वाचनम्
ಭಾಗಸೂಚನಾ
ಖರನು ಕಳಿಸಿದ ಹದಿನಾಲ್ಕು ರಾಕ್ಷಸರನ್ನು ಶ್ರೀರಾಮನು ವಧಿಸಿದುದು
ಮೂಲಮ್ - 1
ತತಃ ಶೂರ್ಪಣಖಾ ಘೋರಾ ರಾಘವಾಶ್ರಮಮಾಗತಾ ।
ರಕ್ಷಸಾಮಾಚಚಕ್ಷೇ ತೌ ಭ್ರಾತರೌ ಸಹ ಸೀತಯಾ ॥
ಅನುವಾದ
ಅನಂತರ ಭಯಾನಕ ರಾಕ್ಷಸಿ ಶೂರ್ಪಣಖಿಯು ಶ್ರೀರಾಮಚಂದ್ರನ ಆಶ್ರಮಕ್ಕೆ ಬಂದು, ಸೀತಾಸಹಿತ ಆ ಇಬ್ಬರು ಸಹೋದರರ ಪರಿಚಯವನ್ನು ಆ ರಾಕ್ಷಸರಿಗೆ ಮಾಡಿಸಿದಳು.॥1॥
ಮೂಲಮ್ - 2
ತೇ ರಾಮಂ ಪರ್ಣಶಾಲಾಯಾಮುಪವಿಷ್ಟಂ ಮಹಾಬಲಮ್ ।
ದದೃಶುಃ ಸೀತಯಾ ಸಾರ್ಧಂ ಲಕ್ಷ್ಮಣೇನಾಪಿ ಸೇವಿತಮ್ ॥
ಅನುವಾದ
ಮಹಾಬಲಿ ಶ್ರೀರಾಮನು ಸೀತೆಯೊಂದಿಗೆ ಪರ್ಣಶಾಲೆಯಲ್ಲಿ ಕುಳಿತಿರುವನು ಹಾಗೂ ಲಕ್ಷ್ಮಣನೂ ಅವನ ಸೇವೆಯಲ್ಲಿ ಉಪಸ್ಥಿತನಾಗಿರುವುದನ್ನು ರಾಕ್ಷಸರು ನೋಡಿದರು.॥2॥
ಮೂಲಮ್ - 3
ತಾನ್ದೃಷ್ಟ್ವಾ ರಾಘವಃ ಶ್ರೀಮಾನಾಗತಾಂಸ್ತಾಂಶ್ಚ ರಾಕ್ಷಸಾನ್ ।
ಅಬ್ರವೀದ್ಭ್ರಾತರಂ ರಾಮೋ ಲಕ್ಷ್ಮಣಂ ದೀಪ್ತತೇಜಸಮ್ ॥
ಅನುವಾದ
ಶ್ರೀಮಾನ್ ರಘುನಾಥನೂ ಶೂರ್ಪಣಖಿಯೊಂದಿಗೆ ಬಂದಿರುವ ಆ ರಾಕ್ಷಸರನ್ನು ನೋಡಿದನು. ನೋಡಿ ಅವನು ಉದ್ದೀಪ್ತ ತೇಜವುಳ್ಳ ತನ್ನ ಸಹೋದರ ಲಕ್ಷ್ಮಣನಲ್ಲಿ ಈ ಪ್ರಕಾರ ಹೇಳಿದನು.॥3॥
ಮೂಲಮ್ - 4
ಮುಹೂರ್ತಂ ಭವ ಸೌಮಿತ್ರೇ ಸೀತಾಯಾಃ ಪ್ರತ್ಯನಂತರಃ ।
ಇಮಾನಸ್ಯಾ ವಧಿಷ್ಯಾಮಿ ಪದವೀಮಾಗತಾನಿಹ ॥
ಅನುವಾದ
ಸುಮಿತ್ರಾಕುಮಾರ! ನೀನು ಸ್ವಲ್ಪ ಹೊತ್ತು ಸೀತೆಯ ಬಳಿ ನಿಂತಿರು. ನಾನು ಈ ರಾಕ್ಷಸಿಯ ಸಹಾಯಕರಾಗಿ ಅವಳ ಹಿಂದೆ ಬಂದಿರುವ ಈ ನಿಶಾಚರರನ್ನು ಈಗಲೇ ಇಲ್ಲೇ ವಧಿಸಿಬಿಡುವೆನು.॥4॥
ಮೂಲಮ್ - 5
ವಾಕ್ಯಮೇತತ್ತತಃ ಶ್ರುತ್ವಾ ರಾಮಸ್ಯ ವಿದಿತಾತ್ಮನಃ ।
ತಥೇತಿ ಲಕ್ಷ್ಮಣೋ ವಾಕ್ಯಂ ರಾಮಸ್ಯ ಪ್ರಪೂಜಯನ್ ॥
ಅನುವಾದ
ಆತ್ಮವಿದನಾದ ಶ್ರೀರಾಮನ ಈ ಮಾತನ್ನು ಕೇಳಿ ಲಕ್ಷ್ಮಣನು ಅವನನ್ನು ಭೂರಿ-ಭೂರಿ ಪ್ರಶಂಸಿಸುತ್ತಾ ‘ಹಾಗೆಯೇ ಆಗಲಿ’ ಎಂದು ಹೇಳಿ ಅವನ ಆಜ್ಞೆಯನ್ನು ಶಿರಸಾವಹಿಸಿಕೊಂಡನು.॥5॥
ಮೂಲಮ್ - 6
ರಾಘವೋಽಪಿ ಮಹಚ್ಚಾಪಂ ಚಾಮೀಕರವಿಭೂಷಿತಮ್ ।
ಚಕಾರ ಸಜ್ಯಂ ಧರ್ಮಾತ್ಮಾ ತಾನಿ ರಕ್ಷಾಂಸಿ ಚಾಬ್ರವೀತ್ ॥
ಅನುವಾದ
ಆಗ ಧರ್ಮಾತ್ಮಾ ರಘುನಾಥನು ತನ್ನ ಸುವರ್ಣಮಂಡಿತ ವಿಶಾಲ ಧನುಸ್ಸಿಗೆ ಹೆದೆಯೇರಿಸಿ ಯುದ್ಧಕ್ಕೆ ಸಿದ್ಧನಾಗಿ ರಾಕ್ಷಸರಲ್ಲಿ ಇಂತೆಂದನು.॥6॥
ಮೂಲಮ್ - 7
ಪುತ್ರೌ ದಶರಥಾಸ್ಯಾವಾಂ ಭ್ರಾತರೌ ರಾಮಲಕ್ಷ್ಮಣೌ ।
ಪ್ರವಿಷ್ಟೌ ಸೀತಯಾ ಸಾರ್ಧಂ ದುಶ್ಚರಂ ದಂಡಕಾವನಮ್ ॥
ಮೂಲಮ್ - 8
ಫಲಮೂಲಾಶನೌ ದಾಂತೌ ತಾಪಸೌ ಬ್ರಹ್ಮಚಾರಿಣೌ ।
ವಸಂತೌ ದಂಡಕಾರಣ್ಯೇ ಕಿಮರ್ಥಮುಪಹಿಂಸಥ ॥
ಅನುವಾದ
ನಾವು ಇಬ್ಬರು ದಶರಥ ಮಹಾರಾಜರ ಪುತ್ರರು ರಾಮ-ಲಕ್ಷ್ಮಣರಾಗಿದ್ದೇವೆ. ಸೀತೆಯೊಂದಿಗೆ ಈ ದುರ್ಗಮ ದಂಡಕಾರಣ್ಯಕ್ಕೆ ಬಂದು ಫಲ-ಮೂಲಗಳನ್ನು ತಿನ್ನುತ್ತಾ ಇಂದ್ರಿಯ ಸಂಯಮಪೂರ್ವಕ ತಪಸ್ಸಿನಲ್ಲಿ ತೊಡಗಿ, ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದೇವೆ. ಹೀಗೆ ದಂಡಕಾರಣ್ಯದಲ್ಲಿ ವಾಸಿಸುವ ನಮ್ಮಿಬ್ಬರು ಸಹೋದರರನ್ನು ಏಕೆ ಹಿಂಸಿಸಲು ಬಯಸುತ್ತಿರುವಿರಿ.॥7-8॥
ಮೂಲಮ್ - 9
ಯುಷ್ಮಾನ್ ಪಾಪಾತ್ಮಕಾನ್ ಹಂತು ವಿಪ್ರಕಾರಾನ್ಮಹಾಹವೇ ।
ಋಷೀಣಾಂ ತು ನಿಯೋಗೇನ ಸಂಪ್ರಾಪ್ತಃ ಸಶರಾಸನಃ ॥
ಅನುವಾದ
ನೋಡಿ, ನೀವೆಲ್ಲರೂ ಪಾಪಾತ್ಮರಾಗಿದ್ದು, ಋಷಿಗಳ ಅಪರಾಧ ಮಾಡುವವರಾಗಿದ್ದೀರಿ. ಆ ಋಷಿ-ಮುನಿಗಳ ಆಜ್ಞೆಯಿಂದಲೇ ನಾನು ಧನುಷ್ಯ-ಬಾಣಗಳನ್ನು ಧರಿಸಿ ಮಹಾಸಮರದಲ್ಲಿ ನಿಮ್ಮನ್ನು ವಧಿಸಲೆಂದೇ ಇಲ್ಲಿಗೆ ಬಂದಿರುವೆ.॥9॥
ಮೂಲಮ್ - 10
ತಿಷ್ಠತೈವಾತ್ರ ಸಂತುಷ್ಟಾ ನೋಪವರ್ತಿತುಮರ್ಹಥ ।
ಯದಿ ಪ್ರಾಣೈರಿಹಾರ್ಥೋ ವೋ ನಿವರ್ತಧ್ವಂ ನಿಶಾಚರಾಃ ॥
ಅನುವಾದ
ನಿಶಾಚರರೇ! ನಿಮಗೆ ಯುದ್ಧದಿಂದ ಸಂತೋಷ ಸಿಗುವುದಿದ್ದರೆ ಇಲ್ಲಿಂದ ಓಡಿ ಹೋಗದೆ ನಿಂತುಕೊಳ್ಳಿರಿ. ನಿಮಗೆ ಪ್ರಾಣಗಳ ಮೇಲೆ ಆಸೆ ಇದ್ದರೆ ಮರಳಿ ಹೋಗಿ (ಒಂದು ಕ್ಷಣವೂ ಇಲ್ಲಿ ಇರಬೇಡಿ).॥10॥
ಮೂಲಮ್ - 11
ತಸ್ಯ ತದ್ವಚನಂ ಶ್ರುತ್ವಾ ರಾಕ್ಷಸಾಸ್ತೇ ಚತುರ್ದಶ ।
ಊಚುರ್ವಾಚಂ ಸುಸಂಕ್ರುದ್ಧಾ ಬ್ರಹ್ಮಘ್ನಾಃ ಶೂಲಪಾಣಯಃ ॥
ಮೂಲಮ್ - 12
ಸಂರಕ್ತನಯನಾ ಘೋರಾ ರಾಮಂ ಸಂರಕ್ತ ಲೋಚನಮ್ ।
ಪರುಷಾ ಮಧುರಾಭಾಷಂ ಹೃಷ್ಟಾ ದೃಷ್ಟಪರಾಕ್ರಮಮ್ ॥
ಅನುವಾದ
ಶ್ರೀರಾಮನ ಈ ಮಾತನ್ನು ಕೇಳಿ ಆ ಹದಿನಾಲ್ಕು ರಾಕ್ಷಸರು ಅತ್ಯಂತ ಕುಪಿತರಾದರು. ಬ್ರಾಹ್ಮಣರ ಹತ್ಯೆಮಾಡುವ ಆ ಘೋರ ನಿಶಾಚರರು ಕೈಯಲ್ಲಿ ಶೂಲ ವನ್ನೆತ್ತಿಕೊಂಡು ಕ್ರೋಧದಿಂದ ಕಣ್ಣು ಕೆಂಪಾಗಿಸಿ ಕಠೋರವಾಗಿ ಹರ್ಷ ಮತ್ತು ಉತ್ಸಾಹದಿಂದ ಎದುರಾಳಿಯ ಪರಾಕ್ರಮವನ್ನು ಮನಗೊಂಡಿದ್ದವನೂ, ಸ್ವಭಾವತಃ ಕೆಂಪಾದ ಕಣ್ಣುಗಳುಳ್ಳ ಮಧುರಭಾಷಿಯೂ ಆದ ಶ್ರೀರಾಮನಲ್ಲಿ ಹೇಳಿದರು.॥11-12॥
ಮೂಲಮ್ - 13
ಕ್ರೋಧಮುತ್ಪಾದ್ಯ ನೋ ಭರ್ತುಃ ಖರಸ್ಯ ಸುಮಹಾತ್ಮನಃ ।
ತ್ವಮೇವ ಹಾಸ್ಯಸೇ ಪ್ರಾಣಾನ್ ಸದ್ಯೋಽಸ್ಮಾಭಿರ್ಹತೋ ಯುಧಿ ॥
ಅನುವಾದ
ಎಲವೋ! ನೀನು ನಮ್ಮ ಒಡೆಯ ಮಹಾಕಾಯ ಖರನಿಗೆ ಕ್ರೋಧವನ್ನುಂಟುಮಾಡಿರುವೆ. ಆದ್ದರಿಂದ ನಮ್ಮ ಕೈಗಳಿಂದ ಯುದ್ಧದಲ್ಲಿ ಮಡಿದು ನೀನು ಸ್ವತಃ ಪ್ರಾಣಗಳನ್ನು ಕಳೆದುಕೊಳ್ಳುವೆ.॥13॥
ಮೂಲಮ್ - 14
ಕಾ ಹಿ ತೇಶಕ್ತಿರೇಕಸ್ಯ ಬಹೂನಾಂ ರಣಮೂರ್ಧನಿ ।
ಅಸ್ಮಾಕಮಗ್ರತಃ ಸ್ಥಾತುಂ ಕಿಂ ಪುನರ್ಯೋದ್ಧುಮಾಹವೇ ॥
ಅನುವಾದ
ನಾವು ಅನೇಕರಾಗಿದ್ದು ನೀನು ಒಬ್ಬಂಟಿಗನಾಗಿರುವೆ. ನೀನು ನಮ್ಮ ಮುಂದೆ ರಣಭೂಮಿಯಲ್ಲಿ ನಿಲ್ಲುವುದಕ್ಕೂ ನಿನಗೇನು ಶಕ್ತಿ ಇದೆ? ಮತ್ತೆ ಯುದ್ಧಮಾಡುವುದು ದೂರ ಉಳಿಯಿತು.॥14॥
ಮೂಲಮ್ - 15
ಏಭಿರ್ಬಾಹುಪ್ರಯುಕ್ತೈಶ್ಚಃ ಪರಿಘೈಃ ಶೂಲಪಟ್ಟಿಶೈಃ ।
ಪ್ರಾಣಾಂಸ್ತ್ಯಕ್ಷ್ಯಸಿ ವೀರ್ಯಂ ಚ ಧನುಶ್ಚಕರಪೀಡಿತಮ್ ॥
ಅನುವಾದ
ನಮ್ಮ ಭುಜಗಳಿಂದ ಪ್ರಯೋಗಿಸಿದ ಪರಿ, ಶೂಲ-ಪಟ್ಟಿಶಗಳ ಏಟನ್ನು ತಿಂದು ನೀನು ನಿನ್ನ ಕೈಯಲ್ಲಿ ಹಿಡಿದಿರುವ ಈ ಧನುಸ್ಸಿನ ಬಲ ಪರಾಕ್ರಮದ ಅಭಿಮಾನವನ್ನು ಮತ್ತು ತನ್ನ ಪ್ರಾಣಗಳನ್ನು ಒಟ್ಟಿಗೆ ತ್ಯಜಿಸುವ.॥15॥
ಮೂಲಮ್ - 16
ಇತ್ಯೇವಮುಕ್ತ್ವಾಸಂರಬ್ಧಾ ರಾಕ್ಷಸಾಸ್ತೇ ಚತುರ್ದಶ ।
ಉದ್ಯತಾಯುಧನಿಸ್ತ್ರಿಂಶಾ ರಾಮಮೇವಾಭಿದುದ್ರುವುಃ ॥
ಅನುವಾದ
ಹೀಗೆ ಹೇಳಿ ಕ್ರೋಧಗೊಂಡು ಆ ಹದಿನಾಲ್ಕು ರಾಕ್ಷಸರು ಬಗೆ-ಬಗೆಯ ಆಯುಧಗಳಿಂದ ಮತ್ತು ಖಡ್ಗಗಳಿಂದ ಶ್ರೀರಾಮನ ಮೇಲೆ ಆಕ್ರಮಿಸಿದರು.॥16॥
ಮೂಲಮ್ - 17½
ಚಿಕ್ಷಿಪುಸ್ತಾನಿ ಶೂಲಾನಿ ರಾಘವಂ ಪ್ರತಿ ದುರ್ಜಯಮ್ ।
ತಾನಿ ಶೂಲಾನಿ ಕಾಕುತ್ಸ್ಥಃ ಸಮಸ್ತಾನಿ ಚತುರ್ದಶ ॥
ತಾವದ್ಭಿರೇವ ಚಿಚ್ಛೇದ ಶರೈಃ ಕಾಂಚನಭೂಷಿತೈಃ ।
ಅನುವಾದ
ಆ ರಾಕ್ಷಸರು ದುರ್ಜಯ ಶ್ರೀರಾಮನ ಮೇಲೆ ಶೂಲಗಳನ್ನು ಪ್ರಯೋಗಿಸಿದರು, ಆದರೆ ಕಕುತ್ಸ್ಥಕುಲ ಭೂಷಣ ಶ್ರೀರಾಮಚಂದ್ರನು ಅವೆಲ್ಲ ಹದಿನಾಲ್ಕು ಶೂಲಗಳನ್ನು ಆಷ್ಟೇ ಸುವರ್ಣಭೂಷಿತ ಬಾಣಗಳಿಂದ ಕತ್ತರಿಸಿಬಿಟ್ಟನು.॥17½॥
ಮೂಲಮ್ - 18
ತತಃ ಪಶ್ಚಾನ್ಮಹಾತೇಜಾ ನಾರಾಚಾನ್ ಸೂರ್ಯಸಂನಿಭಾನ್ ॥
ಮೂಲಮ್ - 19½
ಜಗ್ರಾಹ ಪರಮಕ್ರುದ್ಧಶ್ಚತುರ್ದಶ ಶಿಲಾಶಿತಾನ್ ।
ಗೃಹೀತ್ವಾಧನುರುದ್ಯಮ್ಯ ಲಕ್ಷ್ಯಾನುದ್ದಿಶ್ಯ ರಾಕ್ಷಸಾನ್ ॥
ಮುಮೋಚ ರಾಘವೋ ಬಾಣಾನ್ವಜ್ರಾನಿವ ಶತಕ್ರತುಃ ।
ಅನುವಾದ
ಅನಂತರ ಮಹಾತೇಜಸ್ವೀ ರಘುನಾಥನು ಅತ್ಯಂತ ಕುಪಿತನಾಗಿ ಹರಿತವಾದ ಸೂರ್ಯತುಲ್ಯ ತೇಜಸ್ವೀ ಹದಿನಾಲ್ಕು ನಾರಾಚಗಳನ್ನು ಕೈಗೆತ್ತಿಕೊಂಡು ಧನುಸ್ಸಿಗೆ ಹೂಡಿ ಆಕರ್ಣಾಂತವಾಗಿ ಸೆಳೆದು, ಇಂದ್ರನು ವಜ್ರದ ಪ್ರಹಾರ ಮಾಡಿದಂತೆ ರಾಕ್ಷಸರಿಗೆ ಗುರಿಯಿಟ್ಟು ಪ್ರಯೋಗಿಸಿದನು.॥18-19½॥
ಮೂಲಮ್ - 20½
ತೇ ಭಿತ್ತ್ವಾರಕ್ಷಸಾಂ ವೇಗದ್ವಕ್ಷಾಂಸಿ ರುಧಿರಾಪ್ಲುತಾಃ ॥
ವಿನಿಷ್ಪೇತುಸ್ತದಾ ಭೂಮೌ ವಲ್ಮೀಕಾದಿವ ಪನ್ನಗಾಃ ।
ಅನುವಾದ
ಆ ಬಾಣಗಳು ಅತಿವೇಗದಿಂದ ಆ ರಾಕ್ಷಸರ ಎದೆಯನ್ನು ಸೀಳಿ ರಕ್ತಸಿಕ್ತವಾಗಿ ಹುತ್ತದಿಂದ ಹೊರಗೆ ಬಂದ ಸರ್ಪದಂತೆ ತತ್ಕಾಲ ಭೂಮಿಗೆ ಬಿದ್ದವು.॥20½॥
ಮೂಲಮ್ - 21½
ತೈರ್ಭಗ್ನ ಹೃದಯಾ ಭೂಮೌ ಚ್ಛಿನ್ನಮೂಲಾ ಇವ ದ್ರುಮಾಃ ॥
ನಿಪೇತುಃ ಶೋಣಿತಸ್ನಾತಾ ವಿಕೃತಾ ವಿಗತಾಸವಃ ।
ಅನುವಾದ
ಆ ನಾರಾಚಗಳಿಂದ ಹೃದಯ ವಿದೀರ್ಣವಾದ್ದರಿಂದ ಆ ರಾಕ್ಷಸರು ಬುಡಕಡಿದ ಮರದಂತೆ ಧರಾಶಾಯಿಗಳಾದರು. ಅವರೆಲ್ಲರೂ ರಕ್ತದಿಂದ ತೋಯ್ದು ಹೋಗಿದ್ದರು. ಅವರ ಶರೀರಗಳು ವಿಕತವಾಗಿ ಪ್ರಾಣಪಕ್ಷಿಗಳು ಹಾರಿ ಹೋದವ.॥21½॥
ಮೂಲಮ್ - 22
ತಾನ್ಭೂಮೌ ಪತಿತಾ ನ್ ದೃಷ್ಟ್ವಾ ರಾಕ್ಷಸೀ ಕ್ರೋಧಮೂರ್ಛಿತಾ ॥
ಮೂಲಮ್ - 23
ಉಪಗಮ್ಯ ಖರಂ ಸಾ ತು ಕಿಂಚಿತ್ಸಂಶುಷ್ಕಶೋಣಿತಾ ।
ಸಪಾತ ಪುನರೇವಾರ್ತಾ ಸನಿರ್ಯಾಸೇವ ವಲ್ಲಕೀ ॥
ಅನುವಾದ
ಅವರೆಲ್ಲರೂ ಭೂಮಿಯಲ್ಲಿ ಬಿದ್ದಿರುವುದನ್ನು ನೋಡಿ ರಾಕ್ಷಸಿಯು ಮೂರ್ಛಿತಳಾದಳು ಮತ್ತೆ ಖರನ ಬಳಿಗೆ ಹೋಗಿ ಪುನಃ ಆರ್ತಭಾವದಿಂದ ಕುಸಿದು ಬಿದ್ದಳು. ಆಕೆಯ ತುಂಡಾದ ಕಿವಿ ಮೂಗಿನ ರಕ್ತವು ಒಣಗಿ ಹೋಗಿದ್ದರಿಂದ, ಕೆಂಪಾದ ರಸ ಒಸರುತ್ತಿದ್ದ ಲತೆಯಂತೆ ಅವಳು ಕಂಡುಬರುತ್ತಿದ್ದಳು.॥22-23॥
ಮೂಲಮ್ - 24
ಭ್ರಾತುಃ ಸಮೀಪೇ ಶೋಕಾರ್ತಾ ಸಸರ್ಜ ನಿನದಂ ಮಹತ್ ।
ಸಸ್ವರಂ ಮುಮುಚೇ ಬಾಷ್ಪಂ ವಿವರ್ಣವದನಾ ತದಾ ॥
ಅನುವಾದ
ಅಣ್ಣನ ಬಳಿ ಶೋಕದಿಂದ ಶೂರ್ಪಣಖಿಯು ಜೋರಾಗಿ ಆರ್ತನಾದ ಮಾಡುತ್ತಾ, ಬಿಕ್ಕಿ-ಬಿಕ್ಕಿ ಅಳುತ್ತಾ ಕಂಬನಿ ಹರಿಸತೊಡಗಿದಳು. ಆಗ ಆಕೆಯ ಮುಖ ಬಾಡಿಹೋಗಿತ್ತು.॥24॥
ಮೂಲಮ್ - 25
ನಿಪಾತಿತಾನ್ ಪ್ರೇಕ್ಷ್ಯ ರಣೇ ತು ರಾಕ್ಷಸಾನ್
ಪ್ರಧಾವಿತಾ ಶೂರ್ಪಣಖಾ ಪುನಸ್ತತಃ ।
ವಧಂ ಚ ತೇಷಾಂ ನಿಖಿಲೇನ ರಕ್ಷಸಾಂ
ಶಶಂಸ ಸರ್ವಂ ಭಗಿನೀ ಖರಸ್ಯ ಸಾ ॥
ಅನುವಾದ
ರಣಭೂಮಿಯಲ್ಲಿ ಎಲ್ಲಾ ರಾಕ್ಷಸರು ಸತ್ತು ಹೋಗಿರುವುದನ್ನು ನೋಡಿ, ಖರನ ತಂಗಿ ಶೂರ್ಪನಖಿಯು ಪುನಃ ಅಲ್ಲಿಂದ ಓಡುತ್ತಾ ಬಂದಳು. ಆಕೆಯು ಸಮಸ್ತ ರಾಕ್ಷಸರ ವಧೆಯ ಸಮಾಚಾರವನ್ನು ಅಣ್ಣನಿಗೆ ತಿಳಿಸಿದಳು.॥25॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತನೆಯ ಸರ್ಗ ಸಂಪೂರ್ಣವಾಯಿತು.॥20॥