१०९ जाबालिमतनिराकरणम्

वाचनम्
ಭಾಗಸೂಚನಾ

ಶ್ರೀರಾಮನು ಜಾಬಾಲಿಯ ನಾಸ್ತಿಕವಾದವನ್ನು ಖಂಡಿಸಿ ಆಸ್ತಿಕ ಮತದ ಸ್ಥಾಪನೆ

ಮೂಲಮ್ - 1

ಜಾಬಾಲೇಸ್ತು ವಚಃ ಶ್ರುತ್ವಾ ರಾಮಃ ಸತ್ಯಪರಾಕ್ರಮಃ ।
ಉವಾಚ ಪರಯಾ ಸೂಕ್ತ್ಯಾ ಬುದ್ಧ್ಯಾ ವಿಪ್ರತಿಪನ್ನಯಾ ॥

ಅನುವಾದ

ಜಾಬಾಲಿಯ ಈ ಮಾತನ್ನು ಕೇಳಿ ಸತ್ಯಪರಾಕ್ರಮಿ ಶ್ರೀರಾಮಚಂದ್ರನು ತನ್ನ ಸಂಶಯರಹಿತ ಬುದ್ಧಿಯಿಂದ ಶ್ರುತಿಸಮ್ಮತ ಸದುಕ್ತಿಗಳಿಂದ ಹೀಗೆ ಹೇಳಿದನು.॥1॥

ಮೂಲಮ್ - 2

ಭವಾನ್ಮೇ ಪ್ರಿಯಕಾಮಾರ್ಥಂ ವಚನಂ ಯದಿಹೋಕ್ತವಾನ್ ।
ಅಕಾರ್ಯಂ ಕಾರ್ಯಸಂಕಾಶಮಪಥ್ಯಂ ಪಥ್ಯ ಸಂನಿಭಮ್ ॥

ಅನುವಾದ

ವಿಪ್ರವರ್ಯರೇ! ನೀವು ನನಗೆ ಸಂತೋಷವನ್ನುಂಟುಮಾಡುವ ಉದ್ದೇಶದಿಂದ ಹೇಳಿದುದು ಕರ್ತವ್ಯದಂತೆ ಕಂಡುಬಂದರೂ ವಾಸ್ತವವಾಗಿ ಮಾಡಲು ಯೋಗ್ಯವಲ್ಲ. ಅದು ಪಥ್ಯದಂತೆ ಕಾಣುತ್ತಿದ್ದರೂ ನಿಜವಾಗಿ ಅಪಥ್ಯವೇ ಆಗಿದೆ.॥2॥

ಮೂಲಮ್ - 3

ನಿರ್ಮರ್ಯಾದಸ್ತು ಪುರುಷಃ ಪಾಪಾಚಾರಸಮನ್ವಿತಃ ।
ಮಾನಂ ನ ಲಭತೇ ಸತ್ಸು ಭಿನ್ನಚಾರಿತ್ರದರ್ಶನಃ ॥

ಅನುವಾದ

ಧರ್ಮ ಅಥವಾ ವೇದದ ಮೇರೆಯನ್ನು ತ್ಯಜಿಸಿದಾಗ ಆ ಮನುಷ್ಯನು ಪಾಪಕರ್ಮದಲ್ಲಿ ಪ್ರವೃತ್ತನಾಗುತ್ತಾನೆ. ಅವನ ಆಚಾರ ಮತ್ತು ವಿಚಾರ ಎರಡೂ ಭ್ರಷ್ಟವಾಗುತ್ತವೆ; ಆದ್ದರಿಂದ ಅದು ಸತ್ಪುರುಷರಿಂದ ಸಮ್ಮಾನ ಪಡೆಯುವುದಿಲ್ಲ.॥3॥

ಮೂಲಮ್ - 4

ಕುಲೀನಮಕುಲೀನಂ ವಾ ವೀರಂ ಪುರುಷಮಾನಿನಮ್ ।
ಚಾರಿತ್ರಮೇವ ವ್ಯಾಖ್ಯಾತಿ ಶುಚಿಂ ವಾ ಯದಿ ವಾಶುಚಿಮ್ ॥

ಅನುವಾದ

ಯಾರು ಉತ್ತಮಕುಲದಲ್ಲಿ ಹುಟ್ಟಿರುವನೋ, ಯಾರು ಅಧಮ ಕುಲದಲ್ಲಿ ಹುಟ್ಟಿರುವನೋ, ಯಾರು ವೀರನೋ ಮತ್ತು ಯಾರು ವ್ಯರ್ಥವಾಗಿಯೇ ತನ್ನನ್ನು ಪುರುಷನೆಂದು ತಿಳಿಯುವನೋ, ಯಾರು ಪವಿತ್ರ ಹಾಗೂ ಅಪವಿತ್ರನೋ ಎಂಬುದನ್ನು ಆಚಾರವೇ ತಿಳಿಸುತ್ತದೆ.॥4॥

ಮೂಲಮ್ - 5

ಅನಾರ್ಯಸ್ತ್ವಾರ್ಯ ಸಂಸ್ಥಾನಃ ಶೌಚಾದ್ಧೀನಸ್ತಥಾ ಶುಚಿಃ ।
ಲಕ್ಷಣ್ಯವದಲಕ್ಷಣ್ಯೋ ದುಃಶೀಲಃ ಶೀಲವಾನಿವ ॥

ಅನುವಾದ

ನೀವು ತಿಳಿಸಿದ ಆಚಾರವನ್ನು ತನ್ನದಾಗಿಸಿಕೊಂಡ ಪುರುಷನು ಶ್ರೇಷ್ಠನಂತೆ ಕಂಡುಬಂದರೂ ವಾಸ್ತವವಾಗಿ ಅನಾರ್ಯನೇ ಆಗಿರುವನು. ಹೊರಗಿಂದ ಪವಿತ್ರನಂತೆ ಕಾಣುತ್ತಿದ್ದರೂ ಒಳಗಿನಿಂದ ಅಪವಿತ್ರನೇ ಆಗಿದ್ದಾನೆ. ಉತ್ತಮ ಲಕ್ಷಣಗಳಿಂದ ಕೂಡಿದವನು ಎಂದು ಅನಿಸಿದರೂ ನಿಜವಾಗಿ ಇದಕ್ಕೆ ವಿಪರೀತನೇ ಆಗುವನು. ಶೀಲವಂತನೆಂದು ತೋರಿದರೂ ವಾಸ್ತವವಾಗಿ ದುಃಶೀಲನೇ ಸರಿ.॥5॥

ಮೂಲಮ್ - 6

ಅಧರ್ಮಂ ಧರ್ಮವೇಷೇಣ ಯದ್ಯಹಂಲೋಕಸಂಕರಮ್ ।
ಅಭಿಪತ್ಸ್ಯೇ ಶುಭಂಹಿತ್ವಾ ಕ್ರಿಯಾಂ ವಿಧಿವಿವರ್ಜಿತಾಮ್ ॥

ಮೂಲಮ್ - 7

ಕಶ್ಚೇತಯಾನಃ ಪುರುಷಃ ಕಾರ್ಯಾಕಾರ್ಯ ವಿಚಕ್ಷಣಃ ।
ಬಹುಮನ್ಯೇತ ಮಾಂ ಲೋಕೇ ದುರ್ವೃತ್ತಂ ಲೋಕದೂಷಣಮ್ ॥

ಅನುವಾದ

ನಿಮ್ಮ ಉಪದೇಶವು ಧರ್ಮದ ವೇಷ ತೊಟ್ಟಂತೆ ಇದ್ದರೂ ಅಧರ್ಮವೇ ಆಗಿದೆ. ಇದರಿಂದ ಜಗತ್ತಿನಲ್ಲಿ ವರ್ಣಸಂಕರತೆಯೇ ಪ್ರಚಾರವಾದೀತು. ನಾನು ಇದನ್ನು ಸ್ವೀಕರಿಸಿದರೆ ವೇದೋಕ್ತ ಶುಭಕರ್ಮಗಳ ಅನುಷ್ಠಾನಗಳನ್ನು ಬಿಟ್ಟುಕೊಟ್ಟು, ವಿಧಿಹೀನ ಕರ್ಮಗಳಲ್ಲಿ ತೊಡಗುವೆನು. ಆಗ ಕರ್ತವ್ಯ-ಅಕರ್ತವ್ಯ ಜ್ಞಾನ ಇರಿಸುವ ಬುದ್ಧಿವಂತರು ಯಾರು ನನ್ನನ್ನು ಶ್ರೇಷ್ಠನೆಂದು ತಿಳಿದು ಆದರಿಸುವರು? ಆ ಸ್ಥಿತಿಯಲ್ಲಿ ನನ್ನನ್ನು ಈ ಜಗತ್ತಿನ ಜನರು ದುರಾಚಾರಿ ಮತ್ತು ಕಲಂಕಿತನೆಂದು ತಿಳಿಯುವರು.॥6-7॥

ಮೂಲಮ್ - 8

ಕಸ್ಯ ಯಾಸ್ಯಾಮ್ಯಹಂ ವೃತ್ತಂ ಕೇನ ವಾ ಸ್ವರ್ಗಮಾಪ್ನುಯಾಮ್ ।
ಅನಯಾ ವರ್ತಮಾನೋಽಹಂ ವೃತ್ತ್ಯಾಹೀನಪ್ರತಿಜ್ಞಾಯಾ ॥

ಅನುವಾದ

ತಾನು ಮಾಡಿದ ಪ್ರತಿಜ್ಞೆಯನ್ನು ಮುರಿಯುವ ಪ್ರವೃತ್ತಿಯಿಂದ ವರ್ತಿಸಿದಾಗ ನಾನು ಯಾವ ಸಾಧನೆಯಿಂದ ಸ್ವರ್ಗಲೋಕವನ್ನು ಪಡೆಯುವೆನು? ನಾನು ಅನುಸರಿಸಲು ನೀವು ಮಾಡಿದ ಉಪದೇಶವು ಯಾರದ್ದಾಗಿದೆ; ಏಕೆಂದರೆ ನೀವು ಹೇಳಿದಂತೆ ನಾನು ತಂದೆಯೇ ಮುಂತಾದವರ ಯಾರವನೂ ಅಲ್ಲ.॥8॥

ಮೂಲಮ್ - 9

ಕಾಮವೃತ್ತೋನ್ವಯಂ ಲೋಕಃ ಕೃತ್ಸ್ನಃಸಮುಪವರ್ತತೇ ।
ಯದ್ವೃತ್ತಾಃ ಸಂತಿ ರಾಜಾನದ್ ವೃತ್ತಾಃ ಸಂತಿ ಹಿ ಪ್ರಜಾಃ ॥

ಅನುವಾದ

ನೀವು ಹೇಳಿರುವ ಮಾರ್ಗದಲ್ಲಿ ನಡೆದರೆ ನಾನು ಸ್ವೇಚ್ಛಾಚಾರಿಯಾಗುವೆನು. ಮತ್ತೆ ಈ ಇಡೀ ಲೋಕವು ಸ್ವೆಚ್ಛಾಚಾರಿಯಾಗಿ ಹೋದೀತು; ಏಕೆಂದರೆ ರಾಜರು ಆಚರಿಸಿದಂತೆಯೇ ಪ್ರಜೆಯು ಆಚರಿಸತೊಡಗುತ್ತಾರೆ.॥9॥

ಮೂಲಮ್ - 10

ಸತ್ಯಮೇವಾನೃಶಂಸಂ ಚ ರಾಜವೃತ್ತಂ ಸನಾತನಮ್ ।
ತಸ್ಮಾತ್ಸತ್ಯಾತ್ಮಕಂ ರಾಜ್ಯಂ ಸತ್ಯೇ ಲೋಕಃ ಪ್ರತಿಷ್ಠಿತಃ ॥

ಅನುವಾದ

ಸತ್ಯಪಾಲನೆಯೇ ರಾಜರ ಪ್ರಧಾನ ಧರ್ಮವಾಗಿದೆ. ಸನಾತನ ಆಚಾರವಾಗಿದೆ. ಆದ್ದರಿಂದ ರಾಜ್ಯವು ಸತ್ಯ ಸ್ವರೂಪವಾಗಿದೆ. ಸತ್ಯದಲ್ಲೇ ಸಮಸ್ತ ಲೋಕಗಳು ಪ್ರತಿಷ್ಠಾಪಿತವಾಗಿವೆ.॥10॥

ಮೂಲಮ್ - 11

ಋಷಯಶ್ಚೈವ ದೇವಾಶ್ಚ ಸತ್ಯಮೇವ ಹಿ ಮೇನಿರೇ ।
ಸತ್ಯವಾದೀ ಹಿ ಲೋಕೇಽಸ್ಮಿನ್ ಪರಂ ಗಚ್ಛತಿಚಾಕ್ಷಯಮ್ ॥

ಅನುವಾದ

ಋಷಿಗಳು ಮತ್ತು ದೇವತೆಗಳು ಸದಾ ಸತ್ಯವನ್ನೇ ಆದರಿಸಿದ್ದಾರೆ. ಈ ಲೋಕದಲ್ಲಿ ಸತ್ಯವಾದಿಯಾದ ಮನುಷ್ಯನೇ ಅಕ್ಷಯ ಪರಮ ಧಾಮಕ್ಕೆ ಹೋಗುತ್ತಾನೆ.॥11॥

ಮೂಲಮ್ - 12

ಉದ್ವಿಜಂತೇ ಯಥಾ ಸರ್ಪಾನ್ನರಾದನೃತವಾದಿನಃ ।
ಧರ್ಮಃ ಸತ್ಯಪರೋ ಲೋಕೇ ಮೂಲಂ ಸರ್ವಸ್ಯ ಚೋಚ್ಯತೇ ॥

ಅನುವಾದ

ಸುಳ್ಳು ಹೇಳುವ ಮನುಷ್ಯನಿಗೆ ಹಾವಿನಂತೆ ಎಲ್ಲ ಜನರು ಅಂಜುವರು. ಜಗತ್ತಿನಲ್ಲಿ ಸತ್ಯವೇ ಧರ್ಮದ ಪರಾಕಾಷ್ಠೆಯಾಗಿದೆ ಮತ್ತು ಅದೇ ಎಲ್ಲರ ಮೂಲವೆಂದು ಹೇಳಲಾಗಿದೆ.॥12॥

ಮೂಲಮ್ - 13

ಸತ್ಯಮೇವೇಶ್ವರೋ ಲೋಕೇ ಸತ್ಯೇ ಧರ್ಮಃ ಸದಾಶ್ರಿತಃ ।
ಸತ್ಯಮೂಲಾನಿ ಸರ್ವಾಣಿ ಸತ್ಯಾನ್ನಾಸ್ತಿ ಪರಂಪದಮ್ ॥

ಅನುವಾದ

ಜಗತ್ತಿನಲ್ಲಿ ಸತ್ಯವೇ ಈಶ್ವರನಾಗಿದ್ದಾನೆ. ಸದಾ ಸತ್ಯದ ಆಧಾರದ ಮೇಲೆಯೇ ಧರ್ಮದ ಸ್ಥಿತಿ ಇರುತ್ತದೆ. ಸತ್ಯವೇ ಎಲ್ಲದರ ಬೇರು ಆಗಿದೆ. ಸತ್ಯಕ್ಕಿಂತ ಬೇರೆಯಾದ ಯಾವುದೇ ಪರಮ ಪದವಿಲ್ಲ.॥13॥

ಮೂಲಮ್ - 14

ದತ್ತಮಿಷ್ಟಂ ಹುತಂ ಚೈವ ತಪ್ತಾನಿಚ ತಪಾಂಸಿ ಚ ।
ವೇದಾಃ ಸತ್ಯಪ್ರತಿಷ್ಠಾನಾಸ್ತಸ್ಮಾತ್ಸತ್ಯಪರೋ ಭವೇತ್ ॥

ಅನುವಾದ

ದಾನ, ಯಜ್ಞ, ಹೋಮ, ತಪಸ್ಸು, ವೇದ - ಇವೆಲ್ಲದರ ಆಧಾರ ಸತ್ಯವೇ ಆಗಿದೆ. ಅದಕ್ಕಾಗಿ ಎಲ್ಲರೂ ಸತ್ಯಪರಾಯಣರಾಗಬೇಕು.॥14॥

ಮೂಲಮ್ - 15

ಏಕಃ ಪಾಲಯತೇ ಲೋಕಮೇಕಃ ಪಾಲಯತೇ ಕುಲಮ್ ।
ಮಜ್ಜತ್ಯೇಕೋ ಹಿ ನಿರಯ ಏಕಃ ಸ್ವರ್ಗೇಮಹೀಯತೇ ॥

ಅನುವಾದ

ಒಬ್ಬನು ಚಕ್ರವರ್ತಿಯಾಗುತ್ತಾನೆ; ಒಬ್ಬನು ಒಂದು ಗುಂಪಿಗೆ ನಾಯಕನಾಗುತ್ತಾನೆ. ಒಬ್ಬನು ನರಕಯಾತನೆಯನ್ನು ಅನುಭವಿಸುತ್ತಾನೆ. ಮತ್ತೊಬ್ಬನು ಸ್ವರ್ಗಸುಖವನ್ನು ಅನುಭವಿಸುತ್ತಾನೆ.॥15॥

ಮೂಲಮ್ - 16

ಸೋಽಹಂ ಪಿತುರ್ನಿದೇಶಂ ತು ಕಿಮರ್ಥಂ ನಾನುಪಾಲಯೇ ।
ಸತ್ಯಪ್ರತಿಶ್ರವಃ ಸತ್ಯಂ ಸತ್ಯೇನ ಸಮಯೀಕೃತಮ್ ॥

ಅನುವಾದ

ನಾನು ಸತ್ಯಪ್ರತಿಜ್ಞನಾಗಿದ್ದೇನೆ ಹಾಗೂ ಸತ್ಯದ ಮೇಲೆ ಆಣೆಯಿಟ್ಟು ತಂದೆಯ ಸತ್ಯವನ್ನು ಪಾಲಿಸಲು ಸ್ವೀಕರಿಸಿದ್ದೇನೆ. ಇಂತಹ ಸ್ಥಿತಿಯಲ್ಲಿ ನಾನು ತಂದೆಯ ಆದೇಶವನ್ನು ಏಕೆ ಪಾಲಿಸದಿರಲಿ.॥16॥

ಮೂಲಮ್ - 17

ನೈವ ಲೋಭಾನ್ನ ಮೋಹಾದ್ವಾ ನ ಚಾಜ್ಞಾನಾತ್ತಮೋಽನ್ವಿತಃ ।
ಸೇತುಂ ಸತ್ಯಸ್ಯಭೇತ್ಸ್ಯಾಮಿ ಗುರೋಃ ಸತ್ಯಪ್ರತಿಶ್ರವಃ ॥

ಅನುವಾದ

ಮೊದಲು ಸತ್ಯಪಾಲನೆಯ ಪ್ರತಿಜ್ಞೆ ಮಾಡಿ ಈಗ ಲೋಭ, ಮೋಹ ಅಥವಾ ಅಜ್ಞಾನದಿಂದ ವಿವೇಕಶೂನ್ಯನಾಗಿ ನಾನು ತಂದೆಯ ಸತ್ಯದ ಮರ್ಯಾದೆಯನ್ನು ಭಂಗಗೊಳಿಸಲಾರೆನು.॥17॥

ಮೂಲಮ್ - 18

ಅಸತ್ಯಸಂಧಸ್ಯ ಸತಶ್ಚಲಸ್ಯಾಸ್ಥಿರಚೇತಸಃ ।
ನೈವ ದೇವಾ ನ ಪಿತರಃ ಪ್ರತೀಚ್ಛಂತೀತಿ ನಃ ಶ್ರುತಮ್ ॥

ಅನುವಾದ

ತನ್ನ ಪ್ರತಿಜ್ಞೆಯನ್ನು ಸುಳ್ಳಾಗಿಸಿ ಧರ್ಮದಿಂದ ಭ್ರಷ್ಟನಾದ ಚಂಚಲಚಿತ್ತವುಳ್ಳ ಮನುಷ್ಯನು ಅರ್ಪಿಸಿದ ಹವ್ಯ-ಕವ್ಯಗಳನ್ನು ದೇವತೆಗಳು, ಪಿತೃಗಳು ಸ್ವೀಕರಿಸುವುದಿಲ್ಲವೆಂದು ನಾವು ಕೇಳಿದ್ದೇವೆ.॥18॥

ಮೂಲಮ್ - 19

ಪ್ರತ್ಯಗಾತ್ಮಮಿಮಂ ಧರ್ಮಂ ಸತ್ಯಂ ಪಶ್ಯಾಮ್ಯಹಂ ಧ್ರುವಮ್ ।
ಭಾರಃ ಸತ್ಪುರುಷೈಶ್ಚೀರ್ಣಸ್ತದರ್ಥಮಭಿನಂದ್ಯತೇ ॥

ಅನುವಾದ

ಈ ಸತ್ಯರೂಪೀ ಧರ್ಮವನ್ನು ನಾನು ಸಮಸ್ತ ಪ್ರಾಣಿಗಳಿಗೆ ಹಿತಕರ ಮತ್ತು ಎಲ್ಲ ಧರ್ಮಗಳಲ್ಲಿ ಶ್ರೇಷ್ಠವೆಂದು ತಿಳಿಯುತ್ತೇನೆ. ಸತ್ಪುರುಷರು ಜಟಾ ವಲ್ಕಲಾದಿಗಳನ್ನು ಧರಿಸಿ ತಾಪಸ ಧರ್ಮವನ್ನು ಪಾಲಿಸಿರುವರು. ಅದಕ್ಕಾಗಿ ನಾನು ಅದನ್ನು ಅಭಿನಂದಿಸುತ್ತೇನೆ.॥19॥

ಮೂಲಮ್ - 20

ಕ್ಷಾತ್ರಂ ಧರ್ಮಮಹಂ ತ್ಯಕ್ಷ್ಯೇ ಹ್ಯಧರ್ಮಂಧರ್ಮಸಂಹಿತಮ್ ।
ಕ್ಷುದ್ರೈರ್ನೃಶಂಸೈರ್ಲುಬ್ಧೈಶ್ಚ ಸೇವಿತಂ ಪಾಪಕರ್ಮಭಿಃ ॥

ಅನುವಾದ

ಯಾವುದು ಧರ್ಮಯುಕ್ತವೆಂದು ಕಂಡುಬಂದರೂ ವಾಸ್ತವವಾಗಿ ಅಧರ್ಮಸ್ವರೂಪವಾಗಿದೆಯೋ, ಯಾವುದನ್ನು ನೀಚ, ಕ್ರೂರಿ, ಲೋಭಿ, ಪಾಪಾಚಾರಿಗಳು ಸೇವಿಸಿರುವರೋ, ಅಂತಹ ಕ್ಷಾತ್ರಧರ್ಮವನ್ನು (ತಂದೆಯ ಆಜ್ಞೆಯನ್ನು ಮುರಿದು ರಾಜ್ಯ ಸ್ವೀಕರಿಸುವ) ನಾನು ಅವಶ್ಯವಾಗಿ ತ್ಯಜಿಸುವೆನು. (ಏಕೆಂದರೆ ಅದು ನ್ಯಾಯಯುಕ್ತವಾಗಿರುವುದಿಲ್ಲ.॥20॥

ಮೂಲಮ್ - 21

ಕಾಯೇನ ಕುರುತೇ ಪಾಪಂ ಮನಸಾ ಸಂಪ್ರಧಾರ್ಯ ತತ್ ।
ಅನೃತಂ ಜಿಹ್ವಯಾ ಚಾಹ ತ್ರಿವಿಧಂ ಕರ್ಮ ಪಾತಕಮ್ ॥

ಅನುವಾದ

ಮನುಷ್ಯನು ಶರೀರದಿಂದ ಮಾಡುವ ಪಾಪವನ್ನು ಮೊದಲು ಮನಸ್ಸಿನಿಂದ ನಿಶ್ಚಯಿಸುತ್ತಾನೆ. ಮತ್ತೆ ನಾಲಿಗೆಯಿಂದ ಆ ಸುಳ್ಳುಕರ್ಮ (ಪಾಪ)ವನ್ನು ಮಾತಿನಿಂದ ಬೇರೆಯವರಿಗೆ ಹೇಳುತ್ತಾನೆ. ಅನಂತರ ಬೇರೆಯವರ ಸಹಯೋಗದಿಂದ ಶರೀರದಿಂದ ಪಾಪ ಮಾಡುತ್ತಾನೆ. ಈ ರೀತಿ ಒಂದೇ ಪಾತಕವು ಕಾಯಿಕ, ವಾಚಿಕ, ಮಾನಸಿಕ ಎಂಬ ಭೇದದಿಂದ ಮೂರು ಪ್ರಕಾರದಿಂದ ಆಗುತ್ತದೆ.॥21॥

ಮೂಲಮ್ - 22

ಭೂಮಿಃ ಕೀರ್ತಿರ್ಯಶೋ ಲಕ್ಷ್ಮೀಃ ಪುರುಷ ಪ್ರಾರ್ಥಯಂತಿ ಹಿ ।
ಸತ್ಯಂ ಸಮನುವರ್ತಂತೇ ಸತ್ಯೇಮವ ಭಜೇತ್ ತಃ ॥

ಅನುವಾದ

ಪೃಥಿವಿ, ಕೀರ್ತಿ, ಯಶ, ಲಕ್ಷ್ಮೀ-ಇವೆಲ್ಲವೂ ಸತ್ಯವಾದಿ ಪುರುಷನನ್ನು ಸೇರಲು ಬಯಸುತ್ತವೆ. ಶಿಷ್ಟ ಪುರುಷರು ಸತ್ಯವನ್ನೇ ಅನುಸರಿಸುತ್ತಾರೆ, ಆದ್ದರಿಂದ ಮನುಷ್ಯನು ಸದಾ ಸತ್ಯವನ್ನೇ ಸೇವಿಸಬೇಕು.॥22॥

ಮೂಲಮ್ - 23

ಶ್ರೇಷ್ಠಂ ಹ್ಯನಾರ್ಯಮೇವ ಸ್ಯಾದ್ ಯದ್ ಭವಾನವಧಾರ್ಯ ಮಾಮ್ ।
ಆಹ ಯುಕ್ತಿಕರೈರ್ವಾಕ್ಯೈರಿದಂ ಭದ್ರಂ ಕುರುಷ್ವ ಹ ॥

ಅನುವಾದ

ನೀವು ಉಚಿತವೆಂದು ಸಿದ್ಧಗೊಳಿಸಿ ತರ್ಕಪೂರ್ಣ ವಚನಗಳಿಂದ - ‘ರಾಜ್ಯ ಸ್ವೀಕರಿಸುವುದರಲ್ಲೇ ಶ್ರೇಯಸ್ಸು ಇದೆ, ಆದ್ದರಿಂದ ಇದನ್ನು ಅವಶ್ಯವಾಗಿ ಸ್ವೀಕರಿಸು’ ಎಂದು ಹೇಳಿದಿರಿ. ನಿಮ್ಮ ಈ ಆದೇಶವು ಶ್ರೇಷ್ಠವೆಂದು ಕಂಡುಬಂದರೂ ಸಜ್ಜನ ಪುರುಷರಿಂದ ಆಚರಿಸಲು ಯೋಗ್ಯವಾಗಿಲ್ಲ; (ಏಕೆಂದರೆ ಇದನ್ನು ಸ್ವೀಕರಿಸುವುದರಿಂದ ಸತ್ಯ ಮತ್ತು ನ್ಯಾಯದ ಉಲ್ಲಂಘನೆಯಾಗುತ್ತದೆ.॥23॥

ಮೂಲಮ್ - 24

ಕಥಂ ಹ್ಯಹಂ ಪ್ರತಿಜ್ಞಾಯ ವನವಾಸಮಿಮಂ ಗುರೋಃ ।
ಭರತಸ್ಯ ಕರಿಷ್ಯಾಮಿ ವಚೋ ಹಿತ್ವಾ ಗುರೋರ್ವಚಃ ॥

ಅನುವಾದ

ನಾನು ತಂದೆಯ ಎದುರಿಗೆ ಈ ರೀತಿ ವನದಲ್ಲಿ ಇರುವ ಪ್ರತಿಜ್ಞೆ ಮಾಡಿರುವೆನು. ಈಗ ಅವರ ಆಜ್ಞೆಯನ್ನು ಉಲ್ಲಂಘಿಸಿ ನಾನು ಭರತನ ಮಾತನ್ನು ಹೇಗೆ ಒಪ್ಪಿಕೊಳ್ಳಲಿ.॥24॥

ಮೂಲಮ್ - 25

ಸ್ಥಿರಾಮಯಾ ಪ್ರತಿಜ್ಞಾತಾ ಪ್ರತಿಜ್ಞಾ ಗುರುಸಂನಿಧೌ ।
ಪ್ರಹೃಷ್ಟಮಾನಸಾ ದೇವೀ ಕೈಕೇಯೀ ಚಾಭವತ್ತದಾ ॥

ಅನುವಾದ

ಗುರುಗಳ ಮುಂದೆ ಮಾಡಿದ ನನ್ನ ಪ್ರತಿಜ್ಞೆ ಅಚಲವಾಗಿದೆ - ಯಾವ ರೀತಿಯಿಂದಲೂ ಮುರಿಯಲಾರದು. ನಾನು ಪ್ರತಿಜ್ಞೆಮಾಡಿದಾಗ ದೇವೀ ಕೈಕೇಯಿಯ ಹೃದಯ ಹರ್ಷಗೊಂಡಿತ್ತು.॥25॥

ಮೂಲಮ್ - 26

ವನವಾಸಂ ವಸನ್ನೇವ ಶುಚಿರ್ನಿಯತಭೋಜನಃ ।
ಮೂಲಪುಷ್ಪಲೈಃ ಪುಣ್ಯೈಃ ಪಿತೃನ್ ದೇವಾಂಶ್ಚ ತರ್ಪಯನ್ ॥

ಅನುವಾದ

ನಾನು ಅರಣ್ಯದಲ್ಲೇ ಇದ್ದು ಒಳ- ಹೊರಗೆ ಪವಿತ್ರನಾಗಿ ನಿಯಮಿತ ಭೋಜನ ಮಾಡುವೆನು ಮತ್ತು ಫಲ-ಮೂಲ ಪುಷ್ಪಗಳಿಂದ ದೇವತೆಗಳನ್ನು, ಪಿತೃಗಳನ್ನು ತೃಪ್ತಿಪಡಿಸುತ್ತಾ ಪ್ರತಿಜ್ಞೆಯನ್ನು ಪಾಲಿಸುವೆನು.॥26॥

ಮೂಲಮ್ - 27

ಸಂತುಷ್ಟಪಂಚವರ್ಗೋಽಹಂ ಲೋಕಯಾತ್ರಾಂ ಪ್ರವಾಹಯೇ ।
ಅಕುಹಃ ಶ್ರದ್ಧಧಾನಃ ಸನ್ ಕಾರ್ಯಾಕಾರ್ಯವಿಚಕ್ಷಣಃ ॥

ಅನುವಾದ

ಏನು ಮಾಡಬೇಕು ಮತ್ತು ಏನು ಮಾಡಬಾರದು ಇದನ್ನು ನಾನು ನಿಶ್ಚಯಿಸಿರುವೆನು. ಆದ್ದರಿಂದ ಫಲ-ಮೂಲಗಳಿಂದ ಐದು ಇಂದ್ರಿಯಗಳನ್ನು ಸಂತುಷ್ಟಗೊಳಿಸಿ ನಿಶ್ಚಲ ಶ್ರದ್ಧಾಪೂರ್ವಕ ಲೋಕಯಾತ್ರೆ (ಪಿತೃವಾಕ್ಯಪಾಲನರೂಪೀ ವ್ಯವಹಾರಯನ್ನು ನಿರ್ವಹಿಸುವೆನು.॥27॥

ಮೂಲಮ್ - 28

ಕರ್ಮಭೂಮಿಮಿಮಾಂ ಪ್ರಾಪ್ಯ ಕರ್ತವ್ಯಂ ಕರ್ಮ ಯಚ್ಛುಭಮ್ ।
ಅಗ್ನಿರ್ವಾಯುಶ್ಚ ಸೋಮಶ್ಚ ಕರ್ಮಣಾಂ ಲಭಾಗಿನಃ ॥

ಅನುವಾದ

ಈ ಕರ್ಮಭೂಮಿಗೆ ಬಂದ ಮೇಲೆ ಶುಭಕರ್ಮವನ್ನೇ ಅನುಷ್ಠಾನ ಮಾಡಬೇಕು; ಏಕೆಂದರೆ ಅಗ್ನಿ, ವಾಯು, ಸೋಮ ಇವರೂ ಕೂಡ ಕರ್ಮಗಳ ಫಲದಿಂದಲೇ ಆಯಾಯ ಪದವಿಗೆ ಭಾಗಿಗಳಾಗಿದ್ದಾರೆ.॥28॥

ಮೂಲಮ್ - 29

ಶತಂ ಕ್ರತೂನಾಮಾಹೃತ್ಯ ದೇವರಾಟ್ ತ್ರಿದಿವಂ ಗತಃ ।
ತಪಾಂಸ್ಯುಗ್ರಾಣಿ ಚಾಸ್ಥಾಯ ದಿವಂ ಪ್ರಾಪ್ತಾಮಹರ್ಷಯಃ ॥

ಅನುವಾದ

ದೇವೇಂದ್ರನೂ ಕೂಡ ನೂರು ಯಜ್ಞಗಳನ್ನು ಮಾಡಿಯೇ ಸ್ವರ್ಗಲೋಕವನ್ನು ಪಡೆದಿರುವನು. ಮಹರ್ಷಿಗಳೂ ಉಗ್ರತಪಸ್ಸು ಮಾಡಿಯೇ ದಿವ್ಯ ಲೋಕಗಳಲ್ಲಿ ಸ್ಥಾನವನ್ನು ಹೊಂದಿರುವರು.॥29॥

ಮೂಲಮ್ - 30

ಅಮೃಷ್ಯಮಾಣಃ ಪುನರುಗ್ರತೇಜಾ
ನಿಶಮ್ಯ ತನ್ನಾಸ್ತಿಕವಾಕ್ಯಹೇತುಮ್ ।
ಅಥಾಬ್ರವೀತ್ತಂ ನೃಪತೇಸ್ತನೂಜೋ
ವಿಗರ್ಹಮಾಣೋ ವಚನಾನಿ ತಸ್ಯ ॥

ಅನುವಾದ

ಉಗ್ರ ತೇಜಸ್ವೀ ರಾಜಕುಮಾರ ಶ್ರೀರಾಮನು ಪರಲೋಕದ ಸತ್ತೆಯನ್ನು ಖಂಡಿಸುವ ಜಾಬಾಲಿಯು ಹಿಂದೆ ನುಡಿದ ಮಾತುಗಳನ್ನು ಕೇಳಿ ಅವನಿಂದ ಸಹಿಸಲಾರದೆ, ಆ ಮಾತುಗಳನ್ನು ನಿಂದಿಸುತ್ತಾ ಪುನಃ ಹೇಳಿದನು.॥30॥

ಮೂಲಮ್ - 31

ಸತ್ಯಂ ಚ ಧರ್ಮಂ ಚ ಪರಾಕ್ರಮಂ ಚ
ಭೂತಾನುಕಂಪಾಂ ಪ್ರಿಯವಾದಿತಾಂ ಚ ।
ದ್ವಿಜಾತಿದೇವಾತಿಥಿಪೂಜನಂ ಚ
ಪಂಥಾನಮಾಹುಸ್ತ್ರಿದಿವಸ್ಯ ಸಂತಃ ॥

ಅನುವಾದ

ಸತ್ಯ, ಧರ್ಮ, ಪರಾಕ್ರಮ, ಸಮಸ್ತ ಪ್ರಾಣಿಗಳ ಮೇಲೆ ದಯೆ, ಎಲ್ಲರಲ್ಲಿ ಪ್ರಿಯವಾಗಿ ಮಾತನಾಡುವುದು, ದೇವತೆಗಳನ್ನು, ಅತಿಥಿಗಳನ್ನು, ಬ್ರಾಹ್ಮಣರನ್ನು ಪೂಜಿಸುವುದು - ಇವೆಲ್ಲವನ್ನು ಸಾಧುಗಳು ಸ್ವರ್ಗಲೋಕದ ಮಾರ್ಗವೆಂದು ಹೇಳಿರುವರು.॥31॥

ಮೂಲಮ್ - 32

ತೇನೈವಮಾಜ್ಞಾಯ ಯಥಾವದರ್ಥ-
ಮೇಕೋದಯಂ ಸಂಪ್ರತಿಪದ್ಯ ವಿಪ್ರಾಃ ।
ಧರ್ಮಂ ಚರಂತಃ ಸಕಲಂ ಯಥಾವತ್
ಕಾಂಕ್ಷಂತಿ ಲೋಕಾಗಮಮಪ್ರಮತ್ತಾಃ ॥

ಅನುವಾದ

ಸತ್ಪುರುಷರ ಈ ಮಾತಿಗನುಸಾರ ಧರ್ಮದ ಸ್ವರೂಪವನ್ನು ತಿಳಿದು, ಅನುಕೂಲ ತರ್ಕದಿಂದ ಅದನ್ನು ಯಥಾರ್ಥವಾಗಿ ನಿರ್ಣಯಿಸಿ, ಒಂದು ನಿಶ್ಚಯಕ್ಕೆ ತಲುಪಿದ ಬ್ರಾಹ್ಮಣನು ಚೆನ್ನಾಗಿ ಧರ್ಮಾಚರಣೆ ಮಾಡುತ್ತಾ ಆಯಾಯ ಉತ್ತಮ ಲೋಕಗಳನ್ನು ಪಡೆಯಲು ಬಯಸುತ್ತಾರೆ.॥32॥

ಮೂಲಮ್ - 33

ನಿಂದಾಮಹ್ಯಂ ಕರ್ಮ ಕೃತಂ ಪಿತುಸ್ತದ್
ಯಸ್ತ್ವಾಮಗೃಹ್ಣಾದ್ವಿಷಮಸ್ಥಬುದ್ಧಿಮ್ ।
ಬುದ್ಧ್ಯಾನಯೈವಂವಿಧಯಾ ಚರಂತಂ
ಸುನಾಸ್ತಿಕಂ ಧರ್ಮಪಥಾದಪೇತಮ್ ॥

ಅನುವಾದ

ನಿಮ್ಮ ಬುದ್ಧಿ ವಿಷಮ-ಮಾರ್ಗದಲ್ಲಿ ಸ್ಥಿತವಾಗಿದೆ, ನೀವು ವೇದ ವಿರುದ್ಧ ಮಾರ್ಗವನ್ನು ಆಶ್ರಯಿಸಿರುವಿರಿ. ಇಂತಹ ನಾಸ್ತಿಕ, ಚಾರ್ವಾಕ, ಪಾಖಂಡಮಯ ಬುದ್ಧಿಯಿಂದ ಅನುಚಿತ ವಿಚಾರದ ಪ್ರಚಾರ ಮಾಡುವ ನಿಮಗೆ ನನ್ನ ತಂದೆಯವರು ಋತ್ವಿಜರನ್ನಾಗಿಸಿಕೊಂಡ ಅವರ ಈ ಕಾರ್ಯವನ್ನು ನಾನು ನಿಂದಿಸುತ್ತೇನೆ.॥33॥

ಮೂಲಮ್ - 34

ಯಥಾ ಹಿ ಚೋರಃ ಸ ತಥಾ ಹಿ ಬುದ್ಧ -
ಸ್ತಥಾಗತಂ ನಾಸ್ತಿಕಮತ್ರ ವಿದ್ಧಿ ।
ತಸ್ಯಾದ್ಧಿ ಯಃ ಶಕ್ಯತಮಃ ಪ್ರಜಾನಾಂ
ನ ನಾಸ್ತಿಕೇ ನಾಭಿಮುಖೋ ಬುಧಃ ಸ್ಯಾತ್ ॥

ಅನುವಾದ

ಕಳ್ಳನು ದಂಡನೀಯನಿರುವಂತೆಯೇ (ವೇದ ವಿರೋಧಿ) ಬುದ್ಧ (ಬುದ್ಧ ಮತಾವಲಂಬಿಗಳು)ನೂ ದಂಡನೀಯನಾಗಿದ್ದಾನೆ. ತಥಾಗತ (ನಾಸ್ತಿಕ ವಿಶೇಷ) ಮತ್ತು ನಾಸ್ತಿಕ (ಚಾರ್ವಾಕ) ಇವರನ್ನು ಇಲ್ಲಿ ಇದೇ ಸಾಲಿನಲ್ಲಿ ತಿಳಿಯಬೇಕು. ಅದಕ್ಕಾಗಿ ಪ್ರಜೆಯ ಮೇಲೆ ಅನುಗ್ರಹ ಮಾಡಲಿಕ್ಕಾಗಿ ರಾಜನು ಕಳ್ಳನಿಗೆ ದಂಡವಿಧಿಸುವಂತೆ ನಾಸ್ತಿಕನಿಗೆ ದಂಡ ಕೊಡಬೇಕು; ಆದರೆ ಮೇರೆ ಮೀರಿದ ನಾಸ್ತಿಕನ ಕುರಿತು ವಿದ್ವಾಂಸರಾದ ಬ್ರಾಹ್ಮಣನು ಅವನ ಕಡೆಗೆ ನೋಡದೆ, ಅವನಲ್ಲಿ ಮಾತುಗಳನ್ನು ಆಡಬಾರದು.॥34॥

ಮೂಲಮ್ - 35

ತ್ವತ್ತೋ ಜನಾಃ ಪೂರ್ವತರೇ ದ್ವಿಜಾಶ್ಚ
ಶುಭಾನಿ ಕರ್ಮಾಣಿ ಬಹೂನಿ ಚಕ್ರುಃ ।
ಛಿತ್ವಾ ಸದೇಮಂ ಚ ಪರಂ ಚ ಲೋಕಂ
ತಸ್ಮಾದ್ವಜಾಃ ಸ್ವಸ್ತಿ ಕೃತಂ ಹುತಂ ಚ ॥

ಅನುವಾದ

ನಿಮ್ಮನ್ನು ಬಿಟ್ಟು ಮೊದಲಿನ ಶ್ರೇಷ್ಠ ಬ್ರಾಹ್ಮಣರು ಇಹಲೋಕ ಮತ್ತು ಪರಲೋಕದ ಫಲ ಕಾಮನೆಯನ್ನು ಪರಿತ್ಯಜಿಸಿ ವೇದೋಕ್ತ ಧರ್ಮವನ್ನು ತಿಳಿದು ಸದಾ ಅನೇಕ ಶುಭಕರ್ಮಗಳನ್ನು ಅನುಷ್ಠಾನ ಮಾಡಿರುವರು. ಆದ್ದರಿಂದ ಬ್ರಾಹ್ಮಣನಾದವನು ವೇದಗಳನ್ನೇ ಪ್ರಮಾಣವೆಂದು ತಿಳಿದು ಸ್ವಸ್ತಿ (ಅಹಿಂಸೆ, ಸತ್ಯ ಮೊದಲಾದ), ಕೃತ (ತಪಸ್ಸು, ದಾನ, ಪರೋಪಕಾರ ಆದಿ) ಹಾಗೂ ಹುತ (ಯಜ್ಞ-ಯಾಗಾದಿ) ಕರ್ಮಗಳನ್ನು ನೆರವೇರಿಸುತ್ತಾರೆ.॥35॥

ಮೂಲಮ್ - 36

ಧರ್ಮೇ ರತಾಃ ಸತ್ಪುರುಷೈಃ ಸಮೇತಾ -
ಸ್ತೇಜಸ್ವಿನೋ ದಾನಗುಣಪ್ರಧಾನಾಃ ।
ಅಹಿಂಸಕಾ ವೀತಮಲಾಶ್ಚ ಲೋಕೇ
ಭವಂತಿ ಪೂಜ್ಯಾ ಮುನಯಃ ಪ್ರಧಾನಾಃ ॥

ಅನುವಾದ

ಧರ್ಮದಲ್ಲಿ ತತ್ಪರರಾದವರು ಸತ್ಪುರುಷರ ಸಂಗದಲ್ಲಿ ಇರುವವರೂ, ತೇಜಸ್ಸಿನಿಂದ ಸಂಪನ್ನರೂ, ದಾನರೂಪೀ ಗುಣದ ಪ್ರಧಾನತೆ ಉಳ್ಳವರೂ, ಎಂದೂ ಯಾವುದೇ ಪ್ರಾಣಿಯ ಹಿಂಸೆ ಮಾಡದವರೂ, ಮಲಸಂಸರ್ಗದಿಂದ ರಹಿತರೂ ಆದ ಶ್ರೇಷ್ಠ ಮುನಿಗಳೇ ಜಗತ್ತಿನಲ್ಲಿ ಪೂಜನೀಯರಾಗುತ್ತಾರೆ.॥36॥

ಮೂಲಮ್ - 37

ಇತಿ ಬ್ರುವಂತಂ ವಚನಂ ಸರೋಷಂ
ರಾಮಂ ಮಹಾತ್ಮಾನಮದೀನಸತ್ತ್ವಮ್ ।
ಉವಾಚ ಪಥ್ಯಂ ಪುನರಾಸ್ತಿಕಂ ಚ
ಸತ್ಯಂ ವಚಃ ಸಾನುನಯಂ ಚ ವಿಪ್ರಃ ॥

ಅನುವಾದ

ಮಹಾತ್ಮಾ ಶ್ರೀರಾಮನು ಸ್ವಭಾವತಃ ದೈನ್ಯಭಾವದಿಂದ ರಹಿತನಾಗಿದ್ದನು. ಅವನು ರೋಷಪೂರ್ವಕ ಹಿಂದಿನಂತೆ ಮಾತನಾಡಿದಾಗ ಬ್ರಾಹ್ಮಣ ಜಾಬಾಲಿಯು ವಿನಯಪೂರ್ವಕ ಹೀಗೆ ಆಸ್ತಿಕತೆಯಿಂದ ಕೂಡಿದ ಸತ್ಯ ಹಾಗೂ ಹಿತಕರ ಮಾತನ್ನು ಹೇಳಿದರು.॥37॥

ಮೂಲಮ್ - 38

ನ ನಾಸ್ತಿಕಾನಾಂ ವಚನಂ ಬ್ರವೀಮ್ಯಹಂ
ನ ನಾಸ್ತಿಕೋಽಹಂ ನ ಚ ನಾಸ್ತಿ ಕಿಂಚನ ।
ಸಮೀಕ್ಷ್ಯ ಕಾಲಂ ಪುನರಾಸ್ತಿಕೋಽಭವಂ
ಭವೇಯ ಕಾಲೇ ಪುನರೇವ ನಾಸ್ತಿಕಃ ॥

ಅನುವಾದ

ರಘುನಂದನ! ನಾನು ನಾಸ್ತಿಕನಲ್ಲ ಮತ್ತು ನಾನು ನಾಸ್ತಿಕರ ಮಾತನ್ನು ಆಡುವುದೂ ಇಲ್ಲ. ಪರಲೋಕವೇ ಆದಿ ಏನೂ ಇಲ್ಲ ಎಂಬುದು ನನ್ನ ಮತವಲ್ಲ. ನಾನು ಸಂದರ್ಭ ನೋಡಿ ಪುನಃ ಆಸ್ತಿಕನಾಗಿದ್ದೇನೆ ಹಾಗೂ ಲೌಕಿಕ ವ್ಯವಹಾರದ ಸಮಯ ಆವಶ್ಯಕತೆ ಬಿದ್ದರೆ ನಾಸ್ತಿಕನೂ ಆಗುತ್ತೇನೆ - ನಾಸ್ತಿಕರಂತೆ ಮಾತನಾಡಬಲ್ಲೆನು.॥38॥

ಮೂಲಮ್ - 39

ಸ ಚಾಪಿ ಕಾಲೋಽಯಮುಪಾಗತಃ ಶನೈ-
ರ್ಯಥಾ ಮಯಾ ನಾಸ್ತಿಕವಾಗುದೀರಿತಾ ।
ನಿವರ್ತನಾರ್ಥಂ ತವ ರಾಮ ಕಾರಣಾತ್
ಪ್ರಸಾದನಾರ್ಥಂ ಚ ಮಯೈತದೀರಿತಮ್ ॥

ಅನುವಾದ

ಈಗ ಅಂತಹ ಸಂದರ್ಭ ಬಂದಿತ್ತು, ಅದರಿಂದ ನಾನು ನಿಧಾನವಾಗಿ ನಾಸ್ತಿಕರ ಮಾತನ್ನು ಹೇಳಿದೆ. ಶ್ರೀರಾಮಾ! ನಾನು ಹೇಳಿದ ಈ ಮಾತು ಯಾವುದೇ ರೀತಿಯಿಂದ ನಿನ್ನನ್ನು ಒಪ್ಪಿಸಿ ಅಯೋಧ್ಯೆಗೆ ಮರಳಲು ಸಿದ್ಧಗೊಳಿಸುವ ಉದ್ದೇಶವೇ ನನ್ನದಾಗಿತ್ತು.॥39॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಒಂಭತ್ತನೆಯ ಸರ್ಗ ಪೂರ್ಣವಾಯಿತು ॥109॥