१०८ जाबालेः राजनीतिः

वाचनम्
ಭಾಗಸೂಚನಾ

ಜಾಬಾಲಿಯು ನಾಸ್ತಿಕರ ಮತವನ್ನು ಅವಲಂಬಿಸಿ ಶ್ರೀರಾಮನಿಗೆ ಸಮಜಾಯಿಸಿದುದು

ಮೂಲಮ್ - 1

ಆಶ್ವಾಸಯಂತಂ ಭರತಂ ಜಾಬಾಲಿರ್ಬ್ರಾಹ್ಮಣೋತ್ತಮಃ ।
ಉವಾಚ ರಾಮಂ ಧರ್ಮಜ್ಞಂ ಧರ್ಮಾಪೇತಮಿದಂ ವಚಃ ॥

ಅನುವಾದ

ಧರ್ಮಜ್ಞ ಶ್ರೀರಾಮಚಂದ್ರನು ಭರತನನ್ನು ಹೀಗೆ ಸಮಜಾಯಿಸುತ್ತಿರುವಾಗಲೇ ಬ್ರಾಹ್ಮಣ ಶಿರೋಮಣಿ ಜಾಬಾಲಿಯು ರಾಮನಲ್ಲಿ ಹೀಗೆ ಧರ್ಮವಿರುದ್ಧವಾದ ಮಾತನ್ನು ಹೇಳಿದರು .॥1॥

ಮೂಲಮ್ - 2

ಸಾಧು ರಾಘವ ಮಾ ಭೂತ್ತೇ ಬುದ್ಧಿರೇವಂ ನಿರರ್ಥಿಕಾ ।
ಪ್ರಾಕೃತಸ್ಯ ನರಸ್ಯೇವ ಹ್ಯಾರ್ಯಬುದ್ಧೇಸ್ತಪಸ್ವಿನಃ ॥

ಅನುವಾದ

ರಘುನಂದನ! ನೀನು ಹೇಳಿದುದು ಸರಿಯೇ, ಆದರೂ ನೀನು ಶ್ರೇಷ್ಠ ಬುದ್ಧಿವಂತ ಮತ್ತು ತಪಸ್ವಿಯಾಗಿರುವೆ; ಆದ್ದರಿಂದ ನೀನು ಸಾಧಾರಣ ಮನುಷ್ಯನಂತೆ ಇಂತಹ ನಿರರ್ಥಕ ವಿಚಾರ ಮನಸ್ಸಿಗೆ ತರಬಾರದು.॥2॥

ಮೂಲಮ್ - 3

ಕಃ ಕಸ್ಯ ಪುರುಷೋ ಬಂಧುಃ ಕಿಮಾಪ್ಯಂ ಕಸ್ಯ ಕೇನಚಿತ್ ।
ಏಕೋ ಹಿ ಜಾಯತೇ ಜಂತುರೇಕ ಏವ ವಿನಶ್ಯತಿ ॥

ಅನುವಾದ

ಜಗತ್ತಿನಲ್ಲಿ ಯಾರು ಯಾರ ಬಂಧು ಆಗಿದ್ದಾನೆ, ಯಾರಿಂದ ಯಾರಿಗೆ ಏನು ಪಡೆಯುವುದಿದೆ? ಜೀವಿಯು ಒಬ್ಬನೇ ಹುಟ್ಟಿ ಒಬ್ಬನೇ ಸತ್ತುಹೋಗುವನು.॥3॥

ಮೂಲಮ್ - 4

ತಸ್ಮಾನ್ಮಾತಾ ಪಿತಾ ಚೇತಿರಾಮ ಸಜ್ಜೇತ ಯೋ ನರಃ ।
ಉನ್ಮತ್ತ ಇವ ಸ ಜ್ಞೇಯೋ ನಾಸ್ತಿ ಕಶ್ಚಿದ್ಧಿ ಕಸ್ಯಚಿತ್ ॥

ಅನುವಾದ

ಆದ್ದರಿಂದ ಶ್ರೀರಾಮಾ! ಇವನು ತಂದೆ, ಇವಳು ತಾಯಿ, ಮುಂತಾಗಿ ಇಂತಹವರಲ್ಲಿ ಆಸಕ್ತನಾಗುವವನು ಹುಚ್ಚನೇ ಸರಿ. ಏಕೆಂದರೆ ಇಲ್ಲಿ ಯಾರೂ ಯಾರವನೂ ಅಲ್ಲ.॥4॥

ಮೂಲಮ್ - 5

ಯಥಾ ಗ್ರಾಮಾಂತರಂ ಗಚ್ಛನ್ ನರಃ ಕಶ್ಚಿದ್ ಬಹಿರ್ವಸೇತ್ ।
ಉತ್ಸೃಜ್ಯ ಚ ತಮಾವಾಸಂ ಪ್ರತಿಷ್ಠೇತಾಪರೇಹನಿ ॥

ಮೂಲಮ್ - 6

ಏವಮೇವ ಮನುಷ್ಯಾಣಾಂ ಪಿತಾ ಮಾತಾ ಗೃಹಂ ವಸು ।
ಆವಾಸಮಾತ್ರಂ ಕಾಕುತ್ಸ್ಥ ಸಜ್ಜಂತೇ ನಾತ್ರ ಸಜ್ಜನಾಃ ॥

ಅನುವಾದ

ಯಾವನಾದರೂ ಬೇರೆ ಊರಿಗೆ ಹೋಗುವಾಗ ಯಾವುದೋ ಧರ್ಮಶಾಲೆಯಲ್ಲಿ ಒಂದು ರಾತ್ರಿ ತಂಗಿದ್ದು, ಮರುದಿನ ಅದನ್ನು ಬಿಟ್ಟು ಮುಂದಕ್ಕೆ ಹೋಗುವಂತೆಯೇ ತಂದೆ, ತಾಯಿ, ಮನೆ, ಸಂಪತ್ತು-ಇವು ಮನುಷ್ಯರ ಆವಾಸ ಮಾತ್ರವಾಗಿವೆ. ಕಾಕುತ್ಸ್ಥನೇ! ಇವುಗಳಲ್ಲಿ ಸಜ್ಜನರು ಆಸಕ್ತರಾಗುವುದಿಲ್ಲ.॥5-6॥

ಮೂಲಮ್ - 7

ಪಿತ್ರ್ಯಂ ರಾಜ್ಯಂ ಸಮುತ್ಸೃಜ್ಯ ಸ ನಾರ್ಹಸಿ ನರೋತ್ತಮ ।
ಆಸ್ಥಾತುಂ ಕಾಪಥಂ ದುಃಖಂ ವಿಷಮಂಬಹುಕಂಟಕಮ್ ॥

ಅನುವಾದ

ಆದ್ದರಿಂದ ನರಶ್ರೇಷ್ಠನೇ! ನೀನು ತಂದೆಯ ರಾಜ್ಯವನ್ನು ಬಿಟ್ಟು ಈ ದುಃಖಮಯ ಹಳ್ಳ-ತಿಟ್ಟು, ಮುಳ್ಳುಗಳಿಂದ ಕೂಡಿದ ಕಾಡಿನ ಕೆಟ್ಟ ದಾರಿಯಲ್ಲಿ ನಡೆಯಬಾರದು.॥7॥

ಮೂಲಮ್ - 8

ಸಮೃದ್ಧಾಯಾಮಯೋಧ್ಯಾಯಾಮಾತ್ಮಾನಮಭಿಷೇಚಯ ।
ಏಕವೇಣೀಧರಾ ಹಿ ತ್ವಾ ನಗರೀ ಸಂಪ್ರತೀಕ್ಷತೇ ॥

ಅನುವಾದ

ನೀನು ಸಮೃದ್ಧಿಶಾಲಿನೀ ಅಯೋಧ್ಯೆಯಲ್ಲಿ ರಾಜನಾಗಿ ಪಟ್ಟಾಭಿಷಿಕ್ತನಾಗು. ಆ ನಗರಿಯು ವಿರಹಿಣೀ ನಾರಿಯಂತೆ ಏಕವೇಣಿಧರೆಯಾಗಿ ನಿನ್ನನ್ನು ಪ್ರತೀಕ್ಷಿಸುತ್ತಿದೆ.॥8॥

ಮೂಲಮ್ - 9

ರಾಜಭೋಗಾನನುಭವನ್ ಮಹಾರ್ಹಾನ್ಪಾರ್ಥಿವಾತ್ಮಜ ।
ವಿಹರತ್ವಮಯೋಧ್ಯಾಯಾಂ ಯಥಾ ಶಕ್ರಸ್ತ್ರಿವಿಷ್ಟಪೇ ॥

ಅನುವಾದ

ರಾಜಕುಮಾರ! ದೇವೇಂದ್ರನು ಸ್ವರ್ಗದಲ್ಲಿ ವಿಹರಿಸುವಂತೆಯೇ ನೀನು ಬಹುಮೂಲ್ಯ ರಾಜಭೋಗಗಳನ್ನು ಉಪಭೋಗಿಸುತ್ತಾ ಅಯೋಧ್ಯೆಯಲ್ಲಿ ವಿಹಾರಮಾಡು.॥9॥

ಮೂಲಮ್ - 10

ನ ತೇ ಕಶ್ಚಿದ್ದಶರಥಸ್ತ್ವಂ ಚ ತಸ್ಯ ಚ ಕಶ್ಚನ ।
ಅನ್ಯೋರಾಜಾ ತ್ವಮನ್ಯಸ್ತು ತಸ್ಮಾತ್ಕುರು ಯದುಚ್ಯತೇ ॥

ಅನುವಾದ

ದಶರಥರಾಜನು ನಿನಗೆ ಏನೂ ಆಗಿರಲಿಲ್ಲ ಹಾಗೂ ನೀನೂ ಅವನಿಗೆ ಏನೂ ಅಲ್ಲ. ರಾಜನು ಬೇರೆಯಾಗಿದ್ದನು, ನೀನೂ ಬೇರೆಯಾಗಿರುವೆ; ಆದ್ದರಿಂದ ನಾನು ಹೇಳುವಂತೆ ಮಾಡು.॥10॥

ಮೂಲಮ್ - 11

ಬೀಜಮಾತ್ರಂ ಪಿತಾ ಜಂತೋಃ ಶುಕ್ರಂ ಶೋಣಿತಮೇವ ಚ ।
ಸಂಯುಕ್ತಮೃತುಮನ್ಮಾತ್ರಾ ಪುರುಷ್ಯಸೇಹ ಜನ್ಮ ತತ್ ॥

ಅನುವಾದ

ತಂದೆಯು ಜೀವಿಯ ಜನ್ಮದಲ್ಲಿ ನಿಮಿತ್ತ ಕಾರಣ ಮಾತ್ರನಾಗಿರುತ್ತಾನೆ. ವಾಸ್ತವವಾಗಿ ಋತುಮತಿ ತಾಯಿಯ ಮೂಲಕ ಗರ್ಭದಲ್ಲಿ ಧರಿಸಿದ ವೀರ್ಯ ಮತ್ತು ರಜದ ಪರಸ್ಪರ ಸಂಯೋಗವಾದಾಗ ಪುರುಷನು ಇಲ್ಲಿ ಹುಟ್ಟುವನು.॥11॥

ಮೂಲಮ್ - 12

ಗತಃ ಸ ನೃಪತಿಸ್ತತ್ರ ಗಂತವ್ಯಂ ಯತ್ರ ತೇನ ವೈ ।
ಪ್ರವೃತ್ತಿರೇಷಾ ಭೂತಾನಾಂತ್ವಂ ತು ಮಿಥ್ಯಾ ವಿಹನ್ಯಸೇ ॥

ಅನುವಾದ

ರಾಜನು ಹೋಗಬೇಕಾದಲ್ಲಿಗೆ ಹೊರಟುಹೋದನು. ಇದು ಪ್ರಾಣಿಗಳಿಗೆ ಸ್ವಾಭಾವಿಕ ಸ್ಥಿತಿಯಾಗಿದೆ. ನೀನಾದರೋ ವ್ಯರ್ಥವಾಗಿ ಕಷ್ಟಪಡುತ್ತಿರುವೆ.॥12॥

ಮೂಲಮ್ - 13

ಅರ್ಥಧರ್ಮಪರಾ ಯೇ ಯೇ ತಾಂಸ್ತಾನ್ ಶೋಚಾಮಿ ನೇತರಾನ್ ।
ತೇ ಹಿ ದುಃಖಮಿಹ ಪ್ರಾಪ್ಯ ವಿನಾಶಂ ಪ್ರೇತ್ಯಲೇಭೀರೇ ॥

ಅನುವಾದ

ಪ್ರಾಪ್ತವಾದ ಅರ್ಥ ವನ್ನು ಪರಿತ್ಯಾಗ ಮಾಡಿ ಧರ್ಮ ಪರಾಯಣರಾಗಿರುವರೋ, ಅವರಿಗಾಗಿ ನಾನು ಶೋಕಿಸುತ್ತೇನೆ, ಬೇರೆಯವರಿಗೆ ಶೋಕಿಸುವುದಿಲ್ಲ. ಅವರು ಈ ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಕೇವಲ ದುಃಖವನ್ನು ಅನುಭವಿಸಿ ಸತ್ತ ಬಳಿಕ ನಾಶವಾಗಿ ಹೋಗುತ್ತಾರೆ.॥13॥

ಮೂಲಮ್ - 14

ಅಷ್ಟಕಾಪಿತೃದೈವತ್ಯಮಿತ್ಯಯಂ ಪ್ರಸೃತೋ ಜನಃ ।
ಅನ್ನಸ್ಯೋಪದ್ರವಂ ಪಶ್ಯ ಮೃತೋ ಹಿ ಕಿಮಶಿಷ್ಯತಿ ॥

ಅನುವಾದ

ಅಷ್ಟಕಾದಿ ಶ್ರಾದ್ಧಗಳಲ್ಲಿ ಅವುಗಳ ದೇವತೆಗಳು ಪಿತೃಗಳಾಗಿದ್ದಾರೆ-ಶ್ರಾದ್ಧದ ದಾನ ಪಿತೃಗಳಿಗೆ ಸಿಗುತ್ತದೆ; ಹೀಗೆ ಯೋಚಿಸಿಯೇ ಜನರು ಶ್ರಾದ್ಧದಲ್ಲಿ ಪ್ರವೃತ್ತರಾಗುತ್ತಾರೆ. ಆದರೆ ವಿಚಾರ ಮಾಡಿ ನೋಡಿದರೆ ಇದರಲ್ಲಿ ಅನ್ನದ ನಾಶವಾಗುತ್ತದೆ. ಸತ್ತಿರುವ ಮನುಷ್ಯನು ಏನು ತಾನೇ ತಿನ್ನುವನು.॥14॥

ಮೂಲಮ್ - 15

ಯದಿ ಭುಕ್ತಮಿಹಾನ್ಯೇನ ದೇಹಮನ್ಯಸ್ಯ ಗಚ್ಛತಿ ।
ದದ್ಯಾತ್ಪ್ರವಸತಾಂ ಶ್ರಾದ್ಧಂ ನ ತತ್ಪಥ್ಯಶನಂ ಭವೇತ್ ॥

ಅನುವಾದ

ಇಲ್ಲಿ ಒಬ್ಬನು ತಿಂದ ಅನ್ನವು ಇನ್ನೊಬ್ಬನ ಶರೀರಕ್ಕೆ ಹೋಗುವುದಾದರೆ ಪರದೇಶಕ್ಕೆ ಹೋಗುವವರಿಗೆ ಶ್ರಾದ್ಧವನ್ನೇ ಮಾಡಿಬಿಡಬೇಕು; ಅವರಿಗೆ ದಾರಿಗಾಗಿ ಭೋಜನ ಕೊಡುವುದು ಉಚಿತವಲ್ಲ.॥15॥

ಮೂಲಮ್ - 16

ದಾನಸಂವನನಾ ಹ್ಯೇತೇ ಗ್ರಂಥಾ ಮೇಧಾವಿಭಿಃಕೃತಾಃ ।
ಯಜಸ್ವ ದೇಹೀ ದೀಕ್ಷಸ್ವ ತಪಸ್ತಪ್ಯಸ್ವ ಸಂತ್ಯಜ ॥

ಅನುವಾದ

ದೇವತೆಗಳಿಗಾಗಿ ಯಜ್ಞಮಾಡಿ, ಪೂಜೆ ಮಾಡಿ, ದಾನ ಕೊಡಿರಿ, ಯಜ್ಞ ದೀಕ್ಷಿತರಾಗಿರಿ, ತಪಸ್ಸು ಮಾಡಿರಿ ಹಾಗೂ ಮನೆ-ಮಠ ಬಿಟ್ಟು ಸಂನ್ಯಾಸಿಗಳಾಗಿ ಇತ್ಯಾದಿ ಮಾತನ್ನು ಹೇಳುವ ಗ್ರಂಥಗಳನ್ನು ಬುದ್ಧಿವಂತ ಮನುಷ್ಯರು ದಾನದ ಕಡೆಗೆ ಜನರನ್ನು ಪ್ರವೃತ್ತಗೊಳಿಸಲೆಂದೆ ಬರೆದಿರುವರು.॥16॥

ಮೂಲಮ್ - 17

ಸ ನಾಸ್ತಿ ಪರಮಿತ್ಯೇತತ್ ಕುರು ಬುದ್ಧಿಂ ಮಹಾಮತೇ ।
ಪ್ರತ್ಯಕ್ಷಂ ಯತ್ತದಾತಿಷ್ಠ ಪರೋಕ್ಷಂ ಪೃಷ್ಠತಃ ಕುರು ॥

ಅನುವಾದ

ಆದ್ದರಿಂದ ಮಹಾಮತೇ! ಈ ಲೋಕವನ್ನು ಬಿಟ್ಟು ಬೇರೆ ಯಾವ ಲೋಕವೂ ಇಲ್ಲ ಎಂಬುದನ್ನು ನೀನು ನಿನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೋ. (ಆದ್ದರಿಂದ ಅಲ್ಲಿ ಫಲ ಭೋಗಿಸಲಿಕ್ಕಾಗಿ ಧರ್ಮವೇ ಮೊದಲಾದವುಗಳ ಪಾಲನೆಯ ಆವಶ್ಯಕವಿಲ್ಲ) ಪ್ರತ್ಯಕ್ಷ ರಾಜ್ಯಲಾಭವನ್ನು ಆಶ್ರಯಿಸು, ಪರೋಕ್ಷ (ಪಾರಲೌಕಿಕ ಲಾಭ)ವನ್ನು ಹಿಂದಕ್ಕೆ ತಳ್ಳಿಬಿಡು.॥17॥

ಮೂಲಮ್ - 18

ಸತಾಂ ಬುದ್ಧಿಂ ಪುರಸ್ಕೃತ್ಯ ಸರ್ವಲೋಕನಿದರ್ಶಿನೀಮ್ ।
ರಾಜ್ಯಂ ಸತ್ವಂ ನಿಗೃಹ್ಣೀಷ್ವ ಭರತೇನ ಪ್ರಸಾದಿತಃ ॥

ಅನುವಾದ

ಸತ್ಪುರುಷರ ಬುದ್ಧಿಯು ಜನರಿಗೆ ದಾರಿತೋರುವಂತಹುದಾದ ಕಾರಣ ಪ್ರಮಾಣಭೂತವಾಗಿದೆ. ಭರತನ ಆಗ್ರಹವನ್ನು ಮುಂದೆ ಮಾಡಿ ನೀನು ಅಯೋಧ್ಯೆಯ ರಾಜ್ಯವನ್ನು ಸ್ವೀಕರಿಸು.॥18॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಎಂಟನೆಯ ಸರ್ಗ ಪೂರ್ಣವಾಯಿತು ॥108॥