००६ रामस्य रक्षोवधप्रतिज्ञा

वाचनम्
ಭಾಗಸೂಚನಾ

ವನವಾಸಿಗಳಾದ ಮುನಿಗಳು ರಾಕ್ಷಸರ ಉಪಟಳದಿಂದ ಸಂರಕ್ಷಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು, ಶ್ರೀರಾಮನ ಆಶ್ವಾಸನೆ

ಮೂಲಮ್ - 1

ಶರಭಂಗೇ ದಿವಂ ಪ್ರಾಪ್ತೇ ಮುನಿಸಂಘಾಃ ಸಮಾಗತಾಃ ।
ಅಭ್ಯಗಚ್ಛಂತ ಕಾಕುತ್ಸ್ಥಂ ರಾಮಂ ಜ್ವಲಿತತೇಜಸಮ್ ॥

ಅನುವಾದ

ಶರಭಂಗ ಮುನಿಗಳು ಬ್ರಹ್ಮಲೋಕಕ್ಕೆ ಹೊರಟುಹೋದ ಮೇಲೆ ಪ್ರಜ್ವಲಿತ ತೇಜವುಳ್ಳ ಕಕುತ್ಸ್ಥವಂಶೀ ಶ್ರೀರಾಮಚಂದ್ರನ ಬಳಿಗೆ ಅನೇಕ ಮುನಿಗಳ ಸಮುದಾಯ ಆಗಮಿಸಿತು.॥1॥

ಮೂಲಮ್ - 2

ವೈಖಾನಸಾ ವಾಲಖಿಲ್ಯಾಃ ಸಂಪ್ರಕ್ಷಾಲಾ ಮರೀಚಿಪಾಃ ।
ಅಶ್ಮಕುಟ್ಟಾಶ್ಚ ಬಹವಃ ಪತ್ರಾಹಾರಾಶ್ಚ ತಾಪಸಾಃ ॥

ಮೂಲಮ್ - 3

ದಂತೋಲೂಖಲಿನಶ್ಚೈವ ತಥೈವೋನ್ಮಜ್ಜಕಾಃ ಪರೇ ।
ಗಾತ್ರಶಯ್ಯಾ ಆಶಯ್ಯಾಶ್ಚ ತಥೈವಾನವಕಾಶಿಕಾಃ ॥

ಮೂಲಮ್ - 4

ಮುನಯಃ ಸಲಿಲಾಹಾರಾ ವಾಯುಭಕ್ಷಾಸ್ತಥಾಪರೇ ।
ಆಕಾಶನಿಲಯಾಶ್ಚೈವ ತಥಾ ಸ್ಥಂಡಿಲಶಾಯಿನಃ ॥

ಮೂಲಮ್ - 5

ತಥೋರ್ಧ್ವವಾಸಿನೋದಾಂತಾಸ್ತಥಾಽಽರ್ದ್ರಪಟವಾಸಸಃ ।
ಸಜಪಾಶ್ಚ ತಪೋನಿಷ್ಠಾ ಸ್ತಥಾ ಪಂಚತಪೋನ್ವಿತಾಃ ॥

ಅನುವಾದ

ಅವರಲ್ಲಿ ವೈಖಾನಸ1, ವಾಲಖಿಲ್ಯ2, ಸಂಪ್ರಕ್ಷಾಲ3, ಮರೀಚಿಪ4, ಅನೇಕ ಸಂಖ್ಯೆಯ ಅಶ್ಮಕುಟ್ಟ5, ಪತ್ರಾಹಾರ6, ದಂತೋಲೂಖಲೀ7, ಉನ್ಮಜ್ಜಕ8, ಗಾತ್ರಶಯ್ಯ9, ಅಶಯ್ಯ10, ಅನವಕಾಶಿಕ11, ಸಲಿಲಾಹಾರ12, ವಾಯುಭಕ್ಷ13, ಆಕಾಶ ನಿಲಯ14, ಸ್ಥಂಡಿಲಶಾಯೀ15, ಊರ್ಧ್ವವಾಸೀ16, ದಾಂತ17, ಆರ್ದ್ರಪಟವಾಸ18, ಸಜಪ19, ತಪೋನಿಷ್ಠ20, ಮತ್ತು ಪಂಚಾಗ್ನಿ ಸೇವಿ21. ಈ ಎಲ್ಲಾ ಶ್ರೇಣಿಯ ತಪಸ್ವೀ ಮುನಿಗಳಿದ್ದರು.॥2-5॥

ಟಿಪ್ಪನೀ

ಟಿಪ್ಪಣಿ 1. ಬ್ರಹ್ಮದೇವರ ಉಗುರಿನಿಂದ ಉತ್ಪನ್ನವಾದ ಋಷಿಗಳ ಒಂದು ಸಮುದಾಯ, 2.ಬ್ರಹ್ಮದೇವರ ರೋಮದಿಂದ ಪ್ರಕಟರಾದವರು, 3. ಸರ್ವದಾ ಶರೀರವನ್ನು ಪ್ರಾಕ್ಷಾಲನೆ ಮಾಡುತ್ತಿದ್ದವರು, 4.ಸೂರ್ಯಚಂದ್ರರ ಕಿರಣಗಳನ್ನು ಪಾನ ಮಾಡುವವರು, 5. ಕಲ್ಲಿನಿಂದ ಕುಟ್ಟಿದ ಆಹಾರವನ್ನು ಮಾತ್ರ ಸೇವಿಸುವವರು, 6.ತರಗೆಲೆಗಳನ್ನು ತಿಂದು ತಪಸ್ಸು ಮಾಡುವವರು, 7. ಹಲ್ಲುಗಳನ್ನೇ ಕುಟ್ಟುವ ಪತ್ರೆಯನ್ನಾಗಿಸಿಕೊಂಡವರು, 8. ಕುತ್ತಿಗೆಯವರೆಗೆ ನೀರಿನಲ್ಲಿ ನಿಂತು ತಪಸ್ಸು ಮಾಡುವವರು, 9.ಕುಳಿತುಕೊಂಡೆ ನಿದ್ರೆಮಾಡುತ್ತಿದ್ದವರು, 10. ಎಂದೂ ನಿದ್ದೆಯೇ ಮಾಡದವರು, 11.ನಿರಂತರ ಸತ್ಕರ್ಮದಲ್ಲಿ ತೊಡಗಿದ್ದ ಕಾರಣ ಎಂದೂ ಸಮಯವೇ ಸಿಗದವರು, 12. ನೀರನ್ನು ಮಾತ್ರ ಕುಡಿದು ಇರುವವರು, 13.ಗಾಳಿಯನ್ನು ಮಾತ್ರ ಕುಡಿದು ಜೀವಿಸಿರುವವರು, 14. ಬಯಲಿನಲ್ಲೇ ಇರುವವರು ಅಥವಾ ಮರದ ಮೇಲೆಯೇ ಇರುವವರು, 15.ಸ್ಥಂಡಿಲ ಶಾಯಿಗಳು, 16. ಪರ್ವತ ಶಿಖರ ಮೊದಲಾದ ಎತ್ತರ ಸ್ಥಾನದಲ್ಲಿ ವಾಸಿಸುವವರು, 17. ಮನ - ಇಂದ್ರಿಯಗಳನ್ನು ವಶಪಡಿಸಿಕೊಂಡಿರುವವರು, 18. ಸದಾಕಾಲ ಒದ್ದೆ ಬಟ್ಟೆಯೇ ಉಡುವವರು, 19. ನಿರಂತರ ಜಪಮಾಡುವವರು, 20. ತಪಸ್ಸು ಅಥವಾ ಪರಮಾತ್ಮ ತತ್ವ ವಿಚಾರದಲ್ಲೇ ಇರುವವರು, 21. ಬೇಸಿಗೆಯಲ್ಲಿ ಮೇಲಿನಿಂದ ಸೂರ್ಯನ, ನಾಲ್ಕು ಕಡೆಗಳಿಂದ ಅಗ್ನಿಯ ತಾಪವನ್ನು ಸಹಿಸುವವರು.

ಮೂಲಮ್ - 6

ಸರ್ವೇ ಬ್ರಾಹ್ಮಯಾ ಶ್ರಿಯಾ ಯುಕ್ತಾ ದೃಢಯೋಗಸಮಾಹಿತಾಃ ।
ಶರಭಂಗಾಶ್ರಮೇ ರಾಮಮಭಿಜಗ್ಮುಶ್ಚ ತಾಪಸಾಃ ॥

ಅನುವಾದ

ಬ್ರಹ್ಮತೇಜದಿಂದ ಸಂಪನ್ನರಾದ ಆ ಎಲ್ಲ ತಪಸ್ವಿಗಳು, ಸುದೃಢಯೋಗದ ಮೂಲಕ ಚಿತ್ತ ಏಕಾಗ್ರವಾಗಿದ್ದು, ಅವರೆಲ್ಲರೂ ಶರಭಂಗಮುನಿಯ ಆಶ್ರಮದಲ್ಲಿ ಶ್ರೀರಾಮಚಂದ್ರನ ಬಳಿಗೆ ಬಂದರು.॥6॥

ಮೂಲಮ್ - 7

ಅಭಿಗಮ್ಯ ಚ ಧರ್ಮಜ್ಞಾ ರಾಮಂ ಧರ್ಮಭೃತಾಂ ವರಮ್ ।
ಊಚುಃ ಪರಮಧರ್ಮಜ್ಞಮೃಷಿಸಂಘಾಃ ಸಮಾಗತಾಃ ॥

ಅನುವಾದ

ಧರ್ಮಾತ್ಮರಲ್ಲಿ ಶ್ರೇಷ್ಠನಾದ ಪರಮ ಧರ್ಮಜ್ಞ ಶ್ರೀರಾಮನ ಬಳಿಗೆ ಬಂದಿರುವ ಆ ಧರ್ಮಜ್ಞ ಋಷಿಸಮುದಾಯವು ಅವನಲ್ಲಿ ಹೀಗೆ ನುಡಿದರು.॥7॥

ಮೂಲಮ್ - 8

ತ್ವಮಿಕ್ಷ್ವಾಕುಕುಲಸ್ಯಾಸ್ಯ ಪೃಥಿವ್ಯಾಶ್ಚ ಮಹಾರಥಃ ।
ಪ್ರಧಾನಶ್ಚಾಸಿ ನಾಥಶ್ಚ ದೇವಾನಾಂ ಮಘವಾನಿವ ॥

ಅನುವಾದ

ರಘುನಂದನ! ನೀನು ಈ ಇಕ್ವಾಕ್ಷು ವಂಶದೊಂದಿಗೆ ಸಮಸ್ತ ಭೂಮಂಡಲಕ್ಕೂ ಸ್ವಾಮಿಯೂ, ಸಂರಕ್ಷಕನೂ, ಪ್ರಧಾನ ಮಹಾರಥಿಯೂ ಆಗಿರುವಿ. ಇಂದ್ರನು ದೇವತೆಗಳ ರಕ್ಷಕನಿರುವಂತೆಯೇ ನೀನು ಮನುಷ್ಯಲೋಕದ ರಕ್ಷಕನಾಗಿರುವೆ.॥8॥

ಮೂಲಮ್ - 9

ವಿಶ್ರುತಸ್ತ್ರಿಷು ಲೋಕೇಷು ಯಶಸಾ ವಿಕ್ರಮೇಣ ಚ ।
ಪಿತೃವ್ರತತ್ತಂ ಸತ್ಯಂ ಚ ತ್ವಯಿ ಧರ್ಮಶ್ಚ ಪುಷ್ಕಲಃ ॥

ಅನುವಾದ

ನೀನು ತನ್ನ ಯಶ ಮತ್ತು ಪರಾಕ್ರಮದಿಂದ ಮೂರು ಲೋಕಗಳಲ್ಲಿಯೂ ಪ್ರಖ್ಯಾತನಾಗಿರುವೆ. ನಿನ್ನಲ್ಲಿ ಪಿತೃವಾಕ್ಯ ಪಾಲನೆಯ ವ್ರತ, ಸತ್ಯಭಾಷಣ, ಸಮಸ್ತ ಧರ್ಮಗಳು ವಿದ್ಯಮಾನವಾಗಿವೆ.॥9॥

ಮೂಲಮ್ - 10

ತ್ವಾಮಾಸಾದ್ಯ ಮಹಾತ್ಮಾನಂ ಧರ್ಮಜ್ಞಂ ಧರ್ಮವತ್ಸಲಮ್ ।
ಅರ್ಥಿತ್ವಾನ್ನಾಥ ವಕ್ಷ್ಯಾಮಸ್ತಚ್ಚ ನಃ ಕ್ಷಂತುಮರ್ಹಸಿ ॥

ಅನುವಾದ

ನಾಥಾ! ನೀನು ಮಹಾತ್ಮನೂ, ಧರ್ಮಜ್ಞನೂ, ಧರ್ಮವತ್ಸಲನೂ ಆಗಿರುವೆ. ನಾವು ಯಾಚಕರಾಗಿ ಸ್ವಾರ್ಥದ ಮಾತನ್ನು ನಿವೇದಿಸಲು ಬಯಸುತ್ತಿದ್ದೇವೆ. ಇದಕ್ಕಾಗಿ ನೀನು ಕ್ಷಮಿಸಬೇಕು.॥10॥

ಮೂಲಮ್ - 11

ಅಧರ್ಮಃ ಸುಮಹಾನ್ನಾಥ ಭವೇತ್ ತಸ್ಯ ತು ಭೂಪತೇಃ ।
ಯೋ ಹರೇದ್ಬಲಿಷಡ್ಭಾಗಂ ನ ಚ ರಕ್ಷತಿ ಪುತ್ರವತ್ ॥

ಅನುವಾದ

ಸ್ವಾಮೀ! ಪ್ರಜೆಗಳ ಆದಾಯದಲ್ಲಿ ಆರನೆಯ ಒಂದು ಭಾಗವನ್ನು ಕಂದಾಯ ರೂಪದಲ್ಲಿ ಪಡೆದು ರಾಜನು ಪ್ರಜೆಗಳನ್ನು ಮಕ್ಕಳಂತೆ ಪಾಲಿಸದಿದ್ದರೆ ಅವನಿಗೆ ಅಧರ್ಮದ ಭಾಗಿಯಾಗಬೇಕಾಗುತ್ತದೆ.॥11॥

ಮೂಲಮ್ - 13

ಯುಂಜಾನಃ ಸ್ವಾನಿವ ಪ್ರಾಣಾನ್ ಪ್ರಾಣೈರಿಷ್ಟಾನ್ಸುತಾನಿವ ।
ನಿತ್ಯಯುಕ್ತಃ ಸದಾ ರಕ್ಷನ್ಸರ್ವಾನ್ವಿಷಯವಾಸಿನಃ ॥

ಮೂಲಮ್ - 13

ಪ್ರಾಪ್ನೋತಿ ಶಾಶ್ವತೀಂ ರಾಮ ಕೀರ್ತಂ ಸ ಬಹುವಾರ್ಷಿಕೀಮ್ ।
ಬ್ರಹ್ಮಣಃ ಸ್ಥಾನಮಾಸಾದ್ಯ ತತ್ರ ಚಾಪಿ ಮಹೀಯತೇ ॥

ಅನುವಾದ

ಶ್ರೀರಾಮಾ! ಪ್ರಜಾ ರಕ್ಷಣೆಯ ಕಾರ್ಯದಲ್ಲಿ ಸಂಲಗ್ನನಾದ ರಾಜನು ತನ್ನ ರಾಜ್ಯದಲ್ಲಿ ವಾಸಿಸುವ ಎಲ್ಲ ಜನರನ್ನು ಪ್ರಾಣಗಳಂತೆ ಅಥವಾ ಪ್ರಾಣಗಳಿಗಿಂತ ಹೆಚ್ಚು ಪ್ರಿಯಪುತ್ರರಂತೆ ತಿಳಿದು ಸದಾ ಎಚ್ಚರಿಕೆಯಿಂದ, ಅವರನ್ನು ರಕ್ಷಿಸುವವನು ಅನೇಕ ಕಾಲ ಇರುವ ಅಕ್ಷಯ ಕೀರ್ತಿ ಮತ್ತು ಅಂತ್ಯದಲ್ಲಿ ಬ್ರಹ್ಮಲೋಕಕ್ಕೆ ಹೋಗಿ ಅಲ್ಲಿಯೂ ವಿಶೇಷ ಸಮ್ಮಾನಕ್ಕೆ ಭಾಗಿಯಾಗುತ್ತಾನೆ.॥12-13॥

ಮೂಲಮ್ - 14

ಯತ್ಕರೋತಿ ಪರಂ ಧರ್ಮಂ ಮುನಿರ್ಮೂಲಲಾಶನಃ ।
ತತ್ರ ರಾಜ್ಞಶ್ಚ ತುರ್ಭಾಗಃ ಪ್ರಜಾ ಧರ್ಮೇಣ ರಕ್ಷತಃ ॥

ಅನುವಾದ

ಫಲಮೂಲಗಳನ್ನು ತಿಂದು ಯಾವ ರಾಜನ ರಾಜ್ಯದಲ್ಲಿ ಮುನಿಗಳು ಉತ್ತಮ ಧರ್ಮಾನುಷ್ಠಾನ ಮಾಡುತ್ತಾ ಇರುವರೋ, ಅದರ ಪುಣ್ಯದಲ್ಲಿ ನಾಲ್ಕನೆಯ ಒಂದು ಅಂಶವನ್ನು ಧರ್ಮಾನುಸಾರ ಪ್ರಜೆಯನ್ನು ರಕ್ಷಿಸುವ ರಾಜನಿಗೆ ದೊರೆಯುತ್ತದೆ.॥14॥

ಮೂಲಮ್ - 15

ಸೋಽಯಂ ಬ್ರಾಹ್ಮಣಭೂಯಿಷ್ಠೋ ವಾನಪ್ರಸ್ಥಗಣೋ ಮಹಾನ್ ।
ತ್ವನ್ನಾಥೋಽನಾಥವದ್ ರಾಮ ರಾಕ್ಷಸೈರ್ಹನ್ಯತೇ ಭೃಶಮ್ ॥

ಅನುವಾದ

ಶ್ರೀರಾಮ! ಈ ವನದಲ್ಲಿ ಇರುವ ವಾನಪ್ರಸ್ಥ ಮಹಾತ್ಮರ ದೊಡ್ಡ ಸಮುದಾಯದಲ್ಲಿ ಬ್ರಾಹ್ಮಣರ ಸಂಖ್ಯೆಯೇ ಹೆಚ್ಚಾಗಿದೆ. ಇವರ ರಕ್ಷಕ ನೀನೇ ಆಗಿರುವೆ. ರಾಕ್ಷಸರಿಂದ ಅನಾಥರಂತೆ ಸಂಹಾರವಾಗಿ ಈ ಮುನಿಗಳ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ.॥15॥

ಮೂಲಮ್ - 16

ಏಹಿ ಪಶ್ಯ ಶರೀರಾಣಿ ಮುನೀನಾಂ ಭಾವಿತಾತ್ಮನಾಮ್ ।
ಹತಾನಾಂ ರಾಕ್ಷಸೈರ್ಘೋರೈರ್ಬಹೂನಾಂ ಬಹುಧಾ ವನೇ ॥

ಅನುವಾದ

ರಾಘವ! ಭಯಂಕರ ರಾಕ್ಷಸರಿಂದ ಹತರಾಗಿರುವ ಧ್ಯಾನಾಸಕ್ತರಾದ ಅನೇಕ ಮುನಿಗಳ ಶರೀರಗಳು (ಶವಗಳು ಅಥವಾ ಎಲುಬುಗಳ ರಾಶಿ) ಅರಣ್ಯದಲ್ಲಿ ಸುತ್ತಲೂ ಬಿದ್ದಿರುವುದನ್ನು ನೀನೇ ಬಂದು ಪ್ರತ್ಯಕ್ಷವಾಗಿ ನೋಡು.॥16॥

ಮೂಲಮ್ - 17

ಪಂಪಾನದೀನಿವಾಸಾನಾಮನುಮಂದಾಕಿನೀಮಪಿ ।
ಚಿತ್ರಕೂಟಾಲಯಾನಾಂ ಚ ಕ್ರಿಯತೇ ಕದನಂ ಮಹತ್ ॥

ಅನುವಾದ

ಪಂಪಾಸರೋವರ ಮತ್ತು ಅದರ ಹತ್ತಿರ ಹರಿಯುವ ತುಂಗಭದ್ರಾನದೀ ತೀರದಲ್ಲಿ ವಾಸಿಸುವ, ಮಂದಾಕಿನೀ ತೀರದಲ್ಲಿ ಇರುವ, ಚಿತ್ರಕೂಟದ ತಪ್ಪಲಲ್ಲಿ ನಿವಾಸಸ್ಥಾನ ಮಾಡಿಕೊಂಡ ಎಲ್ಲ ಋಷಿ-ಮಹರ್ಷಿಗಳನ್ನು ರಾಕ್ಷಸರು ಮಹಾಸಂಹಾರ ಮಾಡಿ ಬಿಟ್ಟಿದ್ದಾರೆ.॥17॥

ಮೂಲಮ್ - 18

ಏವಂ ವಯಂ ನ ಮೃಷ್ಯಾಮೋ ವಿಪ್ರಕಾರಂ ತಪಸ್ವಿನಾಮ್ ।
ಕ್ರಿಯಮಾಣಂ ವನೇ ಘೋರಂ ರಕ್ಷೋಭಿರ್ಭೀಮಕರ್ಮಭಿಃ ॥

ಅನುವಾದ

ಈ ಭಯಾನಕ ಕರ್ಮಮಾಡುವ ರಾಕ್ಷಸರು ಈ ವನದಲ್ಲಿ ತಪಸ್ವೀ ಮುನಿಗಳಿಗೆ ಕೊಡುವ ಭಯಂಕರ ಘೋರವಾದ ಹಿಂಸೆಯನ್ನು ನಾವು ಸಹಿಸಿಕೊಂಡಿರಲಾರೆವು.॥18॥

ಮೂಲಮ್ - 19

ತತಸ್ತ್ವಾಂ ಶರಣಾರ್ಥಂ ಚ ಶರಣ್ಯಂ ಸಮುಪಸ್ಥಿತಾಃ ।
ಪರಿಪಾಲಯನೋ ರಾಮ ವಧ್ಯಮಾನಾನ್ನಿಶಾಚರೈಃ ॥

ಅನುವಾದ

ಆದ್ದರಿಂದ ಈ ರಾಕ್ಷಸರಿಂದ ಬದುಕುಳಿಯಲು ನಿನ್ನಲ್ಲಿ ಶರಣಾಗಿ ಬಳಿಗೆ ಬಂದಿರುವೆವು. ಶ್ರೀರಾಮಾ! ಶರಣಾಗತ ವತ್ಸಲನಾದ ನೀನು ಈ ನಿಶಾಚರರಿಂದ ಹಿಂಸಿಸಲ್ಪಡುವ ನಮ್ಮನ್ನು ರಕ್ಷಿಸು.॥19॥

ಮೂಲಮ್ - 20

ಪರಾ ತ್ವತ್ತೋ ಗತಿರ್ವೀರ ಪೃಥಿವ್ಯಾಂ ನೋಪಪದ್ಯತೇ ।
ಪರಿಪಾಲಯ ನಃ ಸರ್ವಾನ್ ರಾಕ್ಷಸೇಭ್ಯೋ ನೃಪಾತ್ಮಜ ॥

ಅನುವಾದ

ರಾಜಕುಮಾರನೇ! ಈ ಭೂಮಂಡಲದಲ್ಲಿ ನಿನಗಿಂತ ಮಿಗಿಲಾದ ಆಸರೆ ನಮಗೆ ಬೇರೆ ಯಾವುದೂ ಇಲ್ಲ. ನೀನು ಈ ರಾಕ್ಷಸರಿಂದ ನಮ್ಮೆಲ್ಲರನ್ನೂ ರಕ್ಷಿಸು.॥20॥

ಮೂಲಮ್ - 21

ಏತಚ್ಛ್ರುತ್ವಾ ತು ಕಾಕುತ್ಸ್ಥಸ್ತಾಪಸಾನಾಂ ತಪಸ್ವಿನಾಮ್ ।
ಇದಂ ಪ್ರೋವಾಚ ಧರ್ಮಾತ್ಮಾ ಸರ್ವಾನೇವ ತಪಸ್ವಿನಃ ॥

ಅನುವಾದ

ತಪಸ್ಸಿನಲ್ಲಿ ತೊಡಗಿರುವ ಆ ತಪಸ್ವೀಮುನಿಗಳ ಈ ಮಾತನ್ನು ಕೇಳಿ ಕಕುತ್ಸ್ಥಕುಲಭೂಷಣ ಧರ್ಮಾತ್ಮಾ ಶ್ರೀರಾಮನು ಅವರೆಲ್ಲರಲ್ಲಿ ಹೇಳಿದನು.॥21॥

ಮೂಲಮ್ - 22

ನೈವಮರ್ಹಥ ಮಾಂ ವಕ್ತುಮಾಜ್ಞಾಪ್ಯೋಽಹಂ ತಪಸ್ವಿನಾಮ್ ।
ಕೇವಲೇನಸ್ವಕಾರ್ಯೇಣ ಪ್ರವಿಷ್ಟವ್ಯಂವನಂ ಮಯಾ ॥

ಅನುವಾದ

ಮುನಿವರ್ಯರೇ! ನೀವು ನನ್ನಲ್ಲಿ ಹೀಗೆ ಪ್ರಾರ್ಥಿಸಬೇಡಿ. ನಾನಾದರೋ ತಪಸ್ವೀ ಮಹಾತ್ಮರ ಆಜ್ಞಾಪಾಲಕನಾಗಿದ್ದೇನೆ. ನಾನು ಕೇವಲ ಕಾರ್ಯಕ್ಕಾಗಿಯೇ ವನಪ್ರದೇಶವನ್ನು ಪ್ರವೇಶಿಸಿರುವೆನು. (ಇವರೊಂದಿಗೆ ನಿಮ್ಮ ಸೇವೆಯ ಸೌಭಾಗ್ಯವೂ ನನಗೆ ಪ್ರಾಪ್ತವಾಗುವುದು..॥22॥

ಮೂಲಮ್ - 23

ವಿಪ್ರಕಾರಮಪಾಕ್ರಷ್ಟುಂ ರಾಕ್ಷಸೈರ್ಭವತಾಮಿಮಮ್ ।
ಪಿತುಸ್ತು ನಿರ್ದೇಶಕರಃ ಪ್ರವಿಷ್ಟೋಽಹಮಿದಂ ವನಮ್ ॥

ಅನುವಾದ

ರಾಕ್ಷಸರಿಂದ ನಿಮಗೆ ಉಂಟಾದ ಕಷ್ಟವನ್ನು ದೂರಮಾಡಲಿಕ್ಕಾಗಿಯೇ ನಾನು ಪಿತೃವಾಕ್ಯವನ್ನು ಪಾಲಿಸುತ್ತಾ ಈ ಅರಣ್ಯಕ್ಕೆ ಬಂದಿರುವೆನು.॥23॥

ಮೂಲಮ್ - 24

ಭವತಾಮರ್ಥಸಿದ್ದ್ಯರ್ಥಮಾಗತೋಽಹಂ ಯದೃಚ್ಛಯಾ ।
ತಸ್ಯ ಮೇಽಯಂ ವನೇ ವಾಸೋ ಭವಿಷ್ಯತಿ ಮಹಾಫಲಃ ॥

ಅನುವಾದ

ನಿಮ್ಮ ಪ್ರಯೋಜನ ಸಿದ್ಧಿಗಾಗಿಯೇ ನಾನು ದೈವಯೋಗದಿಂದ ಇಲ್ಲಿಗೆ ಬಂದಿರುವೆನು. ನಿಮ್ಮ ಸೇವೆಯಿಂದಾಗಿ ನನ್ನ ಈ ವನವಾಸವು ಮಹಾಫಲದಾಯಕ ಆಗುವುದು.॥24॥

ಮೂಲಮ್ - 25

ತಪಸ್ವಿನಾಂ ರಣೇ ಶತ್ರೂನ್ ಹಂತುಮಿಚ್ಛಾಮಿ ರಾಕ್ಷಸಾನ್ ।
ಪಶ್ಯಂತು ವೀರ್ಯಮೃಷಯಃ ಸಭ್ರಾತುರ್ಮೇತಪೋಧನಾಃ ॥

ಅನುವಾದ

ತಪೋಧನರೇ! ತಪಸ್ವೀ ಮುನಿಗಳೊಂದಿಗೆ ಶತ್ರುತ್ವವಿರಿಸಿಕೊಂಡ ಆ ರಾಕ್ಷಸರನ್ನು ಯುದ್ಧದಲ್ಲಿ ನಾನು ಸಂಹಾರ ಮಾಡಲು ಬಯಸುತ್ತಿದ್ದೇನೆ. ಮಹರ್ಷಿಗಳಾದ ನೀವೆಲ್ಲರೂ ಲಕ್ಷ್ಮಣಸಹಿತ ನನ್ನ ಪರಾಕ್ರಮವನ್ನು ನೋಡಿರಿ.॥25॥

ಮೂಲಮ್ - 26

ದತ್ತ್ವಾವರಂ ಚಾಪಿ ತಪೋಧನಾನಾಂ
ಧರ್ಮೇ ಧೃತಾತ್ಮಾ ಸಹ ಲಕ್ಷ್ಮಣೇನ ।
ತಪೋಧನೈಶ್ಚಾಪಿ ಸಹಾರ್ಯದತ್ತಃ
ಸುತೀಕ್ಷ್ಣ ಮೇವಾಭಿಜಗಾಮವೀರಃ ॥

ಅನುವಾದ

ಧರ್ಮದಲ್ಲೇ ನಿಯತವಾದ ಮನಸ್ಸುಳ್ಳ, ವೀರನಾದ ಶ್ರೀರಾಮನು ಈ ವಿಧವಾಗಿ ಅಭಯವನ್ನಿತ್ತು, ಸೀತಾ-ಲಕ್ಷ್ಮಣ ಸಹಿತ ಅನೇಕ ತಪಸ್ವೀ ಮಹಾತ್ಮರೊಂದಿಗೆ ಸುತೀಕ್ಷ್ಣ ಮುನಿಯ ಬಳಿಗೆ ಪ್ರಯಾಣ ಮಾಡಿದನು.॥26॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಆರನೆಯ ಸರ್ಗ ಸಂಪೂರ್ಣವಾಯಿತು.॥6॥