वाचनम्
ಭಾಗಸೂಚನಾ
ಮಾರೀಚನು ರಾವಣನಿಗೆ ವಿನಾಶದ ಭಯ ತೋರಿಸಿ ಪುನಃ ಸಮಜಾಯಿಸಿದುದು
ಮೂಲಮ್ - 1
ಆಜ್ಞಪ್ತೋ ರಾವಣೇನೇತ್ಥಂ ಪ್ರತಿಕೂಲಂ ಚ ರಾಜವತ್ ।
ಅಬ್ರವೀತ್ ಪುರುಷಂ ವಾಕ್ಯಂ ನಿಃಶಂಕೋ ರಾಕ್ಷಸಾಧಿಪಮ್ ॥
ಅನುವಾದ
ರಾವಣನು ರಾಜನಂತೆ ಮಾರೀಚನಿಗೆ ಹೀಗೆ ಪ್ರತಿಕೂಲವಾದ ಅಪ್ಪಣೆ ಮಾಡಿದಾಗ ಅವನು ನಿಃಶಂಕನಾಗಿ ಆ ರಾಕ್ಷಸ ರಾಜನಲ್ಲಿ ಕಠೋರ ವಾಣಿಯಿಂದ ಇಂತು ಹೇಳಿದನು.॥1॥
ಮೂಲಮ್ - 2
ಕೇನಾಯಮುಪದಿಷ್ಟಸ್ತೇ ವಿನಾಶಃ ಪಾಪಕರ್ಮಣಾ ।
ಸಪುತ್ರಸ್ಯ ಸರಾಜ್ಯಸ್ಯ ಸಾಮಾತ್ಯಸ್ಯ ನಿಶಾಚರ ॥
ಅನುವಾದ
ನಿಶಾಚರನೇ! ಪುತ್ರ, ರಾಜ್ಯ, ಮಂತ್ರಿಗಳ ಸಹಿತ ನಿನ್ನ ವಿನಾಶದ ಈ ಮಾರ್ಗವನ್ನು ಯಾವ ಪಾಪಿಯು ನಿನಗೆ ಹೇಳಿದನು.॥2॥
ಮೂಲಮ್ - 3
ಕಸ್ತ್ವಯಾ ಸುಖಿನಾ ರಾಜನ್ನಾಭಿನಂದತಿ ಪಾಪಕೃತ್ ।
ಕೇನೇದಮುಪದಿಷ್ಟಂ ತೇ ಮೃತ್ಯುದ್ವಾರಮುಪಾಯತಃ ॥
ಅನುವಾದ
ರಾಜನೇ! ನೀನು ಸುಖಿಯಾಗಿರುವುದನ್ನು ನೋಡಿ ಸಂತೋಷಗೊಳ್ಳದ ಪಾಪಾಚಾರಿಯು ಯಾರಾಗಿದ್ದಾನೆ? ಯಾರು ಯುಕ್ತಿಯಿಂದ ನೀನು ಸಾವಿನ ಬಾಗಿಲಿಗೆ ಹೋಗುವಂತಹ ಈ ಸಲಹೆಯನ್ನು ಕೊಟ್ಟನು.॥3॥
ಮೂಲಮ್ - 4
ಶತ್ರವಸ್ತವ ಸುವ್ಯಕ್ತಂ ಹೀನವೀರ್ಯಾ ನಿಶಾಚರ ।
ಇಚ್ಛಂತಿ ತ್ವಾಂ ವಿನಶ್ಯಂತಮುಪರುದ್ಧಂ ಬಲೀಯಸಾ ॥
ಅನುವಾದ
ನಿಶಾಚರನೇ! ದುರ್ಬಲನಾದ ನಿನ್ನ ಶತ್ರುವು ನಿನ್ನಿಂದ ಯಾವುದೋ ಬಲವಂತನೊಡನೆ ಯುದ್ಧ ಮಾಡಿಸಿ ನೀನು ನಾಶವಾಗುವುದನ್ನು ನೋಡಲು ಬಯಸುತ್ತಿರುವನೆಂದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.॥4॥
ಮೂಲಮ್ - 5
ಕೇನೇದಮುಪದಿಷ್ಟಂ ತೇ ಕ್ಷುದ್ರೇಣಾಹಿತಬುದ್ಧಿನಾ ।
ಯಸ್ತ್ವಾಮಿಚ್ಛತಿ ನಶ್ಯಂತಂ ಸ್ವಕೃತೇನ ನಿಶಾಚರ ॥
ಅನುವಾದ
ರಾಕ್ಷಸರಾಜನೇ! ನಿನ್ನ ಅಹಿತದ ವಿಚಾರವನ್ನು ಇರಿಸಿಕೊಂಡ ಯಾವ ನೀಚನು ನಿನಗೆ ಈ ಪಾಪ ಮಾಡುವ ಉಪದೇಶ ಕೊಟ್ಟಿರುವನು? ಅವನು ನಿನ್ನನ್ನು ತನ್ನ ಕುಕರ್ಮದಿಂದಲೇ ನಾಶವಾಗುವುದನ್ನು ನೋಡಲು ಬಯಸುತ್ತಿರುವನು.॥5॥
ಮೂಲಮ್ - 6
ವಧ್ಯಾಃ ಖಲು ನ ವಧ್ಯಂತೇ ಸಚಿವಾಸ್ತವ ರಾವಣ ।
ಯೇ ತ್ವಾಮುತ್ಪಥಮಾರೂಢಂ ನ ನಿಗೃಹ್ಣಂತಿ ಸರ್ವಶಃ ॥
ಅನುವಾದ
ರಾವಣನೇ! ಕೆಟ್ಟದಾರಿಯಲ್ಲಿ ನಡೆಯುವ ನಿನ್ನ ಮಂತ್ರಿಗಳು ನಿನ್ನಂತಹ ರಾಜನನ್ನು ಈ ಪಾಪಕರ್ಮದಿಂದ ಎಲ್ಲರೀತಿಯಿಂದಲೂ ತಡೆಯುತ್ತಿಲ್ಲ. ಅವರು ನಿಶ್ಚಯವಾಗಿ ವಧೆಗೆ ಯೋಗ್ಯರಾಗಿದ್ದಾರೆ. ಅದರೆ ನೀನು ಅವರನ್ನು ವಧಿಸುತ್ತಿಲ್ಲ.॥6॥
ಮೂಲಮ್ - 7
ಅಮಾತ್ಯೈಃ ಕಾಮವೃತ್ತೋ ಹಿ ರಾಜಾ ಕಾಪಥಮಾಶ್ರಿತಃ ।
ನಿಗ್ರಾಹ್ಯಃ ಸರ್ವಥಾ ಸದ್ಭಿಃಸ ನಿಗ್ರಾಹ್ಯೋ ನಗೃಹ್ಯಸೇ ॥
ಅನುವಾದ
ರಾಜನು ಸ್ವೇಚ್ಛಾಚಾರಿಯಾಗಿ ಕೆಟ್ಟಮಾರ್ಗದಲ್ಲಿ ನಡೆಯತೊಡಗಿದರೆ ಅವನನ್ನು ಎಲ್ಲ ವಿಧದಿಂದ ತಡೆಯುವುದು ಒಳ್ಳೆ ಮಂತ್ರಿಗಳ ಕರ್ತವ್ಯವಾಗಿದೆ. ನೀನು ತಡೆಯಲು ಯೋಗ್ಯನಾಗಿದ್ದೀಯ, ಹೀಗಿದ್ದರೂ ಆ ಮಂತ್ರಿಗಳು ತಡೆಯುತ್ತಿಲ್ಲ.॥7॥
ಮೂಲಮ್ - 8
ಧರ್ಮಮರ್ಥಂ ಚ ಕಾಮಂ ಚ ಯಶಶ್ಚ ಜಯತಾಂ ವರ ।
ಸ್ವಾಮಿಪ್ರಸಾದಾತ್ಸಚಿವಾಃ ಪ್ರಾಪ್ನುವಂತಿ ನಿಶಾಚರ ॥
ಅನುವಾದ
ವಿಜಯೀವೀರರಲ್ಲಿ ಶ್ರೇಷ್ಠ ನಿಶಾಚರನೇ! ಮಂತ್ರಿಗಳು ತನ್ನ ಸ್ವಾಮಿ ರಾಜನ ಕೃಪೆಯಿಂದಲೇ ಧರ್ಮ, ಅರ್ಥ, ಕಾಮ ಮತ್ತು ಯಶ ಪಡೆಯುತ್ತಾರೆ.॥8॥
ಮೂಲಮ್ - 9
ವಿಪರ್ಯಯೇ ತು ತತ್ಸರ್ವಂ ವ್ಯರ್ಥಂ ಭವತಿ ರಾವಣ ।
ವ್ಯಸನಂ ಸ್ವಾಮಿವೈಗುಣ್ಯಾತ್ ಪ್ರಾಪ್ನುವಂತೀತರೇ ಜನಾಃ ॥
ಅನುವಾದ
ರಾವಣ! ಸ್ವಾಮಿಯ ಕೃಪೆ ಇಲ್ಲದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ರಾಜನ ದೋಷದಿಂದ ಇತರ ಜನರಿಗೂ ಕಷ್ಟ ಅನುಭವಿಸಬೇಕಾಗುತ್ತದೆ.॥9॥
ಮೂಲಮ್ - 10
ರಾಜಮೂಲೋ ಹಿ ಧರ್ಮಶ್ಚ ಯಶಶ್ಚ ಜಯತಾಂ ವರ ।
ತಸ್ಮಾತ್ಸರ್ವಾಸ್ವವಸ್ಥಾಸು ರಕ್ಷಿತವ್ಯಾ ನರಾಧಿಪಾಃ ॥
ಅನುವಾದ
ವಿಜಯಶೀಲರಲ್ಲಿ ಶ್ರೇಷ್ಠ ರಾಕ್ಷಸರಾಜನೇ! ಧರ್ಮ ಮತ್ತು ಯಶದ ಪ್ರಾಪ್ತಿಗೆ ಮೂಲ ಕಾರಣನಾಗಿದ್ದಾನೆ. ಆದ್ದರಿಂದ ಎಲ್ಲ ಅವಸ್ಥೆಗಳಲ್ಲಿ ರಾಜನನ್ನು ರಕ್ಷಿಸಬೇಕು.॥10॥
ಮೂಲಮ್ - 11
ರಾಜ್ಯಂಪಾಲಯಿತುಂ ಶಕ್ಯಂ ನ ತೀಕ್ಷ್ಣೇನ ನಿಶಾಚರ ।
ನ ಚಾತಿಪ್ರತಿಕೂಲೇನ ನಾವಿನೀತೇನ ರಾಕ್ಷಸ ॥
ಅನುವಾದ
ನಿಶಾಚರ ರಾಕ್ಷಸನೇ! ಯಾರ ಸ್ವಭಾವ ಅತ್ಯಂತ ತಿಕ್ಷ್ಣವಾಗಿರುತ್ತದೋ, ಯಾರು ಜನತೆಗೆ ಅತ್ಯಂತ ಪ್ರತಿಕೂಲನಾಗಿ ನಡೆಯುವನೋ, ವಿನಯವಿಲ್ಲದವನೋ, ಇಂತಹ ರಾಜನಿಂದ ರಾಜ್ಯದ ರಕ್ಷಣೆ ಆಗಲಾರದು.॥11॥
ಮೂಲಮ್ - 12
ಯೇ ತೀಕ್ಷ್ಣ ಮಂತ್ರಾಃ ಸಚಿವಾ ಭುಜ್ಯಂತೇ ಸಹ ತೇನ ವೈ ।
ವಿಷಮೇಷು ರಥಾಃ ಶೀಘ್ರಂ ಮಂದಸಾರಥಯೋ ಯಥಾ ॥
ಅನುವಾದ
ತೀಕ್ಷ್ಣವಾದ ಉಪಾಯವನ್ನು ಉಪದೇಶಿಸುವ ಮಂತ್ರಿಗಳು ತಮ್ಮ ಸಲಹೆಯನ್ನು ಮನ್ನಿಸುವ ರಾಜನೊಂದಿಗೆ ದುಃಖ ಅನುಭವಿಸುತ್ತಾರೆ. ಮೂರ್ಖ ಸಾರಥಿಯ ರಥವು ಎತ್ತರ-ತಗ್ಗು ನೆಲದ ಮೇಲೆ ಓಡಿದಾಗ ಸಾರಥಿಯ ಜೊತೆಗೆ ರಥಿಕನೂ ಸಂಕಟದಲ್ಲಿ ಬೀಳುತ್ತಾನೆ.॥12॥
ಮೂಲಮ್ - 13
ಬಹವಃ ಸಾಧವೋ ಲೋಕೇ ಯುಕ್ತ ಧರ್ಮಮನುಷ್ಠಿತಾಃ ।
ಪರೇಷಾಮಪರಾಧೇನ ವಿನಷ್ಟಾಃ ಸಪರಿಚ್ಛದಾಃ ॥
ಅನುವಾದ
ಮೇಲೆ ಹೇಳಿದ ಧರ್ಮವನ್ನು ಅನುಷ್ಠಾನ ಮಾಡುವ ಅನೇಕ ಸಾಧು-ಸತ್ಪುರುಷರು ಈ ಜಗತ್ತಿನಲ್ಲಿ ಬೇರೆಯವರ ಅಪರಾಧದಿಂದ ಪರಿವಾರಸಹಿತ ನಷ್ಟವಾಗಿ ಹೋಗಿರುವರು.॥13॥
ಮೂಲಮ್ - 14
ಸ್ವಾಮಿನಾ ಪ್ರತಿಕೂಲೇನ ಪ್ರಜಾಸ್ತೀಕ್ಷ್ಣೇನ ರಾವಣ ।
ರಕ್ಷ್ಯಮಾಣಾ ನ ವರ್ಧಂತೇ ಮೇಷಾ ಗೋಮಾಯುನಾ ಯಥಾ ॥
ಅನುವಾದ
ರಾವಣ! ಪ್ರತಿಕೂಲ ವರ್ತನೆ ಮತ್ತು ತೀಕ್ಷ್ಣ ಸ್ವಭಾವವುಳ್ಳ ರಾಜನಿಂದ ರಕ್ಷಿತವಾದ ಪ್ರಜೆಯು-ತೋಳಗಳಿಂದ ರಕ್ಷಿತವಾದ ಕುರಿಗಳಂತೆ ವೃದ್ಧಿಯನ್ನು ಹೊಂದುವುದಿಲ್ಲ.॥14॥
ಮೂಲಮ್ - 15
ಅವಶ್ಯಂ ವಿನಶಿಷ್ಯಂತಿ ಸರ್ವೇ ರಾವಣ ರಾಕ್ಷಸಾಃ ।
ಯೇಷಾಂ ತ್ವಂ ಕರ್ಕಶೋ ರಾಜಾ ದುರ್ಬುದ್ಧಿ ರಜಿತೇಂದ್ರಿಯಃ ॥
ಅನುವಾದ
ರಾವಣ! ಕ್ರೂರಿಯಾದ, ದುಷ್ಟಬುದ್ಧಿಯುಳ್ಳ, ಜಿತೇಂದ್ರಿಯನಲ್ಲದ ನಿನ್ನಿಂದ ರಾಕ್ಷಸರೆಲ್ಲರೂ ಅವಶ್ಯವಾಗಿ ನಾಶವಾಗಿ ಹೋಗುವರು.॥15॥
ಮೂಲಮ್ - 16
ತದಿದಂ ಕಾಕತಾಲೀಯಂ ಘೋರಮಾಸಾದಿತಂ ಮಯಾ ।
ಅತ್ರ ತ್ವಂ ಶೋಚನೀಯೋಽಸಿ ಸಸೈನ್ಯೋ ವಿನಶಿಷ್ಯಸಿ ॥
ಅನುವಾದ
ಕಾಕತಾಲೀಯ ನ್ಯಾಯಕ್ಕನುಸಾರ ನನಗೆ ನಿನ್ನೊಂದಿಗೆ ಅಕಸ್ಮತ್ತಾಗಿ ಈ ಘೋರ ದುಃಖಪ್ರಾಪ್ತವಾಯಿತು. ಈ ವಿಷಯದಲ್ಲಿ ನನಗೆ ನೀನೇ ಶೋಕಕ್ಕೆ ಯೋಗ್ಯನೆಂದು ಅನಿಸುತ್ತದೆ. ಏಕೆಂದರೆ ಸೈನ್ಯದೊಂದಿಗೆ ನಿನ್ನ ನಾಶವಾಗಿ ಹೋಗುವುದು.॥16॥
ಮೂಲಮ್ - 17
ಮಾಂ ನಿಹತ್ಯ ತು ರಾಮೋಽಸಾವಚಿರಾತ್ ತ್ವಾಂ ವಧಿಷ್ಯತಿ ।
ಅನೇನ ಕೃತಕೃತ್ಯೋಽಸ್ಮಿ ಮ್ರಿಯೇ ಯಪ್ಯರಿಣಾ ಹತಃ ॥
ಅನುವಾದ
ಶ್ರೀರಾಮಚಂದ್ರನು ನನ್ನನ್ನು ಕೊಂದು, ನಿನ್ನನ್ನೂ ಬೇಗನೇ ವಧಿಸುವನು. ಎರಡು ರೀತಿಯಿಂದಲೂ ನನ್ನ ಮೃತ್ಯುವು ನಿಶ್ಚಿತವಾದಾಗ ಶ್ರೀರಾಮನ ಕೈಯಿಂದ ಆಗುವ ಈ ಮೃತ್ಯುವಿನಿಂದ ನಾನು ಕೃತಕೃತ್ಯನಾಗುವೆನು. ಏಕೆಂದರೆ ಶತ್ರುವಿನಿಂದ ಯುದ್ಧದಲ್ಲಿ ಸತ್ತು ಪ್ರಾಣತ್ಯಾಗ ಮಾಡುವೆನು. (ನಿನ್ನಂತಹ ರಾಜನ ಕೈಯಿಂದ ಬಲವಂತವಾಗಿ ಪ್ರಾಣವನ್ನು ದಂಡ ಪಡೆಯುವ ಕಷ್ಟ ಅನುಭವಿಸಲಾರೆನು..॥17॥
ಮೂಲಮ್ - 18
ದರ್ಶನಾದೇವ ರಾಮಸ್ಯ ಹತಂ ಮಾಮವಧಾರಯ ।
ಆತ್ಮಾನಂ ಚ ಹತಂ ವಿದ್ಧಿ ಹೃತ್ವಾ ಸೀತಾಂ ಸಬಾಂಧವಮ್ ॥
ಅನುವಾದ
ರಾಜನ್! ಶ್ರೀರಾಮನ ಮುಂದೆ ಹೋಗಿ ಅವನ ದೃಷ್ಟಿ ಬೀಳುತ್ತಲೇ ನಾನು ಸತ್ತುಹೋಗುವೆನು. ನೀನು ಸೀತೆಯನ್ನು ಅಪಹರಣ ಮಾಡಿದರೆ ನಿನ್ನ ಬಂಧು-ಬಾಂಧವರೊಂದಿಗೆ ಸತ್ತೆ ಎಂದೇ ತಿಳಿ.॥18॥
ಮೂಲಮ್ - 19
ಆನಯಿಷ್ಯಸಿ ಚೇತ್ ಸೀತಾಮಾಶ್ರಮಾತ್ ಸಹಿತೋ ಮಯಾ ।
ನೈವ ತ್ವಮಪಿ ನಾಹಂ ವೈ ನೈವ ಲಂಕಾ ನ ರಾಕ್ಷಸಾಃ ॥
ಅನುವಾದ
ನೀನು ನನ್ನೊಂದಿಗೆ ಹೋಗಿ ಶ್ರೀರಾಮನ ಆಶ್ರಮದಿಂದ ಸೀತೆಯನ್ನು ಅಪಹರಿಸಿದರೆ ನೀನಾಗಲೀ, ನಾನಾಗಲೀ, ಉಳಿಯಲಾರೆವು. ಲಂಕಾಪುರಿಯು ಮತ್ತು ಅಲ್ಲಿಯ ನಿವಾಸಿ ರಾಕ್ಷಸರು ಉಳಿಯಲಾರರು.॥19॥
ಮೂಲಮ್ - 20
ನಿವಾರ್ಯಮಾಣಸ್ತು ಮಯಾ ಹಿತೈಷಿಣಾ
ನ ಮೃಷ್ಯಸೇ ವಾಕ್ಯಮಿದಂ ನಿಶಾಚರ ।
ಪರೇತಕಲ್ಪಾ ಹಿ ಗತಾಯುಷೋ ನರಾ
ಹಿತಂ ನ ಗೃಹ್ಣಂತಿ ಸುಹೃದ್ಭಿರೀರಿತಮ್ ॥
ಅನುವಾದ
ನಿಶಾಚರನೇ! ನಾನು ನಿನ್ನ ಹಿತೈಷಿಯಾಗಿದ್ದೇನೆ, ಅದಕ್ಕಾಗಿ ನಿನ್ನನ್ನು ಪಾಪಕರ್ಮದಿಂದ ತಡೆಯುತ್ತಿದ್ದೇನೆ. ಆದರೆ ನಿನಗೆ ನನ್ನ ಮಾತು ಸಹನವಾಗುವುದಿಲ್ಲ. ಆಯುಷ್ಯ ಮುಗಿದು ಮರಣಾಸನ್ನನಾದ ಪುರುಷನು ತನ್ನ ಸುಹೃದರು ಹೇಳಿದ ಮಾತನ್ನು ಹಿತಕರವೆಂದು ಸ್ವೀಕರಿಸುವುದಿಲ್ಲ. ಇದು ಸತ್ಯವಾಗಿದೆ.॥20॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥41॥