वाचनम्
ಭಾಗಸೂಚನಾ
ರಾವಣನು ಮಾರೀಚನ ಮಾತನ್ನು ತಿರಸ್ಕರಿಸಿ ಸೀತಾಪಹರಣದಲ್ಲಿ ಸಹಾಯಕನಾಗುವಂತೆ ಆಜ್ಞೆ ಮಾಡಿದುದು
ಮೂಲಮ್ - 1
ಮಾರೀಚಸ್ಯ ತು ತದ್ವಾಕ್ಯಂ ಕ್ಷಮಂ ಯುಕ್ತಂ ಚ ರಾವಣಃ ।
ಉಕ್ತೋ ನ ಪ್ರತಿಜಗ್ರಾಹ ಮರ್ತುಕಾಮ ಇವೌಷಧಮ್ ॥
ಅನುವಾದ
ಮಾರೀಚನ ಮಾತು ಉಚಿತ ಹಾಗೂ ಒಪ್ಪಿಕೊಳ್ಳಲು ಯೋಗ್ಯವಾಗಿದ್ದರೂ ಸಾಯುವ ಇಚ್ಛೆಯುಳ್ಳವನು ಔಷಧಿಯನ್ನು ಕುಡಿಯದಂತೆ, ಅವನು ಬಹಳವಾಗಿ ಹೇಳಿದರೂ ರಾವಣನು ಅವನ ಮಾತನ್ನು ಮನ್ನಿಸಲಿಲ್ಲ.॥1॥
ಮೂಲಮ್ - 2
ತಂ ಪಥ್ಯಹಿತವಕ್ತಾರಂ ಮಾರೀಚಂ ರಾಕ್ಷಸಾಧಿಪಃ ।
ಅಬ್ರವೀತ್ ಪುರುಷಂ ವಾಕ್ಯಮಯುಕ್ತಂ ಕಾಲಚೋದಿತಃ ॥
ಅನುವಾದ
ಕಾಲ ಪ್ರೇರಿತನಾದ ಆ ರಾಕ್ಷಸರಾಜನು ಯಥಾರ್ಥ ಮತ್ತು ಹಿತಕರ ಮಾತನ್ನು ಹೇಳುವ ಮಾರೀಚನಲ್ಲಿ ಅನುಚಿತ ಹಾಗೂ ಕಠೋರ ಮಾತುಗಳಿಂದ ಹೇಳಿದನು.॥2॥
ಮೂಲಮ್ - 3
ದುಷ್ಕುಲೈತದಯುಕ್ತಾರ್ಥಂ ಮಾರೀಚ ಮಯಿ ಕಥ್ಯತೇ ।
ವಾಕ್ಯಂ ನಿಷ್ಫಲಮತ್ಯರ್ಥಂ ಬೀಜ ಮುಪ್ತಮಿವೋಷರೇ ॥
ಅನುವಾದ
ದೂಷಿತಕುಲದಲ್ಲಿ ಹುಟ್ಟಿದ ಮಾರೀಚನೇ! ನೀನು ನನ್ನ ಕುರಿತು ಅನುಚಿತ, ಅಸಂಗತ, ಬಾಯಿಗೆ ಬಂದ ಹಾಗೆ ಹೇಳಿದ ಮಾತುಗಳು, ಬಂಜರು ಭೂಮಿಯಲ್ಲಿ ಬಿತ್ತಿದ ಬೀಜಗಳು ನಿಷ್ಪಲವಾಗುವಂತೆ ಅತ್ಯಂತ ನಿಷ್ಪಲವಾದವುಗಳು.॥3॥
ಮೂಲಮ್ - 4
ತ್ವದ್ವಾಕ್ಯೈರ್ನ ತು ಮಾಂ ಶಕ್ಯಂ ಭೇತ್ತುಂ ರಾಮಸ್ಯ ಸಂಯುಗೇ ।
ಮೂರ್ಖಸ್ಯ ಪಾಪಶೀಲಸ್ಯ ಮಾನುಷಸ್ಯ ವಿಶೇಷತಃ ॥
ಅನುವಾದ
ನಿನ್ನ ಈ ಮಾತುಗಳು ಮೂರ್ಖ, ಪಾಪಾಚಾರೀ ಮತ್ತು ವಿಶೇಷವಾಗಿ ಮನುಷ್ಯನಾದ ರಾಮನೊಡನೆ ಯುದ್ಧ ಮಾಡುವುದು ಅಥವಾ ಅವನ ಪತ್ನಿಯನ್ನು ಅಪಹರಣ ಮಾಡುವ ನಿಶ್ಚಯದಿಂದ ನನ್ನನ್ನು ವಿಚಲಿತವಾಗಿಸಲಾರವು.॥4॥
ಮೂಲಮ್ - 5
ಯಸ್ತ್ಯಕ್ತ್ವಾ ಸುಹೃದೋ ರಾಜ್ಯಂ ಮಾತರಂ ಪಿತರಂ ತಥಾ ।
ಸ್ತ್ರೀವಾಕ್ಯಂ ಪ್ರಾಕೃತಂ ಶ್ರುತ್ವಾ ವನಮೇಕಪದೇ ಗತಃ ॥
ಮೂಲಮ್ - 6
ಅವಶ್ಯಂ ತು ಮಯಾ ತಸ್ಯ ಸಂಯುಗೇ ಖರಘಾತಿನಃ ।
ಪ್ರಾಣೈಃ ಪ್ರಿಯತರಾ ಸೀತಾ ಹರ್ತವ್ಯಾ ತವ ಸಂನಿಧೌ ॥
ಅನುವಾದ
ಓರ್ವ ಸ್ತ್ರೀ(ಕೈಕೇಯಿಯ ಮೂರ್ಖತಾಪೂರ್ಣ ಮಾತನ್ನು ಕೇಳಿ ಯಾರು ರಾಜ್ಯ, ಮಿತ್ರ, ತಂದೆ-ತಾಯಿಯನ್ನು ಬಿಟ್ಟು ಕಾಡಿಗೆ ಬಂದಿರುವನೋ, ಯಾರು ಯುದ್ಧದಲ್ಲಿ ಖರನನ್ನು ವಧಿಸಿರುವನೋ, ಆ ರಾಮಚಂದ್ರನ ಪ್ರಾಣಗಳಿಗಿಂತ ಪ್ರಿಯಳಾದ ಭಾರ್ಯೆ ಸೀತೆಯನ್ನು ನಾನು ನಿನ್ನ ಮುಂದೆಯೇ ಅವಶ್ಯವಾಗಿ ಅಪಹರಣ ಮಾಡುವೆನು.॥5-6॥
ಮೂಲಮ್ - 7
ಏವಂ ಮೇ ನಿಶ್ಚಿತಾ ಬುದ್ಧಿರ್ಹೃದಿ ಮಾರೀಚ ವಿದ್ಯತೇ ।
ನ ವ್ಯಾವರ್ತಯಿತುಂ ಶಕ್ಯಾ ಸೇಂದ್ರೈರಪಿ ಸುರಾಸುರೈಃ ॥
ಅನುವಾದ
ಮಾರೀಚನೇ! ಹೀಗೆ ನನ್ನ ಹೃದಯದ ನಿಶ್ಚಿತ ವಿಚಾರವಾಗಿದೆ. ಇದನ್ನು ಇಂದ್ರಾದಿ ದೇವತೆಗಳು ಮತ್ತು ಎಲ್ಲ ಅಸುರರು ಸೇರಿದರೂ ಬದಲಿಸಲಾರರು.॥7॥
ಮೂಲಮ್ - 8
ದೋಷಂ ಗುಣಂ ವಾ ಸಂಪೃಷ್ಟಸ್ತ್ವಮೇವಂ ವಕ್ತುಮರ್ಹಸಿ ।
ಅಪಾಯಂ ವಾ ಉಪಾಯಂ ವಾ ಕಾರ್ಯಸ್ಯಾಸ್ಯವಿನಿಶ್ಚಯೇ ॥
ಅನುವಾದ
ಇದರಲ್ಲಿ ದೋಷವೇನಿದೆ, ಗುಣ ಏನಿದೆ? ಇದರ ಸಿದ್ಧಿಯಲ್ಲಿ ಯಾವ ವಿಘ್ನವಿದೆ? ಅಥವಾ ಈ ಕಾರ್ಯದ ಸಿದ್ಧಿಗಾಗಿ ಯಾವ ಉಪಾಯವಿದೆ? ಎಂಬುದರ ನಿರ್ಣಯವನ್ನು ನಿನ್ನ ಕೇಳಿದರೆ ನೀನು ಅಂತಹ ಮಾತು ಹೇಳಬೇಕಾಗಿತ್ತು.॥8॥
ಮೂಲಮ್ - 9
ಸಂಪೃಷ್ಟೇನ ತು ವಕ್ತವ್ಯಂ ಸಚಿವೇನ ವಿಪಶ್ಚಿತಾ ।
ಉದ್ಯತಾಂಜಲಿನಾ ರಾಜ್ಞೋ ಯ ಇಚ್ಛೇದ್ ಭೂತಿಮಾತ್ಮನಃ ॥
ಅನುವಾದ
ತನ್ನ ಶ್ರೇಯಸ್ಸನ್ನು ಬಯಸುವ ಬುದ್ಧಿವಂತ ಮಂತ್ರಿಯು ರಾಜನು ಅವನಲ್ಲಿ ಕೇಳಿದಾಗಲೇ ತನ್ನ ಅಭಿಪ್ರಾಯವನ್ನು ಪ್ರಕಟಪಡಿಸಬೇಕು, ಅದೂ ಕೂಡ ಕೈಮುಗಿದು ನಮ್ರತೆಯಿಂದ ತಿಳಿಸಬೇಕು.॥9॥
ಮೂಲಮ್ - 10
ವಾಕ್ಯಮಪ್ರತಿಕೂಲಂ ತು ಮೃದುಪೂರ್ವಂ ಶುಭಂ ಹಿತಮ್ ।
ಉಪಚಾರೇಣ ವಕ್ತವ್ಯೋ ಯುಕ್ತಂ ಚ ವಸುಧಾಧಿಪಃ ॥
ಅನುವಾದ
ರಾಜನ ಮುಂದೆ ಸರ್ವಥಾ ಅನುಕೂಲ, ಮಧುರ, ಉತ್ತಮ, ಹಿತಕರ, ಆದರದಿಂದ ಕೂಡಿದ, ಉಚಿತವಾದ ಮಾತನ್ನೇ ಹೇಳಬೇಕು.॥10॥
ಮೂಲಮ್ - 11
ಸಾವಮರ್ದಂ ತು ಯದ್ವಾಕ್ಯಮಥವಾ ಹಿತಮುಚ್ಯತೇ ।
ನಾಭಿನಂದೇತ ತದ್ರಾಜಾ ಮಾನಾರ್ಥೀ ಮಾನವರ್ಜಿತಮ್ ॥
ಅನುವಾದ
ರಾಜನಿಗೆ ಸಮ್ಮಾನದ ಹಸಿವು ಇರುತ್ತದೆ. ಅವನ ಮಾತನ್ನು ಖಂಡಿಸಿ, ಆಕ್ಷೇಪಪೂರ್ಣ ಭಾಷೆಯಲ್ಲಿ ಹಿತಕರ ವಚನವನ್ನಾಡಿದರೂ ಆ ಅಪಮಾನ ಪೂರ್ಣಮಾತನ್ನು ಅವನು ಎಂದೂ ಅಭಿನಂದಿಸಲಾರನು.॥11॥
ಮೂಲಮ್ - 12
ಪಂಚರೂಪಾಣಿ ರಾಜಾನೋ ಧಾರಯಂತ್ಯಮಿತೌಜಸಃ ।
ಆಗ್ನೇರಿಂಂದ್ರಸ್ಯ ಸೋಮಸ್ಯ ಯಮಸ್ಯ ವರುಣಸ್ಯ ಚ ॥
ಮೂಲಮ್ - 13
ಔಷ್ಣ್ಯಂ ತಥಾ ವಿಕ್ರಮಂ ಚ ಸೌಮ್ಯಂ ದಂಡ ಪ್ರಸನ್ನತಾಮ್ ।
ಧಾರಯಂತಿ ಮಹಾತ್ಮಾನೋ ರಾಜಾನಃ ಕ್ಷಣದಾಚರ ॥
ಅನುವಾದ
ನಿಶಾಚರನೇ! ಅಮಿತ ತೇಜಸ್ವೀ, ಮಹಾಮನಸ್ವೀ, ರಾಜನು-ಅಗ್ನಿ, ಇಂದ್ರ, ಸೋಮ, ಯಮ ಮತ್ತು ವರುಣ ಈ ಐದು ದೇವತೆಗಳ ರೂಪವನ್ನು ಧರಿಸಿ ಇರುತ್ತಾನೆ. ಅದಕ್ಕಾಗಿ ಅವನು ತನ್ನಲ್ಲಿ ಪ್ರತಾಪ, ಪರಾಕ್ರಮ, ಸೌಮ್ಯ ಭಾವ, ದಂಡ ಮತ್ತು ಪ್ರಸನ್ನತೆ ಈ ಐದುಗುಣಗಳನ್ನು ಧರಿಸಿಕೊಂಡಿರುತ್ತಾನೆ.॥12-13॥
ಮೂಲಮ್ - 14
ತಸ್ಮಾತ್ಸರ್ವಾಸ್ವವಸ್ಥಾಸು ಮಾನ್ಯಾಃ ಪೂಜ್ಯಾಶ್ಚ ನಿತ್ಯದಾ ।
ತ್ವಂ ತು ಧರ್ಮಮವಿಜ್ಞಾಯ ಕೇವಲಂ ಮೋಹಮಾಸ್ಥಿತಃ ॥
ಮೂಲಮ್ - 15
ಅಭ್ಯಾಗತಂ ತು ದೌರಾತ್ಮ್ಯಾತ್ ಪರುಷಂ ವದಸೀದೃಶಮ್ ।
ಗುಣದೋಷೌ ನ ಪೃಚ್ಛಾಮಿ ಕ್ಷೇಮಂ ಚಾತ್ಮನಿ ರಾಕ್ಷಸ ॥
ಅನುವಾದ
ಆದ್ದರಿಂದ ಎಲ್ಲ ಅವಸ್ಥೆಗಳಲ್ಲಿ ಸದಾ ರಾಜನ ಸಮ್ಮಾನ ಮಾಡಬೇಕು, ಪೂಜಿಸಬೇಕು. ನೀನಾದರೋ ತನ್ನ ಧರ್ಮವನ್ನು ತಿಳಿಯದೆ ಕೇವಲ ಮೋಹಕ್ಕೆ ವಶನಾಗಿರುವೆ. ನಾನು ನಿನ್ನ ಅತಿಥಿಯಾಗಿದ್ದೇನೆ ಹೀಗಿದ್ದರೂ ನೀನು ದುಷ್ಟತೆಯಿಂದ ನನ್ನಲ್ಲಿ ಇಂತಹ ಕಠೋರ ಮಾತನ್ನು ಹೇಳುತ್ತಿರುವೆ. ರಾಕ್ಷಸನೇ! ನಾನು ನಿನ್ನಲ್ಲಿ ನನ್ನ ಕರ್ತವ್ಯದ ಗುಣ-ದೋಷಗಳನ್ನು ಕೇಳುತ್ತಿಲ್ಲ ಮತ್ತು ನನಗೆ ಏನು ಉಚಿತವಾಗಿದೆ ಎಂಬುದನ್ನು ತಿಳಿಯಲೂ ಬಯಸುತ್ತಿಲ್ಲ.॥14-15॥
ಮೂಲಮ್ - 16
ಮಯೋಕ್ತಮಪಿ ಚೈತಾವತ್ ತ್ವಾಂ ಪ್ರತ್ಯಮಿತವಿಕ್ರಮ ।
ಅಸ್ಮಿಂಸ್ತು ಸ ಭಾವಾನ್ ಕೃತ್ಯೇ ಸಾಹಾಯ್ಯಂ ಕರ್ತುಮರ್ಹಸಿ ॥
ಅನುವಾದ
ಅಮಿತ ಪರಾಕ್ರಮೀ ಮಾರೀಚನೇ! ಈ ಕಾರ್ಯದಲ್ಲಿ ನೀನು ನನಗೆ ಸಹಾಯ ಮಾಡಬೇಕು, ಇಷ್ಟೇ ನಾನು ನಿನ್ನಲ್ಲಿ ಕೇಳಿದ್ದೆ.॥16॥
ಮೂಲಮ್ - 17
ಶೃಣು ತತ್ಕರ್ಮ ಸಾಹಾಯ್ಯೇ ಯತ್ಕಾರ್ಯಂ ವಚನಾನ್ಮಮ ।
ಸೌವರ್ಣಸ್ತ್ವಂ ಮೃಗೋ ಭೂತ್ವಾ ಚಿತ್ರೋ ರಜತಬಿಂದುಭಿಃ ॥
ಮೂಲಮ್ - 18
ಆಶ್ರಮೇ ತಸ್ಯ ರಾಮಸ್ಯ ಸೀತಾಯಾಃ ಪ್ರಮುಖೇ ಚರ ।
ಪ್ರಲೋಭಯಿತ್ವಾ ವೈದೇಹೀಂ ಯಥೇಷ್ಟಂ ಗಂತುಮರ್ಹಸಿ ॥
ಅನುವಾದ
ಈಗ ನೀನು ನನ್ನ ಸಹಾಯಕ್ಕಾಗಿ ಮಾಡುವ ಕಾರ್ಯವನ್ನು ಕೇಳು-ನೀನು ಸುವರ್ಣಮಯ ಚರ್ಮದಿಂದ ಕೂಡಿದ ಚುಕ್ಕೆಗಳುಳ್ಳ ಮೃಗವಾಗಬೇಕು. ನಿನ್ನ ಶರೀರದಲ್ಲೆಲ್ಲ ಬೆಳ್ಳಿಯ ಚುಕ್ಕೆಗಳಿರಬೇಕು. ಇಂತಹ ರೂಪವನ್ನು ಧರಿಸಿ ನೀನು ರಾಮನ ಆಶ್ರಮದಲ್ಲಿ ಸೀತೆಯ ಮುಂದೆ ಸಂಚರಿಸು. ಒಮ್ಮೆ ವಿದೇಹಕುಮಾರಿಯನ್ನು ಮರಳು ಮಾಡಿ ನೀನು ಬೇಕಾದಲ್ಲಿಗೆ ಹೊರಟು ಹೋಗು.॥17-18॥
ಮೂಲಮ್ - 19
ತ್ವಾಂ ಹಿ ಮಾಯಾಮಯಂ ದೃಷ್ಟ್ವಾ ಕಾಂಚನಂ ಜಾತವಿಸ್ಮಯಾ ।
ಅನಯೈನಮಿತಿ ಕ್ಷಿಪ್ರಂ ರಾಮಂ ವಕ್ಷ್ಯತಿ ಮೈಥಿಲೀ ॥
ಅನುವಾದ
ನಿನ್ನ ಕಾಂಚನಮೃಗವನ್ನು ನೋಡಿ ಮಿಥಿಲೇಶಕುಮಾರಿ ಸೀತೆಗೆ ಬಹಳ ಆಶ್ಚರ್ಯವಾಗಬಹುದು. ಅವಳು ಶೀಘ್ರವಾಗಿ ರಾಮನಲ್ಲಿ ಇದನ್ನು ಹಿಡಿದು ತನ್ನಿರಿ ಎಂದು ಹೇಳುವಳು.॥19॥
ಮೂಲಮ್ - 20
ಅಪಕ್ರಾಂತೇ ಚ ಕಾಕುತ್ಸ್ಥೇ ದೂರಂ ಗತ್ವಾಪ್ಯುದಾಹರ ।
ಹಾ ಸೀತೇ ಲಕ್ಷ್ಮಣೇತ್ಯೇವಂ ರಾಮವಾಕ್ಯಾನುರೂಪಕಮ್ ॥
ಅನುವಾದ
ರಾಮನು ನಿನ್ನನ್ನು ಹಿಡಿಯಲು ಆಶ್ರಮದಿಂದ ದೂರ ಹೊರಟುಹೋದಾಗ, ನೀನೂ ದೂರ ಹೋಗಿ ಶ್ರೀರಾಮನ ಧ್ವನಿಯನ್ನು ಅನುಸರಿಸಿ ‘ಹಾ ಸೀತೆ! ಹಾ ಲಕ್ಷ್ಮಣ!’ ಎಂದು ಕೂಗಬೇಕು.॥20॥
ಮೂಲಮ್ - 21
ತಚ್ಛ್ರುತ್ವಾ ರಾಮಪದವೀಂ ಸೀತಯಾ ಚ ಪ್ರಚೋದಿತಃ ।
ಅನುಗಚ್ಛತಿ ಸಂಭ್ರಾಂತಂ ಸೌಮಿತ್ರಿರಪಿ ಸೌಹೃದಾತ್ ॥
ಅನುವಾದ
ನಿನ್ನ ಆ ಕೂಗನ್ನು ಕೇಳಿ ಸೀತೆಯ ಪ್ರೇರಣೆಯಿಂದ ಸುಮಿತ್ರಾಕುಮಾರ ಲಕ್ಷ್ಮಣನೂ ಸ್ನೇಹವಶದಿಂದ ಗಾಬರಿಗೊಂಡು ತನ್ನ ಅಣ್ಣನ ದಾರಿಯನ್ನೇ ಹಿಡಿಯುವನು.॥21॥
ಮೂಲಮ್ - 22
ಅಪಕ್ರಾಂತೇಚ ಕಾಕುತ್ಸ್ಥೇ ಲಕ್ಷ್ಮಣೇ ಚ ಯಥಾಸುಖಮ್ ।
ಆಹರಿಷ್ಯಾಮಿ ವೈದೇಹೀಂ ಸಹಸ್ರಾಕ್ಷಃ ಶಚೀಮಿವ ॥
ಅನುವಾದ
ಈ ಪ್ರಕಾರ ರಾಮ-ಲಕ್ಷ್ಮಣ ಇಬ್ಬರೂ ಆಶ್ರಯದಿಂದ ದೂರ ಹೋದಾಗ ನಾನು ಸುಖವಾಗಿ ಸೀತೆಯನ್ನು ಇಂದ್ರನು ಶಚಿಯನ್ನು ಕದ್ದು ತಂದಂತೆ ಅಪಹರಣಮಾಡುವೆನು.॥22॥
ಮೂಲಮ್ - 23
ಏವಂ ಕೃತ್ವಾ ತ್ವಿದಂ ಕಾರ್ಯಂ ಯಥೇಷ್ಟಂ ಗಚ್ಛ ರಾಕ್ಷಸ ।
ರಾಜ್ಯಸ್ಯಾರ್ಧಂ ಪ್ರದಾಸ್ಯಾಮಿ ಮಾರೀಚ ತವ ಸುವ್ರತ ॥
ಅನುವಾದ
ಸುವ್ರತನಾದ ಮಾರೀಚನೇ! ಈ ಪ್ರಕಾರ ಈ ಕಾರ್ಯವನ್ನು ನೆರವೇರಿಸಿ ನಿನಗೆ ಇಚ್ಛೆ ಇದ್ದಲ್ಲಿಗೆ ಹೊರಟುಹೋಗು. ನಾನು ಇದಕ್ಕಾಗಿ ನಿನಗೆ ನನ್ನ ಅರ್ಧರಾಜ್ಯವನ್ನೇ ಕೊಡುವೆನು.॥23॥
ಮೂಲಮ್ - 24
ಗಚ್ಛ ಸೌಮ್ಯ ಶಿವಂ ಮಾರ್ಗಂ ಕಾರ್ಯಸ್ಯಾಸ್ಯ ವಿವೃದ್ಧಯೇ ।
ಅಹಂ ತ್ವಾನುಗಮಿಷ್ಯಾಮಿ ಸರಥೋ ದಂಡ ಕಾವನಮ್ ॥
ಅನುವಾದ
ಸೌಮ್ಯ! ಈಗ ಈ ಕಾರ್ಯಕ್ಕಾಗಿ ಹೊರಡು. ನಿನ್ನ ದಾರಿಯು ಮಂಗಳವಾಗಲಿ, ನಾನು ರಥದಲ್ಲಿ ಕುಳಿತು ದಂಡಕಾರಣ್ಯದವರೆಗೆ ನಿನ್ನ ಹಿಂದೆ-ಹಿಂದೇ ಬರುವೆನು.॥24॥
ಮೂಲಮ್ - 25
ಪ್ರಾಪ್ಯ ಸೀತಾಮಯುದ್ಧೇನ ವಂಚಯಿತ್ವಾ ತು ರಾಘವಮ್ ।
ಅಂಕಾ ಪ್ರತಿ ಗಮಿಷ್ಯಾಮಿ ಕೃತಕಾರ್ಯಃ ಸಹ ತ್ವಯಾ ॥
ಅನುವಾದ
ರಾಮನನ್ನು ವಂಚಿಸಿ ಯುದ್ಧವಿಲ್ಲದೆಯೇ ಸೀತೆಯನ್ನು ಕೈವಶಮಾಡಿಕೊಂಡು ಕೃತಾರ್ಥವಾಗಿ ನಿನ್ನೊಂದಿಗೆ ಲಂಕೆಗೆ ಮರಳಿ ಹೋಗುವೆನು.॥25॥
ಮೂಲಮ್ - 26
ನೋ ಚೇತ್ ಕರೋಷಿ ಮಾರೀಚ ಹನ್ಮಿ ತ್ವಾಮಹಮದ್ಯ ವೈ ।
ಏತತ್ಕಾರ್ಯಮವಶ್ಯಂ ಮೇ ಬದಲಾದಪಿ ಕರಿಷ್ಯಸಿ ।
ರಾಜ್ಞೋ ವಿಪ್ರತಿಕೂಲಸ್ಥೋ ನ ಜಾತು ಸುಖಮೇಧತೇ ॥
ಅನುವಾದ
ಮಾರೀಚನೇ! ನೀನು ಇದನ್ನು ತಿರಸ್ಕರಿಸಿದರೆ ನಿನ್ನನ್ನು ಈಗಲೇ ಕೊಂದುಬಿಡುವೆನು. ನನ್ನ ಈ ಕಾರ್ಯವನ್ನು ನೀನು ಅವಶ್ಯವಾಗಿ ಮಾಡಬೇಕಾದೀತು. ನಾನು ಬಲಾತ್ಕಾರವಾಗಿ ನಿನ್ನಿಂದ ಈ ಕಾರ್ಯ ಮಾಡಿಸುವೆನು. ರಾಜನಿಗೆ ಪ್ರತಿಕೂಲವಾಗಿ ನಡೆಯುವವನು ಎಂದೂ ಸುಖಿಯಾಗುವುದಿಲ್ಲ.॥26॥
ಮೂಲಮ್ - 27
ಆಸಾದ್ಯ ತಂ ಜೀವಿತಸಂಶಯಸ್ತೇ
ಮೃತ್ಯುರ್ಧ್ರುವೋ ಹ್ಯದ್ಯ ಮಯಾ ವಿರುಧ್ಯತಃ ।
ಏತದ್ಯಥಾವತ್ಪರಿಗಣ್ಯ ಬುದ್ಧ್ಯಾ
ಯದತ್ರ ಪಥ್ಯಂ ಕುರು ತತ್ತಥಾ ತ್ವಮ್ ॥
ಅನುವಾದ
ರಾಮನ ಮುಂದೆ ಹೋದಾಗ ನಿನ್ನ ಪ್ರಾಣಹೋಗುವ ಸಂದೇಹ ನಿನಗೆ ಇದೆ. ಆದರೆ ನನ್ನೊಂದಿಗೆ ವಿರೋಧ ಮಾಡಿದಾಗ ಇಂದೇ ನಿನ್ನ ಮೃತ್ಯು ನಿಶ್ಚಿತವಾಗಿದೆ. ಇದರ ಕುರಿತು ಬುದ್ಧಿಯಿಂದ ಚೆನ್ನಾಗಿ ವಿಚಾರ ಮಾಡು. ಬಳಿಕ ಈಗ ಹಿತಕರವೆಂದು ತಿಳಿದುದನ್ನು ನೀನು ಮಾಡ.॥27॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತನೆಯ ಸರ್ಗ ಸಂಪೂರ್ಣವಾಯಿತು. ॥40 ॥