वाचनम्
ಭಾಗಸೂಚನಾ
ಶ್ರೀರಾಮ-ಲಕ್ಷ್ಮಣ-ಸೀತೆಯರು ಶರಭಂಗ ಮುನಿಯ ಆಶ್ರಮಕ್ಕೆ ಹೋಗುವುದು, ದೇವತೆಗಳ ಸಂದರ್ಶನ, ಮುನಿಗಳಿಂದ ಸನ್ಮಾನ, ಶರಭಂಗರು ಬ್ರಹ್ಮಲೋಕಕ್ಕೆ ತೆರಳಿದುದು
ಮೂಲಮ್ - 1
ಹತ್ವಾ ತು ತಂ ಭೀಮಬಲಂ ವಿರಾಧಂ ರಾಕ್ಷಸಂ ವನೇ ।
ತತಃ ಸೀತಾಂ ಪರಿಷ್ವಜ್ಯ ಸಮಾಶ್ವಾಸ್ಯ ಚ ವೀರ್ಯವಾನ್ ॥
ಮೂಲಮ್ - 2
ಅಬ್ರವೀದ್ ಭ್ರಾತರಂ ರಾಮೋ ಲಕ್ಷ್ಮಣಂ ದೀಪ್ತತೇಜಸಮ್ ।
ಕಷ್ಟಂ ವನಮಿದಂ ದುರ್ಗಂ ನ ಚ ಸ್ಮೋವನಗೋಚರಾಃ ॥
ಮೂಲಮ್ - 3
ಅಭಿಗಚ್ಛಾಮಹೇ ಶೀಘ್ರಂ ಶರಭಂಗಂ ತಪೋಧನಮ್ ।
ಆಶ್ರಮಂ ಶರಭಂಗಸ್ಯ ರಾಘವೋಽಭಿಜಗಾಮ ಹ ॥
ಅನುವಾದ
ವನದಲ್ಲಿ ಆ ಭಯಂಕರ ಬಲಶಾಲಿ ರಾಕ್ಷಸ ವಿರಾಧನನ್ನು ವಧೆ ಮಾಡಿ ಪರಾಕ್ರಮಿ ಶ್ರೀರಾಮನು ಸೀತೆಯನ್ನು ಎದೆಗಪ್ಪಿಕೊಂಡು ಸಾಂತ್ವನ ಮಾಡಿದನು. ಹಾಗೂ ಉದ್ದೀಪ್ತ ತೇಜಸ್ಸುಳ್ಳ ಲಕ್ಷ್ಮಣನಲ್ಲಿ ಹೀಗೆ ಹೇಳಿದನು - ‘ಸುಮಿತ್ರಾ ನಂದನ! ಈ ದುರ್ಗಮ ವನವು ಬಹಳ ಕಷ್ಟಪ್ರದವಾಗಿದೆ. ನಾವು ಮೊದಲು ಇಂತಹ ವನದಲ್ಲಿ ಎಂದೂ ಇರಲಿಲ್ಲ. (ಆದ್ದರಿಂದ ಇಲ್ಲಿಯ ಕಷ್ಟಗಳ ಅನುಭವವಿಲ್ಲ ಮತ್ತು ಅಭ್ಯಾಸವೂ ಇಲ್ಲ) ಸರಿ! ನಾವು ಈಗ ಬೇಗನೇ ತಪೋಧನ ಶರಭಂಗರ ಬಳಿಗೆ ಹೋಗೋಣ.’ ಎಂದು ಹೇಳಿ ಶ್ರೀರಾಮನು ಶರಭಂಗಮುನಿಯ ಆಶ್ರಮಕ್ಕೆ ಹೋದನು.॥1-3॥
ಮೂಲಮ್ - 4
ತಸ್ಯ ದೇವಪ್ರಭಾವಸ್ಯ ತಪಸಾ ಭಾವಿತಾತ್ಮನಃ ।
ಸಮೀಪೇ ಶರಭಂಗಸ್ಯ ದದರ್ಶ ಮಹದದ್ಬುತಮ್ ॥
ಅನುವಾದ
ದೇವತೆಗಳಂತೆ ಪ್ರಭಾವಶಾಲಿ ಮತ್ತು ತಪಸ್ಸಿನಿಂದ ಶುದ್ಧ ಅಂತಃಕರಣವುಳ್ಳ (ಅಥವಾ ತಪಸ್ಸಿನಿಂದ ಪರಮಾತ್ಮನ ಸಾಕ್ಷಾತ್ಕಾರ ಪಡೆದ) ಶರಭಂಗ ಮುನಿಯ ಬಳಿಗೆ ಹೋದಾಗ ಶ್ರೀರಾಮನು ಅದ್ಭುತ ದಶ್ಯವೊಂದನ್ನು ನೋಡಿನು.॥4॥
ಮೂಲಮ್ - 5
ವಿಭ್ರಾಜಮಾನಂ ವಪುಷಾ ಸೂರ್ಯವೈಶ್ವಾನರಪ್ರಭಮ್ ।
ರಥಪ್ರವರಮಾರೂಢಮಾಕಾಶೇ ವಿಬುಧಾನುಗಮ್ ॥
ಮೂಲಮ್ - 6
ಅಸಂಸ್ಪೃಶಂತಂ ವಸುಧಾಂ ದದರ್ಶ ವಿಬುಧೇಶ್ವರಮ್ ।
ಸಂಪ್ರಭಾಭರಣಂ ದೇವಂ ವಿರಜೋಽಂಬರಧಾರಿಣಮ್ ॥
ಅನುವಾದ
ಅಲ್ಲಿ ಅವರಿಗೆ ಆಕಾಶದಲ್ಲಿ ಒಂದು ಶ್ರೇಷ್ಠರಥದಲ್ಲಿ ಕುಳಿತಿರುವ ದೇವತೆಗಳ ಒಡೆಯ ಇಂದ್ರನ ದರ್ಶನವಾಯಿತು, ಅವನು ಪಥ್ವಿಯನ್ನು ಸ್ಪರ್ಶಿಸಿರಲಿಲ್ಲ. ಅವನ ಅಂಗಕಾಂತಿಯು ಸೂರ್ಯ ಮತ್ತು ಅಗ್ನಿಯಂತೆ ಪ್ರಕಾಶಿಸುತ್ತಿತ್ತು. ಅವನು ತನ್ನ ತೇಜಸ್ವೀ ಶರೀರದಿಂದ ಹೊಳೆಯುತ್ತಿದ್ದನು. ಅವನ ಹಿಂದೆ ಇನ್ನೂ ಅನೇಕ ದೇವತೆಗಳಿದ್ದರು. ಅವರ ಆಭೂಷಣಗಳು ಹೊಳೆಯುತ್ತಿದ್ದವು ಹಾಗೂ ಅವರು ನಿರ್ಮಲ ವಸ್ತ್ರಗಳನ್ನು ಧರಿಸಿದ್ದರು.॥5-6॥
ಮೂಲಮ್ - 7½
ತದ್ವಿಧೈರೇವ ಬಹುಭಿಃ ಪೂಜ್ಯಮಾನಂ ಮಹಾತ್ಮಭಿಃ ।
ಹರಿತೈರ್ವಾಜಿಭಿಯುಕ್ತಮಂತರಿಕ್ಷಗತಂ ರಥಮ್ ॥
ದದರ್ಶಾದೂರತಸ್ತಸ್ಯ ತರುಣಾದಿತ್ಯಸಂನಿಭಮ್ ।
ಅನುವಾದ
ಅವನಂತೆ ವೇಷಭೂಷಣಗಳುಳ್ಳ ಬೇರೆ ಅನೇಕ ಮಹಾತ್ಮರು ದೇವೇಂದ್ರನನ್ನು ಪೂಜಿಸುತ್ತಿದ್ದರು. ಅವರ ರಥಗಳು ಆಕಾಶದಲ್ಲಿ ನಿಂತಿದ್ದವು. ರಥಗಳಿಗೆ ಹಸಿರು ಬಣ್ಣದ ಕುದುರೆಗಳನ್ನು ಹೂಡಿದ್ದರು. ಶ್ರೀರಾಮನು ಆಗ ತಾನೇ ಉದಯಿಸಿದ ಸೂರ್ಯನಂತೆ ಪ್ರಕಾಶಿಸುತ್ತಿದ್ದ ರಥವನ್ನು ಹತ್ತಿರದಿಂದ ನೋಡಿದನು.॥7½॥
ಮೂಲಮ್ - 8½
ಪಾಂಡುರಾಭ್ರಘನಪ್ರಖ್ಯಂ ಚಂದ್ರಮಂಡಲಸಂನಿಭಮ್ ॥
ಅಪಶ್ಯದ್ವಿಮಲಂ ಛತ್ರಂ ಚಿತ್ರಮಾಲ್ಯೋಪಶೋಭಿತಮ್ ।
ಅನುವಾದ
ಇಂದ್ರನ ತಲೆಯ ಮೇಲೆ ಬಿಳಿಯ ಮೋಡದಂತೆ ಉಜ್ವಲ ಹಾಗೂ ಚಂದ್ರನಂತೆ ಕಾಂತಿಯುಳ್ಳ ನಿರ್ಮಲ ಛತ್ರವನ್ನು ಹಿಡಿದಿದ್ದರು. ಅದು ವಿಚಿತ್ರ ಹೂವುಗಳ ಮಾಲೆಗಳಿಂದ ಸುಶೋಭಿಸುತವಾಗಿರುವುದನ್ನು ಅವನು ನೋಡಿದನು.॥8½॥
ಮೂಲಮ್ - 9½
ಚಾಮರವ್ಯಜನೇ ಚಾಗ್ರ್ಯೇ ರುಕ್ಮದಂಡೇ ಮಹಾಧನೇ ॥
ಗೃಹೀತೇ ವರನಾರೀಭ್ಯಾಂ ಧೂಯಮಾನೇ ಚ ಮೂರ್ಧನಿ ।
ಅನುವಾದ
ಶ್ರೀರಾಮನು ಸುವರ್ಣಮಯ ಹಿಡಿಗಳುಳ್ಳ ಎರಡು ಶ್ರೇಷ್ಠ, ಆಮೂಲ್ಯ ಚಾಮರ ಮತ್ತು ಬೀಸಣಿಗೆಯನ್ನು ನೋಡಿದನು. ಅವನ್ನು ಇಬ್ಬರು ಸುಂದರಿಯರು ಹಿಡಿದು ದೇವೇಂದ್ರನಿಗೆ ಬೀಸುತ್ತಿದ್ದರು.॥9॥
ಮೂಲಮ್ - 10
ಗಂಧರ್ವಾಮರಸಿದ್ಧಾಶ್ಚ ಬಹವಃ ಪರಮರ್ಷಯಃ ॥
ಮೂಲಮ್ - 11
ಅಂತರಿಕ್ಷಗತಂ ದೇವಂ ಗೀರ್ಭಿರಗ್ರ್ಯಾಭಿರೈಡಯನ್ ।
ಸಹ ಸಂಭಾಷಮಾಣೇ ತು ಶರಭಂಗೇನ ವಾಸವೇ ॥
ಮೂಲಮ್ - 12
ದೃಷ್ಟ್ವಾ ಶತಕ್ರತುಂ ತತ್ರರಾಮೋ ಲಕ್ಷ್ಮಣಮಬ್ರವೀತ್ ।
ರಾಮೋಽಥರಥಮುದ್ದಿಶ್ಯ ಭಾತುರ್ದರ್ಶಯತಾದ್ಭುತಮ್ ॥
ಅನುವಾದ
ಆಗ ಅನೇಕ ಗಂಧರ್ವರು, ದೇವತೆಗಳು, ಸಿದ್ಧರು, ಮಹರ್ಷಿಗಳು ಉತ್ತಮ ವಚನಗಳಿಂದ ಅಂತರಿಕ್ಷದಲ್ಲಿ ವಿರಾಜಮಾನ ದೇವೇಂದ್ರನನ್ನು ಸ್ತುತಿಸುತ್ತಿದ್ದರು ಮತ್ತು ದೇವರಾಜ ಇಂದ್ರನು ಶರಭಂಗಮುನಿಯೊಂದಿಗೆ ಮಾತನಾಡುತ್ತಿದ್ದನು. ಅಲ್ಲಿ ಹೀಗೆ ಶತಕ್ರತು ಇಂದ್ರನನ್ನು ದರ್ಶಿಸಿ ಶ್ರೀರಾಮನು ಅವನ ಅದ್ಭುತ ರಥದ ಕಡೆ ಬೆರಳು ಮಾಡುತ್ತಾ ಅದನ್ನು ಲಕ್ಷ್ಮಣನಿಗೆ ತೋರಿಸುತ್ತಾ ಅವನಲ್ಲಿ ಹೇಳಿದನು.॥10-12॥
ಮೂಲಮ್ - 13
ಅರ್ಚಿಷ್ಮಂತಂ ಶ್ರಿಯಾ ಜುಷ್ಟಮದ್ಬುತಂ ಪಶ್ಯ ಲಕ್ಷ್ಮಣ ।
ಪ್ರತಪಂತಮಿವಾದಿತ್ಯ ಮುಂತರಿಕ್ಷಗತಂ ರಥಮ್ ॥
ಅನುವಾದ
ಲಕ್ಷ್ಮಣ! ಆಕಾಶದಲ್ಲಿರುವ ಆ ಅದ್ಭುತ ರಥವನ್ನು ನೋಡು. ಅದರಿಂದ ಸೂರ್ಯನಂತೆ ಬೆಳಗುವ ಪ್ರಕಾಶ ಹೊರಹೊಮ್ಮುತ್ತಿದೆ. ಶೋಭೆಯೇ ಮೂರ್ತಿಮಂತವಾಗಿ ಅದರ ಸೇವೆ ಮಾಡುವಂತೆ ಇದೆ.॥13॥
ಮೂಲಮ್ - 14
ಯೇ ಹಯಾಃ ಪುರುಹೂತಸ್ಯ ಪುರಾ ಶಕ್ರಸ್ಯ ನಃ ಶ್ರುತಾಃ ।
ಅಂತರಿಕ್ಷಗತಾ ದಿವ್ಯಾಸ್ತ ಇಮೇ ಹರಯೋ ಧ್ರವಮ್ ॥
ಅನುವಾದ
ದೇವೇಂದ್ರನ ದಿವ್ಯ ಕುದುರೆಗಳ ಕುರಿತು ನಾವು ಹಿಂದೆ ಕೇಳಿದಂತೆ ನಿಶ್ಚಯವಾಗಿ ಆಕಾಶದಲ್ಲಿ ಅವೇ ದಿವ್ಯಕುದುರೆಗಳು ವಿರಾಜಿಸುತ್ತಿವೆ.॥14॥
ಮೂಲಮ್ - 15
ಇಮೇ ಚ ಪುರುಷವ್ಯಾಘ್ರ ಯೇ ತಿಷ್ಠಂತ್ಯಭಿತೋ ದಿಶಮ್ ।
ಶತಂ ಶತಂ ಕುಂಡಲಿನೋ ಯುವಾನಃ ಖಡ್ಗಪಾಣಯಃ ॥
ಮೂಲಮ್ - 16
ವಿಸ್ತೀರ್ಣವಿಪುಲೋರಸ್ಕಾಃ ಪರಿಘಾಯತಬಾಹವಃ ।
ಶೋಣಾಂಶುವಸನಾಃ ಸರ್ವೇ ವ್ಯಾಘ್ರಾ ಇವ ದುರಾಸದಾಃ ॥
ಅನುವಾದ
ಪುರುಷಸಿಂಹನೇ! ಈ ರಥದ ಇಕ್ಕೆಲಗಳಲ್ಲಿ ಕೈಗಳಲ್ಲಿ ಖಡ್ಗ ವನ್ನು ಹಿಡಿದು ಕುಂಡಲದಾರೀ ನೂರು-ನೂರು ಯುವಕರು ನಿಂತಿರುವರು. ಅವರ ವಕ್ಷಸ್ಥಳವು ಉಬ್ಬಿಕೊಂಡು ವಿಶಾಲವಾಗಿವೆ. ಭುಜಗಳು ಪರಿಘಗಳಂತೆ ಸುದೃಢ ಹಾಗೂ ದಷ್ಟಪುಷ್ಟವಾಗಿದೆ. ಇವರೆಲ್ಲರೂ ಕೆಂಪುವಸ್ತ್ರಗಳನ್ನು ಧರಿಸಿಕೊಂಡಿದ್ದು, ಹುಲಿಗಳಂತೆ ದುರ್ಜಯರಾಗಿರುವರು.॥15-16॥
ಮೂಲಮ್ - 17
ಉರೋದೇಶೇಷು ಸರ್ವೇಷಾಂ ಹಾರಾ ಜ್ವಲನಸಂನಿಭಾಃ ।
ರೂಪಂ ಭಿಭ್ರತಿ ಸೌಮಿತ್ರೇ ಪಂಚವಿಂಶತಿ ವಾರ್ಷಿಕಮ್ ॥
ಅನುವಾದ
ಸುಮಿತ್ರಾನಂದನ! ಇವರೆಲ್ಲರ ಎದೆಯ ಮೇಲೆ ಅಗ್ನಿಯಂತೆ ಹೊಳೆಯುತ್ತಿರುವ ಹಾರಗಳು ಶೋಭಿಸುತ್ತಿವೆ. ಈ ಯುವಕರು ಇಪ್ಪತ್ತೈದು ವಯಸ್ಸಿನವರಂತೆ ರೂಪವನ್ನು ಧರಿಸಿರುವರ.॥17॥
ಮೂಲಮ್ - 18
ಏತದ್ಧಿ ಕಿಲ ದೇವಾನಾಂ ವಯೋ ಭವತಿ ನಿತ್ಯದಾ ।
ಯಥೇಮೇ ಪುರುಷವ್ಯಾಘ್ರಾ ದೃಶ್ಯಂತೇ ಪ್ರಿಯದರ್ಶನಾಃ ॥
ಅನುವಾದ
ಈ ಪುರುಷ ಪ್ರವರರು ಕಂಡು ಬರುವಂತೆಯೇ ದೇವತೆಗಳ ಅವಸ್ಥೆ ಸದಾ ಹೀಗೆ ಇರುತ್ತದೆ ಎಂದು ಹೇಳುತ್ತಾರೆ. ಇವರ ದರ್ಶನ ಎಷ್ಟು ಪ್ರಿಯವಾಗಿದೆ.॥18॥
ಮೂಲಮ್ - 19
ಇಹೈವ ಸಹ ವೈದೇಹ್ಯಾ ಮುಹೂರ್ತಂ ತಿಷ್ಠ ಲಕ್ಷ್ಮಣ ।
ಯಾವಜ್ಜಾನಾಮ್ಯಹಂ ವ್ಯಕ್ತಂ ಕ ಏಷ ದ್ಯುತಿಮಾನ್ರಥೇ ॥
ಅನುವಾದ
ಲಕ್ಷ್ಮಣ! ರಥದಲ್ಲಿ ಕುಳಿತಿರುವ ಈ ತೇಜಸ್ವೀ ಪುರುಷನು ಯಾರೆಂದು ನಾನು ಸ್ಪಷ್ಟವಾಗಿ ತಿಳಿಯುವವರೆಗೆ ನೀನು ವಿದೇಹನಂದಿನೀ ಸೀತೆಯೊಂದಿಗೆ ಎರಡು ಗಳಿಗೆ ಇಲ್ಲೇ ನಿಂತಿರು.॥19॥
ಮೂಲಮ್ - 20
ತಮೇವಮುಕ್ತ್ವಾ ಸೌಮಿತ್ರಿಮಿಹೈವ ಸ್ಥೀಯತಾಮಿತಿ ।
ಅಭಿಚಕ್ರಾಮ ಕಾಕುತ್ಸ್ಥಃ ಶರಭಂಗಾಶ್ರಮಂ ಪ್ರತಿ ॥
ಅನುವಾದ
ಹೀಗೆ ಸುಮಿತ್ರಾಕುಮಾರನಿಗೆ ಅಲ್ಲೇ ನಿಲ್ಲುವಂತೆ ಆದೇಶಿಸಿ, ಶ್ರೀರಾಮಚಂದ್ರನು ನಡೆಯುತ್ತಾ ಶರಭಂಗ ಮುನಿಯ ಆಶ್ರಮಕ್ಕೆ ಹೋದನು.॥20॥
ಮೂಲಮ್ - 21
ತತಃ ಸಮಭಿಗಚ್ಛಂತಂ ಪ್ರೇಕ್ಷ್ಯ ರಾಮಂ ಶಚೀಪತಿಃ ।
ಶರಭಂಗ ಮನುಜ್ಞಾಪ್ಯ ವಿಬುಧಾನಿದಮಬ್ರವೀತ್ ॥
ಅನುವಾದ
ಶ್ರೀರಾಮನು ಬಂದಿರುವುದನ್ನು ನೋಡಿ ಶಚೀಪತಿ ಇಂದ್ರನು ಶರಭಂಗರಿಂದ ಬೀಳ್ಕೊಂಡು ದೇವತೆಗಳಲ್ಲಿ ಈ ಪ್ರಕಾರ ಹೇಳಿದನು .॥21॥
ಮೂಲಮ್ - 22
ಇಹೋಪಯಾತ್ಯಸೌ ರಾಮೋ ಯಾವನ್ಮಾಂ ನಾಭಿಭಾಷತೇ ।
ನಿಷ್ಠಾಂ ನಯತ ತಾವತ್ತು ತತೋ ಮಾದ್ರಷ್ಟುಮರ್ಹತಿ ॥
ಅನುವಾದ
ಶ್ರೀರಾಮಚಂದ್ರನು ಇಲ್ಲಿಗೆ ಬರುತ್ತಿರುವನು, ಅವನು ನನ್ನೊಂದಿಗೆ ಏನಾದರೂ ಮಾತನಾಡುವ ಮೊದಲೇ ನೀವು ನನ್ನನ್ನು ಇಲ್ಲಿಂದ ಬೇರೆ ಕಡೆಗೆ ಒಯ್ಯಿರಿ. ಈಗ ಶ್ರೀರಾಮನೊಂದಿಗೆ ನನ್ನ ಸಂದರ್ಶನ ಆಗಬಾರದು.॥22॥
ಮೂಲಮ್ - 23
ಜಿತವಂತಂ ಕೃತಾರ್ಥಂಹಿ ತದಾಹಮಚಿರಾದಿಮಮ್ ।
ಕರ್ಮ ಹ್ಯನೇನ ಕರ್ತವ್ಯಂ ಮಹದನ್ಯೈಃ ಸುದುಷ್ಕರಮ್ ॥
ಅನುವಾದ
ಇವನು ಮಾಡಬೇಕಾದ ಕರ್ಮವನ್ನು ನೆರವೇರಿಸುವುದು ಬೇರೆಯವರಿಗೆ ಬಹಳ ಕಠಿಣವಾಗಿದೆ. ಇವನು ರಾವಣನನ್ನು ಜಯಿಸಿ ತನ್ನ ಕರ್ತವ್ಯ ಪೂರ್ಣ ಮಾಡಿ ಕೃತಾರ್ಥನಾದಾಗ, ನಾನು ಶೀಘ್ರವಾಗಿ ಬಂದು ಇವನ ದರ್ಶನ ಮಾಡುವೆನು.॥23॥
ಮೂಲಮ್ - 24
ಅಥ ವಜ್ರೀ ತಮಾಮಂತ್ರ್ಯಮಾನಯಿತ್ವಾ ಚ ತಾಪಸಮ್ ।
ರಥೇನ ಹಯಯುಕ್ತೇನ ಯಯೌ ದಿವಮರಿಂದಮಃ ॥
ಅನುವಾದ
ಹೀಗೆ ಹೇಳಿ ವಜ್ರಧಾರೀ ಶತ್ರುದಮನ ಇಂದ್ರನು ತಪಸ್ವೀ ಶರಭಂಗರನ್ನು ಸತ್ಕರಿಸಿ, ಅವರಿಂದ ಅನುಮತಿ ಪಡೆದು ಕುದುರೆಗಳನ್ನು ಹೂಡಿದ ರಥದಿಂದ ಸ್ವರ್ಗಲೋಕಕ್ಕೆ ತೆರಳಿದನು.॥24॥
ಮೂಲಮ್ - 25
ಪ್ರಯಾತೇ ತು ಸಹಸ್ರಾಕ್ಷೇ ರಾಘವಃ ಸಪರಿಚ್ಛದಃ ।
ಅಗ್ನಿಹೋತ್ರಮುಪಾಸೀನಂ ಶರಭಂಗಮುಪಾಗಮತ್ ॥
ಅನುವಾದ
ಸಹಸ್ರ ನೇತ್ರಧಾರೀ ಇಂದ್ರನು ಹೊರಟು ಹೋದಮೇಲೆ ಶ್ರೀರಾಮಚಂದ್ರನು ಪತ್ನೀ ಸೀತೆ ಮತ್ತು ಅನುಜನೊಡನೆ ಶರಭಂಗಮುನಿಯ ಬಳಿಗೆ ಹೊದನು. ಆಗ ಅವರು ಅಗ್ನಿಯ ಸಮೀಪ ಕುಳಿತು ಅಗ್ನಿಹೋತ್ರ ಮಾಡುತ್ತಿದ್ದರು.॥25॥
ಮೂಲಮ್ - 26
ತಸ್ಯ ಪಾದೌ ಚ ಸಂಗೃಹ್ಯ ರಾಮಃ ಸೀತಾ ಚ ಲಕ್ಷ್ಮಣಃ ।
ನಿಷೇದುಸ್ತದನುಜ್ಞಾತಾ ಲಬ್ಧ ವಾಸಾ ನಿಮಂತ್ರಿತಾಃ ॥
ಅನುವಾದ
ಶ್ರೀರಾಮ-ಲಕ್ಷ್ಮಣ-ಸೀತೆಯರು ಮುನಿಯ ಚರಣಗಳಲ್ಲಿ ನಮಸ್ಕರಿಸಿ, ಅವರ ಆಜ್ಞೆಯಂತೆ ಕುಳಿತುಕೊಂಡರು. ಶರಭಂಗರು ಅವರಿಗೆ ಆತಿಥ್ಯಕ್ಕಾಗಿ ನಿಮಂತ್ರಣ ಕೊಟ್ಟು ಉಳಿದುಕೊಳ್ಳಲು ಸ್ಥಾನವನ್ನು ಕೊಡಮಾಡಿದರು.॥26॥
ಮೂಲಮ್ - 27
ತತಃ ಶಕ್ರೋಪಯಾನಂ ತು ಪರ್ಯಪೃಚ್ಛತ ರಾಘವಃ ।
ಶರಭಂಗಶ್ಚ ತತ್ಸರ್ವಂ ರಾಘವಾಯ ನ್ಯವೇದಯತ್ ॥
ಅನುವಾದ
ಅನಂತರ ಶ್ರೀರಾಮಚಂದ್ರನು ಅವರಲ್ಲಿ ಇಂದ್ರನು ಬಂದ ಕಾರಣವನ್ನು ಕೇಳಿದನು. ಆಗ ಶರಭಂಗಮುನಿಗಳು ಶ್ರೀರಘುನಾಥನಲ್ಲಿ ಎಲ್ಲವನ್ನು ನಿವೇದಿಸುತ್ತಾ ಹೇಳಿದರು.॥27॥
ಮೂಲಮ್ - 28
ಮಾಮೇಷ ವರದೋ ರಾಮ ಬ್ರಹ್ಮಲೋಕಂ ನಿನೀಷತಿ ।
ಜಿತಮುಗ್ರೇಣ ತಪಸಾ ದುಷ್ಪ್ರಾಪಮಕೃತಾತ್ಮಭಾಃ ॥
ಅನುವಾದ
ಶ್ರೀರಾಮಾ! ವರ ಕೊಡುವ ಇಂದ್ರನು ನನ್ನನ್ನು ಬ್ರಹ್ಮಲೋಕಕ್ಕೆ ಕರೆದೊಯ್ಯಲು ಬಯಸುತ್ತಿರುವನು. ನಾನು ನನ್ನ ಉಗ್ರ ತಪಸ್ಸಿನಿಂದ ಆ ಲೋಕದ ಮೇಲೆ ವಿಜಯ ಪಡೆದಿರುವೆನು. ಇಂದ್ರಿಯಗಳು ವಶದಲ್ಲಿ ಇಲ್ಲದಿರುವವರಿಗೆ ಅದು ಅತ್ಯಂತ ದುರ್ಲಭವಾಗಿದೆ.॥28॥
ಮೂಲಮ್ - 29
ಅಹಂ ಜ್ಞಾತ್ವಾ ನರವ್ಯಾಘ್ರ ವರ್ತಮಾನಮದೂರತಃ ।
ಬ್ರಹ್ಮಲೋಕಂ ನ ಗಚ್ಛಾಮಿ ತ್ವಾಮದೃಷ್ಟ್ವಾಪ್ರಿಯಾತಿಥಿಮ್ ॥
ಅನುವಾದ
ಪುರುಷಸಿಂಹನೇ! ಆದರೆ ನೀವು ಈ ಆಶ್ರಮದ ಬಳಿಗೆ ಬಂದಿರುವಿರಿ ಎಂದು ನನಗೆ ತಿಳಿದಾಗ, ನಿನ್ನಂತಹ ಪ್ರಿಯ ಅತಿಥಿಯ ದರ್ಶನ ಮಾಡದೆ ನಾನು ಬ್ರಹ್ಮಲೋಕಕ್ಕೆ ಹೋಗಲಾರೆ ಎಂದು ನಿಶ್ಚಯಿಸಿರುವೆನು.॥29॥
ಮೂಲಮ್ - 30
ತ್ವಯಾಹಂ ಪುರುಷವ್ಯಾಘ್ರ ಧಾರ್ಮಿಕೇಣ ಮಹಾತ್ಮನಾ ।
ಸಮಾಗಮ್ಯ ಗಮಿಷ್ಯಾಮಿ ತ್ರಿದಿವಂ ಚಾವರಂ ಪರಮ್ ॥
ಅನುವಾದ
ನರಶ್ರೇಷ್ಠನೇ! ನಿನ್ನಂತಹ ಧರ್ಮಪರಾಯಣ ಮಹಾತ್ಮಾ ಪುರುಷನಿಗೆ ಭೆಟ್ಟಿಯಾಗಿಯೇ ನಾನು ಸ್ವರ್ಗಲೋಕ ಹಾಗೂ ಅದಕ್ಕಿಂತ ಮೇಲಿನ ಬ್ರಹ್ಮಲೋಕಕ್ಕೆ ಹೋಗುವೆನು.॥30॥
ಮೂಲಮ್ - 31
ಅಕ್ಷಯಾ ನರಶಾರ್ದೂಲ ಮಯಾ ಲೋಕಾ ಜಿತಾಃ ಶುಭಾಃ ।
ಬ್ರಾಹ್ಮಯಾಶ್ಚ ನಾಕಪೃಷ್ಠ್ಯಾಶ್ಚ ಪ್ರತಿಗೃಹ್ಣೀಷ್ವ ಮಾಮಕಾನ್ ॥
ಅನುವಾದ
ಪುರಷ ಶಿರೋಮಣಿಯೇ! ನಾನು ಬ್ರಹ್ಮಲೋಕ ಮತ್ತು ಸ್ವರ್ಗಲೋಕ ಆದಿ ಅಕ್ಷಯ ಶುಭ ಲೋಕಗಳ ಮೇಲೆ ವಿಜಯಪಡೆದಿರುವೆನೋ, ಆ ನನ್ನ ಎಲ್ಲ ಲೋಕಗಳನ್ನು ನೀನು ಸ್ವೀಕಾರ ಮಾಡು.॥31॥
ಮೂಲಮ್ - 32
ಏವಮುಕ್ತೋ ನರವ್ಯಾಘ್ರಃ ಸರ್ವಶಾಸ್ತ್ರ ವಿಶಾರದಃ ।
ಋಷಿಣಾ ಶರಭಂಗೇನ ರಾಘವೋ ವಾಕ್ಯಮಬ್ರವೀತ್ ॥
ಅನುವಾದ
ಶರಭಂಗಮುನಿಯು ಹೀಗೆ ಹೇಳಿದಾಗ ಸಮಸ್ತ ಶಾಸ್ತ್ರಗಳ ವಿಶಾರದನಾದ ನರಶ್ರೇಷ್ಠ ಶ್ರೀರಘುನಾಥನು ಹೀಗೆ ಹೇಳಿದನು.॥32॥
ಮೂಲಮ್ - 33
ಅಹಮೇವಾಹರಿಷ್ಯಾಮಿ ಸರ್ವಾಂಲ್ಲೋಕಾನ್ಮಹಾಮುನೇ ।
ಆವಾಸಂ ತ್ವಹಮಿಚ್ಛಾಮಿ ಪ್ರದಿಷ್ಟಮಿಹ ಕಾನನೇ ॥
ಅನುವಾದ
ಮಹಾಮುನೇ! ನಾನೇ ನಿಮಗೆ ಆ ಎಲ್ಲ ಲೋಕಗಳ ಪ್ರಾಪ್ತಿ ಮಾಡಿಸುವೆನು. ಈಗ ನಾನಾದರೋ ಈ ವನದಲ್ಲಿ ನೀವು ತಿಳಿಸಿರುವ ಸ್ಥಾನದಲ್ಲಿ ನಿವಾಸ ಮಾಡಲು ಮಾತ್ರ ಬಯಸುತ್ತೇನೆ.॥33॥
ಮೂಲಮ್ - 34
ರಾಘವೇಣೈವಮುಕ್ತಸ್ತು ಶಕ್ರತುಲ್ಯ ಬಲೇನ ವೈ ।
ಶರಭಂಗೋ ಮಹಾಪ್ರಾಜ್ಞಃ ಪುನರೇವಾಬ್ರವೀದ್ವಚಃ ॥
ಅನುವಾದ
ಇಂದ್ರನಂತೆ ಬಲಶಾಲಿ ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಮಹಾಜ್ಞಾನೀ ಶರಭಂಗ ಮುನಿಗಳು ಪುನಃ ಹೀಗೆ ಹೇಳಿದರ.॥34॥
ಮೂಲಮ್ - 35
ಇಹ ರಾಮ ಮಹಾತೇಜಾಃ ಸುತೀಕ್ಷ್ಣೋ ನಾಮ ಧಾರ್ಮಿಕಃ ।
ವಸತ್ಯರಣ್ಯೇ ನಿಯತಃ ಸ ತೇ ಶ್ರೋಯೋ ವಿಧಾಸ್ಯತಿ ॥
ಅನುವಾದ
ಶ್ರೀರಾಮಾ! ಈ ವನದಲ್ಲಿ ಸ್ವಲ್ಪ ದೂರದಲ್ಲೇ ಮಹಾ ತೇಜಸ್ವೀ ಧರ್ಮಾತ್ಮಾ ಸುತೀಕ್ಷ್ಣ ಮುನಿಗಳು ನಿಯಮಪೂರ್ವಕ ವಾಸಿಸುತ್ತಿದ್ದಾರೆ. ಅವರೇ ನಿನ್ನ ಮಂಗಳ (ನಿನಗಾಗಿ ಸ್ಥಾನದ ವ್ಯವಸ್ಥೆ) ಮಾಡುವರು.॥35॥
ಮೂಲಮ್ - 36
ಸುತೀಕ್ಷ್ಣಮಭಿಗಚ್ಛ ತ್ವಂ ಶುಚೌ ದೇಶೇ ತಪಸ್ವಿನಮ್ ।
ರಮಣೀಯೇ ವನೋದ್ದೇಶೇ ಸ ತೇ ವಾಸಂ ವಿಧ್ಯಾಸ್ಯತಿ ॥
ಅನುವಾದ
ನೀನು ಈ ರಮಣೀಯ ವನಪ್ರಾಂತದ ಪವಿತ್ರಸ್ಥಾನದಲ್ಲಿರುವ ತಪಸ್ವೀ ಸುತೀಕ್ಷ್ಣ ಮುನಿಯ ಬಳಿಗೆ ಹೋಗು; ಅವರು ನಿನ್ನ ನಿವಾಸ ಸ್ಥಾನದ ವ್ಯವಸ್ಥೆ ಮಾಡುವರು.॥36॥
ಮೂಲಮ್ - 37
ಇಮಾಂ ಮಂದಾಕಿನೀಂ ರಾಮ ಪ್ರತಿಸ್ರೋತಾಮನುವ್ರಜ ।
ನದೀಂ ಪುಷ್ಪೋಡುಪವಹಾಂ ತತಸ್ತತ್ರ ಗಮಿಷ್ಯಸಿ ॥
ಅನುವಾದ
ಶ್ರೀರಾಮಾ! ಹೂವಿನಂತೆ ಹಗುರವಾದ ದೋಣಿಗಳಿಂದ ದಾಟಲು ಯೋಗ್ಯವಾದ ಅಥವಾ ಪುಷ್ಪಮಯ ನಾವೆಯನ್ನು ಹರಿಸುವ ಈ ಮಂದಾಕಿನಿ ನದಿಯ ಪ್ರವಾಹಕ್ಕೆ ವಿಪರೀತ ದಿಶೆಯಲ್ಲಿ ಇದರ ತೀರದಲ್ಲೇ ನಡೆದುಹೋದರೆ ಅಲ್ಲಿಗೆ ತಲುಪುವಿರಿ.॥37॥
ಮೂಲಮ್ - 38
ಏಷ ಪಂಥಾ ನರವ್ಯಾಘ್ರ ಮುಹೂರ್ತಂ ಪಶ್ಯ ತಾತ ಮಾಮ್ ।
ಯಾವಜ್ಜಹಾಮಿ ಗಾತ್ರಾಣಿ ಜೀರ್ಣಾಂ ತ್ವಚಮಿವೋರಗಃ ॥
ಅನುವಾದ
ನರಶ್ರೇಷ್ಠನೇ! ಇದೇ ಆ ದಾರಿಯಾಗಿದೆ. ಆದರೆ ಅಯ್ಯಾ! ಮುಹೂರ್ತಕಾಲ ಇಲ್ಲೇ ಇರು ಹಾಗೂ ಪೊರೆಯನ್ನು ಬಿಡುವ ಸರ್ಪದಂತೆ ನಾನು ನನ್ನ ಈ ಜೀರ್ಣವಾದ ಶರೀರವನ್ನು ತ್ಯಜಿಸುವೆನು. ಅಲ್ಲಿಯವರೆಗೆ ನನ್ನನ್ನೇ ನೋಡುತ್ತಿರು.॥38॥
ಮೂಲಮ್ - 39
ತತೋಽಗ್ನಿಂ ಸ ಸಮಾಧಾಯ ಹುತ್ವಾ ಚಾಜ್ಯೇನ ಮಂತ್ರವತ್ ।
ಶರಭಂಗೋ ಮಹಾತೇಜಾಃ ಪ್ರವಿವೇಶ ಹುತಾಶನಮ್ ॥
ಅನುವಾದ
ಹೀಗೆ ಹೇಳಿ ಮಹಾತೇಜಸ್ವೀ ಶರಭಂಗ ಮುನಿಯು ವಿಧಿವತ್ತಾಗಿ ಅಗ್ನಿಯನ್ನು ಸ್ಥಾಪಿಸಿ ಅದನ್ನು ಪ್ರಜ್ವಲಿತಗೊಳಿಸಿ, ಮಂತ್ರೋಚ್ಚಾರಪೂರ್ವಕ ತುಪ್ಪದ ಆಹುತಿಯನ್ನಿತ್ತು ಅವರು ಸ್ವತಃ ಆ ಅಗ್ನಿಯಲ್ಲಿ ಪ್ರವೇಶಿಸಿದರು.॥39॥
ಮೂಲಮ್ - 40
ತಸ್ಯ ರೋಮಾಣಿ ಕೇಶಾಂಶ್ಚ ತದಾ ವಹ್ನಿರ್ಮಹಾತ್ಮನಃ ।
ಜೀರ್ಣಾಂ ತ್ವಚಂ ತಥಾಸ್ಥೀನಿ ಯಚ್ಚ ಮಾಂಸಂ ಚ ಶೋಣಿತಮ್ ॥
ಅನುವಾದ
ಆಗ ಅಗ್ನಿಯು ಆ ಮಹಾತ್ಮನ ರೋಮ, ಕೇಶ, ಜೀರ್ಣತ್ವಚೆ, ಅಸ್ತಿ, ಮಾಂಸ ಮತ್ತು ರಕ್ತ ಎಲ್ಲವನ್ನೂ ಸುಟ್ಟು ಭಸ್ಮವಾಗಿಸಿತು.॥40॥
ಮೂಲಮ್ - 41
ಸ ಚ ಪಾವಕಸಂಕಾಶಃ ಕುಮಾರಃ ಸಮಪದ್ಯತ ।
ಉತ್ಥಾಯಾಗ್ನಿಚಯಾತ್ತಸ್ಮಾಚ್ಛರಭಂಗೋ ವ್ಯರೋಚತ ॥
ಅನುವಾದ
ಆ ಶರಭಂಗಮುನಿಯು ಅಗ್ನಿತುಲ್ಯ ತೇಜಸ್ವೀ ಕುಮಾರ ರೂಪದಲ್ಲಿ ಪ್ರಕಟವಾದರು ಮತ್ತು ಆ ಅಗ್ನಿರಾಶಿಯಿಂದ ಮೇಲಕ್ಕೆದ್ದು ಬಹಳ ಶೋಭಿಸತೊಡಗಿದರು.॥41॥
ಮೂಲಮ್ - 42
ಸ ಲೋಕಾನಾಹಿತಾಗ್ನೀನಾಮೃಷೀಣಾಂ ಚ ಮಹಾತ್ಮನಾಮ್ ।
ದೇವಾನಾಂ ಚ ವ್ಯತಿಕ್ರಮ್ಯ ಬ್ರಹ್ಮಲೋಕಂ ವ್ಯರೋಹತ ॥
ಅನುವಾದ
ಅವರು ಅಗ್ನಿಹೋತ್ರ ಪುರುಷರ, ಮಹಾತ್ಮಾ ಮುನಿಗಳ, ದೇವತೆಗಳ ಲೋಕಗಳನ್ನೂ ಕೂಡ ದಾಟಿ ಬ್ರಹ್ಮಲೋಕಕ್ಕೆ ತೆರಳಿದರು.॥42॥
ಮೂಲಮ್ - 43
ಸ ಪುಣ್ಯಕರ್ಮಾ ಭುವನೇ ದ್ವಿಜರ್ಷಭಃ
ಪಿತಾಮಹಂ ಸಾನುಚರಂ ದದರ್ಶ ಹ ।
ಪಿತಾಮಹಶ್ಚಾಪಿ ಸಮೀಕ್ಷ್ಯ ತಂ ದ್ವಿಜಂ
ನನಂದ ಸುಸ್ವಾಗತಮಿತ್ಯುವಾಚ ಹ ॥
ಅನುವಾದ
ಪುಣ್ಯಕರ್ಮ ಮಾಡುವ ದ್ವಿಜಶ್ರೇಷ್ಠ ಶರಭಂಗರು ಬ್ರಹ್ಮ ಲೋಕದಲ್ಲಿ ಪಾರ್ಷದರ ಸಹಿತ ಪಿತಾಮಹ ಬ್ರಹ್ಮದೇವರನ್ನು ದರ್ಶಿಸಿದರು. ಬ್ರಹ್ಮದೇವರೂ ಕೂಡ ಆ ಬ್ರಹ್ಮರ್ಷಿಯನ್ನು ನೋಡಿ ಬಹಳ ಸಂತೋಷಗೊಂಡರು ಹಾಗೂ ಮಹಾಮುನೇ! ನಿಮಗೆ ಶುಭ ಸ್ವಾಗತವು ಎಂದು ಹೇಳಿದರು.॥43॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಐದನೆಯ ಸರ್ಗ ಸಂಪೂರ್ಣವಾಯಿತು.॥5॥