वाचनम्
ಭಾಗಸೂಚನಾ
ಶ್ರೀರಾಮನ ಆಶ್ರಮಕ್ಕೆ ಶೂರ್ಪಣಖಿಯ ಆಗಮನ, ಪರಸ್ಪರ ಪರಿಚಯ, ಭಾರ್ಯೆಯನ್ನಾಗಿ ಮಾಡಿಕೊಳ್ಳಲು ರಾಕ್ಷಸಿಯು ಶ್ರೀರಾಮನನ್ನು ಒತ್ತಾಯಿಸಿದುದು
ಮೂಲಮ್ - 1
ಕೃತಾಭಿಷೇಕೋ ರಾಮಸ್ತು ಸೀತಾ ಸೌಮಿತ್ರಿರೇವ ಚ ।
ತಸ್ಮಾದ್ಗೋದಾವರೀತೀರಾ ತ್ತತೋ ಜಗ್ಮುಃ ಸ್ವಮಾಶ್ರಮಮ್ ॥
ಅನುವಾದ
ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಮೂವರೂ ಸ್ನಾನ ಮಾಡಿ ಗೋದಾವರೀ ನದೀ ತೀರದಿಂದ ತಮ್ಮ ಆಶ್ರಮಕ್ಕೆ ಮರಳಿದರು.॥1॥
ಮೂಲಮ್ - 2
ಆಶ್ರಮಂ ತಮುಪಾಗಮ್ಯ ರಾಘವಃ ಸಹ ಲಕ್ಷ್ಮಣಃ ।
ಕೃತ್ವಾ ಪೌರ್ವಾಹ್ಣಿಕಂ ಕರ್ಮ ಪರ್ಣಶಾಲಾಮುಪಾಗಮತ್ ॥
ಅನುವಾದ
ಆಶ್ರಮಕ್ಕೆ ಬಂದು ಲಕ್ಷ್ಮಣ ಸಹಿತ ಶ್ರೀರಾಮನು ಪೂರ್ವಾಹ್ನದ ಹೋಮ ಪೂಜಾದಿ ಕಾರ್ಯವನ್ನು ಪೂರೈಸಿ ಆ ಇಬ್ಬರೂ ಸಹೋದರರು ಪರ್ಣಶಾಲೆಗೆ ಬಂದು ಕುಳಿತರು.॥2॥
ಮೂಲಮ್ - 3
ಉವಾಸ ಸುಖಿತಸ್ತತ್ರ ಪೂಜ್ಯಮಾನೋ ಮಹರ್ಷಿಭಿಃ ।
ಸ ರಾಮಃ ಪರ್ಣಶಾಲಾಯಾಮಾಸೀನಃ ಸಹಸೀತಯಾ ॥
ಮೂಲಮ್ - 4
ವಿರರಾಜ ಮಹಾಬಾಹುಶ್ಚಿತ್ರಯಾ ಚಂದ್ರಮಾ ಇವ ।
ಲಕ್ಷ್ಮಣೇನ ಸಹ ಭ್ರಾತ್ರಾ ಚಕಾರ ವಿವಿಧಾಃ ಕಥಾಃ ॥
ಅನುವಾದ
ಅಲ್ಲಿ ಸೀತೆಯೊಂದಿಗೆ ಅವರು ಸುಖವಾಗಿ ಇರತೊಡಗಿದರು. ಆಗ ದೊಡ್ಡ-ದೊಡ್ಡ ಋಷಿಮುನಿಗಳು ಅಲ್ಲಿಗೆ ಬಂದು ಅವರನ್ನು ಸತ್ಕರಿಸುತ್ತಿದ್ದರು. ಪರ್ಣಶಾಲೆಯಲ್ಲಿ ಸೀತೆಯೊಂದಿಗೆ ಕುಳಿತಿರುವ ಮಹಾಬಾಹು ಶ್ರೀರಾಮಚಂದ್ರನು ಚಿತ್ರಾ ನಕ್ಷತ್ರದೊಂದಿಗೆ ವಿರಾಜಿಸುವ ಚಂದ್ರನಂತೆ ಶೋಭಿಸುತ್ತಿದ್ದನು. ಅಲ್ಲಿ ಅವನು ಲಕ್ಷ್ಮಣನೊಡನೆ ಬಗೆ-ಬಗೆ ಮಾತುಗಳನ್ನಾಡುತ್ತಾ ಇದ್ದನು.॥3-4॥
ಮೂಲಮ್ - 5
ತದಾಸೀನಸ್ಯ ರಾಮಸ್ಯ ಕಥಾಸಂಸಕ್ತ ಚೇತಸಃ ।
ತಂ ದೇಶಂ ರಾಕ್ಷಸೀ ಕಾಚಿದಾಜಗಾಮ ಯದೃಚ್ಛಯಾ ॥
ಮೂಲಮ್ - 6
ಸಾ ತು ಶೂರ್ಪಣಖಾ ನಾಮ ದಶಗ್ರೀವಸ್ಯ ರಕ್ಷಸಃ ।
ಭಗಿನೀ ರಾಮಮಾಸಾದ್ಯ ದದರ್ಶ ತ್ರಿದಶೋಪಮಮ್ ॥
ಅನುವಾದ
ಶ್ರೀರಾಮಚಂದ್ರನು ಲಕ್ಷ್ಮಣನೊಂದಿಗೆ ಮಾತುಕತೆಯಾಡುತ್ತಿರುವಾಗ ಒಬ್ಬ ರಾಕ್ಷಸಿಯು ಅಕಸ್ಮಾತ್ತಾಗಿ ಅಲ್ಲಿಗೆ ಬಂದಳು. ಅವಳು ದಶಮುಖ ರಾಕ್ಷಸ ರಾವಣನ ತಂಗಿ ಶೂರ್ಪಣಖಿಯಾಗಿದ್ದಳು. ಅವಳು ಅಲ್ಲಿಗೆ ಬಂದು ದೇವತೆಗಳಂತೆ ಮನೋಹರ ರೂಪವುಳ್ಳ ಶ್ರೀರಾಮನನ್ನು ನೋಡಿದಳು.॥5-6॥
ಮೂಲಮ್ - 7
ದೀಪ್ತಾಸ್ಯಂ ಚ ಮಹಾಬಾಹುಂ ಪದ್ಮಪತ್ರಾಯತೇಕ್ಷಣಮ್ ।
ಗಜವಿಕ್ರಾಂತಗಮನಂ ಜಟಾಮಂಡಲಧಾರಿಣಮ್ ॥
ಅನುವಾದ
ಅವನ ಮುಖವು ತೇಜಸ್ವಿಯಾಗಿದ್ದು, ಮಹಾಬಾಹು ಹಾಗೂ ಅರಳಿದ ಕಮಲದಳದಂತೆ ವಿಶಾಲ ನೇತ್ರಗಳು ಸುಂದರವಾಗಿದ್ದವು. ಅವನು ಆನೆಯಂತೆ ಮಂದಗತಿಯಂತೆ ನಡೆಯುತ್ತಿದ್ದನು, ತಲೆಯಲ್ಲಿ ಜಟಾಮಂಡಲವನ್ನು ಧರಿಸಿದ್ದನು.॥7॥
ಮೂಲಮ್ - 8½
ಸುಕುಮಾರಂ ಮಹಾಸತ್ತ್ವಂ ಪಾರ್ಥಿವವ್ಯಂಜನಾನ್ವಿತಮ್ ।
ರಾಮಮಿಂದೀರವರಶ್ಯಾಮಂ ಕಂದರ್ಪಸದೃಶಪ್ರಭಮ್ ॥
ಬಭೂವೇಂದ್ರೋಪಮಂ ದೃಷ್ಟ್ವಾ ರಾಕ್ಷಸೀ ಕಾಮಮೋಹಿತಾ ।
ಅನುವಾದ
ಪರಮ ಸುಕುಮಾರ, ಮಹಾಬಲಶಾಲಿ, ರಾಜೋಚಿತ ಲಕ್ಷಣಗಳಿಂದ ಕೂಡಿದ, ನೀಲಕಮಲದಂತೆ ಶ್ಯಾಮಲ ಕಾಂತಿಯಿಂದ ಸುಶೋಭಿತ, ಕಾಮದೇವನಂತೆ ಸೌಂದರ್ಯಶಾಲಿ ಹಾಗೂ ಇಂದ್ರನಂತೆ ತೇಜಸ್ವಿಯಾದ ಶ್ರೀರಾಮನನ್ನು ನೋಡುತ್ತಲೇ ಆ ರಾಕ್ಷಸಿಯು ಕಾಮಮೋಹಿತಳಾದಳು.॥8½॥
ಮೂಲಮ್ - 9
ಸುಮುಖಂ ದುರ್ಮುಖೀ ರಾಮಂ ವೃತ್ತಮಧ್ಯಂ ಮಹೋದರೀ ॥
ಮೂಲಮ್ - 10
ವಿಶಾಲಾಕ್ಷಂ ವಿರೂಪಾಕ್ಷೀ ಸುಕೇಶಂ ತಾಮ್ರಮೂರ್ಧಜಾ ।
ಪ್ರಿಯರೂಪಂ ವಿರೂಪಾ ಸಾ ಸುಸ್ವರಂ ಭೈರವಸ್ವನಾ॥
ಅನುವಾದ
ಶ್ರೀರಾಮನ ಮುಖವು ಸುಂದರವಾಗಿತ್ತು ಮತ್ತು ಶೂರ್ಪಣಖಿಯ ಮುಖ ಬಹಳ ಕೆಟ್ಟದಾಗಿತ್ತು. ಅವನ ಉದರ ಮತ್ತು ಕಟಿ ಪ್ರದೇಶವು ಕ್ಷೀಣವಾಗಿತ್ತು ಆದರೆ ಶೂರ್ಪಣಖಿಯ ನಡು ಸ್ಥೂಲವಾಗಿದ್ದು ಹೊಟ್ಟೆ ದೊಡ್ಡದಾಗಿತ್ತು. ಶ್ರೀರಾಮನ ಕಣ್ಣುಗಳು ವಿಶಾಲವಿರುವುದರಿಂದ ಮನೋಹರವಾಗಿತ್ತು, ಆದರೆ ಆ ರಾಕ್ಷಸಿಯ ಕಣ್ಣುಗಳು ಕುರೂಪ ಮತ್ತು ಭಯಾವಹವಾಗಿದ್ದವು. ಶ್ರೀರಘುನಾಥನ ಕೂದಲು ನುಣುಪಾಗಿದ್ದು, ಸುಂದರವಾಗಿದ್ದವು. ಆದರೆ ಆ ನಿಶಾಚರಿಯ ಕೂದಲು ತಾಮ್ರದಂತೆ ಕೆಂಪಾಗಿದ್ದವು. ಶ್ರೀರಾಮನ ರೂಪ ಬಹಳ ಪ್ರಿಯವಾಗಿತ್ತು, ಆದರೆ ಶೂರ್ಪಣಖಿಯ ರೂಪ ಬೀಭತ್ಸ, ವಿಕರಾಳವಾಗಿತ್ತು. ಶ್ರೀರಾಘವೇಂದ್ರನ ಸ್ವರ ಮಧುರವಾಗಿದ್ದರೆ, ರಾಕ್ಷಸಿ ಭೈರವನಾದ ಮಾಡುವವಳಾಗಿದ್ದಳು.॥9-10॥
ಮೂಲಮ್ - 11
ತರುಣಂ ದಾರುಣಾ ವೃದ್ಧಾ ದಕ್ಷಿಣಂ ವಾಮಭಾಷಿಣೀ ।
ನ್ಯಾಯವೃತ್ತಂ ಸುದುರ್ವೃತ್ತಾ ಪ್ರಿಯಮಪ್ರಿಯದರ್ಶನಾ॥
ಅನುವಾದ
ಶ್ರೀರಾಮನು ನೋಡಲು ಸೌಮ್ಯ ಮತ್ತು ನಿತ್ಯ ನವತರುಣನಾಗಿದ್ದನು, ಆದರೆ ನಿಶಾಚರಿಯು ಕ್ರೂರಳು ಮತ್ತು ಸಾವಿರಾರು ವರ್ಷದ ಮುದುಕಿಯಾಗಿದ್ದಳು. ಇವನು ಸರಳವಾಗಿ ಮಾತಾಡುವವನು ಹಾಗೂ ಉದಾರನಾಗಿದ್ದನು, ಆದರೆ ಆಕೆಯ ಮಾತುಗಳಲ್ಲಿ ಕುಟಿಲತೆ ತುಂಬಿತ್ತು. ಇವನು ನ್ಯಾಯೋಚಿತ ಸದಾಚಾರವನ್ನು ಪಾಲಿಸುತ್ತಿದ್ದರೆ ಅವಳು ಅತ್ಯಂತ ದುರಾಚಾರಿಣಿಯಾಗಿದ್ದಳು. ಶ್ರೀರಾಮನು ಪ್ರಿಯ ದರ್ಶನನಾಗಿದ್ದರೆ, ಅವಳು ಘೃಣಾಸ್ಪದಳಾಗಿದ್ದಳು.॥11॥
ಮೂಲಮ್ - 12
ಶರೀರಜಸಮಾವಿಷ್ಟಾ ರಾಕ್ಷಸೀ ರಾಮಮಬ್ರವೀತ್ ।
ಜಟೀ ತಾಪಸವೇಷೇಣ ಸಭಾರ್ಯಃ ಶರಚಾಪಧೃಕ್ ॥
ಮೂಲಮ್ - 13
ಆಗತಸ್ತ್ವಮಿಮಂ ದೇಶಂ ಕಥಂ ರಾಕ್ಷಸಸೇವಿತಮ್ ।
ಕಿಮಾಗಮನಕೃತ್ಯಂ ತೇ ತತ್ತ್ವಮಾಖ್ಯಾತುಮರ್ಹಸಿ ॥
ಅನುವಾದ
ಆ ರಾಕ್ಷಸಿಯು ಕಾಮಭಾವದಿಂದ ಅವಿಷ್ಟಳಾಗಿ (ಮನೋಹರ ರೂಪವನ್ನಾಂತು) ಶ್ರೀರಾಮನ ಬಳಿಗೆ ಬಂದು, ಹೇಳಿದಳು-ತಪಸ್ವಿಯ ವೇಷದಲ್ಲಿ ತಲೆಯಲ್ಲಿ ಜಟೆಯನ್ನು ಧರಿಸಿ, ಜೊತೆಗೆ ಸ್ತ್ರೀಯನ್ನು ಇಟ್ಟುಕೊಂಡು ಕೈಯಲ್ಲಿ ಧನುರ್ಬಾಣಗಳನ್ನು ಎತ್ತಿಕೊಂಡು, ಈ ರಾಕ್ಷಸರ ದೇಶದಲ್ಲಿ ಬಂದಿರುವ ನೀನು ಯಾರು? ಇಲ್ಲಿಗೆ ನಿನ್ನ ಆಗಮನದ ಪ್ರಯೋಜನವೇನು? ಇದೆಲ್ಲವನ್ನು ಸರಿಯಾಗಿ ನನಗೆ ತಿಳಿಸ.॥12-13॥
ಮೂಲಮ್ - 14
ಏವಮುಕ್ತಸ್ತು ರಾಕ್ಷಸ್ಯಾ ಶೂರ್ಪಣಖ್ಯಾ ಪರಂತಪಃ ।
ಋಜುಬುದ್ಧಿ ತಯಾ ಸರ್ವಮಾಖ್ಯಾತುಮುಪಚಕ್ರಮೇ ॥
ಅನುವಾದ
ರಾಕ್ಷಸಿ ಶೂರ್ಪಣಿಖಿಯು ಹೀಗೆ ಹೇಳಿದಾಗ ಪರಂತಪ ಶ್ರೀರಾಮನು ತನ್ನ ಸರಳ ಸ್ವಭಾವದಿಂದಾಗಿ ಎಲ್ಲವನ್ನು ತಿಳಿಸಲು ಪ್ರಾರಂಭಿಸಿದನು.॥14॥
ಮೂಲಮ್ - 15
ಆಸೀದ್ದಶರಥೋ ನಾಮ ರಾಜಾ ತ್ರಿದಶವಿಕ್ರಮಃ ।
ತಸ್ಯಾಹಮಗ್ರಜಃ ಪುತ್ರೋ ರಾಮೋ ನಾಮ ಜನೈಃ ಶ್ರುತಃ ॥
ಅನುವಾದ
ದೇವಿ! ದಶರಥನೆಂಬ ಒಬ್ಬ ಪ್ರಸಿದ್ಧ ಚಕ್ರವರ್ತಿಯಾಗಿ ಹೋಗಿರುವರು, ಅವರು ದೇವತೆಗಳಂತೆ ಪರಾಕ್ರಮಿಯಾಗಿದ್ದರು. ನಾನು ಅವರ ಜೇಷ್ಠಪುತ್ರನಾಗಿದ್ದು, ಲೋಕದಲ್ಲಿ ರಾಮ ಎಂಬ ಹೆಸರಿನಿಂದ ವಿಖ್ಯಾತನಾಗಿದ್ದೇನೆ.॥15॥
ಮೂಲಮ್ - 16
ಭ್ರಾತಾಯಂ ಲಕ್ಷ್ಮಣೋ ನಾಮ ಯವೀಯಾನ್ ಮಾಮನುವ್ರತಃ ।
ಇಯಂ ಭಾರ್ಯಾ ಚ ವೈದೀಹೀ ಮಮ ಸೀತೇತಿ ವಿಶ್ರುತಾ ॥
ಅನುವಾದ
ಇವನು ನನ್ನ ತಮ್ಮನು ಲಕ್ಷ್ಮಣನಾಗಿದ್ದಾನೆ, ಅವನು ಸದಾ ನನ್ನ ಆಜ್ಞೆಗೆ ಅಧೀನನಾಗಿ ಇರುತ್ತಾನೆ. ಇವಳು ನನ್ನ ಪತ್ನೀ, ವಿದೇಹ ರಾಜಾ ಜನಕನ ಪುತ್ರೀ ಸೀತಾ ಎಂಬ ಹೆಸರಿನಿಂದ ಪ್ರಸಿದ್ಧಳಾಗಿದ್ದಾಳೆ.॥16॥
ಮೂಲಮ್ - 17
ನಿಯೋಗಾತ್ತು ನರೇಂದ್ರಸ್ಯ ಪಿತುರ್ಮಾತುಶ್ಚ ಯಂತ್ರಿತಃ ।
ಧರ್ಮಾರ್ಥಂ ಧರ್ಮಕಾಂಕ್ಷೀ ಚ ವನಂ ವಸ್ತುಮಿಹಾಗತಃ ॥
ಅನುವಾದ
ನನ್ನ ಪಿತಾ ದಶರಥ ಮಹಾರಾಜರ ಮತ್ತು ಮಾತೆ ಕೈಕೇಯಿಯ ಆಜ್ಞೆಯಂತೆ ನಾನು ಧರ್ಮಪಾಲನೆಯ ಇಚ್ಛೆಯಿಂದ ಧರ್ಮರಕ್ಷಣೆಯ ಉದ್ದೇಶದಿಂದ ಈ ವನವಾಸಕ್ಕಾಗಿ ಇಲ್ಲಿಗೆ ಬಂದಿರುವೆನು.॥17॥
ಮೂಲಮ್ - 18½
ತ್ವಾಂ ತು ವೇದಿತುಮಿಚ್ಛಾಮಿ ಕಸ್ಯ ತ್ವಂ ಕಾಸಿ ಕಸ್ಯ ವಾ ।
ತ್ವಂ ಹಿ ತಾವನ್ಮನೋಜ್ಞಾಂಗೀ ರಾಕ್ಷಸೀ ಪ್ರತಿಭಾಸಿ ಮೇ ॥
ಇಹ ವಾ ಕಿಂನಿಮಿತ್ತಂ ತ್ವಮಾಗತಾ ಬ್ರೂಹಿ ತತ್ತ್ವತಃ ।
ಅನುವಾದ
ಈಗ ನಾನು ನಿನ್ನ ಪರಿಚಯ ಪಡೆಯಲು ಬಯಸುತ್ತೇನೆ. ನೀನು ಯಾರ ಮಗಳು? ನಿನ್ನ ಹೆಸರೇನು? ನೀನು ಯಾರ ಪತ್ನಿಯಾಗಿರುವೆ? ನಿನ್ನ ಇಷ್ಟು ಮನೋಹರ ರೂಪವನ್ನು ನೋಡಿದರೆ ನೀನು ಕಾಮರೂಪಿಯಾದವಳೋ ರಾಕ್ಷಸಿಯಂತೆ ಕಾಣುತ್ತಿರುವೆ. ಇಲ್ಲಿಗೆ ಏಕೆ ಬಂದಿರುವೆ? ಎಲ್ಲವನ್ನು ಸರಿಯಾಗಿ ತಿಳಿಸ.॥18½॥
ಮೂಲಮ್ - 19
ಸಾಬ್ರವೀದ್ವಚನಂ ಶ್ರುತ್ವಾ ರಾಕ್ಷಸೀ ಮದನಾರ್ದಿತಾ ॥
ಮೂಲಮ್ - 20
ಶ್ರೂಯತಾಂ ರಾಮ ತತ್ತ್ವಾರ್ಥಂ ವಕ್ಷ್ಯಾಮಿ ವಚನಂ ಮಮ ।
ಅಹಂ ಶೂರ್ಪಣಖಾ ನಾಮ ರಾಕ್ಷಸೀ ಕಾಮರೂಪಿಣೀ ॥
ಅನುವಾದ
ಶ್ರೀರಾಮಚಂದ್ರನ ಮಾತನ್ನು ಕೇಳಿ ಆ ರಾಕ್ಷಸಿಯು ಕಾಮಪೀಡಿತಳಾಗಿ ಹೇಳಿದಳು - ಶ್ರೀರಾಮಾ! ನಾನು ಎಲ್ಲವನ್ನೂ ಸರಿಯಾಗಿ ತಿಳಿಸುವೆನು, ನೀನು ನನ್ನ ಮಾತನ್ನು ಕೇಳು. ನನ್ನ ಹೆಸರು ಶೂರ್ಪಣಖಿ ಎಂದಿದೆ ಮತ್ತು ನಾನು ಇಚ್ಛಾನುಸಾರ ರೂಪವನ್ನು ಧರಿಸುವ ರಾಕ್ಷಸಿಯಾಗಿದ್ದೇನೆ.॥19-20॥
ಮೂಲಮ್ - 21
ಅರಣ್ಯಂ ವಿಚರಾಮೀದಮೇಕಾ ಸರ್ವಭಯಂಕರಾ ।
ರಾವಣೋ ನಾಮ ಮೇ ಭ್ರಾತಾ ಯದಿ ತೇ ಶ್ರೋತ್ರಮಾಗತಃ ॥
ಅನುವಾದ
ನಾನು ಸಮಸ್ತ ಪ್ರಾಣಿಗಳಿಗೆ ಭಯವನ್ನುಂಟುಮಾಡುತ್ತಾ ಈ ವನದಲ್ಲಿ ಏಕಾಂಗಿಯಾಗಿ ತಿರುಗುತ್ತಾ ಇರುತ್ತೇನೆ. ನನ್ನ ಅಣ್ಣನ ಹೆಸರು ರಾವಣ ಎಂದಾಗಿದೆ. ಅವನ ಹೆಸರು ನಿನ್ನ ಕಿವಿಗೂ ಬಿದ್ದಿರಬಹುದು.॥21॥
ಮೂಲಮ್ - 22
ವೀರೋ ವಿಶ್ರವಸಃ ಪುತ್ರೋ ಯದಿ ತೇ ಶ್ರೋತ್ರಮಾಗತಃ ।
ಪ್ರವೃದ್ಧ ನಿದ್ರಶ್ಚ ಸದಾ ಕುಂಭಕರ್ಣೋ ಮಹಾಬಲಃ ॥
ಅನುವಾದ
ರಾವಣನು ವಿಶ್ರವಸ್ಸು ಮುನಿಯ ವೀರ ಪುತ್ರನಾಗಿದ್ದಾನೆ, ಇದನ್ನು ನೀನು ಕೇಳಿರಬಹುದು. ನನ್ನ ಇನ್ನೊಬ್ಬ ಅಣ್ಣ ಮಹಾಬಲಿ ಕುಂಭಕರ್ಣನು, ಅವನು ಸದಾ ನಿದ್ದೆ ಮಾಡುತ್ತಾ ಇರುತ್ತಾನೆ.॥22॥
ಮೂಲಮ್ - 23
ವಿಭೀಷಣಸ್ತು ಧರ್ಮಾತ್ಮಾ ನ ತು ರಾಕ್ಷಸಚೇಷ್ಟಿತಃ ।
ಪ್ರಖ್ಯಾತವೀರ್ಯೌ ಚ ರಣೇ ಭ್ರಾತರೌ ಖರದೂಷಣೌ ॥
ಅನುವಾದ
ನನ್ನ ಮೂರನೆಯ ಸಹೋದರನ ಹೆಸರು ವಿಭೀಷಣ, ಆದರೆ ಅವನು ಧರ್ಮಾತ್ಮಾ ಆಗಿದ್ದಾನೆ. ರಾಕ್ಷಸರ ವಿಚಾರ-ಆಚಾರಗಳನ್ನು ಅವನು ಎಂದೂ ಪಾಲಿಸುವುದಿಲ್ಲ. ಯುದ್ಧದಲ್ಲಿ ವಿಖ್ಯಾತ ಪರಾಕ್ರಮವುಳ್ಳ ಖರ-ದೂಷನರೂ ನನ್ನ ಸಹಭವರಾಗಿದ್ದಾರೆ.॥23॥
ಮೂಲಮ್ - 24
ತಾನಹಂ ಸಮತಿಕ್ರಾಂತಾಂ ರಾಮ ತ್ವಾ ಪೂರ್ವದರ್ಶನಾತ್ ।
ಸಮುಪೇತಾಸ್ಮಿ ಭಾವೇನ ಭರ್ತಾರಂ ಪುರುಷೋತ್ತಮಮ್ ॥
ಅನುವಾದ
ಶ್ರೀರಾಮ! ನಾನು ಆ ಎಲ್ಲ ಸಹೋದರರಿಗಿಂತ ಬಲ-ಪರಾಕ್ರಮದಲ್ಲಿ ಮಿಗಿಲಾಗಿದ್ದೇನೆ. ನಿನ್ನ ಪ್ರಥಮ ದರ್ಶನದಲ್ಲೇ ನನ್ನ ಮನಸ್ಸು ನಿನ್ನಲ್ಲಿ ಆಸಕ್ತವಾಗಿದೆ. (ಅಥವಾ ನಿನ್ನ ರೂಪ ಸೌಂದರ್ಯ ಅಪೂರ್ವವಾಗಿದೆ. ಇಂದಿನಿಂದ ಮೊದಲು ಯಾವ ದೇವತೆಯಲ್ಲೂ ಇಂತಹ ರೂಪವನ್ನು ನಾನು ನೋಡಿಲ್ಲ. ಆದ್ದರಿಂದ ಈ ಅಪೂರ್ವರೂಪದ ದರ್ಶನದಿಂದ ನಾನು ನಿನ್ನ ಕುರಿತು ಆಕಷ್ಟನಾಗಿರುವೆನು.) ಈ ಕಾರಣದಿಂದಲೇ ನಾನು ನಿನ್ನಂತಹ ಪುರುಷೋತ್ತಮನಲ್ಲಿ ಪತಿಭಾವವಿರಿಸಿ ತುಂಬಾ ಪ್ರೇಮದಿಂದ ಬಳಿಗೆ ಬಂದಿರುವೆನು.॥24॥
ಮೂಲಮ್ - 25
ಅಹಂ ಪ್ರಭಾವಸಂಪನ್ನಾ ಸ್ವಚ್ಛಂದಬಲಗಾಮಿನೀ ।
ಚಿರಾಯ ಭವ ಭರ್ತಾ ಮೇ ಸೀತಯಾ ಕಿಂ ಕರಿಷ್ಯಸಿ ॥
ಅನುವಾದ
ನಾನು ಪ್ರಭಾವ, ಅನುರಾಗ-ಮಹಾಬಲ ಪರಾಕ್ರಮಗಳಿಂದ ಸಂಪನ್ನನಾಗಿರುವೆನು ನನ್ನ ಇಚ್ಛಾಶಕ್ತಿಯಿಂದ ಸಮಸ್ತ ಲೋಕಗಳಲ್ಲಿ ಸಂಚರಿಸುತ್ತಾ ಇರುತ್ತೇನೆ ಆದ್ದರಿಂದ ಈಗ ನೀನು ದೀರ್ಘ ಕಾಲದವರೆಗೆ ನನ್ನ ಪತಿಯಾಗು ಈ ಅಬಲೆ ಸೀತೆಯನ್ನು ಕಟ್ಟಿಕೊಂಡು ಏನು ಮಾಡುವೆ.॥25॥
ಮೂಲಮ್ - 26
ವಿಕೃತಾ ಚ ವಿರೂಪಾ ಚ ನ ಸೇಯಂ ಸದೃಶೀ ತವ ।
ಅಹಮೇವಾನುರೂಪಾ ತೇ ಭಾರ್ಯಾರೂಪೇಣ ಪಶ್ಯ ಮಾಮ್ ॥
ಅನುವಾದ
ಇವಳು ವಿಕಾರಯುಕ್ತ ಕುರೂಪಿಯಾಗಿದ್ದಾಳೆ, ಆದ್ದರಿಂದ ನಿನಗೆ ಯೋಗ್ಯಳಲ್ಲ. ನಾನೇ ನಿನಗೆ ಅನುರೂಪಳಾಗಿದ್ದೇನೆ, ಆದ್ದರಿಂದ ನೀನು ನನ್ನನ್ನು ಭಾರ್ಯೆಯಾಗಿ ನೋಡ.॥26॥
ಮೂಲಮ್ - 27
ಇಮಾಂ ವಿರೂಪಾಮಸತೀಂ ಕರಾಲಾಂ ನಿರ್ಣತೋದರೀಮ್ ।
ಅನೇನ ಸಹ ತೇ ಭ್ರಾತ್ರಾ ಭಕ್ಷಯಿಷ್ಯಾಮಿ ಮಾನುಷೀಮ್ ॥
ಅನುವಾದ
ಈ ಸೀತೆಯು ನನ್ನ ದೃಷ್ಟಿಯಲ್ಲಿ ಕುರೂಪೀ, ಸತೀತ್ವದಿಂದ ಭ್ರಷ್ಟಳೂ, ವಿಕತಳೂ, ಕೃಶೋದರಿಯೂ, ಮಾನವಿಯೂ ಆಗಿರುವಳು. ನಾನು ಈಕೆಯನ್ನು ನಿನ್ನ ಈ ತಮ್ಮನೊಂದಿಗೆ ತಿಂದುಹಾಕುವೆನು.॥27॥
ಮೂಲಮ್ - 28
ತತಃ ಪರ್ವತಶೃಂಗಾಣಿ ವನಾನಿ ವಿವಿಧಾನಿ ಚ ।
ಪಶ್ಯನ್ ಸಹ ಮಯಾಕಾಮೀ ದಂಡಕಾನ್ ವಿಚರಿಷ್ಯಸಿ ॥
ಅನುವಾದ
ಮತ್ತೆ ನೀನು ಕಾಮಭಾವದಿಂದ ಕೂಡಿ ನನ್ನೊಂದಿಗೆ ಪರ್ವತ ಶಿಖರಗಳಲ್ಲಿ, ನಾನಾ ರೀತಿಯ ವನಗಳ ಶೋಭೆಯನ್ನು ನೋಡುತ್ತಾ ದಂಡಕಾರಣ್ಯದಲ್ಲಿ ವಿಹರಿಸು.॥28॥
ಮೂಲಮ್ - 29
ಇತ್ಯೇವಮುಕ್ತಃ ಕಾಕುತ್ಸ್ಥಃ ಪ್ರಹಸ್ಯ ಮದಿರೇಕ್ಷಣಾಮ್ ।
ಇದಂ ವಚನಮಾರೇಭೇ ವಕ್ತುಂ ವಾಕ್ಯವಿಶಾರದಃ ॥
ಅನುವಾದ
ಶೂರ್ಪಣಖೆಯು ಹೀಗೆ ಹೇಳಿದಾಗ ವಾಕ್ಯವಿಶಾರದನಾದ ಕಕುತ್ಸ್ಥಕುಲಭೂಷಣ ಶ್ರೀರಾಮನು ಜೋರಾಗಿ ನಕ್ಕು ಮತ್ತೆ ಆ ಮದಭರಿತ ನೇತ್ರಗಳುಳ್ಳ ನಿಶಾಚರಿಯಲ್ಲಿ ಹೀಗೆ ಹೇಳಲು ಪ್ರಾರಂಭಿಸಿದನು.॥29॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹದಿನೇಳನೆಯ ಸರ್ಗ ಸಂಪೂರ್ಣವಾಯಿತು.॥17॥