०१९ खराय अङ्गवैरूप्यकथनम्

वाचनम्
ಭಾಗಸೂಚನಾ

ಶೂರ್ಪಣಖೆಯಿಂದ ವೃತ್ತಾಂತವನ್ನು ಕೇಳಿ ಕುಪಿತನಾದ ಖರನು ಶ್ರೀರಾಮನನ್ನು ಸಂಹರಿಸಲು ಹದಿನಾಲ್ಕು ಮಂದಿ ರಾಕ್ಷಸರನ್ನು ಕಳುಹಿಸಿ ಕೊಟ್ಟನು

ಮೂಲಮ್ - 1

ತಾಂ ತಥಾ ಪತಿತಾಂ ದೃಷ್ಟ್ವಾ ವಿರೂಪಾಂ ಶೋಣಿತೋಕ್ಷಿತಾಮ್ ।
ಭಗಿನೀಂ ಕ್ರೋಧಸಂತಪ್ತಃ ಖರಃ ಪಪ್ರಚ್ಛ ರಾಕ್ಷಸಃ ॥

ಅನುವಾದ

ಈ ಪ್ರಕಾರ ಅಂಗಹೀನ ಮತ್ತು ರಕ್ತದಿಂದ ತೋಯ್ದ ಅವಸ್ಥೆಯಲ್ಲಿ ನೆಲದಲ್ಲಿ ಬಿದ್ದಿರುವ ತನ್ನ ತಂಗಿಯನ್ನು ನೋಡಿ ರಾಕ್ಷಸ ಖರನು ಸಿಟ್ಟಿನಿಂದ ಉರಿದೆದ್ದು ಹೀಗೆ ಕೇಳಿದನು.॥1॥

ಮೂಲಮ್ - 2

ಉತ್ತಿಷ್ಠ ತಾವದಾಖ್ಯಾಹಿ ಪ್ರಮೋಹಂ ಜಹಿ ಸಂಭ್ರಮಮ್ ।
ವ್ಯಕ್ತಮಾಖ್ಯಾಹಿ ಕೇನ ತ್ವಮೇವಂ ರೂಪಾ ವಿರೂಪಿತಾ ॥

ಅನುವಾದ

ತಂಗೀ ಏಳು, ನಿನ್ನ ಅವಸ್ಥೆಯನ್ನು ಹೇಳು, ಗಾಬರಿಯನ್ನು, ಮೂರ್ಛೆ ಬಿಟ್ಟು ಯಾರು ನಿನ್ನನ್ನು ಹೀಗೆ ರೂಪಹೀನ ಮಾಡಿದರು? ಎಲ್ಲವನ್ನೂ ಸರಿಯಾಗಿ ತಿಳಿಸು.॥2॥

ಮೂಲಮ್ - 3

ಕಃ ಕೃಷ್ಣ ಸರ್ಪಮಾಸೀನಮಾಶೀವಿಷಮನಾಗಸಮ್ ।
ತುದತ್ಯಭಿಸಮಾಪನ್ನಮಂಗುಲ್ಯಗ್ರೇಣ ಲೀಲಯಾ ॥

ಅನುವಾದ

ತನ್ನ ಮುಂದೆ ಬಂದು ಸುಮ್ಮನೆ ಕುಳಿತಿರುವ ನಿರಪರಾಧಿ ವಿಷಸರ್ಪವನ್ನು ಯಾರು ತಾನೇ ಬೆರಳತುದಿಯಿಂದ ಆಟಕ್ಕಾಗಿ ತೊಂದರೆಪಡಿಸಿರುವನು.॥3॥

ಮೂಲಮ್ - 4

ಕಾಲಪಾಶಂ ಸಮಾಸಜ್ಯ ಕಂಠೇ ಮೋಹಾನ್ನ ಬುಧ್ಯತೇ ।
ಯಸ್ತ್ವಾಮದ್ಯ ಸಮಾಸಾದ್ಯ ಪೀತವಾನ್ ವಿಷಮುತ್ತಮಮ್ ॥

ಅನುವಾದ

ಯಾರು ಇಂದು ನಿನ್ನ ಮೇಲೆ ಆಕ್ರಮಣ ಮಾಡಿ ನಿನ್ನ ಮೂಗು-ಕಿವಿಯನ್ನು ಕತ್ತರಿಸಿರುವನೋ, ಅವನು ಉಚ್ಚ ಕೋಟಿಯ ವಿಷವನ್ನು ಕುಡಿದಿರುವನು. ತನ್ನ ಕೊರಳಲ್ಲಿ ಕಾಲ ಪಾಶವನ್ನು ಹಾಕಿಕೊಂಡಿರುವನು, ಹೀಗಿದ್ದರೂ ಮೋಹವಶ ಅವನು ಈ ಮಾತನ್ನು ತಿಳಿಯುತ್ತಿಲ್ಲ.॥4॥

ಮೂಲಮ್ - 5

ಬಲವಿಕ್ರಮಸಂಪನ್ನಾ ಕಾಮಗಾ ಕಾಮರೂಪಿಣೀ ।
ಇಮಾಮವಸ್ಥಾಂ ನೀತಾ ತ್ವಂ ಕೇನಾಂತಕಸಮಾಗತಾ ॥

ಅನುವಾದ

ನೀನಾದರೋ ಸ್ವತಃ ಬೇರೆ ಪ್ರಾಣಿಗಳಿಗೆ ಯಮನಂತೆ ಇರುವೆ. ಬಲ-ಪರಾಕ್ರಮದಿಂದ ಸಂಪನ್ನಳಾಗಿ ಇಚ್ಛಾನುಸಾರ ಎಲ್ಲೆಡೆ ಸಂಚರಿಸುತ್ತಾ, ತನಗೆ ಬೇಕಾದ ರೂಪವನ್ನು ಧರಿಸಲು ಸಮರ್ಥಳಾಗಿರುವೆ, ಹೀಗಿದ್ದರೂ ನಿನ್ನನ್ನು ಯಾರು ಈ ದುರವಸ್ಥೆಗೆ ನೂಕಿದರು? ಯಾರಿಂದ ದುಃಖಿಯಾಗಿ ನೀನು ಇಲ್ಲಿಗೆ ಬಂದಿರುವೆ.॥5॥

ಮೂಲಮ್ - 6

ದೇವಗಂಧರ್ವಭೂತಾನಾಮೃಷೀಣಾಂ ಚ ಮಹಾತ್ಮನಾಮ್ ।
ಕೋಽಯಮೇವಂ ಮಹಾವೀರ್ಯಸ್ತ್ವಾಂ ವಿರೂಪಾಂ ಚಕಾರ ಹ ॥

ಅನುವಾದ

ನಿನ್ನನ್ನು ರೂಪಹೀನನಾಗಿಸುವ ದೇವತೆಗಳಲ್ಲಿ, ಗಂಧರ್ವರಲ್ಲಿ, ಭೂತರಲ್ಲಿ, ಮಹಾತ್ಮ ಋಷಿಗಳಲ್ಲಿ ಯಾರು ತಾನೇ ಮಹಾಬಲಿಯಾಗಿರಬಲ್ಲನು.॥6॥

ಮೂಲಮ್ - 7

ನಹಿ ಪಶ್ಯಾಮ್ಯಹಂ ಲೋಕೇ ಯಃ ಕುರ್ಯಾನ್ಮಮವಿಪ್ರಯಮ್ ।
ಅಂತರೇಷು ಸಹಸ್ರಾಕ್ಷಂ ಮಹೇಂದ್ರಂ ಪಾಕಶಾಸನಮ್ ॥

ಅನುವಾದ

ನನ್ನ ಅಪ್ರಿಯ ಮಾಡಬಲ್ಲವನು ಜಗತ್ತಿನಲ್ಲಿ ನಾನು ಯಾರನ್ನು ನೋಡಲಿಲ್ಲ. ದೇವತೆಗಳಲ್ಲಿ ಸಹಸ್ರಾಕ್ಷ ಪಾಕಶಾಸನ ಇಂದ್ರನೂ ಕೂಡ ಇಂತಹ ಸಾಹಸ ಮಾಡುವನು ಎಂದು ನನಗೆ ತೋರುವುದಿಲ್ಲ.॥7॥

ಮೂಲಮ್ - 8

ಅದ್ಯಾಹಂ ಮಾರ್ಗಣೈಃ ಪ್ರಾಣಾನಾದಾಸ್ಯೇ ಜೀವಿತಾಂತಗೈಃ ।
ಸಲೀಲೇ ಕ್ಷೀರಮಾಸಕ್ತಂ ನಿಷ್ಪಿಬನ್ನಿವ ಸಾರಸಃ ॥

ಅನುವಾದ

ಹಂಸವು ನೀರಿನಲ್ಲಿ ಸೇರಿದ ಹಾಲನ್ನು ಬೇರ್ಪಡಿಸಿ ಕುಡಿಯುವಂತೆ ನಾನು ಇಂದೇ ಈ ಪ್ರಾಣಾಂತಕಾರಿ ಬಾಣಗಳಿಂದ ನಿನ್ನ ಅಪರಾಧಿಯ ಶರೀರದಿಂದ ಪ್ರಾಣಗಳನ್ನು ಬೇರ್ಪಡಿಸುವೆನು.॥8॥

ಮೂಲಮ್ - 9

ನಿಹತಸ್ಯ ಮಯಾ ಸಂಖ್ಯೇ ಶರಸಂಕೃತ್ತಮರ್ಮಣಃ ।
ಸೇನಂ ರುಧಿರಂ ಕಸ್ಯ ಮೇದಿನೀ ಪಾತುಮಿಚ್ಛತಿ ॥

ಅನುವಾದ

ಯುದ್ಧದಲ್ಲಿ ನನ್ನ ಬಾಣಗಳಿಂದ ಯಾರ ಮರ್ಮಸ್ಥಾನ ಛಿನ್ನ-ಭಿನ್ನವಾಗಿದೆಯೋ ನನ್ನ ಕೈಯಿಂದ ಹತನಾಗಿರುವನೋ, ಆ ಪುರುಷನ ನೊರೆಯಿಂದ ಕೂಡಿದ ಬಿಸಿರಕ್ತವನ್ನು ಪೃಥ್ವಿಯು ಕುಡಿಯಲು ಬಯಸುತ್ತಿರುವಳು.॥9॥

ಮೂಲಮ್ - 10

ಕಸ್ಯ ಪತ್ರರಥಾಃ ಕಾಯಾನ್ಮಾಂಸಮುತ್ಕೃತ್ಯ ಸಂಗತಾಃ ।
ಪ್ರಹೃಷ್ಟಾ ಭಕ್ಷಯಿಷ್ಯಂತಿ ನಿಹತಸ್ಯ ಮಯಾ ರಣೇ ॥

ಅನುವಾದ

ರಣಭೂಮಿಯಲ್ಲಿ ನನ್ನಿಂದ ಹತನಾದ ಆ ವ್ಯಕ್ತಿಯ ಶರೀರದ ಮಾಂಸವನ್ನು ಪಕ್ಷಿಗಳು ಗುಂಪು-ಗುಂಪಾಗಿ ಕಿತ್ತು ತಿನ್ನುವರು.॥10॥

ಮೂಲಮ್ - 11

ತಂ ನ ದೇವಾ ನ ಗಂಧರ್ವಾ ನ ಪಿಶಾಚಾ ನ ರಾಕ್ಷಸಾಃ ।
ಮಯಾಪಕೃಷ್ಟಂ ಕೃಪಣಂ ಶಕ್ತಾಸ್ತ್ರಾತುಂ ಮಹಾಹವೇ ॥

ಅನುವಾದ

ಮಹಾಸಮರದಲ್ಲಿ ನನ್ನಿಂದ ಆಕ್ರಮಿಸಲ್ಪಟ್ಟ ಕಪಣನಾದ ಆ ದುಷ್ಟನನ್ನು ದೇವ-ಗಂಧರ್ವರಾಗಲೀ, ಪಿಶಾಚ-ರಾಕ್ಷಸರಾಗಲೀ ರಕ್ಷಿಸಲು ಸಮರ್ಥರಲ್ಲ.॥11॥

ಮೂಲಮ್ - 12

ಉಪಲಭ್ಯ ಶನೈಃ ಸಂಜ್ಞಾಂ ತಂ ಮೇ ಶಂಸಿತುಮರ್ಹಸಿ ।
ಯೇನ ತ್ವಂ ದುರ್ವಿನೀತೇನ ವನೇ ವಿಕ್ರಮ್ಯ ನಿರ್ಜಿತಾ ॥

ಅನುವಾದ

ನಿಧಾನವಾಗಿ ಚೇತರಿಸಿಕೊಂಡು ಯಾವ ದುಷ್ಟನು ನಿನಗೆ ಈ ಅರಣ್ಯದಲ್ಲಿ ಬಲಾತ್ಕಾರವಾಗಿ ಆಕ್ರಮಿಸಿ ನಿನ್ನನ್ನು ಜಯಿಸಿ ಹೀಗೆ ವಿಕಾರಗೊಳಿಸಿದವನ ಹೆಸರನ್ನು ನನಗೆ ಹೇಳು.॥12॥

ಮೂಲಮ್ - 13

ಇತಿ ಭ್ರಾತುರ್ವಚಃ ಶ್ರುತ್ವಾ ಕ್ರುದ್ಧಸ್ಯ ಚ ವಿಶೇಷತಃ ।
ತತಃ ಶೂರ್ಪಣಖಾ ವಾಕ್ಯಂ ಸಬಾಷ್ಪಮಿದಮಬ್ರವೀತ್ ॥

ಅನುವಾದ

ಅತ್ಯಂತ ಕ್ರುದ್ಧನಾದ ಅಣ್ಣ ಖರನ ಮಾತನ್ನು ಕೇಳಿ ಶೂರ್ಪಣಖಿಯು ಕಂಬನಿಗರೆಯುತ್ತಾ ಇಂತೆಂದಳ.॥13॥

ಮೂಲಮ್ - 14

ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ ।
ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾಜಿನಾಂಬರೌ ॥

ಅನುವಾದ

ಅಣ್ಣಾ! ವನದಲ್ಲಿ ಇಬ್ಬರು ತರುಣ ಪುರುಷರು ಬಂದಿರುವರು. ಅವರು ನೋಡಲು ಬಹಳ ಸುಕುಮಾರರೂ, ರೂಪವಂತರೂ, ಮಹಾಬಲವಂತರೂ ಆಗಿರುವರು, ಅವರಿಬ್ಬರ ಕಣ್ಣುಗಳು ಅರಳಿದ ಕಮಲಗಳಂತೆ ತೋರುತ್ತವೆ. ಅವರಿಬ್ಬರೂ ನಾರುಮಡಿಯನ್ನುಟ್ಟು ಮೃಗಚರ್ಮವನ್ನು ಧರಿಸಿರುವರು.॥14॥

ಮೂಲಮ್ - 15

ಫಲಮೂಲಾಶನೌ ದಾಂತೌ ತಾಪಸೌ ಬ್ರಹ್ಮಚಾರಿಣೌ ।
ಪುತ್ರೌ ದಶರಥಸ್ಯಾಸ್ತಾಂ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಫಲ-ಮೂಲಗಳೇ ಅವರ ಆಹಾರವಾಗಿದೆ. ಅವರು ಜಿತೇಂದ್ರಿಯರೂ, ಬ್ರಹ್ಮಚಾರಿಗಳೂ ಆಗಿದ್ದಾರೆ. ಇಬ್ಬರೂ ದಶರಥ ಮಹಾರಾಜನ ಪುತ್ರರಾಗಿದ್ದು, ಅಣ್ಣ-ತಮ್ಮಂದಿರಾಗಿದ್ದಾರೆ. ಅವರ ಹೆಸರು ರಾಮ ಮತ್ತು ಲಕ್ಷ್ಮಣ ಎಂದಾಗಿದೆ.॥15॥

ಮೂಲಮ್ - 16

ಗಂಧರ್ವರಾಜಪ್ರತಿಮೌ ಪಾರ್ಥಿವವ್ಯಂಜಿನಾನ್ವಿತೌ ।
ದೇವೌ ವಾ ದಾನವಾವೇತೌ ನ ತರ್ಕಯಿತುಮುತ್ಸಹೇ ॥

ಅನುವಾದ

ಅವರಿಬ್ಬರೂ ಗಂಧರ್ವರಾಜರಂತೆ ಕಾಣುತ್ತಿದ್ದಾರೆ, ರಾಜೋಚಿತ ಲಕ್ಷಣಗಳಿಂದ ಸಂಪನ್ನರಾಗಿದ್ದಾರೆ. ಆ ಇಬ್ಬರೂ ಸಹೋದರರು ದೇವತೆಗಳೋ, ದಾನವರೋ, ಎಂಬುದನ್ನು ಅನುಮಾನದಿಂದಲೂ ತಿಳಿಯಲಾಗುವುದಿಲ್ಲ.॥16॥

ಮೂಲಮ್ - 17

ತರುಣೀ ರೂಪಸಂಪನ್ನಾ ಸರ್ವಾಭರಣಭೂಷಿತಾ ।
ದೃಷ್ಟಾ ತತ್ರ ಮಯಾ ನಾರೀ ತಯೋರ್ಮಧ್ಯೇ ಸುಮಧ್ಯಮಾ ॥

ಅನುವಾದ

ಅವರಿಬ್ಬರ ನಡುವೆ ಓರ್ವ ತರುಣಿ ರೂಪವತಿ ಸ್ತ್ರೀಯನ್ನೂ ಅಲ್ಲಿ ನೋಡಿದೆ, ಆಕೆಯ ಶರೀರವು ಬಹಳ ಸುಂದರವಾಗಿದ್ದು, ಅನೇಕ ಪ್ರಕಾರದ ಆಭರಣಗಳನ್ನು ತೊಟ್ಟಿರುವಳು.॥17॥

ಮೂಲಮ್ - 18

ತಾಭ್ಯಾಮುಭಾಭ್ಯಾಂ ಸಂಭೂಯ ಪ್ರಮದಾಮಧಿಕೃತ್ಯ ತಾಮ್ ।
ಇಮಾಮವಸ್ಥಾಂ ನೀತಾಹಂ ಯಥಾನಾಥಾಸತೀ ತಥಾ ॥

ಅನುವಾದ

ಆ ಸ್ತ್ರೀಯ ಕಾರಣದಿಂದಲೇ ಅವರಿಬ್ಬರೂ ಸೇರಿ ಒಬ್ಬ ಅನಾಥ ಕುಲಟೆ ಸ್ತ್ರೀಯಂತೆ ನನ್ನ ಇಂತಹ ದುರ್ಗತಿಯನ್ನು ಮಾಡಿರುವರು.॥18॥

ಮೂಲಮ್ - 19

ತಸ್ಯಾಶ್ಚಾ ನೃಜುವೃತ್ತಾಯಾಸ್ತಯೋಶ್ಚ ಹತಯೋರಹಮ್ ।
ಸಫೇನಂ ಪಾತುಮಿಚ್ಛಾಮಿ ರುಧಿರಂ ರಣಮೂರ್ಧನಿ ॥

ಅನುವಾದ

ಯುದ್ಧದಲ್ಲಿ ಆ ಕುಟಿಲ ಆಚಾರವುಳ್ಳ ಸ್ತ್ರೀಯು ಮತ್ತು ಅವರಿಬ್ಬರೂ ರಾಜಕುಮಾರರು ಸತ್ತು ಹೋದಾಗ ಅವರ ನೊರೆಯಿಂದ ಕೂಡಿದ ರಕ್ತವನ್ನು ನಾನು ಕುಡಿಯುವೆನ.॥19॥

ಮೂಲಮ್ - 20

ಏಷ ಮೇ ಪ್ರಥಮಃ ಕಾಮಃ ಕೃತಸ್ತತ್ರ ತ್ವಯಾ ಭವೇತ್ ।
ತಸ್ಯಾಸ್ತಯೋಶ್ಚ ರುಧಿರಂ ಪಿಬೇಯಮಹಮಾಹವೇ ॥

ಅನುವಾದ

ರಣಭೂಮಿಯಲ್ಲಿ ಆ ಸ್ತ್ರೀಯ ಮತ್ತು ಆ ಪುರುಷರ ರಕ್ತವನ್ನು ಕುಡಿಯುವುದು ನನ್ನ ಮೊದಲ, ಪ್ರಮುಖ ಇಚ್ಛೆಯಾಗಿದೆ. ಅದನ್ನು ನೀನು ಪೂರ್ಣಗೊಳಿಸಬೇಕು.॥20॥

ಮೂಲಮ್ - 21

ಇತಿ ತಸ್ಯಾಂ ಬ್ರುವಾಣಾಯಾಂಚತುರ್ದಶ ಮಹಾಬಲಾನ್ ।
ವ್ಯಾದಿದೇಶ ಖರಃ ಕ್ರುದ್ಧೋ ರಾಕ್ಷಸಾನಂತಕೋಪಮಾನ್ ॥

ಅನುವಾದ

ಶೂರ್ಪಣಖಿಯು ಹೀಗೆ ಹೇಳಿದಾಗ ಖರನು ಕುಪಿತನಾಗಿ ಅತ್ಯಂತ ಬಲಿಷ್ಠರಾದ ಯಮನಂತೆ ಭಯಂಕರರಾದ ಹದಿನಾಲ್ಕು ರಾಕ್ಷಸರಿಗೆ ಹೀಗೆ ಆದೇಶಿಸಿದನು.॥21॥

ಮೂಲಮ್ - 22

ಮಾನುಷೌ ಶಸ್ತ್ರಸಂಪನ್ನೌ ಚೀರಕೃಷ್ಣಾಜಿನಾಂಬರೌ ।
ಪ್ರವಿಷ್ಟೌ ದಂಡಕಾರಣ್ಯಂ ಘೋರಂ ಪ್ರಮದಯಾ ಸಹ ॥

ಅನುವಾದ

ವೀರರೇ! ಈ ಭಯಂಕರ ದಂಡಕಾರಣ್ಯದಲ್ಲಿ ನಾರುಮಡಿ ಮತ್ತು ಕಷ್ಣಮೃಗಚರ್ಮವನ್ನು ಧರಿಸಿದ ಇಬ್ಬರು ಶಸ್ತ್ರಧಾರಿ ಮನುಷ್ಯರು ಓರ್ವಯುವತಿಯೊಂದಿಗೆ ನುಗ್ಗಿ ಬಂದಿರುವರು.॥22॥

ಮೂಲಮ್ - 23

ತೌ ಹತ್ವಾ ತಾಂ ಚ ದುರ್ವೃತ್ತಾಮುಪಾವರ್ತಿತುಮರ್ಹಥ ।
ಇಯಂ ಚ ಭಗಿನೀ ತೇಷಾಂ ರುಧಿರಂ ಮಮ ಪಾಸ್ಯತಿ ॥

ಅನುವಾದ

ನೀವು ಅಲ್ಲಿಗೆ ಹೋಗಿ ಮೊದಲು ಅವರಿಬ್ಬರನ್ನು ಕೊಂದು ಬಿಡಿ, ಮತ್ತೆ ಆ ದುರಾಚಾರಿಣಿ ಸ್ತ್ರೀಯನ್ನು ಸಾಯಿಸಿರಿ. ನನ್ನ ಈ ತಂಗೀ ಆ ಮೂವರ ರಕ್ತವನ್ನು ಕುಡಿಯುವಳು.॥23॥

ಮೂಲಮ್ - 24

ಮನೋರಥೋಽಯಮಿಷ್ಟೋಽಸ್ಯಾ ಭಗಿನ್ಯಾ ಮಮ ರಾಕ್ಷಸಾಃ ।
ಶೀಘ್ರಂ ಸಂಪಾದ್ಯತಾಂ ಗತ್ವಾ ತೌ ಪ್ರಮಥ್ಯ ಸ್ವತೇಜಸಾ ॥

ಅನುವಾದ

ರಾಕ್ಷಸರೇ! ಇದು ನನ್ನ ತಂಗಿಯ ಪ್ರಿಯ ಮನೋರಥವಾಗಿದೆ. ನೀವು ಅಲ್ಲಿಗೆ ಹೋಗಿ ನಿಮ್ಮ ಪ್ರಭಾವದಿಂದ ಅವರಿಬ್ಬರೂ ಮನುಷ್ಯರನ್ನು ಕೊಂದುಬಿಡಿ ಹಾಗೂ ತಂಗಿಯ ಈ ಮನೋರಥವನ್ನು ಬೇಗನೇ ಪೂರ್ಣಗೊಳಿಸಿರಿ.॥24॥

ಮೂಲಮ್ - 25

ಯುಷ್ಮಾಭಿರ್ನಿಹತೌ ದೃಷ್ಟ್ವಾ ತಾವುಭೌ ಭ್ರಾತರೌ ರಣೇ ।
ಇಯಂ ಪ್ರಹೃಷ್ಟಾ ಮುದಿತಾ ರುಧಿರಂ ಯುಧಿಪಾಸ್ಯತಿ ॥

ಅನುವಾದ

ರಣಭೂಮಿಯಲ್ಲಿ ಆ ಇಬ್ಬರು ಸಹೋದರರನ್ನು ನೀವು ಕೊಂದುಹಾಕಿದಾಗ ಇವಳು ಹರ್ಷಗೊಳ್ಳುವಳು ಮತ್ತು ಆನಂದ ಮಗ್ನಳಾಗಿ ಯುದ್ಧಸ್ಥಳದಲ್ಲಿ ಅವರ ರಕ್ತಪಾನ ಮಾಡುವಳು.॥25॥

ಮೂಲಮ್ - 26

ಇತಿ ಪ್ರತಿಸಮಾದಿಷ್ಟಾ ರಾಕ್ಷಸಾಸ್ತೇ ಚತುರ್ದಶ ।
ತತ್ರ ಜಗ್ಮುಸ್ತಯಾ ಸಾರ್ಧಂ ಘನಾ ವಾತೇರಿಕಾ ಯಥಾ ॥

ಅನುವಾದ

ಖರನು ಹೀಗೆ ಆಜ್ಞಾಪಿಸಿದಾಗ ಆ ಹದಿನಾಲ್ಕು ರಾಕ್ಷಸರು ಗಾಳಿಯು ಹಾರಿಸಿದ ಮೋಡಗಳಂತೆ ವಿವಶರಾಗಿ ಶೂರ್ಪಣಖೆಯ ಜೊತೆಗೆ ಪಂಚವಟಿಗೆ ನಡೆದರು.॥26॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥19॥