वाचनम्
ಭಾಗಸೂಚನಾ
ಅಗಸ್ತ್ಯರು ಶ್ರೀರಾಮನ ವಿಷಯದಲ್ಲಿ ಪ್ರಸನ್ನರಾಗಿ ಸೀತಾದೇವಿಯನ್ನು ಪ್ರಶಂಸಿದುದು, ಶ್ರೀರಾಮನ ಕೋರಿಕೆಯಂತೆ ಪಂಚವಟಿಯಲ್ಲಿ ಆಶ್ರಮವನ್ನು ಕಲ್ಪಿಸಿಕೊಂಡಿರಲು ಅಗಸ್ತ್ಯರು ಸಲಹೆಯನ್ನಿತ್ತುದು, ಸೀತಾ -ರಾಮ-ಲಕ್ಷ್ಮಣರ ಪ್ರಯಾಣ
ಮೂಲಮ್ - 1
ರಾಮ ಪ್ರೀತೋಽಸ್ಮಿ ಭದ್ರಂ ತೇ ಪರಿತುಷ್ಟೋಽಸ್ಮಿ ಲಕ್ಷ್ಮಣ ।
ಅಭಿವಾದಯಿತುಂ ಯನ್ಮಾಂ ಪ್ರಾಪ್ತೌ ಸ್ಥಃ ಸಹ ಸೀತಯಾ ॥
ಅನುವಾದ
ಶ್ರೀರಾಮಾ! ನಿನಗೆ ಮಂಗಳವಾಗಲಿ. ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿದ್ದೇನೆ. ಲಕ್ಷ್ಮಣಾ! ನಾನು ನಿನ್ನ ಮೇಲೆಯೂ ಬಹಳ ಸಂತುಷ್ಟನಾಗಿದ್ದೇನೆ. ನೀವಿಬ್ಬರೂ ನನಗೆ ಪ್ರಣಾಮ ಮಾಡಲು ಸೀತೆಯೊಂದಿಗೆ ಇಲ್ಲಿಯವರೆಗೆ ಬಂದಿರುವುದರಿಂದ ನನಗೆ ಬಹಳ ಆನಂದವಾಗಿದೆ.॥1॥
ಮೂಲಮ್ - 2
ಅಧ್ವಶ್ರಮೇಣ ವಾಂ ಖೇದೋ ಬಾಧತೇ ಪ್ರಚುರಶ್ರಮಃ ।
ವ್ಯಕ್ತಮುತ್ಕಂಠತೇ ವಾಪಿ ಮೈಥಿಲೀ ಜನಕಾತ್ಮಜಾ ॥
ಅನುವಾದ
ದಾರಿ ನಡೆಯುವುದರ ಪರಿಶ್ರಮದಿಂದ ನೀವು ಬಳಲಿರುವಿರಿ. ಇದರಿಂದ ಆದ ಕಷ್ಟವು ನಿಮ್ಮಿಬ್ಬರಿಗೂ ದುಃಖ ಕೊಡುತ್ತಿರಬಹುದು. ಮಿಥಿಲೇಶ ಕುಮಾರಿ ಜಾನಕಿಯೂ ತನ್ನ ಬಳಲಿಕೆಯನ್ನು ಕಳೆಯಲು ಹೆಚ್ಚು ಉತ್ಕಂಠಿತಳಾಗಿರಬಹುದು, ಎಂಬುದು ಸ್ಪಷ್ಟವಾಗಿ ಅನಿಸುತ್ತದೆ.॥2॥
ಮೂಲಮ್ - 3
ಏಷಾ ಚ ಸುಕುಮಾರೀ ಚ ಖೇದೈಶ್ಚ ನ ವಿಮಾನಿತಾ ।
ಪ್ರಾಜ್ಯದೋಷಂ ವನಂ ಪ್ರಾಪ್ತಾ ಭರ್ತೃ ಸ್ನೇಹಪ್ರಚೋದಿತಾ ॥
ಅನುವಾದ
ಇವಳು ಸುಕುಮಾರಿಯಾಗಿದ್ದು, ಈಕೆಯು ಮೊದಲು ಇಂತಹ ದುಃಖಗಳನ್ನು ಎದುರಿಸಲಿಲ್ಲ, ಕಾಡಿನಲ್ಲಿ ಅನೇಕ ಪ್ರಕಾರದ ಕಷ್ಟಗಳಿರುತ್ತವೆ, ಹೀಗಿದ್ದರೂ ಇವಳು ಪತಿಪ್ರೇಮದಿಂದ ಪ್ರೇರಿತಳಾಗಿ ಇಲ್ಲಿಗೆ ಬಂದಿರುವಳು.॥3॥
ಮೂಲಮ್ - 4
ಯಥೈಷಾ ರಮತೇ ರಾಮ ಇಹ ಸೀತಾ ತಥಾ ಕುರು ।
ದುಷ್ಕರಂ ಕೃತವತ್ಯೇಷಾ ವನೇ ತ್ವಾಮನುಗಚ್ಛತೀ ॥
ಅನುವಾದ
ಶ್ರೀರಾಮಾ! ಸೀತೆಯ ಮನಸ್ಸು ಉಲ್ಲಾಸವಾಗಿರುವಂತೆ, ಸಂತೋಷವಾಗಿ ಇರುವಂತೆಯೇ ನೀನು ಕಾರ್ಯ ಮಾಡಬೇಕು. ನಿನ್ನ ಜೊತೆಗೆ ವನಕ್ಕೆ ಬಂದು ಈಕೆಯು ದುಷ್ಕರ ಕಾರ್ಯ ಮಾಡಿರುವಳು.॥4॥
ಮೂಲಮ್ - 5
ಏಷಾ ಹಿ ಪ್ರಕೃತಿಃ ಸ್ತ್ರೀಣಾಮಾ ಸೃಷ್ಟೇ ರಘುನಂದನ ।
ಸಮಸ್ಥಮನುರಜ್ಯಂತಿ ವಿಷಮಸ್ಥಂ ತ್ಯಜಂತಿ ಚ ॥
ಅನುವಾದ
ರಘುನಂದನ! ಸೃಷ್ಟಿಕಾಲದಿಂದ ಹಿಡಿದು ಇಂದಿನವರೆಗೆ ಪತಿಯು ಸಮ ಅವಸ್ಥೆಯಲ್ಲಿದ್ದರೆ ಅರ್ಥಾತ್ ಧನ-ಧಾನ್ಯದಿಂದ ಸಂಪನ್ನ, ಸ್ವಸ್ಥ ಹಾಗೂ ಸುಖಿಯಾಗಿದ್ದರೆ ಅವಳು ಅವನಲ್ಲಿ ಅನುರಕ್ತಳಾಗಿರುತ್ತಾಳೆ. ಆದರೆ ಅವನು ವಿಷಮ ಅವಸ್ಥೆಯಲ್ಲಿ ಬಿದ್ದರೆ, ದರಿದ್ರನೋ, ರೋಗಿಯೋ, ಅದರೆ ಆಗ ಅವನನ್ನು ತ್ಯಜಿಸುತ್ತಾಳೆ, ಈ ಸ್ವಭಾವ ಸ್ತ್ರೀಯರಲ್ಲಿ ಇದ್ದುಕೊಂಡಿದೆ.॥5॥
ಮೂಲಮ್ - 6
ಶತಹ್ರದಾನಾಂ ಲೋಲತ್ವಂ ಶಸ್ತ್ರಾಣಾಂ ತೀಕ್ಷ್ಣ ತಾಂ ತಥಾ ।
ಗರುಡಾನಿಲಯೋಃ ಶೈಘ್ರ್ಯಮನುಗಚ್ಛಂತಿ ಯೋಷಿತಃ ॥
ಅನುವಾದ
ಸ್ತ್ರೀಯರು ವಿದ್ಯುತ್ತಿನ (ಮಿಂಚಿನ) ಚಪಲತೆ, ಶಸ್ತ್ರಗಳ ತೀಕ್ಷ್ಣತೆ, ಗರುಡ ಮತ್ತು ವಾಯುವಿನ ತೀವ್ರಗತಿಯನ್ನು ಅನುಸರಿಸುತ್ತಿರುವರು.॥6॥
ಮೂಲಮ್ - 7
ಇಯಂ ತು ಭವತೋ ಭಾರ್ಯಾ ದೋಷೈರೇತೈರ್ವಿವರ್ಜಿತಾ ।
ಶ್ಲಾಘ್ಯಾ ಚ ವ್ಯಪದೇಶ್ಯಾ ಚ ಯಥಾ ದೇವೀಷ್ವರುಂಧತೀ ॥
ಅನುವಾದ
ನಿನ್ನ ಧರ್ಮಪತ್ನೀ ಸೀತೆಯು ಇವೆಲ್ಲ ದೋಷಗಳಿಂದ ರಹಿತಳಾಗಿದ್ದಾಳೆ. ಈಕೆಯು ಶ್ಲಾಘ್ಯಳೂ ಹಾಗೂ ಪತಿವ್ರತೆಯರಲ್ಲಿ, ದೇವಿಯರಲ್ಲಿ ಅರುಂಧತಿ ಇರುವಂತೆ ಇರುವಳು.॥7॥
ಮೂಲಮ್ - 8
ಅಲಂಕೃತೋಽಯಂ ದೇಶಶ್ಚ ಯತ್ರ ಸೌಮಿತ್ರಿಣಾ ಸಹ ।
ವೈದೇಹ್ಯಾ ಚಾನಯಾ ರಾಮ ವತ್ಸ್ಯಸಿತ್ವಮರಿಂದಮ ॥
ಅನುವಾದ
ಶತ್ರುದಮನ ಶ್ರೀರಾಮಾ! ಸುಮಿತ್ರಾಕುಮಾರ ಲಕ್ಷ್ಮಣ ಮತ್ತು ವಿದೇಹನಂದಿನೀ ಸೀತೆಯೊಂದಿಗೆ ನೀನು ವಾಸಿಸುವ ದೇಶದ ಶೋಭೆಯು ಇಂದಿನಿಂದ ಹೆಚ್ಚಾಗಿದೆ.॥8॥
ಮೂಲಮ್ - 9
ಏವಮುಕ್ತಸ್ತು ಮುನಿನಾ ರಾಘವಃ ಸಂಯತಾಂಜಲಿಃ ।
ಉವಾಚ ಪ್ರಶ್ರಿತಂ ವಾಕ್ಯಮೃಷಿಂ ದೀಪ್ತಮಿವಾನಲಮ್ ॥
ಅನುವಾದ
ಮುನಿಯು ಹೀಗೆ ಹೇಳಿದಾಗ ಶ್ರೀರಾಮಚಂದ್ರನು ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ ಮಹರ್ಷಿಗೆ ಕೈಮುಗಿದು ವಿನಯಯುಕ್ತರಾಗಿ ಹೀಗೆ ಹೇಳಿದನು.॥9॥
ಮೂಲಮ್ - 10
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯಸ್ಯ ಮೇ ಮುನಿಪುಂಗವಃ ।
ಗುಣೈಃ ಸಭ್ರಾತೃಭಾರ್ಯಸ್ಯ ಗುರುರ್ನಃ ಪರಿತುಷ್ಯತಿ ॥
ಅನುವಾದ
ಸಹೋದರ ಮತ್ತು ಪತ್ನೀ ಸಹಿತ, ನನ್ನ ಗುಣಗಳಿಂದ ಗುರುದೇವ ಮುನಿವರ ಅಗಸ್ತ್ಯರು ಸಂತುಷ್ಟರಾಗಿದ್ದಾರೆ. ನಾನು ಧನ್ಯನಾಗಿದ್ದೇನೆ, ನನ್ನ ಮೇಲೆ ಮುನೀಶ್ವರರ ಮಹಾನ್ ಅನುಗ್ರಹವಾಗಿದೆ.॥10॥
ಮೂಲಮ್ - 11
ಕಿಂ ತು ವ್ಯಾದಿಶ ಮೇ ದೇಶಂ ಸೋದಕಂ ಬಹುಕಾನನಮ್ ।
ಯತ್ರಾಶ್ರಮಪದಂ ಕೃತ್ವಾ ವಸೇಯಂ ನಿರತಃ ಸುಖಮ್ ॥
ಅನುವಾದ
ಆದರೆ ಮುನಿಗಳೇ! ನನಗೆ ಇರಲು ಅನೇಕ ವನಗಳಿದ್ದರೂ, ನೀರಿನ ಸೌಕರ್ಯವೂ ಸಾಕಷ್ಟು ಇರುವ, ನಾವು ಆಶ್ರಮ ನಿರ್ಮಿಸಿ ಆನಂದವಾಗಿ ವಾಸಿಸುವಂತಹ ಯಾವುದಾದರೂ ಸ್ಥಳವನ್ನು ಈಗ ನೀವು ತಿಳಿಸಿರಿ.॥11॥
ಮೂಲಮ್ - 12
ತತೋಽಬ್ರವೀನ್ಮುನಿಶ್ರೇಷ್ಠಃ ಶ್ರುತ್ವಾ ರಾಮಸ್ಯ ಭಾಷಿತಮ್ ।
ಧ್ಯಾತ್ವಾ ಮುಹೂರ್ತಂ ಧರ್ಮಾತ್ಮಾ ತತೋವಾಚ ವಚಃ ಶುಭಮ್ ॥
ಅನುವಾದ
ಶ್ರೀರಾಮನು ಹೇಳಿದುದನ್ನು ಕೇಳಿ ಮುನಿಶ್ರೇಷ್ಠ ಧರ್ಮಾತ್ಮಾ ಅಗಸ್ತ್ಯರು ಮುಹೂರ್ತಕಾಲ ಏನೋ ಯೋಚಿಸಿ, ಬಳಿಕ ಅವರು ಈ ಶುಭವಚನವನ್ನು ಆಡಿದರು.॥12॥
ಮೂಲಮ್ - 13
ಇತೋ ದ್ವಿಯೋಜನೇ ತಾತ ಬಹುಮೂಲಲೋದಕಃ ।
ದೇಶೋ ಬಹುಮೃಗಃ ಶ್ರೀಮಾನ್ ಪಂಚವಟ್ಯಭಿವಿಶ್ರುತಃ ॥
ಅನುವಾದ
ಅಯ್ಯಾ! ಇಲ್ಲಿಂದ ಎರಡು ಯೋಜನ ದೂರದಲ್ಲಿ ಪಂಚವಟಿ ಎಂಬ ಹೆಸರಿನಿಂದ ವಿಖ್ಯಾತವಾದ ಒಂದು ಬಹಳ ಸುಂದರ ಸ್ಥಾನವಿದೆ. ಅಲ್ಲಿ ಬಹಳಷ್ಟು ಜಿಂಕೆಗಳು ಇರುತ್ತವೆ. ಫಲ-ಮೂಲ ಮತ್ತು ನೀರಿನ ಸೌಲಭ್ಯವು ಹೆಚ್ಚಾಗಿದೆ.॥13॥
ಮೂಲಮ್ - 14
ತತ್ರ ಗತ್ವಾಽಽಶ್ರಮಪದಂ ಕೃತ್ವಾ ಸೌಮಿತ್ರಿಣಾ ಸಹ ।
ರಮಸ್ವ ತ್ವಂ ಪಿತುರ್ವಾಕ್ಯಂ ಯಥೋಕ್ತಮನುಪಾಲಯನ್ ॥
ಅನುವಾದ
ಅಲ್ಲಿಗೆ ಹೋಗಿ ಲಕ್ಷ್ಮಣನೊಂದಿಗೆ ನೀನು ಆಶ್ರಮ ರಚಿಸಿಕೊಂಡು ಪಿತನ ಆಜ್ಞೆಯನ್ನು ಯಥೋಕ್ತವಾಗಿ ಪಾಲಿಸುತ್ತಾ ಅಲ್ಲಿ ಸುಖವಾಗಿ ವಾಸಿಸು.॥14॥
ಮೂಲಮ್ - 15
ವಿದಿತೋ ಹ್ಯೇಷ ವೃತ್ತಾಂತೋ ಮಮ ಸರ್ವಸ್ತ ವಾನಘ ।
ತಪಸಶ್ಚ ಪ್ರಭಾವೇಣ ಸ್ನೇಹಾದ್ಧಶರಥಸ್ಯ ಚ ॥
ಅನುವಾದ
ಪುಣ್ಯಾತ್ಮನೇ! ನಿನ್ನ ಮತ್ತು ದಶರಥ ಮಹಾರಾಜರ ಎಲ್ಲ ವೃತ್ತಾಂತವು ನಾನು ನನ್ನ ತಪಸ್ಸಿನ ಪ್ರಭಾವದಿಂದ ಹಾಗೂ ನಿನ್ನ ಕುರಿತು ಸ್ನೇಹವಿರುವುದರಿಂದ ಚೆನ್ನಾಗಿ ತಿಳಿದಿರುತ್ತೇನೆ.॥15॥
ಮೂಲಮ್ - 16
ಹೃದಯಸ್ಥಂ ಚ ತೇ ಚ್ಛಂದೋ ವಿಜ್ಞಾತಂ ತಪಸಾ ಮಯಾ ।
ಇಹ ವಾಸಂ ಪ್ರತಿಜ್ಞಾಯ ಮಯಾ ಸಹ ತಪೋವನೇ ॥
ಅನುವಾದ
ನೀನು ತಪೋವನದಲ್ಲಿ ನನ್ನೊಂದಿಗೆ ಇರುವ ಮತ್ತು ವನವಾಸದ ಉಳಿದ ಸಮಯವನ್ನು ಇಲ್ಲೇ ಕಳೆಯುವ ಅಭಿಲಾಷೆಯನ್ನು ಪ್ರಕಟಿಸಿಯೂ, ಇಲ್ಲಿಂದ ಬೇರೆಡೆ ಇರಲು ಯೋಗ್ಯಸ್ಥಾನದ ಕುರಿತು ನನ್ನಲ್ಲಿ ಕೇಳುತ್ತಿರುವೆ. ಇದರಲ್ಲಿ ನಿನ್ನ ಹಾರ್ದಿಕ ಅಭಿಪ್ರಾಯ ಏನಿದೆ? ಇದನ್ನು ನಾನು ನನ್ನ ತಪೋಬಲದಿಂದ ತಿಳಿದಿರುವೆನು. (ನೀನು ಋಷಿಗಳ ರಕ್ಷಣೆಗಾಗಿ ರಾಕ್ಷಸರನ್ನು ವಧಿಸುವುದಾಗಿ ಪ್ರತಿಜ್ಞೆ ಮಾಡಿರುವೆ. ಈ ಪ್ರತಿಜ್ಞೆಯ ನಿರ್ವಹಣೆ ಇಲ್ಲಿ ಇರುವುದರಿಂದ ಆಗಲಾರದು, ಏಕೆಂದರೆ ಇಲ್ಲಿ ರಾಕ್ಷಸರು ಬಂದು ಹೋಗುವುದಿಲ್ಲ..॥16॥
ಮೂಲಮ್ - 17
ಅತಶ್ಚ ತ್ವಾಮಹಂ ಬ್ರೂಮಿ ಗಚ್ಛ ಪಂಚವಟೀಮಿತಿ ।
ಸ ಹಿ ರಮ್ಯೋ ವನೋದ್ದೇಶೋ ಮೈಥಿಲೀ ತತ್ರ ರಂಸ್ಯತೇ ॥
ಅನುವಾದ
ಆದ್ದರಿಂದ ಪಂಚವಟಿಗೆ ಹೋಗು ಎಂದು ನಾನು ಹೇಳುತ್ತೇನೆ. ಅಲ್ಲಿಯ ವನ ಸ್ಥಳಿಯು ಬಹಳ ರಮಣೀಯವಾಗಿದೆ. ಅಲ್ಲಿ ಮಿಥಿಲೇಶ ಕುಮಾರೀ ಸೀತೆ ಆನಂದವಾಗಿ ಎಲ್ಲೆಡೆ ಸಂಚರಿಸುವಳು.॥17॥
ಮೂಲಮ್ - 18
ಸ ದೇಶಃ ಶ್ಲಾಘನೀಯಶ್ಚ ನಾತಿದೂರೇ ಚ ರಾಘವ ।
ಗೋದಾವರ್ಯಾಃ ಸಮೀಪೇ ಚ ಮೈಥಿಲೀ ತತ್ರರಂಸ್ಯತೇ ॥
ಅನುವಾದ
ರಘುನಂದನ! ಆ ಶ್ಲಾಘನೀಯ ಸ್ಥಾನವು ಇಲ್ಲಿಂದ ಹೆಚ್ಚು ದೂರವಿಲ್ಲ. ಗೋದಾವರಿಯ ಹತ್ತಿರ (ಅದರ ತೀರದಲ್ಲೇ) ಇದೆ. ಆದ್ದರಿಂದ ಮೈಥಿಲಿಯ ಮನಸ್ಸು ಅಲ್ಲಿ ತುಂಬಾ ರಮಿಸೀತು.॥18॥
ಮೂಲಮ್ - 19
ಪ್ರಾಜ್ಯಮೂಲಫಲೈಚ್ಚೈವ ನಾನಾದ್ವಿಜಗಣೈರ್ಯುತಃ ।
ವಿವಿಕ್ತಶ್ಚ ಮಹಾಬಾಹೋ ಪುಣ್ಯೋ ರಮ್ಯಸ್ತಥೈವ ಚ ॥
ಅನುವಾದ
ಮಹಾಬಾಹೋ! ಆ ಸ್ಥಾನವು ಧಾರಾಳ ಫಲ-ಮೂಲಗಳಿಂದ ಸಂಪನ್ನವಾಗಿದ್ದು, ಬಗೆ-ಬಗೆಯ ಪಕ್ಷಿಗಳಿಂದ ಸೇವಿತ, ಏಕಾಂತ, ಪವಿತ್ರ ಮತ್ತು ರಮಣೀಯವಾಗಿದೆ.॥19॥
ಮೂಲಮ್ - 20
ಭವಾನಪಿ ಸದಾಚಾರಃ ಶಕ್ತಶ್ಚ ಪರಿರಕ್ಷಣೇ ।
ಅಪಿ ಚಾತ್ರ ವಸನ್ ರಾಮ ತಾಪಸಾನ್ ಪಾಲಯಿಷ್ಯಸಿ ॥
ಅನುವಾದ
ಶ್ರೀರಾಮಾ! ನೀನೂ ಸದಾಚಾರೀ ಮತ್ತು ಋಷಿಗಳನ್ನು ರಕ್ಷಿಸುವುದರಲ್ಲಿ ಸಮರ್ಥನಾಗಿರುವೆ. ಆದ್ದರಿಂದ ಅಲ್ಲಿ ಇದ್ದು ತಪಸ್ವೀ ಮುನಿಗಳನ್ನು ಪಾಲಿಸು.॥20॥
ಮೂಲಮ್ - 21
ಏತದಾಲಕ್ಷ್ಯತೇ ವೀರ ಮಧೂಕಾನಾಂ ಮಹಾವನಮ್ ।
ಉತ್ತರೇಣಾಸ್ಯ ಗಂತವ್ಯಂ ನ್ಯಗ್ರೋಧಮಭಿಗಚ್ಛತಾ ॥
ಮೂಲಮ್ - 22
ತತಃ ಸ್ಥಲಮುಪಾರುಹ್ಯ ಪರ್ವತಸ್ಯಾವಿದೂರತಃ ।
ಖ್ಯಾತಃ ಪಂಚವಟೀತ್ಯೇವ ನಿತ್ಯಪುಷ್ಪಿತಕಾನನಃ ॥
ಅನುವಾದ
ವೀರನೇ! ಅದೋ ಹಿಪ್ಪೇ ಮರಗಳ ಕಾಡು ಅಲ್ಲಿ ಕಾಣುತ್ತಿದೆಯಲ್ಲವೇ! ಅದರ ಉತ್ತರಕ್ಕೆ ಪ್ರಯಾಣಮಾಡು. ಆ ಮಾರ್ಗವನ್ನು ಹಿಡಿದುಹೋದರೆ ಮುಂದೆ ಒಂದು ಆಲದ ಮರ ಸಿಗುವುದು. ಅಲ್ಲಿಂದ ಮುಂದೆ ಮರಗಳಿಲ್ಲದ ದಿಬ್ಬ ಸಿಗುವುದು. ಅದನ್ನು ದಾಟಿದ ಬಳಿಕ ಒಂದು ಪರ್ವತ ಕಾಣಿಸುತ್ತದೆ. ಆ ಪರ್ವತದ ಹತ್ತಿರದಲ್ಲೇ ‘ಪಂಚವಟೀ’ ಎಂದು ಪ್ರಸಿದ್ಧವಾದ ಸುಂದರ ವನವಿದೆ. ಅದು ಸದಾ ಹೂವುಗಳಿಂದ ಸುಶೋಭಿತವಾಗಿ ಇರುತ್ತದೆ.॥21-22॥
ಮೂಲಮ್ - 23
ಅಗಸ್ತ್ಯೇನೈವಮುಕ್ತಸ್ತು ರಾಮಃ ಸೌಮಿತ್ರಿಣಾ ಸಹ ।
ಸತ್ಕೃತ್ಯಾಮಂತ್ರಯಾಮಾಸ ತಮೃಷಿಂ ಸತ್ಯವಾದಿನಮ್ ॥
ಅನುವಾದ
ಮಹರ್ಷಿ ಅಗಸ್ತ್ಯರು ಹೀಗೆ ಹೇಳಿದಾಗ ಲಕ್ಷ್ಮಣ ಸಹಿತ ಶ್ರೀರಾಮನು ಅವರನ್ನು ಸತ್ಕರಿಸಿ, ಆ ಸತ್ಯವಾದೀ ಮಹರ್ಷಿಗಳಲ್ಲಿ ಅಲ್ಲಿಗೆ ಹೋಗಲು ಅನುಮತಿ ಬೇಡಿದನು.॥23॥
ಮೂಲಮ್ - 24
ತೌ ತು ತೇನಾಭ್ಯನುಜ್ಞಾತೌ ಕೃತಪಾದಾಭಿವಂದನೌ ।
ತಮಾಶ್ರಮಂ ಪಂಚವಟೀಂ ಜಗ್ಮತುಃ ಸಹ ಸೀತಯಾ ॥
ಅನುವಾದ
ಅವರ ಅಪ್ಪಣೆ ಪಡೆದು ಆ ಇಬ್ಬರೂ ಸಹೋದರರು ಅವರ ಚರಣಗಳಿಗೆ ವಂದಿಸಿ, ಸೀತೆಯೊಂದಿಗೆ ಪಂಚವಟಿಯ ಕಡೆಗೆ ಹೊರಟರು.॥24॥
ಮೂಲಮ್ - 25
ಗೃಹೀತಚಾಪೌ ತು ನರಾಧಿಪಾತ್ಮಜೌ
ವಿಷಕ್ತತೂಣಿ ಸಮರೇಷ್ವಕಾತರೌ ।
ಯಥೋಪದಿಷ್ಟೇನ ಪಥಾ ಮಹರ್ಷಿಣಾ
ಪ್ರಜಗ್ಮತುಃ ಪಂಚವಟೀಂ ಸಮಾಹಿತೌ ॥
ಅನುವಾದ
ರಾಜಕುಮಾರ ಶ್ರೀರಾಮ ಮತ್ತು ಲಕ್ಷ್ಮಣರು ಬೆನ್ನಿಗೆ ಬತ್ತಳಿಕೆ ಕಟ್ಟಿಕೊಂಡು, ಕೈಯಲ್ಲಿ ಧನುಸ್ಸನ್ನು ಎತ್ತಿಕೊಂಡರು. ಅವರಿಬ್ಬರೂ ಸೋದರರು ಸಮರಾಂಗಣದಲ್ಲಿ ಕಾತುರತೆ ತೋರಿಸುವವರಾಗಿರಲಿಲ್ಲ. ಅವರಿಬ್ಬರೂ ಮಹರ್ಷಿಯು ಹೇಳಿರುವ ಮಾರ್ಗದಿಂದ ಬಹಳ ಎಚ್ಚರಿಕೆಯಿಂದ ಪಂಚವಟಿಯ ಕಡೆಗೆ ನಡೆದರು.॥25॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹದಿಮೂರನೆಯ ಸರ್ಗ ಸಂಪೂರ್ಣವಾಯಿತು. ॥13॥