वाचनम्
ಭಾಗಸೂಚನಾ
ಲಕ್ಷ್ಮಣನಿಂದ ಹೇಮಂತ ಋತುವಿನ ವರ್ಣನೆ, ಭರತನ ಪ್ರಶಂಸೆ, ಶ್ರೀರಾಮನು ಸೀತಾ-ಲಕ್ಷ್ಮಣರೊಡನೆ ಗೋದಾವರಿಯಲ್ಲಿ ಸ್ನಾನ ಮಾಡಿದುದು
ಮೂಲಮ್ - 1
ವಸತಸ್ತಸ್ಯ ತು ಸುಖಂ ರಾಘವಸ್ಯ ಮಹಾತ್ಮನಃ ।
ಶರದ್ವ್ಯಪಾಯೇ ಹೇಮಂತಋತುರಿಷ್ಟಃ ಪ್ರವರ್ತತ ॥
ಅನುವಾದ
ಮಹಾತ್ಮಾ ಶ್ರೀರಾಮನು ಆ ಆಶ್ರಮದಲ್ಲಿ ಇರುತ್ತಾ ಶರದೃತು ಕಳೆದುಹೋಗಿ, ಪ್ರಿಯ ಹೇಮಂತ ಪ್ರಾರಂಭವಾಯಿತು.॥1॥
ಮೂಲಮ್ - 2
ಸ ಕದಾಚಿತ್ಪ್ರಭಾತಾಯಾಂ ಶರ್ವರ್ಯಾಂ ರಘುನಂದನಃ ।
ಪ್ರಯಯಾವಭಿಷೇಕಾರ್ಥಂ ರಮ್ಯಾಂ ಗೋದಾವರೀಂ ನದೀಮ್ ॥
ಅನುವಾದ
ಒಂದು ದಿನ ಪ್ರಾತಃಕಾಲ ರಘುನಂದನ ಶ್ರೀರಾಮನು ಸ್ನಾನ ಮಾಡಲು ಪರಮ ರಮಣೀಯ ಗೋದಾವರಿ ನದೀ ತಿರಕ್ಕೆ ಹೋದನು.॥2॥
ಮೂಲಮ್ - 3
ಪ್ರಹ್ವಃ ಕಲಶಹಸ್ತಸ್ತು ಸೀತಯಾ ಸಹ ವೀರ್ಯವಾನ್ ।
ಪೃಷ್ಠ ತೋಽನುವ್ರಜನ್ ಭ್ರಾತಾ ಸೌಮಿತ್ರಿರಿದಮಬ್ರವೀತ್ ॥
ಅನುವಾದ
ಬಹಳ ವಿನೀತನೂ, ಪರಾಕ್ರಮಿಯೂ ಆಗಿದ್ದ ಅವನ ತಮ್ಮ ಲಕ್ಷ್ಮಣನೂ ಸೀತೆಯ ಜೊತೆ-ಜೊತೆಗೆ ಕೈಯಲ್ಲಿ ಬಿಂದಿಗೆಯನ್ನೆತ್ತಿಕೊಂಡು ಹೋಗುತ್ತಿರುವಾಗ, ಶ್ರೀರಾಮನಲ್ಲಿ ಹೀಗೆ ಹೇಳಿದನು.॥3॥
ಮೂಲಮ್ - 4
ಅಯಂ ಸ ಕಾಲಃ ಸಂಪ್ರಾಪ್ತಃ ಪ್ರಿಯೋ ಯಸ್ತೇ ಪ್ರಿಯಂವದ ।
ಅಲಂಕೃತ ಇವಾಭಾತಿ ಯೇನ ಸಂವತ್ಸರಃ ಶುಭಃ ॥
ಅನುವಾದ
ಪ್ರಿಯವಾಗಿ ಮಾತನಾಡುವ ಅಣ್ಣ! ನಿಮಗೆ ಹೆಚ್ಚು ಪ್ರಿಯವಾದ ಹೇಮಂತಕಾಲವು ಪ್ರಾಪ್ತವಾಗಿದೆ. ಅದರಿಂದ ಈ ಶುಭ ಸಂವತ್ಸರ ಅಲಂಕೃತವಾದಂತೆ ಕಂಡು ಬರುತ್ತಿದೆ.॥4॥
ಮೂಲಮ್ - 5
ನೀಹಾರಪರುಷೋ ಲೋಕಃಪೃಥಿವೀ ಸಸ್ಯಮಾಲಿನೀ ।
ಜಲಾನ್ಯನುಪಭೋಗ್ಯಾನಿ ಸುಭಗೋ ಹವ್ಯವಾಹನಃ ॥
ಅನುವಾದ
ಈ ಋತುವಿನಲ್ಲಿ ಹೆಚ್ಚು ಚಳಿ ಅಥವಾ ಮಂಜಿನಿಂದ ಜನರ ಶರೀರಗಳು ಒರಟಾಗುತ್ತವೆ. ಪಥ್ವಿಯು ಸಸ್ಯಶಾಲಿನಿಯಾಗಿ ನಳನಳಿಸುತ್ತದೆ. ನೀರು ಹೆಚ್ಚು ತಂಪಾಗಿರುವುದರಿಂದ ಅಷ್ಟಾಗಿ ಉಪಯೋಗಕ್ಕೆ ಬರುವುದಿಲ್ಲ. ಬೆಂಕಿಯು ಮಾತ್ರ ಎಲ್ಲರಿಗೆ ಪ್ರಿಯವಾಗಿರುತ್ತದೆ.॥5॥
ಮೂಲಮ್ - 6
ನವಾಗ್ರಯಣಪೂಜಾಭಿರಭ್ಯರ್ಚ್ಯ ಪಿತೃದೇವತಾಃ ।
ಕೃತಾಗ್ರಯಣಕಾಃ ಕಾಲೇ ಸಂತೋ ವಿಗತಕಲ್ಮಷಾಃ ॥
ಅನುವಾದ
ಈ ಹೇಮಂತ ಋತುವಿನಲ್ಲಿ ಸತ್ಪುರುಷರು ನವಾಗ್ರಯಣ (ಹೊಸಧಾನ್ಯದಿಂದ) ಪೂಜೆಯಿಂದ ಪಿತೃಗಳನ್ನೂ ದೇವತೆಗಳನ್ನೂ ತೃಪ್ತಿಪಡಿಸಿ ಪಾಪರಹಿತರಾಗುತ್ತಾರೆ.॥6॥
ಮೂಲಮ್ - 7
ಪ್ರಾಜ್ಯಕಾಮಾ ಜನಪದಾಃ ಸಂಪನ್ನತರಗೋರಸಾಃ ।
ವಿಚರಂತಿ ಮಹೀಪಾಲಾ ಯಾತ್ರಾರ್ಥಂ ವಿಜಿಗೀಷವಃ ॥
ಅನುವಾದ
ಈ ಋತುವಿನಲ್ಲಿ ಎಲ್ಲ ದೇವತೆಗಳ ಅನ್ನಪ್ರಾಪ್ತಿ ವಿಷಯಕ ಕಾಮನೆಗಳು ಸಾಕಷ್ಟು ಪೂರ್ಣವಾಗುತ್ತವೆ. ಹಾಲು-ಮೊಸರು-ಬೆಣ್ಣೆ-ತುಪ್ಪಗಳು ಸಮೃದ್ಧವಾಗುತ್ತವೆ. ವಿಜಯದ ಇಚ್ಛೆಯುಳ್ಳ ರಾಜರು ಯುದ್ಧಕ್ಕಾಗಿ ಸಂಚರಿಸುತ್ತಿರುತ್ತಾರೆ.॥7॥
ಮೂಲಮ್ - 8
ಸೇವಮಾನೇ ದೃಢಂ ಸೂರ್ಯೇ ದಿಶಮಂತಕ ಸೇವಿತಾಮ್ ।
ವಿಹೀನತಿಲಕೇವ ಸ್ತ್ರೀ ನೋತ್ತರಾ ದಿಕ್ಪ್ರಕಾಶತೇ ॥
ಅನುವಾದ
ಈ ಋತುಗಳಲ್ಲಿ ಸೂರ್ಯನು ಯಮನಿಗೆ ಸೇರಿದ ದಕ್ಷಿಣ ದಿಕ್ಕನ್ನು ದೃಢವಾಗಿ ಆಶ್ರಯಿಸುತ್ತಾನೆ. (ಆಗ ದಕ್ಷಿಣಾಯಣ ಇರುತ್ತದೆ.) ಹಣೆಯಲ್ಲಿ ತಿಲಕವಿಲ್ಲದ ಹೆಂಗಸಿನಂತೆ ಉತ್ತರ ದಿಕ್ಕು ಕಾಂತಿವಿಹೀನವಾಗಿದೆ.॥8॥
ಮೂಲಮ್ - 9
ಪ್ರಕೃತ್ಯಾ ಹಿಮಕೋಶಾಢ್ಯೋ ದೂರಸೂರ್ಯಶ್ಚ ಸಾಂಪ್ರತಮ್ ।
ಯಥಾರ್ಥನಾಮಾ ಸುವ್ಯಕ್ತಂ ಹಿಮವಾನ್ ಹಿಮವಾನ್ಗಿರಿಃ ॥
ಅನುವಾದ
ಸ್ವಭಾವದಿಂದಲೇ ಹಿಮಗಡ್ಡೆಗಳಿಂದ ಸಮೃದ್ಧವಾಗಿರುವ ಹಿಮವಂತನು ದಕ್ಷಿಣಾಯನದಲ್ಲಿ ಸೂರ್ಯನು ಬಹಳ ದೂರದಲ್ಲಿರುವುದರಿಂದ ಅನ್ವರ್ಥ ನಾಮವನ್ನೇ ಹೊಂದಿರುವನೆಂಬುದು ಸ್ಪಷ್ಟವಾಗಿದೆ.॥9॥
ಮೂಲಮ್ - 10
ಅತ್ಯಂತ ಸುಖಸಂಚಾರಾಮಧ್ಯಾಹ್ನೇ ಸ್ಪರ್ಶತಃ ಸುಖಾಃ ।
ದಿವಸಾಃ ಸುಭಗಾದಿತ್ಯಾಶ್ಚಾಯಾಸಲಿಲದುರ್ಭಗಾಃ ॥
ಅನುವಾದ
ಮಧ್ಯಾಹ್ನಕಾಲದಲ್ಲಿ ಬಿಸಿಲಿನ ಸ್ಪರ್ಶವಾಗುವಾಗ ಹೇಮಂತದ ಸುಖಮಯ ಹಗಲು ತಿರುಗಾಡಲು ಯೋಗ್ಯವಾಗಿರುತ್ತದೆ. ಈ ದಿನಗಳಲ್ಲಿ ಸುಸೇವ್ಯವಾದದ್ದರಿಂದ ಸೂರ್ಯನು ಸೌಭಾಗ್ಯಶಾಲಿ ಅನಿಸುತ್ತದೆ ಮತ್ತು ಸೇವಿಸಲು ಯೋಗ್ಯವಾದ ನೆರಳು ಮತ್ತು ನೀರು ಅದಷ್ಟಹೀನವಾಗುತ್ತದೆ.॥10॥
ಮೂಲಮ್ - 11
ಮೃದುಸೂರ್ಯಾಃ ಸನೀಹಾರಾಃ ಪಟುಶೀತಾಃ ಸಮಾರುತಾಃ ।
ಶೂನ್ಯಾರಣ್ಯಾ ಹಿಮಧ್ವಸ್ತಾ ದಿವಸಾ ಭಾಂತಿ ಸಾಂಪ್ರತಮ್ ॥
ಅನುವಾದ
ಈ ದಿನಗಳಲ್ಲಿ ಸೂರ್ಯನ ಬಿಸಿಲಿನ ಸ್ಪರ್ಶವು ಕೋಮಲ (ಪ್ರಿಯ) ಅನಿಸುತ್ತದೆ. ಹಗಲು ಹಿಮಾಚ್ಛಾದಿತವಾಗಿರುತ್ತದೆ, ಪ್ರಬಲವಾದ ಚಳಿಯಿಂದ ಕೂಡಿರುತ್ತವೆ. ಜೊತೆಗೆ ಶೀತಗಾಳಿಯೂ ಬೀಸುತ್ತಿರುತ್ತದೆ. ಹಿಮದಿಂದ ಎಲೆಗಳು ಉದುರಿಹೋಗಿ ಅರಣ್ಯಗಳು ಶೂನ್ಯವಾಗಿ ತೋರುತ್ತವೆ ಹಾಗೂ ಹಿಮಸ್ಪರ್ಶದಿಂದ ಕಮಲಗಳು ಕರಗಿಹೋಗುತ್ತವೆ.॥11॥
ಮೂಲಮ್ - 12
ನಿವೃತ್ತಾಕಾಶಶಯನಾಃ ಪುಷ್ಯನೀತಾ ಹಿಮಾರುಣಾಃ ।
ಶೀತವೃದ್ಧತರಾಯಾಮಾ ಸ್ತ್ರಿಯಾಮಾ ಯಾಂತಿ ಸಾಂಪ್ರತಮ್ ॥
ಅನುವಾದ
ಈ ಹೇಮಂತ ಋತುವಿನಲ್ಲಿ ರಾತ್ರಿಗಳು ದೀರ್ಘವಾಗಿರುತ್ತದೆ. ಇದರಲ್ಲಿ ಚಳಿ ಹೆಚ್ಚಿರುತ್ತದೆ. ಬಯಲಿನಲ್ಲಿ ಯಾರೂ ಮಲಗುವುದಿಲ್ಲ. ಪೌಷಮಾಸದ ಈ ರಾತ್ರಿಗಳು ಮಂಜಿನಿಂದಾಗಿ ಮಂಕಾಗಿಹೋಗುತ್ತವೆ.॥12॥
ಮೂಲಮ್ - 13
ರವಿಸಂಕ್ರಾಂತಸೌಭಾಗ್ಯಸ್ತುಷಾರಾರುಣಮಂಡಲಃ ।
ನಿಃಶ್ವಾಸಾಂಧ ಇವಾದರ್ಶಶ್ಚಂದ್ರಮಾ ನ ಪ್ರಕಾಶತೇ ॥
ಅನುವಾದ
ಹೇಮಂತ ಕಾಲದಲ್ಲಿ ಚಂದ್ರನ ಸೌಭಾಗ್ಯ ಸೂರ್ಯನಲ್ಲಿ ಸೇರಿಹೋಗುತ್ತದೆ. ಚಂದ್ರನು ಹಿಮಕಣಗಳಿಂದ ಆವರಿಸಿ ಧೂಸರವಾಗಿ ಕಾಣುತ್ತಾನೆ. ಆದ್ದರಿಂದ ಚಂದ್ರನು ಉಸುರಿನಿಂದ ಮಸುಕಾದ ಕನ್ನಡಿಯಂತೆ ಪ್ರಕಾಶಿಸುವುದಿಲ್ಲ.॥13॥
ಮೂಲಮ್ - 14
ಜ್ಯೋತ್ಸ್ನಾ ತುಷಾರಮಲಿನಾ ಪೌರ್ಣಮಾಸ್ಯಾಂ ನ ರಾಜತೇ ।
ಸೀತೇವ ಚಾತಪಶ್ಯಾಮಾ ಲಕ್ಷ್ಯತೇ ನ ಚ ಶೋಭತೇ ॥
ಅನುವಾದ
ಈ ದಿನಗಳಲ್ಲಿ ಪೂರ್ಣಿಮೆಯ ಬೆಳದಿಂಗಳ ರಾತ್ರಿಯು ಮಂಜುಬಿಂದುಗಳಿಂದ ಮಲಿನವಾಗಿ ಕಾಣುತ್ತದೆ, ಪ್ರಕಾಶಿತವಾಗುವುದಿಲ್ಲ. ಸೀತೆಯು ಹೆಚ್ಚುಬಿಸಿಲಿನಿಂದ ಶ್ಯಾಮಲವಾಗಿ ಕಾಣುವಂತೆ, ಹಿಂದಿನಂತೆ ಶೋಭಿಸುವುದಿಲ್ಲ.॥14॥
ಮೂಲಮ್ - 15
ಪ್ರಕೃತ್ಯಾ ಶೀತಲಸ್ಪರ್ಶೋ ಹಿಮವಿದ್ಧಶ್ಚ ಸಾಂಪ್ರತಮ್ ।
ಪ್ರವಾತಿ ಪಶ್ಚಿಮೋವಾಯುಃ ಕಾಲೇ ದ್ವಿಗುಣಶೀತಲಃ ॥
ಅನುವಾದ
ಸ್ವಾಭಾವಿಕವಾಗಿಯೇ ಶೀತಲ ಸ್ಪರ್ಶವಾಗುವ ಗಾಳಿಯು ಈ ಸಮಯ ಹಿಮದ ಬಡಿತದಿಂದ ಎರಡುಪಟ್ಟು ಶೀತಲವಾಗಿ ವೇಗದಿಂದ ಬೀಸುತ್ತಾ ಇರುತ್ತದೆ.॥15॥
ಮೂಲಮ್ - 16
ಬಾಷ್ಪಚ್ಛನ್ನಾನ್ಯರಣ್ಯಾನಿ ಯವಗೋಧೂಮವಂತಿ ಚ ।
ಶೋಭಂತೇಽಭ್ಯುದಿತೇ ಸೂರ್ಯೇ ನದದ್ಭಿಃ ಕ್ರೌಂಚಸಾರಸೈಃ ॥
ಅನುವಾದ
ಯವ ಮತ್ತು ಗೋದಿಯ ಹೊಲಗಳಿಂದ ಕೂಡಿದ ಅನೇಕ ವನಗಳು ಮಂಜುಮುಸುಕಿದ್ದು, ಕ್ರೌಂಚ ಹಾಗೂ ಸಾರಸ ಪಕ್ಷಿಗಳು ಇವುಗಳಲ್ಲಿ ಕಲರವ ಮಾಡುತ್ತಾ ಇರುತ್ತದೆ. ಸೂರ್ಯೋದಯ ಕಾಲದಲ್ಲಿ ಈ ವನವು ಬಹಳ ಶೋಭಿಸುತ್ತಾ ಇದೆ.॥16॥
ಮೂಲಮ್ - 17
ಖರ್ಜೂರಪುಷ್ಪಾಕೃತಿಭಿಃ ಶಿರೋಭಿಃ ಪೂರ್ಣತಂಡುಲೈಃ ।
ಶೋಭಂತೇ ಕಿಂಚಿದಾಲಂಬಾಃ ಶಾಲಯಃ ಕನಕಪ್ರಭಾಃ ॥
ಅನುವಾದ
ಸುವರ್ಣಕಾಂತಿಯಿಂದ ಕೂಡಿರುವ ಮಾಗಿರುವ ಈ ಬತ್ತದ ಸಸಿಗಳು ಖರ್ಜೂರದ ಹೂವಿನ ಆಕಾರವುಳ್ಳ ಅಕ್ಕಿಯ ಕಾಳುಗಳಿಂದ ತುಂಬಿದ ಬತ್ತದ ತೆನೆಗಳನ್ನು ಶಿರಸ್ಸಿನಲ್ಲಿ ಧರಿಸಿ,ಅದರ ಭಾರದಿಂದ ಸ್ವಲ್ಪ ಬಾಗಿ ಬಹಳ ಶೋಭಿಸುತ್ತಿದ.॥17॥
ಮೂಲಮ್ - 18
ಮಯೂಖೈರುಪಸರ್ಪದ್ಭಿರ್ಹಿಮನೀಹಾರಸಂವೃತೈಃ ।
ದೂರಮಭ್ಯುದಿತಃ ಸೂರ್ಯಃ ಶಶಾಂಕ ಇವ ಲಕ್ಷ್ಯತೇ ॥
ಅನುವಾದ
ಮಂಜು ಮುಸುಕಿದ ಕಿರಣಗಳನ್ನು ಹೊರಸೂಸುತ್ತಾ ದೂರದಲ್ಲಿ ಉದಯಿಸುವ ಸೂರ್ಯನು ಚಂದ್ರನಂತೆ ಕಾಣುತ್ತಿದ್ದಾನೆ.॥18॥
ಮೂಲಮ್ - 19
ಅಗ್ರಾಹ್ಯವೀರ್ಯಃ ಪೂರ್ವಾಹ್ಣೇ ಮಧ್ಯಾಹ್ನೇ ಸ್ಪರ್ಶತಃ ಸುಖಃ ।
ಸಂರಕ್ತಃ ಕಿಂಚಿದಾಪಾಂಡುರಾತಪಃ ಶೋಭತೇ ಕ್ಷಿತೌ ॥
ಅನುವಾದ
ಆಗ ಹೆಚ್ಚು ಕೆಂಪು ಮತ್ತು ಸ್ವಲ್ಪ-ಸ್ವಲ್ಪ ಬಿಳಿ ಹಳದಿ ವರ್ಣದ ಬಿಸಿಲು ಭೂಮಿಯಲ್ಲಿ ಹರಡಿ ಶೋಭಿಸುತ್ತಿದೆ. ಬೆಳಿಗ್ಗೆ ಇದರ ಬಲ ತಿಳಿಯದಿದ್ದರೂ ಮಧ್ಯಾಹ್ನದ ಬಿಸಿಲಿನ ಸ್ಪರ್ಶದಿಂದ ಸುಖದ ಅನುಭವವಾಗುತ್ತದೆ.॥19॥
ಮೂಲಮ್ - 20
ಅವಶ್ಯಾಯನಿಪಾತೇನ ಕಿಂಚಿತ್ಪ್ರಕ್ಲಿನ್ನಶಾದ್ವಲಾ ।
ವನಾನಾಂ ಶೋಭತೇ ಭೂಮಿರ್ನಿವಿಷ್ಟ ತರುಮಾತಪಾ ॥
ಅನುವಾದ
ಮಂಜಿನ ಹನಿಗಳು ಬಿದ್ದಿದ್ದರಿಂದ ಇಲ್ಲಿಯ ಹುಲ್ಲು ಸ್ವಲ್ಪ ಒದ್ದೆಯಾದಂತೆ ಕಾಣುತ್ತದೆ. ಆ ವನ ಭೂಮಿಯ ನವೋದಿತ ಸೂರ್ಯನ ಬಿಸಿಲಿನ ಪ್ರವೇಶದಿಂದ ಅದ್ಭುತವಾಗಿ ಶೋಭಿಸುತ್ತದೆ.॥20॥
ಮೂಲಮ್ - 21
ಸ್ಪೃಶನ್ಸುವಿಪುಲಂ ಶೀತಮುದಕಂ ದ್ವಿರದಃ ಸುಖಮ್ ।
ಅತ್ಯಂತತೃಷಿತೋ ವನ್ಯಃ ಪ್ರತಿಸಂಹರತೇ ಕರಮ್ ॥
ಅನುವಾದ
ಈ ಕಾಡಾನೆಯು ಬಹಳ ಬಾಯಾರಿದ್ದು, ಸುಖವಾಗಿ ಬಾಯಾರಿಕೆಯನ್ನು ತಣಿಸಲು ಅತ್ಯಂತ ತಣ್ಣನೆಯ ನೀರನ್ನು ಸ್ಪರ್ಶಿಸುತ್ತಲೇ, ಅದರ ಕೊರೆತ ಅಸಹ್ಯವಾದ್ದರಿಂದ ಸೊಂಡಿಲನ್ನು ಹಿಂದಕ್ಕೆ ಎಳೆದುಕೊಳ್ಳುತ್ತದೆ.॥21॥
ಮೂಲಮ್ - 22
ಏತೇ ಹಿ ಸಮುಪಾಸೀನಾ ವಿಹಗಾ ಜಲಚಾರಿಣಃ ।
ನಾವಗಾಹಂತಿ ಸಲಿಲಮಪ್ರಗಲ್ಭಾ ಇವಾಹವಮ್ ॥
ಅನುವಾದ
ಹೇಡಿ ಮನುಷ್ಯನು ಹೆದರಿ ರಣರಂಗವನ್ನು ಪ್ರವೇಶಿಸುವುದಿಲ್ಲ. ಹಾಗೆಯೇ ಈ ಜಲಚರ ಪಕ್ಷಿಗಳು ನೀರಿನ ಹತ್ತಿರ ಕುಳಿತಿದ್ದರೂ, ನೀರಿಗೆ ಇಳಿಯುವುದಿಲ್ಲ.॥22॥
ಮೂಲಮ್ - 23
ಅವಶ್ಯಾಯತಮೋನದ್ಧಾ ನೀಹಾರತಮಸಾವೃತಾಃ ।
ಪ್ರಸುಪ್ತಾ ಇವ ಲಕ್ಷ್ಯಂತೇ ವಿಪುಷ್ಪಾ ವನರಾಜಯಃ ॥
ಅನುವಾದ
ರಾತ್ರಿಯಲ್ಲಿ ಮಂಜುಗಡ್ಡೆಗಳಿಂದ ಮತ್ತು ಅಂಧಕಾರದಿಂದ, ಪ್ರಾತಃಕಾಲ ಮಂಜಿನಿಂದ ಮುಚ್ಚಿಹೋದ ಈ ಪುಷ್ಪರಹಿತವಾದ ವನಶ್ರೇಣಿಯು ಮಲಗಿರುವಂತೆ ಕಾಣುತ್ತದೆ.॥23॥
ಮೂಲಮ್ - 24
ಬಾಷ್ಪ ಸಂಛನ್ನಸಲಿಲಾ ರುತವಿಜ್ಞೇಯಸಾರಸಾಃ ।
ಹಿಮಾರ್ದ್ರವಾಲುಕೈಸ್ತೀರೈಃ ಸರಿತೋ ಭಾಂತಿ ಸಾಂಪ್ರತಮ್ ॥
ಅನುವಾದ
ಈ ಸಮಯದಲ್ಲಿ ನದಿಗಳ ನೀರು ಹಬೆಯಿಂದ ಮುಚ್ಚಿಹೋಗಿದೆ ಇದರಲ್ಲಿ ವಿಹರಿಸುವ ಸಾರಸಗಳು ಕೇವಲ ಕಲರವದಿಂದಲೇ ಗುರುತಿಸಲಾಗುತ್ತದೆ. ನದಿಗಳ ತೀರ ಪ್ರದೇಶದಲ್ಲಿರುವ ಮರಳೂ ಕೂಡ ಹಿಮಬಿದ್ದು ಒದ್ದೆಯಾಗಿದೆ. ಈ ಹಿಮಗಾಲದಲ್ಲಿ ನದಿಯ ಸ್ವರೂಪವು ಹೀಗಿರುತ್ತದೆ.॥24॥
ಮೂಲಮ್ - 25
ತುಷಾರಪತನಾಚ್ಚೈವ ಮೃದುತ್ವಾದ್ ಭಾಸ್ಕರಸ್ಯ ಚ ।
ಶೈತ್ಯಾದಗಾಗ್ರಸ್ಥಮಪಿ ಪ್ರಾಯೇಣ ರಸವಜ್ಜಲಮ್ ॥
ಅನುವಾದ
ಹಿಮಪಾತದಿಂದಲೂ, ಸೂರ್ಯನ ಕಿರಣಗಳ ಸ್ಪರ್ಶದಿಂದಲೂ, ಚಳಿಯ ಕಾರಣದಿಂದಲೂ ಪರ್ವತ ಶಿಖರದಲ್ಲಿರುವ ನೀರು ಪ್ರಾಯಶಃ ಮಂಜುಗಡ್ಡೆಯೊಡನೆ ಬೆರೆತು ಪಾದರಸದಂತೆ ಥಳ ಥಳಿಸುತ್ತಿದೆ.॥25॥
ಮೂಲಮ್ - 26
ಜರಾಜರ್ಜರಿತೈಃ ಪತ್ರೈಃ ಶೀರ್ಣಕೇಸರಕರ್ಣಿಕೈಃ ।
ನಾಲಶೇಷಾಹಿಮಧ್ವಸ್ತಾ ನ ಭಾಂತಿ ಕಮಲಾಕರಾಃ ॥
ಮೂಲಮ್ - 27
ಅಸ್ಮಿಂಸ್ತು ಪುರುಷವ್ಯಾಘ್ರ ಕಾಲೇ ದುಃಖಸಮನ್ವಿತಃ ।
ತಪಶ್ಚರತಿ ಧರ್ಮಾತ್ಮಾ ತ್ವದ್ಭಕ್ತ್ಯಾ ಭರತಃ ಪುರೇ ॥
ಅನುವಾದ
ಈ ಹಿಮಗಾಲದಲ್ಲಿ ಕಮಲಗಳಿಗೆ ಆಕರವಾಗಿರುವ ಸರೋವರಗಳೂ ಸುಂದರವಾಗಿ ಕಾಣುತ್ತಿಲ್ಲ. ಏಕೆಂದರೆ ಈ ಸರೋವರಗಳು ಮುದಿಯಾಗಿ ಬಾಡಿಹೋಗಿರುವ ಕಮಲಗಳಿಂದ ಕೂಡಿವೆ. ಹಿಮಪಾತದಿಂದಾಗಿ ಕಮಲಗಳಲ್ಲಿರುವ ಎಸಳುಗಳೂ, ಬೀಜಕೋಶವೂ ಉದುರಿಹೋಗಿ ಕೇವಲ ದಂಟುಗಳು ಮಾತ್ರವೇ ಉಳಿದುಕೊಂಡಿವೆ.॥26-27॥
ಮೂಲಮ್ - 28
ತ್ಯಕ್ತ್ವಾ ರಾಜ್ಯಂ ಚ ಮಾನಂ ಚ ಭೋಗಾಂಶ್ಚ ವಿವಿಧಾನ್ಬಹೂನ್ ।
ತಪಸ್ವೀ ನಿಯತಾಹಾರಃ ಶೇತೇ ಶೀತೇ ಮಹೀತಲೇ ॥
ಅನುವಾದ
ಪುರುಷ ಸಿಂಹ ಶ್ರೀರಾಮಾ! ಈ ಸಮಯದಲ್ಲಿ ಧರ್ಮಾತ್ಮಾ ಭರತನು ನಿಮಗಾಗಿ ಬಹಳ ದುಃಖಿಯಾಗಿದ್ದಾನೆ ಹಾಗೂ ನಿನ್ನಲ್ಲೇ ಭಕ್ತಿಯನ್ನಿರಿಸುತ್ತಾ ನಗರದಲ್ಲೇ ಅಸಂಖ್ಯಭೋಗಗಳನ್ನು ಪರಿತ್ಯಾಗ ಮಾಡಿ ತಪಸ್ಸಿನಲ್ಲಿ ಸಂಲಗ್ನನಾಗಿದ್ದಾನೆ ಹಾಗೂ ನಿಯಮಿತ ಆಹಾರದಿಂದ ಈ ಶೀತಲ ನೆಲದಲ್ಲಿ ಹಾಸಿಗೆಯಿಲ್ಲದೆಯೇ ಮಲಗಿರುತ್ತಾನೆ.॥28॥
ಮೂಲಮ್ - 29
ಸೋಽಪಿ ವೇಲಾಮಿಮಾಂ ನೂನಮಭಿಷೇಕಾರ್ಥಮುದ್ಯತಃ ।
ವೃತಃ ಪ್ರಕೃತಿಭಿರ್ನಿತ್ಯಂ ಪ್ರಯಾತಿ ಸರಯೂಂ ನದೀಮ್ ॥
ಅನುವಾದ
ನಿಶ್ಚಯವಾಗಿ ಭರತನೂ ಈ ಸಮಯದಲ್ಲಿ ಸ್ನಾನಕ್ಕಾಗಿ ಉದ್ಯುಕ್ತನಾಗಿ ಮಂತ್ರಿ ಹಾಗೂ ಪ್ರಜಾಜನರೊಂದಿಗೆ ಪ್ರತಿದಿನ ಸರಯೂ ನದಿಯ ತೀರಕ್ಕೆ ಹೋಗುತ್ತಾ ಇರಬಹುದು.॥29॥
ಮೂಲಮ್ - 30
ಅತ್ಯಂತ ಸುಖ ಸಂವೃದ್ಧಃ ಸುಕುಮಾರೋ ಹಿಮಾರ್ದಿತಃ ।
ಕಥಂ ತ್ವಪರರಾತ್ರೇಷು ಸರಯೂಮವಗಾಹತೇ ॥
ಅನುವಾದ
ಅತ್ಯಂತ ಸುಖದಲ್ಲಿ ಬೆಳೆದಿರುವ ಸುಕುವಾರ ಭರತನು ಚಳಿಯ ಕಷ್ಟವನ್ನು ಸಹಿಸುತ್ತಾ ರಾತ್ರಿಯ ಮೂರನೆಯ ಜಾವದಲ್ಲಿ ಸರಯೂ ನದಿಯಲ್ಲಿ ಹೇಗೆ ಮುಳುಗುವನೊ.॥30॥
ಮೂಲಮ್ - 31
ಪದ್ಮಪತ್ರೇಕ್ಷಣಃ ಶ್ಯಾಮಃ ಶ್ರೀಮಾನ್ನಿರುದರೋ ಮಹಾನ್ ।
ಧಮಜ್ಞಃ ಸತ್ಯವಾದೀ ಚ ಹ್ರೀನಿಷೇಧೋ ಜಿತೇಂದ್ರಿಯಃ ॥
ಮೂಲಮ್ - 32
ಪ್ರಿಯಾಭಿಭಾಷೀ ಮಧುರೋ ದೀರ್ಘಬಾಹುರರಿಂದಮಃ ।
ಸಂತ್ಯಜ್ಯ ವಿವಿಧಾನ್ಸೌಖ್ಯಾನಾರ್ಯಂ ಸರ್ವಾತ್ಮನಾಶ್ರಿತಃ ॥
ಅನುವಾದ
ಕಮಲದಳದಂತೆ ಶೋಭಿಸುವ ನೇತ್ರವುಳ್ಳ, ಅಂಗಕಾಂತಿಯು ಶ್ಯಾಮಲವಾಗಿದ್ದು, ತೆಳುವಾದ ಉದರವುಳ್ಳ ಮಹಾನ್ ಧರ್ಮಜ್ಞ, ಸತ್ಯವಾದಿ, ಲಜ್ಜಾಶೀಲ, ಜಿತೇಂದ್ರಿಯ, ಪ್ರಿಯವಚನಗಳನ್ನಾಡುವ, ಮೃದು ಸ್ವಭಾವವುಳ್ಳ ಮಹಾಬಾಹು ಶತ್ರುದಮನ ಶ್ರೀಮಾನ್ ಭರತನು ನಾನಾ ವಿಧದ ಸುಖಗಳನ್ನು ತ್ಯಜಿಸಿ ಸರ್ವಥಾ ನಿನ್ನ ಆಶ್ರಯವನ್ನೇ ಪಡೆದಿರುವನು.॥31-32॥
ಮೂಲಮ್ - 33
ಜಿತಃ ಸ್ವರ್ಗಸ್ತವ ಭ್ರಾತ್ರಾ ಭರತೇನ ಮಹಾತ್ಮನಾ ।
ವನಸ್ಥಮಪಿ ತಾಪಸ್ಯೇ ಯಸ್ತ್ವಾಮನುವಿಧೀಯತೇ ॥
ಅನುವಾದ
ನಿನ್ನ ಸಹೋದರ ಮಹಾತ್ಮಾ ಭರತನು ನಿಶ್ಚಯವಾಗಿಯೇ ಸ್ವರ್ಗಲೋಕದ ಮೇಲೆ ವಿಜಯಪಡೆದಿರುವನು. ಏಕೆಂದರೆ ಅವನೂ ತಪಸ್ಸಿನಲ್ಲಿ ಸ್ಥಿತನಾಗಿ ನಿನ್ನ ವನವಾಸೀ ಜೀವನವನ್ನು ಅನುಸರಿಸುತ್ತಾ ಇರುವನು.॥33॥
ಮೂಲಮ್ - 34
ನ ಪಿತ್ರ್ಯಮನುವರ್ತಂತೇ ಮಾತೃಕಂ ದ್ವಿಪದಾ ಇತಿ ।
ಖ್ಯಾತೋ ಲೋಕಪ್ರವಾದೋಽಯಂ ಭರತೇನಾನ್ಯಥಾ ಕೃತಃ ॥
ಅನುವಾದ
ಮನುಷ್ಯನು ಪ್ರಾಯಶಃ ತಾಯಿಯ ಗುಣಗಳನ್ನೇ ಹೊಂದುತ್ತಾನೆ, ತಂದೆಯದಲ್ಲ. ಈ ಲೌಕಿಕ ಉಕ್ತಿಯನ್ನು ಭರತನು ತನ್ನ ವರ್ತನೆಯಿಂದ ಸುಳ್ಳಾಗಿ ಮಾಡಿರುವನು.॥34॥
ಮೂಲಮ್ - 35
ಭರ್ತಾ ದಶರಥೋ ಯಸ್ಯಾಃ ಸಾಧುಶ್ಚ ಭರತಃ ಸುತಃ ।
ಕಥಂ ನು ಸಾಂಬಾ ಕೈಕೇಯೀ ತಾದೃಶೀ ಕ್ರೂರದರ್ಶೀನೀ ॥
ಅನುವಾದ
ದಶರಥ ಮಹಾರಾಜನು ಯಾರ ಪತಿಯಾಗಿರುವರೋ, ಭರತನಂತಹ ಸಾಧುವಾದ ಪುತ್ರ ಯಾರ ಮಗನಾಗಿರುವನೋ, ಆ ಮಾತೆ ಕೈಕೇಯಿಯು ಕ್ರೂರದಷ್ಟಿಯುಳ್ಳವಳು ಹೇಗಾದಳು.॥35॥
ಮೂಲಮ್ - 36
ಇತ್ಯೇವಂ ಲಕ್ಷ್ಮಣೇ ವಾಕ್ಯಂ ಸ್ನೇಹಾದ್ ವದತಿ ಧಾರ್ಮಿಕೇ ।
ಪರಿವಾದಂ ಜನನ್ಯಾಸ್ತಮಸಹನ್ರಾಘವೋಽಬ್ರವೀತ್ ।।
ಅನುವಾದ
ಧರ್ಮಪರಾಯಣ ಲಕ್ಷ್ಮಣನು ಸ್ನೇಹವಶದಿಂದ ಹೀಗೆ ಹೇಳುತ್ತಿದ್ದಾಗ ಶ್ರೀರಾಮಚಂದ್ರನಿಂದ ಮಾತೆ ಕೈಕೆಯಿಯ ನಿಂದೆಯನ್ನು ಸಹಿಸಲಾಗಲಿಲ್ಲ. ಅವನು ಲಕ್ಷ್ಮಣನಲ್ಲಿ ಹೇಳೀದನು.॥36॥
ಮೂಲಮ್ - 37
ನ ತೇಂಽಬಾ ಮಧ್ಯಮಾ ತಾತ ಗರ್ಹಿತವ್ಯಾ ಕದಾಚನ ।
ತಾಮೇವೇಕ್ಷ್ವಾಕುನಾಥಸ್ಯ ಭರತಸ್ಯ ಕಥಾಂ ಕುರು ॥
ಅನುವಾದ
ತಮ್ಮಾ! ನೀನು ಮಾತೆ ಕೈಕೇಯಿಯನ್ನು ಎಂದೂ ನಿಂದಿಸಬಾರದು. (ಏನಾದರೂ ಹೇಳುವುದಿದ್ದರೆ) ಮೊದಲಿನಂತೆ ಇಕ್ಷಾಕ್ಷುವಂಶೀ ಭರತನ ಕುರಿತು ಮಾತನಾಡು.॥37॥
ಮೂಲಮ್ - 38
ನಿಶ್ಚಿತೈವ ಹಿ ಮೇ ಬುದ್ಧಿರ್ವನವಾಸೇ ದೃಢವ್ರತಾ ।
ಭರತಸ್ನೇಹಸಂತಪ್ತಾ ಬಾಲಿಶೀಕ್ರಿಯತೇ ಪುನಃ ॥
ಅನುವಾದ
ನನ್ನ ಬುದ್ಧಿಯು ದೃಢವಾಗಿ ವ್ರತವನ್ನು ಪಾಲಿಸುತ್ತಾ ವನದಲ್ಲೇ ಇರುವ ಅಚಲ ನಿಶ್ಚಯ ಮಾಡಿದ್ದರೂ ಭರತನ ಸ್ನೇಹದಿಂದ ಸಂತಪ್ತನಾಗಿ ಪುನಃ ಚಂಚಲವಾಗುತ್ತದೆ.॥38॥
ಮೂಲಮ್ - 39
ಸಂಸ್ಮರಾಮ್ಯಸ್ಯ ವಾಕ್ಯಾನಿಪ್ರಿಯಾಣಿ ಮಧುರಾಣಿ ಚ ।
ಹೃದ್ಯಾನ್ಯಮೃತಕಲ್ಪಾನಿ ಮನಃಪ್ರಹ್ಲಾದನಾನಿ ಚ ॥
ಅನುವಾದ
ಭರತನ ಪರಮಪ್ರಿಯ ಮಧುರ ಮನಸ್ಸನ್ನು ಸೂರೆಗೊಳ್ಳುವ ಅಮೃತದಂತೆ ಹೃದಯಕ್ಕೆ ಆಹ್ಲಾದವನ್ನುಂಟುಮಾಡುವ ಮಾತುಗಳು ನನಗೆ ನೆನಪಾಗುತ್ತಾ ಇದೆ.॥39॥
ಮೂಲಮ್ - 40
ಕದಾ ಹ್ಯಹಂ ಸಮೇಷ್ಯಾಮಿ ಭರತೇನ ಮಹಾತ್ಮನಾ ।
ಶತ್ರುಘ್ನೇನ ಚ ವೀರೇಣ ತ್ವಯಾ ಚ ರಘುನಂದನ ॥
ಅನುವಾದ
ರಘುಕುಲನಂದನ ಲಕ್ಷ್ಮಣ! ನಾನು ನಿನ್ನೊಂದಿಗೆ ಹೋಗಿ ಮಹಾತ್ಮಾ ಭರತ ಮತ್ತು ಶತ್ರುಘ್ನರನ್ನು ಎಂದು ಭೆಟ್ಟಿಯಾಗುವೆನೋ? ಆ ದಿನ ಎಂದು ಬರುವುದೊ.॥40॥
ಮೂಲಮ್ - 41
ಇತ್ಯೇವಂ ವಿಲಪಂಸ್ತತ್ರ ಪ್ರಾಪ್ಯ ಗೋದಾವರೀಂ ನದೀಮ್ ।
ಚಕ್ರೇಽಭಿಷೇಕಂ ಕಾಕುತ್ಸ್ಥಃ ಸಾನುಜಃ ಸಹ ಸೀತಯಾ ॥
ಅನುವಾದ
ಹೀಗೆ ವಿಲಾಪಿಸುತ್ತಾ ಕಕುತ್ಸ್ಥಕುಲಭೂಷಣ ಭಗವಾನ್ ಶ್ರೀರಾಮನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ಗೋದಾವರೀ ನದಿಗೆ ಹೋಗಿ ಸ್ನಾನ ಮಾಡಿದರು.॥41॥
ಮೂಲಮ್ - 42
ತರ್ಪಯಿತ್ವಾಥ ಸಲಿಲೈಸ್ತೈಃ ಪಿತೄನ್ ದೈವತಾನಪಿ ।
ಸ್ತುವಂತಿ ಸ್ಮೋದಿತಂ ಸೂರ್ಯಂ ದೇವತಾಶ್ಚ ತಥಾನಘಾಃ ॥
ಅನುವಾದ
ಅಲ್ಲಿ ಸ್ನಾನಮಾಡಿ ಅವರು ಗೋದಾವರಿಯ ನೀರಿನಿಂದ ದೇವತೆಗಳಿಗೆ ಮತ್ತು ಪಿತೃಗಳಿಗೆ ತರ್ಪಣ ಕೊಟ್ಟರು. ಅನಂತರ ಸೂರ್ಯೋದಯವಾದಾಗ ಆ ನಿಷ್ಪಾಪ ಮೂವರೂ ವ್ಯಕ್ತಿಗಳು ಭಗವಾನ್ ಸೂರ್ಯನ ಉಪಸ್ಥಾನ ಮಾಡಿ, ಇತರ ದೇವತೆಗಳನ್ನು ಸ್ತುತಿಸಿದರು.॥42॥
ಮೂಲಮ್ - 43
ಕೃತಾಭಿಷೇಕಃ ಸ ರರಾಜ ರಾಮಃ
ಸೀತಾದ್ವಿತೀಯಃ ಸಹ ಲಕ್ಷ್ಮಣೇನ ।
ಕೃತಾಭಿಷೇಕಸ್ತ್ವಗರಾಜಪುತ್ರ್ಯಾ
ರುದ್ರಃ ಸನಂದಿರ್ಭಗವಾನಿವೇಶಃ ॥
ಅನುವಾದ
ಪರ್ವತರಾಜ ಪುತ್ರಿ ಉಮೆ ಮತ್ತು ನಂದಿಯೊಂದಿಗೆ ಗಂಗೆಯಲ್ಲಿ ಸ್ನಾನಮಾಡಿದ ಭಗವಾನ್ ರುದ್ರನು ಶೋಭಿಸುವಂತೆ ಸೀತಾ ಮತ್ತು ಲಕ್ಷ್ಮಣರೊಂದಿಗೆ ಸ್ನಾನಮಾಡಿ ಭಗವಾನ್ ಶ್ರೀರಾಮನು ಶೋಭಿಸಿದನು.॥43॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹದಿನಾರನೆಯ ಸರ್ಗ ಸಂಪೂರ್ಣವಾಯಿತು.॥16॥