वाचनम्
ಭಾಗಸೂಚನಾ
ದೂಷಣ ಸಹಿತ ಹದಿನಾಲ್ಕು ಸಾವಿರ ರಾಕ್ಷಸರನ್ನು ಶ್ರೀರಾಮನು ವಧಿಸಿದುದು
ಮೂಲಮ್ - 1½
ದೂಷಣಸ್ತು ಸ್ವಕಂ ಸೈನ್ಯಂ ಹನ್ಯಮಾನಂ ವಿಲೋಕ್ಯ ಚ ।
ಸಂದಿದೇಶ ಮಹಾಬಾಹುರ್ಭೀಮವೇಗಾನ್ ದುರಾಸದಾನ್ ॥
ರಾಕ್ಷಸಾನ್ ಪಂಚಸಾಹಸ್ರಾನ್ಸಮರೇಷ್ವ ನಿವರ್ತಿನಃ ।
ಅನುವಾದ
ಮಹಾಬಾಹು ದೂಷಣನು ತನ್ನ ಸೈನಿಕರು ಕೆಟ್ಟದಾಗಿ ಸಾಯುತ್ತಿರುವುದನ್ನು ನೋಡಿ ಯುದ್ಧದಿಂದ ಹಿಂದೆ ಓಡದಿರುವ ಗೆಲ್ಲಲು ಕಠಿಣರಾದ ಐದು ಸಾವಿರ ರಾಕ್ಷಸರಿಗೆ ಮುಂದಕ್ಕೆ ಹೋಗುವಂತೆ ಹುರಿದುಂಬಿಸಿದನು.॥1½॥
ಮೂಲಮ್ - 2½
ತೇ ಶೂಲೈಃ ಪಟ್ಟಿಶೈಃ ಖಡ್ಗೈಃ ಶಿಲಾವರ್ಷೈರ್ದ್ರುಮೈರಪಿ ॥
ಶರವರ್ಷೈರವಿಚ್ಛಿನ್ನಂ ವವರ್ಷುಸ್ತಂ ಸಮಂತತಃ ।
ಅನುವಾದ
ಅವರು ಶ್ರೀರಾಮನ ಮೇಲೆ ಎಲ್ಲ ಕಡೆಗಳಿಂದ ಶೂಲ, ಪಟ್ಟಿಶ, ಖಡ್ಗ, ಕಲ್ಲುಬಂಡೆ, ವೃಕ್ಷ ಮತ್ತು ಬಾಣಗಳನ್ನು ಒಂದೇ ಸವನೆ ಮಳೆಗರೆಯತೊಡಗಿದರು.॥2½॥
ಮೂಲಮ್ - 3½
ತದ್ ದ್ರುಮಾಣಾಂ ಶಿಲಾನಾಂ ಚ ವರ್ಷಂ ಪ್ರಾಣಹರಂ ಮಹತ್ ॥
ಪ್ರತಿಜಗ್ರಾಹ ಧರ್ಮಾತ್ಮಾ ರಾಘವಸ್ತೀಕ್ಷ್ಣಸಾಯಕೈಃ ।
ಅನುವಾದ
ಇದನ್ನು ನೋಡಿದ ಧರ್ಮಾತ್ಮಾ ಶ್ರೀರಘುನಾಥನು ವೃಕ್ಷಗಳ, ಶಿಲೆಗಳ, ಪ್ರಾಣಹಾರಿಣಿ ಮಹಾವೃಷ್ಟಿಯನ್ನು ತನ್ನ ತೀಕ್ಷ್ಣಬಾಣಗಳಿಂದ ತಡೆದನು.॥3½॥
ಮೂಲಮ್ - 4½
ಪ್ರತಿಗೃಹ್ಯ ಚ ತದ್ವರ್ಷಂ ನಿಮೀಲಿತ ಇವರ್ಷಭಃ ॥
ರಾಮಃ ಕ್ರೋಧಂ ಪರಂ ಲೇಭೇ ವಧಾರ್ಥಂ ಸರ್ವರಕ್ಷಸಾಮ್ ।
ಅನುವಾದ
ಆ ಎಲ್ಲ ಮಳೆಯನ್ನು ತಡೆದು ಕಣ್ಣು ಮುಚ್ಚಿಕೊಂಡ ಗೂಳಿಯಂತೆ ಅವಿಚಲಭಾವದಿಂದ ನಿಂತಿರುವ ಶ್ರೀರಾಮನು ಸಮಸ್ತ ರಾಕ್ಷಸರನ್ನು ವಧಿಸಲು ಮಹಾ ಕ್ರೋಧವನ್ನು ಪ್ರಕಟಿಸಿದನು.॥4½॥
ಮೂಲಮ್ - 5½
ತತಃ ಕ್ರೋಧಸಮಾವಿಷ್ಟಃ ಪ್ರದೀಪ್ತ ಇವ ತೇಜಸಾ ॥
ಶರೈರಭ್ಯಕಿರತ್ ಸೈನ್ಯಂ ಸರ್ವತಃ ಸಹದೂಷಣಮ್ ।
ಅನುವಾದ
ಕ್ರೋಧಗೊಂಡ ಹಾಗೂ ತೇಜದಿಂದ ಉದ್ದೀಪ್ತನಾದ ಶ್ರೀರಾಮನು ದೂಷಣ ಸಹಿತ ಎಲ್ಲ ರಾಕ್ಷಸರ ಸೈನ್ಯದ ಮೇಲೆ ಎಲ್ಲ ಕಡೆಗಳಿಂದ ಬಾಣಗಳ ಮಳೆಗರೆಯತೊಡಗಿದನು.॥5½॥
ಮೂಲಮ್ - 6½
ತತಃ ಸೇನಾಪತಿಃ ಕ್ರುದ್ಧೋ ದೂಷಣಃ ಶತ್ರುದೂಷಣಃ॥
ಶರೈರಶನಿಕಲ್ಪೈಸ್ತಂ ರಾಘವಂ ಸಮವಾರಯತ್ ।
ಅನುವಾದ
ಇದರಿಂದ ಸೇನಾಪತಿಯಾದ ಶತ್ರುದೂಷಣನಿಗೆ ಭಾರೀ ಕ್ರೋಧ ಉಂಟಾಯಿತು ಹಾಗೂ ಅವನು ವಜ್ರದಂತಹ ಬಾಣಗಳಿಂದ ಶ್ರೀರಾಮಚಂದ್ರನನ್ನು ತಡೆದನು.॥6½॥
ಮೂಲಮ್ - 7
ತತೋ ರಾಮಃ ಸುಸಂಕ್ರುದ್ಧಃ ಕ್ಷುರೇಣಾಸ್ಯ ಮಹದ್ಧನುಃ ॥
ಮೂಲಮ್ - 8½
ಚಿಚ್ಛೇದ ಸಮರೇ ವೀರಶ್ಚತುರ್ಭಿಶ್ಚತುರೋ ಹಯಾನ್ ।
ಹತ್ವಾ ಚಾಶ್ವಾನ್ ಶರೈ ಸ್ತೀಕ್ಷ್ಣೈರರ್ಧಚಂದ್ರೇಣ ಸಾರಥೇಃ ॥
ಶಿರೋ ಜಹಾರ ತದ್ರಕ್ಷಸ್ತ್ರಿಭಿರ್ವಿವ್ಯಾಧ ವಕ್ಷಸಿ ।
ಅನುವಾದ
ಆಗ ಅತ್ಯಂತ ಕುಪಿತನಾದ ವೀರ ಶ್ರೀರಾಮನು ಸಮರಾಂಗಣದಲ್ಲಿ ಕ್ಷುರವೆಂಬ ಬಾಣದಿಂದ ದೂಷಣನ ವಿಶಾಲ ಧನುಸ್ಸನ್ನು ತುಂಡರಿಸಿದನು ಮತ್ತು ನಾಲ್ಕು ಹರಿತವಾದ ಸಾಯಕಗಳಿಂದ ಅವನ ನಾಲ್ಕು ಕುದುರೆಗಳನ್ನು ಸಾಯಿಸಿ, ಒಂದು ಅರ್ಧಚಂದ್ರಾಕಾರ ಬಾಣದಿಂದ ಸಾರಥಿಯ ಶಿರಸ್ಸನ್ನು ಹಾರಿಸಿದನು. ಮೂರು ಬಾಣಗಳಿಂದ ಆ ರಾಕ್ಷಸನ ಎದೆಯನ್ನು ನೋಯಿಸಿದನು.॥7-8½॥
ಮೂಲಮ್ - 9
ಸ ಚ್ಛಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ ॥
ಮೂಲಮ್ - 10
ಜಗ್ರಾಹ ಗಿರಿಶೃಂಗಾಭಂ ಪರಿಘಂ ರೋಮಹರ್ಷಣಮ್ ।
ವೇಷ್ಟಿತಂ ಕಾಂಚನೈಃ ಪಟ್ಟೈರ್ದೇವಸೈನ್ಯಾಭಿಮರ್ದನಮ್ ॥
ಅನುವಾದ
ಧನುಷ್ಯ ತುಂಡಾಗಿ, ಕುದುರೆಗಳ ಸಹಿತ ಸಾರಥಿಯು ಮಡಿದುಹೋದಾಗ ರಥಹೀನನಾದ ದೂಷಣನು ಪರ್ವತ ಶಿಖರದಂತಹ ಒಂದು ರೋಮಾಂಚಕರ, ಚಿನ್ನದ ಪಟ್ಟಿಗಳಿಂದ ಕೂಡಿದ್ದ ದೇವತೆಗಳ ಸೈನ್ಯವನ್ನು ಹೊಸಕಿ ಹಾಕುವಂತಹ ಪರಿವನ್ನೆತ್ತಿಕೊಂಡನು.॥9-10॥
ಮೂಲಮ್ - 11
ಆಯಸೈಃ ಶಂಕುಭಿಸ್ತೀಕ್ಷ್ಣೈಃ ಕೀರ್ಣಂ ಪರವಸೋಕ್ಷಿತಮ್ ।
ವಜ್ರಾಶನಿಸಮಸ್ಪರ್ಶಂ ಪರಗೋಪುರದಾರಣಮ್ ॥
ಅನುವಾದ
ಲೋಹಮಯವಾದ ಚೂಪಾದ ಗೂಟಗಳು ಆ ಪರಿಘಾಯುಧದ ಸುತ್ತಲೂ ಇದ್ದು ಶತ್ರುಗಳ ಚರ್ಬಿಯಿಂದ ಮೆತ್ತಿಕೊಂಡಿತ್ತು. ಅದರ ಸ್ಪರ್ಶ ವಜ್ರದಂತೆ ಕಠೋರವಾಗಿತ್ತು. ಅದು ಶತ್ರುಗಳ ನಗರದ್ವಾರಗಳನ್ನು ವಿದೀರ್ಣಗೊಳಿಸಲು ಸಮರ್ಥವಾಗಿತ್ತು.॥11॥
ಮೂಲಮ್ - 12
ತಂ ಮಹೋರಗಸಂಕಾಶಂ ಪ್ರಗೃಹ್ಯ ಪರಿಘಂ ರಣೇ ।
ದೂಷಣೋಽಭ್ಯಪತದ್ ರಾಮಂ ಕ್ರೂರಕರ್ಮಾ ನಿಶಾಚರಃ ॥
ಅನುವಾದ
ಭಾರೀ ದೊಡ್ಡ ಸರ್ಪದಂತೆ ಭಯಂಕರವಾದ ಪರಿಘವನ್ನು ಕೈಯ್ಯಲ್ಲೆತ್ತಿಕೊಂಡು ಕ್ರೂರಕರ್ಮಿ ದೂಷಣನು ರಣಭೂಮಿಯಲ್ಲಿ ಶ್ರೀರಾಮನ ಮೇಲೆ ಎರಗಿದನು.॥12॥
ಮೂಲಮ್ - 13
ತಸ್ಯಾಭಿಪತಮಾನಸ್ಯ ದೂಷಣಸ್ಯ ಸ ರಾಘವಃ ।
ದ್ವಾಭ್ಯಾಂ ಶರಾಭ್ಯಾಂ ಚಿಚ್ಛೇದ ಸಹಸ್ತಾಭರಣೌ ಭುಜೌ॥
ಅನುವಾದ
ಅವನು ತನ್ನ ಮೇಲೆ ಆಕ್ರಮಿಸುತ್ತಿರುವುದನ್ನು ನೋಡಿ ಶ್ರೀರಾಮನು ಎರಡು ಬಾಣಗಳಿಂದ ಭೂಷಣ ಸಹಿತ ಅವನ ಎರಡೂ ಭುಜಗಳನ್ನು ಕತ್ತರಿಸಿ ಹಾಕಿದನು.॥13॥
ಮೂಲಮ್ - 14
ಭ್ರಷ್ಟಸ್ತಸ್ಯ ಮಹಾಕಾಯಃ ಪಪಾತ ರಣಮೂರ್ಧನಿ ।
ಪರಿಘಚ್ಛಿನ್ನಹಸ್ತಸ್ಯ ಶಕ್ರಧ್ವಜ ಇವಾಗ್ರತಃ ॥
ಅನುವಾದ
ಯುದ್ಧದಲ್ಲಿ ಎರಡೂ ಭುಜಗಳು ತುಂಡಾಗಿ ದೂಷಣನ ಕೈಯಿಂದ ಆ ನಿಶಾಲಕಾಯ ಪರಿಘವು ಇಂದ್ರಧ್ವಜದಂತೆ ಜಾರಿ ಎದುರಿಗೆ ಬಿದ್ದುಹೋಯಿತು.॥14॥
ಮೂಲಮ್ - 15
ಕರಾಭ್ಯಾಂ ಚ ವಿಕೀರ್ಣಾಭ್ಯಾಂ ಪಪಾತ ಭುವಿ ದೂಷಣಃ ।
ವಿಷಾಣಾಭ್ಯಾಂ ವಿಶೀರ್ಣಾಭ್ಯಾಂ ಮನಸ್ವೀವ ಮಹಾಗಜಃ ॥
ಅನುವಾದ
ಎರಡು ದಂತಗಳೂ ಕಿತ್ತು ಬಿಟ್ಟಾಗ ಮಹಾ ಮನಸ್ವೀ ಗಜರಾಜನು ಅದರೊಂದಿಗೇ ಧರಾಶಾಯಿಯಾಗುವಂತೆ ತುಂಡಾಗಿ ಬಿದ್ದ ಭುಜಗಳೊಂದಿಗೆ ದೂಷಣನೂ ಬಿದ್ದುಹೋದನು.॥15॥
ಮೂಲಮ್ - 16
ದೃಷ್ಟ್ವಾ ತಂ ಪತಿತಂ ಭೂಮೌ ದೂಷಣಂ ನಿಹತಂ ರಣೇ ।
ಸಾಧು ಸಾಧ್ವಿತಿ ಕಾಕುತ್ಸ್ಥಂ ಸರ್ವಭೂತಾನ್ಯಪೂಜಯನ್ ॥
ಅನುವಾದ
ರಣರಂಗದಲ್ಲಿ ಸತ್ತು ಧರಾಶಾಯಿಯಾದ ದೂಷಣನನ್ನು ನೋಡಿ ಸಮಸ್ತ ಪ್ರಾಣಿಗಳು ಸಾಧು-ಸಾಧು ಎಂದು ಹೇಳುತ್ತಾ ಭಗವಾನ್ ಶ್ರೀರಾಮನನ್ನು ಪ್ರಶಂಸಿಸಿದರು.॥16॥
ಮೂಲಮ್ - 17½
ಏತಸ್ಮಿನ್ನಂತರೇ ಕ್ರುದ್ಧಾಸ್ತ್ರಯಃ ಸೇನಾಗ್ರಯಾಯಿನಃ ।
ಸಂಹತ್ಯಾಭ್ಯದ್ರವನ್ ರಾಮಂ ಮೃತ್ಯುಪಾಶಾವಪಾಶಿತಾಃ ॥
ಮಹಾಕಪಾಲಃ ಸ್ಥೂಲಾಕ್ಷಃ ಪ್ರಮಾಥೀ ಚ ಮಹಾಬಲಃ ।
ಅನುವಾದ
ಇದೇ ಸಮಯದಲ್ಲಿ ಸೈನ್ಯದ ಮುಂಭಾಗದಲ್ಲಿದ್ದ ಮಹಾ ಕಪಾಲಿ, ಸ್ಥೂಲಾಕ್ಷ ಮತ್ತು ಮಹಾಬಲಿ ಪ್ರಮಾಥೀ ಈ ಮೂವರೂ ರಾಕ್ಷಸರು ಕುಪಿತರಾಗಿ ಮೃತ್ಯುಪಾಪದಿಂದ ಬಂಧಿತರಾಗಿ ಒಟ್ಟಿಗೆ ಶ್ರೀರಾಮನ ಮೇಲೆ ಎರಗಿದರು.॥17½॥
ಮೂಲಮ್ - 18½
ಮಹಾಕಪಾಲೋ ವಿಪುಲಂ ಶೂಲಮುದ್ಯಮ್ಯ ರಾಕ್ಷಸಃ ॥
ಸ್ಥೂಲಾಕ್ಷಃ ಪಟ್ಟಿಶಂ ಗೃಹ್ಯ ಪ್ರಮಾಥೀ ಚ ಪರಶ್ವಧಮ್ ।
ಅನುವಾದ
ಮಹಾಕಪಾಲ ರಾಕ್ಷಸನು ಒಂದು ವಿಶಾಲ ತ್ರಿಶೂಲವನ್ನೆತ್ತಿಕೊಂಡು, ಸ್ಥೂಲಾಕ್ಷನು ಪಟ್ಟಿಶವನ್ನು ಕೈಯಲ್ಲೆತ್ತಿಕೊಂಡು, ಪ್ರವಾಥಿಯು ಗಂಡುಗೊಡಲಿಯನ್ನು ಹಿಡಿದುಕೊಂಡು ರಾಮನ ಮೇಲೆ ಆಕ್ರಮಣ ಮಾಡಿದರು.॥18½॥
ಮೂಲಮ್ - 19½
ದೃಷ್ಟ್ವೈವಾಪತತಸ್ತಾಂಸ್ತು ರಾಘವಃ ಸಾಯಕೈಃ ಶಿತೈಃ ॥
ತೀಕ್ಷ್ಣಾಗ್ರೈಃ ಪ್ರತಿಜಗ್ರಾಹ ಸಂಪ್ರಾಪ್ತಾನತಿಥೀನಿವ ।
ಅನುವಾದ
ಈ ಮೂವರು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ಭಗವಾನ್ ಶ್ರೀರಾಮನು ತೀಕ್ಷ್ಣಾಗ್ರವುಳ್ಳ ಹರಿತವಾದ ಸಾಯಕಗಳಿಂದ ಬಾಗಿಲಿಗೆ ಬಂದ ಅತಿಥಿಗಳನ್ನು ಸ್ವಾಗತಿಸಿದಂತೆ ಅವರನ್ನು ಸ್ವಾಗತಿಸಿದನು.॥19½॥
ಮೂಲಮ್ - 20
ಮಹಾಕಪಾಲಸ್ಯ ಶಿರಶ್ಚಿಚ್ಛೇದ ರಘುನಂದನಃ ॥
ಮೂಲಮ್ - 21
ಅಸಂಖ್ಯೇಯೈಸ್ತು ಬಾಣೌಘೈಃ ಪ್ರಮಮಾಥ ಪ್ರಮಾಥಿನಮ್ ।
ಸ್ಥೂಲಾಕ್ಷಸ್ಯಾಕ್ಷಿಣೀ ಸ್ಥೂಲೇ ಪೂರಯಾಮಾಸ ಸಾಯಕೈಃ ॥
ಅನುವಾದ
ಶ್ರೀರಘುನಂದನನು ಮಹಾಕಪಾಲನ ಶಿರವನ್ನು ಮತ್ತು ಕಪಾಲವನ್ನು ಹಾರಿಸಿದನು. ಪ್ರವಾಥಿಯನ್ನು ಅಸಂಖ್ಯ ಬಾಣಗಳಿಂದ ಕೊಂದುಹಾಕಿದನು ಹಾಗೂ ಸ್ಥೂಲಾಕ್ಷನ ದೊಡ್ಡದಾದ ಕಣ್ಣುಗಳನ್ನು ಅಂಬುಗಳಿಂದ ತುಂಬಿದನು.॥20-21॥
ಮೂಲಮ್ - 22½
ಸ ಪಪಾತ ಹತೋ ಭೂಮೌ ವಿಟಪೀವ ಮಹಾದ್ರುಮಃ ।
ದೂಷಣಸ್ಯಾನುಗಾನ್ ಪಂಚಸಾಹಸ್ರಾನ್ಕುಪಿತಃ ಕ್ಷಣಾತ್ ॥
ಹತ್ವಾ ತು ಪಂಚ ಸಾಹಸ್ರೈರನಯದ್ ಯಮಸಾದನಮ್ ।
ಅನುವಾದ
ಅಗ್ರಗಾಮೀ ಆ ಮೂವರೂ ಸೈನಿಕರ ಗುಂಪು ಅನೇಕ ರೆಂಬೆಗಳುಳ್ಳ ವಿಶಾಲ ವೃಕ್ಷದಂತೆ ಭೂಮಿಗೆ ಬಿದ್ದುಹೋಯಿತು. ಅನಂತರ ಶ್ರೀರಾಮಚಂದ್ರನು ಕುಪಿತನಾಗಿ ದೂಷಣನ ಅನುಯಾಯಿ ಐದುಸಾವಿರ ರಾಕ್ಷಸರನ್ನು ಅಷ್ಟೇ ಬಾಣಗಳಿಂದ ಕ್ಷಣಾರ್ಧದಲ್ಲಿ ಯಮಸದನಕ್ಕೆ ಅಟ್ಟಿದನು.॥22½॥
ಮೂಲಮ್ - 23
ದೂಷಣಂ ನಿಹತಂ ಶೃತ್ವಾ ತಸ್ಯ ಚೈವ ಪದಾನುಗಾನ್ ॥
ಮೂಲಮ್ - 24
ವ್ಯಾದಿದೇಶ ಖರಃ ಕ್ರುದ್ಧಃ ಸೇನಾಧ್ಯಕ್ಷಾನ್ಮಹಾಬಲಾನ್ ।
ಅಯಂ ವಿನಿಹತಃ ಸಂಖ್ಯೇ ದೂಷಣಃ ಸಪದಾನುಗಃ ॥
ಮೂಲಮ್ - 25
ಮಹತ್ಯಾ ಸೇನಯಾ ಸಾರ್ಧಂ ಯುದ್ಧ್ವಾ ರಾಮಂ ಕುಮಾನುಷಮ್ ।
ಶಸ್ತ್ರೈರ್ನಾನಾವಿಧಾಕಾರೈರ್ಹನಧ್ವಂ ಸರ್ವರಾಕ್ಷಸಾಃ ॥
ಅನುವಾದ
ದೂಷಣ ಮತ್ತು ಅವನ ಅನುಯಾಯಿಗಳು ಸತ್ತು ಹೋಗಿರುವುದನ್ನು ಕೇಳಿ ಖರನಿಗೆ ಭಾರೀ ಕ್ರೋಧ ಉಂಟಾಯಿತು. ಅವನು ತನ್ನ ಸೇನಾಪತಿಗಳಿಗೆ ‘ವೀರರೇ! ಈ ದೂಷಣನು ತನ್ನ ಸೇವಕರೊಂದಿಗೆ ಯುದ್ಧದಲ್ಲಿ ಸತ್ತುಹೋದನು. ಆದ್ದರಿಂದ ಈಗ ರಾಕ್ಷಸರಾದ ನೀವೆಲ್ಲರೂ ದೊಡ್ಡ ಸೈನ್ಯದೊಂದಿಗೆ ಆಕ್ರಮಣ ಮಾಡಿ ಈ ದುಷ್ಟ ಮನುಷ್ಯ ರಾಮನ ಜೊತೆಗೆ ಯುದ್ಧ ಮಾಡಿ ಮತ್ತು ನಾನಾ ವಿಧದ ಶಸ್ತ್ರಗಳಿಂದ ಇವನನ್ನು ವಧಿಸಿಬಿಡಿರಿ’ ಎಂದು ಆಜ್ಞಾಪಿಸಿದನು.॥23-25॥
ಮೂಲಮ್ - 26
ಏವಮುಕ್ತ್ವಾ ಖರಃ ಕ್ರುದ್ಧೋ ರಾಮಮೇವಾಭಿದುದ್ರುವೇ ।
ಶ್ಯೇನಗಾಮೀ ಪೃಥುಗ್ರೀವೋ ಯಜ್ಞ ಶತ್ರುರ್ವಿಹಂಗಮಃ ॥
ಮೂಲಮ್ - 27
ದುರ್ಜಯಃ ಕರವೀರಾಕ್ಷಃ ಪರುಷಃ ಕಾಲಕಾರ್ಮುಕಃ ।
ಹೇಮಮಾಲೀ ಮಹಾಮಾಲೀ ಸರ್ಪಾಸ್ಯೋ ರುಧಿರಾಶನಃ ॥
ಮೂಲಮ್ - 28
ದ್ವಾದಶೈತೇ ಮಹಾವೀರ್ಯಾ ಬಲಾಧ್ಯಕ್ಷಾಃ ಸಸೈನಿಕಾಃ ।
ರಾಮಮೇವಾಭ್ಯಧಾವಂತ ವಿಸೃಜಂತಃ ಶರೋತ್ತಮಾನ್ ॥
ಅನುವಾದ
ಹೀಗೆ ಹೇಳಿ ಕುಪಿತನಾದ ಖರನು ಶ್ರೀರಾಮನ ಮೇಲೆ ಆಕ್ರಮಿಸಿದನು. ಜೊತೆಗೆ ಶ್ಯೇನಗಾಮಿ, ಪಥುಗ್ರೀವ, ಯಜ್ಞಶತ್ರು, ವಿಹಂಗಮ, ದುರ್ಜಯ, ಕರವೀರಾಕ್ಷ, ಪರುಷ, ಕಾಲಕಾರ್ಮುಕ, ಹೇಮವಾಲೀ, ಮಹಾವಾಲೀ, ಸರ್ಪಾಸ್ಯ ಮತ್ತು ರುಧಿರಾಶನ ಹೀಗೆ ಹನ್ನೆರಡು ಮಹಾಪರಾಕ್ರಮಿ ಸೇನಾಪತಿಗಳೂ ಉತ್ತಮ ಬಾಣಗಳನ್ನು ಮಳೆಗರೆಯುತ್ತಾ ತಮ್ಮ ಸೈನಿಕರೊಂದಿಗೆ ಶ್ರೀರಾಮನ ಮೇಲೆ ಎರಗಿದರು.॥26-28॥
ಮೂಲಮ್ - 29
ತತಃ ಪಾವಕಸಂಕಾಶೈರ್ಹೇಮವಜ್ರವಿಭೂಷಿತೈಃ ।
ಜಘಾನ ಶೇಷಂ ತೇಜಸ್ವೀ ತಸ್ಯ ಸೈನ್ಯಸ್ಯಸಾಯಕೈಃ ॥
ಅನುವಾದ
ಆಗ ತೇಜಸ್ವೀ ಶ್ರೀರಾಮಚಂದ್ರನು ಚಿನ್ನ ಮತ್ತು ರತ್ನಗಳಿಂದ ವಿಭೂಷಿತ ಅಗ್ನಿತುಲ್ಯ ಪ್ರಕಾಶಮಾನ ಸಾಯಕಗಳಿಂದ ಆ ಸೈನ್ಯದ ಅಳಿದುಳಿದ ರಾಕ್ಷಸರನ್ನು ಸಂಹರಿಸಿಬಿಟ್ಟನು.॥29॥
ಮೂಲಮ್ - 30
ತೇ ರುಕ್ಮಪುಂಖಾ ವಿಶಿಖಾಃ ಸಧೂಮಾ ಇವ ಪಾವಕಾಃ ।
ನಿಜಘ್ನುಸ್ತಾನಿ ರಕ್ಷಾಂಸಿ ವಜ್ರಾ ಇವ ಮಹಾದ್ರುಮಾನ್ ॥
ಅನುವಾದ
ವಜ್ರವು ದೊಡ್ಡ-ದೊಡ್ಡ ವೃಕ್ಷಗಳನ್ನು ನಾಶಮಾಡಿ ಬಿಡುವಂತೆಯೇ ಹೊಗೆಯಿಂದ ಕೂಡಿದ ಅಗ್ನಿಯಂತೆ ಕಾಣುವ, ಬಂಗಾರದ ಗರಿಗಳುಳ್ಳ ಬಾಣಗಳಿಂದ ಆ ಸಮಸ್ತ ರಾಕ್ಷಸರನ್ನು ವಿನಾಶಗೊಳಿಸಿದನು.॥30॥
ಮೂಲಮ್ - 31
ರಕ್ಷಸಾಂ ತು ಶತಂ ರಾಮಃ ಶತೇನೈಕೇನ ಕರ್ಣಿನಾ ।
ಸಹಸ್ರಂ ತು ಸಹಸ್ರೇಣ ಜಘಾನ ರಣಮೂರ್ಧನಿ ॥
ಅನುವಾದ
ಆ ಯುದ್ಧಮುಖದಲ್ಲಿ ಶ್ರೀರಾಮನು ಕರ್ಣಿ ಎಂಬ ನೂರು ಬಾಣಗಳಿಂದ ನೂರು ರಾಕ್ಷಸರನ್ನು ಮತ್ತು ಸಾವಿರ ಬಾಣಗಳಿಂದ ಸಾವಿರ ನಿಶಾಚರರನ್ನು ಒಂದೇ ಸಲ ಸಂಹಾರಮಾಡಿಬಿಟ್ಟನು.॥31॥
ಮೂಲಮ್ - 32
ತೈರ್ಭಿನ್ನವರ್ಮಾಭರಣಾಶ್ಛಿನ್ನಭಿನ್ನಶರಾಸನಾಃ ।
ನಿಪೇತುಃ ಶೋಣಿತಾದಿಗ್ಧಾ ಧರಣ್ಯಾಂ ರಜನೀಚರಾಃ ॥
ಅನುವಾದ
ಆ ಬಾಣಗಳಿಂದ ಅಸುರರ ಕವಚ, ಆಭೂಷಣ ಹಾಗೂ ಧನುಸ್ಸುಗಳು ಛಿನ್ನ-ಭಿನ್ನವಾದುವು. ಅವರು ರಕ್ತದಿಂದ ತೋಯ್ದು ಭೂಮಿಗುರುಳಿದರು.॥32॥
ಮೂಲಮ್ - 33
ತೈರ್ಮುಕ್ತ ಕೇಶೈಃ ಸಮರೇ ಪತಿತೈಃ ಶೋಣೀತೋಕ್ಷಿತೈಃ ।
ಆಸ್ತೀರ್ಣಾ ವಸುಧಾ ಕೃತ್ಸ್ನಾ ಮಹಾವೇದಿಃ ಕುಶೈರಿವ ॥
ಅನುವಾದ
ದರ್ಭೆಗಳಿಂದ ಮುಚ್ಚಿರುವ ವಿಶಾಲ ವೇದಿಯಂತೆ ಯುದ್ಧದಲ್ಲಿ ರಕ್ತಸಿಕ್ತವಾಗಿ ಬಿದ್ದಿರುವ ಬಿಟ್ಟ ಮಂಡೆಯ ರಾಕ್ಷಸರಿಂದ ಇಡೀ ರಣಭೂಮಿಯು ಮುಚ್ಚಿಹೋಯಿತು.॥33॥
ಮೂಲಮ್ - 34
ತತ್ಕ್ಷಣೇ ತು ಮಹಾಘೋರಂ ವನಂ ನಿಹತರಾಕ್ಷಸಮ್ ।
ಬಭೂವ ನಿರಯಪ್ರಖ್ಯಂ ಮಾಂಸಶೋಣಿತಕರ್ದಮಮ್ ॥
ಅನುವಾದ
ರಾಕ್ಷಸರು ಸತ್ತುಹೋಗಿ ಆಗ ಅಲ್ಲಿ ರಕ್ತ-ಮಾಂಸದ ಕೆಸರೇ ಉಂಟಾಯಿತು, ಆದ್ದರಿಂದ ಆ ಭಯಂಕರ ವನವು ನರಕದಂತೆ ಅನಿಸುತ್ತಿತ್ತು.॥34॥
ಮೂಲಮ್ - 35
ಚತುರ್ದಶಸಹಸ್ರಾಣಿ ರಕ್ಷಸಾಂ ಭೀಮಕರ್ಮಣಾಮ್ ।
ಹತಾನ್ಯೇಕೇನ ರಾಮೇಣ ಮಾನುಷೇಣ ಪದಾತಿನಾ ॥
ಅನುವಾದ
ಮಾನವ ರೂಪಧಾರೀ ಶ್ರೀರಾಮನು ಒಬ್ಬಂಟಿಗನಾಗಿದ್ದು, ಪಾದಚಾರಿಯಾಗಿದ್ದರೂ ಅವನು ಭಯಾನಕ ಕರ್ಮ ಮಾಡುವ ಹದಿನಾಲ್ಕು ಸಾವಿರ ರಾಕ್ಷಸರನ್ನು ತತ್ಕಾಲ ಮೃತ್ಯುವಶವಾಗಿಸಿದನು.॥35॥
ಮೂಲಮ್ - 36
ತಸ್ಯ ಸೈನ್ಯಸ್ಯ ಸರ್ವಸ್ಯ ಖರಃ ಶೇಷೋ ಮಹಾರಥಃ ।
ರಾಕ್ಷಸಸ್ತ್ರಿ ಶಿರಾಶ್ಚೈವ ರಾಮಶ್ಚ ರಿಪುಸೂದನಃ ॥
ಅನುವಾದ
ಆ ಇಡೀ ಸೈನ್ಯದಲ್ಲಿ ಕೇವಲ ಮಹಾರಥೀ ಖರ ಮತ್ತು ತ್ರಿಶಿರಾ ಇವರಿಬ್ಬರೇ ರಾಕ್ಷಸರು ಉಳಿದಿದ್ದರು. ಅತ್ತ ಶತ್ರು ಸಂಹಾರಕ ಭಗವಾನ್ ಶ್ರೀರಾಮನು ಹಾಗೆಯೇ ಯುದ್ಧಕ್ಕಾಗಿ ಸಿದ್ಧನಾಗಿದ್ದನು.॥36॥
ಮೂಲಮ್ - 37
ಶೇಷಾ ಹತಾ ಮಹಾವೀರ್ಯಾ ರಾಕ್ಷಸಾ ರಣಮೂರ್ಧನಿ ।
ಘೋರಾ ದುರ್ವಿಷಹಾಃ ಸರ್ವೇ ಲಕ್ಷ್ಮಣಸ್ಯಾಗ್ರಜೇನ ತೇ ॥
ಅನುವಾದ
ಮೇಲಿನ ಇಬ್ಬರು ರಾಕ್ಷಸರನ್ನು ಬಿಟ್ಟು ಉಳಿದ ಮಹಾ ಪರಾಕ್ರಮಿ, ಭಯಂಕರ ದುರ್ದರ್ಷರಾದ ಎಲ್ಲ ನಿಶಾಚರರು ಯುದ್ಧಮುಖದಲ್ಲಿ ಲಕ್ಷ್ಮಣಾಗ್ರಜ ಶ್ರೀರಾಮನ ಕೈಯಿಂದ ಹತರಾದರು.॥37॥
ಮೂಲಮ್ - 38
ತತಸ್ತು ತದ್ ಭೀಮಬಲಂ ಮಹಾಹವೇ
ಸಮೀಕ್ಷ್ಯ ರಾಮೇಣ ಹತಂ ಬಲೀಯಸಾ ।
ರಥೇನ ರಾಮಂ ಮಹತಾ ಖರಸ್ತತಃ
ಸಮಾಸಸಾದೇಂದ್ರ ಇವೋದ್ಯತಾಶನಿಃ ॥
ಅನುವಾದ
ಅನಂತರ ಮಹಾಸಮರದಲ್ಲಿ ಮಹಾಬಲಿ ಶ್ರೀರಾಮನಿಂದ ತನ್ನ ಭಯಂಕರ ಸೈನ್ಯವು ಸತ್ತು ಹೋಗಿರುವುದನ್ನು ನೋಡಿ ಖರನು ಒಂದು ವಿಶಾಲ ರಥದಲ್ಲಿ ಕುಳಿತು ವಜ್ರಧಾರೀ ಇಂದ್ರನು ಯಾವುದೋ ಶತ್ರುವಿನ ಮೇಲೆ ಆಕ್ರಮಿಸಿದಂತೆ ಶ್ರೀರಾಮನನ್ನು ಎದುರಿಸಲು ಬಂದನು.॥38॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗ ಸಂಪೂರ್ಣವಾಯಿತು. ॥26॥