१०३ रामादीनां शोकः

वाचनम्
ಭಾಗಸೂಚನಾ

ತಂದೆಯ ಮರಣ ವಾರ್ತೆಯನ್ನು ಕೇಳಿ ಶ್ರೀರಾಮನೇ ಮೊದಲಾದವರ ದುಃಖ, ತಂದೆಗಾಗಿ ಜಲಾಂಜಲಿಯನ್ನಿತ್ತು ಪಿಂಡಪ್ರದಾನ ಮಾಡಿದುದು

ಮೂಲಮ್ - 1

ತಾಂ ಶ್ರುತ್ವಾ ಕರುಣಾಂ ವಾಚಂ ಪಿತುರ್ಮರಣಸಂಹಿತಾಮ್ ।
ರಾಘವೋ ಭರತೇನೋಕ್ತಾಂ ಬಭೂವ ಗತಚೇತನಃ ॥

ಅನುವಾದ

ಭರತನು ಹೇಳಿದ ತಂದೆಯ ಮರಣದ ಕರುಣಾಜನಕ ಮಾತನ್ನು ಕೇಳಿ ಶ್ರೀರಾಮಚಂದ್ರನು ದುಃಖದಿಂದಾಗಿ ಮೂರ್ಛಿತನಾದನು.॥1॥

ಮೂಲಮ್ - 2

ತಂ ತು ವಜ್ರಮಿವೋತ್ಸೃಷ್ಟಮಾಹವೇ ದಾನವಾರಿಣಾ ।
ವಾಗ್ವಜ್ರಂ ಭರತೇನೋಕ್ತಮಮನೋಜ್ಞಂ ಪರಂತಪಃ ॥

ಮೂಲಮ್ - 3

ಪ್ರಗೃಹ್ಯ ರಾಮೋ ಬಾಹೂ ವೈ ಪುಷ್ಪಿತಾಂಗ ಇವ ದ್ರುಮಃ ।
ವನೇ ಪರಶುನಾ ಕೃತ್ತಸ್ತಥಾ ಭುವಿ ಪಪಾತ ಹ ॥

ಅನುವಾದ

ಭರತನು ಆಡಿದ ಮಾತು ವಜ್ರದಂತೆ ತಗಲಿತು, ದಾನವ ಶತ್ರು ಇಂದ್ರನು ಯುದ್ಧಸ್ಥಳದಲ್ಲಿ ವಜ್ರದ ಪ್ರಹಾರಮಾಡಿದಂತೇ ಇತ್ತು. ಮನಸ್ಸಿಗೆ ಅಪ್ರಿಯವಾದ ವಾಗ್ವಜ್ರವನ್ನು ಕೇಳಿ ಪರಂತಪನಾದ ಶ್ರೀರಾಮನು-ಟೊಂಗೆಗಳು ಮೇಲಕ್ಕೆ ಚಾಚಿದ ಮರವನ್ನು ಕೊಡಲಿಯಿಂದ ಕಡಿದುಬೀಳುವಂತೆ, ಎರಡೂ ಕೈಗಳನ್ನೆತ್ತಿ ನೆಲಕ್ಕೆ ಕುಸಿದುಬಿದ್ದನು. (ಭರತನ ದರ್ಶನದಿಂದ ಶ್ರೀರಾಮನಿಗೆ ಹರ್ಷ ಉಂಟಾಗಿತ್ತು, ತಂದೆಯ ಮೃತ್ಯುವಿನ ಸಂವಾದದಿಂದ ದುಃಖವಾಗಿತ್ತು; ಆದ್ದರಿಂದ ಅವನಿಗೆ ಹುಲುಸಾಗಿದ್ದ ಮತ್ತು ತುಂಡಾದ ಮರದ ಉಪಮೆ ಕೊಡಲಾಗಿದೆ).॥2-3॥

ಮೂಲಮ್ - 4

ತಥಾ ಹಿ ಪತಿತಂ ರಾಮಂ ಜಗತ್ಯಾಂ ಜಗತೀಪತಿಮ್ ।
ಕೂಲಘಾತಪರಿಶ್ರಾಂತಂ ಪ್ರಸುಪ್ತಮಿವ ಕುಂಜರಮ್ ॥

ಮೂಲಮ್ - 5

ಭ್ರಾತರಸ್ತೇ ಮಹೇಷ್ವಾಸಂ ಸರ್ವತಃಶೋಕಕರ್ಶಿತಮ್ ।
ರುದಂತಃ ಸಹ ವೈದೇಹ್ಯಾ ಸಿಷಿಚುಃ ಸಲಿಲೇನ ವೈ ॥

ಅನುವಾದ

ಪೃಥಿವೀಪತಿ ಶ್ರೀರಾಮನು ಹೀಗೆ ನೆಲದಲ್ಲಿ ಬಿದ್ದಿರುವುದನ್ನು ನೋಡಿದರೆ - ನದಿಯ ತೀರವನ್ನು ದಂತದಿಂದ ವಿದೀರ್ಣಗೊಳಿಸಿ ಬಳಲಿ ಮಲಗಿದ ಆನೆಯಂತೆ ಕಂಡುಬರುತ್ತಿದ್ದನು. ಶೋಕದಿಂದ ದುರ್ಬಲನಾದ ಆ ಮಹಾಧನುರ್ಧರ ಶ್ರೀರಾಮನನ್ನು ಸುತ್ತುವರೆದು ಸೀತಾ ಸಹಿತ ಅಳುತ್ತಿರುವ ಮೂವರೂ ಸಹೋದರರು ಶ್ರೀರಾಮನನ್ನು ಕಂಬನಿಗಳಿಂದ ಒದ್ದೆಯಾಗಿಸಿದರು.॥4-5॥

ಮೂಲಮ್ - 6

ಸ ತು ಸಂಜ್ಞಾಂ ಪುನರ್ಲಬ್ಧ್ವಾ ನೇತ್ರಾಭ್ಯಾಮಶ್ರುಮುತ್ಸೃಜನ್ ।
ಉಪಾಕ್ರಾಮತ ಕಾಕುತ್ಸ್ಥಃ ಕೃಪಣಂ ಬಹು ಭಾಷಿತುಮ್ ॥

ಅನುವಾದ

ಸ್ವಲ್ಪ ಹೊತ್ತಿನಲ್ಲಿ ಎಚ್ಚರಗೊಂಡಾಗ ಕಂಗಳಿಂದ ಕಂಬನಿಯನ್ನು ಹರಿಸುತ್ತಾ ಕಕುತ್ಸ್ಥಕುಲಭೂಷಣ ಶ್ರೀರಾಮನು ದೀನವಾಣಿಯಲ್ಲಿ ವಿಲಾಪ ಮಾಡತೊಡಗಿದನು.॥6॥

ಮೂಲಮ್ - 7

ಸ ರಾಮಃ ಸ್ವರ್ಗತಂ ಶ್ರುತ್ವಾ ಪಿತರಂಪೃಥಿವೀಪತಿಮ್ ।
ಉವಾಚ ಭರತಂ ವಾಕ್ಯಂ ಧರ್ಮಾತ್ಮಾ ಧರ್ಮಸಂಹಿತಮ್ ॥

ಅನುವಾದ

ಪೃಥಿವೀಪತಿ ದಶರಥ ಮಹಾರಾಜರು ಸ್ವರ್ಗಸ್ಥರಾದುದನ್ನು ಕೇಳಿ ಧರ್ಮಾತ್ಮಾ ಶ್ರೀರಾಮನು ಭರತನಲ್ಲಿ ಹೀಗೆ ಧರ್ಮಯುಕ್ತ ಮಾತನ್ನು ಹೇಳಿದನು .॥7॥

ಮೂಲಮ್ - 8

ಕಿಂ ಕರಿಷ್ಯಾಮ್ಯಯೋಧ್ಯಾಯಾಂ ತಾತೇ ದಿಷ್ಟಾಂ ಗತಿಂ ಗತೇ ।
ಕಸ್ತಾಂ ರಾಜವರಾದ್ಧೀನಾಮಯೋಧ್ಯಾಂ ಪಾಲಯಿಷ್ಯತಿ ॥

ಅನುವಾದ

ತಮ್ಮ! ತಂದೆಯವರು ಪರಲೋಕವಾಸಿಗಳಾದಾಗ ಅಯೋಧ್ಯೆಗೆ ಬಂದು ಈಗ ನಾನು ಏನು ಮಾಡಲಿ? ಆ ರಾಜಶಿರೋಮಣಿ ತಂದೆಯವರಿಂದ ಹೀನವಾದ ಈ ಅಯೋಧ್ಯೆಯನ್ನು ಈಗ ಯಾರು ಪಾಲಿಸಬಲ್ಲರು.॥8॥

ಮೂಲಮ್ - 9

ಕಿಂ ನು ತಸ್ಯ ಮಯಾ ಕಾರ್ಯಂ ದುರ್ಜಾತೇನ ಮಹಾತ್ಮನಃ ।
ಯೋ ಮೃತೋ ಮಮ ಶೋಕೇನ ಸ ಮಯಾ ನ ಚ ಸಂಸ್ಕೃತಃ ॥

ಅನುವಾದ

ಅಯ್ಯೋ! ನನ್ನ ಶೋಕದಿಂದಲೇ ಮೃತ್ಯುವನ್ನೈದಿದ ಅವರ ಅಂತ್ಯಸಂಸ್ಕಾರವನ್ನು ನಾನು ಮಾಡದೆ ಹೋದೆನಲ್ಲ. ನನ್ನಂತಹ ವ್ಯರ್ಥವಾಗಿ ಹುಟ್ಟಿದ ಪುತ್ರನಿಂದ ಆ ಮಹಾತ್ಮಾ ತಂದೆಯವರ ಯಾವ ಕಾರ್ಯ ಸಿದ್ಧವಾಯಿತು.॥9॥

ಮೂಲಮ್ - 10

ಅಹೋ ಭರತ ಸಿದ್ಧಾರ್ಥೋಯೇನ ರಾಜಾ ತ್ವಯಾನಘ ।
ಶತ್ರುಘ್ನೇನ ಚ ಸರ್ವೇಷು ಪ್ರೇತಕೃತ್ಯೇಷು ಸತ್ಕೃತಃ ॥

ಅನುವಾದ

ನಿಷ್ಪಾಪ ಭರತನೇ! ನೀನೇ ಕೃತಾರ್ಥನಾಗಿರುವೆ, ನೀನು ಭಾಗ್ಯವಂತನಾಗಿರುವೆ; ಅದರಿಂದ ನೀನು ಮತ್ತು ಶತ್ರುಘ್ನನು ಎಲ್ಲ ಪಾರಲೌಕಿಕ ಕರ್ಮದಲ್ಲಿ ಸಂಸ್ಕಾರ ಕರ್ಮದ ಮೂಲಕ ಪೂಜೆ ಮಾಡಿರುವಿರಿ.॥10॥

ಮೂಲಮ್ - 11

ನಿಷ್ಪ್ರಧಾನಾಮನೇಕಾಗ್ರಾಂ ನರೇಂದ್ರೇಣ ವಿನಾ ಕೃತಾಮ್ ।
ನಿವೃತ್ತವನವಾಸೋಽಪಿ ನಾಯೋಧ್ಯಾಂ ಗಂತುಮುತ್ಸಹೇ ॥

ಅನುವಾದ

ದಶರಥ ಮಹಾರಾಜರಿಂದ ರಹಿತವಾದ ಅಯೋಧ್ಯೆಯು ಈಗ ಮುಖ್ಯ ಶಾಸಕನಿಲ್ಲದೆ ಅಸ್ವಸ್ಥ ಹಾಗೂ ದುಃಖಿ ಆಗಿದೆ; ಆದ್ದರಿಂದ ವನವಾಸದಿಂದ ಮರಳಿದರೂ ಅಯೋಧ್ಯೆಗೆ ಹೋಗುವ ಉತ್ಸಾಹ ನನ್ನಲ್ಲಿ ಉಳಿಯಲಿಲ್ಲ.॥11॥

ಮೂಲಮ್ - 12

ಸಮಾಪ್ತವನವಾಸಂ ಮಾಮಯೋಧ್ಯಾಯಾಂ ಪರಂತಪ ।
ಕೋಽನುಶಾಸಿಷ್ಯತಿ ಪುನಸ್ತಾತೇ ಲೋಕಾಂತರಂ ಗತೇ ॥

ಅನುವಾದ

ಪರಂತಪ ಭರತನೇ! ವನವಾಸದ ಅವಧಿ ಮುಗಿಸಿ ನಾನು ಅಯೋಧ್ಯೆಗೆ ಹೋದರೆ ಮತ್ತೆ ನನಗೆ ಕರ್ತವ್ಯದ ಉಪದೇಶ ಯಾರು ಮಾಡುವರು? ಏಕೆಂದರೆ ತಂದೆಯವರಾದರೋ ಪರಲೋಕವಾಸಿಗಳಾದರು.॥12॥

ಮೂಲಮ್ - 13

ಪುರಾ ಪ್ರೇಕ್ಷ್ಯ ಸುವೃತ್ತಂ ಮಾಂ ಪಿತಾ ಯಾನ್ಯಾಹ ಸಾಂತ್ವಯನ್ ।
ವಾಕ್ಯಾನಿ ತಾನಿ ಶ್ರೋಷ್ಯಾಮಿ ಕುತಃ ಕರ್ಣಸುಖಾನ್ಯಹಮ್ ॥

ಅನುವಾದ

ಮೊದಲು ನಾನು ಅವರ ಯಾವುದೇ ಆಜ್ಞೆಯನ್ನು ಪಾಲಿಸಿದಾಗ ಅವರು ನನ್ನ ಸದ್ವ್ಯವಹಾರವನ್ನು ನೋಡಿ ನನ್ನ ಉತ್ಸಾಹವನ್ನು ಹೆಚ್ಚಾಗಿಸಲು ಹೇಳಿದ ಮಾತುಗಳಿಂದ ಕಿವಿಗಳಿಗೆ ಸುಖ ಕೊಡುವಂತಹುದಾಗಿದ್ದವು. ಅಂತಹ ಮಾತುಗಳನ್ನು ಈಗ ನಾನು ಯಾರ ಮುಖದಿಂದ ಕೇಳುವೆನು.॥13॥

ಮೂಲಮ್ - 14

ಏವಮುಕ್ತ್ವಾಥ ಭರತಂ ಭಾರ್ಯಾಮಭ್ಯೇತ್ಯರಾಘವಃ ।
ಉವಾಚ ಶೋಕಸಂತಪ್ತಃ ಪೂರ್ಣಚಂದ್ರನಿಭಾನನಾಮ್ ॥

ಅನುವಾದ

ಭರತನಲ್ಲಿ ಹೀಗೆ ಹೇಳಿ ಶೋಕಸಂತಪ್ತನಾದ ಶ್ರೀರಾಮನು ಪೂರ್ಣ ಚಂದ್ರನಂತೆ ಮನೋಹರ ಮುಖವುಳ್ಳ, ತನ್ನ ಪತ್ನಿಯ ಬಳಿಗೆ ಬಂದು ಇಂತೆಂದನು.॥14॥

ಮೂಲಮ್ - 15

ಸೀತೇ ಮೃತಸ್ತೇ ಶ್ವಶುರಃ ಪಿತೃಹೀನೋಽಸಿ ಲಕ್ಷ್ಮಣ ।
ಭರತೋ ದುಃಖಮಾಚಷ್ಟೇ ಸ್ವರ್ಗತಿಂ ಪೃಥಿವೀಪತೆಃ ॥

ಅನುವಾದ

ಸೀತೇ! ನಿನ್ನ ಮಾವನವರು ಹೊರಟುಹೋದರು. ಲಕ್ಷ್ಮಣ! ನೀನು ಪಿತೃಹೀನನಾದೆ. ಭರತನು ಪೃಥಿವೀಪತಿ ದಶರಥ ಮಹಾರಾಜರ ಸ್ವರ್ಗವಾಸದ ದುಃಖಮಯ ಸಮಾಚಾರ ಹೇಳುತ್ತಿರುವನು.॥15॥

ಮೂಲಮ್ - 16

ತತೋ ಬಹುಗುಣಂ ತೇಷಾಂ ಬಾಷ್ಪಂ ನೇತ್ರೇಷ್ವಜಾಯತ ।
ತಥಾ ಬ್ರುವತಿ ಕಾಕುತ್ಸ್ಥೇ ಕುಮಾರಾಣಾಂ ಯಶಸ್ವಿನಾಮ್ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಆ ಎಲ್ಲ ಯಶಸ್ವೀ ಕುಮಾರರ ಕಣ್ಣುಗಳಿಂದ ಕಂಬನಿ ಚಿಮ್ಮಿದವು.॥16॥

ಮೂಲಮ್ - 17

ತತಸ್ತೇ ಭ್ರಾತರಃ ಸರ್ವೇ ಭೃಶಮಾಶ್ವಾಸ್ಯ ದುಃಖಿತಮ್ ।
ಅಬ್ರುವನ್ ಜಗತೀಭರ್ತುಃ ಕ್ರಿಯತಾಮುದಕಂ ಪಿತುಃ ॥

ಅನುವಾದ

ಅನಂತರ ಎಲ್ಲ ಸಹೋದರರು ದುಃಖಿಯಾದ ಶ್ರೀರಾಮನಿಗೆ ಸಾಂತ್ವನ ನೀಡುತ್ತಾ - ಅಣ್ಣಾ! ಈ ಪೃಥಿವೀಪತಿ ತಂದೆಯರಿಗೆ ಜಲಾಂಜಲಿಯನ್ನು ಕೊಡಿರಿ.॥17॥

ಮೂಲಮ್ - 18

ಸಾ ಸೀತಾ ಸ್ವರ್ಗತಂ ಶ್ರುತ್ವಾ ಶ್ವಶುರಂ ತಂಮಹಾನೃಪಮ್ ।
ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ನ ಶಶಾಕೇಕ್ಷಿತುಂಪ್ರಿಯಮ್ ॥

ಅನುವಾದ

ತನ್ನ ಮಾವನವರಾದ ದಶರಥ ಮಹಾರಾಜರು ಸ್ವರ್ಗಸ್ಥರಾದ ಸಮಾಚಾರವನ್ನು ಕೇಳಿ ಸೀತೆಯ ಕಣ್ಣುಗಳಿಂದ ಕಂಬನಿ ತುಂಬಿ ಬಂದವು. ಅವಳು ತನ್ನ ಪ್ರಿಯತಮ ಶ್ರೀರಾಮಚಂದ್ರನ ಕಡೆಗೆ ನೋಡದಾದಳು.॥18॥

ಮೂಲಮ್ - 19

ಸಾಂತ್ವಯಿತ್ವಾ ತು ತಾಂ ರಾಮೋ ರುದತೀಂಜನಕಾತ್ಮಜಾಮ್ ।
ಉವಾಚ ಲಕ್ಷ್ಮಣಂ ತತ್ರ ದುಃಖಿತೋ ದುಃಖಿತಂ ವಚಃ ॥

ಅನುವಾದ

ಬಳಿಕ ಅಳುತ್ತಿರುವ ಜನಕಕುಮಾರಿಗೆ ಸಾಂತ್ವನ ನೀಡುತ್ತಾ, ದುಃಖಮಗ್ನ ಶ್ರೀರಾಮನು ಅತ್ಯಂತ ದುಃಖಿತನಾದ ಲಕ್ಷ್ಮಣನಲ್ಲಿ ಇಂತೆಂದನು.॥19॥

ಮೂಲಮ್ - 20

ಆನಯೇಂಗುದಿಪಿಣ್ಯಾಕಂ ಚೀರಮಾಹರ ಚೋತ್ತರಮ್ ।
ಜಲಕ್ರಿಯಾರ್ಥಂ ತಾತಸ್ಯ ಗಮಿಷ್ಯಾಮಿ ಮಹಾತ್ಮನಃ ॥

ಅನುವಾದ

ತಮ್ಮಾ! ನೀನು ಇಂಗುದೀ ಫಲದ ಹಿಟ್ಟನ್ನು ಮತ್ತು ನೂತನವಾದ ಎರಡು ನಾರುಮಡಿಯನ್ನು ತೆಗೆದುಕೊಂಡು ಬಾ. ನಾನು ಮಹಾತ್ಮಾ ತಂದೆಯವರಿಗೆ ತರ್ಪಣ-ಜಲಾಂಜಲಿಯನ್ನು ಕೊಡಲು ಹೊರಡುತ್ತೇನೆ.॥20॥

ಮೂಲಮ್ - 21

ಸೀತಾ ಪುರಸ್ತಾದ್ ವ್ರಜತು ತ್ವಮೇನಾಮಭಿತೋ ವ್ರಜ ।
ಅಹಂ ಪಶ್ಚಾದ್ಗಮಿಷ್ಯಾಮಿ ಗತಿರ್ಹ್ಯೇಷಾ ಸುದಾರುಣಾ ॥

ಅನುವಾದ

ಸೀತೆಯು ಮುಂದೆ ಮುಂದೆ ಹೋಗಲಿ, ಅವಳ ಹಿಂದೆ ನೀನು ನಡೆ ಹಾಗೂ ನಿನ್ನ ಹಿಂದೆ ನಾನು ಬರುವೆನು. ಶೋಕದ ಸಮಯ ಇದೇ ರೂಢಿಯಾಗಿದೆ, ಅದು ಅತ್ಯಂತ ದಾರುಣವಾಗಿರುತ್ತದೆ.॥21॥

ಮೂಲಮ್ - 22

ತತೋ ನಿತ್ಯಾನುಗಸ್ತೇಷಾಂ ವಿದಿತಾತ್ಮಾ ಮಹಾಮತಿಃ ।
ಮೃದುರ್ದಾಂತಶ್ಚ ಕಾಂತಶ್ಚ ರಾಮೇ ಚ ದೃಢಭಕ್ತಿಮಾನ್ ॥

ಮೂಲಮ್ - 23

ಸುಮಂತ್ರಸ್ತೈರ್ನೃಪಸುತೈಃ ಸಾರ್ಧಮಾಶ್ವಾಸ್ಯ ರಾಘವಮ್ ।
ಅವತಾರಯದಾಲಂಬ್ಯ ನದೀಂ ಮಂದಾಕಿನೀಂ ಶಿವಾಮ್ ॥

ಅನುವಾದ

ಅನಂತರ ಅವರ ಕುಲ ಪರಂಪರಾಗತ ಸೇವಕನೂ, ಆತ್ಮಜ್ಞಾನಿಯೂ, ಪರಮ ಬುದ್ಧಿವಂತನೂ, ಕೋಮಲ ಸ್ವಭಾವದವನೂ, ಜಿತೇಂದ್ರಿಯನೂ, ತೇಜಸ್ವಿಯೂ, ಶ್ರೀರಾಮನ ಸುದೃಢ ಭಕ್ತನೂ ಆದ ಸುಮಂತ್ರನು ಸಮಸ್ತ ರಾಜಕುಮಾರರೊಂದಿಗೆ ಶ್ರೀರಾಮನಿಗೆ ಧೈರ್ಯ ನೀಡುತ್ತಾ, ಅವನಿಗೆ ಕೈಯಾಸರೆಯಾಗಿ ಮಂಗಳಕರ ಮಂದಾಕಿನಿಯ ತೀರಕ್ಕೆ ಕರೆದುಕೊಂಡು ಹೋದನು.॥22-23॥

ಮೂಲಮ್ - 24

ತೇ ಸುತೀರ್ಥಾಂ ತತಃ ಕೃಚ್ಛ್ರಾದುಪಾಗಮ್ಯ ಯಶಸ್ವಿನಃ ।
ನದೀಂ ಮಂದಾಕಿನೀಂ ರಮ್ಯಾಂ ಸದಾ ಪುಷ್ಪಿತಕಾನನಾಮ್ ॥

ಮೂಲಮ್ - 25

ಶೀಘ್ರಸ್ತೋತಸಮಾಸಾದ್ಯ ತೀರ್ಥಂ ಶಿವಮಕರ್ದಮಮ್ ।
ಸಿಷಿಚುಸ್ತೂದಕಂ ರಾಜ್ಞೇ ತತ ಏತದ್ ಭವತ್ವಿತಿ ॥

ಅನುವಾದ

ಆ ಯಶಸ್ವೀ ರಾಜಕುಮಾರರು ಸದಾ ಪುಷ್ಪಿತಕಾನನದಿಂದ ಶೋಭಿಸುವ, ವೇಗವಾಗಿ ಹರಿಯುವ, ಉತ್ತಮ ಸ್ನಾನದ ಘಟ್ಟಗಳುಳ್ಳ ರಮಣೀಯ ಮಂದಾಕಿನೀ ನದಿಯ ತೀರಕ್ಕೆ ಕಷ್ಟಪಟ್ಟು ತಲುಪಿ, ಅದರ ಕೆಸರಿಲ್ಲದ, ಮಂಗಳಪ್ರದ, ತೀರ್ಥಭೂತ ಜಲದಿಂದ ರಾಜನಿಗೆ ಜಲಾಂಜಲಿಯನ್ನಿತ್ತರು. ಆಗ - ಅಪ್ಪಾ! ‘ಈ ಜಲವು ತಮ್ಮ ಸೇವೆಯಲ್ಲಿ ಅರ್ಪಿತವಾಗಲಿ’ ಎಂದು ಹೇಳಿದರು.॥24-25॥

ಮೂಲಮ್ - 26

ಪ್ರಗೃಹ್ಯ ತು ಮಹೀಪಾಲೋ ಜಲಪೂರಿತಮಂಜಲಿಮ್ ।
ದಿಶಂ ಯಾಮ್ಯಾಮಭಿಮುಖೋ ರುದನ್ವಚನಮಬ್ರವೀತ್ ॥

ಮೂಲಮ್ - 27

ಏತತ್ತೇ ರಾಜಶಾರ್ದೂಲ ವಿಮಲಂ ತೋಯಮಕ್ಷಯಮ್ ।
ಪಿತೃಲೋಕಗತಸ್ಯಾದ್ಯ ಮದ್ದತ್ತಮುಪತಿಷ್ಠತು ॥

ಅನುವಾದ

ಮಹೀಪಾಲಕ ಶ್ರೀರಾಮನು ನೀರು ತುಂಬಿದ ಅಂಜಲಿಯನ್ನು ಹಿಡಿದು ದಕ್ಷಿಣ ದಿಕ್ಕಿಗೆ ತಿರುಗಿ ಅಳುತ್ತಾ - ‘ನನ್ನ ಪೂಜ್ಯ ತಂದೆಯವರಾದ ರಾಜಶಿರೋಮಣಿ ದಶರಥ ಮಹಾರಾಜರೇ! ಇಂದು ನಾನು ಕೊಡುವ ಈ ನಿರ್ಮಲ ಜಲವು ಪಿತೃಲೋಕಕ್ಕೆ ಹೋದ ನಿಮಗೆ ಅಕ್ಷಯವಾಗಿ ಸಿಗಲಿ’ ಎಂದು ಹೇಳಿ ಅರ್ಪಿಸಿದನು.॥26-27॥

ಮೂಲಮ್ - 28

ತತೋ ಮಂದಾಕಿನೀತೀರಂ ಪ್ರತ್ಯುತ್ತೀರ್ಯ ಸ ರಾಘವಃ ।
ಪಿತುಶ್ಚಕಾರ ತೇಜಸ್ವೀ ನಿರ್ವಾಪಂ ಭ್ರಾತೃಭಿಃ ಸಹ ॥

ಅನುವಾದ

ಜಲಪ್ರದಾನ ನಂತರ ಮಂದಾಕಿನೀ ನೀರಿನಿಂದ ಮೇಲಕ್ಕೆ ಬಂದು ತೇಜಸ್ವೀ ರಘುನಾಥನು ತನ್ನ ಸಹೋದರರೊಂದಿಗೆ ಸೇರಿ ತಂದೆಗೆ ಪಿಂಡಪ್ರದಾನ ಮಾಡಿದನು.॥28॥

ಮೂಲಮ್ - 29

ಐಂಗುದಂ ಬದರೈರ್ಮಿಶ್ರಂ ಪಿಣ್ಯಾಕಂ ದರ್ಭಸಂಸ್ತರೇ ।
ನ್ಯಸ್ಯ ರಾಮಃ ಸುದುಃಖಾರ್ತೋ ರುದನ್ವಚನಮಬ್ರವೀತ್ ॥

ಅನುವಾದ

ಅವನು ಇಂಗುದಿ ಹಿಟ್ಟಿಗೆ ಯಲಚಿಕಾಯನ್ನು ಬೆರೆಸಿ ಪಿಂಡವನ್ನು ಮಾಡಿ, ಹರಡಿದ ದರ್ಭೆಯ ಮೇಲೆ ಇಟ್ಟು ಅತ್ಯಂತ ದುಃಖದಿಂದ ಆರ್ತನಾಗಿ ಅಳುತ್ತಾ ಇಂತೆಂದನು.॥29॥

ಮೂಲಮ್ - 30

ಇದಂ ಭುಂಕ್ಷ್ವ ಮಹಾರಾಜ ಪ್ರೀತೋ ಯದಶನಾ ವಯಮ್ ।
ಯದನ್ನಃ ಪುರುಷೋ ಭವತಿ ತದನ್ನಾಸ್ತಸ್ಯ ದೇವತಾಃ ॥

ಅನುವಾದ

ಮಹಾರಾಜರೇ! ಪ್ರೀತಿಯಿಂದ ಈ ಭೋಜನವನ್ನು ಸ್ವೀಕರಿಸಿರಿ; ಏಕೆಂದರೆ ಇಂದಿನ ದಿನಗಳಲ್ಲಿ ನಮ್ಮ ಆಹಾರ ಇದೇ ಆಗಿದೆ. ಮನುಷ್ಯನು ತಿನ್ನುವ ಅನ್ನವನ್ನೇ ದೇವತೆಗಳೂ ಸ್ವೀಕರಿಸುವರು.॥30॥

ಮೂಲಮ್ - 31

ತತಸ್ತೇನೈವ ಮಾರ್ಗೇಣ ಪ್ರತ್ಯುತ್ತೀರ್ಯ ಸರಿತ್ತಟಾತ್ ।
ಆರುರೋಹ ನರವ್ಯಾಘ್ರೋ ರಮ್ಯಸಾನುಂ ಮಹೀಧರಮ್ ॥

ಮೂಲಮ್ - 32

ತತಃ ಪರ್ಣಕುಟೀದ್ವಾರಮಾಸಾದ್ಯ ಜಗತೀಪತಿಃ ।
ಪರಿಜಗ್ರಾಹ ಪಾಣಿಭ್ಯಾಮುಭೌ ಭರತಲಕ್ಷ್ಮಣೌ ॥

ಅನುವಾದ

ಬಳಿಕ ಮಂದಾಕಿನೀ ತೀರದಿಂದ ಮೇಲಕ್ಕೆ ಬಂದು ಪೃಥಿವೀ ಪಾಲಕ ಪುರುಷಸಿಂಹ ಶ್ರೀರಾಮನು ಸುಂದರ ಶಿಖರವುಳ್ಳ ಚಿತ್ರಕೂಟ ಪರ್ವತವನ್ನು ಹತ್ತಿ, ಪರ್ಣ ಕುಟಿಯ ಬಾಗಿಲಿಗೆ ಬಂದು ಭರತ ಮತ್ತು ಲಕ್ಷ್ಮಣರಿಬ್ಬರ ಕೈಗಳನ್ನು ಹಿಡಿದುಕೊಂಡು ಅಳತೊಡಗಿದನು.॥31-32॥

ಮೂಲಮ್ - 33

ತೇಷಾಂ ತು ರುದತಾಂ ಶಬ್ದಾತ್ ಪ್ರತಿಶಬ್ದೋಽಭವದ್ಗಿರೌ ।
ಭ್ರಾತೃಣಾಂ ಸಹ ವೈದೇಹ್ಯಾ ಸಿಂಹಾನಾಂನರ್ದತಾಮಿವ ॥

ಅನುವಾದ

ಸೀತಾಸಹಿತ ಅಳುತ್ತಿರುವ ನಾಲ್ವರು ಸಹೋದರರು ಅಳುವ ಧ್ವನಿಯು ಆ ಪರ್ವತದ ಮೇಲೆ ಸಿಂಹ ಗರ್ಜನೆಯಂತೆ ಪ್ರತಿಧ್ವನಿಸತೊಡಗಿತು.॥33॥

ಮೂಲಮ್ - 34

ಮಹಾಬಲಾನಾಂ ರುದತಾಂ ಕುರ್ವತಾಮುದಕಂ ಪಿತುಃ ।
ವಿಜ್ಞಾಯ ತುಮುಲಂ ಶಬ್ದಂ ತ್ರಸ್ತಾ ಭರತಸೈನಿಕಾಃ ॥

ಮೂಲಮ್ - 35

ಅಬ್ರುವಂಶ್ಚಾಪಿ ರಾಮೇಣ ಭರತಃ ಸಂಗತೋಧ್ರುವಮ್ ।
ತೇಷಾಮೇವ ಮಹಾನ್ಶಬ್ದಃ ಶೋಚತಾಂ ಪಿತರಂ ಮೃತಮ್ ॥

ಅನುವಾದ

ತಂದೆಗೆ ಜಲಾಂಜಲಿಯನ್ನು ನೀಡಿ ಮಹಾಬಲಿ ಸಹೋದರರು ಅಳುತ್ತಿರುವ ತುಮುಲನಾದವನ್ನು ಕೇಳಿ ಭರತನ ಸೈನಿಕರು ಭಯದ ಆಶಂಕೆಯಿಂದ ಭಯಗೊಂಡರು. ಮತ್ತೆ ಅದನ್ನು ಗುರುತಿಸಿ ಅವರು ಪರಸ್ಪರ ಹೇಳಿಕೊಂಡರು - ನಿಶ್ಚಯವಾಗಿ ಭರತನು ಶ್ರೀರಾಮನನ್ನು ಭೆಟ್ಟಿಯಾಗಿರುವನು. ತಮ್ಮ ತಂದೆಯ ಪರಲೋಕವಾಸಕ್ಕಾಗಿ ಶೋಕಿಸುತ್ತಿರುವ ಆ ನಾಲ್ವರು ಸಹೋದರರು ಅಳುವ ಈ ಮಹಾ ಶಬ್ದವಾಗಿದೆ.॥34-35॥

ಮೂಲಮ್ - 36

ಅಥ ವಾಹಾನ್ ಪರಿತ್ಯಜ್ಯ ತಂ ಸರ್ವೇಽಭಿಮುಖಾಃ ಸ್ವನಮ್ ।
ಅಪ್ಯೇಕಮನಸೋ ಜಗ್ಮುರ್ಯಥಾಸ್ಥಾನಂ ಪ್ರಧಾವಿತಾಃ ॥

ಅನುವಾದ

ಹೀಗೆ ಹೇಳಿ ಅವರೆಲ್ಲರೂ ತಮ್ಮ ವಾಹನಗಳನ್ನು ಅಲ್ಲೇ ಬಿಟ್ಟು, ಆ ಶಬ್ದವು ಕೇಳಿ ಬರುತ್ತಿದ್ದ ಕಡೆಗೆ ಮುಖಮಾಡಿ ಏಕಾಗ್ರಚಿತ್ತರಾಗಿ ಓಡತೊಡಗಿದರು.॥36॥

ಮೂಲಮ್ - 37

ಹಯೈರನ್ಯೇ ಗಜೈರನ್ಯೇ ರಥೈರನ್ಯೇ ಸ್ವಲಂಕೃತೈಃ ।
ಸುಕುಮಾರಾಸ್ತಥೈವಾನ್ಯೇ ಪದ್ಭೀರೇವ ನರಾ ಯಯುಃ ॥

ಅನುವಾದ

ಅವರಿಗಿಂತ ಬೇರೆಯಾದ ಕೆಲವು ಸುಕುಮಾರ ಮನುಷ್ಯರು ಕುದುರೆಗಳ ಮೇಲೆ, ಆನೆಗಳ ಮೇಲೆ ರಥದಿಂದಲೇ ಮುಂದೆ ನಡೆದರು. ಎಷ್ಟೋ ಜನರು ಕಾಲ್ನಡಿಗೆಯಲ್ಲೇ ಹೊರಟರು.॥37॥

ಮೂಲಮ್ - 38

ಅಚಿರಪ್ರೋಷಿತಂ ರಾಮಂ ಚಿರವಿಪ್ರೋಷಿತಂ ಯಥಾ ।
ದ್ರಷ್ಟುಕಾಮೋ ಜನಃ ಸರ್ವೋ ಜಗಾಮ ಸಹಸಾಶ್ರಮಮ್ ॥

ಅನುವಾದ

ಶ್ರೀರಾಮಚಂದ್ರನು ಪರದೇಶಕ್ಕೆ ಬಂದು ಸ್ವಲ್ಪದಿನಗಳೇ ಆಗಿದ್ದರೂ ಅವನು ದೀರ್ಘಕಾಲದಿಂದಲೇ ಪರದೇಶದಲ್ಲಿ ಇರುವನೆಂದೇ ಜನರಿಗೆ ಅನಿಸುತ್ತಿತ್ತು. ಆದ್ದರಿಂದ ಎಲ್ಲ ಜನರು ಅವನ ದರ್ಶನಕ್ಕಾಗಿ ಆತುರಾತುರವಾಗಿ ಆಶ್ರಮದ ಕಡೆಗೆ ಧಾವಿಸಿದರು.॥38॥

ಮೂಲಮ್ - 39

ಭ್ರಾತೃಣಾಂ ತ್ವರಿತಾಸ್ತೇ ತು ದ್ರಷ್ಟುಕಾಮಾಃ ಸಮಾಗಮಮ್ ।
ಯಯುರ್ಬಹುವಿಧೈರ್ಯಾನೈಃ ಖುರನೇಮಿಸಮಾಕುಲೈಃ ॥

ಅನುವಾದ

ಆ ಜನರು ನಾಲ್ವರೂ ಸಹೋದರರ ಭೆಟ್ಟಿಯನ್ನು ನೋಡುವ ಇಚ್ಛೆಯಿಂದ ಆನೆ, ಕುದುರೆ, ರಥ ಮೊದಲಾದ ವಾಹನಗಳ ಮೂಲಕ ಬಹಳ ಲಗುಬಗೆಯಿಂದ ನಡೆದರು.॥39॥

ಮೂಲಮ್ - 40

ಸಾ ಭೂಮಿರ್ಬಹುಭಿರ್ಯಾನೈಃ ರಥನೇಮಿಸಮಾಹತಾ ।
ಮುಮೋಚ ತುಮುಲಂ ಶಬ್ದಂದ್ಯೌರಿವಾಭ್ರಸಮಾಗಮೇ ॥

ಅನುವಾದ

ಅನೇಕ ಪ್ರಕಾರದ ವಾಹನಗಳ ಹಾಗೂ ರಥಗಳ ಚಕ್ರದಿಂದ ಆಕ್ರಾಂತವಾದ ಆ ಭೂಮಿಯು ಆಕಾಶದಲ್ಲಿ ಆಗುವ ಮೇಘ ಗರ್ಜನೆಯಂತೆ ಭಯಂಕರ ಶಬ್ದ ಮಾಡತೊಡಗಿತು.॥40॥

ಮೂಲಮ್ - 41

ತೇನ ವಿತ್ರಾಸಿತಾ ನಾಗಾಃ ಕರೇಣುಪರಿವಾರಿತಾಃ ।
ಆವಾಸಯಂತೋ ಗಂಧೇನ ಜಗ್ಮುರನ್ಯದ್ವನಂ ತತಃ ॥

ಅನುವಾದ

ಆ ತುಮುಲನಾದದಿಂದ ಭಯಗೊಂಡ ಆನೆಗಳು ಹೆಣ್ಣಾನೆಗಳಿಂದ ಸುತ್ತುವರೆದು ಮದಗಂಧದಿಂದ ಆ ಸ್ಥಾನವನ್ನು ಸುವಾಸಿತಗೊಳಿಸುತ್ತಾ ಅಲ್ಲಿಂದ ಇನ್ನೊಂದು ವನಕ್ಕೆ ಹೋದವು.॥41॥

ಮೂಲಮ್ - 42

ವರಾಹವೃಕಸಿಂಹಾಶ್ಚ ಮಹಿಷಾಃ ಸೃಮರಾಸ್ತಥಾ ।
ವ್ಯಾಘ್ರಗೋಕರ್ಣಗವಯಾ ವಿತ್ರೇಸುಃ ಪೃಷತೈಃ ಸಹ ॥

ಅನುವಾದ

ಹಂದಿಗಳು, ನರಿಗಳು, ಸಿಂಹಗಳು, ಕಾಡುಕೋಣಗಳು, ಹುಲಿಗಳು, ಗೋಕರ್ಣ ಮೃಗಗಳು, ಗವಯ (ಕಾಡುಹಸು)ಗಳು, ಚುಕ್ಕೆಗಳುಳ್ಳ ಜಿಂಕೆಗಳು ಸಂತ್ರಸ್ತವಾಗಿ ಬೇರೆ ಕಾಡಿಗೆ ಓಡಿಹೋದವು.॥42॥

ಮೂಲಮ್ - 43

ರಥಾಹ್ವಹಂಸಾನತ್ಯೂಹಾಃ ಪ್ಲವಾಃ ಕಾರಂಡವಾಃಪರೇ ।
ತಥಾ ಪುಂಸ್ಕೋಕಿಲಾಃ ಕ್ರೌಂಚಾ ವಿಸಂಜ್ಞಾ ಭೇಜಿರೇ ದಿಶಃ ॥

ಅನುವಾದ

ಚಕ್ರವಾಕ, ಹಂಸ, ನೀರು ಕೋಳಿ, ಬಕ, ಕಾರಂಡವ, ಕೋಗಿಲೆಗಳು, ಕ್ರೌಂಚಪಕ್ಷಿಗಳು ಗಾಬರಿಗೊಂಡು ಬೇರೆ-ಬೇರೆ ದಿಕ್ಕುಗಳಿಗೆ ಹಾರಿಹೋದವು.॥43॥

ಮೂಲಮ್ - 44

ತೇನ ಶಬ್ದೇನ ವಿತ್ರಸ್ತೈರಾಕಾಶಂ ಪಕ್ಷಿಭಿರ್ವೃತಮ್ ।
ಮನುಷ್ಯೈರಾವೃತಾ ಭೂಮಿರುಭಯಂ ಪ್ರಬಭೌ ತದಾ ॥

ಅನುವಾದ

ಆ ಶಬ್ದದಿಂದ ಹೆದರಿದ ಪಕ್ಷಿಗಳಿಂದ ಆಕಾಶ ಮತ್ತು ಮನುಷ್ಯರಿಂದ ಅಲ್ಲಿಯ ಭೂಮಿ ತುಂಬಿಹೋಯಿತು. ಹೀಗೆ ಭೂಮ್ಯಾಕಾಶಗಳು ಶೋಭಿಸತೊಡಗಿದವು.॥44॥

ಮೂಲಮ್ - 45

ತತಸ್ತಂ ಪುರುಷವ್ಯಾಘ್ರಂ ಯಶಸ್ವಿನಮಕಲ್ಮಷಮ್ ।
ಆಸೀನಂ ಸ್ಥಂಡಿಲೇ ರಾಮಂ ದದರ್ಶ ಸಹಸಾ ಜನಃ ॥

ಅನುವಾದ

ಆತುರವಾಗಿ ತಲುಪಿದ ಜನರು - ಯಶಸ್ವೀ, ಪಾಪರಹಿತ, ಪುರುಷಸಿಂಹ ಶ್ರೀರಾಮನು ವೇದಿಕೆಯಲ್ಲಿ ಕುಳಿತಿರುವುದನ್ನು ನೋಡಿದರು.॥45॥

ಮೂಲಮ್ - 46

ವಿಗರ್ಹಮಾಣಃ ಕೈಕೇಯೀಂ ಮಂಥರಾಸಹಿತಾಮಪಿ ।
ಅಭಿಗಮ್ಯ ಜನೋ ರಾಮಂ ಬಾಷ್ಪಪೂರ್ಣಮುಖೋಽಭವತ್ ॥

ಅನುವಾದ

ಶ್ರೀರಾಮನ ಬಳಿಗೆ ಹೋದಾಗ ಎಲ್ಲರ ಮುಖಗಳು ಕಣ್ಣೀರಿನಿಂದ ಒದ್ದೆಯಾದುವು. ಎಲ್ಲರೂ ಮಂಥರೆಸಹಿತ ಕೈಕೇಯಿಯನ್ನು ನಿಂದಿಸತೊಡಗಿದರು.॥46॥

ಮೂಲಮ್ - 47

ತಾನ್ನರಾನ್ ಬಾಷ್ಪಪೂರ್ಣಾಕ್ಷಾನ್ ಸಮೀಕ್ಷ್ಯಾಥಸುದುಃಖಿತಾನ್ ।
ಪರ್ಯಷ್ವಜತ ಧರ್ಮಜ್ಞಃ ಪಿತೃವನ್ಮಾತೃವಚ್ಚ ಸಃ ॥

ಅನುವಾದ

ಅವರೆಲ್ಲರ ನೇತ್ರಗಳು ಕಂಬನಿಗಳಿಂದ ತುಂಬದ್ದವು, ಅವರೆಲ್ಲರೂ ಅತ್ಯಂತ ದುಃಖಿತರಾಗಿದ್ದರು. ಧರ್ಮಜ್ಞ ಶ್ರೀರಾಮನು ಅವರನ್ನು ನೋಡಿ ತಂದೆ-ತಾಯಿಯರಂತೆ ಎದೆಗೊತ್ತಿಕೊಂಡನು.॥47॥

ಮೂಲಮ್ - 48

ಸ ತತ್ರ ಕಾಂಶ್ಚಿತ್ ಪರಿಷಸ್ವಜೇ ನರಾನ್
ನರಾಶ್ಚ ಕೇಚಿತ್ತು ತಮಭ್ಯವಾದಯನ್ ।
ಚಕಾರ ಸರ್ವಾನ್ಸವಯಸ್ಯಬಾಂಧವಾನ್
ಯಥಾರ್ಹಮಾಸಾದ್ಯ ತದಾ ನೃಪಾತ್ಮಜಃ ॥

ಅನುವಾದ

ಶ್ರೀರಾಮನು ಕೆಲವರನ್ನು ಅಪ್ಪಿಕೊಂಡನು, ಕೆಲವರು ಅವನ ಚರಣಗಳಲ್ಲಿ ವಂದಿಸಿಕೊಂಡರು. ರಾಜಕುಮಾರ ಶ್ರೀರಾಮನು ಆಗ ಅಲ್ಲಿಗೆ ಬಂದಿರುವ ಎಲ್ಲ ಮಿತ್ರರನ್ನು ಮತ್ತು ಬಂಧು - ಬಾಂಧವರನ್ನು ಯಥಾಯೋಗ್ಯ ಸಮ್ಮಾನಿಸಿದನು.॥48॥

ಮೂಲಮ್ - 49

ತತಃ ಸ ತೇಷಾಂ ರುದತಾಂ ಮಹಾತ್ಮನಾಂ
ಭುವಂ ಚ ಖಂ ಚಾನುವಿನಾದಯನ್ಸ್ವನಃ ।
ಗುಹಾ ಗಿರೀಣಾಂ ಚ ದಿಶಶ್ಚ ಸಂತತಂ
ಮೃದಂಗಘೋಷಪ್ರತಿಮೋ ವಿಶುಶ್ರುವೇ ॥

ಅನುವಾದ

ಆ ಸಮಯ ಅಲ್ಲಿ ಅಳುತ್ತಿರುವ ಆ ಮಹಾತ್ಮರ ರೋದನ ಶಬ್ದವು ಪೃಥಿವೀ, ಆಕಾಶ, ಪರ್ವತಗಳ ಗುಹೆಗಳು, ಎಲ್ಲ ದಿಕ್ಕುಗಳಲ್ಲಿ ನಿರಂತರ ಪ್ರತಿಧ್ವನಿಸುತ್ತಾ ಮೃದಂಗದ ಧ್ವನಿಯಂತೆ ಕೇಳಿಬರುತ್ತಿತ್ತು.॥49॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಮೂರನೆಯ ಸರ್ಗ ಪೂರ್ಣವಾಯಿತು. ॥103॥