वाचनम्
ಭಾಗಸೂಚನಾ
ಶೂರ್ಪಣಖಿಯು ಖರನಿಗೆ ರಾಕ್ಷಸರು ಹತರಾದುದನ್ನು ಹೇಳಿದುದು, ರಾಮನೊಡನೆ ಯುದ್ಧ ಮಾಡಲು ಪುನಃ ಖರನನ್ನು ಪ್ರೋತ್ಸಾಹಿಸಿದುದು
ಮೂಲಮ್ - 1
ಸ ಪುನಃ ಪತಿತಾಂ ದೃಷ್ಟ್ವಾ ಕ್ರೋಧಾಚ್ಛೂರ್ಪಣಖಾಂ ಪುನಃ ।
ಉವಾಚ ವ್ಯಕ್ತಯಾ ವಾಚಾ ತಾಮನರ್ಥಾರ್ಥಮಾಗತಾಮ್ ॥
ಅನುವಾದ
ಶೂರ್ಪಣಖಿಯು ಪುನಃ ಭೂಮಿಯಲ್ಲಿ ಬಿದ್ದಿರುವುದನ್ನು ನೋಡಿ, ಅನರ್ಥದಿಂದ ಬಂದಿರುವ ಆ ತಂಗಿಯಲ್ಲಿ ಖರನು ಕ್ರೋಧದಿಂದ ಸ್ಪಷ್ಟವಾಣಿಯಲ್ಲಿ ಪುನಃ ಹೇಳಿದನು.॥1॥
ಮೂಲಮ್ - 2
ಮಯಾ ತ್ವಿದಾನೀಂ ಶೂರಸ್ತೇ ರಾಕ್ಷಸಾಃ ಪಿಶಿತಾಶನಾಃ ।
ತ್ವತ್ಪ್ರಿಯಾರ್ಥಂ ವಿನಿರ್ದಿಷ್ಟಾಃ ಕಿಮರ್ಥಂ ರುದ್ಯತೇ ಪುನಃ ॥
ಅನುವಾದ
ತಂಗೀ! ನಾನು ನಿನಗೆ ಪ್ರಿಯವನ್ನುಂಟುಮಾಡಲು ಅನೇಕ ಶೂರ-ವೀರ, ಮಾಂಸಾಹಾರೀ ರಾಕ್ಷಸರಿಗೆ ಹೋಗಲು ಆಜ್ಞೆಕೊಟ್ಟಿದ್ದೆ. ಈಗ ಪುನಃ ನೀನು ಏಕೆ ಅಳುತ್ತಿರುವೆ.॥2॥
ಮೂಲಮ್ - 3
ಭಕ್ತಾಶ್ಚೈವಾನುರಕ್ತಾಶ್ಚ ಹಿತಾಶ್ಚ ಮಮ ನಿತ್ಯಶಃ ।
ಹನ್ಯಮಾನಾ ನ ಹನ್ಯಂತೇ ನ ನ ಕುರ್ಯುರ್ವಚೋ ಮಮ ॥
ಅನುವಾದ
ನನ್ನ ಭಕ್ತರೂ, ನನ್ನಲ್ಲಿ ಅನುರಾಗವುಳ್ಳವರೂ, ಸದಾ ನನ್ನ ಹಿತವನ್ನು ಬಯಸುವವರೂ ಆದ ರಾಕ್ಷಸರನ್ನು ನಾನು ಕಳಿಸಿದ್ದೆ. ಅವರು ಯಾರಿಂದಲೂ ಸಾಯಲಾರರು. ನನ್ನ ಆಜ್ಞೆಯನ್ನು ಪಾಲಿಸದಿರುವುದೂ ಅವರಿಂದ ಸಂಭವವಿಲ್ಲ.॥3॥
ಮೂಲಮ್ - 4
ಕಿಮೇತಚ್ಛ್ರೋತುಮಿಚ್ಛಾಮಿ ಕಾರಣಂ ಯತ್ಕೃತೇ ಪುನಃ ।
ಹಾ ನಾಥೇತಿ ವಿನರ್ದಂತೀ ಸರ್ಪವಚ್ಚೇಷ್ಟಸೇ ಕ್ಷಿತೌ ॥
ಅನುವಾದ
ಹಾಗಿರುವಾಗ ಯಾವ ಕಾರಣ ಉಪಸ್ಥಿತವಾಯಿತು? ‘ಹಾ ನಾಥ!’ ಎಂದುಕೊಳ್ಳುತ್ತಾ ಹಾವಿನಂತೆ ನೆಲದಲ್ಲಿ ಬಿದ್ದಿರುವುದು ಯಾತಕ್ಕಾಗಿ ಎಂದು ನಾನು ಕೇಳಲು ಬಯಸುತ್ತಿದ್ದೇನೆ.॥4॥
ಮೂಲಮ್ - 5
ಅನಾಥವದ್ ವಿಲಪಸಿ ಕಿಂ ನು ನಾಥೇ ಮಯಿ ಸ್ಥಿತೇ ।
ಉತ್ತಿಷ್ಟೋತ್ತಿಷ್ಠ ಮಾ ಮೈವಂ ವೈಕ್ಲವ್ಯಂ ತ್ಯಜ್ಯತಾಮಿತಿ ॥
ಅನುವಾದ
ನನ್ನಂತಹ ರಕ್ಷಕನು ಇರುವಾಗ ನೀನು ಅನಾಥಳಂತೆ ಏಕೆ ವಿಲಾಪ ಮಾಡುತ್ತಿರುವೆ? ಏಳು! ಏಳು! ಹೀಗೆ ಮಲಗಿರಬೇಡ, ಗಾಬರಿಪಡಬೇಡ.॥5॥
ಮೂಲಮ್ - 6
ಇತ್ಯೇವಮುಕ್ತಾ ದುರ್ಧರ್ಷಾ ಖರೇಣಪರಿಸಾಂತ್ವಿತಾ ।
ವಿಮೃಜ್ಯ ನಯನೇ ಸಾಸ್ರೇ ಖರಂ ಭ್ರಾತರಮಬ್ರವೀತ್ ॥
ಅನುವಾದ
ಖರನು ಹೀಗೆ ಸಾಂತ್ವನ ಮಾಡಿದಾಗ ಆ ದುರ್ಧರ್ಷ ರಾಕ್ಷಸಿಯು ಕಂಬನಿಗಳನ್ನು ಒರೆಸಿಕೊಂಡು ಅಣ್ಣನಲ್ಲಿ ಹೇಳಿದಳು.॥6॥
ಮೂಲಮ್ - 7
ಅಸ್ಮೀದಾನೀಮಹಂ ಪ್ರಾಪ್ತಾ ಹತಶ್ರವಣನಾಸಿಕಾ ।
ಶೋಣಿತೌ ಘಪರಿಕ್ಲಿನ್ನಾ ತ್ವಯಾ ಚ ಪರಿಸಾಂತ್ವಿತಾ ॥
ಅನುವಾದ
ಅಣ್ಣಾ! ನಾನು ಈಗ ಪುನಃ ನಿನ್ನ ಬಳಿಗೆ ಏಕೆ ಬಂದಿರುವೆನು - ಇದನ್ನು ತಿಳಿಸುತ್ತೇನೆ, ಕೇಳು ನನ್ನ ಮೂಗು-ಕಿವಿಗಳು ತುಂಡಾಗಿ ನಾನು ರಕ್ತದ ಧಾರೆಯಿಂದ ಮಿಂದುಹೋದೆ. ಆ ಅವಸ್ಥೆಯಲ್ಲಿ ಮೊದಲ ಸಲ ನಾನು ಬಂದಾಗ ನೀನು ಬಹಳ ಸಮಾಧಾನಪಡಿಸಿದ್ದೆ.॥7॥
ಮೂಲಮ್ - 8
ಪ್ರೇಷಿತಾಶ್ಚ ತ್ವಯಾ ಶೂರಾ ರಾಕ್ಷಸಾಸ್ತೇ ಚತುರ್ದಶ ।
ನಿಹಂತುಂ ರಾಘವಂ ಘೋರಂ ಮತ್ಪ್ರಿಯಾರ್ಥಂ ಸಲಕ್ಷ್ಮಣಮ್ ॥
ಮೂಲಮ್ - 9
ತೇ ತು ರಾಮೇಣ ಸಾಮರ್ಷಾಃ ಶೂಲಪಟ್ಟಿಶಪಾಣಯಃ ।
ಸಮರೇ ನಿಹತಾಃ ಸರ್ವೇ ಸಾಯಕೈರ್ಮರ್ಮಭೇದಿಭಿಃ ॥
ಅನುವಾದ
ಅನಂತರ ನನ್ನ ಪ್ರಿಯವನ್ನುಂಟುಮಾಡಲು ಲಕ್ಷ್ಮಣ ಸಹಿತ ಶ್ರೀರಾಮನನ್ನು ವಧಿಸುವ ಉದ್ದೇಶದಿಂದ ನೀನು ಕಳಿಸಿದ ಶೂರ-ವೀರ ರಾಕ್ಷಸರೆಲ್ಲರೂ ಕ್ರೋಧಗೊಂಡು ಕೈಯಲ್ಲಿ ಶೂಲಪಟ್ಟಿಶ ಧರಿಸಿ ಅಲ್ಲಿಗೆ ಹೋದರು, ಆದರೆ ರಾಮನು ತನ್ನ ಮರ್ಮಭೇದಿ ಬಾಣಗಳಿಂದ ಅವರೆಲ್ಲರನ್ನು ಸಮರಾಂಗಣದಲ್ಲಿ ಕೊಂದುಹಾಕಿದನು.॥8-9॥
ಮೂಲಮ್ - 10
ತಾನ್ಭೂಮೌ ಪತಿತಾನ್ ದೃಷ್ಟ್ವಾ ಕ್ಷಣೇನೈವ ಮಹಾಜವಾನ್ ।
ರಾಮಸ್ಯ ಚ ಮಹತ್ಕರ್ಮ ಮಹಾಂಸ್ತ್ರಾಸೋಽಭವನ್ಮಮ ॥
ಅನುವಾದ
ಆ ಮಹಾವೇಗಶಾಲೀ ನಿಶಾಚರರು ಕ್ಷಣಾರ್ಧದಲ್ಲಿ ಧರಾಶಾಯಿಯಾಗಿರುವುದನ್ನು ನೋಡಿ ರಾಮನ ಆ ಮಹಾಪರಾಕ್ರಮವನ್ನು ನೋಡಿ ನನ್ನ ಶರೀರದಲ್ಲಿ ಭಾರೀ ಭಯ ಉಂಟಾಯಿತು.॥10॥
ಮೂಲಮ್ - 11
ಸಾಸ್ಮಿ ಭೀತಾ ಸಮುದ್ವಿಗ್ನಾ ವಿಷಣ್ಣಾ ಚ ನಿಶಾಚರ ।
ಶರಣಂ ತ್ವಾಂ ಪುನಃ ಪ್ರಾಪ್ತಾ ಸರ್ವತೋ ಭಯದರ್ಶಿನೀ ॥
ಅನುವಾದ
ನಿಶಾಚರರಾಜನೇ! ನಾನು ಭಯ-ಭೀತ, ಉದ್ವಿಗ್ನ, ವಿಷಾದಗ್ರಸ್ತಳಾಗಿರುವೆನು. ನನಗೆ ಎಲ್ಲೆಡೆ ಭಯವೇ ಭಯವು ಕಂಡುಬರುತ್ತಿದೆ, ಅದಕ್ಕಾಗಿ ಪುನಃ ನಿನಗೆ ಶರಣು ಬಂದಿರುವೆನು.॥11॥
ಮೂಲಮ್ - 12
ವಿಷಾದನಕ್ರಾಧ್ಯುಷಿತೇ ಪರಿತ್ರಾಸೋರ್ಮಿಮಾಲಿನಿ ।
ಕಿಂ ಮಾಂ ನ ತ್ರಾಯಸೇ ಮಗ್ನಾಂ ವಿಪುಲೇ ಶೋಕಸಾಗರೇ ॥
ಅನುವಾದ
ವಿಷಾದರೂಪೀ ಮೊಸಳೆಗಳು ವಾಸಿಸುವ, ಭಯವೆಂಬ ಅಲೆಗಳಿಂದ ತುಂಬಿರುವ, ಶೋಕಸಮುದ್ರದಲ್ಲಿ ನಾನು ಮುಳುಗಿರುವೆನು. ನೀನು ಈ ಶೋಕ ಸಮುದ್ರದಿಂದ ನನ್ನನ್ನು ಏಕೆ ಉದ್ಧರಿಸುವುದಿಲ್ಲ.॥12॥
ಮೂಲಮ್ - 13
ಏತೇ ಚ ನಿಹತಾ ಭೂಮೌ ರಾಮೇಣನಿಶಿತೈಃ ಶರೈಃ ।
ಯೇ ಚ ಮೇ ಪದವೀಂ ಪ್ರಾಪ್ತಾ ರಾಕ್ಷಸಾಃ ಪಿಶಿತಾಶನಾಃ ॥
ಅನುವಾದ
ಮಾಂಸಭಕ್ಷಿ ರಾಕ್ಷಸರು ನನ್ನೊಡನೆ ಹೋದವರೆಲ್ಲರೂ ರಾಮನ ನಿಶಿತ ಶರಗಳಿಂದ ಸತ್ತು ಭೂಮಿಯಲ್ಲಿ ಬಿದ್ದಿರುವರ.॥13॥
ಮೂಲಮ್ - 14½
ಮಯಿ ತೇ ಯದ್ಯನುಕ್ರೋಶೋ ಯದಿ ರಕ್ಷಸ್ಸು ತೇಷು ಚ ।
ರಾಮೇಣ ಯದಿ ತೇ ಶಕ್ತಿಸ್ತೇ ತೇಜೋ ವಾಸ್ತಿ ನಿಶಾಚರ ॥
ದಂಡಕಾರಣ್ಯನಿಲಯಂ ಜಹಿ ರಾಕ್ಷಸಕಂಟಕಮ್ ।
ಅನುವಾದ
ರಾಕ್ಷಸರಾಜನೇ! ನನ್ನ ಮೇಲೆ ಹಾಗೂ ಸತ್ತಿರುವ ಆ ರಾಕ್ಷಸರ ಮೇಲೆ ನಿನಗೆ ಅನುಕಂಪ ಇದ್ದರೆ, ರಾಮನಿಗೆ ಪ್ರತಿಕಾರ ಮಾಡುವ ಶಕ್ತಿ-ತೇಜ ನಿನ್ನಲ್ಲಿ ಇದ್ದರೆ, ಅವನನ್ನು ಕೊಂದು ಹಾಕು, ಏಕೆಂದರೆ ದಂಡಕಾರಣ್ಯದಲ್ಲಿ ಮನೆಮಾಡಿ ನೆಲೆ ಇರುವ ರಾಮನು ರಾಕ್ಷಸರಿಗಾಗಿ ಕಂಟಕಪ್ರಾಯನಾಗಿದ್ದಾನೆ.॥14½॥
ಮೂಲಮ್ - 15½
ಯದಿ ರಾಮಮಮಿತ್ರಘ್ನಂ ನ ತ್ವಮದ್ಯ ವಧಿಷ್ಯಸಿ ॥
ತವ ಚೈವಾಗ್ರತಃ ಪ್ರಾಣಾಂಸ್ತ್ಯಕ್ಷ್ಯಾಮಿ ನಿರಪತ್ರಪಾ ।
ಅನುವಾದ
ನೀನು ಇಂದೇ ಶತ್ರುಘಾತಿ ರಾಮನನ್ನು ವಧಿಸದಿದ್ದರೆ ನಾನು ನಿನ್ನ ಮುಂದೆಯೇ ಪ್ರಾಣತ್ಯಾಗ ಮಾಡುವೆನು, ಏಕೆಂದರೆ ನನ್ನ ಲಜ್ಜೆ ಸೂರೆಗೊಂಡಿದೆ.॥15½॥
ಮೂಲಮ್ - 16½
ಬುದ್ಧ್ಯಾಹಮನುಪಶ್ಯಾಮಿ ನ ತ್ವಂ ರಾಮಸ್ಯ ಸಂಯುಗೇ ॥
ಸ್ಥಾತುಂ ಪ್ರತಿಮುಖೇ ಶಕ್ತಃ ಸಬಲೋಽಪಿ ಮಹಾರಣೇ ।
ಅನುವಾದ
ನೀನು ಮಹಾಸಮರದಲ್ಲಿ ಬಲಾಢ್ಯನಾಗಿದ್ದರೂ ರಾಮನ ಎದುರಿಗೆ ಯುದ್ಧದಲ್ಲಿ ನಿಲ್ಲಲಾರೆ ಎಂದೇ ನನಗೆ ಬುದ್ಧಿಪೂರ್ವಕವಾಗಿ ಪದೇ-ಪದೇ ಅನಿಸುತ್ತಿದೆ.॥16½॥
ಮೂಲಮ್ - 17
ಶೂರಮಾನೀ ನ ಶೂರಸ್ತ್ವಂ ಮಿಥ್ಯಾರೋಪಿತವಿಕ್ರಮಃ ॥
ಮೂಲಮ್ - 18
ಅಪಯಾಹಿ ಜನಸ್ಥಾನಾತ್ ತ್ವ್ರಿರಿತಃ ಸಹಬಾಂಧವಃ ।
ಜಹಿತ್ವಂ ಸಮರೇ ಮೂಢಾನ್ಯಥಾ ನ ಕುಲಪಾಂಸನ ॥
ಅನುವಾದ
ನೀನು ತನ್ನನ್ನು ಶೂರ-ವೀರನೆಂದು ತಿಳಿಯುತ್ತಿ, ಆದರೆ ನಿನ್ನಲ್ಲಿ ಶೌರ್ಯವೇ ಇಲ್ಲ. ನೀನು ಸುಮ್ಮನೇ ತನ್ನಲ್ಲಿ ಪರಾಕ್ರಮವನ್ನು ಆರೊಪಿಸಿಕೊಂಡಿರುವೆ. ಮೂಢನೇ! ನೀನು ರಣರಂಗದಲ್ಲಿ ಅವರಿಬ್ಬರನ್ನು ಕೊಂದು ಹಾಕು ಇಲ್ಲದಿದ್ದರೆ ತನ್ನ ಕುಲಕ್ಕೆ ಕಲಂಕವನ್ನು ಹಚ್ಚಿ ಬಂಧು-ಬಾಂಧವರೊಂದಿಗೆ ಕೂಡಲೇ ಈ ಜನಸ್ಥಾನದಿಂದ ಓಡಿ ಹೋಗು.॥17-18॥
ಮೂಲಮ್ - 19
ಮಾನುಷೌ ತೌ ನ ಶಕ್ನೋಷಿ ಹಂತುಂ ವೈ ರಾಮಲಕ್ಷ್ಮಣೌ ।
ನಿಃಸತ್ತ್ವಸ್ಯಾಲ್ಪವೀರ್ಯಸ್ಯ ವಾಸಸ್ತೇ ಕೀದೃಶಸ್ತ್ವಿಹ ॥
ಅನುವಾದ
ರಾಮ-ಲಕ್ಷ್ಮಣರು ಮಾನವರಾಗಿದ್ದಾರೆ, ಅವರನ್ನು ಕೊಲ್ಲುವ ಶಕ್ತಿ ನಿನ್ನಲ್ಲಿ ಇಲ್ಲದಿದ್ದರೆ ನಿನ್ನಂತಹ ನಿರ್ಬಲ, ಪರಾಕ್ರಮ ಶೂನ್ಯ ರಾಕ್ಷಸನು ಇಲ್ಲಿ ಇರಲು ಹೇಗೆ ಸಾಧ್ಯ.॥19॥
ಮೂಲಮ್ - 20½
ರಾಮತೇಜೋಽಭಿಭೂತೋ ಹಿ ತ್ವಂ ಕ್ಷಿಪ್ರಂ ವಿನಶಿಷ್ಯಸಿ ।
ಸ ಹಿ ತೇಜಃಸಮಾಯುಕ್ತೋ ರಾಮೋ ದಶರಥಾತ್ಮಜಃ ॥
ಭ್ರಾತಾ ಚಾಸ್ಯ ಮಹಾವೀರ್ಯೋ ಯೇನ ಚಾಸ್ಮಿ ವಿರೂಪಿತಾ ।
ಅನುವಾದ
ನೀನು ರಾಮನ ತೇಜದಿಂದ ಪರಾಜಿತನಾಗಿ ಬೇಗನೇ ನಾಶವಾಗಿ ಹೋಗುವೆ, ಏಕೆಂದರೆ ದಶರಥಕುಮಾರ ರಾಮನು ಬಹಳ ತೇಜಸ್ವಿಯಾಗಿದ್ದಾನೆ. ಅವನ ತಮ್ಮನೂ ಮಹಾ ಪರಾಕ್ರಮಿಯಾಗಿದ್ದಾನೆ, ಅವನೇ ನನ್ನ ಮೂಗನ್ನು ಕಿವಿಗಳನ್ನು ಇಲ್ಲವಾಗಿಸಿ ಅತ್ಯಂತ ಕುರೂಪಿಯಾಗಿಸಿರುವನು.॥20॥
ಮೂಲಮ್ - 21
ಏವಂ ವಿಲಪ್ಯ ಬಹುಶೋ ರಾಕ್ಷಸೀ ಪ್ರದರೋದರೀ ॥
ಮೂಲಮ್ - 22
ಭ್ರಾತುಃ ಸಮೀಪೇ ಶೋಕಾರ್ತಾ ನಷ್ಟ ಸಂಜ್ಞಾ ಬಭೂವ ಹ ।
ಕರಾಭ್ಯಾಮುದರಂ ಹತ್ವಾ ರುರೋದ ಭೃಶದುಃಖಿತಾ ॥
ಅನುವಾದ
ಈ ಪ್ರಕಾರ ಬಹಳ ವಿಲಾಪ ಮಾಡಿ ಗುಹೆಯಂತಿರುವ ಹೊಟ್ಟೆಯುಳ್ಳ ಆ ರಾಕ್ಷಸಿಯು ಶೋಕಾತುರಳಾಗಿ ತನ್ನ ಅಣ್ಣನ ಬಳಿ ಮೂರ್ಛಿತಳಂತಾದಳು ಮತ್ತು ಅತ್ಯಂತ ದುಃಖಿಯಾಗಿ ಎರಡೂ ಕೃತ್ಯಗಳಿಂದ ಹೊಟ್ಟೆಯನ್ನು ಬಡಿದುಕೊಂಡು ಜೋರಾಗಿ ಅಳತೊಡಗಿದಳು.॥21-22॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥21॥