वाचनम्
ಭಾಗಸೂಚನಾ
ವಸಿಷ್ಠರು ಸಮಾಧಾನಗೊಳಿಸಿದರೂ ಶ್ರೀರಾಮನು ಅಯೋಧ್ಯೆಗೆ ಬರಲು ಒಪ್ಪದಿರಲು ಭರತನು ರಾಮನ ಮುಂದೆ ನಿರಾಹಾರನಾಗಿ ಮಲಗಿದುದು, ಶ್ರೀರಾಮನು ಭರತನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹೋಗಲು ಆಜ್ಞಾಪಿಸಿದುದು
ಮೂಲಮ್ - 1
ವಸಿಷ್ಠಃ ಸ ತದಾ ರಾಮಮುಕ್ತ್ವಾ ರಾಜಪುರೋಹಿತಃ ।
ಅಬ್ರವೀದ್ಧರ್ಮಸಂಯುಕ್ತಂ ಪುನರೇವಾಪರಂ ವಚಃ ॥
ಅನುವಾದ
ಆಗ ರಾಜಪುರೋಹಿತ ವಸಿಷ್ಠರು ಹಿಂದಿನಂತೆ ಮಾತುಗಳನ್ನು ಹೇಳಿ ಪುನಃ ಶ್ರೀರಾಮನಲ್ಲಿ ಇನ್ನೊಂದು ಧರ್ಮ ಯುಕ್ತ ಮಾತನ್ನು ಹೇಳಿದರು.॥1॥
ಮೂಲಮ್ - 2
ಪುರುಷಸ್ಯೇಹ ಜಾತಸ್ಯ ಭವಂತಿ ಗುರವಃ ಸದಾ ।
ಆಚಾರ್ಯಶ್ಚೈವ ಕಾಕುತ್ಸ್ಥ ಪಿತಾ ಮಾತಾಚ ರಾಘವ ॥
ಅನುವಾದ
ರಘುನಂದನ! ಕಕುತ್ಸ್ಥಕುಲಭೂಷಣ! ಈ ಜಗತ್ತಿನಲ್ಲಿ ಹುಟ್ಟಿದ ಮನುಷ್ಯನಿಗೆ ಆಚಾರ್ಯ, ತಂದೆ ಮತ್ತು ತಾಯಿ ಈ ಮೂರು ಗುರುಗಳು ಸದಾ ಇರುತ್ತಾರೆ.॥2॥
ಮೂಲಮ್ - 3
ಪಿತಾ ಹ್ಯೇನಂ ಜನಯತಿ ಪುರುಷಂ ಪುರುಷರ್ಷಭ ।
ಪ್ರಜ್ಞಾಂ ದದಾತಿ ಚಾಚಾರ್ಯಸ್ತಸ್ಮಾತ್ ಸ ಗುರುರುಚ್ಯತೇ ॥
ಅನುವಾದ
ಪುರುಷಪ್ರವರ! ತಂದೆಯು ಪುರುಷನ ಶರೀರವನ್ನು ಉತ್ಪನ್ನಮಾಡುತ್ತಾನೆ. ಅದಕ್ಕಾಗಿ ಗುರು ಆಗಿದ್ದಾನೆ. ಆಚಾರ್ಯನು ಅವನಿಗೆ ಜ್ಞಾನ ಕೊಡುತ್ತಾನೆ ಅದಕ್ಕಾಗಿ ಗುರುವಾಗಿದ್ದಾನೆ.॥3॥
ಮೂಲಮ್ - 4
ಸ ತೇಽಹಂ ಪಿತುರಾಚಾರ್ಯಸ್ತವ ಚೈವ ಪರಂತಪ ।
ಮಮ ತ್ವಂ ವಚನಂ ಕುರ್ವನ್ ನಾತಿವರ್ತೇಃ ಸತಾಂ ಗತಿಮ್ ॥
ಅನುವಾದ
ಪರಂತಪ ರಘುವೀರನೇ! ನಾನು ನಿನ್ನ ತಂದೆಯ ಮತ್ತು ನಿನಗೂ ಆಚಾರ್ಯನಾಗಿದ್ದೇನೆ; ಆದ್ದರಿಂದ ನನ್ನ ಆಜ್ಞೆಯನ್ನು ಪಾಲಿಸುವುದರಿಂದ ನೀನು ಸತ್ಪುರುಷರ ಪಥವನ್ನು ತ್ಯಾಗ ಮಾಡದವನಾಗುವೆ.॥4॥
ಮೂಲಮ್ - 5
ಇಮಾ ಹಿತೇ ಪರಿಷದೋ ಜ್ಞಾತಯಶ್ಚ ನೃಪಾಸ್ತಥಾ ।
ಏಷು ತಾತ ಚರನ್ಧರ್ಮಂ ನಾತಿವರ್ತೇಃ ಸತಾಂ ಗತಿಮ್ ॥
ಅನುವಾದ
ಅಯ್ಯಾ! ನಿನ್ನ ಈ ಸಭಾಸದರು, ಬಂಧು-ಬಾಂಧವರು ಹಾಗೂ ಸಾಮಂತರಾಜರು ಆಗಮಿಸಿರುವರು. ಇವರ ಕುರಿತು ಧರ್ಮಾನುಕೂಲ ವರ್ತಿಸುವುದರಿಂದಲೂ ನಿನ್ನಿಂದ ಸನ್ಮಾರ್ಗದ ಉಲ್ಲಂಘನೆ ಆಗಲಾರದು.॥5॥
ಮೂಲಮ್ - 6
ವೃದ್ಧಾಯಾ ಧರ್ಮಶೀಲಾಯಾ ಮಾತುರ್ನಾರ್ಹಸ್ಯವರ್ತಿತುಮ್ ।
ಅಸ್ಯಾ ಹಿ ವಚನಂ ಕುರ್ವನ್ನಾತಿವರ್ತೇಃ ಸತಾಂ ಗತಿಮ್ ॥
ಅನುವಾದ
ನಿನ್ನ ಧರ್ಮಪರಾಯಣ ವೃದ್ಧಳಾದ ತಾಯಿಯ ಮಾತನ್ನಾದರೋ ನೀನು ಎಂದೂ ಅಲ್ಲಗಳೆಯಬಾರದು. ಆಕೆಯ ಆಜ್ಞೆಯನ್ನು ಪಾಲನೆಮಾಡಿ ನೀನು ಶ್ರೇಷ್ಠ ಪುರುಷರ ಆಶ್ರಯಭೂತ ಧರ್ಮವನ್ನು ಉಲ್ಲಂಘನೆಮಾಡುವವನು ಆಗಲಾರೆ.॥6॥
ಮೂಲಮ್ - 7
ಭರತಸ್ಯ ವಚಃ ಕುರ್ವನ್ ಯಾಚಮಾನಸ್ಯ ರಾಘವ ।
ಆತ್ಮಾನಂ ನಾತಿವರ್ತೇಸ್ತ್ವಂ ಸತ್ಯಧರ್ಮಪರಾಕ್ರಮ ॥
ಅನುವಾದ
ಸತ್ಯ, ಧರ್ಮ ಮತ್ತು ಪರಾಕ್ರಮ ಸಂಪನ್ನ ರಘುನಂದನ! ಭರತನು ಆತ್ಮಸ್ವರೂಪ ನಿನ್ನಲ್ಲಿ ರಾಜ್ಯವನ್ನು ಸ್ವೀಕರಿಸುವಂತೆ ಮತ್ತು ಅಯೋಧ್ಯೆಗೆ ಮರಳಲು ಪ್ರಾರ್ಥಿಸುತ್ತಿದ್ದಾನೆ. ಅವನ ಮಾತನ್ನು ಮನ್ನಿಸುವುದರಿಂದಲೂ ನೀನು ಧರ್ಮವನ್ನು ಉಲ್ಲಂಘನೆ ಮಾಡಿದವನು ಆಗಲಾರೆ.॥7॥
ಮೂಲಮ್ - 8
ಏವಂ ಮಧುರಮುಕ್ತಃ ಸ ಗುರುಣಾ ರಾಘವಃ ಸ್ವಯಮ್ ।
ಪ್ರತ್ಯುವಾಚ ಸಮಾಸೀನಂ ವಸಿಷ್ಠಂ ಪುರುಷರ್ಷಭಃ ॥
ಅನುವಾದ
ಗುರು ವಸಿಷ್ಠರು ಸುಮಧುರ ಮಾತುಗಳಿಂದ ಹೀಗೆ ಹೇಳಿದಾಗ ಸಾಕ್ಷಾತ್ ಪುರುಷೋತ್ತಮ ಶ್ರೀರಾಘವೇಂದ್ರನು ಅಲ್ಲಿ ಕುಳಿತಿರುವ ವಸಿಷ್ಠರಲ್ಲಿ ಹೀಗೆ ಉತ್ತರಿಸಿದನು.॥8॥
ಮೂಲಮ್ - 9
ಯನ್ಮಾತಾಪಿತರೌ ವೃತ್ತಂ ತನಯೇ ಕುರುತಃ ಸದಾ ।
ನ ಸುಪ್ರತಿಕರಂ ತತ್ತು ಮಾತ್ರಾ ಪಿತ್ರಾ ಚ ಯತ್ಕೃತಮ್ ॥
ಮೂಲಮ್ - 10
ಯಥಾಶಕ್ತಿಪ್ರದಾನೇನ ಸ್ವಾಪನೋಚ್ಛಾದನೇನ ಚ ।
ನಿತ್ಯಂ ಚಪ್ರಿಯವಾದೇನ ತಥಾ ಸಂವರ್ಧನೇನ ಚ ॥
ಅನುವಾದ
ತಂದೆ-ತಾಯಿಯರು ಮಗನಿಗಾಗಿ ಸರ್ವದಾ ಸ್ನೇಹ ಪೂರ್ಣವಾಗಿ ವರ್ತಿಸುತ್ತಾರೆ, ತಮ್ಮ ಶಕ್ತಿಗನುಸಾರ ಉತ್ತಮ ಆಹಾರ ಕೊಡುವುದು, ಉತ್ತಮ ಶಯ್ಯೆಯಲ್ಲಿ ಮಲಗಿಸುವುದು, ಅಂಗರಾಗಾದಿಗಳನ್ನು ಹಚ್ಚುವುದು, ಸದಾ ಸಿಹಿಯಾಗಿ ಮಾತನಾಡುವುದು, ಪಾಲನ-ಪೋಷಣ ಮಾಡುವುದರ ಮೂಲಕ ತಾಯಿ-ತಂದೆಯವರು ಮಾಡಿದ ಉಪಕಾರವನ್ನು ತೀರಿಸಲಾಗುವುದಿಲ್ಲ.॥9-10॥
ಮೂಲಮ್ - 11
ಸ ಹಿ ರಾಜಾ ದಶರಥಃ ಪಿತಾ ಜನಯಿತಾ ಮಮ ।
ಆಜ್ಞಾಪಯನ್ಮಾಂ ಯತ್ ತಸ್ಯ ನ ತನ್ಮಿಥ್ಯಾ ಭವಿಷ್ಯತಿ ॥
ಅನುವಾದ
ಆದ್ದರಿಂದ ನನ್ನ ಜನ್ಮದಾತ ದಶರಥ ಮಹಾರಾಜರು ನನಗೆ ಕೊಟ್ಟ ಆಜ್ಞೆಯು ಮಿಥ್ಯೆಯಾಗಲಾರದು.॥11॥
ಮೂಲಮ್ - 12
ಏವಮುಕ್ತಸ್ತು ರಾಮೇಣ ಭರತಃ ಪ್ರತ್ಯನಂತರಮ್ ।
ಉವಾಚ ವಿಪುಲೋರಸ್ಕಃ ಸೂತಂ ಪರಮದುರ್ಮನಾಃ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಹೇಳಿದಾಗ ವಿಶಾಲ ಹೃದಯೀ ಭರತನ ಮನಸ್ಸು ಇನ್ನೂ ಉದಾಸವಾಯಿತು. ಅವನು ಬಳಿಯಲ್ಲೇ ಕುಳಿತಿರುವ ಸೂತ ಸುಮಂತ್ರನಲ್ಲಿ ಹೇಳಿದನು .॥12॥
ಮೂಲಮ್ - 13
ಇಹ ತುಸ್ಥಂಡಿಲೇ ಶೀಘ್ರಂ ಕುಶಾನಾಸ್ತರ ಸಾರಥೇ ।
ಆರ್ಯಂ ಪ್ರತ್ಯುಪವೇಕ್ಷ್ಯಾಮಿ ಯಾವನ್ಮೇ ಸಂಪ್ರಸೀದತಿ ॥
ಮೂಲಮ್ - 14
ನಿರಾಹಾರೋ ನಿರಾಲೋಕೋ ಧನಹೀನೋ ಯಥಾ ದ್ವಿಜಃ ।
ಶಯೇ ಪುರಸ್ತಾಚ್ಛಾಲಾಯಾಂ ಯಾವನ್ಮಾಂ ಪ್ರತಿಯಾಸ್ಯತಿ ॥
ಅನುವಾದ
ಸಾರಥಿಯೇ! ನೀನು ಈ ವೇದಿಯ ಮೇಲೆ ದರ್ಭೆಗಳನ್ನು ಹಾಸಿಬಿಡು. ಆರ್ಯನು ನನ್ನ ಮೇಲೆ ಪ್ರಸನ್ನನಾಗುವತನಕ ನಾನು ಇವನ ಮುಂದೆಯೇ ಧರಣಿ ಕುಳಿತುಕೊಳ್ಳುವೆನು. ಸಾಹುಕಾರನಿಂದ ನಿರ್ಧನನಾದ ಬ್ರಾಹ್ಮಣನು ಅವನ ಮನೆಯ ಮುಂದೆ ಮುಖಮುಚ್ಚಿಕೊಂಡು ಉಪವಾಸಿಯಾಗಿರುವಂತೆಯೇ ನಾನೂ ಕೂಡ ಉಪವಾಸವಿದ್ದು, ಮುಖಕ್ಕೆ ಬಟ್ಟೆ ಹಾಕಿಕೊಂಡು ಈ ಕುಟೀರದ ಮುಂದೆ ಮಲಗಿಬಿಡುವೆನು. ನನ್ನ ಮಾತನ್ನು ಮನ್ನಿಸಿ ಶ್ರೀರಾಮನು ಅಯೋಧ್ಯೆಗೆ ಮರಳುವ ತನಕ ನಾನು ಹೀಗೆಯೇ ಮಲಗಿಕೊಂಡಿರುವೆನು.॥13-14॥
ಮೂಲಮ್ - 15
ಸ ತು ರಾಮಮವೇಕ್ಷ್ಯಂತಂ ಸುಮಂತ್ರಂ ಪ್ರೇಕ್ಷ್ಯ ದುರ್ಮನಾಃ ।
ಕುಶೋತ್ತರಮುಪಸ್ಥಾಪ್ಯ ಭೂಮಾವೇವಾಸ್ಥಿತಃ ಸ್ವಯಮ್ ॥
ಅನುವಾದ
ಇದನ್ನು ಕೇಳಿ ಸುಮಂತ್ರನು ಶ್ರೀರಾಮಚಂದ್ರನ ಮುಖವನ್ನೇ ನೋಡತೊಡಗಿದನು. ಅವನನ್ನು ಈ ಅವಸ್ಥೆಯಲ್ಲಿ ನೋಡಿ ಭರತನ ಮನಸ್ಸಿನಲ್ಲಿ ಬಹಳ ದುಃಖವಾಗಿ, ಅವನು ಸ್ವತಃ ದರ್ಭೆಗಳನ್ನು ಹಾಸಿ ನೆಲದಲ್ಲಿ ಕುಳಿತುಬಿಟ್ಟನು.॥15॥
ಮೂಲಮ್ - 16
ತಮುವಾಚ ಮಹಾತೇಜಾ ರಾಮೋ ರಾಜರ್ಷಿಸತ್ತಮಃ ।
ಕಿಂ ಮಾಂ ಭರತ ಕುರ್ವಾಣಂ ತಾತ ಪ್ರತ್ಯುಪವೇಕ್ಷ್ಯಸಿ ॥
ಅನುವಾದ
ಆಗ ಮಹಾತೇಜಸ್ವೀ ರಾಜರ್ಷಿ ಶಿರೋಮಣಿ ಶ್ರೀರಾಮನು ಅವನಲ್ಲಿ ಹೇಳಿದನು - ಅಯ್ಯಾ ಭರತ! ನನ್ನ ಮುಂದೆ ನೀನು ಧರಣಿ ಕುಳಿತಿರುವೆಯಲ್ಲ? ನಾನು ನಿನಗೆ ಏನು ಕೆಡುಕನ್ನು ಮಾಡಿರುವೆನು.॥16॥
ಮೂಲಮ್ - 17
ಬ್ರಾಹ್ಮಣೋ ಹ್ಯೇಕಪಾರ್ಶ್ವೇನನರಾನ್ ರೋದ್ಧುಮಿಹಾರ್ಹತಿ ।
ನ ತು ಮೂರ್ಧಾಭಿಷಿಕ್ತಾನಾಂ ವಿಧಿಃ ಪ್ರತ್ಯುಪವೇಶನೇ ॥
ಅನುವಾದ
ಬ್ರಾಹ್ಮಣನು ಒಂದೇ ಮಗ್ಗುಲಲ್ಲಿ ಮಲಗಿ ಸತ್ಯಾಗ್ರಹ ಮಾಡಿ ಮನುಷ್ಯನನ್ನು ಅನ್ಯಾಯದಿಂದ ತಡೆಯಬಲ್ಲನು. ಆದರೆ ರಾಜ್ಯವನ್ನು ಸ್ವೀಕರಿಸುವ ಕ್ಷತ್ರಿಯರಿಗೆ ಈ ಪ್ರಕಾರ ಧರಣಿ ಕುಳಿತುಕೊಳ್ಳುವ ವಿಧಾನವಿಲ್ಲ.॥17॥
ಮೂಲಮ್ - 18
ಉತ್ತಿಷ್ಠ ನರಶರ್ದೂಲ ಹಿತ್ವೈತದ್ದಾರುಣಂ ವ್ರತಮ್ ।
ಪುರವರ್ಯಾಮಿತಃ ಕ್ಷಿಪ್ರಮಯೋಧ್ಯಾಂ ಯಾಹಿ ರಾಘವ ॥
ಅನುವಾದ
ಆದ್ದರಿಂದ ನರಶ್ರೇಷ್ಠ ರಘುನಂದನ! ಈ ಕಠೋರವ್ರತವನ್ನು ತ್ಯಜಿಸಿ ಏಳು ಮತ್ತು ಶೀಘ್ರವಾಗಿ ಇಲ್ಲಿಂದ ಅಯೋಧ್ಯೆಗೆ ಹೋಗು.॥18॥
ಮೂಲಮ್ - 19
ಆಸೀನಸ್ತ್ವೇವ ಭರತಃ ಪೌರಜಾನಪದಂ ಜನಮ್ ।
ಉವಾಚ ಸರ್ವತಃ ಪ್ರೇಕ್ಷ್ಯ ಕಿಮಾರ್ಯಂ ನಾನುಶಾಸಥ ॥
ಅನುವಾದ
ಇದನ್ನು ಕೇಳಿ ಭರತನು ಅಲ್ಲಿ ಕುಳಿತುಕೊಂಡ. ಎಲ್ಲರ ಕಡೆ ನೋಡಿ ನಗರ ಮತ್ತು ದೇಶದ ಜನರಲ್ಲಿ ‘ನೀವು ಅಣ್ಣನನ್ನು ಏಕೆ ಸಮಜಾಯಿಸುವುದಿಲ್ಲ?’ ಎಂದು ಕೇಳಿದನು.॥19॥
ಮೂಲಮ್ - 20
ತೇ ತದೋಚುರ್ಮಹಾತ್ಮಾನಂ ಪೌರಜಾನಪದಾ ಜನಾಃ ।
ಕಾಕುತ್ಸ್ಥಮಭಿಜಾನೀಮಃ ಸಮ್ಯಗ್ವದತಿ ರಾಘವಃ ॥
ಅನುವಾದ
ಆಗ ದೇಶವಾಸಿಗಳು ಮತ್ತು ನಗರವಾಸಿಗಳು ಮಹಾತ್ಮಾ ಭರತನಲ್ಲಿ ಹೇಳಿದರು-ಕಾಕುತ್ಸ್ಥ ಶ್ರೀರಾಮನಲ್ಲಿ ರಘುಕುಲತಿಲಕ ಭರತ ನೀನೇ ಸರಿಯಾಗಿ ಹೇಳಬಲ್ಲೆ; ಎಂಬುದು ನಾವು ಬಲ್ಲೆವು.॥20॥
ಮೂಲಮ್ - 21
ಏಷೋಽಪಿ ಹಿ ಮಹಾಭಾಗಃ ಪಿತುರ್ವಚಸಿ ತಿಷ್ಠತಿ ।
ಅತ ಏವ ನ ಶಕ್ತಾಃ ಸ್ಮೋ ವ್ಯಾವರ್ತಯಿತುಮಂಜಸಾ ॥
ಅನುವಾದ
ಆದರೆ ಈ ಮಹಾಭಾಗ ಶ್ರೀರಾಮಚಂದ್ರನು ತಂದೆಯ ಆಜ್ಞೆಯ ಪಾಲನೆಯಲ್ಲಿ ತೊಡಗಿರುವನು. ಅದಕ್ಕಾಗಿ ಅವನು ಮಾಡುವುದು ಸರಿಯಾಗಿಯೇ ಇದೆ. ಆದ್ದರಿಂದ ನಾವು ಇವನನ್ನು ಅದರಿಂದ ಹಿಮ್ಮೆಟ್ಟಿಸಲಾರೆವು.॥21॥
ಮೂಲಮ್ - 22
ತೇಷಾಮಾಜ್ಞಾಯ ವಚನಂ ರಾಮೋ ವಚನಮಬ್ರವೀತ್ ।
ಏವಂ ನಿಬೋಧ ವಚನಂ ಸುಹೃದಾಂ ಧರ್ಮಚಕ್ಷುಷಾಮ್ ॥
ಅನುವಾದ
ಆ ಪುರವಾಸಿಗಳ ಮಾತಿನ ತಾತ್ಪರ್ಯ ತಿಳಿದುಕೊಂಡ ಶ್ರೀರಾಮನು ಭರತನಲ್ಲಿ ಹೇಳಿದನು - ಭರತನೇ! ಧರ್ಮದಲ್ಲಿ ದೃಷ್ಟಿ ಇರಿಸುವ ಸುಹೃದರ ಈ ಮಾತನ್ನು ಕೇಳು ಮತ್ತು ತಿಳಿ.॥22॥
ಮೂಲಮ್ - 23
ಏತಚ್ಚೈವೋಭಯಂ ಶ್ರುತ್ವಾ ಸಮ್ಯಕ್ ಸಂಪಶ್ಯ ರಾಘವ ।
ಉತ್ತಿಷ್ಠ ತ್ವಂ ಮಹಾಬಾಹೋ ಮಾಂ ಚ ಸ್ಪೃಶ ತಥೋದಕಮ್ ॥
ಅನುವಾದ
ರಘುನಂದನ! ನನ್ನ ಮತ್ತು ಇವರ ಮಾತುಗಳನ್ನು ಕೇಳಿ ಅದರ ಕುರಿತು ಚೆನ್ನಾಗಿ ವಿಚಾರಮಾಡು. ಮಹಾಬಾಹೋ! ಈಗ ಬೇಗನೇ ಏಳು ಹಾಗೂ ನನ್ನನ್ನು ಮತ್ತು ನೀರನ್ನು ಸ್ಪರ್ಶಿಸು.॥23॥
ಮೂಲಮ್ - 24
ಅಥೋತ್ಥಾಯ ಜಲಂ ಸ್ಪೃಷ್ಟ್ವಾ ಭರತೋವಾಕ್ಯಮಬ್ರವೀತ್ ।
ಶೃಣ್ವಂತು ಮೇ ಪರಿಷದೋ ಮಂತ್ರಿಣಃ ಸೃಣುಯುಸ್ತಥಾ ॥
ಮೂಲಮ್ - 25
ನ ಯಾಚೇ ಪಿತರಂ ರಾಜ್ಯಂ ನಾನುಶಾಸಾಮಿ ಮಾತರಮ್ ।
ಏವಂ ಪರಮಧರ್ಮಜ್ಞಂ ನಾನುಜಾನಾಮಿ ರಾಘವಮ್ ॥
ಅನುವಾದ
ಇದನ್ನು ಕೇಳಿ ಭರತನು ಎದ್ದು ನಿಂತನು ಮತ್ತು ಶ್ರೀರಾಮನನ್ನು ಹಾಗೂ ಜಲವನ್ನು ಸ್ಪರ್ಶಿಸಿ ಹೇಳಿದನು - ನನ್ನ ಸಭಾಸದರೇ, ಮಂತ್ರಿಗಳೇ, ಎಲ್ಲರೂ ಕೇಳಿ - ನಾನು ತಂದೆಯವರಲ್ಲಿ ರಾಜ್ಯವನ್ನು ಕೇಳಿರಲಿಲ್ಲ, ತಾಯಿಯಲ್ಲಿಯೂ ಎಂದೂ ಇದರ ಕುರಿತು ಹೇಳಿರಲಿಲ್ಲ. ಜೊತೆಗೆ ಪರಮ ಧರ್ಮಜ್ಞ ಶ್ರೀರಾಮಚಂದ್ರನ ವನವಾಸದಲ್ಲಿಯೂ ನನ್ನ ಯಾವುದೇ ಸಮ್ಮತಿ ಇರಲಿಲ್ಲ.॥24-25॥
ಮೂಲಮ್ - 26
ಯದಿ ತ್ವವಶ್ಯಂವಸ್ತವ್ಯಂ ಕರ್ತವ್ಯಂ ಚ ಪಿತುರ್ವಚಃ ।
ಅಹಮೇವ ನಿವತ್ಸ್ಯಾಮಿ ಚತುದರ್ಶ ವನೇ ಸಮಾಃ ॥
ಅನುವಾದ
ಹೀಗಿದ್ದರೂ ಇವರಿಗೆ ಪಿತೃವಾಕ್ಯ ಪರಿಪಾಲನೆಯು ಹಾಗೂ ವನವಾಸವು ಅನಿವಾರ್ಯವಾಗಿದ್ದರೆ, ಇವರ ಬದಲಿಗೆ ನಾನೂ ಹದಿನಾಲ್ಕು ವರ್ಷಗಳವರೆಗೆ ವನದಲ್ಲೇ ವಾಸಿಸುವೆನು.॥26॥
ಮೂಲಮ್ - 27
ಧರ್ಮಾತ್ಮಾ ತಸ್ಯ ಸತ್ಯೇನ ಭ್ರಾತುರ್ವಾಕ್ಯೇನ ವಿಸ್ಮಿತಃ ।
ಉವಾಚ ರಾಮಃ ಸಂಪ್ರೇಕ್ಷ್ಯ ಪೌರಜಾನಪದಂ ಜನಮ್ ॥
ಅನುವಾದ
ತಮ್ಮನಾದ ಭರತನ ಈ ಸತ್ಯಮಾತಿನಿಂದ ಧರ್ಮಾತ್ಮಾ ಶ್ರೀರಾಮನಿಗೆ ಬಹಳ ವಿಸ್ಮಯವಾಯಿತು. ಅವನು ರಾಜ್ಯನಿವಾಸಿ ಹಾಗೂ ಪುರವಾಸಿ ಜನರ ಕಡೆಗೆ ನೋಡಿ ಹೇಳಿದನು.॥27॥
ಮೂಲಮ್ - 28
ವಿಕ್ರೀತಮಾಹಿತಂ ಕ್ರೀತಂ ಯತ್ಪಿತ್ರಾ ಜೀವಿತಾ ಮಮ ।
ನ ತಲ್ಲೋಪಯಿತುಂ ಶಕ್ಯಂ ಮಯಾ ವಾ ಭರತೇನ ವಾ ॥
ಅನುವಾದ
ತಂದೆಯವರು ಜೀವಂತವಾಗಿರುವಾಗ ಮಾರಿದ ವಸ್ತುವನ್ನು, ಅಥವಾ ಅಡವಿಟ್ಟುದನ್ನು ಇಲ್ಲವೇ ಕೊಂಡು ಕೊಡುದರಲ್ಲಿ ನಾನಾಗಲೀ, ಭರತನಾಗಲೀ ಹೆಚ್ಚು ಕಡಿಮೆ ಮಾಡಲಾಗುವುದಿಲ್ಲ.॥28॥
ಮೂಲಮ್ - 29
ಉಪಾಧಿರ್ನ ಮಯಾ ಕಾರ್ಯೋ ವನವಾಸೇಜುಗುಪ್ಸಿತಃ ।
ಯುಕ್ತಮುಕ್ತಂ ಚ ಕೈಕೇಯ್ಯಾ ಪಿತ್ರಾ ಮೇ ಸುಕೃತಂ ಕೃತಮ್ ॥
ಅನುವಾದ
ನನ್ನ ವನವಾಸಕ್ಕಾಗಿ ಯಾರನ್ನು ಪ್ರತಿನಿಧಿಯಾಗಿಸಲು ಆಗುವುದಿಲ್ಲ; ಏಕೆಂದರೆ ಸಮರ್ಥನಾಗಿರುವಾಗ ಪ್ರತಿನಿಧಿಯನ್ನು ನೇಮಿಸುವುದು ಲೋಕದಲ್ಲಿ ನಿಂದಿತವಾಗಿದೆ. ಕೈಕೇಯಿಯು ಉಚಿತವಾದುದನ್ನೇ ಬೇಡಿದ್ದಳು ಮತ್ತು ನನ್ನ ತಂದೆಯವರು ಅದನ್ನು ಕೊಟ್ಟು ಪುಣ್ಯಕರ್ಮವನ್ನೇ ಮಾಡಿದ್ದರು.॥29॥
ಮೂಲಮ್ - 30
ಜಾನಾಮಿ ಭರತಂಕ್ಷಾಂತಂ ಗುರುಸತ್ಕಾರಕಾರಿಣಮ್ ।
ಸರ್ವಮೇವಾತ್ರ ಕಲ್ಯಾಣಂ ಸತ್ಯಸಂಧೇ ಮಹಾತ್ಮನಿ ॥
ಅನುವಾದ
ಭರತನು ಬಹಳ ಕ್ಷಮಾಶೀಲ ಮತ್ತು ಗುರು-ಹಿರಿಯರನ್ನು ಸತ್ಕರಿಸುವವನಾಗಿದ್ದಾನೆ, ಈ ಸತ್ಯ ಪ್ರತಿಜ್ಞ ಮಹಾತ್ಮನಲ್ಲಿ ಎಲ್ಲ ಕಲ್ಯಾಣಕಾರಿ ಗುಣಗಳು ಇರುವುದನ್ನು ನಾನು ತಿಳಿದಿದ್ದೇನೆ.॥30॥
ಮೂಲಮ್ - 31
ಅನೇನ ಧರ್ಮಶೀಲೇನ ವನಾತ್ ಪ್ರತ್ಯಾಗತಃ ಪುನಃ ।
ಭ್ರಾತ್ರಾ ಸಹ ಭವಿಷ್ಯಾಮಿ ಪೃಥಿವ್ಯಾಃ ಪತಿರುತ್ತಮಃ ॥
ಅನುವಾದ
ಹದಿನಾಲ್ಕು ವರ್ಷಗಳ ಅವಧಿ ಪೂರ್ಣಗೊಳಿಸಿ ನಾನು ಕಾಡಿನಿಂದ ಮರಳಿ ಬಂದಾಗ, ನನ್ನ ಧರ್ಮಶೀಲ ತಮ್ಮನೊಡನೆ ಈ ಭೂಮಂಡಲದ ಶ್ರೇಷ್ಠರಾಜನಾಗುವೆನು.॥31॥
ಮೂಲಮ್ - 32
ವೃತೋ ರಾಜಾ ಹಿ ಕೈಕೇಯ್ಯಾ ಮಯಾತದ್ವಚನಂ ಕೃತಮ್ ।
ಅನೃತಾನ್ಮೋಚಯಾನೇನ ಪಿತರಂ ತಂಮಹೀಪತಿಮ್ ॥
ಅನುವಾದ
ಕೈಕೇಯಿಯು ಮಹಾರಾಜರಲ್ಲಿ ವರ ಕೇಳಿದರು ಮತ್ತು ನಾನು ಅದನ್ನು ಪಾಲಿಸಲು ಸ್ವೀಕರಿಸಿದೆ, ಆದ್ದರಿಂದ ಭರತನೇ! ಈಗ ನೀನು ನನ್ನ ಮಾತನ್ನು ಮನ್ನಿಸಿ ಆ ವರದ ಪಾಲನೆಯಿಂದ ನಮ್ಮ ತಂದೆಯವರನ್ನು ಅಸತ್ಯದ ಬಂಧನದಿಂದ ಮುಕ್ತಗೊಳಿಸು.॥32॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹನ್ನೊಂದನೆಯ ಸರ್ಗ ಪೂರ್ಣವಾಯಿತು ॥111॥