वाचनम्
ಭಾಗಸೂಚನಾ
ರಾವಣನು ಅಕಂಪನ ಸಲಹೆಯಂತೆ ಸೀತಾಪಹರಣಕ್ಕಾಗಿ ಹೋದುದು ಹಾಗೂ ಮಾರೀಚನ ಸಲಹೆಯಂತೆ ಲಂಕೆಗೆ ಹಿಂದಿರುಗಿದುದು
ಮೂಲಮ್ - 1
ತ್ವರಮಾಣಸ್ತತೋ ಗತ್ವಾ ಜನಸ್ಥಾನಾದಕಂಪನಃ ।
ಪ್ರವಿಶ್ಯ ಲಂಕಾಂ ವೇಗೇನ ರಾವಣಂ ವಾಕ್ಯಮಬ್ರವೀತ್ ॥
ಅನುವಾದ
ಅನಂತರ ಅಕಂಪನ ಎಂಬ ರಾಕ್ಷಸನು ಜನಸ್ಥಾನದಿಂದ ಹೊರಟು ಬಹಳ ಆತುರವಾಗಿ ಲಂಕೆಯ ಕಡೆಗೆ ಹೊರಟು, ಶೀಘ್ರವಾಗಿ ಆ ಪುರಿಯನ್ನು ಪ್ರವೇಶಿಸಿ ರಾವಣನಲ್ಲಿ ಹೀಗೆ ಹೇಳಿದನು.॥1॥
ಮೂಲಮ್ - 2
ಜನಸ್ಥಾನಸ್ಥಿತಾ ರಾಜನ್ ರಾಕ್ಷಸಾ ಬಹವೋ ಹತಾಃ ।
ಖರಶ್ಚ ನಿಹತಃ ಸಂಖ್ಯೇ ಕಥಂಚಿದಹಮಾಗತಃ ॥
ಅನುವಾದ
ರಾಜನೇ! ಜನಸ್ಥಾನದಲ್ಲಿದ್ದ ಅನೇಕ ರಾಕ್ಷಸರು ಹತರಾದರು. ಖರನೂ ಯುದ್ಧದಲ್ಲಿ ಸತ್ತುಹೋದನು. ನಾನು ಹೇಗೋ ಜೀವ ಉಳಿಸಿಕೊಂಡು ಇಲ್ಲಿಗೆ ಬಂದಿರುವೆನು.॥2॥
ಮೂಲಮ್ - 3
ಏವಮುಕ್ತೋ ದಶಗ್ರೀವಃ ಕ್ರುದ್ಧಃ ಸಂರಕ್ತಲೋಚನಃ ।
ಅಕಂಪನಮುವಾಚೇದಂ ನಿರ್ದಹನ್ನಿವ ತೇಜಸಾ ॥
ಅನುವಾದ
ಅಕಂಪನು ಹೀಗೆ ಹೇಳುತ್ತಲೇ ರಾವಣನು ಕ್ರೋಧದಿಂದ ಉರಿದೆದ್ದನು. ಕಣ್ಣು ಕೆಂಪಾಗಿಸಿ ಅವನು ತನ್ನ ತೇಜದಿಂದ ಸುಟ್ಟುಬಿಡುವನೋ ಎಂಬಂತೆ ನೋಡಿ, ಕೇಳಿದನು.॥3॥
ಮೂಲಮ್ - 4
ಕೇನ ಭೀಮಂ ಜನಸ್ಥಾನಂ ಹತಂ ಮಮ ಪರಾಸುನಾ ।
ಕೋ ಹಿ ಸರ್ವೇಷು ಲೋಕೇಷು ಗತಿಂನಾಧಿಗಮಿಷ್ಯತಿ ॥
ಅನುವಾದ
ಸಾವಿನ ಮುಖದಲ್ಲಿ ಬೀಳಲು ಯಾರು ತಾನೇ ಬಯಸುತ್ತಾರೆ? ನನ್ನ ಭಯಂಕರವಾದ ಜನಸ್ಥಾನವನ್ನು ಯಾರು ವಿನಾಶ ಮಾಡಿದರು? ಅಂತಹ ದುಃಸಾಹಸಿಯು ಯಾರು? ಅವನಿಗೆ ಲೋಕಗಳಲ್ಲಿ ಎಲ್ಲೂ ಠಾವು ದೊರೆಯಲಾರದು.॥4॥
ಮೂಲಮ್ - 5
ನ ಹಿ ಮೇ ವಿಪ್ರಿಯಂ ಕೃತ್ವಾ ಶಕ್ಯಂ ಮಘವತಾ ಸುಖಮ್ ।
ಪ್ರಾಪ್ತುಂ ವೈಶ್ರವಣೇನಾಪಿ ನ ಯಮೇನ ಚ ವಿಷ್ಣುನಾ ॥
ಅನುವಾದ
ನನಗೆ ಅಪರಾಧಮಾಡಿ ಇಂದ್ರ, ಯಮ, ಕುಬೇರ ಮತ್ತು ವಿಷ್ಣು ಕೂಡ ನೆಮ್ಮದಿಯಾಗಿ ಇರಲಾರರು.॥5॥
ಮೂಲಮ್ - 6
ಕಾಲಸ್ಯ ಚಾಪ್ಯಹಂ ಕಾಲೋ ದಹೇಯಮಪಿ ಪಾವಕಮ್ ।
ಮೃತ್ಯುಂ ಮರಣಧರ್ಮೇಣ ಸಂಯೋಜಯಿತುಮುತ್ಸಹೇ ॥
ಅನುವಾದ
ನಾನು ಕಾಲಕ್ಕೂ ಕಾಲನಾಗಿದ್ದೇನೆ. ಬೆಂಕಿಯನ್ನು ಸುಟ್ಟು ಹಾಕಬಲ್ಲೆ. ಸಾವನ್ನೂ ಕೂಡ ಮೃತ್ಯುಮುಖವಾಗಿಸಬಲ್ಲೆನು.॥6॥
ಮೂಲಮ್ - 7
ವಾತಸ್ಯ ತರಸಾ ವೇಗಂ ನಿಹಂತುಮಪಿ ಚೋತ್ಸಹೇ ।
ದಹೇಯಮಪಿ ಸಂಕ್ರುದ್ಧಸ್ತೇಜಸಾಽಽದಿತ್ಯಪಾವಕೌ ॥
ಅನುವಾದ
ನಾನು ಕ್ರೋಧಗೊಂಡರೆ ನನ್ನ ವೇಗದಿಂದ ವಾಯುವಿನ ಗತಿಯನ್ನು ತಡೆಯಬಲ್ಲೆನು ಹಾಗೂ ತನ್ನ ತೇಜದಿಂದ ಸೂರ್ಯ ಮತ್ತು ಅಗ್ನಿಯನ್ನು ಸುಟ್ಟು ಬೂದಿಮಾಡಿಬಿಡಬಲ್ಲೆ.॥7॥
ಮೂಲಮ್ - 8
ತಥಾ ಕ್ರುದ್ಧಂ ದಶಗ್ರೀವಂ ಕೃತಾಂಜಲಿರಕಂಪನಃ ।
ಭಯಾತ್ಸಂದಿಗ್ಧಯಾ ವಾಚಾ ರಾವಣಂ ಯಾಚತೇಽಭಯಮ್ ॥
ಅನುವಾದ
ರಾವಣನು ಈ ಪ್ರಕಾರ ಕ್ರೋಧಗೊಂಡಿರುವುದನ್ನು ನೋಡಿ ಬಡ ಅಕಂಪನನ ಮಾತು ನಿಂತುಹೋಯಿತು. ಅವನಿಗೆ ಕೈಮುಗಿದು ಸಂಶಯಯುಕ್ತ ವಾಣಿಯಿಂದ ರಾವಣನಲ್ಲಿ ಅಭಯವನ್ನು ಯೋಚಿಸಿದನು.॥8॥
ಮೂಲಮ್ - 9
ದಶಗ್ರೀವೋಽಭಯಂ ತಸ್ಮೈ ಪ್ರದದೌ ರಕ್ಷಸಾಂ ವರಃ ।
ಸ ವಪ್ರಬ್ಧೋಽಬ್ರವೀದ್ ವಾಕ್ಯಮಸಂದಿಗ್ಧಮಕಂಪನಃ ॥
ಅನುವಾದ
ಆಗ ರಾಕ್ಷಸ ಶ್ರೇಷ್ಠ ದಶಗ್ರೀವನು ಅವನಿಗೆ ಅಭಯದಾನ ನೀಡಿದನು. ಇದರಿಂದ ಅಕಂಪನಿಗೆ ಬದುಕಿದೆ ಎಂಬ ವಿಶ್ವಾಸ ಉಂಟಾಗಿ ಅವನು ಸಂಶಯರಹಿತನಾಗಿ ಹೇಳಿದನು.॥9॥
ಮೂಲಮ್ - 10
ಪುತ್ರೋ ದಶರಥಸ್ಯಾಸ್ತೇ ಸಿಂಹಸಂಹನನೋ ಯುವಾ ।
ರಾಮೋ ನಾಮ ಮಹಾಸ್ಕಂಧೋ ವೃತ್ತಾಯತಮಹಾಭುಜಃ ॥
ಮೂಲಮ್ - 11
ಶ್ಯಾಮಃ ಪೃಥುಯಶಾಃ ಶ್ರೀಮಾನತುಲ್ಯಬಲವಿಕ್ರಮಃ ।
ಹತಸ್ತೇನ ಜನಸ್ಥಾನೇ ಖರಶ್ಚ ಸಹದೂಷಣಃ ॥
ಅನುವಾದ
ರಾಕ್ಷಸರಾಜನೇ! ದಶರಥ ರಾಜನ ನವಯುವಕ ಪುತ್ರ ಶ್ರೀರಾಮನು ಪಂಚವಟಿಯಲ್ಲಿ ಇರುತ್ತಾನೆ. ಅವನು ಸುಂದರವಾದ ಶರೀರವುಳ್ಳವನೂ, ಎತ್ತರವಾದ ಹೆಗಲುಗಳುಳ್ಳವನೂ, ನೀಳವಾಗಿಯೂ ದುಂಡಾಗಿಯೂ ಇರುವ ತೋಳುಗಳುಳ್ಳವನು. ಶ್ಯಾಮಲವರ್ಣನಾಗಿದ್ದಾನೆ. ಅವನು ಮಹಾಯಶಸ್ವಿಯೂ, ತೇಜಸ್ವಿಯೂ ಆಗಿ ಕಂಡು ಬರುತ್ತಾನೆ. ಅವನ ಬಲ ಮತ್ತು ಪರಾಕ್ರಮಕ್ಕೆ ತುಲನೆಯೇ ಇಲ್ಲ. ಅವನೇ ಜನಸ್ಥಾನದಲ್ಲಿ ಇದ್ದ ಖರ ಮತ್ತು ದೂಷಣಾದಿಗಳನ್ನು ವಧಿಸಿಬಿಟ್ಟಿರುವನು.॥10-11॥
ಮೂಲಮ್ - 12
ಅಕಂಪನವಚಃ ಶ್ರುತ್ವಾ ರಾವಣೋ ರಾಕ್ಷಸಾಧಿಪಃ ।
ನಾಗೇಂದ್ರ ಇವ ನಿಃಶ್ವಸ್ಯ ಇದಂ ವಚನಮಬ್ರವೀತ್ ॥
ಅನುವಾದ
ಅಕಂಪನ ಈ ಮಾತನ್ನು ಕೇಳಿ ರಾಕ್ಷಸರಾಜ ರಾವಣನು ಮಹಾಸರ್ಪದಂತೆ ದೀರ್ಘವಾಗಿ ನಿಟ್ಟುಸಿರು ಬಿಟ್ಟು ಹೀಗೆ ಹೇಳಿದನು.॥12॥
ಮೂಲಮ್ - 13
ಸ ಸುರೇಂದ್ರೇಣ ಸಂಯುಕ್ತೋ ರಾಮಃ ಸರ್ವಾಮರೈ ಸಹ ।
ಉಪಯಾತೋ ಜನಸ್ಥಾನಂ ಬ್ರೂಹಿ ಕಚ್ಚಿದಕಂಪನ ॥
ಅನುವಾದ
ಅಕಂಪನನೇ! ರಾಮನು ಸಮಸ್ತ ದೇವತೆಗಳೊಂದಿಗೆ ಮತ್ತು ದೇವೇಂದ್ರನೊಂದಿಗೆ ಜನಸ್ಥಾನಕ್ಕೆ ಬಂದಿರುವನೋ? ಹೇಳು.॥13॥
ಮೂಲಮ್ - 14
ರಾವಣಸ್ಯ ಪುನರ್ವಾಕ್ಯಂ ನಿಶಮ್ಯ ತದಕಂಪನಃ ।
ಆಚಚಕ್ಷೇ ಬಲಂ ತಸ್ಯ ವಿಕ್ರಮಂ ಚ ಮಹಾತ್ಮನಃ ॥
ಅನುವಾದ
ರಾವಣನು ಈ ಪ್ರಶ್ನೆ ಕೇಳಿ ಅಕಂಪನನು ಮಹಾತ್ಮಾ ಶ್ರೀರಾಮನ ಬಲ-ಪರಾಕ್ರಮವನ್ನು ಪುನಃ ಹೀಗೆ ವರ್ಣಿಸಿದನು .॥14॥
ಮೂಲಮ್ - 15
ರಾಮೋ ನಾಮ ಮಹಾತೇಜಾಃ ಶ್ರೇಷ್ಠಃ ಸರ್ವಧನುಷ್ಮತಾಮ್ ।
ದಿವ್ಯಾಸ್ತ್ರ ಗುಣಸಂಪನ್ನಃ ಪರಂ ಧರ್ಮಂ ಗತೋ ಯುಧಿ ॥
ಅನುವಾದ
ಲಂಕೇಶ್ವರನೇ! ರಾಮನು ಜಗತ್ತಿನ ಸಮಸ್ತ ಧನುರ್ಧರರಲ್ಲಿ ಶ್ರೇಷ್ಠ ಮತ್ತು ಅತ್ಯಂತ ತೇಜಸ್ವಿಯಾಗಿದ್ದಾನೆ. ದಿವ್ಯಾಸಗಳ ಪ್ರಯೋಗದ ಗುಣಗಳಿಂದ ಪೂರ್ಣ ಸಂಪನ್ನನಾಗಿದ್ದಾನೆ. ಯುದ್ಧ ಕಲೆಯಲ್ಲಾದರೋ ಅವನು ಪರಾಕಾಷ್ಠೆಯನ್ನು ತಲುಪಿರುವನು.॥15॥
ಮೂಲಮ್ - 16
ತಸ್ಯಾನುರೂಪೋ ಬಲವಾನ್ ರಕ್ತಾಕ್ಷೋ ದುಂದುಭಿಸ್ವನಃ ।
ಕನೀಯಾನ್ ಲ್ಲಕ್ಷ್ಮಣೋ ಭ್ರಾತಾ ರಾಕಾಶಶಿನಿಭಾನನಃ ॥
ಅನುವಾದ
ಶ್ರೀರಾಮನೊಡನೆ ಅವನಷ್ಟೇ ಬಲವಂತನಾದ ಸಹೋದರ ಲಕ್ಷ್ಮಣನೂ ಇದ್ದಾನೆ ಅವನ ಮುಖ ಪೂರ್ಣಚಂದ್ರನಂತೆ ಮನೋಹರವಾಗಿದೆ. ಅವನ ಕಣ್ಣುಗಳು ಸ್ವಲ್ಪ ಕೆಂಪಾಗಿದ್ದು, ಸ್ವರ ದುಂದುಬಿಯಂತೆ ಗಂಭೀರವಾಗಿದೆ.॥16॥
ಮೂಲಮ್ - 17
ಸ ತೇನ ಸಹ ಸಂಯುಕ್ತಃ ಪಾವಕೇನಾನಿಲೋ ಯಥಾ ।
ಶ್ರೀಮಾನ್ರಾಜವರಸ್ತೇನ ಜನಸ್ಥಾನಂ ನಿಪಾತಿತಮ್ ॥
ಅನುವಾದ
ಅಗ್ನಿ ಯೊಂದಿಗೆ ವಾಯು ಇರುವಂತೆ ತನ್ನ ತಮ್ಮನೊಡನೆ ಇರುವ ರಾಜಾಧಿರಾಜ ಶ್ರೀಮಾನ್ ರಾಮನು ಬಹಳ ಪ್ರಬಲನಾಗಿದ್ದಾನೆ. ಅವನೇ ಜನಸ್ಥಾನದವನ್ನು ಹಾಳುಗೆಡಹಿದನು.॥17॥
ಮೂಲಮ್ - 18½
ನೈವ ದೇವಾ ಮಹಾತ್ಮಾನೋ ನಾತ್ರ ಕಾರ್ಯಾ ವಿಚಾರಣಾ ।
ಶರಾ ರಾಮೇಣ ತೂತ್ಸೃಷ್ಟಾ ರುಕ್ಮಪುಂಖಾಃ ಪತತ್ರಿಣಃ ॥
ಸರ್ಪಾಃ ಪಂಚಾನನಾ ಭೂತ್ವಾ ಭಕ್ಷಯಂತಿ ಸ್ಮ ರಾಕ್ಷಸಾನ್ ।
ಅನುವಾದ
ಅವನೊಡನೆ ಯಾವುದೇ ದೇವತೆಯಾಗಲೀ, ಮಹಾತ್ಮಾ ಮುನಿಯಾಗಲೀ ಇಲ್ಲ. ಈ ವಿಷಯದಲ್ಲಿ ನೀನು ಏನನ್ನು ಯೋಚಿಸಬೇಡ. ಶ್ರೀರಾಮನು ಬಿಟ್ಟ ಸ್ವರ್ಣರೆಕ್ಕೆಗಳುಳ್ಳ ಬಾಣಗಳು ಐದು ಮುಖದ ಸರ್ಪಗಳಾಗಿ ರಾಕ್ಷಸರನ್ನು ತಿಂದುಬಿಡುವನು.॥18॥
ಮೂಲಮ್ - 19
ಯೇನ ಯೇನ ಚ ಗಚ್ಛಂತಿ ರಾಕ್ಷಸಾ ಭಯಕರ್ಶಿತಾಃ ॥
ಮೂಲಮ್ - 20
ತೇನ ತೇನ ಸ್ಮಪಶ್ಯಂತಿ ರಾಮಮೇವಾಗ್ರತಃ ಸ್ಥಿತಮ್ ।
ಇತ್ಥಂ ವಿನಾಶಿತಂ ತೇನ ಜನಸ್ಥಾನಂ ತವಾನಘ ॥
ಅನುವಾದ
ಭಯದಿಂದ ಕಾತರರಾದ ರಾಕ್ಷಸರು ಓಡಿದಲ್ಲೆಲ್ಲಾ ಶ್ರೀರಾಮನನ್ನೇ ತನ್ನ ಎದುರಿಗೆ ನಿಂತಂತೆ ನೋಡುತ್ತಿದ್ದರು. ಅನಘನೇ! ಈ ಪ್ರಕಾರ ಒಬ್ಬಂಟಿಗನಾದ ಶ್ರೀರಾಮನೇ ನಿನ್ನ ಜನಸ್ಥಾನವನ್ನು ನಾಶಮಾಡಿದನು.॥19-20॥
ಮೂಲಮ್ - 21
ಅಕಂಪನವಚಃ ಶ್ರುತ್ವಾ ರಾವಣೋ ವಾಕ್ಯಮಬ್ರವೀತ್ ।
ಗಮಿಷ್ಯಾಮಿ ಜನಸ್ಥಾನಂ ರಾಮಂ ಹಂತುಂ ಸಲಕ್ಷ್ಮಣಮ್ ॥
ಅನುವಾದ
ಅಕಂಪನ ಈ ಮಾತನ್ನು ಕೇಳಿ ರಾವಣನು - ‘ನಾನು ಈಗಲೇ ಲಕ್ಷ್ಮಣ ಸಹಿತ ರಾಮನನ್ನು ವಧಿಸಲು ಜನಸ್ಥಾನಕ್ಕೆ ಹೋಗುತ್ತೇನೆ’ ಎಂದು ಹೇಳಿದನು.॥21॥
ಮೂಲಮ್ - 22
ಅಥೈವಮುಕ್ತೇ ವಚನೇ ಪ್ರೋವಾಚೇದಮಕಂಪನಃ ।
ಶೃಣು ರಾಜನ್ಯಥಾವೃತ್ತಂ ರಾಮಸ್ಯ ಬಲಪೌರುಷಮ್ ॥
ಅನುವಾದ
ಹೀಗೆ ಹೇಳಿದಾಗ ಅಕಂಪನು ನುಡಿದನು-ರಾಜನೇ! ಶ್ರೀರಾಮನ ಬಲ ಮತ್ತು ಪುರುಷಾರ್ಥ ಹೇಗಿದೆ ಎಂಬುದರ ಯಥಾರ್ಥ ವರ್ಣನೆ ನನ್ನಿಂದ ಕೇಳಿರಿ.॥22॥
ಮೂಲಮ್ - 23½
ಆಸಾಧ್ಯಃ ಕುಪಿತೋ ರಾಮೋ ವಿಕ್ರಮೇಣ ಮಹಾಯಶಾಃ ।
ಆಪಗಾಯಾಸ್ತು ಸುಪೂರ್ಣಾಯಾ ವೇಗಂ ಪರಿಹರೇಚ್ಛರೈಃ ॥
ಸತಾರಾಗ್ರಹನಕ್ಷತ್ರಂ ನಭಶ್ಚಾಪ್ಯವಸಾದಯೇತ್ ।
ಅನುವಾದ
ಮಹಾಯಶಸ್ವೀ ಶ್ರೀರಾಮನು ಕುಪಿತನಾದರೆ ಅವನನ್ನು ಪರಾಕ್ರಮದಿಂದ ಯಾರೂ ನಿಯಂತ್ರಿಸಲಾರರು. ಅವನು ತನ್ನ ಬಾಣಗಳಿಂದ ತುಂಬಿದ ನದಿಯ ವೇಗವನ್ನು ತಿರುಗಿಸಬಲ್ಲನು. ತಾರಾ ಗ್ರಹ-ನಕ್ಷತ್ರಗಳಿಂದ ಕೂಡಿದ ಸಂಪೂರ್ಣ ಆಕಾಶವನ್ನು ಆಕ್ರಾಂತವಾಗಿಸಬಲ್ಲನು.॥23॥
ಮೂಲಮ್ - 24
ಅಸೌ ರಾಮಸ್ತು ಸೀದಂತೀಂ ಶ್ರೀಮಾನಭ್ಯುದ್ಧರೇನ್ಮಹೀಮ್ ॥
ಮೂಲಮ್ - 25
ಭಿತ್ತ್ವಾ ವೇಲಾಂ ಸಮುದ್ರಸ್ಯ ಲೋಕಾನಾಪ್ಲಾವಯೇದ್ವಿಭುಃ ।
ವೇಗಂ ವಾಪಿ ಸಮುದ್ರಸ್ಯ ವಾಯುಂ ವಾ ವಿಧಮೇಚ್ಛರೈಃ ॥
ಅನುವಾದ
ಶ್ರೀಮಾನ್ ರಾಮನು ಸಮುದ್ರದಲ್ಲಿ ಮುಳುಗಿದ ಪೃಥ್ವಿಯನ್ನು ಮೇಲೆತ್ತಬಲ್ಲನು. ಮಹಾಸಾಗರದ ಮೇರೆಯನ್ನು ಭೇದಿಸಿ ಸಮಸ್ತ ಲೋಕಗಳನ್ನು ಮುಳುಗಿಸಬಲ್ಲನು. ತನ್ನ ಬಾಣಗಳಿಂದ ಸಮುದ್ರದವೇಗ ಅಥವಾ ವಾಯುವನ್ನೂ ಕೂಡ ನಾಶಮಾಡಬಲ್ಲನು.॥24-25॥
ಮೂಲಮ್ - 26
ಸಂಹೃತ್ಯ ವಾ ಪುನರ್ಲೋಕಾನ್ ವಿಕ್ರಮೇಣ ಮಹಾಯಶಾಃ ।
ಶಕ್ತಃ ಶ್ರೇಷ್ಠಃ ಸ ಪುರುಷಃ ಸ್ರಷ್ಟುಂ ಪುನರಪಿ ಪ್ರಜಾಃ ॥
ಅನುವಾದ
ಆ ಮಹಾಯಶಸ್ವೀ ಪುರುಷೋತ್ತಮನು ತನ್ನ ಪರಾಕ್ರಮದಿಂದ ಸಮಸ್ತ ಲೋಕಗಳನ್ನು ಸಂಹಾರ ಮಾಡಿ ಪುನಃ ಹೊಸದಾಗಿ ಪ್ರಜೆಗಳನ್ನು ಸೃಷ್ಟಿಸಲು ಸಮರ್ಥನಾಗಿದ್ದಾನೆ.॥26॥
ಮೂಲಮ್ - 27
ನಹಿ ರಾಮೋ ದಶಗ್ರೀವ ಶಕ್ಯೋ ಜೇತುಂ ರಣೇತ್ವಯಾ ।
ರಕ್ಷಸಾಂ ವಾಪಿ ಲೋಕೇನ ಸ್ವರ್ಗಃ ಪಾಪಜನೈರಿವ ॥
ಅನುವಾದ
ದಶಗ್ರೀವನೇ! ಪಾಪಿಯು ಸ್ವರ್ಗದ ಮೇಲೆ ಅಧಿಕಾರ ಪಡೆಯಲಾರದವನಂತೆ ನೀವು ಅಥವಾ ಸಮಸ್ತ ರಾಕ್ಷಸ ಜಗತ್ತೂ ಕೂಡ ಯುದ್ಧದಲ್ಲಿ ಶ್ರೀರಾಮನನ್ನು ಗೆಲ್ಲಲಾರದು.॥27॥
ಮೂಲಮ್ - 28
ನ ತಂ ವಧ್ಯಮಹಂ ಮನ್ಯೇ ಸರ್ವೈರ್ದೇವಾಸುರೈರಪಿ ।
ಅಯಂ ತಸ್ಯ ವಧೋಪಾಯಸ್ತನ್ಮಮೈಕಮನಾಃ ಶೃಣು ॥
ಅನುವಾದ
ನಾನು ತಿಳಿದಂತೆ ಸಮಸ್ತ ದೇವತೆಗಳು ಮತ್ತು ಅಸುರರು ಸೇರಿಯೂ ಅವನನ್ನು ವಧಿಸಲಾರರು. ಅವನ ವಧೆಯ ಒಂದು ಉಪಾಯ ನನಗೆ ಹೊಳೆದಿದೆ, ಅದನ್ನು ಏಕಾಗ್ರವಾಗಿ ಕೇಳು.॥28॥
ಮೂಲಮ್ - 29
ಭಾರ್ಯಾ ತಸ್ಯೋತ್ತಮಾ ಲೋಕೇ ಸೀತಾ ನಾಮಾ ಸುಮಧ್ಯಮಾ ।
ಶ್ಯಾಮಾ ಸಮವಿಭಕ್ತಾಂಗೀ ಸ್ತ್ರೀರತ್ನಂ ರತ್ನಭೂಷಿತಾ ॥
ಅನುವಾದ
ಶ್ರೀರಾಮನ ಪತ್ನೀ ಸೀತೆಯು ಜಗತ್ತಿನ ಸರ್ವೋತ್ತಮ ಸುಂದರಿಯಾಗಿದ್ದಾಳೆ. ಆಕೆ ನಡುಜವ್ವನೆಯಾಗಿದ್ದಾಳೆ. ಆಕೆಯ ಸರ್ವಾಂಗಗಳೂ ಸುಂದರವಾಗಿದ್ದು, ರತ್ನಮಯ ಆ ಭೂಷಣಗಳಿಂದ ಅಲಂಕೃತಳಾಗಿರುತ್ತಾಳೆ. ಸೀತೆಯು ಸಮಸ್ತ ಸ್ತ್ರೀಯರಲ್ಲಿ ರತ್ನಪ್ರಾಯಳಾಗಿದ್ದಾಳೆ.॥29॥
ಮೂಲಮ್ - 30
ನೈವ ದೇವೀ ನಗಂಧರ್ವೀ ನಾಪ್ಸರಾ ನ ಚ ಪನ್ನಗೀ ।
ತುಲ್ಯಾ ಸೀಮಂತಿನೀ ತಸ್ಯಾ ಮಾನುಷೀ ತು ಕುತೋ ಭವೇತ್ ॥
ಅನುವಾದ
ದೇವಕನ್ಯೆ, ಗಂಧರ್ವಕನ್ಯೆ, ಅಪ್ಸರೆ ಅಥವಾ ನಾಗಕನ್ಯೆ ಯಾರೂ ಕೂಡ ಆಕೆಗೆ ಸಮಾನರಾಗಲಾರರು, ಹಾಗಿರುವಾಗ ಮನುಷ್ಯ ಜಾತಿಯ ಬೇರೆ ಯಾವುದಾದರೂ ನಾರಿಯು ಹೇಗೆ ಸಮಾನವಾಗಬಲ್ಲಳು.॥30॥
ಮೂಲಮ್ - 31
ತಸ್ಯಾಪಹರ ಭಾರ್ಯಾಂ ತ್ವಂ ತಂ ಪ್ರಮಥ್ಯ ಮಹಾವನೇ ।
ಸೀತಯಾ ರಹಿತೋ ರಾಮೋ ನ ಚೈವ ಹಿ ಭವಿಷ್ಯತಿ ॥
ಅನುವಾದ
ಆ ವಿಶಾಲ ವನದಲ್ಲಿ ಯಾವುದಾದರೂ ಉಪಾಯದಿಂದ ಶ್ರೀರಾಮನಿಗೆ ಮೋಸಗೊಳಿಸಿ ನೀನು ಅವನ ಪತ್ನಿಯನ್ನು ಅಪಹರಣಮಾಡು. ಸೀತೆಯಿಂದ ಅಗಲಿದ ಶ್ರೀರಾಮನು ಎಂದಿಗೂ ಜೀವಿಸಲಾರನು.॥31॥
ಮೂಲಮ್ - 32
ಅರೋಚಯತ ತದ್ವಾಕ್ಯಂ ರಾವಣೋ ರಾಕ್ಷಸಾಧಿಪಃ ।
ಚಿಂತಯಿತ್ವಾ ಮಹಾಬಾಹುರಕಂಪನಮುವಾಚ ಹ ॥
ಅನುವಾದ
ರಾಕ್ಷಸರಾಜ ರಾವಣನಿಗೆ ಅಕಂಪನ ಮಾತು ಮೆಚ್ಚಿಕೆಯಾಯಿತು. ಆ ಮಹಾಬಾಹು ದಶಗ್ರೀವನು ಸ್ವಲ್ಪ ಯೋಚಿಸಿ ಅಕಂಪನಲ್ಲಿ ಹೇಳಿದನು.॥32॥
ಮೂಲಮ್ - 33
ಬಾಢಂ ಕಾಲ್ಯಂ ಗಮಿಷ್ಯಾಮಿ ಹ್ಯೇಕಃ ಸಾರಥಿನಾ ಸಹ ।
ಆನಯಿಷ್ಯಾಮಿ ವೈದೇಹಿಮಿಮಾಂ ಹೃಷ್ಟೋ ಮಹಾಪುರೀಮ್ ॥
ಅನುವಾದ
ಸರಿ, ನಾಳೆ ಪ್ರಾತಃಕಾಲವೇ ಸಾರಥಿಯೊಂದಿಗೆ ನಾನು ಒಬ್ಬನೇ ಹೋಗಿ ವಿದೇಹಕುಮಾರೀ, ಸೀತೆಯನ್ನು ಸಂತೋಷವಾಗಿ ಈ ಲಂಕಾಪುರಿಗೆ ಕರೆದುಕೊಂಡು ಬರುವೆನು.॥33॥
ಮೂಲಮ್ - 34
ತದೇವಮುಕ್ತ್ವಾ ಪ್ರಯಯೌ ಖರಯುಕ್ತೇನ ರಾವಣಃ ।
ರಥೇನಾದಿತ್ಯವರ್ಣೇನ ದಿಶಃ ಸರ್ವಾಃ ಪ್ರಕಾಶಯನ್ ॥
ಅನುವಾದ
ಹೀಗೆ ಹೇಳಿ ರಾವಣನು ಕತ್ತೆಗಳನ್ನು ಹೂಡಿದ ಸೂರ್ಯನಂತಹ ತೇಜಸ್ವೀ ರಥಾರೂಢನಾಗಿ ಎಲ್ಲ ದಿಕ್ಕುಗಳನ್ನು ಬೆಳಗುತ್ತಾ ಅಲ್ಲಿಂದ ಹೊರಟನು.॥34॥
ಮೂಲಮ್ - 35
ಸ ರಥೋ ರಾಕ್ಷಸೇಂದ್ರಸ್ಯ ನಕ್ಷತ್ರಪಥಗೋ ಮಹಾನ್ ।
ಸಂಚೂರ್ಯಮಾಣಃ ಶುಶುಭೇ ಜಲದೇ ಚಂದ್ರಮಾ ಇವ ॥
ಅನುವಾದ
ನಕ್ಷತ್ರಗಳ ಮಾರ್ಗದಿಂದ ಸಾಗುತ್ತಿದ್ದ ರಾಕ್ಷಸರಾಜನ ಆ ವಿಶಾಲರಥವು ಮೋಡಗಳ ಮರೆಯಲ್ಲಿ ಪ್ರಕಾಶಿಸುತ್ತಿರುವ ಚಂದ್ರನಂತೆ ಶೋಭಿಸುತ್ತಿತ್ತು.॥35॥
ಮೂಲಮ್ - 36
ಸ ದೂರೇಚಾಶ್ರಮಂ ಗತ್ವಾ ತಾಟಕೇಯಮುಪಾಗಮತ್ ।
ಮಾರೀಚೇನಾರ್ಚಿತೋ ರಾಜಾ ಭಕ್ಷ್ಯಭೋಜ್ಯೈರಮಾನುಷೈಃ ॥
ಅನುವಾದ
ಸ್ವಲ್ಪದೂರದಲ್ಲಿದ್ದ ಒಂದು ಆಶ್ರಮಕ್ಕೆ ಹೋಗಿ ಅವನು ತಾಟಕಾ ಪುತ್ರ ಮಾರೀಚನನ್ನು ಭೆಟ್ಟಿಯಾದನು. ಮಾರೀಚನು ಅಲೌಕಿಕ ಭಕ್ಷ್ಯ-ಭೋಜ್ಯಗಳನ್ನು ಅರ್ಪಿಸಿ ರಾವಣನನ್ನು ಸ್ವಾಗತಿಸಿದನು.॥36॥
ಮೂಲಮ್ - 37
ತಂ ಸ್ವಯಂ ಪೂಜಯಿತ್ವಾ ತು ಆಸನೇನೋದಕೇನ ಚ ।
ಅರ್ಥೋಪಹಿತಯಾ ವಾಚಾ ಮಾರೀಚೋ ವಾಕ್ಯಮಬ್ರವೀತ್ ॥
ಅನುವಾದ
ಆಸನ, ನೀರು ಮುಂತಾದವುಗಳಿಂದ ಸ್ವತಃ ಅವನನ್ನು ಪೂಜಿಸಿ ಮಾರೀಚನು ಅರ್ಥಯುಕ್ತವಾಗಿ ಇಂತೆಂದನು.॥37॥
ಮೂಲಮ್ - 38
ಕಚ್ಚಿತ್ ಸುಕುಶಲಂ ರಾಜನ್ ಲ್ಲೋಕಾನಾಂ ರಾಕ್ಷಸಾಧಿಪ ।
ಆಶಂಕೇ ನಾಧಿಜಾನೇ ತ್ವಂ ಯತಸ್ತೂರ್ಣಮುಪಾಗತಃ ॥
ಅನುವಾದ
ರಾಕ್ಷಸರಾಜನೇ! ನಿನ್ನ ರಾಜ್ಯದಲ್ಲಿ ಕ್ಷೇಮ ತಾನೇ? ನೀನು ಬಹಳ ಅವಸರದಿಂದ ಬಂದಂತಿದೆ, ಅದಕ್ಕಾಗಿ ನನ್ನ ಮನಸ್ಸಿನಲ್ಲಿ ಅಶಂಕೆ ಉಂಟಾಗಿದೆ. ನಿನ್ನಲ್ಲಿಯ ಸ್ಥಿತಿ ಚೆನ್ನಾಗಿಲ್ಲ ಎಂದು ನಾನು ತಿಳಿಯುತ್ತಿದ್ದೇನೆ.॥38॥
ಮೂಲಮ್ - 39
ಏವಮುಕ್ತೋ ಮಹಾತೇಜಾ ಮಾರೀಚೇನ ಸ ರಾವಣಃ ।
ತತಃ ಪಶ್ಚಾದಿದಂ ವಾಕ್ಯಮಬ್ರವೀದ್ ವಾಕ್ಯಕೋವಿದಃ ॥
ಅನುವಾದ
ಮಾರೀಚನು ಹೀಗೆ ಹೇಳಿದಾಗ ವಾಕ್ಯಕೋವಿದನಾದ ಮಹಾತೇಜಸ್ವೀ ರಾವಣನು ಹೀಗೆ ಹೇಳಿದನು.॥39॥
ಮೂಲಮ್ - 40
ಆರಕ್ಷೋ ಮೇಹತಸ್ತಾತ ರಾಮೇಣಾಕ್ಲಿಷ್ಟಕಾರಿಣಾ ।
ಜನಸ್ಥಾನಮವಧ್ಯಂ ತತ್ ಸರ್ವಂ ಯುಧಿನಿಪಾತಿತಮ್ ॥
ಅನುವಾದ
ಅಯ್ಯಾ! ಮಹಾನ್ ಪರಾಕ್ರಮ ತೋರಿಸುವ ಶ್ರೀರಾಮನು ಆಯಾಸವಿಲ್ಲದೆ ನನ್ನ ರಾಜ್ಯದ ಸೀಮೆಯ ರಕ್ಷಕರಾದ ಖರ-ದೂಷಣಾದಿಗಳನ್ನು ಕೊಂದುಹಾಕಿದನು ಹಾಗೂ ಅವಧ್ಯವೆಂದು ತಿಳಿದಿರುವ ಜನಸ್ಥಾನದಲ್ಲಿನ ಎಲ್ಲ ರಾಕ್ಷಸರನ್ನು ಅವನು ಯುದ್ಧದಲ್ಲಿ ವಧಿಸಿಬಿಟ್ಟನು.॥40॥
ಮೂಲಮ್ - 41
ತಸ್ಯ ಮೇ ಕುರು ಸಾಚಿವ್ಯಂ ತಸ್ಯ ಭಾರ್ಯಾಪಹಾರಣೇ ।
ರಾಕ್ಷಸೇಂದ್ರವಚಃ ಶ್ರುತ್ವಾ ಮಾರೀಚೋ ವಾಕ್ಯಮಬ್ರವೀತ್ ॥
ಅನುವಾದ
ಆದ್ದರಿಂದ ಇದರ ಪ್ರತೀಕಾರಕ್ಕಾಗಿ ನಾನು ಅವನ ಪತ್ನಿಯನ್ನು ಅಪಹರಿಸಲು ಬಯಸುತ್ತಿರುವೆನು. ಈ ಕಾರ್ಯದಲ್ಲಿ ನೀನು ನನಗೆ ಸಹಾಯ ಮಾಡು. ರಾಕ್ಷಸೇಂದ್ರನ ಈ ಮಾತನ್ನು ಕೇಳಿ ಮಾರೀಚನು ಹೇಳಿದನು.॥41॥
ಮೂಲಮ್ - 42
ಆಖ್ಯಾತಾ ಕೇನ ವಾ ಸೀತಾಮಿತ್ರರೂಪೇಣ ಶತ್ರುಣಾ ।
ತ್ವಯಾ ರಾಕ್ಷಸಶಾರ್ದೂಲ ಕೋ ನನಂದಿತಿ ನಂದಿತಃ ॥
ಅನುವಾದ
ನಿಶಾಚರ ಶಿರೋಮಣಿಯೇ! ನಿನಗೆ ಸೀತೆಯನ್ನು ಕದ್ದು ತರುವ ಸಲಹೆ ಕೊಟ್ಟ ಆ ಮಿತ್ರ ರೂಪೀ ಶತ್ರುವು ಯಾರಾಗಿದ್ದಾನೆ? ನಿನ್ನಿಂದ ಸುಖ ಮತ್ತು ಆದರ ಪಡೆದರೂ ಸಂತೋಷವಾಗಿರದೆ ನಿನ್ನ ಕೆಡುಕನ್ನು ಮಾಡುವ ಆ ಪುರುಷನು ಯಾರು.॥42॥
ಮೂಲಮ್ - 43
ಸೀತಾಮಿಹಾನಯಸ್ವೇತಿ ಕೋ ಬ್ರವೀತಿ ಬ್ರವೀಹಿ ಮೇ ।
ರಕ್ಷೋಲೋಕಸ್ಯ ಸರ್ವಸ್ಯ ಕಃ ಶೃಂಗಂ ಛೇತ್ತುಮಿಚ್ಛತಿ ॥
ಅನುವಾದ
ನೀನು ಸೀತೆಯನ್ನು ಕದ್ದುಕೊಂಡು ಬಾ ಎಂದು ಯಾರು ಹೇಳಿದರು? ನನಗೆ ಅವನ ಹೆಸರು ಹೇಳು. ಸಮಸ್ತ ರಾಕ್ಷಸ ಜಗತ್ತಿನ ಕೊಂಬನ್ನು ಕತ್ತರಿಸಲು ಬಯಸುವವನು ಯಾರವನು.॥43॥
ಮೂಲಮ್ - 44
ಪ್ರೋತ್ಸಾಹಯತಿ ಯಶ್ಚ ತ್ವಾಂ ಸ ಚ ಶತ್ರುರಸಂಶಯಮ್ ।
ಆಶೀವಿಷಮುಖಾದ್ದಂಷ್ಟ್ರಾಮುದ್ಧರ್ತುಂ ಚೇಚ್ಛತಿ ತ್ವಯಾ ॥
ಅನುವಾದ
ಈ ಕಾರ್ಯದಲ್ಲಿ ನಿನಗೆ ಪ್ರೋತ್ಸಾಹಿಸುವವನು ನಿನ್ನ ಶತ್ರುವೇ ಆಗಿದ್ದಾನೆ, ಇದರಲ್ಲಿ ಸಂಶಯವೇ ಇಲ್ಲ. ಅವನು ನಿನ್ನ ಕೈಯಿಂದ ವಿಷಸರ್ಪದ ಬಾಯಿಯಿಂದ ಅದರ ಹಲ್ಲನ್ನು ಕೀಳಲು ಬಯಸುತ್ತಿರುವನು.॥44॥
ಮೂಲಮ್ - 45
ಕರ್ಮಣಾ ನೇನ ಕೇನಾಸಿ ಕಾಪಥಂ ಪ್ರತಿಪಾದಿತಃ ।
ಸುಖಸುಪ್ತಸ್ಯ ತೇ ರಾಜನ್ಪ್ರಹೃತಂ ಕೇನ ಮೂರ್ಧನಿ ॥
ಅನುವಾದ
ರಾಜನೇ! ಯಾರು ನಿನಗೆ ಇಂತಹ ತಪ್ಪು ಸಲಹೆಯನ್ನು ಕೊಟ್ಟು ಕೆಟ್ಟ ದಾರಿಗೆ ಹಚ್ಚಿರುವನು? ಸುಖವಾಗಿ ಮಲಗಿರುವ ನಿನ್ನ ತಲೆಗೆ ಯಾರು ಒದ್ದಿರುವನು.॥45॥
ಮೂಲಮ್ - 46
ವಿಶುದ್ಧವಂಶಾಭಿಜನಾಗ್ರಹಸ್ತ-
ತೇಜೋಮದಃ ಸಂಸ್ಥಿತದೋರ್ವಿಷಾಣಃ ।
ಉದೀಕ್ಷಿತುಂ ರಾವಣ ನೇಹ ಯುಕ್ತಃ
ಸ ಸಂಯುಗೇ ರಾಘವಗಂಧಹಸ್ತೀ ॥
ಅನುವಾದ
ರಾವಣನೇ! ರಾವೇಂದ್ರ ಶ್ರೀರಾಮನು ಗಂಧಯುಕ್ತ ಗಜರಾಜನಾಗಿದ್ದಾನೆ. ಅವನ ವಾಸನೆಯಿಂದಲೇ ಗಜರೂಪೀ ಯೋಧರು ದೂರ ಓಡಿಹೋಗುವರು. ವಿಶುದ್ಧ ಕುಲದಲ್ಲಿ ಹುಟ್ಟಿದುದೇ ರಾಮರೂಪೀ ಗಜದ ಸೊಂಡಿಲಾಗಿದೆ. ಪ್ರತಾಪವೇ ಮದವಾಗಿದೆ, ನೀಳವಾದ ತೋಳುಗಳೇ ಎರಡು ದಂತಗಳಾಗಿವೆ. ಯುದ್ಧ ಸ್ಥಳದಲ್ಲಿ ಅವನ ಕಡೆಗೆ ನೋಡುವುದೂ ಕೂಡ ನಿನಗೆ ಉಚಿತವಲ್ಲ, ಮತ್ತೆ ಕಾದಾಡುವ ಮಾತು ಎಲ್ಲಿ ಉಳಿಯಿತು.॥46॥
ಮೂಲಮ್ - 47
ಅಸೌ ರಣಾಂತಃಸ್ಥಿತಿಸಂಧಿವಾಲೋ
ವಿದಗ್ಧರಕ್ಷೋಮೃಗಹಾ ನೃಸಿಂಹಃ ।
ಸುಪ್ತಸ್ತ್ವಯಾ ಬೋಧಯಿತುಂ ನ ಶಕ್ಯಃ
ಶರಾಂಗಪೂರ್ಣೋ ನಿಶಿತಾಸಿದಂಷ್ಟ್ರಃ ॥
ಅನುವಾದ
ಆ ಶ್ರೀರಾಮನು ಮನುಷ್ಯ ರೂಪದಲ್ಲಿ ಸಿಂಹನಾಗಿರುವನು. ರಣರಂಗದಲ್ಲಿ ಸ್ಥಿತನಾಗುವುದೇ ಅವನ ಶರೀರದ ಸಂಧಿಗಳು ಮತ್ತು ಕೂದಲಾಗಿದೆ. ಆ ಸಿಂಹವು ಚತುರ ರಾಕ್ಷಸರೂಪೀ ಮೃಗಗಳನ್ನು ವಧಿಸುವವನಾಗಿದ್ದಾನೆ. ಬಾಣರೂಪೀ ಅಂಗಗಳಿಂದ ಪರಿಪೂರ್ಣವಾಗಿದ್ದು, ಖಡ್ಗವೇ ಅವನ ತೀಕ್ಷ್ಣ ಕೊರೆದಾಡೆಯಾಗಿದೆ. ಆ ಮಲಗಿರುವ ಸಿಂಹನನ್ನು ನೀನು ಎಚ್ಚರಿಸಬೇಡ.॥47॥
ಮೂಲಮ್ - 48
ಚಾಪಾಪಹಾರೇ ಭುಜವೇಗಪಂಕೇ
ಶರೋರ್ಮಿಮಾಲೇ ಸುಮಹಾಹವೌಘೇ ।
ನ ರಾಮಪಾತಾಲಮುಖೇಽತಿಘೋರೇ
ಪ್ರಸ್ಕಂದಿತುಂ ರಾಕ್ಷಸರಾಜಯುಕ್ತಮ್ ॥
ಅನುವಾದ
ರಾಕ್ಷಸರಾಜನೇ! ಶ್ರೀರಾಮನು ಪಾತಾಳತಲವ್ಯಾಪೀ ವಹಾಸಮುದ್ರನಾಗಿದ್ದಾನೆ, ಧನುಸ್ಸೇ ಆ ಸಮುದ್ರದೊಳಗೆ ಇರುವ ಮೊಸಳೆಯಾಗಿದೆ, ಭುಜಗಳ ವೇಗವೇ ಕೆಸರಾಗಿದೆ, ಬಾಣಗಳೇ ತರಂಗಗಳಾಗಿವೆ, ಮಹಾಯುದ್ಧವೇ ಅದರ ಅಗಾಧ ಜಲರಾಶಿಯಾಗಿದೆ. ಅವನ ಅತ್ಯಂತ ಭಯಂಕರ ಮುಖದಲ್ಲಿ ಅರ್ಥಾತ್ ವಡವಾನಲದಲ್ಲಿ ಹಾರುವುದು ನಿನಗೆ ಎಂದಿಗೂ ಉಚಿತವಲ್ಲ.॥48॥
ಮೂಲಮ್ - 49
ಪ್ರಸೀದ ಲಂಕೇಶ್ವರ ರಾಕ್ಷಸೇಂದ್ರ
ಲಂಕಾಂ ಪ್ರಸನ್ನೋ ಭವ ಸಾಧು ಗಚ್ಛ ।
ತ್ವಂ ಸ್ವೇಷು ದಾರೇಷು ರಮಸ್ಯ ನಿತ್ಯಂ
ರಾಮಂ ಸಭಾರ್ಯೋ ರಮತಾಂ ವನೇಷು ॥
ಅನುವಾದ
ಲಂಕೇಶ್ವರನೇ! ಪ್ರಸನ್ನನಾಗು, ರಾಕ್ಷಸರಾಜನೇ! ಆನಂದವಾಗಿ ಇರು ಮತ್ತು ಕ್ಷೇಮವಾಗಿ ಲಂಕೆಗೆ ಮರಳಿ ಹೋಗು. ನೀನು ಸದಾ ಪುರಿಯಲ್ಲಿ ತನ್ನ ಪತ್ನಿಯರೊಂದಿಗೆ ರಮಿಸುತ್ತಾ ಇರು ಮತ್ತು ರಾಮನು ತನ್ನ ಪತ್ನಿಯೊಂದಿಗೆ ವನದಲ್ಲಿ ವಿಹರಿಸಲಿ.॥49॥
ಮೂಲಮ್ - 50
ಏವಮುಕ್ತೋ ದಶಗ್ರೀವೋ ಮಾರೀಚೇನ ಸ ರಾವಣಃ ।
ನ್ಯವರ್ತತ ಪುರೀಂ ಲಂಕಾಂ ವಿವೇಶ ಚ ಗೃಹೋತ್ತಮಮ್ ॥
ಅನುವಾದ
ಮಾರೀಚನು ಹೀಗೆ ಹೇಳಿದಾಗ ದಶಮುಖ ರಾವಣನು ಲಂಕೆಗೆ ಮರಳಿದನು ಹಾಗೂ ತನ್ನ ಸುಂದರ ಭವನವನ್ನು ಹೊಕ್ಕನು.॥50॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥31॥