वाचनम्
ಭಾಗಸೂಚನಾ
ಶ್ರೀರಾಮ-ಲಕ್ಷ್ಮಣ-ಸೀತೆಯರು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಹೋದುದು, ಅತ್ರಿ ಮಹರ್ಷಿಗಳಿಂದ ಸತ್ಕಾರ, ಅನಸೂಯೆಯು ಸೀತೆಯನ್ನು ಸತ್ಕರಿಸಿದುದು
ಮೂಲಮ್ - 1
ರಾಘವಸ್ತ್ವಪ್ರಯಾತೇಷುಸರ್ವೇಷ್ವನು ವಿಚಿಂತಯನ್ ।
ನ ತತ್ರಾರೋಚಯದ್ವಾಸಂ ಕಾರಣೈರ್ಬಹುಭಿಸ್ತದಾ ॥
ಅನುವಾದ
ಆ ಎಲ್ಲ ಋಷಿಗಳು ಹೊರಟುಹೋದ ಮೇಲೆ ಶ್ರೀರಾಮನು ಪದೇ-ಪದೇ ವಿಚಾರಮಾಡಿದಾಗ ಅವನಿಗೆ ಇಲ್ಲಿ ಇರುವುದು ಉಚಿತವಲ್ಲ ಎಂಬ ಅನೇಕ ಕಾರಣಗಳು ತೋರಿದವು.॥1॥
ಮೂಲಮ್ - 2
ಇಹ ಮೇ ಭರತೋದೃಷ್ಟೋ ಮಾತರಶ್ಚ ಸನಾಗರಾಃ ।
ಸಾ ಚ ಮೇ ಸ್ಮೃತಿರನ್ವೇತಿ ತಾನ್ ನಿತ್ಯಮನುಶೋಚತಃ ॥
ಅನುವಾದ
ಈ ಆಶ್ರಮದಲ್ಲೇ ನಾನು ಭರತನಿಗೆ, ತಾಯಂದಿರಿಗೆ, ಪುರವಾಸಿಗಳಿಗೆ ಭೆಟ್ಟಿಯಾಗಿರುವೆನು. ಆ ನೆನಪು ಪದೇ - ಪದೇ ನನಗೆ ಬರುತ್ತಾ ಇರುತ್ತದೆ. ನಾನು ಪ್ರತಿದಿನ ಅವರನ್ನು ಚಿಂತಿಸುತ್ತಾ ಶೋಕಮಗ್ನನಾಗುವೆನು.॥2॥
ಮೂಲಮ್ - 3
ಸ್ಕಂಧಾವಾರನಿವೇಶೇನ ತೇನ ತಸ್ಯ ಮಹಾತ್ಮನಃ ।
ಹಯಹಸ್ತಿಕರೀಷೈಶ್ಚ ಉಪಮರ್ದಃ ಕೃತೋ ಭೃಶಮ್ ॥
ಅನುವಾದ
ಮಹಾತ್ಮಾ ಭರತನ ಸೈನ್ಯವು ಇಲ್ಲೇ ತಂಗಿದ್ದರಿಂದ ಆನೆ-ಕುದುರೆಗಳ ಲದ್ದಿಯಿಂದ ಇಲ್ಲಿನ ಭೂಮಿಯು ಹೆಚ್ಚು ಅಪವಿತ್ರವಾಗಿದೆ.॥3॥
ಮೂಲಮ್ - 4
ತಸ್ಮಾದನ್ಯತ್ರ ಗಚ್ಛಾಮ ಇತಿ ಸಂಚಿಂತ್ಯ ರಾಘವಃ ।
ಪ್ರಾತಿಷ್ಠತ ಸ ವೈದೇಹ್ಯಾ ಲಕ್ಷ್ಮಣೇನ ಚ ಸಂಗತಃ ॥
ಅನುವಾದ
ಆದ್ದರಿಂದ ನಾವು ಬೇರೆಡೆಗೆ ಹೋಗಬೇಕು ಎಂದು ಯೋಚಿಸಿ ಶ್ರೀ ರಘುನಾಥನು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಲ್ಲಿಂದ ಹೊರಟುಬಿಟ್ಟನು.॥4॥
ಮೂಲಮ್ - 5
ಸೋತ್ರೇರಾಶ್ರಮಮಾಸಾದ್ಯ ತಂ ವವಂದೇ ಮಹಾಯಶಾಃ ।
ತಂ ಚಾಪಿ ಭಗವಾನತ್ರಿಃ ಪುತ್ರವತ್ ಪ್ರತ್ಯಪದ್ಯತ ॥
ಅನುವಾದ
ಅಲ್ಲಿಂದ ಅತ್ರಿಯ ಆಶ್ರಮಕ್ಕೆ ತಲುಪಿ ಮಹಾಯಶಸ್ವೀ ಶ್ರೀರಾಮನು ಅವರಿಗೆ ವಂದಿಸಿದನು ಹಾಗೂ ಪೂಜ್ಯರಾದ ಅತ್ರಿಗಳೂ ಕೂಡ ಅವನನ್ನು ಮಗನಂತೆ ಸ್ನೇಹಪೂರ್ವಕ ಆಲಿಂಗಿಸಿ ನೆತ್ತಿಯನ್ನು ಆಘ್ರಾಣಿಸಿದರು.॥5॥
ಮೂಲಮ್ - 6
ಸ್ವಯಮಾತಿಥ್ಯಮಾದಿಶ್ಯ ಸರ್ವಮಸ್ಯ ಸುಸತ್ಕೃತಮ್ ।
ಸೌಮಿತ್ರಿಂ ಚ ಮಹಾಭಾಗಂ ಸೀತಾಂ ಚಸಮಸಾಂತ್ವಯತ್ ॥
ಅನುವಾದ
ಅವರು ಸ್ವತಃ ಶ್ರೀರಾಮನಿಗೆ ಆತಿಥ್ಯ - ಸತ್ಕಾರ ಮಾಡಿ, ಮಹಾಭಾಗ ಲಕ್ಷ್ಮಣ ಮತ್ತು ಸೀತೆ ಇವರನ್ನೂ ಸತ್ಕಾರಪೂರ್ವಕ ಸಂತುಷ್ಟಗೊಳಿಸಿದರು.॥6॥
ಮೂಲಮ್ - 7
ಪತ್ನೀಂ ಚ ತಮನುಪ್ರಾಪ್ತಾಂ ವೃದ್ಧಾಮಾಮಂತ್ರ್ಯ ಸತ್ಕೃತಾಮ್ ।
ಸಾಂತ್ವಯಾಮಾಸ ಧರ್ಮಜ್ಞಃ ಸರ್ವಭೂತಹಿತೇ ರತಃ ॥
ಮೂಲಮ್ - 8
ಅನಸೂಯಾಂ ಮಹಾಭಾಗಾಂ ತಾಪಸೀಂ ಧರ್ಮಚಾರಿಣೀಮ್ ।
ಪ್ರತಿಗೃಹ್ಣೀಷ್ವ ವೈದೇಹೀಮಬ್ರವೀದೃಷಿಸತ್ತಮಃ ॥
ಅನುವಾದ
ಸಮಸ್ತ ಪ್ರಾಣಿಗಳ ಹಿತದಲ್ಲಿ ತತ್ಪರರಾದ ಧರ್ಮಜ್ಞ ಮುನಿಶ್ರೇಷ್ಠ ಅತ್ರಿಮಹರ್ಷಿಗಳು, ಎಲ್ಲರಿಂದ ಸಮ್ಮಾನಿತಳಾದ ತಪಸ್ವಿನೀ ಹಾಗೂ ಧರ್ಮಪರಾಯಣಾ ವೃದ್ಧಳಾದ ತನ್ನ ಪತ್ನಿಯಾದ ಅನಸೂಯಾದೇವಿಯನ್ನು ಸಂಬೋಧಿಸಿ ಸಾಂತ್ವನದ ಮಾತುಗಳಿಂದ ಸಂತುಷ್ಟಗೊಳಿಸಿ ಹೇಳಿದರು - ದೇವಿ! ವಿದೇಹರಾಜನಂದಿನೀ ಸೀತೆಯನ್ನು ಕರೆದುಕೊಂಡು ಹೋಗಿ ಸತ್ಕಾರಪೂರ್ವಕ ಆದರಿಸು.॥7-8॥
ಮೂಲಮ್ - 9
ರಾಮಾಯ ಚಾಚಚಕ್ಷೇ ತಾಂ ತಾಪಸೀಂ ಧರ್ಮಚಾರಿಣೀಮ್ ।
ದಶ ವರ್ಷಾಣ್ಯನಾವೃಷ್ಟ್ಯಾ ದಗ್ಧೇಲೋಕೇನಿರಂತರಮ್ ॥
ಮೂಲಮ್ - 10
ಯಯಾ ಮೂಲಫಲೇ ಸೃಷ್ಟೇ ಜಾಹ್ನವೀ ಚ ಪ್ರವರ್ತಿತಾ ।
ಉಗ್ರೇಣ ತಪಸಾ ಯುಕ್ತಾ ನಿಯಮೈಶ್ಚಾಪ್ಯಲಂಕೃತಾ ॥
ಮೂಲಮ್ - 11
ದಶ ವರ್ಷಸಹಸ್ರಾಣಿ ಯಯಾ ತಪ್ತಂ ಮಹತ್ತಪಃ ।
ಅನಸೂಯಾವ್ರತೈಸ್ತಾತ ಪ್ರತ್ಯೂಹಾಶ್ಚ ನಿಬರ್ಹಿತಾಃ ॥
ಅನುವಾದ
ಅನಂತರ ಅವರು ಶ್ರೀರಾಮಚಂದ್ರನಿಗೆ ಧರ್ಮಪಾರಾಯಣ ತಪಸ್ವಿನೀ ಅನಸೂಯೆಯ ಪರಿಚಯಾಡಿಸುತ್ತಾ ಹೇಳಿದರು - ಹಿಂದೊಮ್ಮೆ ಹತ್ತು ವರ್ಷಗಳ ಕಾಲ ಮಳೆಯೇ ಆಗಲಿಲ್ಲ, ಆಗ ಇಡೀ ಜಗತ್ತು ನಿರಂತರ ಸುಡತೊಡಗಿದಾಗ, ಈಕೆಯು ಉಗ್ರತಪಸ್ಸು ಮಾಡುತ್ತಾ, ಕಠೋರ ನಿಯಮಗಳಿಂದ ಅಲಂಕೃತಳಾಗಿ, ತನ್ನ ತಪಸ್ಸಿನ ಪ್ರಭಾವದಿಂದ ಇಲ್ಲಿ ಫಲ-ಮೂಲಗಳನ್ನು ಉತ್ಪನ್ನಗೊಳಿಸಿ, ಮಂದಾಕಿನಿಯ ಪವಿತ್ರ ಪ್ರವಾಹವನ್ನು ಹರಿಸಿದಳು. ಅಯ್ಯಾ! ಇವಳು ಹತ್ತು ಸಾವಿರ ವರ್ಷ ಭಾರೀ ತಪಸ್ಸು ಮಾಡಿ, ತನ್ನ ಉತ್ತಮ ವ್ರತಗಳ ಪ್ರಭಾವದಿಂದ ಋಷಿಗಳನ್ನು ಎಲ್ಲ ವಿಘ್ನಗಳಿಂದ ಕಾಪಾಡಿದ ಅನಸೂಯಾದೇವಿ ಇವಳೇ ಆಗಿರುವಳು.॥9-11॥
ಮೂಲಮ್ - 12
ದೇವಕಾರ್ಯನಿಮಿತ್ತಂ ಚ ಯಯಾಸಂತ್ವರಮಾಣಯಾ ।
ದಶರಾತ್ರಂ ಕೃತಾ ರಾತ್ರಿಃ ಸೇಯಂ ಮಾತೇವ ತೇನಘ ॥
ಅನುವಾದ
ನಿಷ್ಪಾಪ ಶ್ರೀರಾಮನೇ! ಇವಳು ದೇವತೆಗಳ ಕಾರ್ಯಕ್ಕಾಗಿ ಅತ್ಯಂತ ಉತ್ಸಾಹಿತಳಾಗಿ ಹತ್ತು ರಾತ್ರಿಗಳಿಗೆ ಸಮವಾಗಿ ಒಂದು ರಾತ್ರೆಯನ್ನು ಮಾಡಿದ್ದಳು. ಅದೇ ಈ ಅನಸೂಯಾದೇವಿಯು ನಿನಗೆ ತಾಯಿಯಂತೆ ಪೂಜನೀಯವಾಗಿದ್ದಾಳೆ.॥12॥
ಮೂಲಮ್ - 13
ತಾಮಿಮಾಂ ಸರ್ವಭೂತಾನಾಂ ನಮಸ್ಕಾರ್ಯಾಂ ತಪಸ್ವಿನೀಮ್ ।
ಅಭಿಗಚ್ಛತು ವೈದೇಹೀ ವೃದ್ಧಾಮಕ್ರೋಧನಾಂ ಸದಾ ॥
ಅನುವಾದ
ಈಕೆಯು ಸಮಸ್ತ ಪ್ರಾಣಿಗಳಿಗೆ ವಂದನೀಯ ತಪಸ್ವಿನಿಯಾಗಿದ್ದಾಳೆ. ಕ್ರೋಧವಾದರೋ ಇವಳನ್ನು ಎಂದೂ ಸ್ಪರ್ಶಿಸಲೇ ಇಲ್ಲ. ವಿದೇಹನಂದಿನೀ ಸೀತೆಯು ಈ ವೃದ್ಧಳಾದ ಅನಸೂಯೆಯ ಬಳಿಗೆ ಹೋಗಲಿ.॥13॥
ಮೂಲಮ್ - 14
ಏವಂ ಬ್ರುವಾಣಂ ತಮೃಷಿಂ ತಥೇತ್ಯುಕ್ತ್ವಾ ಸ ರಾಘವಃ ।
ಸೀತಾಮಾಲೋಕ್ಯ ಧರ್ಮಜ್ಞಾಮಿದಂ ವಚನಮಬ್ರವೀತ್ ॥
ಅನುವಾದ
ಹೀಗೆ ಹೇಳುತ್ತಿರುವ ಅತ್ರಿ ಮುನಿಗಳಲ್ಲಿ ‘ಹಾಗೆಯೇ ಆಗಲಿ’ ಎಂದು ಹೇಳಿ ಶ್ರೀರಾಮಚಂದ್ರನು ಧರ್ಮಜ್ಞೆ ಸೀತೆಯ ಕಡೆಗೆ ನೋಡಿ ಹೇಳಿದನು.॥14॥
ಮೂಲಮ್ - 15
ರಾಜಪುತ್ರಿ ಶ್ರುತಂ ತ್ವೇತನ್ಮುನೇರಸ್ಯ ಸಮೀರಿತಮ್ ।
ಶ್ರೇಯೋಽರ್ಥಮಾತ್ಮನಃ ಶೀಘ್ರಮಭಿಗಚ್ಛ ತಪಸ್ವಿನೀಮ್ ॥
ಅನುವಾದ
ರಾಜಕುಮಾರಿ! ಮಹರ್ಷಿ ಅತ್ರಿಯ ಮಾತನ್ನು ನೀನು ಕೇಳಿಯೇ ಇರುವೆ. ಈಗ ತನ್ನ ಕಲ್ಯಾಣಕ್ಕಾಗಿ ನೀನು ಶೀಘ್ರವಾಗಿ ಈ ತಪಸ್ವಿನೀ ದೇವಿಯ ಬಳಿಗೆ ಹೋಗು.॥15॥
ಮೂಲಮ್ - 16
ಅನಸೂಯೇತಿ ಯಾ ಲೋಕೇ ಕರ್ಮಭಿಃಖ್ಯಾತಿಮಾಗತಾ ।
ತಾಂ ಶೀಘ್ರಮಭಿಗಚ್ಛ ತ್ವಮಭಿಗಮ್ಯಾಂ ತಪಸ್ವಿನೀಮ್ ॥
ಅನುವಾದ
ತನ್ನ ಸತ್ಕರ್ಮಗಳಿಂದ ಜಗತ್ತಿನಲ್ಲಿ ಅನಸೂಯಾ ಎಂಬ ಹೆಸರಿನಿಂದ ವಿಖ್ಯಾತಳಾದ ಈ ತಪಸ್ವಿನೀ ದೇವಿಯನ್ನು ನೀನು ಆಶ್ರಯಿಸಲು ಯೋಗ್ಯಳಾಗಿರುವಳು; ನೀನು ಬೇಗನೇ ಆಕೆಯ ಬಳಿಗೆ ಹೋಗ.॥16॥
ಮೂಲಮ್ - 17
ಸೀತಾ ತ್ವೇತದ್ವಚಃ ಶ್ರುತ್ವಾ ರಾಘವಸ್ಯ ಯಶಸ್ವಿನೀ ।
ತಾಮತ್ರಿಪತ್ನೀಂ ಧರ್ಮಜ್ಞಾಮಭಿಚಕ್ರಾಮ ಮೈಥಿಲೀ ॥
ಅನುವಾದ
ಶ್ರೀರಾಮಚಂದ್ರನ ಮಾತನ್ನು ಕೇಳಿ ಯಶಸ್ವಿನೀ ಮಿಥಿಲೇಶ ಕುಮಾರಿ ಸೀತೆಯು ಧರ್ಮವನ್ನು ತಿಳಿದಿರುವ ಅತ್ರಿ ಪತ್ನೀ ಅನಸೂಯೆಯ ಬಳಿಗೆ ಹೋದಳು.॥17॥
ಮೂಲಮ್ - 18
ಶಿಥಿಲಾಂ ವಲಿತಾಂ ವೃದ್ಧಾಂ ಜರಾಪಾಂಡುರಮೂರ್ಧಜಾಮ್ ।
ಸತತಂ ವೇಪಮಾನಾಂಗೀಂ ಪ್ರವಾತೇ ಕದಲೀಮಿವ ॥
ಅನುವಾದ
ಅನಸೂಯೆಯು ವೃದ್ಧಳಾಗಿ ಶಿಥಿಲಳಾಗಿದ್ದಳು; ಆಕೆಯ ಶರೀರದಲ್ಲಿ ನಿರಿಗೆಗಳು ಬಿದ್ದಿದ್ದವು, ತಲೆಯ ಕೂದಲು ಹಣ್ಣಾಗಿದ್ದವು. ವೇಗವಾದ ಗಾಳಿಗೆ ಅಲುಗಾಡುತ್ತಿರುವ ಬಾಳೆಯಂತೆ ಅವಳ ಶರೀರ ನಡುಗುತ್ತಾ ಇತ್ತು.॥18॥
ಮೂಲಮ್ - 19
ತಾಂ ತು ಸೀತಾ ಮಹಾಭಾಗಾಮನಸೂಯಾಂ ಪ್ರತಿವ್ರತಾಮ್ ।
ಅಭ್ಯವಾದಯದವ್ಯಗ್ರಾ ಸ್ವಂ ನಾಮ ಸಮುದಾಹರತ್ ॥
ಅನುವಾದ
ಸೀತೆಯು ಬಳಿಗೆ ಹೋಗಿ ಶಾಂತಭಾವದಿಂದ ತನ್ನ ಹೆಸರನ್ನು ತಿಳಿಸಿ, ಆ ಮಹಾಭಾಗಾ ಪತಿವ್ರತಾ ಅನಸೂಯೆಗೆ ನಮಸ್ಕಾರ ಮಾಡಿದಳು.॥19॥
ಮೂಲಮ್ - 20
ಅಭಿವಾದ್ಯ ಚ ವೈದೇಹೀ ತಾಪಸೀಂ ತಾಂ ದಮಾನ್ವಿತಾಮ್ ।
ಬದ್ಧಾಂಜಲಿಪುಟಾ ಹೃಷ್ಟಾ ಪರ್ಯಪೃಚ್ಛದನಾಮಯಮ್ ॥
ಅನುವಾದ
ಆ ಸಂಯಮಶೀಲ ತಪಸ್ವಿನಿಯನ್ನು ವಂದಿಸಿ ಹರ್ಷಗೊಂಡ ಸೀತೆಯು ಕೈಗಳನ್ನು ಮುಗಿದುಕೊಂಡು ಅವರ ಕ್ಷೇಮಸಮಾಚಾರ ಕೇಳಿದಳು.॥20॥
ಮೂಲಮ್ - 21
ತತಃ ಸೀತಾಂ ಮಹಾಭಾಗಾಂ ದೃಷ್ಟ್ವಾ ತಾಂ ಧರ್ಮಚಾರಿಣೀಮ್ ।
ಸಾಂತ್ವಯಂತ್ಯಬ್ರವೀದ್ ವೃದ್ಧಾ ದಿಷ್ಟ್ಯಾ ಧರ್ಮಮವೇಕ್ಷಸೇ ॥
ಅನುವಾದ
ಧರ್ಮವನ್ನು ಆಚರಿಸುವ ಮಹಾಭಾಗಾ ಸೀತೆಯನ್ನು ನೋಡಿ ವೃದ್ಧಳಾದ ಅನಸೂಯೆಯು ಆಕೆಯನ್ನು ಸಾಂತ್ವನಗೊಳಿಸುತ್ತಾ ಹೇಳಿದಳು - ಸೀತೇ! ನೀನು ಧರ್ಮದಲ್ಲೇ ದೃಷ್ಟಿ ಇಟ್ಟಿರುವೆ; ಇದು ಸೌಭಾಗ್ಯದ ಮಾತಾಗಿದೆ.॥21॥
ಮೂಲಮ್ - 22
ತ್ಯಕ್ತ್ವಾ ಜ್ಞಾತಿಜನಂ ಸೀತೇ ಮಾನಮೃದ್ಧಿಂ ಚ ಮಾನಿನಿ ।
ಅವರುದ್ಧಂ ವನೇ ರಾಮಂ ದಿಷ್ಟ್ಯಾ ತ್ವಮನುಗಚ್ಛಸಿ ॥
ಅನುವಾದ
ಮಾನಿನೀ ಸೀತೆ! ಬಂಧು-ಬಾಂಧವರನ್ನು ಬಿಟ್ಟು, ಅವರಿಂದ ಸಿಗುವ ಗೌರವ-ಪ್ರತಿಷ್ಠೆಗಳನ್ನು ತ್ಯಜಿಸಿ, ನೀನು ಕಾಡಿಗೆ ಬಂದ ಶ್ರೀರಾಮನನ್ನು ಅನುಸರಿಸುತ್ತಿರುವುದು ದೊಡ್ಡ ಸೌಭಾಗ್ಯದ ಮಾತಾಗಿದೆ.॥22॥
ಮೂಲಮ್ - 23
ನಗರಸ್ಥೋ ವನಸ್ಥೋ ವಾ ಶುಭೋ
ವಾ ಯದಿ ವಾಶುಭಃ ।
ಯಾಸಾಂ ಸ್ತ್ರೀಣಾಂ ಪ್ರಿಯೋ ಭರ್ತಾ
ತಾಸಾಂ ಲೋಕಾ ಮಹೋದಯಾಃ ॥
ಅನುವಾದ
ತನ್ನ ಪತಿಯು ನಾಡಿನಲ್ಲಿರಲಿ, ಕಾಡಿನಲ್ಲಿರಲಿ, ಒಳ್ಳೆಯವನಿರಲಿ, ಕೆಟ್ಟವನಾಗಿರಲಿ ಅಂತಹವನು ಪ್ರಿಯವೆನಿಸುವ ಸ್ತ್ರೀಯರಿಗೆ ಮಹಾನ್ ಅಭ್ಯುದಯಶಾಲಿ ಲೋಕಗಳ ಪ್ರಾಪ್ತಿಯಾಗುತ್ತದೆ.॥23॥
ಮೂಲಮ್ - 24
ದುಃಶೀಲಃ ಕಾಮವೃತ್ತೋ ವಾ ಧನೈರ್ವಾಪರಿವರ್ಜಿತಃ ।
ಸ್ತ್ರೀಣಾಮಾರ್ಯಸ್ವಭಾವಾನಾಂ ಪರಮಂ ದೈವತಂ ಪತಿಃ ॥
ಅನುವಾದ
ಪತಿಯು ಕೆಟ್ಟ ಸ್ವಭಾವದ, ಮನಸ್ಸಿಗೆ ಬಂದ ಹಾಗೆ ವರ್ತಿಸುವ ಅಥವಾ ಧನಹೀನನೇ ಆಗಿರಲೇನು, ಅವನು ಉತ್ತಮ ಸ್ವಭಾವವುಳ್ಳ ನಾರಿಯರಿಗೆ ಶ್ರೇಷ್ಠ ದೇವತೆಯಂತೆ ಇದ್ದಾನೆ.॥24॥
ಮೂಲಮ್ - 25
ನಾತೋ ವಿಶಿಷ್ಟಂ ಪಶ್ಯಾಮಿ ಬಾಂಧವಂ ವಿಮೃಶಂತ್ಯಹಮ್ ।
ಸರ್ವತ್ರ ಯೋಗ್ಯಂ ವೈದೇಹಿ ತಪಃಕೃತಮಿವಾವ್ಯಯಮ್ ॥
ಅನುವಾದ
ವಿದೇಹ ರಾಜನಂದಿನೀ! ನಾನು ಬಹಳ ವಿಚಾರಮಾಡಿದರೂ ಪತಿಯಿಂದ ಮಿಗಿಲಾದ ಯಾವುದೇ ಹಿತಕಾರೀ ಬಂಧು ಕಾಣಿಸುವುದಿಲ್ಲ. ತಾನು ಮಾಡಿದ ತಪಸ್ಸಿನ ಅವಿನಾಶೀ ಫಲದಂತೆ, ಅವನು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಎಲ್ಲೆಡೆ ಸುಖಕೊಡಲು ಸಮರ್ಥ ನಾಗಿರುವನು.॥25॥
ಮೂಲಮ್ - 26
ನ ತ್ವೇವಮನುಗಚ್ಛಂತಿ ಗುಣದೋಷಮಸತ್ಸ್ತ್ರಿಯಃ ।
ಕಾಮವಕ್ತವ್ಯಹೃದಯಾ ಭರ್ತೃನಾಥಾಶ್ಚರಂತಿ ಯಾಃ ॥
ಅನುವಾದ
ತನ್ನ ಪತಿಯ ಮೇಲೆ ಶಾಸನ ಮಾಡುವ, ಕಾಮಕ್ಕೆ ಅಧೀನ ಚಿತ್ತವುಳ್ಳ ಸಾಧ್ವಿಯಲ್ಲದ ಸ್ತ್ರೀಯರು ಹೀಗೆ ಪತಿಯನ್ನು ಅನುಸರಿಸುವುದಿಲ್ಲ. ಅವರಿಗೆ ಗುಣ-ದೋಷಗಳ ಜ್ಞಾನ ಇರುವುದಿಲ್ಲ. ಆದ್ದರಿಂದ ಅವರು ಮನಬಂದಂತೆ ಅಲೆಯುತ್ತಾ ಇರುತ್ತಾರೆ.॥26॥
ಮೂಲಮ್ - 27
ಪ್ರಾಪ್ನುವಂತ್ಯಯಶಶ್ಚೈವ ಧರ್ಮಭ್ರಂಶಂ ಚ ಮೈಥಿಲಿ ।
ಅಕಾರ್ಯವಶಮಾಪನ್ನಾಃ ಸ್ತ್ರಿಯೋ ಯಾಃ ಖಲುತದ್ವಿಧಾಃ ॥
ಅನುವಾದ
ಮಿಥಿಲೇಶಕುಮಾರೀ! ಇಂತಹ ನಾರಿಯರು ಖಂಡಿತವಾಗಿಯೂ ಅನುಚಿತ ಕರ್ಮದಲ್ಲಿ ಸಿಕ್ಕಿಹಾಕಿಕೊಂಡು ಧರ್ಮದಿಂದ ಭ್ರಷ್ಟರಾಗಿ ಹೋಗುವರು. ಜಗತ್ತಿನಲ್ಲಿ ಅವಳಿಗೆ ಅಪಕೀರ್ತಿ ಬರುತ್ತದೆ.॥27॥
ಮೂಲಮ್ - 28
ತ್ವದ್ವಿಧಾಸ್ತು ಗುಣೈರ್ಯುಕ್ತಾ ದೃಷ್ಟಲೋಕಪರಾವರಾಃ ।
ಸ್ತ್ರಿಯಃ ಸ್ವರ್ಗೇ ಚರಿಷ್ಯಂತಿ ಯಥಾ ಪುಣ್ಯಕೃತಸ್ತಥಾ ॥
ಅನುವಾದ
ಆದರೆ ನಿನ್ನಂತಹ ಲೋಕ - ಪರಲೋಕಕ್ಕೆ ಹೋಗುವ ಸಾಧ್ವಿ ಸ್ತ್ರೀಯರು ಉತ್ತಮಗುಣಗಳಿಂದ ಯುಕ್ತರಾಗಿ ಪುಣ್ಯಕರ್ಮಗಳಲ್ಲಿ ಮುಳುಗಿರುತ್ತಾರೆ. ಆದ್ದರಿಂದ ಅವರು ಇತರ ಪುಣ್ಯಾತ್ಮರಂತೆ ಸ್ವರ್ಗದಲ್ಲಿ ಸಂಚರಿಸುವರು.॥28॥
ಮೂಲಮ್ - 29
ತದೇವಮೇತಂ ತ್ವಮನುವ್ರತಾ ಸತೀ
ಪತಿಪ್ರಧಾನಾ ಸಮಯಾನುವರ್ತಿನೀ ।
ಭವ ಸ್ವಭರ್ತುಃ ಸಹಧರ್ಮಚಾರಿಣೀ
ಯಶಶ್ಚ ಧರ್ಮಂ ಚ ತತಃ ಸಮಾಪ್ಸ್ಯಸಿ ॥
ಅನುವಾದ
ಆದ್ದರಿಂದ ನೀನು ಹೀಗೆ ತನ್ನ ಪತಿಯಾದ ಶ್ರೀರಾಮಚಂದ್ರನ ಸೇವೆಯಲ್ಲೇ ತೊಡಗಿರು, ಸತೀಧರ್ಮವನ್ನು ಪಾಲಿಸು, ಪತಿಯನ್ನು ಪ್ರಧಾನ ದೇವತೆ ಎಂದು ತಿಳಿದು, ಪ್ರತಿಯೊಂದು ಸಮಯ ಅವನನ್ನು ಅನುಸರಿಸುತ್ತಾ ನಿನ್ನ ಸ್ವಾಮಿಯ ಸಹಧರ್ಮಿಣಿಯಾಗು, ಇದರಿಂದ ನಿನಗೆ ಸತ್ಕೀರ್ತಿ ಮತ್ತು ಧರ್ಮ ಎರಡೂ ದೊರೆಯುವವು.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹದಿನೆಳನೆಯ ಸರ್ಗ ಪೂರ್ಣವಾಯಿತು ॥117॥