०३३ रावणनिर्भर्त्सनम्

वाचनम्
ಭಾಗಸೂಚನಾ

ಶೂರ್ಪಣಖಿಯು ರಾವಣನನ್ನು ಜರೆದುದು

ಮೂಲಮ್ - 1

ತತಃ ಶೂರ್ಪಣಖಾ ದೀನಾ ರಾವಣಂ ಲೋಕರಾವಣಮ್ ।
ಅಮಾತ್ಯಮಧ್ಯೇ ಸಂಕ್ರುದ್ಧಾ ಪರುಷಂ ವಾಕ್ಯಮಬ್ರವೀತ್ ॥

ಅನುವಾದ

ಶ್ರೀರಾಮನಿಂದ ತಿರಸ್ಕೃತಳಾದ್ದರಿಂದ ಶೂರ್ಪಣಖಿಯು ಆಗ ಬಹಳ ದುಃಖಿತಳಾಗಿದ್ದಳು. ಮಂತ್ರಿಗಳ ನಡುವೆ ಕುಳಿತಿರುವ, ಸಮಸ್ತ ಲೋಕಗಳನ್ನು ಆಳಿಸುತ್ತಿರುವ ರಾವಣನಲ್ಲಿ ಅತ್ಯಂತ ಕುಪಿತಳಾಗಿ ಅವಳು ಕಠೋರವಾಗಿ ಹೇಳಿದಳು.॥1॥

ಮೂಲಮ್ - 2

ಪ್ರಮತ್ತಃ ಕಾಮಭೋಗೇಷು ಸ್ವೈರವೃತ್ತೋ ನಿರಂಕುಶಃ ।
ಸಮುತ್ಪನ್ನಂ ಭಯಂ ಘೋರಂ ಬೋದ್ಧವ್ಯಂ ನಾವಬುಧ್ಯಸೇ ॥

ಅನುವಾದ

ರಾಕ್ಷಸರಾಜನೇ! ನೀನು ಸ್ವೇಚ್ಛಾಚಾರಿ ಮತ್ತು ನಿರಂಕುಶನಾಗಿ ವಿಷಯಭೋಗಗಳಲ್ಲಿ ಉನ್ಮತ್ತನಾಗಿರುವೆ. ನಿನಗೆ ಘೋರಭಯ ಉತ್ಪನ್ನವಾಗಿದೆ, ಅದು ನಿನಗೆ ತಿಳಿದಿರಬೇಕಾಗಿತ್ತು, ಆದರೆ ಈ ವಿಷಯದಲ್ಲಿ ಏನನ್ನೂ ಅರಿಯದಿರುವೆ.॥2॥

ಮೂಲಮ್ - 3

ಸಕ್ತಂ ಗ್ರಾಮ್ಯೇಷು ಭೋಗೇಷು ಕಾಮವೃತ್ತಂ ಮಹೀಪತಿಮ್ ।
ಲುಬ್ಧಂ ನ ಬಹು ಮನ್ಯಂತೇ ಶ್ಮಶಾನಾಗ್ನಿಮಿವ ಪ್ರಜಾಃ ॥

ಅನುವಾದ

ಯುವರಾಜನು ನಿಮ್ನ ಶ್ರೇಣಿಯ ಭೋಗಗಳಲ್ಲಿ ಆಸಕ್ತನಾಗಿ, ಸ್ವೇಚ್ಛಾಚಾರಿ ಮತ್ತು ಲೋಭಿಯಾಗುತ್ತಾನೋ ಅವನನ್ನು ಪ್ರಜೆಗಳನ್ನು ಆದರಿಸುವುದಿಲ್ಲ.॥3॥

ಮೂಲಮ್ - 4

ಸ್ವಯಂ ಕಾರ್ಯಾಣಿ ಯಃ ಕಾಲೇ ನಾನುತಿಷ್ಠತಿ ಪಾರ್ಥಿವಃ ।
ಸ ತು ವೈ ಸಹ ರಾಜ್ಯೇನ ತೈಶ್ಚ ಕಾರ್ಯೈರ್ವಿನಶ್ಯತಿ ॥

ಅನುವಾದ

ಸರಿಯಾದ ಸಮಯದಲ್ಲಿ ಸ್ವತಃ ತನ್ನ ಕಾರ್ಯಗಳನ್ನು ನೆರವೇರಿಸದವನು, ರಾಜ್ಯ ಮತ್ತು ಆ ಕಾರ್ಯಗಳೊಂದಿಗೆ ನಾಶವಾಗುತ್ತಾನೆ.॥4॥

ಮೂಲಮ್ - 5

ಅಯುಕ್ತಚಾರಂ ದುರ್ದರ್ಶಮಸ್ವಾಧೀನಂ ನರಾಧಿಪಮ್ ।
ವರ್ಜಯಂತಿ ನರಾ ದೂರಾನ್ನದೀಪಂಕಮಿವ ದ್ವಿಪಾಃ ॥

ಅನುವಾದ

ರಾಜ್ಯದ ರಕ್ಷಣೆಗಾಗಿ ಗುಪ್ತಚರನನ್ನು ನೇಮಿಸುವುದಿಲ್ಲವೋ, ಪ್ರಜೆಗಳಿಗೆ ಯಾರ ದರ್ಶನ ದುರ್ಲಭವಾಗುತ್ತದೋ, ಕಾಮಿನೀ ಮೊದಲಾದ ಭೋಗಗಳಲ್ಲಿ ಆಸಕ್ತನಾದ್ದರಿಂದ ತನ್ನ ಸ್ವಾಧೀನತೆಯನ್ನು ಕಳೆದುಕೊಳ್ಳುವನೋ, ಇಂತಹ ರಾಜನನ್ನು ಪ್ರಜೆಗಳು ಆನೆಯು ನದಿಯ ಕೆಸರಿನಿಂದ ದೂರ ಉಳಿಯುವಂತೆ ದೂರದಿಂದಲೇ ತ್ಯಜಿಸಿಬಿಡುತ್ತಾರೆ.॥5॥

ಮೂಲಮ್ - 6

ಯೇ ನ ರಕ್ಷಂತಿ ವಿಷಯಮಸ್ವಾಧೀನಾ ನರಾಧಿಪಾಃ ।
ತೇ ನ ವೃದ್ಧ್ಯಾ ಪ್ರಕಾಶಂತೇ ಗಿರಯಃ ಸಾಗರೇ ಯಥಾ ॥

ಅನುವಾದ

ಯಾವ ನರೇಶನು ತನ್ನ ರಾಜ್ಯದ ಪ್ರಾಂತವು ನಿರ್ಲಕ್ಷದಿಂದ ಬೇರೆಯವರ ಅಧಿಕಾರಕ್ಕೆ ಹೊರಟುಹೋಗುತ್ತದೋ, ರಕ್ಷಿಸುವುದಿಲ್ಲವೋ, ಅದನ್ನು ಪುನಃ ತನ್ನ ಅಧಿಕಾರಕ್ಕೆ ತರಲಾರನು. ಅವನು ಸಮುದ್ರದಲ್ಲಿ ಮುಳುಗಿದ ಪರ್ವತದಂತೆ ತನ್ನ ಅಭ್ಯುದಯದಿಂದ ಪ್ರಕಾಶಿಸುವುದಿಲ್ಲ.॥6॥

ಮೂಲಮ್ - 7

ಆತ್ಮವದ್ಭಿರ್ವಿಗೃಹ್ಯ ತ್ವಂ ದೇವಗಂಧರ್ವದಾನವೈಃ ।
ಅಯುಕ್ತಚಾರಶ್ಚಪಲಃ ಕಥಂ ರಾಜಾ ಭವಿಷ್ಯಸಿ ॥

ಅನುವಾದ

ತನ್ನ ಮನಸ್ಸನ್ನು ಹತೋಟಿಯಲ್ಲಿರಿಸಿಕೊಳ್ಳದೆ ಪ್ರಯತ್ನಶೀಲನಾಗಿರುವ, ದೇವ-ಗಂಧರ್ವ-ದಾನವರೊಡನೆ ದ್ವೇಷವನ್ನು ಕಟ್ಟಿಕೊಂಡಿರುವ, ಸರಿಯಾದ ಸ್ಥಳಗಳಲ್ಲಿ ಬೇಹುಗಾರರನ್ನು ನಿಯಮಿಸದಿರುವ, ಚಪಲಚಿತ್ತನಾದ ನೀನು ರಾಜನೆಂತಾಗುವೆ.॥7॥

ಮೂಲಮ್ - 8

ತ್ವಂ ತು ಬಾಲಸ್ವಭಾವಶ್ಚ ಬುದ್ಧಿಹೀನಶ್ಚ ರಾಕ್ಷಸ ।
ಜ್ಞಾತವ್ಯಂ ತನ್ನ ಜಾನೀಷೇ ಕಥಂ ರಾಜಾ ಭವಿಷ್ಯಸಿ ॥

ಅನುವಾದ

ರಾಕ್ಷಸನೇ! ನೀನು ಬಾಲಕನಂತೆ, ವಿವೇಕಶೂನ್ಯನೂ, ಬುದ್ಧಿಹೀನನೂ ಆಗಿರುವೆ. ತಿಳಿಯಲು ಯೋಗ್ಯವಾದ ಮಾತೂ ನಿನಗೆ ಅರಿವಿಲ್ಲ. ಇಂತಹ ಸ್ಥಿತಿಯಲ್ಲಿ ನೀನು ಹೇಗೆ ರಾಜನಾಗಿ ಉಳಿಯುವೆ.॥8॥

ಮೂಲಮ್ - 9

ಯೇಷಾಂ ಚಾರಾಶ್ಚ ಕೋಶಶ್ಚ ನಯಶ್ಚ ಜಯತಾಂ ವರ ।
ಅಸ್ವಾಧೀನಾ ನರೇಂದ್ರಾಣಾಂ ಪ್ರಾಕೃತೈಸ್ತೇ ಜನೈಃ ಸಮಾಃ ॥

ಅನುವಾದ

ವಿಜಯೀ ವೀರರಲ್ಲಿ ಶ್ರೇಷ್ಠ ನಿಶಾಚರನೇ! ಯಾವ ರಾಜನಿಗೆ ಗೂಢಚಾರರು, ಕೋಶ ಮತ್ತು ನೀತಿ ಇವು ತನ್ನ ಅಧೀನವಾಗಿರುವುದಿಲ್ಲವೋ ಅವನು ಸಾಧಾರಣ ಜನರಂತೆ ಆಗುತ್ತಾನೆ.॥9॥

ಮೂಲಮ್ - 10

ಯಸ್ಮಾತ್ ಪಶಂತಿ ದೂರಸ್ಥಾನ್ ಸರ್ವಾನರ್ಥಾನ್ನರಾಧಿಪಾಃ ।
ಚಾರೇಣ ತಸ್ಮಾದುಚ್ಯಂತೇ ರಾಜಾನೋ ದೀರ್ಘಚಕ್ಷುಷಃ ॥

ಅನುವಾದ

ಗೂಢಚಾರರ ಸಹಾಯದಿಂದ ದೂರ-ದೂರದ ಎಲ್ಲ ಕಾರ್ಯಗಳನ್ನು ನೋಡಿಕೊಳ್ಳುತ್ತಾ ಇರುವ ರಾಜರನ್ನು ದೀರ್ಘದರ್ಶೀ ಅಥವಾ ದೂರದರ್ಶೀ ಎಂದು ಹೇಳುತ್ತಾರೆ.॥10॥

ಮೂಲಮ್ - 11

ಅಯುಕ್ತಚಾರಂ ಮನ್ಯೇ ತ್ವಾಂ ಪ್ರಾಕೃತೈಃ ಸಚಿವೈರ್ಯುತಮ್ ।
ಸ್ವಜನಂ ಚ ಜನಸ್ಥಾನಂ ನಿಹತಂ ನಾವಬುಧ್ಯಸೇ ॥

ಅನುವಾದ

ಮೂರ್ಖರಾದ ಮಂತ್ರಿಗಳಿಂದ ಸುತ್ತುವರಿದು ಕೊಂಡಿರುವುದರಿಂದಲೇ ನೀನು ತನ್ನ ರಾಜ್ಯದಲ್ಲಿ ಗೂಢಚಾರರನ್ನು ನೇಮಿಸಿಲ್ಲ ಎಂದೇ ನಾನು ತಿಳಿಯುತ್ತೇನೆ. ನಿನ್ನ ಸ್ವಜನರು ಸತ್ತುಹೋದರು, ಜನಸ್ಥಾನವು ಹಾಳಾಯಿತು. ಹೀಗಿದ್ದರೂ ನಿನಗೆ ಇದರ ಸುಳಿವೇ ಇಲ್ಲ.॥11॥

ಮೂಲಮ್ - 12

ಚತುರ್ದಶ ಸಹಸ್ರಾಣಿ ರಕ್ಷಸಾಂ ಭೀಮಕರ್ಮಣಾಮ್ ।
ಹತಾನ್ಯೇಕೇನ ರಾಮೇಣ ಖರಶ್ಚ ಸಹದೂಷಣಃ ॥

ಮೂಲಮ್ - 13

ಋಷೀಣಾಮಭಯಂ ದತ್ತಂ ಕೃತಕ್ಷೇಮಾಶ್ಚ ದಂಡಕಾಃ ।
ಧರ್ಷಿತಂ ಚ ಜನಸ್ಥಾನಂ ರಾಮೇಣಾಕ್ಲಿಷ್ಟ ಕಾರಿಣಾ ॥

ಅನುವಾದ

ಒಬ್ಬಂಟಿಗನಾದ ರಾಮನೇ ಈ ಮಹಾನ್ ಕರ್ಮವನ್ನು ಸುಲಭವಾಗಿ ಮಾಡಿರುವನು. ಭೀಮಕರ್ಮಾ ರಾಕ್ಷಸರ ಹದಿನಾಲ್ಕು ಸಾವಿರ ಸೈನ್ಯವನ್ನು ಯಮಸದನಕ್ಕೆ ಅಟ್ಟಿದನು. ಖರ-ದೂಷಣರ ಪ್ರಾಣವನ್ನು ಹರಣ ಮಾಡಿದನು. ಋಷಿಗಳಿಗೆ ಅಭಯದಾನ ಕೊಟ್ಟು, ದಂಡಕಾರಣ್ಯದಲ್ಲಿದ್ದ ರಾಕ್ಷಸರ ಬಾಧೆಗಳನ್ನು ದೂರ ಮಾಡಿ ಅಲ್ಲಿ ಶಾಂತಿ ಸ್ಥಾಪಿಸಿದನು. ಜನಸ್ಥಾನವನ್ನಾದರೋ ಅವನು ಕೆಡಿಸಿಬಿಟ್ಟನು.॥12-13॥

ಮೂಲಮ್ - 14

ತ್ವಂ ತು ಲುಬ್ಧಃ ಪ್ರಮತ್ತಶ್ಚ ಪರಾಧೀನಶ್ಚ ರಾಕ್ಷಸ ।
ವಿಷಯೇ ಸ್ವೇ ಸಮುತ್ಪನ್ನಂ ಯದ್ ಭಯಂನಾವಬುಧ್ಯಸೇ ॥

ಅನುವಾದ

ರಾಕ್ಷಸನೇ! ನೀನಾದರೋ ಲೋಭ ಮತ್ತು ಪ್ರಮಾದದಲ್ಲಿ ಸಿಲುಕಿ ಪರಾಧೀನನಾಗಿರುವೆ. ಆದ್ದರಿಂದಲೇ ರಾಜ್ಯದಲ್ಲಿ ಉಂಟಾದ ಭಯದ ಯಾವುದೇ ಸುಳಿವು ನಿನಗೇ ಇಲ್ಲ.॥14॥

ಮೂಲಮ್ - 15

ತೀಕ್ಷ್ಣ ಮಲ್ಪಪ್ರದಾತಾರಂ ಪ್ರಮತ್ತಂ ಗರ್ವಿತಂ ಶಠಮ್ ।
ವ್ಯಸನೇ ಸರ್ವಭೂತಾನಿ ನಾಭಿಧಾವಂತಿ ಪಾರ್ಥಿವಮ್ ॥

ಅನುವಾದ

ಯಾವ ರಾಜನು ಕಠೋರವಾಗಿ ವರ್ತಿಸುವನೋ ಅಥವಾ ಕ್ರೂರಿಯಾಗಿರುವನೋ, ಸೇವಕರಿಗೆ ಅತ್ಯಲ್ಪವೇತನವನ್ನು ಕೊಡುವನೋ, ಪ್ರಮತ್ತನಾಗಿರುವನೋ, ಗರ್ವಿಷ್ಠನಾಗಿದ್ದಾನೋ, ಅವನು ಸಂಕಟದಲ್ಲಿ ಬಿದ್ದಿದ್ದರೂ ಯಾವ ಪ್ರಾಣಿಯು ರಕ್ಷಿಸಲು ಮುಂದಾಗುವುದಿಲ್ಲ.॥15॥

ಮೂಲಮ್ - 16

ಅತಿಮಾನಿನಮಗ್ರಾಹ್ಯಮಾತ್ಮಸಂಭಾವಿತಂ ನರಮ್ ।
ಕ್ರೋಧನಂ ವ್ಯಸನೇ ಹಂತಿ ಸ್ವಜನೋಽಪಿ ನರಾಧಿಪಮ್ ॥

ಅನುವಾದ

ಅತಿಮಾನಿಷ್ಠನೂ, ಸಾಧು ಸಮ್ಮತನಲ್ಲದವನೂ, ಆತ್ಮಪ್ರತಿಷ್ಠೆಯಿರುವವನೂ, ಕೋಪಿಷ್ಠನೂ ಆಗಿರುವ ರಾಜನನ್ನು ಕಷ್ಟವು ಸಂಭವಿಸಿದಾಗ ಸ್ವಜನರೇ ಸಂಹಾರ ಮಾಡಿಬಿಡುತ್ತಾರೆ.॥16॥

ಮೂಲಮ್ - 17

ನಾನುತಿಷ್ಠತಿ ಕಾರ್ಯಣಿ ಭಯೇಷು ನ ಬಿಭೇತಿ ಚ ।
ಕ್ಷಿಪ್ತಂ ರಾಜ್ಯಾಚ್ಚ್ಯುತೋ ದೀನಸ್ತೃಣೈ ಸ್ತುಲ್ಯೋ ಭವೇದಿಹ ॥

ಅನುವಾದ

ಮಾಡಬೇಕಾದ ಕಾರ್ಯಗಳನ್ನು ಸಮಯವರಿತು ಯಾವನು ಮಾಡುವುದಿಲ್ಲವೋ, ಭಯವು ಹತ್ತಿರ ಬಂದಾಗಲೂ ಭಯಪಡದೆ ಇರುವನೋ ಮತ್ತು ಭಯವನ್ನು ಹೋಗಲಾಡಿಸಲು ಸರಿಯಾದ ಕಾರ್ಯವನ್ನು ಕೈಗೊಳ್ಳುವುದಿಲ್ಲವೋ, ಅಂತಹ ರಾಜನು ಬಹಳ ಬೇಗ ರಾಜ್ಯದಿಂದ ಚ್ಯುತನಾಗಿ ದೀನನೂ, ತೃಣಪ್ರಾಯನಾಗುತ್ತಾನೆ.॥17॥

ಮೂಲಮ್ - 18

ಶುಷ್ಕೈಃ ಕಾಷ್ಠೈರ್ಭವೇತ್ಕಾರ್ಯಂ ಲೋಷ್ಟೈ ರಪಿ ಚ ಪಾಂಸುಭಿಃ ।
ನ ತು ಸ್ಥಾನಾತ್ಪರಿಭ್ರಷ್ಟೈಃ ಕಾರ್ಯಂ ಸ್ಯಾದ್ವಸುಧಾಧಿಪೈಃ ।।

ಅನುವಾದ

ಜನರಿಗೆ ಒಣಗಿದ ಕಟ್ಟಿಗೆಗಳಿಂದ, ಮಣ್ಣಿನ ಹೆಂಟೆಯಿಂದ, ಧೂಳಿನಿಂದಲೂ ಉಪಯೋಗವಾಗುತ್ತದೆ, ಆದರೆ ಸ್ಥಾನಭ್ರಷ್ಟನಾದ ರಾಜನಿಂದ ಯಾವುದೇ ಪ್ರಯೋಜನ ಇರುವುದಿಲ್ಲ.॥18॥

ಮೂಲಮ್ - 19

ಉಪಭುಕ್ತಂ ಯಥಾ ವಾಸಃ ಸ್ರಜೋ ವಾ ಮೃದಿತಾ ಯಥಾ ।
ಏವಂ ರಾಜ್ಯಾತ್ ಪರಿಭ್ರಷ್ಟಃ ಸಮರ್ಥೋಽಪಿ ನಿರರ್ಥಕಃ ॥

ಅನುವಾದ

ಉಟ್ಟು ಬಿಚ್ಚಿಟ್ಟ ಬಟ್ಟೆಯು, ಬಾಡಿಹೋದ ಹೂವಿನ ಮಾಲೆಯು ಬೇರೆಯವರ ಉಪಯೋಗಕ್ಕೆ ಅನರ್ಹ ವಾಗುವಂತೆಯೇ, ರಾಜ್ಯಭ್ರಷ್ಟನಾದ ರಾಜನು ಸಮರ್ಥನಾಗಿದ್ದರೂ ಬೇರೆಯವರಿಗೆ ನಿರರ್ಥಕನಾಗುತ್ತಾನೆ.॥19॥

ಮೂಲಮ್ - 20

ಅಪ್ರಮತ್ತಶ್ಚ ಯೋ ರಾಜಾ ಸರ್ವಜ್ಞೋ ವಿಜಿತೇಂದ್ರಿಯಃ ।
ಕೃತಜ್ಞೋ ಧರ್ಮಶೀಲಶ್ಚ ಸ ರಾಜಾ ತಿಷ್ಠತೇ ಚಿರಮ್ ॥

ಅನುವಾದ

ಆದರೆ ಯಾವ ರಾಜನು ಸದಾ ಎಚ್ಚರವಾಗಿರುತ್ತಾನೋ, ರಾಜ್ಯದ ಸಮಸ್ತ ಕಾರ್ಯಗಳ ತಿಳುವಳಿಕೆ ಇರುತ್ತದೋ, ಇಂದ್ರಿಯಗಳನ್ನು ವಶಪಡಿಸಿಕೊಂಡಿರುವನೋ, ಕೃತಜ್ಞ ಹಾಗೂ ಧರ್ಮಪರಾಯಣನಾಗಿರುತ್ತಾನೋ, ಆ ರಾಜನು ಬಹಳ ದಿನಗಳವರೆಗೆ ರಾಜ್ಯಮಾಡುತ್ತಾನೆ.॥20॥

ಮೂಲಮ್ - 21

ನಯನಾಭ್ಯಾಂ ಪ್ರಸುಪ್ತೋ ವಾ ಜಾಗರ್ತಿ ನಯಚಕ್ಷುಷಾ ।
ವ್ಯಕ್ತಕ್ರೋಧಪ್ರಸಾದಶ್ಚ ಸ ರಾಜಾ ಪೂಜ್ಯತೇ ಜನೈಃ ॥

ಅನುವಾದ

ಸ್ಥೂಲ ಕಣ್ಣುಗಳಿಂದ ಮಲಗಿದ್ದರೂ ನೀತಿಯ ಕಣ್ಣುಗಳಿಂದ ಸದಾ ಎಚ್ಚರವಾಗಿರುವನೋ, ಯಾರ ಕ್ರೋಧ ಮತ್ತು ಅನುಗ್ರಹಗಳ ಫಲ ಪ್ರತ್ಯಕ್ಷ ಪ್ರಕಟವಾಗುತ್ತದೋ, ಆ ರಾಜನನ್ನೇ ಜನರು ಪೂಜಿಸುತ್ತಾರೆ.॥21॥

ಮೂಲಮ್ - 22

ತ್ವಂ ತು ರಾವಣ ದುರ್ಬುದ್ಧಿ ರ್ಗುಣೈರೇತೈರ್ವಿವರ್ಜಿತಃ ।
ಯಸ್ಯ ತೇಽವಿದಿತಾಶ್ಚಾರೈ ರಕ್ಷಸಾಂ ಸುಮಹಾನ್ವಧಃ ॥

ಅನುವಾದ

ರಾವಣ! ನಿನ್ನ ಬುದ್ಧಿ ದೂಷಿತವಾಗಿದೆ. ನೀನು ಈ ಎಲ್ಲ ರಾಜೋಚಿತ ಗುಣಗಳಿಂದ ವಂಚಿತನಾಗಿರುವೆ, ಏಕೆಂದರೆ ನಿನಗೆ ಇಷ್ಟರವರೆಗೆ ಗುಪ್ತಚರರ ಸಹಾಯದಿಂದ ರಾಕ್ಷಸರ ಇಂತಹ ಮಹಾಸಂಹಾರದ ಸಮಾಚಾರ ತಿಳಿಯದೇ ಹೋಗಿದೆ.॥22॥

ಮೂಲಮ್ - 23

ಪರಾವಮಂತಾ ವಿಷಯೇಷು ಸಂಗವಾನ್
ನ ದೇಶಕಾಲಪ್ರವಿಭಾಗತತ್ತ್ವವಿತ್ ।
ಅಯುಕ್ತ ಬುದ್ಧಿರ್ಗುಣದೋಷನಿಶ್ಚಯೇ
ವಿಪನ್ನ ರಾಜ್ಯೋ ನ ಚಿರಾದ್ವಿಪತ್ಸ್ಯಸೇ ॥

ಅನುವಾದ

ವಿಷಯಾಸಕ್ತನಾದ ನೀನು ಬೇರೆಯವರನ್ನು ಆದರಿಸುವುದು, ದೇಶ-ಕಾಲಗಳ ವಿಭಾಗವನ್ನು ಯಥಾರ್ಥವಾಗಿ ತಿಳಿಯದಿರುವವನಾಗಿರುವೆ. ಗುಣ-ದೋಷಗಳ ವಿಚಾರದಲ್ಲಿ ಹಾಗೂ ನಿಶ್ಚಯದಲ್ಲಿ ನಿನ್ನ ಬುದ್ಧಿಯನ್ನು ಎಂದೂ ತೊಡಗಿಸಲಿಲ್ಲ. ಆದ್ದರಿಂದ ನಿನ್ನ ರಾಜ್ಯವು ಶೀಘ್ರವಾಗಿ ನಾಶವಾಗಿ ಹೋಗುವುದು ಮತ್ತು ನೀನು ಸ್ವತಃ ಭಾರೀ ವಿಪತ್ತಿನಲ್ಲಿ ಬೀಳುವೆ.॥23॥

ಮೂಲಮ್ - 24

ಇತಿ ಸ್ವದೋಷಾನ್ ಪರಿಕೀರ್ತಿತಾಂಸ್ತಥಾ
ಸಮೀಕ್ಷ್ಯ ಬುದ್ಧ್ಯಾ ಕ್ಷಣದಾಚರೇಶ್ವರಃ ।
ಧನೇನ ದರ್ಪೇಣ ಬಲೇನ ಚಾನ್ವಿತೋ
ಚಿಂತಯಾಮಾಸ ಚಿರಂ ಸ ರಾವಣಃ ॥

ಅನುವಾದ

ಶೂರ್ಪಣಖೆಯು ಹೇಳಿದ ತನ್ನ ದೋಷಗಳ ಕುರಿತು ಬುದ್ಧಿಪೂರ್ವಕ ವಿಚಾರ ಮಾಡಿ, ಧನ-ಅಭಿವಾನ ಮತ್ತು ಬಲ ಸಂಪನ್ನನಾದ ಆ ನಿಶಾಚರ ರಾವಣನು ಬಹಳ ಹೊತ್ತು ಯೋಚಿಸುತ್ತಾ ಚಿಂತೆಗೊಳಗಾದನು.॥24॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥33॥