वाचनम्
ಭಾಗಸೂಚನಾ
ಶ್ರೀರಾಮನು ಸಂಭವಿಸುತ್ತಿರುವ ಶಕುನಗಳಿಂದ ತನಗೆ ವಿಜಯವು ಲಭಿಸುವುದೆಂಬುದನ್ನು, ರಾಕ್ಷಸರ ವಿನಾಶವಾಗುವುದೆಂಬುದನ್ನು ತಿಳಿದುಕೊಂಡು, ಲಕ್ಷ್ಮಣನೊಡನೆ ಸೀತಾದೇವಿಯನ್ನು ಪರ್ವತದ ಗುಹೆಗೆ ಕಳಿಸಿಕೊಟ್ಟು, ಯುದ್ಧಕ್ಕೆ ಸಿದ್ಧನಾದುದು
ಮೂಲಮ್ - 1
ಆಶ್ರಮಂ ಪ್ರತಿಯಾತೇ ತು ಖರೇ ಖರಪರಾಕ್ರಮೇ ।
ತಾನೇವೌತ್ಪಾತಿಕಾನ್ರಾಮಃ ಸಹ ಭ್ರಾತ್ರಾ ದದರ್ಶ ಹ ॥
ಅನುವಾದ
ಪ್ರಚಂಡ ಪರಾಕ್ರಮಿ ಖರನು ಶ್ರೀರಾಮನ ಆಶ್ರಮದತ್ತ ಬರುತ್ತಿರುವಾಗ ತಮ್ಮ ಸಹಿತ ಶ್ರೀರಾಮನೂ ಕೂಡ ಆ ಉತ್ಪಾತಸೂಚಕ ಲಕ್ಷಣಗಳನ್ನು ನೋಡಿದನು.॥1॥
ಮೂಲಮ್ - 2
ತಾನುತ್ಪಾತಾನ್ಮಹಾಘೋರಾನ್ ರಾಮೋ ದೃಷ್ಟ್ವಾತ್ಯಮರ್ಷಣಃ ।
ಪ್ರಜಾನಾಮಹಿತಾನ್ದೃಷ್ಟ್ವಾ ವಾಕ್ಯಂ ಲಕ್ಷ್ಮಣಮಬ್ರವೀತ್ ॥
ಅನುವಾದ
ಪ್ರಜೆಯ ಅಹಿತ ಸೂಚಕವಾದ ಆ ಮಹಾಭಯಂಕರ ಉತ್ಪಾತಗಳನ್ನು ನೋಡಿ ಶ್ರೀರಾಮನು ರಾಕ್ಷಸರ ಉಪದ್ರವವನ್ನು ವಿಚಾರ ಮಾಡಿ ಅತ್ಯಂತ ಕ್ರೋಧಗೊಂಡು ಲಕ್ಷ್ಮಣನಲ್ಲಿ ಇಂತೆಂದನು.॥2॥
ಮೂಲಮ್ - 3
ಇಮಾನ್ ಪಶ್ಯ ಮಹಾಬಾಹೋ ಸರ್ವಭೂತಾಪಹಾರಿಣಃ ।
ಸಮುತ್ಥಿತಾನ್ಮಹೋತ್ಪಾತಾನ್ಸಂಹರ್ತುಂ ಸರ್ವರಾಕ್ಷಸಾನ್ ॥
ಅನುವಾದ
ಮಹಾಬಾಹೋ! ಪ್ರಕಟವಾದ ಈ ಮಹಾ ಉತ್ಪಾತಗಳ ಕಡೆಗೆ ದೃಷ್ಟಿಹಾಯಿಸು. ಸಮಸ್ತ ಪ್ರಾಣಿಗಳ ಸಂಹಾರವನ್ನು ಸೂಚಿಸುವ ಈ ಮಹಾಉತ್ಪಾತಗಳು ಈಗ ರಾಕ್ಷಸರೆಲ್ಲರ ಸಂಹಾರಕ್ಕಾಗಿಯೇ ಉಂಟಾಗಿದೆ.॥3॥
ಮೂಲಮ್ - 4
ಅಮೀ ರುಧಿರಧಾರಾಸ್ತು ವಿಸೃಜಂತೇ ಖರಸ್ವನಾಃ ।
ವ್ಯೋಮ್ನಿ ಮೇಘಾ ವಿವರ್ತಂತೇ ಪರುಷಾ ಗರ್ದಭಾರುಣಾಃ ॥
ಅನುವಾದ
ಆಕಾಶದಲ್ಲಿ ಕತ್ತೆಯಂತೆ ಬೂದು ಬಣ್ಣದ ಮೋಡಗಳು ಪ್ರಚಂಡವಾಗಿ ಗರ್ಜಿಸುತ್ತಾ ರಕ್ತದ ಮಳೆಯನ್ನು ಸುರಿಸುತ್ತಾ ಅತ್ತ-ಇತ್ತ ವಿಚರಿಸುತ್ತಿವೆ.॥4॥
ಮೂಲಮ್ - 5
ಸಧೂಮಾಶ್ಚ ಶರಾಃ ಸರ್ವೇ ಮಮ ಯುದ್ಧಾಭಿನಂದಿತಾಃ ।
ರುಕ್ಮಪೃಷ್ಠಾನಿ ಚಾಪಾನಿ ವಿಚೇಷ್ಟಂತೇ ವಿಚಕ್ಷಣ ॥
ಅನುವಾದ
ಯುದ್ಧಕುಶಲ ಲಕ್ಷ್ಮಣನೇ! ನನ್ನ ಎಲ್ಲ ಬಾಣಗಳು ಉತ್ಪಾತವಶ ಏಳುತ್ತಿರುವ ಧೂಮದೊಂದಿಗೆ ಸಂಬದ್ಧವಾಗಿ ಯುದ್ಧಕ್ಕಾಗಿ ಆನಂದಿತವಾದಂತೆ ಕಾಣುತ್ತದೆ ಹಾಗೂ ಬೆನ್ನಿಗೆ ಸುವರ್ಣವನ್ನು ಹೊದ್ದಿದ್ದ ನನ್ನ ಧನುಸ್ಸೂ ಕೂಡ ಹೆದೆಯೇರಲು ಸ್ವತಃ ಚೇಷ್ಟಿತವಾದಂತೆ ಅನಿಸುತ್ತದೆ.॥5॥
ಮೂಲಮ್ - 6
ಯಾದೃಶಾ ಇಹ ಕೂಜಂತಿ ಪಕ್ಷಿಣೋ ವನಚಾರಿಣಃ ।
ಅಗ್ರತೋ ನೋಽಭಯಂ ಪ್ರಾಪ್ತಂ ಸಂಶಯೋ ಜೀವಿತಸ್ಯ ಚ ॥
ಅನುವಾದ
ಇಲ್ಲಿ ವನಚಾರೀ ಪಕ್ಷಿಗಳು ಕೂಗುತ್ತಿರುವುದು ನಮಗೆ ಭವಿಷ್ಯದಲ್ಲಿ ಅಭಯವನ್ನು ಮತ್ತು ರಾಕ್ಷಸರಿಗೆ ಪ್ರಾಣಸಂಕಟವನ್ನು ಸೂಚಿಸುತ್ತಿವೆ.॥6॥
ಮೂಲಮ್ - 7
ಸಂಪ್ರಹಾರಸ್ತು ಸುಮಹಾನ್ ಭವಿಷ್ಯತಿ ನ ಸಂಶಯಃ ।
ಅಯಮಾಖ್ಯಾತಿ ಮೇ ಬಾಹುಃ ಸ್ಫುರಮಾಣೋ ಮುಹುರ್ಮುಹುಃ ॥
ಅನುವಾದ
ನನ್ನ ಬಲಭುಜವು ಪದೇ-ಪದೇ ಅದುರುತ್ತಿರುವುದರಿಂದ ಸ್ವಲ್ಪ ಹೊತ್ತಿನಲ್ಲೇ ದೊಡ್ಡ ಯುದ್ಧವಾಗುವುದೆಂಬುದನ್ನು ಸೂಚಿಸುತ್ತಿದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ.॥7॥
ಮೂಲಮ್ - 8
ಸಂನಿಕರ್ಷೇ ತು ನಃ ಶೂರ ಜಯಂ ಶತ್ರೋಃ ಪರಾಜಯಮ್ ।
ಸಪ್ರಭಂ ಚ ಪ್ರಸನ್ನಂ ಚ ತವ ವಕ್ತ್ರಂ ಹಿ ಲಕ್ಷ್ಯತೇ ॥
ಅನುವಾದ
ಶೂರವೀರ ಲಕ್ಷ್ಮಣ! ಆದರೆ ಭವಿಷ್ಯದಲ್ಲಿ ಬೇಗನೇ ನಮ್ಮ ವಿಜಯ ಮತ್ತು ಶತ್ರುವಿನ ಪರಾಜಯವಾಗುವುದು. ಏಕೆಂದರೆ ನಿನ್ನ ಮುಖವು ಕಾಂತಿಯುಕ್ತ ಮತ್ತು ಪ್ರಸನ್ನವಾಗಿ ಕಂಡುಬರುತ್ತಿದೆ.॥8॥
ಮೂಲಮ್ - 9
ಉದ್ಯತಾನಾಂ ಹಿ ಯುದ್ಧಾರ್ಥಂ ಯೇಷಾಂ ಭವತಿ ಲಕ್ಷ್ಮಣ ।
ನಿಷ್ಪ್ರಭಂ ವದನಂ ತೇಷಾಂಭವತ್ಯಾಯುಃ ಪರಿಕ್ಷಯಃ ॥
ಅನುವಾದ
ಲಕ್ಷ್ಮಣ! ಯುದ್ಧಕ್ಕೆ ಸಿದ್ಧನಾದಾಗ ಯಾರ ಮುಖವು ಮ್ಲಾನವಾಗುತ್ತದೋ ಅವನ ಆಯುಸ್ಸು ನಾಶವಾಗುತ್ತದೆ.॥9॥
ಮೂಲಮ್ - 10
ರಕ್ಷಸಾಂ ನರ್ದತಾಂ ಘೋರಃ ಶ್ರೂಯತೇಽಯಂ ಮಹಾಧ್ವನಿಃ ।
ಆಹತಾನಾಂ ಚ ಭೇರೀಣಾಂ ರಾಕ್ಷಸೈಃ ಕ್ರೂರಕರ್ಮಭಿಃ ॥
ಅನುವಾದ
ರಾಕ್ಷಸರು ಗರ್ಜಿಸುತ್ತಿರುವ ಘೋರ ಶಬ್ದಗಳು ಕೇಳಿಬರುತ್ತಿದೆ ಹಾಗೂ ಕ್ರೂರಕರ್ಮಿ ರಾಕ್ಷಸರು ನುಡಿಸುತ್ತಿರುವ ಭೇರಿಗಳ ಭಯಂಕರ ಧ್ವನಿಯೂ ಕಿವಿಗೆ ಬೀಳುತ್ತಿದೆ.॥10॥
ಮೂಲಮ್ - 11
ಅನಾಗತವಿಧಾನಂ ತು ಕರ್ತವ್ಯಂ ಶುಭಮಿಚ್ಛತಾ ।
ಆಪದಂ ಶಂಕಮಾನೇನ ಪುರುಷೇಣ ವಿಪಶ್ಚಿತಾ ॥
ಅನುವಾದ
ತನ್ನ ಶ್ರೇಯಸ್ಸನ್ನು ಬಯಸುವ ವಿದ್ವಾಂಸನು ಆಪತ್ತಿನ ಅಶಂಕೆ ಉಂಟಾದಾಗ ಮೊದಲಿನಿಂದಲೇ ಅದರಿಂದ ಬದುಕುಳಿಯುವ ಉಪಾಯ ಮಾಡಿಕೊಳ್ಳಬೇಕು.॥11॥
ಮೂಲಮ್ - 12
ತಸ್ಮಾದ್ ಗೃಹೀತ್ವಾ ವೈದೇಹೀಂ ಶರಪಾಣಿರ್ಧನುರ್ಧರಃ ।
ಗುಹಾಮಾಶ್ರಯ ಶೈಲಸ್ಯ ದುರ್ಗಾಂ ಪಾದಪಸಂಕುಲಾಮ್ ॥
ಅನುವಾದ
ಅದಕ್ಕಾಗಿ ನೀನು ಧನುರ್ಬಾಣಗಳನ್ನು ಧರಿಸಿ ವಿದೇಹಕುಮಾರಿ ಸೀತೆಯನ್ನು ಜೊತೆಗೆ ಕರೆದುಕೊಂಡು ವೃಕ್ಷಗಳಿಂದ ಆಚ್ಛಾದಿತವಾದ ಆ ಪರ್ವತದ ಗುಹೆಗೆ ಹೋಗು.॥12॥
ಮೂಲಮ್ - 13
ಪ್ರತಿಕೂಲಿತುಮಿಚ್ಛಾಮಿ ನ ಹಿ ವಾಕ್ಯಮಿದಂ ತ್ವಯಾ ।
ಶಾಪಿತೋ ಮಮ ಪಾದಾಭ್ಯಾಂ ಗಮ್ಯತಾಂ ವತ್ಸ ಮಾ ಚಿರಮ್ ॥
ಅನುವಾದ
ವತ್ಸ! ನೀನು ನನ್ನ ಮಾತಿಗೆ ಪ್ರತಿಕೂಲನಾಗಿ ಏನೂ ಹೇಳಬೇಡ, ತಡಮಾಡಬೇಡ, ನನ್ನ ಪಾದಗಳ ಆಣೆಯಿಟ್ಟು ಹೇಳುತ್ತೇನೆ, ಬೇಗನೆ ಹೊರಟುಹೋಗು.॥13॥
ಮೂಲಮ್ - 14
ತ್ವಂ ಹಿ ಶೂರಶ್ಚಬಲವಾನ್ ಹನ್ಯಾ ಏತಾನ್ನ ಸಂಶಯಃ ।
ಸ್ವಯಂ ನಿಹಂತುಮಿಚ್ಛಾಮಿ ಸರ್ವಾನೇವ ನಿಶಾಚರಾನ್ ॥
ಅನುವಾದ
ನೀನು ಬಲವಂತ, ಶೂರ-ವೀರನಾಗಿದ್ದು, ರಾಕ್ಷಸರನ್ನು ವಧಿಸಬಲ್ಲೆ, ಇದರಲ್ಲಿ ಸಂಶಯವೇ ಇಲ್ಲ; ಹಾಗಿದ್ದರೂ ನಾನು ಒಬ್ಬನೇ ಸ್ವತಃ ಈ ನಿಶಾಚರರನ್ನು ಸಂಹರಿಸಲು ಬಯಸುತ್ತೇನೆ. (ಅದಕ್ಕಾಗಿ ನೀನು ನನ್ನ ಮಾತನ್ನು ಮನ್ನಿಸಿ ಸೀತೆಯನ್ನು ಸುರಕ್ಷಿತವಾಗಿಡಲು ಈಕೆಯನ್ನು ಗುಹೆಗೆ ಕರೆದುಕೊಂಡು ಹೋಗು.॥14॥
ಮೂಲಮ್ - 15
ಏವಮುಕ್ತಸ್ತು ರಾಮೇಣ ಲಕ್ಷ್ಮಣಃ ಸಹ ಸೀತಯಾ ।
ಶರಾನಾದಾಯ ಚಾಪಂ ಚ ಗುಹಾಂ ದುರ್ಗಾಂ ಸಮಾಶ್ರಯತ್ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಲಕ್ಷ್ಮಣನು ಧನುರ್ಬಾಣಗಳನ್ನು ಧರಿಸಿಕೊಂಡು ಸೀತೆಯೊಂದಿಗೆ ಪರ್ವತದ ದುರ್ಗಮ ಗುಹೆಗೆ ಹೊರಟುಹೋದನು.॥15॥
ಮೂಲಮ್ - 16
ತಸ್ಮಿನ್ ಪ್ರವಿಷ್ಟೇ ತು ಗುಹಾಂ ಲಕ್ಷ್ಮಣೇ ಸಹ ಸೀತಯಾ ।
ಹಂತ ನಿರ್ಯುಕ್ತಮಿತ್ಯುಕ್ತ್ವಾ ರಾಮಃ ಕವಚಮಾವಿಶತ್ ॥
ಅನುವಾದ
ಸೀತಾ ಸಹಿತ ಲಕ್ಷ್ಮಣನು ಗುಹೆಯೊಳಗೆ ಹೋದ ಬಳಿಕ ಶ್ರೀರಾಮಚಂದ್ರನು-‘ಲಕ್ಷ್ಮಣನು ಕೂಡಲೇ ನನ್ನ ಮಾತನ್ನು ಮನ್ನಿಸಿದನು ಮತ್ತು ಸೀತೆಯ ರಕ್ಷಣೆಯ ಸರಿಯಾದ ವ್ಯವಸ್ಥೆಯಾದುದು ಹರ್ಷದ ಮಾತಾಗಿದೆ ಎಂದು ಹೇಳಿ ಕವಚವನ್ನು ಧರಿಸಿದನು.॥16॥
ಮೂಲಮ್ - 17
ಸ ತೇನಾಗ್ನಿನಿಕಾಶೇನ ಕವಚೇನ ವಿಭೂಷಿತಃ ।
ಬಭೂವ ರಾಮಸ್ತಿಮಿರೇ ಮಹಾನಗ್ನಿರಿವೋತ್ಥಿತಃ ॥
ಅನುವಾದ
ಪ್ರಜ್ವಲಿತ ಅಗ್ನಿಯಂತೆ ಪ್ರಕಾಶಿಸುವ ಆ ಕವಚದಿಂದ ವಿಭೂಷಿತನಾದ ಶ್ರೀರಾಮನು ಅಂಧಕಾರದಲ್ಲಿ ಪ್ರಕಟವಾದ ಮಹಾಯಜ್ಞೇಶ್ವರನಂತೆ ಶೋಭಿಸತೊಡಗಿದನು.॥17॥
ಮೂಲಮ್ - 18
ಸ ಚಾಪಮುದ್ಯಮ್ಯ ಮಹಚ್ಛರಾನಾದಾಯ ವೀರ್ಯವಾನ್ ।
ಸಂಬಭೂವಾಸ್ಥಿತಸ್ತತ್ರ ಜ್ಯಾಸ್ವನೈಃ ಪೂರಯನ್ ದಿಶಃ ॥
ಅನುವಾದ
ಪರಾಕ್ರಮಿ ಶ್ರೀರಾಮನು ಮಹಾನ್ ಧನುಸ್ಸು ಹಾಗೂ ಬಾಣವನ್ನು ಕೈಯಲ್ಲೆತ್ತಿಕೊಂಡು ಯುದ್ಧಕ್ಕಾಗಿ ಸಿದ್ಧನಾಗಿ ನಿಂತುಕೊಂಡನು ಹಾಗೂ ಧನುಷ್ಟಂಕಾದಿಂದ ಎಲ್ಲ ದಿಕ್ಕುಗಳು ಪ್ರತಿಧ್ವನಿಸಿದವು.॥18॥
ಮೂಲಮ್ - 19
ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಸಹ ಚಾರಣೈಃ ।
ಸಮೇಯುಶ್ಚ ಮಹಾತ್ಮಾನೋ ಯುದ್ಧ ದರ್ಶನಕಾಂಕ್ಷಯಾ ॥
ಅನುವಾದ
ಅನಂತರ ಶ್ರೀರಾಮ ಮತ್ತು ರಾಕ್ಷಸರ ಯುದ್ಧವನ್ನು ನೋಡುವ ಇಚ್ಛೆಯಿಂದ ದೇವತೆಗಳು, ಗಂಧರ್ವರು, ಸಿದ್ಧರು, ಚಾರಣರು ಮೊದಲಾದ ಮಹಾತ್ಮರು ಅಲ್ಲಿ ಬಂದು ಸೇರಿದರು.॥19॥
ಮೂಲಮ್ - 20
ಋಷಯಶ್ಚ ಮಹಾತ್ಮಾನೋ ಲೋಕೇ ಬ್ರಹ್ಮರ್ಷಿಸತ್ತಮಾಃ ।
ಸಮೇತ್ಯ ಚೋಚುಃ ಸಹಿತಾಸ್ತೇಽನ್ಯೋನ್ಯಂ ಪುಣ್ಯಕರ್ಮಣಃ ॥
ಮೂಲಮ್ - 21½
ಸ್ವಸ್ತಿ ಗೋಬ್ರಾಹ್ಮಣಾನಾಂ ಚ ಲೋಕಾನಾಂ ಚೇತಿ ಸಂಸ್ಥಿತಾಃ ।
ಜಯತಾಂ ರಾಘವೋ ಯುದ್ಧೇ ಪೌಲಸ್ತ್ಯಾನ್ ರಜನೀಚರಾನ್ ॥
ಚಕ್ರಹಸ್ತೋ ಯಥಾ ಯುದ್ಧೇ ಸರ್ವಾನಸುರಪುಂಗವಾನ್ ।
ಅನುವಾದ
ಇವರಲ್ಲದೆ ಮೂರು ಲೋಕಗಳಲ್ಲಿ ಪ್ರಸಿದ್ಧರಾದ ಶ್ರೇಷ್ಠ ಬ್ರಹ್ಮರ್ಷಿಗಳೂ, ಪುಣ್ಯಕರ್ಮ ಮಹಾತ್ಮಾ ಋಷಿಗಳೂ ಅಲ್ಲಿ ಬಂದು ಒಟ್ಟಿಗೆ ನಿಂತುಕೊಂಡು ಪರಸ್ಪರ ಹೀಗೆ ಮಾತನಾಡಿಕೊಂಡರು - ಗೋವು, ಬ್ರಾಹ್ಮಣರು ಹಾಗೂ ಸಮಸ್ತ ಲೋಕಗಳ ಮಂಗಳವಾಗಲೀ. ಚಕ್ರಧಾರೀ ಮಹಾವಿಷ್ಣು ಯುದ್ಧದಲ್ಲಿ ಸಮಸ್ತ ಶ್ರೇಷ್ಠ ಅಸುರರನ್ನು ಸೋಲಿಸಿದಂತೆಯೇ ಈ ಸಂಗ್ರಾಮದಲ್ಲಿ ಶ್ರೀರಾಮನು ಪುಲಸ್ತ್ಯವಂಶೀ ರಾಕ್ಷಸರನ್ನು ಜಯಿಸಲಿ.॥20-21½॥
ಮೂಲಮ್ - 22
ಏವಮುಕ್ತ್ವಾಪುನಃ ಪ್ರೋಚುರಾಲೋಕ್ಯ ಚ ಪರಸ್ಪರಮ್ ॥
ಮೂಲಮ್ - 23
ಚತುರ್ದಶ ಸಹಸ್ರಾಣಿ ರಕ್ಷಸಾಂ ಭೀಮಕರ್ಮಣಾಮ್ ।
ಏಕಶ್ಚ ರಾಮೋ ಧರ್ಮಾತ್ಮಾ ಕಥಂ ಯುದ್ಧಂ ಭವಿಷ್ಯತಿ ॥
ಅನುವಾದ
ಹೀಗೆ ಹೇಳಿ ಅವರು ಪುನಃ ಒಬ್ಬರು ಮತ್ತೊಬ್ಬರನ್ನು ನೋಡುತ್ತಾ ನುಡಿದರು - ಒಂದು ಕಡೆ ಭಯಂಕರ ಕರ್ಮ ಮಾಡುವ ಹದಿನಾಲ್ಕು ಸಾವಿರ ರಾಕ್ಷಸರಿದ್ದರೆ, ಮತ್ತೊಂದು ಕಡೆ ಒಬ್ಬಂಟಿಗ ಧರ್ಮಾತ್ಮಾ ಶ್ರೀರಾಮನಿದ್ದಾನೆ, ಹೀಗಿರುವಾಗ ಈ ಯುದ್ಧ ಹೇಗೆ ನಡೆಯುವುದು.॥22-23॥
ಮೂಲಮ್ - 24
ಇತಿ ರಾಜರ್ಷಯಃ ಸಿದ್ಧಾಃ ಸಗಣಾಶ್ಚ ದ್ವಿಜರ್ಷಭಾಃ ।
ಜಾತಕೌತೂಹಲಾಸ್ತಸ್ಥುರ್ವಿಮಾನಸ್ಥಾಶ್ಚ ದೇವತಾಃ ॥
ಅನುವಾದ
ಹೀಗೆ ಮಾತನಾಡುತ್ತಾ ರಾಜರ್ಷಿಗಳು, ಸಿದ್ಧರು, ವಿದ್ಯಾಧರರು ಮೊದಲಾದ ದೇವಯೋನಿಗಳ ಸಹಿತ ಶ್ರೇಷ್ಠ ಬ್ರಹ್ಮರ್ಷಿಗಳು ಹಾಗೂ ವಿಮಾನಗಳಲ್ಲಿ ಕುಳಿತಿರುವ ದೇವತೆಗಳು ಕುತೂಹಲದಿಂದ ಅಲ್ಲಿ ನಿಂತುಕೊಂಡರ.॥24॥
ಮೂಲಮ್ - 25
ಆವಿಷ್ಟಂ ತೇಜಸಾ ರಾಮಂ ಸಂಗ್ರಾಮಶಿರಸಿ ಸ್ಥಿತಮ್ ।
ದೃಷ್ಟ್ವಾ ಸರ್ವಾಣಿ ಭೂತಾನಿ ಭಯಾದ್ ವಿವ್ಯಥಿರೇ ತದಾ ॥
ಅನುವಾದ
ಯುದ್ಧದ ಸಂದರ್ಭ ವೈಷ್ಣವ ತೇಜದಿಂದ ಕೂಡಿದ ಶ್ರೀರಾಮನು ನಿಂತಿರುವುದನ್ನು ನೋಡಿ ಆಗ ಎಲ್ಲ ಪ್ರಾಣಿಗಳು (ಅವನ ಪ್ರಭಾವವನ್ನು ತಿಳಿಯದಿದ್ದುದರಿಂದ) ಭಯದಿಂದ ವ್ಯಥಿತರಾದವು.॥25॥
ಮೂಲಮ್ - 26
ರೂಪಮಪ್ರತಿಮಂ ತಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ ।
ಬಭೂವ ರೂಪಂ ಕ್ರುದ್ಧಸ್ಯ ರುದ್ರಸ್ಯೇವ ಮಹಾತ್ಮನಃ ॥
ಅನುವಾದ
ಆಯಾಸವಿಲ್ಲದೆ ಮಹಾನ್ ಕರ್ಮ ಮಾಡುವ ಹಾಗೂ ರೋಷಗೊಂಡ ಮಹಾತ್ಮಾ ಶ್ರೀರಾಮನ ಆ ರೂಪವು ಕುಪಿತನಾದ ರುದ್ರದೇವರಂತೆ ತುಲನಾರಹಿತವಾಗಿ ಕಂಡುಬರುತ್ತಿತ್ತು.॥26॥
ಮೂಲಮ್ - 27½
ಇತಿ ಸಂಭಾಷ್ಯಮಾಣೇ ತು ದೇವಗಂಧರ್ವಚಾರಣೈಃ ।
ತತೋ ಗಂಭೀರನಿರ್ಹ್ರಾದಂ ಘೋರಚರ್ಮಾಯುಧಧ್ವಜಮ್ ॥
ಅನೀಕಂ ಯಾತುಧಾನಾನಾಂ ಸಮಂತಾತ್ಪ್ರತ್ಯಪದ್ಯತ ।
ಅನುವಾದ
ದೇವತೆಗಳು, ಗಂಧರ್ವರು, ಚಾರಣರು ಹಿಂದಿನಂತೆ ಶ್ರೀರಾಮನ ಮಂಗಲಕಾಮನೆ ಮಾಡುತ್ತಿದ್ದಾಗ, ಭಯಂಕರ ಕತ್ತಿ-ಗುರಾಣಿ ಮೊದಲಾದ ಆಯುಧಗಳಿಂದ ಮತ್ತು ಧ್ವಜಗಳಿಂದ ಕೂಡಿದ ನಿಶಾಚರರ ಆ ಸೈನ್ಯವು ಗಂಭೀರವಾಗಿ ಗರ್ಜಿಸುತ್ತಾ ನಾಲ್ಕು ಕಡೆಗಳಿಂದ ಶ್ರೀರಾಮನ ಬಳಿಗೆ ಬಂತು.॥27॥
ಮೂಲಮ್ - 28
ವೀರಾಲಾಪಾನ್ ವಿಸೃಜತಾಮನ್ಯೋನ್ಯಮಭಿಗಚ್ಛತಾಮ್ ॥
ಮೂಲಮ್ - 29½
ಚಾಪಾನಿ ವಿಸ್ಫಾರಯತಾಂ ಜೃಂಭತಾಂ ಚಾಪ್ಯಭೀಕ್ಷ್ಣಶಃ ।
ವಿಪ್ರಘುಷ್ಟ ಸ್ವನಾನಾಂ ಚ ದುಂದುಭೀಂಶ್ಚಾಪಿ ನಿಘ್ನತಾಮ್ ॥
ತೇಷಾಂ ಸುತುಮುಲಃ ಶಬ್ದಃ ಪೂರಯಾಮಾಸ ತದ್ವನಮ್ ।
ಅನುವಾದ
ಆ ರಾಕ್ಷಸ ಸೈನಿಕರು ವೀರೋಚಿತ ವಾರ್ತಾಲಾಪ ಮಾಡುತ್ತಾ, ಯುದ್ಧದ ಅಣಕು ಪ್ರದರ್ಶನ ಮಾಡುತ್ತಾ ಪರಸ್ಪರ ಎದುರಾಗಿ ಧನುಷ್ಟಂಕಾರ ಮಾಡುತ್ತಾ, ಪದೇ-ಪದೇ ಉನ್ಮತ್ತರಾಗಿ ಕುಣಿಯುತ್ತಾ, ಜೋರಾಗಿ ಗರ್ಜಿಸುತ್ತಾ, ಡೊಳ್ಳುಗಳನ್ನು ಬಾರಿಸುತ್ತಿದ್ದರು. ಅವರ ಆ ತುಮುಲನಾದವು ಆ ವನದಲ್ಲಿ ಎಲ್ಲೆಡೆ ಪ್ರತಿಧ್ವನಿಸಿತು.॥28-29½॥
ಮೂಲಮ್ - 30½
ತೇನ ಶಬ್ದೇನ ವಿತ್ರಸ್ತಾ ಶ್ವಾಪದಾ ವನಚಾರಿಣಃ ॥
ದುದ್ರುವುರ್ಯತ್ರ ನಿಃಶಬ್ದಂ ಪೃಷ್ಠತೋ ನ ವ್ಯವಲೋಕಯನ್ ।
ಅನುವಾದ
ಆ ಶಬ್ಧದಿಂದ ಹೆದರಿದ ಕಾಡಿನ ಹಿಂಸಕ ಜಂತುಗಳು ಯಾವುದೇ ಕೋಲಾಹಲವಿಲ್ಲದ ಅರಣ್ಯಕ್ಕೆ ಓಡಿಹೋದವು. ಆ ವನ್ಯಜಂತುಗಳು ಭಯದಿಂದಾಗಿ ತಿರುಗಿಯೂ ನೋಡುತ್ತಿರಲಿಲ್ಲ.॥30½॥
ಮೂಲಮ್ - 31½
ತಚ್ಚನೀಕಂ ಮಹಾವೇಗಂ ರಾಮಂ ಸಮನುವರ್ತತ ॥
ಧೃತನಾನಾಪ್ರಹರಣಂ ಗಂಭೀರಂ ಸಾಗರೋಪಮಮ್ ।
ಅನುವಾದ
ಆ ಸೈನ್ಯವು ಬಹಳ ವೇಗವಾಗಿ ಶ್ರೀರಾಮನ ಕಡೆಗೆ ಬಂತು. ಅದರಲ್ಲಿ ನಾನಾ ಪ್ರಕಾರದ ಆಯುಧಗಳನ್ನು ಧರಿಸಿದ ಸೈನಿಕರು ಇದ್ದರು. ಅದು ಸಮುದ್ರದಂತೆ ಗಂಭೀರವಾಗಿ ಕಂಡುಬರುತ್ತಿತ್ತು.॥31½॥
ಮೂಲಮ್ - 32½
ರಾಮೋಽಪಿ ಚಾರಯಂಶ್ಚಕ್ಷುಃ ಸರ್ವತೋ ರಣಪಂಡಿತಃ ॥
ದದರ್ಶ ಖರಸೈನ್ಯಂ ತದ್ಯುದ್ಧಾಯಾಭಿಮುಖೋಗತಃ ।
ಅನುವಾದ
ಯುದ್ಧಕಲಾ ವಿಶಾರದ ಶ್ರೀರಾಮಚಂದ್ರನು ಸುತ್ತಲೂ ಕಣ್ಣಾಡಿಸುತ್ತಾ ಖರನ ಸೈನ್ಯವನ್ನು ನಿರೀಕ್ಷಿಸಿದನು ಹಾಗೂ ಅವನು ಯುದ್ಧಕ್ಕಾಗಿ ಅದರ ಕಡೆಗೆ ಮುಂದರಿದನು.॥32½॥
ಮೂಲಮ್ - 33
ವಿತತ್ಯ ಚ ಧನುರ್ಭೀಮಂ ತೂಣ್ಯಾಶ್ಚೋದ್ಧೃತ್ಯ ಸಾಯಕಾನ್ ॥
ಮೂಲಮ್ - 34
ಕ್ರೋಧಮಾಹಾರಯತ್ತೀವ್ರಂ ವಧಾರ್ಥಂ ಸರ್ವರಕ್ಷಸಾಮ್ ।
ದುಷ್ಪ್ರೇಕ್ಷ್ಯಶ್ಚಾ ಭವತ್ಕ್ರುದ್ಧೋ ಯುಗಾಂತಾಗ್ನಿರಿವ ಜ್ವಲನ್ ॥
ಅನುವಾದ
ಮತ್ತೆ ಅವನು ಬತ್ತಳಿಕೆ ಯಿಂದ ಅನೇಕ ಬಾಣ ತೆಗೆದುಕೊಂಡು, ತನ್ನ ಭಯಂಕರ ಧನುಷ್ಯವನ್ನು ಸೆಳೆದು ಸಮಸ್ತ ರಾಕ್ಷಸರನ್ನು ವಧಿಸಲು ತೀವ್ರವಾದ ಕ್ರೋಧವನ್ನು ಪ್ರಕಟಿಸಿದನು. ಕುಪಿತನಾದ ಅವನು ಪ್ರಳಯಕಾಲದ ಅಗ್ನಿಯಂತೆ ಪ್ರಜ್ವಲಿಸತೊಡಗಿದನು. ಆಗ ಅವನ ಕಡೆಗೆ ನೋಡುವುದೂ ಕಠಿಣವಾಗಿತ್ತು.॥33-34॥
ಮೂಲಮ್ - 35
ತಂ ದೃಷ್ಟ್ವಾ ತೇಜಸಾಽಽವಿಷ್ಟಂ ಪ್ರಾವ್ಯಥನ್ ವನದೇವತಾಃ ।
ತಸ್ಯ ರುಷ್ಟಸ್ಯ ರೂಪಂ ತು ರಾಮಸ್ಯ ದದೃಶೇ ತದಾ ।
ದಕ್ಷಸ್ಯೇವ ಕ್ರತುಂ ಹಂತುಮುದ್ಯತಸ್ಯ ಪಿನಾಕಿನಃ ॥
ಅನುವಾದ
ತೇಜದಿಂದ ಕೂಡಿದ ಶ್ರೀರಾಮನನ್ನು ನೋಡಿ ವನದ ದೇವತೆಗಳು ವ್ಯಥಿತರಾದರು. ಆಗ ರೋಷಗೊಂಡ ಶ್ರೀರಾಮನ ರೂಪವು ದಕ್ಷಯಜ್ಞವನ್ನು ವಿನಾಶ ಮಾಡಲು ಹೊರಟ ಪಿನಾಕಧಾರೀ ಮಹಾದೇವನಂತೆ ಕಂಡು ಬರತೊಡಗಿದನು.॥35॥
ಮೂಲಮ್ - 36
ತತ್ ಕಾರ್ಮುಕೈರಾಭರಣೈ ರಥೈಶ್ಚ
ತದ್ವರ್ಮಭಿಶ್ಚಾಗ್ನಿಸಮಾನವರ್ಣೈಃ ।
ಬಭೂವ ಸೈನ್ಯಂ ಪಿಶಿತಾಶನಾನಾಂ
ಸೂರ್ಯೋದಯೇ ನೀಲಮಿವಾಭ್ರಜಾಲಮ್ ॥
ಅನುವಾದ
ಧನುಷ್ಯಗಳಿಂದ, ಒಡವೆಗಳಿಂದ, ರಥಗಳಿಂದ, ಅಗ್ನಿಯಂತೆ ಕಾಂತಿಯುಕ್ತಹೊಳೆಯುವ ಕವಚ ಗಳಿಂದ ಕೂಡಿದ ಆ ಪಿಶಾಚಿಗಳ ಸೈನ್ಯವು ಸೂರ್ಯೋದಯ ಕಾಲದಲ್ಲಿನ ಕಪ್ಪು ಮೊಡಗಳಂತೆ ಕಂಡುಬರುತ್ತಿತ್ತು.॥36॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥24॥