वाचनम्
ಭಾಗಸೂಚನಾ
ಶ್ರೀರಾಮನ ಶಕ್ತಿಯ ವಿಷಯವಾಗಿ ಮಾರೀಚನು ತನ್ನ ಅನುಭವವನ್ನು ತಿಳಿಸುತ್ತಾ ರಾಮನ ವಿಷಯದಲ್ಲಿ ಅಪರಾಧವನ್ನೆಸಗದಿರುವಂತೆ ರಾವಣನಿಗೆ ಹೇಳಿದುದು
ಮೂಲಮ್ - 1
ಕದಾಚಿದಪ್ಯಹಂ ವೀರ್ಯಾತ್ ಪರ್ಯಟನ್ ಪೃಥಿವೀಮಿಮಾಮ್ ।
ಬಲಂ ನಾಗಸಹಸ್ರಸ್ಯ ಧಾರಯನ್ಪರ್ವತೋಪಮಃ ॥
ಅನುವಾದ
ಹಿಂದೊಮ್ಮೆ ನಾನು ನನ್ನ ಪರಾಕ್ರಮಕ್ಕೆ ಅಧೀನನಾಗಿ ಪರ್ವತದಂತಹ ಶರೀರವನ್ನು ಧರಿಸಿಕೊಂಡು ಈ ಪಥ್ವಿಯ ಪ್ರದಕ್ಷಿಣೆ ಮಾಡುತ್ತಿದೆ. ಆಗ ನನ್ನಲ್ಲಿ ಒಂದು ಸಾವಿರ ಆನೆಗಳ ಬಲವಿತ್ತು.॥1॥
ಮೂಲಮ್ - 2½
ನೀಲಜೀಮೂತಸಂಕಾಶಸ್ತಪ್ತಕಾಂಚನಕುಂಡಲಃ ।
ಭಯಂ ಲೋಕಸ್ಯ ಜನಯನ್ ಕಿರೀಟೀ ಪರಿಘಾಯುಧಃ ॥
ವ್ಯಚರನ್ ದಂಡಕಾರಣ್ಯಮುಷಿಮಾಂಸಾನಿ ಭಕ್ಷಯನ್ ।
ಅನುವಾದ
ನೀಲಮೇಘದಂತೆ ತನ್ನ ಶರೀರ ಕಪ್ಪಾಗಿತ್ತು. ನಾನು ಕಿವಿಗಳಲ್ಲಿ ಅಚ್ಚ ಚಿನ್ನದ ಕುಂಡಲಗಳನ್ನು, ತಲೆಯಲ್ಲಿ ಕಿರೀಟವನ್ನು, ಕೈಯಲ್ಲಿ ಪರಿಘವನ್ನು, ಧರಿಸಿದ್ದೆ, ನಾನು ಋಷಿಗಳ ಮಾಂಸವನ್ನು ತಿನ್ನುತ್ತಾ ಜಗತ್ತನ್ನೇ ಭಯಗೊಳಿಸುತ್ತಾ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದೆ.॥2½॥
ಮೂಲಮ್ - 3½
ವಿಶ್ವಾಮಿತ್ರೋಽಥ ಧರ್ಮಾತ್ಮಾ ಮದ್ವಿತ್ರಸ್ತೋ ಮಹಾಮುನಿಃ ॥
ಸ್ವಯಂ ಗತ್ವಾ ದಶರಥಂ ನರೇಂದ್ರಮಿದಮಬ್ರವೀತ್ ।
ಅನುವಾದ
ಆ ದಿನಗಳಲ್ಲಿ ಧರ್ಮಾತ್ಮಾ ಮಹಾತ್ಮಾ ವಿಶ್ವಾಮಿತ್ರರಿಗೆ ನನ್ನಿಂದ ಬಹಳ ಭಯ ಉಂಟಾಗಿತ್ತು. ಅವರು ಸ್ವತಃ ದಶರಥ ರಾಜನ ಬಳಿಗೆ ಹೋಗಿ ಅವನಲ್ಲಿ ಹೀಗೆ ಹೇಳಿದರು.॥3½॥
ಮೂಲಮ್ - 4½
ಅಯಂ ರಕ್ಷತು ಮಾಂ ರಾಮಃ ಪರ್ವಕಾಲೇ ಸಮಾಹಿತಃ ॥
ಮಾರೀಚಾನ್ಮೇ ಭಯಂ ಘೋರಂ ಸಮುತ್ಪನ್ನಂ ನರೇಶ್ವರ ।
ಅನುವಾದ
ನರೇಶ್ವರನೇ! ನನಗೆ ಮಾರೀಚನೆಂಬ ರಾಕ್ಷಸನಿಂದ ಘೋರ ಭಯ ಉಂಟಾಗಿದೆ. ಆದ್ದರಿಂದ ಈ ರಾಮನು ನನ್ನ ಜೊತೆಗೆ ಬರಲಿ ಹಾಗೂ ಪರ್ವದಿನದಲ್ಲಿ ಏಕಾಗ್ರಚಿತ್ತನಾಗಿ ನನ್ನನ್ನು ರಕ್ಷಿಸಲಿ.॥4½॥
ಮೂಲಮ್ - 5½
ಇತ್ಯೇವಮುಕ್ತೋ ಧರ್ಮಾತ್ಮಾರಾಜಾ ದಶರಥಸ್ತದಾ ॥
ಪ್ರತ್ಯುವಾಚ ಮಹಾಭಾಗಂ ವಿಶ್ವಾಮಿತ್ರಂ ಮಹಾಮುನಿಮ್ ।
ಅನುವಾದ
ಮುನಿಯು ಹೀಗೆ ಹೇಳಿದಾಗ ಧರ್ಮಾತ್ಮಾ ದಶರಥನು ಮಹಾಭಾಗ ಮಹಾಮುನಿ ವಿಶ್ವಾಮಿತ್ರರು ಇಂತೆಂದರು.॥5½॥
ಮೂಲಮ್ - 6
ಊನ ದ್ವಾದಶವರ್ಷೋಽಯಮಕೃತಾಸ್ತ್ರಶ್ಚ ರಾಘವಃ ॥
ಮೂಲಮ್ - 7½
ಕಾಮಂ ತು ಮಮ ತತ್ಸೈನ್ಯಂ ಮಹಾ ಸಹ ಗಮಿಷತಿ ।
ಬಲೇನ ಚತುರಂಗೇಣ ಸ್ವಯಮೇತ್ಯ ನಿಶಾಚರಮ್ ॥
ವಧಿಷ್ಯಾಮಿ ಮುನಿಶ್ರೇಷ್ಠ ಶತ್ರುಂ ತವ ಯಥೇಪ್ಸಿತಮ್ ।
ಅನುವಾದ
ಮುನಿಶ್ರೇಷ್ಠರೇ! ರಘುಕುಲನಂದನ ರಾಮನ ವಯಸ್ಸು ಈಗ ಹನ್ನೆರಡು ವರ್ಷಗಳಿಗಿಂತ ಕಡಿಮೆಯೇ ಇದೆ. ಇವನಿಗೆ ಶಸ್ತ್ರಾಸ್ತ್ರಗಳ ಪ್ರಯೋಗವೂ ಸರಿಯಾಗಿ ತಿಳಿದಿಲ್ಲ. ನೀವು ಬಯಸಿದರೆ ನಿಮ್ಮೊಂದಿಗೆ ನನ್ನ ಸೈನ್ಯ ಅಲ್ಲಿಗೆ ಬರುವುದು, ನಾನೇ ಸ್ವತಃ ಚತುರಂಗಿಣಿ ಸೈನ್ಯದೊಂದಿಗೆ ಬಂದು ನಿಮ್ಮಿಚ್ಛೆಗನುಸಾರ ಆ ಶತ್ರುರೂಪೀ ನಿಶಾಚರನನ್ನು ವಧಿಸುವೆನು.॥6-7½॥
ಮೂಲಮ್ - 8½
ಏವಮುಕ್ತಃ ಸ ತು ಮುನೀ ರಾಜಾನಮಿದಮಬ್ರವೀತ್॥
ರಾಮಾನ್ನಾನ್ಯದ್ಬಲಂ ಲೋಕೇ ಪರ್ಯಾಪ್ತಂ ತಸ್ಯ ರಕ್ಷಸಃ ।
ಅನುವಾದ
ರಾಜನು ಹೀಗೆ ಹೇಳಿದಾಗ ಮುನಿಯು ಅವನಲ್ಲಿ ಹೇಳಿದರು - ‘ಆ ರಾಕ್ಷಸನಿಗಾಗಿ ಶ್ರೀರಾಮನಲ್ಲದೆ ಬೇರೆ ಯಾರ ಶಕ್ತಿಯೂ ಸಾಕಾಗದು.॥8½॥
ಮೂಲಮ್ - 9½
ದೇವತಾನಾಮಪಿ ಭವಾನ್ ಸಮರೇಷ್ವಭಿಪಾಲಕಃ ॥
ಆಸೀತ್ತವ ಕೃತಂ ಕರ್ಮ ತ್ರಿಲೋಕ ವಿದಿತಂ ನೃಪ ।
ಅನುವಾದ
ರಾಜನೇ! ನೀನು ಸಮರಾಂಗಣದಲ್ಲಿ ದೇವತೆಗಳನ್ನು ರಕ್ಷಿಸಲು ಸಮರ್ಥನಿದ್ದೀಯೆ, ಇದರಲ್ಲಿ ಸಂದೇಹವೇ ಇಲ್ಲ. ನೀನು ಮಾಡಿದ ಮಹತ್ಕಾರ್ಯವು ಮೂರು ಲೋಕಗಳಲ್ಲಿ ಪ್ರಸಿದ್ಧವಾಗಿದೆ.॥9½॥
ಮೂಲಮ್ - 10
ಕಾಮಮಸ್ತಿ ಮಹತ್ ಸೈನ್ಯಂ ತಿಷ್ಠತ್ವಿಹ ಪರಂತಪ ॥
ಮೂಲಮ್ - 11
ಬಾಲೋಽಪ್ಯೇಷ ಮಹಾತೇಜಾಃ ಸಮರ್ಥಸ್ತಸ್ಯ ನಿಗ್ರಹೇ ।
ಗಮಿಷ್ಯೇ ರಾಮಮಾದಾಯ ಸ್ವಸ್ತಿ ತೇಽಸ್ತು ಪರಂತಪ ॥
ಅನುವಾದ
ಪರಂತಪ ನರೇಶನೇ! ನಿನ್ನ ಬಳಿ ಇರುವ ವಿಶಾಲ ಸೈನ್ಯವು ನೀನು ಇಚ್ಛಿಸಿದರೆ ಇಲ್ಲೇ ಇರಲಿ, ನೀನೂ ಇಲ್ಲೇ ಇರು. ಮಹಾತೇಜಸ್ವೀ ಶ್ರೀರಾಮನು ಬಾಲಕನಾಗಿದ್ದರೂ ಆ ರಾಕ್ಷಸನ ದಮನಮಾಡುವುದರಲ್ಲಿ ಸಮರ್ಥನಾಗಿದ್ದಾನೆ. ಆದ್ದರಿಂದ ನಾನು ಶ್ರೀರಾಮನನ್ನೇ ಜೊತೆಗೆ ಕರೆದುಕೊಂಡು ಹೋಗುವೆನು. ನಿನಗೆ ಮಂಗಳವಾಗಲಿ.॥10-11॥
ಮೂಲಮ್ - 12
ಇತ್ಯೇವಮುಕ್ತ್ವಾ ಸ ಮುನಿಸ್ತಮಾದಾಯ ನೃಪಾತ್ಮಜಮ್ ।
ಜಗಾಮ ಪರಮಪ್ರೀತೋ ವಿಶ್ವಾಮಿತ್ರಃ ಸ್ವಮಾಶ್ರಮಮ್ ॥
ಮೂಲಮ್ - 13
ತಂ ತದಾ ದಂಡಕಾರಣ್ಯೇ ಯಜ್ಞಮುದ್ದಿಶ್ಯ ದೀಕ್ಷಿತಮ್ ।
ಬಭೂವೋಪಸ್ಥಿತೋ ರಾಮಶ್ಚಿತ್ರಂ ವಿಸ್ಫಾರಯನ್ಧನುಃ ॥
ಅನುವಾದ
ಹೀಗೆ ಹೇಳಿ ಲಕ್ಷ್ಮಣ ಸಹಿತ ಶ್ರೀರಾಮನನ್ನು ಜೊತೆಗೆ ಕರೆದುಕೊಂಡು ಮಹಾಮುನಿ ವಿಶ್ವಾಮಿತ್ರರು ಬಹಳ ಆನಂದವಾಗಿ ತಮ್ಮ ಆಶ್ರಮಕ್ಕೆ ಹೋಗಿ ಅವರು ಯಜ್ಞಕ್ಕಾಗಿ ದೀಕ್ಷಾಬದ್ಧರಾದರು. ಶ್ರೀರಾಮನು ತನ್ನ ಅದ್ಭುತ ಧನುಷ್ಟಂಕಾರ ಮಾಡುತ್ತಾ ಅವರ ರಕ್ಷಣೆಗಾಗಿ ಬಳಿಯಲ್ಲೇ ನಿಂತುಕೊಂಡನು.॥12-13॥
ಮೂಲಮ್ - 14
ಅಜಾತವ್ಯಂಜನಃ ಶ್ರೀಮಾನ್ಬಾಲಃ ಶ್ಯಾಮಃ ಶುಭೇಕ್ಷಣಃ ।
ಏಕವಸ್ತ್ರಧರೋ ಧನ್ವೀ ಶಿಖೀ ಕನಕಮಾಲಯಾ ॥
ಅನುವಾದ
ಆಗ ಶ್ರೀರಾಮನು ಇನ್ನೂ ತರುಣನಾಗಿರಲಿಲ್ಲ. ಅವನು ಓರ್ವ ಶೋಭಾಶಾಲೀ ಬಾಲಕನಂತೆ ಕಂಡುಬರುತ್ತಿದ್ದನು. ಶ್ಯಾಮಲಾಂಗನಾದ ಅವನ ಕಣ್ಣುಗಳು ವಿಶಾಲವಾಗಿ ಸುಂದರವಾಗಿದ್ದವು. ಅವನು ಒಂದು ವಸ್ತ್ರ ಧರಿಸಿದ್ದು, ಕೈಯಲ್ಲಿ ಧನುಸ್ಸನ್ನು ಹಿಡಿದುಕೊಂಡು, ಸುಂದರ ಶಿಖೆ ಮತ್ತು ಚಿನ್ನದ ಹಾರದಿಂದ ಸುಶೋಭಿತನಾಗಿದ್ದನು.॥14॥
ಮೂಲಮ್ - 15
ಶೋಭಯನ್ ದಂಡಕಾರಣ್ಯಂ ದೀಪ್ತೇನ ಸ್ವೇನ ತೇಜಸಾ ।
ಅದೃಶ್ಯತ ತದಾರಾಮೋ ಬಾಲಚಂದ್ರ ಇವೋದಿತಃ ॥
ಅನುವಾದ
ಆಗ ತನ್ನ ಉದ್ದೀಪ್ತ ತೇಜದಿಂದ ದಂಡಕಾರಣ್ಯದ ಶೋಭೆಯನ್ನು ಹೆಚ್ಚಿಸುತ್ತಾ ಶ್ರೀರಾಮಚಂದ್ರನು ಆಗಲೇ ಉದಿಸಿದ ಬಾಲಚಂದ್ರನಂತೆ ಕಾಣುತ್ತಿದ್ದನು.॥15॥
ಮೂಲಮ್ - 16
ತತೋಽಹಂ ಮೇಘಸಂಕಾಶಸ್ತಪ್ತಕಾಂಚನಕುಂಡಲಃ ।
ಬಲೀ ದತ್ತವರೋ ದರ್ಪಾದಾಜಗಾಮಾಶ್ರಮಾಂತರಮ್ ॥
ಅನುವಾದ
ಇತ್ತ ನಾನೂ ಕೂಡ ಮೇದಂತೆ ಕಪ್ಪಾದ ಶರೀರದಿಂದ ದರ್ಪದೊಂದಿಗೆ ಆಶ್ರಮದೊಳಗೆ ನುಗ್ಗಿದೆ. ನನ್ನ ಕಿವಿಗಳಲ್ಲಿ ಕಾದ ಚಿನ್ನದ ಕುಂಡಲಗಳು ಓಲಾಡುತ್ತಿದ್ದವು. ನಾನು ಬಲವಂತನಾಗಿಯೇ ಇದ್ದೆ, ‘ದೇವತೆಗಳೂ ನನ್ನನ್ನು ಕೊಲ್ಲಲಾರರು’ ಎಂಬ ವರವೂ ನನಗೆ ದೊರಕಿತ್ತು.॥16॥
ಮೂಲಮ್ - 17
ತೇನ ದೃಷ್ಟಃ ಪ್ರವಿಷ್ಟೋಽಹಂ ಸಹಸೈವೋದ್ಯತಾಯುಧಃ ।
ಮಾಂ ತು ದೃಷ್ಟ್ವಾ ಧನುಃ ಸಜ್ಯಮಸಂಭ್ರಾಂತಶ್ಚಕಾರ ಹ ॥
ಅನುವಾದ
ಒಳಗೆ ಪ್ರವೇಶಿಸುತ್ತಲೇ ಶ್ರೀರಾಮಚಂದ್ರನ ದೃಷ್ಟಿ ನನ್ನ ಮೇಲೆ ಬಿತ್ತು. ನನ್ನನ್ನು ನೋಡುತ್ತಲೇ ಅವನು ಕೂಡಲೇ ಧನುಸ್ಸನ್ನೆತ್ತಿ ಯಾವ ಗಾಬರಿಪಡದೆ ಧನುಸ್ಸಿಗೆ ಹೆದೆಯೇರಿಸಿದನು.॥17॥
ಮೂಲಮ್ - 18
ಅವಜಾನನ್ನ ಹಂ ಮೋಹಾದ್ ಬಾಲೋಽಯಮಿತಿ ರಾಘವಮ್ ।
ವಿಶ್ವಾಮಿತ್ರಸ್ಯ ತಾಂ ವೇದಿಮಭ್ಯಧಾವಂ ಕೃತತ್ವರಃ ॥
ಅನುವಾದ
ನಾನು ಮೋಹವಶ ಶ್ರೀರಾಮಚಂದ್ರನನ್ನು ಇವನು ಬಾಲಕನೆಂದು ತಿಳಿದು, ಅವನನ್ನು ನಿಂದಿಸುತ್ತಾ ಅತಿವೇಗದಿಂದ ವಿಶ್ವಾಮಿತ್ರರ ಯಜ್ಞವೇದಿಯ ಕಡೆಗೆ ಧಾವಿಸಿದೆ.॥18॥
ಮೂಲಮ್ - 19
ತೇನ ಮುಕ್ತಸ್ತತೋ ಬಾಣಃ ಶಿತಃ ಶತ್ರುನಿಬರ್ಹಣಃ ।
ತೇನಾಹಂ ತಾಡಿತಃ ಕ್ಷಿಪ್ತಃ ಸಮುದ್ರೇ ಶತಯೋಜನೇ ॥
ಅನುವಾದ
ಅಷ್ಟರಲ್ಲಿ ಶ್ರೀರಾಮನು ಶತ್ರುವನ್ನು ಸಂಹರಿಸುವಂತಹ ಒಂದು ಬಾಣವನ್ನು ಪ್ರಯೋಗಿಸಿದನು. ಆದರೆ ಆ ಬಾಣದಿಂದ ನಾನು ಸಾಯದೆ ನೂರು ಯೋಜನ ದೂರ ಸಮುದ್ರದಲ್ಲಿ ಬಂದು ಬಿದ್ದೆನು.॥19॥
ಮೂಲಮ್ - 20
ನೇಚ್ಛ ತಾ ತಾತ ಮಾಂ ಹಂತುಂ ತದಾ ವೀರೇಣ ರಕ್ಷಿತಃ ।
ರಾಮಸ್ಯ ಶರವೇಗೇಣ ನಿರಸ್ತೋಽಭ್ರಾಂತಚೇತನಃ ॥
ಮೂಲಮ್ - 21
ಪಾತಿತೋಽಹಂ ತದಾ ತೇನ ಗಂಭೀರೇ ಸಾಗರಾಂಭಸಿ ।
ಪ್ರಾಪ್ಯ ಸಂಜ್ಞಾಂ ಚಿರಾತ್ತಾತ ಲಂಕಾ ಪ್ರತಿ ಗತಃ ಪುರೀಮ್ ॥
ಅನುವಾದ
ಅಯ್ಯಾ! ವೀರ ರಾಮಚಂದ್ರನು ಆಗ ನನ್ನನ್ನು ಕೊಲ್ಲಲು ಬಯಸುತ್ತಿರಲಿಲ್ಲ; ಆದ್ದರಿಂದ ನನ್ನ ಪ್ರಾಣ ಉಳಿಯಿತು. ಅವನ ಬಾಣದ ವೇಗದಿಂದ ನಾನು ಭ್ರಾಂತಚಿತ್ತನಾಗಿ ದೂರಕ್ಕೆ ಎಸೆಯಲ್ಪಟ್ಟು ಸಮುದ್ರದ ಆಳವಾದ ನೀರಿನಲ್ಲಿ ಬಿದ್ದೆ. ಅಯ್ಯಾ! ಮತ್ತೆ ದೀರ್ಘಕಾಲದ ಬಳಿಕ ನಾನು ಎಚ್ಚರಗೊಂಡು ಲಂಕೆಗೆ ಬಂದೆ.॥20-21॥
ಮೂಲಮ್ - 22
ಏವಮಸ್ಮಿತದಾ ಮುಕ್ತಃ ಸಹಾಯಾಸ್ತೇ ನಿಪಾತಿತಾಃ ।
ಅಕೃತಾಸ್ತ್ರೇಣ ರಾಮೇಣ ಬಾಲೇನಾಕ್ಲಿಷ್ಟ ಕರ್ಮಣಾ ॥
ಅನುವಾದ
ಈ ಪ್ರಕಾರ ಆಗ ಸಾವಿನಿಂದ ಬದುಕಿದೆ. ಆಯಾಸವಿಲ್ಲದೆ ಕರ್ಮಮಾಡುವ ಶ್ರೀರಾಮನು ಆಗ ಬಾಲಕನಾಗಿದ್ದನು ಹಾಗೂ ಅಸ್ತ್ರ ಪ್ರಯೋಗದ ಅಭ್ಯಾಸವು ಪೂರ್ಣವಾಗದಿದ್ದರೂ ಅವನು ನನ್ನ ಜೊತೆಗೆ ಬಂದಿರುವ ಸಹಾಯಕರೆಲ್ಲರನ್ನು ಕೊಂದು ಕಳೆದನು.॥22॥
ಮೂಲಮ್ - 23
ತನ್ಮಯಾ ವಾರ್ಯಮಾಣಸ್ತುಂ ಯದಿ ರಾಮೇಣ ವಿಗ್ರಹಮ್ ।
ಕರಿಷ್ಯಸ್ಯಾಪದಂ ಘೋರಾಂ ಕ್ಷಿಪ್ರಂ ಪ್ರಾಪ್ಯ ನ ಶಿಷ್ಯಸಿ ॥
ಅನುವಾದ
ಅದಕ್ಕಾಗಿ ನಾನು ತಡೆದರೂ ನೀನು ಶ್ರೀರಾಮನೊಂದಿಗೆ ವಿರೋಧ ಮಾಡಿದರೆ ಬೇಗನೇ ಘೋರ ಆಪತ್ತಿನಲ್ಲಿ ಬೀಳುವೆ ಮತ್ತು ಕೊನೆಗೆ ನಿನ್ನ ಜೀವನವೂ ಕೊನೆಗೊಳ್ಳುವುದು.॥23॥
ಮೂಲಮ್ - 24
ಕ್ರೀಡಾರತಿವಿಧಿಜ್ಞಾನಾಂ ಸಮಾಜೋತ್ಸವಶಾಲಿನಾಮ್ ।
ರಕ್ಷಸಾಂ ಚೈವ ಸಂತಾಪಮನರ್ಥಂ ಚಾಹರಿಷ್ಯಸಿ ॥
ಅನುವಾದ
ಭೋಗ ವಿಲಾಸ, ಆಟ - ವಿನೋದಗಳನ್ನು ಬಲ್ಲ, ಸಾಮಾಜಿಕ ಉತ್ಸವಗಳನ್ನು ನೋಡಿ ಸಂತೋಷಪಡುವ ರಾಕ್ಷಸರಿಗಾಗಿ ನೀನು ಸಂತಾಪ ಮತ್ತು ಸಾವನ್ನು ಕರೆದುಕೊಳ್ಳುವೆ.॥24॥
ಮೂಲಮ್ - 25
ಹರ್ಮ್ಯಪ್ರಾಸಾದಸಂಬಾಧಾಂ ನಾನಾರತ್ನ ವಿಭೂಷಿತಾಮ್ ।
ದ್ರಕ್ಷ್ಯಸಿ ತ್ವಂ ಪುರೀಂ ಲಂಕಾಂ ವಿನಷ್ಟಾಂ ಮೈಥಿಲೀಕೃತೇ ॥
ಅನುವಾದ
ಮಿಥಿಲೇಶಕುಮಾರಿ ಸೀತೆಗಾಗಿ, ಧನಿಕರ ಭವನಗಳಿಂದ ಹಾಗೂ ರಾಜಭವನಗಳಿಂದ ತುಂಬಿದ ನಾನಾ ರತ್ನಗಳಿಂದ ವಿಧೂಷಿತ ಲಂಕೆಯ ವಿನಾಶವನ್ನು ನೀನು ಕಣ್ಣಾರೆ ನೋಡುವೆ.॥25॥
ಮೂಲಮ್ - 26
ಅಕುರ್ವಂತೋಽಪಿ ಪಾಪಾನಿ ಶುಚಯಃ ಪಾಪಸಂಶ್ರಯಾತ್ ।
ಪರಪಾಪೈರ್ವಿನಶ್ಯಂತಿ ಮತ್ಸ್ಯಾ ನಾಗಹ್ರದೇ ಯಥಾ ॥
ಅನುವಾದ
ಆಚಾರ-ವಿಚಾರದಿಂದ ಶುದ್ಧರಾದ, ಪಾಪ, ಅಪರಾಧಮಾಡದ ಜನರೂ ಕೂಡ ಪಾಪಿಗಳ ಸಂಪರ್ಕಕ್ಕೆ ಒಳಗಾದರೆ ಬೇರೆಯವರ ಪಾಪದಿಂದ ನಾಶವಾಗುತ್ತಾರೆ. ಸರ್ಪಗಳಿರುವ ಸರೋವರದಲ್ಲಿ ವಾಸಿಸುವ ಮೀನುಗಳೂ ಆ ಸರ್ಪದೊಂದಿಗೆ ಕೊಲ್ಲಲ್ಪಡುತ್ತವೆ.॥26॥
ಮೂಲಮ್ - 27
ದಿವ್ಯಚಂದನದಿಗ್ಧಾಂಗಾನ್ ದಿವ್ಯಾಭರಣ ಭೂಷಿತಾನ್ ।
ದ್ರಕ್ಷ್ಯಸ್ಯಭಿಹತಾನ್ ಭೂಮೌ ತವ ದೋಷಾತ್ತು ರಾಕ್ಷಸಾನ್ ॥
ಅನುವಾದ
ದಿವ್ಯ ಚಂದನದಿಂದ ಚರ್ಚಿತವಾದ ಶರೀರದಿಂದ ಕೂಡಿದ, ದಿವ್ಯಾಭರಣಗಳಿಂದ ಅಲಂಕೃತರಾದ ರಾಕ್ಷಸರು ನಿನ್ನ ಅಪರಾಧದಿಂದ ಸತ್ತುಹೋಗಿ ಭೂಮಿಯಲ್ಲಿ ಬೀಳುವುದನ್ನು ನೀನು ನೋಡುವೆ.॥27॥
ಮೂಲಮ್ - 28
ಹೃತದಾರಾನ್ಸದಾರಾಂಶ್ಚ ದಶ ವಿದ್ರವತೋ ದಿಶಃ ।
ಹತಶೇಷಾನಶರಣಾನ್ದ್ರಕ್ಷ್ಯಸಿ ತ್ವಂ ನಿಶಾಚರಾನ್ ॥
ಅನುವಾದ
ಎಷ್ಟೋ ನಿಶಾಚರರ ಸ್ತ್ರೀಯರ ಅಪಹರಣವಾಗಿರುವುದನ್ನೂ, ಕೆಲವರ ಪತ್ನಿಯರು ಜೊತೆಯಲ್ಲಿದ್ದರೂ ಅವರು ಯುದ್ಧದಿಂದ ಬದುಕುಳಿದು ಅಸಹಾಯಕ ಸ್ಥಿತಿಯಲ್ಲಿ ಹತ್ತು ದಿಕ್ಕುಗಳಿಗೂ ಓಡಿ ಹೋಗುವುದನ್ನೂ ನೀನು ನೋಡುವೆ.॥28॥
ಮೂಲಮ್ - 29
ಶರಜಾಲಪರಿಕ್ಷಿಪ್ತಾಮಗ್ನಿಜ್ವಾಲಾಸಮಾವೃತಾಮ್ ।
ಪ್ರದಗ್ಧಭವನಾಂ ಲಂಕಾಂ ದ್ರಕ್ಷ್ಯಸಿ ತ್ವಮಸಂಶಯಮ್ ॥
ಅನುವಾದ
ಲಂಕೆಯಲ್ಲಿ ಬಾಣಗಳ ಬಲೆಯೇ ಹರಡಿಕೊಂಡಿದೆ, ಅದು ಬೆಂಕಿಯ ಜ್ವಾಲೆಗಳಿಂದ ಆವರಿಸಿಕೊಂಡು ಪ್ರತಿಯೊಂದು ಮನೆಯು ಸುಟ್ಟು ಬೂದಿಯಾಗಿರುವುದನ್ನು ನೀನು ಕಣ್ಣಾರೆ ನೋಡುವೆ.॥29॥
ಮೂಲಮ್ - 30
ಪರದಾರಾಭಿಮರ್ಶಾತ್ತು ನಾನ್ಯತ್ಪಾಪತರಂ ಮಹತ್ ।
ಪ್ರಮದಾನಾಂ ಸಹಸ್ರಾಣಿ ತವ ರಾಜನ್ಪರಿಗ್ರಹೇ ॥
ಮೂಲಮ್ - 31
ಭವ ಸ್ವದಾರನಿರತಃ ಸ್ವಕುಲಂ ರಕ್ಷ ರಾಕ್ಷಸಾನ್ ।
ಮಾನಂ ವೃದ್ಧಿಂ ಚ ರಾಜ್ಯಂ ಚ ಜೀವಿತಂ ಚೇಷ್ಟಮಾತ್ಮನಃ ॥
ಅನುವಾದ
ರಾಜನೇ! ಪರಸ್ತ್ರೀಯ ಸಂಸರ್ಗದಂತಹ ಮಹಾಪಾಪ ಬೇರೊಂದಿಲ್ಲ. ನಿನ್ನ ಅಂತಃಪುರದಲ್ಲಿ ಸಾವಿರಾರು ಯುವತಿ, ಸ್ತ್ರೀಯರು ಇದ್ದಾರೆ, ಆ ತನ್ನ ಸ್ತ್ರೀಯರಲ್ಲೇ ಅನುರಾಗವಿಡು. ತನ್ನ ಕುಲವನ್ನು ರಕ್ಷಿಸು, ರಾಕ್ಷಸರ ಪ್ರಾಣಗಳನ್ನು ಕಾಪಾಡು. ತನ್ನ ಮಾನ, ಪ್ರತಿಷ್ಠೆ, ಗೌರವ, ಉನ್ನತಿ, ರಾಜ್ಯ ಮತ್ತು ಪ್ರಿಯ ಜೀವನವನ್ನು ನಾಶವಾಗದಂತೆ ನೋಡು.॥30-31॥
ಮೂಲಮ್ - 32
ಕಲತ್ರಾಣಿ ಚ ಸೌಮ್ಯಾನಿ ಮಿತ್ರವರ್ಗಂ ತಥೈವ ಚ ।
ಯದೀಚ್ಛಸಿ ಚಿರಂ ಭೋಕ್ತುಂ ಮಾ ಕೃಥಾ ರಾಮವಿಪ್ರಿಯಮ್ ॥
ಅನುವಾದ
ನೀನು ನಿನ್ನ ಸುಂದರ ಪತ್ನಿಯರ ಮತ್ತು ಮಿತ್ರರ ಸುಖ ಹೆಚ್ಚುಕಾಲದವರೆಗೆ ಭೋಗಿಸಲು ಬಯಸುವೆಯಾದರೆ ಶ್ರೀರಾಮನಿಗೆ ಅಪರಾಧ ಮಾಡಬೇಡ.॥32॥
ಮೂಲಮ್ - 33
ನಿವಾರ್ಯಮಾಣಃ ಸುಹೃದಾ ಮಯಾ ಭೃಶಂ
ಪ್ರಸಹ್ಯ ಸೀತಾಂ ಯದಿ ಧರ್ಷಯಿಷ್ಯಸಿ ।
ಗಮಿಷ್ಯಸಿ ಕ್ಷೀಣಬಲಃ ಸಬಾಂಧವೋ
ಯಮಕ್ಷಯಂ ರಾಮಶರಾಸ್ತಜೀವಿತಃ ॥
ಅನುವಾದ
ನಾನು ನಿನ್ನ ಹಿತೈಷಿ ಸುಹೃದ್ ಆಗಿದ್ದೇನೆ. ನಾನು ಪದೇ ಪದೇ ತಡೆಯುತ್ತಿದ್ದರೂ ನೀನು ಹಟದಿಂದ ಸೀತೆಯ ಅಪಹರಣ ಮಾಡಿದರೆ ನಿನ್ನ ಎಲ್ಲ ಸೈನ್ಯನಾಶವಾಗಿ ಹೋದೀತು ಮತ್ತು ನೀನು ಶ್ರೀರಾಮನ ಬಾಣಗಳಿಂದ ತನ್ನ ಪ್ರಾಣಗಳನ್ನು ಕಳೆದುಕೊಂಡು ಬಂಧು-ಬಾಂಧವರೊಂದಿಗೆ ಯಮಲೋಕಕ್ಕೆ ಪ್ರಯಾಣಮಾಡುವೆ.॥33॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮುವತ್ತೆಂಟನೆಯ ಸರ್ಗ ಸಂಪೂರ್ಣವಾಯಿತು. ॥38॥