०२७ त्रिशिरो वधः

वाचनम्
ಭಾಗಸೂಚನಾ

ತ್ರಿಶಿರನ ವಧೆ

ಮೂಲಮ್ - 1

ಖರಂ ತು ರಾಮಾಭಿಮುಖಂ ಪ್ರಯಾಂತಂ ವಾಹಿನೀಪತಿಃ ।
ರಾಕ್ಷಸಸ್ತ್ರಿ ಶಿರಾ ನಾಮ ಸನ್ನಿಪತ್ಯೇದಮಬ್ರವೀತ್ ॥

ಅನುವಾದ

ಖರನು ಭಗವಾನ್ ಶ್ರೀರಾಮನಿಗೆ ಸಮ್ಮುಖನಾಗಿ ಹೋಗುತ್ತಿರುವುದನ್ನು ನೋಡಿ ಸೇನಾಪತಿ ರಾಕ್ಷಸ ತ್ರಿಶಿರನು ಕೂಡಲೇ ಅವನ ಬಳಿಗೆ ಹೋಗಿ ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಮಾಂ ನಿಯೋಜಯ ವಿಕ್ರಾಂತಂ ತ್ವಂ ನಿವರ್ತಸ್ವ ಸಾಹಸಾತ್ ।
ಪಶ್ಯ ರಾಮಂ ಮಹಾಬಾಹುಂ ಸಂಯುಗೇ ವಿನಿಪಾತಿತಮ್ ॥

ಅನುವಾದ

ರಾಕ್ಷಸರಾಜನೇ! ಪರಾಕ್ರಮೀ ವೀರನಾದ ನನ್ನನ್ನು ಈ ಯುದ್ಧದಲ್ಲಿ ತೊಡಗಿಸಿ, ನೀವು ಸ್ವತಃ ಈ ಸಾಹಸ ಪೂರ್ಣ ಕಾರ್ಯದಿಂದ ದೂರವುಳಿಯಿರಿ. ನೋಡಿ, ನಾನು ಈಗಲೇ ಮಹಾಬಾಹು ರಾಮನನ್ನು ಯುದ್ಧದಲ್ಲಿ ಕೊಂದುಬಿಡುವೆ.॥2॥

ಮೂಲಮ್ - 3

ಪ್ರತಿಜಾನಾಮಿ ತೇ ಸತ್ಯಮಾಯುಧಂ ಚಾಹಮಾಲಭೇ ।
ಯಥಾ ರಾಮಂ ವಧಿಷ್ಯಾಮಿ ವಧಾರ್ಹಂ ಸರ್ವರಕ್ಷಸಾಮ್ ॥

ಅನುವಾದ

‘ಸಮಸ್ತ ರಾಕ್ಷಸರಿಗಾಗಿ ವಧೆಗೆ ಯೋಗ್ಯನಾದ ರಾಮನನ್ನು ನಾನು ಅವಶ್ಯವಾಗಿ ವಧಿಸುವೆ’ ಎಂದು ನಿಮ್ಮ ಮುಂದೆ ಆಯುಧದ ಮೇಲೆ ಆಣೆ ಮಾಡಿ, ನಿಜವಾದ ಪ್ರತಿಜ್ಞೆಯನ್ನು ಮಾಡುವೆನು.॥3॥

ಮೂಲಮ್ - 4

ಅಹಂ ವಾಸ್ಯ ರಣೇ ಮೃತ್ಯುರೇಷ ವಾ ಸಮರೇ ಮಮ ।
ವಿನಿವರ್ತ್ಯ ರಣೋತ್ಸಾಹಂ ಮುಹೂರ್ತಂ ಪ್ರಾಶ್ನಿ ಕೋ ಭವ ॥

ಅನುವಾದ

ಈ ಯುದ್ಧದಲ್ಲಿ ಒಂದೋ ನನಗೆ ಮೃತ್ಯು ಬಂದೀತು ಅಥವಾ ಇದೇ ಸಮರಾಂಗಣದಲ್ಲಿ ನನ್ನಿಂದ ರಾಮನ ಮೃತ್ಯುವಾಗುವುದು. ನೀವು ಈಗ ನಿಮ್ಮ ಯುದ್ಧೋತ್ಸಾಹವನ್ನು ತಡೆದು ಮುಹೂರ್ತ ಕಾಲ ಜಯ-ಪರಾಜಯ ನಿರ್ಣಯಿಸುವ ಸಾಕ್ಷಿಯಾಗಿರಿ.॥4॥

ಮೂಲಮ್ - 5

ಪಹೃಷ್ಟೋ ವಾ ಹತೇ ರಾಮೇ ಜನಸ್ಥಾನಂ ಪ್ರಯಾಸ್ಯಸಿ ।
ಮಯಿ ವಾ ನಿಹತೇ ರಾಮಂ ಸಂಯುಗಾಯ ಪ್ರಯಾಸ್ಯಸಿ ॥

ಅನುವಾದ

ನನ್ನಿಂದ ರಾಮನು ಸತ್ತುಹೋದರೆ ನೀವು ಸಂತೋಷವಾಗಿ ಜನಸ್ಥಾನಕ್ಕೆ ಮರಳಿ ಹೋಗಿರಿ, ಅಥವಾ ರಾಮನೇ ನನ್ನನ್ನು ಕೊಂದುಹಾಕಿದರೆ ನೀವು ಯುದ್ಧಕ್ಕಾಗಿ ಇವನ ಮೇಲೆ ಆಕ್ರಮಣ ಮಾಡಿರಿ.॥5॥

ಮೂಲಮ್ - 6

ಖರಸ್ತ್ರಿಶಿರಸಾ ತೇನ ಮೃತ್ಯುಲೋಭಾತ್ ಪ್ರಾಸಾದಿತಃ ।
ಗಚ್ಛ ಯುಧ್ಯೇತ್ಯನುಜ್ಞಾತೋ ರಾಘವಾಭಿಮುಖೋ ಯಯೌ ॥

ಅನುವಾದ

ಭಗವಂತನ ಕೈಯಿಂದ ಮೃತ್ಯುವಿನ ಲೋಭವಿದ್ದ ಕಾರಣ ತ್ರಿಶಿರನು ಹೀಗೆ ಖರನನ್ನು ಒಪ್ಪಿಸಿದಾಗ ಅವನು ‘ಸರಿ, ಹೋಗು ಯುದ್ಧಮಾಡು’ ಎಂದು ಆಜ್ಞಾಪಿಸಿದನು. ಅಪ್ಪಣೆ ಪಡೆದು ಅವನು ರಾಮನ ಕಡೆಗೆ ಹೊರಟನು.॥6॥

ಮೂಲಮ್ - 7

ತ್ರಿಶಿರಾಸ್ತು ರಥೇನೈವ ವಾಜಿಯುಕ್ತೇನ ಭಾಸ್ವತಾ ।
ಅಭ್ಯದ್ರವದ್ ರಣೇ ರಾಮಂತ್ರಿಶೃಂಗ ಇವ ಪರ್ವತಃ ॥

ಅನುವಾದ

ಕುದುರೆಗಳನ್ನು ಹೂಡಿದ ಒಂದು ತೇಜಸ್ವೀ ರಥದಲ್ಲಿ ತ್ರಿಶಿರನು ರಣಭೂಮಿಯಲ್ಲಿ ಶ್ರೀರಾಮನ ಮೇಲೆ ಆಕ್ರಮಿಸಿದನು. ಆಗ ಅವನು ಮೂರು ಶಿಖರಗಳುಳ್ಳ ಪರ್ವತದಂತೆ ಕಂಡುಬರುತ್ತಿದ್ದನು.॥7॥

ಮೂಲಮ್ - 8

ಶರಧಾರಾಸಮೂಹಾನ್ ಸಮಹಾಮೇಘ ಇವೋತ್ಸೃಜನ್ ।
ವ್ಯಸೃಜತ್ಸದೃಶಂ ನಾದಂ ಜಲಾರ್ದ್ರಸ್ಯೇವ ದುಂದುಭೇಃ ॥

ಅನುವಾದ

ಬರುತ್ತಲೇ ಅವನು ಭಾರೀ ಮೋಡದಂತೆ ಬಾಣಗಳ ಮಳೆಗರೆಯಲು ಪ್ರಾರಂಭಿಸಿದನು ಮತ್ತು ಅವನು ಒದ್ದೆಯಾದ ನಗಾರಿಯಂತೆ ವಿಕಟವಾಗಿ ಗರ್ಜಿಸಿದನು.॥8॥

ಮೂಲಮ್ - 9

ಆಗಚ್ಛಂತಂ ತ್ರಿಶಿರಸಂ ರಾಕ್ಷಸಂ ಪ್ರೇಕ್ಷ್ಯ ರಾಘವಃ ।
ಧನುಷಾ ಪ್ರತಿಜಗ್ರಾಹ ವಿಧುನ್ವನ್ ಸಾಯಕಾನ್ ಶಿತಾನ್ ॥

ಅನುವಾದ

ತ್ರಿಶಿರನೆಂಬ ರಾಕ್ಷಸನು ಬರುತ್ತಿರುವುದನ್ನು ನೋಡಿ ಶ್ರೀರಘುನಾಥನು ಧನುಸ್ಸಿನಿಂದ ಹರಿತವಾದ ಬಾಣಗಳನ್ನು ಬಿಡುತ್ತಾ ಅವನನ್ನು ಸ್ವಾಗತಿಸಿದನು.॥9॥

ಮೂಲಮ್ - 10

ಸ ಸಂಪ್ರಹಾರಸ್ತುಮುಲೋ ರಾಮತ್ರಿಶಿರಸೋಸ್ತದಾ ।
ಸಂಬಭೂವಾತಿಬಲಿನೋಃ ಸಿಂಹಕುಂಜರಯೋರಿವ ॥

ಅನುವಾದ

ಅತ್ಯಂತ ಬಲಶಾಲಿ ಶ್ರೀರಾಮ ಮತ್ತು ತ್ರಿಶಿರನ ಆ ಸಂಗ್ರಾಮವು ಮಹಾಬಲಿ ಸಿಂಹ ಮತ್ತು ಗಜರಾಜನ ಯುದ್ಧದಂತೆ ಭಾರೀ ಭಯಂಕರವಾಗಿ ಕಂಡುಬರುತ್ತಿತ್ತು.॥10॥

ಮೂಲಮ್ - 11

ತತಸ್ತ್ರಿಶಿರಸಾ ಬಾಣೈರ್ಲಲಾಟೇ ತಾಡಿತಸ್ತ್ರಿಭಿಃ ।
ಅಮರ್ಷೀ ಕುಪಿತೋ ರಾಮಃ ಸಂರಬ್ಧ ಇದಮಬ್ರವೀತ್ ॥

ಅನುವಾದ

ಆಗ ತ್ರಿಶಿರನು ಮೂರು ಬಾಣಗಳನ್ನು ಶ್ರೀರಾಮಚಂದ್ರನ ಹಣೆಗೆ ಹೊಡೆದನು. ಶ್ರೀರಾಮನು ಅವನ ಉದ್ಧಟತನವನ್ನು ಸಹಿಸದಾದನು. ಅವನು ಕುಪಿತನಾಗಿ ರೋಷಾವೇಶಗೊಂಡು ಇಂತೆಂದನು.॥11॥

ಮೂಲಮ್ - 12½

ಅಹೋ ವಿಕ್ರಮಶೂರಸ್ಯ ರಾಕ್ಷಸಸ್ಯೇದೃಶಂ ಬಲಮ್ ।
ಪುಷ್ಪೈರಿವ ಶರೈರ್ಯೋಽಹಂ ಲಲಾಟೇಽಸ್ಮಿ ಪರಿಕ್ಷತಃ ॥
ಮಮಾಪಿ ಪ್ರತಿಗೃಹ್ಣೀಷ್ವ ಶರಾಂಶ್ಚಾಪಗುಣಾಚ್ಯುತಾನ್ ।

ಅನುವಾದ

ಎಲವೋ! ಪರಾಕ್ರಮ ಪ್ರಕಟಿಸುವ ಶೂರವೀರ ರಾಕ್ಷಸನಿಗೆ ಇಂತಹ ಬಲವಿದ್ದು ನೀನು ಹೂವಿನಂತಹ ಬಾಣಗಳಿಂದ ನನ್ನ ಲಲಾಟಕ್ಕೆ ಪ್ರಹರಿಸಿದೆ. ಸರಿ, ಈಗ ಧನುಸ್ಸಿನಿಂದ ಚಿಮ್ಮುವ ನನ್ನ ಬಾಣಗಳನ್ನು ಸ್ವೀಕರಿಸು.॥12½॥

ಮೂಲಮ್ - 13½

ಏವಮುಕ್ತ್ವಾಸುಸಂರಬ್ಧಃ ಶರಾನಾಶೀವಿಷೋಪಮಾನ್ ॥
ತ್ರಿಶಿರೋವಕ್ಷಸಿ ಕ್ರುದ್ಧೋ ನಿಜಘಾನ ಚತುರ್ದಶ ।

ಅನುವಾದ

ಹೀಗೆ ಹೇಳಿ ರೋಷಗೊಂಡು ಶ್ರೀರಾಮನು ತ್ರಿಶಿರನ ಎದೆಗೆ ಕ್ರೋಧದಿಂದ ವಿಷಧರ ಸರ್ಪದಂತಹ ಭಯಂಕರವಾದ ಹದಿನಾಲ್ಕು ಬಾಣಗಳನ್ನು ಪ್ರಯೋಗಿಸಿದನು.॥13½॥

ಮೂಲಮ್ - 14

ಚತುರ್ಭಿಸ್ತುರಗಾನಸ್ಯ ಶರೈಃ ಸಂನತಪರ್ವಭಿಃ ॥

ಮೂಲಮ್ - 15

ನ್ಯಪಾತಯತ ತೇಜಸ್ವೀ ಚತುರಸ್ತಸ್ಯ ವಾಜಿನಃ ।
ಅಷ್ಟಭಿಃ ಸಾಯಕೈಃ ಸೂತಂ ರಥೋಸ್ಥ್ಯೇ ನ್ಯಪಾತಯತ್ ॥

ಅನುವಾದ

ಅನಂತರ ತೇಜಸ್ವೀ ರಘುನಾಥನು ಬಾಗಿದ ಗಿಣ್ಣುಗಳಿಂದ ಕೂಡಿದ್ದ ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನು ಹೊಡೆದು ಉರುಳಿಸಿದನು. ಮತ್ತೆ ಎಂಟು ಬಾಣಗಳಿಂದ ಸಾರಥಿಯನ್ನು ಕುಳಿತಲ್ಲೇ ಮಲಗಿಸಿದನು.॥14-15॥

ಮೂಲಮ್ - 16½

ರಾಮಶ್ಚಿಚ್ಛೇದ ಬಾಣೇನ ಧ್ವಜಂ ಚಾಸ್ಯ ಸಮುಚ್ಛ್ರಿತಮ್ ।
ಹತೋ ಹತರಥಾತ್ ತಸ್ಮಾದುತ್ಪತಂತಂ ನಿಶಾಚರಮ್ ॥
ಬಿಭೇದ ರಾಮಸ್ತಂ ಬಾಣೈರ್ಹೃದಯೇ ಸೋಽಭವಜ್ಜಡಃ ।

ಅನುವಾದ

ಬಳಿಕ ಶ್ರೀರಾಮನು ಒಂದು ಬಾಣದಿಂದ ಧ್ವಜವನ್ನು ಕತ್ತರಿಸಿಬಿಟ್ಟನು. ಅನಂತರ ಅವನು ನಾಶವಾದ ರಥದಿಂದ ಹಾರಲು ತೊಡಗಿದಾಗ ಶ್ರೀರಾಘವೇಂದ್ರನು ಅನೇಕ ಬಾಣಗಳಿಂದ ಆ ನಿಶಾಚರನ ಎದೆಯನ್ನು ಭೇದಿಸಿದನು ಮತ್ತೆ ಅವನು ಜಡದಂತಾದನು.॥16॥

ಮೂಲಮ್ - 17½

ಸಾಯಕೈಶ್ಚಾಪ್ರಮೇಯಾತ್ಮಾ ಸಾಮರ್ಷಸ್ತಸ್ಯ ರಕ್ಷಸಃ ॥
ಶಿರಾಂಸ್ಯಪಾತಯತ್ ತ್ತ್ರೀಣಿ ವೇಗವದ್ಭಿಸ್ತ್ರಿಭಿಃ ಶರೈಃ ।

ಅನುವಾದ

ಅನಂತರ ಅಪ್ರಮೇಯ ಸ್ವರೂಪ ಶ್ರೀರಾಮನು ಕ್ರೋಧಗೊಂಡು ಮೂರು ವೇಗಶಾಲೀ ಹಾಗೂ ವಿನಾಶಕಾರೀ ಬಾಣಗಳಿಂದ ಆ ರಾಕ್ಷಸನ ಮೂರು ತಲೆಗಳನ್ನು ಕಡಿದು ಉರುಳಿಸಿದನು.॥17½॥

ಮೂಲಮ್ - 18½

ಸ ಧೂಮ ಶೋಣಿತೋದ್ಗಾರೀ ರಾಮಬಾಣಾಭಿಪೀಡಿತಃ ॥
ನ್ಯಪತತ್ಪತಿತೈಃ ಪೂರ್ವಂ ಸಮರಸ್ಥೋನಿಶಾಚರಃ ।

ಅನುವಾದ

ಸಮರಾಂಗಣದಲ್ಲಿ ನಿಂತಿರುವ ಆ ನಿಶಾಚರನು ಶ್ರೀರಾಮಚಂದ್ರನ ಬಾಣಗಳಿಂದ ಪೀಡಿತನಾಗಿ ತನ್ನ ಮುಂಡದಿಂದ ಹೊಗೆಯಾಡುತ್ತಿದ್ದ ರಕ್ತವನ್ನು ಉಗುಳುತ್ತಾ ಮೊದಲೇ ಬಿದ್ದ ಮಸ್ತಕಗಳೊಂದಿಗೆ ಧರಾಶಾಯಿಯಾದನು.॥18½॥

ಮೂಲಮ್ - 19½

ಹತಶೇಷಾಸ್ತತೋ ಭಗ್ನಾ ರಾಕ್ಷಸಾಃ ಖರಸಂಶ್ರಯಾಃ ॥
ದ್ರವಂತಿಸ್ಮ ನ ತಿಷ್ಠಂತಿ ವ್ಯಾಘ್ರತ್ರಸ್ತಾ ಮೃಗಾ ಇವ ।

ಅನುವಾದ

ಅನಂತರ ಖರನ ಸೇವೆಯಲ್ಲಿದ್ದ ಸಾಯದೆ ಇದ್ದ ರಾಕ್ಷಸರು ಓಡಿಹೋದರು. ಅವರು ಹುಲಿಗೆ ಹೆದರಿದ ಜಿಂಕೆಯಂತೆ ಓಡುತ್ತಾ ಹೋಗುತ್ತಿದ್ದರು.॥19½॥

ಮೂಲಮ್ - 20

ತಾನ್ಖರೋ ದ್ರವತೋ ದೃಷ್ಟ್ವಾ ನಿವರ್ತ್ಯ ರುಷಿತಸ್ತ್ವರನ್ ।
ರಾಮಮೇವಾಭಿದುದ್ರಾವ ರಾಹುಶ್ಚನಂದ್ರಮಸಂ ಯಥಾ ॥

ಅನುವಾದ

ಅವರು ಓಡುತ್ತಿರುವುದನ್ನು ನೋಡಿ ರೋಷಗೊಂಡ ಖರನು ಕೂಡಲೇ ಹಿಂದಿರುಗಿಸಿನು. ರಾಹುವು ಚಂದ್ರನ ಮೇಲೆ ಆಕ್ರಮಣ ಮಾಡುವಂತೆ ಅವನು ಶ್ರೀರಾಮನ ಮೇಲೆ ಆಕ್ರಮಣ ಮಾಡಿದರು.॥20॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗ ಸಂಪೂರ್ಣವಾಯಿತು. ॥27॥