११२ पादुकाप्रदानम्

वाचनम्
ಭಾಗಸೂಚನಾ

ಶ್ರೀರಾಮನ ಆಜ್ಞೆಯಂತೆ ಅಯೋಧ್ಯೆಗೆ ಹಿಂದಿರುಗಲು ಋಷಿಗಳೂ ಭರತನಿಗೆ ಸಲಹೆ ನೀಡಿದುದು, ಪುನಃ ಭರತನು ಶ್ರೀರಾಮನ ಪಾದಗಳಲ್ಲಿ ಬಿದ್ದು ಅಯೋಧ್ಯೆಗೆ ಹಿಂದಿರುಗುವಂತೆ ಬೇಡಿಕೊಂಡುದು, ಶ್ರೀರಾಮನು ತನ್ನ ಪಾದುಕೆಗಳನ್ನು ಕೊಟ್ಟು ಸಮಾಧಾನಗೊಳಿಸಿ ಎಲ್ಲರನ್ನೂ ಕಳುಹಿಸಿಕೊಟ್ಟುದು

ಮೂಲಮ್ - 1

ತಮಪ್ರತಿಮತೇಜೋಭ್ಯಾಂ ಭ್ರಾತೃಭ್ಯಾಂ ರೋಮಹರ್ಷಣಮ್ ।
ವಿಸ್ಮಿತಾಃ ಸಂಗಮಂ ಪ್ರೇಕ್ಷ್ಯ ಸಮುಪೇತಾ ಮಹರ್ಷಯಃ ॥

ಅನುವಾದ

ಆ ಅನುಪಮ ತೇಜಸ್ವೀ ಸಹೋದರರ ಆ ರೋಮಾಂಚಕಾರಿ ಸಮಾಗಮವನ್ನು ನೋಡಿ ಅಲ್ಲಿಗೆ ಬಂದಿರುವ ಋಷಿಗಳಿಗೆ ಬಹಳ ವಿಸ್ಮಯವಾಯಿತು.॥1॥

ಮೂಲಮ್ - 2

ಅಂತರ್ಹಿತಾ ಮುನಿಗಣಾಃ ಸ್ಥಿತಾಶ್ಚಾ ಪರಮರ್ಷಯಃ ।
ತೌ ಭ್ರಾತರೌ ಮಹಾಭಾಗೌ ಕಾಕುತ್ಸ್ಥೌ ಪ್ರಶಶಂಸಿರೇ ॥

ಅನುವಾದ

ಅಂತರಿಕ್ಷದಲ್ಲಿ ಅದೃಶ್ಯವಾಗಿ ನಿಂತಿರುವ ಮುನಿಗಳು ಹಾಗೂ ಅಲ್ಲಿ ಪ್ರತ್ಯಕ್ಷ ರೂಪದಿಂದ ಕುಳಿತಿರುವ ಮಹರ್ಷಿಗಳು ಆ ಮಹಾಭಾಗ್ಯಶಾಲೀ ಕಕುತ್ಸ್ಥವಂಶೀ ಸಹೋದರರನ್ನು ಹೀಗೆ ಪ್ರಶಂಸಿಸಿದರು.॥2॥

ಮೂಲಮ್ - 3

ಸದಾರ್ಯೌಂ ರಾಜಪುತ್ರೌ ದ್ವೌ ಧರ್ಮಜ್ಞೌ ಧರ್ಮವಿಕ್ರಮೌ ।
ಶ್ರುತ್ವಾ ವಯಂ ಹಿ ಸಂಭಾಷಾಮುಭಯೋಃ ಸ್ಪೃಹಯಾಮಹೇ ॥

ಅನುವಾದ

ಇವರಿಬ್ಬರೂ ರಾಜಕುಮಾರರು ಸದಾಶ್ರೇಷ್ಠರೂ, ಧರ್ಮಜ್ಞರೂ, ಧರ್ಮಮಾರ್ಗದಲ್ಲಿ ನಡೆಯುವವರೂ ಆಗಿದ್ದಾರೆ. ಇವರಿಬ್ಬರ ಮಾತುಗಳನ್ನು ಕೇಳಿ ನಮಗೆ ಪದೇ-ಪದೇ ಕೇಳುತ್ತಾ ಇರಬೇಕೆಂದು ಅನಿಸುತ್ತದೆ.॥3॥

ಮೂಲಮ್ - 4

ತತಸ್ತತ್ ಋಷಿಗಣಾಃ ಕ್ಷಿಪ್ರಂ ದಶಗ್ರೀವವಧೈಷಿಣಃ ।
ಭರತಂ ರಾಜಶಾರ್ದೂಲಮಿತ್ಯೂಚುಃಸಂಗತಾ ವಚಃ ॥

ಅನುವಾದ

ಅನಂತರ ದಶಗ್ರೀವ ರಾವಣನ ವಧೆಯನ್ನು ಬಯಸುವ ಋಷಿಗಳು ಸೇರಿ ರಾಜಸಿಂಹ ಭರತನಲ್ಲಿ ಕೂಡಲೇ ಈ ಮಾತನ್ನು ಹೇಳಿದರು.॥4॥

ಮೂಲಮ್ - 5

ಕುಲೇ ಜಾತ ಮಹಾಪ್ರಾಜ್ಞ ಮಹಾವೃತ್ತಮಹಾಯಶಃ ।
ಗ್ರಾಹ್ಯಂ ರಾಮಸ್ಯ ವಾಕ್ಯಂ ತೇ ಪಿತರಂ ಯದ್ಯವೇಕ್ಷಸೇ ॥

ಅನುವಾದ

ಮಹಾಪ್ರಾಜ್ಞನೇ! ನೀನು ಉತ್ತಮಕುಲದಲ್ಲಿ ಉತ್ಪನ್ನನಾಗಿರುವೆ. ನಿನ್ನ ಆಚರಣೆಯು ಬಹಳ ಉತ್ತಮವಾಗಿದ್ದು. ಯಶಸ್ಸು ಮಹತ್ತರವಾಗಿದೆ. ನೀನು ನಿನ್ನ ತಂದೆಯ ಕಡೆಗೆ ನೋಡಿ, ಅವರಿಗೆ ಸುಖವನ್ನು ಕೊಡಬೇಕೆಂದು ಬಯಸುತ್ತಿರುವೆಯಾದರೆ ನೀನು ಶ್ರೀರಾಮಚಂದ್ರನ ಮಾತನ್ನು ಒಪ್ಪಿಕೊಳ್ಳಬೇಕು.॥5॥

ಮೂಲಮ್ - 6

ಸದಾನೃಣಮಿಮಂ ರಾಮಂ ವಯಮಿಚ್ಛಾಮಹೇ ಪಿತುಃ ।
ಅನೃಣತ್ವಾಚ್ಚಕೈಕೇಯ್ಯಾಃ ಸ್ವರ್ಗಂ ದಶರಥೋ ಗತಃ ॥

ಅನುವಾದ

ನಾವು ಶ್ರೀರಾಮನನ್ನು ತಂದೆಯ ಋಣದಿಂದ ಮುಕ್ತನಾಗಿ ನೋಡಲು ಬಯಸುತ್ತೇವೆ. ಕೈಕೇಯಿಯ ಋಣವನ್ನು ತೀರಿಸುವುದರಿಂದಲೇ ದಶರಥ ರಾಜನು ಸ್ವರ್ಗಕ್ಕೆ ತಲುಪಿರುವನು.॥6॥

ಮೂಲಮ್ - 7

ಏತಾವದುಕ್ತ್ವಾ ವಚನಂ ಗಂಧರ್ವಾಃ ಸಮಹರ್ಷಯಃ ।
ರಾಜರ್ಷಯಶ್ಚೈವ ತಥಾ ಸರ್ವೇ ಸ್ವಾಂ ಸ್ವಾಂ ಗತಿಂಗತಾಃ ॥

ಅನುವಾದ

ಇಷ್ಟು ಹೇಳಿ ಅಲ್ಲಿ ಬಂದಿರುವ ಗಂಧರ್ವರು, ಮಹರ್ಷಿಗಳು, ರಾಜರ್ಷಿಗಳು ತಮ್ಮ-ತಮ್ಮ ಸ್ಥಾನಗಳಿಗೆ ತೆರಳಿದರು.॥7॥

ಮೂಲಮ್ - 8

ಹ್ಲಾದಿತಸ್ತೇನ ವಾಕ್ಯೇನ ಶುಶುಭೇ ಶುಭದರ್ಶನಃ ।
ರಾಮಃ ಸಂಹೃಷ್ಟವದನಸ್ತಾನೃಷೀನಭ್ಯಪೂಜಯತ್ ॥

ಅನುವಾದ

ಯಾರ ದರ್ಶನದಿಂದ ಜಗತ್ತಿನ ಕಲ್ಯಾಣವಾಗುತ್ತದೋ, ಆ ಭಗವಾನ್ ಶ್ರೀರಾಮನು ಮಹರ್ಷಿಗಳ ವಚನದಿಂದ ಬಹಳ ಪ್ರಸನ್ನನಾದನು. ಅವನ ಮುಖವು ಹರ್ಷೋಲ್ಲಾಸದಿಂದ ಅರಳಿತು, ಇದರಿಂದ ಅವನು ಹೆಚ್ಚು ಶೋಭಿಸಿದನು ಹಾಗೂ ಅವನು ಆ ಮಹರ್ಷಿಗಳನ್ನು ಆದರದಿಂದ ಪ್ರಶಂಸಿಸಿದನು.॥8॥

ಮೂಲಮ್ - 9

ತ್ರಸ್ತಗಾತ್ರಸ್ತು ಭರತಃ ಸ ವಾಚಾ ಸಜ್ಜಮಾನಯಾ ।
ಕೃತಾಂಜಲಿರಿದಂ ವಾಕ್ಯಂ ರಾಘವಂ ಪುನರಬ್ರವೀತ್ ॥

ಅನುವಾದ

ಆದರೆ ಭರತನು ನಡುಗಿಹೋದನು. ಅವನು ತೊದಲುತ್ತಿರುವ ಮಾತಿನಿಂದ, ಕೈಮುಗಿದುಕೊಂಡು ಶ್ರೀರಾಮನಲ್ಲಿ ಹೇಳಿದನು.॥9॥

ಮೂಲಮ್ - 10

ರಾಮ ಧರ್ಮಮಿಮಂ ಪ್ರೇಕ್ಷ್ಯ ಕುಲಧರ್ಮಾನುಸಂತತಮ್ ।
ಕರ್ತುಮರ್ಹಸಿ ಕಾಕುತ್ಸ್ಥ ಮಮ ಮಾತುಶ್ಚ ಯಾಚನಾಮ್ ॥

ಅನುವಾದ

ಕಕುತ್ಸ್ಥಕುಲಭೂಷಣ ಶ್ರೀರಾಮಾ! ನಮ್ಮ ಕುಲಧರ್ಮಕ್ಕೆ ಸಮ್ಮತವಾಗಿ ಜ್ಯೇಷ್ಠಪುತ್ರನ ರಾಜ್ಯ ಸ್ವೀಕಾರ ಹಾಗೂ ಪ್ರಜಾಪಾಲನರೂಪೀ ಧರ್ಮವನ್ನು ಕಣ್ಣಿನಲ್ಲಿಟ್ಟುಕೊಂಡು ನೀನು ನನ್ನ ಮತ್ತು ತಾಯಿಯ ಬೇಡಿಕೆಯನ್ನು ನಡೆಸಿಕೊಡು.॥10॥

ಮೂಲಮ್ - 11

ರಕ್ಷಿತುಂ ಸುಮಹದ್ರಾಜ್ಯಮಹಮೇಕಸ್ತು ನೋತ್ಸಹೇ ।
ಪೌರಜಾನಪದಾಂಶ್ಚಾಪಿ ರಕ್ತಾನ್ ರಂಜಯಿತುಂ ತಥಾ ॥

ಅನುವಾದ

ನಾನೊಬ್ಬನೇ ಈ ವಿಶಾಲ ರಾಜ್ಯವನ್ನು ರಕ್ಷಿಸಲಾರೆನು ಹಾಗೂ ನಿನ್ನ ಚರಣಗಳಲ್ಲಿ ಅನುರಾಗವುಳ್ಳ ಈ ಪುರವಾಸಿಗಳನ್ನು ಹಾಗೂ ದೇಶವಾಸಿಗಳನ್ನು ನೀನಿಲ್ಲದೆ ಆನಂದವಾಗಿ ಇರಿಸಲಾರೆನು.॥11॥

ಮೂಲಮ್ - 12

ಜ್ಞಾತಯಶ್ಚಾಪಿ ಯೋಧಾಶ್ಚ ಮಿತ್ರಾಣಿ ಸುಹೃದಶ್ಚ ನಃ ।
ತ್ವಾಮೇವ ಪ್ರತೀಕ್ಷಂತೇ ಪರ್ಜನ್ಯಮಿವ ಕರ್ಷಕಾಃ ॥

ಅನುವಾದ

ರೈತನು ಮೋಡಗಳನ್ನು ಎದುರು ನೋಡುವಂತೆಯೇ ನಮ್ಮ ಬಂಧು-ಬಾಂಧವರು, ಯೋಧರು, ಮಿತ್ರರು ಸುಹೃದರು ಹೀಗೆ ಎಲ್ಲ ಜನರು ನಿನ್ನ ದಾರಿಯನ್ನೇ ನೋಡುತ್ತಿರುವರು.॥12॥

ಮೂಲಮ್ - 13

ಇದಂ ರಾಜ್ಯಂಮಹಾಪ್ರಾಜ್ಞ ಸ್ಥಾಪಯ ಪ್ರತಿಪದ್ಯ ಹಿ ।
ಶಕ್ತಿಮಾನ್ ಸ ಹಿ ಕಾಕುತ್ಸ್ಥ ಲೋಕಸ್ಯ ಪರಿಪಾಲನೇ ॥

ಅನುವಾದ

ಮಹಾಪ್ರಾಜ್ಞನೇ! ನೀನು ಈ ರಾಜ್ಯವನ್ನು ಸ್ವೀಕರಿಸಿ ಬೇರೆ ಯಾರಿಗಾದರೂ ಇದರ ಪಾಲನೆಯ ಭಾರ ಒಪ್ಪಿಸಿಬಿಡು. ಅವನೇ ನಿನ್ನ ರಾಜ್ಯದ, ಪ್ರಜೆಯ ಪಾಲನೆಯಲ್ಲಿ ಸಮರ್ಥನಾಗಬಲ್ಲನು.॥13॥

ಮೂಲಮ್ - 14

ಏವಮುಕ್ತ್ವಾಪತದ್ ಭ್ರಾತುಃ ಪಾದಯೋರ್ಭರತಸ್ತದಾ ।
ಭೃಶಂ ಸಂಪ್ರಾರ್ಥಯಾಮಾಸ ರಾಘವೇಽತಿಪ್ರಿಯಂ ವದನ್ ॥

ಅನುವಾದ

ಹೀಗೆ ಹೇಳುತ್ತಾ ಭರತನು ತನ್ನ ಅಣ್ಣನ ಪಾದಗಳಲ್ಲಿ ಬಿದ್ದನು. ಆಗ ಅವನು ಶ್ರೀರಘುನಾಥನಲ್ಲಿ ಅತ್ಯಂತ ಪ್ರಿಯಮಾತುಗಳನ್ನಾಡಿ ಅವನಲ್ಲಿ ರಾಜ್ಯ ಸ್ವೀಕರಿಸುವಂತೆ ಬಹಳವಾಗಿ ಪ್ರಾರ್ಥಿಸಿದನು.॥14॥

ಮೂಲಮ್ - 15

ತಮಂಕೇ ಭ್ರಾತರಂ ಕೃತ್ವಾ ರಾಮೋ ವಚನಮಬ್ರವೀತ್ ।
ಶ್ಯಾಮಂ ನಳಿನಪತ್ರಾಕ್ಷಂ ಮತ್ತಹಂಸಸ್ವರಃ ಸ್ವಯಮ್ ॥

ಅನುವಾದ

ಆಗ ಶ್ರೀರಾಮಚಂದ್ರನು ಶ್ಯಾಮಲವರ್ಣ ಕಮಲನಯನ ತಮ್ಮನಾದ ಭರತನನ್ನು ಎತ್ತಿ ತೊಡೆಯಲ್ಲಿ ಕುಳ್ಳಿರಿಸಿಕೊಂಡು ಮದಮತ್ತ ಹಂಸದಂತೆ ಮಧುರವಾಗಿ ಈ ಮಾತನ್ನು ಹೇಳಿದನು.॥15॥

ಮೂಲಮ್ - 16

ಆಗತಾ ತ್ವಾಮಿಯಂ ಬುದ್ಧಿಃ ಸ್ವಜಾ ವೈನಯಿಕೀ ಚ ಯಾ ।
ಭೃಶಮುತ್ಸಹಸೇ ತಾತ ರಕ್ಷಿತುಂ ಪೃಥಿವೀಮಪಿ ॥

ಅನುವಾದ

ಅಯ್ಯಾ! ನಿನಗೆ ಸ್ವಾಭಾವಿಕವಾಗಿ ಪ್ರಾಪ್ತವಾದ ವಿನಯ ಶೀಲಬುದ್ಧಿಯಿಂದ ನೀನು ಸಮಸ್ತ ಭೂಮಂಡಲವನ್ನು ರಕ್ಷಿಸಲು ಪೂರ್ಣವಾಗಿ ಸಮರ್ಥನಾಗಬಲ್ಲೆ.॥16॥

ಮೂಲಮ್ - 17

ಅಮಾತ್ಯೈಶ್ಚ ಸುಹೃದ್ಭಿಶ್ಚ ಬುದ್ಧಿಮದ್ಭಿಶ್ಚ ಮಂತ್ರಿಭಿಃ ।
ಸರ್ವಕಾರ್ಯಾಣಿ ಸಮ್ಮಂತ್ರ್ಯ ಮಹಾಂತ್ಯ ಪಿಹಿ ಕಾರಯ ॥

ಅನುವಾದ

ಇದಲ್ಲದೆ ಅಮಾತ್ಯರ, ಸುಹೃದರ, ಬುದ್ಧಿವಂತ ಮಂತ್ರಿಗಳ ಸಲಹೆ ಪಡೆದು, ರಾಜಕಾರ್ಯ ಎಷ್ಟೇ ದೊಡ್ಡದಾಗಿದ್ದರೂ ಆ ಎಲ್ಲ ಕಾರ್ಯಗಳನ್ನು ಅವರಿಂದ ಮಾಡಿಸಿಕೋ.॥17॥

ಮೂಲಮ್ - 18

ಲಕ್ಷ್ಮೀಶ್ಚಂದ್ರಾದಪೇಯಾದ್ವಾ ಹಿಮವಾನ್ವಾ ಹಿಮಂ ತ್ಯಜೇತ್ ।
ಅತೀಯಾನ್ ಸಾಗರೋ ವೇಲಾಂ ನ ಪ್ರತಿಜ್ಞಾಮಹಂ ಪಿತುಃ ॥

ಅನುವಾದ

ಚಂದ್ರನು ಶೀತಲತೆಯನ್ನು ಬಿಟ್ಟುಬಿಟ್ಟರೂ, ಹಿಮಾಲಯವು ಹಿಮವನ್ನು ತ್ಯಜಿಸಿದರೂ, ಸಮುದ್ರವು ತನ್ನ ಮೇರೆಯನ್ನು ಮೀರಿದರೂ ನಾನು ತಂದೆಯ ಪ್ರತಿಜ್ಞೆಯನ್ನು ಮುರಿಯಲಾರೆನು.॥18॥

ಮೂಲಮ್ - 19

ಕಾಮಾದ್ವಾ ತಾತ ಲೋಭಾದ್ ವಾ ಮಾತ್ರಾ ತುಭ್ಯಮಿದಂ ಕೃತಮ್ ।
ನ ತನ್ಮನಸಿ ಕರ್ತವ್ಯಂ ವರ್ತಿತವ್ಯಂ ಚ ಮಾತೃವತ್ ॥

ಅನುವಾದ

ಅಪ್ಪಾ! ತಾಯಿ ಕೈಕೇಯಿಯು ಕಾಮನೆಯಿಂದ ಅಥವಾ ಲೋಭದಿಂದ ನಿನಗಾಗಿ ಏನು ಮಾಡಿರುವಳೋ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಪೂಜನೀಯ ತಾಯಿಯೊಡನೆ ವರ್ತಿಸುವಂತೆಯೇ ನೀನು ಆಕೆಯೊಡನೆ ವರ್ತಿಸು.॥19॥

ಮೂಲಮ್ - 20

ಏವಂ ಬ್ರುವಾಣಂ ಭರತಃ ಕೌಸಲ್ಯಾಸುತಮಬ್ರವೀತ್ ।
ತೇಜಸಾಽಽದಿತ್ಯಸಂಕಾಶಂ ಪ್ರತಿಪಚ್ಚಂದ್ರದರ್ಶನಮ್ ॥

ಅನುವಾದ

ಸೂರ್ಯನಂತೆ ತೇಜಸ್ವಿಯೂ, ಬಿದಿಗೆಯ ಚಂದ್ರನಂತೆ ಆಹ್ಲಾದಕರ ಪ್ರಿಯದರ್ಶನನೂ ಆದ ಕೌಸಲ್ಯಾನಂದನ ಶ್ರೀರಾಮನು ಹೀಗೆ ಹೇಳಿದಾಗ ಭರತನು ಇಂತೆಂದನು.॥20॥

ಮೂಲಮ್ - 21

ಅಧಿರೋಹಾರ್ಯ ಪಾದಾಭ್ಯಾಂ ಪಾದುಕೇ ಹೇಮಭೂಷಿತೇ ।
ಏತೇ ಹಿ ಸರ್ವಲೋಕಸ್ಯ ಯೋಗಕ್ಷೇಮಂ ವಿಧಾಸ್ಯತಃ ॥

ಅನುವಾದ

ಆರ್ಯ! ಇವೆರಡು ಸ್ವರ್ಣಪಾದುಕೆಗಳು ನಿನ್ನ ಚರಣಗಳಿಗೆ ಅರ್ಪಿಸುತ್ತಿದ್ದೇನೆ. ನೀನು ಇವುಗಳ ಮೇಲೆ ನಿನ್ನ ಚರಣಗಳನ್ನು ಇಡು. ಇವೇ ಸಂಪೂರ್ಣ ಜಗತ್ತಿನ ಯೋಗ-ಕ್ಷೇಮವನ್ನು ನಿರ್ವಹಿಸುವವು.॥21॥

ಮೂಲಮ್ - 22

ಸೋಽಧಿರುಹ್ಯ ನರವ್ಯಾಘ್ರಃ ಪಾದುಕೇ ವ್ಯವಮುಚ್ಯ ಚ ।
ಪ್ರಾಯಚ್ಛತ್ ಸುಮಹಾತೇಜಾ ಭರತಾಯ ಮಹಾತ್ಮನೇ ॥

ಅನುವಾದ

ಆಗ ಮಹಾತೇಜಸ್ವೀ ಪುರುಷಸಿಂಹ ಶ್ರೀರಾಮನು ಆ ಪಾದುಕೆಗಳನ್ನು ಮೆಟ್ಟಿ, ಅದನ್ನು ಬೇರೆಯಾಗಿಸಿ ಮಹಾತ್ಮನಾದ ಭರತನಿಗೆ ಒಪ್ಪಿಸಿದನು.॥22॥

ಮೂಲಮ್ - 23

ಸ ಪಾದುಕೇ ಸಂಪ್ರಣಮ್ಯ ರಾಮಂ ವಚನಮಬ್ರವೀತ್ ।
ಚತುರ್ದಶ ಹಿ ವರ್ಷಾಣಿ ಜಟಾಚೀರಧರೋಹ್ಯಹಮ್ ॥

ಮೂಲಮ್ - 24½

ಫಲಮೂಲಾಶ್ಚನೋ ವೀರಭವೇಯಂ ರಘುನಂದನ ।
ತವಾಗಮನಮಾಕಾಂಕ್ಷನ್ ವಸನ್ ವೈ ನಗರಾದ್ಬಹಿಃ ॥
ತವ ಪಾದುಕಯೋರ್ನ್ಯಸ್ಯ ರಾಜ್ಯತಂತ್ರಂ ಪರಂತಪ ।

ಅನುವಾದ

ಆ ಪಾದುಕೆಗಳಿಗೆ ವಂದಿಸಿ ಭರತನು ಶ್ರೀರಾಮನಲ್ಲಿ ಹೇಳಿದನು-ವೀರ ರಘುನಂದನ! ನಾನೂ ಕೂಡ ಹದಿನಾಲ್ಕು ವರ್ಷಗಳವರೆಗೆ ಜಟಾ-ವಲ್ಕಲ ಧರಿಸಿ, ಫಲ-ಮೂಲಗಳನ್ನು ತಿನ್ನುತ್ತಾ, ನಿನ್ನ ಆಗಮನವನ್ನು ನಿರೀಕ್ಷಿಸುತ್ತಾ ನಗರದ ಹೊರಗೇ ಇರುವೆನು. ಪರಂತಪ! ಅಷ್ಟು ದಿನಗಳವರೆಗೆ ರಾಜ್ಯಭಾರವನ್ನು ನಿನ್ನ ಚರಣಪಾದುಕೆಗಳ ಮೇಲೆ ಇರಿಸಿಯೇ ನಾನು ನಿನ್ನ ದಾರಿ ನೋಡುತ್ತಾ ಇರುವೆನು.॥23-24॥

ಮೂಲಮ್ - 25½

ಚತುರ್ದಶೇ ಹಿ ಸಂಪೂರ್ಣೇ ವರ್ಷೇಽಹನಿ ರಘೂತ್ತಮ ॥
ನ ದ್ರಕ್ಷ್ಯಾಮಿ ಯದಿ ತ್ವಾಂ ತು ಪ್ರವೇಕ್ಷ್ಯಾಮಿ ಹುತಾಶನಮ್ ।

ಅನುವಾದ

ರಘುಕುಲ ಶಿರೋಮಣಿಯೇ! ಹದಿನಾಲ್ಕು ವರ್ಷಗಳು ಪೂರ್ಣವಾಗಿ ಹದಿನೈದನೆಯ ಹೊಸ ವರ್ಷದ ಮೊದಲ ದಿನವೇ ನನಗೆ ನಿನ್ನ ದರ್ಶನವಾಗದಿದ್ದರೆ ನಾನು ಅಗ್ನಿಪ್ರವೇಶ ಮಾಡಿಬಿಡುವೆ.॥25॥

ಮೂಲಮ್ - 26½

ತಥೇತಿ ಚ ಪ್ರತಿಜ್ಞಾಯ ತಂ ಪರಿಷ್ವಜ್ಯ ಸಾದರಮ್ ॥
ಶತ್ರುಘ್ನಂ ಚ ಪರಿಷ್ವಜ್ಯ ಭರತಂ ಚೇದಮಬ್ರವೀತ್ ।

ಅನುವಾದ

ಶ್ರೀರಾಮಚಂದ್ರನು ‘ಹಾಗೆಯೇ ಆಗಲಿ’ ಎಂದು ಹೇಳಿ ಒಪ್ಪಿಗೆ ಕೊಟ್ಟು, ತುಂಬು ಆದರದಿಂದ ಭರತನನ್ನು ಎದೆಗೊತ್ತಿಕೊಂಡನು. ಅನಂತರ ಶತ್ರುಘ್ನನನ್ನೂ ಬಿಗಿದಪ್ಪಿಕೊಂಡನು.॥26॥

ಮೂಲಮ್ - 27

ಮಾತರಂ ರಕ್ಷ ಕೈಕೇಯೀಂ ಮಾ ರೋಷಂ ಕುರು ತಾಂ ಪ್ರತಿ ॥

ಮೂಲಮ್ - 28

ಮಯಾ ಚ ಸೀತಯಾ ಚೈವ ಶಪ್ತೋಽಸಿ ರಘುನಂದನ ।
ಇತ್ಯುಕ್ತ್ವಾ ಶ್ರುಪರೀತಾಕ್ಷೋ ಭ್ರಾತರಂ ವಿಸಸರ್ಜ ಹ ॥

ಅನುವಾದ

ರಘುನಂದನ! ನಾನು ನಿನಗೆ ನನ್ನ ಮತ್ತು ಸೀತೆಯ ಮೇಲೆ ಆಣೆಯಿಟ್ಟು ಹೇಳುತ್ತೇನೆ - ‘ನೀನು ತಾಯಿ ಕೈಕೇಯಿಯನ್ನು ರಕ್ಷಿಸಬೇಕು, ಆಕೆಯ ಕುರಿತು ಎಂದೂ ಸಿಟ್ಟಾಗಬಾರದು’ - ಇಷ್ಟು ಹೇಳುತ್ತಿರುವಾಗ ಅವನ ಕಣ್ಣುಗಳಲ್ಲಿ ಕಂಬನಿ ಮಿಡಿಯಿತು. ಅವನು ಭಾರವಾದ ಹೃದಯದಿಂದ ಶತ್ರುಘ್ನನನ್ನು ಬೀಳ್ಕೊಟ್ಟನು.॥27-28॥

ಮೂಲಮ್ - 29

ಸ ಪಾದುಕೇ ತೇ ಭರತಃ ಸ್ವಲಂಕೃತೇ
ಮಹೋಜ್ಜ್ವಲೇ ಸಂಪರಿಪೂಜ್ಯ ಧರ್ಮವಿತ್ ।
ಪ್ರದಕ್ಷಿಣಂ ಚೈವ ಚಕಾರ ರಾಘವಂ
ಚಕಾರ ಚೈವೋತ್ತಮನಾಗಮೂರ್ಧನಿ ॥

ಅನುವಾದ

ಧರ್ಮಜ್ಞ ಭರತನು ಚೆನ್ನಾಗಿ ಅಲಂಕರಿಸಿದ ಆ ಉಜ್ಜ್ವಲ ಚರಣ ಪಾದುಕೆಗಳನ್ನು ಪಡೆದು ಶ್ರೀರಾಮಚಂದ್ರನಿಗೆ ಪ್ರದಕ್ಷಿಣೆ ಮಾಡಿ ಆ ಪಾದುಕೆಗಳನ್ನು ಸರ್ವಶ್ರೇಷ್ಠ ಪಟ್ಟದಾನೆಯ ಮಸ್ತಕದ ಮೇಲೆ ಇರಿಸಿದನು.॥29॥

ಮೂಲಮ್ - 30

ಅಥಾನುಪೂರ್ವ್ಯಾತ್ಪ್ರತಿಪೂಜ್ಯ ತಂ ಜನಂ
ಗುರೂಂಶ್ಚ ಮಂತ್ರಿನ್ ಪ್ರಕೃತೀಸ್ತಥಾನುಜೌ ।
ವ್ಯಸರ್ಜಯದ್ರಾಘವವಂಶವರ್ಧನಃ
ಸ್ಥಿತಃ ಸ್ವಧರ್ಮೇ ಹಿಮವಾನಿವಾಚಲಃ ॥

ಅನುವಾದ

ಅನಂತರ ತನ್ನ ಧರ್ಮದಲ್ಲಿ ಹಿಮಾಲಯದಂತೆ ಅವಿಚಲನಾಗಿ ಸ್ಥಿರನಾಗಿರುವ ರಘುವಂಶವರ್ಧನ ಶ್ರೀರಾಮನು ಕ್ರಮವಾಗಿ ಅಲ್ಲಿಗೆ ಬಂದಿರುವ ಜನಸಮುದಾಯ, ಗುರುಗಳು, ಮಂತ್ರಿಗಳು, ಪ್ರಜಾಜನರು ಹಾಗೂ ಇಬ್ಬರೂ ಸಹೋದರರನ್ನು ಯಥಾಯೋಗ್ಯವಾಗಿ ಸತ್ಕರಿಸಿ ಅವರನ್ನು ಬೀಳ್ಕೊಟ್ಟನು.॥30॥

ಮೂಲಮ್ - 31

ತಂ ಮಾತರೋ ಬಾಷ್ಪಗೃಹೀತಕಂಠ್ಯೋ
ದುಃಖೇನ ನಾಮಂತ್ರಯಿತುಂ ಹಿ ಶೇಕುಃ ।
ಸ ಚೈವ ಮಾತೃ ರಭಿವಾದ್ಯ ಸರ್ವಾ
ರುದಂನ್ಕುಟೀಂ ಸ್ವಾಂ ಪ್ರವಿವೇಶ ರಾಮಃ ॥

ಅನುವಾದ

ಆಗ ಕೌಸಲ್ಯಾದಿ ಎಲ್ಲ ತಾಯಂದಿರ ಗಂಟಲು ಕಟ್ಟಿ ಕಂಬನಿ ತುಂಬಿದವು. ಅವರಿಂದ ದುಃಖದಿಂದಾಗಿ ಶ್ರೀರಾಮನನ್ನು ಸಂಬೋಧಿಸಲು ಸಾಧ್ಯವಾಗಲಿಲ್ಲ. ಶ್ರೀರಾಮನೂ ಕೂಡ ಎಲ್ಲ ತಾಯಂದಿರನ್ನು ವಂದಿಸಿ ಅಳುತ್ತಾ ತನ್ನ ಪರ್ಣಕುಟೀರವನ್ನು ಹೊಕ್ಕನು.॥31॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹನ್ನೆರಡನೆಯ ಸರ್ಗ ಪೂರ್ಣವಾಯಿತು ॥112॥