वाचनम्
ಭಾಗಸೂಚನಾ
ಶ್ರೀರಾಮ-ಲಕ್ಷ್ಮಣರಿಂದ ವಿರಾಧನ ವಧೆ
ಮೂಲಮ್ - 1
ಹ್ರಿಯಮಾಣೌ ತು ಕಾಕುತ್ಸ್ಥೌ ದೃಷ್ಟ್ವಾ ಸೀತಾ ರಘೂತ್ತಮೌ ।
ಉಚ್ಚೈಃಸ್ವರೇಣ ಚುಕ್ರೋಶಪ್ರಗೃಹ್ಯ ಸುಮಹಾಭುಜೌ ॥
ಅನುವಾದ
ರಘುಕುಲದ ಶ್ರೇಷ್ಠವೀರರಾದ ಕಾಕುತ್ಸ್ಥ ಕುಲಭೂಷಣ ಶ್ರೀರಾಮ-ಲಕ್ಷ್ಮಣರನ್ನು ರಾಕ್ಷಸನು ಎತ್ತಿಕೊಂಡು ಹೋಗುತ್ತಿರುವುದನ್ನು ಕಂಡು ಸೀತೆಯು ಎರಡೂ ಭುಜಗಳನ್ನೆತ್ತಿ ಜೋರಾಗಿ ಅಳುತ್ತಾ ಕೂಗಿಕೊಂಡಳು.॥1॥
ಮೂಲಮ್ - 2
ಏಷ ದಾಶರಥೀ ರಾಮಃ ಸತ್ಯವಾನ್ ಶೀಲವಾನ್ ಶುಚಿಃ ।
ರಕ್ಷಸಾ ರೌದ್ರ ರೂಪೇಣ ಹ್ರಿಯತೇ ಸಹಲಕ್ಷ್ಮಣಃ ॥
ಅನುವಾದ
ಅಯ್ಯೋ! ಈ ಸತ್ಯವಾದೀ, ಶೀಲವಂತ, ಶುದ್ಧ ಆಚಾರ ವಿಚಾರವುಳ್ಳ ದಶರಥನಂದನ ಶ್ರೀರಾಮ ಮತ್ತು ಲಕ್ಷ್ಮಣರನ್ನು ಈ ರೌದ್ರರೂಪಧಾರೀ ರಾಕ್ಷಸನು ಎತ್ತಿಕೊಂಡು ಹೋಗುತ್ತಿದ್ದಾನಲ್ಲ.॥2॥
ಮೂಲಮ್ - 3
ಮಾಮೃಕ್ಷಾ ಭಕ್ಷಯಿಷ್ಯಂತಿ ಶಾರ್ದೂಲ ದ್ವೀಪಿನಸ್ತಥಾ ।
ಮಾಂ ಹರೋತ್ಸೃಜ್ಯ ಕಾಕುತ್ಸ್ಥೌ ನಮಸ್ತೇ ರಾಕ್ಷಸೋತ್ತಮ ॥
ಅನುವಾದ
ರಾಕ್ಷಸ ಶಿರೋಮಣಿಯೇ! ನಿನಗೆ ನಮಸ್ಕರಿಸುತ್ತೇನೆ. ಈ ಕಾಡಿನಲ್ಲಿ ಕರಡಿ, ಹುಲಿ, ಚಿರತೆಗಳು ನನ್ನನ್ನು ತಿಂದು ಬಿಡುವವು; ಅದಕ್ಕಾಗಿ ನನ್ನನ್ನೂ ಕರೆದುಕೊಂಡು ಹೋಗು. ಆದರೆ ಈ ಇಬ್ಬರೂ ರಘುವಂಶವೀರರನ್ನು ಬಿಟ್ಟುಬಿಡು.॥3॥
ಮೂಲಮ್ - 4
ತಸ್ಯಾಸ್ತದ್ವಚನಂ ಶ್ರುತ್ವಾ ವೈದೇಹ್ಯಾ ರಾಮಲಕ್ಷ್ಮಣೌ ।
ವೇಗಂ ಪ್ರಚಕ್ರತುರ್ವೀರೌ ವಧೇ ತಸ್ಯ ದುರಾತ್ಮನಃ ॥
ಅನುವಾದ
ವಿದೇಹನಂದಿನೀ ಸೀತೆಯ ಈ ಮಾತನ್ನು ಕೇಳಿ ಇಬ್ಬರೂ ವೀರ ಶ್ರೀರಾಮ-ಲಕ್ಷ್ಮಣರು ಆ ದುರಾತ್ಮ ರಾಕ್ಷಸನನ್ನು ವಧಿಸಲು ಅವಸರಪಡತೊಡಗಿದರು.॥4॥
ಮೂಲಮ್ - 5
ತಸ್ಯ ರೌದ್ರಸ್ಯ ಸೌಮಿತ್ರಿಃ ಸವ್ಯಂ ಬಾಹುಂ ಬಭಂಜ ಹ ।
ರಾಮಸ್ತು ದಕ್ಷಿಣಂ ಬಾಹುಂ ತರಸಾ ತಸ್ಯ ರಕ್ಷಸಃ ॥
ಅನುವಾದ
ಸುಮಿತ್ರಾಕುವಾರ ಲಕ್ಷ್ಮಣನು ಆ ರಾಕ್ಷಸನ ಎಡ ತೋಳನ್ನು ಮತ್ತು ಶ್ರೀರಾಮನು ಬಲತೋಳನ್ನು ವೇಗವಾಗಿ ಕತ್ತರಿಸಿಬಿಟ್ಟರು.॥5॥
ಮೂಲಮ್ - 6
ಸ ಭಗ್ನಬಾಹುಃ ಸಂವಿಗ್ನಃ ಪಪಾತಾಶು ವಿಮೂರ್ಛಿತಃ ।
ಧರಣ್ಯಾಂ ಮೇಘಸಂಕಾಶೋ ವಜ್ರಭಿನ್ನ ಇವಾಚಲಃ ॥
ಅನುವಾದ
ಭುಜಗಳು ತುಂಡಾದಾಗ ಆ ಮೇಘದಂತಿದ್ದ ಕಪ್ಪಾದ ರಾಕ್ಷಸನು ವ್ಯಾಕುಲನಾದನು ಮತ್ತು ಕೂಡಲೇ ಮೂರ್ಛಿತನಾಗಿ ವಜ್ರದಿಂದ ಕಡಿದ ಪರ್ವತ ಶಿಖರದಂತೆ ಭೂಮಿಗೆ ಬಿದ್ದುಬಿಟ್ಟನು.॥6॥
ಮೂಲಮ್ - 7
ಮುಷ್ಟಿ ಭಿರ್ಬಾಹುಭಿಃ ಪದ್ಭಿಃ ಸೂದಯಂತೌ ತು ರಾಕ್ಷಸಮ್ ।
ಉದ್ಯಮ್ಯೋದ್ಯಮ್ಯ ಚಾಪ್ಯೇನಂ ಸ್ಥಂಡಿಲೇ ನಿಷ್ಪಿಪೇಷತುಃ ॥
ಅನುವಾದ
ಆಗ ಶ್ರೀರಾಮ-ಲಕ್ಷ್ಮಣರು ವಿರಾಧನನ್ನು ಮುಷ್ಟಿಗಳಿಂದ, ಬಳ್ಳಿಗಳಿಂದ ಹೊಡೆಯತೊಡಗಿದರು. ಹಾಗೂ ಅವನನ್ನು ಎತ್ತಿ-ಎತ್ತಿ ಭೂಮಿಗೆ ಅಪ್ಪಳಿಸುತ್ತಾ, ಪದೇ-ಪದೇ ನೆಲಕ್ಕೆ ಹಾಕಿ ತೀಡಿದರು.॥7॥
ಮೂಲಮ್ - 8
ಸ ವಿದ್ಧೌ ಬಹುಭಿರ್ಬಾಣೈಃ ಖಡ್ಗಾಭ್ಯಾಂ ಚ ಪರಿಕ್ಷತಃ ।
ನಿಷ್ಪಿಷ್ಟೋ ಬಹುಧಾ ಭೂಮೌ ನ ಮಮಾರ ಸ ರಾಕ್ಷಸಃ॥
ಅನುವಾದ
ಅಸಂಖ್ಯ ಬಾಣಗಳಿಂದ ಗಾಯಗೊಂಡರೂ, ಖಡ್ಗದಿಂದ ಕ್ಷತ-ವಿಕ್ಷತನಾದರೂ, ನೆಲಕ್ಕೆ ಹಾಕಿ ಪದೆ ಪದೇ ತಿಕ್ಕಿದರೂ ಆ ರಾಕ್ಷಸನು ಸಾಯಲಿಲ್ಲ.॥8॥
ಮೂಲಮ್ - 9
ತಂ ಪ್ರೇಕ್ಷ್ಯ ರಾಮಃ ಸುಭೃಶಮವಧ್ಯಮಚಲೋಪಮಮ್ ।
ಭಯೇಷ್ವ ಭಯದಃ ಶ್ರೀಮಾನಿದಂ ವಚನಮಬ್ರವೀತ್ ॥
ಅನುವಾದ
ಪರ್ವತದಂತೆ ಅಚಲ ಮತ್ತು ಅವಧ್ಯನಾದ ವಿರಾಧನನ್ನು ಮತ್ತೆ ಮತ್ತೆ ನೋಡುತ್ತಾ ಭಯದ ಸಂದರ್ಭದಲ್ಲಿ ಅಭಯವನ್ನು ಕೊಡುವ ಶ್ರೀಮಾನ್ ರಾಮನು ಲಕ್ಷ್ಮಣನಲ್ಲಿ ಹೀಗೆ ಹೇಳಿದನು.॥9॥
ಮೂಲಮ್ - 10
ತಪಸಾ ಪುರುಷವ್ಯಾಘ್ರ ರಾಕ್ಷಸೋಽಯಂ ನ ಶಕ್ಯತೇ ।
ಶಸ್ತ್ರೇಣ ಯುಧಿ ನಿರ್ಜೇತುಂ ರಾಕ್ಷಸಂ ನಿಖನಾವಹೇ ॥
ಅನುವಾದ
ಪುರುಷಸಿಂಹನೇ! ಈ ರಾಕ್ಷಸನು ತಪಸ್ಸಿನಿಂದ ವರ ಪಡೆದು ಅವಧ್ಯನಾಗಿರುವನು. ಇವನನ್ನು ಶಸ್ತ್ರಗಳಿಂದ ಯುದ್ಧದಲ್ಲಿ ಗೆಲ್ಲಲಾಗುವುದಿಲ್ಲ. ಅದಕ್ಕಾಗಿ ನಾವು ನಿಶಾಚರ ವಿರಾಧನನ್ನು ಪರಾಜಿತನಾಗಿಸಲು ಈಗ ಹೊಂಡ ಅಗೆದು ಹೂತುಬಿಡೋಣ.॥10॥
ಮೂಲಮ್ - 11
ಕುಂಜ ರಸ್ಯೇವ ರೌದ್ರಸ್ಯ ರಾಕ್ಷಸಸ್ಯಾಸ್ಯ ಲಕ್ಷ್ಮಣ ।
ವನೇಽಸ್ಮಿನ್ ಸುಮಹಚ್ಛವಭ್ರಂ ಖನ್ಯತಾಂ ರೌದ್ರವರ್ಚಸಃ ॥
ಅನುವಾದ
ಲಕ್ಷ್ಮಣ! ಆನೆಯಂತಿರುವ ಭಯಂಕರ ಹಾಗೂ ರೌದ್ರ ತೇಜಸುಳ್ಳ ಈ ರಾಕ್ಷಸನಿಗಾಗಿ ಈ ವನದಲ್ಲಿ ದೊಡ್ಡದಾದ ಹೊಂಡವನ್ನು ಅಗ.॥11॥
ಮೂಲಮ್ - 12
ಇತ್ಯುಕ್ತ್ವಾ ಲಕ್ಷ್ಮಣಂ ರಾಮಃ ಪ್ರದರಃ ಖನ್ಯತಾಮಿತಿ ।
ತಸ್ಥೌ ವಿರಾಧಮಾಕ್ರಮ್ಯ ಕಂಠೇ ಪಾದೇನ ವೀರ್ಯವಾನ್ ॥
ಅನುವಾದ
ಈ ಪ್ರಕಾರ ಲಕ್ಷ್ಮಣನಿಗೆ ಹೊಂಡ ಅಗೆಯಲು ಆಜ್ಞಾಪಿಸಿ ಪರಾಕ್ರಮಿ ಶ್ರೀರಾಮನು ತನ್ನ ಒಂದು ಕಾಲಿನಿಂದ ವಿರಾಧನ ಗಂಟಲನ್ನು ಒತ್ತಿ ನಿಂತುಕೊಂಡನು.॥12॥
ಮೂಲಮ್ - 13
ತಚ್ಛ್ರುತ್ವಾ ರಾಘವೇಣೋಕ್ತಂ ರಾಕ್ಷಸಃ ಪ್ರಶ್ರಿತಂ ವಚಃ ।
ಇದಂ ಪ್ರೋವಾಚ ಕಾಕುತ್ಸ್ಥಂ ವಿರಾಧಃ ಪುರುಷರ್ಷಭಮ್ ॥
ಅನುವಾದ
ಶ್ರೀರಾಮಚಂದ್ರನು ಹೇಳಿದ ಮಾತನ್ನು ಕೇಳಿ ವಿರಾಧ ರಾಕ್ಷಸನು ಪುರುಷಪ್ರವರ ಶ್ರೀರಾಮನಲ್ಲಿ ವಿನಯದಿಂದ ಹೀಗೆ ಹೇಳಿದನು.॥13॥
ಮೂಲಮ್ - 14
ಹತೋಽಹಂ ಪುರುಷವ್ಯಾಘ್ರ ಶಕ್ರತುಲ್ಯಬಲೇನ ವೈ ।
ಮಯಾ ತು ಪೂರ್ವಂ ತ್ವಂ ಮೋಹಾನ್ನ ಜ್ಞಾತಃ ಪುರುಷರ್ಷಭ ॥
ಅನುವಾದ
ಪುರುಷಸಿಂಹನೇ! ನರಶ್ರೇಷ್ಠನೇ! ನಿನ್ನ ಬಲವು ದೇವರಾಜ ಇಂದ್ರನಂತೆ ಇದೆ. ನಾನು ನಿನ್ನ ಕೈಯಿಂದ ಹತನಾದೆ. ಮೋಹವಶದಿಂದ ಮೊದಲು ನಾನು ನಿನ್ನನ್ನು ಗುರುತಿಸದೇ ಹೋದೆ.॥14॥
ಮೂಲಮ್ - 15
ಕೌಸಲ್ಯಾ ಸುಪ್ರಜಾಸ್ತಾತ ರಾಮಸ್ತ್ವಂ ವಿದಿತೋ ಮಯಾ ।
ವೈದೇಹೀ ಚ ಮಹಾಭಾಗಾ ಲಕ್ಷ್ಮಣಶ್ಚ ಮಹಾಯಶಾಃ॥
ಅನುವಾದ
ಅಯ್ಯಾ! ನಿನ್ನಿಂದಾಗಿ ತಾಯಿ ಕೌಸಲ್ಯೆಯು ಉತ್ತಮ ಪುತ್ರವತಿಯಾದಳು. ನೀನೇ ಭಗವಂತ ಶ್ರೀರಾಮಚಂದ್ರ ನಾಗಿರುವುದನ್ನು ನಾನು ತಿಳಿದುಕೊಂಡೆ. ಈ ಮಹಾಭಾಗಾ ವಿದೇಹನಂದಿನೀ ಸೀತೆಯಾಗಿರುವಳು ಮತ್ತು ನಿನ್ನ ತಮ್ಮ ಮಹಾಯಶಸ್ವೀ ಲಕ್ಷ್ಮಣನಾಗಿರುವನು.॥15॥
ಮೂಲಮ್ - 16
ಅಭಿಶಾಪಾದಹಂ ಘೋರಾಂ ಪ್ರವಿಷ್ಟೋ ರಾಕ್ಷಸೀಂ ತನುಮ್ ।
ತುಂಬುರುರ್ನಾಮ ಗಂಧರ್ವಃ ತಪ್ತೋ ವೈಶ್ರವಣೇನ ಹಿ ॥
ಅನುವಾದ
ಶಾಪದಿಂದಾಗಿ ನನಗೆ ಈ ಭಯಂಕರ ರಾಕ್ಷಸ ಶರೀರದಲ್ಲಿ ಬರಬೇಕಾಯಿತು. ನಾನು ತುಂಬುರು ಎಂಬ ಗಂಧರ್ವನಾಗಿದ್ದೇನೆ. ಕುಬೇರನು ನನಗೆ ರಾಕ್ಷಸನಾಗುವಂತೆ ಶಪಿಸಿದ್ದನು.॥16॥
ಮೂಲಮ್ - 17½
ಪ್ರಸಾದ್ಯಮಾನಶ್ಚ ಮಯಾ ಸೋಽಬ್ರವೀನ್ಮಾಂ ಮಹಾಯಶಾಃ ।
ಯದಾ ದಾಶರಥೀ ರಾಮಸ್ತ್ವಾಂ ವಧಿಷ್ಯತಿ ಸಂಯುಗೇ ॥
ತದಾ ಪ್ರಕೃತಿಮಾಪನ್ನೋ ಭವಾನ್ ಸ್ವರ್ಗಂ ಗಮಿಷ್ಯತಿ ।
ಅನುವಾದ
ನಾನು ಅವನನ್ನು ಪ್ರಸನ್ನಗೊಳಿಸಲು ಪ್ರಯತ್ನಿಸಿದಾಗ ಆ ಮಹಾಯಶಸ್ವೀ ಕುಬೇರನು ‘ಗಂಧರ್ವನೇ! ದಶರಥನಂದನ ಶ್ರೀರಾಮನು ಯುದ್ಧದಲ್ಲಿ ನಿನ್ನನ್ನು ವಧಿಸಿದಾಗ ನೀನು ತನ್ನ ಮೊದಲಿನ ಸ್ವರೂಪವನ್ನು ಪಡೆದು ಸ್ವರ್ಗಕ್ಕೆ ಹೋಗುವೆ.’ ಎಂದು ನನಗೆ ಹೇಳಿದ್ದನು.॥17॥
ಮೂಲಮ್ - 18½
ಅನುಪಸ್ಥೀಯಮಾನೋ ಮಾಂ ಸ ಕ್ರುದ್ಧೋ ವ್ಯಾಜಹಾರ ಹ ॥
ಇತಿ ವೈಶ್ರವಣೋ ರಾಜಾ ರಂಭಾಸಕ್ತಮುವಾಚ ಹ ।
ಅನುವಾದ
ನಾನು ರಂಭೆ ಎಂಬ ಅಪ್ಸರೆಯಲ್ಲಿ ಆಸಕ್ತನಾಗಿದ್ದೆ, ಆದ್ದರಿಂದ ಒಂದು ದಿನ ಸರಿಯಾದ ಸಮಯಕ್ಕೆ ಕುಬೇರನ ಸೇವೆಯಲ್ಲಿ ಉಪಸ್ಥಿತನಾಗಲಿಲ್ಲ. ಇದರಿಂದ ಕುಪಿತನಾಗಿ ರಾಜಾ ಮೈಶ್ರವಣ (ಕುಬೇರ)ನು ನನಗೆ ರಾಕ್ಷಸನಾಗೆಂದು ಶಪಿಸಿ, ಅದರಿಂದ ಬಿಡುಗಡೆ ಹೊಂದುವ ಅವಧಿಯನ್ನು ತಿಳಿಸಿದ್ದನು.॥18॥
ಮೂಲಮ್ - 19½
ತವ ಪ್ರಸಾದಾನ್ಮುಕ್ತೋಽಹಮಭಿಶಾಪಾತ್ ಸುದಾರುಣಾತ್ ॥
ಭುವನಂ ಸ್ವಂ ಗಮಿಷ್ಯಾಮಿ ಸ್ವಸ್ತಿ ವೋಽಸ್ತು ಪರಂತಪ ।
ಅನುವಾದ
ಪರಂತಪ ರಘುವೀರನೇ! ಇಂದು ನಿನ್ನ ಕಪೆಯಿಂದ ನಾನು ಆ ಭಯಂಕರ ಶಾಪದಿಂದ ಬಿಡುಗಡೆ ಹೊಂದಿದೆ. ನಿನಗೆ ಮಂಗಳವಾಗಲೀ, ಈಗ ನಾನು ನನ್ನ ಲೋಕಕ್ಕೆ ತೆರಳುವೆನು.॥19॥
ಮೂಲಮ್ - 20
ಇತೋ ವಸತಿ ಧರ್ಮಾತ್ಮಾ ಶರಭಂಗಃ ಪ್ರತಾಪವಾನ್ ॥
ಮೂಲಮ್ - 21
ಅಧ್ಯರ್ಧಯೋಜನೇ ತಾತ ಮಹರ್ಷಿಃ ಸೂರ್ಯಸಂನಿಭಃ ।
ತಂ ಕ್ಷಿಪ್ರಮಭಿಗಚ್ಛ ತ್ವಂ ಸ ತೇ ಶ್ರೋಯೋಽಭಿಧಾಸ್ಯತಿ ॥
ಅನುವಾದ
ಅಯ್ಯಾ! ಇಲ್ಲಿಂದ ಒಂದೂವರೆ ಯೋಜನ ದೂರದಲ್ಲಿ ಸೂರ್ಯನಂತೆ ತೇಜಸ್ವೀ, ಪ್ರತಾಪೀ ಮತ್ತು ಧರ್ಮಾತ್ಮಾ ಮಹಾಮುನಿ ಶರಭಂಗರು ವಾಸಿಸುತ್ತಾರೆ. ಅವರ ಬಳಿಗೆ ಬೇಗನೆ ಹೋಗು, ಅವರು ನಿನಗೆ ಶ್ರೇಯಸ್ಸಿನ ಮಾತನ್ನು ಹೇಳುವರು.॥20-21॥
ಮೂಲಮ್ - 22
ಅವಟೇ ಚಾಪಿ ಮಾಂ ರಾಮ ನಿಕ್ಷಿಪ್ಯ ಕುಶಲೀ ವ್ರಜ ।
ರಕ್ಷಸಾಂ ಗತಸತ್ತ್ವಾನಾಮೇಷ ಧರ್ಮಃ ಸನಾತನಃ ॥
ಅನುವಾದ
ಶ್ರೀರಾಮಾ! ನೀವು ನನ್ನ ಶರೀರವನ್ನು ಹೊಂಡದಲ್ಲಿ ಹೂತಿಟ್ಟು ನೆಮ್ಮದಿಯಿಂದ ಪ್ರಯಾಣ ಮಾಡಿರಿ. ಸತ್ತಿರುವ ರಾಕ್ಷಸರ ಶರೀರವನ್ನು ಹೂಳುವುದೇ ಸನಾತನ (ಪರಂಪರಾಗತ) ಧರ್ಮವಾಗಿದೆ.॥22॥
ಮೂಲಮ್ - 23½
ಅವಟೇ ಯೇ ನಿಧೀಯಂತೇ ತೇಷಾಂ ಲೋಕಾಃ ಸನಾತನಾಃ ।
ಏವಮುಕ್ತ್ವಾ ತು ಕಾಕುತ್ಸ್ಥಂ ವಿರಾಧಃ ಶರಪೀಡಿತಃ ॥
ಬಭೂವ ಸ್ವರ್ಗಸಂಪ್ರಾಪ್ತೋ ನ್ಯಸ್ತ ದೇಹೋ ಮಹಾಬಲಃ ।
ಅನುವಾದ
ಹೊಂಡದಲ್ಲಿ ಹೂತಿರುವ ರಾಕ್ಷಸನಿಗೆ ಸನಾತನ ಲೋಕಗಳ ಪ್ರಾಪ್ತಿಯಾಗುತ್ತದೆ. ಶ್ರೀರಾಮನಲ್ಲಿ ಹೀಗೆ ಹೇಳಿ ಬಾಣಗಳಿಂದ ಪೀಡಿತನಾದ ಮಹಾಬಲಿ ವಿರಾಧನು (ಅವನ ಶರೀರವನ್ನು ಹೊಂಡದಲ್ಲಿ ಹಾಕಿದಾಗ) ಆ ಶರೀರವನ್ನು ಬಿಟ್ಟು ಸ್ವರ್ಗಲೋಕಕ್ಕೆ ಹೊರಟುಹೋದನು.॥23॥
ಮೂಲಮ್ - 24
ತಚ್ಛ್ರುತ್ವಾ ರಾಘವೋ ವಾಕ್ಯಂ ಲಕ್ಷ್ಮಣಂ ವ್ಯಾದಿದೇಶ ಹ ॥
ಮೂಲಮ್ - 25
ಕುಂಜರಸ್ಯೇವ ರೌದ್ರಸ್ಯ ರಾಕ್ಷಸಸ್ಯಾಸ್ಯ ಲಕ್ಷ್ಮಣ ।
ವನೇಽಸ್ಮಿನ್ ಸುಮಹಾನ್ ಶ್ವಭ್ರಃ ಖನ್ಯತಾಂ ರೌದ್ರ ಕರ್ಮಣಃ ॥
ಅನುವಾದ
ಅವನ ಮಾತನ್ನು ಕೇಳಿ ಶ್ರೀರಘುನಾಥನು ಲಕ್ಷ್ಮಣನಿಗೆ - ಲಕ್ಷ್ಮಣಾ! ಭಯಂಕರ ಕರ್ಮಮಾಡುವ, ಆನೆಯಂತೆ ಭಯಾನಕ ಈ ರಾಕ್ಷಸನಿಗೆ ಹೊಂಡವನ್ನು ಅಗೆದು ಸಿದ್ಧಗೊಳಿಸು ಎಂದು ಆಜ್ಞಾಪಿಸಿದನು.॥24-25॥
ಮೂಲಮ್ - 26
ಇತ್ಯುಕ್ತ್ವಾ ಲಕ್ಷ್ಮಣಂ ರಾಮಃ ಪ್ರದರಃ ಖನ್ಯತಾಮಿತಿ ।
ತಸ್ಥೌ ವಿರಾಧಮಾಕ್ರಮ್ಯ ಕಂಠೇ ಪಾದೇನ ವೀರ್ಯವಾನ್ ॥
ಅನುವಾದ
ಈ ಪ್ರಕಾರ ಲಕ್ಷ್ಮಣನಿಗೆ ಹೊಂಡವನ್ನು ಅಗೆಯಲು ಆದೇಶವನ್ನಿತ್ತು, ಪರಾಕ್ರಮಿ ಶ್ರೀರಾಮನು ಒಂದು ಕಾಲಿನಿಂದ ವಿರಾಧನ ಕತ್ತನ್ನು ಒತ್ತಿಹಿಡಿದು ನಿಂತುಕೊಂಡನು.॥26॥
ಮೂಲಮ್ - 27
ತತಃ ಖನಿತ್ರಮಾದಾಯ ಲಕ್ಷ್ಮಣಃ ಶ್ವಭ್ರಮುತ್ತಮಮ್ ।
ಅಖನತ್ ಪ್ಪಾರ್ಶ್ವತಸ್ತಸ್ಯ ವಿರಾಧಸ್ಯ ಮಹಾತ್ಮನಃ ॥
ಅನುವಾದ
ಆಗ ಲಕ್ಷ್ಮಣನು ಗುದ್ದಲಿಯನ್ನೆತ್ತಿಕೊಂಡು ಆ ವಿಶಾಲಕಾಯ ವಿರಾಧನ ಬಳಿಯಲ್ಲೇ ಒಂದು ದೊಡ್ಡದಾದ ಹೊಂಡವನ್ನು ಅಗೆದು ಸಿದ್ಧಗೊಳಿಸಿದನು.॥27॥
ಮೂಲಮ್ - 28
ತಂ ಮುಕ್ತಕಂಠ ಮುತ್ ಕ್ಷಿಷ್ಯ ಶಂಕುಕರ್ಣಂ ಮಹಾಸ್ವನಮ್ ।
ವಿರಾಧಂ ಪ್ರಾಕ್ಷಿಪಚ್ಛ್ವಭ್ರೇ ನದಂತಂ ಭೈರವಸ್ವನಮ್ ॥
ಅನುವಾದ
ಆಗ ಶ್ರೀರಾಮನು ಅವನ ಕತ್ತನ್ನು ಬಿಟ್ಟುಬಿಟ್ಟನು. ಲಕ್ಷ್ಮಣನು ಗೂಟದಂತೆ ಕಿವಿಗಳುಳ್ಳ ವಿರಾಧನನ್ನು ಎತ್ತಿ ಆ ಹೊಂಡದಲ್ಲಿ ಹಾಕಿದನು, ಆಗ ಅವನು ಭಯಾನಕ ಶಬ್ದದಿಂದ ಜೋರಾಗಿ ಗರ್ಜಿಸುತ್ತಿದ್ದನು.॥28॥
ಮೂಲಮ್ - 29
ತಮಾಹವೇ ದಾರುಣಮಾಶುವಿಕ್ರಮೌ
ಸ್ಥಿರಾವುಭೌ ಸಂಯತಿ ರಾಮಲಕ್ಷ್ಮಣೌ ।
ಮುದಾನ್ವಿತೌ ಚಿಕ್ಷಿಪತುರ್ಭಯಾವಹಂ
ನದಂತಮುತ್ಕ್ಷಿಪ್ಯ ಬಲೇನ ರಾಕ್ಷಸಮ್ ॥
ಅನುವಾದ
ಯುದ್ಧದಲ್ಲಿ ಸ್ಥಿರವಾಗಿ ನಿಂತು ಪರಾಕ್ರಮವನ್ನು ಪ್ರಕಟಿಸುವ ಆ ಇಬ್ಬರು ಸಹೋದರ ಶ್ರೀರಾಮ - ಲಕ್ಷ್ಮಣರು ರಣಭೂಮಿಯಲ್ಲಿ ಕ್ರೂರ ಕರ್ಮ ಮಾಡುವ ಆ ಭಯಂಕರ ರಾಕ್ಷಸ ವಿರಾಧನನ್ನು ಬಲವಂತ ವಾಗಿ ಎತ್ತಿ ಹೊಂಡದಲ್ಲಿ ಎಸೆದುಬಿಟ್ಟರು. ಅವನು ಜೋರಾಗಿ ಗರ್ಜಿಸುತ್ತಿದ್ದನು. ಅವನನ್ನು ಹೊಂಡಕ್ಕೆ ಹಾಕಿ ಇಬ್ಬರೂ ಸಹೋದರರು ಬಹಳ ಪ್ರಸನ್ನರಾದರು.॥29॥
ಮೂಲಮ್ - 30
ಅವಧ್ಯತಾಂ ಪ್ರೇಕ್ಷ್ಯ ಮಹಾಸುರಸ್ಯ ತೌ
ಶಿತೇನ ಶಸ್ತ್ರೇಣ ತದಾ ನರರ್ಷಭೌ ।
ಸಮರ್ಥ್ಯ ಚಾತ್ಯರ್ಥವಿಶಾರದಾವುಭೌ
ಬಿಲೇ ವಿರಾಧಸ್ಯ ವಧಂ ಪ್ರಚಕ್ರತುಃ॥
ಅನುವಾದ
ಮಹಾ ಅಸುರ ವಿರಾಧನ ವಧೆ ಹರಿತವಾದ ಶಸ್ತ್ರದಿಂದ ಆಗಬಾರದೆಂದು ನೋಡಿ ಅತ್ಯಂತ ಕುಶಲರಾದ ಇಬ್ಬರೂ ಸಹೋದರ ನರಶ್ರೇಷ್ಠ ಶ್ರೀರಾಮ-ಲಕ್ಷ್ಮಣರು ಆಗ ಹೊಂಡ ಅಗೆದು ಅದರಲ್ಲಿ ಅವನನ್ನು ಹಾಕಿ ಬಿಟ್ಟರು ಮತ್ತು ಮಣ್ಣು ಮುಚ್ಚಿ ಆ ರಾಕ್ಷಸನ ವಧೆ ಮಾಡಿದರು.॥30॥
ಮೂಲಮ್ - 31
ಸ್ವಯಂ ವಿರಾಧೇನ ಹಿ ಮೃತ್ಯುರಾತ್ಮನಃ
ಪ್ರಸಹ್ಯ ರಾಮೇಣ ಯಥಾರ್ಥಮೀಪ್ಸಿತಃ ।
ನಿವೇದಿತಃ ಕಾನನಚಾರಿಣಾ ಸ್ವಯಂ
ನ ಮೇ ವಧಃ ಶಸ್ತ್ರ ಕೃತೋ ಭವೇದಿತಿ ॥
ಅನುವಾದ
ವಾಸ್ತವವಾಗಿ ಶ್ರೀರಾಮನ ಕೈಯಿಂದಲೇ ಹಟಪೂರ್ವಕವಾಗಿ ಸಾಯುವುದೇ ಅವನಿಗೆ ಅಭಿಷ್ಟವಾಗಿತ್ತು. ಆ ತನ್ನ ಮನೋವಾಂಛಿತ ಮೃತ್ಯುವನ್ನು ಪಡೆಯುವ ಉದ್ದೇಶದಿಂದ ವನಚಾರೀ ವಿರಾಧನೇ ಶ್ರೀರಾಮನಲ್ಲಿ - ‘ಶಸ್ತ್ರದಿಂದ ನನ್ನ ವಧೆ ಆಗಲಾರದೆಂದು’ ಎಂದು ಸ್ವತಃ ಹೇಳಿದ್ದನು.॥31॥
ಮೂಲಮ್ - 32
ತದೇವ ರಾಮೇಣ ನಿಶಮ್ಯ ಭಾಷಿತಂ
ಕೃತಾ ಮತಿಸ್ತಸ್ಯ ಬಿಲಪ್ರವೇಶನೇ ।
ಬಿಲಂ ಚ ತೇನಾತಿಬಲೇನ ರಕ್ಷಸಾ
ಪ್ರವೇಶ್ಯಮಾನೇನ ವನಂ ವಿನಾದಿತಮ್ ॥
ಅನುವಾದ
ಅವನು ಹೇಳಿದ ಮಾತನ್ನು ಕೇಳಿ ಶ್ರೀರಾಮನು ಅವನನ್ನು ಹೊಂಡದಲ್ಲಿ ಹೂತುಬಿಡುವ ವಿಚಾರ ಮಾಡಿದ್ದನು. ಅವನನ್ನು ಹೊಂಡದಲ್ಲಿ ಹಾಕುವಾಗ ಆ ಅತ್ಯಂತ ಬಲವಂತ ರಾಕ್ಷಸನು ತನ್ನ ಬೊಬ್ಬೆಯಿಂದ ಇಡೀ ಕಾಡೇ ಪ್ರತಿಧ್ವನಿಸುವಂತೆ ಮಾಡಿದನು.॥32॥
ಮೂಲಮ್ - 33
ಪ್ರಹೃಷ್ಟ ರೂಪಾವಿವ ರಾಮಲಕ್ಷ್ಮಣೌ
ವಿರಾಧಮುರ್ವ್ಯಾಂಪ್ರದರೇ ನಿಪಾತ್ಯ ತಮ್ ।
ನನಂದತುರ್ವೀತಭಯೌ ಮಹಾವನೇ
ಶಿಲಾಭಿರಂತರ್ದಧತುಶ್ಚ ರಾಕ್ಷಸಮ್ ॥
ಅನುವಾದ
ರಾಕ್ಷಸ ವಿರಾಧನನ್ನು ಭೂಮಿಯೊಳಗೆ ಹೊಂಡದಲ್ಲಿ ಬೀಳಿಸಿ ಶ್ರೀರಾಮ-ಲಕ್ಷ್ಮಣರು ಬಹಳ ಸಂತೋಷಗೊಂಡು ಮೇಲಿನಿಂದ ಅನೇಕ ಕಲ್ಲುಗಳನ್ನು ಇಟ್ಟು ಮಣ್ಣುಮುಚ್ಚಿದರು ; ಮತ್ತೆ ಅವರು ನಿರ್ಭಯರಾಗಿ ಆ ಮಹಾವನದಲ್ಲಿ ಆನಂದದಿಂದ ಸಂಚರಿಸತೊಡಗಿದರು.॥33॥
ಮೂಲಮ್ - 34
ತತಸ್ತು ತೌ ಕಾಂಚನಚಿತ್ರಕಾರ್ಮುಕೌ
ನಿಹತ್ಯ ರಕ್ಷಃ ಪರಿಗೃಹ್ಯ ಮೈಥಿಲೀಮ್ ।
ವಿಜಹ್ರತುಸ್ತೌ ಮುದಿತೌ ಮಹಾವನೇ
ದಿವಿ ಸ್ಥಿತೌ ಚಂದ್ರದಿವಾಕರಾವಿವ ॥
ಅನುವಾದ
ಈ ಪ್ರಕಾರ ಆ ರಾಕ್ಷಸನನ್ನು ವಧಿಸಿ, ಮಿಥಿಲೇಶಕುಮಾರಿ ಸೀತೆಯೊಂದಿಗೆ ಚಿನ್ನದಿಂದ ಚಿತ್ರಿತವಾದ ಧನುಸ್ಸುಗಳಿಂದ ಸುಶೋಭಿತರಾಗಿ ಅವರಿಬ್ಬರು ಸಹೊದರರು ಆಕಾಶದಲ್ಲಿ ಸ್ಥಿತ ಸೂರ್ಯ-ಚಂದ್ರರಂತೆ ಆ ಮಹಾರಣ್ಯದಲ್ಲಿ ಆನಂದ ಮಗ್ನರಾಗಿ ಸಂಚರಿಸತೊಡಗಿದರು.॥34॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥4॥