१०४ रामकौसल्यादीनां संभाषणम्

वाचनम्
ಭಾಗಸೂಚನಾ

ವಸಿಷ್ಠರ ಜೊತೆಯಲ್ಲಿ ಹೊರಟ ಕೌಸಲ್ಯಾ, ಸುಮಿತ್ರೆಯರು ಮಂದಾಕಿನೀ ನದಿಯ ತೀರದಲ್ಲಿ ಬಹಳ ದುಃಖಿಸಿದುದು, ರಾಮ-ಲಕ್ಷ್ಮಣ-ಸೀತೆಯರು ಕೌಸಲ್ಯೆಯೇ ಮೊದಲಾದ ತಾಯಂದಿರಿಗೂ ವಸಿಷ್ಠರಿಗೂ ಅಭಿವಂದಿಸಿದುದು

ಮೂಲಮ್ - 1

ವಸಿಷ್ಠಃ ಪುರತಃ ಕೃತ್ವಾ ದಾರಾನ್ ದಶರಥಸ್ಯ ಚ ।
ಅಭಿಚಕ್ರಾಮ ತಂ ದೇಶಂ ರಾಮದರ್ಶನತರ್ಷಿತಃ ॥

ಅನುವಾದ

ಮಹರ್ಷಿ ವಸಿಷ್ಠರು ದಶರಥನ ರಾಣಿಯರನ್ನು ಮುಂದುಮಾಡಿಕೊಂಡು ಶ್ರೀರಾಮನನ್ನು ನೋಡುವ ಅಭಿಲಾಷೆಯಿಂದ ಅವನ ಆಶ್ರಮವಿರುವ ಸ್ಥಾನದ ಕಡೆಗೆ ಹೊರಟರು.॥1॥

ಮೂಲಮ್ - 2

ರಾಜಪತ್ನ್ಯಶ್ಚ ಗಚ್ಛಂತ್ಯೋ ಮಂದಂ ಮಂದಾಕಿನೀಂ ಪ್ರತಿ ।
ದದೃಶುಸ್ತತ್ರ ತತ್ತೀರ್ಥಂ ರಾಮಲಕ್ಷ್ಮಣಸೇವಿತಮ್ ॥

ಅನುವಾದ

ರಾಜನ ರಾಣಿಯರು ನಿಧಾನವಾಗಿ ನಡೆಯುತ್ತಾ ಮಂದಾಕಿನಿಯ ತೀರಕ್ಕೆ ಬಂದಾಗ ಅವರು ಅಲ್ಲಿ ಶ್ರೀರಾಮ ಮತ್ತು ಲಕ್ಷ್ಮಣರು ಸ್ನಾನಮಾಡುತ್ತಿದ್ದ ಘಟ್ಟವನ್ನು ನೋಡಿದರು.॥2॥

ಮೂಲಮ್ - 3

ಕೌಸಲ್ಯಾ ಬಾಷ್ಪಪೂರ್ಣೇನ ಮುಖೇನ ಪರಿಶುಷ್ಯತಾ ।
ಸುಮಿತ್ರಾಮಬ್ರವೀದ್ದೀನಾಂ ಯಶ್ಚಾನ್ಯಾರಾಜಯೋಷಿತಃ ॥

ಅನುವಾದ

ಆಗ ಕೌಸಲ್ಯೆಯ ಮುಖದಲ್ಲಿ ಅಶ್ರುಧಾರೆ ಹರಿಯುತ್ತಿತ್ತು. ಆಕೆಯು ಶುಷ್ಕಮುಖದಿಂದ ದೀನ ಸುಮಿತ್ರೆ ಮತ್ತು ಇತರ ರಾಣಿಯರಲ್ಲಿ ಹೇಳಿದಳು.॥3॥

ಮೂಲಮ್ - 4

ಇದಂ ತೇಷಾಮನಾಥಾನಾಂ ಕ್ಲಿಷ್ಟಮಕ್ಲಿಷ್ಟಕರ್ಮಣಾಮ್ ।
ವನೇ ಪ್ರಾಕ್ಕಲನಂ ತೀರ್ಥಂ ಯೇ ತೇ ನಿರ್ವಿಷಯೀಕೃತಾಃ ॥

ಅನುವಾದ

ಯಾರನ್ನು ರಾಜ್ಯದಿಂದ ಹೊರಹಾಕಲಾಗಿದೆಯೋ, ಬೇರೆಯವರಿಗೆ ಕ್ಲೇಶ ಕೊಡದಿರುವ ಕಾರ್ಯವನ್ನೇ ಮಾಡುವರೋ, ಆ ನನ್ನ ಅನಾಥ ಮಕ್ಕಳ ಈ ದುರ್ಗಮತಮ ತೀರ್ಥವಾಗಿದೆ. ಇದನ್ನು ಮೊಟ್ಟಮೊದಲು ಇವರು ಸ್ವೀಕರಿಸಿರುವರು.॥4॥

ಮೂಲಮ್ - 5

ಇತಃ ಸುಮಿತ್ರೇ ಪುತ್ರಸ್ತೇ ಸದಾ ಜಲಮತಂದ್ರಿತಃ ।
ಸ್ವಯಂ ಹರತಿ ಸೌಮಿತ್ರಿರ್ಮಮ ಪುತ್ರಸ್ಯಕಾರಣಾತ್ ॥

ಅನುವಾದ

ಸುಮಿತ್ರೇ! ಆಲಸ್ಯರಹಿತ ನಿನ್ನ ಪುತ್ರ ಲಕ್ಷ್ಮಣನು ಸ್ವತಃ ಬಂದು ಸದಾಕಾಲ ಇಲ್ಲಿಂದ ನನ್ನ ಪುತ್ರನಿಗಾಗಿ ನೀರನ್ನು ತೆಗೆದುಕೊಂಡು ಹೋಗುವನು.॥5॥

ಮೂಲಮ್ - 6

ಜಘನ್ಯಮಪಿ ತೇ ಪುತ್ರಃ ಕೃತವಾನ್ ನ ತು ಗರ್ಹಿತಃ ।
ಭ್ರಾತುರ್ಯದರ್ಥರಹಿತಂ ಸರ್ವಂ ತದ್ ಗರ್ಹಿತಂಗುಣೈಃ ॥

ಅನುವಾದ

ನಿನ್ನ ಪುತ್ರನು ಅತಿ ಸಣ್ಣದಾದ ಸೇವಾ ಕಾರ್ಯವನ್ನು ಸ್ವೀಕರಿಸಿದರೂ ಇದರಿಂದ ನಿಂದಿತನಾಗಲಿಲ್ಲ; ಯಾಕೆಂದರೆ ಸದ್ಗುಣಗಳಿಂದ ಕೂಡಿದ ಅಣ್ಣನ ಪ್ರಯೋಜನ ರಹಿತವಾದ ಎಲ್ಲ ಕಾರ್ಯಗಳು ನಿಂದಿತವಾಗುತ್ತವೆ.॥6॥

ಮೂಲಮ್ - 7

ಅದ್ಯಾಯಮಪಿತೇ ಪುತ್ರಃ ಕ್ಲೇಶಾನಾಮತಥೋಚಿತಃ ।
ನೀಚಾನರ್ಥಸಮಾಚಾರಂ ಸಜ್ಜಂ ಕರ್ಮ ಪ್ರಮುಂಚತು ॥

ಅನುವಾದ

ನಿನ್ನ ಈ ಪುತ್ರನೂ ಕೂಡ ಇಂದು ಸಹಿಸುತ್ತಿರುವ ಕ್ಲೇಶಗಳಿಗೆ ಯೋಗ್ಯನಲ್ಲ. ಈಗ ಶ್ರೀರಾಮನು ಮರಳಿದಾಗ, ನಿಮ್ನ ಶ್ರೇಣಿಯ ಜನರಿಗೆ ಯೋಗ್ಯವಾದ ದುಃಖಜನಕ ಕಾರ್ಯವು ಅವನ ಮುಂದೆ ಪ್ರಸ್ತುತವಾಗಿದೆಯೋ ಅದನ್ನು ಮಾಡುವ ಸಂದರ್ಭ ಅವನಿಗೆ ಇರಲಾರದು.॥7॥

ಮೂಲಮ್ - 8

ದಕ್ಷಿಣಾಗ್ರೇಷು ದರ್ಭೇಷು ಸಾದದರ್ಶ ಮಹೀತಲೇ ।
ಪಿತುರಿಂಗುದಿಪಿಣ್ಯಾಕಂ ನ್ಯಸ್ತಮಾಯತಲೋಚನಾ ॥

ಅನುವಾದ

ಮುಂದಕ್ಕೆ ಹೋಗಿ ವಿಶಾಲಲೋಚನೆ ಕೌಸಲ್ಯೆಯು-ಶ್ರೀರಾಮನು ಭೂಮಿಯ ಮೇಲೆ ಹರಡಿದ ದಕ್ಷಿಣಾಗ್ರ ದರ್ಭೆಗಳ ಮೇಲೆ ತನ್ನ ತಂದೆಗಾಗಿ ಇರಿಸಿದ ಇಂಗುದಿಯ ಹಿಟ್ಟಿನ ಪಿಂಡಗಳನ್ನು ನೋಡಿದಳು.॥8॥

ಮೂಲಮ್ - 9

ತಂ ಭೂಮೌ ಪಿತುರಾರ್ತೇನ ನ್ಯಸ್ತಂ ರಾಮೇಣ ವೀಕ್ಷ್ಯ ಸಾ ।
ಉವಾಚ ದೇವೀ ಕೌಸಲ್ಯಾ ಸರ್ವಾ ದಶರಥಸ್ತ್ರಿಯಃ ॥

ಅನುವಾದ

ದುಃಖಿತನಾದ ರಾಮನು ತಂದೆಗಾಗಿ ನೆಲದಲ್ಲಿ ಇರಿಸಿದ ಆ ಪಿಂಡವನ್ನು ನೋಡಿ ದೇವೀ ಕೌಸಲ್ಯೆಯು ದಶರಥನ ಎಲ್ಲ ರಾಣಿಯರಲ್ಲಿ ಹೇಳಿದಳು.॥9॥

ಮೂಲಮ್ - 10

ಇದಮಿಕ್ಷ್ವಾಕುನಾಥಸ್ಯ ರಾಘವಸ್ಯ ಮಹಾತ್ಮನಃ ।
ರಾಘವೇಣ ಪಿತುರ್ದುತ್ತಂ ಪಶ್ಯತೈತದ್ ಯಥಾವಿಧಿ ॥

ಅನುವಾದ

ತಂಗಿಯರಿರಾ! ನೋಡಿ, ಶ್ರೀರಾಮನು ಇಕ್ಷ್ವಾಕು ಕುಲದ ಸ್ವಾಮಿ ರಘುಕುಲಭೂಷಣ ಮಹಾತ್ಮಾ ತಂದೆಗಾಗಿ ಇಲ್ಲಿ ವಿಧಿವತ್ತಾಗಿ ಪಿಂಡದಾನ ಮಾಡಿರುವನು.॥10॥

ಮೂಲಮ್ - 11

ತಸ್ಯ ದೇವಸಮಾನಸ್ಯ ಪಾರ್ಥಿವಸ್ಯ ಮಹಾತ್ಮನಃ ।
ನೈತದೌಪಯಿಕಂ ಮನ್ಯೇ ಭುಕ್ತಭೋಗಸ್ಯ ಭೋಜನಮ್ ॥

ಅನುವಾದ

ದೇವತೆಗಳಂತೆ ತೇಜಸ್ವೀ ಆ ಮಹಾಮನಾ ಭೂಪಾಲರು ನಾನಾ ಪ್ರಕಾರದ ಉತ್ತಮ ಭೋಗಗಳನ್ನು ಅನುಭವಿಸಿ ಬಿಟ್ಟಿರುವರು. ಅವರಿಗಾಗಿ ಈ ಭೋಜನ ಉಚಿತವಲ್ಲ ಎಂದೇ ನಾನು ತಿಳಿಯುತ್ತೇನೆ.॥11॥

ಮೂಲಮ್ - 12

ಚತುರಂತಾಂ ಮಹೀಂ ಭುಕ್ತ್ವಾ ಮಹೇಂದ್ರಸದೃಶೋ ಭುವಿ ।
ಕಥಮಿಂಗುದಿ ಪಿಣ್ಯಾಕಂ ಸ ಭುಂಕ್ತೇ ವಸುಧಾಧಿಪಃ ॥

ಅನುವಾದ

ಯಾರು ನಾಲ್ಕು ಸಮುದ್ರಗಳಿಂದ ಆವರಿಸಿದ ಪೃಥಿವಿಯ ರಾಜ್ಯವನ್ನು ಭೋಗಿಸಿ ಭೂತಳದಲ್ಲಿ ದೇವೇಂದ್ರನಂತೆ ಪ್ರತಾಪಿಯಾಗಿದ್ದರೋ, ಆ ದಶರಥ ಭೂಪಾಲರು ಇಂಗುದಿ ಹಿಟ್ಟಿನ ಪಿಂಡವನ್ನು ಹೇಗೆ ತಿನ್ನುವರು.॥12॥

ಮೂಲಮ್ - 13

ಅತೋ ದುಃಖತರಂ ಲೋಕೇ ನ ಕಿಂಚಿತ್ ಪ್ರತಿಭಾತಿ ಮೇ ।
ಯತ್ರ ರಾಮಃ ಪಿತುರ್ದದ್ಯಾದಿಂಗುದೀಕ್ಷೋದಮೃದ್ಧಿಮಾನ್ ॥

ಅನುವಾದ

ಜಗತ್ತಿನಲ್ಲಿ ಇದಕ್ಕಿಂತ ಮಿಗಿಲಾದ ಮಹಾದುಃಖವು ಬೇರೆ ಯಾವುದೂ ಕಂಡುಬರುವುದಿಲ್ಲ. ದೈವಕ್ಕೆ ಅಧೀನನಾಗಿ ಶ್ರೀರಾಮನು ಸಮೃದ್ಧಿಶಾಲಿ ಆಗಿದ್ದರೂ ತನ್ನ ಪಿತನಿಗೆ ಇಂಗುದಿಯ ಹಿಟ್ಟಿನ ಪಿಂಡ ಕೊಟ್ಟಿರುವನು.॥13॥

ಮೂಲಮ್ - 14

ರಾಮೇಣೇಂಗುದಿಪಿಣ್ಯಾಕಂ ಪಿತುರ್ದತ್ತಂ ಸಮೀಕ್ಷ ಮೇ ।
ಕಥಂ ದುಃಖೇನ ಹೃದಯಂ ನ ಸ್ಫೋಟತಿ ಸಹಸ್ರಧಾ ॥

ಅನುವಾದ

ಶ್ರೀರಾಮನು ತನ್ನ ತಂದೆಗೆ ಇಂಗುದಿ ಹಿಟ್ಟನ್ನು ಪ್ರದಾನ ಮಾಡಿರುವುದನ್ನು ನೋಡಿ ದುಃಖದಿಂದ ನನ್ನ ಹೃದಯವು ಏಕೆ ನುಚ್ಚುನೂರಾಗುವುದಿಲ್ಲ.॥14॥

ಮೂಲಮ್ - 15

ಶ್ರುತಿಸ್ತು ಖಲ್ವಿಯಂಸತ್ಯಾ ಲೌಕಿಕೀ ಪ್ರತಿಭಾತಿ ಮೇ ।
ಯದನ್ನಃ ಪುರುಷೋ ಭವತಿ ತದನ್ನಾಸ್ತಸ್ಯ ದೇವತಾಃ ॥

ಅನುವಾದ

‘ಮನುಷ್ಯನು ಯಾವ ಅನ್ನವನ್ನು ತಿನ್ನುವನೋ, ಅವನ ದೇವತೆಯು ಅದೇ ಅನ್ನವನ್ನು ಸ್ವೀಕರಿಸುವುದು’ ಈ ನಾಣ್ನುಡಿಯು ಸತ್ಯವಾದುದೆಂದೇ ಈಗ ನನಗೆ ಭಾಸವಾಗುತ್ತಿದೆ.॥15॥

ಮೂಲಮ್ - 16

ಏವಮಾರ್ತಾಂ ಸಪತ್ನ್ಯಸ್ತಾ ಜಗ್ಮುರಾಶ್ವಾಸ್ಯ ತಾಂ ತದಾ ।
ದದೃಶುಶ್ಚಾಶ್ರಮೇ ರಾಮಂ ಸ್ವರ್ಗಚ್ಯುತಮಿವಾಮರಮ್ ॥

ಅನುವಾದ

ಈ ಪ್ರಕಾರ ಶೋಕದಿಂದ ಆರ್ತಳಾದ ಕೌಸಲ್ಯೆಯನ್ನು ಆಗ ಆಕೆಯ ಸವತಿಯರು ಸಮಜಾಯಿಸಿ ಮುಂದಕ್ಕೆ ಕರೆದುಕೊಂಡು ಹೋದರು. ಆಶ್ರಮವನ್ನು ತಲುಪಿ ಅವರೆಲ್ಲರೂ - ಸ್ವರ್ಗದಿಂದ ಬಿದ್ದ ದೇವತೆಯಂತೆ ಕಂಡುಬರುವ ಶ್ರೀರಾಮನನ್ನು ನೋಡಿದರು.॥16॥

ಮೂಲಮ್ - 17

ತಂ ಭೋಗೈಃ ಸಂಪರಿತ್ಯಕ್ತಂ ರಾಮಂ ಸಂಪ್ರೇಕ್ಷ್ಯ ಮಾತರಃ ।
ಆರ್ತಾ ಮುಮುಚುರಶ್ರೂಣಿ ಸಸ್ವರಂಶೋಕಕರ್ಶಿತಾಃ ॥

ಅನುವಾದ

ಭೋಗಗಳನ್ನು ಪರಿತ್ಯಜಿಸಿ ತಪಸ್ವೀ ಜೀವನವನ್ನು ನಡೆಸುತ್ತಿರುವ ಶ್ರೀರಾಮನನ್ನು ನೋಡಿ ಅವನ ತಾಯಂದಿರು ಶೋಕಾತುರರಾಗಿ, ಆರ್ತಭಾವದಿಂದ ಬಿಕ್ಕಿ-ಬಿಕ್ಕಿ ಅಳುತ್ತಾ ಕಂಬನಿಗರೆದರು.॥17॥

ಮೂಲಮ್ - 18

ತಾಸಾಂ ರಾಮಃ ಸಮುತ್ಥಾಯ ಜಗ್ರಾಹ ಚರಣಾಂಬುಜಾನ್ ।
ಮಾತೄಣಾಂ ಮನುಜವ್ಯಾಘ್ರಃ ಸರ್ವಾಸಾಂಸತ್ಯಸಂಗರಃ ॥

ಅನುವಾದ

ಸತ್ಯಪ್ರತಿಜ್ಞನಾದ ನರಶ್ರೇಷ್ಠ ಶ್ರೀರಾಮನು ತಾಯಂದಿರನ್ನು ನೋಡಿದೊಡನೆ ಎದ್ದು ನಿಂತು, ಕ್ರಮವಾಗಿ ಎಲ್ಲರ ಚರಣಗಳಲ್ಲಿ ವಂದಿಸಿಕೊಂಡನು.॥18॥

ಮೂಲಮ್ - 19

ತಾಃ ಪಾಣಿಭಿಃ ಸುಖಸ್ಪರ್ಶೈರ್ಮೃದ್ವಂಗುಲಿತಲೈಃ ಶುಭೈಃ ।
ಪ್ರಮಮಾರ್ಜೂ ರಜಃ ಪೃಷ್ಠಾದ್ ರಾಮಸ್ಯಾಯತಲೋಚನಾಃ ॥

ಅನುವಾದ

ವಿಶಾಲನೇತ್ರಗಳುಳ್ಳ ತಾಯಂದಿರು ಸ್ನೇಹವಶರಾಗಿ ಕೋಮಲ ಬೆರಳುಗಳುಳ್ಳ ಸ್ಪರ್ಶಸುಖಮಯ ಸುಂದರ ಕೈಗಳಿಂದ ಶ್ರೀರಾಮನ ಬೆನ್ನಿನ ಧೂಳನ್ನು ಒರೆಸಿದರು.॥19॥

ಮೂಲಮ್ - 20

ಸೌಮಿತ್ರರಪಿ ತಾಃ ಸರ್ವಾ ಮಾತೃಃ ಸಂಪ್ರೇಕ್ಷ್ಯ ದುಃಖಿತಃ ।
ಅಭ್ಯವಾದಯದಾಸಕ್ತಂ ಶನೈ ರಾಮಾದನಂತರಮ್ ॥

ಅನುವಾದ

ಶ್ರೀರಾಮನ ಬಳಿಕ ಲಕ್ಷ್ಮಣನೂ ಆ ಎಲ್ಲ ದುಃಖಿತರಾದ ತಾಯಂದಿರನ್ನು ನೋಡಿ ದುಃಖಿತನಾಗಿ, ಸ್ನೇಹಪೂರ್ವಕವಾಗಿ ನಿಧಾನವಾಗಿ ನಮಸ್ಕಾರ ಮಾಡಿದನು.॥20॥

ಮೂಲಮ್ - 21

ಯಥಾ ರಾಮೇ ತಥಾ ತಸ್ಮಿನ್ಸರ್ವಾವವೃತಿರೇ ಸ್ತ್ರಿಯಃ ।
ವೃತ್ತಿಂ ದಶರಥಾಜ್ಜಾತೇ ಲಕ್ಷ್ಮಣೇ ಶುಭಲಕ್ಷಣೇ ॥

ಅನುವಾದ

ಆ ಎಲ್ಲ ತಾಯಂದಿರು ಶ್ರೀರಾಮನೊಡನೆ ವರ್ತಿಸಿದಂತೆ ಉತ್ತಮ ಲಕ್ಷಣಗಳಿಂದ ಕೂಡಿದ ದಶರಥನಂದನ ಲಕ್ಷ್ಮಣನಲ್ಲಿಯೂ ವ್ಯವಹರಿಸಿದರು.॥21॥

ಮೂಲಮ್ - 22

ಸೀತಾಪಿ ಚರಣಾಂಸ್ತಾಸಾಮುಪಸಂಗೃಹ್ಯ ದುಃಖಿತಾ ।
ಶ್ವಶ್ರೂಣಾಮಶ್ರುಪೂರ್ಣಾಕ್ಷೀ ಸಂಬಭೂವಾಗ್ರತಃ ಸ್ಥಿತಾ ॥

ಅನುವಾದ

ಅನಂತರ ಕಂಬನಿ ತುಂಬಿದ ಕಣ್ಣುಗಳುಳ್ಳ ದುಃಖಿಯಾದ ಸೀತೆಯೂ ಎಲ್ಲ ಅತ್ತೆಯಂದಿರ ಚರಣಗಳಲ್ಲಿ ವಂದಿಸಿಕೊಂಡು ಅವರ ಮುಂದೆ ನಿಂತುಕೊಂಡಳು.॥22॥

ಮೂಲಮ್ - 23

ತಾಂ ಪರಿಷ್ವಜ್ಯ ದುಃರ್ಖಾರ್ತಾಂ ಮಾತಾದುಹಿತರಂ ಯಥಾ ।
ವನವಾಸಕೃತಾಂ ದೀನಾಂ ಕೌಸಲ್ಯಾ ವಾಕ್ಯಮಬ್ರವೀತ್ ॥

ಅನುವಾದ

ಆಗ ದುಃಖ ಪೀಡಿತಳಾದ ಕೌಸಲ್ಯೆಯು ತಾಯಿಯು ತನ್ನ ಮಗಳನ್ನು ಅಪ್ಪಿಕೊಳ್ಳುವಂತೆ ವನವಾಸದಿಂದಾಗಿ ದುರ್ಬಲಳಾದ ಸೀತೆಯನ್ನು ಎದೆಗೊತ್ತಿಕೊಂಡು ಹೀಗೆ ನುಡಿದಳು.॥23॥

ಮೂಲಮ್ - 24

ವೈದೇಹರಾಜನ್ಯಸುತಾ ಸ್ನುಷಾ ದಶರಥಸ್ಯ ಚ ।
ರಾಮಪತ್ನೀ ಕಥಂ ದುಃಖಂ ಸಂಪ್ರಾಪ್ತಾವಿಜನೇ ವನೇ ॥

ಅನುವಾದ

ವಿದೇಹ ರಾಜನ ಪುತ್ರೀ, ದಶರಥ ಮಹಾರಾಜರ ಸೊಸೆ ಹಾಗೂ ಶ್ರೀರಾಮನ ಪತ್ನೀ ಈ ನಿರ್ಜನ ವನದಲ್ಲಿ ಏಕೆ ದುಃಖ ಅನುಭವಿಸುತ್ತಿರುವಳು.॥24॥

ಮೂಲಮ್ - 25

ಪದ್ಮಮಾತಪಸಂತಪ್ತಂ ಪರಿಕ್ಲಿಷ್ಟಮಿವೋತ್ಪಲಮ್ ।
ಕಾಂಚನಂ ರಜಸಾ ಧ್ವಸ್ತಂ ಕ್ಲಿಷ್ಟಂ ಚಂದ್ರಮಿವಾಂಬುದೈಃ ॥

ಅನುವಾದ

ಮಗಳೇ! ನಿನ್ನ ಮುಖವು ಬಿಸಿಲಿನಿಂದ ಬಾಡಿದ ಕಮಲದಂತೆ, ಒಣಗಿಹೋದ ಉತ್ಪಲದಂತೆ, ಧೂಳು ಹಿಡಿದ ಬಂಗಾರದಂತೆ, ಮೋಡಗಳಿಂದ ಮುಚ್ಚಿದ ಚಂದ್ರನಂತೆ ಕಳಾಹೀನವಾಗಿದೆ.॥25॥

ಮೂಲಮ್ - 26

ಮುಖಂ ತೇ ಪ್ರೇಕ್ಷ್ಯ ಮಾಂ ಶೋಕೋದಹತ್ಯಗ್ನಿರಿವಾಶ್ರಯಮ್ ।
ಭೃಶಂ ಮನಸಿ ವೈದೇಹಿ ವ್ಯಸನಾರಣಿಸಂಭವಃ ॥

ಅನುವಾದ

ವಿದೇಹ ನಂದಿನಿ! ಬೆಂಕಿಯು ತನ್ನ ಉತ್ಪತ್ತಿಸ್ಥಾನವಾದ ಕಟ್ಟಿಗೆಯನ್ನು ಸುಟ್ಟು ಬಿಡುವಂತೆಯೇ ನಿನ್ನ ಈ ಮುಖವನ್ನು ನೋಡಿ ನನ್ನ ಮನಸ್ಸಿನಲ್ಲಿ ಸಂಕಟರೂಪೀ ಅರಣಿಯಿಂದ ಉತ್ಪನ್ನವಾದ ಈ ಶೋಕಾಗ್ನಿಯು ನನ್ನನ್ನು ಸುಡುತ್ತಾ ಇದೆ.॥26॥

ಮೂಲಮ್ - 27

ಬ್ರುವಂತ್ಯಾಮೇವಮಾರ್ತಾಯಾಂ ಜನನ್ಯಾಂಭರತಾಗ್ರಜಃ ।
ಪಾದಾವಾಸಾದ್ಯ ಜಗ್ರಾಹ ವಸಿಷ್ಠಸ್ಯ ಚ ರಾಘವಃ ॥

ಅನುವಾದ

ಶೋಕಾಕುಲಳಾದ ತಾಯಿ ಈ ಪ್ರಕಾರ ವಿಲಾಪ ಮಾಡುತ್ತಿದ್ದಾಗ ಭರತಾಗ್ರಜನಾದ ಶ್ರೀರಾಮನು ವಸಿಷ್ಠರ ಚರಣಗಳಲ್ಲಿ ಬಿದ್ದು ಎರಡೂ ಕಾಲುಗಳನ್ನು ಹಿಡಿದುಕೊಂಡನು.॥27॥

ಮೂಲಮ್ - 28

ಪುರೋಹಿತಸ್ಯಾಗ್ನಿಸಮಸ್ಯ ತಸ್ಯ ವೈ
ಬೃಹಸ್ಪತೇರಿಂದ್ರ ಇವಾಮರಾಧಿಪಃ ।
ಪ್ರಗೃಹ್ಯ ಪಾದೌ ಸುಸಮೃದ್ಧತೇಜಸಃ
ಸಹೈವ ತೇನೋಪವಿವೇಶ ರಾಘವಃ ॥

ಅನುವಾದ

ದೇವೇಂದ್ರನು ಬೃಹಸ್ಪತಿಯರ ಚರಣಗಳನ್ನು ಸ್ಪರ್ಶಿಸುವಂತೆಯೇ, ಅಗ್ನಿಯಂತೆ ತೇಜಸ್ಸುಳ್ಳ ಪುರೋಹಿತ ವಸಿಷ್ಠರ ಎರಡೂ ಚರಣಗಳನ್ನು ಹಿಡಿದು ಶ್ರೀರಾಮನು ಅವರೊಂದಿಗೆ ನೆಲದಲ್ಲಿ ಕುಳಿತನು.॥28॥

ಮೂಲಮ್ - 29

ತತೋ ಜಘನ್ಯಂ ಸಹಿತೈಃ ಸ್ವಮಂತ್ರಿಭಿಃ
ಪುರಪ್ರಧಾನೈಶ್ಚ ತಥೈವ ಸೈನಿಕೈಃ ।
ಜನೇನ ಧರ್ಮಜ್ಞತಮೇನ ಧರ್ಮವಾ -
ನುಪೋಪವಿಷ್ಟೋ ಭರತಸ್ತದಾಗ್ರಜಮ್ ॥

ಅನುವಾದ

ಅನಂತರ ಧರ್ಮಾತ್ಮ ಭರತನು ತನ್ನೊಂದಿಗೆ ಬಂದಿರುವ ಎಲ್ಲ ಮಂತ್ರಿಗಳು, ಮುಖ್ಯ-ಮುಖ್ಯ ಪುರವಾಸಿಗಳು, ಸೈನಿಕರು, ಪರಮ ಧರ್ಮಜ್ಞ ಪುರುಷರೊಂದಿಗೆ ತನ್ನಣ್ಣನ ಬಳಿಯಲ್ಲಿ ಅವನ ಹಿಂದೆ ಕುಳಿತುಕೊಂಡನು.॥29॥

ಮೂಲಮ್ - 30

ಉಪೋಪವಿಷ್ಟಸ್ತು ತದಾತಿವೀರ್ಯವಾಂ -
ಸ್ತಪಸ್ವಿವೇಷೇಣ ಸಮೀಕ್ಷ್ಯ ರಾಘವಮ್ ।
ಶ್ರಿಯಾ ಜ್ವಲಂತಂ ಭರತಃ ಕೃತಾಂಜಲಿ -
ರ್ಯಥಾ ಮಹೇಂದ್ರಃ ಪ್ರಯತಃ ಪ್ರಜಾಪತಿಮ್ ॥

ಅನುವಾದ

ಆಗ ಶ್ರೀರಾಮನ ಆಸನದ ಸಮೀಪ ಕುಳಿತುಕೊಂಡ ಅತ್ಯಂತ ಪರಾಕ್ರಮಿ ಭರತನು ದಿವ್ಯ ದೀಪ್ತಿಯಿಂದ ಪ್ರಕಾಶಿಸುತ್ತಿದ್ದ ಶ್ರೀರಘುನಾಥನನ್ನು ತಪಸ್ವಿಯ ವೇಷದಲ್ಲಿ ನೋಡಿ ಅವನ ಕುರಿತು ದೇವೇಂದ್ರನು ಪ್ರಜಾಪತಿ ಬ್ರಹ್ಮದೇವರಿಗೆ ಕೈಮುಗಿಯುವಂತೆಯೇ ವಿನೀತ ಭಾವದಿಂದ ಭರತನು ಕೈಮುಗಿದನು.॥30॥

ಮೂಲಮ್ - 31

ಕಿಮೇಷ ವಾಕ್ಯಂ ಭರತೋಽದ್ಯ ರಾಘವಂ
ಪ್ರಣಮ್ಯಸತ್ಕೃತ್ಯ ಚ ಸಾಧು ವಕ್ಷ್ಯತಿ ।
ಇತೀವ ತಸ್ಯಾರ್ಯಜನಸ್ಯ ತತ್ತ್ವತೋ
ಬಭೂವ ಕೌತೂಹಲಮುತ್ತಮಂ ತದಾ ॥

ಅನುವಾದ

ಆಗ ಅಲ್ಲಿ ಕುಳಿತಿರುವ ಶ್ರೇಷ್ಠಪುರುಷರ ಹೃದಯದಲ್ಲಿ ಯಥಾರ್ಥವಾಗಿ ಈ ಭರತನು ಶ್ರೀರಾಮಚಂದ್ರನಿಗೆ ಸತ್ಕಾರ ಪೂರ್ವಕವಾಗಿ ವಂದಿಸಿ ಇಂದು ಉತ್ತಮ ರೀತಿಯಿಂದ ಅವನಲ್ಲಿ ಏನು ಹೇಳುವನು? ಎಂಬ ಕುತೂಹಲ ಉಂಟಾಯಿತು.॥31॥

ಮೂಲಮ್ - 32

ಸ ರಾಘವಃ ಸತ್ಯಧೃತಿಶ್ಚ ಲಕ್ಷ್ಮಣೋ
ಮಹಾನುಭಾವೋ ಭರತಶ್ಚ ಧಾರ್ಮಿಕಃ ।
ವೃತಾಃ ಸುಹೃದ್ಭಿಶ್ಚ ವಿರೇಜಿರೇಽಧ್ವರೇ
ಯಥಾ ಸದಸ್ಯೈಃ ಸಹಿತಾಸ್ತ್ರಯೋಽಗ್ನಯಃ ॥

ಅನುವಾದ

ಆ ಸತ್ಯಪ್ರತಿಜ್ಞ ಶ್ರೀರಾಮ, ಮಹಾನುಭಾವ ಲಕ್ಷ್ಮಣ ಹಾಗೂ ಧರ್ಮಾತ್ಮಾ ಭರತ - ಈ ಮೂವರೂ ಸಹೋದರರು ತಮ್ಮ ಸುಹೃದರಿಂದ ಸುತ್ತುವರೆದು ಯಜ್ಞಶಾಲೆಯಲ್ಲಿ ಸದಸ್ಯರಿಂದ ಸುತ್ತುವರೆದ ತ್ರಿವಿಧ ಅಗ್ನಿಗಳಂತೆ ಶೋಭಿಸುತ್ತಿದ್ದರು.॥32॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ನಾಲ್ಕನೆಯ ಸರ್ಗ ಪೂರ್ಣವಾಯಿತು ॥104॥