०२५ रामेण खरसैन्यसंहारः

वाचनम्
ಭಾಗಸೂಚನಾ

ಶ್ರೀರಾಮನ ಮೇಲೆ ರಾಕ್ಷಸರ ಆಕ್ರಮಣ ಮತ್ತು ಶ್ರೀರಾಮಚಂದ್ರನಿಂದ ರಾಕ್ಷಸರ ಸಂಹಾರ

ಮೂಲಮ್ - 1

ಅವಷ್ಟಬ್ಧಧನುಂ ರಾಮಂ ಕ್ರುದ್ಧಂ ತಂ ರಿಪುಘಾತಿನಮ್ ।
ದದರ್ಶಾಶ್ರಮಮಾಗಮ್ಯ ಖರಃ ಸಹ ಪುರಃಸರೈಃ ॥

ಮೂಲಮ್ - 2

ತಂ ದೃಷ್ಟ್ವಾ ಸಗುಣಂ ಚಾಪಮುದ್ಯಮ್ಯ ಖರನಿಃಸ್ವನಮ್ ।
ರಾಮಸ್ಯಾಭಿಮುಖಂ ಸೂತಂ ಚೋದ್ಯತಾಮಿತ್ಯಚೋದಯತ್ ॥

ಅನುವಾದ

ಖರನು ತನ್ನ ಸೈನಿಕರೊಂದಿಗೆ ಆಶ್ರಮದ ಬಳಿಗೆ ಬಂದು ಕ್ರೋಧಗೊಂಡಿರುವ ಶತ್ರುಘಾತಿ ಶ್ರೀರಾಮನನ್ನು ನೋಡಿದನು. ಅವನು ಕೈಯಲ್ಲಿ ಧನುಸ್ಸನ್ನತ್ತೆಕೊಂಡು ನಿಂತಿದ್ದನು. ಅವನನ್ನು ನೋಡುತ್ತಲೇ ತನ್ನ ತೀವ್ರ ಟಂಕಾರ ಮಾಡುವ ಧನುಸ್ಸನ್ನು ಎತ್ತಿಕೊಂಡು ‘ನನ್ನ ರಥವನ್ನು ರಾಮನ ಎದುರಿಗೆ ಕೊಂಡು ಹೋಗು’ ಎಂದು ಸಾರಥಿಗೆ ಆಜ್ಞಾಪಿಸಿದನು.॥1-2॥

ಮೂಲಮ್ - 3

ಸ ಖರಸ್ಯಾಜ್ಞಯಾ ಸೂತಸ್ತುರಗಾನ್ ಸಮಚೋದಯತ್ ।
ಯತ್ರ ರಾಮೋ ಮಹಾಬಾಹುರೇಕೋ ಧುನ್ವನ್ಧನುಃ ಸ್ಥಿತಃ ॥

ಅನುವಾದ

ಮಹಾಬಾಹು ಶ್ರೀರಾಮನು ಒಬ್ಬಂಟಿಗನಾಗಿ ನಿಂತು ತನ್ನ ಧನುಷ್ಟಂಕಾರ ಮಾಡುತ್ತಿದ್ದ ಕಡೆಗೆ ಖರನ ಆಜ್ಞೆಯಂತೆ ರಥವನ್ನು ಓಡಿಸಿದನು.॥3॥

ಮೂಲಮ್ - 4

ತಂ ತು ನಿಷ್ಪತಿತಂ ದೃಷ್ವ್ವಾ ಸರ್ವತೋ ರಜನೀಚರಾಃ ।
ಮುಂಚಮಾನಾ ಮಹಾನಾದಂ ಸಚಿವಾಃ ಪರ್ಯವಾರಯನ್ ॥

ಅನುವಾದ

ಶ್ರೀರಾಮನ ಸಮೀಪಕ್ಕೆ ತಲುಪಿರುವ ಖರನನ್ನು ನೋಡಿ ಶ್ಯೇನಗಾಮಿ ಮೊದಲಾದ ಅವನ ನಿಶಾಚರ ಮಂತ್ರಿಗಳೂ ಕೂಡ ಜೋರಾಗಿ ಸಿಂಹನಾದ ಮಾಡುತ್ತಾ ಅವನ ಸುತ್ತಲೂ ಆಕ್ರಮಿಸಿ ನಿಂತುಕೊಂಡರು.॥4॥

ಮೂಲಮ್ - 5

ಸ ತೇಷಾಂ ಯಾತುಧಾನಾನಾಂ ಮಧ್ಯೇ ರಥಗತಃ ಖರಃ ।
ಬಭೂವ ಮಧ್ಯೇ ತಾರಾಣಾಂ ಲೋಹಿತಾಂಗ ಇವೋದಿತಃ ॥

ಅನುವಾದ

ಆ ರಾಕ್ಷಸರ ನಡುವೆ ರಥದಲ್ಲಿ ಕುಳಿತಿರುವ ಖರನು ನಕ್ಷತ್ರಗಳ ನಡುವೆ ಉದಯಿಸಿದ ಮಂಗಳನಂತೆ ಶೋಭಿಸುತ್ತಿದ್ದನು.॥5॥

ಮೂಲಮ್ - 6

ತತಃ ಶರಸಹಸ್ರೇಣ ರಾಮಮಪ್ರತಿಮೌಜಸಮ್ ।
ಅರ್ದಯಿತ್ವಾ ಮಹಾನಾದಂ ನನಾದ ಸಮರೇ ಖರಃ ॥

ಅನುವಾದ

ಆಗ ಖರನು ಸಮರಾಂಗಣದಲ್ಲಿ ಸಾವಿರಾರು ಬಾಣಗಳಿಂದ ಅಪ್ರತಿಮ ಬಲಶಾಲಿ ಶ್ರೀರಾಮನನ್ನು ಪೀಡಿತನಂತೆ ಮಾಡಿ ಬಹಳ ಜೋರಾಗಿ ಗರ್ಜಿಸಿದನು.॥6॥

ಮೂಲಮ್ - 7

ತತಸ್ತಂ ಭೀಮಧನ್ವಾನಂಕ್ರುದ್ಧಾಃ ಸರ್ವೇ ನಿಶಾಚರಾಃ ।
ರಾಮಂ ನಾನಾವಿಧೈಃ ಶಸ್ತ್ರೈರಭ್ಯವರ್ಷಂತ ದುರ್ಜಯಮ್ ॥

ಅನುವಾದ

ಅನಂತರ ಕ್ರೋಧಗೊಂಡ ಸಮಸ್ತ ನಿಶಾಚರರು ಭಯಂಕರ ಧನುಸ್ಸನ್ನು ಧರಿಸಿದ ದುರ್ಜಯ ವೀರ ಶ್ರೀರಾಮನ ಮೇಲೆ ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳನ್ನು ಮಳೆಗರೆದರು.॥7॥

ಮೂಲಮ್ - 8

ಮುದ್ಗರೈರಾಯಸೈಃ ಶೂಲೈಃ ಪ್ರಾಸೈಃ ಖಡ್ಗೈಃ ಪರಶ್ವಧೈಃ ।
ರಾಕ್ಷಸಾಃ ಸಮರೇ ಶೂರಂ ನಿಜಘ್ನೂ ರೋಷತತ್ಪರಾಃ ॥

ಅನುವಾದ

ಆ ರಣರಂಗದಲ್ಲಿ ದುಷ್ಟರಾದ ರಾಕ್ಷಸರು ಶೂರವೀರನಾದ ಶ್ರೀರಾಮನ ಮೇಲೆ ಲೋಹ ಮುದ್ಗರಗಳಿಂದ, ಶೂಲಗಳಿಂದ, ಪ್ರಾಸಗಳಿಂದ, ಖಡ್ಗಗಳಿಂದ, ಕೊಡಲಿಗಳಿಂದ ಪ್ರಹಾರ ಮಾಡಿದರು.॥8॥

ಮೂಲಮ್ - 9½

ತೇ ಬಲಾಹಕಸಂಕಾಶಾ ಮಹಾಕಾಯಾ ಮಹಾಬಲಾಃ ।
ಅಭ್ಯಧಾವಂತ ಕಾಕುತ್ಸ್ಥಂ ರಥೈರ್ವಾಜಿಭಿರೇವ ಚ ॥
ಗಜೈಃ ಪರ್ವತಕೂಟಾಭೈ ರಾಮಂ ಯುದ್ಧೇ ಜಿಘಾಂಸವಃ ।

ಅನುವಾದ

ಆ ಮೇಘದಂತೆ ಕಪ್ಪಾದ, ವಿಶಾಲ ಕಾಯ, ಮಹಾಬಲಿ, ನಿಶಾಚರರು ರಥ, ಕುದುರೆ ಮತ್ತು ಪರ್ವತ ಶಿಖರದಂತಿರುವ ಆನೆ ಮೊದಲಾದವುಗಳಿಂದ ಕಾಕುತ್ಸ್ಥ ಶ್ರೀರಾಮನ ಮೇಲೆ ಎಲ್ಲ ಕಡೆಗಳಿಂದ ಆಕ್ರಮಿಸಿದರು. ಅವರು ಯುದ್ಧದಲ್ಲಿ ಅವನನ್ನು ಕೊಂದುಬಿಡಲು ಬಯಸುತ್ತಿದ್ದರು.॥9½॥

ಮೂಲಮ್ - 10½

ತೇ ರಾಮೇ ಶರವರ್ಷಾಣಿ ವ್ಯಸೃಜನ್ ರಕ್ಷಸಾಂ ಗಣಾಃ ॥
ಶೈಲೇಂದ್ರಮಿವ ಧಾರಾಭಿರ್ವರ್ಷಮಾಣಾ ಮಹಾಘನಾಃ ।

ಅನುವಾದ

ದೊಡ್ಡ-ದೊಡ್ಡ ಮೋಡಗಳು ಪರ್ವತದ ಮೇಲೆ ನೀರನ್ನು ಸುರಿಸುವಂತೆಯೇ ಆ ರಾಕ್ಷಸರು ಶ್ರೀರಾಮನ ಮೇಲೆ ಬಾಣಗಳ ಮಳೆಗರೆದರು.॥10½॥

ಮೂಲಮ್ - 11½

ಸರ್ವೇಃ ಪರಿವೃತೋ ರಾಮೋ ರಾಕ್ಷಸೈಃ ಕ್ರೂರದರ್ಶನೈಃ ॥
ತಿಥಿಷ್ವಿವ ಮಹಾದೇವೋ ವೃತಃ ಪರಿಷದಾಂ ಗಣೈಃ ।

ಅನುವಾದ

ಕ್ರೂರವಾಗಿ ನೋಡುವ ಆ ರಾಕ್ಷಸರೆಲ್ಲರೂ ಪ್ರದೋಷ ಸಂಜ್ಞಕ ತಿಥಿಯಲ್ಲಿ ಭಗವಾನ್ ಶಿವನ ಪಾರ್ಷದರು ಅವನನ್ನು ಸುತ್ತುವರಿದು ಇರುವಂತೆಯೇ ಶ್ರೀರಾಮನನ್ನು ಸುತ್ತುವರಿದಿದ್ದರು.॥11½॥

ಮೂಲಮ್ - 12½

ತಾನಿ ಮುಕ್ತಾನಿ ಶಸ್ತ್ರಾಣಿ ಯಾತುಧಾನೈಃ ಸ ರಾಘವಃ ॥
ಪ್ರತಿಜಗ್ರಾಹ ವಿಶಿಖೈರ್ನದ್ಯೋಘಾನಿವ ಸಾಗರಃ ।

ಅನುವಾದ

ಶ್ರೀರಘುನಾಥನು ರಾಕ್ಷಸರು ಪ್ರಯೋಗಿಸಿದ ಅಸ್ತ್ರ-ಶಸ್ತ್ರಗಳನ್ನು ಸಮುದ್ರವು ನದಿಗಳ ಪ್ರವಾಹಗಳನ್ನು ಆತ್ಮಸಾತ್ ಮಾಡಿಕೊಳ್ಳುವಂತೆಯೇ ತನ್ನ ಬಾಣಗಳಿಂದ ತಡೆದುಬಿಟ್ಟನು.॥12½॥

ಮೂಲಮ್ - 13½

ಸ ತೈಃ ಪ್ರಹರಣೈರ್ಘೋರೈರ್ಭಿನ್ನಗಾತ್ರೋ ನ ವಿವ್ಯಥೇ ॥
ರಾಮಃ ಪ್ರದೀಪ್ತೈರ್ಬಹುಭಿರ್ವಜ್ರೈರಿವ ಮಹಾಚಲಃ ।

ಅನುವಾದ

ಆ ರಾಕ್ಷಸರ ಘೋರ ಅಸ್ತ್ರ-ಶಸ್ತ್ರಗಳ ಪ್ರಹಾರದಿಂದ ಶ್ರೀರಾಮನ ಶರೀರವು ಕ್ಷತ-ವಿಕ್ಷತವಾಗಿದ್ದರೂ ಅನೇಕ ಸಂಖ್ಯೆಯ ದೀಪ್ತಿವಂತ ವಜ್ರಗಳ ಆಘಾತಗಳನ್ನು ಸಹಿಸಿಯೂ ಪರ್ವತಗಳು ಚಲಿಸದಂತೆ ಅವನು ವ್ಯಥಿತನಾಗಿ, ವಿಚಲಿತನಾಗಲಿಲ್ಲ.॥13½॥

ಮೂಲಮ್ - 14½

ಸ ವಿದ್ಧಃ ಕ್ಷತಜಾದಿಗ್ಧಃ ಸರ್ವಗಾತ್ರೇಷು ರಾಘವಃ ॥
ಬಭೂವ ರಾಮಃ ಸಂಧ್ಯಾಭ್ರೈರ್ದಿವಾಕರ ಇವಾವೃತಃ ।

ಅನುವಾದ

ಶ್ರೀರಾಮನ ಶರೀರದಲ್ಲಿ ಅಸ್ತ್ರ-ಶಸ್ತ್ರಗಳ ಆಘಾತದಿಂದ ಗಾಯಗಳಾಗಿದ್ದವು. ಆಗ ಅವನು ಸಂಧ್ಯಾಕಾಲದ ಮೋಡಗಳಿಂದ ಆವರಿಸಿದ ಸೂರ್ಯನಂತೆ ರಕ್ತಸಿಕ್ತನಾಗಿ ಕೆಂಪಾಗಿ ಶೋಭಿಸುತ್ತಿದ್ದನು.॥14½॥

ಮೂಲಮ್ - 15½

ವಿಷೇದುರ್ದೇವಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ॥
ಏಕಂ ಸಹಸ್ರೈರ್ಬಹುಭಿಸ್ತದಾ ದೃಷ್ಟ್ವಾ ಸಮಾವೃತಮ್ ।

ಅನುವಾದ

ಶ್ರೀರಾಮನು ಒಬ್ಬಂಟಿಗನಾಗಿದ್ದನು. ಆಗ ಅವನು ಅನೇಕ ಸಾವಿರ ಶತ್ರುಗಳಿಂದ ಆವರಿಸಿದುದನ್ನು ನೋಡಿ ದೇವತೆಗಳು, ಸಿದ್ಧರು, ಗಂಧರ್ವರು, ಮಹರ್ಷಿಗಳು ವಿಷಾದಗೊಂಡರು.॥15½॥

ಮೂಲಮ್ - 16

ತತೋ ರಾಮಸ್ತುಸಂಕ್ರುದ್ಧೋ ಮಂಡಲೀಕೃತಕಾರ್ಮುಕಃ ॥

ಮೂಲಮ್ - 17

ಸಸರ್ಜ ನಿಶಿತಾನ್ಬಾಣಾನ್ ಶತಶೋಽಥ ಸಹಸ್ರಶಃ ।
ದುರಾವಾರಾನ್ದುರ್ವಿಷಹಾನ್ ಕಾಲಪಾಶೋಪಮಾನ್ರಣೇ ॥

ಅನುವಾದ

ಅನಂತರ ಶ್ರೀರಾಮಚಂದ್ರನು ಅತ್ಯಂತ ಕುಪಿತನಾಗಿ ತನ್ನ ಧನುಸ್ಸನ್ನು ಗೋಲಾಕಾರವಾಗಿ ಕಾಣುವಂತೆ ಸೆಳೆದನು. ಮತ್ತೆ ಅವನು ಧನುಸ್ಸಿನಿಂದ ರಣರಂಗದಲ್ಲಿ ನೂರಾರು ಸಾವಿರ ಹರಿತವಾದ ಬಾಣಗಳನ್ನು ಬಿಡಲುತೊಡಗಿದನು, ಅವನ್ನು ತಡೆಯುವುದು ಕಷ್ಟಕರವಾಗಿತ್ತು. ಅವು ದುಃಸಹವಾಗಿದ್ದವು, ಜೊತೆಗೆ ಕಾಲಪಾಶದಂತೆ ಭಯಂಕರವಾಗಿದ್ದವು.॥16-17॥

ಮೂಲಮ್ - 18½

ಮುವೋಚ ಲೀಲಯಾ ಕಂಕ ಪತ್ರಾನ್ ಕಾಂಚನಭೂಶಣಾನ್ ।
ತೇ ಶರಾಃ ಶತ್ರು ಸೈನ್ಯೇಷು ಮುಕ್ತಾ ರಾಮೇಣ ಲೀಲಯಾ ॥
ಆದದೂ ರಕ್ಷಸಾಂ ಪ್ರಾಣಾನ್ ಪಾಶಾಃ ಕಾಲಕೃತಾ ಇವ ।

ಅನುವಾದ

ಅವನು ಲೀಲಾಜಾಲವಾಗಿ ಗರಿಕಟ್ಟಿದ ಸ್ವರ್ಣಭೂಷಿತ ಅಸಂಖ್ಯ ಬಾಣಗಳನ್ನು ಪ್ರಯೋಗಿಸಿದನು. ಶತ್ರು ಸೈನಿಕರ ಮೇಲೆ ಶ್ರೀರಾಮನು ಲೀಲಾಜಾಲವಾಗಿ ಬಿಟ್ಟ ಬಾಣಗಳು ಕಾಲಪಾಶದಂತೆ ರಾಕ್ಷಸರ ಪ್ರಾಣಗಳನ್ನು ಆಹುತಿಗೊಂಡವು.॥18½॥

ಮೂಲಮ್ - 19½

ಭಿತ್ತ್ವಾ ರಾಕ್ಷಸದೇಹಾಂಸ್ತಾಂಸ್ತೇ ಶರಾ ರುಧಿರಾಪ್ಲುತಾಃ ॥
ಅಂತರಿಕ್ಷಗತಾ ರೇಜುರ್ದೀಪ್ತಾಗ್ನಿಸಮತೇಜಸಃ ।

ಅನುವಾದ

ರಾಕ್ಷಸರ ಶರೀರಗಳನ್ನು ಛೇದಿಸಿ ರಕ್ತದಿಂದ ತೋಯ್ದ ಆ ಬಾಣಗಳು ಆಕಾಶಕ್ಕೆ ಹಾರಿದಾಗ ಪ್ರಜ್ವಲಿತ ಅಗ್ನಿಯಂತೆ ಪ್ರಕಾಶಿಸುತ್ತಿದ್ದವು.॥19½॥

ಮೂಲಮ್ - 20½

ಅಸಂಖ್ಯೇಯಾಸ್ತು ರಾಮಸ್ಯ ಸಾಯಕಾಶ್ಚಾಪಮಂಡಲಾತ್ ॥
ವಿನಿಷ್ಪೇತುರತೀವೋಗ್ರಾ ರಕ್ಷಃಪ್ರಾಣಾಪಹಾರಿಣಃ ।

ಅನುವಾದ

ಶ್ರೀರಾಮನ ಮಂಡಲಾಕಾರ ಧನುಸ್ಸಿನಿಂದ ಅತ್ಯಂತ ಭಯಂಕರ, ರಾಕ್ಷಸರ ಪ್ರಾಣ ಹೀರುವ ಅಸಂಖ್ಯಬಾಣಗಳು ಹೊರಹೊಮ್ಮಿದವು.॥20½॥

ಮೂಲಮ್ - 21

ತೈರ್ಧನೂಂಷಿ ಧ್ವಜಾಗ್ರಾಣಿ ಚರ್ಮಾಣಿ ಕವಚಾನಿ ಚ ॥

ಮೂಲಮ್ - 22

ಬಾಹೂನ್ ಸಹಸ್ತಾಭರಣಾನೂರೂನ್ ಕರಿಕರೋಪಮಾನ್ ।
ಚಿಚ್ಛೇದ ರಾಮಃ ಸಮರೇ ಶತಶೋಽಥ ಸಹಸ್ರಶಃ ॥

ಅನುವಾದ

ಆ ಬಾಣಗಳಿಂದ ಶ್ರೀರಾಮನು ಸಮರಾಂಗಣದಲ್ಲಿ ಶತ್ರುಗಳ ಸಾವಿರಾರು ಧನುಸ್ಸುಗಳನ್ನು, ಧ್ವಜಗಳನ್ನು, ಗುರಾಣಿಗಳನ್ನು, ಕವಚಗಳನ್ನು, ಆಭೂಷಣಗಳ ಸಹಿತ ಭುಜಗಳನ್ನು ಹಾಗೂ ಆನೆಯ ಸೊಂಡಿಲಿನಂತಿದ್ದ ತೊಡೆಗಳನ್ನು ಕತ್ತರಿಸಿಹಾಕಿದನು.॥21-22॥

ಮೂಲಮ್ - 23

ಹಯಾನ್ ಕಾಂಚನ ಸಂನಾಹಾನ್ ರಥಯುಕ್ತಾನ್ಸಸಾರಥೀನ್ ।
ಗಜಾಂಶ್ಚ ಸಗಜಾರೋಹಾನ್ ಸಹಯಾನ್ಸಾದಿನಸ್ತದಾ ॥

ಮೂಲಮ್ - 24

ಚಿಚ್ಛಿದುರ್ಬಿಭಿದುಶ್ಚೈವ ರಾಮಬಾಣಾ ಗುಣಾಚ್ಚ್ಯುತಾಃ ।
ಪದಾತೀನ್ಸಮರೇ ಹತ್ವಾ ಹ್ಯನಯದ್ಯಮಸಾದನಮ್ ॥

ಅನುವಾದ

ಶ್ರೀರಾಮನ ಧನುಸ್ಸಿನ ಹಗ್ಗದಿಂದ ವೇಗವಾಗಿ ಹೊರಬರುತ್ತಿದ್ದ ಬಾಣಗಳು ರಥಕ್ಕೆ ಹೂಡಿದ, ಸುವರ್ಣಮಯ ಜೀನುಗಳನ್ನು ಧರಿಸಿದ್ದ ಕುದುರೆಗಳನ್ನು, ಸಾರಥಿಗಳನ್ನು, ಆನೆಗಳನ್ನೂ, ಗಜಾರೋಹಿಗಳನ್ನೂ, ಆಶ್ವಾರೋಹಿಗಳನ್ನೂ, ಕತ್ತರಿಸಿಹಾಕಿದವು. ಆ ಮಹಾಯುದ್ಧದಲ್ಲಿ ಭಾಗವಹಿಸಿದ ಪದಾತಿ ಸೈನ್ಯವೆಲ್ಲವನ್ನೂ ಶ್ರೀರಾಮನು ಸಂಹರಿಸಿ ಯಮಸದನಕ್ಕೆ ಕಳಿಸಿದನು.॥23-24॥

ಮೂಲಮ್ - 25

ತತೋ ನಾಲೀಕನಾರಾಚೈಸ್ತೀಕ್ಷ್ಣಾಗ್ರೈಶ್ಚ ವಿಕರ್ಣಿಭಿಃ ।
ಭೀಮಮಾರ್ತಸ್ವರಂ ಚಕ್ರುಶ್ಛಿದ್ಯಮಾನಾ ನಿಶಾಚರಾಃ ॥

ಅನುವಾದ

ಶ್ರೀರಾಮನು ಪ್ರಯೋಗಿಸುತ್ತಿದ್ದ ನಾಲೀಕಗಳಿಂದಲೂ, ತೀಕ್ಷ್ಣವಾದ ತುದಿಗಳುಳ್ಳ ಬಾಣಗಳಿಂದಲೂ, ವಿಕರ್ಣಿಗಳಿಂದಲೂ ಛಿನ್ನ-ಭಿನ್ನರಾದ ರಾಕ್ಷಸರು ಭಯಂಕರ ಆರ್ತನಾದ ಮಾಡತೊಡಗಿದರು.॥25॥

ಮೂಲಮ್ - 26

ತತ್ಸೈನ್ಯಂ ವಿವಿಧೈರ್ಬಾಣೈರರ್ದಿತಂ ಮರ್ಮಭೇದಿಭಿಃ ।
ನ ರಾಮೇಣ ಸುಖಂ ಲೇಭೇ ಶುಷ್ಕಂ ವನಮಿವಾಗ್ನಿನಾ॥

ಅನುವಾದ

ಶ್ರೀರಾಮನು ಬಿಟ್ಟ ನಾನಾ ಪ್ರಕಾರದ ಮರ್ಮಭೇದಿ ಬಾಣಗಳಿಂದ ಪೀಡಿತವಾದ ಆ ರಾಕ್ಷಸ ಸೈನ್ಯವು ಕಾಳ್ಗಿಚ್ಚಿನಿಂದ ಭಸ್ಮವಾದ ಅರಣ್ಯದಂತಾಯಿತು. ಆ ಸೈನಿಕರಿಗೆ ಸುಖವೆಂಬುದೇ ಇಲ್ಲದಂತಾಯಿತು.॥26॥

ಮೂಲಮ್ - 27

ಕೇಚಿದ್ಭೀಮಬಲಾಃ ಶೂರಾಃ ಪ್ರಾಸಾನ್ ಶೂಲಾನ್ ಪರಶ್ವಧಾನ್ ।
ಚಿಕ್ಷಿಪುಃ ಪರಮಕ್ರುದ್ಧಾ ರಾಮಾಯ ರಜನೀಚರಾಃ ॥

ಅನುವಾದ

ಭೀಮಬಲರಾದ ಕೆಲವು ಶೂರ ನಿಶಾಚರರು ಅತ್ಯಂತ ಕುಪಿತರಾಗಿ ಶ್ರೀರಾಮನ ಮೇಲೆ ಪ್ರಾಸಗಳನ್ನೂ, ಶೂಲಗಳನ್ನೂ, ಗಂಡುಕೊಡಲಿಗಳನ್ನೂ ಪ್ರಯೋಗಿಸಿದರು.॥27॥

ಮೂಲಮ್ - 28

ತೇಷಾಂ ಬಾಣೈರ್ಮಹಾಬಾಹುಃ ಶಸ್ತ್ರಾಣ್ಯಾವಾರ್ಯ ವೀರ್ಯವಾನ್ ।
ಜಹಾರ ಸಮರೇ ಪ್ರಾಣಾಂಶ್ಚಿಚ್ಛೇದ ಚ ಶಿರೋಧರಾನ್ ॥

ಅನುವಾದ

ಆದರೆ ಪರಾಕ್ರಮೀ ಮಹಾಬಾಹು ಶ್ರೀರಾಮನು ರಣಭೂಮಿಯಲ್ಲಿ ತನ್ನ ಬಾಣಗಳಿಂದ ಅವರ ಆ ಶಸ್ತ್ರಗಳನ್ನು ತಡೆದು, ಅವರ ತಲೆಗಳನ್ನು ಕತ್ತರಿಸಿ ಪ್ರಾಣಾಪಹಾರ ಮಾಡಿದನು.॥28॥

ಮೂಲಮ್ - 29

ತೇ ಚ್ಛಿನ್ನ ಶಿರಸಃ ಪೇತುಶ್ಚಿನ್ನಚರ್ಮಶರಾಸನಾಃ ।
ಸುಪರ್ಣವಾತವಿಕ್ಷಿಪ್ತಾ ಜಗತ್ಯಾಂ ಪಾದಪಾ ಯಥಾ ॥

ಮೂಲಮ್ - 30

ಅವಶಿಷ್ಟಾಶ್ಚ ಯೇ ತತ್ರ ವಿಷಣ್ಣಾಸ್ತೇ ನಿಶಾಚರಾಃ ।
ಖರಮೇವಾಭ್ಯಧಾವಂತ ಶರಣಾರ್ಥಂ ಶರಾಹತಾಃ ॥

ಅನುವಾದ

ಗರುಡನ ರೆಕ್ಕೆಗಳ ಗಾಳಿಯಿಂದ ಮುರಿದುಬೀಳುವ ನಂದನ ವನದ ವೃಕ್ಷಗಳಂತೆ ತಲೆ, ಗುರಾಣಿ, ಧನುಸ್ಸು ತುಂಡಾಗಿ ನಿಶಾಚರರು ಧರೆಗುರುಳಿದರು. ಅಳಿದುಳಿದಿದ್ದ ರಾಕ್ಷಸರೂ ಶ್ರೀರಾಮನ ಬಾಣಗಳಿಂದ ಪೀಡಿತರಾಗಿ ವಿಷಣ್ಣರಾಗಿ ಪ್ರಾಣ ರಕ್ಷಣೆಗಾಗಿ ಖರನ ಸಮೀಪಕ್ಕೆ ಧಾವಿಸಿದರು.॥29-30॥

ಮೂಲಮ್ - 31

ತಾನ್ ಸರ್ವಾನ್ ಧನುರಾದಾಯ ಸಮಾಶ್ವಾಸ್ಯ ಚ ದೂಷಣಃ ।
ಅಭ್ಯಧಾವತ್ ಸುಸಂಕ್ರುದ್ಧ ಕ್ರುದ್ಧಂ ಕ್ರುದ್ಧ ಇವಾಂತಕಃ ॥

ಅನುವಾದ

ಆದರೆ ನಡುವೆಯೇ ದೂಷಣನು ಧನುಸ್ಸನ್ನೆತ್ತಿಕೊಂಡು ಅವರೆಲ್ಲರಿಗೆ ಧೈರ್ಯತುಂಬಿ, ಅತ್ಯಂತ ಕುಪಿತನಾಗಿ ರೋಷಗೊಂಡು, ಯಮನಂತೆ ಕ್ರುದ್ಧನಾಗಿ ಯುದ್ಧಕ್ಕಾಗಿ ಶ್ರೀರಾಮನ ಕಡೆಗೆ ಓಡಿದನು.॥31॥

ಮೂಲಮ್ - 32

ನಿವ್ಯತ್ತಾಸ್ತು ಪುನಃ ಸರ್ವೇ ದೂಷಣಾಶ್ರಯನಿರ್ಭಯಾಃ ।
ರಾಮಮೇವಾಭ್ಯಧಾವಂತ ಸಾಲತಾಲಶಿಲಾಯುಧಾಃ ॥

ಅನುವಾದ

ದೂಷಣನ ಆಸರೆ ದೊರೆತು ನಿರ್ಭಯರಾದ ಸೈನಿಕರೆಲ್ಲರೂ ಮತ್ತೆ ಮರಳಿ ಬಂದು ಸಾಲ-ವೃಕ್ಷಗಳನ್ನು ಹಾಗೂ ಬಂಡೆಗಳನ್ನೆತ್ತಿಕೊಂಡು ಪುನಃ ಶ್ರೀರಾಮನನ್ನು ಆಕ್ರಮಿಸಿದರು.॥32॥

ಮೂಲಮ್ - 33

ಶೂಲಮುದ್ಗರಹಸ್ತಾಶ್ಚ ಪಾಶಹಸ್ತಾ ಮಹಾಬಲಾಃ ।
ಸೃಜಂತಃ ಶರವರ್ಷಾಣಿ ಶಸ್ತ್ರವರ್ಷಾಣಿ ಸಂಯುಗೇ ॥

ಅನುವಾದ

ಆ ಯುದ್ಧ ಸ್ಥಳದಲ್ಲಿ ತಮ್ಮ ಕೈಗಳಲ್ಲಿ ಶೂಲ, ಮುದ್ಗರ, ಪಾಶಗಳನ್ನು ಧರಿಸಿಕೊಂಡ ಆ ಮಹಾಬಲೀ ನಿಶಾಚರರು ಬಾಣಗಳಿಂದ ಹಾಗೂ ಇತರ ಅಸ್ತ್ರ-ಶಸ್ತ್ರಗಳನ್ನು ಮಳೆಗರೆಯತೊಡಗಿದರು.॥33॥

ಮೂಲಮ್ - 34½

ದ್ರುಮವರ್ಷಾಣಿ ಮುಂಚಂತಃ ಶಿಲಾವರ್ಷಾಣಿ ರಾಕ್ಷಸಾಃ ।
ತದ್ಬಭೂವಾದ್ಭುತಂ ಯುದ್ಧಂ ತುಮುಲಂ ರೋಮಹರ್ಷಣಮ್॥
ರಾಮಸ್ಯ ಚ ಮಹಾಘೋರಂ ಪುನಸ್ತೇಷಾಂ ಚ ರಕ್ಷಸಾಮ್ ।

ಅನುವಾದ

ಕೆಲವು ರಾಕ್ಷಸರು ವೃಕ್ಷಗಳನ್ನು ಮಳೆಗರೆದರೆ ಕೆಲವರು ಕಲ್ಲುಬಂಡೆಗಳನ್ನು ಸುರಿಸಿದರು. ಆಗ ಶ್ರೀರಾಮ ಮತ್ತು ನಿಶಾಚರರಲ್ಲಿ ಪುನಃ ಅದ್ಭುತ, ಮಹಾಭಯಂಕರ, ರೋವಾಂಚಕಾರೀ ಘೋರ ಯುದ್ಧ ಪ್ರಾರಂಭವಾಯಿತು.॥34½॥

ಮೂಲಮ್ - 35

ತೇ ಸಮಂತಾದಭಿಕ್ರುದ್ಧಾ ರಾಘವಂ ಪುನರಾರ್ದಯನ್ ॥

ಮೂಲಮ್ - 36

ತತಃ ಸರ್ವಾ ದಿಶೋ ದೃಷ್ಟ್ವಾ ಪ್ರದಿಶಶ್ಚ ಸಮಾವೃತಾಃ ।
ರಾಕ್ಷಸೈಃ ಸರ್ವತಃ ಪ್ರಾಪ್ತೈಃ ಶರವರ್ಷಾಭಿರಾವೃತಃ ॥

ಮೂಲಮ್ - 37

ಸ ಕೃತ್ವಾ ಭೈರವಂ ನಾದಮಸ್ತ್ರಂ ಪರಮಭಾಸ್ವರಮ್ ।
ಸಮಯೋಜಯದ್ ಗಾಂಧರ್ವಂ ರಾಕ್ಷಸೇಷು ಮಹಾಬಲಃ ॥

ಅನುವಾದ

ಆ ರಾಕ್ಷಸರು ಕುಪಿತರಾಗಿ ಸುತ್ತಲಿನಿಂದಲೂ ಪುನಃ ಶ್ರೀರಾಮನನ್ನು ಪೀಡಿಸತೊಡಗಿದರು. ಆಗ ಎಲ್ಲ ಕಡೆಗಳಿಂದ ಬಂದಿರುವ ರಾಕ್ಷಸರಿಂದ ಸಮಸ್ತ ದಿಕ್ಕುಗಳು ಆವರಿಸಿ ಕೊಂಡಿರುವುದನ್ನು ನೋಡಿದ, ಬಾಣಗಳ ಮಳೆಯಿಂದ ಮುಚ್ಚಿಹೋದ ಮಹಾಬಲೀ ಶ್ರೀರಾಮನು ಭೈರವನಾದ ಮಾಡುತ್ತಾ ರಾಕ್ಷಸರ ಮೇಲೆ ಪರಮ ತೇಜಸ್ವೀ ಗಾಂಧರ್ವ ಎಂಬ ಅಸ್ತ್ರವನ್ನು ಪ್ರಯೋಗಿಸಿದನು.॥35-37॥

ಮೂಲಮ್ - 38

ತತಃ ಶರಸಹಸ್ರಾಣಿ ನಿರ್ಯಯುಶ್ಚಾಪಮಂಡಲಾತ್ ।
ಸರ್ವಾ ದಶ ದಿಶೋ ಬಾಣೈರಾಪೂರ್ಯಂತ ಸಮಾಗತೈಃ ॥

ಅನುವಾದ

ಮತ್ತೆ ಅವನ ಮಂಡಲಾಕಾರ ಧನುಸ್ಸಿನಿಂದ ಸಾವಿರಾರು ಬಾಣಗಳು ಹೊರಟವು. ಆ ಬಾಣಗಳಿಂದ ಹತ್ತುದಿಕ್ಕುಗಳೂ ಪೂರ್ಣವಾಗಿ ಮುಚ್ಚಿಹೋದವು.॥38॥

ಮೂಲಮ್ - 39

ನಾದದಾನಂ ಶರಾನ್ ಘೋರಾನ್ ವಿಮುಂಚಂತಂ ಶರೋತ್ತಮಾನ್ ।
ವಿಕರ್ಷಮಾಣಂ ಪಶ್ಯಂತಿ ರಾಕ್ಷಸಾಸ್ತೇ ಶರಾರ್ದಿತಾಃ ॥

ಅನುವಾದ

ಶ್ರೀರಾಮಚಂದ್ರನು ಯಾವಾಗ ಭಯಂಕರ ಬಾಣವನ್ನು ಕೈಗೆತ್ತಿದನು, ಯಾವಾಗ ಆ ಉತ್ತಮ ಬಾಣಗಳನ್ನು ಬಿಡುತ್ತಾನೆ ಎಂಬುದನ್ನು ಬಾಣಗಳಿಂದ ಪೀಡಿತರಾದ ರಾಕ್ಷಸರು ನೋಡದಾದರು. ಅವರು ಕೇವಲ ಧನುಸ್ಸನ್ನು ಸೆಳೆಯುತ್ತಿರುವುದು ಮಾತ್ರ ನೋಡುತ್ತಿದ್ದರು.॥39॥

ಮೂಲಮ್ - 40

ಶರಾಂಧ ಕಾರಮಾಕಾಶಮಾವೃಣೋತ್ ಸದಿವಾಕರಮ್ ।
ಬಭೂವಾವಸ್ಥಿತೋ ರಾಮಃ ಪ್ರಕ್ಷಿಪನ್ನಿವ ತಾನ್ಶರಾನ್ ॥

ಅನುವಾದ

ಶ್ರೀರಾಮಚಂದ್ರನ ಬಾಣಸಮುದಾಯರೂಪೀ ಅಂಧಕಾರವು ಸೂರ್ಯಸಹಿತ ಇಡೀ ಆಕಾಶಮಂಡಲ ಮುಚ್ಚಿ ಹೋಯಿತು. ಆಗ ಶ್ರೀರಾಮನು ಆ ಬಾಣಗಳನ್ನು ಒಂದೇ ಸಮನೆ ಬಿಡುತ್ತಾ ಒಂದೇ ಕಡೆ ನಿಂತಿದ್ದನು.॥40॥

ಮೂಲಮ್ - 41

ಯುಗಪತ್ಪತಮಾನೈಶ್ಚ ಯುಗಪಚ್ಚ ಹತೈರ್ಭೃಶಮ್ ।
ಯುಗಪತ್ಪತಿತೈಶ್ಚೈವ ವಿಕೀರ್ಣಾ ವಸುಧಾಭವತ್ ॥

ಅನುವಾದ

ಒಮ್ಮೆಗೆ ಬಾಣಗಳಿಂದ ಅತ್ಯಂತ ಗಾಯಗೊಂಡು ಒಟ್ಟಿಗೆ ಬಿದ್ದಿರುವ ಅಸಂಖ್ಯ ರಾಕ್ಷಸರ ಹೆಣಗಳಿಂದ ಅಲ್ಲಿ ಭೂಮಿ ತುಂಬಿ ಹೋಯಿತು.॥41॥

ಮೂಲಮ್ - 42

ನಿಹತಾಃ ಪತಿತಾಃ ಕ್ಷೀಣಾಶ್ಛಿನ್ನಾ ಭಿನ್ನಾ ವಿದಾರಿತಾಃ ।
ತತ್ರ ತತ್ರ ಸ್ಮ ದೃಶ್ಯಂತೇ ರಾಕ್ಷಸಾಸ್ತೇ ಸಹಸ್ರಶಃ ॥

ಅನುವಾದ

ಕಣ್ಣು ಹರಿಸಿದಲ್ಲೆಲ್ಲ ಸಾವಿರಾರು ರಾಕ್ಷಸರು ಸತ್ತು ಬಿದ್ದಿರುವುದು, ಕ್ಷೀಣವಾಗಿ, ಅಂಗಾಂಗಗಳು ತುಂಡಾಗಿ ವಿದೀರ್ಣವಾಗಿರುವುದು ಕಂಡುಬರುತ್ತಿದ್ದವು.॥42॥

ಮೂಲಮ್ - 43

ಸೋಷ್ಣೀಷೈರುತ್ತಮಾಂಗೈಶ್ಚ ಸಾಂಗದೈರ್ಬಾಹುಭಿಸ್ತಥಾ ।
ಊರುಭಿರ್ಬಾಹುಭಿಶ್ಛಿನ್ನೈರ್ನಾನಾರೂಪವಿಭೂಷಣೈಃ ॥

ಮೂಲಮ್ - 44

ಹಯೈಶ್ಚ ದ್ವಿಪಮುಖ್ಯೈಶ್ಚ ರಥೈರ್ಭಿನ್ನೈರನೇಕಶಃ ।
ಚಾಮರವ್ಯಜನೈಶ್ಛತ್ರೈರ್ಧ್ವಜೈರ್ನಾನಾವಿಧೈರಪಿ ॥

ಮೂಲಮ್ - 45

ರಾಮೇಣ ಬಾಣಾಭಿಹತೈರ್ವಿಚ್ಛಿನ್ನೈಃ ಶೂಲಪಟ್ಟಿಶೈಃ ।
ಖಡ್ಗೈಃ ಖಂಡೀಕೃತೈಃ ಪ್ರಾಸೈರ್ವಿಕೀರ್ಣೈಶ್ಚ ಪರಶ್ವಧೈಃ ॥

ಮೂಲಮ್ - 46

ಚೂರ್ಣಿತಾಭಿಃ ಶಿಲಾಭಿಶ್ಚ ಶರೈಶ್ಚಿತ್ರೈರನೇಕಶಃ ।
ವಿಚ್ಛಿನ್ನೈಃ ಸಮರೇಭೂಮಿರ್ವಿಸ್ತೀರ್ಣಾಭೂದ್ ಭಯಂಕರಾ ॥

ಅನುವಾದ

ಅಲ್ಲಿ ಶ್ರೀರಾಮನ ಬಾಣಗಳಿಂದ ತುಂಡಾದ ಶಿರಸ್ತ್ರಾಣ ಸಹಿತ ಮಸ್ತಕಗಳಿಂದ, ಭುಜಕೀರ್ತಿ ಸಹಿತ ಭುಜಗಳಿಂದ ತೊಡೆ, ತೋಳು, ಬಗೆ-ಬಗೆಯ ಆಭೂಷಣಗಳಿಂದ, ಕುದುರೆ, ಶ್ರೇಷ್ಠ ಆನೆ, ಪುಡಿ-ಪುಡಿಯಾದ ರಥಗಳಿಂದ, ಚಾಮರ, ವ್ಯಜನ, ಛತ್ರ, ನಾನಾ ಪ್ರಕಾರದ ಧ್ವಜಗಳಿಂದ, ನುಚ್ಚುನೂರಾದ ಶೂಲ, ಪಟ್ಟಿಶ, ಬಾಣಗಳಿಂದ, ಹರಡಿಬಿದ್ದಿರುವ ಪ್ರಾಸ, ಗಂಡು ಕೊಡಲಿಗಳಿಂದ, ಚೂರು-ಚೂರಾದ ಶಿಲೆಗಳಿಂದ, ತುಂಡು-ತುಂಡಾದ ಅನೇಕ ಬಾಣಗಳಿಂದ ತುಂಬಿರುವ ಆ ಸಮರಾಂಗಣವು ಅತ್ಯಂತ ಭಯಂಕರವಾಗಿ ಕಾಣುತ್ತಿತ್ತು.॥43-46॥

ಮೂಲಮ್ - 47

ತಾನ್ ದೃಷ್ಟ್ವಾ ನಿಹತಾನ್ ಸರ್ವೇ ರಾಕ್ಷಸಾಃ ಪರಮಾತುರಾಃ ।
ನ ತತ್ರ ಚಲಿತುಂ ಶಕ್ತಾ ರಾಮಂ ಪರಪುರಂಜಯಮ್ ॥

ಅನುವಾದ

ಅವರೆಲ್ಲರೂ ಸತ್ತುಹೋಗಿರುವುದನ್ನು ನೋಡಿ ಉಳಿದ ರಾಕ್ಷಸರು ಅತ್ಯಂತ ಆತುರರಾಗಿ, ಶತ್ರುನಗರಿಯ ಮೇಲೆ ವಿಜಯ ಪಡೆಯುವ ಶ್ರೀರಾಮನ ಎದುರಿಗೆ ಹೋಗಲು ಅಸಮರ್ಥರಾದರು.॥47॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತೈದನೆಯ ಸರ್ಗ ಸಂಪೂರ್ಣವಾಯಿತು.॥25॥