००२ विराधेन सीतापहरणम्

वाचनम्
ಭಾಗಸೂಚನಾ

ಶ್ರೀರಾಮ-ಲಕ್ಷ್ಮಣ ಸೀತೆಯರ ಮೇಲೆ ವಿರಾಧನ ಆಕ್ರಮಣ

ಮೂಲಮ್ - 1

ಕೃತಾತಿಥ್ಯೋಽಥ ರಾಮಸ್ತು ಸೂರ್ಯಸ್ಯೋದಯನಂ ಪ್ರತಿ ।
ಆಮಂತ್ರ್ಯಸ ಮುನೀನ್ಸರ್ವಾನ್ ವನಮೇವಾನ್ವಗಾಹತ ॥

ಅನುವಾದ

ರಾತ್ರಿಯಲ್ಲಿ ಆ ಮಹರ್ಷಿಗಳ ಆತಿಥ್ಯವನ್ನು ಸ್ವೀಕರಿಸಿ ಸೂರ್ಯೋದಯವಾಗುತ್ತಲೇ ಸಮಸ್ತ ಮುನಿಗಳಿಂದ ಬೀಳ್ಕೊಂಡು ಶ್ರೀರಾಮಚಂದ್ರನು ಪುನಃ ಅರಣ್ಯದಲ್ಲಿ ಮುಂದಕ್ಕೆ ನಡೆದನು.॥1॥

ಮೂಲಮ್ - 2

ನಾನಾಮೃಗಗಣಾಕೀರ್ಣಮೃಕ್ಷಶಾರ್ದೂಲಸೇವಿತಮ್ ।
ಧ್ವಸ್ತ ವೃಕ್ಷಲತಾಗುಲ್ಮಂ ದುರ್ದರ್ಶಸಲಿಲಾಶಯಮ್ ॥

ಮೂಲಮ್ - 3

ನಿಷ್ಕೂಜಮಾನಶಕುನಿ ಝಿಲ್ಲಿಕಾಗಣನಾದಿತಮ್ ।
ಲಕ್ಷ್ಮಣಾನುಚರೋ ರಾಮೋ ವನಮಧ್ಯಂ ದದರ್ಶ ಹ ॥

ಅನುವಾದ

ನಡೆದು ಹೋಗುತ್ತಿರುವಾಗ ಲಕ್ಷ್ಮಣ ಸಹಿತ ಶ್ರೀರಾಮನು ಕಾಡಿನ ನಡುಭಾಗಕ್ಕೆ ಬಂದಾಗ ನಾನಾ ಪ್ರಕಾರದ ಮೃಗಗಳಿಂದ ವ್ಯಾಪ್ತವಾದ ಸ್ಥಾನವನ್ನು ನೋಡಿದನು. ಅಲ್ಲಿ ಅನೇಕ ಕರಡಿ, ಹುಲಿಗಳು ಇರುತ್ತಿದ್ದವು. ಅಲ್ಲಿಯ ಮರಗಳು, ಬಳ್ಳಿಗಳು, ಗಿಡಗಳು ನಷ್ಟ-ಭ್ರಷ್ಟವಾಗಿದ್ದವು. ಆ ವನಪ್ರದೇಶದಲ್ಲಿ ಯಾವುದೇ ಜಲಾಶಯವು ಕಾಣುತ್ತಿರಲಿಲ್ಲ. ಅಲ್ಲಿಯ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದವು. ದುಂಬಿಗಳು ಝೇಂಕರಿಸುತ್ತಿದ್ದವು.॥2-3॥

ಮೂಲಮ್ - 4

ಸೀತಯಾ ಸಹ ಕಾಕುತ್ಸ್ಥತಸ್ಮಿನ್ ಘೋರಮೃಗಾಯುತೇ ।
ದದರ್ಶ ಗಿರಿಶೃಂಗಾಭಂ ಪುರುಷಾದಂ ಮಹಾಸ್ವನಮ್ ॥

ಅನುವಾದ

ಭಯಂಕರ ಕಾಡುಪಶುಗಳಿಂದ ತುಂಬಿರುವ ಆ ದುರ್ಗಮ ವನದಲ್ಲಿ ಸೀತೆಯೊಂದಿಗೆ ಶ್ರೀರಾಮಚಂದ್ರನು ಪರ್ವತದಂತೆ ಎತ್ತರನಾಗಿದ್ದ, ಗಟ್ಟಿಯಾಗಿ ಗರ್ಜಿಸುತ್ತಾ ಬಂದ ಒಬ್ಬ ನರಭಕ್ಷಕ ರಾಕ್ಷಸನನ್ನು ನೋಡಿದನು.॥4॥

ಮೂಲಮ್ - 5

ಗಭೀರಾಕ್ಷಂ ಮಹಾವಕ್ತ್ರಂ ವಿಕಟಂ ವಿಕಟೋದರಮ್ ।
ಬೀಭತ್ಸಂ ವಿಷಮಂ ದೀರ್ಘಂ ವಿಕೃತಂ ಘೋರದರ್ಶನಮ್ ॥

ಅನುವಾದ

ಅವನ ಕಣ್ಣುಗಳು ಆಳವಾಗಿದ್ದು, ಬಾಯಿ ಬಹಳ ದೊಡ್ಡದಾಗಿತ್ತು. ಆಕಾರ ವಿಕಟನಾಗಿದ್ದು, ಹೊಟ್ಟೆ ವಿಕರಾಳವಾಗಿತ್ತು. ಅವನು ನೋಡಲು ಭಾರಿ ಭಯಂಕರನೂ, ಘೃಣಿತನೂ, ಬೀಭತ್ಸನೂ, ವಿಕೃತ ವೇಷದಿಂದ ಕೂಡಿದ್ದನು.॥5॥

ಮೂಲಮ್ - 6

ವಸಾನಂ ಚರ್ಮ ವೈಯಾಘ್ರಂ ವಸಾರ್ದ್ರಂ ರುಧಿರೋಕ್ಷಿತಮ್ ।
ತ್ರಾಸನಂ ಸರ್ವಭೂತಾನಾಂ ವ್ಯಾದಿತಾಸ್ಯಮಿವಾಂತಕಮ್ ॥

ಅನುವಾದ

ರಕ್ತದಿಂದ ತೋಯ್ದ ಚರ್ಬಿಯಿಂದ ಕೂಡಿದ ಹುಲಿಯ ಚರ್ಮವನ್ನು ಅವನು ಧರಿಸಿದ್ದನು. ಸಮಸ್ತ ಪ್ರಾಣಿಗಳಿಗೆ ಭಯವನ್ನುಂಟು ಮಾಡುವ ಆ ರಾಕ್ಷಸನು ಅಂತಕನಂತೆ ಬಾಯ್ದೆರೆದುಕೊಂಡು ನಿಂತಿದ್ದನು.॥6॥

ಮೂಲಮ್ - 7½

ತ್ರೀನ್ಸಿಂಹಾಂಶ್ಚ ತುರೋ ವ್ಯಾಘ್ರಾನ್ ದ್ವೌ ವೃಕೌ ಪೃಷತಾಂದಶ ।
ಸವಿಷಾಣಂ ವಸಾದಿಗ್ಧಂಗಜಸ್ಯ ಚ ಶಿರೋ ಮಹತ್ ॥
ಅವಸಜ್ಯಾಯಸೇ ಶೂಲೆ ವಿನದಂತಂ ಮಹಾಸ್ವನಮ್ ।

ಅನುವಾದ

ಅವನು ಒಂದು ಕಬ್ಬಿಣದ ಶೂಲದಲ್ಲಿ ಮೂರು ಸಿಂಹ, ನಾಲ್ಕು ಹುಲಿ, ಎರಡು ತೋಳಗಳು, ಹತ್ತು ಜಿಂಕೆಗಳು ಮತ್ತು ಚರ್ಬಿಯು ಮೆತ್ತಿಕೊಂಡು ಬಹಳ ದೊಡ್ಡ ಆನೆಯ ತಲೆಯನ್ನು ಪೋಣಿಸಿಕೊಂಡು ಜೋರಾಗಿ ಗರ್ಜಿಸುತ್ತಿದ್ದನು.॥7॥

ಮೂಲಮ್ - 8

ಸ ರಾಮಂ ಲಕ್ಷ್ಮಣಂ ಚೈವ ಸೀತಾಂ ದೃಷ್ಟ್ವಾ ಚ ಮೈಥಿಲೀಮ್ ॥

ಮೂಲಮ್ - 9

ಅಭ್ಯಧಾವತ್ ಸುಸಂಕ್ರುದ್ಧಃ ಪ್ರಜಾಃ ಕಾಲ ಇವಾಂತಕಃ ।
ಸ ಕೃತ್ವಾ ಭೈರವಂ ನಾದಂ ಚಾಲಯನ್ನಿವ ಮೇದಿನೀಮ್ ॥

ಅನುವಾದ

ಶ್ರೀರಾಮ, ಲಕ್ಷ್ಮಣ ಮತ್ತು ಮಿಥಿಲೇಶಕುಮಾರಿ ಸೀತೆಯನ್ನು ನೋಡುತ್ತಲೇ ಅವನು ಕ್ರೋಧಗೊಂಡು ಭೈರವ ನಾದ ಮಾಡುತ್ತಾ ಭೂಮಿಯನ್ನು ನಡುಗಿಸುತ್ತಾ, ಪ್ರಾಣಾಂತಕಾರೀ ಕಾಲನು ಪ್ರಜೆಗಳ ಕಡೆಗೆ ಧಾವಿಸುವಂತೆ ಇವರ ಕಡೆಗೆ ಓಡಿಬರುತ್ತಿದ್ದನು.॥8-9॥

ಮೂಲಮ್ - 10½

ಅಂಕೇನಾದಾಯ ವೈದೇಹೀಮಪಕ್ರಮ್ಯ ತದಾಬ್ರವೀತ್ ।
ಯುವಾಂ ಜಟಾಚೀರಧರೌ ಸಭಾರ್ಯೌ ಕ್ಷೀಣಜೀವಿತೌ॥
ಪ್ರವಿಷ್ಟೌ ದಂಡಕಾರಣ್ಯಂ ಶರಚಾಪಾಸಿಪಾಣಿನೌ ।

ಅನುವಾದ

ಅವನು ವಿದೇಹನಂದಿನೀ ಸೀತೆಯನ್ನು ಎತ್ತಿಕೊಂಡು ಸ್ವಲ್ಪ ದೂರ ಹೋಗಿ ನಿಂತುಕೊಂಡು ಮತ್ತೆ ಆ ಸಹೋದರರಿಬ್ಬರಲ್ಲಿ ಹೇಳಿದನು. ನೀವಿಬ್ಬರೂ ಜಟಾವಲ್ಕಲ ಧರಿಸಿಯೂ ಸ್ತ್ರೀಯ ಜೊತೆಗೆ ಇದ್ದು ಕೈಯಲ್ಲಿ ಧನುರ್ಬಾಣ ಮತ್ತು ಖಡ್ಗವನ್ನು ಹಿಡಿದುಕೊಂಡು ದಂಡಕಾರಣ್ಯದಲ್ಲಿ ಹೊಕ್ಕಿದ್ದೀರಲ್ಲ! ಆದ್ದರಿಂದ ನಿಮ್ಮ ಜೀವನ ಕ್ಷೀಣವಾಯಿತೆಂದೇ ಅನಿಸುತ್ತದೆ.॥10½॥

ಮೂಲಮ್ - 11½

ಕಥಂ ತಾಪಸಯೋರ್ವಾಂ ಚ ವಾಸಃ ಪ್ರಮದಯಾ ಸಹ ॥
ಅಧರ್ಮಚಾರಿಣೌ ಪಾಪೌ ಕೌ ಯುವಾಂ ಮುನಿದೂಷಕೌ ।

ಅನುವಾದ

ನೀವಿಬ್ಬರೂ ತಪಸ್ವಿಗಳಂತೆ ಅನಿಸುತ್ತದೆ. ಹೀಗಿದ್ದರೂ ನಿವು ಯುವತಿ ಸ್ತ್ರೀಯೊಂದಿಗೆ ಇರುವುದು ಹೇಗೆ ಸಂಭವನೀಯವಾಗಿದೆ? ಅಧರ್ಮಪರಾಯಣ, ಪಾಪೀ ಹಾಗೂ ಮುನಿಸಮುದಾಯವನ್ನು ಕಲಂಕಿತರಾಗಿಸುವ ನೀವಿಬ್ಬರೂ ಯಾರಾಗಿರುವಿರಿ.॥11½॥

ಮೂಲಮ್ - 12½

ಅಹಂ ವನಮಿದಂ ದುರ್ಗಂ ವಿರಾಧೋ ನಾಮ ರಾಕ್ಷಸಃ ॥
ಚರಾಮಿ ಸಾಯುಧೋ ನಿತ್ಯಮೃಷಿಮಾಂಸಾನಿ ಭಕ್ಷಯನ್ ।

ಅನುವಾದ

ನಾನು ವಿರಾಧ ಎಂಬ ರಾಕ್ಷಸನು ಹಾಗೂ ಪ್ರತಿದಿನ ಋಷಿಗಳ ಮಾಂಸವನ್ನು ಭಕ್ಷಿಸುತ್ತಾ ಕೈಯಲ್ಲಿ ಅಸ್ತ್ರ-ಶಸ್ತ್ರಗಳನ್ನು ಹಿಡಿದುಕೊಂಡು ಈ ದುರ್ಗಮ ವನದಲ್ಲಿ ಸಂಚರಿಸುತ್ತಾ ಇದ್ದೇನೆ.॥12½॥

ಮೂಲಮ್ - 13½

ಇಯಂ ನಾರೀ ವರಾರೋಹಾ ಮಮ ಭಾರ್ಯಾಭವಿಷ್ಯತಿ ॥
ಯುವಯೋಃ ಪಾಪಯೋಶ್ಚಾಹಂ ಪಾಸ್ಯಾಮಿ ರುಧಿರಂ ಮೃಧೇ ।

ಅನುವಾದ

ಈ ಸ್ತ್ರೀಯು ಬಹಳ ಸುಂದರಿಯಾಗಿದ್ದಾಳೆ, ಆದ್ದರಿಂದ ನನ್ನ ಭಾರ್ಯೆ ಆಗುವಳು. ಪಾಪಿಗಳಾದ ನೀಮ್ಮಿಬ್ಬರನ್ನು ಯುದ್ಧದಲ್ಲಿ ಕೊಂದು ರಕ್ತಪಾನ ಮಾಡುವೆನು.॥13½॥

ಮೂಲಮ್ - 14

ತಸ್ಯೈವಂ ಬ್ರುವತೋ ದುಷ್ಟಂ ವಿರಾಧಸ್ಯ ದುರಾತ್ಮನಃ ॥

ಮೂಲಮ್ - 15

ಶ್ರುತ್ವಾ ಸಗರ್ವಿತಂ ವಾಕ್ಯಂ ಸಂಭ್ರಾಂತಾ ಜನಕಾತ್ಮಜಾ ।
ಸೀತಾಪ್ರವೇಪಿತೋದ್ವೇಗಾತ್ ಪ್ರವಾತೇ ಕದಲೀ ಯಥಾ ॥

ಅನುವಾದ

ದುರಾತ್ಮಾ ವಿರಾಧನ ಈ ದುಷ್ಟತೆ ಮತ್ತು ಗರ್ವದಿಂದ ಕೂಡಿದ ಮಾತನ್ನು ಕೇಳಿ ಜನಕನಂದಿನೀ ಸೀತೆಯು ಗಾಬರಿಗೊಂಡಳು. ಬಿರುಗಾಳಿಗೆ ಜೋರಾಗಿ ನಡುಗುವ ಬಾಳೆ ಗಿಡದಂತೆ ಅವಳು ಉದ್ವೇಗದಿಂದ ಗಡ-ಗಡನೆ ನಡುಗತೊಡಗಿದಳು.॥14-15॥

ಮೂಲಮ್ - 16

ತಾಂ ದೃಷ್ಟ್ವಾ ರಾಘವಃ ಸೀತಾಂ ವಿರಾಧಾಂಕಗತಾಂ ಶುಭಾಮ್ ।
ಅಬ್ರವೀಲ್ಲಕ್ಷ್ಮಣಂ ವಾಕ್ಯಂ ಮುಖೇನ ಪರಿಶುಷ್ಯತಾ ॥

ಅನುವಾದ

ಶುಭಲಕ್ಷಣ ಸೀತೆಯು ವಿರಾಧನ ಹಿಡಿತದಲ್ಲಿ ಇರುವುದನ್ನು ನೋಡಿ ಶ್ರೀರಾಮಚಂದ್ರನ ಮುಖವು ಬಾಡಿ ಹೋಗಿ, ಲಕ್ಷ್ಮಣನನ್ನು ಸಂಬೋಧಿಸುತ್ತಾ ಇಂತೆಂದನು.॥16॥

ಮೂಲಮ್ - 17

ಪಶ್ಯ ಸೌಮ್ಯ ನರೇಂದ್ರಸ್ಯ ಜನಕಸ್ಯಾತ್ಮಸಂಭವಾಮ್ ।
ಮಮ ಭಾರ್ಯಾಂ ಶುಭಾಚಾರಂ ವಿರಾಧಾಂಕೇ ಪ್ರವೇಶಿತಾಮ್ ॥

ಅನುವಾದ

ಸೌಮ್ಯ! ಅಲ್ಲಿ ನೋಡು! ಮಹಾರಾಜಾ ಜನಕನ ಪುತ್ರೀ ಮತ್ತು ನನ್ನ ಸತೀ-ಸಾಧ್ವೀ ಪತ್ನೀ ಸೀತೆಯು ವಿರಾಧನ ಕೈಯಲ್ಲಿ ವಿವಶಳಾಗಿ ಸಿಲುಕಿರುವಳು.॥17॥

ಮೂಲಮ್ - 18

ಅತ್ಯಂತ ಸುಖ ಸಂವೃದ್ಧಾಂ ರಾಜಪುತ್ರೀಂ ಯಶಸ್ವಿನೀಮ್ ।
ಯದಭಿಪ್ರೇತಮಸ್ಮಾಸು ಪ್ರಿಯಂ ವರವೃತ್ತಂ ಚ ಯತ್ ॥

ಮೂಲಮ್ - 19

ಕೈಕೇಯಾಸ್ತು ಸುಸಂವೃತ್ತಂ ಕ್ಷಿಪ್ರಮದ್ಯೈವ ಲಕ್ಷ್ಮಣ ।
ಯಾ ನ ತುಷ್ಯತಿ ರಾಜ್ಯೇನ ಪುತ್ರಾರ್ಥೇ ದೀರ್ಘದರ್ಶಿನೀ ॥

ಅನುವಾದ

ಅತ್ಯಂತ ಸುಖದಲ್ಲಿ ಬೆಳೆದಿರುವ ಯಶಸ್ವಿನೀ ರಾಜಕುಮಾರಿ ಸೀತೆಗೆ ಇಂತಹ ಸ್ಥಿತಿಯೇ! (ಅಯ್ಯೋ! ಎಂತಹ ಕಷ್ಟಕರ ಸಂಗತಿಯಾಗಿದೆ.) ಲಕ್ಷ್ಮಣಾ! ಕಾಡಿನಲ್ಲಿ ನಮಗಾಗಿ ಯಾವ ದುಃಖದ ಪ್ರಾಪ್ತಿಯು ಕೈಕೇಯಿಗೆ ಅಭಿಷ್ಟವಾಗಿತ್ತೋ, ಆಕೆಗೆ ಯಾವುದು ಪ್ರಿಯವಾಗಿತ್ತೋ, ಯಾವುದಕ್ಕಾಗಿ ವರವನ್ನು ಬೇಡಿದ್ದಳೋ ಅದು ಇಂದೇ ಶೀಘ್ರವಾಗಿ ಫಲಿಸಿತು. ಅದಕ್ಕಾಗಿಯೇ ದೂರದರ್ಶಿನೀ ಕೈಕೇಯಿಯು ತನ್ನ ಪುತ್ರನಿಗಾಗಿ ಕೇವಲ ರಾಜ್ಯವನ್ನು ಪಡೆದು ಸಂತುಷ್ಟಳಾಗಿರಲಿಲ್ಲ.॥18-19॥

ಮೂಲಮ್ - 20

ಯಯಾಹಂ ಸರ್ವಭೂತಾನಾಂ ಪ್ರಿಯಃ ಪ್ರಸ್ಥಾಪಿತೋ ವನಮ್ ।
ಆದ್ಯೇದಾನೀಂ ಸಕಾಮಾ ಸಾ ಯಾ ಮಾತಾ ಮಧ್ಯಮಾ ಮಮ ॥

ಅನುವಾದ

ಸಮಸ್ತ ಪ್ರಾಣಿಗಳಿಗೆ ಪ್ರಿಯವಾಗಿದ್ದರೂ ನನ್ನನ್ನು ಕಾಡಿಗೆ ಅಟ್ಟಿದ ಆ ನನ್ನ ನಡುತಾಯಿ ಕೈಕೆಯಿಯು ಇಂದು ಈಗ ಸಫಲ ಮನೋರಥಳಾಗಿರುವಳು.॥20॥

ಮೂಲಮ್ - 21

ಪರಸ್ಪರ್ಶಾತ್ತು ವೈದೇಹ್ಯಾ ನ ದುಃಖತರಮಸ್ತಿ ಮೇ ।
ಪಿತುರ್ವಿನಾಶಾತ್ ಸೌಮಿತ್ರೇ ಸ್ವರಾಜ್ಯ ಹರಣಾತ್ತಥಾ ॥

ಅನುವಾದ

ವಿದೇಹನಂದಿನಿಯನ್ನು ಬೇರೆ ಯಾರಾದರೂ ಸ್ಪರ್ಶಿಸುವುದು ಇದಕ್ಕಿಂತ ದುಃಖದ ಸಂಗತಿ ನನಗೆ ಬೇರೆ ಯಾವುದೂ ಇಲ್ಲ. ಸುಮಿತ್ರಾನಂದನ! ಈಗ ಆದಷ್ಟು ದುಃಖವು, ತಂದೆಯು ಸತ್ತಾಗಲೂ, ರಾಜ್ಯ ಅಪಹರಣದಿಂದಲೂ ನನಗೆ ಆಗಲಿಲ್ಲ.॥21॥

ಮೂಲಮ್ - 22

ಇತಿ ಬ್ರುವತಿ ಕಾಕುತ್ಸ್ಥೇ ಭಾಷ್ಪ ಶೋಕಪರಿಪ್ಲುತಃ ।
ಅಬ್ರವೀಲ್ಲಕ್ಷ್ಮಣಃ ಕ್ರುದ್ಧೋ ರುದ್ಧೋ ನಾಗ ಇವ ಶ್ವಸನ್ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಶೋಕದಿಂದ ಕಂಬನಿಗರೆಯುವಾಗ ಲಕ್ಷ್ಮಣನು ಕುಪಿತನಾಗಿ ಮಂತ್ರದಿಂದ ನಿರುದ್ಧವಾದ ಸರ್ಪದಂತೆ ಬುಸುಗುಟ್ಟುತ್ತಾ ಹೇಳಿದನು.॥22॥

ಮೂಲಮ್ - 23

ಅನಾಥ ಇವ ಭೂತಾನಾಂ ನಾಥಸ್ತ್ವಂ ವಾಸವೋಪಮಃ ।
ಮಯಾ ಪ್ರೇಷ್ಯೇಣ ಕಾಕುತ್ಸ್ಥ ಕಿಮರ್ಥಂ ಪರಿತಪ್ಯಸೇ ॥

ಅನುವಾದ

ಕಕುತ್ಸ್ಥಕುಲಭೂಷಣ! ನೀನು ಇಂದ್ರನಂತೆ ಸಮಸ್ತ ಪ್ರಾಣಿಗಳ ಒಡೆಯ ಮತ್ತು ಸಂರಕ್ಷಕನಾಗಿರುವೆ. ದಾಸನಾದ ನಾನು ಇರುವಾಗ ನೀನು ಅನಾಥನಂತೆ ಏಕೆ ಸಂತಪ್ತನಾಗಿರುವೆ.॥23॥

ಮೂಲಮ್ - 24

ಶರೇಣ ನಿಹತಸ್ಯಾದ್ಯ ಮಯಾ ಕ್ರುದ್ಧೇನ ರಕ್ಷಸಃ ।
ವಿರಾಧಸ್ಯ ಗತಾಸೋರ್ಹಿ ಮಹೀ ಪಾಸ್ಯತಿ ಶೋಣಿತಮ್ ॥

ಅನುವಾದ

ನಾನು ಈಗಲೇ ಕುಪಿತನಾಗಿ ನನ್ನ ಬಾಣಗಳಿಂದ ಈ ರಾಕ್ಷಸನನ್ನು ವಧಿಸುವೆನು. ಇಂದು ಈ ಪಥ್ವಿಯು ನಾನು ಕೊಂದಿರುವ ಪ್ರಾಣಶೂನ್ಯ ವಿರಾಧನ ರಕ್ತ ಕುಡಿಯುವುದು.॥24॥

ಮೂಲಮ್ - 25

ರಾಜ್ಯಕಾಮೇ ಮಮ ಕ್ರೋಧೋ ಭರತೇ ಯೋ ಬಭೂವ ಹ ।
ತಂ ವಿರಾಧೇ ವಿಮೋಕ್ಷ್ಯಾಮಿ ವಜ್ರೀ ವಜ್ರಮಿವಾಚಲೇ ॥

ಅನುವಾದ

ಇಂದ್ರನು ಪರ್ವತಗಳ ಮೇಲೆ ವಜ್ರವನ್ನು ಪ್ರಯೋಗಿಸುವಂತೆ, ರಾಜ್ಯವನ್ನು ಬಯಸುವ ಭರತನ ಮೇಲೆ ಪ್ರಕಟವಾದ ನನ್ನ ಕ್ರೋಧವನ್ನು ಇಂದು ವಿರಾಧನ ಮೇಲೆ ಬಿಟ್ಟು ತೀರಿಸಿಕೊಳ್ಳುವೆನು.॥25॥

ಮೂಲಮ್ - 26

ಮಮ ಭುಜಬಲವೇಗವೇಗಿತಃ
ಪತತುಶರೋಽಸ್ಯ ಮಹಾನ್ ಮಹೋರಸಿ ।
ವ್ಯಪನಯತು ತನೋಶ್ಚ ಜೀವಿತಂ
ಪತತು ತತಶ್ಚ ಮಹೀಂ ವಿಘೂರ್ಣಿತಃ ॥

ಅನುವಾದ

ನನ್ನ ಭುಜಗಳ ಬಲದಿಂದ ವೇಗವಾಗಿ ಹೊರಟ ಮಹಾಬಾಣವು ಇಂದು ವಿರಾಧನ ವಿಶಾಲವಾದ ಎದೆಗೆ ನಾಟಿ, ಇವನ ಶರೀರದಿಂದ ಪ್ರಾಣವನ್ನು ಬೇರ್ಪಡಿಸುವುದು. ಅನಂತರ ಈ ವಿರಾಧನು ಗರಗರನೆ ತಿರುಗುತ್ತಾ ನೆಲಕ್ಕೆ ಬೀಳುವನು.॥26॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಎರಡನೆಯ ಸರ್ಗ ಸಂಪೂರ್ಣವಾಯಿತು.॥2॥