वाचनम्
ಭಾಗಸೂಚನಾ
ಖರನೊಡನೆ ಶ್ರೀರಾಮನ ಘೋರ ಯುದ್ಧ
ಮೂಲಮ್ - 1
ನಿಹತಂ ದೂಷಣಂ ದೃಷ್ಟ್ವಾರಣೇ ತ್ರಿಶಿರಸಾ ಸಹ ।
ಖರಸ್ಯಾಪ್ಯಭವತ್ ತ್ರಾಸೋ ದೃಷ್ಟ್ವಾ ರಾಮಸ್ಯ ವಿಕ್ರಮಮ್ ॥
ಅನುವಾದ
ತ್ರಿಶಿರಾ ಸಹಿತ ದೂಷಣನು ಯುದ್ಧರಂಗದಲ್ಲಿ ಸತ್ತುಹೋಗಿರುವುದನ್ನು ನೋಡಿ ಖರನಿಗೂ ಶ್ರೀರಾಮನ ಪರಾಕ್ರಮ ವನ್ನು ನೋಡಿ ಬಹಳ ಭಯವಾಯಿತು.॥1॥
ಮೂಲಮ್ - 2
ಸ ದೃಷ್ಟ್ವಾರಾಕ್ಷಸಂ ಸೈನ್ಯಮವಿಷಹ್ಯಂ ಮಹಾಬಲಃ ।
ಹತಮೇಕೇನ ರಾಮೇಣ ದೂಷಣಸ್ತ್ರಿಶಿರಾ ಅಪಿ ॥
ಮೂಲಮ್ - 3
ತದ್ಬಲಂ ಹತಭೂಯಿಷ್ಠಂ ವಿಮನಾಃ ಪ್ರೇಕ್ಷ್ಯ ರಾಕ್ಷಸಃ ।
ಆಸಸಾದ ಖರೋ ರಾಮಂ ನಮುಚಿರ್ವಾಸವಂ ಯಥಾ ॥
ಅನುವಾದ
ಒಬ್ಬಂಟಿಗನಾದ ಶ್ರೀರಾಮನು ಮಹಾಬಲಶಾಲಿ, ಅಸಹ್ಯ ರಾಕ್ಷಸ ಸೈನ್ಯವನ್ನು ವಧಿಸಿಬಿಟ್ಟನು. ದೂಷಣ ಮತ್ತು ತ್ರಿಶಿರಾರನ್ನು ಕೊಂದು, ನನ್ನ ಸೈನ್ಯದ ಹದಿನಾಲ್ಕು ಸಾವಿರ ಪ್ರಮುಖ ವೀರರನ್ನೂ ಕಾಲವಶರಾಗಿಸಿದನು. ಇದೆಲ್ಲವನ್ನು ನೋಡಿ, ಯೋಚಿಸಿ ರಾಕ್ಷಸ ಖರನು ಬೇಸರಗೊಂಡನು. ಅವನು ನಮೂಚಿಯು ಇಂದ್ರನ ಮೇಲೆ ಆಕ್ರಮಣ ಮಾಡಿದಂತೆ ಶ್ರೀರಾಮನ ಮೇಲೆ ಆಕ್ರಮಣಮಾಡಿದನು.॥2-3॥
ಮೂಲಮ್ - 4
ವಿಕೃಷ್ಯ ಬಲವಚ್ಚಾಪಂ ನಾರಾಚಾನ್ ರಕ್ತ ಭೋಜನಾನ್ ।
ಖರಶ್ಚಿಕ್ಷೇಪ ರಾಮಾಯ ಕ್ರುದ್ಧಾನಾಶೀವಿಷಾನಿವ ॥
ಮೂಲಮ್ - 5
ಜ್ಯಾಂ ವಿಧೂನ್ವನ್ ಸುಬಹುಶಃ ಶಿಕ್ಷಯಾಸ್ತ್ರಾಣಿ ದರ್ಶಯನ್ ।
ಚಕಾರ ಸಮರೇ ಮಾರ್ಗಾನ್ಶರೈ ರಥಗತಃ ಖರಃ ॥
ಅನುವಾದ
ಖರನು ಪ್ರಬಲವಾದ ಧನುಸ್ಸನ್ನು ಸೆಳೆದು ಶ್ರೀರಾಮನ ಮೇಲೆ ರಕ್ತ ಕುಡಿಯುವಂತಹ ಅನೇಕ ಬಾಣಗಳನ್ನು ಪ್ರಯೋಗಿಸಿದನು. ಆ ಎಲ್ಲ ಬಾಣಗಳು ರೋಷಗೊಂಡ ವಿಷಧರ ಸರ್ಪಗಳಂತೆ ನಾನಾ ಪ್ರಕಾರದ ಅಸ್ತ್ರಗಳನ್ನು ಪ್ರದರ್ಶಿಸುತ್ತಾ, ರಣರಂಗದಲ್ಲಿ ಯುದ್ಧದ ಅನೇಕ ವರಸೆಗಳನ್ನು ತೋರುತ್ತಾ ವಿಚರಿಸಿದನು.॥4-5॥
ಮೂಲಮ್ - 6
ಸ ಸರ್ವಾಶ್ಚ ದಿಶೋಬಾಣೈಃ ಪ್ರದಿಶಶ್ಚ ಮಹಾರಥಃ ।
ಪೂರಯಾಮಾಸ ತಂ ದೃಷ್ಟ್ವಾ ರಾಮೋಽಪಿ ಸುಮಹದ್ಧನುಃ ॥
ಅನುವಾದ
ಆ ಮಹಾರಥಿ ವೀರನು ತನ್ನ ಬಾಣಗಳಿಂದ ಎಲ್ಲ ದಿಕ್ಕುಗಳನ್ನು ಮುಚ್ಚಿಬಿಟ್ಟನು. ಇದನ್ನು ನೋಡಿದ ಶ್ರೀರಾಮನು ತನ್ನ ವಿಶಾಲ ಧನುಸ್ಸನ್ನೆತ್ತಿಕೊಂಡು ಸಮಸ್ತ ದಿಕ್ಕುಗಳನ್ನು ತನ್ನ ಬಾಣಗಳಿಂದ ಆವರಿಸಿಬಿಟ್ಟನು.॥6॥
ಮೂಲಮ್ - 7
ಸ ಸಾಯಕೈರ್ದುರ್ವಿಷಹೈರ್ವಿಸ್ಫುಲಿಂಗೈರಿವಾಗ್ನಿಭಿಃ ।
ನಭಶ್ಚಕಾರಾವಿವರಂ ಪರ್ಜನ್ಯ ಇವ ವೃಷ್ಟಿಭಿಃ ॥
ಅನುವಾದ
ಮೇಘಗಳು ಜಲವರ್ಷಣದಿಂದ ಆಕಾಶವನ್ನು ಮುಚ್ಚಿಬಿಡುವಂತೆ ಶ್ರೀರಘುನಾಥನು ಬೆಂಕಿಯ ಕಿಡಿಗಳಂತೆ ದುಃಸಹ ಸಾಯಕಗಳ ಮಳೆಗರೆಯುತ್ತಾ ಆಕಾಶವನ್ನು ನಿಬಿಡವಾಗಿ ತುಂಬಿ ಬಿಟ್ಟನು.॥7॥
ಮೂಲಮ್ - 8
ತದ್ಬಭೂವ ಶಿತೈರ್ಬಾಣೈಃ ಖರರಾಮವಿಸರ್ಜಿತೈಃ ।
ಪರ್ಯಾಕಾಶಮನಾಕಾಶಂ ಸರ್ವತಃ ಶರಸಂಕುಲಮ್ ॥
ಅನುವಾದ
ಖರ ಮತ್ತು ಶ್ರೀರಾಮನು ಬಿಟ್ಟ ಬಾಣಗಳಿಂದ ವ್ಯಾಪ್ತವಾಗಿ ಎಲ್ಲೆಡೆ ಹರಡಿದ ಆಕಾಶವು ಅಂಬುಗಳು ತುಂಬಿದ್ದರಿಂದ ಸ್ವಲ್ಪವೂ ಇಂಬಿಲ್ಲದಂತಾಯಿತು.॥8॥
ಮೂಲಮ್ - 9
ಶರಜಾಲಾವೃತಃ ಸೂರ್ಯೋ ನ ತದಾ ಸ್ಮ ಪ್ರಕಾಶತೇ ।
ಅನ್ಯೋನ್ಯವಧಸಂರಂಭಾದುಭಯೋಃ ಸಂಪ್ರಯುಧ್ಯತೋಃ ॥
ಅನುವಾದ
ಒಬ್ಬರು ಮತ್ತೊಬ್ಬರನ್ನು ಕೊಲ್ಲುವುದಕ್ಕಾಗಿ ರೋಷದಿಂದ ಕಾದಾಡುತ್ತಿದ್ದ ಅವರಿಬ್ಬರ ಬಾಣಜಾಲದಿಂದ ಮುಚ್ಚಿಹೋಗಿ ಸೂರ್ಯನು ಪ್ರಕಾಶಿಸುತ್ತಿರಲಿಲ್ಲ.॥9॥
ಮೂಲಮ್ - 10
ತತೋ ನಾಲೀಕನಾರಾಜೈಸ್ತೀಕ್ಷ್ಣಾಗ್ರೈಶ್ಚ ವಿಕರ್ಣಿಭಿಃ ।
ಅಜಘಾನ ಖರೋ ರಾಮಂ ತೋತ್ರೈರಿವ ಮಹಾದ್ವಿಪಮ್ ॥
ಅನುವಾದ
ಅನಂತರ ಖರನು ರಣಭೂಮಿಯಲ್ಲಿ ಶ್ರೀರಾಮನ ಮೇಲೆ ಯಾವುದಾದರೂ ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ನಾಲೀಕ, ನಾರಾಚ, ತೀಕ್ಷ್ಣವಾದ ತುದಿಗಳುಳ್ಳ ವಿಕೀರ್ಣವೆಂಬ ಬಾಣ ಗಳಿಂದ ಪ್ರಹರಿಸಿದನು.॥10॥
ಮೂಲಮ್ - 11
ತಂ ರಥಸ್ಥಂ ಧನುಷ್ಪಾಣಿಂ ರಾಕ್ಷಸಂ ಪರ್ಯವಸ್ಥಿತಮ್ ।
ದದೃಶುಃ ಸರ್ವಭೂತಾನಿ ಪಾಶಹಸ್ತಮಿವಾಂತಕಮ್ ॥
ಅನುವಾದ
ಕೈಯಲ್ಲಿ ಧನುಸ್ಸನ್ನೆತ್ತಿಕೊಂಡು ರಥದಲ್ಲಿ ಸ್ಥಿರವಾಗಿ ಕುಳಿತಿದ್ದ ರಾಕ್ಷಸಖರನನ್ನು ಪಾಶಧಾರೀ ಯಮನಂತೆ ಸಮಸ್ತ ಪ್ರಾಣಿಗಳು ನೋಡಿದರು.॥11॥
ಮೂಲಮ್ - 12
ಹಂತಾರಂ ಸರ್ವಸೈನ್ಯಸ್ಯ ಪೌರುಷೇಪರ್ಯವಸ್ಥಿತಮ್ ।
ಪರಿಶ್ರಾಂತಂ ಮಹಾಸತ್ತ್ವಂ ಮೇನೇ ರಾಮಂ ಖರಸ್ತದಾ ॥
ಅನುವಾದ
ಆಗ ಸಮಸ್ತ ಸೈನ್ಯವನ್ನು ವಧಿಸುವ ಹಾಗೂ ಪುರುಷಾರ್ಥದಲ್ಲಿ ಸ್ಥಿರನಾದ ಮಹಾನ್ ಬಲಶಾಲಿ ಶ್ರೀರಾಮನನ್ನು ಬಳಲಿದವನಂತೆ ಖರನು ನೋಡಿದನು.॥12॥
ಮೂಲಮ್ - 13
ತಂ ಸಿಂಹಮಿವ ವಿಕ್ರಾಂತಂ ಸಿಂಹವಿಕ್ರಾಂತಗಾಮಿನಮ್ ।
ದೃಷ್ಟ್ವಾ ನೋದ್ವಿಜತೇ ರಾಮಃ ಸಿಂಹಃ ಕ್ಷುದ್ರಮೃಗಂ ಯಥಾ ॥
ಅನುವಾದ
ಅವನು ಸಿಂಹದಂತೆ ನಡೆಯುಳ್ಳ, ಸಿಂಹದಂತೆ ಪರಾಕ್ರಮವನ್ನು ಪ್ರಕಟಿಸುತ್ತಿದ್ದರೂ ಆ ಖರನನ್ನು ನೋಡಿ ಸಣ್ಣದಾದ ಜಿಂಕೆಯನ್ನು ನೋಡಿದ ಸಿಂಹವು ಭಯಗೊಳ್ಳದಂತೆ ಶ್ರೀರಾಮನು ಯಾವರೀತಿಯಿಂದಲೂ ಉದ್ವಿಗ್ನನಾಗಲಿಲ್ಲ.॥13॥
ಮೂಲಮ್ - 14
ತತಃ ಸೂರ್ಯನಿಕಾಶೇನ ರಥೇನ ಮಹತಾ ಖರಃ ।
ಆಸಸಾದಾಥ ತಂ ರಾಮಂ ಪತಂಗ ಇವ ಪಾವಕಮ್ ॥
ಅನುವಾದ
ಅನಂತರ ಪತಂಗವು ಬೆಂಕಿಯ ಬಳಿಗೆ ಹೋಗುವಂತೆ ಖರನು ತನ್ನ ಸೂರ್ಯತುಲ್ಯ ತೇಜಸ್ವಿ ವಿಶಾಲ ರಥದಿಂದ ಶ್ರೀರಾಮನ ಬಳಿಗೆ ಬಂದನು.॥14॥
ಮೂಲಮ್ - 15
ತತೋಽಸ್ಯ ಸಶರಂ ಚಾಪಂ ಮುಷ್ಟಿ ದೇಶೇ ಮಹಾತ್ಮನಃ ।
ಖರಚ್ಚಿಚ್ಛೇದ ರಾಮಸ್ಯ ದರ್ಶಯನ್ ಹಸ್ತಲಾಘವಮ್ ॥
ಅನುವಾದ
ಅಲ್ಲಿಗೆ ಹೋಗಿ ಆ ರಾಕ್ಷಸ ಖರನು ತನ್ನ ಕೈಚಳಕವನ್ನು ತೋರುತ್ತಾ ಮಹಾತ್ಮಾ ಶ್ರೀರಾಮನ ಧನುಸ್ಸಿನ ನಡುಭಾಗವನ್ನು ಕತ್ತರಿಸಿ ಬಿಟ್ಟನು.॥15॥
ಮೂಲಮ್ - 16
ಸ ಪುನಸ್ತ್ವ ಪರಾನ್ ಸಪ್ತ ಶರಾನಾದಾಯ ಮರ್ಮಣಿ ।
ನಿಜಘಾನ ರಣೇ ಕ್ರುದ್ಧಃ ಶಕ್ರಾಶನಿಸಮಪ್ರಭಾನ್ ॥
ಅನುವಾದ
ಮತ್ತೆ ಇಂದ್ರನ ವಜ್ರದಂತೆ ಪ್ರಕಾಶಿಸುತ್ತಿರುವ ಏಳು ಬಾಣಗಳನ್ನು ಎತ್ತಿಕೊಂಡು ಖರನು ರಣಭೂಮಿಯಲ್ಲಿ ಕುಪಿತನಾಗಿ ಶ್ರೀರಾಮನ ಮರ್ಮಸ್ಥಾನಕ್ಕೆ ಪ್ರಯೋಗಿಸಿದನು.॥16॥
ಮೂಲಮ್ - 17
ತತಃ ಶರಸಹಸ್ರೇಣ ರಾಮಮಪ್ರತಿಮೌಜಸಮ್ ।
ಅರ್ದಯಿತ್ವಾ ಮಹಾನಾದಂ ನನಾದ ಸಮರೇ ಖರಃ ॥
ಅನುವಾದ
ಅನಂತರ ಅಪ್ರತಿಮ ಬಲಶಾಲೀ ಶ್ರೀರಾಮನನ್ನು ಸಾವಿರಾರು ಬಾಣಗಳಿಂದ ನೋಯಿಸಿದ ನಿಶಾಚರ ಖರನು ಸಮರ ಭೂಮಿಯಲ್ಲಿ ಜೋರಾಗಿ ಗರ್ಜಿಸತೊಡಗಿದನು.॥17॥
ಮೂಲಮ್ - 18
ತತಸ್ತತ್ಪ್ರಹತಂ ಬಾಣೈಃ ಖರಮುಕ್ತೈಃ ಸುಪರ್ವಭಿಃ ।
ಪಪಾತ ಕವಚಂ ಭೂಮೌ ರಾಮಸ್ಯಾದಿತ್ಯವರ್ಚಸಃ ॥
ಅನುವಾದ
ಖರನು ಬಿಟ್ಟ ಉತ್ತಮ ಗಂಟುಗಳಿದ್ದ ಬಾಣಗಳಿಂದಾಗಿ ಶ್ರೀರಾಮನ ಸೂರ್ಯತುಲ್ಯ ತೇಜಸ್ವೀ ಕವಚವು ತುಂಡಾಗಿ ನೆಲಕ್ಕೆ ಬಿದ್ದುಹೋಯಿತು.॥18॥
ಮೂಲಮ್ - 19
ಸ ಶರೈರರ್ಪಿತಃ ಕ್ರುದ್ಧಃ ಸರ್ವಗಾತ್ರೇಷು ರಾಘವಃ ।
ರರಾಜ ಸಮರೇ ರಾಮೋ ವಿಧೂಮೋಽಗ್ನಿರಿವ ಜ್ವಲನ್ ॥
ಅನುವಾದ
ಅವನ ಸರ್ವಾಂಗದಲ್ಲಿ ಖರನ ಬಾಣಗಳು ನೆಟ್ಟಿದ್ದವು. ಆಗ ಕುಪಿತನಾಗಿ ರಣರಂಗದಲ್ಲಿ ನಿಂತಿದ್ದ ಶ್ರೀರಘುನಾಥನು ಹೊಗೆಯಿಲ್ಲದೆ ಉರಿಯುವ ಬೆಂಕಿಯಂತೆ ಶೋಭಿಸುತ್ತಿದ್ದನು.॥19॥
ಮೂಲಮ್ - 20
ತತೋ ಗಂಭೀರನಿರ್ಹ್ರಾದಂ ರಾಮಃ ಶತ್ರುನಿಬರ್ಹಣಃ ।
ಚಕಾರಾಂತಾಯ ಸ ರಿಪೋಃ ಸಜ್ಯಮನ್ಯನ್ಮಹದ್ಧನುಃ ॥
ಅನುವಾದ
ಆಗ ಶತ್ರುನಾಶಕ ಭಗವಾನ್ ಶ್ರೀರಾಮನು ತನ್ನ ವಿಪಕ್ಷಿಯನ್ನು ನಾಶಗೊಳಿಸಲು ಮತ್ತೊಂದು ವಿಶಾಲ ಧನುಸ್ಸಿಗೆ ಹೆದೆಯೇರಿಸಿದನು. ಅದರ ಧ್ವನಿಯು ಬಹಳ ಗಂಭೀರವಾಗಿತ್ತು.॥20॥
ಮೂಲಮ್ - 21
ಸುಮಹದ್ವೈಷ್ಣವಂ ಯತ್ ತದತಿಸೃಷ್ಟಂ ಮಹರ್ಷಿಣಾ ।
ವರಂ ತದ್ಧನುರುದ್ಯಮ್ಯ ಖರಂ ಸಮಭಿಧಾವತ ॥
ಅನುವಾದ
ಮಹರ್ಷಿ ಅಗಸ್ತ್ಯರು ಕೊಟ್ಟಿದ್ದ ಮಹೋತ್ತಮ ವೈಷ್ಣವ ಧನುಸ್ಸನ್ನೆತ್ತಿಕೊಂಡು ಅವನು ಖರನನ್ನು ಎದುರಿಸಲು ಹೋದನು.॥21॥
ಮೂಲಮ್ - 22
ತತಃ ಕನಕಪುಂಖೈಸ್ತು ಶರೈಃ ಸಂನತಪರ್ವಭಿಃ ।
ಚಿಚ್ಛೇದ ರಾಮಃ ಸಂಕ್ರುದ್ಧಃ ಖರಸ್ಯ ಸಮರೇ ಧ್ವಜಮ್ ॥
ಅನುವಾದ
ಆಗ ಅತ್ಯಂತ ಕ್ರೋಧಗೊಂಡು ಶ್ರೀರಾಮನು ಚಿನ್ನದ ಗರಿಗಳಿದ್ದ ಬಾಗಿದ ಗಂಟುಗಳಿದ್ದ ಬಾಣಗಳ ಮೂಲಕ ಸಮರಾಂಗಣದಲ್ಲಿ ಖರನ ಧ್ವಜವನ್ನು ತುಂಡರಿಸಿಬಿಟ್ಟನು.॥22॥
ಮೂಲಮ್ - 23
ಸ ದರ್ಶನೀಯೋ ಬಹುಧಾ ವಿಚ್ಛಿನ್ನಃ ಕಾಂಚಿನೋ ಧ್ವಜಃ ।
ಜಗಾಮ ಧರಣೀಂ ಸೂರ್ಯೋ ದೇವತಾನಾಮಿವಾಜ್ಞಯಾ ॥
ಅನುವಾದ
ಆ ದರ್ಶನೀಯ ಸುವರ್ಣಮಯ ಧ್ವಜವು ದೇವತೆಗಳ ಆಜ್ಞೆಯಂತೆ ಸೂರ್ಯನು ಧರೆಗೆ ಇಳಿದುಬಂದಂತೆ, ಅನೇಕ ತುಂಡು-ತುಂಡುಗಳಾಗಿ ನೆಲಕ್ಕೆ ಬಿದ್ದುಹೋಯಿತು.॥23॥
ಮೂಲಮ್ - 24
ತಂ ಚತುರ್ಭಿಃ ಖರಃ ಕ್ರುದ್ಧೋ ರಾಮಂ ಗಾತ್ರೇಷು ಮಾರ್ಗಣೈಃ ।
ವಿವ್ಯಾಧ ಯುಧಿ ಮರ್ಮಜ್ಞೋ ಮಾತಂಗಮಿವ ತೋಮರೈಃ ॥
ಅನುವಾದ
ಕ್ರೋಧತುಂಬಿದ ಖರನಿಗೆ ಮರ್ಮಸ್ಥಾನಗಳ ಜ್ಞಾನವಿತ್ತು. ಮಾವುತನು ಗಜರಾಜನನ್ನು ತೊಮರದಿಂದ ಪ್ರಹರಿಸುವಂತೆ ಅವನು ಶ್ರೀರಾಮನ ಶರೀರಕ್ಕೆ ವಿಶೇಷವಾಗಿ ಎದೆಗೆ ನಾಲ್ಕು ಬಾಣಗಳನ್ನು ಹೊಡೆದನು.॥24॥
ಮೂಲಮ್ - 25
ಸ ರಾಮೋ ಬಹುಭಿರ್ಬಾಣೈಃ ಖರಕಾರ್ಮುಕನಿಃಸೃತೈಃ ।
ವಿದ್ಧೋ ರುಧಿರಸಿಕ್ತಾಂಗೋ ಬಭೂವ ರುಷಿತೋ ಭೃತಮ್ ॥
ಅನುವಾದ
ಖರನ ಧನುಸ್ಸಿನಿಂದ ಚಿಮ್ಮಿದ ಅಸಂಖ್ಯಬಾಣಗಳಿಂದ ಗಾಯಗೊಂಡ ಶ್ರೀರಾಮನ ಶರೀರವೆಲ್ಲ ರಕ್ತಸಿಕ್ತವಾಯಿತು. ಇದರಿಂದ ಅವನಿಗೆ ಭಾರೀ ರೋಷ ಉಂಟಾಯಿತು.॥25॥
ಮೂಲಮ್ - 26
ಸ ಧನುರ್ಧನ್ವಿನಾಂ ಶ್ರೇಷ್ಠಃ ಸಂಗೃಹ್ಯ ಪರಮಾಹವೇ ।
ಮುಮೋಚ ಪರಮೇಷ್ವಾಸಃ ಷಟ್ ಶರಾನಭಿಲಕ್ಷಿತಾನ್ ॥
ಅನುವಾದ
ಧನುರ್ಧರಲ್ಲಿ ಶ್ರೇಷ್ಠನಾದ ಶ್ರೀರಾಮನು ಯುದ್ಧರಂಗದಲ್ಲಿ ಹಿಂದೆ ಹೇಳಿದ ಶ್ರೇಷ್ಠ ಧನುಸ್ಸನ್ನೆತ್ತಿಕೊಂಡು ಸರಿಯಾದ ಗುರಿಯನ್ನಿಟ್ಟು ಖರನಿಗೆ ಆರು ಬಾಣಗಳನ್ನು ಪ್ರಯೋಗಿಸಿದನು.॥26॥
ಮೂಲಮ್ - 27
ಶಿರಸ್ಯೇಕೇನ ಬಾಣೇನ ದ್ವಾಭ್ಯಾಂ ಬಾಹ್ವೋರಥಾರ್ಪಯತ್ ।
ತ್ರಿಭಿಶ್ಚನಂದ್ರಾರ್ಧವಕ್ತ್ರೈಶ್ಚ ವಕ್ಷಸ್ಯಭಿಜಘಾನ ಹ ॥
ಅನುವಾದ
ಅವನು ಒಂದು ಬಾಣವನ್ನು ಅವನ ತಲೆಗೆ, ಎರಡರಿಂದ ಭುಜಗಳಿಗೆ, ಮೂರು ಅರ್ಧಚಂದ್ರಾಕಾರ ಬಾಣಗಳಿಂದ ಎದೆಗೆ ಆಳವಾಗಿ ಏಟನ್ನು ಮಾಡಿದನು.॥27॥
ಮೂಲಮ್ - 28
ತತಃ ಪಶ್ಚಾನ್ಮಹಾತೇಜಾ ನಾರಾಚಾನ್ ಭಾಸ್ಕರೋಪಮಾನ್ ।
ಜಘಾನ ರಾಕ್ಷಸಂ ಕ್ರುದ್ಧೋಸ್ತ್ರಯೋದಶ ಶಿಲಾಶಿತಾನ್ ॥
ಅನುವಾದ
ಅನಂತರ ಮಹಾತೇಜಸ್ವೀ ಶ್ರೀರಾಮಚಂದ್ರನು ಕುಪಿತನಾಗಿ ಆ ರಾಕ್ಷಸನಿಗೆ ಹರಿತಗೊಳಿಸಿದ, ಸೂರ್ಯನಂತೆ ಹೊಳೆಯುವ ಹದಿಮೂರು ಬಾಣಗಳನ್ನು ಹೊಡೆದನು.॥28॥
ಮೂಲಮ್ - 29
ರಥಸ್ಯ ಯುಗಮೇಕೇನ ಚತುರ್ಭಿಃ ಶಬಲಾನ್ ಹಯಾನ್ ।
ಷಷ್ಠೇನ ಚ ಶಿರಃ ಸಂಖ್ಯೇ ಖರಸ್ಯ ಖರಸಾರಥೇಃ ॥
ಅನುವಾದ
ಒಂದು ಬಾಣದಿಂದ ಅವನ ರಥದ ನೊಗವನ್ನು ತುಂಡರಿಸಿ, ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನು ಕೊಂದುಹಾಕಿ, ಆರನೆಯ ಬಾಣದಿಂದ ಖರನ ಸಾರಥಿಯ ತಲೆಯನ್ನು ಕತ್ತರಿಸಿಬಿಟ್ಟನು.॥29॥
ಮೂಲಮ್ - 30
ತ್ರಿಭಿಸ್ತ್ರಿವೇಣೂನ್ ಬಲವಾನ್ ದ್ವಾಭ್ಯಾಮಕ್ಷಂ ಮಹಾಬಲಃ ।
ದ್ವಾದಶೇನ ತು ಬಾಣೇನ ಖರಸ್ಯ ಸಶರಂ ಧನುಃ ॥
ಮೂಲಮ್ - 31
ಛಿತ್ವಾ ವಜ್ರನಿಕಾಶೇನ ರಾಘವಃ ಪ್ರಹಸನ್ನಿವ ।
ತ್ರಯೋದಶೇನೇಂದ್ರಸಮೋ ಬಿಭೇದ ಸಮರೇ ಖರಮ್ ॥
ಅನುವಾದ
ಮೂರು ಬಾಣಗಳಿಂದ ನೊಗಕ್ಕೆ ಆಧಾರವಾದ ದಂಡವನ್ನೂ, ಮತ್ತೆರಡು ಬಾಣಗಳಿಂದ ಚಕ್ರಗಳ ಅಚ್ಚು ಮರವನ್ನೂ, ಹನ್ನೆರಡನೆಯ ಬಾಣದಿಂದ ಖರನ ಶರಸಹಿತ ಧನುಸ್ಸನ್ನು ಕತ್ತರಿಸಿ ಇಂದ್ರನಂತೆ ತೇಜಸ್ವೀ ಶ್ರೀರಾಮನು ನಗು-ನಗುತ್ತಾ ಹದಿಮೂರನೆಯ ಬಾಣದಿಂದ ಸಮರಾಂಗಣದಲ್ಲಿ ಖರನನ್ನು ಘಾಸಿಗೊಳಿಸಿದನು.॥30-31॥
ಮೂಲಮ್ - 32
ಪ್ರಭಗ್ನ ಧನ್ವಾ ವಿರಥೋ ಹತಾಶ್ವೋ ಹತಸಾರಥಿಃ ।
ಗದಾಪಾಣಿರವಪ್ಲುತ್ಯ ತಸ್ಥೌ ಭೂಮೌ ಖರಸ್ತದಾ ॥
ಅನುವಾದ
ಧನುಸ್ಸು ತುಂಡಾಗಿ, ರಥವು ಮುರಿದು, ಕುದುರೆಗಳು ಸತ್ತುಹೋಗಿ, ಸಾರಥಿಯೂ ಮಡಿದಾಗ ಖರನು ಕೈಯಲ್ಲಿ ಭಾರೀ ಗದೆಯನ್ನೆತ್ತಿಕೊಂಡು ರಥದಿಂದ ಹಾರಿ ಭೂಮಿಯ ಮೇಲೆ ನಿಂತುಕೊಂಡನು.॥32॥
ಮೂಲಮ್ - 33
ತತ್ಕರ್ಮ ರಾಮಸ್ಯ ಮಹಾರಥಸ್ಯ
ಸಮೇತ್ಯ ದೇವಾಶ್ಚ ಮಹರ್ಷಯಶ್ಚ ।
ಅಪೂಜಯನ್ಪ್ರಾಂಜಲಯಃ ಪ್ರಹೃಷ್ಟಾ-
ಸ್ತದಾ ವಿಮಾನಾಗ್ರಗತಾಃ ಸಮೇತಾಃ ॥
ಅನುವಾದ
ಆ ಸಮಯದಲ್ಲಿ ವಿಮಾನದಲ್ಲಿ ಕುಳಿತಿರುವ ದೇವತೆಗಳು ಮತ್ತು ಮಹರ್ಷಿಗಳು ಹರ್ಷೋಲ್ಲಾಸದಿಂದ ಪರಸ್ಪರ ಸೇರಿ ಕೈಗಳನ್ನು ಮುಗಿದು ಮಹಾರಥಿ ಶ್ರೀರಾಮನ ಆ ಕರ್ಮವನ್ನು ಭೂರಿ-ಭೂರಿ ಪ್ರಶಂಸಿಸಿದರು.॥33॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತೆಂಟನೆಯ ಸರ್ಗ ಸಂಪೂರ್ಣವಾಯಿತು. ॥28॥