०२२ खरस्य युद्धसिद्धता

वाचनम्
ಭಾಗಸೂಚನಾ

ಹದಿನಾಲ್ಕು ಸಾವಿರ ರಾಕ್ಷಸಯೋಧರೊಂದಿಗೆ ಖರ-ದೂಷಣರು ಪಂಚವಟಿಗೆ ಹೋದುದು

ಮೂಲಮ್ - 1

ಏವಮಾಧರ್ಷಿತಃ ಶೂರಃ ಶೂರ್ಪಣಖ್ಯಾ ಖರಸ್ತತಃ ।
ಉವಾಚರಕ್ಷಸಾಂ ಮಧ್ಯೇ ಖರಃ ಖರತರಂ ವಚಃ ॥

ಅನುವಾದ

ಶೂರ್ಪಣಖಿಯಿಂದ ಹೀಗೆ ನಿಂದಿತನಾದ ಶೂರ-ವೀರ ಖರನು ರಾಕ್ಷಸರ ನಡುವೆ ಅತ್ಯಂತ ಕಠೋರ ವಾಣಿಯಲ್ಲಿ ಇಂತೆಂದನು-॥1॥

ಮೂಲಮ್ - 2

ತವಾಪಮಾನಪ್ರಭವಃ ಕ್ರೋಧೋಽಯಮತುಲೋ ಮಮ ।
ನ ಶಕ್ಯತೇ ಧಾರಯಿತುಂ ಲವಣಾಂಭ ಇವೋಲ್ಬಣಮ್ ॥

ಅನುವಾದ

ತಂಗೀ! ನಿನ್ನ ಅಪಮಾನದಿಂದಾಗಿ ನನಗೆ ತಡೆಯಲಾರದಷ್ಟು ಕ್ರೋಧ ಉಂಟಾಗಿದೆ. ಇದನ್ನು ಧರಿಸುವುದು ಅಥವಾ ಅದುಮಿ ಇಡಲು ಪೂರ್ಣಿಮೆಯಂದು ಉಕ್ಕಿದ ಸಮುದ್ರದ ನೀರನ್ನು ತಡೆಯಲು ಸಾಧ್ಯವಾಗದಂತೆ, ಯಾವ ವಿಧದಿಂದಲೂ ಸಂಭವಿಸಲಾರದು. (ಅಥವಾ ಗಾಯದ ಮೇಲೆ ಉಪ್ಪಿನ ನೀರು ಹಾಕಿದಾಗ ಅಸಹ್ಯವಾಗುವಂತೆ ಸಹಿಸಲಾಗುವುದಿಲ್ಲ..॥2॥

ಮೂಲಮ್ - 3

ನ ರಾಮಂ ಗಣಯೇ ವೀರ್ಯಾನ್ಮಾನುಷಂ ಕ್ಷೀಣಜೀವಿತಮ್ ।
ಆತ್ಮದುಶ್ಚರಿತೈಃ ಪ್ರಾಣಾನ್ಹತೋ ಯೋಽದ್ಯ ವಿಮೋಕ್ಷ್ಯತೇ ॥

ಅನುವಾದ

ನಾನು ಪರಾಕ್ರಮದ ದೃಷ್ಟಿಯಿಂದ ರಾಮನನ್ನು ಗಣನೆಗೆ ತರುವುದಿಲ್ಲ. ಏಕೆಂದರೆ ಆ ಮನುಷ್ಯನ ಜೀವನ ಈಗ ಕ್ಷೀಣವಾಗುತ್ತಾ ಸಾಗಿದೆ. ಅವನು ತನ್ನ ದುಷ್ಕರ್ಮದಿಂದಲೇ ಸತ್ತುಹೋಗಿ, ಇಂದೇ ಪ್ರಾಣಗಳನ್ನು ಕಳೆದುಕೊಳ್ಳುವನು.॥3॥

ಮೂಲಮ್ - 4

ಬಾಷ್ಪಃ ಸಂಧಾರ್ಯತಾಮೇಷ ಸಂಭ್ರಮಶ್ಚ ವಿಮುಚ್ಯತಾಮ್ ।
ಅಹಂ ರಾಮಂ ಸಹ ಭ್ರಾತ್ರಾ ನಯಾಮಿ ಯಮಸಾದನಮ್ ॥

ಅನುವಾದ

ನೀನು ನಿನ್ನ ಕಂಬನಿಯನ್ನು ನಿಲ್ಲಿಸು ಹಾಗೂ ಈ ಗಾಬರಿಯನ್ನು ಬಿಡು. ನಾನು ತಮ್ಮನೊಡನೆ ರಾಮನನ್ನು ಈಗಲೇ ಯಮಲೋಕಕ್ಕೆ ಕಳಿಸುವೆನು.॥4॥

ಮೂಲಮ್ - 5

ಪರಶ್ವಧಹತಸ್ಯಾದ್ಯ ಮಂದಪ್ರಾಣಸ್ಯ ಭೂತಲೇ ।
ರಾಮಸ್ಯ ರುಧಿರಂ ರಕ್ತಮುಷ್ಣಂ ಪಾಸ್ಯಸಿ ರಾಕ್ಷಸಿ ॥

ಅನುವಾದ

ರಾಕ್ಷಸೀ! ಇಂದೇ ನನ್ನ ಕೊಡಲಿಯ ಹೊಡೆತದಿಂದ ನಿಷ್ಪ್ರಾಣವಾಗಿ ಧರೆಯಲ್ಲಿ ಬಿದ್ದಿರುವ ರಾಮನ ಬಿಸಿ-ಬಿಸಿ ರಕ್ತವು ನಿನಗೆ ಕುಡಿಯಲು ಸಿಗುವುದು.॥5॥

ಮೂಲಮ್ - 6

ಸಂ ಪ್ರಹೃಷ್ಟಾ ವಚಃ ಶ್ರುತ್ವಾ ಖರಸ್ಯ ವದನಾಚ್ಚ್ಯುತಮ್ ।
ಪ್ರಶಶಂಸ ಪುನರ್ಮೌರ್ಖ್ಯಾದ್ ಭ್ರಾತರಂ ರಕ್ಷಸಾಂ ವರಮ್ ॥

ಅನುವಾದ

ಖರನು ಹೇಳಿದ ಮಾತನ್ನು ಕೇಳಿ ಶೂರ್ಪಣಖಿಗೆ ಬಹಳ ಸಂತೋಷವಾಯಿತು. ಅವಳು ಮೂರ್ಖತೆಯಿಂದ ರಾಕ್ಷಸರಲ್ಲಿ ಶ್ರೇಷ್ಠ ಅಣ್ಣನಾದ ಖರನನ್ನು ಭೂರಿ-ಭೂರಿ ಪ್ರಶಂಸಿದಳು.॥6॥

ಮೂಲಮ್ - 7

ತಯಾ ಪರುಷಿತಃ ಪೂರ್ವಂ ಪುನರೇವ ಪ್ರಶಂಸಿತಃ ।
ಅಬ್ರವೀದ್ದೂಷಣಂ ನಾಮ ಖರಃ ಸೇನಾಪತಿಂ ತದಾ ॥

ಅನುವಾದ

ತಾನು ಮೊದಲು ಯಾರನ್ನು ಕಠೋರವಾಣಿಯಿಂದ ತಿರಸ್ಕರಿಸಿದ್ದಳೋ, ಮತ್ತೆ ಯಾರನ್ನು ಅತ್ಯಂತ ಹೊಗಳಿದ್ದಳೋ ಆ ಖರನು ಆಗ ತನ್ನ ಸೇನಾಪತಿಯಾದ ದೂಷಣನಲ್ಲಿ ಹೇಳಿದನು.॥7॥

ಮೂಲಮ್ - 8

ಚತುರ್ದಶ ಸಹಸ್ರಾಣಿ ಮಮ ಚಿತ್ತಾನುವರ್ತಿನಾಮ್ ।
ರಕ್ಷಸಾಂ ಭೀಮವೇಗಾನಾಂ ಸಮರೇಷ್ವನಿವರ್ತಿನಾಮ್ ॥

ಮೂಲಮ್ - 9

ನೀಲಜೀಮೂತವರ್ಣಾನಾಂ ಲೋಕಹಿಂಸಾವಿಹಾರಾಣಾಮ್ ।
ಸರ್ವೋದ್ಯೋಗ ಮುದೀರ್ಣಾನಾಂ ರಕ್ಷಸಾಂ ಸೌಮ್ಯ ಕಾರಯ ॥

ಅನುವಾದ

ಸೌಮ್ಯ! ನನ್ನ ಮನಸ್ಸಿಗೆ ಅನುಕೂಲವಾಗಿ ನಡೆಯುವ, ಯುದ್ಧದಿಂದ ಎಂದು ಹಿಂದೆಗೆಯದವ, ಭಯಂಕರ ವೇಗಶಾಲೀ, ಕರೀ ಮೊಡಗಳಂತೆ ಕಪ್ಪು ಬಣ್ಣದವ, ಜನರ ಹಿಂಸೆಯಿಂದ ಕ್ರೀಡಿಸುವ ಹಾಗೂ ಯುದ್ಧದಲ್ಲಿ ಉತ್ಸಾಹಿಯಾಗಿ ಮುನ್ನುಗ್ಗುವ ದೂಷಣನೇ! ಹದಿನಾಲ್ಕು ಸಾವಿರ ರಾಕ್ಷಸರನ್ನು ಯುದ್ಧಕ್ಕಾಗಿ ಕಳಿಸುವ ಸಿದ್ಧತೆಯನ್ನು ಮಾಡ.॥8-9॥

ಮೂಲಮ್ - 10

ಉಪಸ್ಥಾಪಯ ಮೇ ಕ್ಷಿಪ್ರಂ ರಥಂ ಸೌಮ್ಯ ಧನೂಂಷಿ ಚ ।
ಶರಾಂಶ್ಚ ಚಿತ್ರಾನ್ಖಡ್ಗಾಂಶ್ಚ ಶಕ್ತೀಶ್ಚ ವಿವಿಧಾಃ ಶಿತಾಃ ॥

ಅನುವಾದ

ಸೇನಾಪತಿಯೇ! ನೀನು ಬೇಗನೇ ನನ್ನ ರಥವನ್ನು ಇಲ್ಲಿಗೆ ತರಿಸು. ಅದರಲ್ಲಿ ಅನೇಕ ಧನುರ್ಬಾಣ, ವಿಚಿತ್ರವಾದ ಖಡ್ಗಗಳನ್ನು ನಾನಾ ಪ್ರಕಾರದ ತೀಕ್ಷ್ಣ ಶಕ್ತಿಗಳನ್ನೂ ತುಂಬಿರಲಿ.॥10॥

ಮೂಲಮ್ - 11

ಅಗ್ರೇ ನಿರ್ಯಾತುಮಿಚ್ಛಾಮಿ ಪೌಲಸ್ತ್ಯಾನಾಂ ಮಹಾತ್ಮನಾಮ್ ।
ವದಾರ್ಥಂ ದುರ್ವಿನೀತಸ್ಯ ರಾಮಸ್ಯ ರಣಕೋವಿದ ॥

ಅನುವಾದ

ರಣಕುಶಲ ವೀರನೇ! ಈ ದರ್ವಿನೀತನಾದ, ಅವಿಧೇಯನಾದ ಶ್ರೀರಾಮನನ್ನು ವಧಿಸಲಿಕ್ಕಾಗಿ ಮಹಾಮನಸ್ವೀ ಪುಲಸ್ತ್ಯವಂಶೀ ರಾಕ್ಷಸರ ಮುಂದುಗಡೆ ನಾನೇ ಹೋಗಲು ಬಯಸುತ್ತೇನೆ.॥11॥

ಮೂಲಮ್ - 12

ಇತಿ ತಸ್ಯ ಬ್ರುವಾಣಸ್ಯ ಸೂರ್ಯವರ್ಣಂ ಮಹಾರಥಮ್ ।
ಸದಶ್ವೈಃ ಶಬಲೈರ್ಯುಕ್ತಮಾಚಚಕ್ಷೇಽಥ ದೂಷಣಃ ॥

ಅನುವಾದ

ಖರನು ಹೀಗೆ ಆಜ್ಞಾಪಿಸುತ್ತಲೇ ಒಂದು ಸೂರ್ಯನಂತೆ ಪ್ರಕಾಶಮಾನವಾದ ಮತ್ತು ಚಿತ್ರವರ್ಣದ ಕುದುರೆಗಳನ್ನು ಹೂಡಿದ ವಿಶಾಲರಥವು ಅಲ್ಲಿಗೆ ಬಂದಿರುವುದನ್ನು ದೂಷಣನು ಖರನಿಗೆ ಸೂಚಿಸಿದನು.॥12॥

ಮೂಲಮ್ - 13

ತಂ ಮೇರುಶಿಖರಾಕಾರಂ ತಪ್ತ ಕಾಂಚಿನಭೂಷಣಮ್ ।
ಹೇಮಚಕ್ರಮಸಂಬಾಧಂ ವೈಡೂರ್ಯಮಯಕೂಬರಮ್ ॥

ಮೂಲಮ್ - 14

ಮತ್ಸೈಃ ಪುಷ್ಪೈರ್ದ್ರುಮೈಃ ಶೈಲೈಚ್ಚಂದ್ರ ಸೂರ್ಯೈಶ್ಚ ಕಾಂಚನೈಃ ।
ಮಾಂಗಲೈಃ ಪಕ್ಷಿಸಂಘೈಶ್ಚ ತಾರಾಭಿಶ್ಚ ಸಮಾವೃತಮ್ ॥

ಮೂಲಮ್ - 15

ಧ್ವಜನಿಸ್ತ್ರಿಂಶಸಂಪನ್ನಂ ಕಿಂಕಿಣೀವರಭೂಷಿತಮ್ ।
ಸದಶ್ವಯುಕ್ತಂ ಸೋಽಮರ್ಷಾದಾರುರೋಹ ಖರಸ್ತದಾ ॥

ಅನುವಾದ

ಆ ರಥವು ಮೇರುಪರ್ವತದಂತೆ ಎತ್ತರವಾಗಿತ್ತು, ಅದನ್ನು ಪುಟಕ್ಕಿಟ್ಟ ಚಿನ್ನದಿಂದ ಅಲಂಕರಿಸಲಾಗಿತ್ತು. ಬಹಳ ವಿಸ್ತಾರವಾದ ಆ ರಥದ ಮೂಕಿಯು ವೈಢೂರ್ಯಮಯವಾಗಿತ್ತು, ಅದಕ್ಕೆ ಸುವರ್ಣಮಯವಾದ ಚಕ್ರಗಳಿದ್ದವು. ಅದನ್ನು ಅಲಂಕರಿಸಲು ಚಿನ್ನದ ಮೀನು, ಹೂವು, ವೃಕ್ಷ, ಪರ್ವತ, ಚಂದ್ರ, ಸೂರ್ಯ, ಮಾಂಗಲಿಕ ಪಕ್ಷಿಗಳ ಸಮುದಾಯ ಹಾಗೂ ನಕ್ಷತ್ರಗಳಿಂದ ಆ ರಥವು ಸುಶೋಭಿತವಾಗಿತ್ತು. ಅದರ ಮೇಲೆ ಧ್ವಜವು ಹಾರಾಡುತ್ತಿದ್ದು, ರಥದೊಳಗೆ ಖಡ್ಗವೇ ಮೊದಲಾದ ಅಸ್ತ್ರ-ಶಸ್ತ್ರಗಳನ್ನು ಇರಿಸಲಾಗಿತ್ತು. ಸಣ್ಣ-ಸಣ್ಣ ಗಂಟೆಗಳಿಂದ, ಸುಂದರಗೆಜ್ಜೆಗಳಿಂದ ಅಲಂಕರಿಸಿದ, ಉತ್ತಮ ಕುದುರೆಗಳಿಂದ ಕೂಡಿದ ಆ ರಥದ ಮೇಲೆ ರಾಕ್ಷಸರಾಜ ಖರನು ಆರೂಢನಾದನು. ತನ್ನ ತಂಗಿಯ ಅಪಮಾನವನ್ನು ನೆನೆದು ಮನಸ್ಸಿನಲ್ಲಿ ಬಹಳ ಸಿಟ್ಟುಗೊಂಡಿದ್ದನು.॥13-15॥

ಮೂಲಮ್ - 16

ಖರಸ್ತು ತನ್ಮಹಾಸೈನ್ಯಂ ರಥಚರ್ಮಾಯುಧಧ್ವಜಮ್ ।
ನಿರ್ಯಾತೇತ್ಯಬ್ರವೀತ್ ಪ್ರೇಕ್ಷ್ಯದೂಷಣಃ ಸರ್ವರಾಕ್ಷಸಾನ್ ॥

ಅನುವಾದ

ರಥ, ಗುರಾಣಿ, ಅಸ್ತ್ರ-ಶಸ್ತ್ರ ಹಾಗೂ ಧ್ವಜದಿಂದ ಸಂಪನ್ನನಾದ ಆ ವಿಶಾಲ ಸೈನ್ಯವನ್ನು ನೋಡಿ ಖರ ಮತ್ತು ದೂಷಣರು ಸಮಸ್ತ ರಾಕ್ಷಸರಿಗೆ, ‘ಹೊರಡಿ, ಮುಂದಕ್ಕೆ ನಡೆಯಿರಿ’ ಎಂದು ಹೇಳಿದರು.॥16॥

ಮೂಲಮ್ - 17

ತತಸ್ತದ್ರಾಕ್ಷಸಂ ಸೈನ್ಯಂ ಘೋರಚರ್ಮಾಯುಧಧ್ವಜಮ್ ।
ನಿರ್ಜಗಾಮ ಜನಸ್ಥಾನಾನ್ಮಹಾನಾದಂ ಮಹಾಜವಮ್ ॥

ಅನುವಾದ

ಹೊರಡಲು ಅಪ್ಪಣೆಯಾಗುತ್ತಲೇ ಭಯಂಕರ ಗುರಾಣಿ, ಅಸ್ತ್ರ-ಶಸ್ತ್ರ ಹಾಗೂ ಧ್ವಜದಿಂದ ಕೂಡಿದ ಆ ವಿಶಾಲರಾಕ್ಷಸ ಸೈನ್ಯವು ಜೋರು-ಜೋರಾಗಿ ಗರ್ಜಿಸುತ್ತಾ ಜನಸ್ಥಾನದಿಂದ ವೇಗವಾಗಿ ಹೊರಟಿತು.॥17॥

ಮೂಲಮ್ - 18

ಮುದ್ಗರೈಃ ಪಟ್ಟಿಶೈಃ ಶೂಲೈಃ ಸುತೀಕ್ಷ್ಣೈಶ್ಚ ಪರಶ್ವಧೈಃ ।
ಖಡ್ಗೈಶ್ಚಕ್ರೈಶ್ಚ ಹಸ್ತಸ್ಥೈರ್ಭ್ರಾಜಮಾನೈಃ ಸತೋಮರೈಃ ॥

ಮೂಲಮ್ - 19

ಶಕ್ತಿಭಿಃ ಪರಿಘೈರ್ಘೋರೈರತಿಮಾತ್ರೈಶ್ಚ ಕಾರ್ಮುಕೈಃ ।
ಗದಾಸಿಮುಸಲೈರ್ವಜ್ರೈರ್ಗೃಹೀತೈರ್ಭೀಮದರ್ಶನೈಃ ॥

ಮೂಲಮ್ - 20

ರಾಕ್ಷಸಾನಾಂ ಸುಘೋರಾಣಾಂ ಸಹಸ್ರಾಣಿ ಚತುರ್ದಶ ।
ನಿರ್ಯಾತಾನಿ ಜನಸ್ಥಾನಾತ್ ಖರಚಿತ್ತಾನುವರ್ತಿನಾಮ್ ॥

ಅನುವಾದ

ಸೈನಿಕರ ಕೈಗಳಲ್ಲಿ ಮುದ್ಗರ, ಪಟ್ಟಿಶ, ಶೂಲ, ಹರಿತವಾದ ಗಂಡುಕೊಡಲಿ, ಖಡ್ಗ, ಚಕ್ರ, ಮುಸಲ, ವಜ್ರ (ಎಂಟು ಮೂಲೆಗಳುಳ್ಳ ವಿಶೇಷ ಆಯುಧ) ಇವು ಆ ರಾಕ್ಷಸರ ಕೈಗಳಲ್ಲಿ ಭಯಾನಕವಾಗಿ ತೋರುತ್ತಿದ್ದವು. ಈ ಅಸ್ತ್ರ-ಶಸ್ತ್ರಗಳಿಂದ ಕೂಡಿದ ಖರನ ಮನದ ಇಚ್ಛೆಗನುಸಾರ ನಡೆಯುವ ಅತ್ಯಂತ ಭಯಂಕರ ಹದಿನಾಲ್ಕು ಸಾವಿರ ರಾಕ್ಷಸರು ಜನಸ್ಥಾನದಿಂದ ಯುದ್ಧಕ್ಕಾಗಿ ಹೊರಟುಬಿಟ್ಟರು.॥18-20॥

ಮೂಲಮ್ - 21

ತಾಂಸ್ತು ನಿರ್ಧಾವತೋ ದೃಷ್ಟ್ವಾ ರಾಕ್ಷಸಾನ್ ಭೀಮದರ್ಶನಾನ್ ।
ಖರಸ್ಯಾಥ ರಥಃ ಕಿಂಚಿಜ್ಜಗಾಮ ತದನಂತರಮ್ ॥

ಅನುವಾದ

ಆ ಭಯಂಕರವಾಗಿ ಕಾಣುವ ರಾಕ್ಷಸರು ಹೋಗುವುದನ್ನು ನೋಡಿ, ಖರನ ರಥವು ಕೂಡ ಸ್ವಲ್ಪ ಹೊತ್ತು ಸೈನಿಕರು ಹೊರಡುವುದನ್ನು ಪ್ರತೀಕ್ಷೆಮಾಡಿ ಅವರೊಂದಿಗೆ ಮುಂದುವರೆಯಿತು.॥21॥

ಮೂಲಮ್ - 22

ತತಸ್ತಾನ್ ಛಬಲಾನಶ್ವಾಂಸ್ತಪ್ತಕಾಂಚನಭೂಷಿತಾನ್ ।
ಖರಸ್ಯ ಮತಮಾಜ್ಞಾಯ ಸಾರಥಿಃ ಪರ್ಯಚೋದಯತ್ ॥

ಅನುವಾದ

ಅನಂತರ ಖರನ ಅಭಿಪ್ರಾಯ ತಿಳಿದು ಅವನ ಸಾರಥಿಯು ಪುಟಕ್ಕಿಟ್ಟ ಚಿನ್ನದ ಆಭರಣಗಳಿಂದ ಭೂಷಿತವಾದ ಆ ಚಿತ್ರವರ್ಣದ ಕುದುರೆಗಳನ್ನು ಓಡಿಸಿದನು.॥22॥

ಮೂಲಮ್ - 23

ಸಂಚೋದಿತೋ ರಥಃ ಶೀಘ್ರಂಖರಸ್ಯ ರಿಪುಘಾತಿನಃ ।
ಶಬ್ದೇನಾಪೂರಯಾಮಾಸ ದಿಶಃ ಸಪ್ರದಿಶಸ್ತಥಾ ॥

ಅನುವಾದ

ಅವನು ಓಡಿಸುತ್ತಲೇ ಶತ್ರುಘಾತಿ ಖರನ ರಥವು ಶೀಘ್ರವಾಗಿ, ಗರ-ಗರ ಶಬ್ದಮಾಡುತ್ತಾ ಎಲ್ಲ ದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ಮುಂದುವರೆಯಿತು.॥23॥

ಮೂಲಮ್ - 24

ಪ್ರವೃದ್ಧಮನ್ಯುಸ್ತು ಖರಃ ಖರಸ್ವರೋ
ರಿಪೋರ್ವಧಾರ್ಥಂ ತ್ವರಿತೋ ಯಥಾಂತಕಃ ।
ಅಚೂಚುದತ್ ಸಾರಥಿಮುನ್ನುದನ್ ಪುನ-
ರ್ಮಹಾಬಲೋ ಮೇಘ ಇವಾಶ್ಮವರ್ಷವಾನ್ ॥

ಅನುವಾದ

ಆಗ ಖರನ ಕ್ರೋಧ ಹೆಚ್ಚಾಗಿತ್ತು. ಅವನ ಸ್ವರವು ಕಠೋರವಾಗಿತ್ತು. ಅವನು ಶತ್ರುವಿನ ವಧೆಗಾಗಿ ಆತುರನಾಗಿದ್ದು, ಯಮನಂತೆ ಭಯಂಕರವಾಗಿ ಕಾಣುತ್ತಿದ್ದನು. ಆಲಿ ಕಲ್ಲುಗಳನ್ನು ಸುರಿಸುವ ಮೇಗಳು ಜೋರಾಗಿ ಗರ್ಜಿಸುವಂತೆಯೇ ಮಹಾಬಲಿ ಖರನು ಗಟ್ಟಿಯಾಗಿ ಸಿಂಹನಾದ ಮಾಡಿ ಪುನಃ ಸಾರಥಿಗೆ ರಥವನ್ನು ಮುನ್ನಡೆಸುವಂತೆ ಪ್ರೇರೇಪಿಸಿದನು.॥24॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗ ಸಂಪೂರ್ಣವಾಯಿತು. ॥22॥