००९ सीतया आयुधन्यासप्रदानम्

वाचनम्
ಭಾಗಸೂಚನಾ

ಸೀತೆಯು ನಿರಪರಾಧಿಗಳನ್ನು ಕೊಲ್ಲದಿರುವಂತೆಯೂ, ಅಹಿಂಸಾ ವ್ರತವನ್ನು ಪರಿಪಾಲಿಸುವಂತೆಯೂ, ಶ್ರೀರಾಮನನ್ನು ಒತ್ತಾಯಿಸಿದುದು

ಮೂಲಮ್ - 1

ಸುತೀಕ್ಷ್ಣೇನಾಭ್ಯನುಜ್ಞಾತಂ ಪ್ರಸ್ಥಿತಂ ರಘುನಂದನಮ್ ।
ಹೃದ್ಯಯಾ ಸ್ನಿಗ್ಧಯಾ ವಾಚಾ ಭರ್ತಾರಮಿದಮಬ್ರವೀತ್ ॥

ಅನುವಾದ

ಸುತೀಕ್ಷ್ಣರ ಅನುಮತಿ ಪಡೆದು ಅರಣ್ಯದ ಕಡೆಗೆ ಹೊರಟಿದ್ದ ತನ್ನ ಸ್ವಾಮಿ ರಘುಕುಲನಂದನ ಶ್ರೀರಾಮನಲ್ಲಿ ಸೀತೆಯು ಸ್ನೇಹತುಂಬಿದ ವಾಣಿಯಿಂದ ಈ ಪ್ರಕಾರ ಹೇಳಿದಳು.॥1॥

ಮೂಲಮ್ - 2

ಅಧರ್ಮಂತು ಸುಸೂಕ್ಷ್ಮೇಣ ವಿಧಿನಾ ಪ್ರಾಪ್ಯತೇ ಮಹಾನ್ ।
ನಿವೃತ್ತೇನ ಚ ಶಕ್ಯೋಽಯಂ ವ್ಯಸನಾತ್ ಕಾಮಜಾದಿಹ ॥

ಅನುವಾದ

ಆರ್ಯಪುತ್ರ! ನೀವು ಮಹಾಪುರುಷರಾಗಿದ್ದರೂ ಅತ್ಯಂತ ಸೂಕ್ಷ್ಮವಾಗಿ ವಿಚಾರ ಮಾಡಿದಾಗ ನೀವು ಅಧರ್ಮವನ್ನು ಆಶ್ರಯಿಸಿದ್ದೀರಿ. ಕಾಮಜನಕ ವ್ಯಸನದಿಂದ ನೀವು ಸರ್ವಥಾ ನಿವೃತ್ತರಾಗಿದ್ದರೂ ಇಲ್ಲಿ ಈ ಅಧರ್ಮದಿಂದ ಬದುಕುಳಿಯಬಲ್ಲಿರಾ.॥2॥

ಮೂಲಮ್ - 3

ತ್ರೀಣ್ಯೇವ ವ್ಯಸನಾನ್ಯತ್ರ ಕಾಮಜಾನಿ ಭವಂತ್ಯುತ ।
ಮಿಥ್ಯಾ ವಾಕ್ಯಂತು ಪರಮಂ ತಸ್ಮಾದ್ಗುರುತರಾವುಭೌ ॥

ಮೂಲಮ್ - 4

ಪರದಾರಾಭಿಗಮನಂ ವಿನಾ ವೈರಂ ಚ ರೌದ್ರತಾ ।
ಮಿಥ್ಯಾವಾಕ್ಯಂ ನ ತೇ ಭೂತಂ ನ ಭವಿಷ್ಯತಿ ರಾಘವ ॥

ಅನುವಾದ

ಈ ಜಗತ್ತಿನಲ್ಲಿ ಕಾಮದಿಂದ ಉತ್ಪನ್ನವಾಗುವ ಮೂರೇ ವ್ಯಸನಗಳು ಇವೆ. ಮಿಥ್ಯಾಭಾಷಣ ಬಹಳ ದೊಡ್ಡ ವ್ಯಸನವಾಗಿದೆ, ಆದರೆ ಅದಕ್ಕಿಂತಲೂ ಭಾರೀ ಎರಡು ವ್ಯಸನಗಳಿವೆ - ಪರಸ್ತ್ರೀಗಮನ ಮತ್ತು ವೈರವಿಲ್ಲದೆಯೇ ಬೇರೆಯವರ ಕುರಿತು ಕ್ರೂರವಾಗಿ ವರ್ತಿಸುವುದು. ರಘುನಂದನ! ಇದರಲ್ಲಿ ಮಿಥ್ಯಾಭಾಷಣರೂಪೀ ವ್ಯಸನವಾದರೋ ನಿಮ್ಮಿಂದ ಎಂದೂ ನಡೆದಿಲ್ಲ ಮತ್ತು ಮುಂದೆಯೂ ನಡೆಯಲಾರದು.॥3-4॥

ಮೂಲಮ್ - 5

ಕುತೋಽಭಿಲಷಣಂ ಸ್ತ್ರೀಣಾಂ ಪರೇಷಾಂ ಧರ್ಮನಾಶನಮ್ ।
ತವ ನಾಸ್ತಿ ಮನುಷ್ಯೇಂದ್ರನ ಚಾಭೂತ್ತೇ ಕದಾಚನ ॥

ಮೂಲಮ್ - 6

ಮನಸ್ಯಪಿ ತಥಾ ರಾಮ ನ ಚೈತದ್ವಿದ್ಯತೇ ಕ್ವಚಿತ್ ।
ಸ್ವದಾರನಿರತಶ್ಚೈವ ನಿತ್ಯಮೇವ ನೃಪಾತ್ಮಜ ॥

ಮೂಲಮ್ - 7

ಧರ್ಮಿಷ್ಠಃ ಸತ್ಯ ಸಂಧಶ್ಚ ಪಿತುರ್ನಿರ್ದೇಶಕಾರಕಃ ।
ತ್ವಯಿ ಧರ್ಮಶ್ಚ ಸತ್ಯಂ ಚ ತ್ವಯಿ ಸರ್ವಂ ಪ್ರತಿಷ್ಠಿತಮ್ ॥

ಅನುವಾದ

ಪರಸ್ತ್ರೀ ವಿಷಯದಲ್ಲಿ ನಿಮಗೆ ಅಭಿಲಾಷೆಯೇ ಉಂಟಾಗಲಾರದು. ನರೇಂದ್ರ! ಧರ್ಮವನ್ನು ನಾಶಮಾಡುವ ಈ ಕುತ್ಸಿತ ಇಚ್ಛೆ ನಿಮ್ಮ ಮನಸ್ಸಿನಲ್ಲಿ ಎಂದೂ ಉಂಟಾಗಲಿಲ್ಲ ಹಾಗೂ ಭವಿಷ್ಯದಲ್ಲಿಯೂ ಉಂಟಾಗುವ ಸಂಭವವೇ ಇಲ್ಲ. ರಾಜಕುಮಾರ ಶ್ರೀರಾಮ! ಈ ದೋಷವಾದರೋ ನಿಮ್ಮ ಮನಸ್ಸಿನಲ್ಲಿ ಎಂದೂ ಉದಯಿಸಲಿಲ್ಲ. (ಹಾಗಿರುವಾಗ ವಾಣಿಯಲ್ಲಿ ಮತ್ತು ಕ್ರಿಯೆಯಲ್ಲಿ ಹೇಗೆ ಬರಬಲ್ಲದು?) ನೀವು ಸದಾ ತನ್ನ ಧರ್ಮಪತ್ನಿಯಲ್ಲೇ ಅನುರಕ್ತರಾಗಿ ಇರುವವರು, ಧರ್ಮನಿಷ್ಠ, ಸತ್ಯಪ್ರತಿಜ್ಞ ಹಾಗೂ ಪಿತನ ಆಜ್ಞೆಯನ್ನು ಪಾಲಿಸುವವರಾಗಿದ್ದೀರಿ. ನಿಮ್ಮಲ್ಲಿ ಧರ್ಮ ಮತ್ತು ಸತ್ಯ ಎರಡೂ ಪ್ರತಿಷ್ಠಿತವಾಗಿದೆ. ನಿಮ್ಮಲ್ಲಿ ಎಲ್ಲವೂ ಪ್ರತಿಷ್ಠಿತವಾಗಿದೆ.॥5-7॥

ಮೂಲಮ್ - 8

ತಚ್ಚ ಸರ್ವಂ ಮಹಾಬಾಹೋ ಶಕ್ಯಂ ವೋಢುಂ ಜಿತೇಂದ್ರಿಯೈಃ ।
ತವ ವಶ್ಯೇಂದ್ರಿಯತ್ವಂ ಚ ಜಾನಾಮಿ ಶುಭದರ್ಶನ ॥

ಅನುವಾದ

ಮಹಾಬಾಹೋ! ಜಿತೇಂದ್ರಿಯರಾದವರೇ ಸದಾ ಸತ್ಯ ಮತ್ತು ಧರ್ಮವನ್ನು ಪೂರ್ಣ ರೂಪದಿಂದ ಧರಿಸಬಲ್ಲರು. ಶುಭದರ್ಶಿ ಮಹಾಪುರುಷ! ನಿಮ್ಮ ಜಿತೇಂದ್ರಿಯತ್ವವನ್ನು ನಾನು ಚೆನ್ನಾಗಿ ಬಲ್ಲೆನು.(ಅದಕ್ಕಾಗಿ ನಿಮ್ಮಲ್ಲಿ ಹಿಂದಿನ ಎರಡೂ ದೋಷಗಳು ಎಂದಿಗೂ ಇರಲಾರದು ಎಂಬ ವಿಶ್ವಾಸ ನನಗಿದೆ).॥8॥

ಮೂಲಮ್ - 9

ತೃತೀಯಂ ಯದಿದಂ ರೌದ್ರಂ ಪರಪ್ರಾಣಾಭಿಹಿಂಸನಮ್ ।
ನಿರ್ವೈರಂ ಕ್ರಿಯತೇ ಮೋಹಾತ್ತಚ್ಚ ತೇ ಸಮುಪಸ್ಥಿತಮ್ ॥

ಅನುವಾದ

ಆದರೆ ಬೇರೆ ಪ್ರಾಣಿಗಳ ಹಿಂಸಾರೂಪೀ ಈ ಮೂರನೆಯ ಭಯಂಕರ ದೋಷವನ್ನು ಜನರು ಮೋಹವಶ, ವೈರವಿಲ್ಲದೆಯೇ ಮಾಡುತ್ತಾರೆ. ಆ ದೋಷವೇ ನಿಮ್ಮ ಮುಂದೆ ಉಪಸ್ಥಿತವಾಗಿದೆ.॥9॥

ಮೂಲಮ್ - 10

ಪ್ರತಿಜ್ಞಾ ತಸ್ತ್ವಯಾ ವೀರ ದಂಡಕಾರಣ್ಯವಾಸಿನಾಮ್ ।
ಋಷೀಣಾಂ ರಕ್ಷಣಾರ್ಥಾಯ ವಧಃ ಸಂಯತಿ ರಕ್ಷಸಾಮ್ ॥

ಅನುವಾದ

ವೀರ! ನೀವು ದಂಡಕಾರಣ್ಯವಾಸೀ ಋಷಿಗಳ ರಕ್ಷಣೆಗಾಗಿ ಯುದ್ಧದಲ್ಲಿ ರಾಕ್ಷಸರನ್ನು ವಧಿಸುವ ಪ್ರತಿಜ್ಞೆ ಮಾಡಿರುವಿರಿ.॥10॥

ಮೂಲಮ್ - 11

ಏತನ್ನಿಮಿತ್ತಂ ಚ ವನಂ ದಂಡಕಾ ಇತಿ ವಿಶ್ರುತಮ್ ।
ಪ್ರಸ್ಥಿತಸ್ತ್ವಂ ಸಹ ಭ್ರಾತ್ರಾ ಧೃತಬಾಣಶರಾಸನಃ ॥

ಅನುವಾದ

ಅದಕ್ಕಾಗಿಯೇ ನೀವು ಅನುಜನೊಡನೆ ಧನುರ್ಬಾಣಗಳನ್ನು ಧರಿಸಿಕೊಂಡು ದಂಡಕಾರಣ್ಯವೆಂಬ ವಿಖ್ಯಾತ ವನದ ಕಡೆ ಹೋಗುತ್ತಿದ್ದೀರಿ.॥11॥

ಮೂಲಮ್ - 12

ತತಸ್ತ್ವಾಂ ಪ್ರಸ್ಥಿತಂ ದೃಷ್ಟ್ವಾ ಮಮ ಚಿಂತಾಕುಲಂ ಮನಃ ।
ತ್ವದ್ವೃತ್ತಂ ಚಂತಯಂತ್ಯಾ ವೈ ಭವೇನ್ನಿಃಶ್ರೇಯಸಂ ಹಿತಮ್॥

ಅನುವಾದ

ಆದ್ದರಿಂದ ಈ ಘೋರಕರ್ಮಕ್ಕಾಗಿ ಹೊರಟಿರುವ ನಿಮ್ಮನ್ನು ನೋಡಿ ನನ್ನ ಚಿತ್ತವು ಚಿಂತೆಯಿಂದ ವ್ಯಾಕುಲಗೊಂಡಿದೆ ನಿಮ್ಮ ಪಾಲನರೂಪೀ ವ್ರತದ ಕುರಿತು ವಿಚಾರ ಮಾಡಿ ನಿಮ್ಮ ಶ್ರೇಯಸ್ಸು ಹೇಗಾದೀತು? ಎಂದು ನಾನು ಯೋಚಿಸುತ್ತಾ ಇರುತ್ತೇನೆ.॥12॥

ಮೂಲಮ್ - 13

ನ ಹಿ ಮೇ ರೋಚತೇ ವೀರಗಮನಂ ದಂಡಕಾನ್ ಇತಿ ।
ಕಾರಣಂ ತತ್ರ ವಕ್ಷ್ಯಾಮಿ ವದಂತ್ಯಾಃ ಶ್ರೂಯತಾಂ ಮಮ ॥

ಅನುವಾದ

ವೀರವರ! ಈಗ ನೀವು ದಂಡಕಾರಣ್ಯಕ್ಕೆ ಹೋಗುವುದು ನನಗೆ ಸರಿ ಅನಿಸುವುದಿಲ್ಲ. ಇದರ ಕಾರಣವನ್ನು ನಾನು ಹೇಳುತ್ತೇನೆ, ಕೇಳಿರಿ.॥13॥

ಮೂಲಮ್ - 14

ತ್ವಂ ಹಿ ಬಾಣಧನುಷ್ಪಾಣಿರ್ಭ್ರಾತ್ರಾ ಸಹ ವನಂ ಗತಃ ।
ದೃಷ್ಟ್ವಾ ವನಚರಾನ್ಸರ್ವಾನ್ ಕಚ್ಚಿತ್ಕುರ್ಯಾಃ ಶರವ್ಯಯಮ್ ॥

ಅನುವಾದ

ನೀವು ಕೈಯಲ್ಲಿ ಧನುರ್ಬಾಣಗಳನ್ನು ಹಿಡಿದುಕೊಂಡು ಸಹೋದರನೊಂದಿಗೆ ಕಾಡಿಗೆ ಬಂದಿರುವಿರಿ. ಸಮಸ್ತ ವನಚರ ರಾಕ್ಷಸರನ್ನು ನೋಡಿ ಅವರ ಮೇಲೆ ಬಾಣಪ್ರಯೋಗ ಮಾಡುವ ಸಂಭವವಿದೆ.॥14॥

ಮೂಲಮ್ - 15

ಕ್ಷತ್ರಿಯಾಣಾಂ ಚ ಹಿ ಧನುರ್ಹುತಾಶಸ್ಯೇಂಧನಾನಿ ಚ ।
ಸಮೀಪತಃ ಸ್ಥಿತಂ ತೇಜೋಬಲಮುಚ್ಛ್ರಯತೇ ಭೃಶಮ್ ॥

ಅನುವಾದ

ಅಗ್ನಿಯ ಸಮೀಪದಲ್ಲಿಟ್ಟ ಕಟ್ಟಿಗೆಗಳಿಂದ ಜ್ವಾಲೆಗಳು ವೃದ್ಧಿಗೊಂಡು ಮುಂದು-ಮುಂದಕ್ಕೆ ಹೋಗುತ್ತದೆ. ಹಾಗೆಯೇ ಕ್ಷತ್ರಿಯ ಬಳಿ ಧನುರ್ಬಾಣಗಳಿದ್ದರೆ ಅವರ ಬಲ ಮತ್ತು ಪ್ರತಾಪಗಳು ಹೆಚ್ಚಿಸುತ್ತದೆ.॥15॥

ಮೂಲಮ್ - 16

ಪುರಾ ಕಿಲ ಮಹಾಬಾಹೋ ತಪಸ್ವೀ ಸತ್ಯವಾಂವುಚಿಃ ।
ಕಸ್ಮಿಂಶ್ಚಿದಭವತ್ ಪುಣ್ಯೇ ವನೇ ರತಮೃಗದ್ವಿಜೇ ॥

ಅನುವಾದ

ಮಹಾಬಾಹುವೇ! ಬಹಳ ಹಿಂದೆ ನಡೆದ ಕಥೆ ಇದು - ಯಾವುದೋ ಪವಿತ್ರ ವನದಲ್ಲಿ ಮೃಗಪಕ್ಷಿಗಳು ಬಹಳ ಆನಂದವಾಗಿದ್ದ ಆ ಆಶ್ರಮದಲ್ಲಿ ಒಬ್ಬ ಸತ್ಯವಾದೀ, ಪವಿತ್ರ ತಪಸ್ವೀ ಇರುತ್ತಿದ್ದನು.॥16॥

ಮೂಲಮ್ - 17

ತಸ್ಯೈವ ತಪಸೋ ವಿಘ್ನಂ ಕರ್ತುಮಿಂದ್ರಃ ಶಚೀಪತಿಃ ।
ಖಡ್ಗಪಾಣಿರಥಾಗಚ್ಛದಾಶ್ರಮಂ ಭಟರೂಪಧೃಶ್ ॥

ಅನುವಾದ

ಅವನ ತಪಸ್ಸಿನಲ್ಲಿ ವಿಘ್ನವನ್ನೊಡ್ಡಲು ಶಚೀಪತಿ ಇಂದ್ರನು ಓರ್ವ ಯೋಧನ ರೂಪಧರಿಸಿ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಒಂದು ದಿನ ಅವನ ಆಶ್ರಮಕ್ಕೆ ಬಂದನು.॥17॥

ಮೂಲಮ್ - 18

ತಸ್ಮಿಂಸ್ತದಾಶ್ರಮಪದೇ ನಿಶಿತಃ ಖಡ್ಗ ಉತ್ತಮಃ ।
ಸ ನ್ಯಾಸವಿಧಿನಾ ದತ್ತಃ ಪುಣ್ಯೇ ತಪಸಿ ತಿಷ್ಠತಃ ॥

ಅನುವಾದ

ಅವನು ಮುನಿಯ ಆಶ್ರಮದಲ್ಲಿ ತನ್ನ ಖಡ್ಗವನ್ನು, ಪವಿತ್ರ ತಪಸ್ಸಿನಲ್ಲಿ ತೊಡಗಿದ ಮುನಿಯ ಬಳಿಯಲ್ಲಿ ನ್ಯಾಸ ರೂಪವಾಗಿ ಇರಿಸಿದನು.॥18॥

ಮೂಲಮ್ - 19

ಸ ತಚ್ಛಸ್ತ್ರ ಮನುಪ್ರಾಪ್ಯ ನ್ಯಾಸರಕ್ಷಣತತ್ಪರಃ ।
ವನೇ ತು ವಿಚರತ್ಯೇವ ರಕ್ಷನ್ ಪ್ರತ್ಯಯಮಾತ್ಮನಃ ॥

ಅನುವಾದ

ಆ ಅಸ್ತ್ರವನ್ನು ಪಡೆದು ಮುನಿಯು ಆ ನ್ಯಾಸರೂಪವಾದ ಖಡ್ಗದ ರಕ್ಷಣೆಯಲ್ಲಿ ತೊಡಗಿದನು. ಅವರು ತನ್ನ ವಿಶ್ವಾಸದ ರಕ್ಷಣೆಗಾಗಿ ವನದಲ್ಲಿ ತಿರುಗಾಡುತ್ತಿರುವಾಗಲೂ ಆ ಖಡ್ಗವನ್ನು ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದನು.॥19॥

ಮೂಲಮ್ - 20

ಯತ್ರ ಗಚ್ಛತ್ಯುಪಾದಾತುಂ ಮೂಲಾನಿ ಚ ಫಲಾನಿ ಚ ।
ನ ವಿನಾ ಯಾತಿ ತಂ ಖಡ್ಗ ನ್ಯಾಸರಕ್ಷಣತತ್ಪರಃ ॥

ಅನುವಾದ

ನ್ಯಾಸದ ರಕ್ಷಣೆಯಲ್ಲಿ ತತ್ಪರನಾಗಿರುವ ಆ ಮುನಿಯು ಫಲ ಮೂಲಗಳನ್ನು ತರಲು ಹೋದಲೆಲ್ಲ ಆ ಖಡ್ಗವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ.॥20॥

ಮೂಲಮ್ - 21

ನಿತ್ಯಂ ಶಸ್ತ್ರಂ ಪರಿವಹನ್ ಕ್ರಮೇಣ ಸ ತಪೋಧನಃ ।
ಚಕಾರ ರೌದ್ರೀಂ ಸ್ವಾಂ ಬುದ್ಧಿಂ ತ್ಯಕ್ತ್ವಾ ತಪಸಿ ನಿಶ್ಚಯಮ್ ॥

ಅನುವಾದ

ತಪಸ್ಸೇ ಧನವಾಗಿದ್ದ ಆ ಮುನಿಯು ಶಸ್ತ್ರವನ್ನು ಹಿಡಿದೇ ಇರುವುದರಿಂದ ಕ್ರಮವಾಗಿ ತಪಸ್ಸಿನ ನಿಶ್ಚಯ ನಿಂತುಹೋಗಿ ಅವರ ಬುದ್ಧಿಯು ಕ್ರೂರತೆಯಿಂದ ಕೂಡಿತು.॥21॥

ಮೂಲಮ್ - 22

ತತಃ ಸ ರೌದ್ರಾಭಿರತಃ ಪ್ರಮತ್ತೋಽಧರ್ಮಕರ್ಷಿತಃ ।
ತಸ್ಯ ಶಸ್ತ್ರಸ್ಯ ಸಂವಾಸಾಜ್ಜಗಾಮ ನರಕಂ ಮುನಿಃ ॥

ಅನುವಾದ

ಮತ್ತು ಅಧರ್ಮವೇ ಅವನನ್ನು ಆವರಿಸಿಬಿಟ್ಟಿತು. ಆ ಮುನಿಯು ಪ್ರಮಾದವಶನಾಗಿ ರೌದ್ರಕರ್ಮದಲ್ಲಿ ತತ್ಪರನಾದನು ಹಾಗೂ ಆ ಶಸ್ತ್ರದ ಸಹವಾಸದಿಂದ ಅವರಿಗೆ ನರಕಕ್ಕೆ ಹೋಗಬೇಕಾಯಿತು.॥22॥

ಮೂಲಮ್ - 23

ಏವಮೇತತ್ ಪುರಾವೃತ್ತಂ ಶಸ್ತ್ರ ಸಂಯೋಗಕಾರಣಮ್ ।
ಅಗ್ನಿ ಸಂಯೋಗವದ್ಧೇತುಃ ಶಸ್ತ್ರ ಸಂಯೋಗ ಉಚ್ಯತೇ ॥

ಅನುವಾದ

ಹೀಗೆ ಶಸ್ತ್ರದ ಸಂಯೋಗವಾದ ಕಾರಣ ಹಿಂದಿನ ಕಾಲದಲ್ಲಿ ಆ ತಪಸ್ವೀ ಮುನಿಗೆ ಇಂತಹ ದುರ್ದೆಶೆ ಭೋಗಿಸಬೇಕಾಯಿತು. ಅಗ್ನಿಯ ಸಂಯೋಗ ಕಟ್ಟಿಗೆಗಳನ್ನು ಸುಡುವುದೇ ಆಗಿರುವಂತೆಯೇ ಶಸ್ತ್ರಗಳ ಸಂಯೋಗವು ಶಸ್ತ್ರಧಾರಿಯ ಹೃದಯದಲ್ಲಿ ವಿಕಾರವನ್ನುಂಟುಮಾಡುತ್ತದೆ ಎಂದು ಹೇಳಲಾಗಿದೆ.॥23॥

ಮೂಲಮ್ - 24

ಸ್ನೇಹಾಚ್ಚ ಬಹುಮಾನಾಚ್ಚ ಸ್ಮಾರಯೇ ತ್ವಾಂ ತು ಶಿಕ್ಷಯೇ ।
ನ ಕಥಂಚನ ಸಾ ಕಾರ್ಯಾಗೃಹೀತಧನುಷಾ ತ್ವಯಾ ॥

ಮೂಲಮ್ - 25

ಬುದ್ಧಿರ್ವೈರಂ ವಿನಾ ಹಂತುಂ ರಾಕ್ಷಸಾನ್ದಂಡಕಾಶ್ರಿತಾನ್ ।
ಅಪರಾಧಂ ವಿನಾ ಹಂತುಂ ಲೋಕೋ ವೀರ ನ ಮಂಸ್ಯತೇ ॥

ಅನುವಾದ

ನನ್ನ ಮನಸ್ಸಿನಲ್ಲಿ ನಿಮ್ಮ ಕುರಿತು ಇರುವ ಸ್ನೇಹ ಮತ್ತು ವಿಶೇಷ ಆದರದಿಂದಾಗಿ ನಾನು ನಿಮಗೆ ಆ ಪ್ರಾಚೀನ ಘಟನೆಯನ್ನು ಜ್ಞಾಪಿಸುತ್ತಿದ್ದೇನೆ ಹಾಗೂ ನೀವು ಧನುರ್ಬಾಣಗಳನ್ನು ಹಿಡಿದುಕೊಂಡು ಯವುದೇ ರೀತಿಯಿಂದ ವೈರವಿಲ್ಲದ ದಂಡಕಾರಣ್ಯವಾಸೀ ರಾಕ್ಷಸರನ್ನು ವಧಿಸುವ ವಿಚಾರ ಮಾಡಬಾರದೆಂದು ನಾನು ಆಗ್ರಹಪಡಿಸುತ್ತಿದ್ದೇನೆ. ವೀರವರನೇ! ಅಪರಾಧವಿಲ್ಲದೆಯೇ ಯಾರನ್ನಾದರೂ ಕೊಲ್ಲುವುದು ಜಗತ್ತಿನಲ್ಲಿ ಸರಿಯಲ್.॥24-25॥

ಮೂಲಮ್ - 26

ಕ್ಷತ್ರಿಯಾಣಾಂ ತು ವೀರಾಣಾಂ ವನೇಷು ನಿಯತಾತ್ಮನಾಮ್ ।
ಧನುಷಾ ಕಾರ್ಯಮೇತಾವದಾರ್ತಾನಾಮಭಿರಕ್ಷಣಮ್ ॥

ಅನುವಾದ

ತನ್ನ ಮನ ಇಂದ್ರಿಯಗಳನ್ನು ವಶಪಡಿಸಿಕೊಂಡ ಕ್ಷತ್ರಿಯ ವೀರನಿಗೆ ವನದಲ್ಲಿ ಧನುಸ್ಸು ಧರಿಸುವ ಪ್ರಯೋಜನ - ಸಂಕಟದಲ್ಲಿ ಬಿದ್ದಿರುವ ಪ್ರಾಣಿಗಳನ್ನು ರಕ್ಷಿಸುವಷ್ಟೇ ಆಗಿದೆ.॥26॥

ಮೂಲಮ್ - 27

ಕ್ವ ಚ ಶಸ್ತ್ರಂ ಕ್ವ ಚ ವನಂ ಕ್ವ ಚ ಕ್ಷಾತ್ರಂ ತಪಃ ಕ್ವ ಚ ।
ವ್ಯಾವಿದ್ಧಮಿದಮಸ್ಮಾಭಿರ್ದೇಶಧರ್ಮಸ್ತು ಪೂಜ್ಯತಾಮ್ ॥

ಅನುವಾದ

ಎಲ್ಲಿ ಶಸ್ತ್ರಧಾರಣ, ಎಲ್ಲಿ ವನವಾಸ? ಎಲ್ಲಿ ಕ್ಷತ್ರಿಯರ ಹಿಂಸಾಮಯ ಕಠೋರ ಕರ್ಮ, ಎಲ್ಲಿ ಸಕಲ ಪ್ರಾಣಿಗಳ ಮೇಲೆ ದಯೆಯಿಡುವ ತಪಸ್ಸು? ಇವು ಪರಸ್ಪರ ವಿರುದ್ಧವಾಗಿ ಅನಿಸುತ್ತದೆ. ಆದ್ದರಿಂದ ನಾವು ದೇಶಧರ್ಮವನ್ನು ಆದರಿಸಬೇಕು. (ಈಗ ನಾವು ತಪೋರೂಪೀ ದೇಶದಲ್ಲಿ ವಾಸಿಸುತ್ತಿದ್ದೇವೆ, ಆದ್ದರಿಂದ ಇಲ್ಲಿಯ ಅಹಿಂಸಾಮಯ ಧರ್ಮವನ್ನು ಪಾಲಿಸುವುದೇ ನಮ್ಮ ಕರ್ತವ್ಯವಾಗಿದೆ.॥27॥

ಮೂಲಮ್ - 28

ತದಾರ್ಯಕಲುಷಾ ಬುದ್ಧಿರ್ಜಾಯತೇ ಶಸ್ತ್ರಸೇವನಾತ್ ।
ಪುನರ್ಗತ್ವಾ ತ್ವಯೋಧ್ಯಾಯಾಂ ಕ್ಷತ್ರಧರ್ಮಂ ಚರಿಷ್ಯಸಿ ॥

ಅನುವಾದ

ಕೇವಲ ಶಸ್ತ್ರದ ಸೇವನ ಮಾಡುವುದರಿಂದ ಮನುಷ್ಯನ ಬುದ್ಧಿಯು ಲೋಭಿ ಮನುಷ್ಯನಂತೆ ಕಲುಷಿತವಾಗುತ್ತದೆ. ಆದ್ದರಿಂದ ನೀವು ಅಯೋಧ್ಯೆಗೆ ಹೋದ ಮೇಲೆಯೇ ಪುನಃ ಕ್ಷತ್ರಿಯ ಧರ್ಮವನ್ನು ಅನುಷ್ಠಾನ ಮಾಡಿರಿ.॥28॥

ಮೂಲಮ್ - 29

ಅಕ್ಷಯಾ ತು ಭವೇತ್ಪ್ರೀತಿಃ ಶ್ವಶ್ರೂಶ್ವಶುರಯೋರ್ಮಮ ।
ಯದಿರಾಜ್ಯಂ ಹಿ ಸಂನ್ಯಸ್ಯಭವೇಸ್ತ್ವಂ ನಿರತೋ ಮುನಿಃ ॥

ಅನುವಾದ

ರಾಜ್ಯವನ್ನು ತ್ಯಜಿಸಿ ವನಕ್ಕೆ ಬಂದ ಮೇಲೆ ನೀವು ಮುನಿವೃತ್ತಿಯಿಂದಲೇ ಇದ್ದರೆ, ಇದರಿಂದ ನನ್ನ ಅತ್ತೆ-ಮಾವಂದಿರಿಗೆ ಅಕ್ಷಯ ಆನಂದವಾಗಬಹುದು.॥29॥

ಮೂಲಮ್ - 30

ಧರ್ಮಾದರ್ಥಃ ಪ್ರಭವತಿ ಧಮಾತ್ ಪ್ರಭವತೇ ಸುಖಮ್ ।
ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ॥

ಅನುವಾದ

ಧರ್ಮದಿಂದ ಅರ್ಥಪ್ರಾಪ್ತವಾಗುತ್ತದೆ, ಧರ್ಮದಿಂದ ಸುಖದ ಉದಯವಾಗುತ್ತದೆ. ಧರ್ಮದಿಂದಲೇ ಮನುಷ್ಯನು ಎಲ್ಲವನ್ನು ಪಡೆಯುತ್ತಾನೆ. ಈ ಜಗತ್ತಿನಲ್ಲಿ ಧರ್ಮವೇ ಸಾರವಾಗಿದೆ.॥30॥

ಮೂಲಮ್ - 31

ಆತ್ಮಾನಂ ನಿಯಮೈಸ್ತೈಸ್ತೈಃ ಕರ್ಶಯಿತ್ವಾ ಪ್ರಯತ್ನತಃ ।
ಪ್ರಾಪ್ಯತೇ ನಿಪುಣೈಧರ್ಮೋ ನ ಸುಖಾಲ್ಲಭ್ಯತೇ ಸುಖಮ್ ॥

ಅನುವಾದ

ಚತುರ ಮನುಷ್ಯನು ಬೇರೆ-ಬೇರೆ ವಾನಪ್ರಸ್ಥೋಚಿತ ನಿಯಮಗಳಿಂದ ತನ್ನ ಶರೀರವನ್ನು ಕ್ಷೀಣಗೊಳಿಸಿ, ಪ್ರಯತ್ನ ಪೂರ್ವಕ ಧರ್ಮವನ್ನು ಸಂಪಾದಿಸುತ್ತಾನೆ. ಏಕೆಂದರೆ ಸುಖದಾಯಕ ಸಾಧನೆಗಳಿಂದ ಸುಖದ ಹೇತು ಭೂತ ಧರ್ಮದ ಪ್ರಾಪ್ತಿಯಾಗುವುದಿಲ್ಲ.॥31॥

ಮೂಲಮ್ - 32

ನಿತ್ಯಂ ಶುಚಿಮತಿಃ ಸೌಮ್ಯ ಚರ ಧರ್ಮಂ ತಪೋವನೇ ।
ಸರ್ವಂ ತು ವಿದಿತಂ ತುಭ್ಯಂ ತ್ರೈಲೋಕ್ಯಾಮಪಿ ತತ್ತ್ವತಃ ॥

ಅನುವಾದ

ಸೌಮ್ಯನೇ! ಪ್ರತಿದಿನ ಶುದ್ಧಚಿತ್ತರಾಗಿ ತಪೋವನದಲ್ಲಿ ಧರ್ಮದ ಅನುಷ್ಠಾನ ಮಾಡಿರಿ. ಮೂರುಲೋಕಗಳಲ್ಲಿ ಇರುವುದೆಲ್ಲವೂ ನಿಮಗೆ ಯಥಾರ್ಥರೂಪದಿಂದ ತಿಳಿದಿದೆ.॥32॥

ಮೂಲಮ್ - 33

ಸ್ತ್ರೀಚಾಪಲಾದೇತದುಪಾಹೃತಂ ಮೇ
ಧರ್ಮಂ ಚ ವಕ್ತುಂ ತವ ಕಃ ಸಮರ್ಥಃ ।
ವಿಚಾರ್ಯ ಬುದ್ಧ್ಯಾ ತು ಸಹಾನುಜೇನ
ಯದ್ರೋಚತೇ ತತ್ಕುರು ಮಾಚಿರೇಣ ॥

ಅನುವಾದ

ನಾನು ನಾರಿಯರ ಸ್ವಾಭಾವಿಕ ಚಪಲತೆಯಿಂದಲೇ ನಿಮ್ಮಲ್ಲಿ ಈ ಮಾತನ್ನು ನಿವೇದಿಸಿಕೊಂಡಿರುವೆನು. ವಾಸ್ತವವಾಗಿ ನಿಮಗೆ ಧರ್ಮದ ಉಪದೇಶ ಮಾಡುವುದರಲ್ಲಿ ಯಾರು ಸಮರ್ಥರಿದ್ದಾರೆ? ತಾವು ಈ ವಿಷಯದಲ್ಲಿ ತಮ್ಮನೊಡನೆ ಬುದ್ಧಿಪೂರ್ವಕ ವಿಚಾರ ಮಾಡಿರಿ, ಮತ್ತೆ ನಿಮಗೆ ಸರಿಯೆನಿಸಿದಂತೆ ಮಾಡಿರಿ.॥33॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಒಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥9॥