वाचनम्
ಭಾಗಸೂಚನಾ
ಸೀತಾದೇವಿಯು ಅನಸೂಯಾದೇವಿಯ ಆಣತಿಯಂತೆ ಅವಳು ಕೊಟ್ಟ ವಸ್ತ್ರಾಭರಣಗಳನ್ನು ಧರಿಸಿ ಶ್ರೀರಾಮನ ಬಳಿಗೆ ಬಂದುದು, ಶ್ರೀರಾಮನೇ ಮೊದಲಾದವರು ಆ ರಾತ್ರಿಯಲ್ಲಿ ಅದೇ ಆಶ್ರಮದಲ್ಲಿ ತಂಗಿದ್ದು ಪ್ರಾತಃಕಾಲವಾದೊಡನೆ ಬೇರೆಡೆಗೆ ಹೋಗಲು ಋಷಿಗಳ ಅನುಮತಿ ಬೇಡಿದುದು
ಮೂಲಮ್ - 1
ಅನಸೂಯಾ ತು ಧರ್ಮಜ್ಞಾ ಶ್ರುತ್ವಾ ತಾಂ ಮಹತೀಂ ಕಥಾಮ್ ।
ಪರ್ಯಷ್ವಜತ ಬಾಹುಭ್ಯಾಂ ಶಿರಸ್ಯಾಘ್ರಾಯ ಮೈಥಿಲೀಮ್ ॥
ಅನುವಾದ
ಧರ್ಮಜ್ಞಳಾದ ಅನಸೂಯೆಯು ಆ ಮಹತ್ ಕಥೆಯನ್ನು ಕೇಳಿ ಮಿಥಿಲೇಶಕುಮಾರಿ ಸೀತೆಯನ್ನು ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡು ಆಕೆಯ ಮಸ್ತಕವನ್ನು ಆಘ್ರಾಣಿಸಿದಳು.॥1॥
ಮೂಲಮ್ - 2
ವ್ಯಕ್ತಾಕ್ಷರಪದಂಚಿತ್ರಂ ಭಾಷಿತಂ ಮಧುರಂ ತ್ವಯಾ ।
ಯಥಾ ಸ್ವಯಂವರಂ ವೃತ್ತಂ ತತ್ಸರ್ವಂ ಚ ಶ್ರುತಂಮಯಾ ॥
ಅನುವಾದ
ಮಗಳೇ! ನೀನು ಸ್ಪಷ್ಟವಾಗಿ ಈ ವಿಚಿತ್ರ ಹಾಗೂ ಮಧುರ ಪ್ರಸಂಗವನ್ನು ತಿಳಿಸಿದೆ. ನಿನ್ನ ಸ್ವಯಂವರ ಹೇಗಾಯಿತೆಂಬುದನ್ನು ನಾನು ಕೇಳಿದೆ.॥2॥
ಮೂಲಮ್ - 3
ರಮೇಯಂ ಕಥಯಾ ತೇ ತು ದೃಢಂಮಧುರಭಾಷಿಣಿ ।
ರವಿರಸ್ತಂ ಗತಃ ಶ್ರೀಮಾನುಪೋಹ್ಯ ರಜನೀಂ ಶುಭಾಮ್ ॥
ಮೂಲಮ್ - 4
ದಿವಸಂ ಪರಿಕೀರ್ಣಾನಾಮಾಹಾರಾರ್ಥಂ ಪತತ್ರಿಣಾಮ್ ।
ಸಂಧ್ಯಾಕಾಲೇ ನಿಲೀನಾನಾಂ ನಿದ್ರಾರ್ಥಂ ಶ್ರೂಯತೇ ಧ್ವನಿಃ ॥
ಅನುವಾದ
ಮಧುರಭಾಷಿಣೀ ಸೀತೆ! ನಿನ್ನ ಈ ಕಥೆಯಲ್ಲಿ ನನ್ನ ಮನಸ್ಸು ರಮಿಸಿದೆ. ಜಾನಕಿ! ತೇಜಸ್ವೀ ಸೂರ್ಯದೇವನು ಮಂಗಳಕರ ರಾತ್ರಿಯನ್ನು ಸಮೀಪಿಸಿ ಅಸ್ತವಾಗಿದ್ದಾನೆ. ಹಗಲಿನಲ್ಲಿ ಆಹಾರಕ್ಕಾಗಿ ಎಲ್ಲೆಡೆ ಹಾರಿ ಹೋಗಿದ್ದ ಪಕ್ಷಿಗಳು ಸಾಯಂಕಾಲವಾಗುತ್ತಲೇ ನಿದ್ರಾರ್ಥವಾಗಿ ತಮ್ಮ-ತಮ್ಮ ಗೂಡುಗಳನ್ನು ಸೇರಿ ಚಿಲಿಪಿಲಿಗುಟ್ಟುತ್ತಿರುವ ಧ್ವನಿಗಳು ಕೇಳಿಬರುತ್ತಿವೆ.॥3-4॥
ಮೂಲಮ್ - 5
ಏತೇ ಚಾಪ್ಯಭಿಷೇಕಾರ್ದ್ರಾ ಮುನಯಃ ಕಲಶೋದ್ಯತಾಃ ।
ಸಹಿತಾ ಉಪವರ್ತಂತೇ ಸಲಿಲಾಪ್ಲುತವಲ್ಕಲಾಃ ॥
ಅನುವಾದ
ಸ್ನಾನಮಾಡಿ ಒದ್ದೆಯಾದ ವಲ್ಕಲಗಳನ್ನು ಧರಿಸಿಕೊಂಡು ಮುನಿಗಳು ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಒಟ್ಟಿಗೆ ತಮ್ಮ ಆಶ್ರಮದ ಕಡೆಗೆ ಮರುಳುತ್ತಿದ್ದಾರೆ.॥5॥
ಮೂಲಮ್ - 6
ಅಗ್ನಿಹೋತ್ರೇ ಚ ಋಷಿಣಾ ಹುತೇಚ ವಿಧಿಪೂರ್ವಕಮ್ ।
ಕಪೋತಾಂಗಾರುಣೋ ಧೂಮೋ ದೃಶ್ಯತೇ ಪವನೋದ್ಧತಃ ॥
ಅನುವಾದ
ಮಹರ್ಷಿ ಅತ್ರಿಗಳು ವಿಧಿವತ್ತಾಗಿ ಅಗ್ನಿಹೋತ್ರ ಸಂಬಂಧಿ ಹೋಮಕರ್ಮವನ್ನು ನೆರವೇರಿಸಿರುವರು. ಆದ್ದರಿಂದ ಗಾಳಿಯಿಂದ ಮೇಲಕ್ಕೇಳುತ್ತಿರುವ ಪಾರಿವಾಳದ ಕಂಠದಂತೆ ಶ್ಯಾಮವರ್ಣದ ಧೂಮ ಕಂಡುಬರುತ್ತಿದೆ.॥6॥
ಮೂಲಮ್ - 7
ಅಲ್ಪಪರ್ಣಾ ಹಿತರವೋ ಘನೀಭೂತಾಃ ಸಮಂತತಃ ।
ವಿಪ್ರಕೃಷ್ಟೇಂದ್ರಿಯೇ ದೇಶೇ ನ ಪ್ರಕಾಶಂತಿ ವೈ ದಿಶಃ ॥
ಅನುವಾದ
ಕಣ್ಣಿಗೆ ಬಹಳ ದೂರದಲ್ಲಿರುವ ವೃಕ್ಷಗಳಲ್ಲಿ ಸ್ವಲ್ಪವೇ ಎಲೆಗಳಿದ್ದರೂ ಕತ್ತಲು ಕವಿಯುತ್ತಿರುವುದರಿಂದ ದಟ್ಟವಾಗಿ ಇರುವಂತೆ ಕಾಣುತ್ತಿವೆ. ಆದ್ದರಿಂದ ಯಾವ ದಿಕ್ಕುಗಳಿಗೂ ಪ್ರಕಾಶಮಾನವಾಗಿ ಕಂಡುಬರುವುದಿಲ್ಲ.॥7॥
ಮೂಲಮ್ - 8
ರಜನೀಚರಸತ್ತ್ವಾನಿ ಪ್ರಚರಂತಿ ಸಮಂತತಃ ।
ತಪೋವನಮೃಗಾ ಹ್ಯೇತೇವೇದಿತೀರ್ಥೇಷು ಶೇರತೇ ॥
ಅನುವಾದ
ರಾತ್ರಿಯಲ್ಲಿ ಸಂಚರಿಸುವ ಗೂಬೆಯೇ ಆದಿ ಪ್ರಾಣಿಗಳು ಎಲ್ಲೆಡೆ ಸಂಚರಿಸುತ್ತಿವೆ. ಈ ತಪೋವನದ ಮೃಗಗಳು ಪುಣ್ಯ ಕ್ಷೇತ್ರವಾದ ಆಶ್ರಮದ ವೇದಿಕೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಮಲಗಿ ನಿದ್ರಿಸುತ್ತಿವೆ.॥8॥
ಮೂಲಮ್ - 9
ಸಂಪ್ರವೃತ್ತಾ ನಿಶಾ ಸೀತೇ ನಕ್ಷತ್ರಸಮಲಂಕೃತಾ ।
ಜ್ಯೋತ್ಸ್ನಾಪ್ರಾವರಣಶ್ಚಂದ್ರೋ ದೃಶ್ಯತೇಭ್ಯುದಿತೋಂಬರೇ ॥
ಅನುವಾದ
ಸೀತೇ! ಈಗ ನಕ್ಷತ್ರಗಳಿಂದ ಅಲಂಕೃತವಾದ ರಾತ್ರಿಯಾಗಿದೆ. ಆಕಾಶದಲ್ಲಿ ಚಂದ್ರನು ಬೆಳದಿಂಗಳನ್ನು ಹೊದ್ದುಕೊಂಡು ಉದಯಿಸುತ್ತಿದ್ದಾನೆ.॥9॥
ಮೂಲಮ್ - 10
ಗಮ್ಯತಾಮನುಜಾನಾಮಿ ರಾಮಸ್ಯಾನುಚರೀ ಭವ ।
ಕಥಯಂತ್ಯಾ ಹಿ ಮಧುರಂ ತ್ವಯಾಹಮಪಿ ತೋಷಿತಾ ॥
ಅನುವಾದ
ಆದ್ದರಿಂದ ಈಗ ಹೋಗಲು ನಿನಗೆ ಆಜ್ಞಾಪಿಸುತ್ತಿದ್ದೇನೆ. ಹೋಗಿ ಶ್ರೀರಾಮಚಂದ್ರನ ಸೇವೆಯಲ್ಲಿ ತೊಡಗು ನೀನು ಮಧುರವಾದ ಮಾತುಗಳಿಂದ ನನ್ನನ್ನು ಬಹಳ ಸಂತೋಷಪಡಿಸಿದೆ.॥10॥
ಮೂಲಮ್ - 11
ಅಲಂಕುರು ಚ ತಾವತ್ತ್ವಂ ಪ್ರತ್ಯಕ್ಷಂ ಮಮ ಮೈಥಿಲಿ ।
ಪ್ರೀತಿಂ ಜನಯಮೇ ವತ್ಸೇ ದಿವ್ಯಾಲಂಕಾರಶೋಭಿನೀ ॥
ಅನುವಾದ
ಮಗಳೇ! ಮಿಥಿಲೇಶಕುಮಾರೀ! ಮೊದಲು ನನ್ನ ಕಣ್ಣು ಮುಂದೆ ಅಲಂಕರಿಸಿಕೋ. ಈ ದಿವ್ಯ ವಸ್ತ್ರ ಮತ್ತು ಒಡವೆಗಳನ್ನು ಧರಿಸಿ ಸುಶೋಭಿತಳಾಗಿ ನನ್ನನ್ನು ಸಂತೋಷಪಡಿಸು.॥11॥
ಮೂಲಮ್ - 12
ಸಾ ತದಾ ಸಮಲಂಕೃತ್ಯ ಸೀತಾ ಸುರಸುತೋಪಮಾ ।
ಪ್ರಣಮ್ಯ ಶಿರಸಾ ಪಾದೌ ರಾಮಂ ತ್ವಭಿಮುಖೀ ಯಯೌ ॥
ಅನುವಾದ
ಇದನ್ನು ಕೇಳಿ ದೇವಕನ್ಯೆಯಂತಿರುವ ಸುಂದರೀ ಸೀತೆಯು ಆಕೆಯು ಕೊಟ್ಟ ವಸ್ತ್ರಾಭರಣಗಳಿಂದ ಸಿಂಗರಿಸಿಕೊಂಡಳು ಹಾಗೂ ಅನಸೂಯೆಯ ಚರಣಗಳಲ್ಲಿ ಬಾಗಿ ವಂದಿಸಿ, ಬಳಿಕ ಶ್ರೀರಾಮನ ಸಮ್ಮುಖಕ್ಕೆ ನಡೆದಳು.॥12॥
ಮೂಲಮ್ - 13
ತಥಾ ತು ಭೂಷಿತಾಂ ಸೀತಾಂ ದದರ್ಶವದತಾಂ ವರಃ ।
ರಾಘವಃ ಪ್ರೀತಿದಾನೇನ ತಪಸ್ವಿನ್ಯಾ ಜಹರ್ಷ ಚ ॥
ಅನುವಾದ
ಶ್ರೀರಾಮನು ಹೀಗೆ ವಸ್ತ್ರಾಭೂಷಣಗಳಿಂದ ಅಲಂಕೃತಳಾದ ಸೀತೆಯನ್ನು ನೋಡಿದಾಗ ತಪಸ್ವಿನೀ ಅನಸೂಯೆಯ ಆ ಉಡುಗೊರೆಗಳನ್ನು ನೋಡಿ ಮಾತುಗಾರರಲ್ಲಿ ಶ್ರೇಷ್ಠನಾದ ಶ್ರೀರಾಮನಿಗೆ ಬಹಳ ಆನಂದವಾಯಿತು.॥13॥
ಮೂಲಮ್ - 14
ನ್ಯವೇದಯತ್ತತಃ ಸರ್ವಂ ಸೀತಾ ರಾಮಾಯ ಮೈಥಿಲೀ ।
ಪ್ರೀತಿದಾನಂ ತಪಸ್ವಿನ್ಯಾ ವಸನಾಭರಣಸ್ರಜಮ್ ॥
ಅನುವಾದ
ಆಗ ಮಿಥಿಲೇಶ ಕುಮಾರೀ ಸೀತೆಯು ತಪಸ್ವಿನೀ ಅನುಸೂಯೆಯಿಂದ ದೊರೆತ ಉಡುಗೊರೆಯ ವಿಷಯದಲ್ಲಿ ಎಲ್ಲವನ್ನೂ ಶ್ರೀರಾಮಚಂದ್ರನಲ್ಲಿ ನಿವೇದಿಸಿಕೊಂಡಳು.॥14॥
ಮೂಲಮ್ - 15
ಪ್ರಹೃಷ್ಟಸ್ತ್ವಭವದ್ರಾಮೋ ಲಕ್ಷ್ಮಣಶ್ಚ ಮಹಾರಥಃ ।
ಮೈಥಿಲ್ಯಾಃ ಸತ್ಕ್ರಿಯಾಂ ದೃಷ್ಟ್ವಾ ಮಾನುಷೇಷು ಸುದುರ್ಲಭಾಮ್ ॥
ಅನುವಾದ
ಭಗವಾನ್ ಶ್ರೀರಾಮ ಮತ್ತು ಮಹಾರಥಿ ಲಕ್ಷ್ಮಣರು ಮನುಷ್ಯರಿಗೆ ದುರ್ಲಭವಾದ ಸೀತೆಯ ಆ ಸತ್ಕಾರವನ್ನು ನೋಡಿ ಬಹಳ ಪ್ರಸನ್ನರಾದರು.॥15॥
ಮೂಲಮ್ - 16
ತತಃ ಸ ಶರ್ವರೀಂ ಪ್ರೀತಃ ಪುಣ್ಯಾಂ ಶಶಿನಿಭಾನನಾಮ್ ।
ಅರ್ಚಿತಸ್ತಾಪಸೈಃ ಸರ್ವೈರುವಾಸ ರಘುನಂದನಃ ॥
ಅನುವಾದ
ಅನಂತರ ಸಮಸ್ತ ತಪಸ್ವಿಗಳಿಂದ ಸಮ್ಮಾನಿತನಾದ ರಘುಕುಲನಂದನ ಶ್ರೀರಾಮನು ಅನಸೂಯೆಯು ಕೊಟ್ಟಿರುವ ಪವಿತ್ರ ಅಲಂಕಾರಾದಿಗಳಿಂದ ಸಿಂಗರಿಸಿಕೊಂಡ ಚಂದ್ರಮುಖೀ ಸೀತೆಯನ್ನು ನೋಡಿ ಬಹಳ ಸಂತೋಷದಿಂದ ಅಲ್ಲೇ ಇರುಳನ್ನು ಕಳೆದನು.॥16॥
ಮೂಲಮ್ - 17
ತಸ್ಯಾಂ ರಾತ್ರ್ಯಾಂ ವ್ಯತೀತಾಯಾಮಭಿಷಿಚ್ಯ ಹುತಾಗ್ನಿಕಾನ್ ।
ಆಪೃಚ್ಛೇತಾಂ ನರವ್ಯಾಘ್ರೌ ತಾಪಸಾನ್ ವನಗೋಚರಾನ್ ॥
ಅನುವಾದ
ರಾತ್ರಿ ಕಳೆದು ಎಲ್ಲ ವನವಾಸೀ ತಪಸ್ವೀ ಮುನಿಗಳು ಸ್ನಾನಮಾಡಿ ಅಗ್ನಿಹೋತ್ರ ವನ್ನು ಪೂರೈಸಿದಾಗ, ಪುರಷಸಿಂಹ ಶ್ರೀರಾಮ ಮತ್ತು ಲಕ್ಷ್ಮಣರು ಅವರಲ್ಲಿ ಮುಂದಕ್ಕೆ ಹೋಗಲು ಅಪ್ಪಣೆ ಬೇಡಿದರು.॥17॥
ಮೂಲಮ್ - 18
ತಾವೂಚುಸ್ತೇ ವನಚರಾಸ್ತಾಪಸಾ ಧರ್ಮಚಾರಿಣಃ ।
ವನಸ್ಯ ತಸ್ಯ ಸಂಚಾರಂ ರಾಕ್ಷಸೈಃ ಸಮಭಿಪ್ಲುತಮ್ ॥
ಮೂಲಮ್ - 19
ರಕ್ಷಾಂಸಿ ಪುರುಷಾದಾನಿ ನಾನಾರೂಪಾಣಿ ರಾಘವ ।
ವಸಂತ್ಯಸ್ಮಿನ್ಮಹಾರಣ್ಯೇ ವ್ಯಾಲಾಶ್ಚ ರುಧಿರಾಶನಾಃ ॥
ಅನುವಾದ
ಆಗ ಆ ಧರ್ಮಪರಾಯಣ ವನವಾಸೀ ತಪಸ್ವಿಗಳು ಅವರಿಬ್ಬರಲ್ಲಿ ಇಂತೆಂದರು - ರಘುನಂದನ! ಈ ಅರಣ್ಯದ ದಾರಿ ರಾಕ್ಷಸರಿಂದ ಆವೃತವಾಗಿದೆ. ಇಲ್ಲಿ ಅವರ ಉಪದ್ರವ ನಡೆಯುತ್ತಾ ಇರುತ್ತದೆ. ಈ ವಿಶಾಲ ವನದಲ್ಲಿ ನಾನಾ ರೂಪಧಾರೀ ನರಭಕ್ಷಕರಾದ ರಾಕ್ಷಸರು ಹಾಗೂ ರಕ್ತಪಿಪಾಸು ಹಿಂಸಕ ಪಶುಗಳು ವಾಸಿಸುತ್ತಿವೆ.॥18-19॥
ಮೂಲಮ್ - 20
ಉಚ್ಛಿಷ್ಟಂ ವಾ ಪ್ರಮತ್ತಂ ವಾ ತಾಪಸಂ ಬ್ರಹ್ಮಚಾರಿಣಮ್ ।
ಅದಂತ್ಯಸ್ಮಿನ್ಮಹಾರಣ್ಯೇ ತಾನ್ ನಿವಾರಯ ರಾಘವ ॥
ಅನುವಾದ
ರಾಘವೇಂದ್ರ! ತಪಸ್ವೀ ಮತ್ತು ಬ್ರಹ್ಮಚಾರಿಗಳು ಈ ವನದಲ್ಲಿ ಅಪವಿತ್ರ ಅಥವಾ ಎಚ್ಚರದಪ್ಪಿದ ಸ್ಥಿತಿಯಲ್ಲಿ ಸಿಕ್ಕಿದಾಗ ಆ ರಾಕ್ಷಸರು ಹಾಗೂ ಹಿಂಸ್ರಪಶುಗಳು ತಿಂದುಹಾಕುವವು. ಆದ್ದರಿಂದ ನೀನು ಅವರನ್ನು ತಡೆದು, ಇಲ್ಲಿಂದ ಓಡಿಸಿ ಬಿಡು.॥20॥
ಮೂಲಮ್ - 21
ಏಷ ಪಂಥಾ ಮಹರ್ಷೀಣಾಂ ಲಾನ್ಯಾಹರತಾಂ ವನೇ ।
ಅನೇನ ತು ವನಂ ದುರ್ಗಂ ಗಂತುಂ ರಾಘವ ತೇ ಕ್ಷಮಮ್ ॥
ಅನುವಾದ
ರಘುಕುಲ ಭೂಷಣ! ಮಹರ್ಷಿಗಳು ಕಾಡಿನಲ್ಲಿ ಫಲ-ಮೂಲಗಳನ್ನು ತರಲು ಹೋಗುವ ಮಾರ್ಗವೂ ಇದೇ ಆಗಿದೆ. ನೀನೂ ಇದೇ ದಾರಿಯಿಂದ ಈ ದುರ್ಗಮ ಅರಣ್ಯವನ್ನು ಪ್ರವೇಶಿಸಬೇಕಾಗಿದೆ.॥21॥
ಮೂಲಮ್ - 22
ಇತೀರಿತಃ ಪ್ರಾಂಜಲಿಭಿಸ್ತಪಸ್ವಿಭಿ-
ರ್ದ್ವಿಜೈಃ ಕೃತಸ್ವಸ್ತ್ಯಯನಃ ಪರಂತಪಃ ।
ವನಂ ಸಭಾರ್ಯಃ ಪ್ರವಿವೇಶ ರಾಘವಃ
ಸಲಕ್ಷ್ಮಣಃ ಸೂರ್ಯ ಇವಾಭ್ರಮಂಡಲಮ್ ॥
ಅನುವಾದ
ಕೈಮುಗಿದುಕೊಂಡು ತಪಸ್ವೀ ಬ್ರಾಹ್ಮಣರು ಹೀಗೆ ಹೇಳಿದಾಗ ಅವರ ಮಂಗಳಯಾತ್ರೆಗಾಗಿ ಸ್ವಸ್ತಿವಾಚನ ಮಾಡಿದರು. ಆಗ ಪರಂತಪ ಭಗವಾನ್ ಶ್ರೀರಾಮನು ತನ್ನ ಪತ್ನೀ ಸೀತೆ ಮತ್ತು ಲಕ್ಷ್ಮಣರೊಂದಿಗೆ ಸೂರ್ಯನು ಮೋಡಗಳಲ್ಲಿ ಅಡಗಿಹೋಗುವಂತೆ ಆ ವನವನ್ನು ಪ್ರವೇಶಿಸಿದನು.॥22॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು ॥119॥
ಅಯೋಧ್ಯಾ ಕಾಂಡವು ಮುಗಿದುದು