०११ अगस्त्यमाहात्म्यम्

वाचनम्
ಭಾಗಸೂಚನಾ

ಪಂಚಾಪ್ಸರ ತೀರ್ಥ ಮತ್ತು ಮಾಂಡಕರ್ಣಿಯ ಕಥೆ, ವಿಧ-ವಿಧವಾದ ಆಶ್ರಮಗಳನ್ನು ಸಂದರ್ಶಿಸಿ ಶ್ರೀರಾಮನು ಸುತೀಕ್ಷ್ಣರ ಆಶ್ರಮಕ್ಕೆ ಹಿಂದಿರುಗಿದುದು, ಸ್ವಲ್ಪ ಕಾಲ ಅಲ್ಲಿಯೇ ತಂಗಿದ್ದು, ಸುತೀಕ್ಷ್ಣರ ಅಪ್ಪಣೆಯನ್ನು ಪಡೆದು ಅಗಸ್ತ್ಯರ ಆಶ್ರಮಕ್ಕೆ ಸೀತಾ-ಲಕ್ಷ್ಮಣರೊಡನೆ ತೆರಳಿದುದು, ಅಗಸ್ತ್ಯರ ಪ್ರಭಾವದ ವರ್ಣನೆ

ಮೂಲಮ್ - 1

ಅಗ್ರತಃ ಪ್ರಯಯೌ ರಾಮಃ ಸೀತಾ ಮಧ್ಯೇ ಸುಶೋಭನಾ ।
ಪೃಷ್ಠತಸ್ತು ಧನುಷ್ಪಾಣಿರ್ಲಕ್ಷ್ಮಣೋಽನುಜಗಾಮ ಹ ॥

ಅನುವಾದ

ಅನಂತರ ಮುಂದೆ ಶ್ರೀರಾಮ ನಡೆದನು, ನಡುವಿನಲ್ಲಿ ಪರಮಸುಂದರಿ ಸೀತೆ ನಡೆಯುತ್ತಿದ್ದಳು ಮತ್ತು ಹಿಂದುಗಡೆ ಕೈಯಲ್ಲಿ ಧನುಷ್ಯವನ್ನು ಹಿಡಿದು ಲಕ್ಷ್ಮಣ ನಡೆಯತೊಡಗಿದನು.॥1॥

ಮೂಲಮ್ - 2

ತೌ ಪಶ್ಯ ಮಾನೌ ವಿವಿಧಾನ್ ಶೈಲಪ್ರಸ್ಥಾನ್ ವನಾನಿ ಚ ।
ನದೀಶ್ಚ ವಿವಿಧಾ ರಮ್ಯಾ ಜಗ್ಮತುಃ ಸಹ ಸೀತಯಾ ॥

ಅನುವಾದ

ಸೀತೆಯೊಂದಿಗೆ ಆ ಇಬ್ಬರೂ ಸಹೋದರರು ಬಗೆ-ಬಗೆಯ ಪರ್ವತ ಶಿಖರಗಳನ್ನು, ವನಗಳನ್ನು, ನಾನಾ ವಿಧದ ರಮಣೀಯ ನದಿಗಳನ್ನು ನೋಡುತ್ತಾ ಮುಂದೆ ಸಾಗುತ್ತಿದ್ದರು.॥2॥

ಮೂಲಮ್ - 3

ಸಾರಸಾಂಶ್ಚಕ್ರವಾಕಾಂಶ್ಚ ನದೀಪುಲಿನಚಾರಿಣಃ ।
ಸರಾಂಸಿ ಚ ಸಪದ್ಮಾನಿ ಯುಕ್ತಾನಿ ಜಲಜೈಃ ಖಗೈಃ ॥

ಅನುವಾದ

ಕೆಲವು ಕಡೆ ನದೀತೀರಗಳಲ್ಲಿ ಸಾರಸ-ಚಕ್ರವಾಕ ವಿಹರಿಸುತ್ತಿದ್ದವು, ಕೆಲವೆಡೆ ಅರಳಿದ ಕಮಲಗಳಿಂದ ಮತ್ತು ಜಲಚರ ಪಕ್ಷಿಗಳಿಂದ ಕೂಡಿದ ಸರೋವರಗಳು ಶೋಭಿಸುತ್ತಿರುವುದನ್ನು ಅವರು ನೋಡಿದರು.॥3॥

ಮೂಲಮ್ - 4

ಯೂಥಬದ್ಧಾಂಶ್ಚ ಪೃಷತಾನ್ ಮದೋನ್ಮತ್ತಾನ್ವಿಷಾಣಿನಃ ।
ಮಹಿಷಾಂಶ್ಚವರಾಹಾಂಶ್ಚ ಗಜಾಂಶ್ಚ ದ್ರುಮವೈರಿಣಃ॥

ಅನುವಾದ

ಕೆಲವೆಡೆ ಚುಕ್ಕೆಗಳುಳ್ಳ ಜಿಂಕೆಗಳು ಗುಂಪುಕಟ್ಟಿಕೊಂಡು ಹೋಗುತ್ತಿದ್ದವು, ಕೆಲವೆಡೆ ದೊಡ್ಡ-ದೊಡ್ಡ ಕೋಡುಗಳುಳ್ಳ ಮದನೋನ್ಮತ್ತ ಕಾಡುಕೋಣಗಳು ಹಾಗೂ ಕೊರೆದಾಡೆಗಳುಳ್ಳ ಕಾಡುಹಂದಿಗಳು, ವೃಕ್ಷಗಳ ವೈರಿಗಳಾದ ಉದ್ದದಂತಗಳುಳ್ಳ ಆನೆಗಳು ಕಂಡುಬರುತ್ತಿದ್ದವು.॥4॥

ಮೂಲಮ್ - 5

ತೇ ಗತ್ವಾ ದೂರಮಧ್ವಾನಂಲಂಬಮಾನೇ ದಿವಾಕರೇ ।
ದದೃಶುಃ ಸಹಿತಾ ರಮ್ಯಂ ತಟಾಕಂ ಯೋಜನಾಯುತಮ್ ॥

ಅನುವಾದ

ಬಹಳ ದೂರ ಪ್ರಯಾಣಿಸಿದಾಗ ಸೂರ್ಯನು ಅಸ್ತಾಚಲಕ್ಕೆ ಹೋದಾಗ ಅವರು ಮೂವರೂ ಒಂದೊಂದು ಯೋಜನ ಉದ್ದ - ಅಗಲವಾದ ಒಂದು ದೊಡ್ಡ ಸುಂದರ ಸರೋವರವನ್ನು ಒಟ್ಟಿಗೆ ನೋಡಿದರು.॥5॥

ಮೂಲಮ್ - 6

ಪದ್ಮಪುಷ್ಕರ ಸಂಬಾಧಂ ಗಜಯೂಥೈರಲಂಕೃತಮ್ ।
ಸಾರಸೈರ್ಹಂಸಕಾದಂಬೈಃ ಸಂಕುಲಂ ಜಲಜಾತಿಭಿಃ ॥

ಅನುವಾದ

ಆ ಸರೋವರವು ಕೆಂಪು ಮತ್ತು ಬಿಳಿಯ ಕಮಲಗಳಿಂದ ತುಂಬಿತ್ತು, ಅದರಲ್ಲಿ ಕ್ರೀಡಿಸುತ್ತಿದ್ದ ಆನೆಗಳ ಗುಂಪು ಅದರ ಶೋಭೆಯನ್ನು ಹೆಚ್ಚಿಸಿದ್ದವು. ಸಾರಸ, ರಾಜಹಂಸ ಹಾಗೂ ಕಲಹಂಸ ಮೊದಲಾದ ಪಕ್ಷಿಗಳಿಂದ ಹಾಗೂ ನೀರಿನಲ್ಲೇ ಇರುವ ಮೀನು ಮೊದಲಾದ ಜಲಚರಗಳಿಂದ ಅದು ವ್ಯಾಪ್ತವಾಗಿರುವಂತೆ ಕಾಣುತ್ತಿತ್ತು.॥6॥

ಮೂಲಮ್ - 7

ಪ್ರಸನ್ನಸಲಿಲೇ ರಮ್ಯೇ ತಸ್ಮಿನ್ ಸರಸಿ ಶುಶ್ರುವೇ ।
ಗೀತವಾದಿತ್ರನಿರ್ಘೋಷೋ ನ ತು ಕಶ್ಚನ ದೃಶ್ಯತೇ ॥

ಅನುವಾದ

ಸ್ವಚ್ಛವಾದ ತಿಳಿನೀರಿನಿಂದ ತುಂಬಿದ ಆ ರಮಣೀಯ ಸರೋವರದಿಂದ ಸಂಗೀತ ಮತ್ತು ವಾದ್ಯಗಳ ಧ್ವನಿಗಳು ಕೇಳಿಬರುತ್ತಿತ್ತು, ಆದರೆ ಯಾರೂ ಕಂಡುಬರುತ್ತಿರಲಿಲ್ಲ.॥7॥

ಮೂಲಮ್ - 8

ತತಃ ಕೌತೂಹಲಾದ್ ರಾಮೋ ಲಕ್ಷ್ಮಣಶ್ಚ ಮಹಾರಥಃ ।
ಮುನಿಂ ಧರ್ಮಭೃತಂ ನಾಮ ಪ್ರಷ್ಟುಂ ಸಮುಪಚಕ್ರಮೇ ॥

ಅನುವಾದ

ಆಗ ಶ್ರೀರಾಮ ಮತ್ತು ಮಹಾರಥಿ ಲಕ್ಷ್ಮಣನು ಕುತೂಹಲದಿಂದ ತಮ್ಮ ಜೊತೆಗಿದ್ದ ಧರ್ಮಭತರೆಂಬ ಮುನಿಯ ಬಳಿ ಕೇಳಲು ಪ್ರಾರಂಭಿಸಿದರು.॥8॥

ಮೂಲಮ್ - 9

ಇದಮತ್ಯದ್ಭುತಂ ಶ್ರುತ್ವಾ ಸರ್ವೇಷಾಂ ನೋ ಮಹಾಮುನೇ ।
ಕೌತೂಹಲಂ ಮಹಾಜ್ಜಾತಂ ಕಿಮಿದಂ ಸಾಧು ಕಥ್ಯತಾಮ್ ॥

ಅನುವಾದ

ಮಹಾಮುನಿಯೇ! ಅತ್ಯಂತ ಅದ್ಭುತವಾದ ಈ ಸಂಗೀತದ ಧ್ವನಿ ಕೇಳಿ ನಮಗೆಲ್ಲರಿಗೂ ಬಹಳ ಕುತೂಹಲ ಉಂಟಾಗಿದೆ. ಇದೇನು ಎಂಬುದನ್ನು ಚೆನ್ನಾಗಿ ತಿಳಿಸಿರಿ.॥9॥

ಮೂಲಮ್ - 10

ತೇನೈವಮುಕ್ತೋ ಧರ್ಮಾತ್ಮಾ ರಾಘವೇಣ ಮುನಿಸ್ತದಾ ।
ಪ್ರಭಾವಂ ಸರಸಃ ಕ್ಷಿಪ್ರಮಾಖ್ಯಾತುಮುಪಚಕ್ರಮೇ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಧರ್ಮಾತ್ಮ ಧರ್ಮಭೃತರೆಂಬ ಮುನಿಯು ಕೂಡಲೆ ಆ ಸರೊವರದ ಪ್ರಭಾವವನ್ನು ವರ್ಣಿಸಲು ಪ್ರಾರಂಭಿಸಿದರು.॥10॥

ಮೂಲಮ್ - 11

ಇದಂ ಪಂಚಾಪ್ಸರೋ ನಾಮ ತಟಾಕಂ ಸಾರ್ವಕಾಲಿಕಮ್ ।
ನಿರ್ಮಿತಂ ತಪಸಾ ರಾಮ ಮುನಿನಾ ಮಾಂಡಕರ್ಣಿನಾ ॥

ಅನುವಾದ

ಶ್ರೀರಾಮಾ! ಇದು ಪಂಚಾಪ್ಸರ ಎಂಬ ಸರೋವರವಾಗಿದೆ. ಇದು ಸದಾ ಆಳವಾದ ನೀರಿನಿಂದ ತುಂಬಿರುತ್ತದೆ. ಮಾಂಡಕರ್ಣಿ ಎಂಬ ಮುನಿಯು ತನ್ನ ತಪಸ್ಸಿನಿಂದ ಇದನ್ನು ನಿರ್ಮಿಸಿದ್ದರು.॥11॥

ಮೂಲಮ್ - 12

ಸ ಹಿ ತೇಪೇ ತಪಸ್ತೀವ್ರಂ ಮಾಂಡಕರ್ಣಿರ್ಮಹಾಮುನಿಃ ।
ದಶವರ್ಷಸಹಸ್ರಾಣಿ ವಾಯುಭಕ್ಷೋ ಜಲಾಶ್ರಯೇ ॥

ಅನುವಾದ

ಮಹಾಮುನಿ ಮಾಂಡಕರ್ಣಿಯು ಒಂದು ಜಲಾಶಯದಲ್ಲಿ ಇದ್ದು ಕೇವಲ ವಾಯುವನ್ನೇ ಕುಡಿಯುತ್ತಾ ಹತ್ತು ಸಾವಿರ ವರ್ಷಗಳವರೆಗೆ ತೀವ್ರ ತಪಸ್ಸು ಮಾಡಿದ್ದರು.॥12॥

ಮೂಲಮ್ - 13

ತತಃ ಪ್ರವ್ಯಥಿತಾಃ ಸರ್ವೇದೇವಾಃ ಸಾಗ್ನಿಪುರೋಗಮಾಃ ।
ಅಬ್ರುವನ್ ವಚನಂ ಸರ್ವೇ ಪರಸ್ಪರಸಮಾಗತಾಃ ॥

ಅನುವಾದ

ಆಗ ಅಗ್ನಿಯೇ ಮೊದಲಾದ ಎಲ್ಲ ದೇವತೆಗಳು ಅವರ ತಪಸ್ಸಿನಿಂದ ದುಃಖಿತರಾಗಿ ಒಂದೆಡೆ ಸೇರಿ ಪರಸ್ಪರ ಹೀಗೆ ಮಾತನಾಡಿಕೊಂಡರು.॥13॥

ಮೂಲಮ್ - 14

ಅಸ್ಮಾಕಂ ಕಸ್ಯಚಿತ್ ಸ್ಥ್ಥಾನಮೇಷ ಪ್ರಾರ್ಥಯತೇ ಮುನಿಃ ।
ಇತಿ ಸಂವಿಗ್ನ ಮನಸಃ ಸರ್ವೇ ತತ್ರ ದಿವೌಕಸಃ ॥

ಅನುವಾದ

ಈ ಮುನಿಯು ನಮ್ಮಲ್ಲಿ ಯಾರದಾದರೂ ಸ್ಥಾನವನ್ನು ಕಸಿದುಕೊಳ್ಳಲು ಬಯಸಿದಂತೆ ಅನಿಸುತ್ತದೆ. ಹೀಗೆ ಯೋಚಿಸಿ ಆ ಎಲ್ಲ ದೇವತೆಗಳು ಮನಸ್ಸಿನಲ್ಲಿ ಉದ್ವಿಗ್ನರಾದರು.॥14॥

ಮೂಲಮ್ - 15

ತತಃ ಕರ್ತುಂ ತಪೋವಿಘ್ನಂ ದೇರ್ವದೇರ್ವೈರ್ನಿಯೋಜಿತಾಃ ।
ಪ್ರಧಾನಾಪ್ಸರಸಃ ಪಂಚ ವಿದ್ಯುಚ್ಚಲಿತವರ್ಚಸಃ ॥

ಅನುವಾದ

ಆಗ ಅವರ ತಪಸ್ಸಿನಲ್ಲಿ ವಿಘ್ನವನ್ನುಂಟುಮಾಡಲು ಸಮಸ್ತ ದೇವತೆಗಳು ವಿದ್ಯುತ್ತಿನಂತೆ ಅಂಗಕಾಂತಿ ಇದ್ದು ಚಂಚಲರಾದ ಐವರು ಪ್ರಧಾನ ಅಪ್ಸರೆಯರನ್ನು ನಿಯುಕ್ತಗೊಳಿಸಿದರು.॥15॥

ಮೂಲಮ್ - 16

ಅಪ್ಸರೋಭಿಸ್ತತಸ್ತಾಭಿರ್ಮುನಿರ್ದೃಷ್ಟಪರಾವರಃ ।
ನೀತೋ ಮದನವಶ್ಯತ್ವಂ ದೇವಾನಾಂ ಕಾರ್ಯಸಿದ್ಧಯೇ ॥

ಅನುವಾದ

ಅನಂತರ ಲೌಕಿಕ ಮತ್ತು ಪಾರಲೌಕಿಕ ಧರ್ಮಾಧರ್ಮದ ಜ್ಞಾನ ಪ್ರಾಪ್ತಮಾಡಿಕೊಂಡ ಆ ಮುನಿಯನ್ನು ಈ ಐದು ಅಪ್ಸರೆಯರು ದೇವತೆಗಳ ಕಾರ್ಯ ಸಿದ್ಧಿಗೊಳಿಸಲು ಕಾಮಕ್ಕೆ ಅಧೀನರಾಗಿಸಿದರು.॥16॥

ಮೂಲಮ್ - 17

ತಾಶ್ಚೈವಾಪ್ಸರಸಃ ಪಂಚ ಮುನೇಃ ಪತ್ನೀತ್ವಮಾಗತಾಃ ।
ತಟಾಕೇ ನಿರ್ಮಿತಂ ತಾಸಾಂತ ಸ್ಮಿನ್ನಂತರ್ಹಿತಂ ಗೃಹಮ್ ॥

ಅನುವಾದ

ಮುನಿಯ ಪತ್ನಿಯರಾಗಿ ಆ ಐದು ಅಪ್ಸರೆಯರೇ ಇಲ್ಲಿ ಇರುತ್ತಾರೆ. ಅವರಿಗೆ ಇರಲು ಈ ಸರೋವರದೊಳಗೆ ಮನೆ ನಿರ್ಮಾಣಮಾಡಲಾಗಿದೆ, ಅದು ನೀರಿನ ಒಳಗೆ ಅಡಗಿಕೊಂಡಿದೆ.॥17॥

ಮೂಲಮ್ - 18

ತಥೈವಾಪ್ಸರಸಃ ಪಂಚ ನಿವಸಂತ್ಯೋ ಯಥಾಸುಖಮ್ ।
ರಮಯಂತಿ ತಪೋಯೋಗಾನ್ಮುನಿಂ ಯೌವನಮಾಸ್ಥಿತಮ್ ॥

ಅನುವಾದ

ಅದೇ ಮನೆಯಲ್ಲಿ ಇರುತ್ತಾ ತಪಸ್ಸಿನ ಪ್ರಭಾವದಿಂದ ಯುವಕರಾದ ಮುನಿಯನ್ನು ಐದು ಅಪ್ಸರೆಯರು ತಮ್ಮ ಸೇವೆಯಿಂದ ಸಂತುಷ್ಟಗೊಳಿಸುತ್ತಿದ್ದರು.॥18॥

ಮೂಲಮ್ - 19

ತಾಸಾಂ ಸಂಕ್ರೀಡಮಾನಾನಾಮೇಷ ವಾದಿತ್ರನಿಃಸ್ವನಃ ।
ಶ್ರೂಯತೇ ಭೂಷಣೋನ್ಮಿಶ್ರೋ ಗೀತಶಬ್ದೋ ಮನೋಹರಃ ॥

ಅನುವಾದ

ಕ್ರೀಡಾ ವಿಹಾರದಲ್ಲಿ ತೊಡಗಿರುವ ಆ ಅಪ್ಸರೆಯರ ವಾದ್ಯಗಳ ಈ ಧ್ವನಿಯು ಕೇಳಿ ಬರುತ್ತಿದೆ. ಜೊತೆಗೆ ಆಭರಣಗಳ ಧ್ವನಿಗಳೂ ಬೆರೆತುಕೊಂಡಿವೆ. ಹಾಗೆಯೇ ಅವರ ಸಂಗಿತದ ಮಧುರ ಧ್ವನಿಯೂ ಕೇಳಿಬರುತ್ತಿದೆ.॥19॥

ಮೂಲಮ್ - 20

ಆಶ್ಚರ್ಯಮಿತಿ ತಸ್ಯೈತದ್ ವಚನಂ ಭಾವಿತಾತ್ಮನಃ ।
ರಾಘವಃ ಪ್ರತಿಜಗ್ರಾಹ ಸಹ ಭ್ರಾತ್ರಾ ಮಹಾಯಶಾಃ ॥

ಅನುವಾದ

ಸಹೋದರನೊಂದಿಗೆ ಮಹಾಯಶಸ್ವೀ ಶ್ರೀರಘುನಾಥನು ಆ ಭವಿತಾತ್ಮ ಮಹರ್ಷಿಯ ಈ ಕಥೆಯನ್ನು ‘ಇದಾದರೋ ಬಹಳ ಆಶ್ಚರ್ಯದ ಮಾತಾಗಿದೆ.’ ಎಂದು ಹೇಳಿ ಸ್ವೀಕರಿಸಿದನು.॥20॥

ಮೂಲಮ್ - 21

ಏವಂ ಕಥಯಮಾನಃ ಸ ದದರ್ಶಾಶ್ರಮಮಂಡಲಮ್ ।
ಕುಶಚೀರಪರಿಕ್ಷಿಪ್ತಂ ಬ್ರಾಹ್ಮಯಾ ಲಕ್ಷ್ಮ್ಯಾಸಮಾವೃತಮ್ ॥

ಅನುವಾದ

ಹೀಗೆ ಹೇಳುತ್ತಾ ಶ್ರೀರಾಮಚಂದ್ರನಿಗೆ ಒಂದು ಆಶ್ರಮಗಳ ಗುಂಪು ಕಂಡುಬಂತು. ಅಲ್ಲಿ ಎಲ್ಲೆಡೆ ಕುಶ, ನಾರುಮಡಿಗಳು ಹರಡಿಕೊಂಡಿದ್ದವು. ಆ ಆಶ್ರಮಗಳು ಬ್ರಹ್ಮತೇಜದಿಂದ ಪ್ರಕಾಶಿತವಾಗಿದ್ದವು.॥21॥

ಮೂಲಮ್ - 22½

ಪ್ರವಿಶ್ಯ ಸಹ ವೈದೇಹ್ಯಾ ಲಕ್ಷ್ಮಣೇನ ಚ ರಾಘವಃ ।
ತದಾ ತಸ್ಮಿನ್ ಸಕಾಕುತ್ಸ್ಥಃ ಶ್ರೀಮತ್ಯಾಶ್ರಮಮಂಡಲೇ ॥
ಉಷಿತ್ವಾ ಸ ಸುಖಂ ತತ್ರ ಪೂಜ್ಯಮಾನೋ ಮಹರ್ಷಿಭಿಃ ।

ಅನುವಾದ

ವಿದೇಹನಂದಿನೀ ಸೀತೆ ಹಾಗೂ ಲಕ್ಷ್ಮಣನೊಂದಿಗೆ ಆ ತೇಜಸ್ವೀ ಆಶ್ರಮಮಂಡಲವನ್ನು ಪ್ರವೇಶಿಸಿ ಕಕುತ್ಸ್ಥಕುಲಭೂಷಣ ಶ್ರೀರಾಮನು ಆಗ ಸುಖವಾಗಿ ವಾಸಿಸಿದನು. ಅಲ್ಲಿಯ ಮಹರ್ಷಿಗಳು ಅವನನ್ನು ಬಹಳವಾಗಿ ಆದರಿಸಿ ಸತ್ಕರಿಸಿದರು.॥22½॥

ಮೂಲಮ್ - 23½

ಜಗಾಮ ಚಾಶ್ರಮಾಂಸ್ತೇಷಾಂ ಪರ್ಯಾಯೇಣ ತಪಸ್ವಿನಾಮ್ ॥
ಯೇಷಾಮುಷಿತವಾನ್ಪೂರ್ವಂ ಸಕಾಶೇ ಚ ಮಹಾಸ್ತ್ರವಿತ್ ।

ಅನುವಾದ

ಅನಂತರ ಮಹಾನ್ ಅಸ್ತ್ರಗಳ ಜ್ಞಾತಾ ಶ್ರೀರಾಮನು ಒಂದಾದ ಮೇಲೊಂದು ಎಲ್ಲ ತಪಸ್ವಿ ಮುನಿಗಳ ಆಶ್ರಮಗಳಿಗೆ ಹೋದನು. ಈ ಮೊದಲೂ ವಾಸಿಸಿದವರಲ್ಲಿಯೂ ಅವರ ಭಕ್ತಿಯನ್ನು ನೋಡಿ ಎರಡನೆಯ ಬಾರಿಯೂ ಹೋದನು.॥23½॥

ಮೂಲಮ್ - 24

ಕ್ವಚಿತ್ಪರಿದಶಾನ್ ಮಾಸಾನೇಕಸಂವತ್ಸರಂ ಕ್ವಚಿತ್ ॥

ಮೂಲಮ್ - 25½

ಕ್ವಚಿಚ್ಚ ಚತುರೋ ಮಾಸಾನ್ಪಂಚ ಷಟ್ ಚ ಪರಾನ್ ಕ್ವ್ವಚಿತ್ ।
ಅಪರತ್ರಾಧಿಕಾನ್ ಮಾಸಾನಧ್ಯರ್ಧಮಧಿಕಂ ಕ್ವಚಿತ್ ॥
ತ್ರೀನ್ ಮಾಸಾನಷ್ಟ ಮಾಸಾಂಶ್ಚ ರಾಘವೋ ನ್ಯವಸತ್ಸುಖಮ್ ।

ಅನುವಾದ

ಕೆಲವೆಡೆ ಹತ್ತು ತಿಂಗಳು, ಕೆಲವೆಡೆ ವರ್ಷವಿಡೀ, ಕೆಲವೆಡೆ ನಾಲ್ಕು ತಿಂಗಳು, ಕೆಲವೆಡೆ ಐದು ಆಥವಾ ಆರುತಿಂಗಳು, ಕೆಲವೆಡೆ ಇದಕ್ಕಿಂತಲೂ ಹೆಚ್ಚು ಏಳುತಿಂಗಳು, ಕೆಲವೆಡೆ ಅದಕ್ಕಿಂತ ಹೆಚ್ಚು ಎಂಟುತಿಂಗಳು, ಕೆಲವೆಡೆ ಎಂಟೂವರೆ ತಿಂಗಳು, ಕೆಲವೆಡೆ ಮೂರು ತಿಂಗಳು ಮತ್ತು ಕೆಲವೆಡೆ ಹನ್ನೆರಡು ತಿಂಗಳುವರೆಗೆ ಶ್ರೀರಾಮಚಂದ್ರನು ಸುಖವಾಗಿ ವಾಸಿಸಿದನು.॥24-25½॥

ಮೂಲಮ್ - 26½

ತತ್ರ ಸಂವಸತಸ್ತಸ್ಯ ಮುನೀನಾಮಾಶ್ರಮೇಷು ವೈ ॥
ರಮತಶ್ಚಾನುಕೂಲ್ಯೇನ ಯಯುಃ ಸಂವತ್ಸರಾ ದಶ ।

ಅನುವಾದ

ಹೀಗೆ ಮುನಿಗಳ ಆಶ್ರಮಗಳಲ್ಲಿ ಇರುತ್ತಾ, ಅನುಕೂಲತೆಯನ್ನು ಪಡೆಯುತ್ತಾ ಆನಂದದ ಅನುಭವ ಪಡೆಯುತ್ತಾ, ಅವನ ಹತ್ತು ವರ್ಷಗಳು ಕಳೆದು ಹೋದವು.॥26½॥

ಮೂಲಮ್ - 27½

ಪರಿಸೃಜ್ಯ ಚ ಧರ್ಮಜ್ಞೋ ರಾಘವಃ ಸಹ ಸೀತಯಾ ॥
ಸುತೀಕ್ಷ್ಣಸ್ಯಾಶ್ರಮಪದಂ ಪುನರೇವಾಜಗಾಮ ಹ ।

ಅನುವಾದ

ಈ ಪ್ರಕಾರ ಎಲ್ಲೆಡೆ ಸುತ್ತಾಡುತ್ತಾ ಧರ್ಮಜ್ಞನಾದ ಭಗವಾನ್ ಶ್ರೀರಾಮನು ಸೀತೆಯೊಂದಿಗೆ ಪುನಃ ಸುತೀಕ್ಷ್ಣರ ಆಶ್ರಮಕ್ಕೆ ಮರಳಿ ಬಂದನು.॥27½॥

ಮೂಲಮ್ - 28½

ಸ ತಮಾಶ್ರಮಮಾಗಮ್ಯ ಮುನಿಭಿಃ ಪರಿಪೂಜಿತಃ ॥
ತತ್ರಾಪಿ ನ್ಯವಸದ್ ರಾಮಃ ಕಿಂಚಿತ್ಕಾಲಮರಿಂದಮಃ ।

ಅನುವಾದ

ಶತ್ರುದಮನನಾದ ಶ್ರೀರಾಮನು ಆ ಆಶ್ರಮಕ್ಕೆ ಬಂದು ಅಲ್ಲಿರುವ ಮುನಿಗಳಿಂದ ಚೆನ್ನಾಗಿ ಸಮ್ಮಾನಿತನಾಗಿ ಅಲ್ಲಿಯೂ ಕೆಲವು ಕಾಲದವರೆಗೆ ತಂಗಿದನು.॥28½॥

ಮೂಲಮ್ - 29½

ಅಥಾಶ್ರಮಸ್ಥೋವಿನಯಾತ್ ಕದಾಚಿತ್ತಂ ಮಹಾಮುನಿಮ್ ॥
ಉಪಾಸೀನಃ ಸ ಕಾಕುತ್ಸ್ಥಃ ಸುತೀಕ್ಷ್ಣಮಿದಮಬ್ರವೀತ್ ।

ಅನುವಾದ

ಆ ಆಶ್ರಮದಲ್ಲಿ ಇರುವಾಗ ಶ್ರೀರಾಮನು ಒಂದು ದಿನ ಮಹಾಮುನಿ ಸುತಿಕ್ಷ್ಣರ ಬಳಿಯಲ್ಲಿ ಕುಳಿತು ವಿನೀತಭಾವದಿಂದ ಕೇಳಿದನು.॥29½॥

ಮೂಲಮ್ - 30

ಅಸ್ಮಿನ್ನರಣ್ಯೇ ಭಗವನ್ನಗಸ್ತೋ ಮುನಿಸತ್ತಮಃ ॥

ಮೂಲಮ್ - 31

ವಸತೀ ಮಯಾ ನಿತ್ಯಂ ಕಥಾಃ ಕಥಯತಾಂ ಶ್ರುತಮ್ ।
ನ ತು ಜಾನಾಮಿ ತಂ ದೇಶಂ ವನಸ್ಯಾಸ್ಯ ಮಹತ್ತಯಾ ॥

ಅನುವಾದ

ಪೂಜ್ಯರೇ! ಪ್ರತಿದಿನ ಮಾತುಕತೆಯಾಡುವ ಈ ವನದಲ್ಲಿ ಎಲ್ಲೋ ಮುನಿಶ್ರೇಷ್ಠ ಅಗಸ್ತ್ಯರು ವಾಸಿಸುತ್ತಾರೆ ಎಂದು ನಾನು ಜನರಿಂದ ಕೇಳಿದ್ದೆ. ಆದರೆ ಈ ವನದ ವಿಶಾಲತೆಯಿಂದಾಗಿ ಆ ಸ್ಥಾನವನ್ನು ನಾನು ತಿಳಿದಿಲ್ಲ.॥30-31॥

ಮೂಲಮ್ - 32

ಕುತ್ರಾಶ್ರಮಪದಂ ರಮ್ಯಾಂ ಮಹರ್ಷೇಸ್ತಸ್ಯ ಧೀಮತಃ ।
ಪ್ರಸಾದಾರ್ಥಂಭಗವತಃ ಸಾನುಜಃ ಸಹ ಸೀತಯಾ ॥

ಮೂಲಮ್ - 33

ಅಗಸ್ತ್ಯಮಭಿಗಚ್ಛೇಯಮಭಿವಾದಯಿತುಂ ಮುನಿಮ್ ।
ಮನೋರಥೋ ಮಹಾನೇಷ ಹೃದಿ ಸಂಪರಿವರ್ತತೇ ॥

ಅನುವಾದ

ಆ ಧೀಮಂತ ಮಹರ್ಷಿಯ ಸುಂದರ ಆಶ್ರಮ ಎಲ್ಲಿದೆ? ನಾನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ಭಗವಾನ್ ಅಗಸ್ತ್ಯರನ್ನು ಪ್ರಸನ್ನಗೊಳಿಸಲು, ಆ ಮುನೀಶ್ವರರಿಗೆ ನಮಸ್ಕರಿಸುವ ಉದ್ದೇಶದಿಂದ ಅವರ ಆಶ್ರಮಕ್ಕೆ ಹೋಗಬೇಕೆಂಬ ಈ ಮನೋರಥವು ನನ್ನ ಮನಸ್ಸಿನಲ್ಲಿ ಸುತ್ತುತ್ತಾ ಇದೆ.॥32-33॥

ಮೂಲಮ್ - 34½

ಯದಹಂ ತಂ ಮುನಿವರಂ ಶುಶ್ರೂಷೇಯಮಪಿ ಸ್ವಯಮ್ ।
ಇತಿ ರಾಮಸ್ಯ ಸ ಮುನಿಃ ಶ್ರುತ್ವಾ ಧರ್ಮಾತ್ಮನೋ ವಚಃ ॥
ಸುತೀಕ್ಷ್ಣಃ ಪ್ರತ್ಯುವಾಚೇದಂ ಪ್ರೀತೋ ದಶರಥಾತ್ಮಜಮ್ ।

ಅನುವಾದ

ನಾನೂ ಮುನಿವರ ಅಗಸ್ತ್ಯರ ಸೇವೆ ಮಾಡಬೇಕೆಂದು ಬಯಸುತ್ತಿದ್ದೇನೆ. ಧರ್ಮಾತ್ಮ ಶ್ರೀರಾಮನ ಈ ಮಾತನ್ನು ಕೇಳಿ ಸುತೀಕ್ಷ್ಣ ಮುನಿಗಳು ಬಹಳ ಆನಂದಿತರಾಗಿ ದಶರಥ ನಂದನನಲ್ಲಿ ಇಂತೆಂದರು.॥34½॥

ಮೂಲಮ್ - 35

ಅಹಮಪ್ಯೇತದೇವತ್ವಾಂ ವಕ್ತುಕಾಮಃ ಸಲಕ್ಷ್ಮಣಮ್ ॥

ಮೂಲಮ್ - 36

ಅಗಸ್ತ್ಯಮಭಿಗಚ್ಛೇತಿ ಸೀತಯಾ ಸಹ ರಾಘವ ।
ದಿಷ್ಟ್ಯಾ ತ್ವಿದಾನೀಮರ್ಥೇಽಸ್ಮಿನ್ಸ್ವ್ವಯಮೇವ ಬ್ರವೀಷಿ ಮಾಮ್॥

ಅನುವಾದ

ರಘುನಂದನ! ನಾನೂ ಕೂಡ ಲಕ್ಷ್ಮಣಸಹಿತ ನಿನ್ನಲ್ಲಿ ಇದನ್ನೇ ಹೇಳಬೇಕೆಂದಿದ್ದೆ. ನೀನು ಸೀತಾಸಹಿತ ಮಹರ್ಷಿ ಅಗಸ್ತ್ಯರ ಬಳಿಗೆ ಹೋಗು. ಈಗ ನೀನೇ ಸ್ವತಃ ಅಲ್ಲಿಗೆ ಹೋಗಲು ನನ್ನಲ್ಲಿ ಕೇಳಿದುದು ಸೌಭಾಗ್ಯದ ಮಾತಾಗಿದೆ.॥35-36॥

ಮೂಲಮ್ - 37

ಅಯಮಾಖ್ಯಾಮಿ ತೇ ರಾಮ ಯತ್ರಾಗಸ್ತ್ಯೋ ಮಹಾಮುನಿಃ ।
ಯೋಜನಾನ್ಯಾಶ್ರಮಾತ್ ತಾತ ಯಾಹಿ ಚತ್ವಾರಿ ವೈ ತತಃ ॥
ದಕ್ಷಿಣೇನ ಮಹಾನ್ ಶ್ರೀಮಾನಗಸ್ತ್ಯ ಭ್ರಾತುರಾಶ್ರಮಃ ॥

ಅನುವಾದ

ಶ್ರೀರಾಮಾ! ಮಹಾಮುನಿ ಅಗಸ್ತ್ಯರು ಇರುವ ಆಶ್ರಮದ ಜಾಗವನ್ನು ನಾನು ಈಗಲೇ ನಿನಗೆ ತಿಳಿಸುತ್ತೇನೆ. ಅಯ್ಯಾ! ಈ ಆಶ್ರಮದಿಂದ ನಾಲ್ಕು ಯೋಜನ ದಕ್ಷಿಣಕ್ಕೆ ಹೋದರೆ ಅಲ್ಲಿ ನಿನಗೆ ಅಗಸ್ತ್ಯರ ತಮ್ಮನ ಬಹಳ ದೊಡ್ಡ ಸುಂದರ ಆಶ್ರಮ ಸಿಗುವುದು.॥37॥

ಮೂಲಮ್ - 38

ಸ್ಥಲೀಪ್ರಾಯವನೋದ್ದೇಶೇ ಪಿಪ್ಪಲೀವನಶೋಭಿತೇ ।
ಬಹುಪುಷ್ಪಫಲೇರಮ್ಯೇ ನಾನಾ ವಿಹಗನಾದಿತೇ ॥

ಮೂಲಮ್ - 39

ಪದ್ಮಿನ್ಯೋ ವಿವಿಧಾಸ್ತತ್ರ ಪ್ರಸನ್ನ ಸಲಿಲಾಶಯಾಃ ।
ಹಂಸಕಾರಂಡ ವಾಕೀರ್ಣಾಶ್ಚ ಕ್ರವಾಕೋಪಶೋಭಿತಾಃ ॥

ಅನುವಾದ

ಅಲ್ಲಿಯ ವನದ ಭೂಮಿ ಸಮತಟ್ಟಾಗಿದೆ ಹಾಗೂ ಪಿಪ್ಪಲೀವನದಿಂದ ಆಶ್ರಮ ಶೋಭಿಸುತ್ತಿದೆ. ಅಲ್ಲಿ ಹೇರಳವಾಗಿ ಫಲ-ಪುಷ್ಪಗಳಿವೆ. ನಾನಾ ವಿಧದ ಪಕ್ಷಿಗಳ ಕಲರವದಿಂದ ಕೂಡಿದ್ದು ರಮಣೀಯ ಆಶ್ರಮದ ಬಳಿ ಬಗೆ-ಬಗೆಯ ಜಲಭರಿತ ಕಮಲ ಸರೋವರಗಳು ಇವೆ. ಹಂಸ ಕಾರಂಡವ ಮೊದಲಾದ ಪಕ್ಷಿಗಳು ಅವುಗಳಲ್ಲಿ ತುಂಬಿದ್ದು, ಚಕ್ರವಾಕಗಳೂ ಅವುಗಳ ಶೋಭೆಯನ್ನು ಹೆಚ್ಚಿಸಿದೆ.॥38-39॥

ಮೂಲಮ್ - 40

ತತ್ರೈಕಾಂ ರಜನೀ ವ್ಯಷ್ಯ ಪ್ರಭಾತೇ ರಾಮಗಮ್ಯತಾಮ್ ।
ದಕ್ಷಿಣಾಂ ದಿಶಮಾಸ್ಥಾಯ ವನಷಂಡಸ್ಯ ಪಾರ್ಶ್ವತಃ ॥

ಮೂಲಮ್ - 41

ತತ್ರಾಗಸ್ತ್ಯಾ ಶ್ರಮಪದಂ ಗತ್ವಾ ಯೋಜನಮಂತರಮ್ ।
ರಮಣೀಯೇ ವನೋದ್ದೇಶೇ ಬಹುಪಾದಪಶೋಭಿತೇ ॥

ಅನುವಾದ

ಶ್ರೀರಾಮಾ! ನೀನು ಒಂದು ರಾತ್ರೆ ಆಶ್ರಮದಲ್ಲಿದ್ದು ಪ್ರಾತಃಕಾಲ ಆ ವನಖಂಡದ ಬದಿಯಿಂದ ದಕ್ಷಿಣ ದಿಕ್ಕಿನತ್ತ ಹೋಗು. ಹೀಗೆ ಒಂದು ಯೋಜನ ಮುಂದೆ ಹೋದಾಗ ಅನೇಕಾನೇಕ ವೃಕ್ಷಗಳಿಂದ ಶೋಭಿಸುವ ರಮಣೀಯ ಭಾಗದಲ್ಲಿ ಅಗಸ್ತ್ಯಮುನಿಯ ಆಶ್ರಮ ಸಿಗುವುದು.॥40-41॥

ಮೂಲಮ್ - 42

ರಂಸ್ಯತೇ ತತ್ರ ವೈದೇಹೀ ಲಕ್ಷ್ಮಣಶ್ಚ ತ್ವಯಾ ಸಹ ।
ಸ ಹಿ ರಮ್ಯೋ ವನೋದ್ದೇಶೋ ಬಹುಪಾದಪಸಂಯುತಃ ॥

ಅನುವಾದ

ಅಲ್ಲಿ ವಿದೇಹನಂದಿನೀ ಸೀತೆ ಮತ್ತು ಲಕ್ಷ್ಮಣರು ನಿನ್ನೊಂದಿಗೆ ಆನಂದವಾಗಿ ಸಂಚರಿಸುವರು. ಏಕೆಂದರೆ ಅಸಂಖ್ಯ ವೃಕ್ಷಗಳಿಂದ ಸುಶೋಭಿತ ಆ ವನಪ್ರಾಂತವು ಬಹಳ ರಮಣೀಯವಾಗಿದೆ.॥42॥

ಮೂಲಮ್ - 43

ಯದಿ ಬುದ್ಧಿಃ ಕೃತಾ ದ್ರಷ್ಟುಮಗಸ್ತ್ಯಂ ತಂ ಮಹಾಮುನಿಮ್ ।
ಅದ್ಯೈವ ಗಮನೇ ಬುದ್ಧಿಂ ರೋಚಯಸ್ವ ಮಹಾಮತೇ ॥

ಅನುವಾದ

ಮಹಾಮತೇ! ನೀನು ಮಹಾಮುನಿ ಅಗಸ್ತ್ಯರನ್ನು ದರ್ಶಿಸುವ ನಿಶ್ಚಯ ಮಾಡಿರುವೆಯಾದರೆ ಇಂದೇ ಪ್ರಯಾಣವನ್ನು ನಿಶ್ಚಯಿಸು.॥43॥

ಮೂಲಮ್ - 44

ಇತಿ ರಾಮೋ ಮುನೇಃ ಶ್ರುತ್ವಾ ಸಹಭ್ರಾತ್ರಾಭಿವಾದ್ಯ ಚ ।
ಪ್ರತಸ್ಥೇಽಗಸ್ತ್ಯಮುದ್ದಿಶ್ಯ ಸಾನುಗಃ ಸಹ ಸೀತಯಾ ॥

ಅನುವಾದ

ಮುನಿಯ ಈ ಮಾತನ್ನು ಕೇಳಿ ಲಕ್ಷ್ಮಣ ಸಹಿತ ಶ್ರೀರಾಮನು ಅವರಿಗೆ ನಮಸ್ಕರಿಸಿ, ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಗಸ್ತ್ಯರ ಆಶ್ರಮದ ಕಡೆಗೆ ಹೊರಟನು.॥44॥

ಮೂಲಮ್ - 45

ಪಶ್ಯನ್ವನಾನಿ ಚಿತ್ರಾಣಿ ಪರ್ವತಾಂಶ್ಚಾಭ್ರ ಸಂನಿಭಾನ್ ।
ಸರಾಂಸಿ ಸರಿತಶ್ಚೈವ ಪಥಿ ಮಾರ್ಗವಶಾನುಗಾನ್ ॥

ಅನುವಾದ

ದಾರಿಯಲ್ಲಿ ಸಿಕ್ಕಿದ ಚಿತ್ರ-ವಿಚಿತ್ರ ವನಗಳನ್ನು, ಮೇಘಮಾಲೆಗಳಂತಿರುವ ಪರ್ವತ ಪಂಕ್ತಿಗಳನ್ನು, ಸರೋವರಗಳನ್ನು ನದಿಗಳನ್ನು ನೋಡುತ್ತಾ ಅವರು ಮುಂದಕ್ಕೆ ನಡೆದರು.॥45॥

ಮೂಲಮ್ - 46

ಸುತೀಕ್ಷ್ಣೇನೋಪದಿಷ್ಟೇನ ಗತ್ವಾ ತೇನ ಪಥಾ ಸುಖಮ್ ।
ಇದಂ ಪರಮಸಂಹೃಷ್ಟೋ ವಾಕ್ಯಂ ಲಕ್ಷ್ಮಣಮಬ್ರವೀತ್ ॥

ಅನುವಾದ

ಈ ಪ್ರಕಾರ ಸುತೀಕ್ಷ್ಣರು ತಿಳಿಸಿರುವ ಮಾರ್ಗದಿಂದ ಸುಖವಾಗಿ ನಡೆಯುತ್ತಾ ಶ್ರೀರಾಮಚಂದ್ರನು ಅತ್ಯಂತ ಹರ್ಷಗೊಂಡು ಲಕ್ಷ್ಮಣನಲ್ಲಿ ಹೀಗೆ ಹೇಳಿದನು .॥46॥

ಮೂಲಮ್ - 47

ಏತದೇವಾಶ್ರಮಪದಂ ನೂನಂ ತಸ್ಯ ಮಹಾತ್ಮನಃ ।
ಅಗಸ್ತ್ಯಸ್ಯ ಮುನೇರ್ಭ್ರಾತುರ್ದೃಶ್ಯತೇ ಪುಣ್ಯಕರ್ಮಣಃ ॥

ಅನುವಾದ

ಸುಮಿತ್ರಾನಂದನನೇ! ಖಂಡಿತವಾಗಿಯೇ ಪುಣ್ಯಕರ್ಮಗಳನ್ನು ಅನುಷ್ಠಾನಮಾಡುವ ಮಹಾತ್ಮಾ ಅಗಸ್ತ್ಯಮುನಿಯ ತಮ್ಮನ ಆಶ್ರಮ ಇಲ್ಲಿ ಕಂಡು ಬರುತ್ತಿದೆ.॥47॥

ಮೂಲಮ್ - 48

ಯಥಾ ಹೀಮೇ ವನಸ್ಯಾಸ್ಯ ಜ್ಞಾತಾಃ ಪಥಿ ಸಹಸ್ರಶಃ ।
ಸಂನತಾಃ ಫಲಭಾರೇಣ ಪುಷ್ಪಭಾರೇಣ ಚ ದ್ರುಮಾಃ ॥

ಅನುವಾದ

ಏಕೆಂದರೆ ಸುತೀಕ್ಷ್ಣರು ತಿಳಿಸಿದಂತೆಯೇ ವನದ ಮಾರ್ಗದಲ್ಲಿ ಹೂವು-ಹಣ್ಣುಗಳ ಭಾರದಿಂದ ಬಾಗಿದ ಸಾವಿರಾರು ಪರಿಚಿತ ವೃಕ್ಷಗಳು ಇಲ್ಲಿ ಶೋಭಿಸುತ್ತಿವೆ.॥48॥

ಮೂಲಮ್ - 49

ಪಿಪ್ಪಲೀನಾಂ ಚ ಪಕ್ವಾನಾಂ ವನಾದಸ್ಮಾದುಪಾಗತಃ ।
ಗಂಧೋಽಯಂ ಪವನೋತ್ಕ್ಷಿಪ್ತಃ ಸಹಸಾ ಕಟುಕೋದಯಃ ॥

ಅನುವಾದ

ಈ ವನದಲ್ಲಿ ಹಣ್ಣಾದ ಪೀಪಲಿಗಳ ಸುಗಂಧವು ವಾಯುವಿ ನಿಂದ ಪ್ರೇರಿತವಾಗಿ ಈ ಕಡೆಯೇ ಬರುತ್ತಿದೆ. ಇದರಿಂದ ಕಟುರಸದ ಉದಯವಾಗುತ್ತಾ ಇದೆ.॥49॥

ಮೂಲಮ್ - 50

ತತ್ರ ತತ್ರ ಚ ದೃಶ್ಯಂತೇ ಸಂಕ್ಷಿಪ್ತಾಃ ಕಾಷ್ಠಸಂಚಯಾಃ ।
ಲೂನಾಶ್ಚ ಪರಿದೃಶ್ಯಂತೇ ದರ್ಭಾ ವೈಢೂರ್ಯವರ್ಚಸಃ ॥

ಅನುವಾದ

ಎಲ್ಲೆಡೆ ಕಟ್ಟಿಗೆಗಳ ರಾಶಿಗಳು ಕಂಡುಬರುತ್ತಿವೆ ಮತ್ತು ಕತ್ತರಿಸಿದ ವೈಢೂರ್ಯಮಣಿಯಂತೆ ಬಣ್ಣದ ಕುಶಗಳು ಕಣ್ಣಿಗೆ ಬೀಳುತ್ತಿವೆ.॥50॥

ಮೂಲಮ್ - 51

ಏತಚ್ಚ ವನಮಧ್ಯಸ್ಥಂ ಕೃಷ್ಣಾಭ್ರಶಿಖರೋಪಮಮ್ ।
ಪಾವಕಸ್ಯಾಶ್ರಮಸ್ಥಸ್ಯ ಧೂಮಾಗ್ರಂ ಸಂಪ್ರದೃಶ್ಯತೇ ॥

ಅನುವಾದ

ಇದೋ ನೋಡು, ಕಾಡಿನ ನಡುವೆ ಆಶ್ರಮದ ಅಗ್ನಿಯ ಹೊಗೆ ಏಳುತ್ತಿರುವುದು ಕಂಡುಬರುತ್ತಿದೆ. ಅದರ ತುದಿಯು ಕಪ್ಪು ಮೋಡಗಳ ಮೇಲ್ಭಾಗದಂತೆ ತೋರುತ್ತಿದೆ.॥51॥

ಮೂಲಮ್ - 52

ವಿವಿಕ್ತೇಷುಚ ತೀರ್ಥೇಷು ಕೃತಸ್ನಾನಾ ದ್ವಿಜಾತಯಃ ।
ಪುಷ್ಪೋಪಹಾರಂ ಕುರ್ವಂತಿ ಕುಸಮೈಃ ಸ್ವಯಮರ್ಜಿತೈಃ ॥

ಅನುವಾದ

ಇಲ್ಲಿಯ ಏಕಾಂತ ಹಾಗೂ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿ ಬಂದಿರುವ ಬ್ರಾಹ್ಮಣರು ಸ್ವತಃ ಹೆಕ್ಕಿ ತಂದ ಹೂವುಗಳಿಂದ ದೇವತೆಗಳಿಗೆ ಪೂಜೆ ಅರ್ಪಿಸುತ್ತಿದ್ದಾರೆ.॥52॥

ಮೂಲಮ್ - 53

ತತಃ ಸತೀಕ್ಷ್ಣವಚನಂ ಯಥಾ ಸೌಮ್ಯ ಮಯಾ ಶ್ರುತಮ್ ।
ಅಗಸ್ತ್ಯಸ್ಯಾಶ್ರಮೋ ಭ್ರಾತುರ್ನೂನಮೇಷ ಭವಿಷ್ಯತಿ ॥

ಅನುವಾದ

ಸೌಮ್ಯನೇ! ನಾನು ಸುತೀಕ್ಷ್ಣರ ಮಾತನ್ನು ಕೇಳಿದಂತೆಯೇ ನಿಶ್ಚಯವಾಗಿಯೂ ಇದು ಅಗಸ್ತ್ಯರ ತಮ್ಮನ ಆಶ್ರಮವೇ ಆಗಿದೆ.॥53॥

ಮೂಲಮ್ - 54

ನಿಗೃಹ್ಯ ತರಸಾ ಮೃತ್ಯುಂ ಲೋಕಾನಾಂ ಹಿತಕಾಮ್ಯಯಾ ।
ಯಸ್ಯ ಭ್ರಾತ್ರಾ ಕೃತೇಯಂ ದಿಕ್ಶರಣ್ಯಾ ಪುಷ್ಯಕರ್ಮಣಾ ॥

ಅನುವಾದ

ಇವರ ಅಣ್ಣ ಪುಣ್ಯಕರ್ಮ ಅಗಸ್ತ್ಯರು ಸಮಸ್ತ ಲೋಕಗಳ ಹಿತದ ಕಾಮನೆಯಿಂದ ಮೃತ್ಯುಸ್ವರೂಪಿ ವಾತಾಪಿ ಮತ್ತು ಇಲ್ವಲರನ್ನು ಕೂಡಲೇ ದಮನ ಮಾಡಿ ದಕ್ಷಿಣ ದಿಕ್ಕನ್ನು ಆಶ್ರಯಿಸಲು ಯೋಗ್ಯವಾಗಿಸಿದರು.॥54॥

ಮೂಲಮ್ - 55

ಇಹೈ ಕದಾಕಿಲ ಕ್ರೂರೋ ವಾತಾಪಿರಪಿ ಚೇಲ್ವಲಃ ।
ಭ್ರಾತರೌ ಸಹಿತಾವಾಸ್ತಾಂ ಬ್ರಾಹ್ಮಣಘ್ನೌ ಮಹಾಸುರೌ ॥

ಅನುವಾದ

ಒಂದು ಕಾಲದಲ್ಲಿ ಇಲ್ಲಿ ಕ್ರೂರ ಸ್ವಭಾವದ ವಾತಾಪಿ ಮತ್ತು ಇಲ್ವಲ ಇವರಿಬ್ಬರೂ ಸಹೋದರರು ಒಟ್ಟಿಗೆ ಇರುತ್ತಿದ್ದರು. ಇವರಿಬ್ಬರೂ ಮಹಾ ಅಸುರರು ಬ್ರಾಹ್ಮಣರನ್ನು ಹತ್ಯೆ ಮಾಡುತ್ತಿದ್ದರು.॥55॥

ಮೂಲಮ್ - 56

ಧಾರಯನ್ ಬ್ರಾಹ್ಮಣಂ ರೂಪಮಿಲ್ವಲಃ ಸಂಸ್ಕೃತಂ ವದನ್ ।
ಆಮಂತ್ರಯತಿ ವಿಪ್ರಾನ್ ಸ ಶ್ರಾದ್ಧಮುದ್ದಿಶ್ಯ ನಿರ್ಘೃಣಃ ॥

ಮೂಲಮ್ - 57

ಭ್ರಾತರಂ ಸಂಸ್ಕೃತಂ ಕೃತ್ವಾ ತತಸ್ತಂ ಮೇಷರೂಪಿಣಮ್ ।
ತಾನ್ ದ್ವಿಜಾನ್ ಭೋಜಯಾಮಾಸ ಶ್ರಾದ್ಧ ದೃಷ್ಟೇನ ಕರ್ಮಣಾ॥

ಅನುವಾದ

ನಿರ್ದಯಿ ಇಲ್ವಲನು ಬ್ರಾಹ್ಮಣನ ರೂಪ ಧರಿಸಿ ಸಂಸ್ಕೃತದಲ್ಲೇ ಮಾತನಾಡುತ್ತಾ ಹೋಗಿ ಶ್ರಾದ್ಧಕ್ಕಾಗಿ ಬ್ರಾಹ್ಮಣರನ್ನು ನಿಮಂತ್ರಣಕೊಡುತ್ತಿದ್ದನು; ಮತ್ತೆ ಮೇಷ (ಜೀವಶಾಕ)ದ ರೂಪ ಧರಿಸಿರುವ ತನ್ನ ತಮ್ಮ ವಾತಾಪಿಯನ್ನು ಸಂಸ್ಕರಿಸಿ ಶ್ರಾದ್ಧಕಲ್ಪೋಕ್ತ ವಿಧಿಯಿಂದ ಬ್ರಾಹ್ಮಣರಿಗೆ ತಿನ್ನಿಸುತ್ತಿದ್ದನು.॥56-57॥

ಮೂಲಮ್ - 58

ತತೋ ಭುಕ್ತವತಾಂ ತೇಷಾಂ ವಿಪ್ರಾಣಾಮಿಲ್ವಲೋಽಬ್ರವೀತ್ ।
ವಾತಾಪೇ ನಿಷ್ಕ್ರಮಸ್ವೇತಿ ಸ್ವರೇಣ ಮಹತಾ ವದನ್ ॥

ಅನುವಾದ

ಆ ಬ್ರಾಹ್ಮಣರು ಊಟ ಮಾಡಿದಾಗ ಇಲ್ವಲನು ಗಟ್ಟಿಯಾಗಿ ‘ವಾತಾಪಿ ಹೊರ ಬಾ’ ಎಂದು ಹೇಳುತ್ತಿದ್ದನು.॥58॥

ಮೂಲಮ್ - 59

ತತೋ ಭ್ರಾತುರ್ವಚಃ ಶ್ರುತ್ವಾ ವಾತಾಪಿರ್ಮೇಷವನ್ನದನ್ ।
ಭಿತ್ತ್ವಾ ಭಿತ್ತ್ವಾ ಶರೀರಾಣಿ ಬ್ರಾಹ್ಮಣಾನಾಂ ವಿನಿಷ್ಪತತ್ ॥

ಅನುವಾದ

ಅಣ್ಣನ ಮಾತನ್ನು ಕೇಳಿ ವಾತಾಪಿಯು ಮೇಕೆಯಂತೆ ಮೇ-ಮೇ ಧ್ವನಿಮಾಡುತ್ತಾ ಆ ಬ್ರಾಹ್ಮಣರ ಹೊಟ್ಟೆಯನ್ನು ಸೀಳಿಕೊಂಡು ಹೊರಬರುತ್ತಿದ್ದನು.॥59॥

ಮೂಲಮ್ - 60

ಬ್ರಾಹ್ಮಣಾನಾಂ ಸಹಸ್ರಾಣಿ ತೈರೇವಂ ಕಾಮರೂಪಿಭಿಃ ।
ವಿನಾಶಿತಾನಿ ಸಂಹತ್ಯ ನಿತ್ಯಶಃ ಪಿಶಿತಾಶನೈಃ ॥

ಅನುವಾದ

ಈ ಪ್ರಕಾರ ಇಚ್ಛಾನುಸಾರ ರೂಪ ಧರಿಸುವ ಆ ಮಾಂಸಭಕ್ಷಿ ಅಸುರರು ಪ್ರತಿದಿನ ಸಾವಿರಾರು ಬ್ರಾಹ್ಮಣರನ್ನು ವಿನಾಶ ಮಾಡಿದರು.॥60॥

ಮೂಲಮ್ - 61

ಅಗಸ್ತ್ಯೇನ ತದಾ ದೇವೈಃ ಪ್ರಾರ್ಥಿತೇನ ಮಹರ್ಷಿಣಾ ।
ಅನುಭೂಯ ಕಿಲ ಶ್ರಾದ್ಧೇ ಭಕ್ಷಿತಃ ಸ ಮಹಾಸುರಃ ॥

ಅನುವಾದ

ಆಗ ದೇವತೆಗಳ ಪ್ರಾರ್ಥನೆಯಂತೆ ಮಹರ್ಷಿ ಅಗಸ್ತ್ಯರು ಶ್ರಾದ್ಧದಲ್ಲಿ ಶಾಕ ರೂಪಧಾರೀ ಆ ಮಹಾ ಅಸುರನನ್ನು ತಿಳಿದು ತಿಳಿದು ಭಕ್ಷಿಸಿದರು.॥61॥

ಮೂಲಮ್ - 62

ತತಃ ಸಂಪನ್ನಮಿತ್ಯುಕ್ತ್ವಾ ದತ್ತ್ವಾ ಹಸ್ತೇಽವನೇಜನಮ್ ।
ಭ್ರಾತರಂ ನಿಷ್ಕ್ರಮಸ್ವೇತಿ ಚೇಲ್ವಲಃ ಸಮಭಾಷತ ॥

ಅನುವಾದ

ಅನಂತರ ಶ್ರಾದ್ಧಕರ್ಮ ನೆರವೇರಿತು ಎಂದು ಹೇಳಿ ಬ್ರಾಹ್ಮಣರ ಕೈಯಲ್ಲಿ ಅವನೇಜನದ ಜಲವನ್ನು ಕೊಟ್ಟು ಇಲ್ವಲನು ತಮ್ಮನನ್ನು ಸಂಬೋಧಿಸಿ ‘ಹೊರಗೆ ಬಾ’ ಎಂದು ಹೇಳಿದನು.॥62॥

ಮೂಲಮ್ - 63

ಸ ತದಾ ಭಾಷಮಾಣಂ ತು ಭ್ರಾತರಂ ವಿಪ್ರಘಾತಿನಮ್ ।
ಅಬ್ರವೀತ್ ಪ್ರಹಸನ್ ಧೀಮಾನಗಸ್ತ್ಯೋ ಮುನಿಸತ್ತಮಃ ॥

ಅನುವಾದ

ಹೀಗೆ ತಮ್ಮನನ್ನು ಕರೆಯುತ್ತಿರುವ ಆ ಬ್ರಾಹ್ಮಣ ಘಾತಿ ಅಸುರನಲ್ಲಿ ಧೀಮಂತರಾದ ಮುನಿಶ್ರೇಷ್ಠ ಅಗಸ್ತ್ಯರು ನಗುತ್ತಾ ಹೇಳಿದರ.॥63॥

ಮೂಲಮ್ - 64

ಕುತೋ ನಿಷ್ಕ್ರಮಿತುಂ ಶಕ್ತಿರ್ಮಯಾ ಜೀರ್ಣಸ್ಯ ರಕ್ಷಸಃ ।
ಭ್ರಾತುಸ್ತು ಮೇಷರೂಪಸ್ಯ ಗತಸ್ಯ ಯಮಸಾದನಮ್ ॥

ಅನುವಾದ

ಜೀವ ಶಾಕರೂಪ ಧಾರೀ ನಿನ್ನ ತಮ್ಮ ರಾಕ್ಷಸನನ್ನು ನಾನು ತಿಂದು ಜೀರ್ಣಿಸಿಕೊಂಡೆ, ಅವನಾದರೋ ಯಮಲೋಕಕ್ಕೆ ಹೋದನು. ಈಗ ಅವನಲ್ಲಿ ಹೊರಗೆ ಬರುವ ಶಕ್ತಿ ಇಲ್ಲ.॥64॥

ಮೂಲಮ್ - 65

ಅಥ ತಸ್ಯ ವಚಃ ಶ್ರುತ್ವಾ ಭ್ರಾತುರ್ನಿಧನಸಂಶ್ರಿತಮ್ ।
ಪ್ರಧರ್ಷಯಿತುಮಾರೇಭೇ ಮುನಿಂ ಕ್ರೋಧಾನ್ನಿಶಾಚರಃ ॥

ಅನುವಾದ

ತಮ್ಮನ ಮೃತ್ಯುವನ್ನು ಸೂಚಿಸುವ ಮುನಿಯ ಮಾತನ್ನು ಕೇಳಿ ಆ ನಿಶಾಚರನು ಕ್ರೋಧಗೊಂಡು ಅವರನ್ನು ಕೊಲ್ಲಲು ಮುಂದಾದನು.॥65॥

ಮೂಲಮ್ - 66

ಸೋಽಭ್ಯದ್ರವದ್ ದ್ವ್ವಿಜೇಂದ್ರಂ ತಂ ಮುನಿನಾ ದೀಪ್ತತೇಜಸಾ ।
ಚಕ್ಷುಷಾನಲಕಲ್ಪೇನ ನಿರ್ದಗ್ಧೋ ನಿಧನಂ ಗತಃ ॥

ಅನುವಾದ

ಅವನು ದ್ವಿಜರಾಜ ಅಗಸ್ತ್ಯರ ಮೇಲೆ ಆಕ್ರಮಣ ಮಾಡಿದಾಕ್ಷಣ ಉದ್ದೀಪ್ತ ತೇಜವುಳ್ಳ ಆ ಮುನಿಯು ತನ್ನ ಅಗ್ನಿತುಲ್ಯ ದೃಷ್ಟಿಯಿಂದ ಆ ರಾಕ್ಷಸನನ್ನು ಸುಟ್ಟುಹಾಕಿದರು. ಹೀಗೆ ಅವನ ಮೃತ್ಯುವಾಯಿತು.॥66॥

ಮೂಲಮ್ - 67

ತಸ್ಯಾಯಮಾಶ್ರಮೋ ಭ್ರಾತುಸ್ತಟಾಕವನಶೋಭಿತಃ ।
ವಿಪ್ರಾನುಕಂಪಯಾ ಯೇನ ಕರ್ಮೇದಂ ದುಷ್ಕರಂ ಕೃತಮ್ ॥

ಅನುವಾದ

ಬ್ರಾಹ್ಮಣರ ಮೇಲೆ ಕೃಪೆಮಾಡಿ ಇಂತಹ ದುಷ್ಕರ ಕರ್ಮಮಾಡಿದ ಮಹರ್ಷಿ ಅಗಸ್ತ್ಯರ ಸೋದರನದೇ ಈ ಆಶ್ರಮವಾಗಿದೆ. ಅದು ಸರೋವರ, ವನಗಳಿಂದ ಸುಶೋಭಿತವಾಗಿದೆ.॥67॥

ಮೂಲಮ್ - 68

ಏವಂ ಕಥಯಮಾನಸ್ಯ ತಸ್ಯ ಸೌಮಿತ್ರಿಣಾ ಸಹ ।
ರಾಮಸ್ಯಾಸ್ತಂ ಗತಃ ಸೂರ್ಯಃ ಸಂಧ್ಯಾಕಾಲೋಽಭ್ಯವರ್ತತ ॥

ಅನುವಾದ

ಶ್ರೀರಾಮಚಂದ್ರನು ಲಕ್ಷ್ಮಣನಲ್ಲಿ ಹೀಗೆ ಮಾತನಾಡುತ್ತಿರುವಾಗಲೇ, ಸೂರ್ಯನು ಅಸ್ತನಾಗಿ ಸಂಧ್ಯಾಸಮಯ ಆಯಿತು.॥68॥

ಮೂಲಮ್ - 69

ಉಪಾಸ್ಯ ಪಶ್ಚಿಮಾಂ ಸಂಧ್ಯಾಂ ಸಹ ಭ್ರಾತ್ರಾ ಯಥಾವಿಧಿ ।
ಪ್ರವಿವೇಶಾಶ್ರಮಪದಂ ತಮೃಷಿಂ ಚಾಭ್ಯವಾದಯತ್ ॥

ಅನುವಾದ

ಆಗ ಸಹೋದರ ನೊಡನೆ ವಿಧಿವತ್ತಾಗಿ ಸಾಯಂ ಸಂಧ್ಯಾವಂದನೆ ಮಾಡಿ ಶ್ರೀರಾಮನು ಆಶ್ರಮವನ್ನು ಪ್ರವೇಶಿಸಿ ಆ ಮಹರ್ಷಿಯ ಚರಣಗಳಲ್ಲಿ ಮಸ್ತಕವನ್ನು ಚಾಚಿದನು.॥69॥

ಮೂಲಮ್ - 70

ಸಮ್ಯಕ್ಪ್ರತಿಗೃಹೀತಶ್ಚ ಮುನಿನಾ ತೇನ ರಾಘವಃ ।
ನ್ಯವಸತ್ತಾಂ ನಿಶಾಮೇಕಾಂ ಪ್ರಾಶ್ಯ ಮೂಲಲಾನಿ ಚ ॥

ಅನುವಾದ

ಮುನಿಯು ಅವರನ್ನು ಯಥಾವತ್ತಾಗಿ ಆದರಿಸಿ ಸತ್ಕರಿಸಿದರು. ಸೀತೆ ಮತ್ತು ಲಕ್ಷ್ಮಣ ಸಹಿತ ಶ್ರೀರಾಮನು ಅಲ್ಲಿ ಫಲ-ಮೂಲಗಳನ್ನು ತಿಂದು ಅಂದಿನ ಇರುಳನ್ನು ಆ ಆಶ್ರಮದಲ್ಲಿ ಕಳೆದನು.॥70॥

ಮೂಲಮ್ - 71

ತಸ್ಯಾಂ ರಾತ್ರ್ಯಾಂ ವ್ಯತೀತಾಯಾಮುದಿತೇ ರವಿಮಂಡಲೇ ।
ಭ್ರಾತರಂ ತಮಗಸ್ತ್ಯಸ್ಯ ಆಮಂತ್ರಯತ ರಾಘವಃ ॥

ಅನುವಾದ

ರಾತ್ರಿ ಕಳೆದು ಸೂರ್ಯೋದಯವಾದಾಗ ಶ್ರೀರಾಮಚಂದ್ರನು ಅಗಸ್ತ್ಯರ ತಮ್ಮನ ಬಳಿ ಅಪ್ಪಣೆ ಬೇಡುತ್ತಾ ಹೇಳಿದನು.॥71॥

ಮೂಲಮ್ - 72

ಅಭಿವಾದಯೇ ತ್ವಾಂ ಭಗವನ್ಸುಖಮಸ್ಮ್ಯುಷಿತೋ ನಿಶಾಮ್ ।
ಆಮಂತ್ರಯೇ ತ್ವಾಂ ಗಚ್ಛಾಮಿ ಗುರುಂ ತೇ ದ್ರಷ್ಟುಮಗ್ರಜಮ್ ॥

ಅನುವಾದ

ಪೂಜ್ಯರೇ! ನಾನು ನಿಮ್ಮ ಚರಣಗಳಲ್ಲಿ ವಂದಿಸುತ್ತಿದ್ದೇನೆ. ಇಲ್ಲಿ ರಾತ್ರಿಯನ್ನು ಸುಖವಾಗಿ ಕಳೆದಿರುವೆನು. ಈಗ ನಿಮ್ಮ ಅಣ್ಣ ಮುನಿವರ್ಯ ಅಗಸ್ತ್ಯರ ದರ್ಶನಕ್ಕಾಗಿ ಹೋಗುವೆನು ಅದಕ್ಕಾಗಿ ನಿಮ್ಮಿಂದ ಅಪ್ಪಣೆಯನ್ನು ಬಯಸುತ್ತಿದ್ದೇನೆ.॥72॥

ಮೂಲಮ್ - 73

ಗಮ್ಯತಾಮಿತಿ ತೇನೋಕ್ತೋ ಜಗಾಮ ರಘುನಂದನಃ ।
ಯಥೋದ್ದಿಷ್ಟೇನ ಮಾರ್ಗೇಣ ವನಂ ತಚ್ಚಾವಲೋಕಯನ್ ॥

ಅನುವಾದ

ಆಗ ಮಹರ್ಷಿಯು ‘ಬಹಳ ಒಳ್ಳೆಯದು ಹೋಗಿರಿ, ಎಂದು ಹೇಳಿದರು. ಹೀಗೆ ಮಹರ್ಷಿಗಳಿಂದ ಅಪ್ಪಣೆ ಪಡೆದು ಭಗವಾನ್ ಶ್ರೀರಾಮನು ಸುತೀಕ್ಷ್ಣರು ತಿಳಿಸಿರುವ ಮಾರ್ಗದಿಂದ ವನದ ಶೋಭೆ ನೋಡುತ್ತಾ ಮುಂದೆ ನಡೆದರು.॥73॥

ಮೂಲಮ್ - 74

ನೀವಾರಾನ್ ಪನಸಾನ್ ಸಾಲಾನ್ವಂಜುಲಾಂಸ್ತಿನಿಶಾಂಸ್ತಥಾ ।
ಚಿರಿಬಿಲ್ವಾನ್ ಮಧೂಕಾಂಶ್ಚ ಬಿಲ್ವಾನಥ ಚ ತಿಂದುಕಾನ್ ॥

ಮೂಲಮ್ - 75

ಪುಷ್ಪಿತಾನ್ ಪುಷ್ಪಿತಾಗ್ರಾಭಿರ್ಲತಾಭಿರುಪಶೋಭಿತಾನ್ ।
ದದರ್ಶ ರಾಮಃ ಶತಶಸ್ತತ್ರ ಕಾಂತಾರಪಾದಪಾನ್ ॥

ಮೂಲಮ್ - 76

ಹಸ್ತಿಹಸ್ತೈರ್ವಿಮೃದಿತಾನ್ ವಾನರೈ ರುಪಶೋಭಿತಾನ್ ।
ಮತ್ತೈಃ ಶಕುನಿಸಂಘೈಶ್ಚ ಶತಶಃ ಪ್ರತಿನಾದಿತಾನ್ ॥

ಅನುವಾದ

ಶ್ರೀರಾಮನು ಅಲ್ಲಿ ದಾರಿಯಲ್ಲಿ ನಿರವಂಜಮರಗಳನ್ನು, ಹಲಸಿನ, ತಾಳೆ, ಅಶೋಕ, ನೇಮಿ, ಹುಲಿಗಲಿ, ಮಧೂಕ, ಬಿಲ್ವ ಮೊದಲಾದ ವೃಕ್ಷಗಳನ್ನು ಹಾಗೂ ಇನ್ನೂ ಸಾವಿರಾರು ಕಾಡುಮರಗಳನ್ನು ನೋಡಿದರು. ಅವು ಹೂವುಗಳಿಂದ ತುಂಬಿದ್ದು, ಲತೆಗಳಿಂದ ವೇಷ್ಟಿತವಾಗಿ ಇದ್ದು ಶೋಭಾಯಮಾನವಾಗಿ ಕಾಣುತ್ತಿದ್ದವು. ಅವುಗಳಲ್ಲಿ ಕೆಲವನ್ನು ಆನೆಗಳು ಸೊಂಡಿಲಿನಿಂದ ಮುರಿದು ಹಾಕಿದ್ದವು. ಅನೇಕ ಮರಗಳಲ್ಲಿ ಕುಳಿತಿದ್ದ ವಾನರರು ಅವುಗಳ ಶೋಭೆಯನ್ನು ಹೆಚ್ಚಿಸಿದ್ದವು. ಸಾವಿರಾರು ಪಕ್ಷಿಗಳು ರೆಂಬೆಗಳ ಮೇಲೆ ಕುಳಿತು ಉಲಿಯುತ್ತಿದ್ದವು.॥74-76॥

ಮೂಲಮ್ - 77

ತತೋಽಬ್ರವೀತ್ ಸಮೀಪಸ್ಥಂ ರಾಮೋ ರಾಜೀವಲೋಚನಃ ।
ಪುಷ್ಠತೋಽನುಗತಂ ವೀರಂ ಲಕ್ಷ್ಮಣಂ ಲಕ್ಷ್ಮಿವರ್ಧನಮ್ ॥

ಅನುವಾದ

ಆಗ ಕಮಲನಯನ ಶ್ರೀರಾಮನು ಹಿಂದೆ ಹಿಂದೆ ಬರುತ್ತಿದ್ದು ಹತ್ತಿರದಲ್ಲೇ ಇದ್ದ ಶೋಭಾವರ್ಧಕ ವೀರ ಲಕ್ಷ್ಮನಲ್ಲಿ ಈ ಪ್ರಕಾರ ಹೇಳಿದನು.॥77॥

ಮೂಲಮ್ - 78

ಸ್ನಿಗ್ಧ ಪತ್ರಾ ಯಥಾ ವೃಕ್ಷಾ ಯಥಾ ಕ್ಷಾಂತಾ ಮೃಗದ್ವಿಜಾಃ ।
ಆಶ್ರಮೋ ನಾತಿದೂರಸ್ಥೋ ಮಹರ್ಷೇರ್ಭಾವಿತಾತ್ಮನಃ ॥

ಅನುವಾದ

ಇಲ್ಲಿರುವ ವೃಕ್ಷಗಳು ನವಿರಾದ ಎಲೆಗಳನ್ನು ಹೊಂದಿವೆ. ಮೃಗ-ಪಕ್ಷಿಗಳು ತಾಳ್ಮೆಯಿಂದ ಶಾಂತವಾಗಿ ಕುಳಿತಿವೆ; ಆದುದರಿಂದ ವಿದಿತಾತ್ಮರಾದ ಅಗಸ್ತ್ಯಮುನಿಗಳ ಆಶ್ರಮ ಹತ್ತಿರದಲ್ಲೇ ಇರುವುದಾಗಿ ನಾನು ಭಾವಿಸುತ್ತೇನೆ.॥78॥

ಮೂಲಮ್ - 79

ಅಗಸ್ತ್ಯ ಇತಿ ವಿಖ್ಯಾತೋ ಲೋಕೇಸ್ವೇನೈವ ಕರ್ಮಣಾ ।
ಆಶ್ರಮೋ ದೃಶ್ಯತೇ ತಸ್ಯ ಪರಿಶ್ರಾಂತಶ್ರಮಾಪಹಃ ॥

ಅನುವಾದ

ತಮ್ಮ ಕರ್ಮದಿಂದಲೇ ಜಗತ್ತಿನಲ್ಲಿ ಅಗಸ್ತ್ಯರೆಂಬ ಹೆಸರಿಂದ, ‘‘ಅಗಂ ಪರ್ವತಂ ಸ್ತಂಭಯತಿ ಇತಿ ಅಗಸ್ತ್ಯಃ’’ ಅಗ ಅರ್ಥಾತ್ ಪರ್ವತವನ್ನು ಸ್ತಂಭಿಸಿದ್ದರಿಂದ ಅವರನ್ನು ಅಗಸ್ತ್ಯರೆಂದು ಕರೆಯುತ್ತಾರೆ. ವಿಖ್ಯಾತರಾಗಿರುವವರ ಆಶ್ರಮವನ್ನು ಇಲ್ಲಿ ಕಾಣಿಸುತ್ತದೆ. ಅದು ಬಳಲಿ ಬಂದವರಿಗೆ ಶ್ರಮವನ್ನು ಪರಿಹರಿಸುವಂತಹುದಾಗಿದೆ.॥79॥

ಮೂಲಮ್ - 80

ಪ್ರಾಜ್ಯಧೂಮಾಕುಲವನಶ್ಚೀರ ಮಾಲಾಪರಿಷ್ಕೃತಃ ।
ಪ್ರಶಾಂತಮೃಗಯೂಥಶ್ಚ ನಾನಾ ಶಕುನಿನಾದಿತಃ ॥

ಅನುವಾದ

ಈ ಆಶ್ರಮವು ಯಜ್ಞ ಯಾಗಗಳ ಧೂಮದಿಂದ ವ್ಯಾಪ್ತವಾಗಿದೆ. ಹರಹಿದ ನಾರುಮಡಿಗಳಿಂದ ಇದರ ಶೋಭೆ ಹೆಚ್ಚಿದೆ. ಇಲ್ಲಿಯ ಮೃಗಗಳ ಗುಂಪು ಸದಾ ಶಾಂತವಾಗಿರುತ್ತದೆ. ಮತ್ತು ಈ ಆಶ್ರಮದಲ್ಲಿ ನಾನಾ ಪ್ರಕಾರದ ಪಕ್ಷಿಗಳ ಕಲರವದಿಂದ ಪ್ರತಿಧ್ವನಿಸುತ್ತದೆ.॥80॥

ಮೂಲಮ್ - 81

ನಿಗೃಹ್ಯ ತರಸಾ ಮೃತ್ಯುಂ ಲೋಕಾನಾಂ ಹಿತಕಾಮ್ಯಯಾ ।
ದಕ್ಷಿಣಾದಿಕ್ಕೃತಾ ಯೇನ ಶರಣ್ಯಾ ಪುಣ್ಯಕರ್ಮಣಾ ॥

ಮೂಲಮ್ - 82

ತಸ್ಯೇದಮಾಶ್ರಮಪದಂ ಪ್ರಭಾವಾದ್ ಯಸ್ಯ ರಾಕ್ಷಸೈಃ ।
ದಿಗಿಯಂ ದಕ್ಷಿಣಾ ತ್ರಾಸಾದ್ ದೃಶ್ಯತೇ ನೋಪಭುಜ್ಯತೇ ॥

ಅನುವಾದ

ಪುಣ್ಯ ಕರ್ಮ ಮಹರ್ಷಿ ಅಗಸ್ತ್ಯರು ಸಮಸ್ತ ಲೋಕಗಳ ಹಿತಕಾಮನೆಯಿಂದ ಮೃತ್ಯುರೂಪೀ ರಾಕ್ಷಸರನ್ನು ದಮನಮಾಡಿ ದಕ್ಷಿಣ ದಿಕ್ಕನ್ನು ಆಶ್ರಯಿಸಲು ಯೋಗ್ಯವಾಗಿಸಿರುವರು. ಅವರ ಪ್ರಭಾವದಿಂದ ಈ ದಕ್ಷಿಣ ದಿಕ್ಕನ್ನು ರಾಕ್ಷಸರು ಕೇವಲ ದೂರದಿಂದಲೇ ಭಯಭೀತರಾಗಿ ನೋಡುತ್ತಾರೆ. ಇದರ ಉಪಭೋಗವನ್ನು ಮಾಡುವುದಿಲ್ಲ. ಅಂತಹ ಮಹಾತ್ಮರ ಆಶ್ರಮವು ಇದೇ ಆಗಿದೆ.॥81-82॥

ಮೂಲಮ್ - 83

ಯದಾಪ್ರಭೃತಿ ಚಾಕ್ರಾಂತಾ ದಿಗಿಯಂ ಪುಣ್ಯಕರ್ಮಣಾ ।
ತದಾಪ್ರಭೃತಿ ನಿರ್ವೈರಾಃ ಪ್ರಶಾಂತಾ ರಜನೀಚರಾಃ ॥

ಅನುವಾದ

ಪುಣ್ಯಾತ್ಮರಾದ ಮಹರ್ಷಿ ಅಗಸ್ತ್ಯರು ಈ ದಿಕ್ಕಿನಲ್ಲಿ ಪದಾರ್ಪಣ ಮಾಡಿದಂದಿನಿಂದ ಇಲ್ಲಿಯ ನಿಶಾಚರರು ವೈರರಹಿತರಾಗಿ ಶಾಂತರಾಗಿರುವರು.॥83॥

ಮೂಲಮ್ - 84

ನಾಮ್ನಾ ಚೇಯಂ ಭಗವತೋ ದಕ್ಷಿಣಾ ದಿಕ್ಪ್ರದಕ್ಷಿಣಾ ।
ಪ್ರಥಿತಾ ತ್ರಿಷು ಲೋಕೇಷು ದುರ್ಧರ್ಷಾ ಕ್ರೂರಕರ್ಮಭಿಃ ॥

ಅನುವಾದ

ಭಗವಾನ್ ಅಗಸ್ತ್ಯರ ಮಹಿಮೆಯಿಂದ ಈ ಆಶ್ರಮದ ಸುತ್ತಲು ನಿರ್ವೈರತಾ ಮೊದಲಾದ ಗುಣಗಳಿಂದ ಸಂಪನ್ನರಾದ, ಕ್ರೂರಕರ್ಮಾ ರಾಕ್ಷಸರಿಗೆ ದುರ್ಜಯವಾದ್ದರಿಂದ, ಈ ದಿಕ್ಕನ್ನು ದಕ್ಷಿಣಾ ಎಂಬ ಹೆಸರಿನಿಂದ ಮೂರು ಲೋಕಗಳಲ್ಲಿ ಕರೆಯುತ್ತಾರೆ. ಈ ಹೆಸರಿನಿಂದ ವಿಖ್ಯಾತವಾದ ಇದನ್ನು ‘ಅಗಸ್ತ್ಯರ ದಿಕ್ಕು’ ಎಂದೂ ಹೇಳುತ್ತಾರೆ.॥84॥

ಮೂಲಮ್ - 85

ಮಾರ್ಗಂ ನಿರೋದ್ಧುಂ ಸತತಂ ಭಾಸ್ಕರಸ್ಯಾಚಲೋತ್ತಮಃ ।
ಸಂದೇಶಂ ಪಾಲಯಂಸ್ತಸ್ಯ ವಿಂಧ್ಯಶೈಲೋ ನ ವರ್ಧತೇ ॥

ಅನುವಾದ

ಒಮ್ಮೆ ಪರ್ವತ ಶ್ರೇಷ್ಠ ವಿಂಧ್ಯನು ಸೂರ್ಯನ ಮಾರ್ಗವನ್ನು ತಡೆಯಲು ಎತ್ತರವಾಗಿ ಬೆಳೆದಿದ್ದನು, ಆದರೆ ಮಹರ್ಷಿ ಅಗಸ್ತ್ಯರು ಹೇಳಿದ್ದರಿಂದ ಅವನು ನಮ್ರನಾಗಿದ್ದನು. ಅಂದಿನಿಂದ ಇಂದಿನವರೆಗೆ ನಿರಂತರ ಅವರ ಆದೇಶವನ್ನು ಪಾಲಿಸುತ್ತಾ ಅವನು ಎಂದೂ ಬೆಳೆಯಲಿಲ್ಲ.॥85॥

ಮೂಲಮ್ - 86

ಅಯಂ ದೀರ್ಘಾಯುಷಸ್ತಸ್ಯ ಲೋಕೇ ವಿಶ್ರುತಕರ್ಮಣಃ ।
ಅಗಸ್ತ್ಯಸ್ಯಾಶ್ರಮಃ ಶ್ರೀಮಾನ್ ವಿನೀತಮೃಗಸೇವಿತಃ ॥

ಅನುವಾದ

ಅವರು ದೀರ್ಘಾಯುಗಳಾಗಿದ್ದಾರೆ. ಅವರ ಕರ್ಮ (ಸಮುದ್ರಶೋಷಣಾದಿ) ಮೂರು ಲೋಕಗಳಲ್ಲೂ ವಿಖ್ಯಾತವಾಗಿದೆ. ಆ ಅಗಸ್ತ್ಯರ ಈ ಶೋಭಾಸಂಪನ್ನ ವಿನೀತ ಮೃಗಗಳಿಂದ ಸೇವಿತ ಆಶ್ರಮವಾಗಿದೆ.॥86॥

ಮೂಲಮ್ - 87

ಏಷ ಲೋಕಾರ್ಚಿತಃ ಸಾಧುರ್ಹಿತೇ ನಿತ್ಯಂ ರತಃ ಸತಾಮ್ ।
ಅಸ್ಮಾನಧಿಗತಾನೇಷ ಶ್ರೇಯಸಾ ಯೋಜಯಿಷ್ಯತಿ ॥

ಅನುವಾದ

ಈ ಮಹಾತ್ಮಾ ಅಗಸ್ತ್ಯರು ಸಮಸ್ತ ಲೋಕಗಳಲ್ಲಿ ಪೂಜಿತರೂ, ಸದಾ ಸಜ್ಜನರ ಹಿತದಲ್ಲೇ ತೊಡಗಿರುವವರೂ ಆಗಿದ್ದಾರೆ. ಅವರ ಬಳಿಗೆ ಬಂದ ನಮ್ಮನ್ನು ಅವರು ತಮ್ಮ ಆಶೀರ್ವಾದದಿಂದ ಶ್ರೇಯೋಭಾಗಿಯಾಗಿಸುವವರು.॥87॥

ಮೂಲಮ್ - 88

ಆರಾಧಯಿಷ್ಯಾಮ್ಯತ್ರಾಹಮಗಸ್ತ್ಯಂ ತಂ ಮಹಾಮುನಿಮ್ ।
ಶೇಷಂ ಚ ವನವಾಸಸ್ಯ ಸೌಮ್ಯ ವತ್ಸ್ಯಾಮ್ಯಹಂ ಪ್ರಭೋ ॥

ಅನುವಾದ

ಸೇವಾತತ್ಪರ ಸೌಮ್ಯ ಲಕ್ಷ್ಮಣಾ! ಇಲ್ಲಿ ಇದ್ದು ನಾನು ಆ ಮಹಾಮುನಿ ಅಗಸ್ತ್ಯರನ್ನು ಆರಾಧಿಸುವೆನು ಹಾಗೂ ವನವಾಸದ ಉಳಿದ ದಿವಸಗಳನ್ನು ಇಲ್ಲೇ ಕಳೆಯುವೆನ.॥88॥

ಮೂಲಮ್ - 89

ಅತ್ರ ದೇವಾಃ ಸಗಂಧರ್ವಾಃ ಸಿದ್ದಾಶ್ಚ ಪರಮರ್ಷಯಃ ।
ಅಗಸ್ತ್ಯಂ ನಿಯತಾಹಾರಾಃ ಸತತಂ ಪರ್ಯುಪಾಸತೇ ॥

ಅನುವಾದ

ದೇವತೆಗಳು, ಗಂಧರ್ವರು, ಸಿದ್ಧರು, ಮಹರ್ಷಿಗಳು ಇಲ್ಲಿ ನಿಯಮಿತ ಆಹಾರ ಸೇವಿಸುತ್ತಾ ಸದಾಕಾಲ ಅಗಸ್ತ್ಯಮುನಿಯ ಉಪಾಸನೆ ಮಾಡುತ್ತಾರೆ.॥89॥

ಮೂಲಮ್ - 90

ನಾತ್ರ ಜೀವೇನ್ಮೃಷಾವಾದೀ ಕ್ರೂರೋ ವಾ ಯದಿ ವಾ ಶಠಃ ।
ನೃಶಂಸಃ ಕಾಮವೃತ್ತೋ ವಾ ಮುನಿರೇಷ ತಥಾವಿಧಃ ॥

ಅನುವಾದ

ಇವರ ಆಶ್ರಮದಲ್ಲಿ ಯಾರೂ ಸುಳ್ಳು ಹೇಳುವ, ಕ್ರೂರಿ, ಶಠ, ನಿಂದಿತ ಅಥವಾ ಪಾಪಾಚಾರೀ ಮನುಷ್ಯನು ಜೀವಂತವಾಗಿ ಇರಲಾರನು, ಇಂತಹ ಪ್ರಭಾವಶಾಲೀ ಈ ಮುನಿಗಳಿದ್ದಾರೆ.॥90॥

ಮೂಲಮ್ - 91

ಅತ್ರ ದೇವಾಶ್ಚ ಯಕ್ಷಾಶ್ಚ ನಾಗಾಶ್ಚ ಪತಗೈಃ ಸಹ ।
ವಸಂತಿ ನಿಯತಾಹಾರಾ ಧರ್ಮಮಾರಾಧಯಿಷ್ಣವಃ ॥

ಅನುವಾದ

ಇಲ್ಲಿ ಧರ್ಮವನ್ನು ಆರಾಧಿಸಲು ದೇವತೆಗಳೂ, ಯಕ್ಷರು, ನಾಗರು ಮತ್ತು ಪಕ್ಷಿಗಳು ನಿಯಮಿತ ಆಹಾರದಿಂದ ವಾಸಿಸುತ್ತಿರುವರು.॥91॥

ಮೂಲಮ್ - 92

ಅತ್ರ ಸಿದ್ಧಾ ಮಹಾತ್ಮಾನೋ ವಿಮಾನೈಃ ಸೂರ್ಯಸಂನಿಭೈಃ ।
ತ್ಯಕ್ತ್ವಾದೇಹಾನ್ ನವೈರ್ದೇಹೈಃ ಸ್ವರ್ಯಾತಾಃ ಪರಮರ್ಷಯಃ ॥

ಅನುವಾದ

ಈ ಆಶ್ರಮದಲ್ಲಿ ತಮ್ಮ ಶರೀರವನ್ನು ತ್ಯಜಿಸಿ ಅನೇಕಾನೇಕ ಸಿದ್ಧ, ಮಹಾತ್ಮಾ, ಮಹರ್ಷಿಗಳು ನೂತನ ಶರೀರದೊಂದಿಗೆ ಸೂರ್ಯನಂತಹ ತೇಜಸ್ವೀ ವಿವಾನಗಳಿಂದ ಸರ್ಗಲೋಕವನ್ನು ಪಡೆದಿರುವರು.॥92॥

ಮೂಲಮ್ - 93

ಯಕ್ಷತ್ವಮಮರತ್ವಂ ಚ ರಾಜ್ಯಾನಿ ವಿವಿಧಾನಿ ಚ ।
ಅತ್ರ ದೇವಾಃ ಪ್ರಯಚ್ಛಂತಿ ಭೂತೈರಾರಾಧಿತಾಃ ಶುಭೈಃ ॥

ಅನುವಾದ

ಇಲ್ಲಿ ಸತ್ಕರ್ಮಪರಾಯಣ ಪ್ರಾಣಿಗಳಿಂದ ಆರಾಧಿತರಾದ ದೇವತೆಗಳು ಅವರಿಗೆ ಯಕ್ಷತ್ವ, ಅಮರತ್ವ, ಹಾಗೂ ನಾನಾ ಪ್ರಕಾರದ ರಾಜ್ಯಗಳನ್ನು ಕರುಣಿಸುವರು.॥93॥

ಮೂಲಮ್ - 94

ಆಗತಾಃ ಸ್ಮಾಶ್ರಮಪದಂ ಸೌಮಿತ್ರೇ ಪ್ರವಿಶಾಗ್ರತಃ ।
ನಿವೇದಯೇಹ ಮಾಂ ಪ್ರಾಪ್ತಮೃಷಯೇ ಸಹ ಸೀತಯಾ ॥

ಅನುವಾದ

ಸುಮಿತ್ರಾನಂದನ! ಈಗ ನಾವು ಆಶ್ರಮಕ್ಕೆ ಬಂದು ತಲುಪಿರುವೆವು. ನೀನು ಮೊದಲು ಪ್ರವೇಶಿಸಿ, ಮಹರ್ಷಿಗಳಿಗೆ ಸೀತೆಯೊಂದಿಗೆ ನಾನು ಆಗಮಿಸಿದ ಸೂಚನೆಯನ್ನು ಕೊಡು.॥94॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹನ್ನೊಂದನೆಯ ಸರ್ಗ ಸಂಪೂರ್ಣವಾಯಿತು. ॥11॥