वाचनम्
ಭಾಗಸೂಚನಾ
ಶ್ರೀರಾಮನ ಸಲಹೆಯಂತೆ ಶೂರ್ಪಣಖೆಯು ಲಕ್ಷ್ಮಣನಲ್ಲಿ ಪ್ರಣಯ ಭಿಕ್ಷೆಯನ್ನು ಯಾಚಿಸಿದುದು, ಅವನೂ ನೆಪ ಹೇಳಿ ಹಿಂದಕ್ಕಟ್ಟಲು ಶೂರ್ಪಣಖಿಯು ಸೀತೆಯನ್ನೇ ಕಬಳಿಸಲು ಹೋದುದು, ಲಕ್ಷ್ಮಣನು ರಾಕ್ಷಸಿಯ ಕಿವಿ-ಮೂಗುಗಳನ್ನು ಕತ್ತರಿಸಿದುದು
ಮೂಲಮ್ - 1
ತಾಂ ತು ಶೂರ್ಪಣಖಾಂ ರಾಮಃ ಕಾಮಪಾಶಾವಪಾಶಿತಾಮ್ ।
ಸ್ವೇಚ್ಛಯಾ ಶ್ಲಕ್ಷ್ಣಯಾ ವಾಚಾ ಸ್ಮಿತಪೂರ್ವಮಥಾಬ್ರವೀತ್ ॥
ಅನುವಾದ
ಕಾಮಪಾಶದಿಂದ ಬಂಧಿತಳಾದ ಆ ಶೂರ್ಪಣಖಿಯಲ್ಲಿ ಶ್ರೀರಾಮನು ತನ್ನ ಇಚ್ಛೆಗನುಸಾರ ಮಧುರವಾದ ವಾಣಿಯಿಂದ ಮುಗುಳ್ನಗುತ್ತಾ ಹೇಳಿದನು.॥1॥
ಮೂಲಮ್ - 2
ಕೃತದಾರೋಽಸ್ಮಿ ಭವತಿ ಭಾರ್ಯೇಯಂ ದಯಿತಾ ಮಮ ।
ತ್ವದ್ವಿಧಾನಾಂ ತು ನಾರೀಣಾಂ ಸುದುಃಖಾ ಸಸಪತ್ನತಾ ॥
ಅನುವಾದ
ಆದರಣೀಯ ದೇವಿ! ನಾನು ವಿವಾಹವಾಗಿಬಿಟ್ಟಿದ್ದೇನೆ. ಇವಳು ನನ್ನ ಪ್ರಿಯ ಪತ್ನೀ ಇಲ್ಲೇ ಇರುವಳು. ನಿನ್ನಂತಹ ಸ್ತ್ರೀಯರಿಗೆ ಸವತಿಯಾಗಿರುವುದು ಅತ್ಯಂತ ದುಃಖದಾಯಕವಾಗಿದ.॥2॥
ಮೂಲಮ್ - 3
ಅನುಜಸ್ತ್ವೇಷ ಮೇ ಭ್ರಾತಾ ಶೀಲವಾನ್ ಪ್ರಿಯದರ್ಶನಃ ।
ಶ್ರೀಮಾನಕೃತದಾರಶ್ಚ ಲಕ್ಷ್ಮಣೋ ನಾಮ ವೀರ್ಯವಾನ್ ॥
ಮೂಲಮ್ - 4
ಅಪೂರ್ವೀ ಭಾರ್ಯಯಾ ಚಾರ್ಥೀ ತರುಣಃ ಪ್ರಿಯದರ್ಶನಃ ।
ಅನುರೂಪಶ್ಚ ತೇ ಭರ್ತಾ ರೂಪಸ್ಯಾಸ್ಯ ಭವಿಷ್ಯತಿ ॥
ಅನುವಾದ
ಇವನು ನನ್ನ ತಮ್ಮನಾದ ಶ್ರೀಮಾನ್ ಲಕ್ಷ್ಮಣನು ಬಹಳ ಶೀಲವಂತನೂ, ಪ್ರಿಯದರ್ಶನನೂ, ಬಲ-ಪರಾಕ್ರಮದಲ್ಲಿ ಸಂಪನ್ನನೂ ಆಗಿರುವನು. ಇವನೊಂದಿಗೆ ಪತ್ನಿಯೂ ಇಲ್ಲ. ಇವನು ಅಪೂರ್ವ ಗುಣಗಳಿಂದ ಸಂಪನ್ನನಾಗಿದ್ದು ತರುಣನೂ ಆಗಿರುವನು. ಇವನ ರೂಪವೂ ಮನೋಹರವಾಗಿದೆ. ಆದ್ದರಿಂದ ಇವನಿಗೆ ಭಾರ್ಯೆಯ ಬಯಕೆ ಉಂಟಾದರೆ ಇವನೇ ನಿನಗೆ ಯೋಗ್ಯಪತಿಯಾಗುವನು.॥3-4॥
ಮೂಲಮ್ - 5
ಏನಂ ಭಜ ವಿಶಾಲಾಕ್ಷಿ ಭರ್ತಾರಂ ಭ್ರಾತರಂ ಮಮ ।
ಅಸಪತ್ನಾ ವರಾರೋಹೇ ಮೇರುಮರ್ಕಪ್ರಭಾ ಯಥಾ ॥
ಅನುವಾದ
ವಿಶಾಲಲೋಚನೇ! ವರಾರೋಹೇ! ಸೂರ್ಯನ ಪ್ರಭೆ ಮೇರುಪರ್ವತವನ್ನು ಸೇವಿಸುವಂತೆಯೇ ನೀನು ನನ್ನ ತಮ್ಮನಾದ ಲಕ್ಷ್ಮಣನನ್ನು ಪತಿಯಾಗಿಸಿಕೊಂಡು ಸವತಿಯ ಭಯದಿಂದ ರಹಿತಳಾಗಿ ಇವನ ಸೇವೆ ಮಾಡು.॥5॥
ಮೂಲಮ್ - 6
ಇತಿ ರಾಮೇಣ ಸಾ ಪ್ರೋಕ್ತಾ ರಾಕ್ಷಸೀ ಕಾಮಮೋಹಿತಾ ।
ವಿಸೃಜ್ಯ ರಾಮಂ ಸಹಸಾ ತತೋ ಲಕ್ಷ್ಮಣಮಬ್ರವೀತ್ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಆ ಕಾಮಪೀಡಿತಳಾದ ರಾಕ್ಷಸಿಯು ಅವನನ್ನು ಬಿಟ್ಟು ಕೂಡಲೇ ಲಕ್ಷ್ಮಣನ ಬಳಿಗೆ ಬಂದು ಇಂತೆಂದಳು.॥6॥
ಮೂಲಮ್ - 7
ಅಸ್ಯ ರೂಪಸ್ಯ ತೇ ಯುಕ್ತಾ ಭಾರ್ಯಾಹಂ ವರವರ್ಣಿನೀ ।
ಮಯಾ ಸಹ ಸುಖಂ ಸರ್ವಾನ್ ದಂಡಕಾನ್ವಿಚರಿಷ್ಯಸಿ ॥
ಅನುವಾದ
ಲಕ್ಷ್ಮಣ! ನಿನ್ನ ಈ ಸುಂದರ ರೂಪಕ್ಕೆ ನಾನೇ ಯೋಗ್ಯಳಾಗಿದ್ದೇನೆ. ಆದ್ದರಿಂದ ನಾನೇ ನಿನ್ನ ಪರಮಸುಂದರೀ ಭಾರ್ಯೆ ಆಗಬಲ್ಲೆನು. ನನ್ನನ್ನು ಅಂಗೀಕರಿಸಿ ನೀನು ನನ್ನೊಂದಿಗೆ ದಂಡಕಾರಣ್ಯದಲ್ಲಿ ಎಲ್ಲೆಡೆ ಸುಖವಾಗಿ ಸಂಚಿಸುವೆ.॥7॥
ಮೂಲಮ್ - 8
ಏವಮುಕ್ತಸ್ತು ಸೌಮಿತ್ರೀ ರಾಕ್ಷಸ್ಯಾ ವಾಕ್ಯಕೋವಿದಃ ।
ತತಃ ಶೂರ್ಪಣಖೀಂ ಸ್ಮಿತ್ವಾ ಲಕ್ಷ್ಮಣೋ ಯುಕ್ತಮಬ್ರವೀತ್ ॥
ಅನುವಾದ
ಆ ರಾಕ್ಷಸಿಯು ಹೀಗೆ ಹೇಳಿದಾಗ ವಾಕ್ಯಕೋವಿದನಾದ ಸುಮಿತ್ರಾಕುಮಾರ ಲಕ್ಷ್ಮಣನು ಮುಗುಳ್ನಕ್ಕು ಮೊರದಂತೆ ಉಗುರುಗಳುಳ್ಳ ನಿಶಾಚರಿಯಲ್ಲಿ ಯುಕ್ತಿಯುಕ್ತವಾಗಿ ನುಡಿದನು.॥8॥
ಮೂಲಮ್ - 9
ಕಥಂ ದಾಸಸ್ಯ ಮೇ ದಾಸೀ ಭಾರ್ಯಾ ಭವಿತುಮಿಚ್ಛಸಿ ।
ಸೋಽಹಮಾರ್ಯೇಣ ಪರವಾನ್ ಭ್ರಾತ್ರಾ ಕಮಲವರ್ಣಿನಿ ॥
ಅನುವಾದ
ಕಮಲವರ್ಣಿನಿ! ಸುಂದರೀ! ನಾನಾದರೋ ದಾಸನಾಗಿದ್ದೇನೆ, ನನ್ನ ಅಣ್ಣ ಭಗವಾನ್ ಶ್ರೀರಾಮನಿಗೆ ಅಧೀನನಾಗಿದ್ದೇನೆ. ನೀನು ನನ್ನ ಪತ್ನಿಯಾಗಿ ದಾಸಿಯಾಗಲು ಏಕೆ ಬಯಸುತ್ತಿರುವೆ.॥9॥
ಮೂಲಮ್ - 10
ಸಮೃದ್ಧಾರ್ಥಸ್ಯ ಸಿದ್ಧಾರ್ಥಾ ಮುದಿತಾಮಲವರ್ಣಿನೀ ।
ಆರ್ಯಸ್ಯ ತ್ವಂ ವಿಶಾಲಾಕ್ಷಿ ಭಾರ್ಯಾಭವ ಯವೀಯಸೀ ॥
ಅನುವಾದ
ವಿಶಾಲಲೋಚನೇ! ನನ್ನ ಅಣ್ಣ ಸಮಸ್ತ ಐಶ್ವರ್ಯಗಳಿಂದ ಸಂಪನ್ನನಾಗಿದ್ದಾನೆ. ನೀನು ಅವನ ಕಿರಿಯ ಪತ್ನಿಯಾಗು, ಇದರಿಂದ ನಿನ್ನ ಮನೋರಥ ಸಿದ್ಧಿಯಾಗಿ, ನೀನು ಸದಾ ಸಂತೋಷವಾಗಿರುವೆ. ನಿನ್ನ ರೂಪ-ಬಣ್ಣ ಅವನಿಗೆ ಯೋಗ್ಯ ನಿರ್ಮಲವಾಗಿದೆ.॥10॥
ಮೂಲಮ್ - 11
ಏತಾಂ ವಿರೂಪಾಮಸತೀಂ ಕರಾಲಾಂ ನಿರ್ಣತೋದರೀಮ್ ।
ಭಾರ್ಯಾಂ ವೃದ್ಧಾಂ ಪರಿತ್ಯಜ್ಯ ತ್ವಾಮೇವೈಷ ಭಜಿಷ್ಯತಿ ॥
ಅನುವಾದ
ಕುರೂಪಳೂ, ಅಸತಿಯೂ, ವಿಕೃತಳೂ, ನಿಮ್ನೋದರಿಯೂ, ಮುದುಕಿಯೂ ಆದ ಭಾರ್ಯೇಯನ್ನು ತ್ಯಜಿಸಿ ಅವನು ನಿನ್ನನ್ನು ಆದರದಿಂದ ಸ್ವೀಕರಿಸುವನು.॥11॥
ಮೂಲಮ್ - 12
ಕೋ ಹಿ ರೂಪಮಿದಂ ಶ್ರೇಷ್ಠಂ ಸಂತ್ಯಜ್ಯ ವರವರ್ಣಿನಿ ।
ಮಾನುಷೀಸು ವರಾರೋಹೇ ಕುರ್ಯಾದ್ ಭಾವಂ ವಿಚಕ್ಷಣಃ ॥
ಅನುವಾದ
ಸುಂದರ ಕಟಿಯುಳ್ಳ ವರವರ್ಣಿನಿ! ನಿನ್ನ ಈ ಶ್ರೇಷ್ಠ ರೂಪವನ್ನು ಬಿಟ್ಟು ಮಾನವ ಕನ್ಯೆಯಲ್ಲಿ ಪ್ರೇಮವಿರಿಸುವ ಬುದ್ಧಿವಂತ ಮನುಷ್ಯ ಬೇರೆ ಯಾರು ತಾನೇ ಇರಬಲ್ಲನು.॥12॥
ಮೂಲಮ್ - 13
ಇತಿ ಸಾ ಲಕ್ಷ್ಮಣೋನೋಕ್ತಾ ಕರಾಲಾ ನಿರ್ಣತೋದರೀ ।
ಮನ್ಯತೇ ತದ್ವಚಃ ಸತ್ಯಂ ಪರಿಹಾಸಾವಿಚಕ್ಷಣಾ ॥
ಅನುವಾದ
ಲಕ್ಷ್ಮಣನು ಹೀಗೆ ಹೇಳಿದಾಗ ಪರಿಹಾಸವನ್ನು ತಿಳಿಯದೆ ಆ ದೊಡ್ಡ ಹೊಟ್ಟೆಯುಳ್ಳ ವಿಕರಾಳ ರಾಕ್ಷಸಿಯು ಅವನ ಮಾತನ್ನು ನಿಜವೆಂದು ತಿಳಿದಳು.॥13॥
ಮೂಲಮ್ - 14
ಸಾ ರಾಮಂ ಪರ್ಣಶಾಲಾಯಾಮುಪವಿಷ್ಟಂ ಪರಂತಪಮ್ ।
ಸೀತಯಾ ಸಹ ದುರ್ಧರ್ಷಮಬ್ರವೀತ್ ಕಾಮಮೋಹಿತಾ ॥
ಅನುವಾದ
ಪರ್ಣಶಾಲೆಯಲ್ಲಿ ಸೀತೆಯೊಂದಿಗೆ ಕುಳಿತಿರುವ ಪರಂತಪ ದುರ್ಜಯ ವೀರ ಶ್ರೀರಾಮನಚಂದ್ರನ ಬಳಿಗೆ ಅವಳು ಬಂದು ಕಾಮಮೋಹಿತಳಾಗಿ ನುಡಿದಳು .॥14॥
ಮೂಲಮ್ - 15
ಇಮಾಂ ವಿರೂಪಾಮಸತೀಂ ಕರಾಲಾಂ ನಿರ್ಣತೋದರೀಮ್ ।
ವೃದ್ದಾಂ ಭಾರ್ಯಾಮವಷ್ಟಭ್ಯ ನ ಮಾಂ ತ್ವಂ ಬಹುಮನ್ಯಸೇ ॥
ಅನುವಾದ
ರಾಮ! ನೀನು ಈ ಕುರೂಪಿ, ಅಸತೀ, ವಿಕತ, ನಿಮ್ನೋದರೀ ಮತ್ತು ವೃದ್ಧೆಯನ್ನು ಆಶ್ರಯಿಸಿ ನನ್ನನ್ನು ವಿಶೇಷವಾಗಿ ಆದರಿಸುತ್ತಿಲ್ಲ.॥15॥
ಮೂಲಮ್ - 16
ಅದ್ಯೇಮಾಂ ಭಕ್ಷಯಿಷ್ಯಾಮಿ ಪಶ್ಯತಸ್ತವ ಮಾನುಷೀಮ್ ।
ತ್ವಯಾ ಸಹ ಚರಿಷ್ಯಾಮಿ ನಿಃಸಪತ್ನಾ ಯಥಾಸುಖಮ್ ॥
ಅನುವಾದ
ಆದ್ದರಿಂದ ಇಂದು ನೀನು ನೋಡು-ನೋಡುತ್ತಿರುವಾಗಲೇ ನಾನು ಈ ಮಾನುಷಿಯನ್ನು ತಿಂದು ಬಿಡುವೆನು. ಈ ಸವತಿಯು ಇರದಿದ್ದಾಗ ನಿನ್ನೊಂದಿಗೆ ಸುಖವಾಗಿ ವಿಚರಿಸುವೆನು.॥16॥
ಮೂಲಮ್ - 17
ಇತ್ಯುಕ್ತ್ವಾ ಮೃಗಶಾಬಾಕ್ಷೀಮಲಾತಸದೃಶೇಕ್ಷಣಾ ।
ಅಭ್ಯಗಚ್ಛತ್ ಸುಸಂಕ್ರುದ್ಧಾ ಮಹೋಲ್ಕಾ ರೋಹಿಣೀಮಿವ ॥
ಅನುವಾದ
ಹೀಗೆ ಉರಿಯುವ ಕೆಂಡದಂತೆ ಕಣ್ಣುಗಳುಳ್ಳ ಶೂರ್ಪಣಖಿಯು ಅತ್ಯಂತ ಕ್ರೋಧಗೊಂಡು ಯಾವುದಾದರೂ ಭಾರೀ ಉಲ್ಕೆಯು ರೋಹಿಣೀ ನಕ್ಷತ್ರದ ಮೇಲೆ ಬೀಳುವಂತೆ ಮೃಗನಯಿನೀ ಸೀತೆಯ ಕಡೆಗೆ ನುಗ್ಗಿದಳು.॥17॥
ಮೂಲಮ್ - 18
ತಾಂ ಮೃತ್ಯು ಪಾಶಪ್ರತಿಮಾಮಾಪತಂತೀಂ ಮಹಾಬಲಃ ।
ವಿಗೃಹ್ಯ ರಾಮಃ ಕುಪಿತಸ್ತತೋ ಲಕ್ಷ್ಮಣಮಬ್ರವೀತ್ ॥
ಅನುವಾದ
ಮೃತ್ಯುಪಾಶದಂತೆ ಬರುತ್ತಿರುವ ಆ ರಾಕ್ಷಸಿಯನ್ನು ಮಹಾಬಲಿ ಶ್ರೀರಾಮನು ಹುಂಕಾರದಿಂದ ತಡೆದು ಕುಪಿತನಾಗಿ ಲಕ್ಷ್ಮಣನಲ್ಲಿ ಹೇಳಿದನು.॥18॥
ಮೂಲಮ್ - 19
ಕ್ರೂರೈರನಾರ್ಯೈಃ ಸೌಮಿತ್ರೇ ಪರಿಹಾಸಃ ಕಥಂಚನ ।
ನ ಕಾರ್ಯಃ ಪಶ್ಯ ವೈದೇಹೀಂ ಕಥಂಚಿತ್ ಸೌಮ್ಯ ಜೀವತೀಮ್ ॥
ಅನುವಾದ
ಸುಮಿತ್ರಾನಂದನ! ಕ್ರೂರ ಕರ್ಮಮಾಡುವ ಅನಾರ್ಯರಲ್ಲಿ ಯಾವ ರೀತಿಯಿಂದಲೂ ಪರಿಹಾಸವನ್ನು ಮಾಡಬಾರದು. ಸೌಮ್ಯ! ನೋಡು, ಈಗ ಸೀತೆಯ ಪ್ರಾಣಗಳು ಬಹಳ ಕಷ್ಟದಿಂದ ಉಳಿದಿದೆ.॥19॥
ಮೂಲಮ್ - 20
ಇಮಾಂ ವಿರೂಪಾಮಸತೀಮತಿಮತ್ತಾಂ ಮಹೋದರೀಮ್ ।
ರಾಕ್ಷಸೀಂ ಪುರುಷವ್ಯಾಘ್ರ ವಿರೂಪಯಿತುಮರ್ಹಸಿ ॥
ಅನುವಾದ
ಪುರುಷಸಿಂಹ! ನೀನು ಈ ಕುರೂಪೀ, ಕುಲಟೆ, ಅತ್ಯಂತ ಉನ್ಮತ್ತೆ ಮತ್ತು ದೊಡ್ಡ ಹೊಟ್ಟೆಯ ರಾಕ್ಷಸಿಯನ್ನು ಯಾವುದಾದರೂ ಅಂಗಹೀನಗೊಳಿಸಿ ಕುರೂಪಳನ್ನಾಗಿ ಮಾಡು.॥20॥
ಮೂಲಮ್ - 21
ಇತ್ಯುಕ್ತೋ ಲಕ್ಷ್ಮಣಸ್ತಸ್ಯಾಃ ಕ್ರುದ್ಧೋ ರಾಮಸ್ಯ ಪಶ್ಯತಃ ।
ಉದ್ಧೃತ್ಯ ಖಡ್ಗಂ ಚಿಚ್ಛೇದ ಕರ್ಣನಾಸೆ ಮಹಾಬಲಃ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಆದೇಶಿಸಿದಾಗ ಕ್ರೋಧಗೊಂಡ ಮಹಾಬಲೀ ಲಕ್ಷ್ಮಣನು ಅವನು ನೋಡು ನೋಡುತ್ತಲೇ ಒರೆಯಿಂದ ಖಡ್ಗವನ್ನು ಸೆಳೆದುಕೊಂಡು, ಶೂರ್ಪಣಖಿಯ ಮೂಗು, ಕಿವಿಗಳನ್ನು ಕತ್ತರಿಸಿಬಿಟ್ಟನು.॥21॥
ಮೂಲಮ್ - 22
ನಿಕೃತ್ತ ಕರ್ಣನಾಸಾ ತು ವಿಸ್ವರಂ ಸಾ ವಿನದ್ಯ ಚ ।
ಯಥಾಗತಂ ಪ್ರದುದ್ರಾವ ಘೋರಾ ಶೂರ್ಪಣಖಾ ವನಮ್ ॥
ಅನುವಾದ
ಮೂಗು ಮತ್ತು ಕಿವಿಗಳು ಕತ್ತರಿಸಲ್ಪಟ್ಟಾಗ ಭಯಂಕರ ರಾಕ್ಷಸೀ ಶೂರ್ಪಣಖಿಯು ಜೋರಾಗಿ ಕೂಗುತ್ತಾ ಬಂದ ಹಾಗೆಯೇ ಕಾಡಿಗೆ ಓಡಿಹೋದಳು.॥22॥
ಮೂಲಮ್ - 23
ಸಾ ವಿರೂಪಾ ಮಹಾಘೋರಾ ರಾಕ್ಷಸೀ ಶೋಣಿತೋಕ್ಷಿತಾ ।
ನನಾದ ವಿವಿಧಾನ್ನಾದಾನ್ಯಥಾ ಪ್ರಾವೃಷಿ ತೋಯದಃ ॥
ಅನುವಾದ
ರಕ್ತದಿಂದ ತೋಯ್ದಿರುವ ಆ ಮಹಾಭಯಂಕರ, ವಿಕರಾಳ ರೂಪವುಳ್ಳ ನಿಶಾಚರಿಯು ವರ್ಷಕಾಲದ ಮೇಘಗಳು ಗರ್ಜಿಸುವಂತೆ, ಗುಡುಗುವಂತೆ ನಾನಾ ರೀತಿಯ ದನಿಗಳಲ್ಲಿ ಜೋರು-ಜೋರಾಗಿ ಚೀತ್ಕಾರ ಮಾಡತೊಡಗಿದಳು.॥23॥
ಮೂಲಮ್ - 24
ಸಾ ವಿಕ್ಷರಂತೀ ರುಧಿರಂ ಬಹುಧಾ ಘೋರದರ್ಶನಾ ।
ಪ್ರಗೃಹ್ಯ ಬಾಹೂ ಗರ್ಜಂತೀ ಪ್ರವಿವೇಶ ಮಹಾವನಮ್ ॥
ಅನುವಾದ
ಅವಳು ನೋಡಲು ಬಹಳ ಭಯಾನಕಳಾಗಿದ್ದಳು. ಅವಳು ತನ್ನ ತುಂಡಾದ ಅವಯವಗಳಿಂದ ರಕ್ತದ ಧಾರೆಯನ್ನು ಹರಿಸುತ್ತಾ ಎರಡೂ ಭುಜಗಳನ್ನು ಎತ್ತಿ ಚೀರುತ್ತಾ ಒಂದು ವಿಶಾಲ ವನದೊಳಗೆ ಪವ್ರವೇಶಿಸಿದಳು.॥24॥
ಮೂಲಮ್ - 25
ತತಸ್ತು ಸಾ ರಾಕ್ಷಸ ಸಂಘಸಂವೃತಂ
ಖರಂ ಜನಸ್ಥಾನಗತಂ ವಿರೂಪಿತಾ ।
ಉಪೇತ್ಯ ತಂ ಭ್ರಾತರಮುಗ್ರತೇಜಸಂ
ಪಪಾತ ಭೂಮೌ ಗಗನಾದ್ ಯಥಾಶನಿಃ ॥
ಅನುವಾದ
ಲಕ್ಷ್ಮಣನಿಂದ ಕುರೂಪಳಾದ ಶೂರ್ಪಣಖಿಯು ಅಲ್ಲಿಂದ ಓಡಿ ರಾಕ್ಷಸರಿಂದ ಆವರಿಸಿದ ಭಯಂಕರ ತೇಜಸ್ಸುಳ್ಳ ಜನಸ್ಥಾನನಿವಾಸೀ ಅಣ್ಣನಾದ ಖರನ ಬಳಿಗೆ ಹೋಗಿ ಆಕಾಶದಿಂದ ಸಿಡಿಲುಬೀಳುವಂತೆ ಭೂಮಿಗೆ ಬಿದ್ದಳು.॥25॥
ಮೂಲಮ್ - 26
ತತಃ ಸಭಾರ್ಯಂ ಭಯಮೋಹಮೂರ್ಛಿತಾ
ಸಲಕ್ಷ್ಮಣಂ ರಾಘವಮಾಗತಂ ವನಮ್ ।
ವಿರೂಪಣಂ ಚಾತ್ಮನಿ ಶೋಣಿತೋಕ್ಷಿತಾ
ಶಶಂಸ ಸರ್ವಂ ಭಗಿನೀ ಖರಸ್ಯ ಸಾ ॥
ಅನುವಾದ
ಖರನ ಆ ತಂಗಿಯು ರಕ್ತದಿಂದ ತೋಯ್ದುಹೋಗಿ, ಭಯ ಹಾಗೂ ಮೋಹದಿಂದ ನಿಶ್ಚೇಷ್ಟಿತಳಂತೆ ಆಗಿದ್ದಳು. ಅವಳು ಸೀತೆ ಮತ್ತು ಲಕ್ಷ್ಮಣರೊಂದಿಗೆ ಶ್ರೀರಾಮನು ಕಾಡಿಗೆ ಬಂದಿರುವುದು ಮತ್ತು ತಾನು ಕುರೂಪಳಾದ ಎಲ್ಲ ವೃತ್ತಾಂತವನ್ನು ಖರನಿಗೆ ತಿಳಿಸಿದಳು.॥26॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹದಿನೆಂಟನೆಯ ಸರ್ಗ ಸಂಪೂರ್ಣವಾಯಿತು.॥18॥