वाचनम्
ಭಾಗಸೂಚನಾ
ರಾವಣನು ಸಮುದ್ರತೀರದಲ್ಲಿದ್ದ ಪ್ರದೇಶಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಪುನಃ ಮಾರೀಚನ ಬಳಿಗೆ ಹೋದುದು
ಮೂಲಮ್ - 1
ತತಃ ಶೂರ್ಪಣಖಾವಾಕ್ಯಂ ತಚ್ಛ್ರುತ್ವಾ ರೋಮಹರ್ಷಣಮ್ ।
ಸಚಿವಾನಭ್ಯನುಜ್ಞಾಯ ಕಾರ್ಯಂ ಬುದ್ಧ್ವಾ ಜಗಾಮ ಹಃ ॥
ಅನುವಾದ
ಶೂರ್ಪಣಖಿಯ ರೋಮಾಂಚಕರ ಮಾತುಗಳನ್ನು ಕೇಳಿ ರಾವಣನು ಮಂತ್ರಿಗಳಲ್ಲಿ ಸಲಹೆ ಪಡೆದು ತನ್ನ ಕರ್ತವ್ಯವನ್ನು ನಿಶ್ಚಯಿಸಿ ಅಲ್ಲಿಂದ ಹೊರಟನು.॥1॥
ಮೂಲಮ್ - 2
ತತ್ ಕಾರ್ಯಮನುಗಮ್ಯಾಂತರ್ಯಥಾವದುಪಲಭ್ಯ ಚ ।
ದೋಷಾಣಾಂ ಚ ಗುಣಾನಾಂ ಚ ಸಂಪ್ರಧಾರ್ಯ ಬಲಾಬಲಮ್ ॥
ಮೂಲಮ್ - 3
ಇತಿ ಕರ್ತವ್ಯಮಿತ್ಯೇವ ಕೃತ್ವಾ ನಿಶ್ಚಯಮಾತ್ಮನಃ ।
ಸ್ಥಿರಬುದ್ಧಿಸ್ತತೋ ರಮ್ಯಾಂ ಯಾನಶಾಲಾಂ ಜಗಾಮ ಹ ॥
ಅನುವಾದ
ಅವನು ಮೊದಲಿಗೆ ಮನಸ್ಸಿನಲ್ಲೇ ಸೀತಾಪಹರಣ ಕಾರ್ಯದ ಕುರಿತು ವಿಚಾರ ಮಾಡಿದನು. ಮತ್ತೆ ಅದರ ಗುಣ-ದೋಷಗಳನ್ನು ಯಥಾವತ್ತಾಗಿ ವಿಮರ್ಶಿಸಿ ಬಲಾಬಲಗಳನ್ನು ನಿಶ್ಚಯಿಸಿದನು. ಕೊನೆಗೆ ಈ ಕಾರ್ಯವನ್ನು ಮಾಡಲೇಬೇಕು ಎಂದು ಗಟ್ಟಿಮಾಡಿದನು. ಈ ಮಾತಿನಲ್ಲಿ ಅವನ ಬುದ್ಧಿ ನೆಟ್ಟುಹೋದಾಗ ಅವನು ರಮಣೀಯ ರಥಶಾಲೆಗೆ ಹೋದನು.॥2-3॥
ಮೂಲಮ್ - 4
ಯಾನಶಾಲಾಂ ತತೋ ಗತ್ವಾ ಪ್ರಚ್ಛನ್ನಂ ರಾಕ್ಷಸಾಧಿಪಃ ।
ಸೂತಂ ಸಂಚೋದಯಾಮಾಸ ರಥಃ ಸಂಯೋಜ್ಯತಾಮಿತಿ ॥
ಅನುವಾದ
ಅಡಗಿಕೊಂಡೇ ರಥಶಾಲೆಗೆ ಹೋಗಿ ರಾಕ್ಷಸರಾಜ ರಾವಣನು ‘ನನ್ನ ರಥವನ್ನು ಹೂಡಿ ಸಿದ್ಧಗೊಳಿಸು’ ಎಂದು ಸಾರಥಿಗೆ ಆಜ್ಞಾಪಿಸಿದನು.॥4॥
ಮೂಲಮ್ - 5
ಏವಮುಕ್ತಃ ಕ್ಷಣೇನೈವ ಸಾರಥಿರ್ಲಘುವಿಕ್ರಮಃ ।
ರಥಂ ಸಂಯೋಜಯಾಮಾಸ ತಸ್ಯಾಭಿಮತಮುತ್ತಮಮ್ ॥
ಅನುವಾದ
ಸಾರಥಿಯು ಶೀಘ್ರವಾಗಿ ಕಾರ್ಯಮಾಡುವುದರಲ್ಲಿ ಕುಶಲನಾಗಿದ್ದನು. ರಾವಣನ ಆಜ್ಞೆಯನ್ನು ಪಡೆದು ಅವನು ಒಂದೇ ಕ್ಷಣದಲ್ಲಿ ಅವನ ಮನಸ್ಸಿಗೆ ಅನುಕೂಲವಾದ ರಥವನ್ನು ಸಿದ್ಧಗೊಳಿಸಿದನು.॥5॥
ಮೂಲಮ್ - 6
ಕಾಮಗಂ ರಥಮಾಸ್ಥಾಯ ಕಾಂಚನಂ ರತ್ನಭೂಷಿತಮ್ ।
ಪಿಶಾಚವದನೈರ್ಯುಕ್ತಂ ಖರೈಃ ಕನಕಭೂಷಣೈಃ ॥
ಅನುವಾದ
ಆ ಸುವರ್ಣಮಯ ರಥವು ಇಚ್ಛಾನುಸಾರ ಸಂಚರಿಸುವುದಾಗಿತ್ತು. ಅದನ್ನು ರತ್ನಗಳಿಂದ ಅಲಂಕರಿಸಲಾಗಿತ್ತು. ಅದಕ್ಕೆ ಚಿನ್ನದ ಒಡವೆಗಳಿಂದ ಅಲಂಕೃತವಾದ ಪಿಶಾಚಿಗಳಂತೆ ಮುಖವುಳ್ಳ ಕತ್ತೆಗಳನ್ನು ಹೂಡಲಾಗಿತ್ತು. ರಾವಣನು ಆ ರಥಾರೂಢನಾಗಿ ಹೊರಟನು.॥6॥
ಮೂಲಮ್ - 7
ಮೇಘಪ್ರತಿಮನಾದೇನ ಸ ತೇನ ಧನದಾನುಜಃ ।
ರಾಕ್ಷಸಾಧಿಪತಿಃ ಶ್ರೀಮಾನ್ ಯಯೌ ನದನದೀಪತಿಮ್ ॥
ಅನುವಾದ
ಆ ರಥವು ಮೇಘಗರ್ಜನೆಯಂತೆ ಶಬ್ದವನ್ನು ಮಾಡುತ್ತಾ ಹೋಗುತ್ತಿತ್ತು. ಅದರ ಮೂಲಕ ಆ ಕುಬೇರನ ತಮ್ಮನಾದ ಶ್ರೀಮಾನ್ ರಾಕ್ಷಸರಾಜ ರಾವಣನು ಸಮುದ್ರ ತೀರಕ್ಕೆ ಬಂದನು.॥7॥
ಮೂಲಮ್ - 8
ಸ ಶ್ವೇತವಾಲವ್ಯಜನಃ ಶ್ವೇತಚ್ಛತ್ರೋ ದಶಾನನಃ ।
ಸ್ನಿಗ್ಧವೈಡೂರ್ಯಸಂಕಾಶಸ್ತಪ್ತಕಾಂಚನಭೂಷಣಃ ।।
ಮೂಲಮ್ - 9
ದಶಗ್ರೀವೋ ವಿಂಶತಿಭುಜೋ ದರ್ಶನೀಯಪರಿಚ್ಛದಃ ।
ತ್ರಿದಶಾರಿರ್ಮುನೀಂದ್ರಘ್ನೋ ದಶಶೀರ್ಷ ಇವಾದ್ರಿರಾಟ್ ॥
ಅನುವಾದ
ಆಗ ಅವನಿಗೆ ಬಿಳಿಯ ಚಾಮರ ಬೀಸುತ್ತಿದ್ದರು. ತಲೆಯ ಮೇಲೆ ಶ್ವೇತಚ್ಛತ್ರವಿತ್ತು. ಅವನ ಅಂಗಕಾಂತಿಯು ಸ್ನಿಗ್ಧ ವೈಡೂರ್ಯಮಣಿಯಂತೆ ನೀಲಿ ಅಥವಾ ಕಪ್ಪಾಗಿತ್ತು. ಅವನು ಪುಟಕ್ಕಿಟ್ಟ ಚಿನ್ನದ ಆಭೂಷಣಗಳಿಂದ ಅಲಂಕೃತನಾಗಿದ್ದನು. ಅವನಿಗೆ ಹತ್ತು ತಲೆ, ಇಪ್ಪತ್ತು ತೋಳುಗಳಿದ್ದವು. ಅವನ ವಸ್ತ್ರಾಭೂಣಾದಿಗಳು ಇತರ ಉಪಕರಣಗಳೂ ನೋಡಲು ಯೋಗ್ಯವಾಗಿದ್ದವು. ದೇವತೆಗಳ ಶತ್ರು ಮತ್ತು ಮುನೀಶ್ವರರ ಹತ್ಯೆಮಾಡುವವನೂ ಆದ ನಿಶಾಚರನು ಹತ್ತು ಶಿಖರವುಳ್ಳ ಪರ್ವತದಂತೆ ಕಂಡುಬರುತ್ತಿದ್ದನು.॥8-9॥
ಮೂಲಮ್ - 10
ಕಾಮಗಂ ರಥಮಾಸ್ಥಾಯ ಶುಶುಭೇ ರಾಕ್ಷಸಾಧಿಪಃ ।
ವಿದ್ಯುನ್ಮಂಡಲವಾನ್ಮೇಘಃ ಸಬಲಾಕ ಇವಾಂಬರೇ ॥
ಅನುವಾದ
ಇಚ್ಛಾನುಸಾರವಾಗಿ ಸಾಗುವ ಆ ರಥದಲ್ಲಿ ಆರೂಢನಾಗಿ ರಾವಣನು ಆಕಾಶದಲ್ಲಿ ಬೆಳ್ವಕ್ಕಿಗಳಿಂದ ಕೂಡಿದ ಮಿಂಚಿನ ಸಮೂಹವುಳ್ಳ ಮೇಘದೋಪಾದಿಯಲ್ಲಿ ಪ್ರಕಾಶಿಸುತ್ತಿದ್ದನು.॥10॥
ಮೂಲಮ್ - 11
ಸಶೈಲಂ ಸಾಗರಾನೂಪಂ ವೀರ್ಯವಾನವಲೋಕಯನ್ ।
ನಾನಾಪುಷ್ಪಲೈರ್ವೃಕ್ಷೈರನುಕೀರ್ಣಂ ಸಹಸ್ರಶಃ ॥
ಮೂಲಮ್ - 12
ಶೀತಮಂಗಲತೋಯಾಭಿಃ ಪದ್ಮನೀಭಿಃ ಸಮಂತತಃ ।
ವಿಶಾಲೈರಾಶ್ರಮಪದೈರ್ವೇದಿಮದ್ಭಿರಲಂಕೃತಮ್ ॥
ಅನುವಾದ
ಪರಾಕ್ರಮಿ ರಾವಣನು ಪರ್ವತಯುಕ್ತ ಸಮುದ್ರ ತೀರಕ್ಕೆ ಹೋಗಿ ಅದರ ಶೋಭೆಯನ್ನು ನೋಡತೊಡಗಿದನು. ಸಾಗರದ ಆ ತಟವು ನಾನಾ ಪ್ರಕಾರದ ಹೂವು-ಹಣ್ಣುಗಳಿಂದ ಕೂಡಿದ ಸಾವಿರಾರು ವೃಕ್ಷಗಳಿಂದ ವ್ಯಾಪಿಸಿತ್ತು. ಎಲ್ಲೆಡೆ ಮಂಗಳಕರ ಶೀತಲ ಜಲತುಂಬಿದ ಪುಷ್ಕರಣಿಗಳು ಹಾಗೂ ವೇದಿಕೆಗಳಿಂದ ಕೂಡಿದ ವಿಶಾಲ ಆಶ್ರಮಗಳು ಆ ಸಿಂಧುತೀರದ ಶೋಭೆ ಹೆಚ್ಚಿಸಿದ್ದವು.॥11-12॥
ಮೂಲಮ್ - 13
ಕದಲ್ಯಟವಿ ಸಂಶೋಭಂ ನಾರಿಕೇಲೋಪಶೋಭಿತಮ್ ।
ಸಾಲೈಸ್ತಾಲೈಸ್ತಮಾಲೈಶ್ಚ ತರುಭಿಶ್ಚ ಸುಪುಷ್ಟಿತೈಃ ॥
ಅನುವಾದ
ಕೆಲವೆಡೆ ಬಾಳೆವನಗಳು ಮತ್ತು ಕೆಲವೆಡೆ ತೆಂಗಿನ ತೋಟಗಳು ಶೋಭಿಸುತ್ತಿದ್ದರು. ಸಾಲ, ತಾಲ, ತಮಾಲ ಹಾಗೂ ಸುಂದರ ಹೂವುಗಳಿಂದ ತುಂಬಿದ ಇತರ ವೃಕ್ಷಗಳೂ ಆ ತೀರವನ್ನು ಅಲಂಕೃತವಾಗಿಸಿದ್ದವು.॥13॥
ಮೂಲಮ್ - 14
ಅತ್ಯಂತನಿಯತಾಹಾರೈಃ ಶೋಭಿತಂ ಪರಮರ್ಷಿಭಿಃ ।
ನಾಗೈಃ ಸುಪಣೈರ್ಗಂಧವೈಃ ಕಿಂ ನರೈಶ್ಚ ಸಹಸ್ರಶಃ ॥
ಅನುವಾದ
ನಿಯಮಿತ ಆಹಾರ ಸೇವಿಸುವ ದೊಡ್ಡ-ದೊಡ್ಡ ಮಹರ್ಷಿಗಳಿಂದ, ನಾಗಗಳಿಂದ ಸುಪರ್ಣ (ಗರುಡ)ಗಳಿಂದ, ಗಂಧರ್ವರಿಂದ ಸಾವಿರಾರು ಕಿನ್ನರರಿಂದ ಆ ಸ್ಥಾನವು ಬಹಳ ಶೋಭಿಸುತ್ತಿತ್ತು.॥14॥
ಮೂಲಮ್ - 15
ಜಿತಕಾಮೈಶ್ಚ ಸಿದ್ಧೈಶ್ಚ ಚಾರಣೈಶ್ಚೋಪಶೋಭಿತಮ್ ।
ಆಜೈರ್ವೈಖಾನಸೈರ್ಮಾಷೈರ್ವಾಲಖಿಲ್ಯೈರ್ಮರೀಚಿಪೈಃ ॥
ಅನುವಾದ
ಕಾಮವಿಜಯೀ ಸಿದ್ಧರಿಂದ, ಚಾರಣರಿಂದ, ಬ್ರಹ್ಮಪುತ್ರರಿಂದ, ವಾನಪ್ರಸ್ಥರಿಂದ, ಮಾಷಗೋತ್ರೋತ್ಪನ್ನ ಮುನಿಗಳಿಂದ, ವಾಲಖಿಲ್ಯ ಮಹಾತ್ಮರಿಂದ, ಕೇವಲ ಸೂರ್ಯಕಿರಣಗಳನ್ನು ಪಾನಮಾಡುವ ತಪಸ್ವಿಗಳಿಂದಲೂ ಆ ಸಾಗರತೀರವು ಸುಶೋಭಿತವಾಗಿತ್ತು.॥15॥
ಮೂಲಮ್ - 16
ದಿವ್ಯಾಭರಣಮಾಲ್ಯಾಭಿರ್ದಿವ್ಯರೂಪಾಭಿರಾವೃತಮ್ ।
ಕ್ರೀಡಾರತವಿಧಿಜ್ಞಾಭಿರಪ್ಸರೋಭಿಃ ಸಹಸ್ರಶಃ ॥
ಮೂಲಮ್ - 17
ಸೇವಿತಂ ದೇವಪತ್ನೀಭಿಃ ಶ್ರೀಮತೀಭಿರುಪಾಸಿತಮ್ ।
ದೇವದಾನವಸಂಘೈಶ್ಚ ಚರಿತಂ ತ್ವಮೃತಾಶಿಭಿಃ ॥
ಅನುವಾದ
ದಿವ್ಯಾಭರಣಗಳನ್ನು, ಪುಷ್ಪ ಮಾಲೆಗಳನ್ನೂ ಧರಿಸಿದ, ಕ್ರೀಡಾ-ವಿಹಾರದ ವಿಧಿಯನ್ನು ಬಲ್ಲ ಸಾವಿರಾರು ದಿವ್ಯರೂಪಿಣಿಯರಾದ ಅಪ್ಸರೆಯರು ಅಲ್ಲಿ ಎಲ್ಲೆಡೆ ವಿಹರಿಸುತ್ತಿದ್ದರು. ಎಷ್ಟೋ ಶೋಭಾಶಾಲಿನಿ ದೇವಾಂಗನೆಯರು ಆ ಸಿಂಧುತಟವನ್ನು ಸೇವಿಸುತ್ತಾ ಕುಳಿತಿದ್ದರು. ಅಮೃತಭೋಜೀ ದೇವತೆಗಳು ಮತ್ತು ದಾನವರ ಸಮೂಹಗಳು ಅಲ್ಲಿ ವಿಚರಿಸುತ್ತಿದ್ದವು.॥16-17॥
(ಶ್ಲೋಕ 18)
ಮೂಲಮ್
ಹಂಸಕ್ರೌಂಚಪ್ಲವಾಕೀರ್ಣಂ ಸಾರಸೈಃ ಸಂಪ್ರಸಾದಿತಮ್ ।
ವೈಡೂರ್ಯಪ್ರಸ್ತರಂ ಸ್ನಿಗ್ಧಂ ಸಾಂದ್ರಂ ಸಾಗರತೇಜಸಾ ॥
ಅನುವಾದ
ಸಾಗರದ ಆ ತೀರವು ಸಮುದ್ರದ ತೇಜದಿಂದ ಅದರ ತರಂಗ ಮಾಲೆಗಳ ಸ್ಪರ್ಶದಿಂದ ಸ್ನಿಗ್ಧ ಹಾಗೂ ಶೀತಲವಾಗಿತ್ತು. ಅಲ್ಲಿ ಹಂಸ ಕ್ರೌಂಚ, ಕಪ್ಪೆಗಳು ಎಲ್ಲೆಡೆ ಇದ್ದವು ಮತ್ತು ಸಾರಸ ಪಕ್ಷಿಗಳು ಅದರ ಶೋಭೆಯನ್ನು ಹೆಚ್ಚಿಸುತ್ತಿದ್ದವು. ಆ ತಟದಲ್ಲಿ ವೈಢೂರ್ಯಮಣಿಯಂತೆ ಶ್ಯಾಮವರ್ಣದ ಪ್ರಸ್ತರಭೂಮಿ ಕಂಡುಬರುತ್ತಿತ್ತು.॥18॥
(ಶ್ಲೋಕ - 19)
ಮೂಲಮ್
ಪಾಂಡುರಾಣಿ ವಿಶಾಲಾನಿ ದಿವ್ಯಮಾಲ್ಯಯುತಾನಿ ಚ ।
ತೂರ್ಯಗೀತಾಭಿಜುಷ್ಟಾನಿ ವಿಮಾನಾನಿ ಸಮಂತತಃ ॥
ಮೂಲಮ್ - 20
ತಪಸಾ ಜಿತಲೋಕಾನಾಂ ಕಾಮಗಾನ್ಯಭಿಸಂಪತನ್ ।
ಗಂಧರ್ವಾಪ್ಸರಸಶ್ಚೈವ ದದರ್ಶ ಧನದಾನುಜಃ ॥
ಅನುವಾದ
ಆಕಾಶಮಾರ್ಗದಿಂದ ಪ್ರಯಾಣಿಸುತ್ತಿದ್ದ ಕುಬೇರನ ತಮ್ಮನಾದ ರಾವಣನು ದಾರಿಯಲ್ಲಿ ಎಲ್ಲೆಡೆ ಅನೇಕ ಶ್ವೇತವರ್ಣದ ವಿಮಾನಗಳನ್ನು, ಗಂಧರ್ವರನ್ನು, ಅಪ್ಸರೆಯನ್ನು ನೋಡಿದನು. ಇಚ್ಛಾನುಸಾರ ಸಂಚರಿಸುವ ಆ ವಿಶಾಲ ವಿಮಾನಗಳು ತಪಸ್ಸಿನಿಂದ ಪರಲೋಕಗಳನ್ನು ಗೆದ್ದಿರುವ ಪುಣ್ಯಾತ್ಮ ಪುರುಷರದ್ದಾಗಿದ್ದವು. ಆ ವಿಮಾನಗಳನ್ನು ಪುಷ್ಪಗಳಿಂದ ಅಲಂಕರಿಸಿದ್ದು, ಅವುಗಳೊಳಗೆ ಗೀತ-ವಾದ್ಯಗಳ ಧ್ವನಿ ಹೊರಹೊಮ್ಮುತ್ತಿತ್ತು.॥19-20॥
ಮೂಲಮ್ - 21
ನಿರ್ಯಾಸರಸಮೂಲಾನಾಂ ಚಂದನಾನಾಂ ಸಹಸ್ರಶಃ ।
ವನಾನಿ ಪಶ್ಯನ್ ಸೌಮ್ಯಾನಿ ಘ್ರಾಣತೃಪ್ತಿಕರಾಣಿ ಚ ॥
ಅನುವಾದ
ಮುಂದೆ ಸಾಗಿದಾಗ ಬುಡದಲ್ಲಿ ಅಂಟಿನ ರಸವಿರುವ ಸಾವಿರಾರು ಚಂದನ ವನಗಳನ್ನು ನೋಡಿದನು. ಅವು ಬಹಳ ಸುಂದರವಾಗಿದ್ದು, ತನ್ನ ಸುಗಂಧದಿಂದ ಮೂಗನ್ನು ತೃಪ್ತಿಪಡಿಸುತ್ತಿದ್ದವು.॥21॥
ಮೂಲಮ್ - 22
ಅಗರೂಣಾಂ ಚ ಮುಖ್ಯಾನಾಂ ವನಾನ್ಯುಪವನಾನಿ ಚ ।
ತಕ್ಕೋಲಾನಾಂ ಚ ಜಾತ್ಯಾನಾಂ ಫಲಾನಾಂ ಚ ಸುಗಂಧಿನಾಮ್ ॥
ಮೂಲಮ್ - 23
ಪುಷ್ಪಾಣಿ ಚ ತಮಾಲಸ್ಯ ಗುಲ್ಮಾನಿ ಮರಿಚಸ್ಯ ಚ ।
ಮುಕ್ತಾನಾಂ ಚ ಸಮೂಹಾನಿ ಶುಷ್ಯಮಾಣಾನಿ ತೀರತಃ ॥
ಮೂಲಮ್ - 24
ಶೈಲಾನಿ ಪ್ರವರಾಂಶ್ಚೈವ ಪ್ರವಾಲನಿಚಯಾಂ ಸ್ತಥಾ ।
ಕಾಂಚನಾನಿ ಚ ಶೃಂಗಾಣಿ ರಾಜತಾನಿ ತಥೈವ ಚ ॥
ಮೂಲಮ್ - 25½
ಪ್ರಸ್ರವಾಣಿ ಮನೋಜ್ಞಾನಿ ಪ್ರಸನ್ನಾನ್ಯದ್ಭುತಾನಿ ಚ ।
ಧನಧಾನ್ಯೋಪಪನ್ನಾನಿ ಸ್ತ್ರೀರತ್ನೈರಾವೃತಾನಿ ಚ ॥
ಹಸ್ತ್ಯಶ್ವರಥಗಾಢಾನಿ ನಗರಾಣಿ ವಿಲೋಕಯನ್ ।
ಅನುವಾದ
ಕೆಲವು ಕಡೆ ಅಗರುವಿನ ವನಗಳಿದ್ದವು. ಕೆಲವು ಕಡೆ ಉತ್ತಮ ಜಾತಿಯ ಸುಗಂಧಿತ ಫಲಗಳುಳ್ಳ ಅಂಕೋಲ ವೃಕ್ಷಗಳ ಉಪವನಗಳಿದ್ದವು. ಕೆಲವು ಕಡೆ ತಮಾಲದ ಹೂವುಗಳು ಅರಳಿದ್ದವು. ಕೆಲವು ಕಡೆ ಕಾಳುಮಣಸಿನ ಬಳ್ಳಿಗಳು ಶೋಭಿಸುತ್ತಿದ್ದವು. ಕೆಲವು ಕಡೆ ಸಮುದ್ರ ತೀರದಲ್ಲಿ ರಾಶಿ-ರಾಶಿಯಾಗಿ ಮುತ್ತುಗಳು ಬಿದ್ದಿದ್ದವು. ಕೆಲವು ಕಡೆ ಶ್ರೇಷ್ಠ ಪರ್ವತ ಮಾಲೆಗಳು, ಕೆಲವುಕಡೆ ಹವಳದ ರಾಶಿಗಳು, ಕೆಲವು ಕಡೆ ಚಿನ್ನ-ಬೆಳ್ಳಿಯ ಶಿಖರಗಳು, ಕೆಲವುಕಡೆ ಸುಂದರ ಅದ್ಭುತ ಮತ್ತು ಸ್ವಚ್ಛ ನೀರಿನ ಝರಿಗಳು ಕಂಡುಬರುತ್ತಿದ್ದವು. ಕೆಲವು ಕಡೆ ಧನ-ಧಾನ್ಯಸಂಪನ್ನ, ಸ್ತ್ರೀರತ್ನಗಳಿಂದ ತುಂಬಿದ, ಆನೆ, ಕುದುರೆ, ರಥಗಳಿಂದ ವ್ಯಾಪ್ತವಾದ ನಗರಗಳು ಕಾಣುತ್ತಿದ್ದವು. ಇವೆಲ್ಲವನ್ನು ನೋಡುತ್ತಾ ರಾವಣನು ಮುಂದರಿದನು.॥22-25½॥
ಮೂಲಮ್ - 26½
ತಂ ಸಮಂ ಸರ್ವತಃ ಸ್ನಿಗ್ಧಂ ಮೃದು ಸಂಸ್ಪರ್ಶಮಾರುತಮ್ ॥
ಅನೂಪೇ ಸಿಂಧುರಾಜಸ್ಯ ದದರ್ಶ ತ್ರಿದಿವೋಪಮಮ್ ।
ಅನುವಾದ
ಅವನು ಪುನಃ ಸ್ವರ್ಗದಂತೆ ಮನೋಹರ, ಎಲ್ಲೆಡೆ ಸಮತಟ್ಟಾದ, ಸ್ನಿಗ್ಧವಾದ ಒಂದು ಪ್ರದೇಶವನ್ನು ನೋಡಿದನು ಅಲ್ಲಿ ವಾಯು ಮಂದ-ಮಂದವಾಗಿ ಬೀಸುತ್ತಿತ್ತು, ಅದರ ಸ್ಪರ್ಶ ಕೋಮಲವಾಗಿತ್ತು.॥26½॥
ಮೂಲಮ್ - 27½
ತತ್ರಾಪಶ್ಯತ್ ಸ ಮೇಘಾಭಂ ನ್ಯಗ್ರೋಧಂ ಮುನಿಭಿರ್ವೃತಮ್ ।
ಸಮಂತಾದ್ಯಸ್ಯ ತಾಃ ಶಾಖಾಃ ಶತಯೋಜನಮಾಯತಾಃ ॥
ಅನುವಾದ
ಅಲ್ಲಿ ಸಾಗರ ತೀರದಲ್ಲಿ ಒಂದು ಆಲದ ಮರವನ್ನು ನೋಡಿದನು, ಅದು ತನ್ನ ನೆರಳಿನಿಂದ ಮೇಚ್ಛಾಯೆಯಂತೆ ಕಾಣುತ್ತಿತ್ತು. ಅದರ ಕೆಳಗೆ ಸುತ್ತಲೂ ಮುನಿಗಳು ನಿವಾಸಿಸುತ್ತಿದ್ದರು. ಅದರ ರೆಂಬೆಗಳು ಸುತ್ತಲೂ ನೂರು ಯೋಜನ ಹರಡಿದ್ದವು.॥27½॥
ಮೂಲಮ್ - 28½
ಯಸ್ಯ ಹಸ್ತಿನಮಾದಾಯ ಮಹಾಕಾಯಂ ಚ ಕಚ್ಛಪಮ್ ।
ಭಕ್ಷಾರ್ಥಂ ಗರುಢಃ ಶಾಖಾಮಾಜಗಾಮ ಮಹಾಬಲಃ ।
ಅನುವಾದ
ಹಿಂದೊಮ್ಮೆ ಮಹಾಬಲಿ ಗರುಡನು ಒಂದು ವಿಶಾಲಕಾಯ ಆನೆ ಮತ್ತು ಆಮೆಗಳನ್ನು ಹಿಡಿದುಕೊಂಡು ಬಂದು ಇದೇ ಮರದ ಮೇಲೆ ಕುಳಿತಿದ್ದನು.॥28½॥
ಮೂಲಮ್ - 29½
ತಸ್ಯ ತಾಂ ಸಹಸಾ ಶಾಖಾಂ ಭಾರೇಣ ಪತಗೋತ್ತಮಃ ॥
ಸುಪರ್ಣಃ ಪರ್ಣಬಹುಲಾಂ ಬಭಂಜಾಥ ಮಹಾಬಲಃ ।
ಅನುವಾದ
ಪಕ್ಷಿಗಳಲ್ಲಿ ಶ್ರೇಷ್ಠ ಮಹಾಬಲಿ ಗರುಡನು ಅಸಂಖ್ಯ ಎಲೆಗಳಿಂದ ಕೂಡಿದ ಆ ಕೊಂಬೆಯನ್ನು ತನ್ನ ಭಾರದಿಂದ ಮುರಿದುಹಾಕಿದ್ದನು.॥29½॥
ಮೂಲಮ್ - 30½
ತತ್ರ ವೈಖಾನಸಾ ಮಾಷಾ ವಾಲಖಿಲ್ಯಾ ಮರೀಚಿಪಾಃ ॥
ಆಜಾ ಬಭೂವುರ್ಧೂಮ್ರಾಶ್ಚ ಸಂಗತಾಃ ಪರಮರ್ಷಯಃ ।
ಅನುವಾದ
ಆ ರೆಂಬೆಯ ಕೆಳಗೆ ಅನೇಕ ವೈಖಾನಸರು, ವಾಷ, ವಾಲಖಿಲ್ಯ, ಮರೀಚಿಪರು (ಸೂರ್ಯಕಿರಣಗಳನ್ನು ಕುಡಿಯುವಂತಹ), ಬ್ರಹ್ಮಪುತರು ಮತ್ತು ಧೂಮ್ರಪಾನೀ ಮಹರ್ಷಿಗಳು ಒಟ್ಟಿಗೆ ಇರುತ್ತಿದ್ದರು.॥30½॥
ಮೂಲಮ್ - 31
ತೇಷಾಂ ದಯಾರ್ಥಂ ಗರುಡಸ್ತಾಂ ಶಾಖಾಂ ಶತಯೋಜನಮ್॥
ಮೂಲಮ್ - 32
ಭಗ್ನಾಮಾದಾಯ ವೇಗೇನ ತೌ ಚೋಭೌ ಗಜಕಚ್ಛಪೌ ।
ಏಕಪಾದೇನ ಧರ್ಮಾತ್ಮಾ ಭಕ್ಷಯಿತ್ವಾ ತದಾಮಿಷಮ್ ॥
ಮೂಲಮ್ - 33
ನಿಷಾದವಿಷಯಂ ಹತ್ವಾ ಶಾಖಯಾ ಪತಗೋತ್ತಮಃ ।
ಪ್ರಹರ್ಷಮತುಲಂ ಲೇಭೇ ಮೋಕ್ಷಯಿತ್ವಾ ಮಹಾಮುನಿಮ್ ॥
ಅನುವಾದ
ಅದರ ಮೇಲೆ ದಯೆ ಬಂದು ಅವರ ಜೀವನದ ರಕ್ಷಣೆಗಾಗಿ ಪಕ್ಷಿಗಳಲ್ಲಿ ಶ್ರೇಷ್ಠ ಧರ್ಮಾತ್ಮಾ ಗರುಡನು ಆ ನೂರು ಯೋಜನ ಉದ್ದವಾದ ತುಂಡಾದ ರೆಂಬೆಯನ್ನು ಮತ್ತು ಆ ಎರಡು ಪ್ರಾಣಿಗಳನ್ನು ವೇಗವಾಗಿ ಒಂದೇ ಕಾಲಿನಿಂದ ಹಿಡಿದು ಕೊಂಡು, ಆಕಾಶದಲ್ಲೇ ಆ ಆನೆ ಮತ್ತು ಆಮೆಗಳ ಮಾಂಸವನ್ನು ತಿಂದು ಎಸೆದಿರುವ ಆ ಕೊಂಬೆಯಿಂದ ನಿಷಾದ ದೇಶದ ಸಂಹಾರ ಮಾಡಿಬಿಟ್ಟನು. ಆಗ ಹಿಂದೆ ಹೇಳಿದ ಮಹಾ ಮುನಿಗಳನ್ನು ಮೃತ್ಯುವಿನಿಂದ ಕಾಪಾಡಿದ್ದರಿಂದ ಗರುಡನಿಗೆ ಅನುಪಮ ಹರ್ಷಪ್ರಾಪ್ತವಾಯಿತು.॥31-33॥
ಮೂಲಮ್ - 34
ಸ ತು ತೇನ ಪ್ರಹರ್ಷೇಣ ದ್ವಿಗುಣೀಕೃತವಿಕ್ರಮಃ ।
ಅಮೃತಾನಯನಾರ್ಥಂ ವೈ ಚಕಾರ ಮತಿಮಾನ್ಮತಿಮ್ ॥
ಅನುವಾದ
ಆ ಮಹಾ ಹರ್ಷದಿಂದ ಬುದ್ಧಿವಂತ ಗರುಡನ ಪರಾಕ್ರಮ ಇಮ್ಮಡಿಯಾಯಿತು ಹಾಗೂ ಅವನು ಅಮೃತವನ್ನು ತರಲಿಕ್ಕಾಗಿ ನಿಶ್ಚಯಿಸಿದನು.॥34॥
ಮೂಲಮ್ - 35
ಅಯೋಜಾಲಾನಿ ನಿರ್ಮಥ್ಯ ಭಿತ್ತ್ವಾ ರತ್ನ ಗೃಹಂ ವರಮ್ ।
ಮಹೇಂದ್ರಭವನಾದ್ ಗುಪ್ತಮಾಜಹಾರಾಮೃತಂ ತತಃ ॥
ಅನುವಾದ
ಅನಂತರ ಇಂದ್ರಲೋಕಕ್ಕೆ ಹೋಗಿ ಅವನು ಇಂದ್ರಭವನದ ಕಬ್ಬಿಣದ ಸರಪಳಿಗಳಿಂದ ಮಾಡಿದ ಜಾಲರಿಗಳನ್ನು ತುಂಡರಿಸಿ, ರತ್ನನಿರ್ಮಿತ ಶ್ರೇಷ್ಠ ಭವನವನ್ನು ನಷ್ಟ-ಭ್ರಷ್ಟಮಾಡಿ ಅಲ್ಲಿ ಅಡಗಿಸಿಟ್ಟಿದ್ದ ಅಮೃತವನ್ನು ಮಹೇಂದ್ರ ಭವನದಿಂದ ಅಪಹರಿಸಿದನು.॥35॥
ಮೂಲಮ್ - 36
ತಂ ಮಹರ್ಷಿಗಣೈರ್ಜುಷ್ಟಂ ಸುಪರ್ಣಕೃತಲಕ್ಷಣಮ್ ।
ನಾಮ್ನಾ ಸುಭದ್ರಂ ನ್ಯಗ್ರೋಧಂ ದದರ್ಶ ಧನದಾನುಜಃ ॥
ಅನುವಾದ
ಗರುಡನಿಂದ ಮುರಿದ ರೆಂಬೆಯ ಗುರುತು ಆ ಆಲದ ಮರದಲ್ಲಿ ಆಗಲೂ ಇತ್ತು. ಸುಭದ್ರವಟ ಎಂಬ ಹೆಸರುಳ್ಳ ಆ ವೃಕ್ಷದ ಛಾಯೆಯಲ್ಲಿ ಅನೇಕ ಮಹರ್ಷಿಗಳು ವಾಸಿಸುತ್ತಿದ್ದರು. ರಾವಣನು ಆ ಮರವನ್ನು ನೋಡಿದನು.॥36॥
ಮೂಲಮ್ - 37
ತಂ ತು ಗತ್ವಾ ಪರಂ ಪಾರಂ ಸಮುದ್ರಸ್ಯ ನದೀಪತೇಃ ।
ದದರ್ಶಾಶ್ರಮಮೇಕಾಂತೇ ಪುಣ್ಯೇ ರಮ್ಯೇ ವನಾಂತರೇ ॥
ಅನುವಾದ
ನದಿಗಳ ಸ್ವಾಮಿ ಸಮುದ್ರದ ಇನ್ನೊಂದು ತೀರಕ್ಕೆ ಹೋಗಿ ಅವನು ರಮಣೀಯ ವನದೊಳಗೆ ಪವಿತ್ರವಾದ, ಏಕಾಂತ ಸ್ಥಳದಲ್ಲಿ ಒಂದು ಆಶ್ರಮವನ್ನು ದರ್ಶಿಸಿದನು.॥37॥
ಮೂಲಮ್ - 38
ತತ್ರ ಕೃಷ್ಣಾಜಿನಧರಂ ಜಟಾವಲ್ಕಲಧಾರಿಣಮ್ ।
ದದರ್ಶ ನಿಯತಾಹಾರಂ ಮಾರೀಚಂ ನಾಮ ರಾಕ್ಷಸಮ್ ॥
ಅನುವಾದ
ಶರೀರದಲ್ಲಿ ಮೃಗಚರ್ಮವನ್ನು, ತಲೆಯಲ್ಲಿ ಜಟೆಗಳನ್ನು ಧರಿಸಿದ, ನಿಯಮಿತ ಆಹಾರ ಮಾಡುವ ಮಾರೀಚನೆಂಬ ರಾಕ್ಷಸನು ಅಲ್ಲಿ ವಾಸಿಸುತ್ತಿದ್ದನು. ರಾವಣನು ಅಲ್ಲಿಗೆ ಹೋಗಿ ಅವನನ್ನು ಸಂಧಿಸಿದನು.॥38॥
ಮೂಲಮ್ - 39
ಸ ರಾವಣಃ ಸಮಾಗಮ್ಯ ವಿಧಿವತ್ತೇನ ರಕ್ಷಸಾ ।
ಮಾರೀಚೇನಾರ್ಚಿತೋ ರಾಜಾ ಸರ್ವಕಾಮೈರಮಾನುಷೈಃ ॥
ಅನುವಾದ
ರಾಕ್ಷಸ ಮಾರೀಚನು ಎಲ್ಲ ವಿಧದ ಅಲೌಕಿಕ ಕಮನೀಯ ಪದಾರ್ಥಗಳನ್ನು ಅರ್ಪಿಸಿ ರಾಜಾ ರಾವಣನನ್ನು ವಿಧಿವಾತ್ತಾಗಿ ಆತಿಥ್ಯ ಸತ್ಕಾರ ಮಾಡಿದನು.॥39॥
ಮೂಲಮ್ - 40
ತಂ ಸ್ವಯಂ ಪೂಜಯಿತ್ವಾ ಚ ಭೋಜನೇನೋದಕೇನ ಚ ।
ಅರ್ಥೋಪಹಿತಯಾ ವಾಚಾ ಮಾರೀಚೋ ವಾಕ್ಯಮಬ್ರವೀತ್ ॥
ಅನುವಾದ
ಅನ್ನ-ನೀರಿನಿಂದ ಸ್ವತಃ ಅವನ ಪೂರ್ಣ ಸತ್ಕಾರ ಮಾಡಿ ಮಾರೀಚನು ಬಂದ ಪ್ರಯೋಜನವನ್ನು ಕೇಳುತ್ತಾ ಹೀಗೆ ಹೇಳಿದನು.॥40॥
ಮೂಲಮ್ - 41
ಕಚ್ಚಿತ್ತೇಕುಶಲಂ ರಾಜನ್ ಲ್ಲಂಕಾಯಾಂ ರಾಕ್ಷಸೇಶ್ವರ ।
ಕೇನಾರ್ಥೇನ ಪುನಸ್ತ್ವಂ ವೈ ತೂರ್ಣಮೇವ ಇಹಾಗತಃ ॥
ಅನುವಾದ
ರಾಜನೇ! ನಿನ್ನ ಲಂಕೆಯಲ್ಲಿ ಕ್ಷೇಮ ತಾನೇ? ರಾಕ್ಷಸರಾಜನೇ! ನೀನು ಯಾವ ಕಾರ್ಯಕ್ಕಾಗಿ ಪುನಃ ಇಷ್ಟು ಬೇಗ ಇಲ್ಲಿಗೆ ಬಂದಿರುವೆ.॥41॥
ಮೂಲಮ್ - 42
ಏವಮುಕ್ತೋ ಮಹಾತೇಜಾ ಮಾರೀಚೇನ ಸ ರಾವಣಃ।
ತತಃ ಪಶ್ಚಾದಿದಂ ವಾಕ್ಯಮಬ್ರವೀದ್ ವಾಕ್ಯ ಕೋವಿದಃ॥
ಅನುವಾದ
ಮಾರೀಚನು ಹೀಗೆ ಕೇಳಿದಾಗ ವಾಕ್ಯಕೋವಿದನಾದ ಮಹಾತೇಜಸ್ವೀ ರಾವಣನು ಅವನಲ್ಲಿ ಹೀಗೆ ಉತ್ತರಿಸಿದನು.॥42॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತೈದನೆಯ ಸರ್ಗ ಸಂಪೂರ್ಣವಾಯಿತು.॥35॥