०३९ सहाय्यकरणनिराकरणम्

वाचनम्
ಭಾಗಸೂಚನಾ

ಮಾರೀಚನು ರಾವಣನಿಗೆ ಪುನಃ ಸಮಜಾಯಿಸಿದುದು

ಮೂಲಮ್ - 1

ಏವಮಸ್ಮಿ ತದಾ ಮುಕ್ತಃ ಕಥಂಚಿತ್ತೇನ ಸಂಯುಗೇ ।
ಇದಾನೀಮಪಿ ಯದ್ವತ್ತಂ ತಚ್ಛಣುಷ್ವ ಯದುತ್ತರಮ್ ॥

ಅನುವಾದ

ಈ ಪ್ರಕಾರ ಆಗ ನಾನು ಹೇಗೋ ಶ್ರೀರಾಮಚಂದ್ರನ ಕೈಯಿಂದ ಬದುಕುಳಿದೆ. ಅನಂತರದ ದಿನಗಳಲ್ಲಿ ನಡೆದ ಘಟನೆಗಳನ್ನು ನೀನು ಕೇಳು.॥1॥

ಮೂಲಮ್ - 2

ರಾಕ್ಷಸಾಭ್ಯಾಮಹಂ ದ್ವಾಭ್ಯಾಮನಿರ್ವಿಣ್ಣಸ್ತಥಾ ಕೃತಃ ।
ಸಹಿತೋ ಮೃಗರೂಪಾಭ್ಯಾಂ ಪ್ರವಿಷ್ಟೋ ದಂಡಕಾವನೇಮ್ ॥

ಅನುವಾದ

ಶ್ರೀರಾಮನು ನನ್ನ ಅಂತಹ ದುರ್ದೆಶೆ ಮಾಡಿದ್ದರೂ ನಾನು ಧೈರ್ಯಗೆಡಲಿಲ್ಲ. ಒಂದುದಿನ ಮೃಗರೂಪಧಾರೀ ರಾಕ್ಷಸರಿಬ್ಬರೊಡನೆ ನಾನೂ ಮೃಗರೂಪಧರಿಸಿ ದಂಡಕಾರಣ್ಯಕ್ಕೆ ಹೋದೆ.॥2॥

ಮೂಲಮ್ - 3

ದೀಪ್ತಜಿಹ್ವೋ ಮಹಾದಂಷ್ಟ್ರಸ್ತೀಕ್ಷ್ಣಶೃಂಗೋ ಮಹಾಬಲಃ ।
ವ್ಯಚರನ್ ದಂಡಕಾರಣ್ಯಂ ಮಾಂಸಭಕ್ಷೋ ಮಹಾಮೃಗಃ ॥

ಅನುವಾದ

ನಾನು ಮಹಾಬಲಶಾಲಿ ಆಗಿಯೇ ಇದ್ದೆ, ನನ್ನ ನಾಲಿಗೆ ಬೆಂಕಿಯಂತೆ ಉರಿಯುತ್ತಿತ್ತು. ಕೊರೆದಾಡಿಗಳು ದೊಡ್ಡದಾಗಿದ್ದು, ಕೊಂಬುಗಳು ತಿಕ್ಷಣವಾಗಿದ್ದವು. ಮಹಾಮೃಗ ರೂಪದಿಂದ ಮಾಂಸವನ್ನು ತಿನ್ನುತ್ತಾ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದೆ.॥3॥

ಮೂಲಮ್ - 4

ಅಗ್ನಿಹೋತ್ರೇಷು ತೀರ್ಥೇಷು ಚೈತ್ಯವೃಕ್ಷೇಷು ರಾವಣ ।
ಅತ್ಯಂತಘೋರೋ ವ್ಯಚರಂಸ್ತಾಪಸಾಂಸ್ತಾನ್ ಪ್ರಧರ್ಷಯನ್ ॥

ಅನುವಾದ

ರಾವಣ! ನಾನು ಭಯಂಕರ ರೂಪ ಧರಿಸಿಕೊಂಡು ಅಗ್ನಿಶಾಲೆಗಳಲ್ಲಿ ಜಲಾಶಯಗಳ ಸೋಪಾನಗಳಲ್ಲಿ, ದೇವ ವೃಕ್ಷಗಳ ಕೆಳಗೆ ಕುಳಿತಿರುವ ತಪಸ್ವಿಗಳನ್ನು ತಿರಸ್ಕರಿಸುತ್ತಾ ಎಲ್ಲೆಡೆ ಸಂಚರಿಸುತ್ತಿದ್ದೆ.॥4॥

ಮೂಲಮ್ - 5

ನಿಹತ್ಯ ದಂಡಕಾರಣ್ಯೇ ತಾಪಸಾನ್ ಧರ್ಮಚಾರಿಣಃ ।
ರುಧಿರಾಣಿ ಪಿಬಂಸ್ತೇಷಾಂ ತನ್ಮಾಂಸಾನಿ ಚ ಭಕ್ಷಯನ್ ॥

ಅನುವಾದ

ದಂಡಕಾರಣ್ಯದಲ್ಲಿ ಧರ್ಮಾನುಷ್ಠಾನದಲ್ಲಿ ತೊಡಗಿರುವ ತಪಸ್ವಿಗಳನ್ನು ಕೊಂದು ಅವರ ರಕ್ತವನ್ನು ಕುಡಿಯುತ್ತಾ ಮಾಂಸವನ್ನು ತಿನ್ನುವುದೇ ನನ್ನ ಕೆಲಸವಾಗಿತ್ತು.॥5॥

ಮೂಲಮ್ - 6

ಋಷಿಮಾಂಸಾಶನಃ ಕ್ರೂರಸ್ತ್ರಾಸಯನ್ ವನಗೋಚರಾನ್ ।
ತಥಾ ರುಧಿರಮತ್ತೋಽಹಂ ವ್ಯಚರಂ ದಂಡಕಾವನಮ್ ॥

ಅನುವಾದ

ಕ್ರೂರ ಸ್ವಭಾವದ ನಾನು ಋಷಿಗಳ ಮಾಂಸವನ್ನು ತಿನ್ನುತ್ತಾ, ಕಾಡಿನಲ್ಲಿ ಸಂಚರಿಸುವ ಪ್ರಾಣಿಗಳನ್ನು ಹೆದರಿಸುತ್ತಾ ರಕ್ತಪಾನ ಮಾಡಿ ಉನ್ಮತ್ತವಾಗಿ ದಂಡಕಾರಣ್ಯದಲ್ಲಿ ಸಂಚರಿಸತೊಡಗಿದೆ.॥6॥

ಮೂಲಮ್ - 7

ತದಾಽಹಂ ದಂಡಕಾರಣ್ಯೇ ವಿಚರನ್ ಧರ್ಮದೂಷಕಃ ।
ಆಸಾದಯಂ ತದಾ ರಾಮಂ ತಾಪಸಂ ಧರ್ಮಮಾಶ್ರಿತಮ್ ॥

ಮೂಲಮ್ - 8

ವೈದೇಹೀಂ ಚ ಮಹಾಭಾಗಾಂ ಲಕ್ಷ್ಮಣಂ ಚ ಮಹಾರಥಮ್ ।
ತಾಪಸಂ ನಿಯತಾಹಾರಂ ಸರ್ವಭೂತಹಿತೇ ರತಮ್॥

ಅನುವಾದ

ಈ ಪ್ರಕಾರ ಆಗ ದಂಡಕಾರಣ್ಯದಲ್ಲಿ ಸಂಚರಿಸುತ್ತಾ ಧರ್ಮವನ್ನು ಕಲಂಕಿತಗೊಳಿಸುವ ಮಾರೀಚನಾದ ನಾನು ತಪಸ್ವೀ ಧರ್ಮವನ್ನು ಆಶ್ರಯಿಸಿದ ಶ್ರೀರಾಮ, ವಿದೇಹನಂದಿನಿ ಸೀತೆ ಹಾಗೂ ಮಿತಾಹಾರೀ ತಪಸ್ವಿಯ ರೂಪದಲ್ಲಿ ಸಮಸ್ತ ಪ್ರಾಣಿಗಳ ಹಿಡಿತದಲ್ಲಿ ತತ್ಪರನಾದ ಮಹಾರಥಿ ಲಕ್ಷ್ಮಣ ಇವರ ಬಳಿಗೆ ಹೋದೆ.॥7-8॥

ಮೂಲಮ್ - 9

ಸೋಽಹಂ ವನಗತಂ ರಾಮಂ ಪರಿಭೂಯ ಮಹಾಬಲಮ್ ।
ತಾಪಸೋಽಯಮಿತಿ ಜ್ಞಾತ್ವಾ ಪೂರ್ವವೈರಮನುಸ್ಮರನ್ ॥

ಮೂಲಮ್ - 10

ಅಭ್ಯಧಾವಂ ಸುಸಂಕ್ರುದ್ಧಸ್ತೀಕ್ಷ್ಣಶೃಂಗೋ ಮೃಗಾಕೃತಿಃ ।
ಜಿಘಾಂಸುರಕೃತಪ್ರಜ್ಞಸ್ತಂ ಪ್ರಹಾರಮನುಸ್ಮರನ್ ॥

ಅನುವಾದ

ವನಕ್ಕೆ ಬಂದಿರವ ಮಹಾಬಲಿ ಶ್ರೀರಾಮನನ್ನು ‘ಇವನೊಬ್ಬ ತಪಸ್ವಿಯಾಗಿದ್ದಾನೆ’ ಎಂದು ತಿಳಿದು ಅವನನ್ನು ಅವಹೇಳನ ಮಾಡುತ್ತಾ ನಾನು ಹಿಂದಿನ ವೈರವನ್ನು ಪದೇ-ಪದೇ ಸ್ಮರಿಸುತ್ತಾ ಅತ್ಯಂತ ಕುಪಿತನಾಗಿ ಅವನ ಕಡೆಗೆ ಓಡಿದೆ. ಆಗ ನಾನು ಮೃಗರೂಪದಂತೆ ಇದ್ದು, ಕೊಂಬುಗಳು ಚೂಪಾಗಿದ್ದವು. ಅವನ ಹಿಂದಿನ ಪ್ರಹಾರವನ್ನು ನೆನೆದು ನಾನು ಅವನನ್ನು ಕೊಲ್ಲಬೇಕೆಂದು ಬಯಸುತ್ತಿದ್ದೆ. ನನ್ನ ಬುದ್ಧಿಯು ಶುದ್ಧವಿಲ್ಲದ್ದರಿಂದ ನಾನು ಅವನ ಶಕ್ತಿ ಮತ್ತು ಪ್ರಭಾವವನ್ನು ಮರೆತುಹೋಗಿದ್ದೆ.॥9-10॥

ಮೂಲಮ್ - 11

ತೇನ ತ್ಯಕ್ತಾಸ್ತ್ರಯೋ ಬಾಣಾಃ ಶಿತಾಃ ಶತ್ರುನಿಬರ್ಹಣಾಃ ।
ವಿಕೃಷ್ಯ ಸುಮಹಚ್ಚಾಪಂ ಸುಪರ್ಣಾನಿಲತುಲ್ಯಗಾಃ ॥

ಅನುವಾದ

ನಾವು ಮೂವರು ಬರುತ್ತಿರುವುದನ್ನು ನೋಡಿ ಶ್ರೀರಾಮನು ತನ್ನ ಧನುಸ್ಸನ್ನೆಳೆದು ಗರುಡ ಮತ್ತು ವಾಯುವಿನಂತೆ ಶೀಘ್ರಗಾಮಿ ಹಾಗೂ ಶತ್ರುವಿನ ಪ್ರಾಣಹರಣ ಮಾಡುವಂತಹ, ತೀಕ್ಷ್ಣವಾದ ಮೂರು ಬಾಣಗಳನ್ನು ಬಿಟ್ಟನು.॥11॥

ಮೂಲಮ್ - 12

ತೇ ಬಾಣಾ ವಜ್ರಸಂಕಾಶಾಃ ಸುಘೋರಾ ರಕ್ತಭೋಜನಾಃ ।
ಆಜಗ್ಮುಃ ಸಹಿತಾಃ ಸರ್ವೇ ತ್ರಯಃ ಸನ್ನ ತಪರ್ವಣಃ ॥

ಅನುವಾದ

ಬಾಗಿದ ಗಂಟುಳ್ಳ ಆ ಮೂರು ಬಾಣಗಳು ವಜ್ರದಂತೆ ದುಸ್ಸಹ, ಅತ್ಯಂತ ಭಯಂಕರ ಹಾಗೂ ರಕ್ತವನ್ನು ಕುಡಿಯುವಂತಹವಾಗಿದ್ದವು. ಅವು ಒಟ್ಟಿಗೆ ನಮ್ಮ ಕಡೆಗೆ ಬಂದವು.॥12॥

ಮೂಲಮ್ - 13

ಪರಾಕ್ರಮಜ್ಞೋ ರಾಮಸ್ಯ ಶಠೋ ದೃಷ್ಟಭಯಃ ಪುರಾ ।
ಸಮುತ್ಕ್ರಾಂತಸ್ತತೋ ಮುಕ್ತಸ್ತಾವುಭೌ ರಾಕ್ಷಸೌ ಹತೌ ॥

ಅನುವಾದ

ನಾನಾದರೋ ಶ್ರೀರಾಮನ ಪರಾಕ್ರಮವನ್ನು ತಿಳಿದಿದ್ದೆ ಮತ್ತು ಹಿಂದೊಮ್ಮೆ ಅವನ ಭಯವನ್ನು ಎದುರಿಸಿದ್ದೆ. ಶಠತೆಯಿಂದ ನೆಗೆದು ಓಡಿ ಹೋದೆ. ಓಡಿದ್ದರಿಂದ ನಾನೇನೋ ಬದುಕಿದೆ ಆದರೆ ನನ್ನ ಜೊತೆಗಿನ ಆ ರಾಕ್ಷಸರು ಸತ್ತು ಹೋದರು.॥13॥

ಮೂಲಮ್ - 14

ಶರೇಣ ಮುಕ್ತೋ ರಾಮಸ್ಯ ಕಥಂಚಿತ್ಪಾಪ್ಯ ಜೀವಿತಮ್ ।
ಇಹ ಪ್ರವ್ರಾಜಿತೋ ಯುಕ್ತಸ್ತಾಪಸೋಽಹಂ ಸಮಾಹಿತಃ ॥

ಅನುವಾದ

ಈ ಸಲ ಶ್ರೀರಾಮನ ಬಾಣದಿಂದ ಹೇಗೋ ಬಿಡುಗಡೆ ಹೊಂದಿ ನನಗೆ ಹೊಸ ಜೀವನ ದೊರೆಯಿತು. ಅಂದಿನಿಂದ ಸಂನ್ಯಾಸ ತೆಗೆದುಕೊಂಡು ಎಲ್ಲ ದುಷ್ಕರ್ಮಗಳನ್ನು ತ್ಯಜಿಸಿ, ಸ್ಥಿರಚಿತ್ತದಿಂದ ಯೋಗಾಭ್ಯಾಸದಲ್ಲಿ ತತ್ಪರನಾಗಿ ತಪಸ್ಸಿಗೆ ತೊಡಗಿರುವೆ.॥14॥

ಮೂಲಮ್ - 15

ವೃಕ್ಷೇ ವೃಕ್ಷೇಚ ಪಶ್ಯಾಮಿ ಚೀರಕೃಷ್ಣಾಜಿನಾಂಬರಮ್ ।
ಗೃಹೀತಧನುಷಂ ರಾಮಂ ಪಾಶಹಸ್ತಮಿವಾಂತಕಮ್ ॥

ಅನುವಾದ

ಈಗ ನನಗೆ ಪ್ರತಿಯೊಂದು ವೃಕ್ಷದಲ್ಲಿ ನಾರುಮಡಿ, ಮೃಗಚರ್ಮ, ಮತ್ತು ಧನುಸ್ಸನ್ನು ಧರಿಸಿದ ಶ್ರೀರಾಮನೇ ಕಂಡು ಬರುತ್ತಾನೆ. ಅವನು ನನಗೆ ಪಾಶಧಾರೀ ಯಮನಂತೆ ತೋರುತ್ತಾ ಇರುವನು.॥15॥

ಮೂಲಮ್ - 16

ಅಪಿ ರಾಮಸಹಸ್ರಾಣಿ ಭೀತಃ ಪಶ್ಯಾಮಿ ರಾವಣ ।
ರಾಮಭೂತಮಿದಂ ಸರ್ವಮರಣ್ಯಂ ಪ್ರತಿಭಾತಿ ಮೇ ॥

ಅನುವಾದ

ರಾವಣ! ನಾನು ಭಯಭೀತನಾಗಿ ಸಾವಿರಾರು ರಾಮರನ್ನು ಹಿಂದೆ-ಮುಂದೆ ನಿಂತಿರುವಂತೆ ನೋಡುತ್ತೇನೆ. ಈ ಇಡೀ ವನವು ನನಗೆ ರಾಮಮಯವಾಗಿ ಕಂಡು ಬರುತ್ತಿದೆ.॥16॥

ಮೂಲಮ್ - 17

ರಾಮಮೇವ ಹಿ ಪಶ್ಯಾಮಿ ರಹಿತೇ ರಾಕ್ಷಸೇಶ್ವರ ।
ದೃಷ್ಟ್ವಾ ಸ್ವಪ್ನಗತಂ ರಾಮಮುದ್ ಭ್ರಮಾಮಿ ವಿಚೇತನಃ ॥

ಅನುವಾದ

ರಾಕ್ಷಸರಾಜನೇ! ನಾನು ಏಕಾಂತದಲ್ಲಿ ಕುಳಿತುಕೊಂಡಾಗ ನನಗೆ ಶ್ರೀರಾಮನದೇ ದರ್ಶನವಾಗುತ್ತದೆ. ಕನಸಿನಲ್ಲೂ ಶ್ರೀರಾಮನನ್ನು ನೋಡಿ ಭ್ರಾಂತನಾಗಿ ಚೇತನಾರಹಿತನಂತಾಗುತ್ತೇನೆ.॥17॥

ಮೂಲಮ್ - 18

ರಕಾರಾದೀನಿ ನಾಮಾನಿ ರಾಮತ್ರಸ್ತಸ್ಯ ರಾವಣ ।
ರತ್ನಾನಿ ಚ ರಥಾಶ್ಚೈವ ವಿತ್ರಾಸಂ ಸಂಜನಯಂಚಿ ಮೇ ॥

ಅನುವಾದ

ರಾವಣ! ರತ್ನ, ರಥ ಮೊದಲಾದ ರಕಾರದಿಂದ ಇರುವ ಹೆಸರನ್ನು ಕೇಳುತ್ತಲೇ ನನ್ನ ಮನಸ್ಸಿನಲ್ಲಿ ಭಯ ಉತ್ಪನ್ನವಾಗುವಷ್ಟು ನಾನು ರಾಮನಿಂದ ಭಯಭೀತನಾಗಿರುವೆನು.॥18॥

ಮೂಲಮ್ - 19

ಅಹಂ ತಸ್ಯ ಪ್ರಭಾವಜ್ಞೋ ನ ಯುದ್ಧಂ ತೇನ ತೇ ಕ್ಷಮಮ್ ।
ಬಲಿಂ ವಾ ನಮುಚಿಂ ವಾಪಿ ಹನ್ಯಾದ್ಧಿ ರಘುನಂದನಃ ॥

ಅನುವಾದ

ನಾನು ಅವನ ಪ್ರಭಾವವನ್ನು ಚೆನ್ನಾಗಿ ತಿಳಿದಿದ್ದೇನೆ. ಆದ್ದರಿಂದ ಶ್ರೀರಾಮನೊಂದಿಗೆ ನೀನು ಯುದ್ಧಮಾಡುವುದು ಎಂದಿಗೂ ಉಚಿತವಲ್ಲ ಎಂದೇ ನಾನು ಹೇಳುತ್ತೇನೆ. ರಘುಕುಲನಂದನ ಶ್ರೀರಾಮನು ಬಲಿ ಅಥವಾ ನಮೂಚಿಯವರನ್ನು ವಧಿಸಬಲ್ಲನು.॥19॥

ಮೂಲಮ್ - 20

ರಣೇ ರಾಮೇಣ ಯುದ್ಧಸ್ವ ಕ್ಷಮಾಂ ವಾ ಕುರು ರಾವಣ ।
ನ ತೇ ರಾಮಕಥಾ ಕಾರ್ಯಾ ಯದಿ ಮಾಂ ದ್ರಷ್ಟುಮಿಚ್ಛಸಿ ॥

ಅನುವಾದ

ರಾವಣ! ನಿನಗೆ ಇಚ್ಛೆ ಇದ್ದರೆ ರಣಭೂಮಿಯಲ್ಲಿ ಶ್ರೀರಾಮನೊಂದಿಗೆ ಯುದ್ಧ ಮಾಡು ಅಥವಾ ಅವನನ್ನು ಕ್ಷಮಿಸಿಬಿಡು, ಆದರೆ ನನ್ನನ್ನು ಜೀವಂತವಾಗಿ ನೋಡಲು ಬಯಸುವೆಯಾದರೆ ನನ್ನ ಎದುರಿಗೆ ಶ್ರೀರಾಮನ ಚರ್ಚೆ ಮಾಡಬೇಡ.॥20॥

ಮೂಲಮ್ - 21

ಬಹವಃ ಸಾಧವೋ ಲೋಕೇ ಯುಕ್ತಾ ಧರ್ಮಮನುಷ್ಠಿತಾಃ ।
ಪರೇಷಾಮಪರಾಧೇನ ವಿನಷ್ಟಾಃ ಸಪರಿಚ್ಛದಾಃ ॥

ಅನುವಾದ

ಲೋಕದಲ್ಲಿ ಯೋಗಯುಕ್ತರಾಗಿ ಕೇವಲ ಧರ್ಮಾನುಷ್ಠಾನದಲ್ಲೇ ತೊಡಗಿದ್ದ ಅನೇಕ ಸಾಧು-ಸತ್ಪುರುಷರು ಬೇರೆಯವರ ಅಪರಾಧದಿಂದಲೇ ಪರಿಕರದೊಂದಿಗೆ ನಾಶವಾಗಿ ಹೋಗುವರು.॥21॥

ಮೂಲಮ್ - 22

ಸೋಽಹಂ ಪರಾಪರಾಧೇನ ವಿನಶ್ಯೇಯಂ ನಿಶಾಚರ ।
ಕುರು ಯತ್ತೇ ಕ್ಷಮಂ ತತ್ತ್ವಮಹಂ ತ್ವಾಂ ನಾನುಯಾಮಿ ವೈ॥

ಅನುವಾದ

ನಿಶಾಚರನೇ! ನಾನೂ ಕೂಡ ಹೇಗೋ ಬೇರೆಯವರ ಅಪರಾಧದಿಂದ ನಾಶವಾಗಬಲ್ಲೆ, ಆದ್ದರಿಂದ ನಿನಗೆ ಉಚಿತವಾದುದನ್ನು ಮಾಡು. ನಾನು ಈ ಕಾರ್ಯದಲ್ಲಿ ನಿನಗೆ ಸಹಾಯಕನಾಗಲಾರೆ.॥22॥

ಮೂಲಮ್ - 23

ರಾಮಶ್ಚ ಹಿ ಮಹಾತೇಜಾ ಮಹಾಸತ್ತ್ವೋ ಮಹಾಬಲಃ ।
ಅಪಿ ರಾಕ್ಷಸಲೋಕಸ್ಯ ನ ಭವೇದಂತಕರೋಽಪಿ ಹಿ ॥

ಅನುವಾದ

ಏಕೆಂದರೆ ಶ್ರೀರಾಮಚಂದ್ರನು ದೊಡ್ಡ ತೇಜಸ್ವೀ, ಮಹಾ ಆತ್ಮಬಲದಿಂದ ಸಂಪನ್ನ ಹಾಗೂ ಹೆಚ್ಚು ಬಲಶಾಲಿಯಾಗಿದ್ದಾನೆ. ಅವನು ಸಮಸ್ತ ರಾಕ್ಷಸ ಜಗತ್ತನ್ನು ಸಂಹಾರ ಮಾಡಬಲ್ಲನು.॥23॥

ಮೂಲಮ್ - 24

ಯದಿ ಶೂರ್ಪಣಖಾಹೇತೋರ್ಜನಸ್ಥಾನಗತಃ ಖರಃ ।
ಅತಿವೃತ್ತೋ ಹತಃ ಪೂರ್ವಂ ರಾಮೇಣಾಕ್ಲಿಷ್ಟ ಕರ್ಮಣಾ ।
ಅತ್ರ ಬ್ರೂಹಿ ಯಥಾತತ್ತ್ವಂ ಕೋ ರಾಮಸ್ಯ ವ್ಯತಿಕ್ರಮಃ ॥

ಅನುವಾದ

ಶೂರ್ಪಣಖಿಯ ಕುರಿತಾದ ಪ್ರತೀಕಾರ ಮಾಡಲು ಜನಸ್ಥಾನ ನಿವಾಸಿ ಖರನು ಮೊದಲಿಗೆ ಶ್ರೀರಾಮನ ಮೇಲೆ ಆಕ್ರಮಣ ಮಾಡಿದನು ಹಾಗೂ ಅನಾಯಾಸ ಮಹತ್ಕರ್ಮ ಮಾಡುವ ಶ್ರೀರಾಮನ ಕೈಯಿಂದ ಸತ್ತುಹೋದನು. ಎಂದಾಗ ನೀನು ಸತ್ಯವಾಗಿ ಹೇಳು ಇದರಲ್ಲಿ ಶ್ರೀರಾಮನ ಅಪರಾಧವೇನಿದೆ.॥24॥

ಮೂಲಮ್ - 25

ಇದಂ ವಚೋ ಬಂಧುಹಿತಾರ್ಥಿನಾ ಮಯಾ
ಯಥೋಚ್ಯಮಾನಂ ಯದಿ ನಾಭಿಪತ್ಸ್ಯಸೇ ।
ಸಬಾಂಧವತ್ಸ್ಯಕ್ಷ್ಯಸಿ ಜೀವಿತಂ ರಣೇ
ಹತೋಽದ್ಯ ರಾಮೇಣ ಶರೈರಜಿಹ್ಮಗೈಃ ॥

ಅನುವಾದ

ನೀನು ನನಗೆ ಬಂಧುವಾಗಿರುವೆ. ನಾನು ನಿನ್ನ ಹಿತಕ್ಕಾಗಿಯೇ ಈ ಮಾತನ್ನು ಹೇಳುತ್ತಿದ್ದೇನೆ. ಒಪ್ಪಿಕೊಳ್ಳದಿದ್ದರೆ ಯುದ್ಧದಲ್ಲಿ ನೇರವಾಗಿ ಹೋಗುವ ಶ್ರೀರಾಮನ ಬಾಣಗಳಿಂದ ಘಾಸಿಗೊಂಡು ನೀನು ಬಂಧು ಬಾಂಧವರ ಸಹಿತ ಪ್ರಾಣಗಳನ್ನು ಬಿಡಬೇಕಾದೀತು.॥25॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥39॥