वाचनम्
ಭಾಗಸೂಚನಾ
ಪಂಚವಟಿಯ ರಮಣೀಯವಾದ ಪ್ರದೇಶವೊಂದರಲ್ಲಿ ಲಕ್ಷ್ಮಣನು ಶ್ರೀರಾಮನ ನಿರ್ದೇಶನದಂತೆ ಸುಂದರವಾದ ಪರ್ಣಶಾಲೆಯನ್ನು ನಿರ್ಮಿಸಿದುದು, ಅದರಲ್ಲಿ ಸೀತಾ-ರಾಮ-ಲಕ್ಷ್ಮಣರು ವಾಸಿಸಿದುದು
ಮೂಲಮ್ - 1
ತತಃ ಪಂಚವಟೀಂ ಗತ್ವಾ ನಾನಾ ವ್ಯಾಳಮೃಗಾಯುತಾಮ್ ।
ಉವಾಚ ಲಕ್ಷ್ಮಣಂ ರಾಮೋ ಭ್ರಾತರಂ ದೀಪ್ತತೇಜಸಮ್ ॥
ಅನುವಾದ
ನಾನಾ ಪ್ರಕಾರದ ಸರ್ಪಗಳು, ಹಿಂಸಕ ಜಂತುಗಳಿಂದ ಮತ್ತು ಮೃಗಗಳಿಂದ ತುಂಬಿದ ಪಂಚವಟಿಯನ್ನು ಸೇರಿ ಶ್ರೀರಾಮನು ಪ್ರದೀಪ್ತವಾದ ತೇಜಸ್ಸುಳ್ಳ ಲಕ್ಷ್ಮಣನಲ್ಲಿ ಹೇಳಿದನು.॥1॥
ಮೂಲಮ್ - 2
ಆಗತಾಃ ಸ್ಮ ಯಥೋದ್ದಿಷ್ಟಂ ಯಂ ದೇಶಂ ಮುನಿರಬ್ರವೀತ್ ।
ಅಯಂ ಪಂಚವಟೀದೇಶಃ ಸೌಮ್ಯ ಪುಷ್ಪಿತಕಾನನಃ ॥
ಅನುವಾದ
ಸೌಮ್ಯ! ಮುನಿವರ್ಯ ಅಗಸ್ತ್ಯರು ನಮಗೆ ಹೇಳಿದ ಸ್ಥಾನಕ್ಕೆ ನಾವು ಬಂದಂತಿದೆ. ಇದೇ ಪಂಚವಟಿಯ ಪ್ರದೇಶವಾಗಿದೆ. ಇಲ್ಲಿಯ ವನಪ್ರದೇಶವು ಪುಷ್ಪಗಳಿಂದ ಹೇಗೆ ಶೋಭಿಸುತ್ತಿದೆ ನೋಡು.॥2॥
ಮೂಲಮ್ - 3
ಸರ್ವತಶ್ಚಾರ್ಯತಾಂ ದೃಷ್ಟಿಃ ಕಾನನೇ ನಿಪುಣೋ ಹ್ಯಸಿ ।
ಆಶ್ರಮಃ ಕತರಸ್ಮಿನ್ನೋ ದೇಶೇ ಭವತಿ ಸಮ್ಮತಃ ॥
ಅನುವಾದ
ಲಕ್ಷ್ಮಣ! ನೀನು ಈ ವನದಲ್ಲಿ ಸುತ್ತಲು ಕಣ್ಣಾಡಿಸು. ಯಾವ ಸ್ಥಾನದಲ್ಲಿ ಆಶ್ರಮವನ್ನು ರಚಿಸುವುದು ನಮಗೆ ಒಳ್ಳೆಯದಾಗಬಹುದು ಎಂದು ನಿಶ್ಚಯಿಸು. ನೀನು ಈ ಕಾರ್ಯದಲ್ಲಿ ನಿಪುಣನಾಗಿರುವೆ.॥3॥
ಮೂಲಮ್ - 4
ರಮತೇ ಯತ್ರ ವೈದೇಹೀ ತ್ವಮಹಂ ಚೈವ ಲಕ್ಷ್ಮಣ ।
ತಾದೃಶೋ ದೃಶ್ಯತಾಂ ದೇಶಃ ಸಂನಿಕೃಷ್ಟಜಲಾಶಯಃ॥
ಮೂಲಮ್ - 5
ವನರಾಮಣ್ಯಕಂ ಯತ್ರ ಜಲರಾಮಣ್ಯಕಂ ತಥಾ ।
ಸಂನಿಕೃಷ್ಟಂ ಚ ಯಸ್ಮಿಂಸ್ತು ಪಮಿತ್ಪುಷ್ಪಕುಶೋದಕಮ್ ॥
ಅನುವಾದ
ಜಲಾಶಯವು ಹತ್ತಿರ ಇರುವುದೋ, ವಿದೇಹಕುಮಾರಿ ಸೀತೆಯು ಮನಸ್ಸಿಗೆ ಹರ್ಷವಾಗಬಹುದೋ, ನೀನು ಮತ್ತು ನಾನು ಸಂತೋಷವಾಗಿ ಇರಬಲ್ಲೆವೋ, ವನ ಮತ್ತು ಜಲ ಎರಡರ ದಶ್ಯವು ರಮಣೀಯವಾಗಿರುವುದೋ, ಹತ್ತಿರದಲ್ಲೇ ಸಮಿಧೆ, ಹೂವು, ಕುಶ, ಜಲ ಇವುಗಳ ಸೌಲಭ್ಯವಿರುವುದೋ ಅಂತಹ ಸ್ಥಾನವನ್ನು ಹುಡುಕು.॥4-5॥
ಮೂಲಮ್ - 6
ಏವಮುಕ್ತಸ್ತು ರಾಮೇಣ ಲಕ್ಷ್ಮಣಃ ಸಂಯುತಾಂಜಲಿಃ ।
ಸೀತಾಸಮಕ್ಷಂ ಕಾಕುತ್ಸ್ಥಮಿದಂ ವಚನಮಬ್ರವೀತ್ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಲಕ್ಷ್ಮಣನು ಕೈಗಳನ್ನು ಮುಗಿದುಕೊಂಡು, ಸೀತೆಯ ಎದುರಿಗೇ ಕಾಕುತ್ಸ್ಥ ಕುಲಭೂಷಣ ಶ್ರೀರಾಮನಲ್ಲಿ ಹೀಗೆ ಹೇಳಿದನು -॥6॥
ಮೂಲಮ್ - 7
ಪರವಾನಸ್ಮಿ ಕಾಕುತ್ಸ್ಥ ತ್ವಯಿ ವರ್ಷಶತಂ ಸ್ಥಿತೇ ।
ಸ್ವಯಂ ತು ರುಚಿರೇ ದೇಶೇ ಕ್ರಿಯತಾಮಿತಿ ಮಾಂ ವದ ॥
ಅನುವಾದ
ಕಾಕುತ್ಸ್ಥನೇ! ನೀನು ಇರುವಾಗ ನಾನು ಸದಾ ಪರಾಧೀನನೇ ಆಗಿರುವೆನು. ನಾನು ನೂರಾರು ಅಥವಾ ಅನಂತವರ್ಷಗಳವರೆಗೆ ನಿನ್ನ ಆಜ್ಞೆಗೆ ಅಧೀನನಾಗಿಯೇ ಇರುವೆನು. ಆದ್ದರಿಂದ ನೀನು ಸ್ವತಃ ನೋಡಿಯೇ ನಿನಗೆ ಸುಂದರ ಅನಿಸುವಲ್ಲಿ ಆಶ್ರಮವನ್ನು ರಚಿಸಲು ಆಜ್ಞಾಪಿಸು - ‘ನೀನು ಇಂತಹ ಸ್ಥಾನದಲ್ಲಿ ಆಶ್ರಮವನ್ನು ರಚಿಸು’ ಎಂದು ಅಪ್ಪಣೆ ಮಾಡು.॥7॥
ಮೂಲಮ್ - 8
ಸುಪ್ರೀತಸ್ತೇನ ವಾಕ್ಯೇನ ಲಕ್ಷ್ಮಣಸ್ಯ ಮಹಾದ್ಯುತಿಃ ।
ವಿಮೃಶನ್ರೋಚಯಾಮಾಸ ದೇಶಂ ಸರ್ವಗುಣಾನ್ವಿತಮ್ ॥
ಮೂಲಮ್ - 9
ಸ ತಂ ರುಚಿರಮಾಕ್ರಮ್ಯ ದೇಶಮಾಶ್ರಮಕರ್ಮಣಿ ।
ಹಸ್ತೇ ಗೃಹೀತ್ವಾ ಹಸ್ತೇನ ರಾಮಃ ಸೌಮಿತ್ರಿಮಬ್ರವೀತ್ ॥
ಅನುವಾದ
ಲಕ್ಷ್ಮಣನ ಈ ವಚನದಿಂದ ಅತ್ಯಂತ ತೇಜಸ್ವೀ ಭಗವಾನ್ ಶ್ರೀರಾಮನಿಗೆ ಬಹಳ ಪ್ರಸನ್ನತೆ ಉಂಟಾಯಿತು. ಅವನು ಸ್ವತಃ ಯೋಚಿಸಿ ವಿಚಾರ ಮಾಡಿ ಎಲ್ಲ ಪ್ರಕಾರದಿಂದ ಉತ್ತಮ ಗುಣಗಳಿಂದ ಸಂಪನ್ನ ಮತ್ತು ಆಶ್ರಮ ರಚಿಸಲು ಯೋಗ್ಯವಾದ ಒಂದು ಸ್ಥಾನವನ್ನು ಗುರುತಿಸಿದನು. ಆ ಸುಂದರ ಸ್ಥಾನಕ್ಕೆ ಬಂದು ಶ್ರೀರಾಮನು ಲಕ್ಷ್ಮಣನ ಕೈ ಹಿಡಿದುಕೊಂಡು ಹೇಳಿದನು.॥8-9॥
ಮೂಲಮ್ - 10
ಅಯಂ ದೇಶಃ ಸಮಃ ಶ್ರೀಮಾನ್ ಪುಷ್ಪಿ ತೈಸ್ತರುಭಿರ್ವೃತಃ ।
ಇಹಾಶ್ರಮಪದಂ ರಮ್ಯಂ ಯಥಾವತ್ಕರ್ತುಮರ್ಹಸಿ ॥
ಅನುವಾದ
ಸುಮಿತ್ರಾನಂದನ! ಈ ಸ್ಥಾನವು ಸಮತಟ್ಟವಾಗಿದ್ದು, ಸುಂದರವಾಗಿದೆ. ಹೂವುಗಳಿಂದ ಕೂಡಿದ ವೃಕ್ಷಗಳಿಂದ ಸುತ್ತುವರಿದಿದೆ. ನೀನು ಇದೇ ಸ್ಥಾನದಲ್ಲಿ ಯಥೋಚಿತವಾಗಿ ಒಂದು ರಮಣೀಯ ಆಶ್ರಮವನ್ನು ರಚಿಸು.॥10॥
ಮೂಲಮ್ - 11
ಇಯಮಾದಿತ್ಯ ಸಂಕಾಶೈಃ ಪದ್ಮೈಃ ಸುರಭಿಗಂಧಿಭಿಃ ।
ಅದೂರೇ ದೃಶ್ಯತೇ ರಮ್ಯಾ ಪದ್ಮಿನೀ ಪದ್ಮಶೋಭಿತಾ ॥
ಅನುವಾದ
ಇಲ್ಲಿ ಬಳಿಯಲ್ಲೇ ಸೂರ್ಯನಂತೆ ಉಜ್ವಲಕಾಂತಿಯುಳ್ಳ ಮನೋರಮ ಸುಗಂಧಿತ ಕಮಲಗಳಿಂದ ರಮಣೀಯವಾಗಿ ಕಾಣುವ ಹಾಗೂ ಪದ್ಮಗಳ ಶೋಭೆಯಿಂದ ಸಂಪನ್ನ ಪುಷ್ಕರಿಣಿ ಕಂಡು ಬರುತ್ತದೆ.॥11॥
ಮೂಲಮ್ - 12
ಯಥಾಖ್ಯಾತಮಗಸ್ತ್ಯೇನ ಮುನಿನಾ ಭಾವಿತಾತ್ಮನಾ ।
ಇಯಂ ಗೋದಾವರೀ ರಮ್ಯಾ ಪುಷ್ಪಿತೈಸ್ತರುರ್ಭಿರ್ವೃತಾ ॥
ಅನುವಾದ
ಪವಿತ್ರ ಅಂತಃಕರಣವುಳ್ಳ ಅಗಸ್ತ್ಯಮುನಿಗಳು ಯಾವುದರ ವಿಷಯದಲ್ಲಿ ಹೇಳಿದ್ದರೋ ಆ ವಿಕಸಿತ ವೃಕ್ಷಾವಲಿಗಳಿಂದ ಆವರಿಸಿದ ರಮಣೀಯ ಗೋದಾವರೀ ನದಿಯು ಇಲ್ಲೇ ಇದೆ.॥12॥
ಮೂಲಮ್ - 13
ಹಂಸಕಾರಂಡವಾಕೀರ್ಣಾ ಚಕ್ರವಾಕೋಪಶೋಭಿತಾ ।
ನಾತಿದೂರೇ ನ ಚಾಸನ್ನೇ ಮೃಗಯೂಥನಿಪೀಡಿತಾ ॥
ಅನುವಾದ
ಇದರಲ್ಲಿ ಹಂಸ-ಕಾರಂಡವ ಮೊದಲಾದ ನೀರುಹಕ್ಕಿಗಳು ವಿಚರಿಸುತ್ತಿವೆ. ಚಕ್ರವಾಕಗಳು ಇದರ ಶೋಭೆಯನ್ನು ಹೆಚ್ಚಿಸಿವೆ. ನೀರು ಕುಡಿಯಲು ಬಂದ ಜಿಂಕೆಗಳ ಗುಂಪು ಇದರ ತೀರದಲ್ಲಿ ಆವರಿಸಿದೆ. ಈ ನದಿಯು ಈ ಸ್ಥಾನದಿಂದ ಹೆಚ್ಚು ದೂರವಿರದೆ ಬಹಳ ಹತ್ತಿರದಲ್ಲೇ ಇದೆ.॥13॥
ಮೂಲಮ್ - 14
ಮಯೂರನಾದಿತಾ ರಮ್ಯಾಃ ಪ್ರಾಂಶವೋ ಬಹುಕಂದರಾಃ ।
ದೃಶ್ಯಂತೇ ಗಿರಿಯಃ ಸೌಮ್ಯ ಫುಲ್ಲೈಸ್ತರುಭಿರಾವೃತಾಃ ॥
ಅನುವಾದ
ಸೌಮ್ಯ! ಇಲ್ಲಿ ಅನೇಕ ಗುಹೆಗಳಿಂದ ಕೂಡಿದ ಎತ್ತರವಾದ ಪರ್ವತಗಳು ಕಂಡುಬರುತ್ತಿವೆ. ಇಲ್ಲಿ ನವಿಲುಗಳ ನಿನಾದವು ಪ್ರತಿಧ್ವನಿತವಾಗಿದೆ. ಈ ರಮಣೀಯ ಪರ್ವತಗಳು ವಿಕಸಿತ ವೃಕ್ಷಗಳಿಂದ ತುಂಬಿವೆ.॥14॥
ಮೂಲಮ್ - 15
ಸೌವರ್ಣೈ ರಾಜತೈಸ್ತಾಮ್ರೈರ್ದೇಶೇ ದೇಶೇ ತಥಾ ಶುಭೈಃ ।
ಗವಾಕ್ಷಿತಾ ಇವಾಭಾಂತಿ ಗಜಾಃ ಪರಮಭಕ್ತಿಭಿಃ ॥
ಅನುವಾದ
ಅಲ್ಲಲ್ಲಿ ಚಿನ್ನ, ಬೆಳ್ಳಿ, ತಾಮ್ರದಂತೆ ಬಣ್ಣದ ಸುಂದರ ಗೈರಿಕ ಧಾತುಗಳಿಂದ ಕೂಡಿದ ಪರ್ವತಗಳು ರೇಖಾ ವಿನ್ಯಾಸಗಳಿಂದ ಕಿಟಕಿಯ ರೂಪದಲ್ಲಿ ಚಿತ್ರಿತವಾಗಿರುವ ಆನೆಗಳಂತೆಯೇ ಕಾಣುತ್ತಿವೆ.॥15॥
ಮೂಲಮ್ - 16
ಸಾಲೈ ಸ್ತಾಲೈಸ್ತಮಾಲೈಶ್ಚ ಖರ್ಜೂರೈಃ ಪನಸೈರ್ದ್ರುಮೈಃ ।
ನೀವಾರೈಸ್ತಿನಿಶೈಶ್ಚೈವ ಪುಂನಾಗೈಶ್ಚೋಪಶೋಭಿತಾಃ ॥
ಮೂಲಮ್ - 17
ಚೂತೈರಶೋಕೈಸ್ತಿಲಕೈಃ ಕೇತಕೈರಪಿ ಚಂಪಕೈಃ ।
ಪುಷ್ಪಗುಲ್ಮಲತೋಪೇತೈಸ್ತೈಸ್ತೈಸ್ತರುಭಿರಾವೃತಾಃ ॥
ಮೂಲಮ್ - 18
ಸ್ಯಂದನೈಶ್ಚ ನಂದನೈರ್ನೀಪೈಃ ಪರ್ಣಾಸೈರ್ಲಕುಚೈರಪಿ ।
ಧವಾಶ್ವಕರ್ಣಖದಿರೈಃ ಶಮೀಕಿಂಶುಕಪಾಟಲೈಃ ॥
ಅನುವಾದ
ಹೂವುಗಳಿಂದ, ಪೊದೆಗಳಿಂದ, ಲತೆಗಳಿಂದ ಕೂಡಿದ ಸಾಲ, ತಾಲ, ತಮಾಲ, ಖರ್ಜೂರ, ಹಲಸು, ಹುಣಸೆ, ನೆಮ್ಮಿ, ಪುನ್ನಾಗ, ಆಮ್ರ, ಅಶೋಕ, ತಿಲಕ, ಕೇದಗೆ, ಸಂಪಿಗೆ, ಸ್ಯಂದನ, ಚಂದನ, ಕದಂಬ, ಈಚಲ, ಲಕುಚ, ಧವ, ಅಶ್ವಕರ್ಣ, ಮತ್ತಿ, ಕಗ್ಗಲಿ, ಶಮಿ, ಪಾಲಾಶ, ಪಾದರೀ, ಮೊದಲಾದ ವೃಕ್ಷಗಳಿಂದ ಸಮಾವೃತವಾದ ಪರ್ವತವು ಬಹಳ ಶೋಭಿಸುತ್ತಿದೆ.॥16-18॥
ಮೂಲಮ್ - 19
ಇದಂ ಪುಣ್ಯಮಿದಂ ರಮ್ಯಮಿದಂ ಬಹುಮೃಗದ್ವಿಜಮ್ ।
ಇಹ ವತ್ಸ್ಯಾಮ ಸೌಮಿತ್ರೇ ಸಾರ್ಧಮೇತೇನ ಪಕ್ಷಿಣಾ ॥
ಅನುವಾದ
ಸುಮಿತ್ರಾನಂದನ! ಇದು ಅತ್ಯಂತ ಪವಿತ್ರ ಮತ್ತು ಬಹಳ ರಮಣೀಯ ಸ್ಥಾನವಾಗಿದೆ, ಇಲ್ಲಿ ಅನೇಕ ಪಶು-ಪಕ್ಷಿ ವಾಸಿಸುತ್ತಿವೆ. ನಾವೂ ಕೂಡ ಇಲ್ಲೇ ಈ ಪಕ್ಷಿರಾಜ ಜಟಾಯುವಿನೊಂದಿಗೆ ಇರುವಾ.॥19॥
ಮೂಲಮ್ - 20
ಏವಮುಕ್ತಸ್ತು ರಾಮೇಣ ಲಕ್ಷ್ಮಣಃ ಪರವೀರಹಾ ।
ಅಚಿರೇಣಾಶ್ರಮಂ ಭ್ರಾತುಶ್ಚಕಾರ ಸುಮಹಾಬಲಃ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಶತ್ರುವೀರರ ಸಂಹಾರ ಮಾಡುವ ಮಹಾಬಲೀ ಲಕ್ಷ್ಮಣನು ಅಣ್ಣನಿಗಾಗಿ ಶೀಘ್ರದಲ್ಲೇ ಆಶ್ರಮವನ್ನು ಕಟ್ಟಿ ಸಿದ್ಧಪಡಿಸಿದನು.॥20॥
ಮೂಲಮ್ - 21
ಪರ್ಣಶಾಲಾಂ ಸುವಿಪುಲಾಂ ತತ್ರ ಸಂಘಾತಮೃತ್ತಿಕಾಮ್ ।
ಸುಸ್ತಂಭಾಂ ಮಸ್ಕರೈರ್ದೀರ್ಘೈಃ ಕೃತವಂಶಾಂ ಸುಶೋಭನಾಮ್ ॥
ಮೂಲಮ್ - 22
ಶಮೀಶಾಖಾಭಿರಾಸ್ತೀರ್ಯ ದೃಢಪಾಶಾವಪಾಶಿತಾಮ್ ।
ಕುಶಕಾಶಶರೈಃ ಪರ್ಣೌಃ ಸುಪರಿಚ್ಛಾದಿತಾಂ ತಥಾ ॥
ಮೂಲಮ್ - 23
ಸಮೀಕೃತತಲಾಂ ರಮ್ಯಾಂ ಚಕಾರ ಸುಮಹಾಬಲಃ ।
ನಿವಾಸಂ ರಾಘವಸ್ಯಾರ್ಥೇ ಪ್ರೇಕ್ಷಣೀಯಮನುತ್ತಮಮ್ ॥
ಅನುವಾದ
ಆ ಆಶ್ರಮವು ಒಂದು ಅತ್ಯಂತ ವಿಸ್ತೃತ ಪರ್ಣಶಾಲೆಯಂತೆ ಮಾಡಲಾಗಿತ್ತು. ಮಹಾಬಲಿ ಲಕ್ಷ್ಮಣನು ಮೊದಲಿಗೆ ಮಣ್ಣು ಅಗೆದು ಗೊಡೆ ನಿಲ್ಲಿಸಿದನು. ಮತ್ತೆ ಅದರಲ್ಲಿ ಸುಂದರ, ಸುದೃಢ, ಕಂಬಗಳನ್ನು ನೆಟ್ಟನು. ಕಂಬಗಳ ಮೇಲೆ ದೊಡ್ಡ ದೊಡ್ಡ ಬಿದಿರುಗಳನ್ನು ಇರಿಸಿದನು. ಬಿದಿರುಗಳನ್ನು ಇಟ್ಟಾಗ ಆ ಕುಟಿಯು ಬಹಳ ಸುಂದರವಾಗಿ ಕಾಣತೊಡಗಿತು. ಮತ್ತೆ ಆ ಬಿದಿರುಗಳ ಮೇಲೆ ಶಮಿಯ ರೆಂಬೆಗಳನ್ನು ಇರಿಸಿದನು ಹಾಗೂ ಗಟ್ಟಿಯಾದ ಬಳ್ಳಿಗಳಿಂದ ಬಿಗಿಯಾಗಿ ಕಟ್ಟಿದನು. ಅನಂತರ ಮೇಲೆ ಕುಶ, ಕಾಸ ಹುಲ್ಲನ್ನು ಮತ್ತು ಎಲೆಗಳಿಂದ ಮೇಲ್ಛಾವಣಿಯನ್ನು ಪರ್ಣಶಾಲೆಯಂತೆ ಹೊದಿಸಿದನು. ನೆಲವನ್ನು ಸರಿಮಾಡಿ ಕುಟೀರವನ್ನು ರಮಣೀಯವಾಗಿಸಿದನು. ಈ ಪ್ರಕಾರ ಲಕ್ಷ್ಮಣನು ಶ್ರೀರಾಮಚಂದ್ರನಿಗಾಗಿ ಪರಮೋತ್ತಮವಾಗಿ ನೋಡಲು ಯೋಗ್ಯವಾದ ನಿವಾಸಗೃಹವನ್ನು ನಿರ್ಮಿಸಿದನು.॥21-23॥
ಮೂಲಮ್ - 24
ಸ ಗತ್ವಾ ಲಕ್ಷ್ಮಣಃ ಶ್ರೀಮಾನ್ ನದೀಂ ಗೋದಾವರೀಂ ತದಾ ।
ಸ್ನಾತ್ವಾ ಪದ್ಮಾನಿ ಚಾದಾಯ ಸಫಲಃ ಪುನರಾಗತಃ ॥
ಅನುವಾದ
ಅದನ್ನು ಸಿದ್ಧಗೊಳಿಸಿ ಶ್ರೀವಾನ್ ಲಕ್ಷ್ಮಣನು ಗೋದಾವರೀ ನದಿಗೆ ಹೋಗಿ ತತ್ಕಾಲ ಸ್ನಾನ ಮಾಡಿ ಕಮಲದ ಹೂವು ಮತ್ತು ಎಲೆಗಳನ್ನು ತೆಗೆದುಕೊಂಡು ಮರಳಿ ಬಂದನು.॥24॥
ಮೂಲಮ್ - 25
ತತಃ ಪುಷ್ಪಬಲಿಂ ಕೃತ್ವಾಶಾಂತಿಂ ಚ ಸ ಯಥಾವಿಧಿ ।
ದರ್ಶಯಾಮಾಸ ರಾಮಾಯ ತದಾಶ್ರಮಪದಂ ಕೃತಮ್ ॥
ಅನುವಾದ
ಅನಂತರ ಶಾಸ್ತ್ರೀಯ ವಿಧಿಗನುಸಾರ ದೇವತೆಗಳಿಗೆ ಹೂವುಗಳಿಂದ ಬಲಿ (ಪೂಜೆ)ಯನ್ನು ಅರ್ಪಿಸಿದನು. ಹಾಗೂ ವಾಸ್ತುಶಾಂತಿ ಮಾಡಿ ಅವನು ಕಟ್ಟಿದ ಆಶ್ರಮವನ್ನು ಶ್ರೀರಾಮನಿಗೆ ತೋರಿಸಿದನು.॥25॥
ಮೂಲಮ್ - 26
ಸ ತಂ ದೃಷ್ಟ್ವಾ ಕೃತಂ ಸೌಮ್ಯಮಾಶ್ರಮಂ ಸಹ ಸೀತಯಾ ।
ರಾಘವಃ ಪರ್ಣಶಾಲಾಯಾಂ ಹರ್ಷಮಾಹಾರಯತ್ಪರಮ್ ॥
ಅನುವಾದ
ಭಗವಾನ್ ಶ್ರೀರಾಮನು ಸೀತೆಯೊಂದಿಗೆ ಆ ಹೊಸದಾಗಿ ನಿರ್ಮಿಸಿದ ಸುಂದರ ಆಶ್ರಮವನ್ನು ನೋಡಿ ಬಹಳ ಪ್ರಸನ್ನನಾಗಿ, ಸ್ವಲ್ಪ ಹೊತ್ತು ಅದರೊಳಗೆ ನಿಂತುಕೊಂಡನು.॥26॥
ಮೂಲಮ್ - 27
ಸುಸಂಹೃಷ್ಟಃ ಪರಿಷ್ವಜ್ಯ ಬಾಹುಭ್ಯಾಂ ಲಕ್ಷ್ಮಣಂ ತದಾ ।
ಅತಿಸ್ನಿಗ್ಧಂ ಚ ಗಾಢಂ ಚ ವಚನಂ ಚೇದಮಬ್ರವೀತ್ ॥
ಅನುವಾದ
ಅನಂತರ ಅತ್ಯಂತ ಹರ್ಷಿತನಾಗಿ ಲಕ್ಷ್ಮಣನನ್ನು ಬರಸೆಳೆದುಕೊಂಡು ಬಿಗಿದಪ್ಪಿಕೊಂಡು ಬಹಳ ಸ್ನೇಹದಿಂದ ಇಂತೆಂದನು.॥27॥
ಮೂಲಮ್ - 28
ಪ್ರೀತೋಽಸ್ಮಿ ತೇ ಮಹತ್ಕರ್ಮ ತ್ವಯಾ ಕೃತಮಿದಂ ಪ್ರಭೋ ।
ಪ್ರದೇಯೋ ಯನ್ನಿಮಿತ್ತಂ ತೇ ಪರಿಷ್ವಂಗೋ ಮಯಾ ಕೃತಃ ॥
ಅನುವಾದ
ಸಾಮರ್ಥ್ಯಶಾಲೀ ಲಕ್ಷ್ಮಣ! ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿದ್ದೇನೆ. ನೀನು ಈ ಮಹತ್ಕಾರ್ಯವನ್ನು ಮಾಡಿರುವೆ. ಅದಕ್ಕಾಗಿ ಬೇರೆ ಯಾವುದೇ ಸರಿಯಾದ ಪುರಸ್ಕಾರ ಇಲ್ಲದಿರುವುದರಿಂದ ನಾನು ನಿನ್ನನ್ನು ಬಿಗಿಯಾದ ಆಲಿಂಗನವನ್ನು ಕರುಣಿಸಿರುವೆನು.॥28॥
ಮೂಲಮ್ - 29
ಭಾವಜ್ಞೇನ ಕೃತಜ್ಞೇನ ಧರ್ಮಜ್ಞೇನ ಚ ಲಕ್ಷ್ಮಣ ।
ತ್ವಯಾ ಪುತ್ರೇಣ ಧರ್ಮಾತ್ಮಾ ನ ಸಂವೃತ್ತಃ ಪಿತಾ ಮಮ ॥
ಅನುವಾದ
ಲಕ್ಷ್ಮಣ! ನೀನು ನನ್ನ ಮನೋಭಾವವನ್ನು ತತ್ಕಾಲ ತಿಳಿಯುವವನಾಗಿರುವೆ, ಕೃತಜ್ಞ ಮತ್ತು ಧರ್ಮಜ್ಞನಾಗಿರುವೆ. ನಿನ್ನಂತಹ ಪುತ್ರನಿಂದಾಗಿ ನನ್ನ ಧರ್ಮಾತ್ಮ ತಂದೆಯು ಇನ್ನೂ ಸತ್ತಿಲ್ಲ-ನಿನ್ನ ರೂಪದಲ್ಲಿ ಅವರು ಈಗಲೂ ಜೀವಂತವಾಗಿದ್ದಾರೆ.॥29॥
ಮೂಲಮ್ - 30
ಏವಂ ಲಕ್ಷ್ಮಣ ಮುಕ್ತ್ವಾ ತು ರಾಘವೋ ಲಕ್ಷ್ಮಿವರ್ಧನಃ ।
ತಸ್ಮಿನ್ದೇಶೇ ಬಹುಲೇ ನ್ಯವಸತ್ ಸ ಸುಖಂ ಸುಖೀ ॥
ಅನುವಾದ
ಲಕ್ಷ್ಮಣನಲ್ಲಿ ಹೀಗೆ ಹೇಳಿ ತನ್ನ ಶೋಭೆಯನ್ನು ವಿಸ್ತರಿಸುವ ಸುಖೀ ಶ್ರೀರಾಮಚಂದ್ರನು ಸಾಕಷ್ಟು ಫಲಗಳಿಂದ ಸಂಪನ್ನವಾದ ಆ ಪಂಚವಟೀ ಪ್ರದೇಶದಲ್ಲಿ ಎಲ್ಲರೊಂದಿಗೆ ಸುಖವಾಗಿ ಇರತೊಡಗಿದನು.॥30॥
ಮೂಲಮ್ - 31
ಕಂಚಿತ್ಕಾಲಂ ಸ ಧರ್ಮಾತ್ಮಾ ಸೀತಯಾ ಲಕ್ಷ್ಮಣೇನ ಚ ।
ಅನ್ವಾಸ್ಯಮಾನೋ ನ್ಯವಸತ್ಸ್ವರ್ಗಲೋಕೇ ಯಥಾಮರಃ ॥
ಅನುವಾದ
ಸೀತೆ ಮತ್ತು ಲಕ್ಷ್ಮಣರಿಂದ ಸೇವಿತನಾಗಿ ಧರ್ಮಾತ್ಮಾ ಶ್ರೀರಾಮನು ಕೆಲವುಕಾಲ ಅಲ್ಲಿ ಸ್ವರ್ಗಲೋಕದಲ್ಲಿ ದೇವತೆಗಳು ವಾಸಿಸುವಂತೆ ವಾಸಿಸಿದನು.॥31॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹದಿನೈದನೆಯ ಸರ್ಗ ಸಂಪೂರ್ಣವಾಯಿತು.॥15॥