००८ दण्डकवननिष्क्रमणम्

वाचनम्
ಭಾಗಸೂಚನಾ

ಪ್ರಾತಃಕಾಲ ಸುತೀಕ್ಷಣರಿಂದ ಬೀಳ್ಕೊಂಡು ಶ್ರೀರಾಮ-ಸೀತೆ-ಲಕ್ಷ್ಮಣರು ಮುಂದಕ್ಕೆ ಪ್ರಯಾಣ ಮಾಡಿದುದು

ಮೂಲಮ್ - 1

ರಾಮಸ್ತು ಸಹಸೌಮಿತ್ರಿಃ ಸುತೀಕ್ಷ್ಣೇನಾಭಿಪೂಜಿತಃ ।
ಪರಿಣಾಮ್ಯ ನಿಶಾಂ ತತ್ರ ಪ್ರಭಾತೇ ಪ್ರತ್ಯಬುಧ್ಯತ ॥

ಅನುವಾದ

ಸುತೀಕ್ಷ್ಣರಿಂದ ಚೆನ್ನಾಗಿ ಪೂಜಿತರಾಗಿ ಲಕ್ಷ್ಮಣಸಹಿತ ಶ್ರೀರಾಮನು ಅವರ ಆಶ್ರಮದಲ್ಲೇ ರಾತ್ರೆಯನ್ನು ಕಳೆದು ಪ್ರಾತಃಕಾಲವಾಗುತ್ತಲೇ ಎಚ್ಚರಗೊಂಡರು.॥1॥

ಮೂಲಮ್ - 2

ಉತ್ಥಾಯ ಚ ಯಥಾಕಾಲಂ ರಾಘವಃ ಸಹ ಸೀತಯಾ ।
ಉಪಸ್ಪೃಶ್ಯ ಸುಶೀತೇನ ತೋಯೇನೋತ್ಪಲಗಂಧಿನಾ ॥

ಮೂಲಮ್ - 3

ಅಥ ತೇಽಗ್ನಿಂ ಸುರಾಂಶ್ಚೈವ ವೈದೇಹೀ ರಾಮಲಕ್ಷ್ಮಣೌ ।
ಕಾಲ್ಯಂ ವಿಧಿವದಭ್ಯರ್ಚ್ಯ ತಪಸ್ವಿಶರಣೇ ವನೇ ॥

ಮೂಲಮ್ - 4

ಉದಯಂತಂ ದಿನಕರಂ ದೃಷ್ಟ್ವಾ ವಿಗತಕಲ್ಮಷಾಃ ।
ಸುತೀಕ್ಷ್ಣ ಮಭಿಗಮ್ಯೇದಂ ಶ್ಲಕ್ಷ್ಣಂ ವಚನಮಬ್ರುವನ್ ॥

ಅನುವಾದ

ಸೀತಾಸಹಿತ ಶ್ರೀರಾಮ ಮತ್ತು ಲಕ್ಷ್ಮಣರು ಸಮಯಕ್ಕೆ ಸರಿಯಾಗಿ ಎದ್ದು ಕಮಲ ಸುಗಂಧದಿಂದ ಪರಿಮಳಯುಕ್ತ ಪರಮ ಶೀತಲ ಸಿಹಿನೀರಿನಿಂದ ಸ್ನಾನಮಾಡಿದರು. ಅನಂತರ ಮೂವರೂ ಸೇರಿ ವಿಧಿವತ್ತಾಗಿ ಅಗ್ನಿ ಮತ್ತು ದೇವತೆಗಳ ಪ್ರಾತಃಕಾಲದ ಪೂಜೆ ಮಾಡಿದರು. ಅನಂತರ ತಪಸ್ವಿಗಳ ಆಶ್ರಯಭೂತ ವನದಲ್ಲಿ ಉದಯಿಸಿದ ಸೂರ್ಯನನ್ನು ದರ್ಶಿಸಿ, ನಿಷ್ಪಾಪಿಗಳಾದ ಮೂವರೂ ಸುತೀಕ್ಷ್ಣ ಮುನಿಯ ಬಳಿಗೆ ಬಂದು ಮಧುರವಾಗಿ ಇಂತೆಂದರು.॥2-4॥

ಮೂಲಮ್ - 5

ಸುಖೋಷಿತಾಃ ಸ್ಮ ಭಗವಂಸ್ತ್ವಯಾ ಪೂಜ್ಯೇನ ಪೂಜಿತಾಃ ।
ಆಪೃಚ್ಛಾಮಃ ಪ್ರಯಾಸ್ಯಾಮೋಮುನಯಸ್ತ್ವರಯಂತಿ ನಃ ॥

ಅನುವಾದ

ಪೂಜ್ಯರೇ! ತಾವು ಪೂಜನೀಯರಾಗಿದ್ದರೂ ನಮ್ಮನ್ನು ಪೂಜಿಸಿದಿರಿ. ನಾವು ನಿಮ್ಮ ಆಶ್ರಮದಲ್ಲಿ ಬಹಳ ಸುಖವಾಗಿ ಇದ್ದೆವು. ಈಗ ನಾವು ಇಲ್ಲಿಂದ ಮುಂದಕ್ಕೆ ಹೋಗಲು ತಮ್ಮ ಅಪ್ಪಣೆಯನ್ನು ಬಯಸುತ್ತಿದ್ದೇವೆ. ಈ ಮುನಿಗಳು ನಮ್ಮನ್ನು ಹೊರಡಲು ಅವಸರ ಪಡಿಸುತ್ತಿದ್ದಾರೆ.॥5॥

ಮೂಲಮ್ - 6

ತ್ವರಾಮಹೇ ವಯಂ ದ್ರಷ್ಟುಂ ಕೃತ್ಸ್ನಮಾಶ್ರಮಮಂಡಲಮ್ ।
ಋಷೀಣಾಂ ಪುಣ್ಯಶೀಲಾನಾಂ ದಂಡಕಾರಣ್ಯವಾಸಿನಾಮ್ ॥

ಅನುವಾದ

ನಾವು ದಂಡಕಾರಣ್ಯದಲ್ಲಿ ವಾಸಿಸುವ ಪುಣ್ಯಾತ್ಮರಾದ ಋಷಿಗಳ ಎಲ್ಲ ಆಶ್ರಮಗಳನ್ನು ದರ್ಶಿಸಲು ಉತ್ಸುಕರಾಗಿದ್ದೇವೆ.॥6॥

ಮೂಲಮ್ - 7

ಅಭ್ಯನುಜ್ಞಾತುಮಿಚ್ಛಾಮಃ ಸಹೈಭಿರ್ಮುನಿಪುಂಗವೈಃ ।
ಧರ್ಮನಿತ್ಯೈಸ್ತಪೋದಾಂತೈರ್ವಿಶಿಖೈರಿವ ಪಾವಕೈಃ ॥

ಅನುವಾದ

ಧೂಮರಹಿತ ಅಗ್ನಿಯಂತೆ ತೇಜಸ್ವಿಗಳೂ, ತಪಸ್ಸಿನಿಂದ ಇಂದ್ರಿಯಗಳನ್ನು ವಶಪಡಿಸಿಕೊಂಡಿರುವವರೂ ಹಾಗೂ ನಿತ್ಯ ಧರ್ಮಪರಾಯಣರೂ ಆದ ಶ್ರೇಷ್ಠಮಹರ್ಷಿಗಳ ಜೊತೆಗೆ ಇಲ್ಲಿಂದ ಹೊರಡಲು ಅಪ್ಪಣೆಯನ್ನು ಬಯಸುತ್ತಿದ್ದೇನೆ.॥7॥

ಮೂಲಮ್ - 8

ಅವಿಷಹ್ಯಾತಪೋ ಯಾವತ್ ಸೂರ್ಯೋ ನಾತಿವಿರಾಜತೇ ।
ಅಮಾರ್ಗೇಣಾಗತಾಂ ಲಕ್ಷ್ಮೀಂ ಪ್ರಾಪ್ಯೇವಾನ್ವಯವರ್ಜಿತಃ ॥

ಮೂಲಮ್ - 9

ತಾವದಿಚ್ಛಾಮಹೇ ಗಂತು ಮಿತ್ಯುಕ್ತ್ವಾ ಚರಣೌ ಮುನೇಃ ।
ವವಂದೇ ಸಹಸೌಮಿತ್ರಿಃ ಸೀತಯಾ ಸಹ ರಾಘವಃ ॥

ಅನುವಾದ

ಸೂರ್ಯನು ಸಹಿಸಲು ಅಸಾಧ್ಯವಾದ ಬಿಸಿಲಿನಿಂದ ನಮ್ಮನ್ನು ಸುಡುವಷ್ಟು ಪ್ರಕಾಶವನ್ನು ಬಿರುವುದರೊಳಗೆ ನಾವು ಇಲ್ಲಿಂದ ಪ್ರಯಾಣ ಮಾಡಲು ಇಚ್ಚಿಸಿದ್ದೇನೆ. ಕುತ್ಸಿತಮಾರ್ಗದಿಂದ ಐಶ್ವರ್ಯವನ್ನು ಪಡೆದ ಕುಲಗೆಟ್ಟವನೊಬ್ಬನು ಎಲ್ಲರಿಗೆ ಅಸಹ್ಯವಾಗುವಂತೆ ಸೂರ್ಯನು ಅಸಹ್ಯನಾಗುವುದೊರಳಗೆ ನಾವು ಪ್ರಯಾಣಿಸಲು ಬಯಸಿದ್ದೇವೆ. ಹೀಗೆ ಹೇಳಿ ಲಕ್ಷ್ಮಣ ಮತ್ತು ಸೀತಾಸಹಿತ ಶ್ರೀರಾಮನು ಮುನಿಯ ಚರಣಗಳಲ್ಲಿ ಸಮಸ್ಕರಿಸಿದನು.॥8-9॥

ಮೂಲಮ್ - 10

ತೌ ಸಂಸ್ಪೃಶಂತೌ ಚರಣಾವುತ್ಥಾಪ್ಯ ಮುನಿಪುಂಗವಃ ।
ಗಾಢಮಾಶ್ಲಿಷ್ಯ ಸಸ್ನೇಹಮಿದಂ ವಚನಮಬ್ರವೀತ್ ॥

ಅನುವಾದ

ಚರಣಗಳನ್ನು ಸ್ಪರ್ಶಿಸುತ್ತಿರುವ ಶ್ರೀರಾಮ-ಲಕ್ಷ್ಮಣರನ್ನು ಎಬ್ಬಿಸಿ ಮುನಿವರ ಸುತೀಕ್ಷ್ಣರು ಅವರನ್ನು ಸೆಳೆದು ಬಿಗಿದಪ್ಪಿಕೊಂಡು ತುಂಬು ಸ್ನೇಹದಿಂದ ಹೀಗೆ ಹೇಳಿದರು.॥10॥

ಮೂಲಮ್ - 11

ಅರಿಷ್ಟಂ ಗಚ್ಛ ಪಂಥಾನಂ ರಾಮ ಸೌಮಿತ್ರಿಣಾ ಸಹ ।
ಸೀತಯಾ ಚಾನಯಾ ಸಾರ್ಧಂ ಛಾಯಯೇವಾನುವೃತ್ತಯಾ ॥

ಅನುವಾದ

ಶ್ರೀರಾಮಾ! ನಿನ್ನ ಛಾಯೆಯಂತೆ ಅನುಸರಿಸುತ್ತಿರುವ ಈ ಧರ್ಮಪತ್ನೀ ಸೀತೆ ಹಾಗು ಸುಮಿತ್ರಾಕುವಾರ ಲಕ್ಷ್ಮಣನೊಂದಿಗೆ ಪ್ರಯಾಣ ಮಾಡು. ನಿನ್ನ ದಾರಿಯು ವಿಘ್ನರಹಿತವಾಗಿ ಪರಮ ಮಂಗಳದಾಯಕವಾಗಲಿ.॥11॥

ಮೂಲಮ್ - 12

ಪಶ್ಯಾಶ್ರಮಪದಂ ರಮ್ಯಂ ದಂಡಕಾರಣ್ಯವಾಸಿನಾಮ್ ।
ಏಷಾಂ ತಪಸ್ವಿನಾಂ ವೀರ ತಪಸಾ ಭಾವಿತಾತ್ಮನಾಮ್ ॥

ಅನುವಾದ

ವೀರನೆ! ತಪಸ್ಸಿನಿಂದ ಶುದ್ಧ ಅಂತಃಕರಣವುಳ್ಳ ದಂಡಕಾರಣ್ಯವಾಸೀ ಈ ತಪಸ್ವೀ ಮುನಿಗಳ ರಮಣೀಯ ಆಶ್ರಮಗಳನ್ನು ದರ್ಶನ ಮಾಡು.॥12॥

ಮೂಲಮ್ - 13

ಸುಪ್ರಾಜ್ಯಫಲಮೂಲಾನಿ ಪುಷ್ಪಿತಾನಿ ವನಾನಿ ಚ ।
ಪ್ರಶಸ್ತಮೃಗಯೂಥಾನಿ ಶಾಂತಪಕ್ಷಿಗಣಾನಿ ಚ ॥

ಅನುವಾದ

ಈ ಪ್ರವಾಸದಲ್ಲಿ ನೀವು ಸಾಕಷ್ಟು ಫಲ-ಮೂಲಗಳಿಂದ ಯುಕ್ತ ಹಾಗೂ ಹೂವುಗಳಿಂದ ಸುಶೋಭಿತ ಅನೇಕ ವನಗಳನ್ನು ನೋಡುವಿರಿ. ಅಲ್ಲಿ ಉತ್ತಮ ಜಿಂಕೆಗಳ ಗುಂಪು ಸಂಚರಿಸುತ್ತಿರಬಹುದು, ಪಕ್ಷಿಗಳು ಶಾಂತ ಭಾವದಿಂದ ಇರುವುದನ್ನು ಕಾಣುವಿರಿ.॥13॥

ಮೂಲಮ್ - 14

ಫುಲ್ಲಪಂಕಜಷಂಡಾನಿ ಪ್ರಸನ್ನ ಸಲಿಲಾನಿ ಚ ।
ಕಾರಂಡವವಿಕೀರ್ಣಾನಿ ತಟಾಕಾನಿ ಸರಾಂಸಿ ಚ ॥

ಅನುವಾದ

ಅರಳಿದ ಕಮಲಗಳಿಂದ ಶೋಭಿಸುತ್ತಿರುವ, ಸ್ವಚ್ಛವಾದ ಜಲಭರಿತ ಹಾಗೂ ಹಂಸ ಕಾರಂಡವ ಮುಂತಾದ ನೀರು ಹಕ್ಕಿಗಳು ವ್ಯಾಪಿಸಿದ ಅನೇಕ ಸರೋವರಗಳು, ಕಲ್ಯಾಣಿಗಳು ಕಂಡು ಬರುವವು.॥14॥

ಮೂಲಮ್ - 15

ದ್ರಕ್ಷ್ಯಸೇ ದೃಷ್ಟಿ ರಮ್ಯಾಣಿ ಗಿರಿಪ್ರಸ್ರವಣಾನಿ ಚ ।
ರಮಣೀಯಾನ್ಯರಣ್ಯಾನಿ ಮಯೂರಾಭಿರುತಾನಿ ಚ ॥

ಅನುವಾದ

ಕಂಗಳಿಗೆ ರಮಣೀಯವಾದ ಬೆಟ್ಟದ ಝರಿಗಳನ್ನು ಹಾಗೂ ನವಿಲುಗಳ ಮಧುರ ಕೇಕೆಗಳಿಂದ ತುಂಬಿದ ಸುರಮ್ಯ ವನಸ್ಥಳಗಳನ್ನು ನೋಡುವಿರಿ.॥15॥

ಮೂಲಮ್ - 16

ಗಮ್ಯತಾಂ ವತ್ಸ ಸೌಮಿತ್ರೇ ಭವಾನಪಿ ಚ ಗಚ್ಛತು ।
ಆಗಂತವ್ಯಂ ಚ ತೇ ದೃಷ್ಟ್ವಾ ಪುನರೇವಾಶ್ರಮಂ ಪ್ರತಿ ॥

ಅನುವಾದ

ಶ್ರೀರಾಮಾ! ಹೋಗು, ವತ್ಸ ಸುಮಿತ್ರಾಕುಮಾರ! ನೀನೂ ಹೋಗು, ದಂಡಕಾರಣ್ಯದ ಆಶ್ರಮಗಳನ್ನು ದರ್ಶಿಸಿ ನೀವು ಪುನಃ ಇದೇ ಆಶ್ರಮಕ್ಕೆ ಬರಬೇಕು.॥16॥

ಮೂಲಮ್ - 17

ಏವಮುಕ್ತಸ್ತಥೇತ್ಯುಕ್ತ್ವಾ ಕಾಕುತ್ಸ್ಥಃ ಸಹಲಕ್ಷ್ಮಣಃ ।
ಪ್ರದಕ್ಷಿಣಂ ಮುನಿಂ ಕೃತ್ವಾ ಪ್ರಸ್ಥಾತುಮುಪಚಕ್ರಮೇ ॥

ಅನುವಾದ

ಅವರು ಹೀಗೆ ಹೇಳಿದಾಗ ಲಕ್ಷ್ಮಣ ಸಹಿತ ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿ ಮುನಿಗೆ ಪ್ರದಕ್ಷಿಣೆ ಬಂದು, ಅಲ್ಲಿಂದ ಹೊರಡಲು ಅನುವಾದನು.॥17॥

ಮೂಲಮ್ - 18

ತತಃ ಶುಭತರೇ ತೂಣೀ ಧನುಷೀ ಚಾಯತೇಕ್ಷಣಾ ।
ದದೌ ಸೀತಾ ತಯೋರ್ಭ್ರಾತ್ರೋಃ ಖಡ್ಗೌ ಚ ವಿಮಲೌ ತತಃ ॥

ಅನುವಾದ

ಅನಂತರ ವಿಶಾಲ ಲೋಚನೆ ಸೀತೆಯು ಅವರಿಬ್ಬರ ಕೈಗಳಿಗೂ ಪರಮ ಸುಂದರ ಬತ್ತಳಿಕೆ, ಧನುಸ್ಸು ಮತ್ತು ಹೊಳೆಯುವ ಖಡ್ಗಗಳನ್ನು ನೀಡಿದಳು.॥18॥

ಮೂಲಮ್ - 19

ಆಬಧ್ಯ ಚ ಶುಭೇ ತೂಣೀ ಚಾಪೌ ಚಾದಾಯ ಸಸ್ವನೇ ।
ನಿಷ್ಕ್ರಾಂತಾವಾಶ್ರಮಾದ್ ಗಂತುಮುಭೌ ತೌ ರಾಮಲಕ್ಷ್ಮಣೌ ॥

ಅನುವಾದ

ಆ ಸುಂದರ ಬತ್ತಳಿಕೆಗಳನ್ನು ಬೆನ್ನಿಗೆ ಕಟ್ಟಿಕೊಂಡು, ಹೆದೆ ಏರಿಸಿದ ಧನುಸ್ಸನ್ನು ಕೈಯಲ್ಲಿ ಹಿಡಿದು ಆ ಇಬ್ಬರೂ ಸಹೋದರ ಶ್ರೀರಾಮ-ಲಕ್ಷ್ಮಣರು ಆಶ್ರಮದಿಂದ ಹೊರಗೆ ಹೊರಟರು.॥19॥

ಮೂಲಮ್ - 20

ಶೀಘ್ರಂ ತೌ ರೂಪಸಂಪನ್ನಾವನುಜ್ಞಾತಾಔ ಮಹರ್ಷಿಣಾ ।
ಪ್ರಸ್ಥಿತೌ ಧೃತಚಾಪಾಸೀ ಸೀತಯಾ ಸಹ ರಾಘವೌ ॥

ಅನುವಾದ

ಆ ಇಬ್ಬರೂ ರಘುವಂಶೀ ವೀರರು ಬಹಳ ರೂಪವಂತರಾಗಿದ್ದರು. ಅವರು ಖಡ್ಗ ಮತ್ತು ಧನುಸ್ಸು ಧರಿಸಿಕೊಂಡು ಮಹರ್ಷಿಗಳಿಂದ ಅಪ್ಪಣೆ ಪಡೆದು ಸೀತೆಯೊಂದಿಗೆ ಶೀಘ್ರವಾಗಿ ಅಲ್ಲಿಂದ ಹೊರಟರು.॥20॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎಂಟನೆಯ ಸರ್ಗ ಸಂಪೂರ್ಣವಾಯಿತು.॥8॥