वाचनम्
ಭಾಗಸೂಚನಾ
ವಸಿಷ್ಠರು ಸೃಷ್ಟಿಯ ಕ್ರಮವನ್ನು ಇಕ್ಷ್ವಾಕುವಂಶದ ಪರಂಪರೆಯನ್ನು ತಿಳಿಸಿ ಜ್ಯೇಷ್ಠನೇ ರಾಜನಾಗಬೇಕೆಂಬುದರ ಔಚಿತ್ಯವನ್ನು ಹೇಳಿ ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನಿಗೆ ಸಲಹೆ ನೀಡಿದುದು
ಮೂಲಮ್ - 1
ಕ್ರುದ್ಧಮಾಜ್ಞಾಯ ರಾಮಂ ತು ವಸಿಷ್ಠಃ ಪ್ರತ್ಯುವಾಚ ಹ ।
ಜಾಬಾಲಿರಪಿ ಜಾನೀತೇ ಲೋಕಸ್ಯಾಸ್ಯ ಗತಾಗತಿಮ್ ॥
ಅನುವಾದ
ಶ್ರೀರಾಮಚಂದ್ರನು ಕ್ರುದ್ಧನಾದುದನ್ನು ತಿಳಿದು ಮಹರ್ಷಿ ವಸಿಷ್ಠರು ಅವನಲ್ಲಿ ಹೇಳಿದರು - ರಘುನಂದನ! ಈ ಲೋಕದ ಜನರು ಪರಲೋಕಕ್ಕೆ ಹೋಗುವುದು ಮತ್ತು ಬರುವುದು ಇದು ಮಹರ್ಷಿ ಜಾಬಾಲಿಗಳೂ ತಿಳಿದಿದ್ದಾರೆ. (ಆದ್ದರಿಂದ ಇವರು ನಾಸ್ತಿಕರಲ್ಲ).॥1॥
ಮೂಲಮ್ - 2
ನಿವರ್ತಯಿತುಕಾಮಸ್ತು ತ್ವಾಮೇತದ್ ವಾಕ್ಯಮಬ್ರವೀತ್ ।
ಇಮಾಂ ಲೋಕಸಮುತ್ಪತ್ತಿಂ ಲೋಕನಾಥ ನಿಬೋಧ ಮೇ ॥
ಅನುವಾದ
ಜಗದೀಶ್ವರ! ಈಗ ನಿನ್ನನ್ನು ಮರಳಿ ಕರೆದುಕೊಂಡು ಹೋಗುವ ಇಚ್ಛೆಯಿಂದಲೇ ಇವರು ಈ ನಾಸ್ತಿಕ ಮಾತು ಗಳನ್ನು ಆಡಿದ್ದರು. ನೀನು ನನ್ನಿಂದ ಈ ಲೋಕದ ಉತ್ಪತ್ತಿಯ ವೃತ್ತಾಂತವನ್ನು ಕೇಳು.॥2॥
ಮೂಲಮ್ - 3
ಸರ್ವಂ ಸಲಿಲಮೇವಾಸೀತ್ ಪೃಥಿವೀ ತತ್ರ ನಿರ್ಮಿತಾ ।
ತತಃ ಸಮಭವದ್ ಬ್ರಹ್ಮಾಸ್ವಯಂಭೂರ್ದೈವತೈಃ ಸಹ ॥
ಅನುವಾದ
ಸೃಷ್ಟಿಯ ಪ್ರಾರಂಭದಲ್ಲಿ ಎಲ್ಲವೂ ಜಲಮಯವಾಗಿತ್ತು. ಆ ಜಲದೊಳಗೇ ಪೃಥಿವಿಯ ನಿರ್ಮಾಣವಾಯಿತು. ಅನಂತರ ದೇವತೆಗಳೊಂದಿಗೆ ಸ್ವಯಂಭೂ ಬ್ರಹ್ಮದೇವರು ಪ್ರಕಟಗೊಂಡರು.॥3॥
ಮೂಲಮ್ - 4
ಸ ವರಾಹಸ್ತತೋ ಭೂತ್ವಾ ಪ್ರೋಜ್ಜಹಾರ ವಸುಂಧರಾಮ್ ।
ಅಸೃಜಚ್ಚ ಜಗತ್ಸರ್ವಂ ಸಹ ಪುತ್ರೈಃ ಕೃತಾತ್ಮಭಿಃ ॥
ಅನುವಾದ
ಅನಂತರ ಆ ಭಗವಾನ್ ವಿಷ್ಣುಸ್ವರೂಪ ಬ್ರಹ್ಮನೇ ವರಾಹರೂಪದಿಂದ ಪ್ರಕಟನಾಗಿ ಜಲದಲ್ಲಿ ಮುಳುಗಿದ ಈ ಪೃಥಿವಿಯನ್ನು ಹೊರತೆಗೆದು, ತನ್ನ ಕೃತಾತ್ಮಾ ಪುತ್ರರೊಂದಿಗೆ ಈ ಸಮಸ್ತ ಜಗತ್ತನ್ನು ಸೃಷ್ಟಿಸಿದನು.॥4॥
ಮೂಲಮ್ - 5
ಆಕಾಶಪ್ರಭವೋ ಬ್ರಹ್ಮಾ ಶಾಶ್ವತೋ ನಿತ್ಯ ಅವ್ಯಯಃ ।
ತಸ್ಮಾನ್ಮರೀಚಿಃ ಸಂಜಜ್ಞೇ ಮರೀಚೇಃ ಕಶ್ಯಪಃ ಸುತಃ ॥
ಅನುವಾದ
ಆಕಾಶಸ್ವರೂಪ ಪರಬ್ರಹ್ಮ ಪರಮಾತ್ಮನಿಂದ ಬ್ರಹ್ಮದೇವರ ಪ್ರಾದುರ್ಭಾವವಾಯಿತು. ಅವನು ನಿತ್ಯ, ಸನಾತನ, ಅವಿನಾಶಿಯಾಗಿದ್ದಾನೆ. ಅವರಿಂದ ಮರೀಚಿ ಉತ್ಪನ್ನರಾದರು ಮತ್ತು ಮರಿಚಿಯ ಪುತ್ರ ಕಶ್ಯಪನಾದನು.॥5॥
ಮೂಲಮ್ - 6
ವಿವಸ್ವಾನ್ ಕಶ್ಯಪಾಜ್ಜಜ್ಞೇಮನುರ್ವೈವಸ್ವತಃ ಸ್ವಯಮ್ ।
ಸ ತು ಪ್ರಜಾಪತಿಃ ಪೂರ್ವಮಿಕ್ಷ್ವಾಕುಸ್ತು ಮನೋಃಸುತಃ ॥
ಅನುವಾದ
ಕಶ್ಯಪನಿಂದ ವಿವಸ್ವಾನನ ಜನ್ಮವಾಯಿತು. ವಿವಸ್ವಂತನ ಪುತ್ರ ಸಾಕ್ಷಾತ್ ವೈವಸ್ವತ ಮನು ಆದನು. ಅವನು ಮೊದಲ ಪ್ರಜಾಪತಿಯಾಗಿದ್ದನು. ಮನುವಿನ ಪುತ್ರ ಇಕ್ಷ್ವಾಕು ಆದನು.॥6॥
ಮೂಲಮ್ - 7
ಯಸ್ಯೇಯಂ ಪ್ರಥಮಂ ದತ್ತಾ ಸಮೃದ್ಧಾ ಮನುನಾ ಮಹೀ ।
ತಮಿಕ್ಷ್ವಾಕುಮಯೋಧ್ಯಾಯಾಂ ರಾಜಾನಂ ವಿದ್ಧಿ ಪೂರ್ವಕಮ್ ॥
ಅನುವಾದ
ಇವನಿಗೆ ಮನುವು ಮೊಟ್ಟಮೊದಲಿಗೆ ಈ ಪೃಥಿವಿಯ ಸಮೃದ್ಧಶಾಲಿ ರಾಜ್ಯವನ್ನು ಒಪ್ಪಿಸಿದ್ದನು. ಆ ಇಕ್ಷ್ವಾಕು ರಾಜನನ್ನು ನೀನು ಅಯೋಧ್ಯೆಯ ಪ್ರಥಮ ರಾಜನೆಂದು ತಿಳಿ.॥7॥
ಮೂಲಮ್ - 8
ಇಕ್ಷ್ವಾಕೋಸ್ತು ಸುತಃ ಶ್ರೀಮಾನ್ ಕುಕ್ಷಿರಿತ್ಯೇವವಿಶ್ರುತಃ ।
ಕುಕ್ಷೇರಥಾತ್ಮಜೋ ವೀರೋ ವಿಕುಕ್ಷಿರುದಪದ್ಯತ ॥
ಅನುವಾದ
ಇಕ್ಷ್ವಾಕುವಿನ ಪುತ್ರ ಶ್ರೀಮಾನ್ ಕುಕ್ಷಿ ಎಂಬ ಹೆಸರಿನಿಂದ ವಿಖ್ಯಾತನಾದನು. ಕುಕ್ಷಿಗೆ ವೀರಪುತ್ರ ವಿಕುಕ್ಷಿಯಾದನು.॥8॥
ಮೂಲಮ್ - 9
ವಿಕುಕ್ಷೇಸ್ತು ಮಹಾತೇಜಾ ಬಾಣಃ ಪುತ್ರಃ ಪ್ರತಾಪವಾನ್ ।
ಬಾಣಸ್ಯ ತು ಮಹಾಬಾಹುರನರಣ್ಯೋ ಮಹಾತಪಾಃ ॥
ಅನುವಾದ
ವಿಕುಕ್ಷಿಯ ಮಹಾತೇಜಸ್ವೀ ಪ್ರತಾಪಿ ಪುತ್ರ ಬಾಣ, ಬಾಣನ ಪುತ್ರ ಮಹಾಬಾಹು ಅನರಣ್ಯನಾದನು. ಅವನು ದೊಡ್ಡ ತಪಸ್ವಿಯಾಗಿದ್ದನು.॥9॥
ಮೂಲಮ್ - 10
ನಾನಾವೃಷ್ಟಿರ್ಬಭೂವಾಸ್ಮಿನ್ ನ ದುರ್ಭಿಕ್ಷಃ ಸತಾಂ ವರೇ ।
ಅನರಣ್ಯೇ ಮಹಾರಾಜೇ ತಸ್ಕರೋ ವಾಪಿ ಕಶ್ಚನ ॥
ಅನುವಾದ
ಸತ್ಪುರುಷರಲ್ಲಿ ಶ್ರೇಷ್ಠನಾದ ಅನರಣ್ಯನ ರಾಜ್ಯದಲ್ಲಿ ಎಂದೂ ಅನಾವೃಷ್ಟಿ ಆಗಲಿಲ್ಲ, ಕ್ಷಾಮ ಉಂಟಾಗಲಿಲ್ಲ ಮತ್ತು ಯಾವುದೇ ಕಳ್ಳತನವೂ ಆಗಿರಲಿಲ್ಲ.॥10॥
ಮೂಲಮ್ - 11
ಅನರಣ್ಯಾನ್ಮಹಾರಾಜ ಪೃಥೂ ರಾಜಾ ಬಭೂವ ಹ ।
ತಸ್ಮಾತ್ ಪೃಥೋರ್ಮಹಾತೇಜಾಸ್ತ್ರಿಶಂಕುರುದಪದ್ಯತ ॥
ಅನುವಾದ
ಮಹಾರಾಜ! ಅನರಣ್ಯನಿಂದ ರಾಜಾ ಪೃಥು ಆದನು. ಆ ಪೃಥುವಿನಿಂದ ಮಹಾತೇಜಸ್ವಿ ತ್ರಿಶಂಕು ಹುಟ್ಟಿದನು.॥11॥
ಮೂಲಮ್ - 12
ಸ ಸತ್ಯವಚನಾದ್ವೀರಃ ಸಶರೀರೋ ದಿವಂ ಗತಃ ।
ತ್ರಿಶಂಕೋರಭವತ್ಸೂನುರ್ಧುಂಧುಮಾರೋ ಮಹಾಯಶಾಃ ॥
ಅನುವಾದ
ಆ ವೀರ ತ್ರಿಶಂಕು ವಿಶ್ವಾಮಿತ್ರರ ಸತ್ಯವಚನದ ಪ್ರಭಾವದಿಂದ ಸದೇಹ ಸ್ವರ್ಗಲೋಕಕ್ಕೆ ಹೊರಟುಹೋಗಿದ್ದನು. ತ್ರಿಶಂಕುವಿನಿಂದ ಮಹಾಯಶಸ್ವೀ ಧುಂಧುಮಾರ ಹುಟ್ಟಿದನು.॥12॥
ಮೂಲಮ್ - 13
ಧುಂಧುಮಾರಾನ್ಮಹಾತೇಜಾ ಯುವನಾಶ್ವೋ ವ್ಯಜಾಯತ ।
ಯುವನಾಶ್ವಾಸತಃ ಶ್ರೀಮಾನ್ ಮಾಂಧಾತಾ ಸಮಪದ್ಯತ ॥
ಅನುವಾದ
ಧುಂಧುಮಾರನಿಂದ ಮಹಾತೇಜಸ್ವೀ ಯುವನಾಶ್ವನ ಜನ್ಮವಾಯಿತು. ಯುವನಾಶ್ವನ ಪುತ್ರ ಶ್ರೀಮಾನ್ ಮಾಂಧಾತಾ ಆದನು.॥13॥
ಮೂಲಮ್ - 14
ಮಾಂಧಾತುಸ್ತು ಮಹಾತೇಜಾಃ ಸುಸಂಧಿರುದಪದ್ಯತ ।
ಸುಸಂಧೇರಪಿ ಪುತ್ರೌ ದ್ವೌ ಧ್ರುವಸಂಧಿಃ ಪ್ರಸೇನಜಿತ್ ॥
ಅನುವಾದ
ಮಾಂಧಾತನಿಗೆ ಮಹಾನ್ ತೇಜಸ್ವೀ ಪುತ್ರ ಸುಸಂಧಿ ಆದನು. ಸುಸಂಧನಿಗೆ ಧ್ರುವಸಂಧಿ ಮತ್ತು ಪ್ರಸೇನಜಿತ್ ಎಂಬ ಇಬ್ಬರು ಮಕ್ಕಳಿದ್ದರು.॥14॥
ಮೂಲಮ್ - 15
ಯಶಸ್ವೀ ಧ್ರುವಸಂಧೇಸ್ತು ಭರತೋ ರಿಪುಸೂದನಃ ।
ಭರತಾತ್ತು ಮಹಾಬಾಹೋರಸಿತೋ ನಾಮ ಜಾಯತ ॥
ಅನುವಾದ
ಧ್ರುವಸಂಧಿಯ ಯಶಸ್ವೀ ಪುತ್ರ ಶತ್ರುಸೂದನ ಭರತನಾಗಿದ್ದನು. ಮಹಾಬಾಹು ಭರತನಿಂದ ಅಸಿತ ಎಂಬ ಪುತ್ರನು ಜನಿಸಿದನು.॥15॥
ಮೂಲಮ್ - 16
ಯಸ್ಯೈತೇ ಪ್ರತಿರಾಜಾನ ಉದಪದ್ಯಂತ ಶತ್ರವಃ ।
ಹೈಹಯಾಸ್ತಾಲಜಂಗಾಶ್ಚ ಶೂರಾಶ್ಚ ಶಶಬಿಂದವಃ ॥
ಅನುವಾದ
ಅವನಿಗೆ ಶತ್ರುಗಳಾದ ಪ್ರತಿಪಕ್ಷಿ ಹೈಹಯ, ತಾಲಜಂಘ ಮತ್ತು ಶೂರ ಶಶಬಿಂದು ಉತ್ಪನ್ನರಾಗಿದ್ದರು.॥16॥
ಮೂಲಮ್ - 17
ತಾಂಸ್ತು ಸರ್ವಾನ್ ಪ್ರತಿವ್ಯೆಹ್ಯ ಯುದ್ಧೇ ರಾಜಾ ಪ್ರವಾಸಿತಃ ।
ಸ ಚ ಶೈಲವರೇ ರಮ್ಯೇ ಬಭೂವಾಭಿರತೋ ಮುನಿಃ ॥
ಅನುವಾದ
ಅವರೆಲ್ಲರನ್ನು ಎದುರಿಸಲು ಸೈನ್ಯದ ವ್ಯೂಹವನ್ನು ರಚಿಸಿ ಯುದ್ಧಕ್ಕೆ ಸಿದ್ಧನಾದನು, ಆದರೂ ಶತ್ರುಗಳ ಸಂಖ್ಯೆ ಹೆಚ್ಚಿದ್ದರಿಂದ ರಾಜಾ ಅಸಿತನು ಸೋತು ಪರದೇಶವನ್ನು ಆಶ್ರಯಿಸಿದನು. ಅವನು ರಮಣೀಯ ಪರ್ವತ ಶಿಖರದಲ್ಲಿ ಆನಂದದಿಂದ ಇದ್ದು ಮುನಿಭಾವದಿಂದ ಪರಮಾತ್ಮನ ಮನನ-ಚಿಂತನೆಯಲ್ಲಿ ತೊಡಗಿದನು.॥17॥
ಮೂಲಮ್ - 18
ದ್ವೇ ಚಾಸ್ಯ ಭಾರ್ಯೇ ಗರ್ಭಿಣ್ಯೌ ಬಭೂವತುರಿತಿ ಶ್ರುತಿಃ ।
ತತ್ರ ಚೈಕಾ ಮಹಾಭಾಗಾ ಭಾರ್ಗವಂ ದೇವವರ್ಚಸಮ್ ॥
ಮೂಲಮ್ - 19
ವವಂದೇ ಪದ್ಮಪತ್ರಾಕ್ಷೀ ಕಾಂಕ್ಷಿಣೀ ಪುತ್ರಮುತ್ತಮಮ್ ।
ಏಕಾ ಗರ್ಭವಿನಾಶಾಯ ಸಪತ್ನೈ ಗರಲಂ ದದೌ ॥
ಅನುವಾದ
ಅಸಿತನ ಇಬ್ಬರು ಪತ್ನಿಯರು ಗರ್ಭವತಿಯಾಗಿದ್ದರು. ಅವರಲ್ಲಿ ಒಬ್ಬಳು ಮಹಾಭಾಗಾ ಕಮಲಲೋಚನೆ ರಾಜಪತ್ನಿಯು ಉತ್ತಮ ಪುತ್ರನನ್ನು ಪಡೆಯುವ ಇಚ್ಛೆಯಿಂದ ದೇವತುಲ್ಯ ತೇಜಸ್ವೀ ಭೃಗುವಂಶೀ ಚ್ಯವನಮುನಿಯ ಚರಣಗಳಲ್ಲಿ ವಂದಿಸಿಕೊಂಡಳು ಹಾಗೂ ಇನ್ನೋರ್ವ ರಾಣಿಯು ತನ್ನ ಸವತಿಯ ಗರ್ಭವನ್ನು ನಾಶಮಾಡಲು ಆಕೆಗೆ ವಿಷವುಣಿಸಿದಳು.॥18-19॥
ಮೂಲಮ್ - 20
ಭಾರ್ಗವಶ್ಚ್ಯವನೋನಾಮ ಹಿಮವಂತಮುಪಾಶ್ರಿತಃ ।
ತಮೃಷಿಂ ಸಾಭ್ಯುಪಾಗಮ್ಯ ಕಾಲಿಂದೀ ತ್ವಭ್ಯವಾದಯತ್ ॥
ಅನುವಾದ
ಆ ದಿನಗಳಲ್ಲಿ ಭೃಗುವಂಶೀ ಚ್ಯವನರು ಹಿಮಾಲಯದಲ್ಲಿ ಇರುತ್ತಿದ್ದರು. ಅಸಿತರಾಜನ ಕಾಲಿಂದಿ ಎಂಬ ಪತ್ನಿಯು ಋಷಿಗಳ ಬಳಿಗೆ ಹೋಗಿ ಚರಣಗಳಿಗೆ ಪ್ರಣಾಮ ಮಾಡಿದಳು.॥20॥
ಮೂಲಮ್ - 21½
ಸ ತಾಮಭ್ಯವದತ್ ಪ್ರೀತೋ ವರೇಪ್ಸುಂ ಪುತ್ರಜನ್ಮನಿ ।
ಪುತ್ರಸ್ತೇ ಭವಿತಾ ದೇವಿ ಮಹಾತ್ಮಾ ಲೋಕವಿಶ್ರುತಃ ॥
ಧಾರ್ಮಿಕಶ್ಚ ಸುಭೀಮಶ್ಚ ವಂಶಕರ್ತಾರಿಸೂದನಃ ।
ಅನುವಾದ
ಮುನಿಯು ಪ್ರಸನ್ನರಾಗಿ ಪುತ್ರನ ಉತ್ಪತ್ತಿಗಾಗಿ ವರವನ್ನು ಬಯಸುವ ರಾಣಿಯಲ್ಲಿ ಹೀಗೆ ಹೇಳಿದರು-ದೇವಿ! ನಿನಗೆ ಒಬ್ಬ ಮಹಾ ಮನಸ್ವೀ ಲೋಕವಿಖ್ಯಾತ ಪುತ್ರನಾಗುವನು. ಅವನು ಧರ್ಮಾತ್ಮ, ಶತ್ರುಗಳಿಗೆ ಅತ್ಯಂತ ಭಯಂಕರ, ತನ್ನ ವಂಶವನ್ನು ನಡೆಸುವವನು ಶತ್ರುಗಳ ಸಂಹಾರಕನಾಗುವನು.॥2½1॥
ಮೂಲಮ್ - 22
ಶ್ರುತ್ವಾ ಪ್ರದಕ್ಷಿಣಂ ಕೃತ್ವಾ ಮುನಿಂತಮನುಮಾನ್ಯ ಚ ॥
ಮೂಲಮ್ - 23
ಪದ್ಮಪತ್ರಸಮಾನಾಕ್ಷಂ ಪದ್ಮಗರ್ಭ ಸಮಪ್ರಭಮ್ ।
ತತಃ ಸ ಗೃಹಮಾಗಮ್ಯ ಪತ್ನೀ ಪುತ್ರಮಜಾಯತ ॥
ಅನುವಾದ
ಇದನ್ನು ಕೇಳಿ ರಾಣಿಯು ಮುನಿಗೆ ಪ್ರದಕ್ಷಿಣೆ ಮಾಡಿ, ಅವರಿಂದ ಬೀಳ್ಕೊಂಡು ತನ್ನ ಮನೆಗೆ ಬಂದಮೇಲೆ ಆ ರಾಣಿಯು ಒಬ್ಬ ಪುತ್ರನಿಗೆ ಜನ್ಮನೀಡಿದಳು. ಅವನ ಕಾಂತಿಯು ಕಮಲಕೋಶದಂತೆ ಸುಂದರವಾಗಿತ್ತು, ಕಣ್ಣುಗಳು ಕಮಲದ ಎಸಳಿನಂತೆ ಮನೋಹರವಾಗಿದ್ದವು.॥22-23॥
ಮೂಲಮ್ - 24
ಸಪತ್ನ್ಯಾ ತು ಗರಸ್ತಸ್ಯೈ ದತ್ತೋ ಗರ್ಭಜಿಘಾಂಸಯಾ ।
ಗರೇಣ ಸಹತೇನೈವ ತಸ್ಮಾತ್ ಸ ಸಗರೋಽಭವತ್ ॥
ಅನುವಾದ
ಸವತಿಯು ಆಕೆಯ ಗರ್ಭವನ್ನು ನಾಶಮಾಡಲು ಉಣಿಸಿದ ಗರ (ವಿಷ) ಸಹಿತವೇ ಆ ಬಾಲಕ ಹುಟ್ಟಿದನು. ಅದಕ್ಕಾಗಿ ಸಗರ ಎಂಬ ಹೆಸರಿನಿಂದ ಪ್ರಸಿದ್ಧನಾದನು.॥24॥
ಮೂಲಮ್ - 25
ಸ ರಾಜಾ ಸಗರೋ ನಾಮ ಯಃ ಸುಮುದ್ರಮಖಾನಯತ್ ।
ಇಷ್ಟ್ವಾ ಪರ್ವಣಿ ವೇಗೇನ ತ್ರಾಸಯಾನ ಇಮಾಃ ಪ್ರಜಾಃ ॥
ಅನುವಾದ
ರಾಜಾಸಗರನು ಪರ್ವದಿನ ಯಜ್ಞದೀಕ್ಷಿತನಾಗಿ ಯಜ್ಞಾಶ್ವವನ್ನು ಹುಡುಕಲಿಕ್ಕಾಗಿ ನೆಲವನ್ನು ಅಗೆದು ಸಮಸ್ತ ಪ್ರಜೆಗಳನ್ನು ಭಯ ಭೀತಗೊಳಿಸಿ ತನ್ನ ಪುತ್ರರಿಂದ ಸಮುದ್ರವನ್ನು ಅಗೆಸಿದ್ದನು.॥25॥
ಮೂಲಮ್ - 26
ಅಸಮಂಜಸ್ತು ಪುತ್ರೋಽಭೂತ್ಸಗರಸ್ಯೇತಿ ನಃ ಶ್ರುತಮ್ ।
ಜೀವನ್ನೇವ ಸ ಪಿತ್ರಾ ತು ನಿರಸ್ತಃ ಪಾಪಕರ್ಮಕೃತ್ ॥
ಅನುವಾದ
ಸಗರನ ಪುತ್ರ ಅಸಮಂಜಸನಾದನು. ಅವನು ಪಾಪಕರ್ಮದಲ್ಲಿ ಪ್ರವೃತ್ತನಾದ ಕಾರಣ ತಂದೆಯು ಅವನನ್ನು ರಾಜ್ಯದಿಂದ ಹೊರಹಾಕಿದನು, ಎಂದು ನಾವು ಕೇಳಿದ್ದೇವೆ.॥26॥
ಮೂಲಮ್ - 27
ಅಂಶುಮಾನಪಿ ಪುತ್ರೋಽಭೂದಸಮಂಜಸ್ಯ ವೀರ್ಯವಾನ್ ।
ದಿಲೀಪೋಽಂಶುಮತಃ ಪುತ್ರೋ ದಿಲೀಪಸ್ಯ ಭಗೀರಥಃ ॥
ಅನುವಾದ
ಅಸಮಂಜಸನ ಪುತ್ರ ಅಂಶುಮಾನ್ ಆದನು, ಅವನು ಬಹಳ ಪರಾಕ್ರಮಿಯಾಗಿದ್ದನು. ಅಂಶುಮಂತನಿಗೆ ದಿಲೀಪ ಹುಟ್ಟಿದನು. ದಿಲೀಪನಿಂದ ಭಗೀರಥನಾದನು.॥27॥
ಮೂಲಮ್ - 28
ಭಗೀರಥಾತ್ ಕಕುತ್ಸ್ಥಶ್ಚ ಕಾಕುತ್ಸ್ಥಾ ಯೇನತು ಸ್ಮೃತಾಃ ।
ಕಕುತ್ಸ್ಥಸ್ಯ ತು ಪುತ್ರೋಽಭೂದ್ರಘುರ್ಯೇನ ತು ರಾಘವಾಃ ॥
ಅನುವಾದ
ಭಗೀರಥನಿಂದ ಕಕುತ್ಸ್ಥನ ಜನ್ಮವಾಯಿತು. ಅವನಿಂದ ಅವನ ವಂಶದವರು ‘ಕಾಕುತ್ಸ್ಥ’ರಾದರು. ಕಕುತ್ಸ್ಥನ ಪುತ್ರ ರಘು ಆದನು. ಅವನಿಂದ ಆ ವಂಶದವರು ‘ರಾಘವ’ರಾದರು.॥28॥
ಮೂಲಮ್ - 29
ರಘೋಸ್ತು ಪುತ್ರಸ್ತೇಜಸ್ವೀ ಪ್ರವೃದ್ಧಃ ಪುರುಷಾದಕಃ ।
ಕಲ್ಮಾಷಪಾದಃ ಸೌದಾಸಇತ್ಯೇವಂ ಪ್ರಥಿತೋ ಭುವಿ ॥
ಅನುವಾದ
ರಘುವಿಗೆ ತೇಜಸ್ವೀ ಪುತ್ರ ಕಲ್ಮಾಷಪಾದನಾದನು. ಅವನು ದೊಡ್ಡವನಾದಾಗ ಶಾಪವಶದಿಂದ ಕೆಲವು ವರ್ಷಗಳವರೆಗೆ ನರಭಕ್ಷಕ ರಾಕ್ಷಸನಾಗಿದ್ದನು. ಅವನು ಈ ಪೃಥಿವಿಯಲ್ಲಿ ಸೌದಾಸ ಎಂಬ ಹೆಸರಿನಿಂದ ವಿಖ್ಯಾತನಾಗಿದ್ದನು.॥29॥
ಮೂಲಮ್ - 30
ಕಲ್ಮಾಷಪಾದಪುತ್ರೋಽಭೂಚ್ಛಂಖಣಸ್ತ್ವಿತಿ ನಃಶ್ರುತಮ್ ।
ಯಸ್ತು ತದ್ವೀರ್ಯಮಾಸಾದ್ಯ ಸಹಸೈನ್ಯೋ ವ್ಯನೀನಶತ್ ॥
ಅನುವಾದ
ಕಲ್ಮಾಷಪಾದನ ಪುತ್ರ ಶಂಖಣನಾದನು. ಅವನು ಯುದ್ಧದಲ್ಲಿ ಸುಪ್ರಸಿದ್ಧ ಪರಾಕ್ರಮ ಪಡೆದಿದ್ದರೂ ಸೈನ್ಯಸಹಿತ ನಾಶವಾಗಿದ್ದನೆಂದು ನಾವು ಕೇಳುತ್ತಾ ಬಂದಿದ್ದೇವೆ.॥30॥
ಮೂಲಮ್ - 31
ಶಂಖಣಸ್ಯ ತು ಪುತ್ರೋಽಭೂಚ್ಛೂರಃ ಶ್ರೀಮಾನ್ಸುದರ್ಶನಃ ।
ಸುದರ್ಶನಸ್ಯಾಗ್ನಿವರ್ಣ ಅಗ್ನಿವರ್ಣಸ್ಯ ಶೀಘ್ರಗಃ ॥
ಅನುವಾದ
ಶಂಖಣನಿಗೆ ಶೂರ-ವೀರ ಪುತ್ರ ಶ್ರೀಮಾನ್ ಸುದರ್ಶನನಾದನು. ಸುದರ್ಶನನ ಪುತ್ರ ಅಗ್ನಿವರ್ಣ ಮತ್ತು ಅಗ್ನಿವರ್ಣನ ಪುತ್ರ ಶೀಘ್ರಗನಾಗಿದ್ದನು.॥31॥
ಮೂಲಮ್ - 32
ಶೀಘ್ರಗಸ್ಯ ಮರುಃ ಪುತ್ರೋ ಮರೋಃ ಪುತ್ರಃ ಪ್ರಶುಶ್ರುವಃ ।
ಪ್ರಶುಶ್ರುವಸ್ಯ್ಯ ಪುತ್ರೋಽಭೂದಂಬರೀಷೋಮಹಾಮತಿಃ ॥
ಅನುವಾದ
ಶೀಘ್ರಗನ ಪುತ್ರ ಮರು, ಮರುವಿನ ಪುತ್ರ ಪ್ರಶುಶ್ರುವ, ಪ್ರಶುಶ್ರುವನ ಪುತ್ರ ಮಹಾಬುದ್ಧಿವಂತ ಅಂಬರೀಷನಾದನು.॥32॥
ಮೂಲಮ್ - 33
ಅಂಬರೀಷಸ್ಯ ಪುತ್ರೋಽಭೂನ್ನಹುಷಃ ಸತ್ಯವಿಕ್ರಮಃ ।
ನಹುಷಸ್ಯ ಚ ನಾಭಾಗಃ ಪುತ್ರಃ ಪರಮಧಾರ್ಮಿಕಃ ॥
ಅನುವಾದ
ಅಂಬರೀಷನ ಪುತ್ರ ಸತ್ಯಪರಾಕ್ರಮಿ ನಹುಷನಿದ್ದನು. ನಹುಷನ ಪುತ್ರ ನಾಭಾಗನಾದನು, ಅವನು ಬಹಳ ಧರ್ಮಾತ್ಮನಾಗಿದ್ದನು.॥33॥
ಮೂಲಮ್ - 34
ಅಜಶ್ಚ ಸುವ್ರತಶ್ಚೈವ ನಾಭಾಗಸ್ಯ ಸುತಾವುಭೌ ।
ಅಜಸ್ಯ ಚೈವ ಧರ್ಮಾತ್ಮಾ ರಾಜಾ ದಶರಥಃ ಸುತಃ ॥
ಅನುವಾದ
ನಾಭಾಗನಿಗೆ ಅಜ ಮತ್ತು ಸುವ್ರತರೆಂಬ ಇಬ್ಬರು ಪುತ್ರರಾದರು. ಅಜನ ಪುತ್ರನೇ ಧರ್ಮಾತ್ಮಾ ದಶರಥನಾಗಿದ್ದನು.॥34॥
ಮೂಲಮ್ - 35
ತಸ್ಯ ಜ್ಯೇಷ್ಠೋಽಸಿ ದಾಯಾದೋ ರಾಮ ಇತ್ಯಭಿವಿಶ್ರುತಃ ।
ತದ್ಗೃಹಣಾ ಸ್ವಕಂ ರಾಜ್ಯಮವೇಕ್ಷಸ್ವ ಜಗನ್ನೃಪ ॥
ಅನುವಾದ
ದಶರಥನ ಜ್ಯೇಷ್ಠಪುತ್ರ ನೀನೇ ಆಗಿರುವೆ. ಶ್ರೀರಾಮ ಎಂಬ ಹೆಸರಿನಿಂದ ಪ್ರಸಿದ್ಧನಾಗಿರುವೆ. ನರೇಶ್ವರ! ಈ ಅಯೋಧ್ಯೆಯ ರಾಜ್ಯ ನಿನ್ನದಾಗಿದೆ, ಇದನ್ನು ಸ್ವೀಕರಿಸು ಹಾಗೂ ಅದನ್ನು ಪಾಲಿಸುತ್ತಾ ಇರು.॥35॥
ಮೂಲಮ್ - 36
ಇಕ್ಷ್ವಾಕೂಣಾಂ ಹಿ ಸರ್ವೇಷಾಂ ರಾಜಾ ಭವತಿಪೂರ್ವಜಃ ।
ಪೂರ್ವಜೇ ನಾವರಃ ಪುತ್ರೋ ಜ್ಯೇಷ್ಠೋ ರಾಜಾಭಿಷಿಚ್ಯತೇ ॥
ಅನುವಾದ
ಸಮಸ್ತ ಇಕ್ಷ್ವಾಕು ವಂಶಿಯರಲ್ಲಿ ಜ್ಯೇಷ್ಠಪುತ್ರರೇ ರಾಜರಾಗುತ್ತಾ ಬಂದಿರುವರು. ಜ್ಯೇಷ್ಠನಿರುವಾಗ ಕನಿಷ್ಠನು ರಾಜನಾಗುತ್ತಿರಲಿಲ್ಲ. ಜ್ಯೇಷ್ಠ ಪುತ್ರನಿಗೆ ರಾಜನಾಗಿ ಪಟ್ಟಾಭಿಷೇಕವಾಗುತ್ತಿತ್ತು.॥36॥
ಮೂಲಮ್ - 37
ಸ ರಾಘವಾಣಾಂ ಕುಲಧರ್ಮಮಾತ್ಮನಃ
ಸನಾತನಂ ನಾದ್ಯವಿಹಂತುಮರ್ಹಸಿ ।
ಪ್ರಭೂತರತ್ನಾಮನುಶಾಧಿ ಮೇದಿನೀಂ
ಪ್ರಭೂತರಾಷ್ಟ್ರಾಂ ಪಿತೃವನ್ಮಹಾಯಶಃ ॥
ಅನುವಾದ
ಮಹಾಯಶಸ್ವೀ ಶ್ರೀರಾಮಾ! ರಘುವಂಶಿಯರ ಸನಾತನ ಕುಲಧರ್ಮವನ್ನು ಇಂದು ನೀನು ನಾಶಮಾಡ ಬೇಡ. ಅನೇಕ ಅವಾಂತರ ದೇಶಗಳುಳ್ಳ, ಹೇರಳ ರತ್ನರಾಶಿಗಳಿಂದ ಸಂಪನ್ನ ಈ ವಸುಧೆಯನ್ನು ತಂದೆಯಂತೆ ಪಾಲಿಸು.॥37॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹತ್ತನೆಯ ಸರ್ಗ ಪೂರ್ಣವಾಯಿತು ॥110॥