वाचनम्
ಭಾಗಸೂಚನಾ
ಭರತನು ಶ್ರೀರಾಮನಲ್ಲಿ ಅಯೋಧ್ಯೆಗೆ ಬಂದು ರಾಜ್ಯವನ್ನು ಸ್ವೀಕರಿಸುವಂತೆ ಹೇಳಿದುದು, ಶ್ರೀರಾಮನು ಜೀವನದ ಅನಿತ್ಯತೆಯನ್ನು ಪ್ರತಿಪಾದಿಸುತ್ತಾ ತಂದೆಯ ಅವಸಾನಕ್ಕಾಗಿ ದುಃಖಪಡದಂತೆ ಸಮಾಧಾನ ಹೇಳಿ, ತಂದೆಯ ಆಜ್ಞೆಯನ್ನು ಪರಿಪಾಲಿಸುವ ಸಲುವಾಗಿಯೇ ರಾಜ್ಯಾಧಿಕಾರವನ್ನು ವಹಿಸುವುದಿಲ್ಲವೆಂದೂ, ಅರಣ್ಯದಲ್ಲಿಯೇ ಇರುವುದಾಗಿಯೂ ಭರತನಿಗೆ ದೃಢಪಡಿಸಿದುದು
ಮೂಲಮ್ - 1
ತತಃ ಪುರುಷಸಿಂಹಾನಾಂ ವೃತಾನಾಂ ತೈಃ ಸುಹೃದ್ಗಣೈಃ ।
ಶೋಚತಾಮೇವ ರಜನೀ ದುಃಖೇನ ವ್ಯತ್ಯವರ್ತತ ॥
ಮೂಲಮ್ - 2
ರಜನ್ಯಾಂ ಸುಪ್ರಭಾತಾಯಾಂ ಭ್ರಾತರಸ್ತೇ ಸುಹೃದ್ವತಾಃ ।
ಮಂದಾಕಿನ್ಯಾಂ ಹುತಂಜಪ್ಯಂಕೃತ್ವಾ ರಾಮಮುಪಾಗಮನ್ ॥
ಅನುವಾದ
ತನ್ನ ಸುಹೃದರೊಂದಿಗೆ ಸುತ್ತುವರೆದು ಕುಳಿತಿರುವ ಪುರುಷಸಿಂಹ ಶ್ರೀರಾಮನೇ ಮೊದಲಾದ ಸಹೋದರರ ಆ ರಾತ್ರಿಯು ತಂದೆಯ ಮೃತ್ಯುವಿನ ದುಃಖದಿಂದ ಶೋಕ ಮಾಡುತ್ತಲೇ ಕಳೆದುಹೋಯಿತು. ಬೆಳಗಾದಾಗ ಭರತಾದಿ ಮೂವರು ಸಹೋದರರು ಸುಹೃದರೊಂದಿಗೆ ಮಂದಾಕಿನಿಯ ತೀರಕ್ಕೆ ಹೋಗಿ ಸ್ನಾನ, ಜಪ, ಹೋಮಾದಿಗಳನ್ನು ಮಾಡಿ ಪುನಃ ಶ್ರೀರಾಮನ ಬಳಿಗೆ ಮರಳಿ ಬಂದರು.॥1-2॥
ಮೂಲಮ್ - 3
ತೂಷ್ಣೀಂ ತೇ ಸಮುಪಾಸೀನಾ ನಕಶ್ಚಿತ್ ಕಿಂಚಿದಬ್ರವೀತ್ ।
ಭರತಸ್ತು ಸುಹೃನ್ಮಧ್ಯೇ ರಾಮಂ ವಚನಮಬ್ರವೀತ್ ॥
ಅನುವಾದ
ಅಲ್ಲಿಗೆ ಬಂದು ಎಲ್ಲರೂ ಮೌನವಾಗಿ ಕುಳಿತುಬಿಟ್ಟರು. ಯಾರು ಏನನ್ನೂ ಮಾತನಾಡುತ್ತಿರಲಿಲ್ಲ. ಆಗ ಸುಹೃದರ ನಡುವೆ ಕುಳಿತಿರುವ ಭರತನು ಶ್ರೀರಾಮನಲ್ಲಿ ಹೀಗೆ ಹೇಳಿದನು.॥3॥
ಮೂಲಮ್ - 4
ಸಾಂತ್ವಿತಾ ಮಾಮಿಕಾ ಮಾತಾ ದತ್ತಂ ರಾಜ್ಯಮಿದಂ ಮಮ ।
ತದ್ ದದಾಮಿ ತವೈವಾಹಂ ಭುಂಕ್ಷ್ವ ರಾಜ್ಯಮಕಂಟಕಮ್ ॥
ಅನುವಾದ
ಅಣ್ಣಾ! ತಂದೆಯವರು ವರಗಳನ್ನು ಕೊಟ್ಟು ನನ್ನ ತಾಯಿಯನ್ನು ಸಂತುಷ್ಟಗೊಳಿಸಿದರು ಹಾಗೂ ತಾಯಿಯು ಈ ರಾಜ್ಯವನ್ನು ನನಗೆ ಕೊಟ್ಟಳು. ಈಗ ನಾನು ನನ್ನ ಕಡೆಯಿಂದ ಈ ಅಕಂಟಕ ರಾಜ್ಯವನ್ನು ನಿಮಗೆ ಅರ್ಪಿಸುತ್ತಿದ್ದೇನೆ. ನೀನು ಅದನ್ನು ಪಾಲಿಸುತ್ತಾ ಅನುಭವಿಸು.॥4॥
ಮೂಲಮ್ - 5
ಮಹತೇವಾಂಬುವೇಗೇನ ಭಿನ್ನಃ ಸೇತುರ್ಜಲಾಗಮೇ ।
ದುರಾವರಂ ತ್ವದನ್ಯೇನ ರಾಜ್ಯಖಂಡಮಿದಂ ಮಹತ್ ॥
ಅನುವಾದ
ಮಳೆಗಾಲದ ನೀರಿನ ಮಹಾವೇಗದಿಂದ ಕಡಿದುಹೋದ ಸೇತುವೆಯಂತೆ ಈ ವಿಶಾಲ ರಾಜ್ಯಖಂಡವನ್ನು ಕಾಪಾಡುವುದು ನೀನಲ್ಲದೆ ಬೇರೆಯವರಿಗೆ ಅತ್ಯಂತ ಕಠಿಣವಾಗಿದೆ.॥5॥
ಮೂಲಮ್ - 6
ಗತಿಂ ಖರ ಇವಾಶ್ವಸ್ಯ ತಾರ್ಕ್ಷ್ಯಸ್ಯೇವ ಪತಂತ್ರಿಣಃ ।
ಅನುಗಂತುಂನ ಶಕ್ತಿರ್ಮೇ ಗತಿಂ ತವ ಮಹೀಪತೇ ॥
ಅನುವಾದ
ಕುದುರೆ ಯಷ್ಟು ಕತ್ತೆಯು ಓಡಲಾರದು, ಗರುಡನಷ್ಟು ವೇಗವಾಗಿ ಇತರ ಪಕ್ಷಿಗಳು ಹಾರಲಾರವು. ಹಾಗೆಯೇ ಪ್ರಜೆಗಳ ಭರಣ-ಪೋಷಣೆಗಳಲ್ಲಿ ನಿನ್ನನ್ನು ಅನುಸರಿಸುವ ಸಾಮರ್ಥ್ಯ ನನಗಿಲ್ಲ.॥6॥
ಮೂಲಮ್ - 7
ಸುಜೀವಂ ನಿತ್ಯಶಸ್ತಸ್ಯ ಯಃ ಪರೈರುಪಜೀವ್ಯತೇ ।
ರಾಮ ತೇನ ತು ದುರ್ಜೀವಂ ಯಃ ಪರಾನುಪಜೀವತಿ ॥
ಅನುವಾದ
ಶ್ರೀರಾಮಾ! ಯಾರ ಬಳಿಗೆ ಬಂದು ಇತರ ಜನರು ಜೀವನ ನಿರ್ವಾಹ ಮಾಡುವರೋ, ಅವನ ಜೀವನವೇ ಉತ್ತಮವಾಗಿದೆ ಮತ್ತು ಯಾರು ಬೇರೆಯವರನ್ನು ಆಶ್ರಯಿಸಿ ಜೀವನ ನಿರ್ವಾಹ ಮಾಡುತ್ತಾನೋ ಅವನ ಜೀವನ ದುಃಖಮಯವಾಗಿದೆ. (ಆದ್ದರಿಂದ ನೀನೇ ರಾಜ್ಯವನ್ನು ಆಳುವುದು ಉಚಿತವಾಗಿದೆ).॥7॥
ಮೂಲಮ್ - 8
ಯಥಾ ತು ರೋಪಿತೋ ವೃಕ್ಷಃ ಪುರುಷೇಣ ವಿವರ್ಧಿತಃ ।
ಹ್ರಸ್ವಕೇನ ದುರಾರೋಹೋ ರೂಢಸ್ಕಂಧೋ ಮಹಾದ್ರುಮಃ ॥
ಮೂಲಮ್ - 9
ಸ ಯದಾ ಪುಷ್ಪಿತೋ ಭೂತ್ವಾ ಫಲಾನಿ ನ ವಿದರ್ಶಯೇತ್ ।
ಸ ತಾಂ ನಾನುಭವೇತ್ಪ್ರೀತಿಂ ಯಸ್ಯ ಹೇತೋಃ ಪ್ರರೋಪಿತಃ ॥
ಮೂಲಮ್ - 10
ಏಷೋಪಮಾ ಮಹಾಬಾಹೋ ತದರ್ಥಂ ವೇತ್ತು ಮರ್ಹಸಿ ।
ಯತ್ರ ತ್ವಮಸ್ಮಾನ್ ವೃಷಭೋ ಭರ್ತಾ ಭೃತ್ಯಾನ್ನ ಶಾಧಿ ಹಿ ॥
ಅನುವಾದ
ಫಲದ ಇಚ್ಛೆಯುಳ್ಳ ಯಾವನೋ ಮನುಷ್ಯನು ಒಂದು ಮರವನ್ನು ನೆಟ್ಟನು, ಅದನ್ನು ಸಾಕಿ ದೊಡ್ಡದಾಗಿಸಿದನು; ಮತ್ತೆ ಅದು ಬೆಳೆದು ವಿಶಾಲ ವೃಕ್ಷವಾಯಿತು; ಸಾಮಾನ್ಯ ಮನುಷ್ಯನಿಗೆ ಹತ್ತಲು ಅತ್ಯಂತ ಕಠಿಣವಾಗಿತ್ತು. ಆ ವೃಕ್ಷದಲ್ಲಿ ಹೂವು ಬಿಟ್ಟು ಫಲವು ಕಾಣದಿದ್ದರೆ ಮರ ನೆಟ್ಟವನ ಉದ್ದೇಶ ಪೂರ್ಣವಾಗಲಾರದು. ಇಂತಹ ಸ್ಥಿತಿಯಲ್ಲಿ ಫಲದ ಪ್ರಾಪ್ತಿಯಾಗಲು ಆಶಿಸುತ್ತಿದ್ದ ಆ ಮರ ನೆಟ್ಟವನು ಸಂತೋಷವಾಗಿ ಇರಲಾರನು. ಮಹಾಬಾಹೋ! ಇದೊಂದು ಉಪಮೆಯಾಗಿದೆ. ಇದರ ಅರ್ಥ ನೀನೇ ತಿಳಿದುಕೋ. (ಅರ್ಥಾತ್ ತಂದೆಯವರು ನಿನ್ನಂತಹ ಸರ್ವಸದ್ಗುಣಸಂಪನ್ನ ಪುತ್ರನನ್ನು ಲೋಕರಕ್ಷಣೆಗಾಗಿ ಪಡೆದಿದ್ದನು. ನೀನು ರಾಜ್ಯಾಡಳಿತದ ಭಾರವನ್ನು ತನ್ನ ಕೈಗೆತ್ತಿಕೊಳ್ಳದಿದ್ದರೆ ಅವರ ಆ ಉದ್ದೇಶ ವ್ಯರ್ಥವಾಗುವುದು.) ಈ ರಾಜ್ಯಪಾಲನೆಯ ಸಂದರ್ಭದಲ್ಲಿ ನೀನು ಶ್ರೇಷ್ಠನಾಗಿದ್ದು, ಭರಣ-ಪೋಷಣೆಯಲ್ಲಿ ಸಮರ್ಥನಾಗಿದ್ದರೂ ಕೂಡ ಭೃತ್ಯರಾದ ನಮ್ಮನ್ನು ಶಾಸನ ಮಾಡದಿದ್ದರೆ ಹಿಂದಿನ ಉಪಮೆ ನಿನಗೆ ಅನ್ವಯಿಸುವುದು.॥8-10॥
ಮೂಲಮ್ - 11
ಶ್ರೇಣಯಸ್ತ್ವಾಂ ಮಹಾರಾಜ ಪಶ್ಯಂತ್ವಗ್ರ್ಯಾಶ್ಚ ಸರ್ವಶಃ ।
ಪ್ರತಪಂತಮಿವಾದಿತ್ಯಂ ರಾಜ್ಯಸ್ಥಿತಮರಿಂದಮಮ್ ॥
ಅನುವಾದ
ಮಹಾರಾಜಾ! ಬೇರೆ-ಬೇರೆ ಜಾತಿಗಳ ಜನರು, ಮುಖ್ಯ-ಮುಖ್ಯ ಪುರುಷರು ಎಲ್ಲೆಡೆ ಬೆಳಗುತ್ತಿರುವ ಸೂರ್ಯನಂತೆ ಸಿಂಹಾಸನದಲ್ಲಿ ವಿರಾಜಿಸುವ ಶತ್ರುದಮನ ನರೇಶನಾದ ನಿನ್ನನ್ನು ನೋಡಲಿ.॥11॥
ಮೂಲಮ್ - 12
ತಥಾನುಯಾನೇ ಕಾಕುತ್ಶ್ಥ ಮತ್ತಾ ನರ್ದಂತು ಕುಂಜರಾಃ ।
ಅಂತಃಪುರಗತಾ ನಾರ್ಯೋ ನಂದಂತು ಸುಸಮಾಹಿತಾಃ ॥
ಅನುವಾದ
ಕಕುತ್ಸ್ಥಕುಲಭೂಷಣ! ಹಾಗೆಯೇ ನೀನು ಅಯೋಧ್ಯೆಗೆ ಮರಳುವ ಸಮಯ ಮತ್ತಗಜಗಳು ಗರ್ಜಿಸಲಿ, ಅಂತಃ ಪುರದ ನಾರಿಯರು ಏಕಾಗ್ರಚಿತ್ತರಾಗಿ ಸಂತೋಷದಿಂದ ನಿನ್ನನ್ನು ಅಭಿನಂದಿಸಲಿ.॥12॥
ಮೂಲಮ್ - 13
ತಸ್ಯ ಸಾಧ್ವನುಮನ್ಯಂತ ನಾಗರಾ ವಿವಿಧಾ ಜನಾಃ ।
ಭರತಸ್ಯ ವಚಃ ಶ್ರುತ್ವಾ ರಾಮಂ ಪ್ರತ್ಯನುಯಾಚತಃ ॥
ಅನುವಾದ
ಈ ಪ್ರಕಾರ ಶ್ರೀರಾಮನಲ್ಲಿ ರಾಜ್ಯ ಸ್ವೀಕರಿಸಲು ಪ್ರಾರ್ಥಿಸುತ್ತಿದ್ದ ಭರತನ ಮಾತನ್ನು ಕೇಳಿ ನಗರದ ಬೇರೆ-ಬೇರೆ ಜನರು ಅದನ್ನು ಚೆನ್ನಾಗಿ ಅನು ಮೋದಿಸಿದರು.॥13॥
ಮೂಲಮ್ - 14
ತಮೇವಂ ದುಃಖಿತಂ ಪ್ರೇಕ್ಷ್ಯ ವಿಲಪಂತಂ ಯಶಸ್ವಿನಮ್ ।
ರಾಮಃ ಕೃತಾತ್ಮಾ ಭರತಂ ಸಮಾಶ್ವಾಸಯದಾತ್ಮವಾನ್ ॥
ಅನುವಾದ
ಹೀಗೆ ದುಃಖಿತನಾಗಿ ವಿಲಪಿಸುತ್ತ ಯಶಸ್ವಿಯಾದ ಭರತನನ್ನು ದೃಢಮನಸ್ಕನಾದ, ಧೀರನಾದ ಶ್ರೀರಾಮನು ನಾನಾ ವಿಧವಾದ ಸಾಂತ್ವನ ವಚನಗಳಿಂದ ಸಮಾಧಾನಪಡಿಸುತ್ತಾ ಇಂತೆಂದನು.॥14॥
ಮೂಲಮ್ - 15
ನಾತ್ಮನಃ ಕಾಮಕಾರೋ ಹಿ ಪುರುಷೋಽಯಮನೀಶ್ವರಃ ।
ಇತಶ್ಚೇತರಶ್ಚೈನಂ ಕೃತಾಂತಃ ಪರಿಕರ್ಷತಿ ॥
ಅನುವಾದ
ತಮ್ಮನೇ! ಈ ಜೀವನು ಈಶ್ವರನಂತೆ ಸ್ವತಂತ್ರನಲ್ಲ, ಆದ್ದರಿಂದ ಯಾರೂ ಇಲ್ಲಿ ತನ್ನ ಇಚ್ಛೆಗನುಸಾರ ಏನನ್ನೂ ಮಾಡಲಾರನು. ಕಾಲಪುರುಷನು ಆಕಡೆ - ಈಕಡೆ ಸೆಳೆಯುತ್ತಾ ಇರುತ್ತಾನೆ.॥15॥
ಮೂಲಮ್ - 16
ಸರ್ವೇ ಕ್ಷಯಾಂತಾ ನಿಚಯಾಃಪತನಾಂತಾಃ ಸಮುಚ್ಛ್ರಯಾಃ ।
ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಚ ಜೀವಿತಮ್ ॥
ಅನುವಾದ
ಸಮಸ್ತ ಸಂಗ್ರಹಗಳ ಅಂತ್ಯ ವಿನಾಶವಾಗಿದೆ. ಲೌಕಿಕ ಉನ್ನತಿಗಳ ಅಂತ್ಯಪತನವಾಗಿದೆ. ಸಂಯೋಗದ ಅಂತ್ಯ ವಿಯೋಗ ಮತ್ತು ಜೀವನದ ಅಂತ್ಯ ಮರಣವಾಗಿದೆ.॥16॥
ಮೂಲಮ್ - 17
ಯಥಾ ಫಲಾನಾಂ ಪಕ್ವಾನಾಂ ನಾನ್ಯತ್ರ ಪತನಾದ್ ಭಯಮ್ ।
ಏವಂನರಸ್ಯ ಜಾತಸ್ಯ ನಾನ್ಯತ್ರ ಮರಣಾದ್ಭಯಮ್ ॥
ಅನುವಾದ
ಮಾಗಿದ ಹಣ್ಣುಗಳಿಗೆ ಬಿದ್ದು ಹೋಗುವ ಭಯವಲ್ಲದೇ ಬೇರೆ ಯಾವ ಭಯವೂ ಇಲ್ಲವೋ ಹಾಗೆಯೇ ಹುಟ್ಟಿದ ಮನುಷ್ಯನಿಗೆ ಮರಣದ ಹೊರತಾಗಿ ಬೇರೆ ಯಾವ ಭಯವೂ ಇಲ್ಲ.॥17॥
ಮೂಲಮ್ - 18
ಯಥಾಽಽಗಾರಂ ದೃಢಸ್ತೂಣಂ ಜೀರ್ಣಂ ಭೂತ್ವೋಪಸೀದತಿ ।
ತಥಾವಸೀದಂತಿ ನರಾ ಜರಾಮೃತ್ಯುವಶಂಗತಾಃ ॥
ಅನುವಾದ
ದೃಢವಾದ ಕಂಬಗಳಿರುವ ಸೌಧವು ಹಳೆಯದಾದಾಗ ಬಿದ್ದು ಹೋಗುತ್ತದೆ, ಹಾಗೆಯೇ ಮನುಷ್ಯನು ಮುಪ್ಪು ಮತ್ತು ಮೃತ್ಯುವಿಗೆ ವಶನಾಗಿ ನಾಶವಾಗಿ ಹೋಗುತ್ತಾನೆ.॥18॥
ಮೂಲಮ್ - 19
ಅತ್ಯೇತಿ ರಜನೀ ಯಾ ತು ಸಾ ನ ಪ್ರತಿನಿವರ್ತತೇ ।
ಯಾತ್ಯೇವ ಯಮುನಾ ಪೂರ್ಣಂ ಸಮುದ್ರಮುದಕಾರ್ಣವಮ್ ॥
ಅನುವಾದ
ಕಳೆದುಹೋದ ರಾತ್ರಿಯು ಹಿಂದಿರುಗಿ ಬರಲಾರದು. ಯಮುನೆಯು ಜಲದಿಂದ ತುಂಬಿದ ಸಮುದ್ರದ ಕಡೆಗೇ ಹರಿದುಹೋಗುತ್ತದೆ, ಆ ಕಡೆಯಿಂದ ಮರಳಿ ಬರಲಾರದು.॥19॥
ಮೂಲಮ್ - 20
ಅಹೋರಾತ್ರಾಣಿ ಗಚ್ಛಂತಿ ಸರ್ವೇಷಾಂ ಪ್ರಾಣಿನಾಮಿಹ ।
ಆಯೂಂಷಿ ಕ್ಷಪಯಂತ್ಯಾಶು ಗ್ರೀಷ್ಮೇ ಜಲಮಿವಾಂಶವಃ ॥
ಅನುವಾದ
ಸೂರ್ಯಕಿರಣಗಳು ಗ್ರೀಷ್ಮ ಋತುವಿನಲ್ಲಿ ನೀರನ್ನು ಶೀಘ್ರವಾಗಿ ಇಂಗಿಸುವಂತೆಯೇ, ಹಗಲು-ಇರುಳು ಒಂದೇ ಸಮನೆ ಕಳೆಯುತ್ತಾ ಜಗತ್ತಿನಲ್ಲಿ ಎಲ್ಲ ಪ್ರಾಣಿಗಳ ಆಯುಸ್ಸನ್ನು ತೀವ್ರಗತಿಯಿಂದ ನಾಶಮಾಡುತ್ತಾ ಇವೆ.॥20॥
ಮೂಲಮ್ - 21
ಆತ್ಮಾನಮನುಶೋಚ ತ್ವಂ ಕಿಮನ್ಯಮನುಶೋಚಸಿ ।
ಆಯುಸ್ತು ಹೀಯತೇ ಯಸ್ಯ ಸ್ಥಿತಸ್ಯಾಸ್ಯ ಗತಸ್ಯ ಚ ॥
ಅನುವಾದ
ನೀನು ನಿನ್ನ ಬಗ್ಗೆಯೇ ಚಿಂತಿಸು, ಉಳಿದವರ ವಿಷಯವಾಗಿ ಏಕೆ ಚಿಂತಿಸುತ್ತಿರುವೆ? ಯಾವನಾದರೂ ಒಂದೆಡೆ ನಿಂತಿದ್ದರೂ, ಸಂಚರಿಸುತ್ತಿದ್ದರೂ, ಅವನ ಆಯುಸ್ಸು ನಿರಂತರ ಕ್ಷೀಣವಾಗುತ್ತಾ ಇರುತ್ತದೆ.॥21॥
ಮೂಲಮ್ - 22
ಸಹೈವ ಮೃತ್ಯುರ್ವ್ರಜತಿ ಸಹ ಮೃತ್ಯುರ್ನಿಷೀದತಿ ।
ಗತ್ವಾ ಸುದೀರ್ಘಮಧ್ವಾನಂ ಸಹ ಮೃತ್ಯುರ್ನಿರ್ವತೇ ॥
ಅನುವಾದ
ಮೃತ್ಯುವು ಸದಾ ಜೊತೆಯಲ್ಲೇ ನಡೆಯುತ್ತಿದೆ, ಜೊತೆಯಲ್ಲೇ ಕುಳಿತಿರುತ್ತದೆ, ದೀರ್ಘಯಾತ್ರೆಯಲ್ಲಿಯೂ ಜೊತೆಗೆ ಹೋಗಿ, ಮನುಷ್ಯನೊಂದಿಗೆ ಮರಳುತ್ತದೆ.॥22॥
ಮೂಲಮ್ - 23
ಗಾತ್ರೇಷು ವಲಯಃ ಪ್ರಾಪ್ತಾಃ ಶ್ವೇತಾಶ್ಚೈವ ಶಿರೋರುಹಾಃ ।
ಜರಯಾ ಪುರುಷೋ ಜೀರ್ಣಃ ಕಿಂ ಹಿ ಕೃತ್ವಾ ಪ್ರಭಾವಯೇತ್ ॥
ಅನುವಾದ
ಶರೀರದಲ್ಲಿ ನಿರಿಗೆಗಳು ಬಿದ್ದವು, ತಲೆಯ ಕೂದಲು ಬೆಳ್ಳಗಾದವು, ಮತ್ತೆ ವೃದ್ಧಾವಸ್ಥೆಯಿಂದ ಜೀರ್ಣವಾದ ಮನುಷ್ಯನು ಯಾವ ಉಪಾಯಮಾಡಿ ಮೃತ್ಯುವಿನ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಮರ್ಥನಾಗುವನು.॥23॥
ಮೂಲಮ್ - 24
ನಂದಂತ್ಯುದಿತ ಆದಿತ್ಯೇ ನಂದಂತ್ಯಸ್ತಮಿತೇಽಹನಿ ।
ಆತ್ಮನೋ ನಾವಬುಧ್ಯಂತೇ ಮನುಷ್ಯಾ ಜೀವಿತಕ್ಷಯಮ್ ॥
ಅನುವಾದ
ಸೂರ್ಯೋದಯವಾದಾಗ ಜನರು ಸಂತೋಷಪಡುತ್ತಾರೆ, ಸೂರ್ಯಾಸ್ತವಾದಾಗಲೂ ಖುಷಿಪಡುತ್ತಾರೆ. ಆದರೆ ಪ್ರತಿದಿನ ತಮ್ಮ ಜೀವನವು ನಾಶವಾಗುವುದನ್ನು ತಿಳಿಯುವುದೇ ಇಲ್ಲ.॥24॥
ಮೂಲಮ್ - 25
ಹೃಷ್ಯಂತ್ರ್ಯತುಮುಖಂ ದೃಷ್ಟ್ವಾ ನವಂನವಮಿವಾಗತಮ್ ।
ಋತೂನಾಂ ಪರಿವರ್ತೇನ ಪ್ರಾಣಿನಾಂ ಪ್ರಾಣಸಂಕ್ಷಯಃ ॥
ಅನುವಾದ
ಯಾವುದಾದರೂ ಋತುವು ಪ್ರಾರಂಭವಾದಾಗ ಅದು ಹೊಸದಾಗಿಯೇ ಬಂದಂತೆ (ಹಿಂದೆ ಬಂದೇ ಇಲ್ಲವೋ ಎಂಬಂತೆ) ತಿಳಿದು ಜನರು ಹರ್ಷಪಡುತ್ತಾರೆ, ಆದರೆ ಋತುಗಳ ಪರಿವರ್ತನೆಯಿಂದ ಪ್ರಾಣಿಗಳ ಆಯುಸ್ಸು ಕ್ರಮವಾಗಿ ಕ್ಷಯವಾಗುತ್ತಿರುವುದು ತಿಳಿಯುವುದೇ ಇಲ್ಲ.॥25॥
ಮೂಲಮ್ - 26
ಯಥಾ ಕಾಷ್ಠಂ ಚ ಕಾಷ್ಠಂಚಸಮೇಯಾತಾಂ ಮಹಾರ್ಣವೇ ।
ಸಮೇತ್ಯ ತು ವ್ಯಪೇಯಾತಾಂ ಕಾಲಮಾಸಾದ್ಯಕಂಚನ ॥
ಮೂಲಮ್ - 27
ಏವಂ ಭಾರ್ಯಾಶ್ಚ ಪುತ್ರಾಶ್ಚ ಜ್ಞಾತಯಶ್ಚ ವಸೂನಿ ಚ ।
ಸಮೇತ್ಯ ವ್ಯವಧಾವಂತಿ ಧ್ರುವೋ ಹ್ಯೇಷಾಂ ವಿನಾಭವಃ ॥
ಅನುವಾದ
ಮಹಾಸಮುದ್ರದಲ್ಲಿ ಅಲೆಗಳ ಹೊಡೆತದಿಂದ ಎರಡು ಕಟ್ಟಿಗೆಗಳು ಒಂದಾಗುತ್ತವೆ, ಕೆಲಸಮಯದಲ್ಲಿ ಅಗಲಿ ಹೋಗುತ್ತವೆ, ಹಾಗೆಯೇ ಪತ್ನೀ, ಪುತ್ರ, ಕುಟುಂಬ, ಧನ ಇವು ಒಮ್ಮೆ ಒಂದಾಗುತ್ತವೆ ಮತ್ತೆ ಅಗಲಿಹೋಗುತ್ತಾರೆ; ಏಕೆಂದರೆ ಇವುಗಳ ವಿಯೋಗ ಅವಶ್ಯವಾಗಿದೆ.॥26-27॥
ಮೂಲಮ್ - 28
ನಾತ್ರ ಕಶ್ಚಿದ್ಯಥಾಭಾವಂ ಪ್ರಾಣೀ ಸಮತಿವರ್ತತೇ ।
ತೇನ ತಸ್ಮಿನ್ನ ಸಾಮರ್ಥ್ಯಂ ಪ್ರೇತಸ್ಯಾಸ್ತ್ಯನುಶೋಚತಃ ॥
ಅನುವಾದ
ಈ ಜಗತ್ತಿನಲ್ಲಿ ಯಾವುದೇ ಪ್ರಾಣಿ ಆಯಾಕಾಲದಲ್ಲಿ ಉಂಟಾಗುವ ಹುಟ್ಟು-ಸಾವನ್ನು ಮೀರಲಾರದು. ಅದಕ್ಕಾಗಿ ಸತ್ತಿರುವ ಯಾವನಿಗಾದರೂ ಪದೇ-ಪದೇ ಅಳುವ ವ್ಯಕ್ತಿಯಲ್ಲಿಯೂ ತನ್ನ ಮೃತ್ಯುವನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ.॥28॥
ಮೂಲಮ್ - 29
ಯಥಾ ಹಿ ಸಾರ್ಥಂ ಗಚ್ಛಂತಂ ಬ್ರೂಯಾತ್ ಕಶ್ಚಿತ್ಪಥಿ ಸ್ಥಿತಃ ।
ಅಹಮಪ್ಯಾಗಮಿಷ್ಯಾಮಿ ಪೃಷ್ಠತೋ ಭವತಾಮಿತಿ ॥
ಮೂಲಮ್ - 30
ಏವಂ ಪೂರ್ವೈರ್ಗತೋ ಮಾರ್ಗಃ ಪೈತೃಪಿತಾಮಹೈರ್ಧ್ರುವಃ ।
ತಮಾಪನ್ನಃ ಕಥಂ ಶೋಚೇದ್ ಯಸ್ಯ ನಾಸ್ತಿವ್ಯತಿಕ್ರಮಃ ॥
ಅನುವಾದ
ಮುಂದಕ್ಕೆ ಸಾಗುತ್ತಿರುವ ಪ್ರಯಾಣಿಕರಲ್ಲಿ ಅಥವಾ ವ್ಯಾಪಾರಿಗಳ ಸಮುದಾಯದಲ್ಲಿ ದಾರಿಯಲ್ಲಿ ನಿಂತಿರುವ ದಾರಿಹೋಕ ನಾನು ನಿಮ್ಮೊಡನೆ ಬರುವೆನು ಎಂದು ಹೇಳಿ ಅವರ ಹಿಂದೆ-ಹಿಂದೆ ಹೋಗುವಂತೆಯೇ, ನಮ್ಮ ಪೂರ್ವಜರಾದ ಪಿತಾಮಹರು ಯಾವ ಮಾರ್ಗದಿಂದ ಹೋಗಿರುವರೋ, ಅದರಲ್ಲೇ ಹೋಗುವುದು ಅನಿವಾರ್ಯವಾಗಿದೆಯೋ, ಅದರಿಂದ ಬದುಕುಳಿಯುವ ಯಾವ ಉಪಾಯವೂ ಇಲ್ಲವೋ, ಅದೇ ಮಾರ್ಗದಲ್ಲಿ ಸ್ಥಿತನಾದ ಮನುಷ್ಯನು ಬೇರೆ ಯಾರಿಗಾದರೂ ಹೇಗೆ ಶೋಕಿಸಬಲ್ಲನು.॥29-30॥
ಮೂಲಮ್ - 31
ವಯಸಃ ಪತಮಾನಸ್ಯ ಸ್ರೋತಸೋ ವಾನಿವರ್ತಿನಃ ।
ಆತ್ಮಾ ಸುಖೇ ನಿಯೋಕ್ತವ್ಯಃ ಸುಖಭಾಜಃ ಪ್ರಜಾಃ ಸ್ಮೃತಾಃ ॥
ಅನುವಾದ
ನದಿಗಳ ಪ್ರವಾಹ ಹಿಂದಕ್ಕೆ ಮರಳಲಾರದಂತೆಯೇ ಪ್ರತಿದಿನ ಕಳೆದುಹೋದ ಸ್ಥಿತಿ ಮತ್ತೆ ಮರಳಿಬಾರದು. ಕ್ರಮವಾಗಿ ಅದರ ನಾಶವಾಗುತ್ತಾ ಇರುತ್ತದೆ, ಹೀಗೆ ಯೋಚಿಸಿ ಆತ್ಮವನ್ನು ಶ್ರೇಯಸ್ಸಿನ ಸಾಧನ ವಾದ ಧರ್ಮದಲ್ಲಿ ತೊಡಗಿಸಬೇಕು; ಏಕೆಂದರೆ ಎಲ್ಲ ಜನರು ತಮ್ಮ ಶ್ರೇಯಸ್ಸನ್ನು ಬಯಸುತ್ತಾರೆ.॥31॥
ಮೂಲಮ್ - 32
ಧರ್ಮಾತ್ಮಾ ಸುಶುಭೈಃ ಕೃತ್ಸೈಃ ಕ್ರತುಭಿಶ್ಚಾಪ್ತದಕ್ಷಿಣೈಃ ।
ಧೂತಪಾಪೋ ಗತಃ ಸ್ವರ್ಗಂ ಪಿತಾ ನಃಪೃಥಿವೀಪತಿಃ ॥
ಅನುವಾದ
ಅಪ್ಪಾ! ನಮ್ಮ ತಂದೆಯವರು ಧರ್ಮಾತ್ಮರಾಗಿದ್ದರು. ಅವರು ಸಾಕಷ್ಟು ದಕ್ಷಿಣೆಯನ್ನು ಕೊಟ್ಟು ಸಾಮಾನ್ಯವಾಗಿ ಎಲ್ಲ ಪರಮ ಶುಭಕರ ಯಜ್ಞಗಳನ್ನು ನೆರವೇರಿಸಿರುವರು. ಅವರ ಎಲ್ಲ ಪಾಪಗಳು ತೊಳೆದುಹೋಗಿದೆ. ಆದ್ದರಿಂದ ಆ ಮಹಾರಾಜರು ಸ್ವರ್ಗಲೋಕಕ್ಕೆ ಹೋಗಿರುವರು.॥32॥
ಮೂಲಮ್ - 33
ಭೃತ್ಯಾನಾಂ ಭರಣಾತ್ ಸಮ್ಯಕ್ ಪ್ರಜಾನಾಂ ಪರಿಪಾಲನಾತ್ ।
ಅರ್ಥಾದಾನಾಚ್ಚ ಧರ್ಮೇಣಪಿತಾ ನಸ್ತ್ರಿದಿವಂ ಗತಃ ॥
ಅನುವಾದ
ಅವರು ಯೋಗ್ಯರಾದ ಪರಿಜನರನ್ನು ಪೋಷಿಸಿದ್ದರು. ಪ್ರಜೆಗಳನ್ನು ಚೆನ್ನಾಗಿ ಪಾಲಿಸಿದ್ದರು. ಪ್ರಜೆಗಳಿಂದ ಧರ್ಮಕ್ಕನುಸಾರ ಕಂದಾಯರೂಪದಲ್ಲಿ ಧನವನ್ನು ಪಡೆಯುತ್ತಿದ್ದರು. ಇದೆಲ್ಲ ಕಾರಣಗಳಿಂದ ನಮ್ಮ ತಂದೆಯವರು ಉತ್ತಮ ಸ್ವರ್ಗಲೋಕಕ್ಕೆ ತೆರಳಿರುವರು.॥33॥
ಮೂಲಮ್ - 34
ಕರ್ಮಭಿಸ್ತು ಶುಭೈರಿಷ್ಟೈಃ ಕ್ರತುಭಿಶ್ಚಾಪ್ತದಕ್ಷಿಣೈಃ ।
ಸ್ವರ್ಗಂ ದಶರಥಃ ಪ್ರಾಪ್ತಃ ಪಿತಾ ನಃ ಪೃಥಿವೀಪತಿಃ ॥
ಅನುವಾದ
ಸರ್ವಪ್ರಿಯ ಶುಭಕರ್ಮಗಳ ಮತ್ತು ಧಾರಾಳ ದಕ್ಷಿಣೆಯುಳ್ಳ ಯಜ್ಞಗಳ ಅನುಷ್ಠಾನದಿಂದ ನಮ್ಮ ತಂದೆ ಪೃಥಿವೀಪತಿ ದಶರಥ ಮಹಾರಾಜರು ಸ್ವರ್ಗಲೋಕಕ್ಕೆ ಹೋಗಿರುವರು.॥34॥
ಮೂಲಮ್ - 35
ಇಷ್ಟ್ವಾ ಬಹುವಿಧೈರ್ಯಜ್ಞೈರ್ಭೋಗಾಂಶ್ಚಾವಾಪ್ಯ ಪುಷ್ಕಲಾನ್ ।
ಉತ್ತಮಂ ಚಾಯುರಾಸಾದ್ಯ ಸ್ವರ್ಗತಃ ಪೃಥಿವೀಪತಿಃ ॥
ಅನುವಾದ
ಅವರು ನಾನಾ ಪ್ರಕಾರದ ಯಜ್ಞಗಳಿಂದ ಯಜ್ಞ ಪುರುಷನನ್ನು ಆರಾಧಿಸಿದ್ದರು. ಭೋಗಗಳನ್ನು ಪಡೆದು, ದೀರ್ಘಾಯುಸ್ಸನ್ನು ಪಡೆದಿದ್ದರು. ಬಳಿಕ ಆ ಮಹಾರಾಜರು ಇಲ್ಲಿಂದ ಸ್ವರ್ಗಲೋಕಕ್ಕೆ ತೆರಳಿರುವರು.॥35॥
ಮೂಲಮ್ - 36
ಆಯುರುತ್ತಮಮಾಸಾದ್ಯ ಭೋಗಾನಪಿ ಚ ರಾಘವಃ ।
ನ ಸ ಶೋಚ್ಯಃ ಪಿತಾ ತಾತ ಸ್ವರ್ಗತಃ ಸತ್ಕೃತಃ ಸತಾಮ್ ॥
ಅನುವಾದ
ಅಯ್ಯಾ! ಇತರ ರಾಜರಿಗಿಂತ ಉತ್ತಮ ಆಯುಸ್ಸು ಮತ್ತು ಶ್ರೇಷ್ಠ ಭೋಗಗಳನ್ನು ಪಡೆದು ನಮ್ಮ ತಂದೆಯವರು ಸತ್ಪುರುಷರಿಂದ ಸಮ್ಮಾನಿತರಾಗಿದ್ದರು. ಆದ್ದರಿಂದ ಅವರು ಸ್ವರ್ಗಸ್ಥರಾದ ಮೇಲೆ ಶೋಕ ಮಾಡುವುದು ಯೋಗ್ಯವಲ್ಲ.॥36॥
ಮೂಲಮ್ - 37
ಸ ಜೀರ್ಣಮಾನುಷಂ ದೇಹಂ ಪರಿತ್ಯಜ್ಯಪಿತಾ ಹಿ ನಃ ।
ದೈವೀಮೃದ್ಧಿಮನುಪ್ತಾಪ್ತೋ ಬ್ರಹ್ಮಲೋಕವಿಹಾರಿಣೀಮ್ ॥
ಅನುವಾದ
ನಮ್ಮ ತಂದೆಯವರು ಜರಾಜೀರ್ಣ ಮಾನವ ಶರೀರವನ್ನು ತ್ಯಜಿಸಿ ಬ್ರಹ್ಮಲೋಕದಲ್ಲಿ ವಿಹರಿಸುವಂತಹ ದೈವೀಸಂಪತ್ತನ್ನು ಪಡೆದಿರುವರು.॥37॥
ಮೂಲಮ್ - 38
ತಂ ತು ನೈವಂವಿಧಃ ಕಶ್ಚಿತ್ ಪ್ರಾಜ್ಞಃ ಶೋಚಿತುಮರ್ಹಸಿ ।
ತ್ವದ್ವಿಧೋ ಮದ್ವಿಧಶ್ಚಾಪಿ ಶ್ರುತವಾನ್ಬುದ್ಧಿಮತ್ತರಃ ॥
ಅನುವಾದ
ನಿನ್ನ ಮತ್ತು ನನ್ನಂತೆಯೇ ಶಾಸ್ತ್ರಜ್ಞಾನ ಸಂಪನ್ನ, ಪರಮ ಬುದ್ಧಿವಂತರಾದ ಯಾವನೇ ವಿದ್ವಾಂಸರು ತಂದೆಯವರಿಗಾಗಿ ಶೋಕ ಮಾಡಲಾರನು.॥38॥
ಮೂಲಮ್ - 39
ಏತೇ ಬಹುವಿಧಾಃ ಶೋಕಾ ವಿಲಾಪರುದಿತೇ ತದಾ ।
ವರ್ಜನೀಯಾ ಹಿ ಧೀರೇಣ ಸರ್ವಾವಸ್ಥಾಸು ಧೀಮತಾ ॥
ಅನುವಾದ
ಧೀರ ಮತ್ತು ಪ್ರಜ್ಞಾವಂತ ಪುರುಷನು ಎಲ್ಲ ಅವಸ್ಥೆಗಳಲ್ಲಿ ಈ ನಾನಾ ಪ್ರಕಾರದ ಶೋಕಗಳು, ವಿಲಾಸ ಹಾಗೂ ಅಳುವುದು ತ್ಯಜಿಸಿಬಿಡಬೇಕು.॥39॥
ಮೂಲಮ್ - 40
ಸ ಸ್ವಸ್ಥೋ ಭವ ಮಾ ಶೋಕೋ ಯಾತ್ವಾ ಚಾವಸ ತಾಂ ಪುರೀಮ್ ।
ತಥಾ ಪಿತ್ರಾ ನಿಯುಕ್ತೋಽಸಿ ವಶಿನಾ ವದತಾಂ ವರ ॥
ಅನುವಾದ
ಆದ್ದರಿಂದ ನೀನು ಸ್ವಸ್ಥನಾಗು, ನಿನ್ನ ಮನಸ್ಸಿನಲ್ಲಿ ಶೋಕವಾಗಬಾರದು. ಮಾತಿನಲ್ಲಿ ಶ್ರೇಷ್ಠನಾದ ಭರತನೇ! ನೀನು ಇಲ್ಲಿಂದ ಹೋಗಿ ಅಯೋಧ್ಯೆಯಲ್ಲಿ ವಾಸಿಸು; ಏಕೆಂದರೆ ಮನಸ್ಸನ್ನು ವಶದಲ್ಲಿರಿಸಿಕೊಂಡ ಪೂಜ್ಯ ತಂದೆಯವರು ನಿನಗಾಗಿಯೇ ಈ ಆದೇಶವನ್ನು ಕೊಟ್ಟಿರುವರು.॥40॥
ಮೂಲಮ್ - 41
ಯತ್ರಾಹಮಪಿ ತೇನೈವ ನಿಯುಕ್ತಃ ಪುಣ್ಯಕರ್ಮಣಾ ।
ತತ್ರೈವಾಹಂ ಕರಿಷ್ಯಾಮಿ ಪಿತುರಾರ್ಯಸ್ಯ ಶಾಸನಮ್ ॥
ಅನುವಾದ
ಆ ಪುಣ್ಯಕರ್ಮ ಮಹಾರಾಜರು ನನಗೂ ಎಲ್ಲಿ ನಿಲ್ಲಲು ಆಜ್ಞಾಪಿಸಿರುವರೋ ಅಲ್ಲೇ ಇದ್ದು ನಾನು ಆ ಪೂಜ್ಯ ತಂದೆಯ ಆದೇಶವನ್ನು ಪಾಲಿಸುವೆನು.॥41॥
ಮೂಲಮ್ - 42
ನ ಮಯಾ ಶಾಸನಂತಸ್ಯ ತ್ಯಕ್ತುಂ ನ್ಯಾಯ್ಯಮರಿಂದಮ ।
ಸತ್ತ್ವಯಾಪಿ ಸದಾ ಮಾನ್ಯಃ ಸ ವೈ ಬಂಧುಃ ಸ ನಃ ಪಿತಾ ॥
ಅನುವಾದ
ಶತ್ರುದಮನ ಭರತನೇ! ತಂದೆಯ ಆಜ್ಞೆಯನ್ನು ಅಲ್ಲಗಳೆಯುವುದು ನನಗೆ ಎಂದಿಗೂ ಉಚಿತವಲ್ಲ. ಅವರು ನಿನಗೂ ಸರ್ವದಾ ಸಮ್ಮಾನನೀಯರಾಗಿದ್ದಾರೆ; ಏಕೆಂದರೆ ಅವರೇ ನಮ್ಮ ಹಿತೈಷಿ ಬಂಧು ಮತ್ತು ಜನ್ಮದಾತರಾಗಿದ್ದಾರೆ.॥42॥
ಮೂಲಮ್ - 43
ತದ್ವಚಃ ಪಿತುರೇವಾಹಂ ಸಮ್ಮತಂ ಧರ್ಮಚಾರಿಣಾಮ್ ।
ಕರ್ಮಣಾ ಪಾಲಯಿಷ್ಯಾಮಿ ವನವಾಸೇನ ರಾಘವ ॥
ಅನುವಾದ
ರಘುನಂದನ! ನಾನು ಈ ವನವಾಸರೂಪೀ ಕರ್ಮದಿಂದ ಧರ್ಮಾತ್ಮರಿಗೆ ಮಾನ್ಯವಾದ ತಂದೆಯವರ ವಚನವನ್ನೇ ಪಾಲಿಸುವೆನು.॥43॥
ಮೂಲಮ್ - 44
ಧಾರ್ಮಿಕೇಣಾನೃಶಂಸೇನ ನರೇಣ ಗುರುವರ್ತಿನಾ ।
ಭವಿತವ್ಯಂ ನರವ್ಯಾಘ್ರ ಪರಲೋಕಂ ಜಿಗೀಷತಾ ॥
ಅನುವಾದ
ನರಶ್ರೇಷ್ಠನೇ! ಪರಲೋಕವನ್ನು ಜಯಿಸುವ ಇಚ್ಛೆಯುಳ್ಳ ಮನುಷ್ಯನು ಧಾರ್ಮಿಕವಾಗಿ, ಕ್ರೂರತೆಯಿಂದ ರಹಿತನಾಗಿ ಗುರು-ಹಿರಿಯರ ಆಜ್ಞಾಪಾಲಕನಾಗಬೇಕು.॥44॥
ಮೂಲಮ್ - 45
ಆತ್ಮಾನಮನುತಿಷ್ಠ ತ್ವಂ ಸ್ವಭಾವೇನ ನರರ್ಷಭ ।
ನಿಶಾಮ್ಯ ತು ಶುಭಂ ವೃತ್ತಂ ಪಿತುರ್ದಶರಥಸ್ಯ ನಃ ॥
ಅನುವಾದ
ಮನುಷ್ಯರಲ್ಲಿ ಶ್ರೇಷ್ಠ ಭರತ! ನಮ್ಮ ಪೂಜ್ಯ ತಂದೆಯವರ ಶುಭ ಆಚರಣೆಗಳ ಮೇಲೆ ದೃಷ್ಟಿ ಇರಿಸಿ, ನೀನು ತನ್ನ ಧಾರ್ಮಿಕ ಸ್ವಭಾವದಿಂದ ಆತ್ಮೋನ್ನತಿಗಾಗಿ ಪ್ರಯತ್ನ ಮಾಡು.॥45॥
ಮೂಲಮ್ - 46
ಇತ್ಯೇವಮುಕ್ತ್ವಾ ವಚನಂ ಮಹಾತ್ಮಾ
ಪಿತುರ್ನಿದೇಶಪ್ರತಿಪಾಲನಾರ್ಥಮ್ ।
ಯವೀಯಸಂ ಭ್ರಾತರಮರ್ಥವಚ್ಚ
ಪ್ರಭುರ್ಮುಹೂರ್ತಾದ್ ವಿರರಾಮ ರಾಮಃ ॥
ಅನುವಾದ
ಸರ್ವಶಕ್ತಿವಂತ ಮಹಾತ್ಮಾ ಶ್ರೀರಾಮನು ತಮ್ಮನಾದ ಭರತನಿಗೆ ತಂದೆಯ ಆಜ್ಞೆಯನ್ನು ಪಾಲಿಸುವ ಉದ್ದೇಶದಿಂದ ಅರ್ಥಯುಕ್ತ ವಚನಗಳನ್ನು ಹೇಳಿ ಸುಮ್ಮನಾದನು.॥46॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಐದನೆಯ ಸರ್ಗ ಪೂರ್ಣವಾಯಿತು ॥105॥