वाचनम्
ಭಾಗಸೂಚನಾ
ಶ್ರೀರಾಮನು ಋಷಿಗಳ ರಕ್ಷಣೆಗಾಗಿ ರಾಕ್ಷಸರನ್ನು ವಧಿಸಲು ಮಾಡಿದ ಪ್ರತಿಜ್ಞೆಯನ್ನು ಪುನಃ ದೃಢಪಡಿಸಿದುದು
ಮೂಲಮ್ - 1
ವಾಕ್ಯಮೇತತ್ತು ವೈದೇಹ್ಯಾ ವ್ಯಾಹೃತಂ ಭರ್ತೃಭಕ್ತಯಾ ।
ಶ್ರುತ್ವಾ ಧರ್ಮೇ ಸ್ಥಿತೋ ರಾಮಃ ಪ್ರತ್ಯುವಾಚಾಥ ಜಾನಕೀಮ್ ॥
ಅನುವಾದ
ತನ್ನ ಸ್ವಾಮಿಯ ಕುರಿತು ಭಕ್ತಿ ಇರಿಸಿದ ವಿದೇಹಕುಮಾರೀ ಸೀತೆಯು ಹೇಳಿದ ಮಾತನ್ನು ಕೇಳಿ ಸದಾ ಧರ್ಮದಲ್ಲಿ ಸ್ಥಿತನಾದ ಶ್ರೀರಾಮಚಂದ್ರನು ಜಾನಕಿಗೆ ಹೀಗೆ ಉತ್ತರಿಸಿದನು.॥1॥
ಮೂಲಮ್ - 2
ಹಿತಮುಕ್ತಂ ತ್ವಯಾ ದೇವಿ ಸ್ನಿಗ್ಧಯಾ ಸದೃಶಂ ವಚಃ ।
ಕುಲಂ ವ್ಯಪದಿಶಂತ್ಯಾ ಚ ಧರ್ಮಜ್ಞೇ ಜನಕಾತ್ಮಜೇ ॥
ಅನುವಾದ
ದೇವಿ! ಧರ್ಮವನ್ನು ತಿಳಿದ ಜನಕ ಕಿಶೋರಿ! ನಿನಗೆ ನನ್ನ ಮೇಲೆ ಸ್ನೇಹವಿದೆ, ಅದಕ್ಕಾಗಿ ನೀನು ನನ್ನ ಹಿತದ ಮಾತನ್ನೇ ಹೇಳಿರುವೆ. ಕ್ಷತ್ರಿಯರ ಕುಲಧರ್ಮದ ಉಪದೇಶ ಮಾಡುತ್ತಾ ನೀನು ಹೇಳಿದುದು ನಿನಗೆ ಯೋಗ್ಯವೇ ಅಗಿದೆ.॥2॥
ಮೂಲಮ್ - 3
ಕಿಂ ನು ವಕ್ಷ್ಯಾಮ್ಯಹಂ ದೇವಿ ತ್ವಯೈವೋಕ್ತಮಿದಂ ವಚಃ ।
ಕ್ಷತ್ರಿಯೈರ್ಧಾರ್ಯತೇ ಚಾಪೋ ನಾರ್ತಶಬ್ದೋಭವೇದಿತಿ ॥
ಅನುವಾದ
ದೇವಿ! ನಾನು ನಿನಗೇನು ಉತ್ತರಿಸಲಿ? ಯಾರೂ ದುಃಖಿತರಾಗಿ ಹಾಹಾಕಾರ ಮಾಡುವಂತೆ ಆಗದಿರಲೆಂದೇ, ಯಾರಾದರು ದುಃಖ, ಸಂಕಟದಲ್ಲಿ ಬಿದ್ದಿದ್ದರೆ ಅವನನ್ನು ರಕ್ಷಿಸಲಿಕ್ಕಾಗಿ ಕ್ಷತ್ರಿಯರು ಧನುರ್ಬಾಣಗಳನ್ನು ಧರಿಸುತ್ತಾರೆ ಎಂದು ನೀನು ಮೊದಲೇ ಹೇಳಿರುವೆ.॥3॥
ಮೂಲಮ್ - 4
ತೇ ಚಾರ್ತಾ ದಂಡಕಾರಣ್ಯೇ ಮುನಯಃ ಸಂಶಿತವ್ರತಾಃ ।
ಮಾಂ ಸೀತೇ ಸ್ವಯಮಾಗಮ್ಯ ಶರಣ್ಯಂ ಶರಣಂ ಗತಾಃ ॥
ಅನುವಾದ
ಸೀತೆ! ದಂಡಕಾರಣ್ಯದಲ್ಲಿ ಇದ್ದು ಕಠೋರ ವ್ರತವನ್ನು ಪಾಲಿಸುವ ಆ ಮುನಿಗಳು ಬಹಳ ದುಃಖಿತರಾಗಿದ್ದಾರೆ. ಅದಕ್ಕಾಗಿ ನನ್ನನ್ನು ಶರಣಾಗತ ವತ್ಸಲನೆಂದು ತಿಳಿದು ಅವರು ಸ್ವತಃ ನನ್ನ ಬಳಿಗೆ ಬಂದು ಶರಣಾಗತರಾಗಿದ್ದಾರೆ.॥4॥
ಮೂಲಮ್ - 5½
ವಸಂತಃ ಕಾಲಕಾಲೇಷು ವನೇ ಮೂಲಫಲಾಶನಾಃ ।
ನ ಲಭಂತೇ ಸುಖಂ ಭಿರು ರಾಕ್ಷಸೈಃ ಕ್ರೂರಕರ್ಮಭಿಃ ॥
ಭಕ್ಷ್ಯಂತೇ ರಾಕ್ಷಸೈರ್ಭೀಮೈರ್ನರಮಾಂಸೋಪಜೀವಿಭಿಃ ।
ಅನುವಾದ
ಭೀರು! ಸದಾಕಾಲ ಕಾಡಿನಲ್ಲೇ ಇದ್ದು ಫಲ-ಮೂಲಗಳನ್ನು ತಿನ್ನುವ ಆ ಮುನಿಗಳು ಈ ಕ್ರೂರಕರ್ಮ ರಾಕ್ಷಸರಿಂದ ಎಂದೂ ಸುಖ ಪಡೆಯುವುದಿಲ್ಲ. ಮನುಷ್ಯರ ಮಾಂಸದಿಂದಲೇ ಜೀವನ ನಡೆಸುತ್ತಿರುವ ಈ ಭಯಾನಕ ರಾಕ್ಷಸರು ಅವರನ್ನು ಕೊಂದು ತಿನ್ನುತ್ತಿದ್ದಾರೆ.॥5½॥
ಮೂಲಮ್ - 6½
ತೇ ಭಕ್ಷ್ಯಮಾಣಾ ಮುನಯೋ ದಂಡಕಾರಣ್ಯವಾಸಿನಃ ॥
ಅಸ್ಮಾನಭ್ಯವಪದ್ಯೇತಿ ಮಾಮೂಚುರ್ದ್ವಿಜಸತ್ತಮಾಃ ।
ಅನುವಾದ
ಆ ರಾಕ್ಷಸರಿಗೆ ತುತ್ತಾಗಿರುವ ಈ ದಂಡಕಾರಣ್ಯವಾಸೀ ದ್ವಿಜ ಶ್ರೇಷ್ಠ ಮುನಿಗಳು ನಮ್ಮ ಬಳಿಗೆ ಬಂದು ‘ಪ್ರಭೋ! ನಮ್ಮ ಮೇಲೆ ಅನುಗ್ರಹಮಾಡು’ ಎಂದು ಹೇಳಿದರು.॥6½॥
ಮೂಲಮ್ - 7½
ಮಯಾ ತು ವಚನಂ ಶ್ರುತಾ ತೇಷಾಮೇವಂ ಮುಖಾಚ್ಚ್ಯುತಮ್ ॥
ಕೃತ್ವಾ ವಚನಶುಶ್ರೂಷಾಂ ವಾಕ್ಯಮೇತದುದಾಹೃತಮ್ ।
ಅನುವಾದ
ಅವರ ಬಾಯಿಯಿಂದ ಹೊರಟ ರಕ್ಷಣೆಯ ಈ ಕೂಗು ಕೇಳಿ ಹಾಗೂ ಅವರ ಆಜ್ಞಾಪಾಲನರೂಪೀ ಸೇವೆಯ ವಿಚಾರ ಮಾಡಿ, ನಾನು ಅವರಲ್ಲಿ ಹೀಗೆ ಹೇಳಿದೆ.॥7½॥
ಮೂಲಮ್ - 8
ಪ್ರಸೀದಂತು ಭವಂತೋ ಮೇ ಹ್ರೀರೇಷಾ ಹಿ ಮಮಾತುಲಾ ॥
ಮೂಲಮ್ - 9
ಯದೀದೃಶೈರಹಂ ವಿಪ್ರೈರುಪಸ್ಥೇಯೈರುಪಸ್ಥಿತಃ ।
ಕಿಂ ಕರೋಮಿತಿ ಚ ಮಯಾ ವ್ಯಾಹೃತಂ ದ್ವಿಜಸಂನಿಧೌ ॥
ಅನುವಾದ
ಮಹರ್ಷಿಗಳೇ! ನಿಮ್ಮಂತಹ ಬ್ರಾಹ್ಮಣರ ಸೇವೆಯಲ್ಲಿ ನಾನೇ ಉಪಸ್ಥಿತನಾಬೇಕಾಗಿತ್ತು , ಆದರೆ ನೀವು ಸ್ವತಃ ತಮ್ಮ ರಕ್ಷಣೆಗಾಗಿ ನನ್ನ ಬಳಿಗೆ ಬಂದಿರುವಿರಿ, ಇದು ನನಗೆ ನಾಚಿಕೆಯ ವಿಷಯವಾಗಿದೆ. ಆದ್ದರಿಂದ ತಾವು ಪ್ರಸನ್ನರಾಗಿರಿ. ನಾನು ನಿಮ್ಮ ಯಾವ ಸೇವೆ ಮಾಡಲಿ? ಹೇಳಿರಿ. ಎಂದು ಆ ಬ್ರಾಹ್ಮಣರಲ್ಲಿ ಹೇಳಿದೆ.॥8-9॥
ಮೂಲಮ್ - 10½
ಸರ್ವೈರೇವ ಸಮಾಗಮ್ಯ ವಾಗಿಯಂ ಸಮುದಾಹೃತಾ ।
ರಾಕ್ಷಸೈರ್ದಂಡಕಾರಣ್ಯೇ ಬಹುಭಿಃ ಕಾಮರೂಪಿಭಿಃ ॥
ಅರ್ದಿತಾಃ ಸ್ಮ ಭೃಶಂ ರಾಮ ಭವಾನ್ನಸ್ತತ್ರ ರಕ್ಷತು ।
ಅನುವಾದ
ಆಗ ಅವರೆಲ್ಲ ಸೇರಿ ತಮ್ಮ ಮನೋ ಇಂಗಿತವನ್ನು ಹೀಗೆ ಪ್ರಕಟಿಸಿದರು-ಶ್ರೀರಾಮ! ದಂಡಕಾರಣ್ಯದಲ್ಲಿ ಇಚ್ಛಾನುರೂಪ ಧರಿಸುವ ಅನೇಕ ರಾಕ್ಷಸರಿದ್ದಾರೆ. ಅವರಿಂದ ನಮಗೆ ಬಹಳ ಕಷ್ಟವಾಗುತ್ತಿದೆ, ಆದ್ದರಿಂದ ಅವರ ಭಯದಿಂದ ನಮ್ಮನ್ನು ರಕ್ಷಿಸು.॥10½॥
ಮೂಲಮ್ - 11½
ಹೋಮಕಾಲೇತು ಸಂಪ್ರಾಪ್ತೇ ಪರ್ವಕಾಲೇಷು ಚಾನಘ ॥
ಧರ್ಷಯಂತಿ ಸುದುರ್ಧರ್ಷಾ ರಾಕ್ಷಸಾಃ ಪಿಶಿತಾಶನಾಃ ।
ಅನುವಾದ
ನಿಷ್ಪಾಪ ರಘುನಂದನ! ಅಗ್ನಿಹೋತ್ರದ ಸಮಯ ಬಂದಾಗ ಹಾಗೂ ಪರ್ವದ ಸಂದರ್ಭದಲ್ಲಿ ಈ ಅತ್ಯಂತ ದುರ್ಧರ್ಷ ಮಾಂಸಭೋಜಿ ರಾಕ್ಷಸರು ನಮ್ಮನು ಹಿಂಸಿಸುತ್ತಾರೆ.॥11½॥
ಮೂಲಮ್ - 12½
ರಾಕ್ಷಸೈರ್ಧರ್ಷಿತಾನಾಂ ಚ ತಾಪಸಾನಾಂ ತಪಸ್ವಿನಾಮ್ ॥
ಗತಿಂ ಮೃಗಯಮಾಣಾನಾಂ ಭವಾನ್ನಃ ಪರಮಾ ಗತಿಃ ।
ಅನುವಾದ
ರಾಕ್ಷಸರಿಂದ ಆಕ್ರಾಂತರಾದ ತಪಸ್ವೀ, ತಾಪಸರಾದ ನಾವು ಸದಾ ನಮಗಾಗಿ ಯಾವುದಾದರೂ ಆಶ್ರಮವನ್ನು ಹುಡುಕುತ್ತಾ ಇರುತ್ತೇವೆ. ಆದ್ದರಿಂದ ನೀನೇ ನಮಗೆ ಆಶ್ರಯನಾಗಿರುವೆ.॥12½॥
ಮೂಲಮ್ - 13
ಕಾಮಂ ತಪಃಪ್ರಭಾವೇಣ ಶಕ್ತಾ ಹಂತುಂ ನಿಶಾಚರಾನ್ ॥
ಮೂಲಮ್ - 14
ಚಿರಾರ್ಜಿತಂ ನ ಚೇಚ್ಛಾಮಸ್ತಪಃ ಖಂಡಯಿತುಂ ವಯಮ್ ।
ಬಹುವಿಘ್ನಂ ತಪೋ ನಿತ್ಯಂ ದುಶ್ಚರಂ ಚೈವ ರಾಘವ ॥
ಅನುವಾದ
ರಘುನಂದನ! ತಪಸ್ಸಿನ ಪ್ರಭಾವದಿಂದ ಇಚ್ಛಾನುಸಾರ ಈ ರಾಕ್ಷಸರನ್ನು ವಧಿಸಲು ಸಮರ್ಥರಾಗಿದ್ದರೂ, ಚಿರಕಾಲದಿಂದ ಗಳಿಸಿದ ತಪಸ್ಸನ್ನು ಹಾಳುಮಾಡಲು ಬಯಸುವುದಿಲ್ಲ. ಏಕೆಂದರೆ ತಪಸ್ಸಿನಲ್ಲಿ ಸದಾಕಾಲ ಅನೇಕ ವಿಘ್ನಗಳು ಬರುತ್ತಾ ಇರುತ್ತವೆ ಹಾಗೂ ಇದರ ಸಂಪಾದನೆ ಬಹಳ ಕಷ್ಟವಾಗಿರುತ್ತದೆ.॥13-14॥
ಮೂಲಮ್ - 15½
ತೇನ ಶಾಪಂ ನ ಮುಂಚಾಮೋ ಭಕ್ಷ್ಯಮಾಣಾಶ್ಚ ರಾಕ್ಷಸೈಃ ।
ತದರ್ದ್ಯಮಾನಾನ್ ರಕ್ಷೋಭಿರ್ದಂಡಕಾರಣ್ಯವಾಸಿಭಿಃ ॥
ರಕ್ಷ ನಸ್ತ್ವಂ ಸಹ ಭ್ರಾತ್ರಾತ್ವನ್ನಾಥಾ ಹಿ ವಯಂ ವನೇ ।
ಅನುವಾದ
ರಾಕ್ಷಸರಿಗೆ ತುತ್ತಾದರೂ ನಾವು ಅವರಿಗೆ ಶಾಪ ಕೊಡದಿರುವ ಕಾರಣ ಇದೇ ಆಗಿದೆ. ಅದರಿಂದ ದಂಡಕಾರಣ್ಯವಾಸೀ ನಿಶಾಚರರಿಂದ ಪೀಡಿತರಾದ ನಮ್ಮನ್ನು ಸಹೋದರ ಸಹಿತ ನೀನು ರಕ್ಷಿಸು; ಏಕೆಂದರೆ ಈ ವನದಲ್ಲಿ ಈಗ ನೀನೇ ರಕ್ಷಕನಾಗಿರುವೆ.॥15½॥
ಮೂಲಮ್ - 16½
ಮಯಾ ಚೈತದ್ವಚಃ ಶ್ರುತ್ವಾ ಕಾತ್ಸ್ನೇರ್ಯೇ ನ ಪರಿಪಾಲನಮ್॥
ಋಷೀಣಾಂ ದಂಡಕಾರಣ್ಯೇ ಸಂಶ್ರುತಂ ಜನಕಾತ್ಮಜೇ ।
ಅನುವಾದ
ಜನಕನಂದಿನೀ! ದಂಡಕಾರಣ್ಯದಲ್ಲಿ ಋಷಿಗಳ ಈ ಮಾತನ್ನು ಕೇಳಿ ನಾನು ಪೂರ್ಣರೂಪದಿಂದ ಅವರನ್ನು ರಕ್ಷಿಸುವ ಪ್ರತಿಜ್ಞೆ ಮಾಡಿರುವೆ.॥16½॥
ಮೂಲಮ್ - 17½
ಸಂಶ್ರುತ್ಯ ಚ ನ ಶಕ್ಷ್ಯಾಮಿ ಜೀವಮಾನಃ ಪ್ರತಿಶ್ರವಮ್॥
ಮುನೀನಾಮನ್ಯಥಾ ಕರ್ತುಂ ಸತ್ಯಮಿಷ್ಟಂ ಹಿ ಮೇ ಸದಾ ।
ಅನುವಾದ
ಮುನಿಗಳ ಮುಂದೆ ಹೀಗೆ ಪ್ರತಿಜ್ಞೆ ಮಾಡಿ ಈಗ ನಾನು ಬದುಕಿರುವಾಗಲೇ ಈ ಪ್ರತಿಜ್ಞೆಯನ್ನು ಹೇಗೆ ಸುಳ್ಳಾಗಿಸಲಿ? ಏಕೆಂದರೆ ಸತ್ಯ ಪಾಲನೆಯು ನನಗೆ ಸದಾ ಪ್ರಿಯವಾಗಿದೆ.॥17½॥
ಮೂಲಮ್ - 18½
ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾಸೀತೇ ಸಲಕ್ಷ್ಮಣಾಮ್ ॥
ನ ತು ಪ್ರತಿಜ್ಞಾ ಸಂಶ್ರುತ್ಯ ಬ್ರಾಹ್ಮಣೇಭ್ಯೋ ವಿಶೇಷತಃ ।
ಅನುವಾದ
ಸೀತೆ! ನಾನು ಬೇಕಾದರೆ ನನ್ನ ಪ್ರಾಣ ಬಿಡಬಲ್ಲೆ, ನಿನ್ನನ್ನು ಮತ್ತು ಲಕ್ಷ್ಮಣನನ್ನೂ ತ್ಯಜಿಸಬಲ್ಲೆನು, ಆದರೆ ನನ್ನ ಪ್ರತಿಜ್ಞೆಯನ್ನು, ವಿಶೇಷವಾಗಿ ಬ್ರಾಹ್ಮಣರಿಗಾಗಿ ಮಾಡಿದ ಪ್ರತಿಜ್ಞೆಯನ್ನು ನಾನು ಎಂದಿಗೂ ಮುರಿಯಲಾರೆನು.॥18½॥
ಮೂಲಮ್ - 19½
ತದವಶ್ಯಂ ಮಯಾ ಕಾರ್ಯಮೃಷೀಣಾಂ ಪರಿಪಾಲನಮ್ ॥
ಅನುಕ್ತೇನಾಪಿ ವೈದೇಹಿ ಪ್ರತಿಜ್ಞಾಯ ಕಥಂ ಪುನಃ ।
ಅನುವಾದ
ಅದಕ್ಕಾಗಿ ಋಷಿಗಳನ್ನು ರಕ್ಷಿಸುವುದು ನನ್ನ ಅವಶ್ಯಕ ಕರ್ತವ್ಯವಾಗಿದೆ. ವಿದೇಹನಂದಿನೀ! ಋಷಿಗಳು ಹೇಳದಿದ್ದರೂ ಅವರನ್ನು ರಕ್ಷಿಸಬೇಕಾಗಿತ್ತು. ಹಾಗಿರುವಾಗ ಅವರು ಸ್ವತಃ ಬಂದು ಹೇಳಿದರು ಹಾಗೂ ನಾನು ಪ್ರತಿಜ್ಞೆಯನ್ನೂ ಮಾಡಿದಾಗ ಈಗ ಅವರ ರಕ್ಷಣೆಯಿಂದ ಹೇಗೆ ಪರಾಙ್ಮುಖನಾಗಲಿ?॥19½॥
ಮೂಲಮ್ - 20½
ಮಮ ಸ್ನೇಹಾಚ್ಚ ಸೌಹಾರ್ದಾದಿದಮುಕ್ತಂತ್ವಯಾ ವಚಃ ॥
ಪರಿತುಷ್ಟೋಽಸ್ಮ್ಯಹಂ ಸೀತೇ ನಹ್ಯನಿಷ್ಟೋಽನುಶಾಸ್ಯತೇ ।
ಅನುವಾದ
ಸೀತೆ! ನೀನು ಸ್ನೇಹ ಮತ್ತು ಸೌಹಾರ್ದದಿಂದ ಹೇಳಿದ ಮಾತಿನಿಂದ ನಾನು ಸಂತುಷ್ಟನಾಗಿದ್ದೇನೆ. ಏಕೆಂದರೆ ತನಗೆ ಪ್ರಿಯವಲ್ಲದುದನ್ನು ಯಾರೂ ಇತರರಿಗೆ ಉಪದೇಶ ಮಾಡುವುದಿಲ್ಲ.॥20½॥
ಮೂಲಮ್ - 21
ಸದೃಶಂ ಚಾನುರೂಪಂ ಚ ಕುಲಸ್ಯ ತವ ಶೋಭನೆ ।
ಸಧರ್ಮಚಾರಿಣೀ ಮೇ ತ್ವ ಂ ಪ್ರಾಣೇಭ್ಯೋಽಪಿ ಗರೀಯಸೀ ॥
ಅನುವಾದ
ಶೋಭನೇ! ನೀನು ಹೇಳಿದುದು ನಿನಗೆ ಯೋಗ್ಯವೇ ಆಗಿದೆ ಹಾಗೂ ನಿನ್ನ ಕುಲಕ್ಕೂ ಸರ್ವಥಾ ಅನುರೂಪವಾಗಿದೆ. ನೀನು ನನ್ನ ಸಹ ಧರ್ಮಿಣಿಯಾಗಿರುವೆ ಮತ್ತು ನನಗೆ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯವಾಗಿರುವೆ.॥21॥
ಮೂಲಮ್ - 22
ಇತ್ಯೇವಮುಕ್ತ್ವಾ ವಚನಂ ಮಹಾತ್ಮಾ
ಸೀತಾಂ ಪ್ರಿಯಾಂ ಮೈಥಿಲರಾಜಪುತ್ರೀಮ್ ।
ರಾಮೋ ಧನುಷ್ಮಾನ್ ಸಹ ಲಕ್ಷ್ಮಣೇನ
ಜಗಾಮ ರಮ್ಯಾಣಿ ತಪೋವನಾನಿ ॥
ಅನುವಾದ
ಮಹಾತ್ಮಾ ಶ್ರೀರಾಮಚಂದ್ರನು ತನ್ನ ಪ್ರಿಯೆ ಮಿಥಿಲೇಶ ಕುಮಾರೀ ಸೀತೆಯಲ್ಲಿ ಹೀಗೆ ಹೇಳಿ ಕೈಯಲ್ಲಿ ಧನುರ್ಬಾಣಗಳನ್ನು ಹಿಡಿದುಕೊಂಡು ಲಕ್ಷ್ಮಣನೊಂದಿಗೆ ರಮಣೀಯ ತಪೋವನದಲ್ಲಿ ಸಂಚರಿಸತೊಡಗಿದನು.॥22॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹತ್ತನೆಯ ಸರ್ಗ ಸಂಪೂರ್ಣವಾಯಿತು.॥10॥