वाचनम्
ಭಾಗಸೂಚನಾ
ವೃದ್ಧ ಕುಲಪತಿಯ ಸಂಗಡ ಅನೇಕ ಋಷಿಗಳು ಚಿತ್ರಕೂಟವನ್ನು ಬಿಟ್ಟು ಹೊರಟುಹೋದುದು
ಮೂಲಮ್ - 1
ಪ್ರತಿಯಾತೇ ತು ಭರತೇ ವಸನ್ರಾಮಸ್ತದಾವನೇ ।
ಲಕ್ಷಯಾಮಾಸ ಸೋದ್ವೇಗಮಥೌತ್ಸುಕ್ಯಂ ತಪಸ್ವಿನಾಮ್ ॥
ಅನುವಾದ
ಭರತನು ಮರಳಿ ಹೋದ ಬಳಿಕ ಶ್ರೀರಾಮಚಂದ್ರನು ವನದಲ್ಲಿ ವಾಸಿಸತೊಡಗಿದಾಗ ಅಲ್ಲಿಯ ತಪಸ್ವಿಗಳು ಉದ್ವಿಗ್ನರಾಗಿ ಅಲ್ಲಿಂದ ಬೇರೆ ಕಡೆಗೆ ಹೋಗಲು ಉತ್ಸುಕರಾಗಿರುವುದನ್ನು ಅವನು ನೋಡಿದನು.॥1॥
ಮೂಲಮ್ - 2
ಯೇ ತತ್ರ ಚಿತ್ರಕೂಟಸ್ಯ ಪುರಸ್ತಾತ್ತಾಪಸಾಶ್ರಮೇ ।
ರಾಮಮಾಶ್ರಿತ್ಯ ನಿರತಾಸ್ತಾನಲಕ್ಷಯದುತ್ಸುಕಾನ್ ॥
ಅನುವಾದ
ಮೊದಲು ಚಿತ್ರಕೂಟದ ಆ ಆಶ್ರಮದಲ್ಲಿ ತಪಸ್ವೀ ಶ್ರೀರಾಮನನ್ನು ಆಶ್ರಯಿಸಿ ಸದಾ ಆನಂದಮಗ್ನರಾಗಿದ್ದವರು ಉದ್ವಿಗ್ನರಾಗಿರುವುದನ್ನು ಶ್ರೀರಾಮನು ಗಮನಿಸಿದನು.॥2॥
ಮೂಲಮ್ - 3
ನಯನೈರ್ಭ್ರುಕುಟೀಭಿಶ್ಚ ರಾಮಂ ನಿರ್ದಿಶ್ಯ ಶಂಕಿತಾಃ ।
ಅನ್ಯೋನ್ಯಮುಪಜಲ್ಪಂತಃ ಶಚೈಶ್ಚಕ್ರುರ್ಮಿಥಃ ಕಥಾಃ ॥
ಅನುವಾದ
ಕಣ್ಸನ್ನೆಯಿಂದ ರಾಮನ ಕುರಿತು ಸಂಕೇತ ಮಾಡುತ್ತಾ ಮನಸ್ಸಿನಲ್ಲೇ ಶಂಕಿತರಾಗಿ ಪರಸ್ಪರ ಸಲಹೆ ಪಡೆಯುತ್ತಾ ಆ ತಪಸ್ವೀ ಮುನಿಗಳು ಮೆಲ್ಲಗೆ ಪಿಸುಗುಟ್ಟುತ್ತಿದ್ದರು.॥3॥
ಮೂಲಮ್ - 4
ತೇಷಾಮೌತ್ಸುಕ್ಯಮಾಲಕ್ಷ್ಯ ರಾಮಸ್ತ್ವಾತ್ಮನಿ ಶಂಕಿತಃ ।
ಕೃತಾಂಜಲಿರುವಾಚೇದಮೃಷಿಂ ಕುಲಪತಿಂ ತತಃ ॥
ಅನುವಾದ
ಉತ್ಕಂಠಿತರಾದ ಅವರನ್ನು ನೋಡಿ ಶ್ರೀರಾಮನ ಮನಸ್ಸಿನಲ್ಲಿ ನನ್ನಿಂದ ಯಾವುದಾದರೂ ಅಪರಾಧ ಸಂಭವಿಸಲಿಲ್ಲವಲ್ಲ ಎಂಬ ಶಂಕೆ ಉಂಟಾಯಿತು. ಆಗ ಅವನು ಕೈಮುಗಿದು ಕುಲಪತಿ ಮಹರ್ಷಿಯ ಬಳಿ ಹೀಗೆ ಹೇಳಿದನು.॥4॥
ಮೂಲಮ್ - 5
ನ ಕಚ್ನಿದ್ಭಗವನ್ ಕಿಂಚಿತ್ ಪೂರ್ವವೃತ್ತಮಿದಂ ಮಯಿ ।
ದೃಶ್ಯತೇ ವಿಕೃತಂ ಯೇನ ವಿಕ್ರಿಯಂತೇ ತಪಸ್ವಿನಃ ॥
ಅನುವಾದ
ಪೂಜ್ಯರೇ! ನನ್ನ ಪೂರ್ವಜರಲ್ಲಿದ್ದ ಯಾವುದಾದರೂ ಸದ್ಗುಣಗಳು ನನ್ನಲ್ಲಿ ಕಾಣುತ್ತಿಲ್ಲವೇ? ಅಥವಾ ನನ್ನಲ್ಲಿ ಯಾವುದಾದರೂ ವಿಕೃತಭಾವ ಕಂಡು ಬಂತೆ? ಇಲ್ಲಿಯ ತಪಸ್ವೀ ಮುನಿಗಳು ವಿಕಾರವನ್ನು ಏಕೆ ಹೊಂದಿರುವರು.॥5॥
ಮೂಲಮ್ - 6
ಪ್ರಮಾದಾಚ್ಚರಿತಂ ಕಿಂಚಿತ್ ಕಚ್ಚಿನ್ನಾವರಜಸ್ಯ ಮೇ ।
ಲಕ್ಷ್ಮಣಸ್ಯರ್ಷಿಭಿರ್ದೃಷ್ಟಂ ನಾನುರೂಪಂ ಮಹಾತ್ಮನಃ ॥
ಅನುವಾದ
ನನ್ನ ತಮ್ಮನಾದ ಮಹಾತ್ಮಾ ಲಕ್ಷ್ಮಣನ ಪ್ರಮಾದವಶ ಅವನಿಗೆ ಯೋಗ್ಯವಲ್ಲದ ಯಾವುದಾದರೂ ಅನಾಚಾರವನ್ನು ಋಷಿಗಳು ನೋಡಿರುವರೇ.॥6॥
ಮೂಲಮ್ - 7
ಕಚ್ಚಿಚ್ಛುಶ್ರೂಷಮಾಣಾ ವಃಶುಶ್ರೂಷಣಪರಾ ಮಯಿ ।
ಪ್ರಮದಾಭ್ಯುಚಿತಾಂ ವೃತ್ತಿಂ ಸೀತಾ ಯುಕ್ತಾಂ ನ ವರ್ತತೇ ॥
ಅನುವಾದ
ಅಥವಾ ಅರ್ಘ್ಯ-ಪಾದ್ಯಾದಿಗಳಿಂದ ಸದಾ ನಿಮ್ಮ ಸೇವೆ ಮಾಡುತ್ತಿರುವ ಸೀತೆಯು ಈಗ ನನ್ನ ಸೇವೆಯಲ್ಲಿ ತೊಡಗಿರುವ ಕಾರಣ ಓರ್ವ ಗೃಹಸ್ಥ ಗೃಹಿಣಿ ನಾರಿಗೆ ಅನುರೂಪವಾಗಿ ಋಷಿಗಳ ಸೇವೆ ಸರಿಯಾಗಿ ಮಾಡಲಿಲ್ಲವೇ.॥7॥
ಮೂಲಮ್ - 8
ಅಥರ್ಷಿರ್ಜರಯಾ ವೃದ್ಧಸ್ತಪಸಾ ಚ ಜರಾಂ ಗತಃ ।
ವೇಪಮಾನ ಇವೋವಾಚ ರಾಮಂಭೂತದಯಾಪರಮ್ ॥
ಅನುವಾದ
ಶ್ರೀರಾಮನು ಹೀಗೆ ಕೇಳಿದಾಗ ವಯೋವೃದ್ಧರೂ, ತಪೋವೃದ್ಧರೂ ಆದ ಓರ್ವಮಹರ್ಷಿಯು ನಡುಗುತ್ತಾ ಸಮಸ್ತ ಪ್ರಾಣಿಗಳ ಮೇಲೆ ದಯೆ ಮಾಡುವ ಶ್ರೀರಾಮನಲ್ಲಿ ಹೇಳಿದನು.॥8॥
ಮೂಲಮ್ - 9
ಕುತಃ ಕಲ್ಯಾಣಸತ್ತ್ವಾಯಾಃ ಕಲ್ಯಾಣಾಭಿರತೆಃ ಸದಾ ।
ಚಲನಂ ತಾತ ವೈದೇಹ್ಯಾಸ್ತಪಸ್ವಿಷು ವಿಶೇಷತಃ ॥
ಅನುವಾದ
ಅಯ್ಯಾ! ಸ್ವಭಾವದಿಂದಲೇ ಕಲ್ಯಾಣಮಯಿಯೂ, ಸದಾ ಎಲ್ಲರ ಕಲ್ಯಾಣದಲ್ಲೇ ರತಳೂ ಆದ ವಿದೇಹನಂದಿನೀ ಸೀತೆಯು ವಿಶೇಷವಾಗಿ ತಪಸ್ವಿಗಳ ಕುರಿತು ವರ್ತಿಸುವಾಗ ತನ್ನ ಕಲ್ಯಾಣಮಯ ಸ್ವಭಾವದಿಂದ ವಿಚಲಿತಳಾಗುವುದು ಹೇಗೆ ಸಂಭವಿಸಬಹುದು.॥9॥
ಮೂಲಮ್ - 10
ತ್ವನ್ನಿಮಿತ್ತಮಿದಂ ತಾವತ್ತಾಪಸಾನ್ ಪ್ರತಿ ವರ್ತತೇ ।
ರಕ್ಷೋಭ್ಯಸ್ತೇನ ಸಂವಿಗ್ನಾಃ ಕಥಯಂತಿ ಮಿಥಃ ಕಥಾಃ ॥
ಅನುವಾದ
ನಿನ್ನಿಂದಲೇ ತಾಪಸಿಗಳ ಮೇಲೆ ರಾಕ್ಷಸರ ಕಡೆಯಿಂದ ಭಯವು ಉಪಸ್ಥಿತವಾಗುವುದಿದೆ, ಇದರಿಂದ ಉದ್ವಿಗ್ನರಾದ ಋಷಿಗಳು ಪರಸ್ಪರ ಏನೋ ಮಾತನಾಡಿಕೊಳ್ಳುತ್ತಿದ್ದಾರೆ.॥10॥
ಮೂಲಮ್ - 11
ರಾವಣಾವರಜಃ ಕಶ್ಚಿತ್ಖರೋ ನಾಮೇಹ ರಾಕ್ಷಸಃ ।
ಉತ್ಪಾಟ್ಯ ತಾಪಸಾನ್ಸರ್ವಾನ್ ಜನಸ್ಥಾನನಿವಾಸಿನಃ ॥
ಮೂಲಮ್ - 12
ಧೃಷ್ಟಶ್ಚ ಜಿತಕಾಶೀ ಚ ನೃಶಂಸಃ ಪುರುಷಾದಕಃ ।
ಅವಲಿಪ್ತಶ್ಚ ಪಾಪಶ್ಚ ತ್ವಾಂ ಚ ತಾತ ನ ಮೃಷ್ಯತೇ ॥
ಅನುವಾದ
ಅಯ್ಯಾ! ಈ ಅರಣ್ಯದಲ್ಲಿ ರಾವಣನ ತಮ್ಮ ಖರನೆಂಬ ರಾಕ್ಷಸ ಇದ್ದಾನೆ, ಅವನು ಜನಸ್ಥಾನದಲ್ಲಿ ಇರುವ ಸಮಸ್ತ ತಾಪಸರನ್ನೂ ಕಿತ್ತು ಎಸೆದಿರುವನು. ಅವನು ಬಹಳ ದುರುಳನೂ, ವಿಜಯೋನ್ಮತ್ತನೂ, ಕ್ರೂರಿಯೂ, ನರಭಕ್ಷಕನೂ, ಉದ್ಧಟನೂ ಆಗಿದ್ದಾನೆ. ಅವನು ನಿನ್ನ ಪರಾಕ್ರಮವನ್ನು ಸಹಿಸಲಾರನು.॥11-12॥
ಮೂಲಮ್ - 13
ತ್ವಂ ಯದಾಪ್ರಭೃತಿ ಹ್ಯಸ್ಮಿನ್ನಾಶ್ರಮೇ ತಾತ ವರ್ತಸೇ ।
ತದಾಪ್ರಭೃತಿ ರಕ್ಷಾಂಸಿ ವಿಪ್ರಕುರ್ವಂತಿ ತಾಪಸಾನ್ ॥
ಅನುವಾದ
ಅಯ್ಯಾ! ನೀನು ಈ ಆಶ್ರಮದಲ್ಲಿ ಇರತೊಡಗಿದಂದಿನಿಂದ ಎಲ್ಲ ರಾಕ್ಷಸರು ತಪಸ್ವಿಗಳನ್ನು ವಿಶೇಷವಾಗಿ ಸತಾಯಿಸುತ್ತಿದ್ದಾರೆ.॥13॥
ಮೂಲಮ್ - 14
ದರ್ಶಯಂತಿ ಹಿ ಬೀಭಿತ್ಸೈಃ ಕ್ರೂರೈರ್ಭೀಷಣಕೈರಪಿ ।
ನಾನಾರೂಪೈರ್ವಿರೂಪೈಶ್ಚ ರೂಪೈರಸುಖದರ್ಶನೈಃ ॥
ಮೂಲಮ್ - 15
ಅಪ್ರಶಸ್ತೈರಶುಚಿಭಿಃ ಸಂಪ್ರಯುಜ್ಯ ಚ ತಾಪಸಾನ್ ।
ಪ್ರತಿಘ್ನಂತ್ಯಪರಾನ್ ಕ್ಷಿಪ್ರಮನಾರ್ಯಾಃ ಪುರತಃ ಸ್ಥಿತಾನ್ ॥
ಅನುವಾದ
ಆ ಅನಾರ್ಯ ರಾಕ್ಷಸರು ಬೀಭತ್ಸರೂ, ಕ್ರೂರರೂ, ಭೀಷಣರೂ, ನಾನಾ ಪ್ರಕಾರದ ವಿಕೃತ ಹಾಗೂ ನೋಡಲು ದುಃಖದಾಯಕ ರೂಪಗಳನ್ನು ಧರಿಸಿ ಮುಂದಕ್ಕೆ ಬರುತ್ತಾರೆ ಮತ್ತು ಪಾಪಜನಕ ಅಪವಿತ್ರ ಪದಾರ್ಥಗಳಿಂದ ತಪಸ್ವಿಗಳನ್ನು ಸ್ಪರ್ಶಿಸುತ್ತಾ, ತಮ್ಮ ಎದುರಿಗೆ ನಿಂತಿರುವ ಬೇರೆ ಋಷಿಗಳನ್ನು ಪೀಡಿಸುತ್ತಾ ಇರುತ್ತಾರೆ.॥14-15॥
ಮೂಲಮ್ - 16
ತೇಷು ತೇಷ್ವಾಶ್ರಮಸ್ಥಾನೇಷ್ವಬುದ್ಧಮವಲೀಯ ಚ ।
ರಮಂತೇ ತಾಪಸಾಂಸ್ತತ್ರ ನಾಶಯಂತೋಽಲ್ಪಚೇತಸಃ ॥
ಅನುವಾದ
ಅವರು ಆಯಾಯ ಆಶ್ರಮಗಳಲ್ಲಿ ಅಡಗಿಕೊಂಡಿದ್ದು, ಅಲ್ಪಜ್ಞ ಅಥವಾ ಅಜಾಗರೂಕರಾದ ತಪಸ್ವಿಗಳನ್ನು ನಾಶಮಾಡುತ್ತಾ ಅಲ್ಲಿ ಆನಂದದಿಂದ ತಿರುಗಾಡುತ್ತಾ ಇರುತ್ತಾರೆ.॥16॥
ಮೂಲಮ್ - 17
ಅವಕ್ಷಿಪಂತಿ ಸ್ರುಗ್ಭಾಂಡಾನಗ್ನೀನ್ ಸಿಂಚಂತಿ ವಾರಿಣಾ ।
ಕಲಶಾಂಶ್ಚ ಪ್ರವರ್ದಂತಿ ಹವನೇ ಸಮುಪಸ್ಥಿತೇ ॥
ಅನುವಾದ
ಯಜ್ಞಕರ್ಮವನ್ನು ಪ್ರಾರಂಭಿಸಿದಾಗ ಸ್ರುಕ್-ಸ್ರುವೆ ಮೊದಲಾದ ಯಜ್ಞ ಸಾಮಗ್ರಿಗಳನ್ನು ಕಿತ್ತೆಸೆದುಬಿಡುವರು. ಉರಿಯುವ ಅಗ್ನಿಯಲ್ಲಿ ನೀರೆರೆದು, ಕಲಶವನ್ನು ಒಡೆದುಹಾಕುತ್ತಾರೆ.॥17॥
ಮೂಲಮ್ - 18
ತೈರ್ದುರಾತ್ಮಭಿರಾವಿಷ್ಟಾನಾಶ್ರಮಾನ್ ಪ್ರಜಿಹಾಸವಃ ।
ಗಮನಾಯಾನ್ಯದೇಶಸ್ಯ ಚೋದಯಂತ್ಯಋಷಯೋಽದ್ಯ ಮಾಮ್ ॥
ಅನುವಾದ
ಆ ದುರಾತ್ಮಾ ರಾಕ್ಷಸರಿಂದ ಸಮಾವೃತವಾದ ಆಶ್ರಮಗಳನ್ನು ತ್ಯಜಿಸುವ ಇಚ್ಛೆಯುಳ್ಳ ಈ ಋಷಿಗಳು ಇಲ್ಲಿಂದ ಬೇರೆಡೆಗೆ ಹೊರಟುಹೋಗಲು ನನ್ನನ್ನು ಪ್ರೇರೇಪಿಸುತ್ತಿದ್ದಾರೆ.॥18॥
ಮೂಲಮ್ - 19
ತತ್ಪುರಾ ರಾಮ ಶಾರೀರೀಮುಪಹಿಂಸಾಂ ತಪಸ್ವಿಷು ।
ದರ್ಶಯಂತಿ ಹಿ ದುಷ್ಟಾಸ್ತೇ ತ್ಯಕ್ಷ್ಯಾಮ ಇಮಮಾಶ್ರಮಮ್ ॥
ಅನುವಾದ
ಶ್ರೀರಾಮಾ! ಆ ದುಷ್ಟ ರಾಕ್ಷಸರು ತಪಸ್ವಿಗಳಿಗೆ ಶಾರೀರಿಕ ಹಿಂಸೆ ಮಾಡುವ ಮೊದಲೇ ನಾವು ಈ ಆಶ್ರಮವನ್ನು ಬಿಟ್ಟುಹೋಗಲು ಹೇಳುತ್ತಿದ್ದಾರೆ.॥19॥
ಮೂಲಮ್ - 20
ಬಹುಮೂಲಲಂ ಚಿತ್ರಮವಿದೂರಾದಿಶೋ ವನಮ್ ।
ಅಶ್ವಸ್ಯಾಶ್ರಮಮೇವಾಹಂ ಶ್ರಯಿಷ್ಯೇ ಸಗಣಃ ಪುನಃ ॥
ಅನುವಾದ
ಇಲ್ಲಿಂದ ಸ್ವಲ್ಪ ದೂರದಲ್ಲೇ ಒಂದು ವಿಚಿತ್ರವನವಿದೆ, ಅಲ್ಲಿ ಫಲ-ಮೂಲಗಳು ಧಾರಾಳವಾಗಿವೆ. ಅಲ್ಲೇ ಅಶ್ವಮುನಿಯ ಆಶ್ರಮವಿದೆ, ಆದ್ದರಿಂದ ಋಷಿಗಳ ಸಮೂಹದೊಂದಿಗೆ ನಾವು ಪುನಃ ಅದೇ ಆಶ್ರಮವನ್ನು ಆಶ್ರಯಿಸುವೆವು.॥20॥
ಮೂಲಮ್ - 21
ಖರಸ್ತ್ವಯ್ಯಪಿ ಚಾಯುಕ್ತಂ ಪುರಾ ರಾಮಪ್ರವರ್ತತೇ ।
ಸಹಾಸ್ಮಾಭಿರಿತೋ ಗಚ್ಛ ಯದಿ ಬುದ್ಧಿಃ ಪ್ರವರ್ತತೇ ॥
ಅನುವಾದ
ಶ್ರೀರಾಮ! ಖರನು ನಿನ್ನ ಕುರಿತೂ ಏನಾದರೂ ಅನುಚಿತ ವರ್ತಿಸುವ ಮೊದಲೇ ನಿನ್ನ ವಿಚಾರವಿದ್ದರೆ ನಮ್ಮೊಂದಿಗೆ ನೀನೂ ಹೊರಡು.॥21॥
ಮೂಲಮ್ - 22
ಸಕಲತ್ರಸ್ಯ ಸಂದೇಹೋ ನಿತ್ಯಂ ಯತ್ತಸ್ಯ ರಾಘವ ।
ಸಮರ್ಥಸ್ಯಾಪಿ ಹಿ ಸತೋ ವಾಸೋ ದುಃಖಮಿಹಾದ್ಯ ತೇ ॥
ಅನುವಾದ
ರಘುನಂದನ! ನೀನು ಸದಾ ಎಚ್ಚರವಾಗಿರುವವನೂ, ರಾಕ್ಷಸರನ್ನು ದಮನ ಮಾಡಲು ಸಮರ್ಥನಾಗಿದ್ದರೂ, ಪತ್ನಿಯೊಂದಿಗೆ ಈಗ ಈ ಆಶ್ರಮದಲ್ಲಿ ನೀನು ಇರುವುದು ಸಂದೇಹಾಸ್ಪದ ಹಾಗೂ ದುಃಖದಾಯಕವಾಗಿದೆ.॥22॥
ಮೂಲಮ್ - 23
ಇತ್ಯುಕ್ತವಂತಂ ರಾಮಸ್ತಂ ರಾಜಪುತ್ರಸ್ತಪಸ್ವಿನಮ್ ।
ನ ಶಶಾಕೋತ್ತರೈರ್ವಾಕ್ಯೈರವಬದ್ಧುಂ ಸಮುತ್ಸುಕಮ್ ॥
ಅನುವಾದ
ಹೀಗೆ ಹೇಳಿ ಬೇರೆಡೆಗೆ ಹೋಗಲು ಉತ್ಕಂಠಿತರಾದ ಆ ತಪಸ್ವೀ ಮುನಿಗೆ ಶ್ರೀರಾಮನು ಸಾಂತ್ವನವನ್ನು ಹೇಳಿದರೂ ಅವರನ್ನು ಅಲ್ಲೇ ಇರಿಸಿಕೊಳ್ಳಲಾಗಲಿಲ್ಲ.॥23॥
ಮೂಲಮ್ - 24
ಅಭಿನಂದ್ಯ ಸಮಾಪೃಚ್ಛ್ಯ ಸಮಾಧಾಯ ಚ ರಾಘವಮ್ ।
ಸ ಜಗಾಮಾಶ್ರಮಂ ತ್ಯಕ್ತ್ವಾ ಕುಲೈಃ ಕುಲಪತಿಃ ಸಹ ॥
ಅನುವಾದ
ಅನಂತರ ಆ ಕುಲಪತಿ ಮಹರ್ಷಿಗಳು ಶ್ರೀರಾಮಚಂದ್ರನನ್ನು ಅಭಿನಂದಿಸಿ, ಅವನಿಂದ ಬೀಳ್ಕೊಂಡು, ಅವನಿಗೆ ಸಾಂತ್ವನ ಹೇಳಿ, ಆ ಆಶ್ರಮವನ್ನು ಬಿಟ್ಟು ಅಲ್ಲಿಂದ ಋಷಿಗಳೊಂದಿಗೆ ಹೊರಟೇ ಬಿಟ್ಟರು.॥24॥
ಮೂಲಮ್ - 25
ರಾಮಃ ಸಂಸಾಧ್ಯ ಋಷಿಗಣಮನುಗಮನಾದ್
ದೇಶಾತ್ತಸ್ಮಾತ್ಕುಲಪತಿಮಭಿವಾದ್ಯ ಋಷಿಮ್ ।
ಸಮ್ಯಕ್ ಪ್ರಿತೈಸ್ತೈರನುಮತ ಉಪದಿಷ್ಟಾರ್ಥಃ
ಪುಣ್ಯಂ ವಾಸಾಯ ಸ್ವನಿಲಯಮುಪಸಂಪೇದೇ ॥
ಅನುವಾದ
ಅಲ್ಲಿಂದ ಹೊರಟ ಋಷಿಗಳ ಹಿಂದೆ-ಹಿಂದೆಯೇ ಹೋಗಿ ಶ್ರೀರಾಮನು ಅವರನ್ನು ಬೀಳ್ಕೊಟ್ಟು ಕುಲಪತಿ ಋಷಿಗೆ ವಂದಿಸಿ, ಪ್ರಸನ್ನರಾದ ಋಷಿಗಳಿಂದ ಅನುಮತಿ ಪಡೆದು, ಅವರು ಉಪದೇಶಿಸಿದ ಕರ್ತವ್ಯವಿಷಯಕ ಮಾತನ್ನು ಕೇಳಿ, ತನ್ನ ಪವಿತ್ರ ಆಶ್ರಮಕ್ಕೆ ಮರಳಿದನು.॥25॥
ಮೂಲಮ್ - 26
ಆಶ್ರಮಮೃಷಿವಿರಹಿತಂ ಪ್ರಭುಃ
ಕ್ಷಣಮಪಿ ನ ಜಹೌ ಸ ರಾಘವಃ ।
ರಾಘವಂ ಹಿ ಸತತಮನುಗತಾ-
ಸ್ತಾಪಸಾಶ್ಚಾರ್ಷಚರಿತೇ ಧೃತಗುಣಾಃ ॥
ಅನುವಾದ
ಆ ಋಷಿಗಳಿಂದ ರಹಿತವಾದ ಆಶ್ರಮವನ್ನು ಭಗವಾನ್ ಶ್ರೀರಾಮನು ಒಂದು ಗಳಿಗೆಯೂ ಬಿಡಲಿಲ್ಲ. ಋಷಿಗಳಂತೆ ಚರಿತ್ರವುಳ್ಳ ಶ್ರೀರಾಮಚಂದ್ರನಲ್ಲಿ ನಿಶ್ಚಯವಾಗಿ ಋಷಿಗಳನ್ನು ರಕ್ಷಿಸುವ ಶಕ್ತಿ ಇರುವುದನ್ನು ಅರಿತ ಕೆಲವು ತಪಸ್ವಿಗಳು ಸದಾ ಶ್ರೀರಾಮನನ್ನೇ ಆಶ್ರಯಿಸುತ್ತಾ ಎಲ್ಲಿಗೂ ಹೋಗದೇ ಅಲ್ಲೇ ನಿಂತುಬಿಟ್ಟರು.॥26॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹದಿನಾರನೆಯ ಸರ್ಗ ಪೂರ್ಣವಾಯಿತು ॥116॥