಸದೃಶಂ ಮತಮ್ ।
ವಪುಷಾ ತ್ವಸ್ಯ ಸತ್ತ್ವಸ್ಯ ವಿಸ್ಮಯೋ ಜನಿತೋ ಮಮ ॥
ಅನುವಾದ
ಸ್ವೆಚ್ಛೆಯಿಂದ ಪ್ರೇರಿತವಾಗಿ ತನ್ನ ಪತಿಯನ್ನು ಇಂತಹ ಕೆಲಸದಲ್ಲಿ ತೊಡಗಿಸುವುದು ಭಯಂಕರ ಸ್ವೇಚ್ಛಾಚಾರವಾಗಿದೆ. ಮತ್ತು ಸಾಧ್ವಿ ಸ್ತ್ರೀಯರಿಗಾಗಿ ಉಚಿತವಲ್ಲದಿದ್ದರೂ, ಈ ಪ್ರಾಣಿಯಿಂದಾಗಿ ನನ್ನ ಹೃದಯದಲ್ಲಿ ವಿಸ್ಮವನ್ನುಂಟುಮಾಡಿಬಿಟ್ಟಿದೆ. (ಅದಕ್ಕಾಗಿ ನಾನು ಇದನ್ನು ಹಿಡಿದುತರಲು ಒತ್ತಾಯಿಸುತ್ತಾ ಇದ್ದೇನೆ.॥21॥
ಮೂಲಮ್ - 22
ತೇನ ಕಾಂಚನರೋಮ್ಣಾ ತು ಮಣಿಪ್ರವರಶೃಂಗಿಣಾ ।
ತರುಣಾದಿತ್ಯವರ್ಣೇನ ನಕ್ಷತ್ರಪಥವರ್ಚಸಾ ॥
ಮೂಲಮ್ - 23
ಬಭೂವ ರಾಘವಸ್ಯಾಪಿ ಮನೋ ವಿಸ್ಮಯಮಾಗತಮ್ ।
ಇತಿ ಸೀತಾವಚಃ ಶ್ರುತ್ವಾ ದೃಷ್ಟ್ವಾ ಚ ಮೃಗಮದ್ಭುತಮ್ ॥
ಮೂಲಮ್ - 24
ಲೋಭಿತಸ್ತೇನ ರೂಪೇಣ ಸೀತಯಾ ಚ ಪ್ರಚೋದಿತಃ ।
ಉವಾಚ ರಾಘವೋ ಹೃಷ್ಟೋ ಭ್ರಾತರಂ ಲಕ್ಷ್ಮಣಂ ವಚಃ ॥
ಅನುವಾದ
ಬಂಗಾರದಂತಹ ರೋಮರಾಜಿ, ಇಂದ್ರನೀಲ ಮಣಿಯಂತಹ ಕೊಂಬುಗಳು, ಉದಯಕಾಲದ ಸೂರ್ಯನಂತಹ ಶಾಂತಿ ಹಾಗೂ ನಕ್ಷತ್ರಲೋಕದಂತೆ ಚುಕ್ಕೆಗಳ ತೇಜದಿಂದ ಸುಶೋಭಿತ ಮೃಗವನ್ನು ನೋಡಿ ಶ್ರೀರಾಮಚಂದ್ರನ ಮನಸ್ಸೂ ಕೂಡ ವಿಸ್ಮಯವಾಯಿತು. ಸೀತೆಯು ಹಿಂದೆ ಹೇಳಿದ ಮಾತನ್ನು ಕೇಳಿ, ಆ ಮೃಗದ ಅದ್ಭುತ ರೂಪವನ್ನು ನೋಡಿ ಅದರ ರೂಪಕ್ಕೆ ಮಾರು ಹೋಗಿ, ಸೀತೆಯಿಂದ ಪ್ರೇರಿತನಾಗಿ ಹರ್ಷಗೊಂಡು ಶ್ರೀರಾಮನು ತಮ್ಮನಾದ ಲಕ್ಷ್ಮಣನಲ್ಲಿ ಹೇಳಿದನು.॥22-24॥
ಮೂಲಮ್ - 25
ಪಶ್ಯ ಲಕ್ಷ್ಮಣ ವೈದೇಹ್ಯಾಃ ಸ್ಪೃಹಾಮುಲ್ಲಸಿತಾಮಿಮಾಮ್ ।
ರೂಪಶ್ರೇಷ್ಠತಯಾ ಹ್ಯೇಷ ಮೃಗೋಽದ್ಯ ನ ಭವಿಷ್ಯತಿ ॥
ಅನುವಾದ
ಲಕ್ಷ್ಮಣ! ನೋಡಲ್ಲಿ ವಿದೇಹನಂದಿನೀ ಸೀತೆಯ ಮನಸ್ಸಿನಲ್ಲಿ ಈ ಮೃಗವನ್ನು ಪಡೆಯಲು ಎಷ್ಟು ಪ್ರಬಲ ಇಚ್ಛೆ ಉಂಟಾಗಿದೆ? ವಾಸ್ತವವಾಗಿ ಇದರ ರೂಪವೂ ಬಹಳ ಸುಂದರವಾಗಿದೆ. ತನ್ನ ರೂಪದ ಈ ಶ್ರೇಷ್ಠತೆಯ ಕಾರಣದಿಂದಲೇ ಈ ಮೃಗವು ಇಂದು ಜೀವಿತವಾಗಿ ಇರಲಾರದು.॥25॥
ಮೂಲಮ್ - 26
ನ ವನೇ ನಂದನೋದ್ದೆಶೇ ನ ಚೈತ್ರರಥಸಂಶ್ರಯೇ ।
ಕುತಃ ಪೃಥಿವ್ಯಾಂ ಸೌಮಿತ್ರೇ ಯೋಽಸ್ಯ ಕಶ್ಚಿತ್ಸಮೋ ಮೃಗಃ ॥
ಅನುವಾದ
ಸುಮಿತ್ರಾನಂದನ! ದೇವೇಂದ್ರನ ನಂದನವನದಲ್ಲಿ ಮತ್ತು ಕುಬೇರನ ಚೈತ್ರರಥ ವನದಲ್ಲಿಯೂ ಇದಕ್ಕೆ ಸಮಾನವಾದ ಯಾವುದೇ ಮೃಗವು ಇರಲಾರದು. ಹಾಗಿರುವಾಗ ಭೂಮಿಯಲ್ಲಿ ಹೇಗೆ ಇರಬಲ್ಲದು.॥26॥
ಮೂಲಮ್ - 27
ಪ್ರತಿಲೋಮಾನಲೋಮಾಶ್ಚ ರುಚಿರಾ ರೋಮರಾಜಯಃ ।
ಶೋಭಂತೇ ಮೃಗಮಾಶ್ರಿತ್ಯ ಚಿತ್ರಾಃ ಕನಕಬಿಂದುಭಿಃ ॥
ಅನುವಾದ
ಕೆಲವೆಡೆ ಬಾಗಿದ, ಕೆಲವೆಡೆ ನಿಮಿರಿ ನಿಂತ ಸುಂದರ ರೋಮರಾಜಿಗಳು ಈ ಮೃಗದ ಶರೀರವನ್ನು ಆಶ್ರಯಿಸಿ, ಸ್ವರ್ಣಬಿಂದುಗಳಿಂದ ಚಿತ್ರಿತವಾಗಿ ಬಹಳ ಶೋಭಿಸುತ್ತಿದೆ.॥27॥
ಮೂಲಮ್ - 28
ಪಶ್ಯಾಸ್ಯ ಜೃಂಭಮಾಣಸ್ಯ ದೀಪ್ತಾಮಗ್ನಿಶಿಖೋಪಮಾಮ್ ।
ಜಿಹ್ವಾಂ ಮುಖಾನ್ನಿಃ ಸರಂತೀಂ ಮೇಘಾದಿವ ಶತಹ್ರದಾಮ್ ॥
ಅನುವಾದ
ನೋಡು, ನೋಡು! ಇದು ಆಕಳಿಸಿದಾಗ ಇದೆ ಬಾಯಿಯಿಂದ ಉರಿಯುವ ಬೆಂಕಿಯ ಜ್ವಾಲೆಯಂತೆ ನಾಲಿಗೆ ಹೊರಗೆ ಚಾಚಿಕೊಳ್ಳುತ್ತದೆ ಮತ್ತು ಮೇಘಗಳಿಂದ ಪ್ರಕಟವಾದ ಮಿಂಚಿನಂತೆ ಹೊಳೆಯತೊಡಗುತ್ತದೆ.॥28॥
ಮೂಲಮ್ - 29
ಮಸಾರಗಲ್ವರ್ಕಮುಖಃ ಶಂಖಮುಕ್ತಾನಿಭೋದರಃ ।
ಕಸ್ಯ ನಾಮಾನಿರೂಪ್ಯೋಽಸೌ ನ ಮನೋ ಲೋಭಯೇನ್ಮೃಗಃ ॥
ಅನುವಾದ
ಇದರ ಮುಖ-ಸಂಪುಟವು ಇಂದ್ರನೀಲಮಣಿಯಿಂದ ಮಾಡಿದ ಪಾನಪಾತ್ರೆಯಂತೆ ಅನಿಸುತ್ತಿದೆ. ಉದರವು ಶಂಖ ಮತ್ತು ಮುತ್ತಿನಂತೆ ಬೆಳ್ಳಗಿದೆ. ಈ ಅವರ್ಣನೀಯ ಮೃಗವನ್ನು ನೋಡಿ ಯಾರ ಮನಸ್ಸು ತಾನೇ ಮಾರುಹೋಗದು.॥29॥
ಮೂಲಮ್ - 30
ಕಸ್ಯ ರೂಪಮಿದಂ ದೃಷ್ಟ್ವಾ ಜಾಂಬೂನದಮಯಪ್ರಭಮ್ ।
ನಾನಾರತ್ನಮಯಂ ದಿವ್ಯಂ ನ ಮನೋ ವಿಸ್ಮಯಂ ವ್ರಜೇತ್ ॥
ಅನುವಾದ
ನಾನಾ ಪ್ರಕಾರದ ರತ್ನಗಳಿಂದ ವಿಭೂಷಿತ ಇದರ ಬಂಗಾರದಂತಹ ಪ್ರಭೆಯುಳ್ಳ ದಿವ್ಯ ರೂಪವನ್ನು ನೋಡಿ ಯಾರ ಮನಸ್ಸಿನಲ್ಲಿ ತಾನೇ ವಿಸ್ಮಯವಾಗಲಾರದು.॥30॥
ಮೂಲಮ್ - 31
ಮಾಂಸಹೇತೋರಪಿ ಮೃಗಾನ್ ವಿಹಾರಾರ್ಥಂ ಚ ಧನ್ವಿನಃ ।
ಘ್ನಂತಿ ಲಕ್ಷ್ಮಣ ರಾಜಾನೋ ಮೃಗಯಾಯಾಂ ಮಹಾವನೇ ॥
ಅನುವಾದ
ಲಕ್ಷ್ಮಣ! ರಾಜರುಗಳು ದೊಡ್ಡ-ದೊಡ್ಡ ವನಗಳಲ್ಲಿ ಬೇಟೆಯಾಡುತ್ತಾ ಮೃಗಚರ್ಮಕ್ಕಾಗಿ ಹಾಗೂ ಬೇಟೆಯ ವ್ಯಸನಕ್ಕಾಗಿ ಕೈಯಲ್ಲಿ ಧನುಸ್ಸನ್ನು ಹಿಡಿದುಕೊಂಡು ಮೃಗಗಳನ್ನು ಕೊಲ್ಲುತಾರೆ.॥31॥
ಮೂಲಮ್ - 32
ಧನಾನಿ ವ್ಯವಸಾಯೇನ ವಿಚೀಯಂತೇ ಮಹಾವನೇ ।
ಧಾತವೋ ವಿವಿಧಾಶ್ಚಾಪಿ ಮಣಿರತ್ನಸುವರ್ಣಿನಃ ॥
ಅನುವಾದ
ಬೇಟೆಯ ಉದ್ಯೋಗದಿಂದಲೇ ರಾಜರು ವಿಶಾಲವನದಲ್ಲಿ ಧನವನ್ನೂ ಸಂಗ್ರಹಿಸುತ್ತಾರೆ. ಏಕೆಂದರೆ ಅಲ್ಲಿ ಮಣಿಗಳು ರತ್ನಗಳು, ಸುವರ್ಣಾದಿಗಳಿಂದ ಕೂಡಿದ ನಾನಾ ಪ್ರಕಾರದ ಧಾತುಗಳು ದೊರೆಯುತ್ತವೆ.॥32॥
ಮೂಲಮ್ - 33
ತತ್ಸಾರಮಖಿಲಂ ನೃಣಾಂ ಧನಂ ನಿಚಯವರ್ಧನಮ್ ।
ಮನಸಾ ಚಿಂತಿತಂ ಸರ್ವಂ ಯಥಾ ಶುಕ್ರಸ್ಯ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ಕೋಶವನ್ನು ವೃದ್ಧಿಪಡಿಸುವ ವನ್ಯಧನವು ಮನುಷ್ಯನಿಗೆ ಅತ್ಯಂತ ಉತ್ತಮವಾಗಿದೆ ಹಾಗೆಯೇ ಬ್ರಹ್ಮಭಾವವನ್ನು ಪಡೆದಿರುವ ಮನುಷ್ಯನಿಗೆ ಮನಸ್ಸಿನ ಚಿಂತನ ಮಾತ್ರದಿಂದ ದೊರೆತ ಎಲ್ಲ ವಸ್ತುಗಳು ಅತ್ಯಂತ ಉತ್ತಮವೆಂದು ಹೇಳಲಾಗಿದೆ.॥33॥
ಮೂಲಮ್ - 34
ಅರ್ಥೀ ಯೇನಾರ್ಥಕೃತ್ಯೇನ ಸಂವ್ರಜತ್ಯವಿಚಾರಯನ್ ।
ತಮರ್ಥಮರ್ಥಶಾಸ್ತ್ರಜ್ಞಾಃ ಪ್ರಾಹುರರ್ಥ್ಯಾಃ ಸುಲಕ್ಷ್ಮಣ ॥
ಅನುವಾದ
ಲಕ್ಷ್ಮಣನೇ! ಅರ್ಥೀ ಮನುಷ್ಯ ಯಾವ ಅರ್ಥ (ಪ್ರಯೋಜನ) ವನ್ನು ಸಂಪಾದಿಸಲು ಅದರ ಕುರಿತು ಆಕೃಷ್ಟನಾಗಿ ವಿಚಾರ ಮಾಡದೆಯೇ ಹೊರಟು ಬಿಡುತ್ತಾನೋ, ಆ ಅತ್ಯಂತ ಆವಶ್ಯಕ ಪ್ರಯೋಜನವನ್ನೇ ಅರ್ಥ ಸಾಧನೆಯಲ್ಲಿ ಚತುರ ಹಾಗೂ ಅರ್ಥಶಾಸ್ತ್ರದ ವಿದ್ವಾಂಸರು ‘ಅರ್ಥ’ ಎಂದು ಹೇಳುತ್ತಾರೆ.॥34॥
ಮೂಲಮ್ - 35
ಏತಸ್ಯ ಮೃಗರತ್ನಸ್ಯ ಪರಾರ್ಧ್ಯೇ ಕಾಂಚನತ್ವಚಿ ।
ಉಪವೇಕ್ಷ್ಯತಿ ವೈದೇಹೀ ಮಯಾ ಸಹ ಸುಮಧ್ಯಮಾ ॥
ಅನುವಾದ
ಈ ರತ್ನಪ್ರಾಯ ಶ್ರೇಷ್ಠ ಮೃಗದ ಅಮೂಲ್ಯ ಚಿನ್ನದಂತಹ ತೊಗಲಿನ ಮೇಲೆ ಸುಂದರಿ ವಿದೇಹನಂದಿನಿ ಸೀತೆಯು ನನ್ನೊಂದಿಗೆ ಕುಳಿತುಕೊಳ್ಳುವಳು.॥35॥
ಮೂಲಮ್ - 36
ನ ಕಾದಲೀ ನ ಪ್ರಿಯಕೀ ನ ಪ್ರವೇಣೀ ನ ಚಾವಿಕೀ ।
ಭವೇದೇತಸ್ಯ ಸದೃಶೀ ಸ್ಪರ್ಶಽನೇನೇತಿ ಮೇ ಮತಿಃ ॥
ಅನುವಾದ
ಕದಲೀ (ಕೊಮಲ ಎತ್ತರವಾದ ಚುಕ್ಕೆಗಳಿರುವ, ನೀಲಾಗ್ರರೋಮವುಳ್ಳ ಮೃಗ ವಿಶೇಷ), ಪ್ರಿಯಕ (ಸ್ನಿಗ್ಧವಾದ ಉದ್ದವಾದ, ದಟ್ಟವಾಗಿ ರೋಮವುಳ್ಳ ಮೃಗವಿಶೇಷ), ಪ್ರವೇಣ (ವಿಶೇಷ ಪ್ರಕಾರದ ಆಡು) ಅವಿ(ಕುರಿ)ಯ ತ್ವಚೆಯೂ ಸ್ಪರ್ಶವೂ ಈ ಕಾಂಚನ ಮೃಗದ ಚರ್ಮಕ್ಕೆ ಸರಿಯಾಗಿ ಕೋಮಲ ಹಾಗೂ ಸುಖಕರವಾಗಲಾರದು ಎಂದೇ ನನ್ನ ವಿಶ್ವಾಸವಾಗಿದೆ.॥36॥
ಮೂಲಮ್ - 37
ಏಷ ಚೈವ ಮೃಗಃ ಶ್ರೀಮಾನ್ ಯಶ್ಚ ದಿವ್ಯೋ ನಭಶ್ಚರಃ ।
ಉಭಾವೇತೌ ಮೃಗೌ ದಿವ್ಯೌ ತಾರಾಮೃಗಮಹೀಮೃಗೌ ॥
ಅನುವಾದ
(ಈ ಸುಂದರಮೃಗ ಮತ್ತು ಆ ದಿವ್ಯ ಆಕಾಶಚಾರೀ ಮೃಗವು ಮೃಗಶಿರಾ ನಕ್ಷತ್ರ) ಇವೆರಡೂ ದಿವ್ಯ ಮೃಗಗಳಾಗಿವೆ. ಇವುಗಳಲ್ಲಿ ಒಂದು ತಾರಾಮೃಗ ಮತ್ತು ಇನ್ನೊಂದು ಮಹೀಮೃಗವಾಗಿದೆ, (ನಕ್ಷತ್ರ ಲೋಕದಲ್ಲಿ ಸಂಚರಿಸುವ ಮೃಗ (ಮೃಗಶಿರಾ ನಕ್ಷತ್ರ) ಇನ್ನೊಂದು ಪೃಥಿವಿಯಲ್ಲಿ ಸಂಚರಿಸುವ ಕಾಂಚನ ಮೃಗ.॥37॥
ಮೂಲಮ್ - 38
ಯದಿ ವಾಯಂ ತಥಾ ಯನ್ಮಾಂ ಭವೇದ್ವದಸಿ ಲಕ್ಷ್ಮಣ ।
ಮಾಯೈಷಾ ರಾಕ್ಷಸಸ್ಯೇತಿ ಕರ್ತವ್ಯೋಽಸ್ಯ ವಧೋ ಮಯಾ ॥
ಅನುವಾದ
ಲಕ್ಷ್ಮಣ! ನೀನು ನನ್ನಲ್ಲಿ ಹೇಳಿದಂತೆ ಇದು ಮೃಗವಾದರೂ, ಇದು ರಾಕ್ಷಸನ ಮಾಯೆಯೇ ಆಗಿದ್ದರೂ ನಾನು ಇದನ್ನು ವಧಿಸಲೇಬೇಕು.॥38॥
ಮೂಲಮ್ - 39
ಏತೇನ ಹಿ ನೃಶಂಸೇನ ಮಾರೀಚೇನಾಕೃತಾತ್ಮನಾ ।
ವನೇ ವಿಚರತಾ ಪೂರ್ವಂಹಿಂಸಿತಾ ಮುನಿಪುಂಗವಾಃ ॥
ಅನುವಾದ
ಏಕೆಂದರೆ ಅಪವಿತ್ರ (ದುಷ್ಟ) ಚಿತ್ತವುಳ್ಳ ಈ ಕ್ರೂರ ಕರ್ಮಾ ಮಾರೀಚನು ವನದಲ್ಲಿ ತಿರುಗಾಡುತ್ತಿರುವಾಗ ಮೊದಲು ಅನೇಕಾನೇಕ ಶ್ರೇಷ್ಠಮುನಿಗಳ ಹತ್ಯೆ ಮಾಡಿರುವನು.॥39॥
ಮೂಲಮ್ - 40
ಉತ್ಥಾಯ ಬಹವೋಽ ನ ಮೃಗಯಾಯಾಂ ಜನಾಧಿಪಾಃ ।
ನಿಹತಾಃ ಪರಮೇಷ್ವಾಸಾಸ್ತಸ್ಮಾದ್ ವಧ್ಯಸ್ತ್ವಯಂ ಮೃಗಃ ॥
ಅನುವಾದ
ಇವನು ಬೇಟೆಯ ಸಮಯ ಪ್ರಕಟನಾಗಿ ಅನೇಕ ಮಹಾಧನುರ್ಧರ ರಾಜರನ್ನು ವಧಿಸಿರುವನು. ಆದ್ದರಿಂದ ಈ ಮೃಗ ರೂಪದಲ್ಲಿ ಇವನ ವಧೆಯು ಅವಶ್ಯವಾಗಿ ಮಾಡಲು ಯೋಗ್ಯವಾಗಿದೆ.॥40॥
ಮೂಲಮ್ - 41
ಪುರಸ್ತಾದಿಹ ವಾತಾಪಿಃ ಪರಿಭೂಯ ತಪಸ್ವಿನಃ ।
ಉದರಸ್ಥೋ ದ್ವಿಜಾನ್ಹಂತಿ ಸ್ವ ಗರ್ಭೋಽಶ್ವತರೀಮಿವ ॥
ಅನುವಾದ
ಇದೇ ವನದಲ್ಲಿ ಮೊದಲು ವಾತಾಪಿ ಎಂಬ ರಾಕ್ಷಸನಿದ್ದನು. ಅವನು ತಪಸ್ವೀ ಮಹಾತ್ಮರನ್ನು ತಿರಸ್ಕರಿಸಿ ಕಪಟ ಉಪಾಯದಿಂದ ಅವರ ಹೊಟ್ಟೆಯೊಳಗೆ ಹೋಗಿ ಅನಂತರ ಹೆಸರಗತ್ತೆಯ ಗರ್ಭವು ತಾಯಿಯ ಹೊಟ್ಟೆಯನ್ನೇ ಸೀಳಿಕೊಂಡು ಹೊರಬರುವಂತೆ, ಆ ಬ್ರಹ್ಮರ್ಷಿಗಳನ್ನು ನಾಶಮಾಡಿ ಬಿಡುತ್ತಿದ್ದನು.॥41॥
ಮೂಲಮ್ - 42
ಸ ಕದಾಚಿಚ್ಚಿರಾಲ್ಲೋಭಾದಾಸಸಾದ ಮಹಾಮುನಿಮ್ ।
ಅಗಸ್ತ್ಯಂತೇಜಸಾ ಯುಕ್ತಂ ಭಕ್ಷಸ್ತಸ್ಯ ಬಭೂವ ಹ ॥
ಅನುವಾದ
ಆ ವಾತಾಪಿಯು ಒಂದು ದಿನ ಬಹುದಿನಗಳ ಬಳಿಕ ಲೋಭವಶನಾಗಿ ತೇಜಸ್ವಿ ಮಹಾಮುನೀ ಅಗಸ್ತ್ಯರ ಬಳಿಗೆ ಹೋಗಿ (ಶ್ರಾದ್ಧಕಾಲದಲ್ಲಿ) ಅವರ ಆಹಾರವಾಗಿ, ಅವರ ಹೊಟ್ಟೆಯೊಳಗೆ ಸೇರಿದನು.॥42॥
ಮೂಲಮ್ - 43
ಸಮುತ್ಥಾನೇ ಚ ತದ್ರೂಪಂ ಕರ್ತುಕಾಮಂ ಸಮೀಕ್ಷ್ಯತಮ್ ।
ಉತ್ಸ್ಮ್ಮಯಿತ್ವಾ ತು ಭಗವಾನ್ ವಾತಾಪಿಮಿದಮಬ್ರವೀತ್ ॥
ಅನುವಾದ
ಶ್ರಾದ್ಧದ ಕೊನೆಗೆ ಅವನು ತನ್ನ ರಾಕ್ಷಸರೂಪವನ್ನು ಪ್ರಕಟಿಸಲು ಇಚ್ಛಿಸಿದಾಗ - ಅವರ ಹೊಟ್ಟೆಯನ್ನು ಸೀಳಿ ಹೊರ ಬರಲು ತೊಡಗಿದ್ದಾಗ ಆ ವಾತಾಪಿಯನ್ನು ಉದ್ದೇಶಿಸಿ ಭಗವಾನ್ ಅಗಸ್ತ್ಯರು ಮುಗುಳ್ನಕ್ಕು ಅವನಲ್ಲಿ ಹೀಗೆ ಹೇಳಿದರು.॥43॥
ಮೂಲಮ್ - 44
ತ್ವಯಾವಿಗಣ್ಯ ವಾತಾಪೇ ಪರಿಭೂತಾಶ್ಚ ತೇಜಸಾ ।
ಜೀವಲೋಕೇ ದ್ವಿಜಶ್ರೇಷ್ಠಾಸ್ತಸ್ಮಾದಸಿ ಜರಾಂ ಗತಃ ॥
ಅನುವಾದ
ವಾತಾಪಿಯೇ! ನೀನು ಯೋಚಿಸದೆಯೇ ಈ ಜೀವ ಜಗತ್ತಿನಲ್ಲಿ ಬಹಳ ಶ್ರೇಷ್ಠರಾದ ಬ್ರಾಹ್ಮಣರನ್ನು ತನ್ನ ತೇಜದಿಂದ ತಿರಸ್ಕರಿಸಿರುವೆ, ಅದೇ ಪಾಪದಿಂದ ಈಗ ನೀನು ಜೀರ್ಣವಾಗಿ ಹೋಗುವೆ.॥44॥
ಮೂಲಮ್ - 45
ತದ್ ರಕ್ಷೋ ನ ಭವೇದೇವ ವಾತಾಪಿರಿವ ಲಕ್ಷ್ಮಣ ।
ಮದ್ವಿಧಂ ಯೋಽತಿಮನ್ಯೇತ ಧರ್ಮನಿತ್ಯಂ ಜಿತೇಂದ್ರಿಯಮ್ ॥
ಅನುವಾದ
ಲಕ್ಷ್ಮಣ! ಸದಾ ಧರ್ಮದಲ್ಲಿ ತತ್ಪರನಾಗಿರುವ ನನ್ನಂತಹ ಜಿತೇಂದ್ರಿಯ ಪುರುಷನನ್ನು ಅತಿಕ್ರಮಣ ಮಾಡುವ ಮಾರೀಚನೆಂಬ ರಾಕ್ಷಸನೂ ವಾತಾಪಿಯಂತೆಯೇ ನಾಶವಾಗಿಹೋಗುವನು.॥45॥
ಮೂಲಮ್ - 46
ಭವೇದ್ಧತೋಽಯಂ ವಾತಾಪಿರಗಸ್ತ್ಯೇನೇವ ಮಾ ಗತಃ ।
ಇಹ ತ್ವಂ ಭವ ಸಂನದ್ಧೋ ಯಂತ್ರಿತೋ ರಕ್ಷ ಮೈಥಿಲೀಮ್ ॥
ಅನುವಾದ
ಅಗಸ್ತ್ಯರಿಂದ ವಾತಾಪಿಯು ನಾಶವಾದಂತೆಯೇ ಈ ಮಾರೀಚನು ಈಗ ನನ್ನ ಎದುರಿಗೆ ಬಂದು ಅವಶ್ಯವಾಗಿ ಸತ್ತುಹೋಗುವನು. ನೀನು ಅಸ್ತ್ರ-ಕವಚಾದಿಗಳಿಂದ ಸುಸಜ್ಜಿತನಾಗಿ ಇಲ್ಲಿ ಎಚ್ಚರಿಕೆಯಿಂದ ಮಿಥಿಲೇಶ ಕುಮಾರಿಯನ್ನು ರಕ್ಷಿಸು.॥46॥
ಮೂಲಮ್ - 47
ಅಸ್ಯಾಮಾಯತ್ತಮಸ್ಮಾಕಂ ಯತ್ಕೃತ್ಯಂ ರಘುನಂದನ ।
ಅಹಮೇನಂ ವಧಿಷ್ಯಾಮಿ ಗ್ರಹೀಷ್ಯಾಮ್ಯಥವಾಮೃಗಮ್ ॥
ಅನುವಾದ
ರಘುನಂದನ! ನಮಗೆ ಅವಶ್ಯವಾಗಿರುವ ಕರ್ತವ್ಯವು ಸೀತೆಯ ರಕ್ಷಣೆಯೇ ಆಗಿದೆ. ನಾನು ಈ ಮೃಗವನ್ನು ಕೊಂದುಹಾಕುವೆನು ಅಥವಾ ಇದನ್ನು ಜೀವಂತವಾಗಿ ಹಿಡಿದುತರುವೆನು.॥47॥
ಮೂಲಮ್ - 48
ಯಾವದ್ಗಚ್ಛಾಮಿ ಸೌಮಿತ್ರೇ ಮೃಗಮಾನಯಿತುಂ ದ್ರುತಮ್ ।
ಪಶ್ಯ ಲಕ್ಷ್ಮಣ ವೈದೇಹ್ಯಾ ಮೃಗತ್ವಚಿ ಗತಾಂ ಸ್ಪೃಹಾಮ್ ॥
ಅನುವಾದ
ಸುಮಿತ್ರಾ ಕುಮಾರ ಲಕ್ಷ್ಮಣ! ನೋಡು, ಈ ಮೃಗದ ಚರ್ಮವನ್ನು ಹಸ್ತಗತವಾಗಿಸಿಕೊಳ್ಳಲು ವಿದೇಹನಂದಿನಿಗೆ ಬಹಳ ಉತ್ಕಂಠತೆ ಉಂಟಾಗಿದೆ, ಅದಕ್ಕಾಗಿ ಈ ಮೃಗವನ್ನು ತರಲು ನಾನು ಈಗಲೇ ಹೋಗುತ್ತಿದ್ದೇನೆ.॥48॥
ಮೂಲಮ್ - 49
ತ್ವಚಾ ಪ್ರಧಾನಯಾ ಹ್ಯೇಷ ಮೃಗೋಽದ್ಯ ನ ಭವಿಷ್ಯತಿ ।
ಅಪ್ರಮತ್ತೇನ ತೇ ಭಾವ್ಯಮಾಶ್ರಮಸ್ಥೇನ ಸೀತಯಾ ॥
ಮೂಲಮ್ - 50
ಯಾವತ್ಪೃಷತಮೇಕೇನ ಸಾಯಕೇನ ನಿಹನ್ಮ್ಯಹಮ್ ।
ಹತ್ವೈತಚ್ಚರ್ಮ ಚಾದಾಯ ಶೀಘ್ರಮೇಷ್ಯಾಮಿ ಲಕ್ಷ್ಮಣ ॥
ಅನುವಾದ
ಈ ಮೃಗವನ್ನು ಕೊಲ್ಲುವ ಮುಖ್ಯ ಉದ್ದೇಶ ಇದರ ಚರ್ಮವನ್ನು ಪಡೆಯುವುದಾಗಿದೆ. ಇಂದು ಇದರಿಂದಲೇ ಈ ಮೃಗವು ಜೀವಂತವಾಗಿರಲಾರದು. ಲಕ್ಷ್ಮಣ! ನೀನು ಆಶ್ರಮದಲ್ಲೇ ಇದ್ದು ಸೀತೆಯ ರಕ್ಷಣೆಯನ್ನು ಎಚ್ಚರವಾಗಿ ಮಾಡು. ಎಚ್ಚರಿಕೆಯಿಂದ ನಾನು ಒಂದೇ ಬಾಣದಿಂದ ಈ ಜಿಂಕೆಯನ್ನು ಕೊಲ್ಲುವ ತನಕ ಈಕೆಯನ್ನು ಎಚ್ಚರಿಕೆಯಿಂದ ಕಾಯ್ದುಕೊಂಡಿರು. ಕೊಂದು ಇದರ ಚರ್ಮವನ್ನು ತೆಗೆದುಕೊಂಡು ನಾನು ಬೇಗನೇ ಬಂದುಬಿಡುವೆನು.॥49-50॥
ಮೂಲಮ್ - 51
ಪ್ರದಕ್ಷಿಣೇನಾತಿಬಲೇನ ಪಕ್ಷಿಣಾ
ಜಟಾಯುಷಾ ಬುದ್ಧಿಮತಾ ಚ ಲಕ್ಷ್ಮಣ ।
ಭವಾಪ್ರಮತ್ತಃ ಪ್ರತಿಗೃಹ್ಯ ಮೈಥಿಲೀಂ
ಪ್ರತಿಕ್ಷಣಂ ಸರ್ವತ ಏವ ಶಂಕಿತಃ ತಂಃ ॥
ಅನುವಾದ
ಲಕ್ಷ್ಮಣ! ಬುದ್ಧಿವಂತ ಗೃಧ್ರರಾಜ ಜಟಾಯು ಪಕ್ಷಿಯು ಬಹಳ ಬಲಿಷ್ಠನಾಗಿವಾಗಿದೆ ಮತ್ತು ಸಾಮರ್ಥ್ಯಶಾಲಿಯಾಗಿದೆ. ಅದರೊಂದಿಗೆ ಇಲ್ಲಿ ಸದಾ ಎಚ್ಚರವಾಗಿರು. ಮಿಥಿಲೇಶಕುಮಾರಿ ಸೀತೆಯನ್ನು ರಕ್ಷಿಸುತ್ತಾ ಪ್ರತಿಕ್ಷಣವೂ ಎಲ್ಲ ದಿಕ್ಕುಗಳಲ್ಲಿ ಇರುವ ರಾಕ್ಷಸರಿಂದ ಜಾಗ್ರತನಾಗಿರಬೇಕು.॥51॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥43॥