११५ नन्दिग्रामनिवासः

वाचनम्
ಭಾಗಸೂಚನಾ

ಭರತನು ನಂದಿಗ್ರಾಮಕ್ಕೆ ಹೋಗಿ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಪಟ್ಟಾಭಿಷೇಕ ಮಾಡಿದುದು, ಪಾದುಕೆಗಳಿಗೆ ಅನುದಿನವೂ ವರದಿಯನ್ನು ಒಪ್ಪಿಸುತ್ತಾ ರಾಜ್ಯಭಾರ ನಡೆಸಲು ತೊಡಗಿದುದು

ಮೂಲಮ್ - 1

ತತೋ ನಿಕ್ಷಿಪ್ಯ ಮಾತೄಸ್ತಾ ಅಯೋಧ್ಯಾಯಾಂ ದೃಢವ್ರತಃ ।
ಭರತಃ ಶೋಕಸಂತಪ್ತೋ ಗುರೂನಿದಮಥಾಬ್ರವೀತ್ ॥

ಅನುವಾದ

ಅನಂತರ ಎಲ್ಲ ತಾಯಂದಿರನ್ನು ಅಯೋಧ್ಯೆಯಲ್ಲಿ ಇರಿಸಿ, ದೃಢ ಪ್ರತಿಜ್ಞನಾದ ಭರತನು ಶೋಕಸಂತಪ್ತನಾಗಿ ಗುರುಜನರಲ್ಲಿ ಹೀಗೆ ಹೇಳಿದನು.॥1॥

ಮೂಲಮ್ - 2

ನಂದಿಗ್ರಾಮಂ ಗಮಿಷ್ಯಾಮಿ ಸರ್ವಾನಾಮಂತ್ರಯೇಽತ್ರ ವಃ ।
ತತ್ರ ದುಃಖಮಿದಂ ಸರ್ವಂ ಸಹಿಷ್ಯೇ ರಾಘವಂವಿನಾ ॥

ಅನುವಾದ

ಈಗ ನಾನು ನಂದಿಗ್ರಾಮಕ್ಕೆ ಹೋಗುವೆನು, ಅದಕ್ಕಾಗಿ ನಿಮ್ಮೆಲ್ಲರ ಅನುಮತಿ ಬೇಡುತ್ತೇನೆ. ಶ್ರೀರಾಮನಿಲ್ಲದೆ ಉಂಟಾದ ದುಃಖವನ್ನು ಸಹಿಸುತ್ತಾ ಅಲ್ಲೇ ಇರುವೆನು.॥2॥

ಮೂಲಮ್ - 3

ಗತಶ್ಚಾಹೋ ದಿವಂ ರಾಜಾ ವನಸ್ಥಃ ಗುರುರ್ಮಮ ।
ರಾಮಂ ಪ್ರತೀಕ್ಷೇ ರಾಜ್ಯಾಯ ಸ ಹಿ ರಾಜಾ ಮಹಾಯಶಾಃ ॥

ಅನುವಾದ

ಅಯ್ಯೋ! ಪೂಜ್ಯ ಪಿತನು ಸ್ವರ್ಗಕ್ಕೆ ತೆರಳಿದರು. ನನ್ನ ಗುರು (ಪೂಜನೀಯ ಅಣ್ಣ) ಶ್ರೀರಾಮನು ವನದಲ್ಲಿ ಇರುವನು. ನಾನು ಈ ರಾಜ್ಯಕ್ಕಾಗಿ ಶ್ರೀರಾಮನನ್ನು ಪ್ರತೀಕ್ಷೆ ಮಾಡುತ್ತಾ ಅಲ್ಲಿ ಇರುವೆನು; ಏಕೆಂದರೆ ಆ ಮಹಾಯಶಸ್ವೀ ಶ್ರೀರಾಮನೇ ನಮಗೆ ರಾಜನಾಗಿದ್ದಾನೆ.॥3॥

ಮೂಲಮ್ - 4

ಏತಚ್ಛ್ರುತ್ವಾ ಶುಭಂ ವಾಕ್ಯಂ ಭರತಸ್ಯ ಮಹಾತ್ಮನಃ ।
ಅಬ್ರುವನ್ ಮಂತ್ರಿಣಃ ಸರ್ವೇ ವಸಿಷ್ಠಶ್ಚ ಪುರೋಹಿತಃ ॥

ಅನುವಾದ

ಮಹಾತ್ಮಾ ಭರತನ ಈ ಶುಭಮಾತನ್ನು ಕೇಳಿ ಎಲ್ಲ ಮಂತ್ರಿಗಳು ಮತ್ತು ಪುರೋಹಿತ ವಸಿಷ್ಠರು ಹೇಳಿದರು.॥4॥

ಮೂಲಮ್ - 5

ಸುಭೃಶಂ ಶ್ಲಾಘನೀಯಂ ಚ ಯದುಕ್ತಂ ಭರತ ತ್ವಯಾ ।
ವಚನಂ ಭ್ರಾತೃವಾತ್ಸಲ್ಯಾದನುರೂಪಂ ತವೈವ ತತ್ ॥

ಅನುವಾದ

ಭರತ! ಭ್ರಾತೃಭಕ್ತಿಯಿಂದ ಪ್ರೇರಿತನಾಗಿ ನೀನು ಹೇಳಿದ ಮಾತು ಬಹಳ ಪ್ರಶಂಸನೀಯವಾಗಿದೆ. ವಾಸ್ತವ ವಾಗಿ ಅದು ನಿನಗೆ ಯೋಗ್ಯವೇ ಆಗಿದೆ.॥5॥

ಮೂಲಮ್ - 6

ನಿತ್ಯಂ ತೇ ಬಂಧುಲುಬ್ಧಸ್ಯ ತಿಷ್ಠತೋ ಭ್ರಾತೃಸೌಹೃದೇ ।
ಮಾರ್ಗಮಾರ್ಯಂ ಪ್ರಪನ್ನಸ್ಯ ನಾನುಮನ್ಯೇತ ಕಃ ಪುಮಾನ್ ॥

ಅನುವಾದ

ನೀನು ನಿನ್ನ ಅಣ್ಣನ ದರ್ಶನಕ್ಕಾಗಿ ಸದಾ ಆತುರನಾಗಿರುವೆ ಹಾಗೂ ಅಣ್ಣನ ಹಿತಸಾಧನೆಯಲ್ಲೇ ಸಂಲಗ್ನನಾಗಿರುವೆ. ಜೊತೆಗೆ ಶ್ರೇಷ್ಠಮಾರ್ಗದಲ್ಲಿ ಸ್ಥಿತನಾಗಿರುವೆ, ಆದ್ದರಿಂದ ಯಾರು ತಾನೇ ನಿನ್ನ ವಿಚಾರವನ್ನು ಅನುಮೋದಿಸಲಾರರು.॥6॥

ಮೂಲಮ್ - 7

ಮಂತ್ರಿಣಾಂ ವಚನಂ ಶ್ರುತ್ವಾ ಯಥಾಭಿಲಷಿತಂ ಪ್ರಿಯಮ್ ।
ಅಬ್ರವೀತ್ಸಾರಥಿಂ ವಾಕ್ಯಂ ರಥೋ ಮೇ ಯುಜ್ಯತಾಮಿತಿ ॥

ಅನುವಾದ

ಮಂತ್ರಿಗಳ ರುಚಿಗನುರೂಪವಾಗಿ ಪ್ರಿಯವಚನವನ್ನು ಕೇಳಿ ಭರತನು ಸಾರಥಿಯಲ್ಲಿ ಹೇಳಿದನು - ನನ್ನ ರಥವನ್ನು ಹೂಡಿ ಸಿದ್ಧಗೊಳಿಸು.॥7॥

ಮೂಲಮ್ - 8

ಪ್ರಹೃಷ್ಟವದನಃ ಸರ್ವಾ ಮಾತೄಃ ಸಮಭಿಭಾಷ್ಯ ಚ ।
ಆರುರೋಹ ರಥಂ ಶ್ರೀಮಾನ್ ಶತ್ರುಘ್ನೇನ ಸಮನ್ವಿತಃ ॥

ಅನುವಾದ

ಮತ್ತೆ ಅವನು ಪ್ರಸನ್ನವದನನಾಗಿ ಎಲ್ಲ ತಾಯಂದಿರಲ್ಲಿ ಹೋಗಲು ಅಪ್ಪಣೆ ಪಡೆದನು. ಬಳಿಕ ಶತ್ರುಘ್ನನ ಸಹಿತ ಶ್ರೀಮಾನ್ ಭರತನು ರಥಾರೂಢನಾದನು.॥8॥

ಮೂಲಮ್ - 9

ಆರುಹ್ಯ ತು ರಥಂ ಕ್ಷಿಪ್ರಂ ಶತ್ರುಘ್ನಭರತಾವುಭೌ ।
ಯಯತುಃ ಪರಮಪ್ರೀತೌ ವೃತೌ ಮಂತ್ರಿಪುರೋಹಿತೈಃ ॥

ಅನುವಾದ

ರಥಾರೂಢನಾಗಿ ಪರಮಪ್ರಸನ್ನನಾದ ಭರತ ಮತ್ತು ಶತ್ರುಘ್ನ ಇಬ್ಬರೂ ಮಂತ್ರಿಗಳಿಂದ, ಪುರೋಹಿತರಿಂದೊಡಗೂಡಿ ಶೀಘ್ರವಾಗಿ ಅಲ್ಲಿಂದ ಹೊರಟರು.॥9॥

ಮೂಲಮ್ - 10

ಅಗ್ರತೋ ಗುರುವಃಸರ್ವೇ ವಸಿಷ್ಠಪ್ರಮುಖಾದ್ವಿಜಾಃ ।
ಪ್ರಯಯುಃ ಪ್ರಾಙ್ಮುಖಾಃ ಸರ್ವೇ ನಂದಿಗ್ರಾಮೋ ಯತೋಭವೇತ್ ॥

ಅನುವಾದ

ಮುಂದುಗಡೆ ವಸಿಷ್ಠಾದಿ ಎಲ್ಲ ಗುರುಜನರು ಹಾಗೂ ಬ್ರಾಹ್ಮಣರು ನಡೆಯುತ್ತಿದ್ದರು. ಅವರೆಲ್ಲರೂ ಅಯೋಧ್ಯೆಯಿಂದ ಪೂರ್ವಾಭಿಮುಖವಾಗಿ ಪ್ರಯಾಣ ಮಾಡುತ್ತಾ ನಂದೀಗ್ರಾಮದ ಕಡೆಗೆ ಹೋಗುವ ದಾರಿಯನ್ನು ಹಿಡಿದರು.॥10॥

ಮೂಲಮ್ - 11

ಬಲಂ ಚ ತದನಾಹೂತಂ ಗಜಾಶ್ವರಥಸಂಕುಲಮ್ ।
ಪ್ರಯಯೌ ಭರತೇ ಯಾತೇ ಸರ್ವೇ ಚಪುರವಾಸಿನಃ ॥

ಅನುವಾದ

ಭರತನು ಹೊರಟಾಗ ಆನೆ, ಕುದುರೆ, ರಥಗಳಿಂದ ತುಂಬಿದ ಎಲ್ಲ ಸೈನ್ಯವು ಕರೆಯದೆಯೇ ಅವನ ಹಿಂದೆ-ಹಿಂದೆ ಹೊರಟಿತು ಹಾಗೂ ಸಮಸ್ತ ಪುರವಾಸಿಗಳೂ ಅವನ ಜೊತೆಗೂಡಿದರು.॥11॥

ಮೂಲಮ್ - 12

ರಥಸ್ಥಃ ಸ ತು ಧರ್ಮಾತ್ಮಾ ಭರತೋ ಭ್ರಾತೃವತ್ಸಲಃ ।
ನಂದಿಗ್ರಾಮಂ ಯಯೌ ತೂರ್ಣಂ ಶಿರಸ್ಯಾಧಾಯಪಾದುಕೇ ॥

ಅನುವಾದ

ಧರ್ಮಾತ್ಮಾ ಭ್ರಾತೃವತ್ಸಲ ಭರತನು ತನ್ನ ತಲೆಯ ಮೇಲೆ ಭಗವಾನ್ ಶ್ರೀರಾಮನ ಚರಣಪಾದುಕೆಗಳನ್ನು ಇಟ್ಟುಕೊಂಡು ರಥದಲ್ಲಿ ಕುಳಿತು ಶೀಘ್ರವಾಗಿ ನಂದಿಗ್ರಾಮದ ಕಡೆಗೆ ನಡೆದನು.॥12॥

ಮೂಲಮ್ - 13

ಭರತಸ್ತು ತತಃ ಕ್ಷಿಪ್ರಂ ನಂದಿಗ್ರಾಮಂ ಪ್ರವಿಶ್ಯ ಸಃ ।
ಅವತೀರ್ಯ ರಥಾತ್ತೂರ್ಣಂ ಗುರೂನಿದಮಭಾಷತ ॥

ಅನುವಾದ

ನಂದಿಗ್ರಾಮಕ್ಕೆ ತಲುಪಿದ ಭರತನು ಕೂಡಲೇ ರಥದಿಂದ ಇಳಿದು ಗುರುಜನರಲ್ಲಿ ಹೀಗೆ ಹೇಳಿದನು.॥13॥

ಮೂಲಮ್ - 14

ಏತದ್ರಾಜ್ಯಂ ಮಮ ಭ್ರಾತಾ ದತ್ತಂ ಸಂನ್ಯಾಸಮುತ್ತಮಮ್ ।
ಯೋಗಕ್ಷೇಮಹೇ ಚೇಮೇ ಪಾದುಕೇ ಹೇಮಭೂಷಿತೇ ॥

ಅನುವಾದ

ನನ್ನ ಅಣ್ಣನು ಈ ಉತ್ತಮ ರಾಜ್ಯವನ್ನು ನನಗೆ ನ್ಯಾಸರೂಪದಲ್ಲಿ ಕೊಟ್ಟಿರುವನು, ಅವನ ಈ ಸುವರ್ಣಭೂಷಿತ ಚರಣ ಪಾದುಕೆಗಳೇ ಎಲ್ಲರ ಯೋಗಕ್ಷೇಮ ನಡೆಸುವಂತಹುದಾಗಿದೆ.॥14॥

ಮೂಲಮ್ - 15

ಭರತಃ ಶಿರಸಾ ಕೃತ್ವಾ ಸಂನ್ಯಾಸಂ ಪಾದುಕೇ ತತಃ ।
ಅಬ್ರವೀದ್ದುಃಖಸಂತಪ್ತಃ ಸರ್ವಂ ಪ್ರಕೃತಿಮಂಡಲಮ್ ॥

ಅನುವಾದ

ಅನಂತರ ಭರತನು ಅಣ್ಣನು ತನ್ನಲ್ಲಿ ನ್ಯಾಸರೂಪವಾಗಿರಿಸಿದ ರಾಜ್ಯವನ್ನು ಚರಣಪಾದುಕೆಗಳಿಗೆ ತಲೆಬಾಗಿ ಅರ್ಪಿಸಿ, ದುಃಖದಿಂದ ಸಂತಪ್ತನಾಗಿ ಸಮಸ್ತ ಮಂತ್ರಿ, ಸೇನಾಪತಿ ಮತ್ತು ಪ್ರಜೆಗಳಲ್ಲಿ ಈ ರೀತಿ ಹೇಳಿದನು.॥15॥

ಮೂಲಮ್ - 16

ಛತ್ರಂ ಧಾರಯತ ಕ್ಷಿಪ್ರಮಾರ್ಯಪಾದಾವಿಮೌ ಮತೌ ।
ಆಭ್ಯಾಂ ರಾಜ್ಯೇ ಸ್ಥಿತೋ ಧರ್ಮಃ ಪಾದುಕಾಭ್ಯಾಂ ಗುರೋರ್ಮಮ ॥

ಅನುವಾದ

ನೀವೆಲ್ಲರೂ ಈ ಚರಣಪಾದುಕೆಗಳಿಗೆ ಛತ್ರಹಿಡಿಯಿರಿ. ನಾನು ಇವನ್ನು ಆರ್ಯ ಶ್ರೀರಾಮನ ಸಾಕ್ಷಾತ್ ಚರಣಗಳೆಂದು ತಿಳಿಯುತ್ತೇನೆ. ನನ್ನ ಗುರುವಿನ ಈ ಪಾದುಕೆಗಳಿಂದಲೇ ಈ ರಾಜ್ಯದಲ್ಲಿ ಧರ್ಮಸ್ಥಾಪನೆ ಆಗುವುದು.॥16॥

ಮೂಲಮ್ - 17

ಭ್ರಾತ್ರಾ ತು ಮಯಿ ಸಂನ್ಯಾಸೋ ನಿಕ್ಷಿಪ್ತಃ ಸೌಹೃದಾದಯಮ್ ।
ತಮಿಮಂ ಪಾಲಯಿಷ್ಯಾಮಿ ರಾಘವಾಗಮನಂ ಪ್ರತಿ ॥

ಅನುವಾದ

ನನ್ನ ಅಣ್ಣನು ಪ್ರೇಮದಿಂದಾಗಿಯೇ ಈ ನ್ಯಾಸವನ್ನು ನನಗೆ ಒಪ್ಪಿಸಿರುವನು. ಆದ್ದರಿಂದ ನಾನು ಅವನು ಹಿಂದಿರು ಗುವ ತನಕ ಇವನ್ನು ಚೆನ್ನಾಗಿ ರಕ್ಷಿಸುವೆನು.॥17॥

ಮೂಲಮ್ - 18

ಕ್ಷಿಪ್ರಂ ಸಂಯೋಜಯಿತ್ವಾ ತು ರಾಘವಸ್ಯ ಪುನಃಸ್ವಯಮ್ ।
ಚರಣೌ ತೌ ತು ರಾಮಸ್ಯ ದ್ರಕ್ಷ್ಯಾಮಿ ಸಹಪಾದುಕೌ ॥

ಅನುವಾದ

ಅನಂತರ ನಾನು ಸ್ವತಃ ಈ ಪಾದುಕೆಗಳನ್ನು ಪುನಃ ಶ್ರೀರಾಮನ ಚರಣ ಗಳಿಗೆ ತೊಡಗಿಸಿ ಈ ಪಾದುಕೆಗಳಿಂದ ಸುಶೋಭಿತ ಶ್ರೀರಾಮನ ಆ ಚರಣಯುಗಲಗಳನ್ನು ದರ್ಶಿಸುವೆನು.॥18॥

ಮೂಲಮ್ - 19

ತತೋ ನಿಕ್ಷಿಪ್ತಭಾರೋಹಂ ರಾಘವೇಣ ಸಮಾಗತಃ ।
ನಿವೇದ್ಯ ಗುರವೇ ರಾಜ್ಯಂ ಭಜಿಷ್ಯೇ ಗುರುವರ್ತಿತಾಮ್ ॥

ಅನುವಾದ

ಶ್ರೀರಘುನಾಥನು ಬಂದು ಭೇಟಿಯಾಗುತ್ತಲೇ ನಾನು ನನ್ನ ಗುರುದೇವನಿಗೆ ಈ ರಾಜ್ಯವನ್ನು ಸಮರ್ಪಿಸಿ, ಅವನ ಆಜ್ಞೆಗೆ ಅಧೀನನಾಗಿ ಅವನ ಸೇವೆಯಲ್ಲೇ ತೊಡಗುವೆನು. ರಾಜ್ಯದ ಹೊರೆಯನ್ನು ಅವನಿಗೆ ಒಪ್ಪಿಸಿ ನಾನು ನಿರಾಳವಾಗಿ ಇರುವೆನು.॥19॥

ಮೂಲಮ್ - 20

ರಾಘವಾಯ ಚ ಸಂನ್ಯಾಸಂದತ್ತ್ವೇಮೇವರಪಾದುಕೇ ।
ರಾಜ್ಯಂ ಚೇದಮಯೋಧ್ಯಾಂ ಚ ಧೂತಪಾಪೋ ಭವಾಮ್ಯಹಮ್ ॥

ಅನುವಾದ

ನನ್ನ ಬಳಿ ನ್ಯಾಸವಾಗಿ ಇಟ್ಟಿರುವ ಈ ರಾಜ್ಯವನ್ನು, ಅಯೋಧ್ಯೆಯನ್ನು ಹಾಗೂ ಈ ಶ್ರೇಷ್ಠ ಪಾದುಕೆಗಳನ್ನು ಶ್ರೀರಾಮನ ಸೇವೆಯಲ್ಲಿ ಸಮರ್ಪಿಸಿ ನಾನು ಎಲ್ಲ ಪ್ರಕಾರದ ಪಾಪತಾಪಗಳಿಂದ ಮುಕ್ತನಾಗುವೆನು.॥20॥

ಮೂಲಮ್ - 21

ಅಭಿಷಿಕ್ತೇ ಚ ಕಾಕುತ್ಸ್ಥೇ ಪ್ರಹೃಷ್ಟಮುದಿತೇ ಜನೇ ।
ಪ್ರೀತಿರ್ಮಮ ಯಶಶ್ಚೈವ ಭವೇದ್ರಾಜ್ಯಾಚ್ಚತುರ್ಗುಣಮ್ ॥

ಅನುವಾದ

ಕಾಕುತ್ಸ್ಥ ಕುಲಭೂಷಣ ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷಿಕ್ತನಾದ ಮೇಲೆ ಎಲ್ಲ ಜನರು ಹರ್ಷ-ಆನಂದದಲ್ಲಿ ಮುಳುಗಿದಾಗ ನನಗೆ ರಾಜ್ಯ ಪಡೆಯುವುದಕ್ಕಿಂತ ನಾಲ್ಕುಪಟ್ಟು ಸಂತೋಷ ಮತ್ತು ನಾಲ್ಕುಪಟ್ಟು ಯಶಸ್ಸು ಸಿಗಬಹದು.॥21॥

ಮೂಲಮ್ - 22

ಏವಂ ತು ವಿಲಪನ್ ದೀನೋ ಭರತಃ ಸ ಮಹಾಯಶಾಃ ।
ನಂದಿಗ್ರಾಮೇಽಕರೋದ್ರಾಜ್ಯಂ ದುಃಖಿತೋ ಮಂತ್ರಿಭಿಃ ಸಹ ॥

ಅನುವಾದ

ಹೀಗೆ ದೀನಭಾವದಿಂದ ವಿಲಾಪಿಸುತ್ತಾ ದುಃಖಮಗ್ನ ಮಹಾಯಶಸ್ವೀ ಭರತನು ಮಂತ್ರಿಗಳೊಂದಿಗೆ ನಂದಿಗ್ರಾಮದಲ್ಲಿ ಇದ್ದು ರಾಜ್ಯವಾಳ ತೊಡಗಿದನು.॥22॥

ಮೂಲಮ್ - 23

ಸ ವಲ್ಕಲಜಟಾಧಾರೀ ಮುನಿವೇಷಧರಃ ಪ್ರಭುಃ ।
ನಂದಿಗ್ರಾಮೇಽವಸದ್ ಧೀರಃಸಸೈನ್ಯೋ ಭರತಸ್ತದಾ ॥

ಅನುವಾದ

ಸೈನ್ಯ ಸಹಿತ ಪ್ರಭಾವಶಾಲೀ ಧೀರ-ವೀರ ಭರತನು ಆಗ ಜಟಾ-ವಲ್ಕಲ ಧಾರಿಯಾಗಿ ಮುನಿ ವೇಷದಲ್ಲಿ ನಂದಿಗ್ರಾಮದಲ್ಲಿ ವಾಸಮಾಡಿದನು.॥23॥

ಮೂಲಮ್ - 24

ರಾಮಾಗಮನಮಾಕಾಂಕ್ಷನ್ ಭರತೋ ಭ್ರಾತೃವತ್ಸಲಃ ।
ಭ್ರಾತುರ್ವಚನಕಾರೀ ಚ ಪ್ರತಿಜ್ಞಾಪಾರಗಸ್ತಥಾ ।
ಪಾದುಕೇ ತ್ವಭಿಷಿಚ್ಯಾಥ ನಂದಿಗ್ರಾಮೇಽವಸತ್ತದಾ ॥

ಅನುವಾದ

ಅಣ್ಣನ ಆಜ್ಞೆಯ ಪಾಲನೆ ಮತ್ತು ಪ್ರತಿಜ್ಞೆಯನ್ನು ನೆರವೇರಿಸುವ ಇಚ್ಛೆಯುಳ್ಳ ಭ್ರಾತೃವತ್ಸಲ ಭರತನು ಶ್ರೀರಾಮನ ಆಗಮನದ ಆಕಾಂಕ್ಷೆ ಇರಿಸುತ್ತಾ ಅವನ ಚರಣಪಾದುಕೆಗಳನ್ನು ರಾಜ್ಯದಲ್ಲಿ ಅಭಿಷೇಕ ಮಾಡಿ ಆಗ ನಂದಿಗ್ರಾಮದಲ್ಲೇ ಇರತೊಡಗಿದನು.॥24॥

ಮೂಲಮ್ - 25

ಸವಾಲವ್ಯಜನಂ ಛತ್ರಂ ಧಾರಯಾಮಾಸ ಸಸ್ವಯಮ್ ।
ಭರತಃ ಶಾಸನಂ ಸರ್ವಂ ಪಾದುಕಾಭ್ಯಾಂ ನಿವೇದಯನ್ ॥

ಅನುವಾದ

ಭರತನು ರಾಜ್ಯಶಾಸನದ ಸಮಸ್ತ ಕಾರ್ಯಗಳನ್ನು ಭಗವಾನ್ ಶ್ರೀರಾಮನ ಪಾದುಕೆಗಳಿಗೆ ನಿವೇದಿಸುತ್ತಿದ್ದನು. ಹಾಗೂ ಸ್ವತಃ ಅವುಗಳ ಮೇಲೆ ಛತ್ರ ಹಿಡಿದು ಚಾಮರ ಬೀಸುತ್ತಿದ್ದನು.॥25॥

ಮೂಲಮ್ - 26

ತತಸ್ತು ಭರತಃ ಶ್ರೀಮಾನಭಿಷಿಚ್ಯಾರ್ಯಪಾದುಕೇ ।
ತದಧೀನಸ್ತದಾ ರಾಜ್ಯಂ ಕಾರಯಾಮಾಸ ಸರ್ವದಾ ॥

ಅನುವಾದ

ಶ್ರೀಮಾನ್ ಭರತನು ಅಣ್ಣನ ಆ ಪಾದುಕೆಗಳಿಗೆ ಪಟ್ಟಾಭಿಷೇಕಮಾಡಿ ಸದಾ ಅವುಗಳಿಗೆ ಅಧೀನನಾಗಿದ್ದು ಆ ದಿನಗಳಲ್ಲಿ ರಾಜ್ಯದ ಎಲ್ಲ ಕಾರ್ಯ ಮಂತ್ರಿಗಳಿಂದ ಮಾಡಿಸುತ್ತಿದ್ದನು.॥26॥

ಮೂಲಮ್ - 27

ತದಾ ಹಿ ಯತ್ಕಾರ್ಯಮುಪೈತಿ ಕಿಂಚಿ-
ದುಪಾಯನಂ ಚೋಪಹೃತಂ ಮಹಾರ್ಹಮ್ ।
ಸ ಪಾದುಕಾಭ್ಯಾಂ ಪ್ರಥಮಂ ನಿವೇದ್ಯ
ಚಕಾರ ಪಶ್ಚಾದ್ಭರತೋ ಯಥಾವತ್ ॥

ಅನುವಾದ

ಆಗ ಯಾವುದೇ ಕಾರ್ಯ ಉಪಸ್ಥಿತವಾದರೂ, ಬಹುಮೂಲ್ಯ ಕಾಣಿಕೆಗಳು ಬಂದರೂ, ಅದೆಲ್ಲವನ್ನೂ ಮೊದಲು ಪಾದುಕೆಗಳಿಗೆ ಅರ್ಪಿಸಿ, ಮತ್ತೆ ಭರತನು ಅದನ್ನು ಯಥಾವತ್ ವ್ಯವಸ್ಥೆ ಮಾಡುತ್ತಿದ್ದನು.॥27॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹದಿನೈದನೆಯ ಸರ್ಗ ಪೂರ್ಣವಾಯಿತು ॥115॥