००७ राम-सुतीक्ष्णसंवादः

वाचनम्
ಭಾಗಸೂಚನಾ

ಸೀತಾ-ರಾಮ-ಲಕ್ಷ್ಮಣರು ಸುತೀಕ್ಷ್ಣರ ಆಶ್ರಮಕ್ಕೆ ಬಂದುದು, ಮುನಿಗಳೊಡನೆ ಸಂಭಾಷಣೆ ನಡೆಸಿ ಅವರಿಂದ ಸತ್ಕೃತರಾಗಿ ರಾತ್ರಿ ಅಲ್ಲಿಯೇ ತಂಗಿದುದು

ಮೂಲಮ್ - 1

ರಾಮಸ್ತು ಸಹಿತೋ ಭ್ರಾತ್ರಾ ಸೀತಯಾ ಚ ಪರಂತಪಃ ।
ಸುತೀಕ್ಷ್ಣಸ್ಯಾಶ್ರಮಪದಂ ಜಗಾಮ ಸಹ ತೈರ್ದ್ವಿಜೈಃ ॥

ಅನುವಾದ

ಪರಂತಪನಾದ ಶ್ರೀರಾಮನು ಲಕ್ಷ್ಮಣ-ಸೀತೆಯೊಂದಿಗೆ ಬ್ರಾಹ್ಮಣರ ಜೊತೆಗೆ ಸುತೀಕ್ಷ್ಣ, ಮುನಿಯ ಆಶ್ರಮದ ಕಡೆಗೆ ನಡೆದನು.॥1॥

ಮೂಲಮ್ - 2

ಸ ಗತ್ವಾ ದೂರಮಧ್ವಾನಂ ನದೀಸ್ತೀರ್ತ್ವಾ ಬಹೂದಕಾಃ ।
ದದರ್ಶ ವಿಮಲಂ ಶೈಲಂ ಮಹಾಮೇರುಮಿವೋನ್ನ ತಮ್ ॥

ಅನುವಾದ

ಬಹುದೂರದ ಮಾರ್ಗವನ್ನು ಕ್ರಮಿಸಿ, ಅಗಾಧ ಜಲದಿಂದ ತುಂಬಿದ ಅನೇಕ ನದಿಗಳನ್ನು ದಾಟಿ ಅವರು ಮುಂದಕ್ಕೆ ಹೋದಾಗ ಮೇರುಗಿರಿಯಂತೆ ಅತ್ಯಂತ ಎತ್ತರವಾದ, ನಿರ್ಮಲವಾದ ಒಂದು ಪರ್ವತವನ್ನು ನೋಡಿದರು.॥2॥

ಮೂಲಮ್ - 3

ತತಸ್ತದಿಕ್ಷ್ವಾಕುವರೌ ಸತತಂ ವಿವಿಧೈರ್ದ್ರುಮೈಃ ।
ಕಾನನಂ ತೌ ವಿವಿಶತುಃ ಸೀತಯಾ ಸಹ ರಾಘವೌ ॥

ಅನುವಾದ

ಅಲ್ಲಿಂದ ಮುಂದುವರಿದು ಆ ಇಬ್ಬರೂ ಇಕ್ವಾಕ್ಷುಕುಲದ ಶ್ರೇಷ್ಠವೀರ ರಘುವಂಶೀ ಸಹೋದರರು ಸೀತೆಯೊಂದಿಗೆ ನಾನಾ ಪ್ರಕಾರದ ವೃಕ್ಷಗಳಿಂದ ತುಂಬಿದ ಒಂದು ವನಕ್ಕೆ ತಲುಪಿದರು.॥3॥

ಮೂಲಮ್ - 4

ಪ್ರವಿಷ್ಟಸ್ತು ವನಂ ಘೋರಂ ಬಹುಪುಷ್ಪಫಲದ್ರುಮಮ್ ।
ದದರ್ಶಾಶ್ರಮಮೇಕಾಂತೇ ಚೀರಮಾಲಾಪರಿಷ್ಕೃತಮ್ ॥

ಅನುವಾದ

ಆ ಘೋರ ವನವನ್ನು ಪ್ರವೇಶಿಸಿದ ಶ್ರೀರಾಮನು ಏಕಾಂತ ಸ್ಥಾನದಲ್ಲಿ ಒಂದು ಆಶ್ರಮವನ್ನು ನೋಡಿದನು. ಅಲ್ಲಿಯ ವೃಕ್ಷಗಳು ಧಾರಾಳ ಫಲ-ಪುಷ್ಪಗಳಿಂದ ತುಂಬಿದ್ದು, ಒಣಹಾಕಿದ ನಾರುಮಡಿಗಳಿಂದ ಆ ಆಶ್ರಮದ ಶೋಭೆ ಹೆಚ್ಚಿತ್ತು.॥4॥

ಮೂಲಮ್ - 5

ತತ್ರ ತಾಪಸಮಾಸೀನಂ ಮಲಪಂಕಜಟಾಧಾರಿಣಮ್ ।
ರಾಮಃಸುತೀಕ್ಷ್ಣಂ ವಿಧಿವತ್ ತಪೋಧನಮಭಾಷತ ॥

ಅನುವಾದ

ಅಲ್ಲಿ ಆಂತರಿಕ ಮಲದ ಶುದ್ಧಿಗಾಗಿ ಪದ್ಮಾಸನ ಹಾಕಿ ಧ್ಯಾನದಲ್ಲಿ ಸುತೀಕ್ಷ್ಣ ಮುನಿಗಳು ಕುಳಿತಿದ್ದರು. ಶ್ರೀರಾಮನು ಆ ತಪೋಧನ ಮುನಿಯ ಬಳಿಗೆ ವಿಧಿವತ್ತಾಗಿ ಹೋಗಿ ಈ ಪ್ರಕಾರ ಹೇಳಿದನು.॥5॥

ಮೂಲಮ್ - 6

ರಾಮೋಽಹಮಸ್ಮಿ ಭಗವನ್ ಭವಂತಂ ದ್ರಷ್ಟುಮಾಗತಃ ।
ತನ್ಮಾಭಿವದ ಧರ್ಮಜ್ಞ ಮಹರ್ಷೇ ಸತ್ಯವಿಕ್ರಮ ॥

ಅನುವಾದ

ಸತ್ಯಪರಾಕ್ರಮಿ ಧರ್ಮಜ್ಞ ಮಹರ್ಷಿಯೇ! ಪೂಜ್ಯರೇ! ನಾನು ರಾಮನಾಗಿದ್ದು ಇಲ್ಲಿ ತಮ್ಮನ್ನು ದರ್ಶಿಸಲು ಬಂದಿರುವೆನು, ಆದ್ದರಿಂದ ನೀವು ನನ್ನೊಂದಿಗೆ ಮಾತನಾಡಿರಿ.॥6॥

ಮೂಲಮ್ - 7

ಸ ನಿರೀಕ್ಷ್ಯತತೋ ಧೀರೋ ರಾಮಂ ಧರ್ಮಭೃತಾಂ ವರಮ್ ।
ಸಮಾಶ್ಲಿಷ್ಯ ಚ ಬಾಹುಭ್ಯಾಮಿದಂ ವಚನಮಬ್ರವೀತ್ ॥

ಅನುವಾದ

ಧರ್ಮಾತ್ಮರಲ್ಲಿ ಶ್ರೇಷ್ಠನಾದ ಭಗವಾನ್ ಶ್ರೀರಾಮನ ದರ್ಶನ ಪಡೆದು ಧೀರ ಮಹರ್ಷಿ ಸುತೀಕ್ಷ್ಣರು ತನ್ನ ಎರಡೂ ತೋಳುಗಳಿಂದ ಅವನನ್ನು ಆಲಂಗಿಸಿ ಈ ಪ್ರಕಾರ ಹೇಳಿದರ.॥7॥

ಮೂಲಮ್ - 8

ಸ್ವಾಗತಂ ತೇ ರಘುಶ್ರೇಷ್ಠ ರಾಮ ಸತ್ಯಭೃತಾಂ ವರ ।
ಆಶ್ರಮೋಽಯಂ ತ್ವಯಾಽಽಕ್ರಾಂತಃ ಸನಾಥ ಇವ ಸಾಂಪ್ರತಮ್ ॥

ಅನುವಾದ

ಸತ್ಯವಾದಿಗಳಲ್ಲಿ ಶ್ರೇಷ್ಠ ರಘುಕುಲಭೂಷಣ ರಾಮ! ನಿನಗೆ ಸ್ವಾಗತವು. ಈಗ ನಿನ್ನ ಪಾದಸ್ಪರ್ಶದಿಂದ ಈ ಆಶ್ರಮವು ಸನಾಥವಾಯಿತು.॥8॥

ಮೂಲಮ್ - 9

ಪ್ರತೀಕ್ಷಮಾಣಸ್ತ್ವಾ ಮೇವ ನಾರೋಹೇಽಹಂ ಮಹಾಯಶಃ ।
ದೇವಲೋಕಮಿತೋ ವೀರ ದೇಹಂ ತ್ಯಕ್ತ್ವಾ ಮಹೀತಲೇ ॥

ಅನುವಾದ

ಮಹಾಯಶಸ್ವೀ ವೀರನೇ! ನಾನು ನಿನ್ನ ಪ್ರತೀಕ್ಷೆಯಲ್ಲೇ ಇದ್ದೆ, ಅದಕ್ಕಾಗಿ ಇಷ್ಟರವರೆಗೆ ಈ ಪೃಥ್ವಿಯಲ್ಲಿ ನನ್ನ ಶರೀರವನ್ನು ತ್ಯಜಿಸಿ, ಇಲ್ಲಿಂದ ದೇವಲೋಕ (ಬ್ರಹ್ಮಧಾಮ)ಕ್ಕೆ ಹೋಗಲಿಲ್ಲ.॥9॥

ಮೂಲಮ್ - 10

ಚಿತ್ರಕೂಟಮುಪಾದಾಯ ರಾಜ್ಯಭ್ರಷ್ಟೋಽಸಿ ಮೇ ಶ್ರುತಃ ।
ಇಹೋಪಯಾತಃ ಕಾಕುತ್ಸ್ಥ ದೇವರಾಜಃ ಶತಕ್ರತುಃ ॥

ಅನುವಾದ

ನೀನು ರಾಜ್ಯದಿಂದ ಭ್ರಷ್ಟನಾಗಿ ಚಿತ್ರಕೂಟಪರ್ವತಕ್ಕೆ ಬಂದು ಇರುವುದನ್ನು ನಾನು ಕೇಳಿದ್ದೆ. ಕಾಕುತ್ಸ್ಥನೇ! ಇಲ್ಲಿಗೆ ಶತಕ್ರತು ದೇವೇಂದ್ರನು ಬಂದಿದ್ದನು.॥10॥

ಮೂಲಮ್ - 11

ಉಪಾಗಮ್ಯ ಚ ಮೇ ದೇವೋ ಮಹಾದೇವಃ ಸುರೇಶ್ವರಃ ।
ಸರ್ವಾನ್ ಲ್ಲೋಕಾನ್ ಜಿತಾನಾಹ ಮಮ ಪುಣ್ಯೇನ ಕರ್ಮಣಾ ॥

ಅನುವಾದ

ಆ ಮಹಾದೇವತೆ ದೇವೇಶ್ವರ ಇಂದ್ರನು ನನ್ನ ಬಳಿಗೆ ಬಂದು - ನೀವು ನಿಮ್ಮ ಪುಣ್ಯಕರ್ಮಗಳಿಂದ ಸಮಸ್ತ ಶುಭ ಲೋಕಗಳ ಮೇಲೆ ವಿಜಯ ಪಡೆದಿರುವಿರಿ ಎಂದು ಹೇಳುತ್ತಿದ್ದನು.॥11॥

ಮೂಲಮ್ - 12

ತೇಷು ದೇವರ್ಷಿಜುಷ್ಟೇಷು ಜಿತೇಷು ತಪಸಾ ಮಯಾ ।
ಮತ್ಪ್ರಸಾದಾತ್ಸಭಾರ್ಯಸ್ತ್ವಂ ವಿಹರಸ್ವ ಸಲಕ್ಷ್ಮಣಃ ॥

ಅನುವಾದ

ಅವನು ಹೇಳಿದಂತೆ ನಾನು ತಪಸ್ಸಿನಿಂದ ಯಾವ ದೇವರ್ಷಿ ಸೇವಿತ ಲೋಕಗಳ ಮೇಲೆ ಅಧಿಕಾರ ಪಡೆದಿರುವನೋ, ಆ ಲೋಕಗಳಲ್ಲಿ ನೀನು ಸೀತೆ ಮತ್ತು ಲಕ್ಷ್ಮಣರ ಸಹಿತ ವಿಹಾರ ಮಾಡು. ನಾನು ಸಂತೋಷದಿಂದ ಆ ಎಲ್ಲ ಲೋಕಗಳನ್ನು ನಿನ್ನ ಸೇವೆಯಲ್ಲಿ ಅರ್ಪಿಸುತ್ತಿದ್ದೇನೆ.॥12॥

ಮೂಲಮ್ - 13

ತಮುಗ್ರತಪಸಂ ದೀಪ್ತಂ ಮಹರ್ಷಿಂ ಸತ್ಯವಾದಿನಮ್ ।
ಪ್ರತ್ಯುವಾಚಾತ್ಮವಾನ್ ರಾಮೋ ಬ್ರಹ್ಮಾಣಮಿವ ವಾಸವಃ ॥

ಅನುವಾದ

ಇಂದ್ರನು ಬ್ರಹ್ಮದೇವರ ಬಳಿ ಮಾತನಾಡಿದಂತೆಯೇ ಮನಸ್ವೀ ಶ್ರೀರಾಮನು ಆ ಉಗ್ರತಪಸ್ವೀ, ತೇಜಸ್ವೀ ಹಾಗೂ ಸತ್ಯವಾದೀ ಮಹರ್ಷಿಗೆ ಈ ಪ್ರಕಾರ ಉತ್ತರಿಸಿದನು.॥13॥

ಮೂಲಮ್ - 14

ಅಹಮೇವಾಹರಿಷ್ಯಾಮಿ ಸ್ವಯಂ ಲೋಕಾನ್ಮಹಾಮುನೇ ।
ಆವಾಸಂ ತ್ವಹಮಿಚ್ಛಾಮಿ ಪ್ರದಿಷ್ಟಮಿಹ ಕಾನನೇ ॥

ಅನುವಾದ

ಮಹಾಮುನೇ! ಆ ಲೋಕಗಳನ್ನಾದರೋ ನಾನೇ ನಿಮಗೆ ದೊರಕಿಸಿಕೊಡುವೆನು. ಈಗಲಾದರೋ ನಾನು ಬಯಸುತ್ತೇನೆ- ಈ ವನದಲ್ಲಿ ನಾನು ವಾಸಿಸಲು ಎಲ್ಲಿ ಕುಟೀರವನ್ನು ನಿರ್ಮಿಸಲಿ? ತಾವು ತಿಳಿಸಿರಿ.॥14॥

ಮೂಲಮ್ - 15

ಭವಾನ್ ಸರ್ವತ್ರ ಕುಶಲಃ ಸರ್ವಭೂತಹಿತೇ ರತಃ ।
ಆಖ್ಯಾತಂ ಶರಭಂಗೇನ ಗೌತಮೇನ ಮಹಾತ್ಮನಾ ॥

ಅನುವಾದ

ನೀವು ಸಮಸ್ತ ಪ್ರಾಣಿಗಳ ಹಿತದಲ್ಲಿ ತತ್ಪರರೂ ಹಾಗೂ ಇಹಲೋಕ-ಪರಲೋಕದ ಎಲ್ಲ ಸಂಗತಿಗಳ ಜ್ಞಾನದಲ್ಲಿ ನಿಪುಣರೂ ಎಂದು ಗೌತಮ ಗೋತ್ರಿಯ ಮಹಾತ್ಮಾ ಶರಭಂಗರು ನನಗೆ ತಿಳಿಸಿದ್ದರು.॥15॥

ಮೂಲಮ್ - 16

ಏವಮುಕ್ತಸ್ತು ರಾಮೇಣ ಮಹರ್ಷಿರ್ಲೋಕವಿಶ್ರುತಃ ।
ಅಬ್ರವೀನ್ಮಧುರಂ ವಾಕ್ಯಂ ಹರ್ಷೇಣ ಮಹತಾಯುತಃ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಆ ಲೋಕ ವಿಖ್ಯಾತ ಮಹರ್ಷಿಗಳು ಬಹಳ ಹರ್ಷದಿಂದ ಮಧುರವಾಗಿ ಇಂತೆಂದರು .॥16॥

ಮೂಲಮ್ - 17

ಅಯಮೇವಾಶ್ರಮೋ ರಾಮ ಗುಣವಾನ್ ರಮ್ಯತಾಮಿತಿ ।
ಋಷಿಸಂಘಾನುಚರಿತಃ ಸದಾ ಮೂಲಲೈರ್ಯುತಃ ॥

ಅನುವಾದ

ಶ್ರೀರಾಮಾ! ಈ ಆಶ್ರಮವು ಎಲ್ಲ ರೀತಿಯಿಂದ ಅನುಕೂಲವಾಗಿದೆ, ಆದ್ದರಿಂದ ನೀನು ಇಲ್ಲೇ ಸುಖವಾಗಿ ವಾಸಿಸು. ಇಲ್ಲಿ ಋಷಿಗಳ ಸಮುದಾಯವು ಸದಾ ಬಂದು ಹೋಗುತ್ತಾ ಇರುತ್ತದೆ. ಫಲ-ಮೂಲಗಳೂ ಸದಾ ಸುಲಭ ವಾಗಿ ಸಿಗುತ್ತದೆ.॥17॥

ಮೂಲಮ್ - 18

ಇಮಮಾಶ್ರಮಮಾಗಮ್ಯ ಮೃಗಸಂಘಾ ಮಹೀಯಸಃ ।
ಅಹತ್ವಾ ಪ್ರತಿಗಚ್ಛಂತಿ ಲೋಭಯಿತ್ವಾಕುತೋಭಯಾಃ ॥

ಅನುವಾದ

ಈ ಆಶ್ರಮದಲ್ಲಿ ಹಿಂಡು ಹಿಂಡಾಗಿ ಜಿಂಕೆಗಳು ಬಂದು ತಮ್ಮ ರೂಪ, ಕಾಂತಿ ಹಾಗೂ ನಡಿಗೆಯಿಂದ ಮನಸ್ಸನ್ನು ಸೂರೆಗೈದು, ಯಾರಿಗೂ ಕಷ್ಟಕೊಡದೆ ಇಲ್ಲಿಂದ ಹೊರಟು ಹೋಗುತ್ತವೆ. ಅವುಗಳಿಗೆ ಇಲ್ಲಿ ಯಾರಿಂದಲೂ ಭಯ ವಿರುವುದಿಲ್.॥18॥

ಮೂಲಮ್ - 19½

ನಾನ್ಯೋ ದೋಷೋ ಭವೇದತ್ರ ಮೃಗೇಭ್ಯೋಽನ್ಯತ್ರ ವಿದ್ಧಿ ವೈ।
ತಚ್ಛ್ರುತ್ವಾ ವಚನಂ ತಸ್ಯ ಮಹರ್ಷೇರ್ಲಕ್ಷ್ಮಣಾಗ್ರಜಃ ॥
ಉವಾಚ ವಚನಂ ಧೀರೋ ವಿಗೃಹ್ಯ ಸಶರಂ ಧನುಃ ।

ಅನುವಾದ

ಈ ಆಶ್ರಮದಲ್ಲಿ ಜಿಂಕೆಗಳ ಉಪದ್ರವವಲ್ಲದೆ ಬೇರೆ ಯಾವುದೇ ದೋಷಗಳಿಲ್ಲ. ಇದನ್ನು ನೀನು ನಿಶ್ಚಿತವಾಗಿ ತಿಳಿ. ಮಹರ್ಷಿಯ ಈ ಮಾತನ್ನು ಕೇಳಿ ಲಕ್ಷ್ಮಣಾಗ್ರಜ ಧೀರ ವೀರ ಭಗವಾನ್ ಶ್ರೀರಾಮನು ಕೈಯಲ್ಲಿ ಧನುರ್ಬಾಣಗಳನೆತ್ತಿಕೊಂಡು ಹೇಳಿದನು.॥19½॥

ಮೂಲಮ್ - 20

ತಾನಹಂ ಸುಮಹಾಭಾಗ ಮೃಗಸಂಘಾನ್ ಸಮಾಗತಾನ್ ॥

ಮೂಲಮ್ - 21

ಹನ್ಯಾಂ ನಿಶಿತಧಾರೇಣ ಶರೇಣಾನತಪರ್ವಣಾ ।
ಭವಾಂಸ್ತತ್ರಾಭಿಷಜ್ಯೇತ ಕಿಂ ಸ್ಯಾತ್ ಕೃಚ್ಛ್ರತರಂ ತತಃ ॥

ಅನುವಾದ

ಮಹಾಭಾಗರೇ! ಇಲ್ಲಿಗೆ ಬಂದಿರುವ ಉಪದ್ರವಕಾರೀ ಜಿಂಕೆಗಳನ್ನು ನಾನು ಹರಿತವಾದ ಬಾಣಗಳಿಂದ ಕೊಂದು ಹಾಕಿದರೆ, ಅದರಿಂದ ತಮಗೆ ಅಪಮಾನವಾದೀತು. ಹೀಗಾದರೆ, ಇದಕ್ಕಿಂತ ಹೆಚ್ಚಿನ ಕಷ್ಟದ ಸಂಗತಿ ನನಗೆ ಬೇರೆ ಏನು ಇರಬಲ್ಲದು.॥20-21॥

ಮೂಲಮ್ - 22

ಏತಸ್ಮಿನ್ನಾಶ್ರಮೇ ವಾಸಂ ಚಿರಂತು ನ ಸಮರ್ಥಯೇ ।
ತಮೇವಮುಕ್ತ್ವೋಪರಮಂ ರಾಮಃ ಸಂಧ್ಯಾಮುಪಾಗಮತ್ ॥

ಅನುವಾದ

ಆದ್ದರಿಂದ ನಾನು ಈ ಆಶ್ರಮದಲ್ಲಿ ಹೆಚ್ಚು ಸಮಯ ಇರಲು ಬಯಸುವುದಿಲ್ಲ. ಮುನಿಯ ಬಳಿ ಹೀಗೆ ಹೇಳಿ ಮೌನನಾದ ಶ್ರೀರಾಮನು ಸಂಧ್ಯೋಪಾಸನೆಗಾಗಿ ಹೊರಟುಹೋದನು.॥22॥

ಮೂಲಮ್ - 23

ಅನ್ವಾಸ್ಯ ಪಶ್ಚಿಮಾಂ ಸಂಧ್ಯಾಂ ತತ್ರ ವಾಸಮಕಲ್ಪಯತ್ ।
ಸುತೀಕ್ಷ್ಣ ಸ್ಯಾಶ್ರಮೇ ರಮ್ಯೇ ಸೀತಯಾ ಲಕ್ಷ್ಮಣೇನ ಚ ॥

ಅನುವಾದ

ಸಂಧ್ಯಾ ಕಾಲದ ಸಂಧ್ಯೋಪಾಸನೆ ಮಾಡಿ ಶ್ರೀರಾಮನು ಸೀತೆ ಮತ್ತು ಲಕ್ಷ್ಮಣರೊಂದಿಗೆ ಸುತೀಕ್ಷ್ಣಮುನಿಯ ಆ ರಮಣೀಯ ಆಶ್ರಮದಲ್ಲೇ ವಾಸಿಸಿದನು.॥23॥

ಮೂಲಮ್ - 24

ತತಃ ಶುಭಂ ತಾಪಸಯೋಗ್ಯಮನ್ನಂ
ಸ್ವಯಂ ಸುತೀಕ್ಷ್ಣಃ ಪುರುಷರ್ಷಭಾಭ್ಯಾಮ್ ।
ತಾಭ್ಯಾಂ ಸುಸತ್ಕೃತ್ಯ ದದೌ ಮಹಾತ್ಮಾ
ಸಂಧ್ಯಾನಿವೃತ್ತೌ ರಜನೀಂ ಸಮೀಕ್ಷ್ಯ॥

ಅನುವಾದ

ಸಂಧ್ಯಾಕಾಲ ಕಳೆದು ರಾತ್ರೆಯಾದುದನ್ನು ನೋಡಿ ಮಹಾತ್ಮಾ ಸುತೀಕ್ಷ್ಣರು ಸ್ವತಃ ತಪಸ್ವಿಗಳು ಸೇವಿಸಲು ಯೋಗ್ಯವಾದ ಶುಭ ಅನ್ನವನ್ನು ತಂದು ಆ ಇಬ್ಬರೂ ಪುರುಷ ಶಿರೋಮಣಿಗಳಿಗೆ ಬಹಳ ಸತ್ಕಾರದೊಂದಿಗೆ ಅರ್ಪಿಸಿದರು.॥24॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಏಳನೆಯ ಸರ್ಗ ಸಂಪೂರ್ಣವಾಯಿತು.॥7॥