०३६ सहाय्यार्थं रावणप्रार्थना

वाचनम्
ಭಾಗಸೂಚನಾ

ರಾವಣನು ಶ್ರೀರಾಮನ ಅಪರಾಧವನ್ನು ತಿಳಿಸಿ, ಅವನ ಪತ್ನಿಯಾದ ಸೀತೆಯನ್ನು ಅಪಹರಿಸಲು ಮಾರೀಚನಲ್ಲಿ ಸಹಾಯವನ್ನು ಕೋರಿದುದು

ಮೂಲಮ್ - 1

ಮಾರೀಚ ಶ್ರೂಯತಾಂ ತಾತ ವಚನಂ ಮಮ ಭಾಷತಃ ।
ಆರ್ತೋಽಸ್ಮಿ ಮಮ ಚಾರ್ತಸ್ಯ ಭವಾನ್ ಹಿ ಪರಮಾ ಗತಿಃ ।।

ಅನುವಾದ

ಅಯ್ಯಾ ಮಾರೀಚನೇ! ನಾನು ಎಲ್ಲವನ್ನು ಹೇಳುತ್ತೇನೆ ಕೇಳು. ಈಗ ನಾನು ಬಹಳ ದುಃಖಿತನಾಗಿದ್ದೇನೆ. ಈ ದುಃಖದ ಸ್ಥಿತಿಯಲ್ಲಿ ನನಗೆ ಆಸರೆ ಕೊಡುವವರು ನಿನಗಿಂತ ಬೇರೆ ಯಾರಿದ್ದಾರೆ.॥1॥

ಮೂಲಮ್ - 2

ಜಾನೀಷೇ ತ್ವಂ ಜನಸ್ಥಾನಂ ಭ್ರಾತಾ ಯತ್ರ ಖರೋ ಮಮ ।
ದೂಷಣಶ್ಚ ಮಹಾಬಾಹುಃ ಸ್ವಸಾ ಶೂರ್ಪಣಖಾ ಚ ಮೇ ॥

ಮೂಲಮ್ - 3

ತ್ರಿಶಿರಾಶ್ಚ ಮಹಾಬಾಹೂ ರಾಕ್ಷಸಃ ಪಿಶಿತಾಶನಃ ।
ಅನ್ಯೇ ಚ ಬಹವಃಶೂರಾ ಲಬ್ಧ ಲಕ್ಷಾ ನಿಶಾಚರಾಃ ॥

ಅನುವಾದ

ನನ್ನ ತಮ್ಮ ಖರ, ಮಹಾಬಾಹು ದೂಷಣ, ನಮ್ಮ ತಂಗೀ ಶೂರ್ಪಣಖೆ, ಮಾಂಸಭೋಜೀ ಮಹಾಬಾಹು ರಾಕ್ಷಸ ತ್ರಿಶರ, ಹಾಗೂ ಇನ್ನೂ ಅನೇಕ ಲಕ್ಷವೇಧೀ ಕುಶಲ ಶೂರವೀರ ನಿಶಾಚರರಿದ್ದ ಜನಸ್ಥಾನವನ್ನು ನೀನು ಬಲ್ಲೆ.॥2-3॥

ಮೂಲಮ್ - 4

ವಸಂತಿ ಮನ್ನಿಯೋಗೇನ ಅಧಿವಾಸಂ ಚ ರಾಕ್ಷಸಾಃ ।
ಬಾಧಮಾನಾ ಮಹಾರಣ್ಯೇ ಮುನೀನ್ ಯೇ ಧರ್ಮಚಾರಿಣಃ ॥

ಅನುವಾದ

ಆ ಎಲ್ಲ ರಾಕ್ಷಸರು ನನ್ನ ಆಜ್ಞೆಯಂತೆ ಅಲ್ಲಿ ಇರುತ್ತಿದ್ದರು ಮತ್ತು ಆ ವಿಶಾಲ ವನದಲ್ಲಿ ಧರ್ಮಾಚರಣೆ ಮಾಡುತ್ತಿದ್ದ ಮುನಿಗಳನ್ನು ಸತಾಯಿಸುತ್ತಿದ್ದರು.॥4॥

ಮೂಲಮ್ - 5

ಚತುರ್ದಶ ಸಹಸ್ರಾಣಿ ರಕ್ಷಸಾಂ ಭೀಮಕರ್ಮಣಾಮ್ ।
ಶೂರಾಣಾಂ ಲಬ್ಧ ಲಕ್ಷಾಣಾಂ ಖರಚಿತ್ತಾನುವರ್ತಿನಾಮ್ ॥

ಅನುವಾದ

ಅಲ್ಲಿ ಖರನನ್ನು ಅನುಸರಿಸುವ, ಯುದ್ಧೋತ್ಸಾಹಿಗಳಾದ ಹದಿನಾಲ್ಕು ಸಾವಿರ ಭಯಂಕರ ಕರ್ಮ ಮಾಡುವ ಶೂರ ರಾಕ್ಷಸರು ಇರುತ್ತಿದ್ದರು.॥5॥

ಮೂಲಮ್ - 6

ತೇ ತ್ವಿದಾನೀಂ ಜನಸ್ಥಾನೇ ವಸಮಾನಾ ಮಹಾಬಲಾಃ ।
ಸಂಗತಾಃ ಪರಮಾಯತ್ತಾ ರಾಮೇಣ ಸಹ ಸಂಯುಗೇ ॥

ಅನುವಾದ

ಜನಸ್ಥಾನದಲ್ಲಿ ಇದ್ದ ಎಲ್ಲ ಬಹಾಬಲೀ ರಾಕ್ಷಸರು ಚೆನ್ನಾಗಿ ಯುದ್ಧ ಸನ್ನದ್ಧರಾಗಿ ರಣರಂಗ ದಲ್ಲಿ ಶ್ರೀರಾಮನನ್ನು ಎದುರಿಸಿದರು.॥6॥

ಮೂಲಮ್ - 7½

ನಾನಾಶಸ್ತ್ರ ಪ್ರಹರಣಾಃ ಖರಪ್ರಮುಖರಾಕ್ಷಸಾಃ ।
ತೇನ ಸಂಜಾತರೋಷೇಣ ರಾಮೇಣ ರಣಮೂರ್ಧನಿ ॥
ಅನುಕ್ತಾ ಪುರುಷಂ ಕಿಂಚಿಚ್ಛರೈರ್ವ್ಯಾಪಾರಿತಂ ಧನುಃ ।

ಅನುವಾದ

ಆ ಖರನೇ ಮೊದಲಾದ ರಾಕ್ಷಸರು ನಾನಾ ಪ್ರಕಾರದ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲು ಕುಶಲರಾಗಿದ್ದರು. ಆದರೆ ಯುದ್ಧಮುಖದಲ್ಲಿ ರೋಷಗೊಂಡ ರಾಮನು ಯಾವುದೇ ಕೆಟ್ಟ ಮಾತನ್ನಾಡದೆ ಬಾಣಗಳೊಂದಿಗೆ ಧನುಸ್ಸಿನ ವ್ಯಾಪಾರವನ್ನೇ ಪ್ರಾರಂಭಿಸಿದನು.॥7½॥

ಮೂಲಮ್ - 8

ಚತುರ್ದಶ ಸಹಸ್ರಾಣಿ ರಕ್ಷಸಾಮುಗ್ರತೇಜಸಾಮ್ ॥

ಮೂಲಮ್ - 9½

ನಿಹತಾನಿ ಶರೈದೀಪ್ತೈ ರ್ಮಾನುಷೇಣ ಪದಾತಿನಾ ।
ಖರಶ್ಚ ನಿಹತಃ ಸಂಖ್ಯೇ ದೂಷಣಶ್ಚ ನಿಪಾತಿತಃ ॥
ಹತ್ವಾಶ್ಚ ತ್ರಿಶಿರಸಂ ಚಾಪಿನಿರ್ಭಯಾ ದಂಡಕಾಃ ಕೃತಾಃ ।

ಅನುವಾದ

ಮನುಷ್ಯನಾಗಿದ್ದು ಪಾದಚಾರಿಯಾಗಿದ್ದರೂ ಶ್ರೀರಾಮನು ತನ್ನ ಹೊಳೆಯುತ್ತಿರುವ ಬಾಣಗಳಿಂದ ಭಯಂಕರ ತೇಜವುಳ್ಳ ಹದಿನಾಲ್ಕು ಸಾವಿರ ರಾಕ್ಷಸರನ್ನು ವಿನಾಶಗೊಳಿಸಿದನು. ಅದೇ ಯುದ್ಧದಲ್ಲಿ ಖರ-ದೂಷಣರನ್ನು ಕೊಂದನು. ಜೊತೆಗೆ ತ್ರಿಶಿರಾನನ್ನೂ ವಧಿಸಿ ಅವನು ದಂಡಕಾರಣ್ಯವನ್ನು ಇತರರಿಗೆ ನಿರ್ಭಯನಾಗಿಸಿದನು.॥8-9½॥

ಮೂಲಮ್ - 10½

ಪಿತ್ರಾ ನಿರಸ್ತಃ ಕ್ರುದ್ಧೇನ ಸಭಾರ್ಯಃ ಕ್ಷೀಣಜೀವಿತಃ ॥
ಸ ಹಂತಾ ತಸ್ಯ ಸೈನ್ಯಸ್ಯ ರಾಮಃ ಕ್ಷತ್ರಿಯಪಾಂಸನಃ ।

ಅನುವಾದ

ಅವನ ಪಿತನು ಕುಪಿತನಾಗಿ ಅವನನ್ನು ಪತ್ನೀ ಸಹಿತ ಮನೆಯಿಂದ ಹೊರಹಾಕಿದನು. ಅವನ ಜೀವನ ಕ್ಷೀಣವಾಗುತ್ತಾ ಇದೆ. ಈ ಕ್ಷತ್ರಿಯಕುಲ ಕಲಂಕಿತನೇ ಆ ರಾಕ್ಷಸ ಸೈನ್ಯವನ್ನು ನಾಶಮಾಡಿದನು.॥10½॥

ಮೂಲಮ್ - 11

ಅಶೀಲಃ ಕರ್ಕಶಸ್ತೀಕ್ಷ್ಣೋ ಮೂರ್ಖೋ ಲುಬ್ಧೋಽಜಿತೇಂದ್ರಿಯಃ ॥

ಮೂಲಮ್ - 12

ತ್ಯಕ್ತಾಧರ್ಮಾ ತ್ಮಧರ್ಮಾತ್ಮಾ ಭೂತಾನಾಮಹಿತೇ ರತಃ ।
ಯೇನ ವೈರಂ ವಿನಾರಣ್ಯೇ ಸತ್ತ್ವಮಾಸ್ಥಾಯ ಕೇವಲಮ್ ॥

ಮೂಲಮ್ - 13½

ಕರ್ಣನಾಸಾಪಹಾರೇಣಭಗಿನೀ ಮೇ ವಿರೂಪಿತಾ ।
ಅಸ್ಯ ಭಾರ್ಯಾಂ ಜನಸ್ಥಾನಾತ್ ಸೀತಾಂ ಸುರಸುತೋಪಮಾಮ್ ॥
ಆನಯಿಷ್ಯಾಮಿ ವಿಕ್ರಮ್ಯ ಸಹಾಯಸ್ತತ್ರ ಮೇ ಭವ ।

ಅನುವಾದ

ಅವನು ಶೀಲರಹಿತ, ಕ್ರೂರೀ, ಕರ್ಕಶ ಸ್ವಭಾವವುಳ್ಳ, ಮೂರ್ಖ, ಲೋಭಿ, ಅಜಿತೇಂದ್ರಿಯ, ಧರ್ಮತ್ಯಾಗೀ, ಅಧರ್ಮಾತ್ಮಾ ಮತ್ತು ಸಮಸ್ತ ಪ್ರಾಣಿಗಳ ಅಹಿತದಲ್ಲಿ ತತ್ಪರನಾಗಿದ್ದಾನೆ. ಯಾರು ಕೇವಲ ಬಲವನ್ನಾಶ್ರಯಿಸಿ ವೈರ ವಿರೋಧವಿಲ್ಲದ ನನ್ನ ತಂಗಿಯ ಮೂಗು-ಕಿವಿಗಳನ್ನು ಕತ್ತರಿಸಿದನೋ ಅದರ ಪ್ರತೀಕಾರ ಮಾಡಲಿಕ್ಕಾಗಿಯೇ ನಾನು ಅವನ ದೇವಕನ್ಯೆಯಂತೆ ಸುಂದರವಾದ ಪತ್ನಿ ಸೀತೆಯನ್ನು ಜನಸ್ಥಾನದಿಂದ ಬಲಾತ್ಕಾರವಾಗಿ ಕದ್ದು ತರುವೆನು. ನೀನು ಈ ಕಾರ್ಯದಲ್ಲಿ ಸಹಾಯಕನಾಗು.॥11-13½॥

ಮೂಲಮ್ - 14

ತ್ವಯಾ ಹ್ಯಹಂ ಸಹಾಯೇನ ಪಾರ್ಶ್ವಸ್ಥೇನ ಮಹಾಬಲ ॥

ಮೂಲಮ್ - 15

ಭ್ರಾತೃಭಿಶ್ಚ ಸುರಾನ್ ಸರ್ವಾನ್ ನಾಹಮತ್ರಾಭಿಚಿಂತಯೇ ।
ತತ್ಸಹಾಯೋ ಭವ ತ್ವಂ ಮೇ ಸಮರ್ಥೋ ಹ್ಯಸಿ ರಾಕ್ಷಸ ॥

ಅನುವಾದ

ಮಹಾಬಲಿ ರಾಕ್ಷಸನೇ! ನಿನ್ನಂತಹ ಸಹಾಯಕನು ಪಕ್ಕದಲ್ಲಿರುವುದರಿಂದ ಮತ್ತು ನನ್ನ ತಮ್ಮನ ಬಲದಿಂದಲೇ ನಾನು ಸಮಸ್ತ ದೇವತೆಗಳನ್ನು ಪರಿಗಣಿಸುವುದಿಲ್ಲ. ಆದ್ದರಿಂದ ನೀನು ನನ್ನ ಸಹಾಯಕನಾಗು; ಏಕೆಂದರೆ ನೀನು ನನಗೆ ಸಹಾಯ ಮಾಡಲು ಸಮರ್ಥನಾಗಿರುವೆ.॥14-15॥

ಮೂಲಮ್ - 16

ವೀರ್ಯೇ ಯುದ್ಧೇ ಚ ದರ್ಪೇ ಚ ನ ಹ್ಯಸ್ತಿ ಸದೃಶಸ್ತವ ।
ಉಪಾಯತೋ ಮಹಾನ್ಶೂರೋ ಮಹಾಮಾಯಾ ವಿಶಾರದಃ ॥

ಅನುವಾದ

ಪರಾಕ್ರಮದಲ್ಲಿ, ಯುದ್ಧದಲ್ಲಿ ವೀರೋಚಿತ ಅಭಿಮಾನದಲ್ಲಿ ನಿನಗೆ ಸಮಾನರು ಯಾರೂ ಇಲ್ಲ. ನಾನಾ ಪ್ರಕಾರದ ಉಪಾಯಗಳನ್ನು ತಿಳಿಸುವುದರಲ್ಲಿ ಬಹಳ ಶೂರನಾಗಿರುವೆ. ದೊಡ್ಡ-ದೊಡ್ಡ ಮಾಯೆಗಳನ್ನು ಪ್ರಯೋಗಿಸುವುದರಲ್ಲಿಯೂ ನೀನು ವಿಶೇಷ ಕುಶಲನಾಗಿರುವೆ.॥16॥

ಮೂಲಮ್ - 17

ಏತದರ್ಥಮಹಂ ಪ್ರಾಪ್ತಸ್ತ್ವತ್ಸಮೀಪಂ ನಿಶಾಚರ ।
ಶೃಣು ತತ್ಕರ್ಮ ಸಾಹಾಯ್ಯೇ ಯತ್ಕಾರ್ಯಂ ವಚನಾನ್ಮಮ ॥

ಅನುವಾದ

ನಿಶಾಚರನೇ! ಅದಕ್ಕಾಗಿ ನಾನು ನಿನ್ನ ಬಳಿಗೆ ಬಂದಿರುವೆನು. ನನ್ನ ಸಹಾಯಕ್ಕಾಗಿ ನೀನು ಮಾಡಬೇಕಾದ ಕಾರ್ಯವನ್ನು ಕೇಳ.॥17॥

ಮೂಲಮ್ - 18

ಸೌವರ್ಣಸ್ತ್ವಂ ಮೃಗೋ ಭೂತ್ವಾ ಚಿತ್ರೋ ರಜತಬಿಂದುಭಿಃ ।
ಆಶ್ರಮೇ ತಸ್ಯ ರಾಮಸ್ಯ ಸೀತಾಯಾಃ ಪ್ರಮುಖೇ ಚರ ॥

ಅನುವಾದ

ನೀನು ಬೆಳ್ಳಿಚುಕ್ಕಿಗಳುಳ್ಳ ಬಂಗಾರದ ಜಿಂಕೆಯ ರೂಪಧರಿಸಿ, ಶ್ರೀರಾಮನ ಆಶ್ರಮದಲ್ಲಿ ಸೀತೆಯು ನೋಡುವಂತೆ ಸಂಚರಿಸುತ್ತಾ ಇರು.॥18॥

ಮೂಲಮ್ - 19

ತ್ವಾಂ ತು ನಿಃಸಂಶಯಂ ಸೀತಾ ದೃಷ್ಟ್ವಾತು ಮೃಗರೂಪಿಣಿಮ್ ।
ಗೃಹ್ಯತಾಮಿತಿ ಭರ್ತಾರಂ ಲಕ್ಷ್ಮಣಂ ಚಾಭಿಧಾಸ್ಯತಿ ॥

ಅನುವಾದ

ವಿಚಿತ್ರ ಮೃಗರೂಪನಾದ ನಿನ್ನನ್ನು ನೋಡಿ ಸೀತೆಯು ಅವಶ್ಯವಾಗಿ ತನ್ನ ಪತಿ ರಾಮನಲ್ಲಿ ಹಾಗೂ ಲಕ್ಷ್ಮಣನಲ್ಲಿ ‘ನೀವು ಅದನ್ನು ಹಿಡಿದು ತನ್ನಿ’ ಎಂದು ಹೇಳುವಳು.॥19॥

ಮೂಲಮ್ - 20

ತತಸ್ತಯೋರಪಾಯೇ ತು ಶೂನ್ಯೇ ಸೀತಾಂ ಯಥಾಸುಖಮ್ ।
ನಿರಾಬಾಧೋ ಹರಿಷ್ಯಾಮಿ ರಾಹುಶ್ಚಂದ್ರಪ್ರಭಾಮಿವ ॥

ಅನುವಾದ

ಅವರಿಬ್ಬರೂ ನಿನ್ನನ್ನು ಹಿಡಿಯಲು ದೂರ ಹೊರಟು ಹೋದಾಗ ನಾನು ಯಾವುದೇ ವಿಘ್ನ-ಬಾಧೆಗಳಿಂದ ಬರಿದಾದ ಆಶ್ರಮದಿಂದ ರಾಹುವು ಚಂದ್ರನ ಪ್ರಭೆಯನ್ನು ಅಪಹರಿಸುವಂತೆ ಸೀತೆಯನ್ನು ಸುಖವಾಗಿ ಕದ್ದುಕೊಂಡು ಹೋಗುವೆನು.॥20॥

ಮೂಲಮ್ - 21

ತತಃ ಪಶ್ಚಾತ್ಸುಖಂ ರಾಮೇ ಭಾರ್ಯಾಹರಣಕರ್ಶಿತೇ ।
ವಿಶ್ರಬ್ಧಂ ಪ್ರಹರಿಷ್ಯಾಮಿ ಕೃತಾರ್ಥೇನಾಂತರಾತ್ಮನಾ ॥

ಅನುವಾದ

ಅನಂತರ ಪತ್ನಿಯ ಅಪಹರಣವಾದ್ದರಿಂದ ರಾಮನು ಅತ್ಯಂತ ದುಃಖಿ ಮತ್ತು ದುರ್ಬಲನಾದಾಗ ನಾನು ನಿರ್ಭಯನಾಗಿ ಅವನ ಮೇಲೆ ಕೃತಾರ್ಥಚಿತ್ತದಿಂದ ಪ್ರಹಾರ ಮಾಡುವೆನು.॥21॥

ಮೂಲಮ್ - 22

ತಸ್ಯ ರಾಮಕಥಾಂ ಶ್ರುತ್ವಾ ಮಾರೀಚಸ್ಯ ಮಹಾತ್ಮನಃ ।
ಶುಷ್ಕಂ ಸಮಭವದ್ವಕ್ತ್ರಂ ಪರಿತ್ರಸ್ತೋ ಬಭೂವ ಚ ॥

ಅನುವಾದ

ರಾವಣನಿಂದ ಶ್ರೀರಾಮಚಂದ್ರನ ಕಥೆ ಕೇಳಿ ಮಹಾತ್ಮಾ ಮಾರೀಚನ ಗಂಟಲು ಒಣಗಿ ಗಡ-ಗಡನೆ ನಡುಗಿಹೋದನು.॥22॥

ಮೂಲಮ್ - 23

ಓಷ್ಠೌ ಪರಿಲಿಹನ್ ಶುಷ್ಕೌ ನೇತ್ರೈರನಿಮಿಷೈರಿವ ।
ಮೃತಭೂತ ಇವಾರ್ತಸ್ತು ರಾವಣಂ ಸಮುದೈಕ್ಷತ ॥

ಅನುವಾದ

ಅವನು ರೆಪ್ಪೆ ಮಿಟುಕಿಸದೆ ಒಣಗಿದ ತುಟಿಯನ್ನು ನಾಲಿಗೆಯಿಂದ ಸವರಿದನು. ದುಃಖದಿಂದ ಅವನು ಹೆಣದಂತಾದನು. ಅದೇ ಸ್ಥಿತಿಯಲ್ಲಿ ರಾವಣನನ್ನು ನೋಡಿದನು.॥23॥

ಮೂಲಮ್ - 24

ಸ ರಾವಣಂ ತ್ರಸ್ತ ವಿಷಣ್ಣ ಚೇತಾ
ಮಹಾವನೇ ರಾಮಪರಾಕ್ರಮಜ್ಞಃ ।
ಕೃತಾಂಜಲಿಸ್ತತ್ತ್ವಮುವಾಚ ವಾಕ್ಯಂ
ಹಿತಂ ಚ ತಸ್ಮೈ ಹಿತಮಾತ್ಮನಶ್ಚ॥

ಅನುವಾದ

ಅವನಿಗೆ ಮಹಾವನದಲ್ಲಿ ಹಿಂದೆ ಶ್ರೀರಾಮಚಂದ್ರನ ಪರಾಕ್ರಮದ ಪರಿಚಯವಾಗಿತ್ತು. ಅದಕ್ಕಾಗಿ ಅವನು ಮನಸ್ಸಿನಲ್ಲೇ ಅತ್ಯಂತ ಭಯಗೊಂಡು ದುಃಖಿಯಾಗಿ, ಕೈಮುಗಿದುಕೊಂಡು ರಾವಣನಲ್ಲಿ ಯಥಾರ್ಥವಾದ ಮಾತನ್ನು ಹೇಳಿದನು. ಅವನ ಆ ಮಾತು ರಾವಣನಿಗೆ ಹಾಗೂ ತನಗೂ ಹಿತಕರವಾಗಿತ್ತು.॥24॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತಾರನೆಯ ಸರ್ಗ ಸಂಪೂರ್ಣವಾಯಿತು. ॥36॥