वाचनम्
ಭಾಗಸೂಚನಾ
ಶ್ರೀರಾಮನ ವ್ಯಂಗ್ಯವಾದ ನುಡಿಗೆ ಖರನೂ ನಿಂದಿಸುತ್ತಾ ಅವನ ಮೇಲೆ ಸಾಲವೃಕ್ಷದಿಂದ ಪ್ರಹಾರ ಮಾಡಿದುದು, ಶ್ರೀರಾಮನು ಆ ವೃಕ್ಷವನ್ನು ತುಂಡರಿಸಿ ತೀಕ್ಷ್ಣವಾದ ಬಾಣದಿಂದ ಖರನ್ನನ್ನು ಸಂಹರಿಸಿದುದು, ಮಹರ್ಷಿಗಳು ಶ್ರೀರಾಮನನ್ನು ಪ್ರಶಂಸಿಸಿದುದು
ಮೂಲಮ್ - 1
ಭಿತ್ತ್ವಾ ತು ತಾಂ ಗದಾಂ ಬಾಣೈ ರಾಘವೋ ಧರ್ಮವತ್ಸಲಃ ।
ಸ್ಮಯಮಾನ ಇದಂ ವಾಕ್ಯಂ ಸಂರಬ್ಧ ಮಿದಮಬ್ರವೀತ್ ॥
ಅನುವಾದ
ಧರ್ಮಪ್ರೇಮಿ ಭಗವಾನ್ ಶ್ರೀರಾಮನು ತನ್ನ ಬಾಣಗಳಿಂದ ಖರನ ಗದೆಯನ್ನು ವಿವೀಣಗೊಳಿಸಿ ಮುಗುಳ್ನಗುತ್ತಾ, ರೋಷಸೂಚಕವಾಗಿ ಹೀಗೆ ಹೇಳಿದನ.॥1॥
ಮೂಲಮ್ - 2
ಏತತ್ತೇ ಬಲಸರ್ವಸ್ವಂ ದರ್ಶಿತಂ ರಾಕ್ಷಸಾಧಮ ।
ಶಕ್ತಿಹೀನತರೋ ಮತ್ತೋ ವೃಥಾ ತ್ವಮುಪಗರ್ಜಸಿ ॥
ಅನುವಾದ
ರಾಕ್ಷಸಾಧಮನೇ! ನೀನು ಈ ಗದೆಯೊಂದಿಗೆ ನಿನ್ನ ಎಲ್ಲ ಬಲವನ್ನು ತೋರಿಸಿರುವೆ. ಇದರಿಂದ ನೀನು ನನಗಿಂತ ಅತ್ಯಂತ ಶಕ್ತಿಹೀನನಾಗಿದ್ದು, ವ್ಯರ್ಥವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವೆ ಎಂಬುದು ಸಿದ್ಧವಾಯಿತು.॥2॥
ಮೂಲಮ್ - 3
ಏಷಾ ಬಾಣ ವಿನಿರ್ಭಿನ್ನಾ ಗದಾ ಭೂಮಿತಲಂ ಗತಾ ।
ಅಭಿಧಾನಪ್ರಗಲ್ಭಸ್ಯ ತವ ಪ್ರತ್ಯಯಘಾತಿನೀ ॥
ಅನುವಾದ
ನನ್ನ ಬಾಣ ಗಳಿಂದ ನಿನ್ನ ಈ ಗದೆಯು ನುಚ್ಚುನೂರಾಗಿ ಭೂಮಿಗೆ ಬಿದ್ದಿದೆ. ಈ ಗದೆಯಿಂದ ಶತ್ರುವನ್ನು ವಧಿಸುವೆ ಎಂಬ ನಿನ್ನ ವಿಶ್ವಾಸವನ್ನು ಈ ಗದೆಯೇ ಸುಳ್ಳಾಗಿಸಿತು. ನೀನು ಕೇವಲ ಮಾತಿನಲ್ಲೇ ಪ್ರೌಢಿಮೆಯನ್ನು ತೊರಿಸುವವನು ಎಂಬುದು ಈಗ ಸ್ಪಷ್ಟವಾಯಿತು. (ನಿನ್ನಲ್ಲಿ ಯಾವ ಪರಾಕ್ರಮವೂ ಇಲ್ಲ..॥3॥
ಮೂಲಮ್ - 4
ಯತ್ತ್ವಯೋಕ್ತಂವಿನಷ್ಟಾನಾಮಿದಮಶ್ರುಪ್ರಮಾರ್ಜನಮ್ ।
ರಾಕ್ಷಸಾನಾಂ ಕರೋಮೀತಿ ಮಿಥ್ಯಾ ತದಪಿ ತೇ ವಚಃ ॥
ಅನುವಾದ
‘ನಿನ್ನನ್ನು ವಿನಾಶಗೊಳಿಸಿ ಅದರ ಮೂಲಕ ಹತರಾದ ರಾಕ್ಷಸರ ಬಂಧುಗಳ ಕಣ್ಣೀರನ್ನು ಒರೆಸುತ್ತೇನೆ’ ಎಂದು ಸ್ವಲ್ಪ ಹೊತ್ತಿಗೆ ಮುಂಚೆ ಆಡಿದ ನಿನ್ನ ಮಾತೂ ಸುಳ್ಳಾಯಿತು.॥4॥
ಮೂಲಮ್ - 5
ನೀಚಸ್ಯ ಕ್ಷುದ್ರಶೀಲಸ್ಯ ಮಿಥ್ಯಾವೃತ್ತಸ್ಯ ರಕ್ಷಸಃ ।
ಪ್ರಾಣಾನಪಹರಿಷ್ಯಾಮಿ ಗರುತ್ಮಾನಮೃತಂ ಯಥಾ ॥
ಅನುವಾದ
ನೀನು ನೀಚನೂ, ಕ್ಷುದ್ರಸ್ವಭಾವದವನೂ, ಮಿಥ್ಯಾಚಾರಿಯೂ ಆದ ರಾಕ್ಷಸನಾಗಿರುವೆ. ಗರುಡನು ದೇವತೆಗಳಿಂದ ಅಮೃತವನ್ನು ಅಪಹರಣ ಮಾಡಿದಂತೆ ನಾನು ನಿನ್ನ ಪ್ರಾಣಗಳನ್ನು ಹರಣ ಮಾಡುವೆನು.॥5॥
ಮೂಲಮ್ - 6
ಅದ್ಯ ತೇ ಭಿನ್ನ ಕಂಠಸ್ಯ ಫೇನಬುದ್ಬುದಭೂಷಿತಮ್ ।
ವಿದಾರಿತಸ್ಯ ಮದ್ಬಾಣೈರ್ಮಹೀ ಪಾಸ್ಯತಿ ಶೋಣಿತಮ್ ॥
ಅನುವಾದ
ಈಗ ನಾನು ನನ್ನ ಬಾಣಗಳಿಂದ ನಿನ್ನ ಶರೀರವನ್ನು ವಿದೀರ್ಣಗೊಳಿಸಿ ನಿನ್ನ ಕತ್ತನ್ನು ತುಂಡರಿಸಿ ಬಿಡುವೆ. ಮತ್ತೆ ಈ ಪೃಥಿವಿಯು ನೊರೆಯಿಂದ ಕೂಡಿದ ನಿನ್ನ ಬಿಸಿ ಬಿಸಿ ರಕ್ತವನ್ನು ಪಾನಮಾಡುವುದು.॥6॥
ಮೂಲಮ್ - 7
ಪಾಂಸುರೂಷಿತಸರ್ವಾಂಗಃ ಸ್ರಸ್ತನ್ಯಸ್ತಭುಜದ್ವಯಃ ।
ಸ್ವಪ್ಸ್ಯಸೇ ಗಾಂ ಸಮಾಶ್ಲಿಷ್ಯ ದುರ್ಲಭಾಂ ಪ್ರಮದಾಮಿವ ॥
ಅನುವಾದ
ನಿನ್ನ ಇಡೀ ದೇಹವು ಧೂಳಿಧೂಸರಿತವಾಗಿ, ಎರಡು ಭುಜಗಳೂ ಶರೀರದಿಂದ ಬೇರ್ಪಟ್ಟು ಭೂಮಿಗೆ ಬಿದ್ದು ಹೋಗುವುದು ಹಾಗೂ ಆ ಸ್ಥಿತಿಯಲ್ಲಿ ನೀನು ದುರ್ಲಭ ಯುವತಿಯಂತೆ ಈ ಪೃಥ್ವಿಯನ್ನು ಆಲಂಗಿಸಿ ಎಂದೆಂದಿಗೂ ಮಲಗಿಬಿಡುವೆ.॥7॥
ಮೂಲಮ್ - 8
ಪ್ರವೃದ್ಧನಿದ್ರೇ ಶಯಿತೇ ತ್ವಯಿ ರಾಕ್ಷಸಪಾಂಸನೇ ।
ಭವಿಷ್ಯಂತಿ ಶರಣ್ಯಾನಾಂ ಶರಣ್ಯಾ ದಂಡಕಾ ಇಮೇ ॥
ಅನುವಾದ
ನಿನ್ನಂತಹ ರಾಕ್ಷಸಕುಲ ಕಲಂಕಿತನು ಎಂದೆಂದಿಗೂ ಮಹಾ ನಿದ್ದೆಯಲ್ಲಿ ಮಲಗಿದಾಗ ಈ ದಂಡಕಾರಣ್ಯ ಪ್ರದೇಶವು ರಕ್ಷಕರೇ ಇಲ್ಲದ ಮಹರ್ಷಿಗಳಿಗೆ ಆಶ್ರಯಸ್ಥಾನವಾಗುವುದು.॥8॥
ಮೂಲಮ್ - 9
ಜನಸ್ಥಾನೇ ಹತಸ್ಥಾನೇ ತವ ರಾಕ್ಷಸ ಮಚ್ಛರೈಃ ।
ನಿರ್ಭಯಾ ವಿಚರಿಷ್ಯಂತಿ ಸರ್ವತೋ ಮುನಯೋ ವನೇ ॥
ಅನುವಾದ
ರಾಕ್ಷಸನೇ! ಈ ಜನಸ್ಥಾನದಲ್ಲಿ ಇದ್ದ ನಿನ್ನ ನಿವಾಸಸ್ಥಾನವು ನನ್ನ ಬಾಣಗಳಿಂದ ನಾಶವಾದಬಳಿಕ ಮುನಿಗಳು ಈ ವನದಲ್ಲಿ ಎಲ್ಲೆಡೆ ನಿರ್ಭಯರಾಗಿ ಸಂಚರಿಸುವರು.॥9॥
ಮೂಲಮ್ - 10
ಅದ್ಯ ವಿಪ್ರಸರಿಷ್ಯಂತಿ ರಾಕ್ಷಸ್ಯೋ ಹತಬಾಂಧವಾಃ ।
ಬಾಷ್ಪಾರ್ದ್ರವದನಾ ದೀನಾ ಭಯಾದನ್ಯಭಯಾವಹಾಃ ॥
ಅನುವಾದ
ಇಷ್ಟರವರೆಗೆ ಬೇರೆಯವರನ್ನು ಭಯಪಡಿಸುತ್ತಿದ್ದ ರಾಕ್ಷಸಿಯರು ಇಂದು ತಮ್ಮ ಬಾಂಧವರು ಸತ್ತುಹೋಗಿದ್ದರಿಂದ ದೀನರಾಗಿ ಕಂಬನಿಗಳನ್ನು ಸುರಿಸುತ್ತಾ ಜನಸ್ಥಾನದಿಂದ ಸ್ವತಃ ಭಯದಿಂದ ಓಡಿಹೋಗುವರು.॥10॥
ಮೂಲಮ್ - 11
ಅದ್ಯ ಶೋಕರಸಜ್ಞಾಸ್ತಾ ಭವಿಷ್ಯಂತಿ ನಿರರ್ಥಕಾಃ ।
ಅನುರೂಪಕುಲಾಃ ಪತ್ನ್ಯೋ ಯಾಸಾಂ ತ್ವಂ ಪತಿರೀದೃಶಃ ॥
ಅನುವಾದ
ದುರಾಚಾರಿಯಾದ ನಿನ್ನಂತಹ ಪತಿಯನ್ನು ಹೊಂದಿದ ನಿನ್ನ ಪತ್ನಿಯರು ಇಂದು ನೀನು ಸತ್ತುಹೋದಾಗ ಕಾಮಾದಿ ಪುರುಷಾರ್ಥದಿಂದ ವಂಚಿತರಾಗಿ ಶೋಕರೂಪೀ ಸ್ಥಾಯೀ ಭಾವವುಳ್ಳ ಕರುಣರಸವನ್ನು ಅನುಭವಿಸ ತೊಡಗುವರು.॥11॥
ಮೂಲಮ್ - 12
ನೃಶಂಸ ಶೀಲ ಕ್ಷುದ್ರಾತ್ಮನ್ ನಿತ್ಯಂ ಬ್ರಾಹ್ಮಣಕಂಟಕ ।
ತ್ವತ್ಕೃತೇ ಶಂಕಿತೈರಗ್ನೌ ಮುನಿಭಿಃ ಪಾತ್ಯತೇ ಹವಿಃ ॥
ಅನುವಾದ
ಕ್ರೂರಸ್ವಭಾವವುಳ್ಳ ನಿಶಾಚರನೇ! ನಿನ್ನ ಮನಸ್ಸು ಸದಾ ಕ್ಷುದ್ರ ವಿಚಾರಗಳಿಂದ ತುಂಬಿರುತ್ತದೆ. ನೀನು ಬ್ರಾಹ್ಮಣರಿಗೆ ಕಂಟಕ ಪ್ರಾಯನಾಗಿರುವೆ. ನಿನ್ನ ಕಾರಣದಿಂದಲೇ ಮುನಿಗಳು ಶಂಕಿತರಾಗಿಯೇ ಅಗ್ನಿಯಲ್ಲಿ ಹವಿಸ್ಸನ್ನು ಅರ್ಪಿಸುತ್ತಾರೆ.॥12॥
ಮೂಲಮ್ - 13
ತಮೇವಮಭಿಸಂರಬ್ಧಂ ಬ್ರುವಾಣಂ ರಾಘವಂ ವನೇ ।
ಖರೋ ನಿರ್ಭರ್ತ್ಸಯಾಮಾಸ ರೋಷಾತ್ಖರತರಸ್ವರಃ ॥
ಅನುವಾದ
ವನದಲ್ಲಿ ಶ್ರೀರಾಮಚಂದ್ರನು ಹೀಗೆ ರೋಷಪೂರ್ಣ ಮಾತುಗಳನ್ನು ಆಡುತ್ತಿದ್ದಾಗ ಕ್ರೋಧದಿಂದ ಖರನ ಸ್ವರವೂ ಅತ್ಯಂತ ಕಠೋರವಾಗಿ, ಅವನು ರಾಮನನ್ನು ತಿರಸ್ಕರಿಸುತ್ತಾ ಹೇಳಿದನು.॥13॥
ಮೂಲಮ್ - 14
ದೃಢಂ ಖಲ್ವವಲಿಪ್ತೋಽಸಿ ಭಯೇಷ್ವಪಿ ಚ ನಿರ್ಭಯಃ ।
ವಾಚ್ಯಾವಾಚ್ಯಂ ತತೋ ಹಿ ತ್ವಂ ಮೃತ್ಯೋರ್ವಶ್ಯೋ ನ ಬುಧ್ಯಸೇ ॥
ಅನುವಾದ
ಅಯ್ಯಾ! ನೀನು ನಿಶ್ಚಯವಾಗಿ ಭಾರೀ ಗರ್ವಿಷ್ಠನಾಗಿರುವೆ, ಭಯದ ಸಂದರ್ಭಗಳಲ್ಲಿಯೂ ನಿರ್ಭಯನಾಗಿರುವೆ. ನೀನು ಮೃತ್ಯುವಿಗೆ ಅಧೀನನಾಗಿರುವಂತೆ ತೋರುತ್ತದೆ. ಯಾವಾಗ ಏನು ಹೇಳಬೇಕು, ಯಾವುದನ್ನು ಹೇಳಬಾರದು ಎಂಬುದೂ ನಿನಗೆ ತಿಳಿಯದು.॥14॥
ಮೂಲಮ್ - 15
ಕಾಲಪಾಶಪರಿಕ್ಷಿಪ್ತಾ ಭವಂತಿ ಪುರುಷಾ ಹಿ ಯೇ ।
ಕಾರ್ಯಾಕಾರ್ಯಂ ನ ಜಾನಂತಿ ತೇ ನಿರಸ್ತಷಡಿಂದ್ರಿಯಾಃ ॥
ಅನುವಾದ
ಕಾಲಪಾಶದಲ್ಲಿ ಸಿಕ್ಕಿಹಾಕಿಕೊಂಡಿರುವವನು ಆರು ಇಂದ್ರಿಯಗಳನ್ನೂ ಕಳೆದುಕೊಂಡು ಕಾರ್ಯಾಕಾರ್ಯಗಳ ವಿವೇಚನೆಯ ಜ್ಞಾನವನ್ನೂ ಕಳೆದುಕೊಳ್ಳುವನು.॥15॥
ಮೂಲಮ್ - 16
ಏವಮುಕ್ತ್ವ ತತೋ ರಾಮಂ ಸಂರುಧ್ಯ ಭ್ರುಕುಟಿಂ ತತಃ ।
ಸ ದದರ್ಶ ಮಹಾಸಾಲಮವಿದೂರೇ ನಿಶಾಚರಃ ॥
ಮೂಲಮ್ - 17
ರಣೇ ಪ್ರಹರಣಸ್ಯಾರ್ಥೇ ಸರ್ವತೋ ಹ್ಯವಲೋಕಯನ್ ।
ಸ ತಮುತ್ಪಾಟಯಾಮಾಸ ಸಂದಷ್ಟದಶನಚ್ಛದಮ್ ॥
ಅನುವಾದ
ಹೀಗೆ ಹೇಳಿ ಆ ನಿಶಾಚರನು ಓರೆ ನೋಟದಿಂದ ಶ್ರೀರಾಮನನ್ನು ಒಮ್ಮೆ ನೋಡಿ, ರಣಭೂಮಿಯಲ್ಲಿ ಅವನ ಮೇಲೆ ಪ್ರಹಾರ ಮಾಡಲು ಸುತ್ತಲೂ ಕಣ್ಣಾಡಿಸಿದನು. ಅಷ್ಟರಲ್ಲಿ ಅವನಿಗೆ ಹತ್ತಿರದಲ್ಲೇ ಇದ್ದ ಒಂದು ಎತ್ತರವಾದ ಸರ್ಜವೃಕ್ಷವು ಕಣ್ಣಿಗೆ ಬಿತ್ತು. ಖರನು ಅವುಡು ಕಚ್ಚಿ ಆ ವೃಕ್ಷವನ್ನು ಕಿತ್ತುಕೊಂಡನು.॥16-17॥
ಮೂಲಮ್ - 18
ತಂ ಸಮುತ್ಕಿಕ್ಷಪ್ಯ ಬಾಹುಭ್ಯಾಂ ವಿನರ್ದಿತ್ವಾ ಮಹಾಬಲಃ ।
ರಾಮಮುದ್ದಿಶ್ಯ ಚಿಕ್ಷೇಪ ಹತಸ್ತ್ವಮಿತಿ ಚಾಬ್ರವೀತ್ ॥
ಅನುವಾದ
ಮತ್ತೆ ಮಹಾಬಲಿ ಆ ನಿಶಾಚರನು ವಿಕಟವಾಗಿ ಗರ್ಜಿಸಿ ಎರಡೂ ಕೈಗಳಿಂದ ಆ ವೃಕ್ಷವನ್ನು ಎತ್ತಿ ಶ್ರೀರಾಮನ ಮೇಲೆ ರಭಸದಿಂದ ಎಸೆದು ‘ನೋಡು, ಈಗ ನೀನು ಸತ್ತೇಹೋದೆ’ ಎಂದು ಬೊಬ್ಬಿರಿಸಿದನು.॥18॥
ಮೂಲಮ್ - 19
ತಮಾಪತಂತಂ ಬಾಣೌಘೈಶ್ಛಿತ್ವಾ ರಾಮಃ ಪ್ರತಾಪವಾನ್ ।
ರೋಷಮಾಹಾರಯತ್ತೀವ್ರಂ ನಿಹಂತುಂ ಸಮರೇ ಖರಮ್ ॥
ಅನುವಾದ
ಪರಮಪ್ರತಾಪೀ ಭಗವಾನ್ ಶ್ರೀರಾಮನು ತನ್ನ ಮೇಲೆ ಬೀಳಲಿರುವ ಆ ವೃಕ್ಷವನ್ನು ಬಾಣ ಸಮೂಹದಿಂದ ಕತ್ತರಿಸಿ ಬೀಳಿಸಿದನು ಮತ್ತು ಆ ಸಮರ ಭೂಮಿಯಲ್ಲಿ ಖರನನ್ನು ಕೊಲ್ಲಲು ಅತ್ಯಂತ ಕ್ರೋಧವನ್ನು ಪ್ರಕಟಿಸಿದನು.॥19॥
ಮೂಲಮ್ - 20
ಜಾತಸ್ವೇದಸ್ತತೋ ರಾಮೋ ರೋಷರಕ್ತಾಂತಲೋಚನಃ ।
ನಿರ್ಬಿಭೇದ ಸಹಸ್ರೇಣ ಬಾಣಾನಾಂ ಸಮರೇ ಖರಮ್ ॥
ಅನುವಾದ
ಆಗ ಶ್ರೀರಾಮನ ಶರೀರದಲ್ಲಿ ಬೆವರು ಬಂದಿತ್ತು. ಅವನ ನೇತ್ರಗಳು ರೋಷದಿಂದ ಕೆಂಪಾಗಿದ್ದವು. ಅವನು ಸಾವಿರಾರು ಬಾಣಗಳನ್ನು ಪ್ರಹರಿಸಿ ಸಮರಾಂಗಣದಲ್ಲಿ ಖರನನ್ನು ಕ್ಷತ-ವಿಕ್ಷತಗೊಳಿಸಿದನು.॥20॥
ಮೂಲಮ್ - 21
ತಸ್ಯ ಬಾಣಾಂತರಾದ್ ರಕ್ತಂ ಬಹು ಸುಸ್ರಾವ ಫೇನಿಲಮ್ ।
ಗಿರೇಃ ಪ್ರಸ್ರವಣಸ್ಯೇವ ಧಾರಾಣಾಂ ಚ ಪರಿಸ್ರವಃ ॥
ಅನುವಾದ
ಅವನ ಬಾಣಗಳ ಆಘಾತದಿಂದ ಆ ನಿಶಾಚರನ ಶರೀರದಲ್ಲಿ ಆದ ಗಾಯಗಳಿಂದ ಪರ್ವತದಿಂದ ಜಲಗಳ ಧಾರೆಯು ಹರಿಯುವಂತೆ ಬಹಳವಾಗಿ ನೊರೆಯಿಂದ ಕೂಡಿದ ರಕ್ತವು ಹರಿಯತೊಡಗಿತು.॥21॥
ಮೂಲಮ್ - 22
ವಿಕಲಃ ಸ ಕೃತೋ ಬಾಣೈಃ ಖರೋ ರಾಮೇಣ ಸಂಯುಗೇ ।
ಮತ್ತೋ ರುಧಿರಗಂಧೇನ ತಮೇವಾಭ್ಯದ್ರವದ್ ದ್ರುತಮ್ ॥
ಅನುವಾದ
ಶ್ರೀರಾಮನು ರಣರಂಗದಲ್ಲಿ ತನ್ನ ಬಾಣಗಳಿಂದ ಖರನನ್ನು ವ್ಯಾಕುಲಗೊಳಿಸಿದ್ದರೂ (ಅವನ ಸಾಹಸ ಕಡಿಮೆ ಆಗಲಿಲ್ಲ.) ಅವನು ರಕ್ತದ ವಾಸನೆಯಿಂದ ಉನ್ಮತ್ತನಾಗಿ ವೇಗವಾಗಿ ಶ್ರೀರಾಮನ ಕಡೆಗೇ ಧಾವಿಸಿದನು.॥22॥
ಮೂಲಮ್ - 23
ತಮಾಪತಂತಂ ಸಂಕ್ರುದ್ಧಂ ಕೃತಾಸ್ತ್ರೋ ರುಧಿರಾಪ್ಲುತಮ್ ।
ಅಪಾಸರ್ಪದ್ ದ್ವಿತ್ರಿಪದಂ ಕಿಂಚಿತ್ತ್ವರಿತವಿಕ್ರಮಃ ॥
ಅನುವಾದ
ಅಸ ವಿದ್ಯಾವಿಶಾರದ ಭಗವಾನ್ ಶ್ರೀರಾಮನು ಈ ರಾಕ್ಷಸನು ರಕ್ತದಿಂದ ತೋಯ್ದಹೋಗಿದ್ದರೂ ಅತ್ಯಂತ ಕ್ರೋಧಗೊಂಡು ನನ್ನ ಕಡೆಗೆ ಬರುತ್ತಿದ್ದಾನೆ ಎಂದು ನೋಡಿ ಕೂಡಲೇ ಎರಡು ಮೂರು ಹೆಜ್ಜೆ ಹಿಂದೆ ಸರಿದನು. (ಏಕೆಂದರೆ ಬಹಳ ಹತ್ತಿರವಾದಾಗ ಬಾಣಬಿಡಲು ಸಾಧ್ಯವಾಗುತ್ತಿರಲಿಲ್ಲ..॥23॥
ಮೂಲಮ್ - 24
ತತಃಪಾವಕಸಂಕಾಶಂ ವಧಾಯ ಸಮರೇ ಶರಮ್ ।
ಖರಸ್ಯ ರಾಮೋ ಜಗ್ರಾಹ ಬ್ರಹ್ಮದಂಡಮಿವಾಪರಮ್ ॥
ಅನುವಾದ
ಅನಂತರ ಶ್ರೀರಾಮನು ಸಮರಾಂಗಣದಲ್ಲಿ ಖರನ್ನು ವಧಿಸಲು ಇನ್ನೊಂದು ಬ್ರಹ್ಮದಂಡದಂತೆ ಭಯಂಕರವಾಗಿದ್ದ ಒಂದು ಅಗ್ನಿಯಂತೆ ತೇಜಸ್ವಿ ಬಾಣವನ್ನು ಕೈಗೆತ್ತಿಕೊಂಡನು.॥24॥
ಮೂಲಮ್ - 25
ತದ್ ದತ್ತಂ ಮಘವತಾ ಸುರರಾಜೇನ ಧೀಮತಾ ।
ಸಂದಧೇ ಚಸ ಧರ್ಮಾತ್ಮಾ ಮುಮೋಚ ಚ ಖರಂ ಪ್ರತಿ ॥
ಅನುವಾದ
ಆ ಬಾಣವನ್ನು ದೇವೇಂದ್ರನು ಕೊಟ್ಟಿದ್ದನು. ಧರ್ಮಾತ್ಮಾ ಶ್ರೀರಾಮನು ಅದನ್ನು ಧನುಸ್ಸಿಗೆ ಹೂಡಿ, ಖರನಿಗೆ ಗುರಿಯಿಟ್ಟು ಪ್ರಯೋಗಿಸಿದನು.॥25॥
ಮೂಲಮ್ - 26
ಸ ವಿಮುಕ್ತೋ ಮಹಾಬಾಣೋ ನಿರ್ಘಾತಸಮನಿಃಸ್ವನಃ ।
ರಾಮೇಣ ಧನುರಾಯಮ್ಯ ಖರಸ್ಯೋರಸಿ ಚಾಪತತ್ ॥
ಅನುವಾದ
ಆ ಬಾಣವನ್ನು ಬಿಟ್ಟಾಗ ವಜ್ರಪಾತದಂತೆ ಭಯಾನಕ ಶಬ್ಧವಾಯಿತು. ಶ್ರೀರಾಮನು ತನ್ನ ಧನುಸ್ಸನ್ನು ಕಿವಿವರೆಗೆ ಸೆಳೆದುಬಿಟ್ಟಿದ್ದನು. ಅದು ಖರನ ಎದೆಗೆ ತಾಕಿತು.॥26॥
ಮೂಲಮ್ - 27
ಸ ಪಪಾತ ಖರೋ ಭೂಮೌ ದಹ್ಯಮಾನಃ ಶರಾಗ್ನಿನಾ ।
ರುದ್ರೇಣೇವ ವಿನಿರ್ದಗ್ಧಃ ಶ್ವೇತಾರಣ್ಯೇ ಯಥಾಂಧಕಃ ॥
ಅನುವಾದ
ಶ್ವೇತವನದಲ್ಲಿ ಭಗವಾನ್ ರುದ್ರನು ಅಂಧಕಾಸುರನನ್ನು ಸುಟ್ಟು ಭಸ್ಮಮಾಡಿದ್ದಂತೆಯೇ ದಂಡಕಾರಣ್ಯದಲ್ಲಿ ಶ್ರೀರಾಮನ ಆ ಬಾಣದ ಬೆಂಕಿಯಲ್ಲಿ ಬೆಂದುಹೋಗಿ ನಿಶಾಚರ ಖರನು ಭೂಮಿಗೆ ಕುಸಿದುಬಿದ್ದನು.॥27॥
ಮೂಲಮ್ - 28
ಸ ವೃತ್ರಇವ ವಜ್ರೇಣ ಫೇನೇನ ನಮುಚಿರ್ಯಥಾ ।
ಬಲೋ ವೇಂದ್ರಾಶನಿಹತೋ ನಿಪಪಾತ ಹತಃ ಖರಃ ॥
ಅನುವಾದ
ವಜ್ರದಿಂದ ವತ್ರಾಸುರ, ನೊರೆಯಿಂದ ನಮೂಚಿ ಮತ್ತು ಇಂದ್ರನ ಅಶನಿಯಿಂದ ಬಲಾಸುರ ಸತ್ತುಹೋದಂತೆ ಶ್ರೀರಾಮನ ಆ ಬಾಣದಿಂದ ಖರನು ಹತನಾಗಿ ಧರಾಶಾಯಿಯಾದನು.॥28॥
ಮೂಲಮ್ - 29
ಏತಸ್ಮಿನ್ನಂತರೇ ದೇವಾಶ್ಚಾರಣೈಃ ಸಹ ಸಂಗತಾಃ ।
ದುಂದುಭೀಂಶ್ಚಾಭಿನಿಘ್ನಂತಃ ಪುಷ್ಪವರ್ಷಂ ಸಮಂತತಃ ॥
ಮೂಲಮ್ - 30
ರಾಮಸ್ಯೋಪರಿ ಸಂಹೃಷ್ಟಾ ವವರ್ಷುರ್ವಿಸ್ಮಿತಾಸ್ತದಾ ।
ಅರ್ಧಾಧಿಕಮುಹೂರ್ತೇನ ರಾಮೇಣ ನಿಶಿತೈಃ ಶರೈಃ ॥
ಮೂಲಮ್ - 31
ಚತುರ್ದಶ ಸಹಸ್ರಾಣಿ ರಕ್ಷಸಾಂ ಕಾಮರೂಪಿಣಾಮ್ ।
ಖರದೂಷಣಮುಖ್ಯಾನಾಂ ನಿಹತಾನಿ ಮಹಾಮೃಧೇ ॥
ಅನುವಾದ
ಅದೇ ಸಮಯದಲ್ಲಿ ದೇವತೆಗಳು ಚಾರಣರೊಂದಿಗೆ ಸೇರಿ ಅಲ್ಲಿಗೆ ಬಂದರು ಹಾಗೂ ಹರ್ಷಗೊಂಡು ದುಂದುಭಿ ಗಳನ್ನು ನುಡಿಸುತ್ತಾ ಶ್ರೀರಾಮನ ಮೇಲೆ ಎಲ್ಲೆಡೆಗಳಿಂದ ಪುಷ್ಪವೃಷ್ಟಿ ಮಾಡತೊಡಗಿದರು. ಶ್ರೀರಾಮನು ತನ್ನ ಹರಿತವಾದ ಬಾಣಗಳಿಂದ ಒಂದೂವರೆ ಮುಹೂರ್ತದಲ್ಲಿ ಇಚ್ಛಾನುರೂಪ ಧರಿಸುವ ಖರ-ಧೂಷಣ ಮೊದಲಾದ ಹದಿನಾಲ್ಕು ಸಾವಿರ ರಾಕ್ಷಸರನ್ನು ಈ ಮಹಾಸಮರದಲ್ಲಿ ಸಂಹಾರ ಮಾಡಿದುದನ್ನು ನೋಡಿ ಅವರಿಗೆ ಬಹಳ ಆಶ್ಚರ್ಯವಾಯಿತು.॥29-31॥
ಮೂಲಮ್ - 32
ಅಹೋ ಬತ ಮಹತ್ಕರ್ಮ ರಾಮಸ್ಯ ವಿದಿತಾತ್ಮನಃ ।
ಅಹೋ ವೀರ್ಯಮಹೋದಾರ್ಡ್ಯಂ ವಿಷ್ಣೋರಿವ ಹಿ ದೃಶ್ಯತೇ ॥
ಅನುವಾದ
ಆಹಾ! ವಿದಿತಾತ್ಮನಾದ ಭಗವಾನ್ ಶ್ರೀರಾಮನ ಈ ಕರ್ಮವು ಮಹಾನ್ ಮತ್ತು ಅದ್ಭುತವಾಗಿದೆ, ಇವನ ಬಲ- ಪರಾಕ್ರಮವೂ ಅದ್ಭುತವಾಗಿದೆ. ಇವನಲ್ಲಿ ವಿಷ್ಣುವಿನಂತೆ ಆಶ್ಚರ್ಯಜನಕ ದೃಢತೆ ಇದೆ ಎಂದು ಹೇಳುತ್ತಿದ್ದರು.॥32॥
ಮೂಲಮ್ - 33½
ಇತ್ಯೇವಮುಕ್ತ್ವಾ ತೇ ಸರ್ವೇ ಯಯುರ್ದೇವಾ ಯಥಾಗತಮ್ ।
ತತೋ ರಾಜರ್ಷಯಃ ಸರ್ವೇ ಸಂಗತಾಃ ಪರಮರ್ಷಯಃ ॥
ಸಭಾಜ್ಯ ಮುದಿತಾ ರಾಮಂ ಸಾಗಸ್ತ್ಯಾ ಇದಮಬ್ರುವನ್ ।
ಅನುವಾದ
ಹೀಗೆ ಹೇಳಿ ಆ ದೇವತೆಗಳು ತಮ್ಮ-ತಮ್ಮ ಲೋಕಗಳಿಗೆ ತೆರಳಿದರು. ಅನಂತರ ಅನೇಕ ರಾಜರ್ಷಿಗಳು, ಅಗಸ್ತ್ಯಾದಿ ಮಹರ್ಷಿಗಳು ಅಲ್ಲಿಗೆ ಬಂದು ಸಂತೋಷವಾಗಿ ಶ್ರೀರಾಮನನ್ನು ಸತ್ಕರಿಸಿ ಈ ಪ್ರಕಾರ ಹೇಳಿದರು.॥33½॥
ಮೂಲಮ್ - 34
ಏತದರ್ಥಂ ಮಹಾತೇಜಾ ಮಹೇಂದ್ರಃ ಪಾಕಶಾಸನಃ॥
ಮೂಲಮ್ - 35
ಶರಭಂಗಾಶ್ರಮಂ ಪುಣ್ಯಮಾಜಗಾಮ ಪುರಂದರಃ ।
ಆನೀತಸ್ತ್ವಮಿಮಂ ದೇಶಮುಪಾಯೇನ ಮಹರ್ಷಿಭಿಃ ॥
ಅನುವಾದ
ರಘುನಂದನ! ಇದಕ್ಕಾಗಿಯೇ ಪಾಕಶಾಸನ ಪುರಂದರ ಇಂದ್ರನು ಶರಭಂಗ ಮುನಿಯ ಪವಿತ್ರ ಆಶ್ರಮಕ್ಕೆ ಬಂದಿದ್ದನು. ಇದೇ ಕಾರ್ಯದ ಸಿದ್ಧಿಗಾಗಿ ಮಹರ್ಷಿಗಳ ವಿಶೇಷ ಉಪಾಯ ಮಾಡಿ ನಿನ್ನನ್ನು ಪಂಚವಟಿಯ ಈ ಪ್ರದೇಶಕ್ಕೆ ಕರೆತಂದಿರುವರು.॥34-35॥
ಮೂಲಮ್ - 36½
ಏಷಾಂ ವಧಾರ್ಥಂ ಶತ್ರೂಣಾಂ ರಕ್ಷಸಾಂ ಪಾಪಕರ್ಮಣಾಮ್ ।
ತದಿದಂ ನಃ ಕೃತಂ ಕಾರ್ಯಂ ತ್ವಯಾ ದಶರಥಾತ್ಮಜ ॥
ಸ್ವ ಧರ್ಮಂ ಪ್ರಚರಿಷ್ಯಂತಿ ದಂಡಕೇಷು ಮಹರ್ಷಯಃ ।
ಅನುವಾದ
ಮುನಿಗಳ ಶತ್ರುವಾದ ಈ ಪಾಪಾಚಾರೀ ರಾಕ್ಷಸನ ವಧೆಗಾಗಿಯೇ ನಿನ್ನ ಶುಭಾಗಮನವಾಗಿದೆ ಎಂದೇ ತಿಳಿಯಲಾಗಿದೆ. ದಶರಥನಂದನ! ನೀನು ನಮ್ಮೆಲ್ಲರ ಈ ಬಹಳ ದೊಡ್ಡ ಕಾರ್ಯವನ್ನು ಮಾಡಿರುವೆ. ಇನ್ನೂ ದೊಡ್ಡ-ದೊಡ್ಡ ಋಷಿ ಮುನಿಗಳು ದಂಡಕಾರಣ್ಯದ ಬೇರೆ-ಬೇರೆ ಪ್ರದೇಶಗಳಲ್ಲಿ ನಿರ್ಭಯರಾಗಿ ತಮ್ಮ ಧರ್ಮಾನುಷ್ಠಾನ ಮಾಡುವರು.॥36½॥
ಮೂಲಮ್ - 37½
ಏತಸ್ಮಿನ್ನಂತರೇ ವೀರೋ ಲಕ್ಷ್ಮಣಃ ಸಹ ಸೀತಯಾ ॥
ಗಿರಿದುರ್ಗಾದ್ ವಿಷ್ಕ್ರಮ್ಯ ಸಂವಿವೇಶಾಶ್ರಮೇ ಸುಖೀ ।
ಅನುವಾದ
ಇಷ್ಟರಲ್ಲಿ ವೀರ ಲಕ್ಷ್ಮಣನೂ ಸೀತೆಯೊಂದಿಗೆ ಪರ್ವತದ ಗುಹೆಯಿಂದ ಹೊರಬಂದು ಸಂತೋಷವಾಗಿ ಆಶ್ರಮಕ್ಕೆ ಬಂದನು.॥37½॥
ಮೂಲಮ್ - 38½
ತತೋ ರಾಸ್ತು ವಿಜಯೀ ಪೂಜ್ಯಮಾನೋಮಹರ್ಷಿಭಿಃ ॥
ಪ್ರವಿವೇಶಾಶ್ರಮಂ ವೀರೋ ಲಕ್ಷ್ಮಣೇನಾಭಿಪೂಜಿತಃ ।
ಅನುವಾದ
ಅನಂತರ ಮಹರ್ಷಿಗಳಿಂದ ಪ್ರಶಂಸಿತ ಹಾಗೂ ಲಕ್ಷ್ಮಣನಿಂದ ಪೂಜಿತ ವಿಜಯೀ ವೀರ ಶ್ರೀರಾಮನು ಆಶ್ರಮದಲ್ಲಿ ಪ್ರವೇಶಿಸಿದನು.॥38½॥
ಮೂಲಮ್ - 39
ತಂ ದೃಷ್ಟ್ವಾ ಶತ್ರುಹಂತಾರಂ ಮಹರ್ಷೀಣಾಂ ಸುಖಾವಹಮ್ ।
ಬಭೂವ ಹೃಷ್ಟಾ ವೈದೇಹೀ ಭರ್ತಾರಂ ಪರಿಷಸ್ವಜೇ ॥
ಮೂಲಮ್ - 40
ಮುದಾ ಪರಮಯಾ ಯುಕ್ತಾ ದೃಷ್ಟ್ವಾ ರಕ್ಷೋಗಣಾನ್ ಹತಾನ್ ।
ರಾಮಂ ಚೈವಾವ್ಯಯ ದೃಷ್ಟ್ವಾ ತುತೋಷ ಜನಕಾತ್ಮಜಾ ॥
ಅನುವಾದ
ಮಹರ್ಷಿಗಳಿಗೆ ಸುಖಕೊಡುವ ಶತ್ರುಹಂತಾ ತನ್ನ ಪತಿಯನ್ನು ದರ್ಶಿಸಿ ವಿದೇಹನಂದಿನಿ ಸೀತೆಗೆ ಬಹಳ ಹರ್ಷವಾಯಿತು. ಅವಳು ಪರಮಾನಂದದಲ್ಲಿ ಮುಳುಗಿ ತನ್ನ ಸ್ವಾಮಿಯನ್ನು ಆಲಂಗಿಸಿಕೊಂಡಳು. ರಾಕ್ಷಸ ಸಮೂಹವೆಲ್ಲ ಸತ್ತುಹೋಗಿ ಶ್ರೀರಾಮನಿಗೆ ಯಾವುದೇ ಕ್ಷತಿ ಉಂಟಾಗಲಿಲ್ಲ ಎಂಬುದನ್ನು ನೋಡಿ, ತಿಳಿದು ಜಾನಕಿಗೆ ಬಹಳ ಸಂತೋಷವಾಯಿತು.॥39-40॥
ಮೂಲಮ್ - 41
ತತಸ್ತು ತಂ ರಾಕ್ಷಸ ಸಂಘಮರ್ದನಂ
ಸಂಪೂಜ್ಯಮಾನಂ ಮುದಿತೈರ್ಮಹಾತ್ಮಭಿಃ ।
ಪುನಃ ಪರಿಷ್ವಜ್ಯ ಮುದಾನ್ವಿತಾನನಾ
ಬಭೂವ ಹೃಷ್ಟಾ ಜನಕಾತ್ಮಜಾ ತದಾ ॥
ಅನುವಾದ
ಸಂತೋಷಗೊಂಡು ಮಹಾತ್ಮಾ ಮುನಿಗಳು ಯಾರನ್ನು ಭೂರಿ-ಭೂರಿ ಪ್ರಶಂಸಿಸುತ್ತಿದ್ದರೋ, ಯಾರು ರಾಕ್ಷಸ ಸಮುದಾಯವನ್ನು ಹೊಸಕಿ ಹಾಕಿದನೋ, ಆ ಪ್ರಾಣವಲ್ಲಭ ಶ್ರೀರಾಮನನ್ನು ಪದೇ ಪದೇ ಆಲಂಗಿಸುತ್ತಾ ಆಗ ಜನಕನಂದಿನೀ ಸೀತೆಗೆ ಬಹಳ ಹರ್ಷವಾಯಿತು. ಆಕೆಯ ಮುಖ ಪ್ರಸನ್ನತೆಯಿಂದ ಅರಳಿತು.॥41॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತನೆಯ ಸರ್ಗ ಸಂಪೂರ್ಣವಾಯಿತು. ॥30॥