११३ भरतस्य प्रतिनिवर्तनम्

वाचनम्
ಭಾಗಸೂಚನಾ

ಚಿತ್ರಕೂಟದಿಂದ ಹೊರಟ ಭರತನು ಮತ್ತೊಮ್ಮೆ ಭರದ್ವಾಜರನ್ನು ಸಂದರ್ಶಿಸಿ ಅಯೋಧ್ಯೆಗೆ ಮರಳಿ ಬಂದುದು

ಮೂಲಮ್ - 1

ತತಃ ಶಿರಸಿ ಕೃತ್ವಾ ತು ಪಾದುಕೇ ಭರತಸ್ತದಾ ।
ಆರುರೋಹ ರಥಂ ಹೃಷ್ಟಃ ಶತ್ರುಘ್ನಸಹಿತಸ್ತದಾ ॥

ಅನುವಾದ

ಅನಂತರ ಶ್ರೀರಾಮಚಂದ್ರನ ಪಾದುಕೆಗಳನ್ನು ತನ್ನ ಮಸ್ತಕದ ಮೇಲೆ ಹೊತ್ತು ಭರತನು ಶತ್ರುಘ್ನನೊಂದಿಗೆ ಸಂತೋಷದಿಂದ ರಥದಲ್ಲಿ ಕುಳಿತನು.॥1॥

ಮೂಲಮ್ - 2

ವಸಿಷ್ಠೋ ವಾಮದೇವಶ್ಚ ಜಾಬಾಲಿಶ್ಚ ದೃಢವ್ರತಃ ।
ಅಗ್ರತಃ ಪ್ರಯಯುಃ ಸರ್ವೇ ಮಂತ್ರಿಣೋಮಂತ್ರಪೂಜಿತಾಃ ॥

ಅನುವಾದ

ವಸಿಷ್ಠ, ವಾಮದೇವ ಹಾಗೂ ದೃಢತೆಯಿಂದ ಉತ್ತಮ ವ್ರತವನ್ನು ಪಾಲಿಸುವ ಉತ್ತಮ ಸಲಹೆಯಿಂದ ಸಮ್ಮಾನಿತರಾದ ಜಾಬಾಲಿ ಮೊದಲಾದ ಎಲ್ಲ ಮಂತ್ರಿಗಳು ಹಿಂದೆ-ಹಿಂದೆಯೇ ನಡೆದರು.॥2॥

ಮೂಲಮ್ - 3

ಮಂದಾಕಿನೀಂ ನದೀಂ ರಮ್ಯಾಂ ಪ್ರಾಙ್ಮುಖಾಸ್ತೇ ಯಯುಸ್ತದಾ ।
ಪ್ರದಕ್ಷಿಣಂ ಚ ಕುರ್ವಾಣಾಶ್ಚಿತ್ರಕೂಟಂ ಮಹಾಗಿರಿಮ್ ॥

ಅನುವಾದ

ಅವರೆಲ್ಲರೂ ಚಿತ್ರಕೂಟ ಪರ್ವತಕ್ಕೆ ಪ್ರದಕ್ಷಿಣೆ ಮಾಡುತ್ತಾ ಪರಮರಮಣೀಯ ಮಂದಾಕಿನೀ ನದಿಯನ್ನು ದಾಟಿ ಪೂರ್ವ ದಿಕ್ಕಿಗೆ ಪ್ರಯಾಣ ಬೆಳೆಸಿದರು.॥3॥

ಮೂಲಮ್ - 4

ಪಶ್ಯಂಧಾತುಸಹಸ್ರಾಣಿ ರಮ್ಯಾಣಿ ವಿವಿಧಾನಿ ಚ ।
ಪ್ರಯಯೌ ತಸ್ಯ ಪಾರ್ಶ್ವೇನ ಸಸೈನ್ಯೋ ಭರತಸ್ತದಾ ॥

ಅನುವಾದ

ಆಗ ಭರತನು ತನ್ನ ಸೈನ್ಯದೊಂದಿಗೆ ಸಾವಿರಾರು ಪ್ರಕಾರದ ರಮಣೀಯ ಧಾತುಗಳನ್ನು ನೋಡುತ್ತಾ ಚಿತ್ರಕೂಟದ ತಪ್ಪಲಿನಿಂದ ಹೊರಟನು.॥4॥

ಮೂಲಮ್ - 5

ಅದೂರಾಚ್ಚಿತ್ರಕೂಟಸ್ಯ ದದರ್ಶ ಭರತಸ್ತದಾ ।
ಆಶ್ರಮಂ ಯತ್ರ ಸ ಮುನಿರ್ಭರದ್ವಾಜಃ ಕೃತಾಲಯಃ ॥

ಅನುವಾದ

ಚಿತ್ರಕೂಟದಿಂದ ಸ್ವಲ್ಪ ದೂರ ಹೋದಾಗ ಭರತನು ಮುನಿವರ್ಯ ಭರದ್ವಾಜರು ವಾಸಿಸುತ್ತಿದ್ದ ಆಶ್ರಮವನ್ನು ನೋಡಿದನು.॥5॥*

ಟಿಪ್ಪನೀ
  • ಈ ಆಶ್ರಮವು ಯಮುನಾ ನದಿಯ ದಕ್ಷಿಣ ದಿಕ್ಕಿನಲ್ಲಿ ಚಿತ್ರಕೂಟದ ಹತ್ತಿರವೇ ಇತ್ತು. ಗಂಗಾ-ಯಮುನೆಯರ ನಡುವಿನ ಪ್ರಯಾಗದಲ್ಲಿ ವನಕ್ಕೆ ಹೋಗುವಾಗ ಶ್ರೀರಾಮ ಮತ್ತು ಲಕ್ಷ್ಮಣ ವಿಶ್ರಮಿಸಿದ ಆಶ್ರಮಕ್ಕಿಂತ ಈ ಆಶ್ರಮವು ಭಿನ್ನವಾಗಿ ಕಾಣುತ್ತದೆ. ಅದರಿಂದಲೇ ಆಶ್ರಮದಲ್ಲಿ ಭರದ್ವಾಜರನ್ನು ಕಂಡು ಬಳಿಕ ಭರತಾದಿಗಳು ಯಮುನೆಯನ್ನು ದಾಟಿದ ಉಲ್ಲೇಖ ಸಿಗುತ್ತದೆ - ‘ತತಸ್ತೇ ಯಮುನಾಂ ದಿವ್ಯಾಂ ನದೀಂ ತೀರ್ತ್ವೋರ್ಮಿಮಾಲಿನೀಮ್’. ಈ ಎರಡನೆಯ ಆಶ್ರಮದಿಂದ ಶ್ರೀರಾಮ ಮತ್ತು ಭರತರ ಸಮಾಗಮದ ಸಮಾಚಾರ ಶೀಘ್ರವಾಗಿ ಸಿಗುತ್ತಿತ್ತು; ಅದಕ್ಕಾಗಿ ಭರತನು ಮರಳುವಾಗಲೂ ಭರದ್ವಾಜರು ಇಲ್ಲೇ ಇದ್ದರು.
ಮೂಲಮ್ - 6

ಸ ತಮಾಶ್ರಮಮಾಗಮ್ಯ ಭರದ್ವಾಜಸ್ಯ ವೀರ್ಯವಾನ್ ।
ಅವತೀರ್ಯ ರಥಾತ್ಪಾದೌ ವವಂದೇ ಕುಲನಂದನಃ ॥

ಅನುವಾದ

ತನ್ನ ಕುಲವನ್ನು ಆನಂದಗೊಳಿಸುವ ಪರಾಕ್ರಮಿ ಭರತನು ಮಹರ್ಷಿ ಭರದ್ವಾಜರ ಆಶ್ರಮವನ್ನು ತಲುಪಿ ರಥದಿಂದ ಕೆಳಗಿಳಿದು, ಮುನಿಯ ಚರಣಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದನು.॥6॥

ಮೂಲಮ್ - 7

ತತೋ ಹೃಷ್ಟೋ ಭರದ್ವಾಜೋ ಭರತಂ ವಾಕ್ಯಮಬ್ರವೀತ್ ।
ಅಪಿ ಕೃತ್ಯಂ ಕೃತಂ ತಾತ ರಾಮೇಣ ಚ ಸಗಮಾಗತಮ್ ॥

ಅನುವಾದ

ಅವನು ಬಂದಿರುವುದರಿಂದ ಮಹರ್ಷಿ ಭರದ್ವಾಜರಿಗೆ ಬಹಳ ಆನಂದವಾಯಿತು. ಅವರು ಭರತನನ್ನು ಕೇಳಿದರು - ಅಯ್ಯಾ! ನಿನ್ನ ಕಾರ್ಯ ಸಂಪನ್ನವಾಯಿತು ತಾನೇ? ಶ್ರೀರಾಮಚಂದ್ರನು ಭೇಟಿಯಾದನೇ.॥7॥

ಮೂಲಮ್ - 8

ಏವಮುಕ್ತಃ ಸತು ತತೋ ಭರದ್ವಾಜೇನ ಧೀಮತಾ ।
ಪ್ರತ್ಯುವಾಚ ಭರದ್ವಾಜಂ ಭರತೋ ಧರ್ಮವತ್ಸಲಃ ॥

ಅನುವಾದ

ಧೀಮಂತ ಭರದ್ವಾಜರು ಹೀಗೆ ಕೇಳಿದಾಗ ಧರ್ಮವತ್ಸಲ ಭರತನು ಅವರಲ್ಲಿ ಇಂತು ಉತ್ತರಿಸಿದನು.॥8॥

ಮೂಲಮ್ - 9

ಸ ಯಾಚ್ಯಮಾನೋ ಗುರುಣಾ ಮಯಾ ಚದೃಢವಿಕ್ರಮಃ ।
ರಾಘವಃ ಪರಮಪ್ರೀತೋ ವಸಿಷ್ಠಂ ವಾಕ್ಯಮಬ್ರವೀತ್ ॥

ಅನುವಾದ

ಮುನಿಗಳೇ! ಭಗವಾನ್ ಶ್ರೀರಾಮನು ತನ್ನ ಪರಾಕ್ರಮದಲ್ಲಿ ದೃಢವಾಗಿರುವವನು. ನಾನು ಅವನಲ್ಲಿ ತುಂಬಾ ಪ್ರಾರ್ಥಿಸಿದೆನು. ಗುರುಗಳೂ ಆಗ್ರಹ ಮಾಡಿದರು. ಆಗ ಅವನು ಅತ್ಯಂತ ಸಂತೋಷದಿಂದ ಗುರು ವಸಿಷ್ಠರಲ್ಲಿ ಹೀಗೆ ಹೇಳಿದನು.॥9॥

ಮೂಲಮ್ - 10

ಪಿತುಃ ಪ್ರತಿಜ್ಞಾಂ ತಾಮೇವ ಪಾಲಯಿಷ್ಯಾಮಿ ತತ್ತ್ವತಃ ।
ಚತುರ್ದಶ ಹಿ ವರ್ಷಾಣಿ ಯಾಪ್ರತಿಜ್ಞಾ ಪಿತುರ್ಮಮ ॥

ಅನುವಾದ

ನಾನು ಹದಿನಾಲ್ಕು ವರ್ಷ ಕಾಡಿನಲ್ಲಿ ಇರಬೇಕೆಂದು ನನ್ನ ತಂದೆಯವರು ಮಾಡಿದ ಪ್ರತಿಜ್ಞೆಯನ್ನೇ ನಾನು ಯಥಾರ್ಥವಾಗಿ ಪಾಲಿಸುವೆನು.॥10॥

ಮೂಲಮ್ - 11

ಏವಮುಕ್ತೋ ಮಹಾಪ್ರಾಜ್ಞೋ ವಸಿಷ್ಠಃ ಪ್ರತ್ಯುವಾಚ ಹ ।
ವಾಕ್ಯಯಜ್ಞೋ ವಾಕ್ಯಕುಶಲಂ ರಾಘವಂ ವಚನಂ ಮಹತ್ ॥

ಅನುವಾದ

ಅವನು ಹೀಗೆ ಹೇಳಿದಾಗ ಮಾತಿನ ಮರ್ಮಜ್ಞರಾದ ವಸಿಷ್ಠರು ಮಾತಿನಲ್ಲಿ ಕುಶಲನಾದ ಶ್ರೀರಘುನಾಥನಲ್ಲಿ ಹೀಗೆ ಮಹತ್ವಪೂರ್ಣವಾದ ಮಾತನ್ನು ಹೇಳಿದನು.॥11॥

ಮೂಲಮ್ - 12

ಏತೇ ಪ್ರಯಚ್ಛ ಸಂಹೃಷ್ಟಃ ಪಾದುಕೇ ಹೇಮಭೂಷಿತೇ ।
ಅಯೋಧ್ಯಾಯಾಂ ಮಹಾಪ್ರಾಜ್ಞ ಯೋಗಕ್ಷೇಮಕರೋ ಭವ ॥

ಅನುವಾದ

ಮಹಾಪ್ರಾಜ್ಞನೇ! ನೀನು ಸಂತೋಷದಿಂದ ಈ ಸ್ವರ್ಣಭೂಷಿತಪಾದುಕೆಗಳನ್ನು ತನ್ನ ಪ್ರತಿನಿಧಿಯ ರೂಪದಲ್ಲಿ ಭರತನಿಗೆ ಕೊಟ್ಟುಬಿಡು, ಹಾಗೂ ಇವುಗಳ ಮೂಲಕ ಅಯೋಧ್ಯೆಯ ಯೋಗಕ್ಷೇಮವನ್ನು ನಿರ್ವಾಹಮಾಡು.॥12॥

ಮೂಲಮ್ - 13

ಏವಮುಕ್ತೋ ವಸಿಷ್ಠೇನ ರಾಘವಃ ಪ್ರಾಙ್ಮುಖಃ ಸ್ಥಿತಃ ।
ಪಾದುಕೇ ಹೇಮವಿಕೃತೇ ಮಮ ರಾಜ್ಯಾಯ ತೇ ದದೌ ॥

ಅನುವಾದ

ಗುರು ವಸಿಷ್ಠರು ಹೀಗೆ ಹೇಳಿದಾಗ ಪೂರ್ವಾಭಿಮುಖವಾಗಿ ನಿಂತಿರುವ ಶ್ರೀ ರಘುನಾಥನು ಅಯೋಧ್ಯೆಯ ರಾಜ್ಯದ ಸಂಚಾಲನೆ ಮಾಡಲಿಕ್ಕಾಗಿ ಈ ಎರಡು ಸ್ವರ್ಣಭೂಷಿತ ಪಾದುಕೆಗಳನ್ನು ಕರುಣಿಸಿದನು.॥13॥

ಮೂಲಮ್ - 14

ನಿವೃತ್ತೋಽಹಮನುಜ್ಞಾತೋ ರಾಮೇಣಸುಮಹಾತ್ಮನಾ ।
ಅಯೋಧ್ಯಾಮೇವ ಗಚ್ಛಾಮಿ ಗೃಹೀತ್ವಾ ಪಾದುಕೇ ಶುಭೇ ॥

ಅನುವಾದ

ಅನಂತರ ನಾನು ಮಹಾತ್ಮಾ ಶ್ರೀರಾಮನ ಆಜ್ಞೆಯನ್ನು ಪಡೆದು ಮರಳಿ ಬಂದಿರುವೆನು ಹಾಗೂ ಅವನ ಈ ಮಂಗಲಮಯ ಚರಣಪಾದುಕೆಗಳನ್ನು ತೆಗೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದೇನೆ.॥14॥

ಮೂಲಮ್ - 15

ಏತಚ್ಛ್ರುತ್ವಾ ಶುಭಂ ವಾಕ್ಯಂ ಭರತಸ್ಯ ಮಹಾತ್ಮನಃ ।
ಭರದ್ವಾಜಃ ಶುಭತರಂ ಮುನಿರ್ವಾಕ್ಯಮುದಾಹರತ್ ॥

ಅನುವಾದ

ಮಹಾತ್ಮಾ ಭರತನ ಈ ಶುಭ ವಚನವನ್ನು ಕೇಳಿ ಭರದ್ವಾಜ ಮುನಿಗಳು ಈ ಪರಮ ಮಂಗಳಮಯ ಮಾತನ್ನು ಹೇಳಿದರು.॥15॥

ಮೂಲಮ್ - 16

ನೈತಚ್ಚಿತ್ರಂ ನರವ್ಯಾಘ್ರೇ ಶೀಲವೃತ್ತವದಾಂ ವರೇ ।
ಯದಾರ್ಯಂ ತ್ವಯಿ ತಿಷ್ಠೇತ್ತು ನಿಮ್ನೋತ್ಸೃಷ್ಟಮಿವೋದಕಮ್ ॥

ಅನುವಾದ

ಭರತನೇ! ನೀನು ಮನುಷ್ಯರಲ್ಲಿ ಸಿಂಹದಂತೆ ವೀರ ಹಾಗೂ ಶೀಲ, ಸದಾಚಾರ ಜ್ಞಾನಿಗಳಲ್ಲಿ ಶ್ರೇಷ್ಠನಾಗಿರುವೆ. ನೀರು ತಗ್ಗಾದ ಜಲಾಶಯಕ್ಕೆ ಎಲ್ಲ ಕಡೆಯಿಂದ ಹರಿದುಬರುವಂತೆ, ನಿನ್ನಲ್ಲಿ ಎಲ್ಲ ಶ್ರೇಷ್ಠಗುಣಗಳು ಸ್ಥಿತವಾಗಿವೆ. ಇದೇನೂ ಆಶ್ಚರ್ಯದ ಮಾತಲ್ಲ.॥16॥

ಮೂಲಮ್ - 17

ಅನೃಣಃ ಸ ಮಹಾಬಾಹುಃ ಪಿತಾ ದಶರಥಸ್ತವ ।
ಯಸ್ಯ ತ್ವಮೀದೃಶಃ ಪುತ್ರೋ ಧರ್ಮಾತ್ಮಾ ಧರ್ಮವತ್ಸಲಃ ॥

ಅನುವಾದ

ನಿನ್ನ ತಂದೆ ಮಹಾಬಾಹು ದಶರಥ ಮಹಾರಾಜರು ಎಲ್ಲ ಪ್ರಕಾರದ ಋಣಗಳಿಂದ ಮುಕ್ತರಾಗಿರುವರು. ಅವರಿಗೆ ನಿನ್ನಂತಹ ಧರ್ಮಪ್ರೇಮಿ ಹಾಗೂ ಧರ್ಮಾತ್ಮಾ ಪುತ್ರನಿರುವನು.॥17॥

ಮೂಲಮ್ - 18

ತಮೃಷಿಂ ತು ಮಹಾಪ್ರಾಜ್ಞಃಮುಕ್ತವಾಕ್ಯಂಕೃತಾಂಜಲಿಃ ।
ಆಮಂತ್ರಯಿತುಮಾರೇಭೇ ಚರಣಾವುಪಗೃಹ್ಯ ಚ ॥

ಅನುವಾದ

ಆ ಮಹಾಜ್ಞಾನೀ ಮಹರ್ಷಿಯು ಹೀಗೆ ಹೇಳಿದಾಗ ಭರತನು ಕೈಮುಗಿದುಕೊಂಡು ಅವರ ಚರಣಗಳನ್ನು ಸ್ಪರ್ಶಿಸಿದನು; ಮತ್ತೆ ಹೊರಡಲು ಅವರಿಂದ ಅಪ್ಪಣೆ ಪಡೆಯಲು ಮುಂದಾದನು.॥18॥

ಮೂಲಮ್ - 19

ತತಃ ಪ್ರದಕ್ಷಿಣಂ ಕೃತ್ವಾ ಭರದ್ವಾಜಂ ಪುನಃ ಪುನಃ ।
ಭರತಸ್ತು ಯಯೌ ಶ್ರೀಮಾನಯೋಧ್ಯಾಂ ಸಹಮಂತ್ರಿಭಿಃ ॥

ಅನುವಾದ

ಅನಂತರ ಶ್ರೀಮಾನ್ ಭರತನು ಪದೇ-ಪದೇ ಭರದ್ವಾಜ ಮುನಿಯ ಪ್ರದಕ್ಷಿಣೆ ಮಾಡಿ ಮಂತ್ರಿಗಳೊಂದಿಗೆ ಅಯೋಧ್ಯೆಯ ಕಡೆಗೆ ಹೊರಟನು.॥19॥

ಮೂಲಮ್ - 20

ಯಾನೈಶ್ಚ ಶಕಟೈಶ್ಚೈವ ಹಯೈರ್ನಾಗೈಶ್ಚ ಸಾ ಚಮೂಃ ।
ಪುನರ್ನಿವೃತ್ತಾ ವಿಸ್ತೀರ್ಣಾ ಭರತಸ್ಯಾನುಯಾಯಿನೀ ॥

ಅನುವಾದ

ಮತ್ತೆ ಆ ವಿಶಾಲವಾದ ಸೈನ್ಯವು, ರಥ, ಬಂಡಿ, ಕುದುರೆ, ಆನೆಗಳ ಸಹಿತ ಭರತನನ್ನು ಅನುಸರಿಸುತ್ತಾ ಅಯೋಧ್ಯೆಯ ಕಡೆಗೆ ಹೊರಟಿತು.॥20॥

ಮೂಲಮ್ - 21

ತತಸ್ತೇ ಯಮುನಾಂ ದಿವ್ಯಾಂನದೀಂತೀರ್ತ್ವೋರ್ಮಿಮಾಲಿನೀಮ್ ।
ದದೃಶುಸ್ತಾಂ ಪುನಃ ಸರ್ವೇ ಗಂಗಾಂ ಶಿವಜಲಾಂ ನದೀಮ್ ॥

ಅನುವಾದ

ಅನಂತರ ಮುಂದೆ ಹೋಗಿ ಎಲ್ಲರೂ ಅಲೆಗಳಿಂದ ಸುಶೋಭಿತ ದಿವ್ಯ ಯಮುನಾನದಿಯನ್ನು ದಾಟಿ, ಪುನಃ ಶುಭ ಸಲಿಲೆ ಗಂಗೆಯನ್ನು ದರ್ಶಿಸಿದರು.॥21॥

ಮೂಲಮ್ - 22

ತಾಂ ರಮ್ಯಜಲಸಂಪೂರ್ಣಾಂ ಸಂತೀರ್ಯ ಸಹಬಾಂಧವಃ ।
ಶೃಂಗವೇರಪುರಂ ರಮ್ಯಂ ಪ್ರವಿವೇಶ ಸಸೈನಿಕಃ ॥

ಅನುವಾದ

ಮತ್ತು ಬಂಧು-ಬಾಂಧವರು ಮತ್ತು ಸೈನಿಕರೊಡನೆ ಮನೋಹರ ಜಲದಿಂದ ತುಂಬಿದ ಗಂಗೆಯನ್ನು ದಾಟಿ ಪರಮ ರಮಣೀಯ ಶೃಂಗವೇರಪುರಕ್ಕೆ ತಲುಪಿದರು.॥22॥

ಮೂಲಮ್ - 23½

ಶೃಂಗವೇರಪುರಾದ್ಭೂಯ ಅಯೋಧ್ಯಾಂ ಸಂದದರ್ಶ ಹ ।
ಅಯೋಧ್ಯಾಂ ತು ತದಾ ದೃಷ್ಟ್ವಾ ಪಿತ್ರಾ ಭ್ರಾತ್ರಾ ವಿವರ್ಜಿತಾಮ್ ॥
ಭರತೋ ದುಃಖಸಂತಪ್ತಃ ಸಾರಥಿಂ ಚೇದಮಬ್ರವೀತ್ ।

ಅನುವಾದ

ಶೃಂಗವೇರಪುರದಿಂದ ಹೊರಟು ಹೋಗುತ್ತಿರುವಾಗ ಪುನಃ ಅಯೋಧ್ಯೆಯ ದರ್ಶನವಾಯಿತು. ಅದು ಆಗ ತಂದೆ ಮತ್ತು ಅಣ್ಣ ಇಬ್ಬರಿಂದಲೂ ವಿಹೀನವಾಗಿತ್ತು ಅದನ್ನು ನೋಡಿ ಭರತನು ದುಃಖ ಸಂತಪ್ತನಾಗಿ ಸಾರಥಿಯಲ್ಲಿ ಇಂತೆಂದನು.॥23॥

ಮೂಲಮ್ - 24

ಸಾರಥೇ ಪಶ್ಯ ವಿಧ್ವಸ್ತಾ ಅಯೋಧ್ಯಾ ನ ಪ್ರಕಾಶತೇ ।
ನಿರಾಕಾರಾ ನಿರಾನಂದಾ ದೀನಾ ಪ್ರತಿಹತಸ್ವನಾ ॥

ಅನುವಾದ

ಸಾರಥಿ ಸುಮಂತ್ರನೇ! ನೋಡು, ಅಯೋಧ್ಯೆಯ ಎಲ್ಲ ಶೋಭೆ ನಾಶವಾಗಿದೆ. ಆದ್ದರಿಂದ ಇದು ಮೊದಲಿನಂತೆ ಪ್ರಕಾಶಿಸುವುದಿಲ್ಲ. ಇದರ ಆ ಸುಂದರರೂಪ, ಆ ಆನಂದ ಹೊರಟುಹೋಗಿದೆ. ಈಗ ಇದು ಅತ್ಯಂತ ದೀನ ಮತ್ತು ನಿಃಶಬ್ದವಾಗಿದೆ.॥24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹದಿಮೂರನೆಯ ಸರ್ಗ ಪೂರ್ಣವಾಯಿತು ॥113॥