११४ अयोध्याप्रवेशः

वाचनम्
ಭಾಗಸೂಚನಾ

ದುರವಸ್ಥೆಯಲ್ಲಿದ್ದ ಅಯೋಧ್ಯೆಯನ್ನು ಪ್ರವೇಶಿಸಿ ಭರತನು ಅಂತಃಪುರಕ್ಕೆ ಹೋಗಿ ಬಹಳವಾಗಿ ದುಃಖಿಸಿದನು

ಮೂಲಮ್ - 1

ಸ್ನಿಗ್ಧಗಂಭೀರಘೋಷೇಣ ಸ್ಯಂದನೇನೋಪಯಾನ್ ಪ್ರಭುಃ ।
ಅಯೋಧ್ಯಾಂ ಭರತಃ ಕ್ಷಿಪ್ರಂ ಪ್ರವಿವೇಶ ಮಹಾಯಶಾಃ ॥

ಅನುವಾದ

ಅನಂತರ ಪ್ರಭಾವಶಾಲೀ ಮಹಾಯಶಸ್ವೀ ಭರತನು ಮನೋಹರವೂ, ಗಂಭೀರವೂ ಆದ ಘೋಷದಿಂದ ಕೂಡಿದ ರಥದಿಂದ ಪ್ರಯಾಣ ಮಾಡಿ ಶೀಘ್ರವಾಗಿ ಅಯೋಧ್ಯೆಯನ್ನು ಪ್ರವೇಶಿಸಿದನು.॥1॥

ಮೂಲಮ್ - 2

ಬಿಡಾಲೋಲೂಕಚರಿತಾಮಾಲೀನನರವಾರಣಾಮ್ ।
ತಿಮಿರಾಭ್ಯಾಹತಾಂ ಕಾಲೀಮಪ್ರಕಾಶಾಂ ನಿಶಾಮಿವ ॥

ಅನುವಾದ

ಆಗ ಅಲ್ಲಿ ಬೆಕ್ಕುಗಳು, ಗೂಬೆಗಳು ಓಡಾಡುತ್ತಿದ್ದವು. ಮನೆಗಳ ಬಾಗಿಲುಗಳು ಮುಚ್ಚಿದ್ದವು. ಇಡೀ ನಗರದಲ್ಲಿ ಅಂಧಕಾರ ಆವರಿಸಿತ್ತು. ಪ್ರಕಾಶವಿಲ್ಲದ ಕಾರಣ ಆ ಪುರಿಯು ಕೃಷ್ಣಪಕ್ಷದ ಕಪ್ಪು ರಾತ್ರಿಯಂತೆ ಕಾಣುತ್ತಿತ್ತು.॥2॥

ಮೂಲಮ್ - 3

ರಾಹುಶಶ್ರೋಃ ಪ್ರಿಯಾಂ ಪತ್ನೀ ಶ್ರಿಯಾ ಪ್ರಜ್ವಲಿತಪ್ರಭಾಮ್ ।
ಗ್ರಹೇಣಾಭ್ಯುದಿತೇನೈಕಾಂ ರೋಹಿಣೀಮಿವ ಪೀಡಿತಾಮ್ ॥

ಅನುವಾದ

ಚಂದ್ರಪ್ರಿಯ ಪತ್ನೀ ತನ್ನ ಶೋಭೆಯಿಂದ ಬೆಳಗುವ ಕಾಂತಿಯುಕ್ತ ರೋಹಿಣಿಯು ತನ್ನ ಪತಿಯು ರಾಹುವಿನಿಂದ ಗ್ರಸ್ತವಾದಾಗ ಅಸಹಾಯವಾಗುವಂತೆ, ದಿವ್ಯ ಐಶ್ವರ್ಯದಿಂದ ಪ್ರಕಾಶಿತವಾದ ಅಯೋಧ್ಯೆಯು ರಾಜನು ಕಾಲವಶನಾದ್ದರಿಂದ ಪೀಡಿತ ಮತ್ತು ಅಸಹಾಯವಾಗಿತ್ತು.॥3॥

ಮೂಲಮ್ - 4

ಅಲ್ಪೋಷ್ಣಕ್ಷುಬ್ಧ ಸಲಿಲಾಂ ಘರ್ಮತಪ್ತವಿಹಂಗಮಾಮ್ ।
ಲೀನಮೀನಝಷಗ್ರಾಹಾಂ ಕೃಶಾಂ ಗಿರಿನದೀಮಿವ ॥

ಅನುವಾದ

ಆ ಪುರಿಯು - ಸೂರ್ಯಕಿರಣಗಳಿಂದ ಕಾದ ಮತ್ತು ಕದಡಿದ ನೀರಿನಿಂದ ಕೂಡಿದ್ದು ಅದರಲ್ಲಿನ ಪಕ್ಷಿಗಳು ಸಂತಪ್ತವಾಗಿ ಓಡಿಹೋಗಿ, ಮೀನು ಮೊಸಳೆಗಳು ಆಳವಾದ ನೀರಿನಲ್ಲಿ ಮುಳುಗಿದ್ದ ಪರ್ವತೀಯ ನದಿಯಂತೆ ಕಾಂತಿಹೀನವಾಗಿತ್ತು.॥4॥

ಮೂಲಮ್ - 5

ವಿಧೂಮಾಮಿವ ಹೇಮಾಭಾಂ ಶಿಖಾಮಗ್ನೇಃಸಮುತ್ಥಿತಾಮ್ ।
ಹವಿರಭ್ಯುಕ್ಷಿತಾಂ ಪಶ್ಚಾಚ್ಛಿಖಾಂ ವಿಪ್ರಲಯಂಗತಾಮ್ ॥

ಅನುವಾದ

ಮೊದಲು ಆ ಪುರಿಯು ಹೊಗೆಯಿಲ್ಲದೆ ಚಿನ್ನದಂತಹ ಕಾಂತಿಯಿಂದ ಪ್ರಜ್ವಲಿತ ಅಗ್ನಿಶಿಖೆಯಂತೆ ಪ್ರಕಾಶಿಸುತ್ತಿತ್ತು; ಅದೇ ಇಂದು ಶ್ರೀರಾಮನ ವನವಾಸದ ಬಳಿಕ ಹವನೀಯ ಕ್ಷೀರದಿಂದ ನಂದಿಹೋದ ಅಗ್ನಿಯಂತೆ ಕಾಂತಿಹೀನ ಅಯೋಧ್ಯೆಯನ್ನು ಭರತನು ಪ್ರವೇಶಿಸಿದನು.॥5॥

ಮೂಲಮ್ - 6

ವಿಧ್ವಸ್ತಕವಚಾಂ ರುಗ್ಣಗಜವಾಜಿರಥಧ್ವಜಾಮ್ ।
ಹತಪ್ರವೀರಾಮಾಪನ್ನಾಂಚಮೂಮಿವ ಮಹಾಹವೇ ॥

ಅನುವಾದ

ಮಹಾಸಮರದಲ್ಲಿ ಕವಚಾದಿಗಳು ಹರಿದು ಬಿದ್ದುಹೋದ, ಆನೆ, ಕುದುರೆ, ರಥ, ಧ್ವಜ ಮುಂತಾದವುಗಳು ಛಿನ್ನ-ಭಿನ್ನವಾದ, ಮುಖ್ಯ-ಮುಖ್ಯ ವೀರರು ಸತ್ತುಹೋಗಿ ಸಂಕಟಗ್ರಸ್ತ ಸೈನ್ಯದಂತೆ ಆಗ ಅಯೋಧ್ಯೆಯು ಕಾಣುತ್ತಿತ್ತು.॥6॥

ಮೂಲಮ್ - 7

ಸೇನಾಂ ಸಸ್ವನಾಂ ಭೂತ್ವಾ ಸಾಗರಸ್ಯ ಸಮುತ್ಥಿತಾಮ್ ।
ಪ್ರಶಾಂತಮಾರುತೋದ್ಧೂತಾಂ ಜಲೋರ್ಮಿಮಿವ ನಿಃಸ್ವನಾಮ್ ॥

ಅನುವಾದ

ಪ್ರಬಲವಾಯುವಿನ ಗರ್ಜನೆಯಿಂದ ಎದ್ದಿರುವ ಸಮುದ್ರದ ನೊರೆಯುಕ್ತ ಅಲೆಗಳು, ವಾಯುವು ಶಾಂತವಾದಾಗ ಶಿಥಿಲ ಮತ್ತು ಶಾಂತವಾದ ಅಲೆಗಳಂತೆ ಕೋಲಾಹಲಪೂರ್ಣ ಅಯೋಧ್ಯೆಯು ಆಗ ನಿಃಶಬ್ದದಂತೆ ತೋರುತ್ತಿತ್ತು.॥7॥

ಮೂಲಮ್ - 8

ತ್ಯಕ್ತಾಂ ಯಜ್ಞಾಯುಧೈಃ ಸರ್ವೈರಭಿರೂಪೈಶ್ಚ ಯಾಜಕೈಃ ।
ಸುತ್ಯಾಕಾಲೇ ಸುನಿರ್ವೃತ್ತೇ ವೇದಿಂ ಗತರವಾಮಿವ ॥

ಅನುವಾದ

ಯಜ್ಞಕಾಲ ಸಮಾಪ್ತವಾದಾಗ ಸ್ರುಕ್-ಸ್ರುವಾದಿ ಯಜ್ಞೋಪಯೋಗೀ ಪದಾರ್ಥಗಳಿಂದಲೂ, ವೇದಮಂತ್ರಗಳ ಕರ್ಣಾನಂದಕವಾದ ಧ್ವನಿಗಳಿಂದಲೂ ವಿಹೀನವಾದ ಯಜ್ಞವೇದಿಯಂತಿದ್ದ ಅಯೋಧ್ಯೆಯನ್ನು ಭರತನು ಪ್ರವೇಶಿಸಿದನು.॥8॥

ಮೂಲಮ್ - 9

ಗೋಷ್ಠಮಧ್ಯೇ ಸ್ಥಿತಾಮಾರ್ತಾಮಚರಂತೀಂ ನವಂ ತೃಣಮ್ ।
ಗೋವೃಷೇಣ ಪರಿತ್ಯಕ್ತಾಂ ಗವಾಂಪತ್ನೀಮಿವೋತ್ಸುಕಾಮ್ ॥

ಅನುವಾದ

ಹೋರಿಯೊಡನೆ ಸಮಾಗಮಕ್ಕೆ ಉತ್ಸುಕವಾದ ಹಸುವನ್ನು ಹೋರಿಯಿಂದ ಅಗಲಿಸಿ, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದಾಗ ಹುಲ್ಲನ್ನೂ ಕೂಡ ತಿನ್ನದೆ ಆರ್ತಭಾವದಲ್ಲಿದ್ದ ಹಸುವಿನಂತೆ ಅಯೋಧ್ಯೆಯು ಆಂತರಿಕ ವೇದನೆಯಿಂದ ಪೀಡಿತವಾಗಿತ್ತು.॥9॥

ಮೂಲಮ್ - 10

ಪ್ರಭಾಕರಾದ್ಯೈಃ ಸುಸ್ನಿಗ್ಧೈಃ ಪ್ರಜ್ವಲದ್ಭಿರಿವೋತ್ತಮೈಃ ।
ವಿಯುಕ್ತಾಂ ಮಣಿಭಿರ್ಜಾತ್ಯೈರ್ನವಾಂ ಮುಕ್ತಾವಲೀಮಿವ ॥

ಅನುವಾದ

ಶ್ರೀರಾಮಾದಿಗಳಿಂದ ರಹಿತವಾದ ಅಯೋಧ್ಯೆಯು ಥಳಥಳನೆ ಹೊಳೆಯುತ್ತಾ ಮನೋಹರವಾದ, ಪದ್ಮರಾಗ, ಗೋಮೇದಿಕ, ಪುಷ್ಯರಾಗಗಳೇ ಮೊದಲಾದ ಉತ್ತಮೋತ್ತಮ ಜಾತಿ ರತ್ನಗಳಿಂದ ವಿಹೀನವಾದ ಹೊಸ ಮುತ್ತಿನ ಸರದಂತೆ ಕಾಣುತ್ತಿತ್ತು.॥10॥

ಮೂಲಮ್ - 11

ಸಹಸಾಚರಿತಾಂ ಸ್ಥಾನಾನ್ಮಹೀಂ ಪುಣ್ಯಕ್ಷಯಾದ್ಗತಾಮ್ ।
ಸಂಹೃತದ್ಯುತಿವಿಸ್ತಾರಾಂ ತಾರಾಮಿವ ದಿವಶ್ಚ್ಯುತಾಮ್ ॥

ಅನುವಾದ

ಪುಣ್ಯ ಕ್ಷಯವಾದೊಡನೆಯೇ ಸ್ಥಾನ ಭ್ರಷ್ಟವಾಗಿ ಆಕಾಶದಿಂದ ಭೂಮಿಯ ಕಡೆಗೆ ಬೀಳುತ್ತಿರುವ ಸರ್ವವ್ಯಾಪಿಯಾದ ಕಾಂತಿಯಿಂದ ಹೀನವಾದ ನಕ್ಷತ್ರದಂತಿದ್ದ ಅಯೋಧ್ಯೆಯನ್ನು ಭರತನು ಪ್ರವೇಶಿಸಿದನು.॥11॥

ಮೂಲಮ್ - 12

ಪುಷ್ಪನದ್ಧಾಂ ವಸಂತಾಂತೇ ಮತ್ತಭ್ರಮರಶಾಲಿನೀಮ್ ।
ದ್ರುತದಾವಾಗ್ನಿವಿಪ್ಲುಷ್ಟಾಂ ಕ್ಲಾಂತಾಂ ವನಲತಾಮಿವ ॥

ಅನುವಾದ

ಪುಷ್ಪಗುಚ್ಛಗಳಿಂದ ಕೂಡಿದ್ದು, ದುಂಬಿಗಳಿಂದ ನಿನಾದಿತವಾಗಿದ್ದ ವಸಂತ ಋತುವು ಕಳೆದೊಡನೆಯೇ ಕಾಡ್ಗಿಚ್ಚಿನಿಂದ ದಗ್ಧವಾಗಿ ಹೋದ ಅರಣ್ಯದಂತೆ ಕಾಂತಿಹೀನವಾದ ಅಯೋಧ್ಯೆಯನ್ನು ಭರತನು ಪ್ರವೇಶಿಸಿದನು.॥12॥

ಮೂಲಮ್ - 13

ಸಮ್ಮೂಢನಿಗಮಾಂ ಸರ್ವಾಂ ಸಂಕ್ಷಿಪ್ತವಿಪಣಾಪಣಾಮ್ ।
ಪ್ರಚ್ಛನ್ನಶಶಿನಕ್ಷತ್ರಾಂದ್ಯಾಮಿವಾಂಬುಧರೈರ್ಯುತಾಮ್ ॥

ಅನುವಾದ

ಅಲ್ಲಿಯ ವಣಿಕವರ್ಗವು ಶೋಕದಿಂದ ವ್ಯಾಕುಲವಾದ್ದರಿಂದ ಕಿಂಕರ್ತವ್ಯಮೂಢರಾಗಿದ್ದರು. ಹೆಚ್ಚಿನ ಪೇಟೆ, ಅಂಗಡಿಗಳು ಮುಚ್ಚಿದ್ದವು. ಆಗ ಆ ಪುರಿಯು ಮೋಡಗಳಿಂದ ವ್ಯಾಪಿಸಿದ, ಚಂದ್ರನಕ್ಷತ್ರಗಳು ಮುಚ್ಚಿಹೋದ ಆಕಾಶದಂತೆ ಶೋಭಾಹೀನವಾಗಿದ್ದ ಅಯೋಧ್ಯೆಯನ್ನು ಭರತನು ಪ್ರವೇಶಿಸಿದನು.॥13॥

ಮೂಲಮ್ - 14

ಕ್ಷೀಣಪಾನೋತ್ತಮೈರ್ಭಗ್ನೈಃಶರಾವೈರಭಿಸಂವೃತಾಮ್ ।
ಹತಶೌಂಡಾಮಿವ ಧ್ವಸ್ತಾಂ ಪಾನಭೂಮಿಮಸಂಸ್ಕೃತಾಮ್ ॥

ಅನುವಾದ

ಉತ್ತಮವಾದ ವಾದ್ಯಗಳಿಂದ ಶೂನ್ಯವಾದ, ಒಡೆದುಹೋದ ಪಾತ್ರೆಗಳಿಂದ ಅಸ್ತವ್ಯಸ್ತವಾದ, ಮದ್ಯಪಾನಿಗಳಿಂದ ಶೂನ್ಯವಾದ ಪಾನಗೃಹದಂತಿದ್ದ ಅಯೋಧ್ಯಾಪಟ್ಟಣವನ್ನು ಭರತನು ಹೊಕ್ಕನು.॥14॥

ಮೂಲಮ್ - 15

ವೃಕ್ಣಭೂಮಿತಲಾಂ ನಿಮ್ನಾಂ ವೃಕ್ಣಪಾತ್ರೈಃ ಸಮಾವೃತಾಮ್ ।
ಉಪಯುಕ್ತೋದಕಾಂ ಭಗ್ನಾಂ ಪ್ರಪಾಂನಿಪತಿತಾಮಿವ ॥

ಅನುವಾದ

ಕಂಬಗಳು ಮುರಿದು ಕುಸಿದುಬಿದ್ದ, ಭೂಮಿಯು ಕುಸಿದುಹೋದ, ನೀರು ಇಲ್ಲದಿರುವ, ಪಾತ್ರೆಗಳು ಒಡೆದು ಹೋಗಿ ಚೆಲ್ಲಿಹೋದ ಅರವಟ್ಟಿಗೆಯಂತೆ ಆ ಪುರಿಯ ಅವಸ್ಥೆಯಾಗಿತ್ತು.॥15॥

ಮೂಲಮ್ - 16

ವಿಪುಲಾಂ ವಿತತಾಂ ಚೈವ ಯುಕ್ತಪಾಶಾಂತರಸ್ವಿನಾಮ್ ।
ಭೂಮಿ ಬಾಣೈರ್ವಿನಿಷ್ಕೃತ್ತಾಂ ಪತಿತಾಂ ಜ್ಯಾಮಿವಾಯುಧಾತ್ ॥

ಅನುವಾದ

ಬಾಣಪ್ರಯೋಗದಲ್ಲಿ ನಿಪುಣ ರಾದವರ ನಿಶಿತ ಬಾಣಗಳಿಂದ ತುಂಡಾದ, ದೀರ್ಘವಾದ ಹೆದೆಯೇರಿಸಿದ ಧನುಸ್ಸಿನ ನಾಣಿನಂತೆ ಕಾಣುತ್ತಿದ್ದ ಅಯೋಧ್ಯೆಯನ್ನು ಭರತನು ಪ್ರವೇಶಿಸಿದನು.॥16॥

ಮೂಲಮ್ - 17

ಸಹಸಾ ಯುದ್ಧಶೌಂಡೇನ ಹಯಾರೋಹೇಣ ವಾಹಿತಾಮ್ ।
ನಿಹತಾಂ ಪ್ರತಿಸೈನ್ಯೇನ ವಡವಾಮಿವ ಪಾತಿತಾಮ್ ॥

ಅನುವಾದ

ಕುದುರೆಯನ್ನೇರಿ ವೇಗವಾಗಿ ಯುದ್ಧಕ್ಕೆ ಹೋದ ಯುದ್ಧ ಕುಶಲ ಸವಾರನನ್ನು ಶತ್ರುಪಕ್ಷದವರು ಸಂಹರಿಸಿ ಕೆಳಕ್ಕೆ ಬೀಳಿಸಿದ ಹೆಣ್ಣುಕುದುರೆಯಂತೆ ಆ ಅಯೋಧ್ಯೆಯು ಕಾಣುತ್ತಿತ್ತು.॥17॥

ಮೂಲಮ್ - 18

ಭರತಸ್ತು ರಥಸ್ಥಃ ಸನ್ ಶ್ರೀಮಾನ್ ದಶರಥಾತ್ಮಜಃ ।
ಬಾಯಹಂತಂ ರಥಶ್ರೇಷ್ಠಂ ಸಾರಥಿಂ ವಾಕ್ಯಮಬ್ರವೀತ್ ॥

ಅನುವಾದ

ರಥದಲ್ಲಿ ಕುಳಿತಿರುವ ಶ್ರೀಮಾನ್ ದಶರಥನಂದನ ಭರತನು ಆಗ ಶ್ರೇಷ್ಠ ರಥವನ್ನು ನಡೆಸುವ ಸಾರಥಿ ಸುಮಂತ್ರನಲ್ಲಿ ಹೀಗೆ ಹೇಳಿದನು.॥18॥

ಮೂಲಮ್ - 19

ಕಿಂ ನು ಖಲ್ವದ್ಯ ಗಂಭೀರೋ ಮೂರ್ಛಿತೋ ನನಿಶಮ್ಯತೇ ।
ಯಥಾಪುರಮಯೋಧ್ಯಾಯಾಂ ಗೀತವಾದಿತ್ರನಿಃಸ್ವನಃ ॥

ಅನುವಾದ

ಈಗ ಅಯೋಧ್ಯೆಯಲ್ಲಿ ಹಿಂದಿನಂತೆ ಎಲ್ಲೆಡೆ ಸಂಗೀತ-ವಾದ್ಯಗಳ ನಿನಾದ ಕೇಳಿ ಬರುತ್ತಿಲ್ಲ; ಇದು ಎಂತಹ ದುಃಖಕರ ಮಾತಾಗಿದೆ.॥19॥

ಮೂಲಮ್ - 20

ವಾರುಣೀಮದಗಂಧಶ್ಚ ಮಾಲ್ಯಗಂಧಶ್ಚ ಮೂರ್ಛಿತಃ ।
ಚಂದನಾಗುರುಗಂಧಶ್ಚ ನ ಪ್ರವಾತಿ ಸಮಂತತಃ ॥

ಅನುವಾದ

ಈಗ ಎಲ್ಲೆಡೆ ವಾರುಣಿಯ ಮಾದಕ ಪರಿಮಳ, ಹೂವುಗಳಿಂದ ವ್ಯಾಪ್ತವಾದ ಸುಗಂಧ ಹಾಗೂ ಚಂದನ-ಅಗರುಗಳ ಪವಿತ್ರ ಸುವಾಸನೆ ಎಲ್ಲಿಯೂ ಬರುತ್ತಿಲ್ಲ.॥20॥

ಮೂಲಮ್ - 21

ಯಾನಪ್ರವರಘೋಷಶ್ಚ ಸುಸ್ನಿಗ್ಧಹಯನಿಃಸ್ವನಃ ।
ಪ್ರಮತ್ತಗಜನಾದಶ್ಚ ಮಹಾಂಶ್ಚ ರಥನಿಃಸ್ವನಃ ॥

ಅನುವಾದ

ಪರಮೋತ್ತಮ ವಾಹನಗಳ ಸದ್ದು, ಕುದುರೆಗಳು ಕೆನೆಯುವ ಶಬ್ದ ಮತ್ತ ಗಜಗಳು ಘೀಳುಡುವ ಗರ್ಜನೆ, ರಥಗಳ ಗರಗರ ಮಹಾನಾದ ಇದ್ಯಾವುದೂ ಕೇಳಿಬರುತ್ತಿಲ್ಲ.॥21॥

ಮೂಲಮ್ - 22

ನೇದಾನೀಂ ಶ್ರೂಯತೇ ಪುರ್ಯಾಮಸ್ಯಾಂ ರಾಮೇ ವಿವಾಸಿತೇ ।
ಚಂದನಾಗರುಗಂಧಾಶ್ಚ ಮಹಾರ್ಹಾಶ್ಚ ವನಸ್ರಜಃ ॥

ಮೂಲಮ್ - 23

ಗತೇ ರಾಮೇ ಹಿ ತರುಣಾಃ ಸಂತಪ್ತಾ ನೋಪಭುಂಜತೇ ।
ಬಹಿರ್ಯಾತ್ರಾಂ ನ ಗಚ್ಛಂತಿಚಿತ್ರಮಾಲ್ಯಧರಾ ನರಾಃ ॥

ಅನುವಾದ

ಶ್ರೀರಾಮಚಂದ್ರನು ವನವಾಸಕ್ಕೆ ಹೋದ ಕಾರಣವೇ ಈ ಪುರಿಯಲ್ಲಿ ಈಗ ಇದ್ಯಾವ ಶಬ್ದಗಳೂ ಕೇಳಿಬರುತ್ತಿಲ್ಲ. ಶ್ರೀರಾಮನು ಹೋದದ್ದರಿಂದ ಇಲ್ಲಿಯ ತರುಣರು ಸಂತಪ್ತರಾಗಿರುವರು. ಅವರು ಚಂದನ-ಅಗರು ಇವುಗಳ ಸುಗಂಧ ಸೇವಿಸುತ್ತಿಲ್ಲ ಹಾಗೂ ಅಮೂಲ್ಯ ವನಮಾಲೆಗಳೂ ಧರಿಸುವುದಿಲ್ಲ ಈಗ ಈ ಪುರಿಯ ಜನರು ವಿಚಿತ್ರ ಹೂವಿನ ಹಾರಗಳನ್ನು ಧರಿಸಿ ಹೊರಗೆ ಅಡ್ಡಾಡಲು ಹೋಗುವುದಿಲ್ಲ.॥22-23॥

ಮೂಲಮ್ - 24

ನೋತ್ಸವಾಃ ಸಂಪ್ರವರ್ತಂತೇ ರಾಮಶೋಕಾರ್ದಿತೇ ಪುರೇ ।
ಸಾ ಹಿ ನೂನಂ ಮಮ ಭ್ರಾತ್ರಾ ಪುರಸ್ಯಾಸ್ಯ ದ್ಯುತಿರ್ಗತಾ ॥

ಅನುವಾದ

ಶ್ರೀರಾಮನ ಶೋಕದಿಂದ ನಗರದಲ್ಲಿ ಈಗ ನಾನಾ ಪ್ರಕಾರದ ಉತ್ಸವಗಳು ನಡೆಯುವುದಿಲ್ಲ. ಈ ಪುರಿಯ ಶೋಭೆಯು ನಿಶ್ಚಯವಾಗಿ ನಮ್ಮಣ್ಣನೊಂದಿಗೇ ಹೊರಟುಹೋಗಿದೆ.॥24॥

ಮೂಲಮ್ - 25½

ನ ಹಿ ರಾಜತ್ಯಯೋಧ್ಯೇಯಂ ಸಾಸಾರೇವಾರ್ಜುನೀ ಕ್ಷಪಾ ।
ಕದಾ ನು ಖಲು ಮೇ ಭ್ರಾತಾ ಮಹೋತ್ಸವ ಇವಾಗತಃ ॥
ಜನಯಿಷ್ಯತ್ಯಯೋಧ್ಯಾಯಾಂ ಹರ್ಷಂಗ್ರೀಷ್ಮ ಇವಾಂಬುದಃ ।

ಅನುವಾದ

ಜಡಿಮಳೆಯ ಕಾರಣ ಶುಕ್ಲಪಕ್ಷದ ಬೆಳದಿಂಗಳ ರಾತ್ರಿಯೂ ಶೋಭಿಸದಂತೆಯೇ ಕಂಗಳಿಂದ ಕಂಬನಿ ಹರಿಸುತ್ತಿರುವ ಈ ಅಯೋಧ್ಯೆಯು ಶೋಭಿಸುತ್ತಿಲ್ಲ. ಇನ್ನು ನಮ್ಮಣ್ಣ ಮಹೋತ್ಸವದಂತೆ ಎಂದು ಅಯೋಧ್ಯೆಗೆ ಮರಳುವನು? ಹಾಗೂ ಗ್ರೀಷ್ಮ ಋತುವಿನಲ್ಲಿ ಪ್ರಕಟವಾದ ಮೋಡಗಳಂತೆ ಎಲ್ಲರ ಹೃದಯದಲ್ಲಿ ಎಂದು ಹರ್ಷ ಸಂಚಾರವಾಗಬಹುದು.॥25½॥

ಮೂಲಮ್ - 26½

ತರುಣೈಶ್ಚಾರುವೇಷೈಶ್ಚ ನರೈರುನ್ನತಗಾಮಿಭಿಃ ॥
ಸಂಪತದ್ಭಿರಯೋಧ್ಯಾಯಾಂ ನಾಭಿಭಾಂತಿ ಮಹಾಪಥಾಃ ।

ಅನುವಾದ

ಈಗ ಅಯೋಧ್ಯೆಯ ವಿಶಾಲ ರಾಜಬೀದಿಗಳು ಹರ್ಷೋಲ್ಲಾಸದಿಂದ ಮನೋಹರ ವೇಷಧಾರೀ ತರುಣರ ಶುಭಾಗಮನದಿಂದ ಶೋಭಿಸುತ್ತಿಲ್ಲ.॥26½॥

ಮೂಲಮ್ - 27

ಇತಿಬ್ರುವನ್ ಸಾರಥಿನಾ ದುಃಖಿತೋ ಭರತಸ್ತದಾ ॥

ಮೂಲಮ್ - 28

ಅಯೋಧ್ಯಾಂ ಸಂಪ್ರವಿಶ್ಯೈವ ವಿವೇಶ ವಸತಿಂ ಪಿತುಃ ।
ತೇನ ಹೀನಾಂ ನರೇಂದ್ರೇಣ ಸಿಂಹಹೀನಾಂ ಗುಹಾಮಿವ ॥

ಅನುವಾದ

ಹೀಗೆ ಸಾರಥಿಯಲ್ಲಿ ಮಾತನಾಡುತ್ತಾ ದುಃಖಿತನಾದ ಭರತನು ಆಗ ಸಿಂಹನಿಲ್ಲದ ಗುಹೆಯಂತೆ ದಶರಥರಾಜರಿಂದ ರಹಿತವಾದ ತಂದೆಯ ಅರಮನೆಯನ್ನು ಪ್ರವೇಶಿಸಿದನು.॥27-28॥

ಮೂಲಮ್ - 29

ತದಾ ತದಂತಃಪುರಮುಜ್ಝಿತಪ್ರಭಂ
ಸುರೈರಿವೋತ್ಕೃಷ್ಟಮಭಾಸ್ಕರಂ ದಿನಮ್ ।
ನಿರೀಕ್ಷ್ಯ ಸರ್ವತ್ರ ವಿಭಕ್ತಮಾತ್ಮವಾನ್
ಮುಮೋಚ ಬಾಷ್ಪಂ ಭರತಃ ಸುದುಃಖಿತಃ ॥

ಅನುವಾದ

ಸೂರ್ಯನು ಕಾಣಿಸದಿದ್ದಾಗ ಹಗಲಿನ ಶೋಭೆ ನಷ್ಟವಾಗುವಂತೆ, ದೇವತೆಗಳು ಶೋಕಿಸುವಂತೆಯೇ ಆಗ ಆ ಅಂತಃಪುರವು ಶೋಭಾಹೀನವಾಗಿತ್ತು, ಅಲ್ಲಿಯ ಜನರು ಶೋಕಗ್ರಸ್ತರಾಗಿದ್ದರು. ಎಲ್ಲೆಡೆ ಸ್ವಚ್ಛತೆ ಮತ್ತು ಅಲಂಕಾರರಹಿತ ಅದನ್ನು ನೋಡಿ, ಧೈರ್ಯವಂತ ನಾಗಿದ್ದರೂ ಅತ್ಯಂತ ದುಃಖಿತನಾದ ಭರತನು ಕಂಬನಿ ಹರಿಸಿದನು.॥29॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹದಿನಾಲ್ಕನೆಯ ಸರ್ಗ ಪೂರ್ಣವಾಯಿತು ॥114॥